ಪ್ರತೀ
ವರ್ಷವೂ ಉದಯವಾಣಿ ಪತ್ರಿಕೆಯಲ್ಲಿ ಧರ್ಮಸ್ಥಳ ಮೇಳದ ಆಟದ ಸವಿವರ
ಪ್ರಕಟವಾಗುತ್ತದೆ. ಈ ಸಲದ ಪ್ರಕಟನೆಯನ್ನು
ಕಾಣುವಾಗ ಮನಸ್ಸು ಒಂದಿಷ್ಟು ಭಾರವದದ್ದು ಸತ್ಯ. ಮೊದಲು ಧರ್ಮಸ್ಥಳದ ಮೇಳ ಊರಿಗೆ ಬಂದಾಗ
ಮೈಕು ಕಟ್ಟಿದ ಜೀಪು ರಸ್ತೆಯೆಲ್ಲ
ಕರಪತ್ರವನ್ನು ಚೆಲ್ಲಿ ಹೋದಾಗ ಸಂಭ್ರಮದಿಂದ ಕೈಗೆತ್ತಿಕೊಳ್ಳುವುದಿತ್ತು. ಅದರಲ್ಲಿದ್ದ
ಕಲಾವಿದರ ಹೆಸರು ಬಾಯಿಪಾಠ ಮಾಡಿಕೊಳ್ಳುವವರೆಗೂ ಆಟದ ಚಟ ಅಂಟಿಕೊಂಡಿತ್ತು.
ಹಾಗಾಗಿ ಧರ್ಮಸ್ಥಳದ ಮೇಳದ ಆಟ ಎಂದರೆ
ನಮಗೆ ಮಕ್ಕಳಿಗೆ ಯಕ್ಷಗಾನದ ಮಾದರೀ ಸಂಹಿತೆ ತೆರೆದಂತೆ. ಉದಯವಾಣಿಯಲ್ಲಿ
ಬರುತ್ತಿದ್ದ ಆಟದ ವಿವರ ನಮ್ಮೂರ
ಅಂಗಡಿಯ ಗೋಡೆಗೆ ಅಂಟಿಸುತ್ತಿದ್ದರು. ಇವತ್ತು ಎಲ್ಲಿ ಆಟ ಅಂತ ನೋಡುವುದು,
ನಮ್ಮೂರಲ್ಲಿ ಈವರ್ಷ ಇದೆಯೋ ಇಲ್ಲವೋ, ಇದ್ದರೆ
ಮರುದಿನ ರಜಾ ದಿನವೋ ಅಂತ
ಲೆಕ್ಕ ಹಾಕುತ್ತಿದ್ದೆವು. ಎಲ್ಲದಕ್ಕಿಂತ ಮೊದಲು ಅದರಲ್ಲಿದ್ದ ಕಲಾವಿದರ ವಿವರ ಓದುವುದು.
ನಾನು ಗೋವಿಂದ ಭಟ್ಟರನ್ನು
ಮೆಚ್ಚಿಕೊಂಡದ್ದು ಅವರ ವೇಷವನ್ನು ಕುಣಿತವನ್ನು
ನೋಡಿಯಲ್ಲ. ಯಾಕೋ ಅವರನ್ನು ಇಷ್ಟ
ಪಡುವುದರಲ್ಲಿ ಯಕ್ಷಗಾನ ಒಂದು ವಿಷಯವೇ ಅಲ್ಲ
ಅಂತನ್ನಿಸುತ್ತದೆ. ಯಕ್ಷಗಾನದಲ್ಲಿ ಇವರನ್ನು ಇಷ್ಟ
ಪಡದೇ ಇರುವ ಹಲವು ಸಂಗತಿಗಳು
ಇವೆ. ಇಷ್ಟಪಡುವ ಸಂಗತಿಗಳೂ ಇವೆ. ನಾನು
ಹಲವು ಯಕ್ಷಗಾನದ ಹಿರಿಯ ಕಲಾವಿದರನ್ನು ಹತ್ತಿರದಿಂದ ಕಾಣುತ್ತೇನೆ. ಹಲವರನ್ನು ಕಂಡಾಗ ಯಕ್ಷಗಾನವನ್ನೇ ಕಂಡ ಅನುಭವವಾಗುತ್ತದೆ. ಯಕ್ಷಗಾನವಲ್ಲದೇ
ಬೇರೇನೂ ಇಲ್ಲ ಎಂಬಂತಹ ಅನುಭವವಾಗುತ್ತದೆ.
ಇವರನ್ನು ಕಾಣುವಾಗ ನನಗೆ ಆ ಅನುಭವ
ಆಗುವುದಿಲ್ಲ. ಹಾಗಾಗಿ ನಾನು ದೃಷ್ಟಿಯಲ್ಲಿ ಕಾಣುವುದೂ
ಇಲ್ಲ. ಅದಕ್ಕೆ ಕಾರಣ ಇವರಲ್ಲಿರು ಗೌರವ.
ಯಕ್ಷಗಾನದ ಬಗ್ಗೆ ಹೇಳಿದರೆ ಇದೊಂದು ವಿಮರ್ಶೆಯಾಗಬಹುದು. ಇದು ವಿಮರ್ಷೆಯಲ್ಲ. ಇದು
ಕೇವಲ ಅನುಭವ ಅನಿಸಿಕೆಗಳು.
ಮೊನ್ನೆ ಮೊನ್ನೆ ಅವರು ಹೇಳಿದ್ದಿದೆ, ನಾನು
ಯಕ್ಷಗಾನಕ್ಕೆ ಬಯಸಿ ಬಂದವನಲ್ಲ.
ಕಲೋಪಾಸಕನಾಗಿ ಬಂದೆ. ಕಲೋಪಾಸನೆ
ಎಂಬ ಪುಸ್ತಕದಲ್ಲೂ ಅವರು ಇದನ್ನೇ ಹೇಳಿದ್ದರು.
ಈ ನನ್ನ ಮೆಚ್ಚಿಕೆಯೂ ಸರಿ
ಸುಮಾರು ಅದೇ ಭಾವದಲ್ಲಿ ಇದೆ
ಅಂತ ನನ್ನ ಅನಿಸಿಕೆ.
ಯಾಕೆಂದರೆ ಯಕ್ಷಗಾನ ಅವರಿಗೆ ಕಲೆಯಿಂದ ಬಯಸದೇ ಇದ್ದರೂ ವೃತ್ತಿಯಲ್ಲಿ
ಅದನ್ನು ಅನುಭವಿಸಿದರು. ಇಷ್ಟವನ್ನು ಬದಿಗಿಟ್ಟು ಅದನ್ನು ಬಹಳ
ಶ್ರದ್ಧೆಯಿಂದಲೇ ನೋಡಿದರು. ನಾನು
ಮೆಚ್ಚಿಕೊಂಡದ್ದು ಆ ಶ್ರದ್ದೆಯನ್ನು. ಯಕ್ಷಗಾನ
ದ್ವಿತೀಯ ವಿಷಯವಾಗಿ ಅವರಲ್ಲಿ ನಾನು ಕಾಣುತ್ತೇನೆ. ಬಹುಶಃ
ಯಕ್ಷಗಾನವನ್ನು ಅವರು ತೀವ್ರವಾಗಿ ಬಯಸಿಕೊಂಡು
ಬಂದಿದ್ದರೆ, ಅದು ಪ್ರಮುಖ ಆದ್ಯತೆಯಾಗಿದ್ದರೆ
ಬಹುಶಃ ಇಂದು ಅವರ ಬಗೆಗಿನ
ವಿಮರ್ಶೆಗೆ ಅವಕಾಶವೇ ಇರುತ್ತಿರಲಿಲ್ಲ.
ಒಬ್ಬ
ವ್ಯಕ್ತಿಯಾಗಿ ಇವರು ಬಹಳ ಇಷ್ಟವಾಗುತ್ತಾರೆ. ಅವರ
ಸಾಧನೆ ಕೌತುಕದ ವಿಷಯವಾಗುತ್ತದೆ. ಇಂದಿಗೂ ನಂಗೆ ಕರೆ ಮಾಡಿ
ಮಾತನಾಡುತ್ತಾರೆ. ಆ ಆತ್ಮೀಯತೆ. ಆ
ಸರಳತೆ ಇಷ್ಟವಾಗುತ್ತದೆ. ದಶಕದ ಮೊದಲಿನ ಗೋವಿಂದ
ಭಟ್ಠರಿಗೂ ಈಗಿನ ಗೋವಿಂದಣ್ಣನಿಗೂ ವೆತ್ಯಾಸವೇ
ಇಲ್ಲ. ಎಷ್ಟೋ ಸಲ ನಾನೇ ಹೇಳಿದ್ದೆ
ಇನ್ನೂ ಯಾಕೆ ವೇಷ ಮಾಡ್ತೀರಾ?
ಆಗ ಕಿರು ನಗುವಷ್ಟೇ ಉತ್ತರ. ಒಂದು
ಸಲ ಕರೆ ಮಾಡಿ ಹೇಳಿದ್ದರು,
ಕಣ್ಣ ದೃಷ್ಟಿ ಕಡಿಮೆಯಾಗಿದೆ. ನೋಡಿದರೆ ಪರಿಚಯವೇ ಸಿಗುವುದಿಲ್ಲ. ರಂಗಸ್ಥಳದ ಲೈಟು ಬಹಳ ಫ್ರಖರ.
ಅದನ್ನು ಕಡಿಮೆ ಮಾಡಬೇಕು.ಇಲ್ಲದಿದ್ದರೆ ಕಲಾವಿದರ ಕಣ್ಣು ಉಳಿಯುವುದಿಲ್ಲ. ಹೌದು, ನಾವು ವೇಷ ಕಾಣಬೇಕು
ಅಂತ ಲೈಟು
ಹೆಚ್ಚಿಸುತ್ತಾ ಹೋಗುತ್ತೇವೆ. ಆದರೆ ಕಲಾವಿದ ಜಗತ್ತನ್ನು
ಕಾಣಬೇಕೆಂಬ ಪ್ರಜ್ಞೆ ನಮ್ಮಲ್ಲಿ ಇಲ್ಲ.
ಅವರ ಶ್ರದ್ಧೆಯಬಗ್ಗೆ ಹೇಳುವುದಿದ್ದರೆ
ಹಲವು ವಿಷಯಗಳು ಸಿಗುತ್ತವೆ. ಧರ್ಮಸ್ಥಳ ಮೇಳದ ಇತಿಹಾಸ ತೆರೆದು
ನೋಡಿದರೆ ಅದಕ್ಕ ಹಲವು ಪುರಾವೆಗಳು ಸಿಗುತ್ತವೆ.
ಮೊದಲೆಲ್ಲ ಬೇರೆ ಮೇಳೆದಲ್ಲಿ ಸಾಮಾಜಿಕ
ಅಂದರೆ ಪೌರಾಣಿಕ ಅಲ್ಲದೇ ಇದ್ದ ಹೊಸ ಪ್ರಸಂಗಗಳು
ಪ್ರತಿವರ್ಷವೂ ಇರುತ್ತಿತ್ತು. ಆಗ ಧರ್ಮಸ್ಥಳ ಮೇಳದಲ್ಲಿ
ಹೊಸ ಹೊಸ ಪೌರಾಣಿಕ ಪ್ರಸಂಗಗಳು
ಪ್ರತಿವರ್ಷವೂ ಇದ್ದು ಮೇಳದ ಪ್ರವಾಸ ಅತ್ಯಂತ
ಉತ್ಕೃಷ್ಟವಾಗಿರುತ್ತಿತ್ತು.
ಪ್ರಸಂಗಕರ್ತರಾದ ಅಮೃತ ಸೋಮೇಶ್ವರ, ರಾಘವ
ನಂಬಿಯಾರರು ಬರೆದ ಪ್ರಸಂಗಗಳು ಮೇಳದ
ಯಶಸ್ವೀ ಪ್ರಸಂಗಗಳಾಗಿ ಪ್ರದರ್ಶನ ಗೊಂಡವು. ಇಂದು ಆ ಪ್ರಸಂಗಗಳನ್ನು
ಬೇರೆ ಮೇಳಗಳು ಆಡಿದರೂ ಧರ್ಮಸ್ಥಳ ಮೇಳದ ಆ ಪ್ರದರ್ಶನಗಳಿಗೆ
ಹೋಲಿಸಿದರೆ ಪೇಲವವಾಗಿಬಿಡುತ್ತದೆ. ಅದಕ್ಕೆ ಕಾರಣವಾಗಿ ಗೋವಿಂದ ಭಟ್ಟರ ಪಾತ್ರವೂ ಇದೆ. ಹೊಸ ಪ್ರಸಂಗಗಳು
ಬಂದಾಗ ಪಾತ್ರವಿಂಗಡನೆಯಾದಾಗ ಮೇಳದ ಪ್ರಮುಖ
ಮೂರು ಕಲಾವಿದರಲ್ಲಿ ಕೇಂದ್ರೀಕೃತವಾಗುತ್ತಿತ್ತು. ಯಾಕೆಂದರೆ ಇವರಲ್ಲಿ ಒಬ್ಬರಲ್ಲ ಒಬ್ಬರು ರಂಗದ ಮೇಲೆ ಇರುತ್ತಿದ್ದರು.
ಸನ್ನಿವೇಶ ಪ್ರಸಂಗ ನಡೆಯೇ ಹಾಗಿರುತ್ತಿತ್ತು. ಕಡತೋಕ ಭಾಗವತರ ಚಾಣಾಕ್ಷತೆ ಅದು. ಆ ಮೂರು
ಕಲಾವಿದರಲ್ಲಿ ಒಬ್ಬರು ಕುಂಬಳೆ ಸುಂದರಾವ್ ಆದರೆ ಇನ್ನೊಬ್ಬರು ಪುತ್ತೂರು
ನಾರಾಯಣ ಹೆಗ್ಗಡೆಯವರು. ಇವರೊಂದಿಗೆ ಗೋವಿಂದ ಭಟ್ಟರು ಒಬ್ಬರಾಗಿದ್ದರು. ಉಳಿದಿಬ್ಬರು ವಯೋಮಿತಿಯಿಂದ ಮತ್ತು ಪ್ರವೃತ್ತಿಯಿಂದ ಹೆಚ್ಚು ಕುಣಿತಗಾರರಲ್ಲ. ಆದರೆ ಗೋವಿಂದ ಭಟ್ಟರು
ಎಲ್ಲವನ್ನು ಅವಾಹನೆ ಪಡೆದು ಮೂವರಲ್ಲಿ ಒಬ್ಬರಾಗಿ ಮಿಂಚಿದರು. ಇವರಿರುವಷ್ಟು ಹೊತ್ತು ರಂಗಸ್ಥಳದಲ್ಲಿ ಮಿಂಚು ಹರಿಯುತ್ತಿತ್ತು.


