"ಇದು ವಿಮರ್ಶೆಯಲ್ಲದ ಚಿಂತನ"

Saturday, January 26, 2013

ತಾಳಮದ್ದಲೆಯ ತಾಳ

ತಾಳ-ಮದ್ದಲೆ ಎಂಬುದು ಅದು ಒಂದೇ ಶಬ್ದ ಬೇರೆ ಬೇರೆ ಶಬ್ದವಾಗಿ ಪರಿಗಣಿಸಬಾರದು. ಮೊದಲೆಲ್ಲ ದೇವಸ್ಥಾನದ ಪೂಜಾಸಮಯದಲ್ಲಿ ಇತರ ಮಂಗಳ ವಾದ್ಯ ಮೊಳಗಿಸುವಂತೆ ಜಾಗಟೆ ಮತ್ತು ಮದ್ದಲೆಯನ್ನು ಚೆಂಡೆ ನುಡಿಸುತ್ತಿದ್ದರು. ಪಂಚ ವಾದ್ಯದಲ್ಲಿ ಈ ಎಲ್ಲವೂ ಅಲ್ಲಲ್ಲಿ ಬಳಕೆಯಲ್ಲಿದೆ. ಹಾಗೆ ಅದರ ವಿವಿಧ ರೂಪಗಳು ಹಲವೆಡೆಯಲ್ಲಿ ಸಂಪ್ರದಾಯದಲ್ಲಿ ಇದ್ದಿರಬಹುದು. ಹಾಗೆ ಮದ್ದಲೆ ಜಾಗಟೆ ನುಡಿಸುವಾಗ ಸ್ತುತಿ ಪದಗಳು ಹೇಳುವ ಕ್ರಮ ಇದ್ದು.. ಆನಂತರ ಪುರಾಣದ ಕೆಲವು ಸಂದರ್ಭಗಳನ್ನು ಅದರಲ್ಲಿ ಪದ್ಯರೂಪದಲ್ಲಿ ಹಾಡುವ ಸಂಪ್ರದಾಯ ಬಳಕೆಗೆ ಬಂದಿರಬಹುದು. ಆನಂತರ ಈ ತಾಳಮದ್ದಲೆ ಜತೆಗೆ ಅರ್ಥಗಾರಿಕೆ ಸಂದರ್ಭಾನುಸಾರ ಬಳಕೆಗೆ ಬಂದು ಅದು ಪೂರ್ಣ ರೂಪದಲ್ಲಿ ಕಾರ್ಯಕ್ರಮವಾಗಿ ಮಾರ್ಪಟ್ಟಿತ್ತು. ಮೊದಲೆಲ್ಲ ತಾಳಮದ್ದಲೆಯಲ್ಲಿ ಚೆಂಡೆ ಬಳಕೆಯಲ್ಲಿ ಇರಲಿಲ್ಲ. ಆನಂತರ ಕಾರ್ಯಕ್ರಮ ಮಾಡುವವರ ಮರ್ಜಿಗೆ ತಕ್ಕಂತೆ ಚೆಂಡೆ ಬಳಕೆಗೆ ಬಂತು. ಅದೂ ಹಲವು ಸಲ ಇಬ್ಬರು ಚೆಂಡೆ ಬಾರಿಸುತ್ತಿದ್ದರು ಎಂದು ಕೇಳಿ ಬಲ್ಲೆ. ಕ್ರಮೇಣ ಅರ್ಥಗಾರಿಕೆಯಲ್ಲಿ ಹಿರಿಯ ವಿದ್ವಾಂಸರ ಆಗಮನದಿಂದ ತಾಳಮದ್ದಲೆ ಎಂಬುದು ಒಂದು ಪ್ರೌಢ ಸುಧಾರಿತ ಕಲೆಯಾಗಿ ರಂಜಿಸತೊಡಗಿತು. ಯಕ್ಷಗಾನ ಬಯಲಾಟಕ್ಕಿಂತಲೂ ಸುಲಭವಾಗಿ ಮತ್ತು ಸರಳವಾಗಿ ಮತ್ತು ಅಷ್ಟೇ ಪ್ರಭಾವಯುತವಾಗಿ ತಾಳ ಮದ್ದಲೆ ಜನಪ್ರಿಯವಾಯಿತು.


"ಆಶು ಕವಿತ್ವ" ಈ ಸ್ವಭಾವಲಕ್ಷಣವನ್ನು ಬಹಳಷ್ಟು ಹೊಂದಿಕೊಂಡ ಕಲೆ ಎಂದರೆ ಯಕ್ಷಗಾನ. ಯಕ್ಷಗಾನದಲ್ಲಿ ಎದ್ದು ಕಾಣುವ ವೈಶಿಷ್ಟ್ಯಗಳಲ್ಲಿ ಇದೂ ಒಂದು. ಇಲ್ಲಿ ಒಟ್ಟು ವಿಷಯದ ಮುಕ್ಕಾಲಕ್ಕಿಂತ ಹೆಚ್ಚು ಭಾಗ ತತ್ಸಮಯದಲ್ಲೇ ಸೃಷ್ಟಿಯಾಗುತ್ತದೆ.ವೇದಿಕೆಯಲ್ಲೇ ಸೃಷ್ಟಿಯಾಗುವ ಅದ್ಭುತ ನಾಟಕ ರೂಪವಿದು. ಅದಕ್ಕೆ ಚೌಕಟ್ಟು ಪರಂಪರೆಯಿಂದ ಬಂದಿರುತ್ತದೆ. ಇದಕ್ಕೆ ಚಿತ್ರಕಥೆಯನ್ನು ಸಿದ್ಧಪಡಿಸಿ ಅ ಮೂಲಕ ಪ್ರದರ್ಶಿಸುವ ಹಾಗಿಲ್ಲ. ಒಂದು ವೇಳೆ ಪ್ರದರ್ಶಿಸಿದರೂ ಅದು ಆ ಚಿತ್ರಕಥೆಯ ಜತೆಗಿನ ಸಂಬಂಧವನ್ನು ಉಳಿಸಿಕೊಳ್ಳದೆ ತನ್ನ ಸಹಜತೆಯನ್ನೇ ಬಿಂಬಿಸುತ್ತದೆ. ವಿಬ್ಭಿನ್ನ ದೃಷ್ಟಿಕೋನಗಳು ಒಂದು ತಂತುವಿನಲ್ಲಿ ಬೆಸೆದಿರುತ್ತವೆ. ದೊಡ್ಡ ರಥವನ್ನು ಒಂದು ಬಳ್ಳಿಯ ಮೂಲಕ ಎಳೆವಂತೆ ಆ ತಂತುವೇ ಪ್ರಾಧಾನವಾಗಿ ಇಲ್ಲಿ ವಿಭಿನ್ನ ಮನೋಭಾವಗಳು ಏಕ ಭಾವವನ್ನು ಪ್ರದರ್ಶಿಸುತ್ತವೆ. ಸೂತ್ರದಿಂದ ಪ್ರತಿಯೊಂದು ಆಧರಿಸಿ ನಿಯಂತ್ರಿತವಾಗಿದ್ದರೂ , ಪ್ರತಿಯೊಂದೂ ಸ್ವತಂತ್ರವಾಗಿ ವರ್ತಿಸುತ್ತದೆ. ಆದಕಾರಣ ಸಹಜವೆಂಬಂತೆ ಇಲ್ಲಿ ಸ್ಪರ್ಧಾತ್ಮಕವಾದ ಪ್ರವೃತ್ತಿಯೂ ಧಾರಾಳವಾಗಿ ಕಂಡುಬರುತ್ತದೆ. ಹಲವು ಸಲ ಇದೇ ಇದರ ಆಕರ್ಷಣೆಯೋ ಎಂದು ಯೋಚಿಸುವ ಹಾಗಾಗುತ್ತದೆ.

ಯಕ್ಷಗಾನ ಬಯಲಾಟಗಳಲ್ಲಿ ಆದಂತೆ ತಾಳಮದ್ದಲೆಯಲ್ಲೂ ಹಲವಾರು ಬದಲಾವಣೆಗಳು ಪ್ರಯೋಗಗಳು ಬಳಕೆಗೆ ಬಂದಿವೆ. ಮೊದಲೆಲ್ಲ ರಾತ್ರಿಯ ಪೂರ್ಣಾವಧಿಯ ತಾಳಮದ್ದಲೆ ಸಂಘಟಿಸಲ್ಪಡುತ್ತಿದ್ದರೆ ಈಗ ಬಹಳಷ್ಟು ಕಡಿಮೆಯಾಗಿದೆ. ಗಾನ - ಸಂವಾದ ರಾತ್ರಿಯಿಂದ ಬೆಳಗಿನ ತನಕ ಕುಳಿತು ಕೇಳುವಷ್ಟು ತಾಳ್ಮೆಯ ಮನೋಭಾವ ಕಡಿಮೆಯಾಗುತ್ತಿರುವುದೇ ಇದಕ್ಕೆ ಕಾರಣವಾಗಿರಬಹುದು. ಅಂದಿನ ಕಾಲದಲ್ಲಿ ಮನೆಯಲ್ಲಿ ಅದೂ ಖಾಸಗಿಯಾಗಿ ರಾತ್ರಿ ಇಡೀ ತಾಳಮದ್ದಲೆ ಆಗುತ್ತಿದ್ದದ್ದು, ಅದನ್ನು ಶುಭ ಸಮಾರಂಭದ ಜತೆಗೆ ಮನೆ ಮಂದಿ ಕುಳಿತು ಆಲಿಸುತ್ತಿದ್ದ ತಾಳಮದ್ದಲೆ ಇಂದು ಅಭಿರುಚಿಗೆ ತಕ್ಕಂತೆ ಬದಲಾಗಿದೆ ಎನ್ನಬಹುದು. ಕೇವಲ ಹತ್ತಾರು ಜನವಿದ್ದು ಪೆಟ್ರೋ ಮೇಕ್ಸ್ ಬೆಳಕಿನಲ್ಲಿ ಬೆಳಗಿನವರೆಗೂ ನಡೆದ ತಾಳಮದ್ದಲೆ ಕಂಡ ನೆನಪಿದೆ.

ಆದರೂ ಯಕ್ಷಗಾನದಲ್ಲಿ ಆದಷ್ಟು ಅವಿಷ್ಕಾರಗಳು ನವ್ಯ ನಾಗರೀಕತೆಯ ಪ್ರಭಾವ ತಾಳಮದ್ದಲೆಯಲ್ಲಿ ಅಗಲಿಲ್ಲ. ಯಕ್ಷಗಾನದ ಶ್ರಿಂಗಾರ ದೃಶ್ಯಗಳು ಸಿನಿಮಾದ ಯುಗಳ ಗೀತೆಯ ದೃಶ್ಯದಂತೆ ಪ್ರದರ್ಶಿತವಾಗುತ್ತಿದೆ. ಗಂಡು ಹೆಣ್ಣು ವೇಷಗಳು ಸಿನಿಮಾ ಭಿತ್ತಿಪತ್ರದ ಭಂಗಿಯನ್ನು ತೋರಿಸುವಂತಹ ಅವಿಷ್ಕಾರಗಳಾಗಿವೆ. ಇದು ಸರಿಯೋ ತಪ್ಪೋ ಅದು ಅಭಿರುಚಿಗೆ ಬಿಟ್ಟ ವಿಚಾರ. ಯಕ್ಷಗಾನದಲ್ಲಿ ಅನಿವಾರ್ಯ ಸನ್ನಿವೇಶದಲ್ಲಿ ಮಾತ್ರವೇ ಅಂಗಾಂಗ ಸ್ಪರ್ಷ ಅಂತ ಹೇಳುತ್ತಿದ್ದರು.. ಅಂದರೆ ಇಲ್ಲಿ ಬಹಳಷ್ಟು ಸಂಕೇತಮಾತ್ರ. ಯುದ್ದ ಸನ್ನಿವೇಶಗಳು ಸಿನಿಮಾ ಶೈಲಿಯ ಪ್ರಭಾವಕ್ಕೆ ಒಳಗಾಗಿ ಯಕ್ಷಗಾನದ ಸಾಂಕೇತಿಕವು ಮಾಯವಾಗಿ ನೈಜತೆಯತ್ತ ಹೊರಳಿ ಕಲಾವಿದರೂ ಪರಸ್ಪರ ಹೊಡೆದಾಡುವ ಪರಿಸ್ಥಿತಿ ಬಂದರೂ ಅಚ್ಚರಿಪಡಬೇಕಿಲ್ಲ. ತಾಳಮದ್ದಲೆಯಲ್ಲೂ ಸಂವಾದ ಚರ್ಚೆ ವಿವಾದವಾಗಿ ಜಗಳವಾಗುವುದು ಇಲ್ಲದಿಲ್ಲ. ಇದಕ್ಕೆ ಇಂದಿನ ಅಭಿರುಚಿಯೇ ಸ್ವಲ್ಪ ಮಟ್ಟಿಗೆ ಕಾರಣವಾಗುತ್ತದೆ. ಆದರೆ ಇದು ತಾಳಮದ್ದಲೆಯಲ್ಲಿ ಹೊಸತು ಅವಿಷ್ಕಾರ ಎಂದು ಹೇಳುವ ಹಾಗಿಲ್ಲ. ವೈಯಕ್ತಿಕ ಪ್ರತಿಷ್ಠೆ ಹಿತಾಸಕ್ತಿಗಳು ಕಲೆಯಿಂದ ಅತೀತವಾದಾಗ ದ್ವೇಷ ವೈಷಮ್ಯ ವಿವಾದಗಳಿಗೆ ಕಾರಣವಾಗಿ ಹಲವು ಸಲ ಪ್ರಭಾವವನ್ನು ಬೀರುತ್ತವೆ.

ತಾಳಮದ್ದಲೆಯ ಕಲಾವಿದರನ್ನು ಸೇರಿಸಿ ಪ್ರಸಂಗ ನಿರ್ಣಯಿಸುವಾಗಲೇ ನಮ್ಮ ಅಭಿರುಚಿಯ ಹೊಲಬು ಅರಿವಿಗೆ ಬರುತ್ತದೆ. ಅರ್ಥಧಾರಿಗಳು ಸಂವಾದ ಬದಲಿಸಿ ಚರ್ಚೆ ಮಾಡಿ ಕಚ್ಚಿ ಕೊಳ್ಳದಿದ್ದರೆ ತಾಳಮದ್ದಲೆ ರೈಸುವುದಿಲ್ಲ ಎಂಬ ಮನೋಭಾವ ಇದೆ. ಆಗ ಕೃಷ್ಣ ಸಂಧಾನಕ್ಕಿಂತ ಕೃಷ್ಣಾರ್ಜುನ ಕಾಳಗವೇ ಅಪ್ಯಾಯಮಾನವಾಗುತ್ತದೆ. ಇಲ್ಲಿ ಪ್ರಸಂಗವನ್ನು ಹೇಳುವ ಹಾಗಿಲ್ಲ. ಆದರೆ ಅದನ್ನು ಬಳಸುವ ಉದ್ದೇಶ ಮಾತ್ರ ಪ್ರಶ್ನಾರ್ಥಕವಾಗುತ್ತದೆ. ವೈಚಾರಿಕ ವಿಚಾರಗಳಿಗಿಂತ ಸಂಘರ್ಷದ ಮನರಂಜನೆಯೇ ಉದ್ದೇಶವಾಗಿಬಿಡುತ್ತದೆ. ಸಂಘರ್ಷ ಮನರಂಜನೆ ತಾಳಮದ್ದಲೆಯ ಪೂರಕ ವಿಚಾರವಾಗಿ ಪರಿಗಣಿತವಾಗಬೇಕು. ಈಗೀಗ ರಂಜನೆಯೊಂದನ್ನೇ ಗಮನ ಹರಿಸಿ ವ್ಯವಸ್ಥೆ ಮಾಡಲಾಗುತ್ತದೆ. ಇದು ತಾಳ ಮದ್ದಲೆಯಲ್ಲಾದ ಅವಿಷ್ಕಾರ.

ಸುಧನ್ವ ಮೋಕ್ಷ, ಭಕ್ತ ಸುಧನ್ವ ಹೀಗೆ ಹಲವು ವಿಧದಲ್ಲಿ ಈ ಪ್ರಸಂಗ ತಾಳಮದ್ದಲೆಯಲ್ಲಿ ಕಾಣುವುದುಂಟು. ತಾಳಮದ್ದಲೆಗೂ ಬಯಲಾಟಕ್ಕೂ ಹೊಂದಿಬರುವ ಪ್ರಸಂಗಗಳಲ್ಲಿ ಒಂದು ಸುಧನ್ವ ಮೋಕ್ಷ. ಹಂಸದ್ವಜ ಮಹಾರಾಜ ತನ್ನ ಚಂಪಕಾವತಿಗೆ ಬಂದ ಪಾಂಡವರ ಅಶ್ವಮೇಧದ ಕುದುರೆಯನ್ನು ಕಟ್ಟುವಲ್ಲಿಂದ ಪ್ರಸಂಗ ತೊಡಗುತ್ತದೆ. ಹರಿದರ್ಶನದ ಉದ್ದೇಶದಿಂದ ಕಟ್ಟಲ್ಪಡುವ ಕುದುರೆಯ ರಕ್ಷಣೆಗಾಗಿ ಬರುವ ಪಾರ್ಥನೊಂದಿಗಿನ ಸಮರಕ್ಕೆ ಸಮಸ್ತರಿಗೂ ಕಟ್ಟಪ್ಪಣೆ ಮಾಡುತ್ತಾನೆ.ಯಾರು ಹಿಂದುಳಿಯುತ್ತಾರೋ ಅವರನ್ನು ಕಾದೆಣ್ಣೆಯ ಕೊಪ್ಪರಿಗೆಯೊಳಗೆ ಹಾಕಲಾಗುವ ಶಿಕ್ಷೆ..ಹೀಗೆ ತೊಡಗುವ ಪ್ರಸಂಗದಲ್ಲಿ ಮುಖ್ಯ ಸೇನಾನಾಯಕನಾಗಿ ಮಗನಾದ ಸುಧನ್ವನ್ನು ನೇಮಿಸುತ್ತಾನೆ. ಸೇನಾಪತಿಯಾಗಿ ರಣಾಂಗಣಕ್ಕೆ ಹೋಗುವ ಮೊದಲು ತಾಯಿಯ ಆಶಿರ್ವಾದ ಪಡೆದು ಮಡದಿ ಪ್ರಭಾವತಿಯನ್ನು ಕಂಡು ಬರುವಾಗ ತಡವಾಗಿ ಬಿಡುತ್ತದೆ. ಮಗ ಯುದ್ದಕ್ಕೆ ಹೋಗುವಲ್ಲಿ ಹಿಂದುಳಿದ, ರಾಜಾಜ್ಞೆಯ ಉಲ್ಲಂಘನೆಯಾಯಿತು. ಹಾಗಾಗಿ ಶಾಸನದಂತೆ ಸುಧನ್ವನನ್ನು ಕಾದೆಣ್ಣೆಯ ಕೊಪ್ಪರಿಗೆಗೆ ಎಸೆಯಲಾಗುವುದು. ಅಲ್ಲಿ ಸುಧನ್ವನ ಭಕ್ತಿ ಪರೀಕ್ಷೆನಡೆದುಬಿಡುತ್ತದೆ. ಅನಂತರ ಅರ್ಜುನನ ಪ್ರವೇಶ, ಮತ್ತೆ ಯುದ್ದ ಸನ್ನಿವೇಶ ಹೀಗೆ ಪ್ರಸಂಗ ಮುಂದುವರೆಯುತ್ತಾ ಭಕ್ತ ಸುಧನ್ವನ ಭಕ್ತಿಯ ಶಕ್ತಿಯ ದರ್ಶನವಾಗಿ ಹರಿದರ್ಶನವಾಗುತ್ತದೆ. ಆದರೆ ಇತ್ತೀಚೆಗೆ ಪ್ರಭಾವತಿಯ ಸಂಭಾಷಣೆ ನಂತರ ಯುದ್ದದ ಸನ್ನಿವೇಶ ಇಷ್ಟರಲ್ಲೇ ಪ್ರಸಂಗ ಮುಗಿದು ಬಿಡುತ್ತದೆ. ಬಹಳ ಮಹತ್ವದ ಸುಧನ್ವನ ಭಕ್ತಿ ಪರೀಕ್ಷೆಯ ಸನ್ನಿವೇಶವೇ ಮರೆಯಾಗಿ ಸುಧನ್ವಾರ್ಜುನ ಎಂಬಷ್ಟಕ್ಕೆ ಪ್ರಸಂಗ ಸೀಮಿತವಾಗುತ್ತದೆ. ಕೆಲವೊಮ್ಮೆ ಪ್ರಭಾವತಿಯೊಂದಿಗಿನ ಸಂಭಾಷಣೆ ರಂಜನೆಗಾಗಿ ಎಲ್ಲೆಯನ್ನು ಮೀರುತ್ತದೆ. ಸುಧನ್ವಾರ್ಜುನ ಯುದ್ದದಲ್ಲಿ ಇಬ್ಬರೂ ಕಚ್ಚಿಕೊಂಡು ತಾಳಮದ್ದಲೆ ರಂಜಿಸುತ್ತದೆ.

ಅದರಂತೆ ಕರ್ಮಬಂಧ ಪ್ರಸಂಗದಲ್ಲಿ , ಕುರುಕ್ಷೇತ್ರ ಯುದ್ದಕ್ಕೆ ಕೌರವರ ಸೇನಾಪತಿಯನ್ನಾಗಿ ಯಾರನ್ನು ಮಾಡುವುದು ದುರ್ಯೋಧನ ತನ್ನವರೊಂದಿಗೆ ಮಂತ್ರಾಲೋಚನೆ ಮಾಡಿ ರಾತ್ರೋರಾತ್ರಿ ಭೀಷ್ಮರ ಬಳಿಗೆ ಬರುತ್ತಾನೆ. ಬಂದ ಸುಯೋಧನನಿಗೆ ಭೀಷ್ಮ ಹಿತವಚನ ಹೇಳುತ್ತಾನೆ. ಹೆಸರಾಂತ ಅರ್ಥಧಾರಿಗಳಿಬ್ಬರು ವೇದಿಕೆಯಲ್ಲಿರುತ್ತಾ ಪ್ರೇಕ್ಷಕರೂ ಬಹಳಷ್ಟು ನಿರೀಕ್ಷೆಯಿಡುತ್ತಾರೆ.ಪ್ರಸಂಗ ನಡೆಯಲ್ಲಿ ಭೀಷ್ಮನ ಹಿತವಚನಕ್ಕೆ ಕೌರವ ಮೊಂಡುವಾದವನ್ನೇ ಮಂಡಿಸುತ್ತ ಸಾಗಬೇಕು. ಕೌರವನ ಪಾತ್ರಧಾರಿ ಅತ್ಯಂತ ಸಮರ್ಥವಾಗಿ ಕೌರವನ ಮೊಂಡುವಾದವನ್ನು ವಿಶಿಷ್ಟ ಬಗೆಯಲ್ಲಿ ಮಂಡಿಸುತ್ತಾರೆ. 

" ಆದಿನಾರಾಯಣ ದುಷ್ಟ ಶಿಕ್ಷಣಕ್ಕಾಗಿ ಶಿಷ್ಟ ರಕ್ಷಣೆಗಾಗಿ ಇರುವುದಾದರೆ ಪಾಂಡವರಿಗೆ ಹರಿಯ ರಕ್ಷಣೆ ಇರುವುದಾದರೆ, ದ್ಯೂತದಲ್ಲಿ ಪಾಂಡವರು ಗೆಲ್ಲುವಂತೆ ಯಾಕೆ ಮಾಡಲಿಲ್ಲ? ಅವನ ಬಗೆಯಲ್ಲಿ ಅನ್ಯಾಯಗಾರ ನಾನು ಅರಮನೆಯ ಸುಪ್ಪತ್ತಿಗೆಯಲ್ಲಿ ಸುಖವಾಗಿ ಬೆಳೆದರೆ ಪಾಂಡವರು ಪರಮಾತ್ಮನ ಪ್ರಿಯರು ಕಾಡಿನಲ್ಲಿ ಕಠಿಣ ಜೀವನ ನಡೆಸುವಂತೆ ಯಾಕೆ ಆಗುತ್ತದೆ. ಶಿಷ್ಟರಕ್ಷಣೆಯನ್ನು ಮಾಡದೆ ನಾರಾಯಣ ಯಾಕೆ ಹಿಂದುಳಿದ?"

ಈ ಮೊಂಡುವಾದಕ್ಕೆ ಬಹಳಷ್ಟು ತಾಳಮದ್ದಲೆಯಲ್ಲಿ ಭೀಷ್ಮ ಅರ್ಥಧಾರಿಗಳು ಹೊಸ ಹೊಸ ಬಗೆಯಲ್ಲಿ ಅದ್ಭುತವಾಗಿ ಕೌರವನ ವಾದವನ್ನು ಪ್ರತೀ ಪ್ರಶ್ನೆಗೂ ಉತ್ತರಿಸುತ್ತ ಜಾಣ್ಮೆಯಿಂದ ಖಂಡಿಸುತ್ತಾ ಸಾಗುತ್ತಾರೆ, ಇದಕ್ಕೆ ಅರ್ಥಧಾರಿ ಬಹಳಷ್ಟು ವಿಚಾರಗಳನ್ನು ಸ್ವತಹ ತಿಳಿದಿರಬೇಕು. ಒಂದು ರೀತಿಯ ಪಾರಮಾರ್ಥಿಕತೆಯ ವಿದ್ವತ್ತನ್ನು ತಿಳಿದು ಅದನ್ನು ಸಮರ್ಥವಾಗಿ ಮಂಡಿಸುವ ಜಾಣ್ಮೆಯೂ ಇರಬೇಕು. ಅದರೆ ಇಲ್ಲಿ ಯಾವುದೇ ಚರ್ಚೆಗೆ ಆಸ್ಪದವಿಲ್ಲದಂತೆ ಕೇವಲ ಧರ್ಮರಾಯನ ಧರ್ಮ ನೀಷ್ಠೂರತೆಯನ್ನು ಸತ್ಯಸಂಧತೆಯನ್ನೂ ಸುಂದರವಾಗಿ ವಿವಿಧ ಉಪಮೆ ಕಲ್ಪನೆಯನ್ನು ಉಪಯೋಗಿಸಿ ಅರ್ಥವನ್ನು ಮಂಡಿಸುತ್ತಾರೆ. ಕೊನೆಯ ವರೆಗೂ ಕೌರವ ಕೇಳಿದ ಪ್ರಶ್ನೆ ಹಾಗೆ ಉಳಿದುಬಿಡುತ್ತದೆ. ಪ್ರಸಂಗವೇನೋ ಪದಕ್ಕೆ ತಕ್ಕ ಅರ್ಥ ಎಂಬಂತೆ ಮುಂದೆ ಹೋಗುತ್ತದೆ. ಭೀಷ್ಮರ ಅರ್ಥಗಾರಿಗೆ ವಿದ್ವತ್ ಪೂರ್ಣವಾಗಿದ್ದರೂ ಸೂಕ್ಷ್ಮವಾಗಿ ಗಮನಿಸುವವನಿಗೆ ಎಲ್ಲೋ ಒಂದು ಕಡೆ ಪಲಾಯನವಾದದ ಛಾಯೆ ಕಂಡುಬರುತ್ತದೆ. ವಿದ್ವತ್ಪೂರ್ಣ ಅರ್ಥಗಾರಿಕೆಯೂ ಇಲ್ಲಿ ಚರ್ಚೆಯಿಲ್ಲದೆ ಸೋಲುತ್ತದೆ.

ಎಲ್ಲಿ ಚರ್ಚೆ ಬೇಡವೋ ಅಲ್ಲಿ ಚರ್ಚೆ ತುರ್ಯಾವಸ್ಥೆಗೆ ಮುಟ್ಟಿ ತನ್ನ ಹೊಲಬನ್ನೆ ಕಳೆದು ಕೊಳ್ಳುತ್ತದೆ.... ಎಲ್ಲಿ ಚರ್ಚೆ ಬೇಕೋ ಅಲ್ಲಿ ಸಮರ್ಪಕ ವಾದ ಮಂಡನೆಯಿಲ್ಲದೆ ಅರ್ಥ ಅರ್ಥಹೀನವಾದರೂ ಹೊರ ಆವರಣಕ್ಕೆ ಎರಡೂ ರಂಜನೆಯನ್ನು ಕೊಡುತ್ತದೆ. ಎಲ್ಲರೀತಿಯಲ್ಲೂ .ತಾಳಮದ್ದಲೆಯ ಕಲೆಯ ದೃಷ್ಟಿಯಿಂದಲೂ ವ್ಯಕ್ತಿರೂಪದಿಂದಲೂ ಇಲ್ಲಿ ಸೋಲು ಗೆಲುವು ಗೊಂದಲವನ್ನೇ ಉಂಟುಮಾಡುತ್ತದೆ, ಹಲವುಸಲ ಒಂದೆರಡು ಗೆರೆಯ ಪದಕ್ಕೆ ಒಂದು ಘಂಟೆಗಿಂತಲು ಮೀರಿ ಚರ್ಚೆ ಬೆಳೆಯುತ್ತದೆ. ಯಾವ ಪದಕ್ಕೆ ಈ ಸಂವಾದ ಬೆಳೆದಿದೆ ಎಂಬುದನ್ನೂ ಪ್ರೇಕ್ಷಕ ಮರೆತು ಬಿಟ್ಟಿರುತ್ತಾನೆ..! ಮಾತ್ರವಲ್ಲ ಹಲವು ಸಲ ಚರ್ಚೆಯ ತಿರುಳನ್ನು ಹುಡುಕುವುದರಲ್ಲೀ ಸೋತರೂ ಸೋಲು ಗೆಲುವಿನ ಲೆಕ್ಕಾಚಾರದ ರಂಜನೆಯಲ್ಲಿ ಎಲ್ಲವನ್ನೂ ಮರೆತು ಬಿಡುತ್ತಾನೆ..!! ಕಲೆಯಲ್ಲಿ ವ್ಯಕ್ತಿಯ ಗೆಲುವು ಹಿನ್ನೆಲೆಯಾಗಿ, ಕಲೆಯ ಗೆಲುವಿಗೆ ಪೂರಕವಾಗಿರಬೇಕು. ಆದು ಅರೋಗ್ಯವಂತ ವಾತಾವರಣವನ್ನು ಕಲ್ಪಿಸುತ್ತದೆ. ಕಲಾವಿದ ವ್ಯಕ್ತಿಯಾಗಿ ಗೆಲುವನ್ನು ಬಯಸುವ ಪ್ರಮೇಯ ಬರಬಾರದು. ಪಾತ್ರ ಗೆದ್ದರೆ ಕಲೆ ಗೆಲ್ಲುತ್ತದೆ. ಇವೆರಡು ಗೆದ್ದರೆ ಮಾತ್ರ ಕಲಾವಿದ ಗೆಲ್ಲುತ್ತಾನೆ.








Monday, January 7, 2013

ವಾಮನ ಚರಿತ್ರೆಯ ತ್ರಿವಿಕ್ರಮರು !


ತನ್ನದು ಎಂದು ಏನಿದೆಯೋ ಅದೆಲ್ಲವೂ ನಿನ್ನದೇ, ಎರಡು ಪದಗಳಿಂದ ವಾಮನ ಭೂಮಿ ಆಕಾಶವನ್ನು ಅಳೆದಾಗ ಇನ್ನೋಂದು ಪದ ಎಲ್ಲಿ ಬಲಿಯಲಿ ಎಂದು ಕೇಳಿದಾಗ ತನ್ನದು ಎಂದು ಲೌಕಿಕ ಜಗತ್ತಿನಲ್ಲಿರುವುದು ಇದೊಂದೇ ಎಂದು ತನ್ನ ಶಿರವನ್ನು ತೋರಿಸಿಬಿಡುವ ವೈರೋಚನಿಯ ಬಲಿದಾನದ ಕಥೆ ತಿಳಿಯದವರಾರು ಇರಲಾರರು. ಪುರಾಣದ ಈ ಕಥೆ ಯಕ್ಷಗಾನದಲ್ಲಿ ಈ ವಾಮನ ಚರಿತ್ರೆ ಪ್ರಸಂಗ ಪಾರಮಾರ್ಥಿಕತೆಗೆ ಭಗವಂತನ ಸಾಕ್ಷಾತ್ಕಾರಕ್ಕೆ ಪೂರಕವಾಗಿ ಚಿತ್ರಿಸಲ್ಪಡುತ್ತದೆ. ಅತ್ಯಂತ ವಿಶಿಷ್ಟ ಸರಳವಾದ ಪ್ರಸಂಗವಿದು. ಇದರಲ್ಲಿ ಮೇಲ್ನೋಟಕ್ಕೆ ಬಯಲಾಟ ರಂಜನೆಯಾಗಲಿ ದೃಶ್ಯವೈಭವಾಗಲಿ ಕಾಣುವುದಕ್ಕೆ ಸಾಧ್ಯವಿಲ್ಲ. ಆದರ ಅಂತರಂಗಕ್ಕೆ ಹತ್ತಿರವಾಗುವ ಹೃದ್ಯ ಸಂಭಾಷಣೆಗಳು ಹೆಣೆದಾಗ ಕಣ್ಣಿಗೆ ಕಾಣದ ದೃಶ್ಯವೈಭವ ಮನಸ್ಸಿಗೆ ಗೋಚರವಾಗುತ್ತದೆ. ತಾಳ ಮದ್ದಲೆಯೇ ಹಾಗೆ. ಅದು ಕಾಣುವ ಅಗತ್ಯವಿಲ್ಲ. ಕೇಳುವುದು ಮಾತ್ರ. ಊರ ದೇವಸ್ಥಾನ ಕಟ್ಟೆಯಲ್ಲಿ ತಾಳಮದ್ದೆಲೆಯಾದರೆ ಮನೆಯ ಜಗುಲಿಯಲ್ಲಿ ಕುಳಿತು ಆ ಯಕ್ಷಗಾನ ತಾಳ ಮದ್ದಲೆಯ ದೃಶ್ಯವನ್ನು ಕೇಳಿ ಕಲ್ಪನೆಯ ಚಿತ್ರಣವನ್ನು ಹೆಣೆಯಬಹುದು. ಪರಿಶುದ್ದವಾದ ಯಕ್ಷಗಾನದಲ್ಲಿ ದೃಶ್ಯಗಳು ಸಾಂಕೇತಿಕವಾಗಿದ್ದು ತಾಳ ಮದ್ದಲೆಯಲ್ಲಿ ಅದಿನ್ನೂ ಸಂಕೀರ್ಣವಾಗಿ ಸಾಂಕೇತಿಕವಾಗಿರುತ್ತದೆ. ಹಿಮ್ಮೇಳದ ಪದಕ್ಕೆ ಸ್ಫೂರ್ತಿಗೊಂಡು ಬಲಿಪಾತ್ರ ಯಾಗ ಶಾಲೆಯನ್ನು ವಾಚಿಕತ್ವದಿಂದಲೇ ಚಿತ್ರಿಸುತ್ತದೆ.

ಪೌರಾಣಿಕದಲ್ಲಿನ ಮೂರು ಪಾತ್ರಗಳು ಹಿರಣ್ಯ ಕಶಿಪು, ಪ್ರಹ್ಲಾದ ಮತ್ತು ವೈರೋಚನಿ. ಈ ಮೂರು ಪಾತ್ರಗಳು ತಮ್ಮದೇ ರೀತಿಯಲ್ಲಿ ಭಗವಂತನ ಸಾನ್ನಿಧ್ಯವನ್ನು ಸೇರುವ ವಿಭಿನ್ನ ವ್ಯಕ್ತಿತ್ವದ ಪಾತ್ರಗಳು. ಅವುಗಳು ಕ್ರಮಿಸುವ ದಾರಿಗಳು ಬೇರೆ ಗಮ್ಯ ಮಾತ್ರ ಒಂದೇ. ಕ್ಷೀರ ಸಾಗರ ಶಯನ ಮಹಾವಿಷ್ಣುವಿನ ಸಾಕ್ಷಾತ್ಕಾರವನ್ನು ಪಡೆಯುವ ಕಥೆಗಳು ವಿಭಿನ್ನ. ವೈರಭಾವವನ್ನು ಹೊಂದಿರುತ್ತಾ, ವಿರೋಧ ಭಕ್ತಿಯಿಂದಲೇ ಹಿರಣ್ಯ ಕಶಿಪು ನರಸಿಂಹನ ದ್ವಾರ ಭಗವಂತನಿಗೆ ತನ್ನನ್ನು ಅರ್ಪಿಸಿದ ಮೇಲೆ, ಅವನ ಮಗ ಪ್ರಹ್ಲಾದ ಹರಿಯೊಬ್ಬನೇ ಬೇರೆ ಇಲ್ಲ ಎಂಬ ಭಕ್ತಿ ಭಾವದಿಂದ ತನ್ನ ಗುರಿಯನ್ನು ಕಂಡುಕೊಂಡರೆ ಇವರಿಬ್ಬರ ವ್ಯಕ್ತಿತ್ವ ನಡೆದ ದಾರಿ ತೀರ ವಿರೋಧವಾದರೂ ಒಂದು ಅಸುರೀ ಶಕ್ತಿಯನ್ನು ವೈಭವೀಕರಿಸಿದರೆ ಇನ್ನೊಂದು ಪರಮ ವೈಷ್ಣವ ಶಕ್ತಿಯನ್ನು ಅನುಸರಿಸುತ್ತದೆ. ಆದರೆ ಇದೆರಡನ್ನು ತನ್ನಲ್ಲಿ ರೂಢಿಸಿಕೊಂಡ ವೈರೋಚನಿಯ ಮೋಕ್ಷ ಮಾತ್ರ ಬಹಳ ಸಮಸ್ಯೆಯನ್ನು ಬಿಂಬಿಸುತ್ತದೆ. ಅಸುರನಾಗಿ ಮೂರು ಲೋಕವನ್ನು ಜಯಿಸಿ ಕೊನೆಗೆ ಇಂದ್ರಪದಕ್ಕಾಗಿ ಶತಮನ್ಯುವನ್ನು ಕೈಗೊಳ್ಳುವ ಈತ ಪರಮ ಧಾರ್ಮಿಕ. ಹಾಗಾಗಿ ಇವನ ನಿಗ್ರಹ ಸಮಸ್ಯೆಯಾಗುತ್ತದೆ. ವೈರೋಚನಿ ಅರ್ಥಾತ್ ಬಲಿಯ ಮೋಕ್ಷದ ವಿಭಿನ್ನ ಕಥಾನಕವೇ ಈ ವೈರೋಚನಿಯ ವೃತ್ತಾಂತವೇ ವಾಮನ ಚರಿತ್ರೆ.

ಭಾಗವತ ಶಿವಶಂಕರರ ಶ್ರುತಿಗೆ ಹೊಂದಿಕೊಂಡು ದೇರಾಜೆ ಸುಧನ್ವನ ಕಶ್ಯಪ ಪಾತ್ರ ಕಥಾರಂಭವನ್ನು ಸೂಕ್ತವಾಗಿ ಮಾಡುತ್ತದೆ. ತಪಸ್ಸಿಗೆ ಒಲಿದ ಮಹಾ ವಿಷ್ಣು ಅದಾಗಾಲೇ ಉಪೇಂದ್ರಾನಾಗಿ ವಾಮನ ರೂಪಿನಿಂದ ಅವತರಿಸಿಯಾಗಿರುತ್ತದೆ. . ವಾಮನನಾಗಿ ವಿದ್ವಾನ್ ಉಮಾಕಾಂತ್ ಭಟ್ ಆಸೀನರಾಗುತ್ತಾರೆ. ಆರಂಭಿಕ ಸನ್ನಿವೇಶ ಸೂಕ್ತವಾಗಿ ಅನಾವರಣ ಗೊಳ್ಳುತ್ತದೆ

ಕಶ್ಯಪ ಬ್ರಹ್ಮ ಮತ್ತು ಅದಿತಿ ದೇವಿಯ ಗರ್ಭದಲ್ಲಿ ಉಪೇಂದ್ರನಾಮಕ .. ಅಂದರೆ ಉಪ - ಇಂದ್ರನಾಗಿ ಅವತರಿಸುವ ಮಹಾ ವಿಷ್ಣುವಿನಿಂದ ಬಲಿಮೋಕ್ಷ ಪ್ರಸಂಗ ಆರಂಭಗೊಳ್ಳುತ್ತದೆ. ಇಂದ್ರ ಪದದ ಕೊನೆಯ ಚರಣವೆಂಬಂತೆ ನೂರನೇ ಯಾಗಕ್ಕೆ ವೈರೋಚನಿ ದೀಕ್ಷಾಬದ್ದನಾಗಿರುತ್ತಾನೆ. ಇಲ್ಲಿ ವೈರೋಚನಿಯಾಗಿ ಜೋಶಿಯವರು ಪಾತ್ರದ ಅಸ್ತಿವಾರವನ್ನು ಗಟ್ಟಿಯಾಗಿ ಕಟ್ಟುತ್ತಾರೆ.

ವೈರೋಚನಿಯ ಚಿಂತನೆಯನ್ನು ಒಂದೊಂದಾಗಿ ತೆರೆದಿಡುತ್ತಾ ಇಂದ್ರ ಪದವಿಗಾಗಿ ನೂರನೇ ಯಾಗ, ಆದರೂ ಒಂದು ಸಂದೇಹ ಇಂದ್ರ ಪದವಿಯೇ ಕೊನೆಯ ಗುರಿಯೇ? ಅದರ ನಂತರ ಏನು? ತನ್ನ ಹಿರಿಯರಾದ ಹಿರಣ್ಯ ಕಶಿಪು ಹಿರಣ್ಯಾಕ್ಷ ಹರಿಯನ್ನು ಕಂಡ ಬಗೆ. ಆ ಮೂಲಕ ಕೊನೆ ಎಲ್ಲಿ ಎಂದು ಕಂಡು ಕೊಂಡ ಬಗೆ, ಅಜ್ಜ ಪ್ರಹ್ಲಾದರಾಯರು ತನ್ನ ದೃಷ್ಟಿಯಲ್ಲಿ ಹರಿಯನ್ನು ಕಂಡುಕೊಂಡ ಬಗೆ, ಹೀಗೆ ವಿಭಿನ್ನ ಅಯಾಮಗಳನ್ನು ಗಮನಿಸಿ ತನ್ನ ದಾರಿಯನ್ನು ಕಂಡುಕೊಂಡ ಬಗೆಯನ್ನು ವೈರೋಚನಿಯಾಗಿ ವಿವರಿಸುತ್ತಾರೆ. ವೈರೋಚನಿ ಎಂದರೆ ಲೋಕದೊಡನೆ ರುಚಿ ಇಲ್ಲದವನು. ಜೋಶಿಯವರು ಇಲ್ಲಿ ತಮ್ಮ ಪಾತ್ರ ನಡೆಯುವ ಹಾದಿಯನ್ನು ಸೂಕ್ಷ್ಮವಾಗಿ ಸೂಚಿಸುತ್ತಾ ಆ ಹಾದಿಯ ಇಕ್ಕೆಲಗಳನ್ನು ತೋರಿಸುತ್ತ ಸಾಗುತ್ತಾರೆ. ತಾಳ ಮದ್ದಲೆಯ ಪಾತ್ರಗಳು ಕೇವಲ ವಾಚಕತ್ವದಿಂದಲೇ ಕೂಡಿರುತ್ತವೆ. ಅವುಗಳ ಒಳ ತುಡಿತಗಳು ಅರ್ಥವಾಗಬೇಕಾದರೆ ಕಥೆಯ ಬಗ್ಗೆ ಮೊದಲೇ ಸ್ವಲ್ಪ ಅರಿವಿರಬೇಕು ಅರ್ಥಧಾರಿಯ ಹೊಲಬನ್ನು ಆ ಸೂಕ್ಷವನ್ನು ಗಮನಿಸುತ್ತ ಹಿಂಬಾಲಿಸಬೇಕು. ಇಲ್ಲಿ ಪಾತ್ರ ಸಾಗುವ ಹೊಲಬನ್ನು ಸುಲಭವಾಗಿ ಮತ್ತು ಅಷ್ಟೇ ಸೂಕ್ಷ್ಮವಾಗಿ ಒಪ್ಪಿಸುತ್ತಾ ಸಾಗುವುದನ್ನು ಕಂಡು ಕೊಂಡರೆ ತಾಳ ಮದ್ದಲೆಯ ಅರ್ಥಗಾರಿಕೆಯ ಅಸ್ವಾದನೆ ಬಹಳ ಸುಂದರವಾಗಿರುತ್ತದೆ. ಅದರಲ್ಲಿ ತನ್ಮಯತೆಯನ್ನು ಕಾಣಬಹುದು. ದೇವತೆಗಳ ಮೇಲಿನ ವಿರೋಧದ ಜತೆಗೆ ಇಂದ್ರತ್ವದ ಮೋಹ. ಹಿರಿಯರಾದ ಹಿರಣ್ಯಾಕ್ಷಾದಿಗಳು ವಿರೋಧದಿಂದಲೇ ಸಾಗಿದರೆ, ಪ್ರಹ್ಲಾದರಾಯನ ಸಾಮ ಮಾರ್ಗ ಹೀಗೆ ವೈರೋಚನಿಯ ದಾರಿಯ ಇಕ್ಕೆಲಗಳ ದರ್ಶನ ಜೋಶಿಯವರ ಅರ್ಥಗಾರಿಕೆ ತೋರಿಸುತ್ತದೆ. ಇಂದ್ರ ಪದವಿಯ ನಂತರ ಏನು  ಎಂಬ ದ್ವಂದ್ವದಲ್ಲಿ ಇರುತ್ತಿದ್ದಂತೇ, ಇನ್ನೇನು ಯಾಗದ ಪೂರ್ಣಾಹುತಿ,   ಕೆಲವೇ ಕ್ಷಣಗಳಲ್ಲಿ ಆಗುವ ಇಂದ್ರ ಪದದ ಸಾಕ್ಷಾತ್ಕರಕ್ಕೆ ಅಸುರ ಸಮೂಹವೇ ಕಾತರದಿಂದ ಕಾಯುತ್ತಿದೆ. ಆಗ ಜೋಶಿಯವರ ಮಾತಿನಲ್ಲಿ ಕಮಂಡಲು ಧಾರಿ ಛತ್ರಪಾಣಿ ವಾಮನ ನಿಧಾನವಾಗಿ ಯಾಗಶಾಲೆಯ ದ್ವಾರದಲ್ಲಿ ಪ್ರತ್ಯಕ್ಷವಾಗುತ್ತಾನೆ.

ಬಲಿ ಭಾವುಕನಾಗಿ ಬಿಡುತ್ತಾನೆ. ನೂರನೇ ಯಾಗದ ಸಿದ್ಧಿ ಏನು? ಯಾಕಾಗಿ ನೂರನೇ ಯಾಗ? ಯಾಗದ ಪೂರ್ಣಾಹುತಿ ಆಗದೇ ಇದ್ದರೂ ಮಾಡುವ ಯಜ್ಞ ಪೂರ್ಣವಾದ ಅನುಭವ ಯಾಕೆ ಈ ಸಂತೃಪ್ತಿ? ಅರ್ಥಗಾರಿಕೆಯ ಎಸಳು ತೆರೆದುಕೊಂಡ ರೀತಿ,  ಯಜ್ಞದ ಪ್ರತಿರೂಪ ಯಜ್ಞನಾರಾಯಣ,  ಅವನ ಪ್ರತಿನಿಧಿ ಸೂರ್ಯನಾರಾಯಣ,  ನಡೆಯುವ ಯಜ್ಞ ಪೂರ್ಣವಾಯಿತು,  ಗುರಿತಲುಪಿತು,  ಎಂದು ತೊರಲು ಬಂದರೆ? ಉದಯಿಸಿಕೊಂಡ ಸೂರ್ಯ ಅದು ಹೊರಗೆ ಅಂದರೆ ಬಾಹ್ಯಪ್ರಪಂಚದಲ್ಲಿಯೋ ಇಲ್ಲ ತನ್ನ ಅಂತರಂಗದಲ್ಲೋ? ಸೂರ್ಯನ ಉದಯ ಒಳಗೋ? ಅಲ್ಲ,  ಹೊರಗೋ? ಎಂತಹ ಕಲ್ಪನೆ? ಬಲಿ ಸಾಗುವ ಮಾರ್ಗದ ಸೂಚನೆ ಸುಲಭವಾಗಿ ವ್ಯಕ್ತವಾಗುತ್ತದೆ.

ಒಂದು ಕರ್ಮ ಮಾಡಲೂ ಜ್ಞಾನ ಬೇಕು. ಜ್ಞಾನದಿಂದ ಕರ್ಮ ಸಾಗಿ ಅದು ಪರ್ಯಾಪ್ತವಾಗಿ ಉದಯವಾಗುವುದೇ ಮತ್ತೊಂದು ಜ್ಞಾನ. ಇಲ್ಲಿ ಆದ ಭಗವಂತನ ಅವತಾರವೇ ಜ್ಜಾನರೂಪಿಯೇ? ಸುಂದರವಾದ ಕಾವ್ಯಾರ್ಥ. ದ್ವಾರದಲ್ಲಿ ಉದಯಿಸಿದ ಕೋಟಿ ಪ್ರಕಾಶವನ್ನು ಕಂಡು ಬಲಿ ಅಚ್ಚರಿಗೊಳ್ಳುತ್ತಾನೆ. ಜ್ಞಾನದ ಉದಯವಾದದ್ದು ಒಳಗೂ ಅಲ್ಲ ಹೊರಗೂ ಅಲ್ಲ ಮಧ್ಯದಲ್ಲಿ ಅಂದರೆ ದ್ವಾರದಲ್ಲಿ . ವಾಮನನ್ನು ಕಂಡು ಬಲಿ ಭಾವುಕನಾಗಿ ಬಿಡುತ್ತಾನೆ. ಜ್ಞಾನ ಸಿದ್ದಿಯಾದಂತೆ ಭಾವನೆಯಲ್ಲಿ ತನ್ಮಯನಾಗಿರುವಾಗ ಬಂದ ವಾಮನ ಮುಂದಿನ ಸಂಕೇತವನ್ನು ರವಾನಿಸುವ ಬಗೆಯೇ ಅತ್ಯಂತ ವಿಶೇಷ. ಬಲಿಯ ಉಪಚಾರವನ್ನೇ ಹೊಗಳುತ್ತಾ ಉಮಾಕಾಂತರ ವಾಮನ ಕೇಳುವ ಮಾತು " ಬಾಗಿಲಲ್ಲೇ ಇದ್ದೇನೆ. ಈ ಪಾದ ಒಳಗಿಡಲೇ?" ಬಹಳ ಸೂಕ್ಷ್ಮವಾದ ಸಂಕೇತದ ರವಾನೆಯಿದು. ಒಳಗೆ ಅಂದರೆ ಎಲ್ಲಿ? ಮುಂದಿನ ಹಂತದಲ್ಲಿ ಇದೇ ಪಾದ ಅತ್ಯಂತ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಬಲಿಯ ಇಂದ್ರತ್ವದ ಆಚೆಗಿನದ್ದು ಎನು ಎಂಬುದನ್ನು ತೋರಿಸಿಕೊಡುತ್ತದೆ. ತಾಳ ಮದ್ದಲೆ ಅರ್ಥಗಾರಿಕೆಯ ಸೊಗಸು ಅಡಗಿರುವುದೇ ಇಂತಹ ಸೂಚ್ಯತೆಗಳಿಂದ. ಇಂತಹ ಸೂಕ್ಷಗಳು ಕಲಾವಿದನಿಂದ ಕಲಾವಿದನಿಗೆ ವೆತ್ಯಸ್ತವಾಗಿರುತ್ತದೆ. ಆ ಮನೋಭಾವಕ್ಕೆ ಹೊಂದಿಕೊಂಡು ಹಿಂಬಾಲಿಸುವ ಅರಿವಿದ್ದರೆ ತಾಳ ಮದ್ದಲೆಯ ಉತ್ಕೃಷ್ಟತೆ ಅರಿವಾಗುತ್ತದೆ. ಇವೆಲ್ಲ ಯಾವುದೇ ಪೂರ್ವ ತಯಾರಿಯಾಗಲಿ ಚಿತ್ರಕಥೆಯಾಗಲಿ ಇಲ್ಲದೆ ರಂಗದ ಮೇಲೆ ಅನಾವರಣಗೊಳ್ಳುತ್ತದೆ. ಹಾಗಾಗಿ ತಾಳ ಮದ್ದಲೆಯ ಅರ್ಥಗಾರಿಕೆಯನ್ನು ಸಂಗ್ರಹಿಸಿದರೆ ಯಾವುದೇ ಪ್ರಸಿದ್ಧ ಕಾವ್ಯಕ್ಕೆ ಸಮಾನಾಗಿ ಇದನ್ನು ಪರಿಗಣಿಸಬಹುದು. ವಿಶೇಷವೆಂದರೆ ಇದು ಸಾಂದರ್ಭಿಕವಾಗಿ ಅಲ್ಲೇ ಸೃಷ್ಟಿಯಾಗಿ ಅಲ್ಲೇ ನೆನಪಿನ ಸಂಪುಟಕ್ಕೆ ಸೇರಿಬಿಡುತ್ತದೆ. ಮತ್ತೆ ಇದರ ಸ್ಮರಣೆ ಮಾತ್ರ ಸಾಧ್ಯ. ಯಾವುದೇ ಜ್ಞಾನ ಪೀಠ ಮನ್ನಣೆಯ ಕಾವ್ಯಕ್ಕಿಂತ ತಾಳ ಮದ್ದಲೆಯ ಅರ್ಥಗಾರಿಕೆಯ ತೂಕ ಅತ್ಯಂತ ಹೆಚ್ಚು ಅಂತ ಆಗ ಅನ್ನಿಸುವುದು.

ಜೋಶಿಯವರು, ಇಲ್ಲಿ ಹೊರಬರುವ ಪ್ರತಿಯೊಂದು ಶಬ್ದಕ್ಕೂ ವಾಕ್ಯಕ್ಕೂ ತನ್ನದೇ ದೃಷ್ಟಿಕೊನದಿಂದ ಅರ್ಥ ಅನ್ವರ್ಥಗಳನ್ನು ವಿವರಿಸುತ್ತಾ ಸಾಗುತ್ತಾರೆ. ಕೆಲವೊಮ್ಮೆ ಸಾಮಗರ ಅರ್ಥಗಾರಿಕೆಯ ಹೊಲಬು ಕಂಡಂತೆ ಭಾಸವಾದರೂ ಅವರ ಸ್ವಂತಿಕೆ ಇಲ್ಲಿ ಬೇರೆಯೇ ವ್ಯಕ್ತವಾಗುತ್ತದೆ. ಪ್ರತಿ ಹಂತದಲ್ಲೂ ವ್ಯಕ್ತವಾಗುವ ವಿಡಂಬನೆ ಕೆಲವೊಮ್ಮೆ ಮನಸ್ಸಿನ ಭಾವನೆಗೆ ಕಚಗುಳಿಯಿಟ್ಟಂತೆ ಭಾಸವಾಗುತ್ತದೆ.

ವಾಮನಾವತಾರಿಯ ಮಾತುಗಳು ಇನ್ನೊಂದು ರೀತಿಯಲ್ಲಿ ನಮ್ಮನ್ನು ಕಲ್ಪನೆಯ ಲೋಕಕ್ಕೆ ಸೆಳೆಯುತ್ತದೆ. ಬಲಿಯ ಹಿರಿಯರ ವೃತ್ತಾಂತಗಳನ್ನು ವಿಶಿಷ್ಟತೆಯನ್ನು ಹೊಗಳುತ್ತಾ.. ಲೋಕದಲ್ಲಿ ಸರ್ವವ್ಯಾಪಿಯಾಗಿ ಬೆಳೆದ ಹಿರಣ್ಯಾಕ್ಷ ಹಿರಣ್ಯಕಶಿಪು ಭಗವಂತನಾದ ಮಹಾವಿಷ್ಟುವಿಗೆ ಕೇವಲ ವೈಕುಂಠ ಮಾತ್ರ ಪರಮ ಪದವಾಗಿ ಮಾಡುತ್ತಾರೆ. ಹಾಗಾಗಿ ವಿಷ್ಣು ಆ ಪರಮ ಪದವನ್ನು ಮತ್ತೆ ಹುಡುಕುವುದು ಇವರ ಉದರದೊಳಗೆ ಅರ್ಥಾತ್.. ಮಹಾವಿಷ್ಟುವಿಗೆ ತಮ್ಮ ದೇಹದಲ್ಲಿ ಪರಮ ಪದವನ್ನು ತೋರಿಸಿದವರು ಇವರು. ಎಂತಹ ಕಲ್ಪನೆ. ಇದು ತಾಳ ಮದ್ದಲೆಯಲ್ಲಿ ಮಾತ್ರ ಸಾಧ್ಯ.

ಯಾಗ ಶಾಲೆಗೆ ಅಗಮಿಸಿದ ವಾಮನ ವಟುವಿನಲ್ಲಿ ಬಲಿ "ಏನು ಬೇಕು, ಮೂರುಲೋಕದ ಒಡೆಯ.. ನಾನು ಕೊಟ್ಟಮೇಲೆ ಇನ್ನೊಬ್ಬ ಕೊಡುವುದಕ್ಕಿರಬಾರದು..ಇನ್ನೊಬ್ಬನಲ್ಲಿ ಕೇಳುವುದಕ್ಕಿರಬಾರದು." ಸಾಮಾನ್ಯ ಪ್ರಶ್ನೆಗೆ ಸಾಮಾನ್ಯವಾಗಿ ಉತ್ತರಿಸುವ ವಾಮನ ಮೂರಡಿ ಭೂಮಿಯನ್ನು ಬಯಸುತ್ತಾನೆ. ಬಲಿ ಅವಾಕ್ಕಾಗಿ.. ಮಗುವಿನ ಮನಸ್ಸು ಬಲ್ಲವರಲ್ಲಿ ಕೇಳಿ ತಿಳಿದು ಆಮೇಲೆ ನನ್ನಲ್ಲಿ ಕೇಳು.. ಮೂರಡಿ ಭೂಮಿಯೇ? ಏಳು ದ್ವೀಪವನ್ನಾದರೂ ನೀಡಿಯೇನು. ಬೇಡಿಕೆಯನ್ನು ತಿದ್ದಿಕೊಳ್ಳುವಂತೆ ಸಲಹೆ ನೀಡುವಾಗ.. ವಾಮನ ಹೇಳುವ ಮಾತಿಗೆ ಪಳಗಿದ ಅರ್ಥಧಾರಿಗಳು ಅಧ್ಯಾತ್ಮದ ಬಣ್ಣವನ್ನು ಬಳಿಯುವ ರೀತಿ ಗಮನಿಸಬಹುದು.. " ಮೂರು ಲೋಕದ ಒಡೆಯ ನೀನು.. ಆದರೆ ನನಗೆ ಮೂರು ಅಡಿ ಮಾತ್ರ ಸಾಕು. ಎಲ್ಲಿ ಆಶೆಗಳಿರುತ್ತವೋ ಅಲ್ಲಿ ಜೀವನವಿರುವುದಿಲ್ಲ. ಬೇಕು ಬೇಕು ಎನ್ನುವುದಕ್ಕಿಂತ ಮೇಲಿನ ಬಡತನ ಬೇರೆ ಇಲ್ಲ. ತನ್ನಲ್ಲಿದ್ದದ್ದನ್ನು ಅನುಭವಿಸದೇ ಬೇರೆಯವರಲ್ಲಿ ಇದ್ದದ್ದು ಬಯಸುತ್ತಾನೋ ಅವನು ದೊಡ್ಡ ಬಡವ. ಬೇಕು ಎನ್ನುವವನೇ ದೊಡ್ದ ಬಡವ.ಸಾಕು ಎನ್ನುವವನೇ ನಿಜವಾದ ಶ್ರೀಮಂತ. ತೃಪ್ತಿಯಿಂದ ಬದುಕುವವರಿಗೆ ಮೂರು ಆಡಿ ಭೂಮಿಯೇ ಸಾಕು." ಈ ಮಾತಿನ ಗೂಡಾರ್ಥ ತೆರೆದುಕೊಳ್ಳುವುದು ನಂತರದ ಅಧ್ಯಾತ್ಮವಿಚಾರದಲ್ಲಿ. ಬಲಿ ಯೋಚಿಸುತ್ತಾನೆ. " ಮೂರು ಲೋಕದ ಭೋಗ್ಯ ವಸ್ತುಗಳಿದ್ದರೂ ಇನ್ನೇನೋ ಬಯಸಿ ತೃಪ್ತನಾಗದೇ ತಾನು ಯಾಗ ಮಾಡುತ್ತಿದ್ದೇನೆ" , ವಾಮನನಲ್ಲಿ ಪ್ರತಿವಾದವಿಲ್ಲ. ಬಂದವನು ಅಸಾಮಾನ್ಯನೆಂಬ ಸುಳಿವು ಅಂತಾರಾತ್ಮಕ್ಕೆ ಅರಿವಾಗುತ್ತ ಅದು ಬಲವಾಗುತ್ತದೆ.

ಅತಿಯಾದ ಮಹತ್ವಾಕಾಂಕ್ಷೆಯೊಂದಿಗೆ ವೈರೋಚನಿಯಿಂದ ನೂರು ಯಾಗಗಳನ್ನು ಮಾಡಿಸಿದ ಗುರು ಶುಕ್ರಾಚಾರ್ಯ ಬಲಿಯ ನಿರ್ಧಾರದಿಂದ ಅಘಾತಕ್ಕೆ ಒಳಗಾಗುತ್ತಾನೆ. ಬಂದ ವಾಮನ ವಟು ಕೇವಲ ಬ್ರಾಹ್ಮಣನಲ್ಲ. ವಾಮನ ಅವತಾರಿ ವಿಷ್ಣು ಎಂದು ಹಲವು ವಿಧದಲ್ಲಿ ತಿಳಿಯ ಹೇಳುತ್ತಾನೆ.ಯಾರಿಗೆ ನೀಡಿದರೂ ವಿಷ್ಣುವಿಗೆ ನೀಡದಿರು ಎಂದು ಪರಿ ಪರಿ ಹೇಳುತ್ತಾನೆ. ಆದರೆ ಅದಾಗಲೇ ಅಂತರಾತ್ಮದಲ್ಲಿ ದೃಢ ನಿರ್ಧಾರ ತಳೆದ ಬಲಿ ಗುರು ಸಲಹೆಯನ್ನು ಸ್ವೀಕರಿಸುವುದೇ ಇಲ್ಲ. ಯಾವುದಕ್ಕಾಗಿ ಯಜ್ಞದೀಕ್ಷೆಯನ್ನು ಕೈಗೊಂಡಿದ್ದೇವೋ. ಅದು ಕೈಗೂಡುವ ಮೊದಲೇ ಯಜ್ಞನಾರಾಯಣನ ಆಗಮನವಾಗಿದೆ. ನೀರಿಗಾಗಿ ಬಾವಿ ತೋಡುವವನಲ್ಲಿ, ಬಾವಿ ತೋಡ ಬೇಡ ನೀರು ಸಿಗುತ್ತದೆ ಎಂದು ಹೇಳಿದ ಹಾಗಾಯಿತು.ಇಂತಹ ಸರಳವಾಕ್ಯಗಳು ಬಹಳ ಅರ್ಥಗರ್ಭಿತವಾಗಿರುತ್ತದೆ. ಯಜ್ಞತ್ವದ ಫಲ ಪ್ರಾಪ್ತಿಯಾಗಿದೆ ನಾರಾಯಣನಿಗೆ ನೀಡದೆ ಇನ್ನಾರಿಗೆ ನೀಡಲಿ.

ಸಂವಾದ ಕುತುಹಲವನ್ನು ಬೆಳೆಸುತ್ತದೆ. ಶುಕ್ರಾಚಾರ್ಯ ಹೇಳುತ್ತಾನೆ ಅನುಗ್ರಹಕ್ಕಾಗಿ ಯಜ್ಞನಾರಾಯಣ ಆಗಮನವಾದರೆ ಅವನೇನು ಕೇಳಿದರೂ ಕೊಡಬಹುದು. ಆದರೆ ಈಗ ಬಂದ ಉದ್ದೇಶವೇ ಬೇರೆ."ಅರಿಯದಿತ್ತೆಯ ಭಾಷೆಯಾ ,,," ಎಂದು ವಿಲಪಿಸುತ್ತಾ ಬಂದವ ಹರಿಯೆಂದು ತಿಳಿಯದೇ ಭಾಷೆಯನ್ನಿತ್ತೆ. ಆತ ನಿನ್ನದೆಲ್ಲವನ್ನೂ ಕಸಿದುಕೊಳ್ಳುತ್ತಾನೆ. ಹೀಗೆ ಶುಕ್ರಾಚಾರ್ಯನ ಪ್ರಲಾಪ ಬಲಿಗೆ ಸಮ್ಮತವಾಗುವುದಿಲ್ಲ. ಪರಮ ವೈಷ್ಣವನಾದ ತನಗೆ ಭಕ್ತವತ್ಸಲನಾದ ಹರಿ ದ್ರೋಹ ಬಗೆದಾನೇ? ಒಂದು ವೇಳೆ ತನ್ನಿಂದ ದಾನವಾಗಿ ಪಡೆದಾಗ ದಾತೃ ತಾನಾಗುತ್ತೇನೆ.ಹರಿಯೆಂದು ಅರಿಯದಿದ್ದಾಗ ಕೊಟ್ಟಭಾಷೆಯನ್ನು ಹರಿಯೆಂದು ತಿಳಿದಾಗ ಕೊಡದಿರಲು ಸಾಧ್ಯವೇ? ಒಂದು ವೇಳೆ ಕೊಡದೇ ಇದ್ದರೆ ಬೇರೆ ರೀತಿಯಲ್ಲಿ ಹರಿ ಪಡೆಯಲಾರನೇ?

ಆದರೂ ಶುಕ್ರಾಚಾರ್ಯ ಮತ್ತೂ ಗೋಗರೆಯುತ್ತಾನೆ.. ಬಲಿಯ ಸ್ಥಾನ ಚ್ಯುತಿಯಾಗುತ್ತದೆ. ಬಲಿ ವಂಚಿಸಲ್ಪಡುತ್ತಾನೆ. ಇದು ಹರಿಯ ವಂಚನೆ. ಈ ವಂಚನೆಗಾಗಿ ಸುಳ್ಳನ್ನು ಹೇಳಬಹುದು. ಅದಕ್ಕಾಗಿ ಶುಕ್ರಾಚಾರ್ಯ ಕೊಡುವ ಸರಳ ಉದಾಹರಣೆ .. ಹುಟ್ಟಿದಾರಭ್ಯದಿಂದ ನಾವು ಈ ಪಂಚಭೂತಗಳಿಂದ ಆವೃತವಾದ ಭೂಮಿಯನ್ನೋ ಮತ್ತಿತರ ವಸ್ತುಗಳನ್ನೋ ನನ್ನದು ನನ್ನದು ಎಂದು ಜೀವನ ಪರ್ಯಂತ ಸುಳ್ಳು ಹೇಳಿ ಬದುಕುತ್ತೇವೆ, ಹಾಗೇನೆ, ಇಲ್ಲಿಯೂ ಸುಳ್ಳು ಹೇಳಬಹುದು. ಆದುದರಿಂದ ಸತ್ಯವನ್ನೇ ನುಡಿದರೆ ಈಗ ಎಲ್ಲವನ್ನು ಕಳೆದುಕೊಳ್ಳುತ್ತಿ. ಸ್ಥಾನ ಭ್ರಷ್ಟವಾಗುತ್ತದೆ. ನಾನಿದ್ದೇನೆ ನೀನು ಸುಳ್ಳು ಹೇಳು ಎಂದು ಪರಿ ಪರಿಯಾಗಿ ಹೇಳುತ್ತಾನೆ.

ಅದರೂ ಬಲಿ ಸುಳ್ಳು ಹೇಳಲು ನಿರಾಕರಿಸುತ್ತಾನೆ. ಅದಕ್ಕೆ ಕೊಡುವ ಉದಾಹರಣೆ-
" ಒಂದು ಏಣಿಯನ್ನು ಉಪಯೋಗಿಸಿ ಮಾಳಿಗೆಯನ್ನು ಹತ್ತಿದಮೇಲೆ.. ಏಣಿ ದೊಡ್ಡದೆಂದು ಅದಕ್ಕೆ ನಮಸ್ಕರಿಸಬಹುದು.. ಅದರೆ ಮಾಳಿಗೆ ಹತ್ತಿದ ಮೇಲೆ ಏಣಿಯನ್ನು ಬಿಡಬೇಕು? "

ತನ್ನ ಯವುದೇ ಮಾತಿಗೆ ಶಿಷ್ಯನಾದವ ಒಪ್ಪದಾಗ ಖತಿಗೊಂಡ ಗುರು "ಸ್ಥಾನ ಭೃಷ್ಠನಾಗು" ಎಂದು ಶಪಿಸುತ್ತಾನೆ. ಆದರೂ ಬಲಿ ವಿಚಲಿತನಾಗದೇ ಗುರು ಶಾಪವನ್ನು ವರವೆಂದು ತನ್ನ ವಾದದಿಂದ ನಿರೂಪಿಸುತ್ತಾನೆ. ಗುರು ಶಾಪಕ್ಕೆ ಬಲಿಯ ಪ್ರತಿಕ್ರಿಯೆ ಬಹಳ ಚಿಂತನೆಯನ್ನು ಉಂಟುಮಾಡುತ್ತದೆ. " ತಾಯಿಯಾದವಳು ಹೊಡೆದರೂ ಅದು ಪ್ರೀತಿಯಿಂದಲೇ. ಗುರುವೇ ನಿನ್ನಯ ಶಾಪ ಶಿರದೊಳಗೆ ಧರಿಸಿಹೆನು. ಸ್ಥಾನ ಭ್ರಷ್ಟ ನಾದರೆ ಶ್ರೀ ಹರಿಗೆ ಮತ್ತಷ್ಟೂ ಹತ್ತಿರವಾಗುತ್ತೇನೆ" ಅಧ್ಯಾತ್ಮ ಚಿಂತನೆಯನ್ನು ಬಹಳ ಸರಳವಾಗಿ ಮಾಡಿಸುವ ಈ ಅರ್ಥಗಾರಿಕೆಯನ್ನು ತಲ್ಲೀನವಾಗಿ ಆಲಿಸಿದಾಗಲೇ ಅದರ ರುಚಿ ಮತ್ತು ಅದರ ಮಹತ್ವದ ಅರಿವಾಗುವುದು. ಪತ್ನಿಯಾದ ತರುಣಿ ಸಂದ್ಯಾವಳಿಯೂ ತನ್ನ ಅಭಿಮತವನ್ನು ಮುಂದಿಡುತ್ತಾಳೆ "ಕತ್ತಲೆಯಿಂದ ಬೆಳಕಿನೆಡೆಗೆ ಹೋದಂತೆ ಇಲ್ಲಿ ಕಳೆದುಕೊಳ್ಳುವುದರಿಂದ ಅಲ್ಲಿ ಮುಕ್ತಿ ಸಿಗುತ್ತದೆ."

ವಾಮನ ಬೃಹದಾಕಾರವಾಗಿ ಬೆಳೆದು ಒಂದರಿಂದ ಸ್ವರ್ಗವನ್ನು,,, ಇನ್ನೋಂದರಿಂದ ಧರೆಯವನ್ನೆಲ್ಲ ಅಳೆದು ಕೇಳುತ್ತಾನೆ ಮೂರನೆಯದು ಎಲ್ಲಿ? ಆಗ ಬಲಿ ಹೇಳುವ ಮಾತು ... ಒಂದನೆಯದು ಅದು ನನ್ನದಲ್ಲ ಎರಡನೆಯದೂ ಅದೂ ನನ್ನದಲ್ಲ... . ಈಸ್ವರ್ಗಕ್ಕೂ ಈಧರೆಗೂ ಸಮಾನವಾದದ್ದು ನನ್ನಲ್ಲಿ ಇನ್ನೂ ಇದೆ ಎಂದೆ ಕೇಳಿತ್ತಿರುವೆ ಇನ್ನೋಂದು ಇದೆ, .ಅದು ನನ್ನ ದೇಹ.. ಬಲಿಯ ನೂರನೆಯ ಯಾಗದ ಪೂರ್ಣಾಹುತಿ ನಿಜ ಅರ್ಥದಲ್ಲಿ ಆಗುವುದು ಇದೇ ಅಲ್ಲವೇ? ಹೀಗೆ ವಾಕ್ಪ್ರಂಪಚದ ಸೌಂದರ್ಯ ವಿಶಾಲವಾಗಿ ತೆರೆದುಕೊಳ್ಳುವ ಪರಿಗೆ ಆನಂದವಾಗುತ್ತದೆ.

ಯಕ್ಷಗಾನ ತಾಳ ಮದ್ದಲೆಯ ವೈಭವ ಈ ವಾಕ್ಪ್ರಪಂಚದಲ್ಲಿ ಅಡಗಿದೆ. ಅದನ್ನು ಅನುಭವಿಸಬೇಕಾದರೆ ಅದರಲ್ಲಿ ತಲ್ಲೀನರಾಗಿ ಅನುಭವಿಸಿದಾಗಲೇ ಇದರ ಅರಿವಾಗುವುದು. ಬಹಳ ವಿಶಾಲವಾದ, ಅರ್ಥವತ್ತಾದ ಜ್ಞಾನ ಸಂಪತ್ತು ಇಲ್ಲಿ ಬಹಳ ಸರಳವಾಗಿ ಸುಲಭವಾಗಿ ಲಭ್ಯವಾಗುತ್ತದೆ. ಬೇರೆ ಯಾವಪ್ರಾಕಾರದಲ್ಲೂ ಸಿಗದ ಹೇರಳವಾದ ಮನರಂಜನೆ ಮತ್ತು ಜ್ಞಾನ ಸಂಪತ್ತು ಕುಳಿತು ಕೇಳುವುದರಿಂದ ಪ್ರತಿಯೊಂದು ಪಾತ್ರದ ಒಳಗೆ ಇಣುಕುವುದರಿಂದ ಇಲ್ಲಿ ಸಾಧ್ಯವಾಗುತ್ತದೆ. ಇದಕ್ಕೆ ದೊಡ್ಡ ಗ್ರಂಥವನ್ನು ಉರು ಹೊಡೆಯಬೇಕಾಗಿಲ್ಲ. ಹಗಲಿರುಳು ಅಭ್ಯಾಸ ಮಾಡಬೇಕಾಗಿಲ್ಲ. ಸರಳವಾಗಿ ಅನುಭವಿಸುವುದು.