"ಇದು ವಿಮರ್ಶೆಯಲ್ಲದ ಚಿಂತನ"

Monday, May 11, 2009

ವಾಲಿ ವಧೆ ಯಕ್ಷಗಾನ ಧ್ವನಿಸುರುಳಿ ಶೇಣಿ ಅರ್ಥ ವೈಭವ


ಇದು ತುಂಬಾ ಹಳೆಯ ಧ್ವನಿ ಸುರುಳಿ ಶೇಣಿ ಅರ್ಥವೈಭವ ಎಂಬ ಸರಣಿಯಲ್ಲಿ ಒಟ್ಟು ನನಗೆ ತಿಳಿದಂತೆ ೫ ಧ್ವನಿ ಸುರುಳಿಗಳು ಬಂದುವು. ೧) ವಾಲಿವಧೆ, ೨) ಭೀಷ್ಮ ಪರ್ವ,೩) ಮಾಗಧ ವಧೆ ೪) ಪಾದುಕಾ ಪ್ರದಾನ ೫) ಕೃಷ್ಣ ಸಂಧಾನ. ತುಂಬಾ ಹಳೆಯದಾದ ಧ್ವನಿಸುರುಳಿಗಳು ಇವುಗಳು. ಶೇಣಿಯವರ ಅರ್ಥಗಾರಿಕೆಯ ಮಿಂಚು ಅಂತಲೇ ಹೇಳಬಹುದು. ಆದರೆ ಮುಂದಿನ ಪೀಳಿಗೆಗೆ ಅವರ ಅರ್ಥಗಾರಿಕೆಯನ್ನು ಕಲ್ಪಿಸಲು ಇಂತವುಗಳೇ ಉಳಿದಿರುವ ಪಳೆಯುಳಿಕೆಗಳು. ಶೇಣಿಯವರ ಅರ್ಥವನ್ನು ಸವಿದುಂಡ ಅಭಿಮಾನಿಗಳು ಇವುಗಳಿಂದ ಪುನರಾವರ್ತಿತವಾದರೂ ತ್ರಿಪ್ತಿಹೊಂದುವ ಅನಿವಾರ್ಯತೆ ಇಂದು . ಹಾಗಾಗಿ ಅವುಗಳನ್ನು ಸಂಗ್ರಹಿಸಿ ಅದನ್ನು ಧ್ವನಿಸುರುಳಿ ರೂಪದಿಂದ ಕಂಪ್ಯೂಟರ್ ನಲ್ಲಿ ಶೇಖರಿಸಿ ತಕ್ಕಮಟ್ಟಿನ ಹಸಿವನ್ನು ನೀಗಿಸಿಕೊಳ್ಳುವ ಯತ್ನ ನನ್ನದು.

ಅರ್ಥವೈಭವ ಸರಣಿಯ ವಾಲಿವಧೆ ಧ್ವನಿಸುರುಳಿಯ ಸ್ಥೂಲ ಸೂಕ್ಷ್ಮ ವಿವರಣೆಯನ್ನು ಇಲ್ಲಿ ಕೊಡುವ ಒಂದು ಉದ್ದೇಶ ನನ್ನದು. ಈ ವಾಲಿವಧೆಯಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ಬಲಿಪ ನಾರಾಯಣ ಭಾಗವತರು., ಮದ್ದಲೆ ಕುದ್ರೆಕೋಡ್ಲು ರಾಮಭಟ್, ಚೆಂಡೆ ಪದ್ಯಾಣ ಶಂಕರನಾರಾಯಣ ಭಟ್, ಮುಮ್ಮೇಳದಲ್ಲಿ ಶ್ರೀ ರಾಮ ಪೆರ್ಲ ಕೃಷ್ಣ ಭಟ್, ಸುಗ್ರೀವ ಸೂರಿಕುಮೆರಿ ಗೋವಿಂದ ಭಟ್, ವಾಲಿ ಶೇಣಿ ಗೋಪಾಲ ಕೃಷ್ಣ ಭಟ್, ತಾರ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಹೀಗೆ ಹಿತ ಮಿತವಾದ ತಂಡದಿಂದ ಉತ್ತಮ ಧ್ವನಿ ಸುರುಳಿ.

ರಾಮ ಹರೇ ರಾಮ ಎಂಬ ಪದದಿಂದ ತೊಡಗಿದ ಈ ಪ್ರಸಂಗ ದಲ್ಲಿ ರಾಮನಲ್ಲಿ ಸಖ್ಯವನ್ನು ಬೆಳೆಸಿದ ಸುಗ್ರಿವನು ವಾಲಿಯ ಪರಾಕ್ರಮವನ್ನು ಒತ್ತಿ ಹೇಳುವ ಸನ್ನಿವೇಶ.ಶಾಂತ ರೀತಿಯಿಂದ ಆರಂಭವಾಗುವ ಈ ಯಕ್ಷಗಾನ ಪ್ರಥಮಾರ್ಧದಲ್ಲಿ ಬಲಿಪ್ಪರ ಪದ ಮತ್ತು ಕುದ್ರೆಕೋಡ್ಲು ಜತೆಗಾರಿಕೆ ವಿಶಿಷ್ಟ್ಯವನ್ನು ತೋರಿಸುತ್ತದೆ. ವಾಲಿವಧೆ ಪ್ರಸಂಗ ಚುರುಕುಗೊಳ್ಳುವುದೇ ವಾಲಿ ಪ್ರವೇಶದಿಂದ ಅದರೂ ರಂಗೇರುವುದು ತಾರಾ ವಾಲಿ ಸಂವಾದದೊಂದಿಗೆ. ಶೇಣಿಯವರ ವಾಲಿ ಹೇಗಿರಬಹುದು ಎನ್ನುವ ಜಿಜ್ಞಾಸೆ ಮೂಡಿದರೆ ತಕ್ಕ ಮಟ್ಟಿಗೆ ಇದನ್ನು ಕೇಳಿ ತೃಪ್ತಿ ಅನುಭವಿಸಬಹುದು.

ನೀತಿಯಲ್ಲ ಪೋಪುದಿಂದು ....... ಎಂಬ ಪದದಿಂದ ಶುರುವಾಗುವ ತಾರೆಯ ಹಿತವಚನ ವಾಲಿಯ ತರ್ಕದ ಮಾತುಗಳಿಗೆ ಆಹಾರವಗುವಂತೆ ಮಾಡುತ್ತದೆ. ಜಾತಾಂಗದ ತಂದ ಸುದ್ಧಿಯಿಂದ ಖಿನ್ನಳಾಗಿ ವಾಲಿಯಲ್ಲಿ ಮೊರೆಯಿಡುವ ತಾರೆಯ ಪಾತ್ರದಲ್ಲಿ ಮೂಡಂಬೈಲು ಶಾಸ್ತ್ರಿಗಳು ಭಾವನಾತ್ಮಕ ಅರ್ಥವನ್ನು ಹೇಳಿದ್ದಾರೆ.ರಾಮ ಬಂದಿದ್ದಾನೆ ಸುಗ್ರೀವನ ಸಹಾಯಕ್ಕೆ ರಾಮನಿದ್ದಾನೆ ಈ ಸರಿ ರಾತ್ರಿಯಲ್ಲಿ ಯುದ್ದಕ್ಕೆ ಕರೆದಿರುವಾಗ ಹೋಗುವದು ತರವಲ್ಲ.. ನಾಳೆ ನೋಡಿಕೊಂಬ ಯುದ್ದ.. ಆವಾಗ ಶೇಣಿಯವರ ತರ್ಕದ ಮಾತುಗಳು ಇಡೀ ಯಕ್ಷಗಾನಕ್ಕೆ ಮೆರುಗನ್ನು ತಂದಿದೆ. ಈ ರಾಮನಿದ್ದರೂ ಒಂದು ಸಲ ಯುದ್ದ ಮಾಡಿ ಪೆಟ್ಟು ತಿಂದು ಸೋತ ಸುಗ್ರೀವ ಆವಾಗ ರಾಮ ಸಹಾಯವೇಕೆ ಮಾಡದಾದ? ಅದರೂ ಸುಗ್ರೀವನ ಧ್ವನಿಯಲ್ಲಿ ಆದ ಬದಲಾವಣೆ ಅಣಕವಲ್ಲ ಮೊದಲಿನಂತೆ ಅಣ್ಣ ಸಾರಿದೆ..ಎನ್ನುವ ಅರ್ಥದಲ್ಲಿ ಶೇಣಿ ತನ್ನ ಗಾಢವಾದ ಛಾಪನ್ನು ತೋರಿದ್ದಾರೆ.


ತಾರೆಯ ಪಾವಿತ್ರ್ಯತೆಯನ್ನು ತರ್ಕಿಸಿ ಹೇಳುವಲ್ಲಿ, ಮತ್ತು ತಾರೆಯ ಸಲಹೆಗೆ ಅವಧಿ ಬಾಧಕ ಬಂತು ಅಂತ ಹೇಳುವಲ್ಲಿ , ಉಗುಳಲಿಕ್ಕೂ ಆಗದ ನುಂಗಲಿಕ್ಕೂ ಆಗದ ವಾಲಿಯ ತಳಮಳವನ್ನು ತೋರಿಸುವಲ್ಲಿ ಶೇಣಿಯವರ ಅರ್ಥಗಾರಿಕೆ ಒಂದು ವೈಭವವೇ ಸರಿ. ಧಾತ್ರಿಯೋಳೆನ್ನ.... ಏರು ಪದ ಕ್ಕೆ ಅದ್ಭುತ ಸನ್ನಿವೇಶವನ್ನು ಮೊದಲೇ ಸೃಷ್ಟಿಸಿ ಬಿಡುತ್ತಾರೆ. ರಾಮನಿದ್ದರೂ ಸಮರ್ಥವಾಗಿ ಎದುರಿಸಿಯೇನು. ವಾಲಿ ಕೇವಲ ದುರ್ಬಲರ ಮುಂದೆ ಅಲ್ಲ ಪ್ರಬಲರ ಮುಂದೆಯೂ ಸಮರ್ಥ.ತಾರೆಯ ಮಾತಿಗೆ ಕಿವಿಗೊಟ್ಟು ಅಂತ: ಪುರದಲ್ಲಿ ಕುಳಿತನೆಂದರೆ ವಾಲಿಗೆ ಅಲ್ಲಿಗೆ ಸತ್ತಂತೆ. ಎನ್ನುತ್ತಾ ಆಕೆಯ ಮಾತನ್ನು ತಳ್ಳಿ ಯುದ್ದಕ್ಕೆ ಹೊರಡುವಾಗ ವಾಲಿ ಕಣ್ಣೆದುರು ಬಂದು ನಿಂತಂತೆ ಭಾಸವಾಗುತ್ತದೆ. ಸನ್ನಿವೇಶವನ್ನು ಇಷ್ಟು ಸುಂದರವಾಗಿ ಕಣ್ಣೆದುರು ಹಿಡಿವ ಶೈಲಿ ಅಮೋಘ.

ರಾಮನ ಮರೆಯ ಬಾಣದ ಘಾತಿಗೆ ಒಳಗಾಗಿ ವಾಲಿ ಬಿದ್ದಲ್ಲಿಂದ ಶೇಣಿಯವರ ಮಾತಿನ ವೈಭವ ಇನ್ನೂ ವೈಭವೀಕ್ರಿತವಾಗಿ ಗೋಚರಿಸುತ್ತದೆ. ರಾಮನನ್ನು ಹೀಯಾಳಿಸುವ ಮಾತುಗಳು, ನೀನೆ ರಾಮನೆಂಬವನು? ಯಾವ ಮುಹೂರ್ತದಲ್ಲಿ ನಿನಗೆ ಆ ಹೆಸರಿಟ್ಟರು ರಾಮ ಶಬ್ದಾರ್ಥದ ಲಘು ವಿವರಣೆ. ರಾಮ ಬಿಲ್ಲು ಹಿಡಿದರೆ ಅದು ಬಿಲ್ಲಲ್ಲ ಕೋದಂಡವಂತೆ. ಆ ಕೊದಂದವನ್ನು ಉಪಯೋಗಿಸಿದ ರೀತಿ, ಬೇಟೆಗಾರ ಬಿಲ್ಲನ್ನು ಉಪಯೋಗಿಸಿದ ಹಾಗಾಯಿತಲ್ಲ., ಹೇಗಾದರೂ ವಾಲಿಯನ್ನು ಬೀಳಿಸುವ ಒಂದೇ ಉದ್ದೇಶವಲ್ಲವೇ?ರಾವಣ ಸೀತೆಯನ್ನು ಕೊಂಡುಹೋದಲ್ಲಿ, ಸುಗ್ರೀವನ ಬದಲು ತನ್ನಲ್ಲೇ ಸಹಾಯ ಯಾಚಿಸಿದ್ದರೆ, ಸಂಕಲ್ಪ ಶಕ್ತಿಯಿಂದ ಬೆಳೆದಷ್ಟು ಬೆಳವ ಬಾಲದಿಂದಲೇ ಲಂಕೆಯಿಂದ ರಾವಣನನ್ನು ತರಿಸುತ್ತಿದ್ದೆ, ಇಲ್ಲ ಅಂಗದನನ್ನು ಕಳಿಸಿ ರಾವಣನಿಗೆ ಆಜ್ಞಾಪಿಸುತ್ತಿದ್ದೆ. ರಾವಣ ಸೀತೆಯನ್ನು ಇಟ್ಟು ಕೊಂಡಾನೋ? ಇಟ್ಟುಕೊಂಡು ಬದುಕುವಾಸೆ ಕೊಂಡಾನೋ? ಶೇಣಿ ಯವರ ಶೈಲಿ ಅದ್ಭುತ. ಒಂದು ಮಿತವಾದ ಸಮಯದಲ್ಲಿ ಇಷ್ಟು ಅದ್ಭುತ ಪಾಂಡಿತ್ಯ ಪೂರ್ಣ ಅರ್ಥಗಾರಿಕೆ ಅಮೋಘವಾಗಿದೆ.

ವಾನರಾಧಿಪ ನೀ ಕೇಳೆನ್ನ ಮಾತಾ ಎನ್ನುತ್ತಾ ಪೆರ್ಲ ಕೃಷ್ಣ ಭಟ್ಟರು ಅಷ್ಟೇ ಸಮರ್ಥವಾಗಿ ರಾಮನಾಗಿಬಿಡುತ್ತಾರೆ. ನೆಟ್ಟ ಬಾಣವನ್ನು ತೆಗೆದು ಬದುಕುವ ಅವಕಾಶವನ್ನು ಮಾಡಿ ಕೊಡುತ್ತೇನೆ ,ಭೂಮಿ ಭಾರವನ್ನು ಇಳಿಸುವಲ್ಲಿ ಉದ್ಯುಕ್ತನಾಗಿ ವಾಲಿ ಹೇಗೆ ತಪ್ಪಿತಸ್ಥ ಎಂದು ತರ್ಕ ಪೂರ್ಣವಾಗಿ ರಾಮ ಉತ್ತರಿಸುವಂತೆ ಮಾಡುತ್ತಾರೆ.ಬದುಕುವ ವಾಗ್ದಾನವನ್ನು ನೀಡಿದ ರಾಮನಲ್ಲಿ .. ರಾಮ ನಿನ್ನ ಬಾಣ ತಾಗಿದ ಮೇಲೆ ಬದುಕಬೇಕೆಂಬಾಶೇ ಉಂಟೆ ? ಎಂದು ವಿನಯವಾಗಿ ಮತ್ತು ವಾಲ್ಯ ಪಾತ್ರವನ್ನು ಇನ್ನೂ ವೈಭವೀಕರಿಸುವಲ್ಲಿ ಶೇಣಿಯವರ ಪಾತ್ರಪೋಷಣೆ ಅನನ್ಯ. ಪುನಃ ಆವರ್ತಿಸಿ ಕೇಳಿದರೂ ಇನ್ನು ಕೇಳಬೇಕು ಎನ್ನುವ ತರ್ಕದ ಮಾತುಗಳು ಮಾತಿನ ಲೋಕದ ಮಹಾಕವಿ ಎಂಬ ನುಡಿಗೆ ಅನ್ವರ್ಥ ಮಾತ್ರವಲ್ಲ ಸಾಕಾರಾವಾಗಿಬಿಡುತ್ತಾರೆ.

ಎಲ್ಲದಕ್ಕೂ ಒಪ್ಪವಿಡುವಂತೆ ಅದ್ಭುತ ಹಿಮ್ಮೇಳ , ಬಲಿಪ್ಪರೊಂದಿಗೆ ಪದ್ಯಾಣ ಶಂಕರನಾರಾಯಣ ಭಟ್ ರವರು ಮತ್ತು ಕುದ್ರೆಕೊಡ್ಲು ರಾಮ ಭಟ್ ರವರು ಉತ್ತಮ ಹಿಮ್ಮೇಳವನ್ನು ಒದಗಿಸಿದ್ದಾರೆ. ಚೆಂಡೆ ಮದ್ದಲೆಗಳು ಪದಕ್ಕೆ ತಕ್ಕಂತೆ ಅನುರಣಿಸುವಾಗ ಬೇರೆ ಏನು ಬೇಕು

ನನ್ನ ಯಕ್ಷಗಾನ ಸಂಗ್ರಹದ ಅಮೂಲ್ಯ ರತ್ನಗಳಲ್ಲಿ "ವಾಲಿವಧೆ" ಒಂದು ಅಮೋಘ ರತ್ನ.

Friday, May 8, 2009

ಶೇಣಿ ಪಿತಾಮಹ.

ಯಕ್ಷಗಾನಕ್ಕೆ ಸಂಬಂದಿಸಿ ಶೇಣಿ ಅಜ್ಜ ಒಬ್ಬ ಪಿತಾಮಹನೆ. ತಾನು ನಡೆದಲ್ಲೆಲ್ಲ ಮದಗಜದಂತೆ ದಾರಿ ಮಾಡಿಕೊಂಡು ಅರ್ಥಗಾರಿಕೆಗೆ ಹೊಸ ರೂಪು ಕೊಟ್ಟವರು. ಇಂದು ನಾನು ಹೊಂದಿರುವ ೨೫೦ ಕ್ಕೂ ಹೆಚ್ಚು ಯಕ್ಷಗಾನ ಸಂಗ್ರಹಗಳಲ್ಲಿ ಶೇಣಿ ಅಜ್ಜನ ಮಾತುಗಳ ಅರ್ಥಗಾರಿಕೆಯ ಪಾತ್ರಗಳು ಅತಿ ಹೆಚ್ಚು ತುಂಬಿವೆ. ಅವರ ಧ್ವನಿ ಯಕ್ಷಗಾನ ಮುಖಾಂತರ ಪ್ರತಿ ದಿನದ ಯಾವುದೊ ಒಂದು ಕ್ಷಣದಲ್ಲಿ ಆಲಿಸುತ್ತೇನೆ. ಹಾಗಾಗಿ ನನ್ನಲ್ಲಿ ಮೊಬೈಲ್ ನಲ್ಲಿ ಅವರ ಯಕ್ಷಗಾನವನ್ನು ತುಂಬಿರುವುದರಿಂದಲೋ ಶೇಣಿ ಅಜ್ಜ ಇಂದು ಮಾನಸಿಕ ಸಖನೆ ಆಗಿಬಿಟ್ಟಿದ್ದಾರೆ. ಹೊರಗೆ ವಾಹನದ ದಟ್ಟನೆಯ ನಡುವಲ್ಲಿ ನಾನು ನಿಂತಿದ್ದರೆ ನನ್ನ ಕಿವಿಯಲ್ಲಿ ಮಾತ್ರ ಮೊಬೈಲ್ ಮೂಲಕ ಶೇಣಿ ಅಜ್ಜ ತನ್ನ ಧ್ವನಿಯ ಏರಿಳಿತವನ್ನು ಮೊಳಗಿಸುತ್ತ ಇದ್ದಾರೆ. ಒಂದು ಸಲ ರಾವಣ ನಾಗಿಯೋ ಇನ್ನೊದು ಸಲ ರಾಮನಾಗಿಯೋ ,ಭೀಷ್ಮನಾಗಿಯೋ ಅಥವಾ ಕರ್ಣನಾಗಿಯೋ ಅವರ ಮಾತುಗಾರಿಕೆಯ ಸುಳಿಯೊಳಗೆ ಹಲವುಸಲ ಬೇಕೆಂದೇ ಸಿಕ್ಕಿ ಹಾಕಿಕೊಳ್ಳುತ್ತೇನೆ.


ಇಂತಹ ಶೇಣಿ ಬಗ್ಗೆ ನಾನು ಹೊಗಳುವುದಕ್ಕೂಅರ್ಹನಲ್ಲದವನು. ಸೂರ್ಯನನ್ನು ನೋಡಿ ಸೂರ್ಯ ಕಿರಣವನ್ನು ಲೆಕ್ಕ ಹಾಕುವುದಕ್ಕೆ ಸಾಧ್ಯವೇ? ಶೇಣಿಯವರ ಮಾತುಗಾರಿಕೆಗೆ ಮನ ಸೋಲದ ಯಕ್ಷಗಾನ ಪ್ರೇಕ್ಷಕನನ್ನು ಹುಡುಕುವುದು ಕಷ್ಟ. ಇಂದಿನ ತಲೆಮಾರಿಗೆ ಅವರು ಕೇವಲ ದಂತ ಕಥೆಯಾದವರು. ನಾನು ಬಾಲಕನಾಗಿದ್ದಾಗ ಅವರ ಅರ್ಥಗಾರಿಕೆಗೆ ಮನಸೋತಿದ್ದೆ. ಅದು ಅವರ ಮಾತುಗಳನ್ನು ಅರ್ಥವಿಸಿಕೊಂಡು ಅಂತ ಹೇಳಲಾರೆ ಏನೂ ಅರ್ಥವಾಗದ ಪಾಮರನಂತಹ ನನ್ನ ಶೈಶವ ತಲೆಗೆ ಅವರ ಮಾತಿನ ಆಳ ಅರ್ಥವಾಗಿದೆ ಅಂತ ಹೇಳಿದರೆ ಅದು ಹಾಸ್ಯಾಸ್ಪದವಾದೀತು. ಹೀಗಿದ್ದರೂ ಬಾಲ್ಯದಲ್ಲೇ ಶೇಣಿ ಅರ್ಥ ಅಂದರೆ ಒಂದು ಸೆಳೆತವಿರುತ್ತಿತ್ತು. ಆವಾಗ ತಾಳಮದ್ದಳೆಯಲ್ಲಿ ನೋಡುವ ಅವಕಾಶ ಮಾತ್ರ ನನಗೆ ಸಿಗುತ್ತಿತ್ತು. ಆವಾಗ ಕೇವಲ ಚೆಂಡೆಯ ಸದ್ದೋ ಅಥವಾ ಇನ್ನಿತರ ಆಕರ್ಷಣೆಗಳೇ ನನ್ನನ್ನು ಇಂತಹ ತಾಳಮದ್ದಲೆಗೆ ಹಿರಿಯರೊಂದಿಗೆ ಹೋಗುವಂತೆ ಪ್ರೆರೆಪಿಸುತ್ತಿದ್ದವು. ಆದರೆ ಬರು ಬರುತ್ತಾ ಶೇಣಿಯವರ ಅರ್ಥಗಾರಿಕೆಯನ್ನು ಹಿರಿಯರು ಚರ್ಚಿಸುವಾಗ ನನ್ನ ಕಿವಿ ನಿಮಿರತೊಡಗಿತು. ಹೌದೇ ? ಇಷ್ಟೊಂದು ಗಹನವಾಗಿರುವುದೇ ?ಯಕ್ಷಗಾನ ಬಯಲಾಟಗಳು ನನ್ನ ಬಾಲ್ಯದಲ್ಲಿ ತನಗೆ ತೀರ ವಿರಳ ಅಂತಾಳೆ ಹೇಳಬಹುದು. ಶೇಣಿಯಂತಹ ಕಲಾವಿದರು ಟೆಂಟ್ ಮೆಳದಲ್ಲೇ ವ್ಯವಸಾಯಿ ಕಲಾವಿದರಾಗಿರುತ್ತಿದ್ದರಿಂದ, ಬರೀ ಕಟೀಲು ಮೇಳದ ಬಯಲಾಟಗಳನ್ನೇ ನೋಡುತ್ತಿದ್ದ ನನಗೆ ಶೇಣಿಯವರನ್ನು ವೇಷದಲ್ಲಿ ಆವಾಗ ನೋಡಿದ್ದು ಕಡಿಮೆ. ತಾಳ ಮದ್ದಲೆಯಾದರೆ ನಮಗೆ ಸುಲಭದಲ್ಲಿ ಖರ್ಚಿಲ್ಲದೆ ಸಿಗುವ ಮನರಂಜನೆಯಾಗಿತ್ತು.

ಬಾಲ್ಯದಲ್ಲಿ ಅವರ ಅರ್ಥ ಅರ್ಥೈಸಿಕೊಳ್ಳಲು ಕಷ್ಟವಾದರೂ ಆ ಸ್ವರದ ಏರಿಲಿತವೋ ಧ್ವನಿಯ ಆಕರ್ಷಣೆಯೋ ಅಂತೂ ಶೇಣಿ ತಾಳಮದ್ದಲೆ ಎಂದರೆ ಆವಾಗಿಂದ ಒಂದು ಸೆಳೆತ ಅದು ಇನ್ನು ಇದೆ. ಮಾತಿನಂತೆ ಅವರ ಧ್ವನಿ ಅದರ ಏರಿಳಿತ ಸ್ವತಹ ಸಂಗೀತ ವಿದ್ವಾಂಸರಾಗಿದ್ದುದರಿಂದಲೋ ತಿಳಿಯದು ಅವರ ಕಂಠದ ಏರಿಳಿತ ಹಿಡಿತ ಮಿಡಿತಗಳು ಬಹುಶಃ ಇನ್ನು ಯಾವ ಕಲಾವಿದನಿಗೂ ಒಲಿಯದ ವಿದ್ಯೆ. ಈಗಿನ ಅರ್ಥಧಾರಿಗಳಲ್ಲಿ ಹಲವರು ಇವರ ನೆರಳಳನ್ನು ಹಿಂಬಾಲಿಸಿದ್ದರು ಅವರ ವಿಶೇಷತೆ ಯಾರಿಗೂ ಒಲಿಯದೆ ಇದ್ದದ್ದು ಮಾತ್ರ ಶಾರದೆ ಒಲಿಯುವಾಗ ಕಂಜೂಸಿಯಾಗಿಬಿಡುತ್ತಾಳೆ ಎಂದು ಅನ್ನಿಸಿ ಹೋಗುತ್ತದೆ. ಎರಡು ಮೂರು ವರ್ಷಗಳಿಂದ ಈಚೆಗೆ ಶ್ರೀ ಸುಣ್ಣಬಂಲ ವಿಶ್ವೇಶ್ವರ ಭಟ್ ಇವರನ್ನು ಹಲವು ಗುಣಗಳಲ್ಲಿ ಹೋಲುತ್ತಾರೆ. ಇಬ್ಬರ ಪ್ರತಿಭೆಗಳೂ ತುಂಬಾ ವೆತ್ಯಾಸ ಮತ್ತು ಹೋಲಿಕೆಗೆ ಅಸಾಧುವಾದದ್ದು ಎನ್ನುವುದಾದರೂ ಶೇಣಿಯವರ ಹಲವು ಗುಣಗಳನ್ನು ಇವರ ಅರ್ಥದಲ್ಲಿ ಗುರುತಿಸಿದ್ದೇನೆ. ಬಹುಶಃ ಇದು ನನ್ನ ಭಾವನೆ ಸರಿ ಅಂತ ನನಗೆ ಮಾತ್ರ ತೋರುವುದೋ ತಿಳಿಯದು. ಶೇಣಿಯವರ ಅರ್ಥಗಾರಿಕೆಯಲ್ಲಿ ಕಂಡು ಬರುವ ಒಂದು ಅಚ್ಚುಗಟ್ಟು, ಮಾತುಗಳನ್ನು ಪೋಣಿಸುವ ಮತ್ತು ಮಾತಿನ ಗೋಪುರವನ್ನು ನಿರ್ಮಿಸುವ ಚಾಕಚಕ್ಯತೆ ಮತ್ತು ಸ್ವರಗಳ ಏರಿಳಿತ ತಕ್ಕ ಮಟ್ಟಿಗೆ ಅವರಲ್ಲಿ ಗುರುತಿಸಿದ್ದೇನೆ. ನಾವುಗಳು ಅಚ್ಚರಿ ಪಡುವಂತೆ ಶಬ್ದ ಸಂಗ್ರಹಗಳಲ್ಲಿ ತುಂಬಾ ಹೋಲಿಕೆ ಕಂಡು ಬಂದಿದೆ. ಆದರೂ ಶೇಣಿ ಅಜ್ಜ ಯಾರಿಗೂ ಹೋಲಿಕೆ ಮಾಡಿ ತುಲನೆ ಮಾಡಿ ಬರೆಯುವಂತ ಕಲಾವಿದರಲ್ಲ .

ಶೇಣಿಯವರ ಹಲವು ಮಾತಿನ ಮಂಟಪವನ್ನು ಕಣ್ಣಾರೆ ಕಂಡು ಆಸ್ವಾದಿಸಿದ ದಿನಗಳಿವೆ. ಅದರ ಕುರುಹಾಗಿ ಇಂದು ದಿನದಲ್ಲಿ ಒಂದು ಬಾರಿಯಾದರೂ ಅಂತಹ ಮಹಾನ್ ಕಲಾವಿದರ ಧ್ವನಿಯನ್ನು ಕೇಳದಿದ್ದರೆ, ಪರವೂರಲ್ಲಿದ್ದು ನಮ್ಮ ಮನೆಯ ಸದಸ್ಯರ ಧ್ವನಿ ಆಲಿಸದಿದ್ದರೆ ಹೇಗಾಗಬಹುದು ಅದೇ ಅನುಭವ ಆಗುತ್ತದೆ. ಹೀಗೆ ಅದೆಷ್ಟು ಮನೆಯ ಮನದ ಅವಿಭಾಜ್ಯ ಅಂಗವಾಗಿ , ತನ್ನ ಜೀವಿತದಲ್ಲೂ ಅದರ ನಂತರವೂ ನಿತ್ಯ ನೆನಪಿನ ಆತ್ಮವಾಗಿ ಉಳಿದಿದ್ದಾರೆ? ಯಕ್ಷಗಾನದ ಕಲೆಯ ಪರಿಚಯ ಮತ್ತು ಅದರ ಹವ್ಯಾಸ ಬೆಳೆಸಿಕೊಂಡವ ನಿಜಕ್ಕೂ ಭಾಗ್ಯವಂತ. ಹಲವು ವರ್ಷ ತಪಸ್ಸಾಚರಿಸಿ ದೇವರನ್ನು ಪ್ರತ್ಯಕ್ಷಿಕರಿಸಿಕೊಂಡವ ಪರರನು ನೋಡಿ ಹೇಳಬಹುದು ತಾನೆಷ್ಟು ಧನ್ಯ, ಭಗವಂತನನ್ನು ಕಣ್ಣಾರೆ ಕಂಡೆ, ತಪಸ್ಸನ್ನು ಗೈದೆ ಪುಣ್ಯ ಫಲವನ್ನು ಉಂಡೆ. ಉಳಿದ ಮಂದಿಗೆ ಈ ಭಾಗ್ಯ ಉಂಟೆ ? ಅಂತೆಯೇ ಯಕ್ಷಗಾನವನ್ನು ಸವಿದು ಬಲ್ಲ ನಾವು ಗರ್ವ ಪಡಬಹುದು. ಯಕ್ಷಗಾನವ ಸವಿದೆ ಶೇಣಿಯನು ಕಂಡೆ , ಮಾತಿನ ಮಂಟಪ ಹೊಕ್ಕೆ , ಮನಕೆ ಭೂರಿ ಭೋಜನವ ಉಂಡೆ ಯಕ್ಷಗಾನವನರಿಯದ ಮಂದಿಗಿದೆಯೇ ಈ ಪುಣ್ಯ ಫಲ.

Monday, May 4, 2009

ಬೆಂಗಳೂರಿನ ಈ ಅವಧಿಯ ಕೊನೆಯ ಆಟಗಳು






ಈ ವೈಶಾಖದ ಅಂತ್ಯದೊಂದಿಗೆ ಬೆಂಗಳೂರಿನಲ್ಲಿ ಎರಡು ಬಯಲಾಟಗಳನ್ನು ನೋಡುವ ಅವಕಾಶ ಬಂತು.ಅಲ್ಲಿಗೆ ತಾತ್ಕಾಲಿಕವಾಗಿ ಯಕ್ಷಗಾನ ಮೇಳಗಳ ತಿರುಗಾಟ ಮುಗಿಯಿತು. ಕೊನೆಯ ಈ ಎರಡು ಆಟಗಳ ಅನುಭವ ಸವರಿದಂತೆ ಹಂಚಿಕೊಳ್ಳುವ ತುಡಿತ ಮಾತ್ರ ಇಲ್ಲಿ.

ಒಂದು ಆಟ ಎಡನೀರು ಮೇಳದ ಈ ವರ್ಷದ ಮೂರನೇ ಬೆಂಗಳೂರು ಪ್ರವಾಸದ ಒಂದು ದಿನದ ಪ್ರದರ್ಶನ. ಒಂದು ಮರೆಯಲಾರದ ಮರೆಯಲಾಗದ ಅನುಭವವನ್ನು ಕೊಟ್ಟಿತು. ಅನೇಕ ನಿರೀಕ್ಷೆಯೊಂದಿಗೆ ಮೊದಲ ದಿನದ ಆಟಕ್ಕೆ ಹೋಗಿದ್ದೆ. ಮೇಳದ ಪ್ರಧಾನ ಹಿಮ್ಮೇಳದವರು ರಜೆ ಎಂದು ತಿಳಿದು ನಿರುತ್ಸಾಹಿತನಾಗಿ ಕುಳಿತರೂ ಆದಿನದ ಮಟ್ಟಿಗೆ ಅದ್ಭುತ ಅನುಭವವನ್ನೇ ಕೊಟ್ಟಿತು. ೧೫ ಕಿಲೋ ಮೀಟರು ವಾಹನ ದಟ್ಟಣೆಯಲ್ಲಿ ಹೋದುದು ವ್ಯರ್ಥವಾಗದಷ್ಟು ಅನುಭವ. ಒಂದು ವಿಶೇಷ ಹಿರಿಯ ಕಲಾವಿದ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಚೆಂಡೆ ಮದ್ದಲೆ ವಾದನ. ಜೀವನದ ವಾನಪ್ರಸ್ಥ ಸಮಯದಲ್ಲಿ ಬಲ್ಲಾಳರ ಕೈಚಳಕ ಕಂಡ ಭಾಗ್ಯವಂತ ನಾನು.ಪೂಜ್ಯ ಎಡನೀರು ಸ್ವಾಮಿಜಿಗಳ ಸಾಮನ್ಯ ಹಾಡುಗಾರಿಕೆ ಇವರ ಸ್ಫೂರ್ತಿಯಿಂದ ಅದ್ಭುತ ಯಶಸ್ಸು ಕಂಡಿತು. ಬಹುಶಃ ಅವರಿಗೂ ಅದು ಮರೆಯಲಾರದ ಅನುಭವ ಕೊಟ್ಟಿತೇ ? ಬಹುಶಃ ಆ ಮೇಳದ ಹಿಮ್ಮೇಳದ ಸ್ಥಾನದ ಮಹಿಮೆ ಅಂತ ತಿಳಿದುಕೊಂಡಿದ್ದೇನೆ. ಅದರಂತೆ ಮುಮ್ಮೇಳ ಕೂಡ. ಆದಿನ ಕೃಷ್ಣಾರ್ಜುನ ಪ್ರಸಂಗ. ಯುವ ಪ್ರತಿಭಾವಂತ ದೀಪಕ್ ಪೇಜಾವರ ಅವರ ಕೃಷ್ಣ ಹಾಗು ಮಧೂರು ನಾವಡ ಅವರ ಅರ್ಜುನ

ಉತ್ತಮವಾದ ನಿರ್ವಹಣೆಯಿಂದ ಜನಮನ ಸೆಳೆಯಿತು. ಕೇವಲ ಹೋದುದಕ್ಕೆ ೨ ದಿಗಿಣ ನೋಡಿ ಹೋಗುವಂತ ಆಲಸ್ಯದಿಂದ ಕುಳಿತ ನಾನೂ ೧೦ ಗಂಟೆಯ ತನಕ ಕುಳಿತದ್ದು ನನಗೆ ಸೋಜಿಗ ಅನ್ನಿಸಲೇ ಇಲ್ಲ. ಸಮಯಾವಕಾಶದಿಂದ ಪೂರ್ಣವಾಗಿ ನೋಡಲು ಸಾಧ್ಯವಾಗದೆ ಹೋಯಿತು. ಅದರ ಪ್ರಭಾವವೋ ಚಿಪ್ಪಾರು ಕೈಚಳಕ ವನ್ನು ಪುನಃ ಸವಿಯುವ ಮನಸ್ಸಿಂದ ಒಂದು ದಿನ ಬಿಟ್ಟು ಮೂರನೇ ಆಟಕ್ಕೆ ಹೋದರೆ ದೇವರ ಆಟ ಬೇರೆಯೇ ನಿಗದಿಯಾಗಿತ್ತು. ಜೀವನದ ಕೊನೆಯ ಕ್ಷಣದವರೆಗೂ ಯಕ್ಷಗಾನಕ್ಕಾಗಿ ಬಾಳಿದ ಬಲ್ಲಾಳರು ಇತಿಹಾಸವಾದದ್ದು ಮರೆಯದ ಒಂದು ಘಟನೆಯಾಯಿತು.





ಎಡನೀರು ಮೇಳ ಇಲ್ಲ ಇನ್ನು ಎಂದು ಅಭಿಮಾನಿಗಳು ನಿರಾಶೆಯಿಂದ ಈ ವರ್ಷದ ಅವಧಿಯನ್ನು ಎದುರುಗೊಂಡರೆ, ಅಭಿಮಾನಿಗಳ ನಿರೀಕ್ಷೆಯನ್ನು ತಕ್ಕಮಟ್ಟಿಗೆ ನೀಗಿಸಿ ಈ ವರ್ಷದ ಯಶಸ್ವಿ ತಿರುಗಾಟದ ಕೊನೆಯ ಕ್ಷಣದಲ್ಲಿದೆ. ದೈವಬಲ ಎಂದರೆ ಇದುವೆಯೋ ಏನೋ.. ಏನಿದ್ದರೂ ಚಿಪ್ಪಾರು ಅಜ್ಜನ ಮದ್ದಳೆಯ ಛಾಪನ್ನು ಚಪ್ಪರಿಸುವಂತೆ ಮಾಡಿದ ಎಡನೀರು ಹಿಮ್ಮೇಳಕ್ಕೆ ಆ ಯಕ್ಷಪಿತನ ಹಾರೈಕೆ ಖಂಡಿತ ಇದೆ ಎಂದೇ ನನ್ನ ಗ್ರಹಿಕೆ. ಅಮ್ಮಣ್ಣಾಯರ ಸಾರಥ್ಯ ಗೋರೆ ದೆಲಂಥಮಜಲು ಅವರೊಂದಿಗೆ ಉಪಾಧ್ಯಾಯರ ಸಹಕಾರ ಹಿಮ್ಮೇಳವನ್ನು ಗಟ್ಟಿಗೊಳಿಸಿದೆ. ಹಾಗೆಂದು ಎಡನೀರು ಮೇಳ ಪರಿಪೂರ್ಣ ಎಂದು ಹೇಳುವುದಲ್ಲ. ಅದಕ್ಕೆ ಅದರದ್ದೇ ಆದ ಕೆಲವು ತೊಡಕುಗಳು ಇವೆ. ಹಾಗೂ ಅದಕ್ಕೆ ಅದರದ್ದೇ ಆದ ಕಾರಣಗಳು ಇದೆ. ಪರಿಪೂರ್ಣವಾದ ಬಣ್ಣದ ವೇಷ ಇಲ್ಲ, ಎಡಬಲ ವೇಷಗಳು ರಂಗವನ್ನು ತುಂಬುವಲ್ಲಿ ತುಂಬಾ ಶ್ರಮ ಪಡಬೇಕಾಗುತ್ತದೆ. ಒಳ್ಳೆಯ ಪಳಗಿದ ಕಲಾವಿದರಾಗಿ ಕೆಲವರನ್ನು ಮಾತ್ರವೇ ಹೆಸರಿಸಬಹುದು. ಆದರೂ ಇದೆಲ್ಲವನ್ನೂ ಮೀರಿ ಒಂದು ತಂಡವಾಗಿ ಭೇದವಿಲ್ಲದೆ ಅವರಿಗೆ ರಂಗದಲ್ಲಿ ವ್ಯವಹರಿಸುವ ಕಲೆ ತಿಳಿದಿದೆ. ಇಂದಿನ ಕಾಲಮಿತಿಯೋಳಗಣ ಪ್ರದರ್ಶನದಲ್ಲಿ ಬಣ್ಣದ ವೇಷವಾಗಲಿ ಪಳಗಿದ ಕಲಾವಿದರ ಸಂಖ್ಯೆಯಾಗಲಿ ನಗಣ್ಯ. ಒಟ್ಟಂದದಲ್ಲಿ ಹಿಮ್ಮೇಳ ಮತ್ತು ಮುಮ್ಮೇಳದ ಸಂಯೋಜನೆ ಹೇಗೆ ಸಂವಹನ ಹೇಗೆ ಇದರಿಂದಲೇ ಪ್ರದರ್ಶನ ಯಶಸ್ಸನು ಕಾಣಬಹುದು. ಇದು ಎಲ್ಲರೂ ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ ವಿಚಾರ. ಆದುದರಿಂದಲೇ ನೀವು ಒಂದು ಸಲ ಆಟ ನೋಡುವ ಎಂದು ಕುಳಿತರೆ ಅದು ಎಂತಹುದೇ ಪ್ರಸಂಗವಾಗಲಿ ನಿಮ್ಮನ್ನು ಅಲ್ಲಿಂದ ಕದಲಲು ಬಿಡುವುದಿಲ್ಲ.ಕಲಾವಿದರ ಸಂಖ್ಯೆ ಸೀಮಿತವಾಗಿರುವುದರಿಂದ ಹಲವು ಗುಣಗಳು ಈ ತಂಡಕ್ಕೆ ಆಗಿವೆ. ಮೊದಲನೆಯದಾಗಿ ಆರ್ಥಿಕವಾದ ವಿಚಾರ ಉದ್ವೇಗ ರಹಿತ ಪ್ರದರ್ಶನ ಮತ್ತು ಇದ್ದ ಕಲಾವಿದರಲ್ಲಿ ಸುಲಭದಲ್ಲಿ ಸಮನ್ವಯ ಸಾಧನೆ. ಇದು ಹೊರನೋಟಕ್ಕೆ ಕಂಡುಕೊಳ್ಳಬಹುದು.ಈ ಮೇಳದ ಮುಖ್ಯ ಇನ್ನೊದು ಆಕರ್ಷಣೆ ಇದರ ವೇಷ ಭೂಷಣಗಳು ನಿತ್ಯ ಹೊಸದರಂತೆ ಕಂಗೊಳಿಸುತ್ತವೆ.ಹೀಗೆ ಕೆಲವೆಲ್ಲ ಗುಣಗಳಿಂದ ಒಟ್ಟಂದದಲ್ಲಿ ಆಟ ಒಳ್ಳೆದಾಗಿದೆ ಅಂತ ಹೇಳುವಲ್ಲಿ ತಪ್ಪಿಲ್ಲ.


ಅದರ ನಂತರ ಮೊನ್ನೆ ಅಂದರೆ ಮೇ ೨ ನೇ ದಿನಾಂಕದಂದು ದಾಸರಹಳ್ಳಿ ಪ್ರತಿಷ್ಟಾನದವರ ಆಟ ನೋಡುವ ಉತ್ಸಾಹದಿಂದಲೇ ಹೋಗಿದ್ದೆ. ನಿತ್ಯವೂ ಯಕ್ಷಗಾನವನ್ನು ಆಲಿಸುವ ಆದಷ್ಟು ಅದರಲ್ಲೇ ಆನಂದವನ್ನು ಕಾಣುತಿದ್ದ ನನಗೆ ಒಂದೆರಡು ದಿನ ಚಿಪ್ಪಾರು ನಿಧನದಿಂದ ಆ ಯಕ್ಷಗಾನವನ್ನು ಸವಿಯುವ ಮನಸ್ಸಾಗಲಿಲ್ಲ. ನಿತ್ಯವೂ ಒಂದಲ್ಲ ಒಂದು ಯಕ್ಷಗಾನ ಕೇಳುವ ನನಗೆ ಚೆಂಡೆ ಮದ್ದಲೆ ಸ್ವರ ಕೇಳಿದಾಗ ಚಿಪ್ಪಾರು ಮುಖ ಎದುರುಬಂದು ನಿಂತು ಬಿಡುತ್ತಿತ್ತು. ಹಾಗಾಗಿ ಈ ಗುಂಗಿನಿಂದ ಹೊರಬರಲು ಒಂದು ಸಮಯ ಅಂತ ಭಾವಿಸಿಯೇ ಉತ್ಸಾಹದಿಂದಲೇ ಯಕ್ಷ ಸಪ್ತಮಿ ಪರ್ವಕ್ಕೆ ಹೋಗಿದ್ದೆ. ದಾಸರ ಹಳ್ಳಿಯ ಯಕ್ಷಗಾನ ವಾತಾವರಣ ಪ್ರತಿಸಲದಂತೆ ಇಸಲವೂ ಕಂಗೊಳಿಸುತ್ತಿತ್ತು. ಅಧಿಕವಾಗಿ ಕರಾವಳಿ ಪ್ರದೇಶದವರೇ ಇರುವ


ಈ ತಾಣ , ಬೆಂಗಳೂರಿನ ನನಿಗೆ ಸ್ವಲ್ಪ ದೂರದ ತಾಣ, ಸಡಗರದಿಂದ ಯಕ್ಶೋತ್ಸವವನ್ನು ಆಚರಿಸುತ್ತಿತ್ತು.ಇಲ್ಲಿನ ಯಕ್ಷಗಾನೀಯ ವಾತವರಣ ಪ್ರತಿಸಲದಂತೆ ಈ ಸಲವೂ ಮನಸ್ಸಿಗೆ ಖುಷಿಯನ್ನು ಕೊಟ್ಟಿತು. ನಮ್ಮೂರಿನ ದೆರೆ ಮೇಳದ ವ್ಯವಸ್ಥೆಯನ್ನು ನೆನಪಿಸುವಂತಹ ವ್ಯವಸ್ಥೆ. ಬೆಂಗಳೂರಿನಲ್ಲಿ ಅಪಾರೂಪ ಎನ್ನಬಹುದಾದ ವಾತಾವರಣ. ಮೇಳದ ಅಧಿಕೃತ ವೇದಿಕೆಯಲ್ಲಿ ಆಟ ನಡೆದರೆ ಅದು ಒಂದು ಸೊಗಸು. ಮುಖ್ಯವಾಗಿ ಕೆಲವೊಮ್ಮೆ ಭಾಗವತರಿಗೆ ಜಾಗವಿಲ್ಲದಂತ ವೇದಿಕೆಯನ್ನು ಬೆಂಗಳೂರಲ್ಲಿ ನೋಡಬಹುದು. ಹಾಗಿರುವಾಗ ಮೇಳದ ಸುಸಜ್ಜಿತ ರಂಗಸ್ಥಳದಲ್ಲಿ ಆಟ ನೋಡುವುದು ಒಂದು ಹಿತವಾದ ಅನುಭವ.ತೆಂಕು ತಿಟ್ಟು ಪ್ರತಿಷ್ಠಾನದವರು ಪ್ರತಿ ಸಲದಂತೆ ಅತ್ಯುತ್ತಮ ವ್ಯವಸ್ಥೆಯನ್ನೇ ಮಾಡಿದ್ದರು. ಧೂಮ ಪಾನ, ಗುಟ್ಕ ಮತ್ತು ಚಪ್ಪಲಿಗೆ ಒಳಗೆ ಪ್ರವೇಶವೇ ಇಲ್ಲ. ಇದೊಂದು ಪರಿಸರವನ್ನು ಗೌರವ ಪೂರ್ಣವಾಗಿ ನೋಡುವಂತೆ ಮಾಡುತ್ತದೆ. ಡೇರೆಯ ಒಳ ಹೊಕ್ಕರೆ ಕತ್ತಲಿನಲ್ಲಿ ಜಗಮಗಿಸುವ ಬೆಳಕಿನ ರಂಗಸ್ಥಳ ನಿಜಕ್ಕೂ ಒಂದು ಉತ್ತಮ ಅನುಭವ.



ನಾನು ಹೋದಾಗ ಸ್ವಲ್ಪ ಆಟದ ಭಾಗ ಮುಗಿದಿತ್ತು.. ಸ್ವಯಂ ಪ್ರಭಾ ಪರಿಣಯ ಮತ್ತು ರಕ್ತ ರಾತ್ರಿ ಪ್ರಸಂಗ. ಯುವಭಾಗವತ ಪ್ರಪುಲ್ಲ ಕುಮಾರ ಅವರ ಭಾಗವತಿಕೆ, ಪದ್ಯಾಣ ಅವರನ್ನೇ ಅನುಕರಿಸಿ ಹಾಡಿದಂತೆ ಇತ್ತು. ಕುಳಿತ ಹಾಡುವ ಭಂಗಿ ಎಲ್ಲವನ್ನು ಅನುಕರಿಸಿದಂತೆ ಭಾಸವಾಯಿತು. ಕೆಲವು ಸಮಯದ ಮೊದಲು ADA ರಂಗಮಂದಿರದ ಸೇವೆ ಆಟದಭಾಗವತಿಕೆಗೂ ಇದಕ್ಕೂ ತುಂಬಾ ವೆತ್ಯಾಸ ಕಂಡಿತು. ಬಹುಶ ಅನುಕರಣೆಯ ಪ್ರಭಾವವೋ ಏನೋ.ನನ್ನ ಪ್ರಾಮಾಣಿಕ ಅನಿಸಿಕೆ ಅಷ್ಟೇ.



ಒಟ್ಟು ಮೊದಲಿನ ಪ್ರಸಂಗ ನೋಡಿದಾಗ ಹಾಸ್ಯಕ್ಕೆ ತುಂಬಾ ಪ್ರಾಧಾನ್ಯತೆ ಕೊಟ್ಟಂತೆ ಅನಿಸಿತು. ಪ್ರತಿ ಕಲಾವಿದನು ಹಾಸ್ಯದ ತುಣುಕು ಉದುರಿಸುವವರೇ. ಬಣ್ಣದ ವೇಷದ ಅಸುರ ಪಾತ್ರಧಾರಿಯ ಮಾತುಕೂಡ ಹಾಸ್ಯಗರನಂತೆ ಇತ್ತು. ಇನ್ನು ಗಂಭೀರವಾದ ನಾರದನ ಪಾತ್ರ ಕೂಡ ಹಾಸ್ಯದಿಂದಲೇ ಕೂಡಿತ್ತು. ಒಟ್ಟು ಸನ್ನಿವೇಶಕ್ಕೆ ಇದು ಹೊಂದಾಣಿಕೆ ಆಗುತ್ತದೋ ಇಲ್ಲವೊ ನಾನು ಹೇಳಲಾರೆ. ಆದರೆ ಜನರಂಜನೆ ಆದದ್ದು ಮಾತ್ರ ಸತ್ಯ.ಮೊದಲಿನ ಸ್ವಯಂ ಪ್ರಭೆ ಲವ ಲವಿಕೆಯಿಂದ ಕೂಡಿತ್ತು. ಶೂರ ಸಾಹಸದಿಂದ ಕೂಡಿದ ಈ ಪಾತ್ರ ಅಂಬ ಪ್ರಸಾದ ಪಾತಾಳ ಮೊದಲಾರ್ಧದಲ್ಲಿ ಚೆನ್ನಾಗಿ ನಿರ್ವಹಿಸಿದ್ದರೂ ತಮ್ಮ ದೇಹ ಪ್ರಕೃತಿಯಿಂದ ದಿಗಿಣವನ್ನು ಅಲ್ಲಿಂದ ಅಲ್ಲಿಗೆ ಸುಧಾರಿಸಿಕೊಂಡರೆ., ನಂತರ ದ ಆ ಪಾತ್ರ ಮಾಡಿದ ಯಲಗುಪ್ಪ ತೀರ ವೈಫಲ್ಯವನ್ನು ಕಂಡರು. ಥಳುಕು ಬಳುಕು ಈ ಪಾತ್ರಕ್ಕೆ ಒಗ್ಗದೆಯೋ ಅಥವಾ ತೆಂಕು ತಿಟ್ಟಿನ ಶೈಲಿಯ ಕುಣಿತ ಇರದೇ ಆ ಕಡೆ ಬಡಗು ಕೂಡ ಆಗದೆ ತೀರ ಪೇಲವ ವಾಯಿತು. ಜೋಗಿಯವರ ಪಾತ್ರ ಮಾತ್ರ ಎಂದಿನಂತೆ ಇತ್ತು. ತಮ್ಮ ಕಂಠ ಹಾಗು ಅಚ್ಚು ಕಟ್ಟಿನ ವೇಷಗಾರಿಕೆ ಮತ್ತು ಗಾಂಭೀರ್ಯದಿಂದ ಮೆರೆಯುತ್ತಿದ್ದ ಜೋಗಿಯವರು ಆದಿನ ಅವರ ವೇಷಗಾರಿಕೆಯಲ್ಲಿ ಮೊದಲಿನ ಅಚ್ಚುಕಟ್ಟು ಇರಲಿಲ್ಲ. ಅದರೂ ಒಟ್ಟಿನಲ್ಲಿ ಎಂದಿನಂತೆ ತಮ್ಮ ಪಾತ್ರವನ್ನು ಉತ್ತಮವಾಗಿ ಪ್ರಸ್ತುತ ಪಡಿಸಿದ್ದಾರೆ.

ಎಲ್ಲಕ್ಕಿಂತ ನಾನು ಈ ಮೇಳದಲ್ಲಿ ಎದುರು ನೋಡುವುದು ಶೀನಪ್ಪ ರೈ ವೇಷವನ್ನು. ಎಂದಿಗೂ ಪ್ರೇಕ್ಷಕನನ್ನು ವಂಚಿಸದ ಇವರ ಲಯಬದ್ದ ಪಾತ್ರ ಪೋಷಣೆ ಮೇಳದ ದೊಡ್ಡ ಆಸ್ತಿ ಎಂದೇ ನನ್ನ ಭಾವನೆ. ತುಂಬಾ ಸೌಮ್ಯ ಸ್ವಭಾವದ ಕಲಾವಿದ ರಕ್ಕಸನಾಗಿ ಮೊನ್ನೆ ತಮ್ಮ ಸಹಜ ಕುಣಿತದಿಂದ ನನ್ನ ಮನಸ್ಸಿಗೆ ಮುದನೀಡಿದರು. ಒಂದೇ ಒಂದು ಬೇಸರದ ವಿಚಾರವೆಂದರೆ ಇವರನ್ನು ನನಗೆ ರಂಗದಲ್ಲಿ ನೋಡುವಂತೆ ಆದದ್ದು ಆದಿನ ಕೇವಲ ೯ ನಿಮಿಷ. ಅಷ್ಟರಲ್ಲಿ ಅವರ ಪಾತ್ರ ಕೊನೆಗೊಂಡಿತ್ತು. ಇದು ತುಂಬಾ ನಿರಾಶೆಯ ವಿಚಾರ. ಬಹುಶಃ ಪ್ರಾಯದ ತೊಂದರೆಯೋ ಆರೋಗ್ಯದ ತೊಂದರೆಯೋ ಅಂತು ಅವರ ಅಳಕ್ಕೆ ರಾಮ ರೈ ಯಿಂದ ನಂತರ ರಾಜವೇಶಕ್ಕೆ ಹೆಸರುವಾಸಿಯಾದ ಮತ್ತು ತನ್ನದೇ ಛಾಪನ್ನು ಮೂಡಿಸಿದ ಒಬ್ಬ ಸಮರ್ಥ ಕಲಾವಿದ ರಂಗದಿಂದ ಕೇವಲ ಬೆರಳೆಣಿಕೆ ನಿಮಿಷದಲ್ಲಿ ನಿರ್ಗಮಿಸುವುದು ಮತ್ತು ಅಂತ ಪಾತ್ರಗಳನ್ನು ನಿರ್ವಹಿಸುವುದು ನನ್ನಂಥ ಅಭಿಮಾನಿಗೆ ಕಸಿವಿಸಿಯಾಗುತ್ತದೆ. ಅದರೂ ಅಂದು ಮಿಂಚಿನಂತೆ ಬೆಳಗಿದರು ಶೀನಪ್ಪರೈಗಳು.

ಇನ್ನು ಎರಡನೇ ಪ್ರಸಂಗ ರಕ್ತ ರಾತ್ರಿ.ಮೊದಲೇ ಅರ್ಭಟೆಯ ಹಿಮ್ಮೇಳ ಇನ್ನೂ ಮೊಳಗುವ ಲಕ್ಷಣ. ಅಬ್ಬರದ ಚೆಂಡೆ ಇನ್ನೂ ಅಬ್ಬರಿಸುವ ಸನ್ನಾಹದಲ್ಲಿತ್ತು !!!. ಅಶ್ವತ್ಥಾಮನ ಪ್ರವೇಶದ ಪದ ಹೇಳುವಾಗ ಪ್ರವೇಶದ ಮೊದಲೇ ಕೆಲವರು ಕೇಕೆ ಚಪ್ಪಾಳೆ ಶಿಳ್ಳೆಯಿಂದ


ಸ್ವಾಗತಿಸಿದರು!. ಇದು ಅತಿರೇಕ ಎಂದು ಕಂಡಿತು. ಅದರೂ ಇಂತಹ BLIND ಅಭಿಮಾನಿಗಳನ್ನು ಗಳಿಸುವುದು ಒಂದು ಸಾಧನೆಯೇ ಸರಿ . ರುದ್ರ ಗಂಭೀರವಾಗಿ ಪರಮೇಶ್ವರನ ಅಪರಾವತಾರ ಎಂದು ಕರೆಸುಕೊಳ್ಳುವ ಅಶ್ವತ್ಥಾಮ ಇಲ್ಲಿ ನಗುತ್ತ ಪ್ರತ್ಯಕ್ಷ. ಆ ಕುಣಿತ ಆ ಪಾತ್ರ ಪೋಷಣೆಗೆ ಆ ಪಾತ್ರ ಮಾನಸಿಕ ಸ್ವಭಾವಕ್ಕೆ ಎಷ್ಟು ಹೊಂದಿಕೊಳ್ಳುವುದೋ ದೇವರೇ ಬಲ್ಲ. ಹಾಗಾಗಿ ಮುಂದಿನ ಕಥಾನಕ ನೋಡುವ ವ್ಯವಧಾನ ನನ್ನಲ್ಲಿ ಇರಲಿಲ್ಲ. ಮರುದಿನದ ಕೆಲಸದ ಹೊರೆ ಆವಾಗ ನೆನಪಿಗೆ ಬಂತು ಈ ವರ್ಷದ ನನ್ನ ಯಕ್ಷಗಾನ ತಿರುಗಾಟ ಮುಗಿಸಿದೆ ಅಂತ ಭಾವಿಸಿದ್ದೇನೆ.