"ಇದು ವಿಮರ್ಶೆಯಲ್ಲದ ಚಿಂತನ"

Tuesday, July 13, 2021

ವೇಷಕಳಚಿದ ಸಂಪಾಜೆ ರೈಗಳು.

 

ಯಕ್ಷಗಾನ ಅದರಲ್ಲೂ ತೆಂಕುತಿಟ್ಟು ಯಕ್ಷಗಾನ ಬಯಲಾಟಗಳಲ್ಲಿ ರಾಜ ವೇಷ ಎಂಬುದು ಪ್ರಾತಿನಿಧಿಕ ವೇಷ. ಒಡ್ಡೋಲಗದಲ್ಲಿ ಆರಂಭವಾಗುವ ರಾಜವೇಶದ ಪ್ರವೇಶ ಹಾಗಾಗಿ ವೈಶಿಷ್ಟ್ಯವನ್ನು ತಂದಿದೆ. ದೇವೇಂದ್ರ, ಅರ್ಜುನ ಇವು ಮೊದಲಿಗೆ ಕಾಣುವ ವೇಷಗಳಾದರೂ ರಾಜವೇಶವೇ ಉಳಿದಂತೆ ಸರ್ವಾಂಗೀಣವಾಗಿ ಯಕ್ಷಗಾನದ ಸಂಪೂರ್ಣ ಕಲ್ಪನೆಗೆ ಪೂರಕವಾಗಿ ನಿಂತಿದೆ. ಹಿರಣ್ಯಾಕ್ಷ, ಶಿಶುಪಾಲ ರಕ್ತ ಬೀಜನಂತಹ ಕಿಡಿ ಹತ್ತಿಸಿ ಧೂಳೆಬ್ಬಿಸುವ ಪಾತ್ರಗಳು ಯಕ್ಷಗಾನದ ವೈಭವಕ್ಕೆ ಸಾಕ್ಷಿಯಾಗಿದೆ.  ಈ ರಾಜವೇಶಗಳಲ್ಲಿ ಹಲವರು ಪ್ರಸಿದ್ಧಿಯನ್ನು ಗಳಿಸಿದ್ದಾರೆ. ಅವರಲ್ಲಿ ಒಬ್ಬರು ಇಂದು ನಮ್ಮನ್ನಗಲಿದ ಶ್ರೀ ಸಂಪಾಜೆ ಶೀನಪ್ಪ ರೈಗಳು. ಅತ್ಯಂತ ಬಡ ಕುಟುಂಬದ ಹಿನ್ನೆಲೆ ಇರುವ ಇವರು ರಾಜ ವೇಷದಲ್ಲಿ ಇವರನ್ನು ಎಲ್ಲೋ ಒಂದು ಸಲ ಉಳಿದ ಪುಂಡುವೇಶದಲ್ಲಿ ಕಂಡ ನೆನಪು ಮಾಸಿದಂತೆ ಇದೆ. ಆದರೆ ಇವರು ರಾಜವೇಶವಲ್ಲದೇ ಬೇರೆ ವೇಷದಲ್ಲಿ ಕಂಡದ್ದು ಅಪರೂಪ. ಶೀನಪ್ಪ ರೈ ಎಂದರೆ ಆ ರಾಜವೇಷ ಕಣ್ಣು ತುಂಬಿ ಬರುತ್ತದೆ. ಆ ಗಾಂಭೀರ್ಯ, ಸ್ವರಭಾರದಲ್ಲು ನಾಟ್ಯದ ಗತ್ತು ಗೈರತ್ತಿನಲ್ಲು ರಾಜವೇಷವೆಂದರೆ ಹೀಗಿರಬೇಕು ಎಂಬುದು ಎಲ್ಲರೂ ಒಪ್ಪಿಕೊಳ್ಳುವ ಹಾಗೆ ಇದೆ. 

ಶೀನಪ್ಪ ರೈಗಳು ಯಕ್ಷಗಾನದ ಪಾರಂಪರಿಕ ವೇಷಧಾರಿ. ಅವಶ್ಯವಿದ್ದಲ್ಲಿ ರಭಸವವನ್ನು ಹೆಚ್ಚಿಸಿದ ವೇಗ, ಸೌಮ್ಯದಲ್ಲಿ ಮಾರ್ದವತೆಯನ್ನು ಸೃಷ್ಟಿಸುವ ಕುಶಲಗಾರಿಕೆ ಸಂಪಾಜೆಯವರಲ್ಲಿ ತುಂಬಿಕೊಂಡ ಪ್ರತಿಭೆಗಳು. ಇವರ ರಾಜವೇಶವನ್ನು ಕಾಣುವುದೆಂದರೆ ಅದೊಂದು ನಿಜ ಯಕ್ಷಗಾನದ ವೈಭವ ಎನ್ನಬೇಕು. ಪ್ರವೇಶದಲ್ಲೇ  ಪ್ರೇಕ್ಷಕರ ಎದೆಗೆ ಲಗ್ಗೆ ಇಡುವ ಹೆಜ್ಜೆಗಾರಿಕೆ ಅದ್ಭುತ ಕಲ್ಪನೆಯನ್ನು ಸೃಷ್ಟಿಸ ಬಲ್ಲ ಹಿತ ಮಿತವಾದ ಮಾತುಗಾರಿಕೆ  ಬಹುಶಃ ರೈಗಗಳಿಗೆ ಸರಿ ಮಿಗಿಲೆನಿಸುವ ಕಲಾವಿದ ಇನ್ನು ಕಾಣುವುದು ಕನಸು ಎನ್ನಬೇಕು.  ಇಂದು ರಾಜವೇಷಕ್ಕೂ ಪುಂಡುವೇಷಕ್ಕೂ ವೆತ್ಯಾಸವೇ ಇಲ್ಲದಂತೆ ಕುಣಿಯುತ್ತಾರೆ. ತಾಸುಗಟ್ಟಲೆ ಕುಣಿದು ಏಕತಾನತೆಯನ್ನು ಸೃಷ್ಟಿಸುವಾಗ ಸಂಪಾಜೆಯವರ ವೈಖರಿ ಮತ್ತೂ ಮತ್ತೂ ನೆನಪಿಗೆ ಬರುತ್ತದೆ. ಯಾಕೆಂದರೆ ಅಲ್ಲಿ ಅವರ ಕುಣಿತ ಕೇವಲ ಸಂಕೇತವಾಗಿ ಉಳಿದವುಗಳು ಪ್ರೇಕ್ಷಕನ ಕಲ್ಪನೆಯನ್ನು ಚಿಗುರುವಂತೆ ಮಾಡುತ್ತದೆ. ನಿಜವಾದ ಯಕ್ಷಗಾನಕ್ಕೆ ಇಷ್ಟೇ ಸಾಕಾಗುತ್ತದೆ. ಪದದ ಪ್ರತಿಯೊಂದು ಶಬ್ದಕ್ಕೂ ಅಭಿನಯವನ್ನು ತೊರುವ ಹಪ ಹಪಿಕೆಯನ್ನು ಇಂದಿನ ಕಲಾವಿದರು ತೋರುವಾಗ ಸಂಪಾಜೆಯವರನ್ನು ಒಂದಿಷ್ಟು ನೋಡಿ ಕಲಿಯಿರಿ ಅಂತ ಹೇಳುವ ಹಾಗೆ ಶೀನಪ್ಪರೈಗಳು ಯಕ್ಷಗಾನದ ಪ್ರಾತಿನಿಧಿಕ ವೇಶಗಾರಿಕೆಗೆ ಸಾಕ್ಷಿಯಾಗುತ್ತಾರೆ. 



ಬಾಲ್ಯದಲ್ಲಿ ಇವರ ಹಿರಣ್ಯಾಕ್ಷ, ಶಿಶುಪಾಲ ನೋಡಿ  ಆ ಕ್ರೌರ್ಯಕ್ಕೆ ಬೆಚ್ಚಿ ಬಿದ್ದಿದ್ದೇನೆ. ಎಂದು ಈ ವೇಷ ಸಂಹಾರವಾಗುತ್ತದೋ ಎಂಬ ಕಾತುರತೆ ಮೂಡಿಸುವಂತಹ ಆ ಕ್ರೌರ್ಯ ಆ ಪಾತ್ರಗಳಲ್ಲಿ ಅಭಿವ್ಯಕ್ತವಾಗಬೇಕಿದ್ದರೆ  ಪಾತ್ರಗಳು ನೈಜವಾಗಿ ಅವತಾರ ಎತ್ತಿದಂತೆ ಭಾಸವಾಗುತ್ತಿತ್ತು. ಭೂದೇವಿಯನ್ನು ಕಂಡ ಹಿರಣ್ಯಾಕ್ಷ ಅಟ್ಟ ಹಾಸ ಮೆರೆಯುವಾಗ ಭೂದೇವಿಯನ್ನು ರಕ್ಷಸುವುದಕ್ಕೆ ಮಹಾವಿಷ್ಣು ಯಾಕೆ ತಡಮಾಡುತ್ತಾನೆ ಎಂಬ ಕಾತರ ಸೃಷ್ಟಿಯಾಗುತ್ತಿತ್ತು. ಯಕ್ಷಗಾನದಲ್ಲಿ ದಂತ ಕಥೆ ಎನಿಸಲ್ಪಟ್ಟ  ಅಳಕೆ ರಾಮಯ್ಯ ರೈಗಳ ಶೈಲಿಯನ್ನು ಸಾಕಷ್ಟು  ಹೋಲುವ ಇವರ ವೇಷಗಾರಿಕೆ ಅವರನ್ನು  ಆ ರೈಗಳ ನಷ್ಟವನ್ನು ಈ ರೈಗಳು ತುಂಬಿಕೊಡುವ ಪ್ರಯತ್ನ ಕಾಣುತ್ತಿತ್ತು. 


ಬದಲಾದ ಕಾಲದಲ್ಲಿ ಯಕ್ಷಗಾನ ಸಾಕಷ್ಟು ಆವಿಷ್ಕಾರವನ್ನು ಕಂಡಿದೆ. ಮಾತು ಕುಣಿತಕ್ಕಿಂತಲೂ ಅಭಿನಯಕ್ಕೆ ಒತ್ತು ಕೊಡುವ ಇಂದಿನ ದೇಹದಂಡನೆಯ ನರ್ತನ ಶೈಲಿ ಯಕ್ಷಗಾನದ ಮೂಲ ಸ್ವರೂಪವನ್ನೇ ಬದಲಾಯಿಸಿದೆ. ಅದೆಷ್ಟು ಸರಿಯೋ ವಿಷಯವಲ್ಲ. ಇಂತಹ ಸಂಕೀರ್ಣ ಸ್ಥಿತಿಯಲ್ಲೂ ಸಂಪಾಜೆಯಂತಹ ಕಲಾವಿದರು ಅನಿವಾರ್ಯ ಎನಿಸಲ್ಪಡುತ್ತಾರೆ. ರಂಗದಿಂದ ಇವರ ನಿರ್ಗಮನವಾಗುತ್ತಿದ್ದಂತೆ ದೊಡ್ಡದೊಂದು ನಿಟ್ಟುಸಿರು ಪ್ರೇಕ್ಷಕನಿಂದ ಹೊಮ್ಮಿದರೆ ಅಚ್ಚರಿ ಪಡಬೇಕಿಲ್ಲ. ಅಂತಹ ಅದ್ಭುತ ಪ್ರತಿಭೆ ಇಲ್ಲಿದೆ. ಎಲ್ಲ ಅಂಗವೂ ಹಿತಮಿತವಾಗಿರುವ ಇವರ ಶೈಲಿ ಯಕ್ಷಗಾನದ ಉಸಿರಂತೆ ಭಾಸವಾಗುತ್ತದೆ. ನಿಜಕ್ಕಾದರೆ ಇವರ ಅನುಸರಣೆ, ಇವರ ಪ್ರೇರಣೆ ಇಂದಿನ ಕಾಲಕ್ಕೆ ಯಕ್ಷಗಾನಕ್ಕೆ ಅನಿವಾರ್ಯವಾಗಬೇಕಿತ್ತು. ಇವರ ಶಿಷ್ಯ ವರ್ಗ ವಿಶಾಲವಾಗಬೇಕಿತ್ತು. ಅದು ಯಕ್ಷಗಾನಕ್ಕೆ ಬಹಳ ದೊಡ್ಡ ಆಸ್ತಿಯನ್ನು ಹುಟ್ಟು ಹಾಕುತ್ತಿತ್ತು. ಅದೊಂದು ಬಗೆಯ ನಷ್ಟವಾದರೆ, ಈಗ ಇವರ ಅಗಲಿಕೆಯಿಂದ ಮತ್ತೊಂದು ಶೂನ್ಯತೆ ಒದಗಿ ಪರಂಪರೆಯ ಯಕ್ಷಗಾನಕ್ಕೆ ಮತ್ತೊಂದು ಹೊಡೆತ ಬಿದ್ದಿದೆ.  ಪರಂಪರೆಯ ಒಂದು ಕೊಂಡಿ ಕಳಚಿದೆ ಎಂದು ಸುಲಭವಾಗಿ ಹೇಳಬಹುದು. ಆದರೆ ಹಾಗೆ ಹೇಳುವಲ್ಲಿ ಅತ್ಮಾರ್ಥ  ಪ್ರಾಮಾಣಿಕತೆ ತೋರಬೇಕಿದ್ದರೆ ಅವರು ಬೆಳೆದು ಬಂದ ರೀತಿಯನ್ನು, ಅವರ ವೇಷಗಾರಿಕೆಯನ್ನು ಅನುಸರಿಸುವ ಮನಸ್ಸು ಇಂದಿನವರು ಮಾಡಬೇಕು. ಹಾಗಿದ್ದರೆ ಮಾತ್ರ ಅವರ ನಷ್ಟದ ಸಂತಾಪಕ್ಕೆ ಒಂದು ಅರ್ಥ ಬಂದೀತು. 


ಸಂಪಾಜೆಯ ಶೀನಪ್ಪ ರೈಗಳ ವೇಷ  ರಂಗದಲ್ಲಿ ನೋಡುವುದಕ್ಕಿಲ್ಲ ಎಂಬುದು ಒಂದ ಅಸಹನೆಯನ್ನು ಉಂಟು ಮಾಡುತ್ತದೆ.  ರೈಗಳು ವೇಷ ಮುಗಿಸಿದ್ದಾರೆ.  ಸಂಪಾಜೆ ಬದುಕಿನ ವೇಷ ಕಳಿಚಿಯಾಗಿದೆ.  ಅವರ ವೇಷಗಳನ್ನು ಈ ಯಕ್ಷಗಾನ ರಂಗಸ್ಥಳ ಮರೆಯುವುದಕ್ಕಿಲ್ಲ. ಇದು ಇಂದು ಸತ್ಪ್ರೇರಣೆಯಾಗಿ ಒದಗಲಿ.  ಅವರ ಆತ್ಮಕ್ಕೆ ಆ ನಿಟ್ಟಿನಲ್ಲೂ ಶಾಂತಿ ಒದಗಲಿ ಇದೇ ಮನದಾಳದ ಹಾರೈಕೆ.