ಹೊಳ್ಳರ ಮತ್ತು ಅಮ್ಮಣ್ಣಾಯರ ದ್ವಂದ್ವ ಹಾಡುಗಾರಿಕೆಯ ಯಾವುದೋ ಕಾರ್ಯಕ್ರಮದ ಧ್ವನಿಮುದ್ರಣವನ್ನು ಕೇಳುತ್ತಿದ್ದೆ. ಎರಡೂ ವಿಬ್ಭಿನ್ನ ಶೈಲಿಯ ಕಲಾವಿದರ ಪ್ರೌಢಿಮೆಗೆ ಸಾಕ್ಷಿಯಾದಂತೆ ಹಲವು ಪದಗಳ ಅಲಾಪನೆಗಳು ತಲ್ಲೀನಾನಾಗುವಂತೆ ಮಾಡುತ್ತಿದ್ದವು.ಒಂದು ಲಯ ಬೋರ್ಗರೆದು ಧುಮ್ಮಿಕ್ಕುವ ರಭಸದ ಜಲಪಾತದ ಧಾರೆ. ಹರಿದು ಧುಮ್ಮಿಕ್ಕುವ ನೀರಿಗೆಅರಿವಿಲ್ಲ ಆಳ ಗಮ್ಯ ಯಾವುದೆಂದು. ಆದರೆ ಹೊಳ್ಳರ ಭೋರ್ಗರೆವ ಜಲಧಾರೆಯಂತಹ ಸ್ವರದ ಆಳದ ಮತ್ತು ಗಮ್ಯದ ಅರಿವು ಇಲ್ಲ ಎಂದು ಹೇಳಲಾಗದಿದ್ದರೂ ಆ ರಭಸಕ್ಕೆ ಸಿಕ್ಕಿ ನಮ್ಮ ಮನಸ್ಸಿನ ಭಾವನಾತ್ಮಕ ಪ್ರಪಂಚ ಮಾತ್ರ ಸುಂದರ ತಾಣವಾಗಿಬಿಡುತ್ತದೆ. ಇನ್ನು ತಣ್ಣನೆಯ ಮಂದಗಮನೆಯ ಮಂದಾಕಿನಿಯ ಹರಿವು ಇದೇ ಎನೋ ಎಂದು ಭ್ರಮಿಸುಂತೆ, ಆ ಸಂಗೀತದ ಅಲೆಗೆ ಸಿಕ್ಕಿ ತಮ್ಮ ಮನಸ್ಸು ಕೊಚ್ಚಿ ಹೋಗದಂತೆ ತಡೆಯುವ ವ್ಯರ್ಥ ಪ್ರಯತ್ನವನ್ನೇನೋ ಮಾಡುತ್ತ ತನ್ನಲ್ಲೇ ಐಕ್ಯವಾಗುವ ಹೊತ್ತಿಗೆ, ಚಿರಸ್ಥಾಯಿಯಾಗಿ ನಿಲ್ಲುವ ಈ ಕಲೆಗೆ ಅಂತ್ಯವಿಲ್ಲ ಎಂದು ಮನಸ್ಸು ನುಡಿಯಿತು. ಆದರೂ ಒಂದು ಗಾಬರಿ, ಏನು?
ಯಕ್ಷಗಾನ ಕಲೆಯ ಹಿಮ್ಮೇಳ ಲೋಕದ ಸದ್ಯ ಆಧಾರ ಸ್ತಂಭಗಳು ನಾಲ್ಕು. ಬಲಿಪ್ಪ,ಪದ್ಯಾಣ,ಹೊಳ್ಳ, ಅಮ್ಮಣ್ಣಾಯ,ಪ್ರತಿಯೊಂದು ಸ್ತಂಭಗಳು ಅತೀ ಪರಿಶ್ರಮದ ಫಲದಿಂದ ನಿರ್ಮಿತವಾಗಿ ಸಮಗ್ರ ಕಲೆಯನ್ನೆ ಆಧರಿಸಿ ಇಂದು ನಿಂತಂತೆ ಭಾಸವಾದರೆ ಅದು ಇವರ ಅನಿವಾರ್ಯತೆಯನ್ನು ಸಾರುತ್ತಿವೆ. ಇಂದು ಯಾವುದೇ ಪೌರಾಣಿಕ ಪ್ರಸಂಗವಾಗಲಿ ಅದನ್ನು ಸಮರ್ಥವಾಗಿ ತಮ್ಮದೆ ರೀತಿಯಲ್ಲಿ ಆಡಿಸಬಲ್ಲ ಸಾಮಾರ್ಥ್ಯ ಇವರಲ್ಲಿದೆ. ಆದರೆ ಇಂದು ಗಾಬರಿ ಪಡುವ ಸಂಗತಿಯೊಂದು ಇದೆ. ಏನು? ಇಂದು ಇವರಂತೆ ಸಾಮಾರ್ಥ್ಯವನ್ನು ತೋರ್ಪಡಿಸುವ ಕಲಾವಿದರು ಹೊಸತಲೆಮಾರಿನಲ್ಲಿ ಗೋಚರಿಸದೆ ಇರುವುದು ಗಾಬರಿ ತರುವ ಸಂಗತಿಯಲ್ಲವೆ. ಯಾವುದೇ ಪ್ರಸಂಗವನ್ನು ಸಮರ್ಥ ನೇತ್ರ್ ತ್ವ ನೀಡಿ ಮುನ್ನಡೆಸುವ ಇವರಂತೆ ಸಮರ್ಥರು ಯಾರಿದ್ದಾರೆ ? ಇದು ಗಾಬರಿ ಪಡುವ ಸಂಗತಿಯಲ್ಲವೇ?
ಹಿರಿಯ ಬಲಿಪ್ಪರಾಗಲಿ, ಹೊಳ್ಳರಾಗಲಿ ಅಥವಾ ಅಮ್ಮಣ್ಣಾಯ ಪದ್ಯಾಣರೇ ಆಗಲಿ ತಮ್ಮದೇ ಶಿಷ್ಯವರ್ಗ ಹೊಂದಿದ್ದರೂ ಅವರಲ್ಲಿ ಇಂದು ಸಮರ್ಥ ಉತ್ತರಾಧಿಕಾರಿಯನ್ನು ಹೊಂದಿರುವರೇ ಎಂಬ ಪ್ರಶ್ನೆಗೆ ಉತ್ತರ ಹುಡುಕುವಾಗ ಗಾಬರಿಯಾಗುತ್ತದೆ. ಕಲೆ ಎಂಬುದು ದೈವದತ್ತ ಹಾಗು ಸ್ವ ಪರಿಶ್ರಮದಿಂದ ಸಿದ್ದಿಸುವಂತಹುದು. ಇದರಲ್ಲಿ ಮೊದಲಿನದ್ದು ನಮ್ಮೆಣಿಕೆಯಲ್ಲವಾದರೆ ನಂತರದ ಪರಿಶ್ರಮ ತೋರುವ ಮನೋಭಾವವೇ ಅಪರೂಪವಾಗಿದೆ. ಕೇವಲ ಕಣ್ಣು ಮುಚ್ಚಿ ಮುಂಚೂಣಿಯವನ ಮೇಲೆ ಅವಲಂಬಿತನಾಗಿಯೋ, ವಿಶ್ವಾಸದಿಂದಲೊ ಕೇವಲ ಹಿಂಬಾಲಿಸುವುದಷ್ಟೇ ಇಂದಿನ ಕಲಾವಿದರಲ್ಲಿ ಕಾಣಬಹುದು. ಮತ್ತು ಇದು ಸುಲಭವಾಗಿ ತೃಪ್ತಿ ಪಡುವ ಸುಲಭಮಾರ್ಗವೂ ಹೌದು.
ಇಂದಿನ ಪೀಳಿಗೆಯ ಯುವ ಕಲಾವಿದರಲ್ಲಿ ಕೆಲವೊಮ್ಮೆ ಒಂದು ಬಗೆಯ ಕುರುಡುತನ ಮತ್ತು ಅನುಕರಣೆ ಕಂಡಾಗ , ಒಂದು ಸಲ ಧರಿಸಿದ ಚಿಂದಿಯಾದ ಬಟ್ಟೆಯನ್ನು ಕಲಾಮಾತೆ, ತೇಪೆ ಹಾಕಿ ಪುನಃ ಧರಿಸಲು ಪ್ರಯತ್ನಿಸಿದಂತೆ ಭಾಸವಾಗುತ್ತದೆ. ಆಷ್ಟೂ ಕುರುಡು ಅನುಕರಣೆ. ತಮ್ಮ ಅಭಿಮಾನದ ಹಿರಿಯ ಕಲಾವಿದರನ್ನು ಅನುಕರಿಸುವಾಗ ಯಾವುದು ಯೋಗ್ಯವೋ, ಯಾವುದು ಅನುಕರಿಸಲ್ಪಡಬೇಕೋ ಅದನ್ನು ಅನುಸರಿಸದೆ ಇನ್ನಾವುದೋ ಅನುಕರಣೆ ಮಾಡಿ ತಮ್ಮ ಅಭಿರುಚಿಯ ಮಟ್ಟ ಪ್ರದರ್ಶಿಸುವಾಗ ಗಾಬರಿಯಾಗಿ ಬಿಡುತ್ತದೆ.ಪ್ರತಿಯೋರ್ವರ ಅಭಿರುಚಿ ಪ್ರತ್ಯೇಕವಾಗಿದ್ದರೂ ಅರ್ಥವಿಲ್ಲದ ಅಭಿರುಚಿ ಗಾಬರಿ ಹುಟ್ಟಿಸುತ್ತದೆ.ಒಬ್ಬ ಕಲೆ ಯಲ್ಲಿ ಒಬ್ಬರಿಂದ ಒಬ್ಬರಿಗೆ ಅನುಕರಣೆ ಸಾಮಾನ್ಯವಾಗಿ ಕಂಡುಬರುವ ಅಂಶವಾದರೂ, ಕಲೆಯ ಶೈಲಿಯನ್ನು ಅನುಕರಿಸುವುದರಲ್ಲಿ ಅಸಹಜ ಕಾಣುವುದಿಲ್ಲ. ಆದರೆ ಅನುಕರಣೆ ಸಮರ್ಥವಾಗಿದ್ದರೆ ಅದು ಆಭಾಸವೂ ಅಗುವುದಿಲ್ಲ. ಇದು ನವಿಲು ಕುಣಿತ ಕಂಡು ಕಾಗೆ ಕುಣಿದಂತೆ ಆದರೆ ಹೇಗೆ? ಆನೆಯನ್ನು ನೋಡಿ ಕೋಣ ಅನುಕರಿಸಿದಂತೆ. ಆನೆ ತನ್ನ ದಾಡೆಯಲ್ಲಿ ತಿವಿದಾಗ ಇದು ತನ್ನ ಕೊಂಬಿನಲ್ಲಿ ತಿವಿಯಲು ಹೋಯಿತಂತೆ ಆಗ ಅದಕ್ಕೆ ಅರಿವಿಗೆ ಬಂದದ್ದು ತನ್ನದು ಹಿಮ್ಮುಖವಾಗಿದೆ ಎಂದು.
ಇಂದು ಈ ಅನುಕರಣೆಯೇ ಪ್ರಧಾನವಾಗಿದೆ. ಒಬ್ಬ ಭಾಗವತ ಒಂದು ಪದವನ್ನು ಒಂದು ಸ್ವರ ಸ್ಥಾಯಿಯಲ್ಲಿ ಅನುಸರಿಸಿ ಹಾಡುತ್ತಿದ್ದರೆ ಅದನ್ನು ಅನುಕರಿಸಿದರೆ ಅದು ಒಂದು ಕಲೆಯೆಂದು ತಿಳಿಯಬಹುದು. ಮೂಲ ಅನುಕರಣೆಯಂತೆ ಕಂಡರೂ ತನ್ನದಾದ ರೀತಿಯನ್ನು ಸೇರಿಸಿ ಸ್ವ ಸಾಮಾರ್ಥ್ಯದಿಂದ ಹೊಸ ರೂಪದಲ್ಲಿ ಹಾಡಿದರೆ ಅದನ್ನು ನಿಜವಾದ ಕಲೆಯೆಂದು ಮನ್ನಣೆ ಕೊಡುವಲ್ಲಿ ಗಾಬರಿಯಾಗುವುದಿಲ್ಲ.
ಮಗು ಎಳವೆಯಲ್ಲಿ ತನ್ನ ಹಿರಿಯನ್ನು ಅನುಕರಿಸಿಯೇ ಬೆಳೆಯುತ್ತ ಅಪ್ಪನಂತೆಯೋ ಅಮ್ಮನಂತೆಯೊ ಹಲವು ವಿಷಯಗಳಲ್ಲಿ ಅನುಕರಿಸಿ ತನ್ನದೇ ಒಂದು ಶೈಲಿಯನ್ನು ರೂಡಿಸಿಕೊಳ್ಳುತ್ತಾ ಆ ಶೈಲಿಗೆ ತಾನೆ ಒಡೆಯನಾಗಿಬಿಡುವುದು ಸಾಮಾನ್ಯ.
ಒಬ್ಬ ಕಲಾವಿದನ ಶ್ಶಲಿಯನ್ನು ಆತನಂತೆ ಹಿಂಬಾಲಿಸುವಲ್ಲಿ ತಾನು ಅಸಮರ್ಥನಾದಾಗ, ಆತನಂತೆ ಕಲೆಯನ್ನು ತೋರುವಲ್ಲಿ ಅಸಫಲನಾದಾಗ ಅವನ ಮಿಕ್ಕುಳಿದ ಶೈಲಿಯನ್ನು ಅನುಕರಿಸುವದರಲ್ಲಿ ತೃಪ್ತಿಪಟ್ಟು ತನ್ನನ್ನು ಆತನಲ್ಲಿ ಹೋಲಿಸಿಕೊಳ್ಳುವುದು ತೀರಾ ಹಾಸ್ಯಾಸ್ಪದವಾಗಿಬಿಡುವುದು.
ತನ್ನ ಮೆಚ್ಚಿನ ಕಲಾವಿದ ವೇಶ ತೊಟ್ಟು ಅಂಗೈಯಲ್ಲಿ ಮಿರಿ ಮಿಂಚುವ ಕರವಸ್ತ್ರ ಹಿಡಿದುಕೊಂಡು ರಂಗ ಪ್ರವೇಶ ಮಾಡಿದರೆ, ಈತನೂ ಅದರಂತೆ ಅನುಕರಿಸುವುದು, ಹಿರಿಯ ಭಾಗವತರೊಬ್ಬರನ್ನು ಅನುಕರಿಸುವುದು ಯಾವ ರೂಪದಲ್ಲಿ ಇದೆ ಎಂದರೆ, ಆತ ಧರಿಸಿದ ರೀತಿಯಲ್ಲೇ ಶಾಲು ಹೊದ್ದುಕೊಳ್ಳುವುದು, ಅವಾಗವಾಗ ತೊಟ್ಟ ಅಂಗಿಯನ್ನು ಆತನಂತೇ ಸರಿ ಮಾಡಿಕೊಳ್ಳುವುದು, ಆ ಹಿರಿಯ ಭಾಗವತ ಅಗಾಗ ನಿಂತುಕೊಂಡು ಪದ ಹೇಳಿದರೆ ಈತನೂ ಅದೇ ರೀತಿ ನಿಂತುಕೂಳ್ಳುವುದು, ಹಾಗೆ ಹಿರಿಯರು ಅಗಾಗ ವೇದಿಕೆ ಹಿಂಭಾಗಕ್ಕೆ ಹೋಗಿ ನೇತು ಹಾಕಿದ ಪರದೆ ಸರಿಸಿ ಚೌಕಿಯಲ್ಲಿ ಇಣುಕಿ ನೋಡಿದರೆ , ಇವರು ಹೀಗೆ ಕಲಾವಿದರಿಗೆ ನಿರ್ದೇಶನ ಕೊಡುತ್ತಿದ್ದರೆ,ಈತನು ಆಗಾಗ ವಿನಾ ಕಾರಣವಾಗಿ ಅದೆ ಶೈಲಿಯಲ್ಲಿ ಒಳಗೆ ಇಣುಕುವುದು ಈತನ ಇಣುಕುವಿಕೆಗೆ ಯಾರೂ ಪ್ರಾಮುಖ್ಯತೆ ಕೊಡದಿದ್ದರೂ ಹಿರಿಯ ಭಾಗವತನ ಹಾಗೆ ಒಂದು ಘಳಿಗೆಯ ಅವಧಿಗಾದರೂ ತಾನಾದೆ ಎಂಬ ಅಲ್ಪತೃಪ್ತಿ. ತನ್ನ ಅಭಿಮಾನಧನ ಕಲಾವಿದ ತಲೆಯುನ್ನೋ ಕೂದಲನ್ನೊ ಸರಿ ಮಾಡಿಕೊಂಡರೆ ಈತನೂ ಚಾಚು ತಪ್ಪದೇ ಅದೇ ರೀತಿ ಅನುಕರಿಸಿ, ಕೊನೆಗೆ ಮೈ ಮೇಲೆ ಹುಣ್ಣಾಗಿ ತುರಿಕೆ ಯುಂಟಾಗಿ ಹಿರಿಯ ಭಾಗವತ ತುರಿಸಿಕೊಂಡರೆ ಈತನೂ ಅದೇ ರೀತಿ ಕೆರೆದು ಕೊಳ್ಳುವುದು.. ಇದೆಲ್ಲ ಸತ್ಯವಾಗಿಯೂ ಗಾಬರಿ ಹುಟ್ಟಿಸುತ್ತದೆ.
ಈ ರೀತಿ ಅಸಹಜ ಹಿಂಬಾಲಕನಾಗುವುದು ಬಿಟ್ಟು ತನಗೊಲಿದ ಕಲೆಯ ಉನ್ನತಿಯತ್ತ ಗಮನ ಹರಿಸುವ ಕಲಾವಿದರ ಸಂಖ್ಯೆ ತುಂಬಾ ಕ್ಷೀಣ. ಕಲೆಯಲ್ಲಿ ತನ್ನನ್ನು ತಾನು ಅರ್ಪಿಸಿಕೊಂಡು ಕಲೆಗೆ ತಾನು ಕೊಟ್ಟು ಮತ್ತು ಪಡಕೊಂಡು ನಿರಂತರ ಸಾಧಕನಾಗುವ ಕಲಾವಿದ ಸಹಜವಾಗಿ ಕಲಾಜೀವನವನ್ನು ಅಸ್ವಾದಿಸಬಲ್ಲ.
ಅನೇಕ ಹಿರಿಯ ಕಲಾವಿದರು ಒತ್ತಿದ ಛಾಪು ಅವರ ನಂತರದ ಪೀಳೀಗೆಗಳಲ್ಲಿ ಆ ಗುಣಮಟ್ಟ ಉಳಿಯದೆ ಹಳೆಯದನ್ನೇ ಮೆಲುಕು ಹಾಕುವ ..ಇದೆಂಥದು ..ಅದು ನೋಡಬೇಕಿತ್ತು ಎನ್ನುವ ಮಾತೆ ಸಾರ್ವತ್ರಿಕವಾಗಿದೆ. ಕಾಲ ಸರಿದಂತೆ ಕಡಿಮೆಯಾಗುವ ಗುಣಮಟ್ಟ ಮತ್ತು ಇದರ ಈ ಇಳಿಯುವಿಕೆಯ ಅವರೋಹಣ ಇಳಿದಿಳಿದು ಇನ್ನು ಯಾವ ಮಟ್ಟ ತಲಪಬಹುದು ಎಂದು ಕಲ್ಪಿಸುವಾಗ ಗಾಬರಿಯಾಗದೆ ಇದ್ದೀತೆ?
ಮೈಸೂರಲ್ಲಿ ಕಳೆದ ಬಾರಿ ಒಂದು ಯಕ್ಷಗಾನ ಬಯಲಾಟ ನಡೆಯಿತು. ಹಿರಿಯ ಭಾಗವತರ ಜತೆ ಇನ್ನಿಬ್ಬರು ಯುವ ಭಾಗವತರು ಇದ್ದರು. ಅಂದು ಅಪರೂಪದ ಪ್ರಸಂಗ “ಸಂಜಯ ರಾಯಭಾರ” . ಇದರಲ್ಲಿ ಸಂಪ್ರದಾಯದಂತೆ ಪಾಂಡವರ ಒಡ್ಡೋಲಗ ಮಾಡುವಲ್ಲಿ ಯುವ ಭಾಗವತರಲ್ಲಿ ಒಬ್ಬರು ಹಿಂಜರಿದು ಮತ್ತೊಬ್ಬರು ಪೂರ್ವ ನಿಗದಿಗಿಂತ ಬದಲಿಸಿ ಮೊದಲೇ ಭಾಗವತಿಕೆಗೆ ಕುಳಿತುಕೊಳ್ಳುವ ಸಂದರ್ಭ ಬಂತು. ಯುವಕರು ತನ್ನಿಂದ ಅಸಾಧ್ಯವೆಂದು ಪ್ರಾಮಾಣಿಕತೆ ಯಿಂದ ದೊಡ್ಡ ಗುಣ ಮೆರೆದರೂ, ಕಲೆಯ ಬಗ್ಗೆ ಯೋಚನೆ ಮಾಡುವಾಗ ಗಾಬರಿಯಾಗದೇ ಇದ್ದೀತೆ?
ಕಲಾವಿದನಿಗೆ ಕಲಿಯುವಲ್ಲಿ ಸೀಮಿತ ಪರಿಧಿ ಅರಿವಿಲ್ಲದೇ ಬೆಳೆದು ಬಿಟ್ಟಿದೆ. ಈಗಿನ ವೃತ್ತಿ ರೀತಿಗೆ ಇಷ್ಟು ಸಾಕು ಎಂಬ ಧೋರಣೆ, ಎಲ್ಲದರಲ್ಲು ಒಂದು ರೀತಿ ಅಸಡ್ಡೇ ಮನೋಭಾವ ಇಷ್ಟಕ್ಕೆ ಇಷ್ಟು ಸಾಕು ಎಂಬ ಭಾವ , ಇಂದು ಯಕ್ಷಗಾನಕ್ಕೆ ಹೊಸ ಪ್ರೇಕ್ಷಕನ ಅಗತ್ಯವಿದೆ ಎಂದು ಹೇಳುವಾಗ ಆ ಹೊಸ ಪ್ರೇಕ್ಷಕನಿಗೆ ಯಾವ ಗುಣಮಟ್ಟವನ್ನು ಕೊಡುವ ಸಿದ್ದತೆಯಿದೆ? ಊಹಿಸಿದರೆ ಗಾಬರಿಯಾಗುವುದಿಲ್ಲವೇ?
ಇಂದು ವೃತ್ತಿಪರ ಕಲಾವಿದರಿಗೆ ಇದ್ದ ಅನಿವಾರ್ಯತೆ ಹವ್ಯಾಸಿಗಳಿಗೆ ಕಡಿಮೆಯಾದಾಗ ಸಹಜವಾಗಿ ಒಟ್ಟು ಗುಣಮಟ್ಟದ ಕೊರತೆ ಧಾರಾಳವಾಗಿ ಕಂಡುಬರುತ್ತಿದೆ. ಹವ್ಯಾಸಿಗಳು ಗುರುತರವಾದ ತಮ್ಮ ಜವಾಬ್ದಾರಿಯ ಅರಿವಿಲ್ಲದೆ ವರ್ತಿಸುವುದು ಅಭಿಮಾನದಿಂದ ಕಂಡ ಕಲೆಗೆ ಅಪಚಾರ ಎಸಗಿದಂತೆ. ಮೊದಲು ವೃತ್ತಿಪರರಿಗೆ ತಮಗೆ ಜೀವನ ಕೊಡುತ್ತಿರುವ ಮತ್ತು ಜೀವನ ನಿರ್ವಹಣೆಗೆ ಇದೇ ಅನಿವಾರ್ಯವಾಗಿರುವುರಿಂದ ಅದರಲ್ಲಿ ಅವರಿಗರಿವಿದ್ದು ಇಲ್ಲದೆಯೊ ಕಲೆಯಬಗ್ಗೆ ಬದ್ದತೆಯನ್ನು ತೊರಿಸುವುದೂ ಅನಿವಾರ್ಯವಾಗಿತ್ತು. ಇಂತಹ ಅನಿವಾರ್ಯತೆ ಹವ್ಯಾಸಿಗಳಿಗೆ ಇಲ್ಲ ಮಾತ್ರವಲ್ಲ ಹವ್ಯಾಸಿಗಳಂತೆ ಇದು ಹೊಟ್ಟೇ ಪಾಡೂ ಅಲ್ಲ. ಮೊದಲಿನಂತೆ ಕಲಾವಿದನಿಗೆ ವಿದ್ಯೆ ಎಂದರೆ ಇದೊಂದೇ ಅರಿವಿನಲ್ಲಿತ್ತು. ಒಂದು ರೀತಿಯ ಶಿಕ್ಷಣ ವಂಚಿತರು. ಹವ್ಯಾಸಿಗಳು ಇಂದು ಹೆಚ್ಚು ಸುಶಿಕ್ಷಿತರು ಮತ್ತು ಬದುಕಿನಲ್ಲಿ ಹೆಚ್ಚು ಭದ್ರತೆಯನ್ನು ಹೊಂದಿದವರು. ಇವರಿಂದ ಕಲಾ ಜಗತ್ತು ಅಧಿಕವನ್ನು ನಿರೀಕ್ಷಿಸುವುದರಲ್ಲಿ ತಪ್ಪೇನಿದೆ. ಆದರೆ ಜವಾಬ್ದಾರಿಯ ಅರಿವು ಬರಬೇಕಷ್ಟೆ. ಕಲೆ ಕೇವಲ ಮನರಂಜನೆಯ ವಸ್ತುವಾಗಿ ಕಾಣದೆ ಅದರಲ್ಲಿ ಪೂಜನೀಯಭಾವನೆ ಬೆಳೆಯುವಂತಾಗಬೇಕು. ವಸ್ತುಸ್ಥಿತಿ ಕಂಡಾಗ ಕೇವಲ ಇಷ್ಟು ಮಾಡಿದ್ದು ಸಾಕು ಏಂಬ ಉಡಾಫೆಯ ತೃಪ್ತಿ ಕಂಡಾಗ ಗಾಬರಿಯಾಗುತ್ತದೆ.
ಕಾಲಮತಿಯೋಳಗೆ ನಡೆಯುತ್ತಿರುವ ಯಕ್ಷಗಾನ ಕಂಡಾಗ ಬಾಲ್ಯದಲ್ಲಿ ಭಯ ಕುತೂಹಲದಿಂದ ಕಂಡ ಯಕ್ಷಗಾನವನ್ನು ಹೋಲಿಸುವಂತಾಗುತ್ತದೆ. ಆತೀ ಹೆಚ್ಚಾಗಿ ಕಾಣುವ ದೇವಿ ಮಹಾತ್ಮೆಯ ಮಹಿಷಾಸುರ, ರುದ್ರಭಯಂಕರನಾಗಿ ಭಯಾನಕ ಲೋಕವನ್ನೆ ಸಾಕ್ಷಾತ್ಕಾರಗೋಳಿಸುತ್ತಿದ್ದ ಮಹಿಷಾಸುರ ಇಂದು ಪ್ರೆಕ್ಷಕರನ್ನು ನಗಿಸುವ ಕಾಯಕದಲ್ಲಿ ಸಬೆಯನ್ನು ಅಟ್ಟಾಡಿಸಿ ಚೆಲ್ಲಾಪಿಲ್ಲಿ ಗೊಳಿಸುವುದು, ಏನೇನೋ ವಿಚಿತ್ರ ಭಂಗಿಯನ್ನು ತೋರಿಸುವುದು... ರುದ್ರಭಯಂಕರ ಬಣ್ಣದವೇಷ ಇಲ್ಲಿ ಹಾಸ್ಯಗಾರನ ಪಾತ್ರ ಮಾಡಿದಾಗ ಗಾಬರಿ ಮಾತ್ರವಲ್ಲ ಒಟ್ಟು ವ್ಯವಸ್ಥೆಯ ಬಗ್ಗೆ ಹೇಸಿಗೆಯಾಗಿ ದೂರವೇ ಉಳಿಯುವಂತಾಗುತ್ತದೆ. ಹೀಗೆ ಎಲ್ಲದರಲ್ಲೂ ಕ್ರಮವಾಗಿ ಬಂದ ಕ್ರಮ ನಿಯಮಗಳಿಗೆ ಅತೀತರಾಗಿ ಪ್ರವರ್ತಿಸುವಾಗ ಏನಾಗಬೇಕು ? ನಾವೆಲ್ಲಿ, ಯಾವ ಯುಗದಲ್ಲಿ ಜೀವ ಹಿಡಿದು ಬದುಕುತ್ತಿದ್ದೇವೆ ಎಂದು ಯೋಚಿಸುವಾಗ ಗಾಬರಿ ಇನ್ನೂ ಜಾಸ್ತಿಯಾಗಿಬಿಡುತ್ತದೆ.
ಗುರುವನ್ನು ಮೀರಿದ ಶಿಷ್ಯ ಎಂಬಮಾತು ಕೇಳುವಲ್ಲಿ ಮನಸ್ಸು ತವಕಿಸುತ್ತಿದ್ದರೆ,ಈ ಅಂಧಾನುಕರಣೆಯ ಉರುಳಲ್ಲಿ ನರಳಾಡುವ ಕಲೆಯನ್ನು ಕಂಡಾಗ ಗಾಬರಿಯಾಗುತ್ತದೆ. ಯಕ್ಷಗಾನದ ಮಟ್ಟಿಗೆ ಅರಗಿಸಿಕೊಳ್ಳಬೇಕಾದ ಸಂಗತಿಗಳು ಹಲವು ಇರಬಹುದು. ಇಂದಿನ ಯಾವುದೇ ಹಿರಿಯ ಕಲಾವಿದನೂ ತನ್ನ ಸಮರ್ಥ ಉತ್ತರಾಧಿಕಾರಿಯನ್ನು ನಿಯಮಿಸುವಲ್ಲಿ ಸಫಲನಾಗಿಲ್ಲ ಎಂದೇ ಹೇಳಬಹುದು. ತಮ್ಮ ವಿಶಿಷ್ಟ ಶೈಲಿಯಿಂದ ತಮ್ಮ ಗುರುಗಳಿಂದ ವಿಬ್ಭಿನ್ನವಾಗಿ ಗುರುತಿಸಲ್ಪಟ್ಟವರು ತಮ್ಮ ವಿಭಿನ್ನತೆಯ ಕಲ್ಪನೆಗೆ ವಾರಸುದಾರರಿಲ್ಲದ ಪರಿಸ್ಥಿತಿಯಲ್ಲಿ ಮುಂದಿನ ಜನಾಂಗದಲ್ಲಿ ಹೇಗಿರಬಹುದು ಅದು ಕೇವಲ ಒಬ್ಬರಿಗೆ ಸೀಮಿತವಾಗಿರದೆ ಸಮಷ್ಟಿಯಲ್ಲಿ ಎದುರಾಗುವ ಸಮಸ್ಯೆ. ಒಂದು ಸಲ ಯೋಚಿಸಿದರೆ ಮೇಲೆ ಹೇಳಿದ ಭಾಗವತರಂತೆ, ಯಾವುದೇ ಪ್ರಸಂಗವಾದರು ಸೈ ಎನ್ನುವ ಭಾಗವತರು ಯಾರಿದ್ದಾರೆ? ಇದು ಗಾಬರಿಯ ಸಂಗತಿಯಲ್ಲವೇ?