“ನೋಡಿ ನಿರ್ಮಲ ಜಲ ಸಮೀಪದಿ ಮಾಡಿಕೊಂಡರು ಪರ್ಣ ಶಾಲೆಯ....” ಹೀಗೆ
ಪೀಠಿಕೆ ಮುಗಿದು ಆರಂಭವಾದ ಪಂಚವಟಿ ಪ್ರಸಂಗದ ಪದಕ್ಕೆ ಆಟ ಆರಂಭವಾದ ಸಡಗರಕ್ಕೆ
ಪ್ರೇಕ್ಷಕರು ಕೆಲವರು ಚಪ್ಪಾಳೆ ತಟ್ಟುತ್ತಾರೆ. ಪದದ ಆರಂಭಕ್ಕೆ ಬೀಳುವ ಚಪ್ಪಾಳೆಯ ಅಂಕ ಅದು
ಭಾಗವತನಿಗೋ ಇನ್ನಾರಿಗೋ ಸಲ್ಲದೇ ಇನ್ನಾದರೂ ಆಟ ಆರಂಭಗೊಂಡಿತಲ್ಲಾ?- ಎಂಬ ಕಾರಣವೂ ಇರುತ್ತದೆ. ಆರಂಭದಿಂದಲೇ ಕಿಚ್ಚು ಹಚ್ಚಿಸಿದಂತೆ ಹಾಡಬೇಕೆನ್ನುವ
ಉಮೇದಿನಲ್ಲಿ ಕೆಲವೊಮ್ಮೇ ಭಾಗವತರಾದವರೂ ಉತ್ಸಾಹದಲ್ಲಿರುತ್ತಾರೆ...ಹೀಗೆ ಚಪ್ಪಾಳೆ ಯಾರಿಗೆ?
ಯಾವುದಕ್ಕೆ? ಎನ್ನುವುದು ಪ್ರಧಾನವಲ್ಲ. ಹಾಗೆಂದು
ಮೊದಲ ಪದ ಕಳಪೆಯಾಯಿತು... ಅಂತಲ್ಲ ಅದನ್ನು ಆ ರೀತಿಗೆ ಅನುಭವಿಸುವುದಕ್ಕೆ ಪ್ರೇಕ್ಷ್ಗಕ
ಸಿದ್ದನಾಗಲಿಲ್ಲ ಅಷ್ಟೆ. ಹೀಗೆ ಪ್ರಸಂಗದೊಳಗೆ
ಲೀನವಾಗಿ ಹೋಗುವ ಪದಗಳು ಹಲವಿದೆ. ಅದರಬಗ್ಗೆ ಗಮನವೇ ಹೋಗದೇ ಅದು ಚಪ್ಪಾಳೆಯಿಲ್ಲದ ಪದಗಳೇ
ಆಗಿಬಿಡುತ್ತವೆ.!! ಹಾಗೆಂದು ಚಪ್ಪಾಳೆಗಾಗಿ ಪದಗಳು ಹಾಡಲ್ಪಡುತ್ತವೆ ಎಂಬ ಭಾವನೆಯಲ್ಲ. ವಿಷಯವೆಂದರೆ ಇದೂ ಒಂದು ಸ್ವಾರಸ್ಯದ ಸಂಗತಿ.
ಮೆಚ್ಚಿನ ಗಾಯಕನೋ ಅಥವಾ ಸಂಗೀತಗಾರನೋ ಒಂದು ಕಾರ್ಯಕ್ರಮದಲ್ಲಿ ಒಂದು ಹಾಡನ್ನೂ ಅಥವಾ ಯಾವುದೋ
ಗಾಯನವನ್ನು ತನ್ನ ಪ್ರತಿಭಾ ವಿಶೇಷವಾಗಿ
ಪ್ರದರ್ಶಿಸಿದಾಗ ಮಧ್ಯಂತರವಾಗಿ ಅಥವಾ ತಾತ್ಕಾಲಿಕವಾಗಿ ಆ ಕೃತಿಗೆ ಪ್ರೇಕ್ಷಕರು ತಮ್ಮ ಅಭಿರುಚಿಗೆ
ತಕ್ಕಂತೆ ಚಪ್ಪಾಳೆ ಹೊಡೆಯುತ್ತಾರೆ. ಇದು
ಹಲವೊಂದು ಸಲ ಕಲಾವಿದನ್ನು ಉತ್ತೇಜಿಸುವುದು ಮಾತ್ರವಲ್ಲ ಕಾರ್ಯಕ್ರಮದ ಮುಂದಿನ ದಿಕ್ಸೂಚಿಯನ್ನು
ನೀಡುತ್ತದೆ.
ಹಾಡುಗಳು ಅಥವಾ ಗಾಯನದಿಂದಲೇ ಕೂಡಿರುವ ಕಲಾ ಕಾರ್ಯಕ್ರಮಗಳು ಹಲವಿರಬಹುದು. ಹಲವು ನೃತ್ಯ
ಕಾರ್ಯಕ್ರಮಗಳೋ ಅಥವಾ ರಸಮಂಜರಿಯೋ ಯಾವುದೇ ಆದರೂ ಅಲ್ಲಿ ಗಾಯಕನಿಗೆ ಕೇವಲ ಗಾಯನ ಮಾತ್ರವಿದ್ದರೂ
ಸಹ ಆತ ಹಾಡುವ ಸಂಖ್ಯೆಯನ್ನು ಗಮನಿಸಿದರೆ ಮಿತವಾಗಿರುತ್ತದೆ.ಹೆಚ್ಚೆಂದರೆ ಕೆಲವು ಹಾಡುಗಳಿಗೆ ಗಾಯನ
ವಿಭಾಗವನ್ನು ಸೀಮಿತಗೊಳಿಸಿ ಗಾಯಕ ದಣಿದು ಬಿಡುತ್ತಾನೆ ಇಲ್ಲವೆ, ತನ್ನ ವ್ಯಾಪಾರಿ ಮನೋಭಾವದಿಂದಲೋ
ವಿರಮಿಸುತ್ತಾನೆ. ಪ್ರಖ್ಯಾತ ಗಾಯಕರು ಅವರ
ಬೇಡಿಕೆಗನುಸಾರವಾಗಿ ತಮ್ಮ ಸಾರ್ವಜನಿಕ ಗಾಯನ ಕಾರ್ಯಕ್ರಮದ ಹಾಡುಗಳ ಬಗ್ಗೆ ಮಿತಿಯನ್ನು
ಇರಿಸಿಕೊಂಡಿರುತ್ತಾರೆ. ವಿಶೇಷವಾದ ರಚನೆಗಳನ್ನು ಆಲ್ಪಂ ಹಕ್ಕು ಮಾರಾಟಕ್ಕಾಗಿ
ಪಣವಿಟ್ಟಿರುತ್ತಾರೆ. ಒಂದು ಹಾಡನ್ನೂ ಇದಕ್ಕಿಂತ
ಮಿಗಿಲಾಗಿ ಹಾಡುವುದಿಲ್ಲ. ಅದೆಲ್ಲ ವೈಯಕ್ತಿಕ ವಿಚಾರಗಳು.
ಒಂದು ಸಂಗೀತ ಕಾರ್ಯಕ್ರಮ ಸಾಯಂಕಾಲ ೬.೩೦ ಯಿಂದ ೯.೩೦ರ ವರೆಗೆ ಎಂದು ಕರಪತ್ರದಲ್ಲಿ ಮುದ್ರಿಸಿರುತ್ತದೆ. ಮೂರುಗಂಟೆಯ ಅವಧಿಯ ಕಾರ್ಯಕ್ರಮ ಎಂದು ಐನೂರರ ಟಿಕೇಟ್
ತೆಗೆದು ಒಳ ಹೊದರೆ ಗಾಯಕರು ವೇದಿಕೆ ಏರುವಾಗಲೇ ೭ ಘಂಟೆಯಾಗಿರುತ್ತದೆ. ಆನಂತರ ಶ್ರುತಿ
ಹಿಡಿಯುವುದು.. ಸ್ವಗತವಾದ ಮಾತುಗಳು ಕಲಾವಿದರ ಪರಿಚಯ ಹೀಗೆ ಕಾಲು ಘಂಟೆ ಅದರಲ್ಲಿ ಕಳೆದು ಕೊನೆಗೆ
೭.೩೦ಗೆ ಸಂಗೀತ ಕಾರ್ಯಕ್ರಮ ನಿಜವಾಗಿ
ಆರಂಭವಾಗುತ್ತದೆ. ಹೀಗೆ ಆರಂಭವಾದ ಕಾರ್ಯಕ್ರಮ ಅಮೋಘವಾಗಿ ಸಾಗುತ್ತದೆ. ಪ್ರೇಕ್ಷಕರು ಸಂಗೀತ
ಸಾಗರದಲ್ಲಿ ಮುಳುಗಿ ತೇಲಾಡಿ ಮತ್ತೆ ಪುನಃ ಮುಳುಗುತ್ತಾರೆ. ಇದರ ಮದ್ಯೆ ಖೆಮ್ಮುತ್ತಾ ಗಂಟಲು ಸರಿ ಪಡಿಸಿಕೊಳ್ಳಲು.. ಶ್ರುತಿಯನ್ನು
ಹೊಂದಿಸಿಕೊಳ್ಳುವುದಕ್ಕೆಂದೇ ಒಂದಷ್ಟು ಅವಧಿ ಹಾಗೆಯೇ ಕಳೆದಿರುತ್ತದೆ. ಕೊನೆಗೆ ೮.೩೦
ಆಗುತ್ತಿದ್ದಂತೆ ಧ್ಯನ್ಯವಾದ ಹೇಳುತ್ತಾ ಮಂಗಲ ಗೀತೆಯನ್ನು ಹಾಡಿ ೮.೪೫ಕ್ಕೆ ಕಾರ್ಯಕ್ರಮ
ಮುಗಿಸುತ್ತಾರೆ. ಮಾತ್ರವಲ್ಲ ಕೆಲವೊಂದು ಕಾರ್ಯಕ್ರಮಗಳು ಹೀಗೂ ಇರುತ್ತದೆ ಅಂತಾರಾಷ್ಟ್ರೀಯ ಮಟ್ಟದ
ಗಾಯಕನೊಬ್ಬನ ಕಾರ್ಯಕ್ರಮ.. ಒಂದು ತಿಂಗಳ ಮೊದಲೇ ನಗರದ ತುಂಬೆಲ್ಲ ಆತನ ವಿವಿಧ ಭಂಗಿಯ ವಾಲ್
ಪೋಸ್ಟರ್ ಕಟೌಟ್ ಗಳು ರಾರಾಜಿಸುತ್ತವೆ. ಸಾಯಂಕಾಲ ಆರುಘಂಟೆಯಿಂದ ಹತ್ತರವರೆಗೆ ಎಂದು ಜಾಹಿರಾತು
ಬೇರೆ. ಒಂದು ತಂಡವಾಗಿ ಬರುವ ಈ ಸಂಗೀತಗಾರನ ಈ ಕಾರ್ಯಕ್ರಮ, ಆರಂಭದಲ್ಲಿ ಅದಾವುದೋ ಅಷ್ಟೇನು ಪ್ರಸಿದ್ಧಿಯಿಲ್ಲದ ಗಾಯಕರಿಂದ
ಅಥವಾ ಶಿಷ್ಯವರ್ಗಗಳಿಂದ ಗಾಯನ
ಕೂಡಿರುತ್ತದೆ. ಒಂದು ಘಂಟೆಯಷ್ಟು ತಡವಾಗಿ ಬರುವ ಅಂತಾರಾಷ್ಟ್ರೀಯ ಕಲಾವಿದ ಬರುತ್ತಿದ್ದಂತೆ ಪ್ರೇಕ್ಷಕರೆಲ್ಲ ಅಷ್ಟು ತಡವಾದ
ಸಂಕಟವನ್ನೇಲ್ಲ ಮರೆತು ಬಿಡುತ್ತ, ಆತನ ಅಮೋಘ
ಗಾಯನಕ್ಕೆ ಮನಸೋಲುತ್ತಾರೆ. ಕೇವಲ ಒಂದು ಗಂಟೆಯಷ್ಟೇ ಆ ಗಾಯಕ ಹಾಡಿ ತನ್ನ ಬೇಡಿಕೆಯ ಮಟ್ಟವನ್ನು
ಪ್ರದರ್ಶಿಸುತ್ತಾನೆ. ಇಷ್ಟಕ್ಕೆ ಗಾಯಕ ಮತ್ತು ಆತನ ತಂಡ ಕೆಲವು ಲಕ್ಷಗಳಷ್ಟನ್ನು
ಜೇಬಿಗಿಳಿಸಿರುತ್ತದೆ. ಕಲೆ ಜನಪ್ರಿಯತೆಯನ್ನು ಹೊಂದಿಕೊಂಡು ವಾಣಿಜ್ಯಮಯ ಮೌಲ್ಯವನ್ನು
ಪಡೆಯುತ್ತದೆ. ಜತೆಗೇ ಕಲಾರಾಧನೆ ಮತ್ತು ಕಲಾಸೇವೆಯ ತೋರ್ಪಡಿಕೆ ಬೇರೆ.
ಇದನ್ನೆಲ್ಲ ಗಮನಿಸುವಾಗ ಒಂದು ರೀತಿಯ ಹತಾಶೆಯ ಭಾವ ಮನಸ್ಸಿನಲ್ಲಿ ಮೂಡುತ್ತದೆ.
ಕಲಾಸೇವೆಯ ವಾಣಿಜ್ಯ ರೂಪ ಅಲ್ಲಿ ಕಂಡರೆ ಇಲ್ಲಿ ಯಕ್ಷಗಾನದಲ್ಲಿರುವ
ಕಲಾಸೇಯ ಆಳ ಅರಿವಾಗಬೇಕಾದರೆ ಆ ಬಗೆಯಲ್ಲಿ ನಿಂತು ಯೋಚಿಸಬೇಕು. ಕಾರ್ಯಕ್ರಮದ
ಆರಂಭದಿಂದ ತೊಡಗಿ ಅಂತ್ಯದವರೆಗೂ, ರಾತ್ರಿಯಿಂದ ಬೆಳಗ್ಗಿನವರೆಗೆ, ಕೆಲವೊಂದು ಸಲ ಹಲವಾರು
ಘಂಟೆಗಳ ಕಾಲ ರಂಗವನ್ನೇ ನೋಡುತ್ತ ಒಟ್ಟು ಪ್ರದರ್ಶನದ ಜವಾಬ್ದಾರಿಯನ್ನು ಹೆಗಲಿಗೇರಿಸಿ
ಎಲ್ಲವನ್ನು ನಿಭಾಯಿಸುತ್ತ ಹಾಡುವ ಭಾಗವತರು ಚಪ್ಪಾಳೆ ಗಿಟ್ಟಿಸುವುದು ಕೆಲವು ಹಾಡುಗಳಿಗೆ
ಮಾತ್ರ...!!! ತುಣುಕು ಪದಗಳು, ಸ್ತುತಿಪದಗಳು,
ಕಿಸೆ ಪದಗಳು ಪ್ರಸಂಗ ಪುಸ್ತಕದ ಹಲವು ಪದಗಳು ಪ್ರದರ್ಶನ ಒಟ್ಟು ಯಶಸ್ಸಿಗಾಗಿ ಹಾಡುತ್ತಾರೆ.
ಇಲ್ಲಿ ಯಕ್ಷಗಾನದ ನಡೆ ಮಾತ್ರ ದೃಷ್ಟಿಯಲ್ಲಿರುತ್ತದೆ. ಯಕ್ಷಗಾನದ ಅವಧಿಯ ನಾಲ್ಕೈದು ಘಂಟೆಗಳ
ಹೊತ್ತು ಅದೆಷ್ಟೋ ಹಾಡುಗಳನ್ನು ಹಾಡುವ ಇವರ ಕೆಲಸ ಗಿನ್ನಿಸ್ ದಾಖಲೆ ಸೇರಿಸುವಷ್ಟು
ಅರ್ಹವಾಗಿರುತ್ತದೆ. ಅನ್ಯ ಕ್ಷೇತ್ರದ
ಕಲಾವಿದರಿಗೆ ಹೋಲಿಸಿದಲ್ಲಿ ಇವರ ಕಲಾಸೇವೆಯ
ಪ್ರಾಮಾಣೀಕತೆಗೆ ಸಿಗುವ ಅಲ್ಪ ಸಂಭಾವನೆ ಮಾತ್ರ
ನಿಜಜೀವನದಲ್ಲಿ ಇದು ಅತ್ಯಂತ ಹಿರಿದಾದ ಕಲಾಸೇವೆಯಾಗಿ ಭಾಸವಾಗುವುದಿಲ್ಲವೇ? ಹಾಡುವ ಭಾವ
ಪ್ರವೃತ್ತಿ ಹೇಗೂ ಇರಲಿ ಅಷ್ಟೋಂದು ಅಸಂಖ್ಯ
ಪದಗಳನ್ನು ಹಾಡುವಾಗ ಗಮನ ಹರಿಸದೆ ಹಾಗೆಯೇ ಬಂದು ಹೋಗುವಪದಗಳಲ್ಲೂ ವೈಶಿಷ್ಟ್ಯವಿರುತ್ತದೆ.
ಯಾವುದೇ ಪ್ರತಿಫಲವಿಲ್ಲದೆ ಶುದ್ದವಾಗಿ ಯಕ್ಷಗಾನಕ್ಕಾಗಿಯೇ
ಹಾಡುವ ಪದಗಳತ್ತ ಒಂದು ಸಲ ಗಮನ ಹರಿಸಿ ಚಪ್ಪಾಳೆ ಹಾಕದಿದ್ದರೆ ಹೇಗೆ ಹೇಳಿ?
ಚಪ್ಪಾಳೆಯನ್ನು ಮಾನದಂಡವನ್ನಾಗಿ ನೋಡುವುದು ಔಚಿತ್ಯವಲ್ಲವಾದರೂ ಹಲವಾರು ಪದಗಳನ್ನು ಕೇಳುವಾಗ
ಒಂದು ವರ್ಗೀಕರಣದ ಕಲ್ಪನೆಯುಂಟಾಗುತ್ತದೆ. ಕೆಲವು ಪದಗಳು ಅತ್ಯಮೋಘವಾಗಿ ಆಲಾಪಿಸಿ,ಕೆಲವು ಸಲ
ಪ್ರೇಕ್ಷಕರ ಕರತಾಡನಕ್ಕಾಗಿಯೇ ಹಾಡಲ್ಪಟ್ಟರೂ ಅವುಗಳು ಪ್ರಶಂಸೆಯನ್ನು ಪಡೆದಾಗ ಉಳಿದವುಗಳು
ಕಳಪೆಯೆಂದೆನಿಸುವುದಿಲ್ಲ. ಆ ಪದಗಳ ಮಟ್ಟಿಗೆ ಗಮನ ಅಷ್ಟಾಗಿ ಹೋಗುವುದಿಲ್ಲ. ನಿಜಕ್ಕಾದರೆ ಆ
ಪದಗಳನ್ನು ಅಸ್ವಾದಿಸುವ ರೀತಿಯೇ ಬೇರೆಯದಾಗಿರುತ್ತದೆ. ಹಾಗಾಗಿ ಒಂದು ಕಾರ್ಯಕ್ರಮದ ಪದಗಳನ್ನು
ಕೇಳುತ್ತಾ ಹೋದಂತೆ ಅದರಲ್ಲಿ ಕೆಲವು ಪದಗಳನ್ನು ಕೇಳಿದಾಗ ಅವುಗಳು ಚಪ್ಪಾಳೆ ಗಳಿಸದೇ ಇದ್ದರೂ
ಅವುಗಳನ್ನು ಮತ್ತು ಮತ್ತು ಗುನು ಗುನಿಸುತ್ತಾ ನಮ್ಮ ಮನಸ್ಸು ಅದರ ಆಲಾಪನೆಯ ಉಯ್ಯಾಲೆಯಲ್ಲಿ
ಕುಳಿತು ಜೋಕಾಲಿಯಾಡುತ್ತದೆ. ಅಂತಹ ಕೆಲವು ಪದಗಳೇ ಎಷ್ಟು ಗಮನಾರ್ಹ ಎಂದು ಯೋಚಿಸಿ ಆ ಬಗೆಯಲ್ಲಿ ಕೇಳಿದಾಗ ಆಗುವ ಅನಂದವೇ ಬೇರೆ. ಒಂದು
ರೀತಿಯಲ್ಲಿ ಈ ಪದಗಳೇ ಜೀವಾಳ. ಇಂತಹ ಕೆಲವು ಪದಗಳನ್ನು ಇಲ್ಲಿ ಕೇಳಬಹುದು. ಈ ಪದಗಳು ಎಷ್ಟು
ಮಧುರವಾಗಿ ಇದೆ. ಮನಸ್ಸಿಟ್ಟು ಕೇಳಿದಾಗ ಮತ್ತದೆ ಮನಸ್ಸಿನಲ್ಲಿ ಮೊಳಗುತ್ತ ಇರದೇ ಇದ್ದರೆ ಮತ್ತೆ
ಹೇಳಿ. ಸ್ವಾರಸ್ಯವೆಂದರೆ ಇವುಗಳು ಯಾರೂ ಗಮನ ಹರಿಸದ ಪದಗಳು. ಅರ್ಥಾತ್ ಚಪ್ಪಾಳೆ ಇಲ್ಲದ ಪದಗಳು. ನಿಮಗೆ
ಹೇಗೆ ಅನ್ನಿಸುತ್ತದೆ?