"ಇದು ವಿಮರ್ಶೆಯಲ್ಲದ ಚಿಂತನ"

Sunday, October 27, 2013

ಪಾತ್ರಾವಲೋಕನ

(ಚಿತ್ರ: ಮಿಥುನ್ ಸುಣ್ಣಂಗುಳಿ)
“ಕೇಳು ಜನಮೇಜಯನೆ ಕುರುಕುಲ ಮಾನಧನನಿಗೆ ಗೈದ ದ್ರೋಹವ……” ಕುರುಕ್ಷೇತ್ರದ ಯುದ್ದದ ಕೊನೆಯಲ್ಲಿ ಭೀಮನಿಂದ ಕೌರವ ಹತನಾದಾಗ ದ್ರೋಣ ಪುತ್ರ ಅಶ್ವತ್ಥಾಮ ಕ್ರೋಧಗೊಂಡು ಸಿಡಿಲಿನಂತೆ ಪ್ರವೇಶಿಸುವ ಸನ್ನಿವೇಶದ ಪದವಿದು. ಆರಂಭದಿಂದಲೇ ಪ್ರಸಂಗಕ್ಕೆ ಕಿಚ್ಚು ಹಚ್ಚಿದಂತಾಗಿ ಪ್ರಸಂಗ ನಡೆ ತೀವ್ರವಾಗಿರುತ್ತದೆ.  ರೋಮಾಂಚಿತನಾಗುವ ಪ್ರೇಕ್ಷಕ ವೃಂದ ಪ್ರಸಂಗದ ಮುಂದಿನ ನಡೆಗೆ ಕಾತುರವಾಗುತ್ತ ಬಂದ ಅಶ್ವತ್ಥಾಮನ ದಿಗಿಣವನ್ನು ನೋಡುತ್ತದೆ. ಈ ದಿಗಿಣದಿಂದಲೇ ಕಥೆಯ ಮುಂದಿನ ಹಂದರವನ್ನು ಮರೆಯಬಾರದಲ್ಲ?  ಕುರುಕ್ಷೇತ್ರದ ಯುದ್ದ ಮುಗಿದ ನಂತರ ಕೊನೆಯದಿನ ರಾತ್ರಿ ಅಶ್ವತ್ಥಾಮನ ರಾತ್ರಿಯಾಗಿಬಿಡುತ್ತದೆ. ತಾನು ಬ್ರಾಹ್ಮಣನೆಂಬುದನ್ನು ಮರೆತು ಪೈಶಾಚಿಕ ಕೃತ್ಯವನ್ನೇ ಎಸಗಿಬಿಡುತ್ತಾನೆ. ಘೋರ ರಾತ್ರಿಯ ಭೀಭತ್ಸ ಸನ್ನಿವೇಶದ ಚಿತ್ರಣವೇ ರಕ್ತ ರಾತ್ರಿ ಪ್ರಸಂಗ. ರನ್ನನ ಗಧಾಯುದ್ದದ ಹಲವಾರು ಪದಗಳನ್ನು ಹೊಸೆದು ಸೃಷ್ಟಿಸಿದ ಜನಪ್ರಿಯ  ಪ್ರಸಂಗವಿದು.

          ತನ್ನೊಡೆಯ ಸುಯೋಧನನ್ನು ಅರಸುತ್ತಾ ಕತ್ತಲೆಯಲ್ಲಿ ರಣಭೂಮಿಗೆ ಕಾಲಿಡುವ ಅಶ್ವತ್ಥಾಮ, ಅದೃಷ್ಟ ಲಕ್ಷ್ಮೀ ಮೊದಲಾದ ಲಕ್ಷ್ಮೀ ತ್ರಯರು ಕೌರವನಿಂದ ದೂರಾಗಿ ಪಾಂಡವರ ಬಿಡದಿಯತ್ತ ಸಂಚರಿಸುವುದನ್ನು ನೋಡಿ ತಡೆದು ನಿಲ್ಲಿಸುತ್ತಾನೆ. ಕೌರವನ ಸುದಿನಗಳು ಮುಗಿದುದರ ಸಂಕೇತವಾಗಿ ಅವರ ನಿರ್ಗಮನವನ್ನು ಅರ್ಥವಿಸಿಕೊಳ್ಳುತ್ತಾನೆ. ಕಟು ಸತ್ಯವನ್ನು ನಂಬಲಾಗದೇ  ಕೌರವನ ಮೇಲಿನ ಅಂಧಾಭಿಮಾನ ಅವನನ್ನು ಭ್ರಾಂತನನ್ನಾಗಿಸುತ್ತದೆ. ಆ ಆವೇಶದಿಂದ ಲಕ್ಷ್ಮೀತ್ರಯರನ್ನು ಬಲವಂತವಾಗಿ ಎಳೆದೊಯ್ದು ಕೌರವನ ಜಂಘೆಗೆ ಎಸೆಯುತ್ತಾನೆ. ತನ್ನಿಂದೇನಾಗಬೇಕು?  ಇನ್ನಾದರೂ ಸೇನಾ ಪತಿತ್ವವನ್ನು ಕೊಡುವಂತೆ ಅವೇಶದಿಂದ ಕೇಳುತ್ತಾನೆ. ಅದಾಗಲೇ ಸೇನೆಯೆಲ್ಲ ಬರಿದಾಗಿದ್ದರೂ ಅದರ ಅಧಿಪತಿತ್ವವನ್ನು ಕೇಳುವುದು ಒಂದು ವಿಪರ್ಯಾಸದಂತೆ ಭಾಸವಾದರೂ ಕೊನೇಯ ಉಸಿರಿನವರೆಗೂ ಪಾಂಡವ ದ್ವೇಷವನ್ನು ಗೆಲ್ಲಲಾಗದ ಸೂಯೋಧನ ಕಟ್ಟ ಕಡೆಯದಾಗಿ ’ನಿಷ್ಪಾಂಡವ ಪೃಥ್ವಿ ’ ಎಂಬ ವಿಚಿತ್ರ ಬೇಡಿಕೆಯನ್ನು ಮುಂದಿಡುತ್ತಾನೆ. ಕೇವಲ ಐದು ತಲೆಗಳ ಸನ್ನೆಯನ್ನಷ್ಟೇ ತೋರಿದರೂ ಅಶ್ವಾತ್ಠಾಮ ಕೌರವನ ಇಂಗಿತವನ್ನು ಅರಿತು ಅಲ್ಲಿಂದ ಪಾಂಡವರ ಬಿಡದಿಯತ್ತ ಆ ನಡುವಿರುಳೇ ತೆರಳುತ್ತಾನೆ. ಮುಂದೆ ನಡೆಯುವುದೇ ಮಹಾಭಾರತ ಯುದ್ದದ ಕೊನೆಯ ಅತ್ಯಂತ ಭೀಭತ್ಸ ಮಯ ರಾತ್ರಿಯಾಗುತ್ತದೆ. ಮತಿ ಭ್ರಾಂತನಂತೆ ಪ್ರವರ್ತಿಸುವ ಅಶ್ವತ್ಥಾಮ ಅ ಒಂದು ರಾತ್ರಿಯನ್ನು ರಕ್ತರಾತ್ರಿಯನ್ನಾಗಿ ಮಾಡಿಬಿಡುತ್ತಾನೆ. ಪಾಂಡವರೆಂದು ತಿಳಿದು ದ್ರೌಪದೀ ಪುತ್ರರ ತಲೆಯನ್ನು ಮಲಗಿದಲ್ಲೇ ಕಡಿಯುತ್ತಾನೆ. ಯಾವುದನ್ನೂ ಸಾಧಿಸಲಾಗದೇ  ಹುಚ್ಹನಾಗಿಬಿಡುತ್ತಾನೆ.

          ಈ ಪ್ರಸಂಗದ ಕಥೆ ಬಹಳ ಸರಳವಾಗಿದೆ. ಆದರೆ ಇದು ಪ್ರೇಕ್ಷಕನ ಮನಸ್ಸಿನಲ್ಲಿ ಎಷ್ಟು ಅಚ್ಚೋತ್ತಿರುತ್ತದೆ ಎಂಬುದು ವಿವೇಚನೆಗೆ ಬಿಟ್ಟ ವಿಚಾರ. ಯಾಕೆಂದರೆ ಒಂದೋಂದು ಪದಕ್ಕೂ ಅಭಿನಯ ಮತ್ತು ಮಾತಿಗಿಂತಲೂ ಅಧಿಕ ಕುಣಿತಕ್ಕೆ ಮೀಸಲಾಗಿರಿಸಿದರೆ ಕಥಾಭಾಗ ಅಚ್ಚೊತ್ತುವುದಾದರೂ ಹೇಗೆ? ರಾಮಾಯಣ ಕೇಳಿ ರಾಮನೀಗೆ ಸೀತೆ…. ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಕಲಾವಿದರ ಜವಾಬ್ದಾರಿ ಇರುವುದು ಇಲ್ಲೇ ಆದರೂ ಪ್ರೇಕ್ಷಕ ಗಮನಿಸಿಕೊಳ್ಳಬೇಕಾದ ಹಲವು ಅಂಶಗಳು ಇನ್ನೂ ಇರುತ್ತವೆ. ಹಲವು ಸಲ ಅನ್ನಿಸುವುದಿದೆ ಕಲಾವಿದ ತನ್ನ ಕಲೆಯಲ್ಲಿ ಹೇಗೆ ಪಳಗಬೇಕೋ ಪ್ರೇಕ್ಷಕ ಅದನ್ನು ಅಸ್ವಾದಿಸುವುದರಲ್ಲೂ ಪಳಗಬೇಕು. ಯಕ್ಷಗಾನದಂತಹ ಕಲೆಯನ್ನು ಅಸ್ವಾದಿಸುವುದನ್ನೂ ಕಲಿತುಕೊಳ್ಳದಿದ್ದರೆ ಕಲೆ ಕೊಳದ ನೀರಾಗುತ್ತದೇ ಹೊರತು ತೊರೆಯ ನೀರಾಗುವುದಿಲ್ಲ. ಯಾವುದೇ ಕಲೆಯ ಬೆಳವಣಿಗೆ ಇರುವುದು  ಅದನ್ನು ಪೂರ್ಣವಾಗಿ ಅನುಭವಿಸುವ ಪ್ರೇಕ್ಷಕನಿದ್ದಲ್ಲಿ. ಇಲ್ಲವಾದರೆ ಹಸಿವಿಲ್ಲದವನಿಗೆ, ರೋಗಗ್ರಸ್ಥನಿಗೆ ಮೃಷ್ಠಾನದ ಭೋಜನ ಎದುರು ಇರಿಸಿದಂತೆ.

          ರಕ್ತ ರಾತ್ರಿ ಪ್ರಸಂಗದಲ್ಲಿ ವೀರಾವೇಶದಿಂದ ಪ್ರವೇಶವಾಗುವ ಅಶ್ವತ್ಥಾಮನ ಪಾತ್ರ ಕ್ರೋಧಾವಿಷ್ಟನಾಗಿಯೇ ಇರುವುದು ಮಾತ್ರವಲ್ಲ ಅತ್ಯಂತ ವಿಲಕ್ಷಣ ವ್ಯಕ್ತಿತ್ವವನ್ನೂ ತೋರುವುದು ಪಾತ್ರದ ಔಚಿತ್ಯ. ಆದರೆ ವಿಪರ್ಯಾಸವೆಂದರೆ ಇಂದು ಬರೀ ಕುಣಿತ ಮತ್ತು ದೃಶ್ಯವೈಭವಕ್ಕಷ್ಟೇ ಸೀಮಿತವಾಗಿ ವೇಗದ ನಡೆಯನ್ನಷ್ಟೇ ಪ್ರಸಂಗದಲ್ಲಿ ಕಾಣಬಹುದು.  ಕಲಾವಿದರಲ್ಲಿ ಕೆಲವರು ಅಶ್ವತ್ಥಾಮನ ವ್ಯಕ್ತಿತ್ವವನ್ನು ಅರ್ಥವಿಸಿಕೊಂಡು ಸನ್ನಿವೇಶಕ್ಕೆ ತಕ್ಕ ಅಭಿನಯಿಸಿದರೂ ಸಹ ಪ್ರೇಕ್ಷಕರು ಅಶ್ವತ್ಥಾಮನ ವ್ಯಕ್ತಿತ್ವದ ಅಭಿವ್ಯಕ್ತಿಯತ್ತ ಗಮನ ಹರಿಸುವುದೇ ಇಲ್ಲ. ಬದಲಾಗಿ ದಿಗಿಣದ ಲೆಕ್ಕಾಚಾರ ಮತ್ತು ಕುಣಿತದಲ್ಲೇ ಮೈಮರೆತು ಏನು ನೋಡಬೇಕೋ ಅದನ್ನು ಸವಿಯದೇ ವಂಚಿತರಾಗುತ್ತಾರೆ. ವಂಚಿತರಾಗುವುದು ಮಾತ್ರವಲ್ಲ ನಿಜ ಅಸ್ವಾದನೆಯನ್ನೇ ಮರೆತು ಬಿಡುತ್ತಾರೆ.

          ಪ್ರತಿಯೋಂದು ಪ್ರಸಂಗದ ಪ್ರತೀ ಪಾತ್ರವೂ ಒಂದು ದೃಷ್ಟಿಕೋನದಿಂದ ಚಿತ್ರಿಸಲ್ಪಡಬೇಕು ಆ ದೃಷ್ಟಿಕೋನ,  ಪಾತ್ರದ ವ್ಯಕ್ತಿತ್ವದ  ಔಚಿತ್ಯವನ್ನು ಹೊಂದಿರಬೇಕು. ಪ್ರೇಕ್ಷಕನೂ ಆ ನಿಟ್ಟಿನಲ್ಲೇ ವೀಕ್ಷಿಸಿದರೆ ಯಕ್ಷಗಾನದ ರಸಾಸ್ವಾದನೆಯನ್ನು ಸರಿಯಾಗಿ ಮಾಡಲು ಸಾಧ್ಯವಾಗುತ್ತದೆ.  ಆದರೆ ಇಂದು ಪಾತ್ರವನ್ನು ಯೋಜನಾ ಬದ್ಧವಾಗಿ ಕಟ್ಟುವ  ಕಲಾವಿದರ ಸಂಖ್ಯೆ ಕ್ಷೀಣಿಸುವುದು ಮಾತ್ರವಲ್ಲ ಯಾವುದನ್ನು ಹೇಗೆ ಆಸ್ವಾದಿಸಬೇಕೋ ಹಾಗೇ ಅಸ್ವಾದಿಸುವ ಪ್ರೇಕ್ಷಕನ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗುತ್ತಿದೆ. ಪಾತ್ರಧಾರಿ ಒಂದಷ್ಟು ಹೊತ್ತು ವಿಚಿತ್ರವಾಗಿ ಕುಣಿದಾಗ ಅದೇ ಅಭಿನಯವೆಂದು ಭಾವಿಸಲ್ಪಡುತ್ತದೆ. ಕುಣಿದ ಮೇಲೇ ಪಾತ್ರಕ್ಕೆ ಔಚಿತ್ಯವಾಗಿ ಅರ್ಥಗಾರಿಕೆಯೂ ಒಂದು ಅಭಿವ್ಯಕ್ತಿ ಮಾರ್ಗವೆಂದು ಮರೆತು ಬಿಡುವ ಪ್ರಮೇಯವೇ ಹೆಚ್ಚು. ಪ್ರೇಕ್ಷಕನೂ ಅದರತ್ತ ಗಮನ ಹರಿಸದೇ ಏಕತಾನತೆಯ ಕುಣಿತಕ್ಕೆ ಚಪ್ಪಾಳೆ ಹೊಡೆಯುತ್ತಾನೆ. ಪರಿಣಾಮ ಕಲೆಯ ಸತ್ವ ದರ್ಶನವಾಗದೇ ಕಲೆ ಅನಾಥವಾಗುತ್ತದೆ.

          ಲಕ್ಷೀತ್ರಯರ ಸೆಳೆದು ಕೊಂಡುಯ್ಯುವಾಗ ಕೇವಲ ಮಂದಲೆಗೆ ಕೈ ಯಿಕ್ಕಿ ಎಳೆದೊಯ್ಯುವುದರ ಬದಲು ಸಾಮಾನ್ಯ ನಾಟಕದಂತೆ ಅವರನ್ನು ಬಲಾತ್ಕರಿಸಲು ಬೆಂಬತ್ತಿದಂತೆ ಅಭಿನಯಿಸುವುದು ಪಾತ್ರಕ್ಕೂ ಔಚಿತ್ಯವೆನಿಸುವುದಿಲ್ಲ. ಪ್ರಸಂಗಕ್ಕೂ ಔಚಿತ್ಯವೆನಿಸುವುದಿಲ್ಲ. ಹಾಗಾಗಿ ಪಾತ್ರದ ನಿಜವಾದ ವ್ಯಕ್ತಿತ್ವ ಮತ್ತು ಸನ್ನಿವೇಶ ಏನೆಂದು ಗಮನ ಹರಿಸಬೇಕಾಗುತ್ತದೆ. ಪ್ರೇಕ್ಷಕನೂ ಅಷ್ಟೇ ಇಂದು ಕಥಾ ಸಾರಾಂಶವಾಗಲೀ ಸನ್ನಿವೇಶವನ್ನಾಗಲೀ ಅರಿಯದೇ ಇರುವವರು ಬಹಳ ಕಡಿಮೆ. ಹಾಗಾಗಿ ಪ್ರೇಕ್ಶಕರೂ ಸಹ ಇಂತಹ ಸೂಕ್ಷ್ಮ ವಿಚಾರವನ್ನು ಗಮನಿಸದೇ ಯಕ್ಷಗಾನವನ್ನು ವೀಕ್ಷಿಸಿದರೇ ಆ ಕಲೆಯ ನಿಜವಾದ ಅಸ್ವಾದನೆ ಸಾಧ್ಯವಾಗುವುದಿಲ್ಲ. ಪ್ರತೀ ಪಾತ್ರಕ್ಕೂ ಒಂದು ವ್ಯಕ್ತಿತ್ವ ಎಂಬುದು ಇರುತ್ತದೆ. ಅದು ಅಭಿವ್ಯಕ್ತವಾಗದೇ ಇದ್ದರೆ ಕಲೆ ಸೋತಂತೆ ಅಲ್ಲವೇ? ಅಶ್ವತ್ಥಾಮ ಕಾಮಾಂಧನಂತೆಯೋ ರಾಕ್ಷಸನಂತೆಯೋ ಚಿತ್ರಿಸಲ್ಪಟ್ಟರೆ ಅದೆಷ್ಟು ಅಭಾಸವನ್ನುಂಟು ಮಾಡುತ್ತದೆ? ಆದರೆ ಆಟ ಒಟ್ಟು ರೈಸಿದರೆ ಸಾಕು ಎಂಬ ಭಾವದಲ್ಲಿ ಯಾವುದೂ ಇಲ್ಲಿ ಸಲ್ಲುವಂತಾಗುತ್ತದೆ.  
          ಚಕ್ರವ್ಯೂಹ ಪ್ರಸಂಗದ ಸನ್ನಿವೇಶ,
 “ಕಾಮ ಪಿತನಿದ ಬಲ್ಲನಾ,, ಬಲರಾಮ ನರಿವನು ಪಾರ್ಥ ತಿಳಿವನು | ಭೂಮಿಯಲಿ ಸುರಪತಿಯ ಮೊಮ್ಮನು ಬಲ್ಲ ಹೋಗಲಿಕೆ | ಕ್ಷೇಮದಲಿ ಬರಲರಿಯ ಅವನೀ ಸೀಮೆಯಲಿ ಮಿಕ್ಕವರ ಕಾಣೆನು| ಹಾ ಮಹಾ ದೇವನುತ  ಚಿಂತಿಸುತನೀರ್ದನು ಅವನೀಶ || 
ಧರ್ಮರಾಯ ಚಕ್ರವ್ಯೂಹವನ್ನು ಭೇದಿಸಬಲ್ಲವರು ಯಾರು ಎಂದು ಚಿಂತಿಸುತ್ತಾನೆ. ಯಾರೂ ಇಲ್ಲ ಎಂದು ಕಣ್ಣೀರಿಡುವಾಗ ವೀರಾವೇಶದಿಂದ ಅಭಿಮನ್ಯುವಿನ ಪ್ರವೇಶವಾಗುತ್ತದೆ. ಅಭಿಮನ್ಯುವಿನ ರಭಸದ ಪ್ರವೇಶವೇ ಪ್ರಸಂಗದ ದಿಕ್ಷೂಚಿ. ಮಂದ್ರವಾಗಿದ್ದ ಸನ್ನಿವೇಶಕ್ಕೆ ಏಕಾ ಏಕಿ ಕಿಚ್ಚು ಹತ್ತಿಸುತ್ತಾನೆ ಅಭಿಮನ್ಯು. ಆ ಪ್ರವೇಶ ಮಿಂಚಿನಂತೆ ಪ್ರೇಕ್ಷಕನನ್ನು ಬಡಿದೆಬ್ಬಿಸಿದಲ್ಲಿ ಕಲಾವಿದನ ಅರ್ಥ ಕೆಲಸ ಮುಗಿದಂತೆ. ಇಂದು ಇದರಲ್ಲೂ ಏಕತಾನತೆ ಬಂದಿದೆ. ಹಾಗಾಗಿ ಬಲಿಪ್ಪರು ಇಂದಿಗೂ ಕೋಳ್ಯೂರು ರಾಮ ಚಂದ್ರರಾಯರ ಅಭಿಮನ್ಯುವನ್ನು ನೆನಪಿಸಿಕೊಳ್ಳುತ್ತಾರೆ. ಅದೆಂತಹ ಪ್ರವೇಶ..?  ಯಾವುದೇ ಪಾತ್ರವಾದರೂ ಅದರಲ್ಲಿ  ಪರಕಾಯ ಪ್ರವೇಶ ಮಾಡಿ ಪಾತ್ರವೇ ತಾವಾಗಿ ಆವೇಶದಿಂದ ಲೀನವಾಗುವುದು ರಾಯರ ವೈಶಿಷ್ಟ್ಯ.  ಮತ್ತೆ ಕೇಳಬೇಕೆ. ಚೆಂಡೆಯ ಬಡಿತಕ್ಕೆ ಕುರುಕ್ಷೇತ್ರ ಮನೆಯಂಗಳದಲ್ಲೇ ಇದೆ ಎಂದು ಪ್ರವೇಶಿಸುವ ಆ ವೇಗದ ತುಡಿತ ಕೇವಲ ಅಭಿಮನ್ಯುವಿನ ಪಾತ್ರವನ್ನಷ್ಟೇ ಅಲ್ಲ ಸಹಪಾತ್ರವನ್ನೂ ಆವೇಶ ಬರುವಂತೆ ಮಾಡುತ್ತದೆ. ಇದೇ ವೇಗ ಪ್ರಸಂಗದಲ್ಲಿ ನಿರಂತರ ಕಾಯ್ದು ಕೊಂಡು ಬರಬೇಕಾಗುತ್ತದೆ. ಅದು ತಾಯಿ ಸುಭದ್ರೆ ಮತ್ತು ಅಭಿಮನ್ಯುವಿನ ಭಾವನಾತ್ಮಕ ಸನ್ನಿವೇಶದಲ್ಲೂ ಆ ತುಡಿತ ಪ್ರೇಕ್ಷಕನಿಗೆ ಮನದಟ್ಟು ಮಾಡಬೇಕಾಗುತ್ತದೆ. ಚಿತ್ರ ವಿಚಿತ್ರವಾಗಿ ಒಂದು ಪದ ಅರ್ಧ ತಾಸಿಗೂ ಮಿಕ್ಕಿ ಎಳೆದರೆ ಒಟ್ಟು ಪ್ರಸಂಗದ ಭಾವಕ್ಕೇ ಕೊಡಲಿ ಏಟು ಕೊಟ್ಟಂತಾಗುತ್ತದೆ. ಕುಣಿತದಲ್ಲೂ ಪಾತ್ರದ ವ್ಯಕ್ತಿತ್ವ ಗೋಚರವಾಗಬೇಕು. ಸನ್ನಿವೇಶದ ಧಾವಂತ ವ್ಯಕ್ತವಾಗುವಂತಿರಬೇಕು. ಆದರೆ ಇದೆಲ್ಲ ಈಗಿನ ನವೀಕರಣದಲ್ಲಿ ಗಮನಾರ್ಹ ಎನಿಸದೇ ಇರುವುದು ವಿಪರ್ಯಾಸ. ಪಾಂಡವ ಪಾಳಯಕ್ಕೇ ಅಂಧಕಾರದ ಚಕ್ರವ್ಯೂಹ ಸುತ್ತಿರುವಾಗ ಇಲ್ಲಿ ಅಭಿಮನ್ಯು ಚಿತ್ರ ವಿಚಿತ್ರ ಕುಣಿತದ ಸರ್ಕಸ್ ಮಾಡುತ್ತಿದ್ದರೆ ಸನ್ನಿವೇಶದ ಗಾಂಭೀರ್ಯವೇ ಹೊರಟು ಹೋಗುತ್ತದೆ.

          ಮೊದಲ ದೃಶ್ಯದಿಂದಲೇ ಪಾತ್ರವನ್ನು ಕೊಂಡೊಯ್ಯುವ ದೃಷ್ಟಿಕೋನವನ್ನು ಹೊಂದಿರಬೇಕು. ಅದಕ್ಕೆ ಪಾತ್ರದ ವ್ಯಕ್ತಿತ್ವ ಅರಿತಿರುವುದು ಬಹಳ ಮುಖ್ಯವೆನಿಸುತ್ತದೆ. ರಾವಣನಾದವ ಕುಂಭಕರ್ಣನ ನಡೆಯನ್ನು ಅನುಸರಿಸಿದರೆ ಸಹ್ಯವಾಗುತ್ತದೆಯೇ? ಪಾತ್ರ ಎಷ್ಟೇ ಚಿಕ್ಕದಾದರೂ ಸರಿ ಅದರ ವ್ಯಕ್ತಿತ್ವದ ಛಾಪು ಮೂಡದಿದ್ದರೆ ಪಾತ್ರಧಾರಿಯೊಂದಿಗೆ ಪಾತ್ರವೂ ಸೋಲುತ್ತದೆ, ಪ್ರಸಂಗವೂ ಸೋಲುತ್ತದೆ,  ಪರ್ಯಾಯವಾಗಿ ಕಲೆಯೂ ಕಮರಿಹೋಗುತ್ತದೆ.

ಬಹಳ ಹಿಂದೆ ದಮಯಂತಿ ಸ್ವಯಂವರ ಎಂಬ ಪ್ರಸಂಗ ನೋಡಿದ್ದೆ. ಪ್ರಸಂಗ ತಿಳಿದವರಿಗೆ ಗೊತ್ತಿರುತ್ತದೆ ಅದರಲ್ಲಿ ಬರುವ ಪುಷ್ಕರನ ಪಾತ್ರದ ಸಮಯ ಎಷ್ಟು ಚಿಕ್ಕದು ಎಂದು. ಆದರೆ ಪಳಗಿದ ಕಲಾವಿದ ಪಾತ್ರದ ಕಾಯವನ್ನು ಪ್ರವೇಶ ಮಾಡಿದರೆ...?? ಆದಿನ ಮಲ್ಪೇ ವಾಸುದೇವಸಾಮಗರು ಆ ಪಾತ್ರವನ್ನು ಮಾಡಿದ್ದರು. ಪಾತ್ರದ ಪ್ರವೇಶದಿಂದಲೂ ಈ ಪಾತ್ರವನ್ನು ಹೀಗೆ ಎಂದು ಯೋಜನಾಬದ್ದವಾಗಿ ರಂಗದಲ್ಲಿ ತಂದರು. ಅಭಿನಯದಿಂದ, ಅರ್ಥಗಾರಿಕೆಯಿಂದ ಕುಣಿತದಿಂದ ’ಪುಷ್ಕರ ’ ಕೇವಲ ಪಾತ್ರವಾಗಿ ಉಳಿಯಲಿಲ್ಲ. ಇಡೀ ಪ್ರಸಂಗದ ವೈಶಿಷ್ಟ್ಯದಲ್ಲಿ ಅದು ಒಂದಾದ ಪರಿ ಈಗಲೂ ನೆನಪಲ್ಲಿ ಉಳಿದು ಬಿಟ್ಟಿದೆ.  ಇಂತಹ ಉದಾಹರಣೆಗಳು ಬೇಕಾದಷ್ಟು ಸಿಗುತ್ತವೆ. ಆದರೆ ಗಮನಿಸುವ ದೃಷ್ಟಿಯಿರಬೇಕು.  ಹಿರಿಯ ಕಲಾವಿದರು ಪ್ರಸಂಗದಲ್ಲಿ ಹಾಗೆ ಬಂದು ಹೀಗೆ ಹೋಗುವ ಪಾತ್ರ ಮಾಡುವಾಗ ವಿಚಿತ್ರವೆನಿಸುತ್ತದೆ. ಆದರೆ ಅದರಲ್ಲೂ ಅವರು ಮೂಡಿಸುವ ಛಾಪು ಮುಖ್ಯವೆನಿಸಲ್ಪಡುತ್ತದೆ. ಇಲ್ಲಿ ಕಲಾವಿದನ ನೈಪುಣ್ಯ ಯಾವ ಬಗೆಯಲ್ಲಿರುತ್ತದೆಯೋ ಅದೇ ಬಗೆಯಲ್ಲಿ ಗಮನಿಸುವ ಪ್ರೇಕ್ಷಕನೂ ಇರಬೇಕಾಗುತ್ತದೆ. ಇಲ್ಲವಾದಲ್ಲಿ ರಾಗಜ್ಞಾನ ಇಲ್ಲದವನಲ್ಲಿ ಇಂಪಾದ ಸಂಗೀತ ಹಾಡಿದರೆ ಬರೀ ಇಂಪು ಮಾತ್ರವೇ ಉಳಿದು ರಾಗದ ಪ್ರಭಾವವೇ ಉಳಿಯುವುದಿಲ್ಲ. ಸಂಗೀತದ ಸಂಪೂರ್ಣ ಸಂವೇದನೆ ಸೃಷ್ಟಿಯಾಗುವುದಿಲ್ಲ. ಕಲಾವಿದನ ಶ್ರಮವೂ ನಿರರ್ಥಕವೆನಿಸಿಬಿಡುತ್ತದೆ.

ಸಮಗ್ರವಾಲಿ ಪ್ರಸಂಗದ ವಾಲಿಯ ಪಾತ್ರವನ್ನು ಒಂದೇ ಪ್ರಸಂಗದಲ್ಲಿ ಹಲವರು ಮಾಡುವಾಗ ಪಾತ್ರ ಮನೋಭಾವದ ವೈವಿಧ್ಯತೆಯ ನಡುವೆಯೂ ಒಂದು ತಂತು ಬೆಸೆಯಲ್ಪಡಬೇಕು. ವಾಲಿಯ ವ್ಯಕ್ತಿತ್ವ ಹಂತ ಹಂತವಾಗಿ ಬದಲಾಗಿ ಹೋಗುತ್ತ ಕೊನೆಯಲ್ಲಿ ಮೂಲ ವ್ಯಕ್ತಿತ್ವದಿಂದ ಭಿನ್ನವಾಗಿ ವಾಲಿ ಬದಲಾಗುವುದುಂಟು. ಈ ನೆಲೆಯಲ್ಲಿ ಕಲಾವಿದನೂ  ಆ ಮನೋಭಾವಕ್ಕೆ ಅನುಸರಿಸಿ ಬದಲಾವಣೆಯನ್ನು ತರುತ್ತಾನೆ. ಅದೇ ರಾಮನ ಪಾತ್ರದಲ್ಲಿ ಆರಂಭದಿಂದ ಅಂತ್ಯದವರೆಗೂ ಪಾತ್ರದ ಸ್ವಭಾವ ಬದಲಾಗುವುದಿಲ್ಲ. ಯಾವುದೇ ಪ್ರಸಂಗದಲ್ಲೂ ರಾಮನ ಪಾತ್ರ ಸ್ವಭಾವ ಒಂದೇ ಆಗಿರುತ್ತದೆ. ಇದು ಬಹಳ ವೈಶಿಷ್ಟ್ಯ ಮಾತುಗಾರಿಕೆಯಲ್ಲಿ ಗಾಂಭೀರ್ಯ ತುಂಬಿದ್ದರೆ ಕುಣಿತದಲ್ಲೂ ಅಷ್ಟೆ,  ರಾಮನ ಪಾತ್ರದ ಕುಣಿತದಲ್ಲಿ ಅತ್ಯಂತ ವೈಶಿಷ್ಟ್ಯತೆ ಇರುತ್ತದೆ.  ರಾಮನ ವೇಷ ದಿಗಿಣವನ್ನು ಕುತ್ತು ಹಾರಿ ಹಾಕಬಾರದೇದೆಂದಿದೆ. ಇದು ಪುರಾಣದಲ್ಲಿ ಬರುವ ಅತ್ಯಂತ ಆದರ್ಶಮಯ ಪಾತ್ರ.

ಹಿಂದಿನ ಹಲವು ಹಿರಿಯ ಕಲಾವಿದರು ಒಂದೇ ಪ್ರಸಂಗದಲ್ಲಿ ವೈವಿಧ್ಯಮಯ ಪಾತ್ರವನ್ನು ಮಾಡುವಾಗ ಅವರಿಗಿರುವ ಧನಾತ್ಮಕ ಗುಣಗಳಿಂದ ತಮ್ಮ ಋಣಾತ್ಮಕ ಗುಣಗಳನ್ನು ಮರೆಸಿಬಿಡುತ್ತಿದ್ದರು. ಕುಣಿತ ಇಲ್ಲದಿದ್ದರೇನಂತೆ, ಮಾತುಗಾರಿಕೆ ಇಲ್ಲದಿದ್ದರೇನು? ಸಮಯ ಪ್ರಜ್ಞೆಯ ಅಭಿನಯ ರಂಗವನ್ನು ಉಪಯೋಗಿಸಿಕೊಳ್ಳುವ ರೀತಿ,  ಒಂದು ಪಾತ್ರ ರಂಗದ ಮೇಲೆ ಕೇವಲ ಪಾತ್ರವಾಗಿ ಇರುತ್ತಿರಲಿಲ್ಲ. ಅದಕ್ಕಿರುವ ವ್ಯಕ್ತಿತ್ವವನ್ನು ತೋರಿಸಿಕೊಡುತ್ತಿದ್ದರು. ಪುತ್ತೂರು ನಾರಾಯಣ ಹೆಗಡೆ ದಣಿವರಿಯದೆ ಕುಣಿದದ್ದನ್ನು ನಾನು ಕಂಡಿಲ್ಲ. ಆದರೆ ರಂಗದಲ್ಲಿ ಕುಣಿತದ ಗಾಂಭೀರ್ಯಕ್ಕೆ ಎಂದೂ ಊನ ಬರುತ್ತಿರಲಿಲ್ಲ.  ಅವರ ನಿರರ್ಗಳ ಮಾತುಗಾರಿಕೆ ಕೇಳಿದ್ದಿಲ್ಲ,  ಆದರೆ ಅವರು ಆಡಿದ ಮಾತು ಆ ಧ್ವನಿಯ ಏರಿಳಿತ ಅದಕ್ಕೆ ಹೊಂದಿಕೆಯಾದಂತೆ ಶಾರೀರಿಕ ಅಂಗವಿನ್ಯಾಸದ ಭಾಷೆ ಅದು ಎಂತಹ ಪಾತ್ರವನ್ನಾದರೂ ರಂಗದಲ್ಲಿ ಜೀವಂತವಾಗಿರಿಸುತ್ತಿತ್ತು. ಆರಂಭದ ಪ್ರವೇಶದಿಂದಲೇ ತೊಡಗಿ ಪಾತ್ರ ರಂಗದಲ್ಲಿ ಭಿಚ್ಚಿಕೊಳ್ಳುವಾಗ ಇದು ವ್ಯಕ್ತಿಯಲ್ಲ , ಪಾತ್ರವೆಂಬ ಭ್ರಮೆಯಲ್ಲ ಎಂದನಿಸುತ್ತಿತ್ತು.

ಬಿಡಿಸಿದಂತೆ ಇಂತಹ ಹಲವು ನೆನಪಿನ ಅನುಭವಗಳು ಎಸಳು ಬಿರಿದು ನಳನಳಿಸುತ್ತವೆ. ಈಗೀಗ ಕೆಲವು ಕಲಾವಿದರು ಮಾತ್ರವೇ ಪಾತ್ರದ ವ್ಯಕ್ತಿಯಾಗಿ ಶ್ರಮವಹಿಸುತ್ತಾರೆ. ಪಾತ್ರದ ಮಾನಸಿಕ ರೂಪವೇನು. ಆ ಪಾತ್ರದ ಅಸ್ತಿತ್ವ ಏನು ಅದನ್ನರಿತು ವೈವಿಧ್ಯಮಯವಾಗಿ ರಂಗದಲ್ಲಿ ಕಟ್ಟಿಬಿಡುತ್ತಾರೆ. ಆದರೆ ಏಕತಾನತೆ ಇಲ್ಲಿಯೂ ಬಾಧಿಸುವುದುಂಟು. ವೃತ್ತಿ ಪ್ರವೃತ್ತಿ ಒಂದೇ ಆಗುವಾಗ ಎಕತಾನತೆ ಸಹಜವಾಗಿಬಿಡುತ್ತದೆ. ಆದರೂ ಓದಿದ ಪುಸ್ತಕದ ಹಾಳೆಗಳನ್ನು ಮಗುದೊಮ್ಮೆ ತಿರುವಿದಂತೆ ತಿರುವುತ್ತಿರಬೇಕು. ಮುಖ್ಯವಾಗಿ ಕಲೆಯ ಕ್ರಮಬದ್ಧ ಆಸ್ವಾದನೆಯೂ ಒಂದು ಕಲೆಯಂತೆ ಪರಿಗಣಿಸಬೇಕು. ಉಣ್ಣುವುದಕ್ಕೆ ಅರಿಯದವ ಪೂರ್ಣ ಸ್ವಾದವನ್ನೂ ಸವಿಯಲಾರ.  

         
. 


Monday, October 14, 2013

ರಾಮ ನಿನ್ನ ಬಾಣ ತಾಗಿದಾಮೇಲೆ .......

“ರಾಮ ನಿನ್ನ ಬಾಣ ತಾಗಿದಾಮೇಲೆ ಬದುಕಬೇಕೆಂಬ ಅಶೆಯುಂಟೇ ಎನಗೇ? “ ದರ್ಪದಿಂದಲೂ ದುರಹಂಕಾರದಿಂದಲೂ ಮೆರೆಯುತ್ತಿದ್ದ ವಾಲಿ ರಾಮ ಬಾಣದಿಂದ ಘಾಸಿಗೊಂಡು ಧರೆಗುರುಳಿದಾಮೇಲೆ, ಶಿಕ್ಷೆ ರಕ್ಷೆಗೆ ಬದ್ಢನಾದ ರಾಮನಲ್ಲಿ ಹೀಗೆ ಕೇಳುತ್ತಾನೆ. ಬಲಿಪ್ಪಜ್ಜನ ಪದವೂ ಶೇಣಿ ಅಜ್ಜನ ಅರ್ಥವೂ ಮೇಳವಿಸಿತೆಂದರೆ ಮತ್ತೆ ಕೇಳಬೇಕೆ?
“ಏನ ಮಾಡಲಿ ನಾನು ಇನ್ನೇನ ಕಂಡೆನು ಇಂದು.....” ಕಡತೋಕರ ಪದವೂ ಪುತ್ತೂರು ಹೆಗಡೆಯ ಕಂಸವೂ ಉದಯ ಕಾಲದಲ್ಲಿ ಮೆರೆಯುವ ಪರಿಯೇ ಬೇರೆ.
ಕಂಸ ಎಂದಾಗ ಬಹಳ ಜನಜನಿತವಾದ  ಮಾತು ಹಲವು ಸಲ ನೆನಪಿಗೆ ಬರುತ್ತದೆ. ಮಂಡೆಚ್ಚರ ಪದವೂ ಬೋಳಾರ ಶೆಟ್ಟಿಯವರ ಕಂಸವೂ..... ಆದರೆ ಇದು ನಾನು ಕಂಡಿರದೇ ಇರುವ ಸತ್ಯ. ಹಾಗಾಗಿ ಕಲ್ಮ ನೆ ಮಾತ್ರ. ಹಾಗೇಯೇ-
“ ಕಂಡನೋ ದಶವದನ ಕೋದಂಡ ರಾಮನ ......” ರಾವಣ ಮೋಕ್ಷದ ಸನ್ನಿವೇಶ.
ಇವುಗಳನ್ನು ಕೇಳಿದಾಗಲೇ ಯಕ್ಷಲೋಕದ ನಾಭೀಸ್ಪರ್ಶವಾದ ಅನುಭವವಾಗುವುದಿಲ್ಲವೇ?
ಯಕ್ಷಗಾನದ ಪುರಾಣ ಪ್ರಸಂಗಗಳಲ್ಲಿ ಬಹಳಷ್ಟು ಮೇಲೆ ಹೇಳಿದ ಸನ್ನಿವೇಶಗಳು ಪ್ರಸಂಗದ ಕೊನೆಯ ಹಂತದಲ್ಲಿ ವಿಜ್ರಂಭಿಸಲ್ಪಡುತ್ತದೆ. ಇಲ್ಲಿ ಪಾರಮಾರ್ಥಿಕ ಸತ್ಯ ಏನು ಎಂದು ಸರಳವಾಗಿ ವರ್ಣಿಸಲ್ಪಡುತ್ತದೆ. ಉರ ಪ್ರದೇಶದಲ್ಲಿ ರಾಮ ಬಾಣ ನೆಟ್ಟನೆಂದ ಮೇಲೆ ಆ ರಾಮನ ಉದ್ದೇಶವಾದರೂ ಏನು? ತನ್ನ ನಿಯಂತ್ರಣದಲ್ಲಿ ಎಲ್ಲವನ್ನು ಅಡಗಿಸಬಲ್ಲೆ ಎಂಬ ಅಹಂಕಾರದಿಂದ,  ಕೊರೆ ಕೊರೆದು ಮುಂದೊತ್ತುವ ಸಜೀವ ಶರವನ್ನು ತಾನು ನಿಯಂತ್ರಿಸಿದ್ದೇನೆ ಎಂಬ ಭ್ರಮಾಧೀನನಾದ ವಾಲಿಯ ಭ್ರಮೆಯನ್ನು ಅಲ್ಲಿ ಕಳಿಚಿ ಬಿಡುತ್ತಾನೆ ರಾಮ. ರಾಮಬಾಣ ಬೇರೆ ಯಾರಿಂದಲೂ ನಿಯಂತ್ರಿಸಲಾಗದ ಸತ್ಯ ಅರಿತಾಗ ವಾಲಿಯ ಚಿಂತನೆಯ ದಿಶೆಯೇ ಬದಲಾಗಿಬಿಡುತ್ತದೆ. ರಾಮನಿಂದ ಶಿಕ್ಷಿಸಲ್ಪಡಬೇಕಾದ  ಕಾಯವಿದು, ಎಂಬ ರಾಮ ಸಂಕಲ್ಪ ಬಂದಾದ ಮೇಲೆ ಈ ಕಾಯದ ಮೇಲಿನ ಬಯಕೆಯೇ ನಶಿಸಿ ಹೋಗುತ್ತದೆ. ತಾನು ಏನು ತನ್ನ ಪಾತ್ರದ ಅರಿವೇನು ಎಂದು ವಾಲಿ ಅರಿತಾಗುತ್ತದೆ. ಮೋಕ್ಷಗಾಮಿಯಾಗುವ ವಾಲಿಗೆ ಶರೀರ ಘಾಸಿಯಾಗುವುದು ಹೊಸತೇನಲ್ಲ. ಆದರೆ ರಾಮನಿಂದ ಘಾಸಿಯಾಯಿತಲ್ಲ?  ರಾಮನಿಗೆ ಈ ಶರೀರ ಬೇಡವೆಂದು ಕಂಡು ಯಾವಾಗ ಆತನಿಂದ ಘಾಸಿಗೊಂಡಿತೋ ಶರೀರದ ಮೇಲಿನ ಮಮಕಾರ ಹೊರಟುಹೋಗುತ್ತದೆ.

ಕಂಸನ ಚಿತ್ರಣವೂ ಹಾಗೆ,  ಮರುದಿನ ಶ್ರೀಕೃಷ್ಣನ ದರ್ಶನವಾಗುತ್ತದೆ ಎಂಬ  ಭಯದಲ್ಲೇ ಮೊದಲ ರಾತ್ರಿಯ ನಿದ್ರೆಯನ್ನು ಕಳೆದುಕೊಂಡು ಬಿಡುತ್ತಾನೆ ಕಂಸ. ತನ್ನ ಜನ್ಮ ಜನ್ಮಾಂತರದ ಅರಿವಾಗಿ ಎಲ್ಲಿ ನೋಡಿದರಲ್ಲಿ ಶ್ರೀಕೃಷ್ಣನೇ  ಆ ಇರುಳಲ್ಲಿ ಕಂಡುಬರುತ್ತಾನೆ. ಕೆದರಿದ ತಲೆ, ಭಯದಿಂದ ಅರಳಿದ ಕಣ್ಣು.. ರಂಗಸ್ಥಳದ ತುಂಬಾ ಆವರಿಸುವ ಕಂಸ ಎಂತಹ ಭಯಾನಕ ದೃಶ್ಯವದು. ಸುತ್ತಲೂ ನಿಶ್ಯಬ್ಧ ಸಭಾವಲಯ, ಏರು ಸ್ಥಾಯಿಯಲ್ಲಿ ಭಾಗವತರು ಭಾವತುಂಬುತ್ತಿದ್ದರೆ ಮುನ್ನೆಲೆಯ ಕಂಸನ ಚೀತ್ಕಾರ ಸುತ್ತಲೂ ಮೊಳಗುವಾಗ...ಕಂಸನ ಅಸಹನೀಯ ವೇದನೆ ಅಭಿವ್ಯಕ್ತಿಸಲ್ಪಡುವುದನ್ನು ನೋಡಿದ ಪ್ರೇಕ್ಷಕ ಗಡಣ ಕಂಪಿಸುತ್ತದೆ. ಕಂಸ ಪಾರಮಾರ್ಥಿಕವಾಗಿ ಚಿಂತಿಸತೊಡಗುವುದನ್ನು ಗಾಬರಿಯಿಂದ ಕಾಣುತ್ತದೆ.
ಹಲವು ಅಸುರೀ ಪಾತ್ರಗಳು ಕೊನೆಯ ಹಂತದವರೆಗೂ ಭೀಭತ್ಸ ಮಯವಾಗಿ ವಿಜ್ರಂಭಿಸುತ್ತದೆ. ಅದು ರಾವಣ ಅಗಿರ್ಬಹುದು, ಕಂಸ ಆಗಿರಬಹುದು, ಶೂರ ಪದ್ಮನಾಗಿರಬಹುದು...ಕಾರ್ತವೀರ್ಯನಾಗಿರಬಹುದು ಕೊನೆಯ ಹಂತದಲ್ಲಿ ತಮ್ಮ ಅಸ್ತಿತ್ವದ ಸತ್ಯದ ಅರಿವಾಗಿ ಮೋಕ್ಷಮುಖರಾಗುವ ಪರಿ ಯಕ್ಷಗಾನದಲ್ಲಿ ಸುಂದರವಾಗಿ ವರ್ಣಿಸಲ್ಪಡುತ್ತದೆ. ಅತ್ಯಂತ ಸರಳವಾಗಿ ಮತ್ತು ಸುಲಭವಾಗಿ ಇಲ್ಲಿ ಕಂಡಾಗ ಮನುಷ್ಯ ಬದುಕಿನ ವಾಸ್ತವದ ದರ್ಶನವಾಗುತ್ತದೆ. ಈ ಮನುಷ್ಯ ಜನ್ಮದ ನಿಯಮವೇನು?  ಭಗವಂತನ ನಿಯತಿಯೇನು? ಮೋಕ್ಷ ಎಂದರೇನು? ಸುಲಭವಾಗಿ ಇಲ್ಲಿ ಲಭ್ಯವಾಗುವ ಜ್ಞಾನ ಯಕ್ಷಗಾನದ ವೈಶಿಷ್ಟ್ಯಗಳಲ್ಲಿ ಒಂದು.  ಬದುಕಿನ ಸತ್ಯ ತಿಳಿಯುವುದಕ್ಕೆ ವಿದ್ಯಾವಂತನೇ ಆಗಬೇಕೆಂದೇನೂ ಇಲ್ಲವೆಂಬ ಸತ್ಯವನ್ನು ಹಲವು ಯಕ್ಷಗಾನ ಕಲಾವಿದರು ರಂಗದ ಮೇಲೆ ತೋರಿಸಿದ್ದರೆ. ವಿದ್ಯೆ ಅಂತ ಇಲ್ಲಿ ಉಲ್ಲೇಖಿಸುವುದು ಲೌಕಿಕ ಪ್ರಪಂಚದಲ್ಲಿ ಬಿಂಬಿಸಲ್ಪಡುವ ವಿದ್ಯೆಯನ್ನು. ಆದರೆ ವಿದ್ಯೆಯ  ಪರಿಧಿಗೆ ಇಲ್ಲಿ ಎಲ್ಲವೂ ಒಳಪಡುತ್ತದೆ ಎಂಬ ಸತ್ಯದ ಅರಿವಾಗುವುದು ಯಕ್ಷಗಾನ ಕಲಾವಿದನ ನೈಪುಣ್ಯತೆಗೆ ಸಾಕ್ಷಿ.  ಕಲಾವಿದ ಇಲ್ಲಿ ಎಲ್ಲವೂ ತಿಳಿದ ಜ್ಞಾನಿಯಂತಾಗುತ್ತಾನೆ. “ಮೋಕ್ಷ” ಎಂದರೇನು? ಜನ್ಮ ಜನ್ಮಾಂತರದ ಈ ಜೀವ ಭಾವದ ಸಂಭಂಧಗಳೇನು? ಒಬ್ಬ ಯಕ್ಷಗಾನ ಕಲಾವಿದ ರಂಗ ಮೇಲೆ ಇದನ್ನು ಅಭಿವ್ಯಕ್ತಿಸುವಾಗ ಬಹಳ ಆಶ್ಚರ್ಯವಾಗುತ್ತದೆ. “ ರಾಮ ನಿನ್ನ ಬಾಣ ತಾಗಿದಾ ಮೇಲೆ....” ಶೇಣಿ ಅಜ್ಜ ಒಂದು ಗಂಟೆ ಬೇಕಾದರೂ ವಿವರಣೆ ನೀಡ ಬಲ್ಲರು. ಯಕ್ಷಗಾನದ ನಿಜ ವೈಭವ ಇರುವುದೇ ಇಂಥವುಗಳಲ್ಲಿ. ಇಲ್ಲಿ ಪಂಡಿತ ಪಾಮರ ಎಂಬ ಭೇದವಿಲ್ಲ. ಯಾವುದೇ ಗುರುಕುಲದಲ್ಲಿ ಸಿದ್ದಿಸದ ಜ್ಜಾನ,  ಪುಸ್ತಕಗಳನ್ನ ಓದದೇ, ಗುರುಗಳ ಪಾಠ ಕೇಳದೇ ಇಲ್ಲಿ ಸುಲಭದಲ್ಲಿ  ಆರ್ಜಿಸಲ್ಪಡುತ್ತದೆ. ಯಕ್ಷಗಾನ ಸತ್ವಯುತ ಕಲೆ ಅನ್ನಿಸುವುದು ಇಂಥ ವಿಚಾರಗಳಲ್ಲೇ. 
ಕುರುಕ್ಷೇತ್ರದಲ್ಲಿ ಬಂಧುವರ್ಗದವರನ್ನು ಕೊಲ್ಲಲಾರೆ ಎಂದು ಅರ್ಜುನ ವ್ಯಾಮೋಹಕ್ಕೆ ಒಳಗಾದಾಗ ಶ್ರೀಕೃಷ್ಣ ಪಾರ್ಥನ ಮೋಹ ನಷ್ಟವಾಗುವಂತೆ ಪ್ರೇರೇಪಿಸುವ ಸನ್ನಿವೇಶವಿದೆ. ಗೀತೋಪದೇಶ ತಾಳ ಮದ್ದಲೆ ಪ್ರಸಂಗವೊಂದರಲ್ಲಿ ನಾನು ಎಂಬುದಕ್ಕೆ ಸುಲಭವಾದ ವಿಶ್ಲೇಷಣೆಯನ್ನು ಶೇಣಿ – ಪೆರ್ಲರ ಸಂವಾದ ಒದಗಿಸುತ್ತದೆ. ಸುಮಾರು ಮೂರು ಘಂಟೆಯ ಈ ತಾಳ ಮದ್ದಲೆ ಭಗವದೀತೆಯ ಪಾರಮಾರ್ಥಿಕತೆಯ ಜ್ಞಾನವನ್ನು ಒದಗಿಸುವ ಪರಿ ಹೀಗಿದೆ.
“ಅರ್ಜುನ ಕೊಲ್ಲುವುದು ಮತ್ತು ಕೊಲ್ಲಲ್ಪಡುವುದು. ಇದು ಎರಡೇ ವಿಷಯ ಇಲ್ಲಿ. ನೀನು ಕೊಲ್ಲುವುದು. ಅವರು ಕೊಲ್ಲಲ್ಪಡುವುದು, ನಿನ್ನಿಂದ. ಕೊಲ್ಲುವುದು ಯಾರು?”
“ನಾನು.”
“ಈ ನಾನು ಅಂದ್ರೆ ಏನು?”
“ನಾನಂದ್ರೆ ನಾನೇ,  ಅರ್ಜುನ”
“ಹಾಗಾದ್ರೆ ಕೊಲ್ಲಲ್ಪಡುವುದು ಯಾರು? ಅವರು... ಅಂತ ನೀನು ಹೇಳಕೂಡದು.  ಅವರೂ ಹೇಳ್ಬೇಕು. ಕೊಲ್ಲಲ್ಪಡುವುದು ಯಾರು? ಸಾಯಲ್ಪಡುವುದು ನಾನು. ನಾವು ಅಂತಲೂ ಹೇಳಬಾರದು. ನಾನು ಎಂಬುದು ವ್ಯಕ್ತಿಯಾಗಿ ಒಬ್ಬನ ಸ್ವಗತ ಅಲ್ವೋ? ನಿನ್ನನ್ನು ನೀನು ’ ನಾನು’  ಅಂತ ಹೇಳ್ತಿ. ನನ್ನನ್ನು ..??”
“ಅದಕ್ಕೆ ಅದನ್ನು ಸರ್ವ ನಾಮ ಅಂತ ಹೇಳುವುದು.ಎಲ್ಲರಿಗೂ ನಾನು ಅಂತ ಉಂಟು. ಆದರೆ ನಾನು ಅಂತ ಪ್ರತ್ಯೇಕ ಯಾರೂ ಇಲ್ಲ.”
ಮುಂದೆ ವಿವರಿಸುತ್ತಾ ಕೃಷ್ಣನಾಗಿ ಶೇಣಿ ಹೇಳುತ್ತಾರೆ,  ಪ್ರತಿಯೊಬ್ಬರಲ್ಲಿಯೂ ಇದ್ದ ನಾನು, ಈ ಭೀಷ್ಮ,  ದ್ರೋಣ ಹೀಗೆ ಪ್ರತಿಯೊಬ್ಬರಲ್ಲಿಯೂ ಇದ್ದ ನಾನು, ಅವರೂ ಸ್ವಕೀಯವಾಗಿ ಹೇಳುವಾಗ ನಾನು ಅಂತ ಹೇಳ್ತಾರೆ.  
ಕೊಲ್ಲುವುದು ಯಾರುಂತ ಆಯ್ತು? ಉತ್ತರ “ ನಾನು”
ಸಾಯುವುದು ಯಾರೂಂತ ಆಯ್ತು  ಉತ್ತರ “ನಾನು”
          ಆಗ ಅರ್ಜುನನಾಗಿ ಪೆರ್ಲ ಹೇಳುತ್ತಾರೆ. ಬಹಳ ಸರಳವಾದ ಸಂಭಾಷಣೆ ಇದು.
          “ಇದುವರೆಗೆ ನೀನು ಯಾರು ಅಂದ್ರೆ ಯಾರಾದರು ಕೇಳಿದರೆ. ನಾನು ಅಂದರೆ ಪಾಂಡು ಚಕ್ರವರ್ತಿಯ ಪುತ್ರ, ಅರ್ಜುನ, ಈಗ ಅಲೋಚನೆ ಮಾಡುವಾಗ ನಾನು ಅಂದ್ರೆ ಯಾರು? ನಾನು ಅಂದ್ರೆ ಅರ್ಜುನ. ಹಾಗಾದ್ರೆ ಈಗ ನನ್ನ ಶರೀರ ಅಂತ ಹೇಳ್ತೇನೆ ..ನನ್ನ ಶರೀರ ಅಂತ ಹೇಳುವಾಗ ಶರೀರ ಬೇರೆ ನಾನು ಬೇರೆ ಅಂತ ಆಗುದಿಲ್ವ? ಇದು ನನ್ನ ಮನೆ ಅಂದ್ರೆ ನಾನು ಬೇರೆ ಮನೆ ಬೇರೆ. ಹಾಗೆ ಪ್ರತಿಯೊಂದು...ಹಾಗೇ ನನ್ನ ಅಂತ ಹೇಳುವಾಗ ನಾನು ಅಂತ ಬೇರೆ ಉಂಟು ಅಂತ ಆಯ್ತು. ಹಾಗೆ ನನ್ನ ಬುದ್ದಿ, ನನ್ನ ಮನಸ್ಸು, ನನ್ನ ಭಾವ..ಇದನ್ನೆಲ್ಲ ಹೇಳುತ್ತಾ ನನ್ನ ಕೈ ನನ್ನ ಕಾಲು, ನನ್ನ ಕೊರಳು,  ನನ್ನ ತಲೆ,  ಹೀಗೆ ಒಂದೊಂದನ್ನೆ ಹಾಗೆ ಬೇರೆ ಬೇರೆ ತೆಗೆದು ಇಟ್ಟರೆ,,,ಕೊನೇಗೆ ನಾನು ಎಂದು ಏನು ಉಳೀತದೆ?”
“ ಆವಾಗ ಅದು ಷಷ್ಠೀ ವಿಭಕ್ತಿಯಾಗಿ ಉಳೀತದೆ “ ನನ್ನದು...” ಅಲ್ಲಿ ನಾನು ಇರುವುದೇ ಇಲ್ಲ...ನನ್ನದು ನಾನಲ್ಲದೇ ಹೋಗ್ತದೆ.”
“ಕೆಲವೊಮ್ಮೆ ಹೇಳುವುದುಂಟು ನಾನು ಅಂದ್ರೆ ನನ್ನ ಜೀವ ಅಂತ ಬೇರೆ ಉಂಟು. ನನ್ನ ಜೀವ ಹೋಗ್ತದೆ... ಆಗ ನಾನು ಬೇರೆ,  ಜೀವ ಬೇರೆ...ಹಾಗಾದರೆ ನಾನು..?? ಎಲ್ಲ ತೊಡಕು ಎಲ್ಲ ತೊಡಕು. “

ಆಗ ಕೃಷ್ಣ ..
 “ ತೊಡಕು ಏನೂ ಇಲ್ಲ. ಆ ತೊಡಕು ಬಂದ ಮೇಲೆಯೇ ಇವನಿಗೆ ಉದ್ದಾರದ ದಾರಿ ದೊರಕುವುದು. ಆ ತೊಡಕು ಬಾರದೆಯೇ ಇವರೆಲ್ಲ ಈಗ ಆಯುಧ ಹಿಡಕೊಂಡು ಬಂದಿರುವುದು. ನನ್ನದು ಎಂಬುದು ನಾನಲ್ಲ ಎಂದು ತಿಳಿದರೆ..? ನನ್ನದು ಎಂಬ ಭಾವವನ್ನು ನಾಶ ಮಾಡುವುದಿದ್ದರೆ ಯಾರು ಅದು ನಾನು..,, ನಾನು ಎಂಬುದು ನನ್ನದು ಎಂಬುದನ್ನು ನಾಶ ಮಾಡಿದರೆ ನನ್ನನ್ನು ನಾಶ ಮಾಡಿದ ಹಾಗೆ ಆಗುತ್ತದೋ?
          ಇಂತಹ ಸುಲಭ ವೇದಾಂತ ಸರಳವಾಗಿ ಇಲ್ಲಿ ಈ ಯಕ್ಷಗಾನದಲ್ಲಿ ಸಿಗುತ್ತದೆ. ಯಕ್ಷಗಾನ ಹವ್ಯಾಸದಿಂದ ಯಾವುದೇ ಗ್ರಂಥ ಪಾರಾಯಣ ಇಲ್ಲದೇನೆ ಹಲವಾರು ವಿಷಯ ವಿಸ್ಮಯಗಳನ್ನು ಸ್ವತಃ ನಾನು ಅರಿತಿದ್ದೇನೆ. ಯಕ್ಷಗಾನ ಸರಳವಾಗಿ ಕೊಡುವ ಜ್ಞಾನವನ್ನೇ ಅರಗಿಸಿಕೊಂಡರೂ ನಮ್ಮ ಬದುಕೇನು? ಇದರ ಅರ್ಥವೇನು ಎಂದು ತಿಳಿಯುವುದಕ್ಕಾಗುತ್ತದೆ. ಆದರೂ ಕುರುಡುತನ ನಮ್ಮನ್ನು ಬಿಡುವುದಿಲ್ಲ ಆವರಿಸಿದ ಮೌಢ್ಯ  ಕಳಚುವುದೇ ಇಲ್ಲ. ಹಲವು ಸಲ ಖೇದವಾಗುವಂತಹುದು,  ಪದೇ ಪದೇ ಸಂಭವಿಸುತ್ತದೆ. ಜ್ಞಾನಕ್ಕೆ ಗ್ರಹಣ ಬಡಿದಂತೆ ಅನ್ನಿಸುತ್ತದೆ. ಹೊಸತಾದ ಅಂಗಿ ತೊಟ್ಟಮೇಲೆ ಒಳಗಿನ ಬನಿಯನು ಹರಿದಿರುವುದು ಗಮನಕ್ಕೇ ಬರುವುದಿಲ್ಲ.  ಸ್ವಪ್ರತಿಷ್ಠೆಯ ಸ್ವಾರ್ಥ ಕಂಡಾಗ ಬೆಳಕೆಂದರೆ ಸಿಡಿಮದ್ದಿನ ಬೆಳಕಿನಂತೆ ಅದು ಕ್ಷಣಿಕವೇ ಎಂಬ ಭ್ರಮೆ ಆವರಿಸುತ್ತದೆ. ಕಾರಣ ನಮ್ಮಲ್ಲಿ ಆವರಿಸಿರುವ ಸ್ವ  ಪ್ರತಿಷ್ಠೆಯ  ಸ್ವಾರ್ಥ. ರಾಮ ನಿನ್ನ ಬಾಣ ತಾಗಿದಾ ಮೇಲಿನ ಪಾರಮಾರ್ಥಿಕದ ಬಗ್ಗೆ ಹೇಳುವಾಗ, ರಂಗದ ಮೇಲೆ ಮೋಕ್ಷ ಸಾಧನೆಯ ಮಾತನ್ನಾಡುವಾಗ  ಒಂದು ಕ್ಷಣವಾದರೂ ಈ ಜೀವಭಾವದ ಸಂಭಂಧದ ಅರಿವಾಗದದಿರುತ್ತದೆಯೆ?  ಮನುಷ್ಯನ ಹುಟ್ಟು ಸಾವಿನ ನಡುವಿನ ನಶ್ವರ ಜೀವನದ ಅರ್ಥವೇನು ಎಂದರಿವಾಗಿರುತ್ತದೆ. ಒಂದು ವೇಳೆ ಇದರ ಅರಿವಾಗದೇ ಇದ್ದರೆ, ಕಲಾವಿದನಾಗಿ ವಾಲಿಯಾಗಿ ಪರಕಾಯ ಪ್ರವೇಶ ಸಾಧ್ಯವಾಗುವುದಿಲ್ಲ. ಮಾತ್ರವಲ್ಲ ಪರಿ ಪೂರ್ಣ ವಾಲಿಯ ಪಾತ್ರವೂ ಅಗುವುದಕ್ಕೆ ಸಾಧ್ಯವಿಲ್ಲ.  ರಂಗದ ಮೇಲಿನ ವಾಲಿಯ ಮಾತಿಗೆ ನಾವು ಆಸನದ ತುದಿಗೆ ಬಂದು , ಕಣ್ಣು ತುಂಬಿ ಭಾವಪರವಶರಾಗಿ  ಚಪ್ಪಾಳೆ ಹೊಡೆಯುತ್ತೇವೆ.  ಭಾಗವತರು ಮಂಗಳ ಹಾಡಿದಾಗ ನಮ್ಮ ಭಾವನೆಗಳಿಗೂ ಮಂಗಳ ಹಾಡಿಬಿಡುತ್ತೇವೆ. ಮತ್ತೆ ಯಥಾ ಪ್ರಕಾರ ರಾಗದ್ವೇಷದ ಪ್ರಪಂಚದ ಒಳ ಹೊಕ್ಕು ಸಾಮನ್ಯರೇ ಆಗಿಬಿಡುತ್ತೇವೆ. ಇದಲ್ಲವೇ ವಿಪರ್ಯಾಸ? ಜಗತ್ತು ವಿಪರ್ಯಾಸಮಯ ಎನ್ನುವುದು ಹೀಗೆನೆ.

          ಹಲವು ಸಲ ಅನ್ನಿಸುತ್ತದೆ ಯಕ್ಷಗಾನ ಆಶ್ರಯ,  ಪ್ರೋತ್ಸಾಹವಿಲ್ಲದೆ ಬಡವಾಗುವುದಿಲ್ಲ. ಅದು ಕೇವಲ ಸ್ವ- ಪ್ರತಿಷ್ಠೆಯಿಂದ ಅನಾಥವಾಗುತ್ತದೆ . ಸ್ವ ಪ್ರತಿಷ್ಠೆ ಸ್ವಾರ್ಥಕ್ಕೇ ಪ್ರೇರಣೆಯಾಗುತ್ತದೆ. ಸ್ವಾರ್ಥ ರಾಜಕಿಯಕ್ಕೆ ಹಾದಿ ಹುಡುಕುತ್ತದೆ.  ಕಲಾವಿದನಾಗಲೀ ಪ್ರೇಕ್ಷಕನಾಗಲೀ ಇದರಿಂದ ಮುಕ್ತವಾಗಿ ಚಿಂತಿಸದೇ ಇರುವುದು, ಕೆಲವೊಮ್ಮೆ ಈ ಚಿಂತನೆಗಳೆಲ್ಲ ಬಾಲಿಶಮಯವಾಗಿ ತೋರುವುದು ಮೇಲೆ ಹೇಳಿದ ಪಾತ್ರಗಳ ಸಂಪೂರ್ಣ ಪಾರಾಮರ್ಥಿಕ ಚಿತ್ರಣ ಸಾಕ್ಷಾತ್ಕಾರವಾದಾಗ. ಸ್ವಾರ್ಥ ಸ್ವ ಪ್ರತಿಷ್ಠೆಯನ್ನು ಬಿಟ್ಟವನು ನೆಮ್ಮದಿಯಾಗಿ ಇರಬಲ್ಲ.  ಯಕ್ಷಗಾನದಂತಹ ಕಲೆ ಅದು ಸಮನ್ವಯ ಕಲೆ. ಇಲ್ಲಿ ಒಂದು ಎಂದು ಪ್ರತ್ಯೇಕಿಸುವುದಕ್ಕಿಲ್ಲ. ಸಮಷ್ಟಿಯ ಕಲೆ. ಇದು ಲಘೂಪಹಾರವಲ್ಲ. ಲಘೂಪಹಾರದಲ್ಲಿ ಒಂದು ತುಂಡು ಆಹಾರ ಕೊಟ್ಟರೂ ಅದು ಅರ್ಥ ಕಳೆದುಕೊಳ್ಳುವುದಿಲ್ಲ. ಆದರೆ ಷಡ್ರಸ ಭೋಜನ ಇಲ್ಲಿ ಸಿಹಿ ಕಹಿ ಚೊಗರು ಎಲ್ಲವೂ ಹಿತವಾಗಿ ಜತೆಯಾದರೆ ಮಾತ್ರ ಷಡ್ರಸ ಅರ್ಥವನ್ನು ಕಂಡುಕೊಳ್ಳುತ್ತದೆ. ಆ ಮಟ್ಟಿಗೆ ಯಕ್ಷಗಾನ ಷಡ್ರಸ ಭೋಜನಕ್ಕೆ ಹೋಲಿಸುತ್ತಾರೆ. ಚಿಟಿಕೆ ಉಪ್ಪಾದರೂ ಅದರ ಮಹತ್ವಕ್ಕೆ ಇನ್ನೊಂದು ಅನ್ವಯವಾಗುವುದಿಲ್ಲ. ಅದರ ಅವಶ್ಯಕತೆಯನ್ನು ಇನ್ನೊಂದು ನಿಭಾಯಿಸಿದರೆ ಅದು ಅಭಾಸವಾಗುತ್ತದೆ. ಹಾಗಾಗಿ ಚಕ್ರತಾಳ ಹಿಡಿವವನೂ ರಂಗಸ್ಥಳದ ಪೂರಕ ಅಂಗವಾಗಿರುತ್ತಾನೆ.

          ಹಿರಿಯ ಕಲಾವಿದ ಗೋವಿಂದಣ್ಣನನ್ನು ತಾಳ ಮದ್ದಲೆಗೆ ಕರೆದಾಗ ಅವರು ತನ್ನ ಪಾತ್ರವೇನೆಂದು ಕೇಳುವುದಿಲ್ಲ. ಪ್ರಸಂಗವನ್ನೂ ಕೇಳುವುದಿಲ್ಲ. ಸಹಕಲಾವಿದರ ವಿವರವನ್ನು ಕೇಳುವುದಿಲ್ಲ. ಪಾತ್ರವನ್ನು ಪ್ರಸಂಗವನ್ನು ಬಂದನಂತರ ಹೇಳಿದರೂ ಆದೀತು ಅಂತ ವಿನಮ್ರವಾಗಿ ಹೇಳುವಾಗ ರಾಜಕಿಯದ ಮುಖವೇ ಕಪ್ಪಾಗುತ್ತದೆ ಹೊರತು ಸತ್ವಯುತ ಹಿರಿತನ ಮತ್ತೂ ಬೆಳಗುತ್ತದೆ.
          ಯಕ್ಷಗಾನದಲ್ಲಿ ಪ್ರತಿಯೊಂದು ಅಂಗವೂ ಪೂರಕ. ರಂಗದ ಮೇಲಿನ ಮಂದಿ ಒಂದು ಕುಟುಂಬವಾದರೆ ರಂಗದ ಎದುರಿನ ಮತ್ತೊಂದು ಸಹ ಕುಟುಂಬ. ಸಮಷ್ಟಿಯಲ್ಲಿ ಒಂದು ಪಂಗಡ. ಇಲ್ಲಿ ಒಂದರ ಪ್ರಜ್ಞೆಗೆ ಊನ ಬಂದರೂ ನೋವು ಮೂಲ ಕಲೆಗೆ. ನಗರದ ಒಂದು ಬೀದಿಯಲ್ಲಿ ಸಾಲು ಸಾಲಾಗಿ ಮನೆಗಳಿರುತ್ತವೆ. ಪ್ರತಿ ಮನೆಯವರ ಅಂಗಳ ಎದುರು ಹಾಸಿದ ಸಾಮಾನ್ಯ ಬೀದಿಯೇ ಆಗಿರುತ್ತದೆ. ತಮ್ಮ ಮನೆಯ ಅಂಗಳ ಶುಚಿಯಾಗಿಸಿದಾಗ ಒಂದು ತುದಿಯಿಂದ ಇನ್ನೊಂದು ತುದಿಯವರೆಗಿನ ಬೀದಿಯೇ ಶುಚಿಯಾದಂತೆ. ತಮ್ಮ ಭಾಗದ ಕೆಲಸ ಪರಿಪೂರ್ಣವಾಗಿಸುವುದು.  ಹೃದಯ ವೈಶಾಲ್ಯವಿದ್ದರೆ ಪಕ್ಕದ ಮನೆಯ ಅಂಗಳವನ್ನೂ ಶುಚಿಯಾಗಿಸಬಹುದು.  ಅದು ಸಹಬಾಳ್ವೆಯ ಪ್ರತೀಕವಾಗಿ ಬೀದಿಯಂತೂ ಸುಂದರವಾಗಿಬಿಡುತ್ತದೆ.  ಆದರೆ ಇಂತಹ ಉದಾತ್ತ ಸರಳ ತತ್ವಗಳನ್ನು ಅರಗಿಸಿಕೊಳ್ಳುವುದಕ್ಕೆ ಸ್ವ ಪ್ರತಿಷ್ಠೆ ಬಿಡುವುದಿಲ್ಲ. ಯಾವೂದೂ ಇಲ್ಲದಿದ್ದರೆ ಭುಜಬಲದಿಂದಲಾದರೂ ದಮನಿಸಿ ನಿಯಂತ್ರಿಸುವ ಅತಿಕ್ರಮಣ ಭಾವ.   ಮಕ್ಕಳಲ್ಲಿ ಯಾರಿಗೆ ಪೆಟ್ಟು ಬಿದ್ದರೂ ಹೆತ್ತ ಕರುಳಿಗೆ ಅಲ್ಲವೇ  ನೋವುಂಟಾಗುವುದು. ಕೈಹಿಡಿದ ಗಂಡ ಮತಿಭ್ರಮಿಸಿ ಹೊಡೆದರೂ, ಅಥವಾ ಇನ್ನಾರೂ ದಮನಿಸಿದರೂ ಹೆತ್ತ ಕರುಳು ಅನುಭವಿಸುವ ನೋವು ಗಾಢವಾಗಿರುತ್ತದೆ. ದೇಹ ಬಲದಿಂದ ಏನನ್ನಾದರೂ ನಿಯಂತ್ರಿಸಬಹುದೆಂದು ಭಾವಿಸಿದರೆ ಅದು ಒಂದು ವಿಕೃತ ಮನಸ್ಸಿನ ಭಾವವೇ ಹೊರತು ಮತ್ತೇನು ಅಲ್ಲ. ದೇಹಕ್ಕಂಟಿದ ಕೊಳೆಯನ್ನು ಬಲವಾಗಿ ತಿಕ್ಕಿ ಶುಚಿಗೊಳಿಸಬಹುದು. ಹೃದಯದ ಕಲ್ಮಷವನ್ನು ತೊಳೆಯುವುದಕ್ಕೆ ಸನ್ಮಸ್ಸಿನ ಪ್ರೇರಣೆಯಿಂದ ಮಾತ್ರ ಸಾಧ್ಯ. ಇದಕ್ಕೆ ಪಾರಮಾರ್ಥಿಕ ಎನ್ನುವುದು,  ನಮ್ಮದಾಗಿ ಏನಿದೆಯೋ ಅದನ್ನು ನಮ್ಮದಲ್ಲ ಎಂದು ತಿಳಿವುದು.
 ಯೋಚಿಸೋಣ,  ಇದನ್ನೆಲ್ಲ ತಿಳಿಯದ ಅಜ್ಞಾನಿಗಳೇ ನಾವು?

         


Tuesday, October 1, 2013

“ಕಣ್ಣರಿಯದೊಡಂ ಕರುಳರಿಯದೇ ಕುಮಾರ.....”

“ಕಣ್ಣರಿಯದೊಡಂ ಕರುಳರಿಯದೇ ಕುಮಾರ.....”
ಇದು ಪೃಥೆಯಾದ ಕುಂತೀ ದೇವಿ ಬಾಳಿನುದ್ದಕ್ಕೂ ಅಂತರಂಗದಲ್ಲಿ ಪರಿತಪಿಸಿಕೊಂಡು ಆಡುವ ಕಂಬನಿಯ ಮಾತುಗಳು. ಕಾನೀನ ಪುತ್ರನ ಜನ್ಮಕ್ಕೆ ಕಾರಣಳಾದ ಕುಂತಿದೇವಿಯ ಕರುಳು ಮಿಡಿದುದಕ್ಕಿಂತಲೂ ಹೆಚ್ಚು ಪುತ್ರನಾಗಿ ಕರ್ಣ ಅನುಭವಿಸಿದ ವೇದನೆಯ ಬದುಕೇ ಒಂದು ದುರಂತಮಯ ಚಿತ್ರಣ. ಪ್ರಥಾ ದೇವಿ ಕುಂತೀ ಭೋಜನ ಪುತ್ರಿಯಾದ ಮೇಲೆ ಕುಂತಿಯಾಗುತ್ತಾಳೆ. ಅನಿರೀಕ್ಷಿತವಾಗಿ ಆಗಮಿಸಿದ ದೂರ್ವಾಸ ಮುನಿಗಳ ಸಿಟ್ಟು ಒಂದು ಮಹತ್ತರ ಘಟನೆಗಳಿಗೆ ಕಾರಣವಾಗುತ್ತದೆ. ದೂರ್ವಾಸ ಮುನಿ ಆಗಮಿಸಿದರೂ,  ಸಿಟ್ಟುಗೊಂಡರೂ,  ಹಸನ್ಮುಖಿಯಾದರೂ ಪ್ರತೀ ಬಾರಿಯೂ   ಅದು ಯವೂದೋ ಘಟನೆಗಳಿಗೆ ನಿಮಿತ್ತವಾಗಿಬಿಡುವುದು ಸಹಜ. ದುರ್ವಾಸ ಪ್ರವೇಶವಾಯಿತೋ ಅಲ್ಲಿ ಏನಾದರೂ ಅಘಟಿತ ಘಟನೆ ನಡೆಯಲೇ ಬೇಕು. ಆ ವಿಚಿತ್ರ ಕುಂತೀ ದೇವಿಯ ಬದುಕಿನಲ್ಲೂ ಅದದ್ದು ಪಂಚ ಪಾಂಡವರ ಜನ್ಮಕ್ಕೆ ಕಾರಣವಾಯಿತು. ಮಾತ್ರವಲ್ಲ ಜತೆಗೇ ಕರ್ಣನಂತಹ ವಿಕಲ್ಪ ನಾಯಕನ ಜನನಕ್ಕೂ ಕಾರಣವಾಗಿಬಿಟ್ಟಿತು. ಇದು ಜನಜನಿತವಾದ ಮಹಾಭಾರತದ ಕಥಾಭಾಗ.
ಚಿತ್ರಗಳ ಕೃಪೆ  ಮಿಥುನ್ ಪ್ರಕಾಶ್ ಸುಣ್ಣಂಗುಳಿ

ಕರ್ಣ ಜನ್ಮದಿಂದ ತೊಡಗಿ ಕರ್ಣಾವಸಾನವಾಗುವವರೆಗಿನ ಕಥಾನಕ ಹೃದಯ ಸ್ಪರ್ಶೀ ಘಟನೆಗಳನ್ನು ಒಳಗೊಂಡಿದೆ. ಅತ್ಯಂತ ವಿಲಕ್ಷಣ ಪ್ರಸಂಗಗಳನ್ನೇ ಒಳಗೊಂಡ ಈ ಪುರಾಣ ಕಥೆ ಯಕ್ಷಗಾನದಲ್ಲಿ ವರ್ಣ ರಂಜಿತಪ್ರಸಂಗವಾಗಿ ಹಲವು ಬಗೆಯಲ್ಲಿ ಪ್ರದರ್ಶಿಸುತ್ತಾರೆ. ಇದನ್ನೇ ಆಧರಿಸಿ ವರ್ಷಗಳ ಮೊದಲು ಶ್ರೀ ಧರ್ಮಸ್ಥಳ ಮೇಳದವರು “ಮಹಾ ರಥಿಕರ್ಣ” ಎಂಬ ಪ್ರಸಂಗವನ್ನು ಆಡುತ್ತಿದ್ದರು. ಮೇಳದ ಪ್ರತಿಯೊಬ್ಬ ಕಲಾವಿದರಿಗೂ ಹೊಂದಿಕೆಯಾಗುವಂತೆ ಪಾತ್ರಗಳನ್ನು ನಿರೂಪಿಸಿ ರಂಗದಮೇಲೆ ತಂದ ಅತ್ಯಂತ ಜನಪ್ರಿಯ ಪ್ರಸಂಗವಿದು. ಕುಂಬಳೆ ಸುಂದರ್ ರಾವ್, ಪುತ್ತೂರು ನಾರಾಯಣ ಹೆಗಡೆ ಗೋವಿಂದ ಭಟ್ ಸೂರಿಕುಮೇರಿ,  ಎಂಪೆಕೆಟ್ಟೆ ರಾಮರೈ ಮೊದಲಾದ ಪ್ರಸಿದ್ದ ಕಲಾವಿದರ ಪ್ರತಿಭೆಯಿಂದ ಯಶಸ್ವಿಯಾಗಿ ಪ್ರದರ್ಶಿಸಲ್ಪಡುತ್ತಿದ್ದ ಈ ಪ್ರಸಂಗವನ್ನು , ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ (ನಿಡ್ಲೆ ಗೋವಿಂದ ಭಟ್ ಬಳಗ ) ದವರು ಬೆಂಗಳೂರಿನ ಪುತ್ತಿಗೆ ಮಠದಲ್ಲಿ ಆಡಿತೋರಿಸಿದರು.ಕಾಲ ಮಿತಿಯೊಳಗೆ ಇದನ್ನು ಸಂಕಲಿಸಿ ಆಡಿತೋರಿಸುವುದು ಬಹಳ ಸಾಹಸಮಯ ಕೆಲಸ. ದುರ್ವಾಸ ಅನುಗ್ರಹ, ಕರ್ಣ ಜನ್ಮ, ವಜ್ರದುಂಬಿ, ಶಸ್ತ್ರ ಪರೀಕ್ಷೆ, ಕರ್ಣ ದಿಗ್ವಿಜಯ, ಕರ್ಣ ಭೇದನ, ಕರ್ಣಾವಸಾನ ಹೀಗೆ ಪ್ರತಿಯೊಂದು ಮಹತ್ವದ ಘಟನೆಗಳಲ್ಲಿ ಯಾವುದನ್ನೂ ಸಂಕ್ಷೇಪಿಸಿದರೂ ಅರ್ಥವನ್ನು ಕಳೆದುಕೊಳ್ಳುವಾಗ ಇದನ್ನು ಕಾಲಮಿತಿಗೆ ಒಳಪಡಿಸಿ ಯಶಸ್ವಿಯಾಗಿ ಆಡುವುದು ಬಹಳ ಕಷ್ಟದ ಕೆಲಸ.
          ಕುಂತೀ ಭೋಜನ ಒಡ್ಡೋಲಗದಿಂದ ತೊಡಗಿ ವಸುಷೇಣನ ಜನ್ಮವಾಗುತ್ತದೆ, ನಂತರ ಬಿಲ್ವಿದ್ಯೆಯ ಮಹತ್ವಾಕಾಂಕ್ಷೆಯಲ್ಲಿ ಪರಶುರಾಮಲ್ಲಿ ಶಿಶ್ಯತ್ವ ಸ್ವೀಕರಿಸುವ ವಸುಷೇಣ, ತನ್ನಲ್ಲಿ ಅರಿವಿಲ್ಲದೇ ವ್ಯಕ್ತವಾಗುವ ಕ್ಷತ್ರಿಯಗುಣಗಳಿಗೆ ಕಾರಣ ತಿಳಿಯದೇ ನಿಜವನ್ನು ಮರೆಮಾಚುವಂತಾಗುತ್ತದೆ. ಇದುವೇ ಪರಶುರಾಮನ ಆಗ್ರಹಕ್ಕೆ ಕಾರಣವಾಗಿ ವಸುಷೇಣ  ಶಾಪಗ್ರಸ್ಥವಾಗುತ್ತಾನೆ. ಈ  ಸನ್ನಿವೇಶದಲ್ಲಿ ಪರಶುರಾಮನಾಗಿ ನಿಡ್ಲೆ ಗೋವಿಂದ ಭಟ್ ತಮ್ಮ ಪ್ರತಿಭೆಗನುಸಾರವಾಗಿ ಮನೋಜ್ಞವಾಗಿ ಅಭಿನಯಿಸುತ್ತಾರೆ. ವಸಂತ ಗೌಡ ಕಾಯರ್ತಡ್ಕ ಶಿಷ್ಯ ವಸುಷೇಣನಾಗುತ್ತಾರೆ. ಮಂದೆ ದಿಗ್ವಿಜಯದ ಕರ್ಣ ಮತ್ತು  ಭೇದನದ ಕರ್ಣನಲ್ಲಿ ವೈಶಿಷ್ಟ್ಯವೇನೂ ಕಂಡು ಬರುವುದಿಲ್ಲ. ಅ ಬಹಳಷ್ಟು ಕುಂಬ್ಳೆಯವರ ಅರ್ಥಗಾರಿಕೆಯನ್ನೇ ಮುಂದುವರೆಸಿ ಕ್ಯಾಸೆಟ್ ಸಂಬಾಷಣೆಯನ್ನು ಅಲ್ಲಲ್ಲಿ ಒಪ್ಪಿಸಿದ್ದು ಬಿಟ್ಟರೆ ಈ ಭಾಗದ ಕರ್ಣ ಪರವಾಗಿಲ್ಲ ಅಂತ ಹೇಳಬಹುದು. ಕೊನೆಯಲ್ಲಿ ಅವಸಾನದ ಕರ್ಣನಾಗಿ ಸುಬ್ರಾಯ ಹೊಳ್ಳ ಇದ್ದ ಅಲ್ಪ ಸಮಯದಲ್ಲೇ ಬಹಳಷ್ಟು ಗಮನಸೆಳೆದರು. ಕುಣಿತ ಮತ್ತು ಮಾತುಗಾರಿಗೆ ಹಿತಮಿತವಾಗಿ ರಂಜಿಸಿತ್ತು.
ಚಿತ್ರಗಳ ಕೃಪೆ  ಮಿಥುನ್ ಪ್ರಕಾಶ್ ಸುಣ್ಣಂಗುಳಿ
          ಒಟ್ಟು ಯಕ್ಷಗಾನ ಪ್ರದರ್ಶನ ಉತ್ತಮವಾಗಿತ್ತು. ಇದಕ್ಕೆ ಮುಖ್ಯ ಕಾರಣ ಹಿಮ್ಮೇಳದ ಉಮೇದ್ವಾರಿಕೆ. ಚೆಂಡೆ ಮದ್ದಳೆಯ ಲಯ ವಿನಿಮಯ ಅದ್ಭುತವಾಗಿತ್ತು. ಯುವ ಪ್ರತಿಭೆ ರಾಮಕೃಷ್ಣ ಮಯ್ಯರ ಭಾಗವತಿಕೆ ಉತ್ತಮವಾಗಿತ್ತು. ಬೃಹತ್ ಪ್ರಸಂಗವನ್ನು ಕಾಲಮಿತಿಯಲ್ಲಿ ಒಳಪಡಿಸುವಾಗ ಭಾಗವತರು ಸ್ವಲ್ಪ ಒತ್ತಡ ಅನುಭವಿಸಲೇ ಬೇಕಾಗುತ್ತದೆ. ಅದು ಕೆಲವೊಮ್ಮೆ ವ್ಯಕ್ತವಾಗುತ್ತಿತ್ತು. ಮುಖ್ಯವಾಗಿ ರಾಗಗಳ ಅಯ್ಕೆ ಅತ್ಯುತ್ತಮ ಎಂದೇ ಹೇಳಬಹುದು. ಆದರೂ ಕೆಲವೊಂದು ಪದಗಳು ನಿರೀಕ್ಷೆಯಂತೆ ಮೂಡಿಬರಲಿಲ್ಲ. “ ಕೊರಳ ಸೆರೆ ಉಬ್ಬಿದವು……” ಮುಂತಾದ ಪದಗಳಿಗೆ ರಾಗ ಸಂಯೋಜನೆ ಮತ್ತು ಆಯ್ಕೆ ಉತ್ತಮವಾಗಿದ್ದರೂ ಕೊನೆಯಲ್ಲಿ ಮುಕ್ತಾಯ ತೃಪ್ತಿಯಾಗಲಿಲ್ಲ. ಬಹುಶಃ ಇದಕ್ಕೆ ಸಮಯದ ಅಭಾವವೂ ಕಾರಣ ಇರಬಹುದೇನೋ.

           ಒಟ್ಟು ತಂಡವಾಗಿ ಪ್ರದರ್ಶನ ನೀಡುವಾಗ ಇಲ್ಲಿ ಯಾವುದೂ ಮುಖ್ಯ ಅನ್ನಿಸುವುದೇ ಇಲ್ಲ. ಅದಕ್ಕೆ ಇವರು ಆಯ್ಕೆ ಮಾಡುವ ಪ್ರಸಂಗಗಳೇ ಸಾಕ್ಷಿ. ಕೇವಲ ಪುಂಡುವೇಷದವರ ಗಿರಿಕಿ ಯನ್ನು ನಂಬಿ ಪ್ರಸಂಗ ನಿರ್ಣಯಿಸುವುದಲ್ಲ.  ಈ ಬಗೆಯಲ್ಲಿ  ಆಟ ಮೇಲೆ ಬೀಳಿಸುವ ನಂಬಿಕೆ ಇಲ್ಲಿಲ್ಲ. ಇದಕ್ಕೆ ಸಣ್ಣ ನಿದರ್ಶನ ಅಮ್ಮುಂಜೆಯಂತಹ ಪುಂಡುವೇಷಧಾರಿ ಈ ಪ್ರಸಂಗದಲ್ಲಿ ಗಿರಕಿಯೇ ಇಲ್ಲದ  ಶ್ರೀ ಕೃಷ್ಣನ ವೇಷ ಮಾಡಿದ್ದು. ವೇಷ ಯಾವುದಾದರೇನು ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಹಿರಿಮೆ ಎನ್ನಿಸಲ್ಪಡುತ್ತದೆ. ಕಾಲ ಮಿತಿಯೊಳಗೆ ಕುಣಿತವೂ ಮಿತಿಯೊಳಗೆ ಇರಬೇಕು ಎಂಬ ಅರಿವು ಇಲ್ಲಿದೆ. .. ಭಾರ್ಗವ ವಿಜಯ ಸುದರ್ಶನ ವಿಜಯ ಲವಕುಶ ಮುಂತಾದ ಪ್ರಸಂಗಗಳ ಹಿಂದೆ ಬೀಳದೆ ಸರ್ವಾಂಗೀಣ ಪ್ರದರ್ಶನಕ್ಕೆ ಇಂತಹ ಪ್ರಸಂಗಗಳು ಪುರಾವೆಯಾಗಬಲ್ಲುದು. ದಣಿವರಿಯದ ಗಿರಕಿಯೇ ತೆಂಕು ತಿಟ್ಟು ಯಕ್ಷಗಾನ ಎಂಬ ತಪ್ಪು ತಿಳುವಳಿಕೆ ಹೋಗಲಾಡಿಸುವುದಕ್ಕೆ ಇದು ಕಾರಣವಾಗಬಹುದು. 

          ಶಿಸ್ತಿನ ತಂಡದ ಅಚ್ಚುಕಟ್ಟಾದ ಪ್ರದರ್ಶನಕ್ಕೆ ಸಾಕ್ಷಿಯಾಗಿ ಸಭಾಭವನ ಕಿಕ್ಕಿರಿದು ತುಂಬಿತ್ತು. ಬಹಳಷ್ಟು ಮಂದಿ ನಿಂತುಕೊಂಡೇ ಕೊನೇವರೆಗೂ ಆಟ ನೋಡಿದ್ದು ವಿಶೇಷವೆನಿಸಿತು. ಈ ಸಭಾಭವನದಲ್ಲಿ ಈ ಬಗೆಯ ಜನಸಂದಣಿ ಬಹಳ ಅಪರೂಪ ಎನ್ನಲೇಬೇಕು. ಸಾಮಾನ್ಯವಾಗಿ ಇಲ್ಲಿ  ಹೆಚ್ಚೆಂದರೆ ಐವತ್ತರ ಒಳಗೆ ಇರುತ್ತಿದ್ದ ಜನಸಂಖ್ಯೆ ಈ ಬಾರಿ ಭವನ ಭರ್ತಿಯಾಗುವುದಕ್ಕೆ ಕಾರಣ ನಿಡ್ಲೆಯಣ್ಣನ ತಂಡದ ಹಿರಿಮೆ ಎನ್ನಲೇಬೇಕು. ಒಂದು ತಂಡವಾಗಿ ಆಡುವ ಕಲೆ ಈ ಮಂದಿಗೆ ಕರಗತವಾಗಿದೆ. ಎಲ್ಲೂ ಹೊಂದಾಣಿಕೆ ಕುಸಿದ ಭಾವನೆಯೇ ಕಂಡುಬರಲಿಲ್ಲ. ಪ್ರತಿಯೊಂದು ಸನ್ನಿವೇಶವೂ ಅಚ್ಚುಕಟ್ಟಾಗಿ ಮೂಡಿ ಬಂತು. ನಿಜಕ್ಕೂ ನಿಡ್ಲೆ ಸೆಟ್ಟಿನ ಆಟ ಬೆಂಗಳೂರಿಗರಿಗೆ ವಿಶಿಷ್ಟ ಅನುಭವವನ್ನೊದಗಿಸಿತು. ವಿಶ್ವಾಸ ಇಟ್ಟು ಬಂದವರ ನಿರೀಕ್ಷೆಯನ್ನು ಈಡೇರಿಸಿದ ಸಾರ್ಥಕ ಭಾವ ಗೋವಿಂದಣ್ಣ ಬಳಗಕ್ಕೆ ಬಂದರೆ ಅಶ್ಚರ್ಯ ಪಡಬೇಕಿಲ್ಲ. ಶ್ರೀ ಮಹಾಗಣಪತಿ ಮಂಡಳಿಯ ಇಪ್ಪತೊಂಬತ್ತು ವರ್ಷದ ಸೇವೆ ಅತ್ಯಂತ ಶ್ಲಾಘನೀಯ ಎನ್ನಬೇಕು.  ಕೇವಲ ಬೆಂಗಳೂರಿಗಷ್ಟೇ ಏಕೆ ಕರ್ನಾಟಕಕ್ಕೇ ಮೀಸಲಾಗಿಸದೆ  ಅನ್ಯ ಪ್ರಾಂತ್ಯಕ್ಕೂ ವಿಸ್ತರಿಸಿದ  ಈ ಕಾರ್ಯಕ್ಕೆ ಬಹು ಪರಾಕ್ ಎನ್ನದೇ ಇದ್ದರೆ ಅದು ಯಕ್ಷಗಾನ ಅಭಿಮಾನವಾಗುವುದಿಲ್ಲ.  ನಿಜಕ್ಕೂ ಈ ತಂಡದ ಪ್ರದರ್ಶನದ ದರ್ಶನವಾಗುವಾಗ ಅಭಿಮಾನ ನೂರ್ಮಡಿಸುತ್ತದೆ. ನಿಡ್ಲೆ ಗೋವಿಂದ ಭಟ್ಟ ಸರ್ವಾಂಗೀಣ ಸೇವೆಗೆ  ಪ್ರಾಮಾಣಿಕವಾಗಿ ಡಾಕ್ಟರೇಟ್ ಸಲ್ಲಬೇಕು.  ಆಟ ನೋಡಿ ಹೊರಬಂದಾಗ ’ಕಣ್ಣರಿಯದೇ ಇದ್ದರೂ ಕರುಳರಿಯದೇ ಇದ್ದೀತೆ” ಎಂದು   ಭಾವಿಸಿ ಹೋಗುತ್ತದೆ.   


~ಯಕ್ಷಗಾನಂ ಗೆಲ್ಗೆ~