"ಇದು ವಿಮರ್ಶೆಯಲ್ಲದ ಚಿಂತನ"

Wednesday, August 4, 2010

ಅಗರಿ ಎಂಬ ಗಾನ ಕೋಗಿಲೆ

ಅಗರಿ ಶ್ರೀನಿವಾಸ ಭಾಗವತರು ಚಿತ್ರ ಕೃಪೆ: ರಾಮ್ ನರೇಶ್ ಮಂಚಿ

ಅಂದು ಶನಿವಾರದ ಒಂದು ದಿನ ಬೆಳಗ್ಗೆ ಕಛೇರಿಗೆ ಹೊರಡುವ ತರಾತುರಿಯಲ್ಲಿದ್ದೆ. ಜೇಬಿನಲ್ಲಿದ್ದ ಮೊಬೈಲ್ ಸಂದೇಶ ಗ್ರಹಿಸಿ ಮೆಲುವಾಗಿ ಕಂಪಿಸಿತು. ಅದನ್ನು ತೆಗೆದು ನೋಡುವಷ್ಟು ಸಮಯವಿಲ್ಲದೆ ಹಾಗೆ ಬಿಟ್ಟು ನಿತ್ಯ ನಿಯಮಿತ ದಿನಚರಿಯತ್ತ ಉದ್ಯುಕ್ತನಾದೆ. ಸ್ವಲ್ಪ ವಿರಾಮ ಸಿಕ್ಕಿ ಯಾರದೋ ಕರೆ ಬಂದಾಗ ಮರೆತು ಹೋದ ಸಂದೇಶ ತೆರೆದು ಓದುವ ಕೆಲಸ ನೆನಪಾಗಿ ಕುತೂಹಲದಿಂದ ನೋಡಿದೆ. ಮಿತ್ರರಾದ ಸುಬ್ಬಣ್ಣ ತುಮಕೂರಿನಿಂದ ಸಂದೇಶ ಕಳಿಸಿದ್ದರು. “ಮಧಾಹ್ನದ ವೇಳೆ ನಿಮ್ಮಲ್ಲಿಗೆ ಬರುತ್ತಿದ್ದೇನೆ.”



ಸುಬ್ಬಣ್ಣ ತುಮಕೂರಿಂದ ನನ್ನನ್ನು ಕಾಣಲು ಬರುವುದೇನು ಹೊಸತಲ್ಲ. ಹಾಗಾಗಿ ಹೆಚ್ಚಿನ ಗಮನ ಆ ಕಡೆಗೆ ಹರಿಸದೆ ಯಥಾವತ್ತಾಗಿ ಕೆಲಸದಲ್ಲಿ ಪ್ರವೃತ್ತನಾದೆ. ಮಧ್ಯಾಹ್ನ ಊಟ ಮಾಡುತ್ತಿರಬೇಕಾದರೆ ಸುಬ್ಬಣ್ಣನ ಕರೆ,

“ ನಾನು ಯಶವಂತಪುರದ ರೈಲು ನಿಲ್ದಾಣದಲ್ಲಿದ್ದೇನೇ.” ಇದು ಸುಬ್ಬಣ್ಣನ ಮಾಮೂಲು ಕ್ರಮ. ಅವರನ್ನು ಕರೆದುಕೊಂಡು ಬರೋಣವೆಂದು, ದ್ವಿಚಕ್ರ ಏರಿ ಯಶವಂತಪುರದತ್ತ ತೆರಳಿದೆ. ಮನೆಯಿಂದ ಐದು ನಿಮಿಷದ ಹಾದಿ. ರೈಲು ನಿಲ್ದಾಣದ ಹತ್ತಿರದ ಬಸ್ ನಿಲ್ದಾಣಕ್ಕೆ ಬರುತ್ತಾ ಸುಬ್ಬಣ್ಣನ ಅರಸುತ್ತ ಕತ್ತು ತಿರುಗಿಸುತ್ತಾ ಕಣ್ಣು ದೂರಕ್ಕೆ ಹಾಯಿಸಿದೆ. ಆ ಜನ ಮತ್ತು ವಾಹನದ ಮಧ್ಯೆ ಹುಡುಕುವುದು ಸ್ವಲ್ಪ ಕಷ್ಟವೇ. ಅದರೂ ದೂರದಲ್ಲೇ ಕಪ್ಪು ಬ್ಯಾಗನ್ನು ಜನಿವಾರ ಮಾಡಿ ಹೆಗಲಿಗೇರಿಸಿಕೊಂಡು ನಿಂತುಕೊಂಡ ವ್ಯಕ್ತಿ ಸುಬ್ಬಣ್ಣ ಆಗಿರಬಹುದು ಎಂದು ಅತ್ತ ಹೋದ ನನ್ನ ಅನುಮಾನ ನಿಜವಾಗಿತ್ತು. ಅತ್ತ ಸರಿದು ಹಸ್ತಲಾಘವ ಇತ್ತು ಅವರನ್ನು ವಾಹನದಲ್ಲಿ ಕೂರಿಸಿ ಕಛೇರಿ ಕಡೆ ಹೊರಟೆ.



ದಾರಿಯಲ್ಲಿ ಬರುತ್ತಿದ್ದಂತೆ ಸುಬ್ಬಣ್ಣ ಹೇಳಿದರು... “ಹಳೆಯ ತಾಳಮದ್ದಲೆ ಕ್ಯಾಸೆಟ ಕೆಲವು ತಂದಿದ್ದೇನೆ. ಎಲ್ಲಿಯೋ ಆದ ತಾಳ ಮದ್ದಲೆಯ ಧ್ವನಿ ಮುದ್ರಣವದು . ಅದನ್ನು MP3 ಮಾಡಿ ಕೊಡಬೇಕು.” ಎಂದಿನಂತೆ ಇದು ಕೂಡ ಮಾಮೂಲು ಮಾತುಗಳು. ಔಪಚಾರಿಕ ಮಾತುಗಳೊಂದಿಗೆ ಇದು ಕೂಡ ಔಪಚಾರಿಕವಾಗಿಬಿಟ್ಟಿದೆ. ಕಛೇರಿಗೆ ಬಂದವರೆ..ಬ್ಯಾಗ್ ಕೆಳಗಿಟ್ಟು ದೊಡ್ಡ ಉಸಿರು ಬಿಟ್ಟು ನಮ್ಮ ತಿರುಗು ಆಸನದಲ್ಲಿ ಮೈಚೆಲ್ಲಿ ಕುಳಿತರು. ಮೇಜಿನ ಮೇಲಿದ್ದ ಬಾಟಲ್ ನಿಂದ ಒಂದಷ್ಟು ನೀರನ್ನು ಗಟ ಗಟ ಕುಡಿದು.. ಬ್ಯಾಗಿನೊಳಗಿಂದ ಒಂದಷ್ಟು ಕ್ಯಾಸೆಟ್ ಮೇಜಿನ ಮೇಲೆ ಹರಡಿ ಒಂದೊಂದಾಗಿ ವಿವರಿಸತೊಡಗಿದರು. ಅವಸರವಸರವಾಗಿ ವಿವರಿಸುತ್ತಿದ್ದ ಅವರ ಅವಸರವನ್ನು ಗಮನಿಸುತ್ತ ಜತೆಗೆ ತಂದ ಕ್ಯಾಸೆಟ ಕೆಲವನ್ನು ಟೇಪ್ ರೆಕಾರ್ಡರ್ ಗೆ ಹಾಕಿ ಒಂದು ಸಲ ಕೇಳಿದೆ. ಇದು ಕೂಡ ಸಾಮಾನ್ಯ ನನ್ನ ಸುಬ್ಬಣ್ಣನ ಬಾಂಧವ್ಯವೇ ಹಾಗೆ. ಎಲ್ಲೇಲ್ಲಿಂದಲೋ ಜೀರ್ಣಾವಸ್ಥೆಯಲ್ಲಿರುವ ತುಂಬ ಹಳೆಯ ಕ್ಯಾಸೆಟ್ ತರುವುದು ಅದನ್ನು ರೂಪಾಂತರಿಸಿ ಕಂಪ್ಯೂಟರ್ ಗೆ ಏರಿಸಿ ನಮ್ಮ ಯಕ್ಷಗಾನ ಸಂಗ್ರಹವನ್ನು ಮತ್ತೂ ಹಿಗ್ಗಿಸುವುದು, ಮತ್ತು ಅದನ್ನು ಕೇಳುವುದು. ಯಕ್ಷಾಗಾನ ಸಂಗ್ರಹವೆಂಬ ಹವ್ಯಾಸತೊಡಗಿದಂದಿನಿಂದ ನಮ್ಮ ನಡುವಿನ ಬಾಂಧವ್ಯ ಗಟ್ಟಿಯಾಗುತ್ತ ಹೋಗಿ ಇಂದು ಆ ಯಕ್ಷಗಾನದ ವಿಚಾರ ಸೀಮೆಯನ್ನು ದಾಟಿ ಇನ್ನೂ ಗಾಢವಾಗಿದೆ.

ಅಗರಿ ಶ್ರೀನಿವಾಸ ಭಾಗವತರ ಕೆಲವು ಪದಗಳು


ಈ ಬಾರಿ ತಂದ ಹಲವು ಧ್ವನಿ ಸುರುಳಿಯಲ್ಲಿ ಯಾವುದೋ ಊರಲ್ಲಿ ಆದ ತಾಳಮದ್ದಲೆಯ ಧ್ವನಿ ಮುದ್ರಣದ ಕೆಲವು ಧ್ವನಿ ಸುರುಳಿಗಳಿದ್ದುವು. ಹಿರಿಯ ಭಾಗವತ ಶ್ರೀ ಅಗರಿ ಶ್ರೀನಿವಾಸ ಭಾಗವತರ ಭಾಗವತಿಕೆಯ ತಾಳಮದ್ದಲೆಯ ಧ್ವನಿಸುರುಳಿಯದು. ನಮ್ಮ ಸಂಗ್ರಹದಲ್ಲಿರುವ ಯಕ್ಷಗಾನ ಕಡತಗಳಲ್ಲಿ ಅಗರಿಯವು ತುಂಬಾ ಕಡಿಮೆ. ಅಂದು ಸಮಯದ ಅಭಾವ ಸುಬ್ಬಣ್ಣ ವಾಡಿಕೆಯಂತೆ ತುಸು ಹೊತ್ತು ಹರಟೆ ಹೊಡೆದು ಹೊರಟು ನಿಂತರು. ಅವರನ್ನು ಮೆಜೆಸ್ಟಿಕ್ ಬಸ್ ಹತ್ತಿಸಿ ಬಂದ ನನಗೆ ಮತ್ತೆ ಅನಿವಾರ್ಯ ಹಲವು ಕೆಲಸದ ಮಧ್ಯೆ ಸುಬ್ಬಣ್ಣ ಕೊಟ್ಟ ಧ್ವನಿಸುರುಳಿ ನೋಡುವುದಕ್ಕೆ ಆಗಲಿಲ್ಲ.



ಮರುದಿನ ಆದಿತ್ಯವಾರ. ಸಹಜವಾಗಿ ರಜೆಯ ಒಂದು ಜಡತನ ಇತ್ತು. ನಿಧಾನವಾಗಿ ಸುಬ್ಬಣ್ಣ ಕೊಟ್ಟ ಸುರುಳಿಯನ್ನು ತೆಗೆದು ನೋಡಿದೆ. ಯಾವುದೋ ತುಂಬ ಹಳೆಯದಾದ ಧ್ವನಿಸುರುಳಿ. ತೆಗಿದಿಟ್ಟ ಟೇಪ್ ರೆಕಾರ್ಡರ್ ಕಂಪ್ಯೂಟರ್ಗೆ ಜೋಡಿಸಿ ಕ್ಯಾಸೆಟ್ ಹಾಕಿ ತಿರುಗಿಸುವ ಯತ್ನ ಮಾಡಿದೆ. ಮೊದಲು ಒಂದೆರಡು ಪದ ಕೇಳುವ ತವಕ. ಸ್ಯಾಂಪಲ್ ಹೇಗಿದೆ ನೋಡೋಣ. ಅಗರಿಯ ಕಂಠದ ಇಂಪಾದ ಪದ ಸ್ವಲ್ಪ ಕೇಳಿದ್ದೆ ಕ್ಯಾಸೆಟ್ ನಿಂತು ಬಿಟ್ಟಿತು.



ಇನ್ನು ಇದರ ಶಸ್ತ್ರ ಕ್ರಿಯೆ ಅನಿವಾರ್ಯವೆಂದು, ಕೆಲವು ಸ್ಕ್ರೂ- ಡ್ರೈವರ್ ತೆಗೆದು ಕ್ಯಾಸೆಟ್ ಹೊರ ಕವಚವನ್ನು ತೆಗೆದು ಒಳಗೆ ದಪ್ಪನೆ ಅಂಟಿದ್ದ ಧೂಳನ್ನು ತೆಗೆದು ಅದರ ಒಳಕವಚದ ಪರೆಯನ್ನು ತೆಗೆದು ಸುತ್ತಿಕೊಂಡ ಕರ್ರಗಿನ ಟೇಪ್ ಸ್ವಚ್ಚ ಗೊಳಿಸುವಲ್ಲಿ ತೊಡಗಿದೆ. ತುಂಬ ಹಳೆಯ ಧ್ವನಿಸುರುಳಿ. ನಿಶ್ಚಲವಾಗಿ ಹಲವು ವರ್ಷಗಳೆ ಸಂದಿದ್ದುವು. ಎಲ್ಲ ಸ್ವಚ್ಚ ಗೊಳಿಸಲು ಅರ್ಧತಾಸು ಬೇಕಾಯಿತು. ನಂತರ ಟೇಪ್ ರೆಕಾರ್ಡರ್ ಸ್ವಚ್ಚಗೊಳಿಸಿ ಕ್ಯಾಸೆಟ್ ಹಾಕುವಲ್ಲಿವರೆಗೆ ಒಂದು ಬಗೆಯ ತವಕ. ನಿರಾತಂಕವಾಗಿ ಧ್ವನಿಸುರುಳಿ ಅಗರಿಯ ಧ್ವನಿಯೊಂದಿಗೆ ಸುರುಳಿ ಬಿಚ್ಚಿಕೊಂಡಾಗ ಜತೆಗೆ ಹಳೆಯ ಯಕ್ಷಗಾನ ಬಯಲಾಟದ ನೆನಪಿನ ಸುರುಳಿಯು ಬಿಚ್ಚತೊಡಗುತ್ತದೆ.

ಸುಮಾರು ಒಂದುವರೆ ಘಂಟೆ ಅವಧಿಯ ತಾಳ ಮದ್ದಲೆ ಉತ್ತಮ ಧ್ವನಿ ಮುದ್ರಣ ಅಲ್ಲದಿದ್ದರೂ ಅಗರಿಯ ಕಂಠದ ಆಕರ್ಷಟೆ ಜತೆಗೆ ದಿವಾಣ ರ ಮದ್ದಲೆ ಸವಿಯುವವರಿಗೆ ಇದು ಧಾರಳ ಸಾಕು. ಇಲ್ಲಿ ಪ್ರಸಂಗ ಯಾವುದೋ, ಅರ್ಥಧಾರಿಗಳು ಯಾರೋ.. ಎಲ್ಲವೂ ಗೌಣವಾಗಿಬಿಡುತ್ತದೆ. ಈ ಹಿಮ್ಮೇಳದ ಚುಂಬಕ ಶಕ್ತಿಯೇ ಅದು. ಮಗುವಿನ ಧ್ವನಿಯಂತೆ ತೋರುವ ಕೆಲವು ಪದಗಳು, ಆ ಧ್ವನಿಯೋಂದಿಗೆ ಬೆಂಬತ್ತುವ ಮತ್ತು ನಮ್ಮ ಎದೆಯ ಬಡಿತವನ್ನೇ ನಿಯಂತ್ರಿಸುವಂತೆ ಇರುವ ಮದ್ದಳೆಯ ಗಂಡುಭೀರಿ ಸ್ವರ .



ಕ್ಯಾಸಟ್ ಸಂಪೂರ್ಣವಾಗಿ ಕಂಪ್ಯೂಟರಿಗೆ ವರ್ಗಾಯಿಸಿದೆ. ಇದು ಸುಮಾರು ಎರಡು ಘಂಟೆ ಅವಧಿಯ ಕೆಲಸ. ತುಂಬ ತಾಳ್ಮೆಯಿಂದ ಕಾಯಬೇಕು. ಟೇಪ್ ರೆಕಾರ್ಡರ್ ಎಂಬ ಅಸ್ಥಿಪಂಜರ ಮಾತ್ರವಿರುವ ಪೆಟ್ಟಿಗೆ ಕೇವಲ ಕ್ಯಾಸಟ್ ತಿರುಗಿಸುವುದಕ್ಕೆ ಮಾತ್ರ ಅಣಿಗೊಳಿಸಿದ್ದೆ. ಅದರಲ್ಲಿರುವ ಮಿಕ್ಕೆಲ್ಲ ಭಾಗಗಳು ಯಾವುದು ಉಳಿದಿಲ್ಲ. ನನ್ನ ಸೌಕರ್ಯಕ್ಕೆ ತಕ್ಕಂತೆ ಬದಲಾಯಿಸಿದ್ದೆ. ಆದರು ಅದನ್ನೇ ನೋಡುತ್ತಾ ಕೂರಬೇಕು. ಅದು ಎಲ್ಲಿ ಸುದ್ದಿ ಇಲ್ಲದೆ ನಿಂತು ಬಿಡುವುದೊ.. ಸುರುಳಿಗಳು ಸಿಕ್ಕಿಕೊಂಡು ನಿಂತು ಬಿಟ್ಟರೆ ಮತ್ತೆ ಎಲ್ಲವೂ ವ್ಯರ್ಥ. ಅತ್ಯಂತ ತಾಳ್ಮೆಯ ಕೆಲಸವದು. ಪೂರ್ಣವಾಗಿ ತಿರುಗಿ ಧ್ವನಿಯೆಲ್ಲವೂ ಕಂಪ್ಯೂಟರ್ ನಲ್ಲಿ ದಾಖಲಾಗಿ ಅಲ್ಲಿಂದಲೇ ಆಲಿಸಿದ ಮೇಲೆ ಅದನ್ನು ಒಪ್ಪ ಒರಣ ಮಾಡುವ ಆತುರ. ನಂತರ ಎಲ್ಲವು ಪೂರ್ಣಗೊಂಡ ಕೂಡಲೇ ಅದನ್ನು ಅಲ್ಲಲ್ಲಿ ಮೊಳಗಿಸಿ ಕೇಳುತ್ತಾ ಚಪ್ಪರಿಸುವಾಗ ಅದೊಂದು ಅವರ್ಣನಿಯ ಅನುಭವ. ಇಂತಹ ಹಿರಿಯ ಕಲಾವಿದರು ಎಂದೋ ಹಾಡಿದ ಹಳೆಯಧ್ವನಿಯನ್ನು ಹೊಸದಾಗಿ ಕೇಳುವಾಗ ಎಲ್ಲವನ್ನು ಮರೆತ ಅನುಭವ. ಹೀಗೆ ಯಾವುದೋ ಧ್ವನಿಸುರುಳಿಯನ್ನು ಮೂಲ ರೂಪದಿಂದ ಬದಲಾಯಿಸುವುದು ಕೇವಲ ಯಕ್ಷಗಾನದ ಹಳೆಯ ಪ್ರತಿಗಳನ್ನು ದಾಖಲಿಸುವುದು ಮತ್ತು ಅದನ್ನು ಸುರಕ್ಷಿತವಾಗಿಸುವುದು ಮಾತ್ರ ಉದ್ದೇಶ. ಸಾಧ್ಯವಾದಷ್ಟು ಇದನ್ನು ವ್ಯಾಪಾರಿಕರಣಗೊಳ್ಳದ ಹಾಗೆ ವಿಶ್ವಾಸಿ ಮಿತ್ರರ ಮಧ್ಯೆ ಕೆಲವೇ ಮಂದಿಗಳಲ್ಲಿ ಇದನ್ನು ಹಂಚಿಕೊಳ್ಳುವುದು. ಇದನ್ನು ಕೇವಲ ಹವ್ಯಾಸವಾಗಿ ಮಾತ್ರ ಉಳಿಸಿಕೊಳ್ಳುವ ಉದ್ದೇಶ.



ಅಗರಿಯವರ ಕೆಲವು ತಾಳ ಮದ್ದಲೆಯ ಪದಗಳನ್ನು ಕೇಳಿದಾಗ ಅದರಲ್ಲಿ ಮದ್ದಲೆಗಾರರಾದ ದಿವಾಣ ,ಕುರುಪ್, ಶಿರಂಕಲ್ಲು ಮುಂತಾದವರು ವಿಜ್ರಂಭಿಸಿದ ರೀತಿ ನೋಡಿದರೆ ಮೊದಲಿನ ಹಿಮ್ಮೇಳದವರ ಸೃಜನ ಶೀಲತೆ ನೈಪುಣ್ಯತೆ ಗುರುತಿಸಲು ದೊಡ್ಡ ಪ್ರತಿಭೆ ಎನೂ ಬೇಡ. ಸಾಮಾನ್ಯನೂ ಸುಲಭದಲ್ಲಿ ಅರ್ಥ ಮಾಡಿಕೊಳ್ಳಬಹುದಾದ ನಡೆಗಳು. ಇಂದಿನ ವ್ಯರ್ಥ ಅಲಾಪನೆಯ ಕಸರತ್ತು ಇಲ್ಲ.ಚಾಲು ಕುಣಿತದ ಹುಚ್ಚು ಎಳೆದಾಟವಿಲ್ಲ ಆದರು ಹಿಮ್ಮೇಳ ವೈಭವೀಕೃತ ಗೊಳ್ಳುವ ಬಗೆ ಅಚ್ಚರಿ ಮೂಡುತ್ತದೆ. “ ರಂಗನಾಯಕ ರಾಜೀವ ಲೋಚನ, ಪೋಗಿಬರುವೆನು ಗೋಪ ನಾಗ ವೇಣಿಯರೆ .. ಮುಂತಾದ ಉದಯರಾಗದ ಪದಗಳು ಹಲವು ಅಗರಿಯವರ ಕಂಠದಲ್ಲೇ ಕೇಳುವ ಸುಖ ಬೇರೆ ಅನುಕರಣೆಯ ಧ್ವನಿಯಲ್ಲಿ ಸಿಗಲಾರದು. ಅಗರಿ ಶೈಲಿ ಅನುಕರಣೀಯವಾಗಿ ಸುಲಭ ಎಂದು ಕಂಡರೂ , ಹಲವರು ಇದು ಅಗರಿ ಶೈಲಿ ಎಂದು ಗುರುತಿಸಿಕೊಂಡರೂ ಅಗರಿ ಎಂತಿದ್ದರೂ ಅಗರಿಯೆ.



ಅಗರಿ ಶ್ರೀನಿವಾಸ ಭಾಗವತರ ಪದಗಳನ್ನು ಇಂದಿನ ತಲೆಮಾರಿನವರು ಹೆಚ್ಚು ಕೇಳಿರಲಾರರು. ಕೇಳಿದ ಹಳಬರು ಇಂದಿಗೂ ಮೆಲುಕು ಹಾಕುವ ಅಗರಿಯ ಸ್ವರ ಶೈಲಿಯ ಕಲ್ಪನೆ ಮಾತ್ರ ಈಗ ಸಂಗ್ರಹವಾಗುವ ಪದಗಳಿಂದ ಸಾಧ್ಯ. ಚುರುಕು ನಡೆಯ ಮೊಟಕು ಆಲಾಪನೆಯ ಶೈಲಿ, ಬೆರಳೆಣಿಕೆಯ ಕ್ಷಣಗಳಲ್ಲಿ ಮದ್ದಲೆವಾದಕರಿಗೆ ವಿಪುಲ ಅವಕಾಶ ಒದಗಿಸುವ ಲಯ, ಕೇಳುಗನ ಎದೆಯಲ್ಲಿ ಅಲಾಪನೆಯ ಅಲೆಯ ಕಂಪನವನ್ನುಂಟುಮಾಡುವ ಅಲಾಪನೆ ಎಲ್ಲವೂ ಅಗರಿ ಪದಗಳ ವಿಶೇಶತೆ. ಪ್ರತಿಸಲ ಕೇಳಿದಾಗಲೂ ವಿಭಿನ್ನ ಅನುಭವನ್ನು ನೀಡಬಲ್ಲ ಪದಗಳು ಮತ್ತೂ ಮತ್ತೂ ಮೆಲುಕು ಹಾಕುವಂತೆ ಮಾಡುತ್ತಿವೆ. ಕೇವಲ ಪೂರ್ವಾಗ್ರಹದಿಂದ, ಅಂಧಾಭಿಮಾನದಿಂದ ಇಂತಹ ಪದಗಳನ್ನು ಕೇಳದೆ ಉಳಿಯುವವರು ಖಂಡಿತ ನಾದ ಮಧುರ್ಯ ಸವಿಯುವಲ್ಲಿ ವಂಚಿತರಾದರೆಂದೇ ಹೇಳಬೇಕು.