"ಇದು ವಿಮರ್ಶೆಯಲ್ಲದ ಚಿಂತನ"

Tuesday, December 16, 2008

ಅಭಿಮಾನದ ಸನ್ಮಾನ





ನನ್ನ ನೆಚ್ಚಿನ ಕಲಾರತ್ನಗಳೇ.ಒಂದೇ ಕಾಲದಲ್ಲಿ ಯಕ್ಷಗಾನದ ಇಕ್ಕೆಲದಲ್ಲಿ ಪ್ರಶಸ್ತಿಗೆ ಭಾಜನರಾದ ಕಲಾ ಕುಸುಮಗಳೇ ಮೊದಲಾಗಿ ನನ್ನ ಹೃದಯದ ಅಂತರಾಳದ ಅಭಿನಂದನೆಗಳು.


ಕೇರಳ ರಾಜ್ಯದಿಂದ ಸನ್ಮಾನಿತರಾದ ಬಲಿಪ್ಪರೆ ಹಾಗು ಕರ್ನಾಟಕದಿಂದ ಸನ್ಮಾನಿತರಾದ ಗೋವಿಂದಣ್ಣನವರೇ.ನಿಮ್ಮ ಸಾಧನೆ ಹೇಗೆ ತುಲನೆ ಮಾಡಿದರೂ ಅಸಾಮಾನ್ಯ ಸಾಧನೆಯೇ. ಹೃದ್ಯವಾಗಿ ಮನಸ್ಸಿಗೆ ಹತ್ತಿರವಾಗಬಲ್ಲ ನಿಮ್ಮ ವ್ಯಕ್ತಿತ್ವ ನನ್ನನ್ನು ಆಕರ್ಷಿಸಿದ್ದು ಕಲಾವಿದರಾಗಿ ಮಾತ್ರ ಅಲ್ಲ. ಇಂದಿನ ಯಾವುದೇ ಕಲಾವಿದರಲ್ಲಿ ಇಲ್ಲದ ವಿಶಿಷ್ಟ ಗುಣಗಳೇ ನಿಮ್ಮತ್ತ ಆಕರ್ಷಿಸಿ ಅಭಿಮಾನವನ್ನು ನೂರ್ಮಡಿಗೊಳಿಸಿದೆ. ಮನುಷ್ಯ ಮಾತ್ರರಲ್ಲಿ ಇಲ್ಲದ ವಿಶಿಷ್ಟ ಗುಣಗಳನ್ನುಹೊಂದಿಕೊಂಡು ಬದುಕಿನ ಸಾರ್ಥಕತೆಯನ್ನು ಕಂಡುಕೊಂಡಿದ್ದಿರಿ ಅಂತಲೇ ನನ್ನ ಭಾವನೆ.

ಎಮ್ಮ ಅಭಿಮಾನದ ಬಲಿಪ್ಪಜ್ಜಾ ,

ಹೊರ ರಾಜ್ಯವೊಂದರಲ್ಲಿ ಕನ್ನಡದ ಕಲೆಗೆ ಒಂದು ಪ್ರಶಸ್ತಿ ಇದೇನು ಹೊಸದಲ್ಲ. ಬಲಿಪ್ಪರೇ, ಪ್ರಶಸ್ತಿ ಯಾವುದಾದರೂ ಅದು ನಿಮಗೆ ಹೊಸದಲ್ಲ.ಅಷ್ಟೊಂದು ಪ್ರಶಸ್ತಿಗಳಿಗೆ ಒಡೆಯರು ನೀವು.ನಿಮ್ಮ ಆಂತರ್ಯವೆ ಹೇಳುವಂತೆ ಪ್ರಶಸ್ತಿ ಏನಿದ್ದರೂ ಅದು ಗೌಣ. ಮಾಡುವ ಕ್ರಿಯೆಯೇ ಮುಖ್ಯ. ಎಂದಿಗೂ ಪ್ರತಿಫಲದ ಹಿಂದೆ ಹೋಗದ ನೀವು ಅದುವೇ ನಿಮ್ಮನ್ನು ಅರಸಿ ಬಂದಿದೆ. ಹೀಗಿದ್ದರೂ ಹೊರನಾಡಿನಲ್ಲಿ ಯಕ್ಷಗಾನಕ್ಕೆ ಸಂಭಂಧಿಸಿದಂತೆ, ( ಕೇರಳ ಹೊರ ನಾಡೆ ಸರಿ)ಅಲ್ಲಿ ಪ್ರಶಸ್ತಿ ಪಡೆಯುವಲ್ಲಿನ ನಿಮ್ಮ ಸಾಧನೆ ಅನನ್ಯ. ಕೇರಳ ಸರಕಾರ ಗುರುತಿಸಿದ ನಿಮ್ಮ ಯೋಗ್ಯತೆ ಕರ್ನಾಟಕ ಸರಕಾರಕ್ಕೆ ಕಾಣದೆ ಇದ್ದದ್ದು ಒಂದು ಸೋಜಿಗವೇ ಸರಿ. ನಿಮ್ಮನ್ನು ಅಭಿಮಾನಿಸುವ ಸಣ್ಣ ಪುಟ್ಟ ಅಭಿಮಾನಿಗಳು ಇಟ್ಟಿರುವ ದೊಡ್ಡ ಹೃದಯದ ದೊಡ್ಡ ಅಭಿಮಾನದಲ್ಲೇ ನೀವು ಸಂತುಷ್ಟರು. ಅದು ನಿಮ್ಮ ಸಹಜತೆಗೆ ಸಂದದ್ದು. ನಿಮ್ಮಲ್ಲಿ ನಾನು ಕಂಡುಕೊಂಡ, ನನ್ನಂತೆ ಮೆಚ್ಚಿಕೊಂಡ ಹಲವರಿದ್ದಾರೆ ಅ ಮಗುವಿನಂತ ಮುಗ್ಧ ಮನಸ್ಸು, ನಿಸ್ವಾರ್ಥ ಮನೋಭಾವ ಬಹುಶ: ಕಲಾವಿದನಾಗಿ ಮಾತ್ರ ನೋಡಿದರೆ ಸಾಲದು ಮನುಷ್ಯನಾಗಿ ನೋಡಿದರೂ ಅದು ಶ್ರೇಷ್ಠ.

ಬಿರುದು ಸನ್ಮಾನ ಸಂಭಾವನೆಗಳಿಂದ ದೂರವಿದ್ದರೂ ಒಂದು ವಿಚಾರ ಮಾತ್ರ ತುಂಬ ನೋವನ್ನು ಕೊಡುತ್ತದೆ, ಚಿಕ್ಕ ಪುಟ್ಟ ಪದವಿಗೆ ಏರಿದರೂ ಸನ್ಮಾನಿಸಲು ಸಾಲುಗಟ್ಟಿ ಸನ್ಮಾನವನ್ನು ಮೀಸಲಿರುಸುವ ಮಂದಿ ನಿಮಗೆ ಸನ್ಮಾನಿಸುವುದನ್ನು ಮರೆತರೆ ? ಅದರೇನು ಕಲಾ ಮಾತೆ ಅಮೃತಪುಷ್ಪವನ್ನು ನೀಡಿ ನಿಮ್ಮನ್ನು ಹರಸಿದ ಮೇಲೆ ಯಾವ ಸನ್ಮಾನಕ್ಕೂ ಹಿಗ್ಗದ ನಿಮಗೆ ಯಾವುದು ಗಣ್ಯವಲ್ಲ. ನಿಮ್ಮ ಅಭಿಮಾನಿಗಳ ಹೃದಯ ಮಂದಿರದಲ್ಲಿ ದಿನವು ನಿಮಗೆ ಸನ್ಮಾನಗಳು ಆಗುವಾಗ ಅದರಿಂದ ದೊಡ್ಡ ಮಾನ ಸನ್ಮಾನಗಳು ಬಯಸದ ಗುಣ ನಿಮ್ಮದು. ಇನ್ನೂ ಮನಸೋ ಇಚ್ಛೆ ಅಭಿಮಾನಿಗಳ ಮೈ ಮನವನು ತಣಿಸುವ ಚೈತನ್ಯವು ಕಲಾಮಾತೆ ಅನುಗ್ರಹಿಸಲಿ.



ಎಮ್ಮ ಪ್ರೀತಿಯ ಗೋವಿಂದಣ್ಣ,


ಪ್ರತಿ ವರ್ಷವೂ ರಾಜ್ಯ ಪ್ರಶಸ್ತಿ ಘೋಷಣೆಯಾದಾಗ ಒಂದು ವಿಧದ ಔದಾಸಿನ್ಯ ಈಸಲ ಮಾಯವಾಗಿತ್ತು. ಅದಕ್ಕೆ ಕಾರಣ ಅರ್ಹವ್ಯಕ್ತಿಯೊಬ್ಬರು ಅದಕ್ಕೆ ಒಡೆಯರಾದದ್ದು . ಕಲಾವಿದನೊಬ್ಬನಿಗೆ ಇರಬೇಕಾದ ಕನಿಷ್ಠ ಅಲ್ಲ ಗರಿಷ್ಠ ಗುಣಗಳು ನಿಮ್ಮಿಂದ ನೋಡಿ ಕಲಿಯಬೇಕು. ಸದಾ ತಣ್ಣಗೆ ಹಸನ್ಮುಖಿಯಾಗಿರುವ ನಿಮ್ಮ ದೈಹಿಕ ಕ್ಷಮತೆ ಮನುಷ್ಯ ಮಾತ್ರನಿಗೆ ಈಗಿನ ಕಾಲದಲ್ಲಿ ಅಸಾಧ್ಯ. ನಿಯಮ ನಿಷ್ಠೆಗೆ ಏನು ಸಾಧನೆಗೈಯ್ಯಬಹುದೋ ಅದು ನಿಮ್ಮಿಂದ ವೇದ್ಯ. ರಂಗವೆರಿದರೆ ರಾಜರ್ಷಿ, ಮಹಾರಾಜ ಹೆಚ್ಚೇಕೆ ಯಕ್ಷಗಾನದ ಬಲಿಷ್ಠ ಚಕ್ರವರ್ತಿ ನೀವು. ನಿಮ್ಮ ಯೋಗ್ಯತೆಗಳು ಅದು ಸುಮ್ಮನೆ ಸಿದ್ದಿಸಿದವುಗಳಲ್ಲ. ಅದರ ಹಿಂದೆ ನಿಯಮ ನಿಷ್ಠೆಯ ಕಠಿಣ ಹಾದಿ ( ನಿಮಗೆ ಇದು ಕಠಿಣ ಅನ್ನಿಸಲಿಲ್ಲವೋ ಏನೋ)ಸಾಕ್ಷಿಯಾಗಿದೆ. ನಾನು ಧರ್ಮಸ್ಥಳ ಮೇಳದ ಆಟ ಯಾವಾಗಿನಿಂದ ನೋಡುತ್ತಿದ್ದೇನೆಯೋ ಅವಾಗಿಂದ ಸರಿ ಸುಮಾರು ೨೫ ವರ್ಷಗಳಿಂದ ಮೇಳದ ಕೀಲಿ ಕೈಯಾಗಿರುವ (key person)ಒಂದು ರೀತಿಯಲ್ಲಿ trump card ಆಗಿರುವ ನಿಮ್ಮ ಸಾಧನೆ ಅರ್ಹತೆ ಸಾಮಾನ್ಯರಿಗೆ ಸಿದ್ದಿಸುವದಲ್ಲ.

ಯಕ್ಷಗಾನ ಕಲೆಯನ್ನು ಹಲವರಿಗೆ ಉಪದೇಶಿಸಿದ ಮಹಾ ಪ್ರಾಚಾರ್ಯರು ನೀವು. ನಿಮ್ಮಿಂದ ಮೇಲಿನ ಗುರುಸ್ಥಾನ ಬಹುಷಃ ಇಲ್ಲವೇನೋ ಅನ್ನಿಸುತ್ತದೆ. ಅಷ್ಟೊಂದು ಅಗಾಧ ಶಿಷ್ಯ ವರ್ಗವನ್ನು ಹೊಂದಿದ ನಿಮ್ಮ ಪ್ರೌಢಿಮೆ ಅಪಾರ.ನಿಮ್ಮ ಗರಡಿಯಲ್ಲಿ ಪಳಗಿದ ಕಲಾವಿದರು ಇಂದು ಹೆಸರಾಂತ ಕಲಾವಿದರಾಗಿ ಮೆರೆಯುವುದು ನಿಮ್ಮ ಸಾಮರ್ಥ್ಯಕ್ಕೆ ತಕ್ಕುದಾದ ನಿದರ್ಶನ.

ನಿಮ್ಮ ಕೌಶಲ್ಯ ಕೇವಲ ಯಕ್ಷಗಾನಕ್ಕೆ ಮಾತ್ರ ಸೀಮಿತವಲ್ಲ, ಉತ್ತಮ ಕೃಷಿಕರಾಗಿ, ಜತೆಗೆ ಪುರೋಹಿತ್ಯವನ್ನು ಬಲ್ಲವರಾಗಿ ಇನ್ನೂ ಹೀಗೆ ಹಲವು ಕ್ಷೇತ್ರಗಳಲ್ಲಿ ಇರುವ ನಿಮ್ಮ ಆಸಕ್ತಿ ಬೆರಗು ಹುಟ್ಟಿಸುತ್ತದೆ. ತಮ್ಮ ಸ್ವಂತ ಮನೆಯ ಬಳಿಯಲ್ಲೇ ದೇವಾಲಯ ನಿರ್ಮಿಸಿ ಮೂರು ಹೊತ್ತು ಪೂಜಾ ಕಾರ್ಯಕ್ರಮ ನೆರವೇರಿಸಿ ಮಾನವನಾಗಿಯೂ ಅದ್ಭುತ ಕೆಲಸವನ್ನೇ ಮಾಡಿರುವಿರಿ. ಯಾರನ್ನೇ ಆಗಲೀ ಸೌಮ್ಯತೆಯಿಂದ ಸೆಳೆವ ಆಕರ್ಷಕ ವ್ಯಕ್ತಿತ್ವ ನಿಮ್ಮದು. ನಿಮ್ಮಂತಹ ಕಲಾ ಪುತ್ರನನ್ನು ಹೆಡೆದ ಮಹಾಮಾತೆ ನಿಜಕ್ಕೂ ಧನ್ಯಳು.

ಯಕ್ಷಗಾನ ಕಲೆಯೆಂಬ ಅದ್ಭುತ ಲೋಕ ಕಂಡ ಅದ್ಭುತ ಸೇನಾನಿಗಳು ನೀವಿಬ್ಬರು. ಇದರತ್ತ ನಮ್ಮನ್ನು ನಮ್ಮಂತಹ ಸಹಸ್ರ ಜನರನನ್ನು ಅದರತ್ತ ಸೆಳೆಯುವಂತೆ ಮಾಡಿ, ಸನಾತನ ಕಲೆಯ ಮೂಲಕ ಸನಾತನ ಧರ್ಮ ಸಂಸ್ಕೃತಿಯ ಜ್ಞಾನವನ್ನು , ಪೌರಾಣಿಕ ಕಥೆಗಳ ಮೌಲ್ಯವನ್ನು ಜನ ಸಾಮಾನ್ಯನಲ್ಲಿ ಅಚ್ಚಳಿಯದೆ ಉಳಿವಂತೆ ಮಾಡಿದ ಓ ಕಲಾ ಮಾತೆಯ ಅನರ್ಘ್ಯ ರತ್ನಗಳೇ, ಯಕ್ಷಗಾನವೆಂಬ ಬಂಡಿಯನ್ನು ಜತೆಯಾಗಿ ನಡೆಸಿದ ಸಾರಥಿಗಳು ನೀವು. ನೀವುಗಳು ನಡೆದ ಹಾದಿಯಲ್ಲಿ ಇಟ್ಟ ಹೆಜ್ಜೆಯ ಗುರುತಿನಲ್ಲಿ, ಈ ಪೀಳಿಗೆ ಹೆಜ್ಜೆಯನ್ನು ಒತ್ತುವಾಗ ಎಚ್ಚೆತ್ತು ಜಾಗರೂಕರಾಗಿದ್ದರೆ ಅದುವೇ ನಿಮಗೆ ಸಲ್ಲಿಸುವ ಸನ್ಮಾನವೋ ಪ್ರಶಸ್ತಿಯೋ ಆಗಬಲ್ಲುದು.ಪ್ರಶಸ್ತ ಜಾಗದಲ್ಲಿ ನಿಲ್ಲಿಸಿದ ಈ ಆಸ್ತಿಯ ಎಂದರೆ ಈ ಪ್ರಶಸ್ತಿಯ ಗರಿಯನ್ನು ನಿಮಗೆ ತೊಡಿಸಿ ನಿಮ್ಮಂದವನ್ನು ಸವಿಯುವ ಭಾಗ್ಯ ನಮ್ಮದು. ನಿಮ್ಮ ಯುಗದಲ್ಲಿ ನಾವು ಬದುಕಿರುವುದೇ ನಮ್ಮ ಭಾಗ್ಯ. ಈ ಪ್ರಶಸ್ತಿಯ ಗರಿಮೆಯಿಂದ ಇನ್ನೂ ಹೆಚ್ಚಿನ ಪ್ರೇರಣೆ ಹಾಗು ಚೈತನ್ಯವು ಆ ಮೂಲಕ ನಿರಂತರ ಸೇವೆಯೂ ನಿಮ್ಮಿಂದ ಕಲಾಮಾತೆಗೆ ಆಗಲಿ ಅದನ್ನು ಸವಿಯುವ ಸೌಭಾಗ್ಯ ನಮ್ಮದಾಗಲಿ.

Monday, December 1, 2008

ನಾನು ಮೊದಲು ನೋಡಿದ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ


ಶ್ರೀ ಧರ್ಮಸ್ಥಳ ಮೇಳದ ಯಶಸ್ವಿ ಪ್ರಸಂಗಗಳಲ್ಲಿ ಇದು ಒಂದು, ಇದು ನಾನು ನೋಡಿದ್ದು ಸುಮಾರು ೧೯೮೦-೮೧ರಲ್ಲಿ ಎಂದೆ ನನ್ನ ನೆನಪು. ಅದ್ಭುತ ಮೇರು ಕಲಾವಿದರಿಂದ ಕೂಡಿ ಮೆರೆಯುತ್ತಿದ್ದ ಧರ್ಮಸ್ಥಳ ಮೇಳ.ಕೇವಲ ಈ ಮೇಳ ಮಾತ್ರವಲ್ಲ ಸಮಗ್ರ ಯಕ್ಷಗಾನ ರಂಗವೇ ಅದ್ಭುತ ಪ್ರತಿಭಾವಂತ ಕಲಾವಿದರ ನೈಪುಣ್ಯತೆಯಿಂದ ಮೆರೆದದುತ್ತಿದ್ದ ಕಾಲವದು.. ಬೇರೆ ಮೇಳದಲ್ಲೂ ಅವಾಗ ಮೇರು ಕಲಾವಿದರಿದ್ದರು. ಇರಲಿ, ಅವಾಗ ನಮ್ಮ ಮನೆ ಪೈವಳಿಕೆ ಸಮೀಪ ಇತ್ತು.. ಬಾಲ್ಯದ ದಿನಗಳವು. ಏನು ಹುಮ್ಮಸ್ಸು.. ಎಲ್ಲವನ್ನು ಸವಿದು ಮುಗಿಸಿಬಿಡಬೇಕು ಎನ್ನುವದ್ದು. ಒಂದೆರಡು ತಿಂಗಳ ಮೊದಲೇ ನಮ್ಮ ಬಸ್ಸು ಸ್ಟ್ಯಾಂಡ್ ನ ಗೋಡೆ ಮೇಲೆ ಒಂದು ಬಣ್ಣ ಬಣ್ಣದ ವಾಲ್ ಪೋಸ್ಟರ್ ಅಂಟಿಸಿದ್ದರು . ಹಲವು ಕಲಾವಿದರ ವೇಷಗಳ ಫೋಟೋ ಇದ್ದ ಸುಂದರ ಬಿತ್ತಿ ಪತ್ರವದು. ಶಾಲೆಗೆ ಹೋಗುವ ಗಡಿಬಿಡಿಯಲ್ಲಿ ಬೆಳಗಿನ ಹೊತ್ತು ಬೇರೆ... ಹತ್ತಿರ ಹೋಗಿ ನೋಡುವದಕ್ಕೆ ಆಗಲಿಲ್ಲಾ.. ಆದರೆ ಧರ್ಮಸ್ಥಳ ಮೇಳದ ಆಟವಿದೆ ಎಂದು ತಿಳಿದು ಹೋಯಿತು.. ಮಧ್ಯಾಹ್ನ ಊಟದ ಬಿಡುವು.. ಪೋಸ್ಟರ್ ನೋಡುವುದಕ್ಕಾಗಿಯೇ ಬಸ್ ಸ್ಟ್ಯಾಂಡ್ ಗೆ ಓಟ. ಹತ್ತಿರ ಹೋಗಿ ಒಂದು ಹತ್ತುಸಲ ವಾದರೂ ನೋಡಿದೆ ಬಾಯರು ಸೊಸೈಟಿ ಬಳಿ ಆಟ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ.. !!!! ಕುಂಬ್ಳೆ ಪುತ್ತೂರು ಸೂರಿಕುಮೆರಿ ಎಂಪೆಕಟ್ಟೆ , ಚಂದ್ರಗಿರಿ ...ಇವರ ಅದ್ದೂರಿವೆಶಗಳ ಪೋಟೋ ಇದ್ದ ವಾಲ್ ಪೋಸ್ಟರ್.. ಅವಾಗ ಕುಂಬ್ಳೆ ಸೂರಿಕುಮೆರಿ.. ಪುತ್ತೂರು ನನ್ನ ಅಚ್ಚು ಮೆಚ್ಚಿನ ಕಲಾವಿದರುಗಳು.

ಹಲವು ದಿನಗಳಿಂದ ಈ ಪ್ರಸಂಗ ನೋಡುವ ತೀವ್ರ ನಿರೀಕ್ಷೆಯಲ್ಲಿ ಇದ್ದ ನನಗೆ ನಿರೀಕ್ಷೆ ಸಫಲವಾಗುವ ಕಾಲ.

ಏಕೆಂದರೆ ನಾನು ಈ ಮೊದಲು ಮಂಗಳೂರಲ್ಲಿ ಮಾವನೊಂದಿಗೆ ಇದ್ದೆ ಅವಾಗ ನಮ್ಮ ಮನೆಯ ಬಳಿಯೇ ಈ ಪ್ರಸಂಗ ಧರ್ಮಾರ್ಥವಾಗಿ ಹರಿಕೆ ಬಯಲಾಟ ಆಡಿದ್ದರು. ಹಿರಿಯರು ಅಜ್ಜಿ.( ತಾಯಿಯ ಅಮ್ಮ) ಮಾವ ಯಾರೂ ನನ್ನ ಹೋಗದಂತೆ ನಿರ್ಬಂಧಿಸಿದ್ದರು ಅದಕ್ಕೂ ಕಾರಣಗಳಿದ್ದುವು. ಬಾಲ್ಯದಲ್ಲಿ ಆರೋಗ್ಯ ನನ್ನದು ಅಸ್ತು ಉತ್ತಮವಾಗಿರಲಿಲ್ಲ.. ಒಂದು ವಾರ ಮೊದಲು ಕಟೀಲು ಮೇಳದ ೨ ಆಟ ನಿರಂತರ ನೋಡಿ ನನ್ನ ಅವಾಗ ನನ್ನ ಕಣ್ಣು ತುಂಬ ಕೆಂಪಗಾಗಿತ್ತು.. !!! ಈಗ ಮನೆಯ ಬಳಿಯ ಆಟಕ್ಕೆ ಹೋಗುತ್ತೆನೆಂದಾಗ ಪರ್ಯಾಯವಾಗಿ ಹಿರಿಯರ ಕಣ್ಣು ಕೆಂಪಗಾಯಿತು.!!! ಮಾವ ಮತ್ತೆ ಕೆಲವರು ಆಟಕ್ಕೆ ಹೋಗಿದ್ದವರು ಹೋಗಿ ಬಂದು ಮರುದಿನ ಆಟದ ವರ್ಣನೆ ಸ್ವಾರಸ್ಯಗಳನ್ನು ಮಾತಾಡುವಾಗ ತೀವ್ರ ನಿರಾಶೆ ಅನುಭವಿಸಿದ್ದೆ. ಮುಸಲ್ಮಾನ ಮತ್ತು ಹೆಗಡೆಯ ಸ್ವಾರಸ್ಯಕರ ಸಂಭಾಷಣೆ ಹೇಳುವಾಗ... ಮಾವನ ಮೇಲೆ ತೀವ್ರ ಸಿಟ್ಟು ಬಂದರೂ ನಾವೆಲ್ಲ ಬಲ ವಿಲ್ಲದ ಬಾಲರು.. ಒಂದು ವೇಳೆ ಆಟಕ್ಕೆ ಹೋಗಿದ್ದರೆ ನಾವುಗಳು ಬಾಲವಿಲ್ಲದವರಂತೆ ಆಗಿಬಿಡುತ್ತಿದ್ದೆವು.!!!

ಈಗ ನಮ್ಮ ಬಳಿಗೆ ಪುನಃ ಮೇಳ ಬಂದಿದೆ ನೋಡುವ ಸದವಕಾಶ ಬೇರೆ.. ಆ ದಿನ ಬಂದು ಬಿಟ್ಟಿತು ಹಲವು ದಿನಗಳಿಂದ ಆಟದ ಖರ್ಚಿಗಾಗಿ ಬಿಡಿಗಾಸುಗಳನ್ನು ಒಟ್ಟುಮಾಡಿ ತೆಗೆದಿರಿಸಿದ್ದೆ. ತುಂಬ ಬಡತನದ ಕಾಲವದು ಅದರೂ ಆಟದ ಮೇಲಿನ ವ್ಯಾಮೋಹ..ಮಿತ್ರನೊಬ್ಬ ತಾನು ಹೋಗುವುದಿಲ್ಲ ಎಂದು ತನ್ನ ಐದು ರೂಪಾಯಿಯಾ ಗೇಟ್ ಪಾಸು ಕೊಟ್ಟು ಶುಭ ಹಾರೈಸಿದ್ದ... ಅವನಿಂದ ಟಿಕೆಟ್ ಪಡೆಯಬೇಕಾದರೆ ಇನ್ನಿಲ್ಲದ ಪ್ರಯತ್ನ ಮಾಡಿದ್ದೆ... ಅಂತೂ ಮಿತ್ರನ ಟಿಕೆಟ್ ಸಿಕ್ಕಿದ್ದು ಅದೇ ದಿನ ರಾತ್ರಿ ೭.೩೦ಗೆ...!!! ಅಷ್ಟೂ ಸತಾಯಿಸಿದ್ದ ಪುಣ್ಯಾತ್ಮ.. ರಾತ್ರಿ ೮. ಗಂಟೆಗೆ ಕೊನೆಯ ಬಸ್ಸು ಬಾಯಾರು ಪದವಿಗೆ.. ನಮ್ಮಲ್ಲಿಂದ ಆಟವಾಗುವ ಜಾಗ ೪-೫ ಕಿಲೋ ಮೀಟರು ದೂರ... ರಾತ್ರಿ.. ಬಸ್ಸು ಸಿಗದಾಗ ತುಂಬ ನಿರಾಶೆ ಯಾಯಿತು ಹಾಗಿದ್ದರೂ ಹಲವು ಜನ ಆಟಕ್ಕೆ ಹೋಗುವವರಿದ್ದರು..ಅವರ ಜತೆ ನಡೆದುಕೊಂಡು ಪದವಿಗೆ ಬಂದಾಗ ಸರಿಯಾಗಿ ೯.೩೦ ಆಗಿರಬಹುದು. ದೂರದಿಂದಲೇ ಆಟದ ಡೇರೆಯನ್ನು ನೋಡಿದ ನಮಗೆ ಭೂಮಿ ಮೇಲೆ ಕಾಲು ನಿಲ್ಲಲಿಲ್ಲ... ಪದವಿನ ಬುಸ್ಸಿಳಿವ ಜಾಗದಿಂದ ಆಟದ ಜಾಗ ಸೊಸೈಟಿ ತುಸು ದೂರ.. ಆವಾಗ ಅಲ್ಲಿ ಒಂದು ಅಡ್ಡ ಒಳ ದಾರಿ ಇತ್ತು.. ಕರ್ರಗಿನ ಪಾದೆ ಕಲ್ಲು ಬಂಡೆಯ ಮೇಲೆ ಹೋಗುತ್ತಿತ್ತು.. ಬೇರೆ ಸಮಯದಲ್ಲಾದರೆ ಟಾರ್ಚ್ ಇಲ್ಲದೆ ನಾವು ಹಾವು ಹೊಂಡ ಗಳಿಗೆ ಹೆದರಿ ಹೆಜ್ಜೆ ಮುಂದಿಡಲು ಭಯ ಪಡುತ್ತಿದ್ದೆವು..ಆದರೆ ಈಗ ಅದು ಯಾವುದು ಇದೆಯೋ ಇಲ್ಲವೋ ಎನ್ನುವ ಪರಿಜ್ಞಾನವೇ ಇಲ್ಲದೆ ಓಡಿಕೊಂಡು... ಆಟದ ಟೆಂಟ್ ಹತ್ತಿರ ಬಂದೆವು ..

ಚಿಕ್ಕ ಪ್ರಾಯದ ಬಾಲೆ ಚದುರೆ...... ಎಂದು ಪುತ್ತಿಗೆ ರಘುರಾಮ ಹೊಳ್ಳರು ( ಇದು ಸಣ್ಣ ನೆನಪು ) ಐದು ರೂಪಾಯಿ ಟಿಕೆಟ್ ಪಾಸು ಕೊಟ್ಟು ನಾನು ಒಳ ಪ್ರವೇಶ ಮಡಿ ಸೂಕ್ತ ಸ್ಥಳದಲ್ಲಿ ಆರಾಮ ಕುರ್ಚಿಯಲ್ಲಿ ಕುಳಿತೆ..ಪೀಠಿಕೆ ಶುರುವಾಯಿತು... ಚಿಪ್ಪಾರು ಚೆಂಡೆ ಹಿಡಿದು ವೇದಿಕೆ ಮೇಲೆ ಬಂದರು.. ಅವರು ಚೆಂಡೆ ಹಿಡಿವ ರೀತಿಯೇ ಹಗೆ ತುಂಬ ಹಗುರವಾದ ಭಾವನೆ ಬರುವಹಾಗೆ ತಮ್ಮ ನೀಳಕಾಯದ ದೇಹಕ್ಕೆ ತೂಗು ಹಾಕಿ, ಬಹುಶ ಚೆಂಡೆ ವಾದನವನ್ನು ಕೂಡ ಅವರು ಹಗುರವಗಿಯೇ ಕಾಣುತ್ತಾರೆಂದು ಹಲವುಸಲ ಅನಿಸಿದ್ದಿದೆ.. ಪೀಠಿಕೆ ಮುಗಿಯಿತು... ಅಂಬುರಹದಳ ನೇತ್ರೆ... ಅನಂತರ ಪರಮೇಶ್ವರನ ಒಡ್ಡೋಲಗ...ನಾರದನ ಆಗಮನ.. ಇದು ಪಾತ್ರಧಾರಿಗಳು ಪರಿಚಯ ಇಲ್ಲ..ಬೂಲೋಕದಲ್ಲಿ ಧರ್ಮ ನಶಿಸಿ ಹೋಗುತ್ತಿರುವ ಬಗ್ಗೆ ನಾರದನ ಅಹವಾಲು.. ಶಿವಗಣಗಳ ಅಬ್ಬರದ ಪ್ರವೇಶ... ನಸು ಬೆಳಕಿನಲ್ಲಿ ಆ ರೀತಿಯ ಕಿರೀಟವೇಶ ನಾನು ನೋಡುವುದೇ ಪ್ರಥಮ.. ರೋಮಾಂಚನವಾಯಿತು...

ಗಣಮಣಿಯಾಗಿ ಗೋವಿಂದ ಭಟ್.. ಕಾಳರಾಹುವಾಗಿ ಚಂದ್ರಗಿರಿ ಅಂಬು ಕುಮಾರ ಸ್ವಾಮಿ ಯಾಗಿ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ.. ಹಾಗು ಇನ್ನೂ ಗಣಗಳಿಂದ ರಂಗಸ್ಥಳ ತುಂಬಿ ಹೋಯಿತು.. ಏನು ಅಬ್ಬರ..ಗೋವಿಂದ ಭಟ್ಟರ ಸ್ವರ ಇಗಲೂ ಮಾರ್ದನಿಸುತ್ತಿದೆ.. ಚಂದ್ರಗಿರಿಯ ಬಣ್ಣಗಾರಿಕೆ ಹಿತವಾದ ಕುಣಿತ.. ಸಿದ್ದಕಟ್ಟೆಯಾ ಹದವಾದ ಕುಣಿತ..

ಅನಂತರ ಗೋವಿಂದ ದೀಕ್ಷಿತರಾಗಿ ಮಲ್ಪೆ ವಾಸುದೇವ ಸಾಮಗರ ಪ್ರವೇಶ.. ಈ ಮೊದಲು ಅವರನ್ನು ತಾಳಮದ್ದಳೆಯಲ್ಲಿ ಅವರನ್ನು ಕಂಡಿದ್ದೆ.. ತರ್ಕ ಸಿದ್ದಾಂತಗಳಿಂದ ಹೆಸರುವಾಸಿಯಾಗಿದ್ದರು. ಯಕ್ಷಗಾನ ಆಟದಲ್ಲಿ ನೋಡುವುದು ಇದು ಪ್ರಥಮ.. ಪ್ರವೇಶವಾದ ಮರುಗಳಿಗೆಯೇ ತಮ್ಮ ಮಾತಿನ ಮೋಡಿಗೆ ಪ್ರೇಕ್ಷಕರನ್ನು ಸೆಳೆದರು.. ಮೊದಲು ನಮ್ಮೂರಿಗೆ ಅವರು ಅಪರಿಚಿತರೇ.. ಪ್ರೇಕ್ಷಕರಲ್ಲಿ ಗುಸು ಗುಸು "ಏರೋ ಸಾಮಗೆರ್ ಗೆ.. ತೂಲೆ ಎಂಚ ವೋಯಿಪುವೆರ್?" ಆದರೆ ಅದ್ಭುತ ಬ್ರಾಹ್ಮಣ ವೇಷ ನೋಡಿದೆ.. ಗೋವಿಂದ ದೀಕ್ಷಿತ ಹೆಸರು ಎತ್ತಿದರೆ ನನಗೆ ಈಗಲೂ ಅವರ ಪಾತ್ರ ಚಿತ್ರಣ ಮನಃ ಪಟಲದಲ್ಲಿ ಹಾದುಹೋಗುತ್ತದೆ. ಕರಾರುವಕ್ಕಾದ ವಿಡಂಬನೆಯ ಮಾತುಗಳು.. ಮಾಲತಿ ಪ್ರವೇಶ ಆಗಿ ಸರಸ ಸಂಭಾಷಣೆ ಮದ್ಯೆ ಇವರ ಪ್ರಶ್ನೆ " ನಿನ್ನ ಹೆಸರೇನು ?" ಅದಕ್ಕೆ ಅವಳು ನಾಚುತ್ತ " ಮಾಲತಿ.." ಎಂದಾಗ ಇವರ ನಟನೆ ನೋಡಬೇಕು... " ಯಾವ ಕಡೆಗೆ...?" ತುಸು ತಡೆದು... ಮಾಲುತಿ...... ಲಂಪಟ ವಿಪ್ರನ ವೇಷವನ್ನು ಅದ್ಭುತವಾಗಿ ನಿರ್ವಹಿಸಿ.. ಕೊನೆಗೆ ಹುಚ್ಚನಗುವ ಸನ್ನಿವೇಶ ಅದ್ಭುತವಾಗಿ ಪ್ರಸ್ತುತ ಪಡಿಸಿದರು.. ಈ ಬಗೆಯ ಪಾತ್ರಗಳಿಗೆ ಇವರು ಈಗಲೂ ಸಿದ್ದ ಹಸ್ತರು... ಇನ್ನೊಬ್ಬರು ಇವರನ್ನು ಅನುಕರಿಸುವಂತೆ ಮಾಡಬಲ್ಲರು..


ಕಡತೋಕ ಮಂಜುನಾಥ ಭಾಗಾವತರು ಬಂದು ನಿದ್ರಿಸುತ್ತಿದ್ದ ಬೆರಳೆಣಿಕೆಯ ಮಂದಿಯನ್ನೂ ಎಬ್ಬಿಸಿಬಿಟ್ಟರು..!!!

ಅನಂತರ ಅವಿಸ್ಮರಣೀಯ ಪಾತ್ರಗಳ ವರ್ಷಧಾರೆ ಓತಪ್ರೋತವಾಗಿ ಹರಿದು ಬಂತು. ಎಂಪಕೆಟ್ಟೆ ರಾಮ ರೈ ಅವರ ಶೆಟ್ಟಿ ವರ್ತಕನ ಪಾತ್ರ.. ಎಂಪಕೆಟ್ಟೆ ಯವರು ತಮ್ಮ ಅಂಗಿ ಹಾಕಿಕೊಳ್ಳುವ ದೃಶ್ಯ.. ಬಂದ ತಿರುಕನ ಜೋಳಿಗೆ ಜಾಲಾಡಿ ಕೈ ಹೊರತೆಗೆದಾಗ ಕೈಯಲ್ಲಿ ನಾಗರ ಹಾವನ್ನು ನೋಡಿ ಭಯಭೀತರಾಗುವ ದೃಶ್ಯ...ಪ್ರೇಕ್ಷಕನನ್ನು ಮಂತ್ರಮುಗ್ಧರನ್ನಾಗಿ ಮಾಡಿಬಿಡುತ್ತಿತ್ತು. ನಯನ ಕುಮಾರರ ಅಕ್ಕಸಾಲಿಯ ಪಾತ್ರ.. ಕ್ಷಣ ಮಾತ್ರದಲಿ ಮಿಂಚಿನ ಸಂಚಲನ ಉಂಟು ಮಾಡಿ ನಿರ್ಗಮಿಸಿತು... ..ಆನಂತರ.. ಕುಂಬ್ಳೆಯವರ ಹೆಗ್ಗಡೆ ಪಾತ್ರ.. ಸುಂದರ ಹಾಗು ಸರಳವಾಗಿ ನಯವಾದ ಮಾತುಗಾರಿಕೆಯಿಂದ ಪ್ರೇಕ್ಷಕರನ್ನು ತಣಿಸಿತು. ಪುತ್ತೂರು ನಾರಾಯಣ ಹೆಗ್ಗಡೆಯ ಅಣ್ಣಪ್ಪನ ಪಾತ್ರ ಇಡೀ ಪ್ರಸಂಗದ ಮಾಸ್ಟರ್ ಪೀಸ್ ... ಅವರ ಸ್ವರವೂ.. ವೇಷಗಾರಿಕೆಯನ್ನು ಹೊಗಳುವುದೇ.. ಕಷ್ಟ.. ಮುಸಲ್ಮಾನನಾಗಿ..ಕಡಬ ಸಾಂತಪ್ಪ ಅಂತ ನೆನಪು. ಹೆಗಡೆಯ ನಡುವಿನ ಸಂಬಾಷಣೆ ನಾನು ಹಲವು ದಿನಗಳಿಂದ ಕಾದಿದ್ದೆ... ಆದರೆ ಅವಾಗ ಬೆಳಗಾಗಲು ಕೆಲವೇ ಸಮಯ ಉಳಿದಿತ್ತು.. ಮೊದಲೆಲ್ಲ ಆಟಕ್ಕೆ ಹೋದರೆ ಯಾವುದೊ ಒಂದು ಘಳಿಗೆಯಲ್ಲಿ ನಿದ್ದೆಗೆ ಜಾರಿಬಿಡುವ ನಾನು.. ಒಂದು ಸ್ವಲ್ಪವೂ ಕಣ್ಣು ಮುಚ್ಚದೆ ಎಚ್ಚರದಿಂದ ಈ ಆಟವನ್ನು ನೋಡಿದ್ದೇನೆ ಎನ್ನುವಾಗ ಈಗ ಆಶ್ಚರ್ಯವಾಗುತ್ತಿದೆ. ಅದರೂ ಅ ಸಂಭಾಷಣೆಯ ಸ್ವಾರಸ್ಯ ನೆನಪಿನಾಳದಲ್ಲಿ ಇನ್ನೂ ಇದೆ..

ಕಣ್ಮನಗಳನ್ನು ತಣಿಸಿದ ಅಂಥಹ ಕ್ಷೇತ್ರ ಮಹಾತ್ಮೆ ಯಕ್ಷಗಾನ ಆಮೇಲೆ ನನಗೆ ಆಗಲೇ ಇಲ್ಲ...