"ಇದು ವಿಮರ್ಶೆಯಲ್ಲದ ಚಿಂತನ"

Tuesday, January 20, 2015

ಅಮೃತ ಭವನ



ಜನ ಜೀವನದಲ್ಲಿ ಸಂಸ್ಕೃತಿ ಜೀವಂತವಾಗಿ ಇದೆ ಎಂದಾದರೆ ಅಲ್ಲಿ ಕಲೆಯೂ ತನ್ನ ಪ್ರಭಾವವನ್ನು ಬೀರಿ ಬೆಳೆದಿದೆ ಎಂದರ್ಥ. ಕಲೆಗೂ ಜನ ಜೀವನಕ್ಕೂ, ಆ ಜೀವನವು ಬಿಂಬಿಸುವ ಸಂಸ್ಕೃತಿಗೂ ಅವಿನಾಭಾವ ಸಂಬಂಧ. ಅದಕ್ಕಾಗಿ ಕಲೆಯನ್ನು ಜನಜೀವನದ ಕನ್ನಡಿ ಎಂದು ಕರೆಯುವುದು.  ಸಂಸ್ಕೃತಿಯ ಬೇರುಗಳು ಜನ ಜೀವನದಲ್ಲಿ ವಿಶಾಲವಾಗಿಯೂ ಆಳವಾಗಿಯೂ ಹಬ್ಬಿರುತ್ತದೆ. ಕಲೆ,  ಆ ಬೇರಿಗೆ ಜೀವ ಜಲದಂತೆ.  ಒಬ್ಬ ಕಲಾವಿದ ಸಮಾಜದಿಂದ ಗುರುತಿಸಲ್ಪಟ್ಟಾಗ, ಆತನ ಕಲೆಯನ್ನು ಗುರುತಿಸಿದಂತೆ. ಆ ಕಲಾವಿದನನ್ನು ಅಂಗೀಕರೀಸಿದಾಗ ಆ ಕಲೆ ಆತನಿಂದ ಜೀವಸೆಲೆಯನ್ನು  ಹೀರಿಕೊಂಡಿದೆ ಎಂದು ಭಾವಿಸಬಹುದು.   ಕಲೆ ಗೌರವಿಸಲ್ಪಟ್ಟಾಗ ಸಂಸ್ಕೃತಿಯೂ ಗೌರವಿಸಲ್ಪಟ್ಟಂತೆ. ಕಲಾವಿದನಿಂದ ಕಲೆ ಪ್ರಕಾಶಿಸಿದಂತೆ ಆ ಮುಖೇನ ಸಂಸ್ಕೃತಿಯ ದರ್ಶನವೂ ಸಾಧ್ಯವಾಗುತ್ತದೆ. ಅದರಲ್ಲೂ ಪರಂಪರೆಯಿಂದ ಹುಟ್ಟಿಕೊಂಡು ಬೆಳೆದು ಬಂದ ಕಲೆಯಲ್ಲಿ ಸಂಸ್ಕೃತಿಯ ಪ್ರಭಾವೇ ಪ್ರತಿಫಲಿಸಲ್ಪಡುತ್ತದೆ. ಸಂಸ್ಕೃತಿಯ ಸುಸ್ಥಿತಿಯಲ್ಲಿ ಕಲಾವಿದನ ಅಸ್ತಿತ್ವವೂ  ಬಹಳ ಪ್ರಧಾನವಾಗಿರುತ್ತದೆ. ಹಾಗಾಗಿ ಕಲೆಯೊಂದಿಗೆ ಕಲಾವಿದನನ್ನು ಗೌರವಿಸಿದಾಗ ಸಂಸ್ಕೃತಿಯ ಜೀವಂತಿಕೆಯನ್ನೂ ಅಲ್ಲಿ ಕಾಣಬಹುದು. ಶುದ್ದ ಸಂಸ್ಕೃತಿ ಎಂಬುದು ಉಜ್ವಲ ಜನಜೀವನದ ಸಂಕೇತ.
ಕರ್ನಾಟಕದ ಕರಾವಳಿಯ ಜನಪ್ರಿಯ ಕಲೆ ಯಕ್ಷಗಾನ. ಇಲ್ಲಿನ ಸಂಸ್ಕೃತಿಯ ಇನ್ನೊಂದು ಮುಖವಾದ ಯಕ್ಷಗಾನ ಗೌರವಿಸಲ್ಪಟ್ಟು ಅಭಿಮಾನದಿಂದ ಕಂಡಾಗ ಶುದ್ದ ಸಂಸ್ಕೃತಿಯ ಅಭಿಮಾನವೂ ವ್ಯಕ್ತವಾಗುತ್ತದೆ. ಕಲೆಯನ್ನು ಗೌರವಿಸುವುದು ಕಲಾವಿದನನ್ನು ಗೌರವಿಸುವುದೂ ಸಂಸ್ಕೃತಿಯ ಇನ್ನೊಂದು ಅಂಗವಾಗಿರುತ್ತದೆ.

ಸಂಸ್ಕೃತಿ ಮತ್ತು ಕಲೆಯ ಅವಿನಾಭಾವ ಸಂಬಂಧಂತೆ ಯಕ್ಷಗಾನದಲ್ಲೂ ಒಂದು ಅವಿನಾಭಾವ ಸಂಬಧವನ್ನು ಕಾಣಬಹುದು.  ಯಕ್ಷಗಾನದ ಹಲವು ಕಲಾವಿದರನ್ನು ಕಂಡಾಗ ಯಕ್ಷಗಾನದ ಸ್ವರೂಪವನ್ನೇ ಕಂಡಂತೆ ಭಾಸವಾಗುತ್ತದೆ. ಕಲೆಗೂ ಕಲಾವಿದನೀಗೂ ಇರುವ ಅವಿನಾಭಾವ ಸಂಭಂಧ ಅಂತಹದು . ಅಂತಹ ಕಲಾವಿದರಲ್ಲಿ ಹಿರಿಯ ಭಾಗವತ ಶ್ರೀ ಬಲಿಪ ನಾರಾಯಣ ಭಾಗವತರು ಅಗ್ರಗಣ್ಯರು.  ಪರಂಪರೆಯಿಂದ ಬೆಳೆದು ಬಂದ ಕಲೆ ಯಕ್ಷಗಾನದಲ್ಲಿ ಅದೇ ಪರಂಪರೆಯ ಹಾಡುಗಾರಿಕೆಯಿಂದ ಗುರುತಿಸಲ್ಪಡುವವರು ಬಲಿಪ್ಪರು. ಇವರು ಇದ್ದಲ್ಲಿ ಸೂಕ್ಷ್ಮವಾಗಿಯಾದರೂ ಯಕ್ಷಗಾನದ  ವಾತಾವರಣ ನಿರ್ಮಾಣವಾಗಿಬಿಡುತ್ತದೆ. ಯಕ್ಷಗಾನವೂ ವ್ಯಕ್ತಿಯೂ ಅನ್ವರ್ಥವಾಗಿ ಬೆಳೆದ ಬಗೆ ಇದು.  ಯಕ್ಷಗಾನವನ್ನು ಅಭಿಮಾನದಿಂದ ಅಪ್ಪಿಕೊಂಡಂತೆ ಅಭಿಮಾನಿಗಳು ಇವರ ಭಾಗವತಿಕೆಯನ್ನು ಒಂದರ್ಥದಲ್ಲಿ ತಬ್ಬಿಕೊಂಡಿದ್ದಾರೆ ಅಂತಲೇ ಹೇಳಬಹುದು. ಈ ಅಭಿಮಾನದ ಸಂಕೇತವೆಂಬಂತೆ ಅಭಿಮಾನಿಗಳೆಲ್ಲರೂ ಸೇರಿ  ತಮ್ಮ ಅಭಿಮಾನದ ದ್ಯೋತಕವನ್ನು ಶ್ರೀಬಲಿಪ್ಪರಿಗೆ ಅತ್ಯಂತ ವಿಶಿಷ್ಟವಾಗಿ ಸಲ್ಲಿಸಲಿದ್ದಾರೆ.
ಬಲಿಪ್ಪರ ನಿವಾಸದ ಮಗ್ಗುಲಲ್ಲೇ ತಲೆ ಎತ್ತಿ ನಿಂತಿದೆ ಬಲಿಪ ಅಮೃತ ಭವನ. ಬಲಿಪ ಎಂಬುದು ಯಕ್ಷಗಾನಕ್ಕೆ ಅಮೃತ ಸದೃಶವಾದಂತಹ ಹೆಸರು. ಯಕ್ಷಗಾನದಲ್ಲಿ ಬಲಿಪ ಎಂಬ ಹೆಸರೇ ಒಂದು ಪರಂಪರೆಯನ್ನು ಸಾರುತ್ತದೆ. ಯಕ್ಷಗಾನದಂತಹ ಪರಂಪರೆಯ ಕಲೆಯಲ್ಲಿ ಒಂದು ಪ್ರಾಚೀನ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ ಬಲಿಪ ಮನೆತನ. ಅದರಲ್ಲೂ ಈಗಿನ ಹಿರಿಯ ಬಲಿಪ ನಾರಾಯಣ ಭಾಗವತರು ಯಕ್ಷಗಾನದಲ್ಲಿ ಸರಿ ಸುಮಾರು ಒಂದು ಮನುಷ್ಯ ಜನ್ಮದ ಅವಧಿಯನ್ನು ಯಕ್ಷಗಾನಕ್ಕೆ ಮೀಸಲಾಗಿರಿಸಿ ಅದನ್ನೇ ಬದುಕು ಎಂದು ತೋರಿಸಿಕೊಟ್ಟವರು. ಯಕ್ಷಗಾನದಲ್ಲಿ ಆಗಲಿ ಅಥವಾ ಇತರ ಯಾವುದೇ ಪ್ರಾಕಾರಗಳಲ್ಲಾಗಲೀ ಒಬ್ಬ ಕಲಾವಿದ ಹೇಗಿರಬೇಕು ಎಂಬುದನ್ನು ತನ್ನ ಸಾಧನೆಯಿಂದಲೂ ತನ್ನ ವೈಯಕ್ತಿಕ ನಿಸ್ವಾರ್ಥ ಗುಣಗಳಿಂದಲೂ ತೋರಿಸಿಕೊಟ್ಟವರು ಬಲಿಪ್ಪರು. ಯಕ್ಷಗಾನದಲ್ಲಿ ಹಲವಾರು ಬದಲವಾಣೆಗಳು ಆವಿಷ್ಕಾರಗಳು ಬೆಳೆದು ಬಂದಿರಬಹುದು. ಕಲೆ ಮಾತ್ರವಲ್ಲ ಕಲಾವಿದರು ಮತ್ತು ಅವರ ಶೈಲಿಗಳು ವೈಯಕ್ತಿಕವಾದ ಗುಣ ಸ್ವಭಾವಗಳು ಬದಲಾವಣೆ ಕಂಡಿರಬಹುದು. ಆದರೆ ಬಲಿಪ್ಪರು ಮಾತ್ರ ಬದಲಾಗದೇ ವಯಸ್ಸು ಒಂದು ಬಿಟ್ಟರೆ ಅದೇ ಬಲಿಪ್ಪರಾಗಿ ಇಂದಿಗೂ ಉಳಿದು ಬಿಟ್ಟಿದ್ದಾರೆ. ಮುಖದಲ್ಲಿ ಕಾಣುವ ಮುಗ್ಧ ನಗು ಇದೆಲ್ಲವನ್ನೂ ಸಾರಿ ಸಾರಿ ಹೇಳಿಬಿಡುತ್ತದೆ. ಇಂತಹ ಓರ್ವ ಮಹಾನ್ ಕಲಾವಿದನಿಗೆ ಅಭಿಮಾನಿಗಳು ಕೇವಲ ಅವರ ಮೇಲಿನ ಅಭಿಮಾನದಿಂದ ಮಾತ್ರವಲ್ಲ ಯಕ್ಷಗಾನದ ಮೇಲಿನ ಅಭಿಮಾನದಿಂದಲೂ ಒಂದು ಭವನ ನಿರ್ಮಾಣವನ್ನು ಗೈದು ತೋರಿಸಿದ್ದಾರೆ. ಇದೀಗ ಈ ಭವನ ಪೂರ್ಣಗೊಂಡು ಸಮರ್ಪಣೆಗೆ ಸಿದ್ದವಾಗಿ ಎದ್ದುನಿಂತಿದೆ. ಸುತ್ತಲೂ ತೋಟ ಗುಡ್ಡದ ಹಸಿರಿನ ನಡುವೆ ಶುದ್ದ ಗುರುಕುಲದ ಸ್ಮೃತಿಯನ್ನು ಮೂಡಿಸುತ್ತಾ ಈ ಭವನ ಎದ್ದು ನಿಂತಿದೆ. ಇದಕ್ಕಾಗಿ ಅನುದಾನವನ್ನು ಕೊಡುಗೆಯನ್ನು ನೀಡಿದಂತಹ ಯಕ್ಷಗಾನ ಮಿತ್ರರಲ್ಲಿ ಅಭಿಮಾನಿಗಳಲ್ಲಿ  ಇದೀಗ ಒಂದು ಧನ್ಯತಾಭಾವ.

ಯಕ್ಷಗಾನದಲ್ಲಿ ಹಲವು ರೀತಿಯ ಸನ್ಮಾನ ಪುರಸ್ಕಾರಗಳು ಸಂದಿರಬಹುದು, ಆದರೆ ಓರ್ವ ಕಲಾವಿದನಿಗೆ ಈ ರೀತಿಯ ಒಂದು ಪುರಸ್ಕಾರ ಸಲ್ಲುವುದು   ಇತಿಹಾಸದಲ್ಲಿ ಇದು ಮೊದಲು ಎನ್ನಬಹುದು.  ಮಾತ್ರವಲ್ಲ ಸನ್ಮನಸ್ಸಿನ ವ್ಯಕ್ತಿಯಾಗಿ ಶಕ್ತಿಯಾಗಿ ಬಲಿಪ್ಪರಂತಹ ಒಬ್ಬ ಪರಿಪೂರ್ಣ ಕಲಾವಿದರು, ಇದಕ್ಕೆ ಸಂಪೂರ್ಣ ಅರ್ಹರೆಂಬುದು ಅತಿಶಯದ ಮಾತಲ್ಲ. ಹಾಗಾಗಿ ಯಾವುದೇ ಹಿಂಜರಿಕೆ ಇಲ್ಲದೆ ಇದಕ್ಕೆ ಸಂಪನ್ಮೂಲ ಕ್ರೋಢೀಕರಿಸಲ್ಪಟ್ಟಿದೆ. ಇದಕ್ಕಾಗಿ ಇದರ ಸಂಚಾಲಕ  ಸಮಿತಿ ಮತ್ತು ಬಲಿಪ ಮಿತ್ರವೃಂದ ಬಹಳಷ್ಟು ಶ್ರಮವಶಿಸಿ ಮುತುವರ್ಜಿಯಿಂದ ದುಡಿದಿದೆ. ಯಕ್ಷಗಾನದಲ್ಲಿ ಕ್ರಿಯಾತ್ಮಕವಾದ ಒಂದು ಗೌರವ ಹೇಗೆ ಸಲ್ಲಿಸಬಹುದು ಎಂಬುದಕ್ಕೆ ಇದು ಉತ್ತಮ ನಿದರ್ಶನವಾಗಬಲ್ಲುದು.
ಆಡಂಬರದ ಸನ್ಮಾನ ಪುರಸ್ಕಾರಗಳಿಗಿಂತ ಇಂತಹ ಕ್ರಿಯಾತ್ಮಕವಾದ ಸನ್ಮಾನ ಸಲ್ಲಬೇಕು. ಆಗ ಕಲಾವಿದನಿಗೂ ಆಮೂಲಕ ಕಲೆಗೂ ನೈಜ ರೀತಿಯ ಅಭಿಮಾನದ ಸಲ್ಲಿಕೆಯಾಗುತ್ತದೆ. ಸಾವಿರ ಸಾವಿರ ಖರ್ಚು ಮಾಡುವುದು ಹಿರಿಮೆಯಲ್ಲ. ಅದರ ವಿನಿಯೋಗ ಸಮರ್ಪಕವಾಯಿತೇ ಎಂಬುದು ಗಮನಾರ್ಹ ಸಂಗತಿ. ಅದ್ಧೂರಿಯ ಸಮಾರಂಭ ಮಾಡಿ ಒಂದಷ್ಟು ಆಡಂಬರದ ಅಬ್ಬರವನ್ನು ಪ್ರದರ್ಶಿಸಿ ಕೊನೆಯಲ್ಲಿ ಕಲಾವಿದನ ಜೇಬಿಗಿಳಿಯುವುದು ಬೆರಳೆಣಿಕೆ ಮಾತ್ರ. ಆದರೆ ಇಲ್ಲಿ ಅಭಿಮಾನ ಶಾಶ್ವತವಾಗಿ ನೆಲೆಯೂರುವಂತೆ ಸುಂದರ ಭವನ ನಿರ್ಮಾಣವಾಗಿ ಇದೇ ಪೆಬ್ರವರಿ ಒಂದನೇ ತಾರೀಕಿಗೆ  ಸಮರ್ಪಣೆಗೊಳ್ಳಲಿದೆ. ಯಕ್ಷಗಾನ ಅಭಿಮಾನಿಗಳಿಗೆ ಇದೊಂದು ಸಂತಸದ ಸಂಭ್ರಮದ ವಿಷಯ. ಆಡುವ ಮಾತಿಗಿಂತ ಆಡದೇ ಇರುವ ಮಾತು ಹೆಚ್ಚು ಪರಿಣಾಮಕಾರಿಯಾಗಿರುವಂತೆ, ಭಾಗವತರ ಮುಖವನ್ನೊಮ್ಮೆ ನೋಡಿದರೆ ಈ ಮಾತಿನ ಸತ್ಯ ಅರಿವಾಗುತ್ತದೆ. ಧನ್ಯತೆಯ ಕಿರುನಗೆಯೊಂದು ಅಲ್ಲಿ ಮೂಡುತ್ತದೆ. 
ಭಾಗವತ ಶಿರೋಮಣಿಯ ಈ ಅಮೃತ ಭವನವು ಯಕ್ಷಗಾನಕ್ಕೆ ಅಮೃತ ಸಿಂಚನವನ್ನು ನೀಡಲಿ ಎಂದು ಹಾರೈಸುತ್ತಾ,  ದೇಣಿಗೆಯನ್ನು ನೀಡಿ ಪ್ರೋತ್ಸಾಹಿಸಿದ ಮಿತ್ರರು, ಯಕ್ಷಗಾನ ಅಭಿಮಾನಿಗಳು, ಇದಕ್ಕಾಗಿ ಎಲೆ ಮರೆಯ ಕಾಯಿಯಂತೆ ನಿಸ್ವಾರ್ಥವಾಗಿ ದುಡಿದವರು, ಹೀಗೆ ಪ್ರತಿಯೊಬ್ಬರಿಗೂ ಈ ಮೂಲಕ ಹೃತ್ಪೂರ್ವಕ ಕೃತಜ್ಞತೆಗಳು.

ಯಕ್ಷಗಾನಂ ಗೆಲ್ಗೆ

Wednesday, January 7, 2015

ಶರತಲ್ಪ ಶಯನ..ಭೀಷ್ಮ


ಹಣೆಯ ರಕುತವೊನೊರಸಲೀಪರಿ |
ರಣದಿ ಸಂದುದು ದಿವಸ ಒಂಭ |
ತ್ತನೆಯ ನಿಶಿಯಲಿ ಭೀಷ್ಮನುರುಬೆಗೆ ಯಮಜ ಚಿಂತಿಸಿದ ||

          ಒಂಭತ್ತನೆಯ ದಿನದ ಯುದ್ದ ಇಂದಿಗೆ ಸಂದು ಹೋಯಿತು. ಇನ್ನೆಷ್ಟು ದಿನ ಈ ಭೀಷ್ಮನ ಶರೀರ ದುಡಿದೀತು.   ಯುದ್ದಾರಂಭದ ಕೆಚ್ಚು ಛಲವಾದಿಯಂತೆ ಭೀಷ್ಮನಲ್ಲಿ ಉಳಿದುಬಿಟ್ಟಿತ್ತು.  ಇರುಳು ಬಿಡದಿಯ ಏಕಾಂತದಲ್ಲಿ ಭೀಷ್ಮ ಯೋಚಿಸುತ್ತಾನೆ. ಇನ್ನೆಷ್ಟು ದಿನ ಈ ಯುದ್ದ?  
“ಜಗದ ಕಲಿಗಳನುಳಿದು ತೊಗಲು ಸಡಲಿದ ಮುದುಕ’  ನೆಂದು ಜರೆದ ನಾಲಿಗೆ ಮೇಲೆಳದಂತೆ ಮಾಡುವ ಛಲದಿಂದಲೋ ಏನೋ ಯುದ್ದಾರಂಭದ ಶಪಥವನ್ನು ಅಕ್ಷರಶಃ ನಿಜವಾಗಿಸಿದ್ದ ಭೀಷ್ಮ. ಸುದರ್ಶನ ಗ್ರಹಣ ಪ್ರಕರಣದ ನಂತರ ಮತ್ತಷ್ಟು ವಿಜ್ರಂಭಿಸಿತು ಭೀಷ್ಮನ ಕೆಚ್ಚು. ಆದರೂ ತೃಪ್ತಿಯಾಗುತ್ತಿಲ್ಲ. ಇದು ಒಂದು ಅಪರಾಧೀ ಭಾವದ ಸಂಕೇತವೇಕೆ ಆಗಿರಬಾರದು. “ ಎನ ಮಾಡುವುದಿನ್ನು ಈ ಭೀಷ್ಮ ಸವರಿದನು” ತನ್ನ ಮೊಮ್ಮಗನ ಅಂತರಾಳದ ಧ್ವನಿ ಇರಬಹುದೇ?
 ತಮ್ಮ ಮರಣದ ಬಗ್ಗೆ ಅರಿವಿಲ್ಲದ ಅದೆಷ್ಟು ಮಂದಿ ಮುಕುಟ ಮರ್ದನರು ತಮ್ಮ ಕಿರೀಟವನ್ನು ಈ ಭೀಷ್ಮನ ಬಾಣಕ್ಕೆ ಮಾರಿಕೊಂಡರು? ಮರಣದ ಅರಿವಿಲ್ಲ ಎಂದರೆ ಸರಿಯೇ? ಯುದ್ಧಕ್ಕೆ ಮೊದಲೇ  ಭೀಷಣ ಪ್ರತಿಜ್ಞೆ ಯನ್ನು ಮೊಳಗಿಸಿದ್ದು ವೈರಿಪಾಳಯದ ಸಮಸ್ತರಿಗೂ ತಿಳಿದಿತ್ತು. ಆದರೂ,  ಪರಿಣಾಮದ ಅರಿವಿದ್ದರೂ ಬಲಿ ಪಶುಗಳಂತೆ ಭೀಷ್ಮನ ಇದಿರೇ ಮುಂದೊತ್ತಿ ಬಂದರಲ್ಲ? ಭೀಷ್ಮನ ಪ್ರತಿಜ್ಞೆಯ ಅರಿವಿಲ್ಲವೇ?    ಸಾಮಾರ್ಥ್ಯದ ಅರಿವಿಲ್ಲವೇ?  ಹೀಗಿದ್ದರೂ ಮುಂದೆ ಬಂದರಲ್ಲಾ? ಕ್ಷತ್ರಿಯನಿಗೆ  ಸಮರದ ಪ್ರೀತಿಯೂ ಮರಣದ ಪ್ರೀತಿಯೂ ಒಂದೇ.ಇವರೆಲ್ಲರ ಅಂತ್ಯವನ್ನು ಇಲ್ಲಿಯೇ ಕಂಡ  ಇಚ್ಛಾ ಮರಣಿಯಾದ ನನಗೇಕೆ ಹೀಗೆ?  ತಾನು ಬೇಕಾದಾಗ ಪಡೆದುಕೊಳ್ಳಬಹುದಾದ ನನ್ನ ಪಾಲು. ಎನಗೆ ತಂದೆ ಕೊಟ್ಟ ಪಾಲು ಎಂದರೆ ಅದೊಂದೇ....’ಇಚ್ಛಾ ಮರಣಿ’. ಆದರೂ ಆ ಪಾಲು ಇನ್ನೂ ಉಳಿಸಿಕೊಂಡು ಜೀವಂತವಾಗಿ ಉಳಿದುಕೊಂಡಿದ್ದೇನೆ ವೃದ್ಧ ಭೀಷ್ಮ . ಹಲವರು ಯೋಚಿಸಬಹುದು ಈ ಭೀಷ್ಮನಿಗೆ ಇನ್ನೂ ಸಾಕು ಎಂಬ ತೃಪ್ತಿ ಅದೇಕೆ ಕಾಣುವುದಿಲ್ಲ?  ಆದರೆ ಭೀಷ್ಮ ಯಾವುದರಲ್ಲಿ ತೃಪ್ತಿ ಕಾಣಬೇಕು?  ಈಗ ತೊಡಗಿಯಾಗಿದೆ ಇದನ್ನು ನಿಲ್ಲಿಸುವುದೆಲ್ಲಿ? ನಾಳೆ ಹತ್ತು ನಾಡಿದ್ದು ಮತ್ತೂ ಒಂದು. ಭೀಷ್ಮನಿಗೆ ನಿಲುಗಡೆಯೇ ಕಾಣುತ್ತಿಲ್ಲ. ಒಮ್ಮೆ ವಿರಮಿಸಿಬಿಡಬೇಕು ಅನ್ನಿಸಿದರೂ ಎಲ್ಲಿ ವಿರಮಿಸಲಿ? ಒಂದರ ಅಂತ್ಯದಲ್ಲಿ ಮತ್ತೊಂದರ ಆದಿ . ಕೊನೆಗೆ ಈ ಸೇನಾಪತಿತ್ವ..... ಹಿಡಿದಾಗಿದೆ ಬಿಟ್ಟರೆ?   ಬಿಟ್ಟರೆ ಬಿದ್ದು ನಾಶಹೊಂದುತ್ತದೆ. ಬಿಡದೇ ಇದ್ದರೆ ಕೈ ಸುಡುತ್ತದೆ. ಇದಕ್ಕೊಂದು ಅಂತ್ಯವನ್ನು ಕಾಣಲಾರದೆ ಭೀಷ್ಮ ವಿರಮಿಸಲಾರ. ಭೀಷ್ಮ ವಿರಮಿಸದೆ ಅಂತ್ಯವೂ ಕಾಣಲಾರದು.
ಇವರ ಬರವನು ಚರರು ಗಂಗಾ |
ಭವನಿಗರುಹಲು ಬಂದರೇ ಪಾಂ |
ಡವರು ಮರಣವ ತಂದರೇ ಕುರುರಾಯಗಕಟೆಂದ ||
ತವಕದಲಿ ಕರೆದಂತರಂಗದ |
ಭವನದಲಿ ಬೆಸಗೊಂಡ ರಿಪುಗಳ |
ನಿವಹಕೀ ರಾತ್ರಿಯಲಿ ಬಹುದನುಚಿತವು ನಿಮಗೆಂದ ||
ಅದೋ ಅದಾರು  ಪಾಂಡವರು ಇತ್ತ ಕಡೆಗೆ ಬಂದರೇ? ಆರಂಭದಲ್ಲಿ ಇರುಳು ಬಂದ ಸುಯೋಧನ ಒಂದು ಉರುಳನ್ನು ಭೀಷ್ಮನ ಕೊರಳಿಗೆ ಸುತ್ತಿದ. ಈಗ ಇದು ಇನ್ನೊಂದು ಉರುಳು ಇದ್ದರೂ ಇರಬಹುದು. ಅದೇ ಬಂದು ಬಿಟ್ಟರಲ್ಲ. ಬಂದರೇ ಪಾಂಡವರು. ತಂದರೇ ಮರಣವನು ಕೌರವನಿಗೆ. ಬಂದರೇ ಅದು ಈ ಅವೇಳೆಯಲ್ಲಿ. ಅದೂ ಧರ್ಮರಾಯನಂತಹವನು ಶತ್ರುಪಾಳಯದ ಸೇನಾಧಿಪತಿಯ ಶಿಬಿರಕ್ಕೆ ಕದ್ದು ಮುಚ್ಚಿ ಬರುವುದು ಎಂದರೇನು? ಅವನ ಹೆಸರೂ ಹಾಳು ಜತೆಗೆ ಈ ಭೀಷ್ಮನ ಪ್ರಾಮಾಣಿಕತೆ ಸಂಶಯಕ್ಕೆ ಎಡೆ ಮಾಡಿಕೊಡುವುದಲ್ಲ? ಪಾಂಡವರಿಗೆ ಏನೂ ಮಾಡುವುದಿಲ್ಲ ಎಂದು ಮೊದಲೆ ಹೇಳಿದವನು ನಾನು ಆದರೂ ಪಾಂಡವರು ಬರುತ್ತಿದ್ದಾರೆ. ಅದೂ ಶ್ರೀಕೃಷ್ಣನ ಜತೆಗೆ. ಬಂದರಲ್ಲ...ಬರಬೇಕು ಬರಬೇಕು. ಮಗೂ ಯುಧಿಷ್ಠಿರ..
ಶ್ರೀಕೃಷ್ಣ ಪಾಂಡವರೈವರಿಗೂ ಕಾಲಿಗೆರಗುವಂತೆ ಸನ್ನೆ ಮಾಡುತ್ತಿದ್ದಾನೆ. ವಿಚಿತ್ರ. ಶ್ರೀಕೃಷ್ಣನ ಯಾವ ವರ್ತನೆಗೆ ಅರ್ಥಕಲ್ಪಿಸುವುದು ಸಾಧ್ಯವಿಲ್ಲ. ಕಾಲಿಗೆರಗುವಂತೆ ಹೇಳುತ್ತಿದ್ದಾನಲ್ಲ. ಕೃಷ್ಣಾ ಏನಿದು ? ಮೊಮ್ಮಕ್ಕಳಿಗೆ ಕಾಲಿಗೆರಗುವಂತೆ ಆಜ್ಞಾಪಿಸುತ್ತಿರುವೆಯಲ್ಲ. ಮೊಮ್ಮಕ್ಕಳಿಗೆ ಅದರಲ್ಲು ಯುಧಿಷ್ಠಿರನಂತಹ ಒಬ್ಬ ಧರ್ಮಾತ್ಮನಿಗೆ ಅಜ್ಜನಿಗೆ ನಮಸ್ಕಾರ ಮಾಡುವಂತೆ ಹೇಳಬೇಕೆ?
ಮುರವಿರಾಮನ ಶ್ರೀಕರಾಂಘ್ರಿಗೆ |
ಶಿರವ ಚಾಚಲು ನೆಗಹಿ ಭೀಷ್ಮನ |
ಚರಣದಲಿ ಪಾಂಡವರ ಕೆಡಹಿಸು  ತಿರದೆ ನುಡಿದ ||
ಸ್ವಾಮಿ ಬಂದ , ನನ್ನ ದೇವ ಬಂದ, ಈ ಸಂದರ್ಭ ಇಷ್ಟು ಕಾಲದಲ್ಲಿಯೂ ನನಗೆ ಸಿದ್ಧಿಸಿರಲಿಲ್ಲ. ಮರವು ವಿಶಾಲವಾಗಿ ತನ್ನ ರೆಂಬೆಗಳನ್ನು ನಾಲ್ಕು ಕಡೆಗೆ ಚಾಚಿದ್ರು ಕೂಡ, ಸೂಕ್ಷ್ಮವಾಗಿ ಬುಡದ ಬೇರುಗಳನ್ನು ಜಲಾಶಯದ ಎಡೆಗೇ ಚಾಚಿಕೊಂಡೆ ಬೆಳೀತದೆ. ನನ್ನ ಜೀವನವೂ ಹಾಗೆ.  ಹೊರಗಿನಿಂದ ನಾನು ಕೌರವನ ಪಕ್ಷದಿಂದ ಹೋರಾಟಕ್ಕೆ ಬಂದವ, .  ಅಂದಿನಿಂದ ಇಂದಿನವರೆಗೂ ಪಾಂಡವರಿಗಿಂತ ಭಿನ್ನವಾದ ಸಂಸ್ಕೃತ್ರಿಯನ್ನುಳವರ ಒಡನಾಟದಲ್ಲಿಯೇ ಇದ್ದವ. ಆದರೂ ಅಂತರಂಗದ ನನ್ನ ಬೇರುಗಳು ಸಾಗರ ಶಯನನಾದಂತಹಾ ವಾಸುದೇವನಾದ ನಿನ್ನಲಿಯೇ ಹಾಸು ಹೊಕ್ಕಾಗಿ ಸೇರಿಕೊಂಡಿತ್ತು. ಅಲ್ಲಿದ್ದಂತಹ ಅನುಗ್ರಹವನ್ನು ಹೀರಿಯೇ ಭೀಷ್ಮ ಈವರೆಗೆ ಪ್ರಪಮ್ಚದಲ್ಲಿ ಹತ್ತು ಕಡೆಗೂ ತನ್ನ ವಿಕ್ರಮವನ್ನು ಚಾಚಿ ಉಳಿದಿದ್ದಾನೆ ಎಂಬುದು ಪ್ರಾಮಾಣಿಕವಾದ ನನ್ನ ಅನಿಸಿಕೆ. ಆದರೆ ನಾಲ್ಕು ಜನ ಕಾಣುವ ಹಾಗೆ ಅಲ್ಲದೇ ಇದ್ದರೂ ನನ್ನ ಆತ್ಮೀಯರಾದ ನಾಲ್ಕು ಜನ ಕಾಣುವಂತೆ ಒಮ್ಮೆ ನಾನಿದ್ದಲಿಗೆ ಸನ್ನಿಧಾನ ಬಂದು, ನಿಂದು ನನ್ನಿಂದ ಉಪಚಾರಗೊಂಡು ಆಮೇಲೆ ನನ್ನ ಸಾಷ್ಟಾಂಗ ಪ್ರಣಾಮವನ್ನು ಸ್ವೀಕರಿಸಿಕೊಂಡು ಒಂದು ಅನುಗ್ರಹ ಹಸ್ತವನ್ನು ತಲೇ ಮೇಲೆ ಇಟ್ಟುಕೊಂಡು ಒಂದು ಸುಖಾನುಭವಿಸಿದರೆ ಸಾಕು.  ಜೀವನ ಪೂರ್ಣವಿಕಾಸ ಆಯಿತು ಅಂತ ಎನಿಸಿದ್ದೇ,  ನನ್ನ ಹರಕೆ ನನ್ನ ಬಯಕೆ ಇಂದು ಪೂರ್ತಿಯಾಯಿತು. ಸಾರ್ವಜನಿಕರು ಕಾಣುವಂತೆ ಈ ವೃದ್ದ ಭೀಷ್ಮ ಕೃಷ್ಣನಿಗೆ ಸಾಷ್ಟಾಂಗ ಪ್ರಣಾಮ ಮಾಡುವುದಕ್ಕೆ ಯಾವುದೋ ನೈತಿಕತೆ ಅಡ್ಡ ಬರ್ತಾ ಇತ್ತು. ಈಗ ಹಾಗೇನು ಇಲ್ಲ. ಈಗ ಏಕಾಂತ. ಏಕಾಂತ...ಲಕ್ಷ್ಮೀಕಾಂತ...  ಧನ್ಯನಾದೆ.
ಕಾಯಬೇಕೀ ತರಳರೈವರ |
ಕಾಯಗಳನೆನಲೆಂದ ಸರ್ವರ |
ಕಾಯುವರೆ ಕೊಲುವರೆ ಸ್ವತಂತ್ರದ ಕಾಯ ನೀನೆ ||
ಭೀಷ್ಮರೇ,  ಈ ರಾತ್ರಿಯ ಹೊತ್ತು, ಮಹತ್ತರ ಕಾಯಕವನ್ನು ಗುರಿಯಲ್ಲಿಟ್ಟುಕೊಂಡು ನಿಮ್ಮ ಶಿಬಿರವನ್ನು ಪ್ರವೇಶ ಮಾಡಿದ್ದೇವೆ. ಯುದ್ದ ವಿರಾಮದ ಹೊತ್ತು. ಈ ವಿರಾಮ ಇಲ್ಲಿಗೇ ಅಲ್ಪವಿರಾಮ ಆಗಕೂಡದು. ಇದು ಪೂರ್ಣವಿರಾಮವನ್ನು ಕಾಣಬೇಕು. ಅದಕ್ಕಾಗಿ ಹಿರಿಯರಾದ ನೀವು ಸರದಿಯಲ್ಲಿ ಮೊದಲಿಗರಾಗಿ ನಿಂತು ಸಕ್ರಿಯರಾಗಿದ್ದೀರಿ. ನಿಮ್ಮ ಸೇನಾಧಿಪತಿತ್ವಕ್ಕೆ ಒಂದು ಪೂರ್ಣವಿರಾಮ ಕಲ್ಪಿಸಬೇಕು. ನೋಡಬಾರದೇ ಈ ಐವರನ್ನು,. ನಿಮ್ಮ ರಕ್ಷಣೆಯ ಆ ಬಾಹುಗಳನ್ನು ಇನ್ನಷ್ಟು ಅಗಲಿಸಿ ಆ ಪರಿಧಿಯೊಳಗೆ ಈ ಐವರನ್ನೂ ಸೇರಿಸಿಕೊಳ್ಳಬೇಕು. ನೀವು ಈಗ ಇವರನ್ನು ಕಾಯಬೇಕು, ಮಾತ್ರವಲ್ಲ ನಿಮ್ಮ ಕಾಯ ಈಗ ಇವರಿಗೂ ಲಭ್ಯವಾಗಬೇಕು. ನಿಮ್ಮ ಮುಖದಿಂದಲೇ ಒಂದು ಪರಿಹಾರ ಸೂತ್ರವನ್ನು ತೋರಬೇಕು.
ನೀನು ಗುಪ್ತವಾಕ್ಯರಚನೆಯಿಂದ ಪರೋಕ್ಷವಾಗಿ ಹೇಳಿದೆ.ನಾನು ಇಷ್ಟೇ ಹೇಳಬಲ್ಲೆ.  ಈ ಪ್ರಪಂಚದಲ್ಲಿ ಕಾಯುವೆಡೆಯು ಕೊಲುವೆಡೆಯು ಸರ್ವತಂತ್ರ ಸ್ವಾತಂತ್ರ್ಯ ಮಹಾ ಸನ್ನಿಧಾನದಿಂದ ಬೇರೆ ಯಾರಿಗೂ ಈವರೆಗೆ ಕೊಡಲ್ಪಟ್ಟಿಲ್ಲ. ಸ್ವಾಮಿ ಮತ್ತೆ ನಾವೆಲ್ಲ ಕಾಯುವುದಕ್ಕೆ ಕೊಲ್ಲುವುದಕ್ಕೆ ಯಾರು? ನಿನ್ನ ಅನುಗ್ರಹ ವಿಶೇಷ ಹೀಗೆ ನಡುರಾತ್ರಿಯಲ್ಲಾದರೂ ಯಾವಾಗ ಆದಿತೋ ಎಂದು ನಾವು ಕಾಯುವುದು ಬಿಟ್ರೆ. ಕಾಯುವುದಕ್ಕೂ ಕೊಲ್ಲುವುದಕ್ಕೂ  ನಮ್ಮಲ್ಲಿ ಅರ್ಥವನ್ನು ಕಂಡುಕೊಳ್ಳಲಾದೀತೆ? 
ಇದಲ್ಲವೇ ಭಗವಂತನಾದ ನಿನ್ನ ಹೃದಯ ವೈಶಾಲ್ಯತೆ?  ಕೃಷ್ಣಾ ಆ ಧ್ವನಿ ನನಗೆ ಹೃದಯಂಗಮವಾಯಿತು. ಈ ವರೆಗೆ ಬದುಕಿನ ಕಷ್ಟಗಳ ಪರಂಪರೆಯಲ್ಲಿ  ನಾನಿದ್ದಲ್ಲಿ ಭಗವಂತ ಇಲ್ಲ ಎಂದು ಮರುಗುತ್ತಿದ್ದೆ,  ಆದರೆ ಕೃಷ್ಣಾ,  ಈ ಅಂತ್ಯಕಾಲದಲ್ಲಿ ಅರಿವಿಗೆ ಬರ್ತಾ ಇದೆ ಭಗವಂತನಿಲ್ಲದ ಜಾಗವೇ ಇಲ್ಲ...ಎಂದು.   ನಿನ್ನೆ ನನ್ನ ಮನದಿಂಗಿತವನ್ನು ಅರಿತು ಚಕ್ರ ಹಿಡಿದ. ಚಕ್ರವದು ಭೀಷ್ಮನ ಹೃದಯವನ್ನು ಬೆಳಗಿಸಿತು. ಇಲ್ಲಿ ನೋಡಬಾರದೆ  ತನಗೆ ಅರಿವಿದ್ದೂ ಕಾಯಬೇಕು ಎಂದು ನನ್ನಲ್ಲಿ ಬೇಡುವುದಕ್ಕೆ ಬಂದಿದ್ದಾನೆ. ಇದು ಭೀಷ್ಮನಲ್ಲಿ ಕೃಷ್ಣನದ್ದಾದ ವೈಯಕ್ತಿಕ ರಾಯಭಾರ. ಇನ್ನೆಷ್ಟು ಇವರು ಈ ಕಾಯಕ್ಕೆ ಕಾಯಬೇಕು?  ಅಲ್ಲವೇ?  ಈ ’ಕಾಯ’ ಬೇಕು. ಇಚ್ಛಾಮರಣಿ ನಾನು ಆದರೆ ಮರಣ ಒಂದು ಬಿಟ್ರೆ,  ಬೇರೆಲ್ಲ ನನ್ನ ನಿಯಂತ್ರಣದಲ್ಲಿ ಉಂಟು ಅಂತ ಅನ್ನಿಸುವುದಿಲ್ಲ.  ಅಂದರೆ  ಈ ಇಚ್ಛಾ ಮರಣಿ ಭೀಷ್ಮ ಇಚ್ಛೆ ಮಾಡಬೇಕು...ಮತ್ತು ಸಾಯಬೇಕು. . ಕೃಷ್ಣಾ ಈ ಕಾಯದಿಂದ ಭೀಷ್ಮ ಈವರೆಗೆ ಸಾಧಿಸುವಂತದ್ದೇಲ್ಲ ಬಹಳಷ್ಟು ಸಾಧಿಸಿ ಆಗ್ಯದೆ, ಇನ್ನು ಈ ಕಾಯದಿಂದ ಭೀಷ್ಮನಿಗೆ ಆಗಬೇಕಾದ್ದೇನೂ ಇಲ್ಲ. ಆವಾಗ ಹೇಳಿದ ಹಾಗೆ, ಈ ಕಾಯ ಕಾಯುವುದಕ್ಕಷ್ಟೆ ಸೀಮಿತ. ಈಗಲೂ ಕಾಯ್ತಾ ಇದ್ದೇನೆ.  ಈ ಕಾಯ ನನಗೆ ಯಾವಾಗಲೋ ಬೇಡ ತೋಚಿ ಆಗಿದೆ.  ಈಗ ನೀನು ಹೇಳ್ತಾ ಇದ್ದಿ. ಈ ಕಾಯ ಬೇಕು. ನಾನು ಬಿಟ್ಟು ಬಿಡಬಹುದು ಸ್ವಾಮೀ,   ಆದರೆ ಒಂದು,  ನಾನಾಗಿ ಸೋಲುವ ಕಾಲ ಇದಲ್ಲ. ನಾನು . ಇಚ್ಷಾಮರಣಿ  ಸೋತರೆ ಮುದುಕ ಏನೋ ವಂಚನೆ ಮಾಡಿದ.  ನಾನು ಈಗ ಸತ್ತರೆ ಯುದ್ಧಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಎಂದಾಗ್ತದೆ. ಒಂದು ವೇಳೆ ನನಗೆ ಕೆಟ್ಟ ಹೆಸರು ಬಂದರೂ, ಈ ಮೂಲಕ ಸಿಗುವ ಪಾಂಡವರ ಜಯವೂ ನ್ಯಾಯ ಬದ್ದವಾದದ್ದಲ್ಲ, ಧರ್ಮ ಬದ್ದವಾದದ್ದಲ್ಲ ಎಂದಾಗುತ್ತದೆ.  .... ಕೃಷ್ಣಾ  ಕ್ಷತ್ರಿಯ ನಾನು.  ಕ್ಷತ್ರಿಯನಾದಂತಹ ನಾನು ಹೋರಾಟದಲ್ಲಿ ಎಳ್ಳಿನ ಏಳು ಭಾಗದಷ್ಟೂ ಕ್ರಿಯಾಲೋಪವನ್ನು ಉಂಟುಮಾಡಲಾರೆ. ಪಾಂಡವರೂ ಕೂಡ ಭೀಷ್ಮನ ಕ್ರಿಯಾಲೋಪವೇ ತಮ್ಮ ಜಯ ಎಂದು ತಿಳಿದುಕೊಳ್ಳಬಾರದು. ಜಯಿಸಿಕೊಳ್ಳಿ. ನಾನು ಮೊದಲೇ. ಹೇಳಿದ್ದೇನೆ.. ಯಥೋ ಧರ್ಮಃ ತಥಃ  ಜಯಃ ಇದು ಆರ್ಷ್ಯ ನುಡಿ. ನಾನು ನಮ್ಮವರಲ್ಲಿ ಹೇಳಿದ್ದೇನೆ. ಯಥೋ ಧರ್ಮಃ ತಥಃ  ಕೃಷ್ಣಃ. ಧನುಸ್ಸು ಹಿಡಿದರೆ ಭೀಷ್ಮನಿಗೆ ಲೋಕ ಕಾಣುವುದಿಲ್ಲ . ಗುರು ಸೇವೆ ಮಾಡಿ ಕಲಿತಂಥಹಾ ವಿದ್ಯೆ. ವಿದ್ಯೆ, ಅಮೃತತ್ವವನ್ನು ಕರುಣಿಸಬೇಕು. ಅಮೃತತ್ವ ಎಂದರೆ ಅದು ಕೇವಲ ಜೀವ ಭಾವದಿಂದ ಅಲ್ಲ.  ಈ ದೇಹಕ್ಕೆ ಅಮೃತತ್ವ ಬಂದೇನು ಪ್ರಯೋಜನ?  ಏನಿದ್ದರೂ ನಾನು ಕೊನೆಯ ಉಸಿರು ಬಿಡುವವರೆಗೂ ಪ್ರಬುದ್ಧನಾದಂತಹ ಒಬ್ಬ ಕ್ಷತ್ರಿಯ ಆ ರತ್ನ ಸಿಂಹಾಸನದಲ್ಲಿ ಮೂರ್ಧಾಭಿಷೇಚನವನ್ನು ಮಾಡಿಕೊಂಡ ಸುದ್ದಿ ನನಗೆ ಬರಬೇಕು. ಅದನ್ನು ಕೇಳಿದಲ್ಲಿಗೇ ನನಗೆ ಪೂರ್ಣವಾದ ವಿಶ್ರಾಂತಿ. ನನ್ನ ತಂದೆಗೆ ನಾನು ಕೊಟ್ಟ ಮಾತು.
ಆದ್ದರಿಂದ ಕೃಷ್ಣಾ,  ಈಗಾಗಲೇ ಪ್ರಪಂಚದಲ್ಲಿ ಎಲ್ಲರಿಗೂ ಗೊತ್ತುಂಟು. ನಿನಗೂ ಗೊತ್ತುಂಟು. ಆದರೆ ನನ್ನ ಒಪ್ಪಿಗೆ ಬೇಕು ಅದಕ್ಕೆ ಅನ್ನುವುದು ಸಜ್ಜನಿಕೆ ಪಾಂಡವರದ್ದು ಮತ್ತು ನಿನ್ನದು. ಪರಿಹಾರ ನಿನಗೆ ತಿಳಿಯದ್ದೇನಲ್ಲ. ಇದೂ ಚಕ್ರದರ್ಶನದಂತೆ ಹೃದ್ಯವಾಗುವ ಒಂದು ಉದ್ಯಮ  ಇದು ನಿನ್ನ ಹೃದಯ ವೈಶಾಲ್ಯತೆ. ಹೇಳಿಯೇ ಬಿಡ್ತೇನೆ.
ಎನ್ನೊಳೇಕೀ ಮಾತ ನುಡಿವಿರಿ |
ಇನ್ನು ಬರಿದೇ ತಿಳಿದೆನಾದರೆ |
ಎನ್ನ ಮನದಾಯತವ ಕೇಳ್ ಸಂಪನ್ನಶೀಲ ||
ಧುರಕೆ ನಾಳೆ ನಪುಂಸಕನ ತಂ
ದಿರಿಸಲಾತನ ಮುಂದೆ ಚಾಪವ |
ಭರದೊಳಿಳುಹುವೆನೆನಲು ಧರ್ಮಜ ಮರುಗಿ ನುಡಿದಾ ||
ಕೃಷ್ಣಾ ,  ಅವಶ್ಯ ಮೇವ ಹೋಕ್ತವ್ಯಂ  ಕೃತಂ ಕರ್ಮ ಶುಭಾಶುಭಂ . ತಸ್ಮೈ ನಮಃ ಕರ್ಮಣೇ ಅಂತ ಹೇಳೂವುದಕ್ಕೆ ಅದೂ ಒಂದು ಕಾರಣ. ಕಾಶೀರಾಜನ ಮಗಳಾದಂತಹ ಅಂಬೆ, ಅವಳ ವಯಸ್ಸಿಗೆ ಅವಳ ಸಂಸ್ಕಾರಕ್ಕೆ ಅನುಯೋಜ್ಯವಾಗಿ, ಏನೋ ಹೊಂಗನಸನ್ನು ಕಾಣುತ್ತಾ ನನ್ನ ರಥವನ್ನು ಏರಿ ಬಂದವಳು. ನನ್ನ ಉದ್ದೇಶವೇನೇ ಇರಲಿ., ಅದನ್ನು ಅವಳು ತಿಳೀಲಿಲ್ಲ. ಕೊನೆಗೆ ಏನಾಯಿತು? ಗೆದ್ದು ತಂದ ನನ್ನನ್ನೇ ವರಿಸಬೇಕು ಎನ್ನು ಹಟಬಂತು ಅವಳಿಗೆ. ಅವಳ ಕೇಳಿಕೆಯೂ ಅಸ್ಥಾನದಲ್ಲ ಅನ್ನೋಣ. ಆದರೇನು ಮಾಡೋಣ,? ಕೊನೆಗಂತೂ ಸಾಧ್ಯವಿಲ್ಲಾಂತ ನಾನು ತಿರಸ್ಕರಿಸಿದಾಗ ಅನೇಕ ವಿಧವಾದಂತಹ ಅವಳ ಪ್ರಯತ್ನವನ್ನು ಮಾಡಿ, ಕೊನೆಗೆ ನನ್ನ ಗುರುಗಳಾದಂತಹಾ ಭಾರ್ಗವರಾಮರಲ್ಲಿಗೆ ದೂರ ಒಯ್ದು,  ಅವರನ್ನೂ ನನಗೆ ಇದಿರೊಡ್ಡಿ ನನ್ನ ಸತ್ವ ಪರೀಕ್ಷೆಯಾಗಿ ಅಲ್ಲಿಯೂ ಅವಳು ಹತಾಶಳಾದಳು. ಉರಿಯುವ ಅಗ್ನಿಗೆ ದೇಹವನ್ನು ಸಮರ್ಪಿಸಿಕೊಂಡಳು. ಆವಾಗ ಒಂದು ಮಾತನ್ನಾಡಿದಳು. ಭೀಷ್ಮಾ ಈ ಪ್ರಪಂಚದಲ್ಲಿ ಹುಟ್ಟಿದ ಗಂಡುಸರಲ್ಲಿ ನಿನ್ನನ್ನು ಇದಿರಿಸುವ ಗಂಡುಸಿಲ್ಲ. ಹೆಂಗಸರಿಗಂತೂ ನೀನು ಸೋಲುವುದಿಲ್ಲ. ಆದಕಾರಣ ಬರುವ ಜನ್ಮದಲ್ಲಿ ಇದು ಎರಡೂ ಆಗಿ ಅಥವಾ ಎರಡು ಅಲ್ಲದ ಒಂದು ದೇಹವನ್ನು ಧರಿಸಿಕೊಂಡು ಬಂದಾದರೂ ನಿನ್ನಲ್ಲಿ ಹಗೆಯನ್ನು ತೀರಿಸುತ್ತೇನೆ. ಅಂಬೆಯ ಸಂಕಲ್ಪ ಇದು ಭೀಷ್ಮನ ಪಾಲಿಗೆ ಒಂದು ಶಾಪವೇ ಅಂತ ಭಾವಿಸಿದ್ದೇನೆ. ಆ ಒಂದು ಪ್ರಕರಣ ಇಂದಿಗೂ ಭೀಷ್ಮನ ಬದುಕಿನಲ್ಲಿ ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದುಕೊಂಡಿದೆ. ಈಗಲೂ ಹೇಳಿಬಿಡ್ತೆನೆ ಎರಡೂ ಆಗಿ ಎರಡೂ ಅಲ್ಲದೇ ಇದ್ದವರು ಬಂದರೆ ನಾನು ಶಸ್ತ್ರವನ್ನು ಕೆಳಗೆ ಹಾಕ್ತೇನೆ. ಆಯುಧಗ್ರಹಣವನ್ನೇ ಮಾಡುವುದಿಲ್ಲ. ನಿರಾಯುಧನಾಗಿ ಪ್ರಾಣವನ್ನು ಒಪ್ಪಿಸಿಬಿಡ್ತೇನೆ.
ದ್ರುಪದನ ಹಿರಿಯ ಮಗಳಾಗಿ ಹುಟ್ಟಿದವನು ಮಗನಾದದ್ದು....ಅವನು ಈ ಹೊತ್ತು ಮಹಾರಥಿ. ಮಾತ್ರವಲ್ಲ ದ್ರೋಣಾಚಾರ್ಯನ ಶಿಷ್ಯನೇ.  ಆದರೆ ಎಷ್ಟು ಮಂದಿಗೆ ಗೊತ್ತುಂಟೋ ಅವನು ಹಾಗಿದ್ದವನು ಅಂತ. ಈಗಂತೂ ಗಂಡುಗಲಿಯೇ. ವಿವಾಹಿತ. ಆದರೂ ಹೆಣ್ಣು ಅಲ್ಲದ ಗಂಡು ಅಲ್ಲದ ಆ  ಒಂದು ಜೀವ ಈ ಜೀವಕ್ಕಾಗಿಯೇ ಅಲೆಯುತ್ತಾ ಉಂಟು. ಸೂಚನೆ ಇದು ಕೌರವನಿಗೂ ಗೊತ್ತುಂಟು. ಆದ್ದರಿಂದಲೇ ದ್ರೋಣಾದಿಗಳಲ್ಲಿ ಗುಟ್ಟಾಗಿ ಹೇಳಿದ್ದು.  “ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಂ”  ಭೀಷ್ಮನನ್ನು ಒಬ್ಬನನ್ನು ನೋಡಿಕೊಳ್ಳಬೇಕು.  ಆವಾಗಲೇ ಡಂಗುರ ಸಾರಿದ್ದಾನೆ ಕೌರವ. ಆ ದ್ರುಪದ ಪುತ್ರನಾದಂತಹ ಶಿಖಂಡಿಯನ್ನು ಯಾರು ತಡೆ ಹಿಡಿಯುತ್ತಾರೆ ಯಾರು ಸೆರೆ ಹಿಡಿಯುತ್ತಾರೆ ಯಾರು ಕೊಲ್ಲುತ್ತಾರೆ ಅವರಿಗೆ ಅರ್ಧರಾಜ್ಯ ಕೊಡ್ತೇನೆ. ಪಾಂಡವರಿಗೆ ಕೊಡಲಾಗದ ಅರ್ಧ ರಾಜ್ಯ....ಶಿಖಂಡಿಯನ್ನು ಗೆದ್ದವರಿಗೆ ಕೊಡುವುದಕ್ಕೆ ಸಿದ್ಧ. ಇದು ನಿಮ್ಮ ಪಕ್ಷದವರಿಗೂ ಗೊತ್ತಾಗಿದೆ.  ಆಮೇಲೆ ಅವನು ಅರ್ಜುನನಿಂದಲೇ ರಕ್ಷಿಸಲ್ಪಟ್ಟು, ಅರ್ಜುನನ ಹಿಂದೆಯೇ ಸಂಚರಿಸುತ್ತಾ ಇದ್ದಾನೆ. ಹೀಗೆ ಪ್ರಪಂಚಕ್ಕೆ ವ್ಯಕ್ತವೂ ಅವ್ಯಕ್ತವೂ  ಆಗಿದ್ದಂತಹ ಒಂದು ಸತ್ಯವದು. ನಾನು ಈಗ ಹೇಳುವುದಿಷ್ಟೆ. ನನಗೂ ಕರ್ಮದೋಷ ನಿವೃತ್ತಿಗೆ ಮಾರ್ಗವಾಗುತ್ತದೆ. ಆ ಜೀವದ ಹಟವೂ ತೀರಿ ಅದಕ್ಕೂ ಸದ್ಗತಿಯಾಗುತ್ತದೆ. ಹುಟ್ಟಿದವನಂತೂ ಸಾಯಲೇಬೇಕು. ನಾನು ಆಯುಧ ಹಿಡಿದ್ರೆ ಯಾರಿಗೂ ಬಗ್ಗಲಾರೆ.  ನನ್ನ ರಕ್ತದ ಗುಣವದು. ಆಯುಧಪಾಣಿಯಾದನೋ ಭೀಷ್ಮನಿಗೆ ಪ್ರಪಂಚಕಾಣಿಸುವುದಿಲ್ಲ. ಇನ್ನು ನಾನು ಹೇಳ್ಬೇಕೆ? ನಾಳೆ ಅವನ್ನು ಮುಂದಾಗಿಸಿ. ಆವಾಗ ನಾನು ಆಯುಧ ಕೆಳಗೆ ಹಾಕ್ತೇನೆ. ಆಗ ನನಿಗೊಂದು ಹಟ. ಅವನ ಬಾಣ ನನ್ನನ್ನೇನೂ ಮಾಡಲಿಕ್ಕಿಲ್ಲ. ಶಿಖಂಡಿಯ ಬಾಣ, ಅದು ನನಗೆ ತೃಣ. ವೀರ ಕ್ಷತ್ರಿಯನಾದಂತಹ ಅರ್ಜುನ ಶರ ಪ್ರಯೋಗ ಮಾಡ್ಲಿ..ಸತ್ತಲ್ಲಿಗೂ ನನಗೊಂದು ಹೆಸರು ಬರ್ಬೇಕು. ಮೂರು ಲೋಕದ ವಿಜಯಿಯಾದ ಪಾರ್ಥನ ಬಾಣದಿಂದ ಭೀಷ್ಮ ಪ್ರಾಣತ್ಯಾಗ ಮಾಡಿದ.
ಪೊಡವಿ ಲಾಭಕೆ ನಿಮ್ಮ ಧುರದಲಿ|
ಮಡುಹಿ ಸಿರಿತನವಾಳ್ವ ತನಿವಿದ |
ಸುಡಲಿವಿಪಿನಕೆ ನಮಗನುಜ್ಞೆಯ  ಕೊಡಿಸಿರೆಂದ||
ಅಜ್ಜಯ್ಯಾ, ಕೇವಲ ಐಹಿಕ ಸುಖಭೋಗಕ್ಕಾಗಿ ಈ ರಾಜ್ಯ. ಆ ರಾಜ್ಯವನ್ನು ಅಜ್ಜಾ ನಿಮ್ಮನ್ನು ಕೊಂದು ಪಡೆಯಬೇಕೆ ನಾವು. ಹುಟ್ಟಿದಂದಿನಿಂದ ಹೇಗಾದರೂ ಬದುಕಿಕೊಳ್ಳಲೀ ಎಂದು ಎಮ್ಮನ್ನು ಕಂಡವರು ನೀವು. ಒಂದು ಕ್ಷಣವಾದರೂ ನಾವು ಸಾಯಲಿ ಅಂತ ಬಯಸಿದವರಲ್ಲ. ಆದರೆ ಅಜ್ಜ ಈ ಯುಧಿಷ್ಠಿರನ ದುರ್ದೈವ ನೋಡಿ ನಿಮ್ಮನ್ನು ಮಡುಹಿ ಕೊಂದು ಈ ಸಾಮ್ರಾಜ್ಯವನ್ನು ನಾನು ಪಡೆಯಬೇಕಿದೆ. ನಿಮ್ಮನ್ನೆಲ್ಲ ಮಡುಹಿ ಆ ರಾಜ್ಯದ ಸುಖಾಭೋಗಗಳನ್ನು ನಾನು ಅನುಭವಿಸಬೇಕೆ? ಬೇಡ ಈ ವರೆಗೆ ಆದದ್ದು ಸಾಕು. ಬಂಧುಗಳನ್ನೆಲ್ಲ ತರಿದು ಎಲ್ಲವೂ ಮುಗಿದ ಮೇಲೆ ನನಗೇಕೆ ಈ ರಾಜ್ಯ. ಆದ್ದರಿಂದ ನಮಗೆ ಬೇಡ ಈರಾಜ್ಯ. ಕೌರವನೇ ಆಳಿಕೊಳ್ಳಲಿ. ನಮಗೆ ಅಪ್ಪಣೆ ಕೊಡಿ ನಾವು ಕಾಡಿಗೆ ಹೋಗ್ತೇವೆ.
ಎಲೆ ಯುಧಿಷ್ಠಿರ ಸತ್ಯದ
 ಫಲಕೈಸೇರುವುದು ಹಂ |
ಬಲಿಸುವೆಯ ಮುಂದಿನ್ನರಣ್ಯವ ಮರುಳಲಾ ಮಗನೇ||
ಕೊಲುವರಾರೆನ್ನನು ಜಗತ್ತ್ರಯ |
ದೊಳಗೆಸಾಕಿದು ಪಡೆವೆ ಮುಕ್ತಿಯ |
ನಳಲ ಬೇಡೆಂದೊರೆದು ಕೃಷ್ಣಗೆ ನಮಿಸಿ ಕಳುಹಿದನು. ||
ಯುಧಿಷ್ಠಿರಾ,. ಸಣ್ಣ ಮಕ್ಕಳಂತೆ ಮಾತಾಡಬೇಡ. ಕಿರಿಯರನ್ನು ಬದುಕಿಸುವುದಕ್ಕೆ ಬೇಕಾಗಿ ಹಿರಿಯರ ಬಲಿದಾನವಾಗಬೇಕಾದ್ದು ಕರ್ತವ್ಯ. ಈ ಮುದುಕ ಬದುಕಿ ಎನಾಗಬೇಕಾಗಿದೆ?  ನೀನು ಪುಣ್ಯಾತ್ಮ . ಪುಣ್ಯಾತ್ಮನಾದವನು ನೀನು ಸೋತು ಹೋಗುವುದು,  ಪಾಪ ಮಾಡಿದವರು ಗೆದ್ದು ಬದುಕುವುದು, ಪ್ರಪಂಚದಲ್ಲಿ ನಾನು ನಂಬಿದ ತತ್ವಕ್ಕೆ ವಿಪರೀತ ಅರ್ಥವನ್ನು ಕಲ್ಪಿಸಿದಹಾಗೆ ಆಗ್ತದೆ, ನೀನು ಜಯಿಸುತ್ತಿ, ಯುಧಿಷ್ಠಿರ ನೀನು. ಯಮಧರ್ಮನ ಸೂನು...ಇವೆಲ್ಲದರ ಸೂಕ್ಷ್ಮವನ್ನು ಅರಿಯದವನೇನಲ್ಲ. ನಿನ್ನಂತಹ ಸತ್ಯಾತ್ಮ, ಧರ್ಮಾತ್ಮ ಈ ಅಜ್ಜನಿಗಾಗಿ ಕಾಡಿನಲ್ಲಿ ಕೂತುಕೊಳ್ಳುವುದಂದರೇನು? ಈ ಸಿಂಹಾಸನಕ್ಕೆ ನಿನಗಿಂತ ಶ್ರೇಷ್ಠ ಯಾರಿರುವುದಕ್ಕೆ ಸಾಧ್ಯ? ನನ್ನ ಈ ಆರುನೂರು ವರ್ಷದ ಜೀವಿತದಲ್ಲಿ ನಿನ್ನಂತಹ ಪರಿಪೂರ್ಣ ಕ್ಷತ್ರಿಯ ಉತ್ತರಾಧಿಕಾರಿ ನಾನು ಕಂಡಿಲ್ಲ. ಹಾಗಾಗಿ,  ನನಗೆ ಯಾವ ಬೇಸರವೂ ಇಲ್ಲ, ರಾಜ್ಯಾಭಿಷೇಕವನ್ನು ಮಾಡಿಕೋ, ಹಿರಿಯರು ಆಳಿದ ಸಿಂಹಾಸನದಲ್ಲಿ ರಂಜಿಸು. ನಾನು ಈಗ ಸಾಯುವುದಿಲ್ಲ. ದಕ್ಷಿಣಾಯನ ಈಗ. ಉತ್ತರಾಯಣದವರೆಗೆ ಕಾಯ್ತೇನೆ. ಆ ಕಾಲಕ್ಕೆ ಬಾ. ನಿನಗೆ ಹೇಳಬೇಕಾದದ್ದು ಕೆಲವುಂಟು. ಆ ಕಾಲಕ್ಕೆ ಹೇಳ್ತೇನೆ. ಆ ಕಾಲಕ್ಕೆ ಬಂದು ದರ್ಶನ ಕೊಟ್ಟರೆ ಸಾಕು.
ತರಣಿಯದಯದಿ ಯುಗ್ಮ ಕಟಕವಿದಿರಾಗಿ ಸಂ |
ಗರದಿ ನಾಯಕವಾಡಿಗಳ್ ಬಳಲಿದಾ ಪಾರ್ಥ|
ನಿರದೆ ಗಾಂಗೇಯನೊಳು ಕಾದುತಿರಲಚ್ಯುತನ ನೇಮದಿಂದ ಶಿಖಂಡಿಯು||
ಶರವೆಸುತ ಪೊರೆಗೈಯಲೀಕ್ಷೀಸಿ ನಪುಂಸಕನ |
ಧುರವು ತನ್ನಯ ಬಾಳ್ವೆಗಂದವಲ್ಲೆನುತವನ |
ಸರಿಸದೊಳು ಧನುವಿಳುಹಿ ನರನಸ್ತ್ರಮಂಚದೊಳ್ ಪವಡಿಸಿದನಾ ಭೀಷ್ಮನು ||
ಅದೋ ಅದೋ ದ್ರುಪದ ಪುತ್ರ ನಪುಂಸಕ ಎದುರು ನಿಂತು ಬಾಣಗಳೆಸೆಯುತ್ತಿರುವನಲ್ಲ?  ಇಂದು ಹತ್ತನೆಯ ದಿನ ಪಾರ್ಥನ ರಕ್ಷೆಯಿಂದ ಹೊರಬಂದು ಗಹಿ ಗಹಿಸಿ ನಗುತ್ತಾ ಶರ ಸಂಧಾನವನ್ನು ಮಾಡುತ್ತಾ ಯುದ್ದಕ್ಕೆ ಪ್ರೇರೇಪಿಸುತ್ತಿದ್ದಾನಲ್ಲ? ದೇಹದ ವೃಣಕ್ಕೆ ಹಚ್ಚುವ ಔಷಧಿಯಂತೆ ಬಾಣಗಳು ಒಂದೊಂದಾಗಿ ನಾಟುತ್ತಿವೆ. ಅಹಾ...ಭೀಷ್ಮನ ದೇಹದ ವೃಣ ಒಂದರ ಶಮನಕ್ಕಾಗಿಯೇ ಇದು ಶ್ರೀಕೃಷ್ಣನ ಅನುಗ್ರಹ. ತೊಡಗಿಸಿದ ಯುದ್ದ ಹೇಗೆ ನಿಲ್ಲಿಸಲಿ? ಆರಂಭಿಸಿದ ಓಟ ನಿಂತರೆ ಸಂತುಲನೆ ನಷ್ಟವಾಗುತ್ತದೆ,  ಓಡಿದರೆ ದೇಹ ಶಕ್ತಿಹೀನವಾಗುತ್ತದೆ.ಆಗಲೇ ಅಗಲೇ ತೂವರನಾ ಷಂಢನ ಆಕ್ರಮಣ. ಸಾಕು ಸಾಕು ಇನ್ನು ಈ ಧನುಸ್ಸನ್ನು ಬಿಸುಟಿದ್ದೇನೆ....ಅದೇನು ?
          ಚಿತ್ತದಲಿ ಕಳವಳಿಸಿ ಕುರುಭೂ
          ಪೋತ್ತಮನ ಕರೆದವ ನುಡಿದ ತ್ರಿ
          ನೇತ್ರ ಭಾರ್ಗವ ಮುಖ್ಯರೊಮ್ಮಿಗೆ ಬೆದರೆ ನಾನಿಂದು ||
          ಪಾರ್ಥನಸ್ತ್ರದಿ ನೊಂದೆನಕಟಾ |
          ಸತ್ವ ಹಿಂಗಿತು ದೇಹದಲಿ ಬಹ |
          ಳಾಯ್ತು  ಸಂಕಟ ನಮ್ಮ ಹಂಬಲಂ ತ್ಯಜಿಸು ನೀನೆಂದಾ||

ಅಹಾ...ಇದು ಪಾರ್ಥನಸ್ತ್ರವಲ್ಲವೇ? ಕೌರವಾ, ನನ್ನ ಆಧಿಪತ್ಯಕ್ಕೆ ಇದೋ ಇದೋ ಅರ್ಜುನ ಅಂತ್ಯರೇಖೆಯನ್ನು ಎಳೆದಾಯ್ತು. ಆ ಪರಶಿವನೇ ಬಂದರೂ ಗುರು ಭಾರ್ಗವರೂ ಬಂದರೂ ಅಳುಕಿಲ್ಲ ಎಂದಿದ್ದೆ.  ಅರ್ಜುನಾ... ಶ್ರೀಕೃಷ್ಣ ಎಷ್ಟೇ ಉಪದೇಶ ಮಾಡಲಿ, ಕೊನೆಗೂ ನೀನು ಹೇಳಿದೆಯಂತೆ, ಕೃಶ್ಣಾ ನೀನು ಹೇಳಿದ್ದೆಲ್ಲ ಹೌದು. ಎಲ್ಲರಲ್ಲಿಯೂ ಹೋರಾಟ ಮಾಡಿ ಕೊಂದೇನು, ಆದರೆ ಭೀಷ್ಮದ್ರೋಣರ ಮೇಲೆ ನಾನು ಅಸ್ತ್ರ ಪ್ರಯೋಗ ಮಾಡಲಾರೆ.  ಹೌದದು,    ಶ್ರೀಕೃಷ್ಣ ಆವಾಗ ಒಂದು ಮಾತು ಹೇಳಿದ್ದಂತೆ ನೀನು ಎಲ್ಲಿ ಕೊಲ್ಲುತ್ತಿಯಾ? ಅವರನ್ನೆಲ್ಲ ಈ ಮೊದಲೇ ಕಾಲರೂಪನಾಗಿ ನಾನು ಕೊಂದಾಗಿದೆ. ನೀನು ಕೇವಲ ನಿಮಿತ್ತ ಮಾತ್ರನಾಗು. ಅದು ಸತ್ಯ. ನಾವೆಲ್ಲ ಕಾಲದಿಂದಲೇ ಈ ಮೊದಲು ಸ್ವಲ್ಪ ಸ್ವಲ್ಪವೇ  ಅಳಿಯುತ್ತಾ ಬಂದವರು. ಅದರೆ ಅರ್ಜುನ    ಈವರೆಗೆ ಈ ಯಾವ ಕ್ಷತ್ರಿಯನ ಬಾಣವೂ ಈ ಭೀಷ್ಮನ ದೇಹವನ್ನು ನೋಯಿಸಿದ್ದಿಲ್ಲ. ಧನ್ಯೋಸ್ಮಿ. ಭಗವಂತನದ್ದಾದ ಪ್ರಸಾದವನ್ನು ನೀಡಿದವನು ನೀನು. ಇದೋ ನಿನ್ನ ಗುರುಗಳು ಕೊಟ್ಟಂತಹ ಪ್ರಶಸ್ತಿ ಇದೆಯಲ್ಲ? ಪಾರ್ಥಏವ ಧನುರ್ಧರಃ ಅದಕ್ಕೆ ಈ ಕುರುಕುಲ ವೃದ್ಢ ಪಿತಾಮಹ  ಮುದ್ರೆಯನ್ನೊತ್ತಿದ್ದೇನೆ. ಆದರೆ ಪಾರ್ಥನ ಅಸ್ತ್ರದ ಉರಿ ಏನೂ ಎಂದು ಅರಿವಾಗಿದೆ. ಅರ್ಜುನಾ  ದೇಹದಲ್ಲಿ ಶಕ್ತೀ ಕ್ಷಯಿಸುತ್ತಾ ಇದೆ. ಆದರೆ ಒಂದು ಆಶೆ ಉಂಟು ನನಗೆ ವೀರೋಚಿತವಾದಂತಹ ತಲ್ಪವೇ ಬೇಕು. ಶರತಲ್ಪ. ಬಾಣಗಳ ನೋವನ್ನು ಈ ವರೆಗೆ ಅನುಭವಿಸದ ಭೀಷ್ಮ, ಈ ಅಂತ್ಯ ಕಾಲದಲ್ಲಿ ವೀರೋಚಿತವಾಗಿಯೇ ಅದನ್ನು ಅನುಭವಿಸಬೇಕು. ಅದೋ ಸಿದ್ಧವಾಗಿದೆಯಲ್ಲ? ಹಾ  ದಾಹವಾಗಿದೆ ಅರ್ಜುನ...ಅದೋ ಅದೋ ನನ್ನಮ್ಮ ನನ್ನಮ್ಮ...ಪಾರ್ಥನ ಬಾಣದ ಮುಖೇನ ಮುಖತೋರಿದಳಲ್ಲಾ? ತನ್ನ ಬಾಣದಿಂದಲೇ ಗಂಗೆಯನ್ನು ತರಿಸಿದ ಅರ್ಜುನ. ಅರ್ಜುನ ಅಂತ್ಯಕಾಲದ ನನ್ನ ಮನದಿಂಗಿತವನ್ನು ಅರಿತೆಯಲ್ಲಾ.... ಕೃಷ್ಣಾ ಕೃಷ್ಣಾ... ಈ ತಲ್ಪದಲ್ಲಿ  ಯೋಗಾರೂಢನಾಗಿ ಒರಗಿಬಿಡುತ್ತೇನಂತೆ. ಕೃಷ್ಣಾ...ಕೃಷ್ಣಾ....