"ಇದು ವಿಮರ್ಶೆಯಲ್ಲದ ಚಿಂತನ"

Sunday, March 22, 2020

ಅಸುರ ಮಹಿಮೆ????

ಶ್ರೀ ದೇವಿ ಮಹಾತ್ಮೆ........ಯಕ್ಷಗಾನಕ್ಕೆ ಅನ್ವರ್ಥವಾಗಿ, ಅಂದರೆ ಯಕ್ಷಗಾನ ಎಂದರೆ ದೇವಿ ಮಹಾತ್ಮೆ, ದೇವಿ ಮಹಾತ್ಮೆ ಎಂದರೆ ಯಕ್ಷಗಾನ ಎಂಬ ಅದ್ವೈತ ಸಿದ್ದಾಂತದಂತೆ ಯಕ್ಷಗಾನ ಸದ್ಯದ ಪರಿಸ್ಥಿತಿ ಇದೆ. ಯಕ್ಷಗಾನಕ್ಕೆ ಇದರ ಗುಣಾವಗುಣದ ವಿಮರ್ಶೆ ಏನಿದ್ದರೂ ದೇವಿ ಮಹಾತ್ಮೆ  ಈಗ ಯಕ್ಷಗಾನದ ಅನಿವಾರ್ಯವಾಗಿ ಬಿಂಬಿಸಲ್ಪಡುವುದು ಸುಳ್ಳಲ್ಲ. ದೇವಿ ಪ್ರತ್ಯಕ್ಷವಾಗುವಾಗ ಸಭೆಯಲ್ಲಿ ಕುಳಿತು  ಹುಚ್ಚೆದ್ದು ಭಾವುಕರಾಗಿಬಿಡುವುದನ್ನು ಕಂಡಿದ್ದೇನೆ. ಪ್ರತಿಬಾರಿ ಶ್ರೀದೇವಿಯ ವೇಷವನ್ನು ಕಾಣುವಾಗ ವೇಷಕ್ಕೆ ಸಂಬಂಧವೇ ಇಲ್ಲದಂತೆ ಭಾವುಕರಾಗುವ ಭಕ್ತ ಸಮೂಹ ಯಕ್ಷಗಾನದಲ್ಲಿದೆ. ಇಂತಹ ಭಾವಾವೇಶ ಇರುವ ಕಡೆಯಲ್ಲೇ ಎರಡು ಭಾವನೆಗೂ ಅವಮಾನವಾಗುವ ಘಟನೆ ನಡೆದಿದೆ ಎಂದರೆ ಆಶ್ಚರ್ಯವಾಗುತ್ತದೆ. ದಿನಗಳ ಹಿಂದೆ ಪತ್ರಿಕಾ ಪ್ರಕಟಣೆಯೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿತ್ತು. ಮಾತ್ರವಲ್ಲ ಟಿವಿ ಮಾಧ್ಯಮದಲ್ಲೂ ಅದೂ ಸುದ್ದಿಯಾಗಿ ಪ್ರಕಟವಾಗಿತ್ತು.  ಶುಂಭವಧೆ  ಎಂಬ ಯಕ್ಷಗಾನ ತಾಳಮದ್ದಲೆ ಅಂದರೆ ದೇವಿ ಮಹಾತ್ಮೆ, ಯಲ್ಲಿ ಎರಡು ಕಲಾವಿದರು ಬೈದಾಡಿ ಹೊಡೆದಾಡಿಕೊಂಡದ್ದು ಎಲ್ಲರೂ ತಲೆ ತಗ್ಗಿಸುವಂತೆ ಮಾಡಿತ್ತು. ಎಲ್ಲರೂ ತಲೆ ತಗ್ಗಿಸಿಕೊಂಡರೂ ಕಲಾವಿದರು ತಲೆ ಎಷ್ಟು ತಗ್ಗಿಸಿದ್ದಾರೋ ತಿಳಿಯದು. ಆದರೆ ಅತ್ಯಂತ ನಾಚಿಕೆಗೇಡಿನ ಸಂಗತಿ. ಅದರಲ್ಲು ಶುಂಭನ ರಕ್ತಬೀಜ ಪಾತ್ರಗಳ ಸಂವಾದದಲ್ಲಿ ಈ ದುರ್ಘಟನೆ ನಡೆದು ಯಕ್ಷಗಾನದ ಮತ್ತೊಂದು ಮುಖ ಚರಿತ್ರೆಗೆ ದಾಖಲಾಗಿ ಹೋದದ್ದು ದುರಂತ ಎನ್ನಬೇಕು. ಯಾರೋ ಒಬ್ಬ ಎಲ್ಲೋ ಕುಳಿತು ಯಕ್ಷಗಾನದ ಬಗ್ಗೆಯೋ ದೇವಿ ದೇವರ ಬಗ್ಗೆಯೋ ಆಕ್ಷೇಪಿಸಿ ಬರೆದುದನ್ನು ಕಾಣುತ್ತೇವೆ. ಆಗ ಅದರ ವಿರುದ್ಧವಾಗಿ ಅತಿ ಉಗ್ರವಾಗಿ ಪ್ರತಿಕ್ರಿಯೆ ಕೊಡುವವರನ್ನು ಕಂಡಿದ್ದೇವೆ. ಆದರೆ ಯಕ್ಷಗಾನದ ಕಲಾವಿದರೇ ಅವಮಾನಿಸುವುದನ್ನು ಕಾಣುವಾಗ ಇಲ್ಲಿ ಪ್ರತಿಭಟನೆ ಎಂಬುದು ಯಾರ ಕರ್ತವ್ಯವಾಗುತ್ತದೆ? ಯಾರು ಯಾರ ವಿರುದ್ಧ ಮಾಡಬೇಕು? ಹೀಗಿದ್ದರೂ ಈ ವಿವಾದ ಅಷ್ಟೇನು ಪ್ರತಿಭಟನೆ ಇಲ್ಲದೆ ಯಾವುದೋ ಪಟ್ಟ ಭದ್ರ ಹಿತಾಸಕ್ತಿಗಾಗಿ ತಣ್ಣಗಾಗಿಸುವ ಪ್ರಯತ್ನ ಮಾಡಿದೆ. ಹಲವು ಸಲ ಹಾಗೇ ಕಲಾವಿದರೋ ಇನ್ನೊಬ್ಬರೋ ಯಕ್ಷಗಾನಕ್ಕಿಂತಲು ಅವರರವರ ಪ್ರತಿಷ್ಠೆಯ ಕೈ ಮೇಲಾಗುವುದು ಹಲವು ಸಲ ಕಂಡಿದ್ದಿದೆ.  ಅದು ಏನಾದಾರೂ ಆಗಲಿ ಆದರೆ ಆದರೆ.......ಯಕ್ಷಗಾನಕ್ಕೆ ಸಂಬಂಧಿಸಿದಂತೆ ಹೀಗೆ ಆಗಿ ಹಾಗೇ ಹೋಗುವುದು ಎಂದರೆ ಇಲ್ಲಿ ಗಂಭೀರವಾಗಿ ಚಿಂತಿಸಲ್ಪಡಬೇಕು. 

ಯಕ್ಷಗಾನದ ವೇದಿಕೆ ಎಂದರೆ ಅದು ಕಲೆಗೆ ಸಂಬಂಧಿಸಿದಂತೆ ಒಂದು ಪವಿತ್ರ ಸ್ಥಳ. ಆ ಭಾವನೆಯೇ ಒಂದು ದೈವಿಕ ಭಾವನೆ. ಇಲ್ಲಿಯ ಪ್ರತಿಯೊಂದು ಆಕರಗಳೂ ಪೂಜಾ ಸಾಮಾಗ್ರಿಯಂತೆ ಪರಮ ಪವಿತ್ರ. ಹೆಚ್ಚೇಕೆ ನಾವು ತೊಡುವ ಅಂಗಿ ಪೇಟ ಕೂಡ ಪೂಜನೀಯವಾಗಿ ಕಾಣುವವರಿದ್ದಾರೆ.  ಜಾಗಟೆ ಮದ್ದಲೆ ಚೆಂಡೆ ಶ್ರುತಿ ಪೆಟ್ಟಿಗೆ ಇನ್ನೂ ಮುಂದೆ ಹೋಗಿ ಮೈಕು...ಇದಕ್ಕೂ ನಮಸ್ಕರಿಸುವುದನ್ನು ಕಂಡಿದ್ದೇನೆ.  ಈ ಅಂಗಗಳ ಸಾನ್ನಿಧ್ಯದಲ್ಲಿ ಅವಾಚ್ಯ ಅಶ್ಲೀಲ ಬೈಗುಳ ಒಬ್ಬ ಕಲಾವಿದ ಉದುರಿಸುತ್ತಾನೆ ಎಂದರೆ ಹುಟ್ಟಿನಿಂದ ಬರುವ ಸಂಸ್ಕಾರಕ್ಕೆ ಹೆಸರು ಇಡುತ್ತಾರೆ ಎಂಬುದು ಸ್ಪಷ್ಟ.  ಸಂಸ್ಕಾರ ನೀಡಿದ ಗುರುಗಳೂ ನಾಚಿಕೆ ಪಟ್ಟುಕೊಳ್ಳಬೇಕು.  ಪೂಜನೀಯ ಎಂಬಂತಹ ಮೈಕು ಇಲ್ಲಿ ಆಯುಧವಾದದ್ದು ಇನ್ನೊಂದು  ವಿಪರ್ಯಾಸ.  ರಕ್ತ ಬೀಜ ಮತ್ತು ಶುಂಭ ಪಾತ್ರ ಹೋರಾಟ ಅದೆಷ್ಟು ಭೀಭತ್ಸ. ಇಲ್ಲಿ ರಕ್ತ ಬೀಜ ಪಾತ್ರಧಾರಿ ಸಹಜವಾಗಿ ಅತ್ಯುತ್ತಮ ಪಾತ್ರ ನಿರ್ವಹಣೆ ಮಾಡಿದ್ದರು. ಇದು ವೈರಲ್ ಆಗಿ ಹೋದ ಧ್ವನಿಮುದ್ರಣದಲ್ಲಿ ವ್ಯಕ್ತವಾಗುತ್ತದೆ. ಕೊನೆಯಲ್ಲಿ ಶುಂಭ ಪಾತ್ರಧಾರಿಯ ಬಾಯಿಂದ ಉದುರುವ ಅಶ್ಲೀಲ ಬೈಗುಳ  ತನ್ಮಯರಾಗಿ ಹಾಡುತ್ತಿದ್ದ ಭಾಗವತರ ಬಾಯನ್ನು ಮುಚ್ಚಿಸಿತು...ಚೆಂಡೆ ಮದ್ದಲೆಯ ಧ್ವನಿ ಅಡಗಿ ತಾಳ ಮದ್ದಲೆ ಮಂಗಲವಿಲ್ಲದೇ ನಿಂತುಬಿಟ್ಟಿತು. ಇದು ಯಾವ ಸಂಸ್ಕಾರ? ಇದರ ಗಂಭೀರತೆ ಯೋಚಿಸಬೇಡವೇ. ಹೋಗಲಿ ಕೊನೆಯಲ್ಲಿ ಪೋಲೀಸರು ಯಥೋಚಿತವಾಗಿ ಕ್ರಮ ಕೈಗೊಂಡು ರಾಜಿಯಲ್ಲಿ ಮುಗಿಸಿ ಬಿಟ್ಟು ಯಾವುದೇ ದೂರು ದಾಖಲಾಗದೇ ಘಟನೆಯ ಒಂದು ಭಾಗ ಮುಗಿಯಿತು. ಅ ಅಷ್ಟೆ ಸಾಕೆ?  ಸಾರಾಯಿ ಅಂಗಡಿಯ ಜಗಲಿಯಲ್ಲಿ ಸಂಜೆ ಮಾಡಿದ ಜಗಳ ಮರುದಿನ ಸೂರ್ಯೋದಯದಲ್ಲಿ ಯಾವ ಪ್ರಯತ್ನವೂ ಇಲ್ಲದೆ ಪರಿಹರಿಸಲ್ಪಟ್ಟು ಮತ್ತೆ ಪುನಃ ಮತ್ತೊಂದು ಸಾಯಂಕಾಲಕ್ಕೆ ಸಿದ್ಧವಾಗುತ್ತದೆ. ಇಲ್ಲೂ ಅದೇ ಆಯಿತು. ಆದರೆ ಪ್ರಜ್ಞಾವಂತನಿಗಾದ ಮಾನಸಿಕ ಕಿರುಕುಳಕ್ಕೆ ಯಾರು ಹೊಣೆ?

ಒಂದು ಯಕ್ಷಗಾನ ಕಾರ್ಯಕ್ರಮ ನಡೆಯುವುದಿದ್ದರೆ ಅದು ಒಂದು ಧಾರ್ಮಿಕ ಕಾರ್ಯಕ್ರಮದಂತೆ. ಅದರ ಹಿಂದೆ ಸಂಘಟಕರ, ಕಾರ್ಯಕರ್ತರ ಅಪಾರ ಶ್ರಧ್ದೆ ಪರಿಶ್ರಮವಿರುತ್ತದೆ. ಸುಮ್ಮನೇ ಒಂದು ಕಾರ್ಯಕ್ರಮ ಏರ್ಪಡುವುದಿಲ್ಲ. ಅವರ ಮನಸ್ಸಿಗಾದ ಆಘಾತಕ್ಕೆ ಕೇವಲ ಒಂದು ಕ್ಷಮೆ,  ರಾಜಿ ಸಂಧಾನ ಪರಿಹಾರವನ್ನು ಕಲ್ಪಿಸಬಹುದೇ? ಕಲಾವಿದರಿಗೆ ರಾಜಿ ಮಾಡಿ ಅನಾಹುತಗಳನ್ನು ತಪ್ಪಿಸಬಹುದು. ಹಾಗಿದ್ದರೆ ಈ ಅನಾಹುತ ಸೃಷ್ಟಿಸುವ ಕಲಾವಿದರನ್ನು ಏನು ಮಾಡಬೇಕು? ನ್ಯಾಯಾವಾಗಿ ಎಂದರೆ ಅವರನ್ನು ಈ ರಂಗದಿಂದ ದೂರವಿಡಬೇಕು. ವೈರಸ್ ಬಾಧೆಯಂತೆ. 

ಯಾವುದೇ ಯಕ್ಷಗಾನವೂ ಆರಂಭವಾಗುವುದು ಬೀಜ ಮಂತ್ರದಂತೆ , ’ಗಜ ಮುಖದವಗೆ’  ಎಂಬ ಪರಮಾತ್ಮನ ಸ್ತುತಿಯಿಂದ. ಅಂತಹ ಪವಿತ್ರ ಸ್ಥಳದಲ್ಲಾದ ಮಾಲಿನ್ಯ ಶುದ್ದವಾಗಬೇಕು.  ಚೆಂಡೆ ಮದ್ದಲೆಗಳ ಧ್ವನಿಯಡಗಿಸಿದ್ದಕ್ಕೆ ಪ್ರತಿವಿಧಿಯಾಗಬೇಕು. ಇಲ್ಲಿ ಕೇವಲ ಇಬ್ಬರ ಜಗಳ ಪರಿಹಾರವಾಗಬೇಕಾದ್ದಲ್ಲ. ಕಲಾವಿದರಿಗಾದ ಅವಮಾನಕ್ಕಿಂತಲೂ ಯಕ್ಷಗಾನಕ್ಕೆ ಆದ ಅವಮಾನ ಮುಖ್ಯವಾಗುತ್ತದೆ. ಹೋಗಲಿ ದೇವಿ ಮಹಾತ್ಮೆಯಂತಹ ಒಂದು ಮಾತೃ ಸ್ವರೂಪದ ಪ್ರಸಂಗದಲ್ಲಿ ಒಂದು ತಾಯಿಗೆ ಅವಮಾನವಾಗುವಂತಹ ಅಶ್ಲೀಲ ಬೈಗುಳ( ಅದನ್ನು ಉಲ್ಲೆಖಿಸುವುದು ಸಭ್ಯತೆಯಲ್ಲ) ಬರುತ್ತದೆ ಎಂದರೆ, ಆ ಹೆಣ್ಣಿಗೆ ಆ ದೇವಿಗೆ ಮಾಡಿದ ಅವಮಾನವಲ್ಲವೇ? ಇದಕ್ಕೆ ಯಾವ ಪ್ರತಿವಿಧಿ ಇದೆ? ನನಗೆ ನಿಜವಾಗಿಯೂ ಕಲಾವಿದರು ಯಾರೋ ಗೊತ್ತಿಲ್ಲ. ಕೇವಲ ಮಾಧ್ಯಮದ ಉಲ್ಲೇಖದ ಜತೆಯಲ್ಲೇ  ಪ್ರತಿಕ್ರಿಯೆ ನೀಡುತ್ತಿದ್ದೇನೆ. ಇಷ್ಟಾದರೂ ನೀಡದಿದ್ದರೆ ನಾನು ಅನುಭವಿಸಿದ ಯಕ್ಷಗಾನಕ್ಕೆ ನಾನು ಉಗುಳಿದಂತೆ ಎಂದು ತಿಳಿದು ಈ ಪ್ರತಿಕ್ರಿಯೆ ತಡವಾಗಿಯಾದರೂ ನೀಡುತ್ತಿದ್ದೇನೆ.