![]() |
| ಚಿತ್ರ ಕೃಪೆ : ಶ್ರೀ ನಟರಾಜ ಉಪಾಧ್ಯಾಯ ಅಂತರ್ಜಾಲ ವಿಡಿಯೋ ಕೃಪೆ. |
ಕಾರ್ತಿಕ ಮಾಸದ ತಂಪನ್ನು ಯಕ್ಷಗಾನ ಸಾರಸ್ವತ ಲೋಕ
ಸ್ವಾಗತಿಸುವುದು ಸಂಪಾಜೆ ಯಕ್ಷೋತ್ಸವದ ಬಿಸಿಯಿಂದ. ಶ್ರಾವಣ ಮಾಸ ಕಳೆದೊಡನೆ ಯಕ್ಷಪ್ರೇಮಿಗಳ ಒಂದು
ದೃಷ್ಟಿ ಕೀಲಾರು ಪ್ರತಿಷ್ಠಾನ ಪ್ರಕಟಣೆಯ ಕಡೆಗೆ. ಅಲ್ಲಿ ಈ ವರ್ಷದ ಪ್ರಸಂಗಗಳು ಯಾವುದು?
ಕಲಾವಿದರು ಯಾರು ? ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಬಹುತೇಕ ಎಲ್ಲ ಕಲಾವಿದರೂ ಸಮ್ಮಿಳಿತವಾಗುವುದರಿಂದ
ಕಲಾವಿದರ ವಿಂಗಡನೆ , ಯಾರು ಎಲ್ಲಿಲ್ಲಿಗೆ ? ಎಂಬ ನಿರೀಕ್ಷೆ ಮಾತ್ರವೇ ಇರುತ್ತದೆ. ಅಷ್ಟೊಂದು
ನಿರೀಕ್ಷೆಯನ್ನು ಕಾತರವನ್ನು ಹುಟ್ಟಿಸುವ ಸಂಪಾಜೆ ಯಕ್ಷೊತ್ಸವ ಪ್ರತಿವರ್ಷದ ದೀಪಾವಳಿ ಜತೆಗಿನ
ಯಕ್ಷಪರ್ವ ಎಂದೆ ಕರೆಸಿಕೊಳ್ಳುತ್ತದೆ. ವರ್ಷದಿಂದ ವರ್ಷಕ್ಕೆ ವೈಶಿಷ್ಟ್ಯಗಳನ್ನು ಹೊತ್ತು ತರುವ ಈ
ಉತ್ಸವ ಯಕ್ಷಪ್ರೇಮಿಗಳಿಗೆ ದೀಪಾವಳಿ ಅಭ್ಯಂಜನವನ್ನು ಮಾಡಿಸಿಬಿಡುತ್ತದೆ. ಹೋಗುವವರು ಹೋಗುವ ಸಡಗರದಲ್ಲಿ ಹೋಗದವರು ಹೋಗಲಾಗದ
ಹತಾಶೆಯಲ್ಲಿ ಕಳೆದರೆ ಇದರ ಪರಿವೆ ಇಲ್ಲದಂತೆ ಯಾರ ವಿಮರ್ಷೆ ಪ್ರತಿಕಿಯೆಗೂ ಕಾಯದೆ ಅದ್ಧೂರಿಯಲ್ಲಿ
ನಡೆದುಹೋಗುತ್ತದೆ. ಆ ವರ್ಷದ ಮೇಳಗಳ ಸಂಚಾರಕ್ಕೆ ಮುನ್ನುಡಿಯನ್ನು ಬರೆದು ದಿಗ್ವಿಜಯಕ್ಕೆ
ವೀಳ್ಯವನ್ನು ಅನಧಿಕೃತವಾಗಿ ನೀಡಿದಂತೆ ಸಂಪಾಜೆ ಯಕ್ಷೋತ್ಸವ.
ಯಕ್ಷೋತ್ಸವದ ವೈಶಿಷ್ಟ್ಯತೆಗಳನ್ನು ಪಟ್ಟಿ ಮಾಡುತ್ತಾ
ಹೋದಲ್ಲಿ ಅದು ಬೆಳೆಯುತ್ತಾ ಹೋಗುತ್ತದೆ. ಪ್ರತೀ ವರ್ಷವೂ ವೈಶಿಷ್ಟ್ಯಗಳು ಸಂಪಾಜೆ
ಯಕ್ಷೋತ್ಸವಕ್ಕಾಗಿಯೆ ಹುಟ್ಟು ಹಾಕಿದಂತೆ ಭಾಸವಾಗುತ್ತದೆ. ಕಲಾವಿದರ, ಪ್ರೇಕ್ಷಕರ, ಕೊನೆಗೆ ಸಂಘಟಕರ ನಿರೀಕ್ಷೆಗೂ ಮೀರಿ ವೈಶಿಷ್ಟ್ಯದಲ್ಲೇ
ವಿಶೇಷ ನಡೆದು ಹೋಗುತ್ತದೆ. ಇದು ಅಲ್ಲಿನ ವಿಶೇಷ. ಇನ್ನು ಅಲ್ಲಿಗೆ ಹೋದವರ ಮೊಬೈಲ್ ಹೋಗದೇ
ಮನೆಯಲ್ಲಿ ಉಳಿದವರ ಮೊಬೈಲು ಉತ್ಸವ ಸಂಪನ್ನವಾಗುವವರೆಗೆ ಮಾತ್ರವಲ್ಲ ನಂತರವೂ ಸದಾ
ಕ್ರಿಯಾಶೀಲವಾಗಿದ್ದುಕೊಂಡು ಬಿಸಿ ಬಿಸಿ ವರದಿಗಳ ವಿನಿಮಯ ರಾತ್ರಿ ಹಗಲೆನ್ನದೆ ಆಗುತ್ತದೆ. ಈ
ಕಾತುರ ನಿರೀಕ್ಷೆಗಳನ್ನು ತಾನೇ ತಾನಾಗಿ ಹುಟ್ಟುಹಾಕುವುದೇ ಸಂಪಾಜೆ ಯಕ್ಷೋತ್ಸವದ ಮತ್ತೊಂದು
ವೈಶಿಷ್ಟ್ಯತೆ.
ಈ ಸಲದ ಯಕ್ಷೋತ್ಸವದ ಒಂದು ನಿರೀಕ್ಷೆ ಉತ್ತರಾರ್ಧದಲ್ಲಿ ನಡೆಯುವ ಪ್ರಸಂಗದ ಮೇಲೆ ಇತ್ತು. ಎಲ್ಲ ಪ್ರಸಂಗಗಳೂ ಬಗೆ ಬಗೆಯ
ವೈಶಿಷ್ಟ್ಯವನ್ನು ಹೊಂದಿದ್ದರೂ ಕೊನೆಯ ಹಂತದಲ್ಲಿ ರಂಗಸ್ಥಳದ ಧೂಳೆಬ್ಬಿಸುವ ಪ್ರಸಂಗದ
ನಿರೀಕ್ಷೆಯೇ ಬೇರೆ. ಎರಡು ಜನ ಭಾಗವತರ ದ್ವಂದ್ವ
ಹಾಡುಗಾರಿಕೆ ಈ ಸಲದ ವಿಶಿಷ್ಟ್ಯತೆಗಳಲ್ಲಿ ಒಂದು. ಸಾಮಾನ್ಯವಾಗಿ
ಬೆಳಗಿನ ಜಾವದ ಯಕ್ಷಗಾನ ಎಂದರೆ ಅದರಲ್ಲೂ ತೆಂಕು ತಿಟ್ಟಿನ ಯಕ್ಷಗಾನಗಳು ಏರು ಶ್ರುತಿಯ
ಭಾಗವತಿಕೆಗೂ ಚೆಂಡೆಯ ಅಬ್ಬರಕ್ಕೆ, ಆಕಾಶ ಭೂಮಿ ಒಂದು ಮಾಡಿಬಿಡುವ ವೇಷಗಳ ಕುಣಿತಕ್ಕೂ ಹೆಸರು
ವಾಸಿಯಾಗಿರುತ್ತದೆ. ಅದರಂತೆ ಇಲ್ಲೂ ಅದರ ಎಲ್ಲ ಲಕ್ಷಣವೂ ತಿಂಗಳ ಮೊದಲು ಹಂಚಿದ ಕರಪತ್ರ ಸಾರಿ
ಸಾರಿ ಹೇಳುತ್ತಿತ್ತು. ಹಾಗಾಗಿ ತೀವ್ರವಾದ
ಕುತೂಹಲ ಹೆಚ್ಚುತ್ತಿದ್ದರೆ, ಇದಕ್ಕೆ ವಾಟ್ಸಾಪ್ ಮುಂತಾದ ಅಂತರ್ಜಾಲ ಮಾಧ್ಯಮಗಳು ಈ ಬಿಸಿಯನ್ನು
ಮತ್ತಷ್ಟು ಹೆಚ್ಚಿಸುತ್ತಿದ್ದವು. ಟಿ. ವಿ. ಮಾಧ್ಯಮಗಳ ತತ್ಸಮಯದ (ಲೈವ್) ವರದಿಗಿಂತಲೂ ಕಡಿಮೆ ಇಲ್ಲದಂತೆ, ಸಂದೇಶಗಳು ಸಂಪಾಜೆಯ ಹಲವು ಮೊಬೈಲ್ ಗಳಿಂದ
ಬಿತ್ತರವಾಗುತ್ತಿದ್ದವು.
ಈ ಬಾರಿ ವಿಶೇಷವಾಗಿ ಉಲ್ಲೇಖಿಸಲ್ಪಟ್ಟು ಬಹು
ನಿರೀಕ್ಷೆಯ ದ್ವಂದ್ವ ಭಾಗವತಿಕೆಯ ಕೊನೆಯ ಹಂತ.
ಯುವ ಭಾಗವತ ಶ್ರೀ ಬಲಿಪ ಪ್ರಸಾದ ಮುತ್ತು
ಶ್ರೀ ಹೊಸಮೂಲೆ ಗಣೇಶ ಭಟ್ ಇವರ ದ್ವಂದ್ವ ಭಾಗವತಿಕೆ. ಈರ್ವರೂ ಯಕ್ಷಲೋಕದಲ್ಲಿ ಏರುಕಂಠದ
ಹುಲಿಗಳೆಂದೇ ಜನ ಜನಿತರು. ಅದರಲ್ಲೂ ಪ್ರಸಾದ ಬಲಿಪರು ಭಾಗವಹಿಸಿದ ಪ್ರತಿ ಆಟಗಳಲ್ಲೂ ತನ್ನ ಏರು
ಶೃತಿಯ ಕಂಠದಿಂದ ಜನಪ್ರಿಯತೆಯನ್ನು ಗಳಿಸುತ್ತಾ ಸಾಗಿದವರು. ಹೊಸಮೂಲೆಯವರಂತೂ ಒಂದು ರೀತಿಯ ಹಳೆಯ ಹುಲಿ.
ಕರಪತ್ರದಲ್ಲಿ ಬೆಳಗಿನ ಜಾವ ಮೂರು ಘಂಟೆಗಿದ್ದರೂ
ಸರಿಯಾಗಿ ಪ್ರಸಂಗ ಆರಂಭವಾದ ಸಂದೇಶ ಪ್ರಸಾರವಾಗುವಾಗ
ಮರುದಿನ ಸೂರ್ಯ ನಡು ನೆತ್ತಿಯ ಹತ್ತಿರ ಬಂದಾಗಿತ್ತು. ಸೂರ್ಯ ಬಿಸಿಯ ಜತೆಗೆ ಭೂಗರ್ಭವೇ
ಬಿರಿಯುವಂತೆ ಯಕ್ಷಗಾನದ ಹಾಡುಗಳು ಒಂದರ ನಂತರ ಒಂದರಂತೆ ಹೊಮ್ಮತೊಡಗಿದವು. ಕೆಲವು ಪದಗಳಂತೂ
ಧ್ವನಿವರ್ಧಕದ ಅವಶ್ಯಕತೆಯೇ ಬೇಡವೆನ್ನುವ ಭ್ರಮೆಯನ್ನು ಹುಟ್ಟಿಸುತ್ತಿದ್ದವು. ಈಬ್ಬರೂ ಭಾಗವತರೂ
ಜತೆಯಲ್ಲಿ ಚೆಂಡೆ ಮದ್ದಲೆಯ ಹಿಮ್ಮೇಳದವರು ತಮ್ಮ ಶಕ್ತಿ ಮೀರಿ ಅಧ್ಬುತ ಪ್ರದರ್ಶನವನ್ನು
ನೀಡಿದರು. ಆರಂಭದಿಂದಲೇ ಶ್ರುತಿ ಏರುತ್ತಾ
ಏರುತ್ತಾ ಪ್ರೇಕ್ಷಕರ ಹೃದಯ ಸ್ತಂಭನ ವಾಗುವುದೋ
ಎಂಬ ಭ್ರಮೆಯನ್ನು ಹುಟ್ಟಿಸುತ್ತಿತ್ತು.
ದ್ವಂದ್ವ ಭಾಗವತಿಕೆ
ಯಕ್ಷಗಾನದಲ್ಲಿ ಕೇವಲ ರಂಜನೆಗಾಗಿ ಮಾತ್ರವೇ ಪರಿಗಣಿಸಲ್ಪಡುತ್ತದೆ. ಸಹಜವಾದ ಕ್ರಮಬದ್ದವಾದ ಯಕ್ಷಗಾನಕ್ಕೆ ಇದು ಸೂಕ್ತವಲ್ಲ. ಇದು ಅನಿವಾರ್ಯವೂ
ಅಲ್ಲ. ಅನಿವಾರ್ಯವಾಗಲೂ ಬಾರದು. ಆದರೂ ದ್ವಂದ್ವದ ರಸಮಂಜರಿಯ ಧಾರೆ ಜನಪ್ರಿಯತೆಗೆ ಸುಲಭದ ರಹದಾರಿ
ಎಂದರೆ ತಪ್ಪಿಲ್ಲ. ದ್ವಂದ್ವ
ಎಂದೊಡನೆ ಒಂದು ವಾಹನಕ್ಕೆ ಎರಡು ಚಾಲಕರನ್ನು ಅಳವಡಿಸಿದಂತೆ. ಒಂದು ಕಲಾಪ್ರಾಕಾರ
ಸುಂದರ ರೂಪವನ್ನು ಪಡೆದುಕೊಳ್ಳುವುದಕ್ಕೆ ಸ್ಪರ್ಧೆ ಬೇಕು ಆದರೆ ಅದು ಅನಿವಾರ್ಯವಾಗಕೂಡದು.
ಇಲ್ಲಿ ಮನೋಭಾವ ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತದೆ.
ಇಂದಿನ
ಸ್ಪರ್ಧಾಮಯ ಜಗತ್ತಿನಲ್ಲಿ ಸ್ಪರ್ಧೆ ಇರುವಲ್ಲಿ ಮಾತ್ರವೇ ಉತ್ತಮವಾದುದು ಸೃಷ್ಟಿಯಾಗಬಹುದು. ಆದರೆ
ಆ ಸ್ಪರ್ಧೆ, ಉತ್ತಮವಾದುದು ಹೊರಗೆ ಬರುವುದಕ್ಕೆ
ಮಾತ್ರವೇ ಸೀಮಿತವಾಗಿರಬೇಕು. ಪ್ರತಿಸ್ಪರ್ಧಿಯನ್ನು ಸೋಲಿಸದೆ ಗೆಲ್ಲುವುದೇ ನಿಜವಾದ ಗೆಲುವು. ನೈಜ
ಬದುಕಿನಲ್ಲೂ ಹಾಗೆ ಮುಂದೆ ಗಮಿಸುವಲ್ಲಿ ಸ್ಪರ್ಧೆ ಅನಿವಾರ್ಯ. ಆದರೆ ಸ್ಪರ್ಧೆಯಲ್ಲಿ
ದಮನಕಾರಿ ನೀತಿ ಸುಳಿಯಬಾರದು. ಇನ್ನೊಬ್ಬರ ಗೆಲುವಲ್ಲಿ ನಮ್ಮ ಗಮ್ಯವನ್ನು ಗುರುತಿಸುವ
ದೃಷ್ಟಿಇರಬೇಕು. ಅದೇ ರೀತಿ ಯಕ್ಷಗಾನದಲ್ಲಿ
ಒಬ್ಬ ಸೋತರೆ ಮತ್ತೊಬ್ಬ ಗೆಲ್ಲಬಹುದು. ಆದರೆ ಒಬ್ಬನ ಸೋಲು ಅದು ಕಲೆಯ ಸೋಲು ಕೂಡ ಆಗುತ್ತದೆ.
ಹಾಗಾಗಿ ದ್ವಂದ್ವ ಎಂಬುದು ಸರಸವಾಗಿ ಸ್ಪರ್ಧೆಯಾಗಿ ಪರಸ್ಪರ ಮನೋಭಾವ ಅರಿತು ಇಬ್ಬರೂ ಗೆದ್ದಲ್ಲಿ
ಯಕ್ಷಗಾನಕ್ಕೆ ಅಮೋಘವಾದ ಜಯ ಪ್ರಾಪ್ತಿಯಾಗುವುದು. ಪ್ರತಿಸ್ಪರ್ಧಿಯನ್ನು ಹೇಗಾದರೂ ಹಿಂದಿಕ್ಕುವುದೇ
ಗುರಿಯಾದಾಗ ಅಲ್ಲಿ ಕಲೆಯೂ ಕಾಣುವುದಿಲ್ಲ ಯಾವುದೂ ಕಾಣುವುದಿಲ್ಲ ಗೆಲುವೊಂದೇ ಕಾಣುತ್ತದೆ.
ಮನೋಭಾವದ ವೆತ್ಯಾಸವಾದರೆ ’ಜುಗಲ್ಬಂದಿ ’ಜಗಳಬಂದಿಯಾಗಬಹುದು.
ಯಕ್ಷಗಾನ
ಭಾಗವತಿಕೆಯಲ್ಲಿ ಹಲವು ದ್ವಂದ್ವ ಗಾಯನಗಳು ಜನಪ್ರಿಯವಾಗಿವೆ. ಆದರೆ ಅದರಲ್ಲಿ ಇಂದಿಗೂ
ನಿರಾತಂಕವಾಗಿ ಅನುಭವಿಸುವಂತೆ ಆಗುವುದು ಕೆಲವೇ ಕೆಲವು ಜತೆಗಾರಿಕೆಗಳು ಮಾತ್ರ. ಇತ್ತೀಚೆಗೆ
ಹಿರಿಯ ಭಾಗವತರಾದ ಬಲಿಪ್ಪರು ಮತ್ತು ಹೊಳ್ಳರು ದ್ವಂದ್ವ ಹಾಡುವಾಗ ಹಿತವಾಗುತ್ತದೆ. ಅಲ್ಲಿ ಸ್ಪರ್ಧೆಇದ್ದರೂ ಸೋಲು ಗೆಲುವು ಇರುವುದಿಲ್ಲ. ಬದಲಿಗೆ
ಪ್ರಸ್ತುತವಾಗುವ ಹಾಡು ಗೆಲುವನ್ನು ಸಾಧಿಸುತ್ತದೆ. ಇದನ್ನೇ ಮನೋಭಾವ ಎನ್ನುವುದು. ಹಿಂದೆ ಇದೇ
ರೀತಿ ಹಲವು ಕಲಾವಿದರ ದ್ವಂದ್ವ ಗಾಯನ ರೋಮಾಂಚನವನ್ನು ತರುತ್ತಿತ್ತು. ಹಿಂದೆ ಹಿರಿಯ ಭಾಗವತರಾದ
ತೆಂಕಬೈಲು ಮತ್ತು ಪದ್ಯಾಣರು ಹಾಡಿದಾಗಲೂ ಇದೇ ಮಾರ್ದವತೆಯನ್ನು ಅನುಭವಿಸಿದ ನೆನಪುಂಟು. ಹೀಗೆ ಹಲವು ಜತೆಗಾರಿಕೆಗಳೂ ದ್ವಂದ್ವಗಾಯನ
ಸೌಂದರ್ಯವನ್ನು ತೆರೆದಿಟ್ಟಿವೆ. ದ್ವಂದ್ವಗಾಯನ ಎಂದಿಗೂ ಅನಿವಾರ್ಯವಲ್ಲ ಎಂಬ ಜವಾಬ್ದಾರಿಯ ಅರಿವಿನಲ್ಲಿ
ದ್ವಂದ್ವಗಾಯನ ಜನಪ್ರಿಯವಾಗಲಿ ಎಂಬ ಆಶಯ.
