"ಇದು ವಿಮರ್ಶೆಯಲ್ಲದ ಚಿಂತನ"

Wednesday, August 10, 2011

ಸಂಪನ್ಮೂಲ ದಾಖಲೀಕರಣಗಳು


ಯಕ್ಷಗಾನದ ಪಾರಂಪರಿಕ ಶೈಲಿಯ ಮಟ್ಟುಗಳ ಭಾಗವತಿಕೆಯ ದಾಖಲೀಕರಣದ ಲೇಖನವೊಂದು ಉದಯವಾಣಿ ಲಲಿತರಂಗ ವಿಭಾಗದಲ್ಲಿ ಇತ್ತೀಚೆಗೆ ಪ್ರಕಟಗೊಂಡಿತ್ತು. ಡಾ| ನಾಗವೇಣಿ ಮಂಚಿ ಯವರು ಈ ಲೇಖನವನ್ನು ಬರೆದಿದ್ದರು. ಅತ್ಯುತ್ತಮ ಭಾವಸ್ಪರ್ಶೀ ಲೇಖನ ಓದಿದಾಗ ಬಹಳ ಸಂತಸವಾಯಿತು.ಪರಂಪರೆಯ ಮಟ್ಟುಗಳ ದಾಖಲೀಕರಣವೆಂಬುದು ಪ್ರಸ್ತುತ ಕಾಲಘಟ್ಟದಲ್ಲಿ ಬಹಳ ಅನಿವಾರ್ಯವೆನಿಸಿದೆ. ಸೂಕ್ತ ಸಮಯದಲ್ಲಿ ಲಭ್ಯವಿರುವ ಸಂಪನ್ಮೂಲದ ರಕ್ಷಣೆ ಮತ್ತು ಉಪಯೋಗ ಈ ನಿಟ್ಟಿನಲ್ಲಿ ಮಾತ್ರ ಸಾಧ್ಯವೆಂದು ತೋರುತ್ತದೆ.YAKSHAGANA ARTICLE

ಬಹಳ ಹಿಂದೆ ಸುಮಾರು ಇಪ್ಪತ್ತು ವರ್ಷದ ಹಿಂದೆ ಮಂಗಳೂರಿನ ಪಾಲ್ಕೆ ಹಾಲ್ ನಲ್ಲಿ ಯಕ್ಷಗಾನ ತಾಳ ಮದ್ದಲೆಯೊಂದು ಆಗಿದ್ದುದು ಇನ್ನೂ ನೆನಪಿದೆ. ಬಲಿಪ ಭಾಗವತರು,  ಚಿಪ್ಪಾರು, ಶೇಣಿ,  ಪೆರ್ಲ, ಜೋಶಿ ಹೀಗೆ ಅತ್ಯಂತ ಹಿರಿಯರು ಭಾಗವಹಿಸಿದ ಒಂದು ಅದ್ಭುತ ತಾಳಮದ್ದಲೆಯಾಗಿತ್ತು. ಬಹಳ ಸರಳವಾಗಿ ನಡೆದ ಕಾರ್ಯಕ್ರಮವದು.   ಮುಖ್ಯವಾಗಿ ಅಂದಿನ ಕಾರ್ಯಕ್ರಮದ ವಿಶೇಷತೆ ಎಂದರೆ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರಿಂದ ಕೆಮ್ಮಣ್ಣು ನಾರಣಪ್ಪ ಶೈಲಿಯ ಮದ್ದಲೆವಾದನವಾಗಿತ್ತು. ಅತ್ಯಂತ ವಿಶಿಷ್ಟ ಶೈಲಿಯ ಮದ್ದಲೆ ವಾದನವದು. ಬಹುಷಃ ಚಿಪ್ಪಾರು ಬಲ್ಲಾಳರಿಂದ ನಂತರ ಆ ಶೈಲಿಯನ್ನು  ಕರಗತ ಮಾಡಿಕೊಂಡವರು ಯಾರೂ ಇಲ್ಲವೆಂದು ನನ್ನ ಅನಿಸಿಕೆ. ಈಗ ಆ ಶೈಲಿಯನ್ನು ಅರಸುವುದು ಕಠಿಣವೇ. ಹಾಗಾಗಿ ಈ ದಾಖಲೀಕರಣವೆಂಬುದು ಪ್ರಸ್ತುತ ಇಂದಿನ ಮಟ್ಟಿಗೆ ತೀರ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಕಾಳಜಿ ವಹಿಸಿ ಆಯೋಜಿಸಿದ್ದುದು ಅತ್ಯಂತ ಶ್ಲಾಘನೀಯ ಕಾರ್ಯ.
ಯಕ್ಷಗಾನ ಪ್ರದರ್ಶನರಹಿತವಾದ ಹತ್ತು ಯಕ್ಷಗಾನ ಸಂಬಂಧೀ ವಿಚಾರಸಂಕಿರಣಗಳು, ಕಮ್ಮಟಗಳು ಕಾರ್ಯಾಗಾರಾಗಳ ಬಗ್ಗೆ ಇಂದಿನ ಕಾಲದಲ್ಲಿ ಆಸಕ್ತಿದಾಯಕವಿಚಾರವಾಗುವುದು ಸ್ವಾಗತಾರ್ಹ. ಇದು ಸಂಪನ್ಮೂಲದ ಶೋಧನೆಯನ್ನು ಬಲಗೊಳಿಸುವಂತಾಗಬೇಕು. ಮಾತ್ರವಲ್ಲ ಅರ್ಹವ್ಯಕ್ತಿಗಳನ್ನು ಸೇರಿಸಿ ಮುಂದಾಲೋಚನೆಯಿಂದ  ಇಂತಹ ಕಾರ್ಯಕ್ರಮಗಳು ನೆರವೇರಿದಲ್ಲಿ ಮುಂದಿನ ಪೀಳಿಗೆಗೆ ಉಪಯುಕ್ತವಾಗುವುದರಲ್ಲಿ ಸಂಶವಿಲ್ಲ. ಅದರ ಮೌಲ್ಯವನ್ನು ಅರಿಯುವ ಜ್ಞಾನವನ್ನು ಬೆಳೆಸುವಂತಾಗಬೇಕು. ಕೇವಲ ಕಾರ್ಯಕ್ರಮದ ಲೆಕ್ಕಕ್ಕೆ ಇಂತಹ ಕಾರ್ಯಕ್ರಮ ಮಾಡುವ ಪ್ರಮೇಯವಿರಬಾರದು.
ಯಕ್ಷ್ಗಗಾನ ಪರಂಪರೆಯಬಗ್ಗೆ ಚರ್ಚೆ ಹೇಗೂ ಇರಲಿ ಹಳೆಯ ಮಟ್ಟುಗಳು ಸಂಪ್ರದಾಯ ಕ್ರಮಗಳ ಅರಿವಿರಬೇಕಾದುದು ಅತೀ ಮುಖ್ಯ. ಮುಂದಿನ ಪೀಳಿಗೆಗೆ ಅದನ್ನು ಮುಂದುವರಿಸಿ ರಕ್ಷಿಸಬೇಕಾದರೆ ಅಂತಹ ಜ್ಞಾನ ಸಂಪನ್ಮೂಲ ವ್ಯಕ್ತಿಗಳು ಇಂದು ಕೆಲವರು ಮಾತ್ರ ಸಿಗಬಲ್ಲರು. ಈ ನಿಟ್ಟಿನಲ್ಲಿ ಗಮನ ಹರಿಸಿ ಇಂತಹ ವಿಷಯಗಳ ದಾಖಲೀಕರಣ ಕಾರ್ಯಕ್ರಮ ಅನಿವಾರ್ಯವಾಗಿದೆ. ಇದರಲ್ಲಿ ವ್ಯಾಪಾರೀ ಭಾವ ನುಸುಳಬಾರದು. ಕಲೆಯೆಂದರೆ ಅದು ಆರೋಗ್ಯವಂತ ಮನಸ್ಸಿನ ಪ್ರತೀಕವಾಗಬೇಕು. ಮನಸ್ಸನ್ನು ಮುದಗಗೋಳಿಸುವ ಕಲೆಯ ಮೌಲ್ಯ ಮನಸ್ಸಿನಿಂದಲೇ ಅಧಿಕವಾಗಬೇಕಲ್ಲದೆ ನಾವು ಅದಕ್ಕೆ ಮೌಲ್ಯವನ್ನು ನಿರ್ಣಯಿಸಿ ಅದನ್ನು ವ್ಯಾಪಾರೀಕರಣಗೊಳಿಸಬಾರದು.
ಯಕ್ಷಗಾನದಲ್ಲಿ ಅಧ್ಯಯನ ವಸ್ತುಗಳ ಶೋಧನೆಯೂ ಅನಿವಾರ್ಯವಾಗಿದೆ. ಕೆಲವೇ ವಸ್ತುಗಳಿಗೆ ಕಮ್ಮಟಗಳು ಕಾರ್ಯಾಗಾರಗಳು ಸೀಮಿತವಾಗಬಾರದು. ಪ್ರತಿಯೊಂದರಲ್ಲೂ ಆಸಕ್ತಿದಾಯಕ ವಿಚಾರಗಳಿವೆ. ಆ ವಿಚಾರಗಳು ಪ್ರಕಾಶಿಸಬೇಕು. ಹೊರ ಜಗತ್ತು ತಿಳಿಯುವಂತಾಗಬೇಕು. ಇಂದು ಅಂತಹವಿಚಾರಗಳು ಅರಿತ ಸಂಪನ್ಮೂಲವ್ಯಕ್ತಿಗಳ ಮಾರ್ಗದರ್ಶನ ಪಡೆಯಬೇಕು ಇದರಲ್ಲಿ ಯಾವುದೇ ಪೂರ್ವಾಗ್ರಹ ಸಲ್ಲದು. ಇಂದು ಹಲವು ವಿಚಾರಗಳನ್ನೆ ಯೋಚಿಸುತ್ತಾ ಗಮನಿಸಿದರೆ ಅರಿವಾಗಬಹುದು.ಹಿಮ್ಮೇಳದ ಮದ್ದಲೆವಾದನವನ್ನು ಉದಾಹಾರಿಸಿದರೆ ಅದರಲ್ಲಿ ಹಲವಾರು ವಿಚಾರಗಳು ಅಧ್ಯಯನಕ್ಕೆ ಯೋಗ್ಯವಾಗಿದೆ. ಯಾವುದೇ ಮಟ್ಟುಗಳ ಬಗ್ಗೆಯಾಗಲೀ ಸಂಪ್ರದಾಯದ ಬಗ್ಗೆಯಾಗಲೀ ಕಾರ್ಯಕ್ರಮವಿದ್ದರೆ ಆವಾಗ ಮೊದಲ ಆಯ್ಕೆಯ ವ್ಯಕ್ತಿಯಾಗುವುದು ಪದ್ಯಾಣ ಶಂಕರಣ್ಣನವರು. ಸಂಪ್ರದಾಯದ ಮಟ್ಟುಗಳ ಬಗ್ಗೆ ಅದ್ಭುತ ಪಾಂಡಿತ್ಯ ಇರುವವ ಇವರನ್ನು ಇತ್ತೀಚೆಗೆ ನಡೆದ ಹಲವು ಕಾರ್ಯಕ್ರಮಗಳಲ್ಲಿ ಸೂಕ್ತವಾಗಿ ಉಪಯೋಗಿಸಿಕೊಂಡಿದ್ದಾರೆ. ಅದು ಮುದ್ದಣ್ಣ ಶತಮಾನೋತ್ಸವದ ಸಿ. ಡಿ ಯಾಗಿರಬಹುದು, ದಾಖಲೀಕರಣವಾಗಿರಬಹುದು. ಇದರಲ್ಲೆಲ್ಲ ಅವರ ಅನುಭವದ ಕಿಂಚಿತ್ ಭಾಗವನ್ನು ಮಾತ್ರವೇ ದಾಖಲಿಸಲ್ಪಟ್ಟಿದೆ ಇಲ್ಲವೇ ಪ್ರಕಾಶಕ್ಕೆ ಬಂದಿದೆ. ಇನ್ನೂ ಇಂತಹ ಅದೆಷ್ಟು ವಿಚಾರಗಳು ಇವರಲ್ಲಿ ಹುದುಗಿರಬಹುದು? ಅವರನ್ನು ಆಹ್ವಾನಿಸಿ ಚೆಂಡೆ ಹೆಗಲಿಗೇರಿಸಿ ಪುಂಡುವೇಶವನ್ನು ಮನಬಂದತೆ ಕುಣಿಸುವುದು ಮಾತ್ರ ಆಗಬಾರದಲ್ಲವೇ? ವಿಚಾರಸಂಕೀರಣಗಳು ಅಥವಾ ಇನ್ನಿತರ ಕಾರ್ಯಕ್ರಮಗಳಲ್ಲಿ ಇಂತಹ ಯೋಗ್ಯವ್ಯಕ್ತಿಗಳಿಗೆ ಪ್ರಾಶಸ್ತ್ಯ ಸಿಗಬೇಕು. ಅದು ಯಾವುದೋ ಸಾಧನೆಗೆ ಅಥವಾ ಪ್ರಚಾರಕ್ಕೆ ಮಾಡುವ ಕಾರ್ಯಕ್ರಮವಾಗಬಾರದು.

ಇವರ ಜ್ಞಾನವನ್ನೇಲ್ಲ ಹೊರತೆಗೆದು ಜೋಪಾನ ಮಾಡುವಂತಹ ಯೋಜನೆಗಳು ಸಿದ್ದವಾಗಬೇಕು. ಇದು ಕೇವಲ ವ್ಯಕ್ತಿಯೊಬ್ಬರಿಗೆ ಮಾತ್ರ ಸಂಬಂದಿಸಿರುವುದಲ್ಲ. ಇಂತಹ ಅದೆಷ್ಟು ಸಂಪನ್ಮೂಲವ್ಯಕ್ತಿಗಳನ್ನು ಕೇವಲ ಪೂರ್ವಾಗ್ರಹದಿಂದಲೋ ಸ್ವಾರ್ಥದಿಂದಲೋ ಅಲಕ್ಷಿಸುತ್ತೇದ್ದೆವೆ ಎಂದು ಅನ್ನಿಸುವುದಿಲ್ಲವೇ?  ಅದು ಮಾಂಬಾಡಿ ಗುರುಗಳಾಗಿರಬಹುದು, ಬಲಿಪ್ಪರಾಗಿರಬಹುದು, ತೆಂಕಬೈಲು ಕೋಳ್ಯೂರಂತಹ ಹಿರಿಯ ಕಲಾವಿದರಾಗಬಹುದು. ಈ ಎಲ್ಲ ಸಂಫತ್ತಿನ ದಾಖಲೀಕರಣ ಆಗಬೇಕಾದುದು ಬಹಳ ಅನಿವಾರ್ಯ.
          ಈ ನಿಟ್ಟಿನಲ್ಲಿ ನಾವು ಬಲಿಪ್ಪರ ಅನುಭವದ ಸಂದರ್ಶನವನ್ನು ಸರಳವಾಗಿ ಮಾಡಿ ಅದನ್ನು ವೀಡಿಯೊ ಮುಖಾಂತರ ಮಾಡಿ ಸಾಧ್ಯವಾದಷ್ಟು ಮಟ್ಟಿಗೆ ದಾಖಲೀಕರಿಸಿದ್ದೇವೆ. ಇಂತಹ ಸಣ್ಣ ಕಾರ್ಯಕ್ರಮದ ಮುಖಾಂತರವೂ ಸಾಧ್ಯವಾದಷ್ಟು ಮಟ್ಟಿಗೆ ಮಾಡಬಹುದು. ಮತ್ತೊಂದು ಗಮನಾರ್ಹವೆಂದರೆ ಕಾರ್ಯಕ್ರಮ ಸರಳವಾದಷ್ಟು ಅದರಲ್ಲಿ ವಿಚಾರಗಳು ಹೊರಬರುವುದು ಅಧಿಕ. ಆಡಂಬರದಿಂದ ಪ್ರಚಾರ, ಒಂದಷ್ಟು ಅಬ್ಬರ ಆದ್ರೆ ಒಂದಷ್ಟು ಧನಸಂಗ್ರಹ ಮಾತ್ರ ಸಾಧ್ಯ.
ಇನ್ನೊಂದು ಮುಖ್ಯ ಅಂಶವೆಂದರೆ ಇಂತಹ ದಾಖಲೀಕರಣಗಳು ಆಸಕ್ತಿವಂತರಿಗೆ ಸುಲಭದಲ್ಲಿ ಸಿಗುವಂತಾಗಬೇಕು. ಆಸಕ್ತಿವಂತರು ಅದನ್ನು ಸ್ವಾರ್ಥ ರಹಿತವಾಗಿ ಅದರ ಮೌಲ್ಯವನ್ನು ಸೂಕ್ತ ರೀತಿಯಲ್ಲಿ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪರಸ್ಪರ ಸೌಹಾರ್ದ ಮತ್ತು ಸಹದುಡಿಮೆಯಿಂದ ನಿಸ್ವಾರ್ಥವಾಗಿ ದುಡಿದರೆ ಇಂತಹ ಸಂಪನ್ಮೂಲಗಳು ಜೀವತಳೆದು ದೃಢವಾಗಿ ಬೆಳೆದು ನಿಂತು ಯಕ್ಷಗಾನಾ ನಿಜ ಅರ್ಥದಲ್ಲಿ ಅಧ್ಹೂರಿಯಾಗುವುದರಲ್ಲಿ ಸಂಶಯವಿಲ್ಲ.