ಯಕ್ಷಗಾನದಲ್ಲಿ
ಭೀಷ್ಮ ಪರ್ವ ಮತ್ತು ಭೀಷ್ಮಾರ್ಜುನ ಹೀಗೆ
ಮೇಲ್ನೋಟಕ್ಕೆ ಒಂದೇ ತೆರನಾಗಿ ಕಾಣುವ ಪ್ರಸಂಗಗಳಿವೆ. ಈ ಎರಡು ಪ್ರಸಂಗಗಳೂ ತಾಳಮದ್ದಲೆ ಕ್ಷೇತ್ರದಲ್ಲಿ
ಜನಪ್ರಿಯ ಪ್ರಸಂಗಗಳು. ಯಕ್ಷಗಾನ ಅರ್ಥ ಸಾಹಿತ್ಯಕ್ಕೆ ಸಂಪನ್ಮೂಲವನ್ನು ಒದಗಿಸಿದಂತಹ ಪ್ರಸಂಗಗಳು.
ಭೀಷ್ಮಾರ್ಜುನದಲ್ಲಿ ಕೌರವನ ಒಡ್ಡೋಲಗ, ಭೀಷ್ಮ ಸೇನಾಧಿಪತ್ಯ, ಕರ್ಮಬಂಧ, ಭೀಷ್ಮಾರ್ಜುನ ಹೀಗೆ ನಡೆದರೆ, ಭೀಷ್ಮ
ಪರ್ವದಲ್ಲಿ ಕೌರವನ ಒಡ್ದೋಲಗ, ಭೀಷ್ಮ ಸೇನಾಧಿಪತ್ಯ ಭೀಷ್ಮಾರ್ಜುನ ಕಾಳಗ, ಭೀಷ್ಮ ಶರಶಯ್ಯೆ. ಈ
ಪ್ರಸಂಗಗಳಿಂದ ಕ್ರೋಢೀಕರಿಸಿ ಅದನ್ನು ಸಮನ್ವಯಗೊಳಿಸಿ ಮತ್ತು ವಿಶ್ಲೇಷಣೆಗಳೊಂದಿಗೆ ಯಕ್ಷಗಾನ
ಅರ್ಥ ಸಾಹಿತ್ಯದ ಶ್ರೀಮಂತಿಕೆಯನ್ನು ಬಿಂಬಿಸಿ ಅದನ್ನು ಸಾಂಕೇತಿಕವಾಗಿ ತೋರಿಸುವ ಪ್ರಯತ್ನವಿದು.
ಯಕ್ಷಗಾನ ತಾಳಮದ್ದಲೆಯ ಅರ್ಥಗಾರಿಕೆಯ ಯಥಾವತ್ ಹಾಗೇ
ತೆರೆದಿಡುವುದು ಸಾಧ್ಯವಾಗದ ಮಾತು. ಹಾಗೆಂದು ಕೇವಲ ವೈಶಿಷ್ಟ್ಯವನ್ನಷ್ಟೇ ತೋರಿಸಿದರೆ ಅದು ಒಂದು
ರೀತಿಯ ಅಪೂರ್ಣ ದರ್ಶನವೇ ಆಗಿಬಿಡುತ್ತದೆ. ಆದರೂ
ಈ ಪ್ರಪಂದೊಳಗೆ ಸಂಚರಿಸುವಾಗ ಆಗುವ ವಿಚಿತ್ರ ಆಹ್ಲಾದತೆಯ ಅನುಭವವನ್ನು ವಿಶ್ಲೇಷಣೆಯ ರೂಪದಲ್ಲಿ ತೋರಿಸುತ್ತಾ ಆ ಮೂಲಕ
ಅರ್ಥಗಾರಿಕೆಯ ವೈಶಿಷ್ಟ್ಯವನ್ನು ಕಂಡಂತೆ ತೋರಿಸುವುದು ಸಾಧ್ಯವಾಗುತ್ತದೆ. ಇದು ಸಮಗ್ರವಾದ ತಾಳ
ಮದ್ದಲೆಯಾಗಲೀ ಅರ್ಥಗಾರಿಕೆಯಾಗಲಿ ಆಗುವುದಿಲ್ಲ. ವಿವಿಧ ತಾಳಮದ್ದಲೆಯಲ್ಲಿ ಕಂಡುಕೊಂಡ
ವೈಶಿಷ್ಟ್ಯತೆಯಷ್ಟೇ ಇಲ್ಲಿ ಆಹಾರ್ಯ ವಸ್ತುಗಳಾಗಿವೆ. ಅರ್ಥ ಪ್ರಪಂಚದಲ್ಲಿ ವಿಹರಿಸುತ್ತ, ಅನುಭವಿಸುತ್ತ ಮತ್ತು ದೃಷ್ಟಿಗೆ ಗೋಚರಿಸಿದ್ದನ್ನು
ಪರಾಂಬರಿಸುತ್ತ ಅದನ್ನು ವಿವರಿಸುತ್ತಾ ಹೋಗುವುದು ಒಂದು ವಿಶಿಷ್ಟ ಅನುಭವವಾಗಿ ಪರಿಣಾಮವನ್ನು
ಬೀರುತ್ತದೆ. ಆರಂಭಿಸುವಾಗ ಇದು ಹೇಗೆ ರೂಪೀಕರಿಸಬಹುದು ಎಂಬ ಬಗ್ಗೆ ಸ್ಪಷ್ಟ ಕಲ್ಪನೆಯೇ ಇರಲಿಲ್ಲ.
ಯಾಕೆಂದರೆ ಹಲವನ್ನು ಸಮನ್ವಯಗೊಳಿಸಿ ಅದಕ್ಕೊಂದು ಸ್ಪಷ್ಟ ಆಕಾರವನ್ನು ರೂಪಿಸಿ ಮತ್ತು ಅದನ್ನು
ಬರಹ ರೂಪದ ಪುಟಗಳಿಗೆ ಸೀಮಿತಗೊಳಿಸುವುದು ಬಹಳ ಸಾಹಸದ ಕೆಲಸ ಅಂತ ಈಗ ಅನ್ನಿಸತೊಡಗಿದೆ. ಆದರೂ
ಯಥಾಶಕ್ತಿಯ ಪ್ರಯತ್ನ ಮಾತ್ರ ಇಲ್ಲಿ. ಅದೆಷ್ಟು ಬಗೆಯಲ್ಲಿ ಪರಿಣಾಮಕಾರಿಯಾಗಿದೆಯೋ ತಿಳಿಯದು. ಇದು ಯಕ್ಷಗಾನ ತಾಲಮದ್ದಲೆಗಳಲ್ಲಿ ಪಾತ್ರವೊಂದು ಹೇಗೆ
ತೆರೆದುಕೊಳ್ಳುತ್ತದೆ ಅದರ ವೈಶಿಷ್ಟ್ಯತೆಯ ಸಂಕ್ಷೇಪ ವಿವರಣೆಯನ್ನಷ್ಟೇ ಇಲ್ಲಿ ಬರೆಯಲಾಗಿದೆ.
ಬರವಣಿಗೆಗೆ ಅನುಕೂಲವಾಗುವಂತೆ ಆ ಬಗೆಯಲ್ಲಿ ಸ್ವಲ್ಪ ಸ್ವಾತಂತ್ರ್ಯವನ್ನು
ಉಪಯೋಗಿಸಿಕೊಳ್ಳಲಾಗಿದೆ. ಹಾಗಾಗಿ ಭೀಷ್ಮನ
ಪಾತ್ರದ ದೃಷ್ಟಿಕೋನವನ್ನು ಆಧರಿಸಿ ವಿಶ್ಲೇಷಣೆಯನ್ನು ಚಿತ್ರಿಸುವ ಪ್ರಯತ್ನವಿದು. ಅರ್ಥಗಾರಿಕೆಯ ಸವಿಯನ್ನು ಸವಿಯುವುದಷ್ಟೇ ಇಲ್ಲಿಯ ಮೂಲ
ಉದ್ದೇಶ.
ಭಾಮಿನಿ
ಅರಸ ಕೇಳಾ
ಕ್ಷಣದಿ ಭೀಷ್ಮನು |
ಕುರುಪತಿಯೊಳಿಂತೆಂದ ವೇಗದಿ |
ಕರಿ ತುರಗ
ರಥ ಪತ್ತಿ ಮಹರಥರೆಲ್ಲ ಪೊರಮಡಲಿ ||
ಸುರನರೋರಗರೆಲ್ಲ ಮೆಚ್ಚುವ |
ತೆರದಿ ರಿಪುಸೇನೆಯಲಿ
ಹಳಚುವೆ |
ಕರಿಗೆ ಬೆದರುವುದುಂಟೆ
ಕಂಠೀರವನು ಸಂಗರದಿ||
ಎಂದು ಭೀಷ್ಮನು
ಹರಿನಾದಗೆಯ್ಯುತ್ತ |
ಚಂದದಿಂದಲೆ ಧರಿಸಿ
ಚಾಪವ | ಸ್ಯಂದನವ ತಾನೇರಿದ
||
ಮಕ್ಕಳ ಜಗಳವನ್ನು ನೋಡಲಾರೆ, ಇದು ಚಂದ್ರವಂಶದ ಅಪಜಯವೆಂದು ಭೀಷ್ಮ ತಳಮಳಿಸುತ್ತಾ ರಥವನ್ನು ಏರಿದ.ಆದರೆ ಇತ್ತ ಧೃತ ರಾಷ್ಟ್ರ ಮಕ್ಕಳ ಜಗಳವನ್ನು ನಿಲ್ಲಿಸುವುದಕ್ಕೆ ಪ್ರಯತ್ನಿಸಬೇಕಾದವನು, ಯಾವುದನ್ನೂ ಯಾವ ಪಿತಾಮಹನಾದವನು ನೋಡಲು ಬಯಸಬಾರದೋ ಅಥವಾ ಬಯಸುವುದಿಲ್ಲವೋ, ಆ ದುರಂತವನ್ನು
ಕಣ್ಣಾರೆ ಕಾಣಲಾರೆನಲ್ಲಾ ಎಂದು ಪರಿತಪಿಸುತ್ತಾನೆ!!. ಕಾಣಬಾರದದ್ದನ್ನು
ಬಲವಂತವಾಗಿ ಕಾಣುವ ತುಡಿತ ಅವನಿಗೆ, ಅದಕ್ಕಾಗಿ
ಸಂಜಯ ಕಣ್ಣಾಗಿ ದೊರೆತ. ಜನ್ಮಾಂಧತೆಯನ್ನು ಆ ಒಂದು ಕ್ಷಣವಾದರೂ ವರವೆಂದು
ತಿಳಿಯಲಾರದೇ ಹೋದ. ಆಮೂಲಕ ತಾನು ಕೇವಲ ಕಣ್ಣಿನಿಂದ ಮಾತ್ರ ಅಂಧನಲ್ಲ ಎಂದು
ತೋರಿಸಿಕೊಡುತ್ತಾನೆ. ತನ್ನ
ಮಕ್ಕಳು ವಾಯು ಪುತ್ರನ ತೋಳ ಹಸಿವಿಗೆ ಬಲಿಯಾಗುವುದನ್ನು ಕಾಣುವ ದುರ್ದೈವವನ್ನು ಆತ ಕೇಳಿ ಪಡೆದುಕೊಳ್ಳುತ್ತಾನೆ.
ಒಂದು ಸೇನೆ ಭೀಷ್ಮಾಭಿರಕ್ಷಿತಂ ಎಂದು ಕರೆಸಿಕೊಂಡರೆ ಇನ್ನೊಂದು ಭೀಮಾಭಿರಕ್ಷಿತಂ.
ಆದರೂ ಇದು ಅಪರ್ಯಾಪ್ತವೆಂದು ಎಲ್ಲರಿಗೂ ತಿಳಿದ ವಿಚಾರ. ಹಾಗಿದ್ದರೂ ರಕ್ಷಕ ಎಂಬ ವೇಷಮಾತ್ರವೇ?
ಕುರು
ಕುಲ ವೃದ್ಧ ಸೇನಾನಿ ರಥವನ್ನು ಏರುವುದರೊಂದಿಗೆ ಅದಕ್ಕಾಗಿ ಕಾಯುತ್ತಿದ್ದ ಪಟುಭಟರೆಲ್ಲ
ಯುದ್ಧೋತ್ಸಾಹವನ್ನು ತೋರುತ್ತಿದ್ದರು. ಶರಧಿತುಲ್ಯವಾಗಿ
ಸೇರಿದ ಸೇನೆಯನ್ನು ಭೀಷ್ಮ ಅವಲೋಕಿಸುತ್ತಾನೆ.
ಒಬ್ಬೊಬ್ಬರ ಹಿನ್ನೆಲೆಯೂ ಒಂದೊಂದು ಬಗೆಯದು. ಉತ್ಸಾಹ ಸಮುದ್ರಘೋಷದಂತೆ ಮೊಳಗುತ್ತಿದೆ.
ಯೋಚಿಸುತ್ತಾನೆ ಭೀಷ್ಮ. ಯುದ್ದದ ಮೊದಲ ಪ್ರಹಾರ
ಎಲ್ಲಿಂದ ತೊಡಗುತ್ತದೋ ಎಂಬ ಕುತೂಹಲದಲ್ಲಿತ್ತು ಸೇನೆ. ಬಹುಶಃ ಶ್ರೀಕೃಷ್ಣನ ಸಂಧಾನ ಯಶಸ್ವಿಯಾಗಿ
ಕೌರವ ಪಾಂಡವರ ದಾಯಾದಿ ಕಲಹ ಸಾಮರಸ್ಯದಲ್ಲಿ ಅಂತ್ಯವಾಗಿ ಈ ಯುದ್ದ ಘಟಿಸದೇ ಇರುತ್ತಿದ್ದರೆ
ಕಾಣುತ್ತಿರುವ ಈ ಉತ್ಸಾಹ ಎಲ್ಲಿ ಅಡಗಿರುತ್ತಿತ್ತು? ಈ ಅಣ್ಣತಮ್ಮಂದಿರ ದ್ವೇಷ, ಚಂದ್ರವಂಶದ
ಕೌಟುಂಬಿಕ ಕಲಹ ಕೇವಲ ನಿಮಿತ್ತವಾಗಿ ಪರಿಣಮಿಸಿತೇ? ಇಲ್ಲವಾದರೆ ಯಾಕೀ ಉತ್ಸಾಹ? ಇಲ್ಲಿ ಕೇವಲ ಪಾಂಡವ ಕೌರವ ದ್ವೇಷ ಮಾತ್ರವೇ? ತಮ್ಮ
ದ್ವೇಷ ಸಾಧನೆಗೆ ಈ ದಾಯಾದಿ ವೈಷಮ್ಯ ಇವರಿಗೆಲ್ಲ ಮಾಧ್ಯಮವಾಗಿ ಪರಿಣಮಿಸಿತಲ್ಲ? ದ್ರೋಣ, ದ್ರುಪದ
ದ್ರುಷ್ಟದ್ಯುಮ್ನ ಆ ಅಶ್ವಸೇನ ಈ ಎಲ್ಲ
ವ್ಯಕ್ತಿತ್ವಗಳ ಸಂಘರ್ಷದ ಮುಂದುವರಿಕೆ ಇಲ್ಲಿಯೂ ಆಗದೇ ಇರಲು ಸಾಧ್ಯವೇ? ಲೋಕ ಪ್ರಸಿದ್ಧವಾದ ಕರ್ಣಾರ್ಜುನರ ಸ್ಪರ್ಧೆ
ವೈಷಮ್ಯದತ್ತ ತಿರುಗಿ ಅದರ ಪ್ರಭಾವ ಇಲ್ಲಿಯೂ ಮುಂದುವರಿಯದೇ ಇರಲು ಸಾಧ್ಯವೇ? ಕಣ್ಣಿಗೆ ಕಾಣದ
ಅದೆಷ್ಟು ವೈಷ್ಮಮ್ಯಗಳು ತಮ್ಮ ಸಾಧನೆಗೆ ಈ ಯುದ್ದವನ್ನೇ ಎದುರು ನೋಡುತ್ತಿದೆ? ಒಂದು
ವೇಳೆ ಈ ಯುದ್ದ ಘಟಿಸದೇ ಇರುತ್ತಿದ್ದರೆ ಈ ದ್ವೇಷದ ಅಂತರಂಗದ ಉರಿ ಶಮನವಾಗುತ್ತಿತ್ತೇ?
ಸಾಧ್ಯವಿಲ್ಲ. ಈ ಯುದ್ದ ನಿಂತರು ಇಂಥ ಹಲವು ವೈಷಮ್ಯಗಳು ಹಾಗೇ ಉಳಿದು, ಸಾಧನೆಗೆ ಬೇರೆ ಮಾರ್ಗವನ್ನು ಕಂಡುಕೊಂಡು ಹೊಸ
ಆಯಾಮವನ್ನು ಸೃಷ್ಟಿಸುತ್ತಿದ್ದವು. ಯುದ್ದ ನಿಂತರು ಇವರ ದ್ವೇಷ ನಿಲ್ಲಿತ್ತಿರಲಿಲ್ಲ. ಹಾಗಾದರೆ ಈ
ಅಣ್ಣತಮ್ಮಂದಿರ ಕಲಹ ಇವರಿಗೆ ತಮ್ಮ ದ್ವೇಷ ಸಾಧನೆಗೆ ಒಂದು ರಂಗವನ್ನು ನಿರ್ಮಿಸಿಬಿಟ್ಟಿತಲ್ಲ. ಚಂದ್ರವಂಶದ
ರಾಜಾಶ್ರಯ ಬಗೆ ಹರಿಯದ ಈ ಶತ್ರುತ್ವಕ್ಕೂ ಒದಗಿ ಬಂತಲ್ಲ? ಏನು ವಿಪರ್ಯಾಸ. ಆ ಕರ್ಣ ಏನು ಹೇಳಿದ? ಒಂದು ವೇಳೆ ಈ ಯುದ್ದ ನಡೆಯದೇ ಇದ್ದರೂ ಕರ್ಣಾರ್ಜುನರ
ಕಾಳಗ ಅದು ನಡೆದೇ ನಡೆಯುತ್ತದೆ. ಕಚ್ಚಾಡುವುದಕ್ಕೂ ಈ ಮನುಷ್ಯನಿಗೆ ಅದೇನು ಉತ್ಶಾಹ? ಈಗ ತಾನು ತನ್ನ ಉತ್ಸಾಹವನ್ನು ಪ್ರಕಟ ಪಡಿಸಿ ಈ
ಉತ್ಸಾಹಗಳಿಗೆ ಮುನ್ನುಡಿ ಬರೆಯಲೇಬೇಕಿದೆ. ಅದೂ ಒಂದು ಅನಿವಾರ್ಯತೆ. ಈಗ ಸ್ವತಃ ಯುದ್ದೋತ್ಸಾಹ
ಮೂಡಿಸುವುದಕ್ಕೆ ಭೀಷ್ಮ ತನ್ನ ಶಂಖವನ್ನು ಮೊಳಗಿಸುತ್ತಾನೆ. ಆವರೆಗೆ ಯುದ್ದ ಬೇಡ ಎಂದು ಹೇಳುತ್ತಿದ್ದ ಭೀಷ್ಮ, ಈಗ ತಾನೇ ಸ್ವತಃ ಯುದ್ದದ ಕಿಡಿಯನ್ನು ಹಚ್ಚಿ ಬಿಡುತ್ತಾರೆ. ಕೈಯಲ್ಲಿ ಧನು ಶರಗಳನ್ನು ಹಿಡಿದ ಮೇಲೆ ಭೀಷ್ಮರ
ಕಣ್ಣಿಗೆ ಬರೀ ಯುದ್ದವಷ್ಟೇ ಕಾಣುತ್ತದೆ. ತಮ್ಮ ಧನುಶರಗಳಿಗೆ ವೈರಿ ಎದೆಯ ಗುರಿಯನ್ನಷ್ಟೇ
ತೋರಬಲ್ಲರು. ಭೀಷ್ಮರ ಶಂಖಧ್ವನಿಗೆ ಪ್ರತಿಧ್ವನಿ ಎಂಬಂತೆ ಶ್ರೀ ಕೃಷ್ಣ ಪಾಂಚ ಜನ್ಯವನ್ನು
ಮೊಳಗಿಸಿದರೆ ಅರ್ಜುನ ದೇವದತ್ತವನ್ನು ಮೊಳಗಿಸುತ್ತಾನೆ. ಆನಂತರ ಅನಂತ ವಿಜಯ, ಮಣಿಘ್ಹೋಷ, ಸುಘೋಷ, ಮಣಿ ಪುಷ್ಪಕ ಶಂಖಗಳು ಒಂದರನಂತರ
ಒಂದೊಂದಾಗಿ ಧ್ವನಿ ಎಬ್ಬಿಸುತ್ತವೆ.
ಭಾಮಿನಿ
ಪರಿಯ ನೋಡುತಲಿತ್ತ
ಫಲುಗುಣ |
ಮರುತಸುತ ಸಾತ್ಯಕಿಯರೆಲ್ಲರು
ಧುರಪರಾಕ್ರಮರಾಗಿ ನಾವಿರೆ
ವೈರಿಮೋಹರದಿ ||
ಅರಿಗಳೆಡೆ ಧರ್ಮಜನು
ಸಾರುತ |
ಶರಣುವೊಕ್ಕನಿದೇನೆನುತ್ತಿರೆ |
ಪರಮರೋಷದಿ ಭೀಮ
ಪಲ್ಗಡಿಯುತ್ತಲಿಂತೆಂದ ||
ಇನ್ನೇನು ಯುದ್ದ ಆರಂಭವಾಗಬೇಕು ಎನ್ನುವಾಗ ಯಮಜನ ರಥ
ಮಧ್ಯೆಯೇ ಬಂದು ನಿಂತು ಬಿಡುತ್ತದೆ. ಅದರಿಂದ ಆತ ನಿಧಾನವಾಗಿ ಇಳಿದು ಭೀಷ್ಮರ ರಥದತ್ತ ನಡೆದು
ಬರಲಾರಂಭಿಸಿದ. ಎರಡೂ ಸೇನೆಯ ನಡುವೆ ಅವ್ಯಕ್ತವಾದ ಗೊಂದಲ ಕೋಲಾಹಲ ಆರಂಭವಾಗಿಬಿಟ್ಟಿತು. ಧರ್ಮಜನ
ಈ ಹೆಜ್ಜೆಯ ಉದ್ದೇಶವಾದರೂ ಏನು? ಧರ್ಮಜನ ಹೆಜ್ಜೆ ಎಂದರೆ ಅದು ವ್ಯರ್ಥ ಅಡಿಗಳಲ್ಲ. ಸ್ವತಃ
ಭೀಷ್ಮರೂ ಸಂದೇಹಕ್ಕೆ ಒಳಗಾಗುತ್ತಾರೆ. ನೋಡುತ್ತಾರೆ, ಯುಧಿಷ್ಠಿರ ರಥವಿಳಿದು ನಿಧಾನವಾಗಿ
ಭೀಷ್ಮರತ್ತವೇ ಬರುತ್ತಿದ್ದಾನಲ್ಲ. ಅಣ್ಣನ ನಡೆಯನ್ನು ನೋಡಿ ಭೀಮನೂ ಸಂದೇಹಕ್ಕೆ ಒಳಗಾಗುತ್ತಾನೆ.
ಅಣ್ಣ ವೈರಿ ಪಾಳಯದತ್ತ ಶರಣಾಗತಿಗೆ ತೆರಳಿದನೆ? ಸಿಟ್ಟಿನಿಂದ ಗದೆಯನ್ನು ಎತ್ತಿ ವೈರಿಪಡೆಯನ್ನು
ಚೆಂಡಾಡುವೆನೆಂದು ಮುಂಬರಿಯುತ್ತಾನೆ. ಹನುಮಂತ ಅವನನ್ನು ಸಾಂತ್ವಾನ ಪಡಿಸುತ್ತಾನೆ.
ಭೀಷ್ಮರು ಧನುಶರಗಳನ್ನು ಹೆಗಲಿಗೇರಿಸಿ
ಬರುತ್ತಿರುವ ಯುದ್ದಿಷ್ಠಿರನನ್ನು ನೋಡುತ್ತಿದ್ದಂತೆ ಆತ ಹತ್ತಿರ ಬಂದು ಭೀಷ್ಮರ ಪದತಲಕ್ಕೆ
ಎರಗುತ್ತಾನೆ. ಎರಗಿದವನು ಗುರುಹಿರಿಯರ ಮುಖ ನೋಡಿ ಯುದ್ದಾರಂಭಕ್ಕೆ ಅನುಮತಿಯನ್ನು ಬೇಡುತ್ತಾನೆ. ಈಗ ಭೀಷ್ಮರು
ತಬ್ಬಿಬ್ಬಾಗುತ್ತಾರೆ. ಎಂತಹಾ ಕ್ಷತ್ರಿಯ ಪುತ್ರನೀತ. ನಿಜಕ್ಕೂ ಈತ ಧರ್ಮಾತ್ಮ. ಅಭಿಮಾನದಿಂದ
ಧರ್ಮರಾಯನನ್ನು ಹತ್ತಿರಕ್ಕೆಳೆದು ತಬ್ಪಿಕೊಳ್ಳುತ್ತಾರೆ. ಹರಸುತ್ತಾರೆ ಎಲ್ಲಿ ಧರ್ಮವಿದೆಯೋ
ಅಲ್ಲಿ ಕೃಷ್ಣನಿದ್ದಾನೆ. ಎಲ್ಲಿ ಕೃಷ್ಣನಿದ್ದಾನೋ ಅಲ್ಲಿ ಜಯವಿದೆ. ಧರ್ಮ ಬೀರು ಧರ್ಮಾತ್ಮನಾಗಿ
ವ್ಯವಹರಿಸಿದ. ಧರ್ಮರಾಯನ ಧರ್ಮ ಪ್ರಕಟವನ್ನು ಕಂಡು ಭೀಷ್ಮ ತೃಪ್ತನಾದರೂ ಆಗ ಭೀಷ್ಮ ಅನುಭವಿಸುವ
ಧರ್ಮ ಸಂಕಟ ಕೌರವ ಅರಿಯದೇ ಹೋದ. ಯಾವುದನ್ನು
ಕನಸಿನಲ್ಲೂ ಕಾಣಬಾರದೆಂದು ಭೀಷ್ಮ ಪಿತಾಮಹನಾಗಿ ಭಾವಿಸಿದ್ದರೋ ಅದು ಘಟಿಸಿಯೇ ಹೋಯಿತು. ಹಲವಾರು
ದುಃಸ್ವಪ್ನಗಳು..... ಸ್ವಪ್ನಗಳು ಇಂಥವೇ ಬೇಕೆಂಬ ಆಯ್ಕೆ ಇರುವುದಿಲ್ಲ. ಬೇಕೆಂದರೆ ಅದು ಬರುವುದೂ
ಇಲ್ಲ, ಬೇಡವೆಂದರೆ ನಿಲ್ಲುವುದೂ ಇಲ್ಲ. ಈ ದುಃಸ್ವಪ್ನಗಳೇ ಭೀಷ್ಮನ ಪಾಲಿಗೆ ನನಸಾಗಿಹೋಯಿತೇ? ವಂಶ
ವಿನಾಶದ ಘೋರ ವೈಫಲ್ಯದ ಕನಸು ವಾಸ್ತವದ ಸತ್ಯವಾಗಿ ಈಗ ಕುರುಕ್ಷೇತ್ರದಲ್ಲಿ ಎದುರು ನಿಂತಿದೆ.
ನೋಡುತ್ತಾರೆ, ತಮ್ಮ ಕೈ ಕಂಪಿಸುತ್ತದೆ, ಹಲವರು ವ್ಯಾಖ್ಯಾನಿಸಬಹುದು ಅದು ವೃದ್ಧಾಪ್ಯದಿಂದ ಎಂದು.
ವಂಶದ ಕುಡಿಗಳೂ ವಂಶ ವಿನಾಶದ ಕಲಹಕ್ಕೆ ತೊಡಗುವ ಈ ದುಃಸ್ವಪ್ನ ವಾಸ್ತವದ ಸತ್ಯವಾದರೆ ಕೈ ಕಂಪಿಸದೇ
ಇದ್ದರೆ ಭೀಷ್ಮ ಚಂದ್ರವಂಶದ ಪಿತಾಮಹ ಎನಿಸಿಕೊಳ್ಳುವುದರಲ್ಲಿ ಅರ್ಥವಿದೆಯೇ?
ದಿನವೊಂದಕ್ಕೆ ಹತ್ತು ಸಾವಿರ
ಮುಕುಟಮರ್ದನರ ಶಿರವನ್ನು ಕತ್ತರಿಸುತ್ತಾನೆ ಭೀಷ್ಮ. ಪರೋಕ್ಷವಾಗಿ ಅಪಾರವಾದ ಸೈನ್ಯದಲ್ಲಿ ಮುಕುಟ
ಮರ್ದನರನ್ನು ಅರಸಿ ಅರಸಿ ತರಿಯುತ್ತಾನೆ ಭೀಷ್ಮ. ಶರಧಿಯಲ್ಲಿ ಜಲಚರಗಳನ್ನು ಸರಿಸಿ ಮೀನನ್ನು
ಹುಡುಕುತ್ತಾ....ಹುಡುಕುತ್ತಾ ಇನ್ನು ಏನೋ ಅರಸುತ್ತಾ ಅನ್ವೇಷಕನಂತೆ ಸಂಹರಿಸುತ್ತ ಮುಂದೊತ್ತುತ್ತಾನೆ. ಆ ಅನ್ವೇಷಕನ ಎದುರಿಗೆ ಬಂದು ಬೀಳುವ ರತ್ನಗಳಲ್ಲಿ ಒಂದು
ರತ್ನವೇ ಅಭಿಮನ್ಯು. ಭಾರತ ವರ್ಷದಲ್ಲೇ ಅಂತಹ ರತ್ನವನ್ನು ಅದುವರೆಗೆ ಭೀಷ್ಮ ಕಂಡವನಲ್ಲ. ಅದಕ್ಕೇ
ಅಲ್ಲವೇ ಆತನನ್ನು ’ಭಾರತ ರತ್ನ’ ಎಂದು ಉಪಮೆಯಾಗಿಸಿದ್ದು.
ಬಂಧು ಮೋಹವನ್ನು ಬಿಡು. ಇವರು ಅಜ್ಜ,
ಇವರು ಗುರು, ಇವರು ಮಿತ್ರರು ಇವರು ರಕ್ತಬಂಧುಗಳು ಎಲ್ಲ ಬಾಂಧವ್ಯವನ್ನು ಬದಿಗೊತ್ತಿ
ಕ್ಷತ್ರಿಯನಾಗಿ ಆ ಧರ್ಮವನ್ನು ತಿಳಿ. ಇದು ಪಾರ್ಥನಿಗೆ ಪಾರ್ಥಸಾರಥಿಯ ಪ್ರತಿಜ್ಞೆ. ಹೀಗೆ
ಹೇಳುವಾಗ ಭೀಷ್ಮ ಗಮನಿಸುತ್ತಾನೆ, ಕೃಷ್ಣನ ಕೈಗಳು ಬಹಳಷ್ಟು ಹೊತ್ತು ತನ್ನತ್ತಲೇ ಗುರಿ
ಮಾಡುತ್ತದೆ. ಅಜ್ಜನಾಗಿ ಕಾಣಬೇಡ. ಶತ್ರುಪಕ್ಷದ ಸೇನಾನಿಯಾಗಿ ನೋಡು ವಿಜ್ರಂಭಿಸುತ್ತಾನೆ.
ಅಜ್ಜನನ್ನು ಸೇನಾನಿಯಾಗಿ ವೈರಿಯಾಗಿ ಕಾಣು. ಇದು ಹರಿಯ ಪ್ರಚೋದನೆ. ಆ ಹರಿಗೆ ತನ್ನನ್ನು ಹರಿಯುವ
ಬಯಕೆ!!
ಸೆರೆಯು ಸಿಕ್ಕಿದನರರೆಯಭಿಮನ್ಯುವೆಂದೆನುತ |
ಹರುಷದೊಳು ಗುರುಜಕೃಪ
ದುಶ್ಯಾಸ ಮುಖ್ಯರ |
ಯ್ತರುತಿರಲು ಗಾಂಗೇಯನರಿತು
ತನ್ನೊಳಗಾಗ ತರಳ ಮಹರಥನೀತನು ||
ಕುರುಕುಲದ ಬಾಲಕರೊಳಿವನ
ಪೋಲುವರಿಲ್ಲ |
ಪರಮಸತ್ಕೀರ್ತಿಯುತನೆಂದು ಬಿಡಲಾ
ಕ್ಷಣವೆ |
ಹರಿನಾದದಿಂ ಖಡ್ಗ
ಝಳಪಿಸುತಲಭಿಮನ್ಯು ಸುರನದೀಸುತಗೆಂದನು ||
ಆಗಲೇ ಯಾವ ಪ್ರಚೋದನೆಯೂ ಇಲ್ಲದೇ ಮರಿ ಸಿಂಹದಂತೆ,
ಎದುರಿಗೆ ಬಂದು ಎದೆಯುಬ್ಬಿಸಿದನಲ್ಲಾ ಅದೇ ಪಾರ್ಥ ನಂದನ ಅಭಿಮನ್ಯು. ಕೇಳಿದನಲ್ಲಾ? ಅಜ್ಜಾ,, ಕೈ
ನಡುಗುತ್ತಿದೆ, ಕಣ್ಣು ಮಂದವಾಗುತ್ತಿದ್ದೆ. ಕಾಲಿನ ಹೆಜ್ಜೆಯಲ್ಲಿ ಸ್ಥಿರತೆ ಇಲ್ಲ...ಆದರೂ ನಿಮಗೇಕೆ
ಅಜ್ಜ ಈ ಯುದ್ಧ? ಯಾರೂ ಇವರೆಗೆ ಕೇಳದಿದ್ದ ಪ್ರಶ್ನೆ, ಕುರುಕುಲ ವೃದ್ಧ ಪಿತಾಮಹನಿಗೆ ಮೊಮ್ಮನ
ಮೊಮ್ಮ ಕೇಳುವ ಪ್ರಶ್ನೆ ನಿಮಗೇಕೆ ಈ ಯುದ್ದ? ಸುಯೋಧನ ಕೇಳಬೇಕಿತ್ತು ಕೇಳಲಿಲ್ಲ. ಬದಲಾಗಿ ಅಜ್ಜಾ
ಹಿಡಿಯಿರಿ ಧನುಸ್ಸು. ಯುದ್ದ ಮಾಡಿ, ಎಂದು
ಹೇಳಿದ. ಹೇಳಿದ ಎಂದರೆ ಸಾಕೆ ಸಾಧ್ಯವಾದಷ್ಟು ಪ್ರಚೋದಿಸಿದ. ಹಸುವು ತನ್ನ ಕರುವನ್ನು ಹಾಯುತ್ತ
ಅದನ್ನು ಮಲಗಿಸಿ ಮತ್ತೆ ನೆಕ್ಕುವ ಹಾಗೆ,, ಭೀಷ್ಮರು ಅಭಿಮನ್ಯುವನ್ನು ಸೋಲಿಸಿ ಕೈ ಕಟ್ಟಿ
ಬಾಚಿತಬ್ಬಿಕೊಂಡು ಎದೆಗಾನಿಸುತ್ತಾರೆ. ಎಂತಹಾ
ಪುತ್ರರತ್ನ ಚಂದ್ರವಂಶದಲ್ಲಿ ಹುಟ್ಟಿಬಿಟ್ಟ? ಈ ಮಗುವಿನ ಹೃದಯದ ಬಡಿತ ಈವರೆಗೆ ಕೇಳಲಿಲ್ಲ. ಎಂತಹಾ
ರತ್ನವಿದು. ಕೇಳಲೇಬೇಕಾದ ಹೃದಯದ ಬಡಿತ ಕೇಳಲಿಲ್ಲ. ಹೇಗೆ ಕೇಳಬಹುದು. ಈ ಮಗು ಹಸ್ತಿನಾವತಿಯನ್ನು
ಕಂಡರೆ ತಾನೆ? ಹಸ್ತಿನಾವತಿಯಲ್ಲಿ ಬೆಳೆದರೆ ತಾನೆ? ಎಂತಹಾ ಶೌರ್ಯ? ಎಂತಹಾ ಧೈರ್ಯ? ಹೌದು ಇದು
ಚಂದ್ರವಂಶದ ರಕ್ತ, ಪಾರ್ಥನ ರಕ್ತ. ಅದಕ್ಕಾಗಿಯೇ ಕರೆದು ಬಿಡುತ್ತಾರೆ ಇದು ಭಾರತ ರತ್ನ.
ಬಂದು ಪಾರ್ಥನು
ರಥವೇರೆ ಮುರಾಂತಕ | ನಂದು ಚಮ್ಮಟಿಕೆಯನ್ನು ||
ಚಂದದಿ ಪಿಡಿದು
ಚಪ್ಪರಿಸಲು ತುರಗವ | ಮುಂದರಿಯುತ ಭೀಷ್ಮನು||
ಎಂಟು ದಿನಗಳ ಯುದ್ದ ಮುಗಿದು ಒಂಭತ್ತನೆಯ ದಿನ ಶ್ರೀಹರಿ ಅರ್ಜುನನ್ನು ಯುದ್ದಕ್ಕಾಗೆ
ಪ್ರೇರೇಪಿಸುತ್ತಾನೆ. ದಿನವೊಂದರ ಹತ್ತು ಸಾವಿರ ಭೂಪಾಲರ ಶಿರ ಕತ್ತರಿಸುವ ಭೀಷ್ಮರೆದುರು ಪಾಂಡವ
ಸೇನೆ ತತ್ತರಿಸಿ ಹೋಗಿದೆ. ಆದರೂ ಅರ್ಜುನನ ಮುಖಾಮುಖಿ ಭೀಷ್ಮರಿಗಾಗಲಿಲ್ಲ. ಶ್ರೀಕೃಷ್ಣ ಒಂದು
ರೀತಿಯಲ್ಲಿ ಛೇಡಿಸುತ್ತಾನೆ. ಅಜ್ಜ ಎಂಬ ಭಾವದಿಂದ ಯುದ್ದ ಮಾಡಬೇಡ. ಕ್ಷತ್ರಿಯತ್ವವನ್ನು ನೆನೆದು
ಯುದ್ದ ಮಾಡು. ಭೀಷ್ಮರು ಅದನ್ನೇ ಅಲ್ಲಿ ತೋರುತ್ತಿದ್ದಾರೆ. ಯಥೋ ಧರ್ಮ ತಥೋ ಕೃಷ್ಣಃ ಯಥೋ ಕೃಷ್ಣ
ತಥೋ ಜಯಃ ಇಷ್ಟು ತಿಳಿದಿದ್ದರೂ ಭೀಷ್ಮರೂ ಧರ್ಮಕ್ಕೇ
ಪ್ರಹಾರ ಮಾಡುತ್ತಿದ್ದಾರಲ್ಲ? ಇವರೆಲ್ಲ
ಅಜ್ಜನೋ ಗುರುಗಳೋ ಇನ್ನಾರೋ ಅಗಿರಬಹುದು ಆದರೆ ಅವರು ಹಿಡಿದ ಪಕ್ಷ ಅಧರ್ಮದ್ದು. ಯಾರು ಯಾವ ಪಕ್ಷ
ಸೇರಿದರೂ ಈ ಭೀಷ್ಮ ದ್ರೋಣರು ಏನು ಮಾಡಿಯಾರು ಎಂಬ ಕುತೂಹಲವಿತ್ತು. ಅಧರ್ಮಿಯಾದ ಕೌರವನ ಕರೆಗೆ
ಓಗೊಟ್ಟರಲ್ಲ? ದಾಯಾದಿಗಳಿಗೆ ವಿಷವನ್ನುಣ್ಣಿಸಿದವನು, ಮನೆಯನ್ನು ಉರಿಸಿ ಕೊಲ್ಲಲೆತ್ನಿಸಿದವ,
ಇದೆಲ್ಲ ಹೋಗಲಿ...ಒಬ್ಬ ಹೆಣ್ಣು ಮಗಳ ಮಾನಾಪಹಾರ ಅದೂ ತುಂಬಿದ ಸಭೆಯಲ್ಲಿ ಆಗುವಾಗಲೂ
ತಟಸ್ಥರಾದವರು ಇಂದು ಕೌರವನ ಪಕ್ಷ ಸೇರಿಕೊಂಡರಲ್ಲ? ಇವರ ಉದ್ದೇಶವಾದರೂ ಏನು ಕೌರವನ ಗೆಲುವುತಾನೆ?
ಇಂಥವರು ಬದುಕುಳಿಯಬಾರದು. ಈತ ಇಚ್ಛಾ ಮರಣಿ.
ಹಾಗಾಗಿ ಈತನಿಗೆ ಬದುಕು ಸಾಕು ಎಂಬ ಪ್ರೇರೆಪಣೆಯಾಗುವಂತೆ ಯುದ್ದ ಮಾಡಬೇಕು. ಪಾರ್ಥಾ, ಹಿಡಿ ಧನುಸ್ಸು ಹೊಡಿ ಬಾಣ. ಇಗೋ ರಥವೇರಿದ್ದೇನೆ
ಕುದುರೆಗಳ ವಾಘೆಗಳನ್ನು ಹಿಡಿದಿದ್ದೇನೆ.ಕುದುರೆಗಳ ಬೆನ್ನು ಚಪ್ಪರಿಸಿದ್ದೇನೆ.
ಮುರಹರನನು ನೋಡಿ
ನಗುತ ಗಾಂಗೇಯನು | ಶರಣರ ಪೊರೆಯುವರೆ ||
ನಿರತ ವ್ಯಾಮೋಹಗಳೆಷ್ಟಿರಬಹುದೀತ | ಗೆನುತಾಗ ಪೇಳಿದನು||
ಪಾರ್ಥನ
ರಥದಲ್ಲಿ ಸಾರಥಿಯಾಗಿರುವ ಕೃಷ್ಣನನ್ನು ನೋಡಿ ಭೀಷ್ಮರು ನಗುತ್ತಾರೆ. ನಗುವುದಲ್ಲ, ಆಯಾಚಿತವಾಗಿ
ನಗು ಬರುತ್ತದೆ. ಪಾರ್ಥನ ರಕ್ಷಣೆಗಾಗಿ ಶ್ರೀಕೃಷ್ಣ ಧರಿಸಿದ ಪಾತ್ರ ನೋಡಿ ಒಂದು ಜಿಜ್ಞಾಸೆ
ಮೂಡುತ್ತದೆ. ಏನದು? ? ಈ ವಿಚಿತ್ರವನ್ನು ಕಂಡು ಭೀಷ್ಮ
ಒಂದು ಕ್ಷಣ ಯುದ್ದ ಸ್ಥಬ್ಧಗೊಳಿಸುವಂತೆ ಆಜ್ಞೆ ಮಾಡುತ್ತಾನೆ.
ಹುಟ್ಟಿ ಎಂಟುನೂರು ವರ್ಷದ
ಭೀಷ್ಮನ ಬದುಕಲ್ಲಿ ನಲಿವು ಎಂದರೆ ಕೇವಲ ಬೆರಳೆಣಿಕೆಯ ಘಳಿಗೆಗಳು. ಹೆಜ್ಜೆಗೆ
ಹೆಜ್ಜೆಗೂ ಕಣ್ಣೀರು. ಯಾರಿಗಾಗಿ? ಭೀಷ್ಮನಿಗೆ
ಹೆಂಡತಿ ಇದ್ದಾಳೆಯೇ? ಮಕ್ಕಳಿದ್ದಾಳೆಯೇ? ಯಾವುದನ್ನೆಲ್ಲ
ಈ ಭೀಷ್ಮ ಬೇಡವೆಂದು ದೂರವಿರಿಸಿದನೋ ಅದೆಲ್ಲವೂ ತಾವಾಗಿಯೇ ಮೈ ಹತ್ತಿ ಕುಳಿತಿವೆಯಲ್ಲ? ಬೇಡ ಬೇಡವೆಂದರೂ ಅಪ್ಪಿಕೊಳ್ಳುವ ಸ್ಥಿತಿ. ಚಂದ್ರ ವಂಶದ ಕೈ ಹಿಡಿದು
ಗಂಗಾಮಾತೆ, ತನ್ನ ಶಾಪವಿಮೋಚನೆಯನ್ನು ಕಂಡಳು. ಅದೇ ಚಂದ್ರವಂಶ ಭೀಷ್ಮನಿಗೆ ಈ ರೀತಿಯ ನರಕಸದೃಶ ಬದಕನ್ನು ನೀಡಿದೆಯಲ್ಲ? ಇವುಗಳಿಗೆಲ್ಲ ಉತ್ತರವನ್ನು ಹುಡುಕಿ ಹುಡುಕಿ ಬರೀ ಹುಡುಕುವುದಷ್ಟೆ ಆಗಿ ಹೋಗಿದೆ. ಈಗ
ಉತ್ತರ ಸಿಗುವುದಿದ್ದರೆ ಸಿಗಬೇಕು
ವ್ಯಾಮೋಹ, ಒಂದು
ಹಸುವಿಗೆ ಹುಲಿಯ ಸ್ವಭಾವವಿಲ್ಲ. ಆದರೆ ತನ್ನ ಕರುವನ್ನು ಯಾವನಾದರೂ ಎಳೆಯುದಕ್ಕೆ
ಬಂದಾಗ ಅದು ಹುಲಿಯಾಗಿ ಎದುರಿಸುತ್ತದೆ. ತನ್ನ ಕರುವೆಂಬ ಮೋಹವೇ ಅದಕ್ಕೆ ಕಾರಣ.
ಹಾಗಾಗಿ ಅದು ಕರುವನ್ನು ರಕ್ಷಿಸುತ್ತದೆ. ಪಾರ್ಥ ಸಾರಥಿ,
ಪಾರ್ಥನನ್ನು ರಕ್ಷಿಸುವನಾದ್ದರಿಂದ ಅವನು ಪಾರ್ಥ ಸಾರಥಿ. ಅರ್ಜುನನ ವಿರೋಧಿಗಳಿಂದ ರಕ್ಷಿಸುವುದೇ ಪಾರ್ಥ ಸಾರಥಿಯ ಕರ್ತವ್ಯ. ಹಾಗಾದರೆ ಶ್ರೀ ಹರಿಗೆ ಪಾರ್ಥನೆಂಬ ವ್ಯಾಮೋಹ ಎಂದರೂ ಸರಿಯೆ. ಭಕ್ತರನ್ನು
ರಕ್ಷಿಸುವುದು ಇದು ಭಗವಂತನ ಕಾರ್ಯ. ಅರ್ಜುನ ರಕ್ಷೆಗಧೀನ ಎಂದರೆ ಅವನು ಭಕ್ತ
ಎಂಬ ಕಾರಣವೇ ಮೊದಲಾಗುತ್ತದೆ. ಹಾಗಾದರೆ ಇಲ್ಲಿ ಪಕ್ಷಪಾತ ಧೋರಣೆಯಲ್ಲವೇ?
ಭೀಷ್ಮನಿಗೆ ನಗು ಬರುವುದು ಅದಕ್ಕೆ. ಆ ರಕ್ಷಣೆಯ ಕಾರ್ಯದಲ್ಲಿ
ನಿರತನಾಗಿದ್ದಾನೆ ಎಂದಾದರೆ ಆ ಕಾರ್ಯ ಅರ್ಜುನನಿಗಷ್ಟೇ ಸೀಮಿತವೇ?
.
ಮುರಹರ ಎಂದರೆ, ಯಮನ ಪಾಶಕ್ಕೆ ಮುರ ಎಂದು ಹೆಸರು. ಹಾಗಾಗಿ ಯಮನ ಪಾಶವನ್ನು ನಿವಾರಿಸುವವನು
ಎಂಬ ಅರ್ಥವಿದೆ. ಮುರಬಿದ್ ಅಂದರೆ ಮುರವನ್ನು ಭೇದಿಸುವವನು. ಈತ ಮುರಬಿದ್ ಆಗುವುದು ತನ್ನ
ಭಕ್ತರಿಗೆ. ಭಕ್ತರೆಂಬುದು ಯಾವುದೆ ಜಾತಿಯಾಗಲೀ ಯಾವುದೆ ವರ್ಗವಾಗಲೀ ಅಲ್ಲ. ಇಲ್ಲಿ ಯಾವುದೇ
ಬಂಧುತ್ವವಿಲ್ಲ. ಮಾನಸಿಕವಾಗಿ ಭಗವಂತನಲ್ಲಿ ಪ್ರೀತಿಯನ್ನು ಇಟ್ಟವರೆಲ್ಲ ಭಕ್ತರು. ಹಾಗಾದರೆ
ಇಲ್ಲಿ ಅರ್ಜುನನೊಬ್ಬನೇ ಭಕ್ತ ಎಂದು ಪರಿಗಣಿತವಾಗುವುದೇಕೆ? ಹಾಗಾಗಿ ಈತನ ಮುರ ಬಿದ್ ಕೇವಲ
ಅರ್ಜುನನಿಗೆ ಮಾತ್ರವೇ? ಈ ಸೇವೆ ಅರ್ಜುನನಿಗೆ ಸಲ್ಲಿಸುವಲ್ಲಿ ಈತ ಯಾವ ಮಟ್ಟಕ್ಕೆ ಇಳಿದು ಬಿಟ್ಟ.
ನರನ ಸಾರಥಿಯಾಗಿಯೂ ವಾಘೆಯನ್ನು ಹಿಡಿದನೆಂದರೆ? ಹರಿಯಲ್ಲಿ ಬಂದ ಸಂದೇಹಕ್ಕೆ ಅವನಲ್ಲೇ
ಪರಿಹಾರವನ್ನು ಭೀಷ್ಮ ಬಯಸುತ್ತಾನೆ
ಚಿನ್ಮಯನೆ ಲಾಲಿಪುದು
ಪುಣ್ಯವಂತಗೆ ಘೋರಾ | ರಣ್ಯಗಳು ಪಟ್ಟಣಗಳ್ ಮಣ್ಣೆ ಹೊನ್ನಹುದು||
ಪುಣ್ಯಹೀನಗೆ ರಾಜ್ಯ
ಕಾನನವೆ ಕೇಳ್ ಮತ್ತೆ | ಚಿನ್ನಗಳು ಮೃತ್ತಿಕೆಗಳಂತೆ
ತೋರುವುವು||.
ಯಾವಾತನನ್ನು
ಧ್ಯಾನಿಸುವಾಗ ಅವನ ರೂಪ ಚಿತ್ತದಲ್ಲಿ ತುಂಬಿ ಬರುತ್ತದೋ, ಯಾವನ ಧ್ಯಾನದಿಂದ ಚಿತ್ತ ಸ್ವತಃ ತನ್ಮಯತೆಯನ್ನು
ಕಾಣುತ್ತದೋ ಅವನನ್ನು ಚಿನ್ಮಯ ಅಂತ ಕರೆಯುವುದು. ಚಿತ್ ಜ್ಞಾನೆ ಇದು ಕೂಡ ಚಿನ್ಮಯವಾಗುತ್ತದೆ.
ಅಂದರೆ ಜ್ಞಾನಸ್ವರೂಪಿ. ಭೀಷ್ಮ ಚಿನ್ಮಯ ಅಂತ ಕೂಗುವುದಕ್ಕೆ ಹಲವಾರು ಕಾರಣಗಳಿರುತ್ತದೆ. ತನ್ನ ಜ್ಞಾನದ
ಕೊಡ ಅದು ಪೂರ್ಣವಾಗಿ ತುಂಬಿರುವುದಿಲ್ಲ ಅದನ್ನು ತುಂಬಿಸುವುದಕ್ಕಾಗಿ ಚಿನ್ಮಯನೇ ಎಂದು
ಕೊಂಡಾಡುತ್ತಾನೆ ಎಂದರೂ ಸರಿಯೆ...ಮುಂದಿನ ಅವನ ಸಂದೇಹದಲ್ಲಿ ಚಿನ್ಮಯ ಎಂಬ ಭೀಷ್ಮನ ಕೂಗು
ಸ್ವಲ್ಪ ವ್ಯಂಗ್ಯವನ್ನೂ ತೋರಿಸುತ್ತದೆ.
ಭೀಷ್ಮನಾಗಿ
ಶ್ರೀ ರಾಮದಾಸ ಸಾಮಗರು ಒಂದು ತಾಳ ಮದ್ದಲೆಯಲ್ಲಿ ಈ ಸಂದೇಹವನ್ನು ಬಹಳ ಸ್ಪಷ್ಟವಾಗಿ
ವಿವರಿಸುತ್ತಾರೆ. ಅರ್ಜುನ ಸಾರಥಿಯಾಗಿ ಶ್ರೀಹರಿಯನ್ನು ಕಂಡಾಗ ಭೀಷ್ಮನಿಗೆ ಬರುವ ಒಂದು
ಜಿಜ್ಞಾಸೆ, ಅದು ಕರ್ಮ ಬಂಧನದ ಕುರಿತಾದ ಜಿಜ್ಞಾಸೆ.
ಜಿಜ್ಞಾಸೆ ಎಂದರೆ ತನಗೆ ಅರಿವಿಲ್ಲದೇ ಇರುವಂತಹುದರ ನಿವಾರಣೆ ಎಂದೇ ವಿವರಿಸುತ್ತಾರೆ.
ಒಂದು ರೀತಿಯಲ್ಲಿ ಶ್ರಿಹರಿಯ ಜತೆಗಿನ ಸರಸ ಅಂತಲೂ ಹೇಳಬಹುದು, ಯುದ್ದ ನಡುವೆ ಶ್ರೀಹರಿಯೊಂದಿಗೆ
ಭೀಷ್ಮನ ವಾಗ್ಯುದ್ಧ ಅಂತಲೂ ಹೇಳಬಹುದು. ಹಲವು ಕಡೆ ಕರ್ಮದ ಬಗ್ಗೆ ಪೂರ್ಣವಾದ ಅರಿವಿದ್ದು
ಕೃಷ್ಣನಿಗೆ ಒಂದು ಸವಾಲಾಗಿ ಭೀಷ್ಮ ಇದನ್ನು ಮಂಡಿಸುತ್ತಾನೆ.
ಕರ್ಮ ಎಂಬುದು
ಸ್ವತಂತ್ರ ಶಬ್ದವಲ್ಲ. ಅದು ಸತ್ಕರ್ಮ ಮತ್ತು ದುಷ್ಕರ್ಮ ಎಂಬುದರಿಂದ ಕೂಡಿರುತ್ತದೆ. ಸತ್ ಎಂದರೆ
ಯಾವುದರಿಂದ ಶುಭ ಫಲವನ್ನು ಕಾಣಬಹುದೋ, ಅಂದರಿದ ಒಳ್ಳೆಯ ಪರಿಣಾಮ ಉಂಟಾಗಬಹುದೋ ಅದು ಸತ್ಕರ್ಮ
ಎಂತಲೂ ಯಾವುದರಿಂದ ದುಷ್ಪರಿಣಾಮವನ್ನು ಉಂಟುಮಾಡುವಂತಹುದು ದುಷ್ಕರ್ಮ ಎನ್ನಬಹುದು. ಯಾವುದು ಉನ್ನತಿಗೆ
ಕಾರಣವೋ ಅದು ಸತ್ಕರ್ಮ. ಸಾಮಾನ್ಯವಾಗಿ ಇದನ್ನು ಪುಣ್ಯ ಎಂದು ಹೆಸರಿಸಲ್ಪಡುತ್ತದೆ. ಯಾವುದು ಅಧಃಪತನಕ್ಕೆ
ಕಾರಣವೋ ಅದು ಪಾಪ ಎಂದು ಹೆಸರಿಸಲ್ಪಡುತ್ತದೆ.
ಹಲವು ಸಲ ಪರಿಣಾಮದಿಂದ ಪಾಪ ಪುಣ್ಯ ಎಂದು ನಿರ್ಧರಿಸುವುದು ಕಷ್ಟವಾಗುತ್ತದೆ.
ಹಸುವು ಬಿದ್ದು ಸಾಯುತ್ತದೆ. ಅಥವಾ ಕೊಲ್ಲಲ್ಪಡುತ್ತದೆ. ಹಸುವಿಗೆ ಅದು ಅಘಾತ. ಪರೋಕ್ಷವಾಗಿ ಹುಲಿಗೆ ಅದು ಅಹಾರವಾಗುತ್ತದೆ. ಕೊಲ್ಲಲ್ಪಡುವುದು
ದುಷ್ಕರ್ಮವಾದರೂ ಆಹಾರವಾಗುವುದು ದುಷ್ಕರ್ಮ ಎಂದು ವರ್ಗೀಕರಿಸುವುದು ಕಷ್ಟವಾಗುತ್ತದೆ. ಜೀವನು
ಒಬ್ಬ ಹುಟ್ಟಿ ಬಂದ ಮೇಲೆ ಕರ್ಮಪ್ರವೃತ್ತನಾಗಲೇ ಬೇಕು. ಹುಟ್ಟಿಗೆ ಮೂಲಕಾರಣವೂ ಅದುವೇ
ಆಗಿರುತ್ತದೆ. ಒಬ್ಬ ಕರ್ಮ ನಿರತನಾದ ಎಂದರೆ, ಅದಕ್ಕೆ ಅವನ ಪೂರ್ವ ಪ್ರವೃತ್ತಿ ಕಾರಣವಾಗುತ್ತದೆ.
ಕಣ್ಣುಗಳಿದ್ದಾಗ ನೋಡಲೇ ಬೇಕು. ಕಾಲುಗಳಿದ್ದಾಗ ನಡೆಯಲೇಬೇಕು. ಅದು ಅನಿವಾರ್ಯವಾದಂತೆ
ಹುಟ್ಟಿದನಂತರ ಬದುಕಲೇಬೇಕು. ಹಾಗೆ ಕರ್ಮ ಅಂಟಿಕೊಳ್ಳುತ್ತದೆ. ಆನಂತರ ಸತ್ಕರ್ಮ ದುಷ್ಕರ್ಮ. ಎಂತಹ ವೇದಜ್ಞ ರಾವಣ ದುಷ್ಕರ್ಮದಲ್ಲೇ ತೊಡಗುತ್ತಾನೆ,
ಅದಕ್ಕೆ ಕಾರಣ ಅವನ ಪೂರ್ವಕರ್ಮ. ಮೊದಲು ಮಾಡಿದ ಕರ್ಮದ ಶೇಷವೇ ಉಳಿದದ್ದು ಈಗಿನ ಕರ್ಮಕ್ಕೆ
ಕಾರಣವಾಗುತ್ತದೆ. ಚುಚ್ಚಿದ ಮುಳ್ಳನ್ನು ತೆಗೆದ ಮೇಲೆ ಅಲ್ಲಿ ಮುಳ್ಳಿನ ಗಾಯ ಹಾಗೆಯೇ ಉಳಿದಂತೆ
ಕರ್ಮ ಶೇಷ. ಹಾಗಾದರೆ ಆ ಕರ್ಮ ಶೇಷದ ಮೂಲ ಯಾವುದು. ಒಂದು ಕರ್ಮಕ್ಕೆ ಮೂಲ ಕರ್ಮ ಇನ್ನೊಂದು
ಆದಹಾಗೆ ಪ್ರತಿಯೊಂದಕ್ಕು ನಿಮಿತ್ತ ಇನ್ನೊಂದು ಇರುತ್ತದೆ. ಇದು ಕರ್ಮ ವಾಸನ ಎನಿಸಲ್ಪಡುತ್ತದೆ. ಇಲ್ಲಿ
ಸರ್ವಥಾ ಮೂಲ ಕರ್ಮ ಯಾವುದು? ಉತ್ತರ ಸಿಗದ ಪ್ರಶ್ನೆಗಳು. ಕಿಚ್ಚಿನಿಂದ ಕಿಡಿ ಉಂಟಾಯಿತೇ?
ಕಿಡಿಯಿಂದ ಕಿಚ್ಚು ಹುಟ್ಟಿಕೊಂಡಿತೆ? ಪ್ರತಿಯೊಂದು
ಜೀವವೂ ಕರ್ಮವಾಸನೆಯನ್ನು ಅಂಟಿಸಿಕೊಳ್ಳುತ್ತದೆ. ಇದಕ್ಕೆ ಕಾರಣವೂ ಇರುತ್ತದೆ.
ಕೌರವ ನಿನ್ನ ಬಳಿಗೆ
ಬರುತ್ತಾನೆ. ಅರ್ಜುನನೂ ಬರುತ್ತಾನೆ. ಕೌರವನಿಗೆ ಸಮಸ್ತ ನಾರಾಯಣಿ ಸೇನೆ ಪ್ರಾಪ್ತವಾಗುತ್ತದೆ.
ಆದರೆ ಅದು ಈವರೆಗೆ ಸಿಗುವಿದಿಲ್ಲ. ಕೇವಲ ನಿನ್ನ ಕರುಣೆಯನ್ನು ಆಗ್ರಹಿಸಿ ಬರುತ್ತಾನೆ ಅರ್ಜುನ.
ಅವನಿಗೆ ಸಾರಥಿಯಾಗಿ ನೀನೇ ಸಿಗುವಾಗ ಇಲ್ಲಿ ಕೌರವ
ಪುಣ್ಯ ವಿಹೀನ. ಅರ್ಜುನ ಪುಣ್ಯವಂತ. ಇಲ್ಲೆಲ್ಲ ಕರ್ಮ ವಾಸನೆ ಅಂಟಿಕೊಂಡಂತೆ ಕೃಷ್ಣ ನಿನಗೂ
ಕರ್ಮವಾಸನೆಯೇ? ಭೀಷ್ಮನ ಜಿಜ್ಞಾಸೆ ಇದು. ಕರ್ಮ ಜಿಜ್ಞಾಸೆ.
“ಚಿನ್ಮಯ” ಎಂದು
ನಿನ್ನನ್ನು ಮೊದಲೇ ಉಚ್ಚರಿಸಿದುದರ ಅಂತರಾರ್ಥ ಒಂದಿರುತ್ತದೆ. ಜೀವ ವರ್ಗದಲ್ಲಿ ಹೇಗೋ
ಹಾಗಲ್ಲ ನೀನು ಸರ್ವ ಸ್ವಾತಂತ್ರ್ಯ ಮೊದಲಾದ
ದಿವ್ಯಗುಣಗಳನ್ನು ಹೊಂದಿದ ವಿಭೂತಿ ಎಂಬರ್ಥದಲ್ಲಿ . ಚಿನ್ಮಯ ಎಂಬಲ್ಲಿ ಕರ್ಮದ ಬಾಧೆ ನಿನಗೂ
ಅಂಟಿಕೊಳ್ಳುವುದೇ? ರಾವಣನಿಗೆ ಕೌರವನಿಗೆ ಅಥವಾ ಇನ್ನಾರಿಗೋ ಆಗಲಿ ಪ್ರಾರಬ್ಧದಿಂದ ಕರ್ಮವು
ಅಂಟಿಕೊಂಡಿದ್ದರೆ, ನಿನಗೂ ಈ ಪ್ರಾರಬ್ಧ ಕರ್ಮ ಅಂಟಿಕೊಂಡಿದೆಯೆ?
ಧರಿಸಿದೆಯ ಮತ್ಸ್ಯಾದಿ ರೂಪುಗಳ ನೋಡೀಗ | ನರನ ಸಾರಥಿಯಾದ ವಿಧಿಯನೇನೆಂಬೆ
||
ಕುರುಪತಿಯ ದುಷ್ಕರ್ಮವೇಕೆ ನಿಂದಿಪುದೀಗ | ಧರೆ ಚತುರ್ದಶ ಪೊರೆವ
ಮಹಿಮಗಿಂತಾಗೆ ||
ಜೇವವರ್ಗದ ಜೀವರಾಶಿಗಳಂತೆ ನೀನಲ್ಲ. ಸರ್ವತಂತ್ರ ಸ್ವತಂತ್ರನೂ ಆದ ನೀನು ಚಿನ್ಮಯ, ಕರ್ಮದ
ಭಾಧೆಗೆ ನೀನು ಒಳಗಾದೆಯೋ? ಕೌರವನ ಪ್ರಾರಭ್ದ ಎಂದು ಹೇಳುವಲ್ಲಿ ಅವನನ್ನು ನಿಂದಿಸುವಹಾಗಿಲ್ಲ.
ವಿಧಿ ಅದು ನಿನಗೂ ಅನ್ವಯವಾಗುತ್ತದೆ. ಆ ವಿಧಿಗೆ ನೀನು ಒಳಗಾಗಿದ್ದಿ. ವಿಧಿ ಎಂಬುದು ಒಂದು
ಹೆಸರಾಗಿ ಅಲ್ಲ. ಮಿಕ್ಕವರನೆಲ್ಲ ವಿಧಿಗೆ ಅನುವರ್ತಿಗಳನ್ನಾಗಿ ಮಾಡುವ ಶಕ್ತಿ. ಯಾವುದನ್ನು
ಅವಶ್ಯವಾಗಿ ಅನುಸರಿಸಲ್ಪಡಬೇಕೋ ಅಥವ ಪಡುವಂತಹದ್ದೋ ಅದು ವಿಧಿ, ಯಾವುದನ್ನು ನಾವು
ಅನುಸರಿಸಲ್ಪಡಬೇಕೋ ಅದು ವಿಧಿಸಲ್ಪಡುತ್ತದೆ. ಆ ನಿಯಮವೇ ವಿಧೇಯತ, ವಿಧಾಯಕ
ಎಂಬುದು ವಿಧಿಯ ಸಂಕೇತ. ಆ ವಿಧಿಯನ್ನು ಅನುಸರಿಸುವ ಮಾತ್ರವಲ್ಲ ವಶವರ್ತಿಯಾಗುವ ಅನಿವಾರ್ಯತೆ ನಿನಗೂ ಇದೆ. ಮತ್ಸಾವತಾರ, ಕೂರ್ಮಾವತಾರ,
ವರಾಹ, ನರಸಿಂಹಾವತಾರ ಯಾಕೆ ಎತ್ತಿದೆ? ನಿಜ ರೂಪದಲ್ಲೇ ಅದು ಸಾಧ್ಯವಾಗಿಸುವುದಕ್ಕೆ
ಸಾಧ್ಯವಿಲ್ಲದಾಯಿತೇ? ಈಗ ಆ ಆನಿವಾರ್ಯತೆ
ಇಲ್ಲಿಯೂ ಮುಂದುವರಿದು ಪಾರ್ಥನ ಸಾರಥ್ಯ ಮಾಡುವಲ್ಲಿ ನೀನು ವಿಧಿಯ ವಶವರ್ತಿ ಅಂತ ತೋರಿಸಿಕೊಟ್ಟ
ಹಾಗಾಯಿತು. ಹಾಗಾದರೆ ಕರ್ಮ ನಿನ್ನನ್ನೂ ಬಿಡಲಿಲ್ಲ. ಹಾಗಾದರೆ ಕೌರವನನ್ನು ದೂಷಿಸುವ ಹಾಗಿಲ್ಲ.
ಅವನು ಅವನ ವಿಧಿಯನ್ನು ಅವನು ಅನುಸರಿಸುತ್ತಾನೆ, ಅವನ ಕರ್ಮದ ಬಾಧೆ ಅವನಿಗೆ ಹಾಗೆ ಇಲ್ಲಿ ನೀನು ಈ
ಕರ್ಮದ ಬಂಧನಕ್ಕೆ ಸಿಲುಕಿದೆಯಲ್ಲ? ಕರ್ಮವನ್ನು ಅನುಸರಿಸುವ ಅನಿವಾರ್ಯತೆ ನಿನಗೂ ಒದಗಿತಲ್ಲ?
ಒಂದು ರೀತಿಯ ಮತ್ಸರವೇ ಈ ಮಾತುಗಳನ್ನು ನುಡಿಸಿತು. ಧನು ಶರಗಳಿಂದ ಪಾರ್ಥನನ್ನು
ಎದುರಿಸಬಹುದಾದರೆ, ಈ ಕೃಷ್ಣನನ್ನು ಎದುರಿಸುವುದು ಹೇಗೆ? ಲೌಕಿಕವಾದ ಯಾವ ವಸ್ತುಗಳಿಂದ
ಕೃಷ್ಣನನ್ನು ಎದುರಿಸುವ ಹಾಗಿಲ್ಲ. ಹಾಗಾದರೆ ಆತನನ್ನು ಎದುರಿಸುವ ಪರಿಯೇ ಹೀಗೆ. ಪಾರಮಾರ್ಥಿಕವಾಗಿ
ಕೃಷ್ಣನನ್ನು ಗೆಲ್ಲಬೇಕು. ಹಾಗಾಗಿ ಸಾರಥಿಯಾದ ಕೃಷ್ಣನನ್ನು ಕಂಡಾಗ ಕೆಲವೊಂದು ಸಂಶಯವೂ ಮತ್ಸರವೂ
ಒಟ್ಟಾಗಿ ಮೂಡಿ ಬಂತು. ಭಗವಂತ ಎಂದು ಪೂಜಿಸಲ್ಪಡುವವನು ಅದೂ ನನ್ನ ಮೊಮ್ಮಗನ ಸಾರಥಿಯಾಗಿ ಬರುತ್ತಾನೆ ಎಂದಾದರೆ,
ಮೊಮ್ಮಗನ ಕೈಗೆ ಕೋಲು ಕೊಟ್ಟು ಅಜ್ಜನಿಗೆ ಹೊಡಿ ಎನ್ನುತ್ತಾನಾದರೆ, ಭೀಷ್ಮನ ನಿಲುವು ಪ್ರಶ್ನಿಸಿದ
ಹಾಗಲ್ಲವೇ? ತನ್ನ ಮೊಮ್ಮಗನನ್ನು ಹುರಿದುಂಬಿಸಿ
ತನ್ನ ಎದುರು ರಥವನ್ನು ಚಾಚಿ ತನ್ನೆದುರು ಹೋರಾಟಕ್ಕೆ ಸಿದ್ಧನಾಗುತ್ತಿದ್ದಾನಲ್ಲ? ಹಾಗಾದರೆ ಇದರ
ಮರ್ಮವೇನು. ಅಜ್ಜ ಮೊಮ್ಮಗನಿಗೆ ಸೋಲಬೇಕೆ? ಮಗುವಿನ
ಕೈಗೆ ಕೋಲು ಸಿಕ್ಕಿದಾಗ ದೊಡ್ಡವರು ಕೆಲವೊಂದು ಸಲ ಬಳಿ ಹೋಗಲು ಹಿಂಜರಿಯುವುದುಂಟು. ಯಾಕೆ, ದೊಡ್ಡವರಿಗೆ ಹೊಡೆಯಬಾರದು ಎಂದು ಆ ಮಗುವಿಗೆ ತಿಳಿದಿರುವುದಿಲ್ಲ. ಮಗು
ಸುಮ್ಮನೇ ಬೀಸಿದರೂ ಏಟು ತಾಗುವ ಆತಂಕವಿದ್ದೇ ಇರುತ್ತದೆ. ಆದರೆ ಇಲ್ಲಿ ಮಗುವಾದ ಅರ್ಜುನ ತಾನು
ಹೊಡೆಯಲಾರೆ ಎಂದು ಸ್ವಯಂ ಪ್ರಜ್ಞೆಯಿಂದ ಹೇಳಿದರೂ ಶ್ರೀಕೃಷ್ಣ ಹುರಿದುಂಬಿಸಿ ಹೇಳುತ್ತಿದ್ದಾನಲ್ಲ
. ಅಜ್ಜನೆಂಬ ಮೋಹ ಬಿಡು ಹೊಡೆ..
ಭೀಷ್ಮರಿಗೆ ಅನ್ನಿಸಿತು ಭಗವಂತನ ಅವಗಾಹನೆಗೆ ತಳ್ಳಿಬಿಡುವ ಹಲವಾರು ವಿಚಾರಗಳಿವೆ. ಇಲ್ಲಿ
ತಳ್ಳಿಬಿಡುವ ಎನ್ನುವುದೇ ಸರಿ, ಯಾಕೆಂದರೆ ಈವರೆಗೆ ಭಗವಂತನ ಗಮನ ಅತ್ತಕಡೆ ಹರಿದಿದೆ ಎಂದು ಈ
ಸುದೀರ್ಘ ಬದುಕಿನಲ್ಲಿ ಅನ್ನಿಸಲೇ ಇಲ್ಲ. ಈ ಜಿಜ್ಞಾಸೆಯ ಫಲವಾಗಿ, ಕರ್ಮ ಬಂಧನದ ರಹಸ್ಯ ಸ್ವಾರಸ್ಯವಾಗಿ ಸರಸವಾಗಿ ಶ್ರೀ ಕೃಷ್ಣ ಮತ್ತು
ಭೀಷ್ಮರ ಸಂವಾದದಲ್ಲಿ ತೆರೆದುಕೊಳ್ಳುತ್ತದೆ.






