ಅಂತಹ ಸ್ವರ್ಣಯುಗದಲ್ಲಿ ಮೆರೆದಾಡಿದ ಹಲವು ಮೇಳಗಳಲ್ಲಿ ಶ್ರೀ ಮಹಾಮ್ಮಾಯಿ ಮೇಳ ಸುರತ್ಕಲ್ , ವಾಡಿಕೆಯಲ್ಲಿ ಸುರತ್ಕಲ್ ಮೇಳ.
ಬಹುಶ: ಅಂದಿನ ದಿನಗಳಲ್ಲಿ ಒಂದು ರೀತಿಯ ವೆತ್ಯಸ್ಥ ಸ್ಥಾನವನ್ನು ಹೊಂದಿದ್ದ ವಿಶಿಷ್ಟ ಮೇಳ. ಯಾವುದೇ ಪ್ರಸಂಗವಾದರೂ (ಪುರಾಣಿಕ , ಸಾಮಾಜಿಕ ,ತುಳು ) ತನ್ನದೇ ರೀತಿಯಲ್ಲಿ ಪ್ರದರ್ಶನ ಕೊಡುತ್ತಿದ್ದ ಮೇಳ. ಇದಕ್ಕೆ ಕಾರಣ ಅದರಲ್ಲಿ ಇದ್ದ ಹಲವು ಮಹಾನ್ ಕಲಾವಿದರುಗಳು. ಹಿಮ್ಮೇಳ ವಾದಕರು. ಶೇಣಿ, ತೆಕ್ಕಟ್ಟೆ, ಕೊಕ್ಕಡ , ಜೋಗಿ ಹೀಗೆ ಕಲಾವಿದರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಂದಿಗೂ ನಾನು ರೋಮಾಂಚಿತನಾಗುವುದು ಪದ್ಯಾಣ ಗಣಪಣ್ಣನ ಇಂಪಾದ ಪದಗಳ ನೆನಪಿನ ಸುರುಳಿ ಬಿಚ್ಚಿದಾಗ. ಕೆಲವು ಸಲವಂತೂ ನಮ್ಮೂರಿಂದ ದೂರವಿರುವ ಉದ್ಯಾವರ ಮಾಡ , ಕುಂಬಳೆ ಇನ್ನು ದೂರವೆಂದರೆ ಮಂಗಳೂರು ಹೀಗೆ ಸುರತ್ಕಲ್ ಮೇಳದ ಪ್ರಧರ್ಶನಕ್ಕೆ ತವಕದಿಂದ ಧಾವಿಸುತ್ತಿದ್ದೆ.ಕೆಲವೊಂದು ಆಟಗಳು ಇನ್ನು ನನ್ನ ಮನಸಲ್ಲಿ ಹಸಿರನ್ನು ಕಳೆಯದೆ ಹಾಗೆ ನೆನಪಿನ ಹೂರಣವನ್ನು ನೀಡುತ್ತಾ ಬಂದಿದೆ. ಒಂದು ಕಾಲದಲ್ಲಿ ಪೂರ್ವ ರಂಗದ ದ್ವಿತೀಯಾರ್ಧಕ್ಕೆ "ಚಿಕ್ಕ ಪ್ರಾಯದ ಬಾಲೆ ಚದುರೆ..." ಎಂದು ಆಲಾಪಿಸುತ್ತಿದ್ದ ಗಣಪ್ಪಣ್ಣ ಗಡಸು ಹಾಗು ಇಂಪು ಎರಡನ್ನೂ ಬೆರೆಸಿ ಪದ ಹೇಳುತ್ತಿದ್ದ ರೀತಿ ಬಾಲಕನಾದ ನನ್ನನ್ನು ಪುಳಕಿತನಾಗಿ ಮಾಡುತ್ತಿತ್ತು. ಬಲಿಪ್ಪಜ್ಜನ ನಂತರದ ಸ್ಥಾನದಲ್ಲಿ ಭದ್ರವಾಗಿ ನನ್ನನ್ನು ಆವರಿಸಿದ ಈ ಮಹಾನ್ ಕಲಾವಿದನ ಬಗ್ಗೆ ಅಂದಿನ ಕೆಲವು ಆಟಗಳ ನೆನಪಿನ ಸುರುಳಿಗಳು ಜತೆಯಾಗಿ ಸೇರಿಕೊಂಡಿವೆ.
ಅದೊಂದು ಆಟ.. ಶನೀಶ್ವರ ಮಹಾತ್ಮೆ.. ಶೇಣಿಯವರ ವಿಕ್ರಮಾದಿತ್ಯ. ಕೊಕ್ಕಡ ಈಶ್ವರ ಭಟ್ಟರ ಆಲೋಲಿಕೆ ಜತೆಯಾಗಿ ಗಣಪಣ್ಣನ ಭಾಗವತಿಕೆ.. ಶೇಣಿ ಅಜ್ಜ ಅವರದೇ ಸ್ಥಾಯಿಯಲ್ಲಿ ಇವರೊಂದಿಗೆ ಒಂದೆರಡಾದರೂ ಪದಕ್ಕೆ ಧ್ವನಿ ಸೇರಿಸದೆ ಇರುತ್ತಿರಲಿಲ್ಲ. ಬಹುಶ ಅವರ ಸಹಜ ಶೈಲಿಯೋ ನಾನಂತೂ ಪದ್ಯಾಣರ ಸ್ವರದಿಂದ ಪ್ರೇರಿತರಾಗಿ ಹಾಡುತ್ತಾರೆಂದೇ ತಿಳಿದಿದ್ದೆ. ಆದಿನದ ಶನೀಶ್ವರ ಮಹಾತ್ಮೆ ಅದ್ಭುತವಾಗಿತ್ತು.ಶೇಣಿಯವರೊಂದಿಗಿನ ಇವರ ಭಾಗವತಿಕೆ ಯಕ್ಷಗಾನ ಕಲಾರಸಿಕರಿಗೆ ಒಂದು ರಸದೌತಣ. ಶೇಣಿಯ ಆತ್ಮ ಸ್ವರವೇನೋ ಇವರ ಕಂಠ ಎಂದು ಅನ್ನಿಸಿಬಿಡುತ್ತದೆ. ಮುಂಜಾವಿನ ಪದ್ಯಾಣರ ದೀಪಕ ರಾಗದ ಪದವಂತೂ ಇನ್ನೂ ಮೆಲುಕು ಹಾಕಿಸುತ್ತದೆ. ಬಾಯರಿನಲ್ಲಿ ಆಟವಾದರೆ "ಎಂಗಳ ಗಣಪ್ಪ.." ಅಂತ ಬರುವ ಹಿತೈಷಿಗಳ ಸಂಖ್ಯೆಯೂ ಬಹಳವಾಗಿತ್ತು. ಅದೂ ಒಂದು ಕಾಲ.
ಬಹುಷಃ ಅಗರಿಯ ನಿವೃತ್ತಿಯ ನಂತರ ಪೂರ್ಣವಾಗಿ ಮೇಳದ ಚುಕ್ಕಾಣಿಯನ್ನು ಹಿಡಿದ ಗಣಪಣ್ಣ ಎರಡನೇ ಭಾಗವತರಾಗಿ ವೇದಿಕೆಯೇರ ತೊಡಗಿದಾಗ ನನ್ನಂತಹ ಅಭಿಮಾನಿಗಳು ...ರಾತ್ರೆ .ಅದೇ ಸಮಯಕ್ಕೆ ಆಟಕ್ಕೆ ಆಗಮಿಸಲಾರಂಭಿಸಿದ್ದು ಕೇವಲ ಇವರ ಪದ ಕೇಳುವ ತವಕವಲ್ಲದೆ ಮತ್ತೇನೂ ಅಲ್ಲ. ಮನೆಯಲ್ಲಿ ಒಂದು ನಿದ್ದೆ ಮಾಡಿ ಸರಿಯಾಗಿ ರಾತ್ರಿ ಒಂದು ಗಂಟೆಗೆ ಎದ್ದು ಬೈಕು ತೆಕ್ಕೊಂಡು ಆಟಕ್ಕೆ ಹೋದ ಸಂದರ್ಭಗಳು ನೆನಸುವಾಗ ಛೇ... ಆ ಕಾಲ ಕಳೆದು ಹೋಯಿತೆ ಅನ್ನಿಸಿದ್ದಿದೆ.
ಅತ್ಯಂತ ಉಚ್ಚ ಸ್ಥಾಯಿಯ ಕಂಠ ಅಷ್ಟೇ ಸಲೀಸಾಗಿ ಆಕರ್ಷಕವಾಗಿ ಹಾಡುತ್ತಿದ್ದ ರೀತಿ ಸಂಪ್ರದಾಯಿಕವೋ ನವ್ಯವೋ ಎಲ್ಲವನ್ನೂ ಜತೆಯಲ್ಲೇ ಮೇಳೈಸಿಕೊಂಡು ಬಹು ಬೇಗನೆ ಜನಮಾನಸವನ್ನು ಗೆದ್ದುಬಿಟ್ಟ ಪ್ರತಿಭೆ ಇವರದ್ದು. ಹಲವು ಹಿರಿಯಭಾಗವತರ ಸಮರ್ಥ ಶೈಲಿಯನ್ನು ಇವರು ಕರಗತ ಮಾಡಿಕೊಂಡು ತನ್ನದೇ ರೀತಿಯಲ್ಲಿ ಪ್ರಸ್ತುತಪಡಿಸುವ ರೀತಿ ತುಂಬಾ ಕುಷಿಕೊಡುತ್ತಿತ್ತು. ತೆಂಕಬೈಲು, ಬಲಿಪ , ಕಾಳಿಂಗ ನಾವಡ ಹೀಗೆ ಎಲ್ಲ ಭಾಗವತರ ಶೈಲಿಯಲ್ಲಿ ಹಾಡುತ್ತಿದ್ದರೂ.ಇವರನ್ನು ಅಭಿಮಾನಿಗಳು ಮೆಚ್ಚುವುದು ಇವರ ಅಗರಿ ಶೈಲಿಗೆ. ಹಿರಿಯ ಭಾಗವತ ಅಗರಿ ಶ್ರೀನಿವಾಸ ಭಾಗವತರ ಶೈಲಿಯಲ್ಲಿ ಇವರಷ್ಟು ಸುಂದರವಾಗಿ ಹಾಡಬಲ್ಲ ಭಾಗವತ ಇನ್ನೊಬ್ಬನಿಲ್ಲ ಎಂದೇ ನನ್ನ ಅಭಿಮತ.ಯಾವುದೇ ಶೈಲಿಯನ್ನು ಸುಲಭವಾಗಿ ಕರಗತ ಮಾಡುವ ಇವರ ಪ್ರತಿಭೆ ಮತ್ತು ಇವರದೇ ಆದ ಒಂದು ಪದ್ಯಾಣ ಶೈಲಿ ಬಹುಶ ಇವರ ಭಾಗವತಿಕೆ ಎಂದರೆ ಅದೊಂದು ಎಲ್ಲ ಸರಕುಗಳಿರುವ ಬ್ರಿಹತ್ ಮಳಿಗೆಯಂತೆ. ನಿಮ್ಮನ್ನು ಯಾವುದೊ ಸ್ವರ ಸಾಮ್ರಾಜ್ಯ ದರ್ಶನ ಮಾಡಿಸಬಲ್ಲುದು.
ನನ್ನ ಹಲವು ಯಕ್ಷಗಾನ ಧ್ವನಿಮುದ್ರಿಕೆ ಸಂಗ್ರಹಗಳಲ್ಲಿ ಇವರದ್ದೇ ಅದ ಹಳೆಯ ಯಕ್ಷಗಾನ ಪದಗಳನ್ನು ಕೇಳಿದರೆ , ಏರಿದಷ್ಟು ಏರಿಕೊಂಡು ಹೋಗುವ ಇವರ ಸ್ವರ ಮಾಧುರ್ಯ ಅಂತೆ ಸಲೀಸಾಗಿ ಹಾಡುವ ಪದಗಳನ್ನು ಯಕ್ಷಗಾನ ಪ್ರೇಮಿಯನ್ನು ಹುಚ್ಚು ಹಿಡಿಸಿಬಿಡುತ್ತದೆ. ಸುಮಾರು ೧೮-೨೦ ವರ್ಷ ಮೊದಲು ಹೊರಬಂದ ಕರ್ಣಾವಸಾನ ಯಕ್ಷಗಾನ ಧ್ವನಿ ಮುದ್ರಿಕೆಯ ಇವರ ಪದಗಳು ಇಂದಿಗೂ ಕೇಳಿದಷ್ಟು ಕೇಳಿಸುವಂತೆ ಮಾಡುತ್ತವೆ.ಏನು ಸಾರಥಿ... ,ಎಲೆ ಭಾನು ಜಾತ......., ಎಲೆ ಪಾರ್ಥ...ನೀ ಕೇಳು..., ಎನ್ನ ಕೊಂದವ ಕೃಷ್ಣನೂ ಎಂಬ ಈ ಪದಗಳು.ಈಗಲೂ ಸಾಧ್ಯವಿದ್ದರೆ ಕೇಳಿ ನೋಡಿ ಅದ್ಭುತ ಎನ್ನಬಹುದಾದ ಸ್ವರಮಾಧುರ್ಯದ ಪದಗಳು. ಕರ್ಣಾವಸಾನದ ಪದಗಳು ಒಂದು ರೀತಿಯಲ್ಲಿ ಇವರ trumph card ಪದಗಳು.ಇವರ ಹಳೆಯ ಕೆಲವು ಪದಗಳನ್ನು ಕೇಳಿ ಆ ಗುಂಗಿನಿಂದ ಹೊರಬರುವುದು ನಿಜಕ್ಕೂ ತುಂಬಾ ಕಷ್ಟ.
ಇವರ ಶೈಲಿಗೆ ಶರೀರ ಶಕ್ತಿ..(physical fitness) ತುಂಬಾ ಅಗತ್ಯವಿರುವುದರಿಂದ ಕೈಕೊಡುವ ಇವರ ಆರೋಗ್ಯ ನಮ್ಮ ಪಾಲಿಗಾದ ದೊಡ್ಡ ನಷ್ಟ ಎಂದೇ ಹೇಳಬಹುದು . ಹೀಗಿದ್ದರೂ ಅಪಾರ ಅಭಿಮಾನಿಗಳನ್ನು ಹೊಂದಿದ ಇವರ ಪ್ರತಿಬೆ ಸಾಮಾನ್ಯವೇನೂ ಅಲ್ಲ. ಮೊದಲಿನಂತೆ ಸ್ವರವೇರಿಸಿ ಹಾಡುವಲ್ಲಿ ದೈಹಿಕ ಆರೋಗ್ಯ ಕೈಕೊಡುತ್ತದೆ ಎಂದು ಇವರೇ ಪ್ರಾಮಾಣಿಕವಾಗಿ ಹೇಳುವಾಗ ಅಭಿಮಾನಿಗಳ ಹೃದಯ ಭಾರವಗಿಬಿದುತ್ತದೆ. ಅಂತಹ ಚುಂಬಕ ಶಕ್ತಿ ಇವರ ಭಾಗವತಿಕೆಯಲ್ಲಿದೆ. ಹತ್ತು ಹಲವು ರಾಗಗಳನ್ನು ಯಕ್ಷಗಾನಕ್ಕೆ ಅಳವಡಿಸಿದ ಇವರ ಸೃಜನ ಶೀಲತೆ ಮತ್ತು ಪ್ರತಿಭೆ ನಿಜಕ್ಕೂ ಅಭಿಮಾನಿಗಳಲ್ಲಿ ಪುಳಕವನ್ನುಂಟುಮಾಡುತ್ತವೆ.