ಕೆಲವೊಮ್ಮೆ
ಹಿತ್ತಿಲಲ್ಲಿ ಯಾವತ್ತೋ ಹಾಕಿದ
ಸೌತೆಕಾಯಿ .ಬೀಜ ಮೊಳೆತು ಬಳ್ಳಿಯಾಗಿಬಿಡುತ್ತದೆ. ಆ ಕಡೆ ಈ ಕಡೆ ಇದ್ದ ತೇವಯುಕ್ತ ಮಣ್ಣಿನ
ತೇವವನ್ನು ಹೀರಿ ನಮಗರಿವಿಲ್ಲದೇ ತಾನಾಗಿ
ಬೆಳೆಯುತ್ತದೆ, ಬೆಳೆದು ಬೆಳೆದು ದೊಡ್ದ
ಬಳ್ಳಿಯಾದರೂ ನಮ್ಮ ಗಮನ ಅತ್ತ ಕಡೆಗೆ ಹರಿಯುವುದಿಲ್ಲ. ಹಾಗೆ ಹೇಳುವುದಕ್ಕಿಂತಲೂ ಔದಾಸಿನ್ಯ
ಅಸಡ್ದೆ ಎಂದರೆ ಸೂಕ್ತವೋ ಏನೋ. ಆದರೆ ಆ ಬಳ್ಳಿಯ ಮಹತ್ವ ಗೊತ್ತಾಗುವುದು ಅದರ ಟಿಸಿಲಿನ ಎಲೆಯೊಂದರ ಮರೆಯಲ್ಲಿ ಹೂ ಅರಳಿ ಮಿಡಿ
ಬೆಳೆದು ಸೌತೆಕಾಯಿ ಫಲ ಬಿಟ್ಟಾಗಲೇ? !!! ಎಲಾ, ಆಗಲೇ ಕಾಯಿ ಆಗಿಬಿಟ್ಟಿತಲ್ಲ... ಆಮೇಲೆ ಅದರ ಬುಡ
ಎಲ್ಲಿದೆ ಎಂದು ಹುಡುಕಿ ನೀರು ಸೊಪ್ಪು ಸೆಗಣಿ ಹಾಕಿ ಆರೈಕೆಗೆ ತೊಡಗುತ್ತೇವೆ. ಅಲ್ಲಿವರೆಗೆ
ಹಿತ್ತಲ ಗಿಡ ಹೆಸರಿಗಾಗಿ ಹಿತ್ತಲ ಗಿಡವಾಗಿಯೇ ಇತ್ತಲ್ಲ?
ಬೆನಕ ಯಕ್ಷಗಾನ ಕಲಾ ಸಂಸ್ಥೆ ಪೈವಳಿಕೆ ಇದರ
ದಶಮಾನೋತ್ಸವ ಕಾರ್ಯಕ್ರಮದ ಕರಪತ್ರ ಕಂಡಾಗ ಅನಿಸಿದ ಅನಿಸಿಕೆಗಳು ಇವು. ಪೈವಳಿಕೆ ನಾವು ಬಾಳಿ
ಬದುಕಿದ ಊರು. ಇಲ್ಲಿ ಗುಡ್ಡ ಬೆಟ್ಟ ತೋಟ ಹಳ್ಳ ತೊರೆಗಳು ನಮ್ಮ ಬದುಕಲ್ಲಿ ಹಲವು ಸ್ಮರಣೀಯ
ನೆನಪುಗಳನ್ನು ಹೇಗೆ ತುಂಬಿಸಿದೆಯೋ ಹಾಗೆ ಅಲ್ಲಿನ ಪರಿಸರದ ಆಗು ಹೋಗುಗಳೂ ಸ್ಮರಣೀಯವಾಗಿವೆ. ಪ್ರಸ್ತುತ ಯಕ್ಷಗಾನದ ಮಟ್ಟಿಗೆ ಪೈವಳಿಕೆ ಎಂದಾಕ್ಷಣ
ಪಕ್ಕನೆ ನೆನಪಿಗೆ ಬರುವುದು ನಮ್ಮ ಗುರು ಸಾದೃಶ ವ್ಯಕ್ತಿತ್ವದ ದೇವಕಾನ ಕೃಷ್ಣ ಭಟ್ಟರು ಮತ್ತು
ಇವರ ಬಳಗ ಹುಟ್ಟು ಹಾಕಿದ ಎರಡು ಸಂಘಗಳು. ಒಂದು
ಶ್ರೀ ಗಣೇಶ ಕಲಾವೃಂದ ಪೈವಳಿಕೆ ಮತ್ತೊಂದು ಶ್ರೀ ಬೆನಕ ಯಕ್ಷಕಲಾವೃಂದ ಪೈವಳಿಕೆ. ಹೀಗೆ ಯಕ್ಷಗಾನದ ಎರಡು ಪ್ರಧಾನ ಅಂಶಗಳಿಗೆ ಮಹತ್ವವನ್ನು
ಮನ್ನಣೆಯನ್ನು ತಂದು ಕೊಟ್ಟವರು ಇವರು.
ಅತ್ಯಂತ ವ್ಯವಸ್ಥಿತವಾಗಿ ವಿಭಿನ್ನ ರೀತಿಯಲ್ಲಿ ನಡೆದು
ಕೊಂಡು ಬಂದ ಪೈವಳಿಕೆಯ ಬೆನಕನಿಗೆ ಈಗ ಹತ್ತರ
ಹರಯ!! ನಮಗೆಲ್ಲ ಹಿತ್ತಿಲ ಗಿಡವಾಗಿಯೇ ಆ ಕಾಲದಲ್ಲಿ ಭಾಸವಾದರೂ ಈಗ ಮಾತ್ರ ಅದು ಬೆಳೆದು ನಿಂತ
ಪರಿ ಆಶ್ಚರ್ಯವಾಗಿ ಕಾಣುತ್ತದೆ. ಇದರ ಮಹತ್ವ ಮತ್ತು ಮೌಲ್ಯದ ಅರಿವಿಗೆ ಬರುವುದು ಈವಾಗಲೇ.
ಹಾಗಾಗಿ ಅನ್ನಿಸಿಬಿಟ್ಟದ್ದ್ದು ಹಿತ್ತಲಗಿಡವಾಗಿಯೇ ಇತ್ತಲ್ಲ ಎಂದು. ಬಾಲ್ಯದಲ್ಲಿ, ಮನೆಯಲ್ಲಿ ನಿತ್ಯ ಬೆಳಗ್ಗೆ ಕುಚ್ಚಿಲಕ್ಕಿ ಗಂಜಿ ಊಟ
ಮಾಡುವಾಗ ಕೆಲವೊಮ್ಮೆ ಸಿಂಡರಿಸಿಕೊಳ್ಳುವುದಿತ್ತು.ಛೇ “ ಇವತ್ತು ತಿಂಡಿ ಗಂಜಿಯೋ? “ ನಿತ್ಯ
ಅದನ್ನೇ ನೋಡಿ ನೋಡಿ ಕೊನೆಗೊಂದು ದಿನ ಅದು ಸಿಗದ ಊರಿಗೆ ಹೋದಾಗ ವಾಯು ಪ್ರಕೋಪಕ್ಕೆ ತುತ್ತಾದಾಗ
ಗೊತ್ತಾಗುತ್ತದೆ ಗಂಜಿಯ ಮಹತ್ವ ಎಂತದು ಎಂದು. ನಮ್ಮ ಸ್ಥಿತಿಯೂ ಹೆಚ್ಚು ಕಮ್ಮಿ ಅದೇ
ಅಗಿಬಿಡುತ್ತದೆ.
ದೇವಕಾನ ಮಾಸ್ಟ್ರು ಎಂದೇ ಚಿರ ಪರಿಚಿತರಾಗಿರುವ ಕೃಷ್ಣ
ಭಟ್ಟರು, ಅಧ್ಯಾಪನದೊಂದಿಗೆ ಯಕ್ಷಗಾನವನ್ನು ಹವ್ಯಾಸವಾಗಿ
ತಮ್ಮ ದೇಹದ ರಕ್ತ ಕಣಗಳೊಂದಿಗೆ ಬೆರೆಸಿಬಿಟ್ಟವರು. ಶಾಲೆಯ ಚಿಣ್ಣರಿಗೆ ಉತ್ಸಾಹ
ತುಂಬುತ್ತ ಉತ್ಸಾಹದಿಂದಲೇ ಯಕ್ಷಗಾನವನ್ನು ಕಲಿಸುತ್ತಾ, ಪ್ರತಿವರ್ಷದ ನಮ್ಮ ಸ್ಕೂಲ್ ಡೇಗೆ ಒಂದು ಆಟವನ್ನು
ಸಿದ್ದಪಡಿಸುವ ರೀತಿ ಈಗಲೂ ನೆನಪಾಗುತ್ತಿದೆ. ಅವಾಗೆಲ್ಲ ಮಕ್ಕಳ ಆಟದ ಜತೆಗೆ ಊರ ಕಲಾವಿದರ ಆಟ
ಶಾಲಾ ವಾರ್ಷಿಕೋತ್ಸವದಲ್ಲಿ ಸರ್ವೇ ಸಾಮಾನ್ಯ. ಅದಕ್ಕೆ ಹಳೆ ವಿದ್ಯಾರ್ಥಿಗಳಿಂದ ಎಂಬ ಹೆಸರೂ ಬೇರೆ
ಇರುತ್ತಿತ್ತು. ಅದೇನಿದ್ದರೂ ಎಲ್ಲದರಲ್ಲೂ ದೇವಕಾನದ ಹೆಸರು ಉಲ್ಲೇಖವಾಗದೇ ಇರುತ್ತಿರಲಿಲ್ಲ. ಈಗ
ಹಿರಿಯ ಭಾಗವತರಾಗಿರುವ ತೆಂಕಬೈಲು, ಕುರಿಯ, ಉಪ್ಪಳ ಮಾಸ್ತರ್, ಚೇವಾರು ಕಮ್ತಿಯವರು, ಪೂಕಳ ಲಕ್ಷ್ಮೀನಾರಯಣ ಭಟ್, ಕಟ್ಟದ ಮನೆ ಕೃಷ್ಣ ಭಟ್
ಹೀಗೆ ಹತ್ತು ಹಲವು ಊರ ಕಲಾವಿದರ ಆಟ ಈಗಲೂ
ನೆನಪಾಗುತ್ತದೆ.
ದೇವಕಾನ ಮಾಸ್ತರಿಗೆ ಯಕ್ಷಗಾನದ ಹವ್ಯಾಸದಿಂದ ಜತೆಗೇ
ಹುಟ್ಟಿಕೊಂಡ ಹೊಸ ಕ್ಷೇತ್ರ ವೇಷ ಭೂಷಣಗಳದ್ದು. ಮಾತ್ರವಲ್ಲ ಯಕ್ಷಗಾನಕ್ಕೆ ಸಂಬಂದಿಸಿ ಅತ್ಯಂತ
ಮಹತ್ವದ ಹವ್ಯಾಸ. ಆವಾಗಿನ ಕಾಲದಲ್ಲಿ ವೇಷಭೂಷಣಗಳು ನಮ್ಮೂರಲ್ಲಿ ಲಭ್ಯವಾಗುವುದು ಬಹಳ
ಕಷ್ಟಕರವಾಗಿತ್ತು. ಎಲ್ಲೆಲಿಂದಲೋ ತಂದು ಕಾರ್ಯಕ್ರಮವನ್ನು ಅದಕ್ಕೆ ಹೊಂದಿಕೊಂಡು ಅನುಸರಿಸುವ
ಪರಿಸ್ಥಿತಿಯೂ ಇಲ್ಲದೇ ಇರುತ್ತಿರಲಿಲ್ಲ. ಹಾಗೇ ವೇಷಭೂಷಣಗಳಿಗಾಗಿ ಹುಟ್ಟಿಕೊಂಡದ್ದು ಶ್ರೀ ಗಣೇಶ
ಕಲಾವೃಂದ ಪೈವಳಿಕೆ. ಇದು ಬಹಳ ಹಿಂದೆ ಹುಟ್ಟಿಕೊಂಡು ಆನಂತರ ಅಂದರೆ ಹತ್ತುವರ್ಷದ ಹಿಂದೆ ಯಕ್ಷಗಾನದ
ಅಭ್ಯಾಸಕ್ಕಾಗಿ, ಆಸಕ್ತರಿಗೆ
ಕಲಿಸುವುದಕ್ಕಾಗಿ ರೂಪುಗೊಂಡ ಸಂಘ ಶ್ರೀ ಬೆನಕ ಯಕ್ಷ ಕಲಾವೃಂದ.
ನಮ್ಮೂರ ಸುತ್ತ ಮುತ್ತ ಈಗ ಹತ್ತು ಹಲವು ಮರಿ
ಕಲಾವಿದರಿಂದ ತೊಡಗಿ ಹಿರಿಯ ಹವ್ಯಾಸಿಗಳ ವರೆಗೂ ಕಲಾವಿದರು ಇದ್ದರೆ ಅದಕ್ಕೆ ಕಾರಣ ದೇವಕಾನದ
ಉಸಿರಾದ ಈ ಎರಡು ಸಂಘಗಳು. ನಮ್ಮ ಪೈವಳಿಕೆ ಗ್ರಾಮದ ಅತಿ ಕುಗ್ರಾಮವೆಂದು ಗುರುತಿಸಲ್ಪಡುವ ಊರು
ದೇವಕಾನ. ನಾವು ಚಿಕ್ಕವರಿರುವಾಗ ವಿದ್ಯುತ್, ವಾಹನ, ಹೀಗೆ ಅಧುನಿಕ ಜಗತ್ತಿನ ಯಾವುದೇ ಆಧುನಿಕ ಸೌಕರ್ಯವಿಲ್ಲದ ಅತ್ಯಂತ ತೀರ
ಹಿಂದುಳಿದ ಪ್ರದೇಶ ಈ ದೇವಕಾನ. ಪೈವಳಿಕೆಯಿಂದ ಒಂದು ಗಂಟೆಯ ಕಾಲುನಡಿಗೆಯ ದೂರ, ಅಂತಹ ಕುಗ್ರಾಮ
ಇಂದು ಯಕ್ಷಗಾನ ಲೋಕದಲ್ಲಿ ತನ್ನದೇ ಮನ್ನಣೆ ಸ್ಥಾನವನ್ನು ಗುರುತಿಸಿಕೊಂಡಿದೆ ಎಂದರೆ
ಆಶ್ಚರ್ಯವಾಗುತ್ತದೆ.
ಸಾಮಾನ್ಯವಾಗಿ ಕರಾವಳೀ ಪ್ರದೇಶದಲ್ಲಿ ಊರಿನ ಹೆಸರು
ಗುರುತಿಸಲ್ಪಡಬೇಕಿದ್ದರೆ ಆ ಊರಲ್ಲಿ ಒಬ್ಬನಾದರೂ ಯಕ್ಷಗಾನ ಕಲಾವಿದ ಹುಟ್ಟಿ ಪ್ರಸಿದ್ದಿಗೆ ಬಂದರೆ,
ಆಗ ಕಲಾವಿದನೊಂದಿಗೆ ಊರೂ ಗುರುತಿಸಲ್ಪಡುತ್ತದೆ. ಇದಕ್ಕ ನಮ್ಮೂರಲ್ಲಿ ಹೇರಳ ನಿದರ್ಶನ
ಸಿಗುತ್ತದೆ. ಹಾಗೆನೇ, ಈ ದೇವಕಾನ ಇಂದು ಯಕ್ಷಗಾನ
ಸಾರಸ್ವತ ಲೋಕದಲ್ಲಿ ಒಂದು ಅವಿಭಾಜ್ಯ ಹೆಸರಾಗಿ ಗುರುತಿಸಲ್ಪಟ್ಟು ಅವಿನಾಭಾವ ಸಂಬಂಧದೊಂದಿಗೆ
ಬೆಳೆದು ಬಂದಿದೆ. ಇದು ಕೇವಲ ದೇವಕಾನಕ್ಕೆ ಸೀಮಿತವಾಗಿರಿಸದೇ ಇಡೀ ಪೈವಳಿಕೆಯನ್ನು ಈ ಬಗೆಯಲ್ಲಿ
ಗುರುತಿಸುವಂತೆ ಅದದ್ದು ದೇವಕಾನದವರ ಸಾಧನೆ. ಹಿತ್ತಲ ಬಳ್ಳಿ ಹಿತ್ತಲು ತುಂಬ ಹರಡಿ ಸಮೀಪದ ಬೇಲಿ
ದಾಟಿ ಫಲ ಕೊಡುವುದಕ್ಕೆ ಆರಂಭಿಸಿ ಬಹುಶಃ ಕಾಲ ಹಲವು ಸಂದಿತು.
ಯಕ್ಷಗಾನದ ರಂಗಸ್ಥಳದಿಂದ ಹೊರತಾದ ಕಾರ್ಯಗಳು ಸಹ ಬಹಳ
ಜವಾಬ್ದಾರಿಯುತವಾದದ್ದು ಎಂದು ಇವರ ಚೌಕಿಯ
ಸಿದ್ದತೆಯನ್ನು ನೋಡಿ ಅನಿಸುತ್ತದೆ. ರಂಗದ ಮೇಲೆ
ಕಲೆ ಹೂವಾಗಿ ಅರಳಿದರೆ ಅದಕ್ಕೆ ಪೋಷಣೆ ಹಿನ್ನೆಲೆಯಿಂದಲೇ ಆಗಬೇಕು. ಯಕ್ಷಗಾನ ತರಗತಿಯಲ್ಲಿ ಮುಂದಿನ ತಲೆಮಾರು ಸಿದ್ದಗೊಂಡರೆ
ರಂಗಸಜ್ಜಿಕೆ ಮತ್ತು ವೇಷಭೂಷಣಗಳು ಕಲೆಯ ಮತ್ತೊಂದು ಪ್ರಧಾನ ಅಂಶ. ಇಲ್ಲಿನ ವೇಷಭೂಷಣಗಳು
ಯಕ್ಷಗಾನದ ಸೊಗಸಿಗೆ ಮತ್ತು ಆವಶ್ಯಕತೆಗೆ ತಕ್ಕಂತೆ ಗಾಢವಾದ ಬಣ್ಣ ಮತ್ತು ಹೊಳಪುವಿಕೆಯಿಂದ
ಕೂಡಿದ್ದು “ದೇವಕಾನದ ಡ್ರೆಸ್ಸು” ಎಂದಾಗ ಉತ್ಕೃಷ್ಟತೆಯ ವೈಶಿಷ್ಟ್ಯವನ್ನೇ ಸಾರುತ್ತದೆ. ಪ್ರತೀ ಯೊಂದರ
ಅಚ್ಚುಕಟ್ಟುತನ ರಂಗದ ಹಿಂದೆ ಮತ್ತು ರಂಗದ ಮೇಲೆ ತನ್ನದೇ ಪ್ರಭಾವವನ್ನು ಬೀರುತ್ತದೆ. ಹಾಗಾಗಿ
ಇಲ್ಲಿನ ಯಕ್ಷಗಾನದ ವೇಷಭೂಷಣಗಳು ಮಾದರಿ ಎನಿಸಲ್ಪಟ್ಟಿದೆ. ಯಕ್ಷಗಾನದ ಕಿರೀಟ ಆಭರಣ
ವಸ್ತ್ರವಿನ್ಯಾಸ ಇವುಗಳ ತಯಾರಿಯಲ್ಲಿ ಮತ್ತು ಅವುಗಳ ನಿರ್ವಹಣೆಯ ಪ್ರತಿಹಂತದಲ್ಲೂ
ಮುತುವರ್ಜಿಯಿದೆ. ಹಲವು ಸಂಘ ಸಂಸ್ಥೆಗಳಿಗೆ ಕಿರೀಟವೇ ಮೊದಲಾದ ಯಕ್ಷಗಾನ ವಸ್ತ್ರಾಭರಣಗಳನ್ನು
ಸ್ವತಃ ಇಲ್ಲೇ ಸಿದ್ದ ಪಡಿಸಿ ಒದಗಿಸುತ್ತಾರೆ.
ಬಯಲಾಟಕ್ಕೆ ಚೌಕಿಯನ್ನು ಸಿದ್ದಪಡಿಸುವಾಗ ವೇದಿಕೆಯ
ಹಿಂಭಾಗದಲ್ಲಿ ಒಂದು ಬೆಂಚನ್ನು ಇಟ್ಟಿರುತ್ತಾರೆ. ವೇಷತೊಟ್ಟನಂತರ ವೇಷಧಾರಿಗೆಳು ರಂಗ ಪ್ರವೇಶದವರೆಗೆ ಇಲ್ಲಿಯೇ ಕುಳಿತುಕೊಳ್ಳಬೇಕು.
ಸಿಕ್ಕ ಸಿಕ್ಕಲ್ಲಿ ಕುಳಿತರೆ ಮಾಸ್ತರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಇಂತಹ ಹಲವು ಸೂಕ್ಷ್ಮ ವಿಚಾರಗಳನ್ನು ಸ್ವತಃ ಕಲಾವಿದರಾದ
ಅನುಭವದಲ್ಲಿ ಬಳಕೆತಂದು ಯಕ್ಷಗಾನದ ಬಗೆಗಿನ ತಮ್ಮ
ಕಾಳಜಿಯನ್ನು ತೋರಿದ್ದಾರೆ. ಇಲ್ಲಿನ ವೇಷಭೂಷಣಗಳೆಂದರೆ ಎಲ್ಲ ಕಲಾವಿದರಿಗೂ ಹಿತವಾದ ಅನುಭವವನ್ನು
ನೀಡುತ್ತದೆ. ತಲೆಗೆ ಹೊಂದುವಂತೆ ಕೂರುವ ಕಿರೀಟ ಮತ್ತು
ಕೇಶ ವಿನ್ಯಾಸಗಳು ದೇಹಕ್ಕೆ ಹಿತವಾಗಿ ಹೊಂದಿಕೊಳ್ಳುವ ವಸ್ತ್ರಗಳು ಪ್ರತಿಯೋಂದು ಯಕ್ಷಗಾನದ
ಸೊಬಗನ್ನು ಸಾರುತ್ತವೆ.
ಇಂದು ಯಕ್ಷಗಾನ ಕ್ಷೇತ್ರದಲ್ಲಿ ಪೈವಳಿಕೆಯ ಹೆಸರು
ಕೇಳಿಬರುತ್ತಿದ್ದರೆ ಅದಕ್ಕೆ “ಗಣೇಶ ಕಲಾವೃಂದ ಪೈವಳಿಕೆ” ತನ್ನದೆ ಆದ ಕೊಡುಗೆಯನ್ನು ನೀಡಿದೆ.
ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಅಭಿಮಾನದ ದೇವಕಾನ ಮಾಸ್ಟ್ರು ಈ ಬಗೆಯಲ್ಲಿ ಯಕ್ಷಗಾನದ ಬಳ್ಳಿಯಲ್ಲಿ
ಹೂವನ್ನು ಅರಳಿಸಿ ಆ ಕಂಪು ಎಲ್ಲೆಡೆ ಪಸರಿಸುವಂತೆ ಮಾಡಿಬಿಟ್ಟಿದ್ದಾರೆ. ದೇವಕಾನವನ್ನು ಇಂದು
ಯಕ್ಷರಂಗದ ಚೌಕಿಯನ್ನಾಗಿಸಿ ಯಕ್ಷಗಾನದಲ್ಲಿ ಚೌಕಿಯ ಮಹತ್ವ ಏನಿದೆ ಎಂದು ತಿಳಿಸಿಕೊಟ್ಟಿದ್ದಾರೆ. ಯಕ್ಷಗಾನದ ಅಭಿಮಾನಿಗಳ
ಹೃದಯದ ಅಂಗೀಕಾರ ಬಹಳಷ್ಟುಗಳಿಸಿದರೂ, ಸಿಗಬೇಗಾದ
ಪ್ರಶಸ್ತಿಯ ಗರಿಮೆಯಾಗಲೀ ಆ ಮೂಲಕ ಇವರ ಕಾರ್ಯವನ್ನು ಗುರುತಿಸುವ ಪ್ರಯತ್ನ ಆಗಲಿಲ್ಲ ಎಂದೇ ನನ್ನ
ಅನಿಸಿಕೆ. ಆದರೂ ಅದಾವುದನ್ನು ಎದುರು ನೋಡದ ಇವರು ಚೌಕಿಯ ಒಳಗಿನ ಸಾಮ್ರಾಜ್ಯದಲ್ಲಿ ಮಹಾರಾಜನಾಗಿ
ಭಲ್ಲಿರೇನಯ್ಯ... ಎಂಬ ಪ್ರಶ್ನೆಗೆ
ಉತ್ತರವಾಗಿಬಿಡುತ್ತಾರೆ.
