"ಇದು ವಿಮರ್ಶೆಯಲ್ಲದ ಚಿಂತನ"

Wednesday, March 21, 2012

ಎಡನೀರು ಮೇಳದ ಗಂದರ್ವ ಗಾಯಕ


“ ದಾನವಾಂತಕ ನೀ ಎನಗೆ.......”  ಮಧುರವಾದ ಕಂಠದಿಂದ ಪ್ರಸಂಗ ಪದ ಪರಿಸರ ತುಂಬ ಯಕ್ಷತರಂಗಗಳನ್ನು ಉಂಟು ಮಾಡುತ್ತಿದ್ದಂತೆ ಗಂಧರ್ವ ಗಾಯಕನ ಗಾಯನಕ್ಕೆ ಇರವನ್ನು ಮರೆತು ತನು ಮನ  ಸ್ಪಂದನೆಯ ರಾಗವನ್ನು ಹೊರಡಿಸಿತು. ಕೃಷ್ಣ ಲೀಲೆಯ ಉತ್ತರಾರ್ಧದ ಭಾಗದಲ್ಲಿ ಬರುವ ಅಕ್ರೂರ ಮತ್ತು ಶ್ರೀಕೃಷ್ಣರ ನಡುವಿನ ಸಂಭಾಷಣೆಯ ಸನ್ನಿವೇಶ ಅದು. ಭಾವ ಪೂರ್ಣ ಪದಕ್ಕೆ ಅಕ್ರೂರ ಭಾವುಕನಾಗಿ ಬಿಡುವ ಸನ್ನಿವೇಶ. ಅದೇನು ಗಾನ ಮಾಧುರ್ಯ. ಮೂಗಿನ ತುದಿಯ ಕನ್ನಡಕವನ್ನು ಸರಿಸಿ ನೋಡುತ್ತ ರಂಗದ ಮೇಲಿನ ಕಲಾವಿದರನ್ನು ಉತ್ತೇಜಿಸುವ ನೋಟ, ಕಣ್ಣನ್ನು ಕಿರಿದಾಗಿಸಿ ಹುಬ್ಬುಗಂಟಿಕ್ಕಿ ಆ ಸಂಗೀತದ ಲಯದೊಂದಿಗೆ ಲೀನವಾಗುವ ಭಂಗಿ.. ಭಲೇ ಅಮ್ಮಣ್ಣಾಯರೇ ನಾವು ಧನ್ಯರಾಗಿಬಿಟ್ಟೆವು ಅಂದು. ಬೇಸಗೆಯ ಬಿಸಿ ತನುವಿಗಾದರೆ ಹೃದಯಕ್ಕಾದ ಆ ಅಮೃತ ಸಿಂಚನ  ಛೇ!!!    ಸ್ಪುರಿಸುವ ಭಾವಕ್ಕೆ ನೋಡಿ,  ಅಕ್ಷರಗಳೇ ಇಲ್ಲವಲ್ಲ? ಅಮ್ಮಣ್ಣಾಯರ ಪದಗಳೆಂದರೆ ಹಾಗೆ, ಸ್ವತಹ ಭಾವ ತುಂಬಿ ಆಲಾಪಿಸಿದಾಗ ಕಲಾವಿದರೂ ಭಾವ ಪರವಶರಾದರೆ .. ಪ್ರೇಕ್ಷಕರೂ ಭಾವುಕರಾಗಿಬಿಡುತ್ತಾರೆ. ರಾಗ ಯಾವುದೋ, ತಾಳ ಯಾವುದೋ,  ಪ್ರಸಂಗ ಯಾವೂದೋ, ಪದಯಾವುದೋ ಅದು ಅರಿವಿಗೆ ಬರುವುದಿಲ್ಲ. ಕೇವಲ ಗಾನ ಮಾಧುರ್ಯ ಮಾತ್ರ ಸ್ಥಾಯಿಯಾಗಿ ಬಿಡುತ್ತದೆ. ಅಲ್ಲಿ ಕಲೆಯೊಂದಿಗಿನ ತಾದಾತ್ಮ್ಯ ಭಾವ ಒಂದೇ ಗೋಚರವಾಗಿಬಿಡುತ್ತದೆ.ಅದರ  ಪ್ರಭಾವ ಎಷ್ಟೆಂದರೆ ಎಡನೀರು ಮೇಳವೆಂದರೆ  ಮೊದಲು ಮನಸ್ಸಿನಲ್ಲಿ ಸುಳಿಯುವ ಮುಖ ಅಮ್ಮಣ್ಣಾಯರದ್ದು...!!! ಮತ್ತೊಂದು ಗೋರೆಯದ್ದು !!! ವಿಷಾದನೀಯವೆಂದರೆ ಗೋರೆ ಪ್ರಭಾಕರರು ನೆನಪನ್ನು ಉಳಿಸಿ ಅಸ್ತಮಿಸಿದ್ದಾರೆ. ಆ ಇರುಳ  ವಿಷಾದ  ಇಲ್ಲಿ ಸ್ಫುರಿಸುತ್ತಿದೆಯೆ? ಕಲೆಯೊಳಗಿನ ಈ ಬಂಧಗಳ ಅರಿವು ನಮಗಿಲ್ಲ. ಆದರೆ  ಅಂದು ಕಿಂಚಿತ್ ಆದರೂ ಮನಸ್ಸು ಸಾಂತ್ವನಗೊಂಡಿತು ಅದು ಎಡನೀರು ಮೇಳದ ಆಟದಲ್ಲಿ.
ಸರಳವಾದ ಕಾರ್ಯಕ್ರಮಗಳು ಹೃದಯಸ್ಪರ್ಶಿಯಾಗಿರುತ್ತದೆ. ಮತ್ತು ಮನಸ್ಸಿಗೆ ಹತ್ತಿರವಾಗುತ್ತದೆ ಎಂಬ ನಂಬಿಕೆಗೆ ಅನ್ವಯವಾಗುವಂತಹ ರೀತಿಯಲ್ಲಿ ಜರಗುತ್ತದೆ. ಇದಕ್ಕೆ ನಿದರ್ಶನವೆಂಬಂತೆ ಈಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಎಡನೀರು ಮೇಳದ ಯಕ್ಷಗಾನ ಬಯಲಾಟಗಳು ನಡೆಯುತ್ತಿರುವುದು. ಅಲಿಖಿತ ವಾಡಿಕೆಯೆಂಬಂತೆ ಬೇಸಗೆಯ ಅಂತ್ಯದಲ್ಲಿ ಎಡನೀರು ಮೇಳ ಕೆಲವು ಪ್ರದರ್ಶನಗಳಿಗಾಗಿ ಬೆಂಗಳೂರಿಗೆ ಬಂದಿದೆ. ಮೇಲ್ನೋಟಕ್ಕೆ ಅದ್ಧೂರಿಯ ಜಾಹೀರಾತುಗಳಾವುದೂ ಇಲ್ಲದೆ ಕೇವಲ ಅಭಿಮಾನೀ  ಬಳಗದ ಒಳಗಿನ ಸಂವಹನವೇ ದೊಡ್ಡ  ಮಾಧ್ಯಮವಾಗಿ ಹೆಚ್ಚಿನ ಎಲ್ಲರಿಗೂ ಎಡನೀರು ಮೇಳದ ಆಟದ ಬಗ್ಗೆ ಅರಿವಾಗಿದೆ. ಹಲವರು ಅವರ ಅನುಕೂಲವನ್ನು ಹೊಂದಿಕೊಂಡು ಯಕ್ಷಗಾನವನ್ನು ಸವಿಯುತ್ತಿದ್ದಾರೆ.   ಹಾಗೆ ನನ್ನ ಅನುಕೂಲವನ್ನ ಹೊಂದಿಸಿಕೊಂಡು ಶನಿವಾರದಂದು ನಡೆದ ಯಕ್ಷಗಾನ ಕಾರ್ಯಕ್ರಮವನ್ನು ಸವಿದು ಅದರ  ಅಚ್ಚುಕಟ್ಟುತನ ಅಪ್ಯಾಯಮಾನವಾಯಿತು. ಅತ್ಯಂತ ಸರಳವಾದರೂ ಕೆಲವು ವಿಧದಲ್ಲಿ ಅದೇ ಅದ್ಧೂರಿಯಾಗಿ ಭಾಸವಾಗುತ್ತದೆ.

ಎಡನೀರು ಮೇಳವೆಂದರೆ ಮೊದಲು ಕಲ್ಪನೆಗೆ ಬರುವುದು ಅದರ ಶ್ರೀಮಂತ ಹಿಮ್ಮೇಳ. ಬಹುಷಃ ನನ್ನ ಮನಸ್ಸು ಆಕರ್ಷಣೆಗೆ ಒಳಗಾದ ರೀತಿಯೇ ಅದು. ಒಂದೆರಡಾದರೂ ಅಮ್ಮಣ್ಣಾಯರ ಪದಗಳನ್ನು ಕೇಳುವ ಬಯಕೆ. ನನಗಂತು ಅದು ಅಸಂಭವನೀಯ ಬಯಕೆಗಳಾಗಿಬಿಟ್ಟಿವೆ. ಹಾಗಾಗಿ  ಅವಕಾಶ ಇರುವಷ್ಟು ಹೊತ್ತು ಆ ಮಧುರ ಗಾನಾಮೃತವನ್ನು ಸವಿಯುವ ಬಯಕೆಯಿಂದಲೇ ಎಡನೀರು ಮೇಳದ ಆಟಗಳನ್ನು ನಿರೀಕ್ಷಿಸಿ ಶನಿವಾರದಂದು ತಡವಾಗಿಯಾದರೂ ಹೋಗಿದ್ದೆ. ಅತಿ ಸಾಮಾನ್ಯ ಎನಿಸಬಹುದಾಂತಹ ಕೃಷ್ಣ ಲೀಲೆ ಪ್ರಸಂಗ. ತಡವಾಗಿ ಹೋದಕಾರಣ ಮೊದಲು ಕುಳಿತ ಅಮ್ಮಣ್ಣಾಯರ ಕೆಲವು ಪದಗಳಿಂದ ವಂಚಿತನಾಗಿದ್ದೆ. ಆದರೂ ಆನಂತರದ ಕೆಲವು ಪದಗಳು ಮೊದಲು ಹೇಳಿದಂತೆ  ನನ್ನಿರವನ್ನೇ  ಮರೆಸಿಬಿಟ್ಟಿದ್ದವು!!

ಅತ್ಯಂತ ಸೀಮಿತ ಕಲಾವಿದರು ಇರುವ ಮೇಳ. ಕಾಲಮಿತಿಯ ಯಕ್ಷಗಾನಕ್ಕೆ ಮೇಳದ ರೂಪ ಹೀಗೆ ಇದ್ದರೆನೇ ಸೂಕ್ತ. ಅರ್ಧ ಘಂಟೆ ಅರ್ಥವಿಲ್ಲದ ಭಂಗಿಯಲ್ಲಿ ಕುಣಿದು ತಾನು ಮಾತ್ರವಲ್ಲ ಪ್ರೇಕ್ಷಕರನ್ನೂ ದಣಿಸುವ ಪ್ರಮೇಯ ಇಲ್ಲಿ ಬರಬಾರದು. ಯಾವ ಭಾಗ ಎಲ್ಲಿ ಮೀಟಬೇಕೋ ಅಷ್ಟನ್ನೇ ಮೀಟಬೇಕು. ಶ್ರುತಿ ಬರಿಸುವುಕ್ಕೂ ನಿಗದಿತ ಸಮಯಾವಧಿ.ಕಲಾವಿದರೂ ಹಾಗೆ ಮಿತಿಯೊಳಗೆ ವ್ಯವಹರಿಸಿಕೊಳ್ಳಬೇಕಾದುದು ಅನಿವಾರ್ಯವಾಗಿಬಿಡುತ್ತದೆ. ಹಸಿದು ಊಟಕ್ಕೆ ಕುಳಿತವನಿಗೆ ಹಸ್ತೋದಕದ ಭೋಜನವಿಧಿ ಅರ್ಧತಾಸು ತೆಗೆದು ಕೊಂಡರೆ ಹೇಗೆ? ಶಾಸ್ತ್ರಗಳು ಹೇಗೆ ಇರಲಿ ಹಸಿವೇ ಪ್ರಧಾನವಾಗಿಬಿಡುತ್ತದೆ.  ಕೆಲವೊಂದು ಸಲ ಈ ಕಟ್ಟು ಪಾಡುಗಳೂ ಈ ಕಾಲಮಾನದಲ್ಲಿ ಉಪಯುಕ್ತವೆನಿಸುತ್ತದೆ. ಕಾಲಮಿತಿಯೋ,  ಮತ್ತೋಂದೋ,  ಒಂದೆರಡು ಪದಗಳನ್ನು ಕೇಳಿದ ಆ ಘಳಿಗೆ ಮಾತ್ರ ಸ್ಮರಣೀಯವಾಗಿ ಬಿಟ್ಟಿತು. ಅಮ್ಮಣ್ಣಾಯಾರ ರಾಗಾಲಾಪನೆಯ   ತಂಗಾಳಿಗೆ ನಸುಬಿರಿದ  ಹೂವಿನ ಎಸಳು ಕಂಪಿಸಿ ಆ ಸ್ಪರ್ಶ ಸುಖವನ್ನು ಅನುಭವಿಸಿದ ಹಾಗೆ  ಮನಸ್ಸಿನ ಕೋಮಲ ಎಸಳುಗಳು ಕಂಪಿಸುತ್ತಿವೆ. ಭಾವ ಪರವಶವಾಗಿ ಸ್ಪಂದಿಸುತ್ತಾ ಆ ಅಲಾಪನೆಯ ತನ್ನ ಅರಿವಿನಂತೆ ಮೆಲುವಾಗಿ ಪ್ರತಿಧ್ವನಿಸುತ್ತವೆ. ಆ ಅಲಾಪನೆಯ ಸೆಳೆತದ ಬಗೆ ಹೇಗೆಂದರೆ,  ಮಾಧುರ್ಯ ಮನಸ್ಸಿನ ಬರಿದಾದ ಕೊಡದಲ್ಲಿ ತುಂಬುವಷ್ಟು ತುಂಬಿಸಿ ತುಳುಕಾಡದೆ ಜೋಪಾನವಾಗಿಸುವ ಕಾಳಜಿ.,  ಆದರೂ ಈ ಗಡಿಬಿಡಿಯ ಕೆಲಸಭಾರದ ನಡುವೆಯೂ ಒಂದೆರಡು ಹನಿ ಈ ರೂಪದಲ್ಲಿ ಸಿಂಪಡಿಸಿ ಧನ್ಯರಾಗುವಾಗ  ಆಗುವ ಅತ್ಮ ಸಂತೃಪ್ತಿ ಅನನ್ಯ.