"ಇದು ವಿಮರ್ಶೆಯಲ್ಲದ ಚಿಂತನ"

Saturday, December 28, 2013

ಯಕ್ಷಾಂಗಣದಲ್ಲಿ ನವರಸ





ಇತ್ತೀಚೆಗೆ ಮಲಯಾಳಂ ದೂರದರ್ಶನದಲ್ಲಿ ಯಾವುದೋ ಕಲಾಮಂಡಳಂ ಒಂದರ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಕಥಕ್ಕಳಿಯ ನವರಸಗಳ ಅಭಿವ್ಯಕ್ತೀ ಪ್ರದರ್ಶನ ನೋಡಿದ್ದೆ. ನವರಸದ ಭಾವಾಭಿನಯವನ್ನು ಸಾಂಕೇತಿಕವಾಗಿ ತೋರಿಸುವ ಕಾರ್ಯಕ್ರಮವಿದು. ಮೌಖಿಕ ಮತ್ತು ಚಲನೆಯ ಮೂಲಕ ಮುದ್ರೆಗಳೊಂದಿಗೆ ನವರಸಗಳ ಅಭಿವ್ಯಕ್ತಿ ರೂಪಗಳು ಹೇಗೆ ಗೋಚರವಾಗುತ್ತದೆ ಎಂಬುದನ್ನು ಬಹಳ ಸರಳವಾಗಿ ಪ್ರಸ್ತುತ ಪಡಿಸಿದ್ದಾರೆ. ಕೇವಲ ಮೌಖಿಕ ಚಲನೆಯಲ್ಲಿ ವ್ಯಕ್ತವಾಗುವ ನವರಸಗಳ ವೈವಿಧ್ಯತೆ, ವ್ಯಕ್ತವಾಗುವ ಚಲನಾವೇಗ  ನೋಡಿ ಬಹಳ ಸೋಜಿಗವಾಯಿತು. ಗಡಿಯಾರದ ನಿಮಿಷದ ಮುಳ್ಳಿನ ಚಲನೆಗೆ ಹೊಂದಿಕೊಂಡಂತೆ ಕ್ಷಣ ಮಾತ್ರದಲ್ಲಿ ಬದಲಾಗುವ ಮುಖವಿನ್ಯಾಸ, ಅದ್ಬುತ, ಭಯಾನಕ, ಹಾಸ್ಯ, ಭೀಭತ್ಸ, ಕರುಣ, ರೌದ್ರ, ಶಾಂತ, ಶೃಂಗಾರ, ವೀರ..ಇವುಗಳ   ಅದ್ಭುತ ಎನಿಸುವ ಚಲನೆಗಳು. ವಿದ್ಯಾರ್ಥಿ ದೆಸೆಯ ಈ ಶಿಕ್ಷಣ ಕಂಡು ಒಂದಂತೂ ಸ್ಪಷ್ಟವಾಯಿತು ಕಥಕ್ಕಳಿ ಯಾಕೆ ವಿಶ್ವಮಾನ್ಯವಾಯಿತು ಎಂದು. ಯಾವುದೇ ವಿದ್ಯೆಯ ಭವಿಷ್ಯ ಇರುವುದು ಅದರ ಪ್ರಾಥಮಿಕ ಹಂತದ ಶಿಕ್ಷಣದಲ್ಲಿ. ಯಾಕೆಂದರೆ ತಳಹದಿಯಲ್ಲಿ ಸಿಕ್ಕಿದ ಸಂಸ್ಕಾರ ಅದು ತಾಯಿ ಬೇರಾಗಿ ಸ್ಥಾಯಿಯಾಗಿರುತ್ತದೆ. ಮಾತಿಲ್ಲದ ಈ ಕಲೆ ನಮ್ಮನ್ನು ಮಾತಿಲ್ಲದ ಮೌನಿಯಂತಾಗಿಸುವುದಂತೂ ಪರಮ ಸತ್ಯ.

ಕಲೆಯಲ್ಲಿ ಕಲಾವಿದರ ನಡುವೆ ಹೋಲಿಕೆ ಸಾದೃಶಗಳನ್ನು ಲೆಕ್ಕ ಹಾಕಬಾರದು. ಪ್ರತಿಯೊಂದು ಕಲೆಯೂ ಅದರದ್ದೇ ಆದ ವೈಶಿಷ್ಟ್ಯವನ್ನು ಪಡೆದುಕೊಂಡು ಜನಮಾನಸದಲ್ಲಿರುತ್ತವೆ. ಆದರೆ ಕಥಕ್ಕಳಿಯನ್ನು ಕಾಣುವಾಗ ಬೇಡವೆಂದರೂ ಮನಸ್ಸು ಯಕ್ಷಗಾನವನ್ನು ಹೋಲಿಸಿ ನೋಡುತ್ತದೆ. “ಕಥಕ್ಕಳಿ” ಅಂದರೆ  ’ಕಥೆಯ ಆಟ’. ಯಕ್ಷಗಾನವನ್ನು ವಾಡಿಕೆಯಲ್ಲಿ ಆಟ ಎಂದೇ ಕರೆಯುತ್ತಾರೆ. ಎರಡು ಕಲೆಗೂ ಹಲವಾರು ಸಾಮ್ಯತೆಗಳು ಇದ್ದಂತೆ ಎರಡೂ ಹಲವು ವಿಷಯಗಳಲ್ಲಿ ಭಿನ್ನವಾಗಿವೆ ಆದರೂ ಕಥಕ್ಕಳಿಯನ್ನು ಕಾಣುವಾಗ ಯಕ್ಷಗಾನವನ್ನು ಥಳುಕು ಹಾಕುವುದು ಸುಳ್ಳಲ್ಲ.

ಯಕ್ಷಗಾನದಲ್ಲಿ ಅಭಿವ್ಯಕ್ತಿಗೆ ಅಭಿನಯಕ್ಕೆ ಸಹಕಾರಿಯಾಗುವಂತೆ ಮಾತುಗಾರಿಕೆಯೂ ಇರುತ್ತದೆ. ಮಾತುಗಾರಿಕೆಯ ವಿಶೇಷತೆ  ಯಕ್ಷಗಾನದ ಆಕರ್ಷಣೆಗಳಲ್ಲಿ ಒಂದು. ಕೆಲವೊಮ್ಮೆ ಇದೂ ಪ್ರಧಾನ ಆಕರ್ಷಣೆಯೋ ಎಂಬಂತೆ ಭಾಸವಾಗುತ್ತದೆ. ಯಾಕೆಂದರೆ ’ಯಕ್ಷಗಾನದ ಮಾತುಗಾರಿಕೆ’  ಸೃಷ್ಟಿಸಿದ ವಾಕ್ ಪ್ರಪಂಚ ಅಷ್ಟು ವಿಶಾಲವಾಗಿದೆ.  ಕೇವಲ ಮಾತಿನ ಬಲದಿಂದಲೇ ಪಾತ್ರಗಳು ಕಲಾವಿದರು ವಿಜ್ರಂಭಿಸಿದ ಉದಾಹರಣೆಗಳು ಸಾಕಷ್ಟು ಇಲ್ಲಿ ಸಿಗುತ್ತದೆ. ಯಕ್ಶಗಾನದ  ಮಾತುಗಾರಿಕೆ ಎಂಬುದು ಯಕ್ಷಗಾನ ಕಲಾವಿದರಿಗೆ ಒಂದು ವಿಶೇಷತೆಯನ್ನು ಒದಗಿಸಿದೆ.  ಕಲಾವಿದರನ್ನು ಬಿಡಿ,  ಯಕ್ಷಗಾನ ಪ್ರೇಕ್ಷಕರನ್ನೂ ಕೂಡಾ ವಿಶಿಷ್ಟ ಸ್ಥಾನದಲ್ಲಿ ನಿಲ್ಲಿಸಿದೆ ಎಂದರೆ ತಪ್ಪಾಗಲಾರದು. ಇಂದಿಗೂ ವಾಡಿಕೆಯಲ್ಲಿರುವ ಮಾತಿದೆ  “ಆಟದ ಮರುಳು ಇದ್ದವರತ್ರ ಮಾತಾಡಿ ಪೂರೈಸಿಲಿಕ್ಕಿಲ್ಲ”.

ಕಥಕ್ಕಳಿಯಲ್ಲಿ ಈ ಮಾತಿನ ಪ್ರಪಂಚ ಸೃಷ್ಟಿಯಾಗಲೇ ಇಲ್ಲ.  ಮಾತ್ರವಲ್ಲ,  ಹೀಗಿದ್ದರೂ ಅದರ ಕಾಠಿಣ್ಯ ಅದೆಷ್ಟು ಬಲವಾಗಿದೆ ಎಂದರೆ ಆಶ್ಚರ್ಯವಾಗುತ್ತದೆ. ನೋಡುತ್ತಿದ್ದಂತೆ ತನ್ಮಯ ಭಾವ ಉಂಟಾಗುತ್ತದೆ. ಹಿನ್ನೆಲೆಯ ಧ್ವನಿಗೆ ಹೊಂದಿಕೊಂಡಂತೆ ಅಭಿನಯ,  ಹಾಗಾಗಿ ಆಂಗಿಕ ಅಭಿನಯ ಅದರ ಪ್ರಧಾನ ಅಂಗಗಳಲ್ಲಿ ಒಂದು. ಇದರಿಂದಾಗಿ ನವರಸಗಳ ಅಭಿವ್ಯಕ್ತಿ ಅಲ್ಲಿ ಹೆಚ್ಚು ಅಗತ್ಯವಾಗಿದೆ ಮಾತ್ರವಲ್ಲ ಅದನ್ನು ಹೆಚ್ಚು ಉಪಯೋಗಿಸಲ್ಪಡುತ್ತದೆ ಎಂದು ನನಗನಿಸುವುದು. ಇದೇ ಕಾರಣಕ್ಕೆ ಇಲ್ಲಿ ವಿದ್ಯಾರ್ಥಿ ದೆಸೆಯಲ್ಲೇ ನವರಸಗಳ ಬಗ್ಗೆ ಶಿಕ್ಷಣವನ್ನು ನೀಡುತ್ತಾರೆ. ಅದುದರಿಂದ ಭಯನಾಕದಿಂದ ಕರುಣಕ್ಕೋ, ರೌದ್ರದಿಂದ್ರ ಶಾಂತಕ್ಕೋ ಕ್ಷಣ ಮಾತ್ರದಲ್ಲಿ ಬದಲಾವಣೆ ಇಲ್ಲಿ ಸಾಧ್ಯವಾಗುತ್ತದೆ. ನವರಸಗಳ ತಿಳುವಳಿಕೆಯನ್ನು ಇಲ್ಲಿನ ಕಲಾವಿದರು ಹೆಚ್ಚು ಪಡಕೊಂಡಿದ್ದಾರೆ ಎಂದನಿಸುತ್ತದೆ.

ಯಕ್ಷಗಾನದ ಶಿಕ್ಷಣದಲ್ಲಿ ಈ ನವರಸ ಶಿಕ್ಷಣ ಎಷ್ಟು ಬಳಕೆಯಲ್ಲಿದೆಯೋ ತಿಳಿಯದು. ಆದರೆ ರಂಗದ ಮೇಲೆ ನೋಡುವಾಗ ಇದರ ಅನುಭವ ಆಗುವುದಿಲ್ಲ.  ಕೆಲವೇ ಮಂದಿ ಕಲಾವಿದರು ಇದರ ಬಗ್ಗೆ ಅಧಿಕಾರಯುತವಾಗಿ ವ್ಯವಹರಿಸ ಬಲ್ಲರೇ ಹೊರತು ಬಹಳಷ್ಟು ಮಂದಿ ಇದರ ಹತ್ತಿರ ಸುಳಿಯುತ್ತಿಲ್ಲ. ’ನವರಸಗಳು” ಎಷ್ಟಿವೆ?  ಎಂದು ಮೂಢ ಪ್ರಶ್ನೆಯನ್ನು ಕೇಳುವಂತಹ ಪರಿಸ್ಥಿತಿ ಬಂದರೂ ಬರಬಹುದು.  ನವರಸಗಳ ಅಭಿವ್ಯಕ್ತಿ ಹೇಗೆನ್ನುವುದಕ್ಕಿಂತ ನವರಸಗಳು ಯಾವುದು ಎಂದು ಕೇಳಿದರೆ,  ಸಮರ್ಪಕ ಉತ್ತರ ಹೇಗೆಲ್ಲ ಸಿಗಬಹುದು? ಎಂಬುದು ಯೋಚಿಸಬೇಕಾದ ವಿಚಾರ. ಯಕ್ಷಗಾನ ಶಾಸ್ತ್ರೀಯ ಕಲೆಯಲ್ಲ. ಇದಕ್ಕೆ ಶಾಸ್ತ್ರದ ತಳಹದಿಯಿಲ್ಲ. ಪಾರಂಪರಿಕವಾಗಿ ಬಂದ ಜಾನ ಪದ ಕಲೆ. ಇಲ್ಲಿ ನವರಸ ಅಭಿವ್ಯಕ್ತಿ ಶಾಸ್ತ್ರದ ನೆಲೆಯಲ್ಲೇ ಇರಬೇಕೆಂದೆನೂ ಇಲ್ಲ. ಆದರೆ ಇದರ ಜ್ಞಾನ ಹೊಂದಿದ್ದರೆ ರಂಗದ ಮೇಲಿನ ಪ್ರವೃತ್ತಿಗೆ ಪರಿಣಾಮಕಾರಿಯಾಗಬಲ್ಲುದು.

 ಯಕ್ಷಗಾನ ಕಲಿಸುವ ಗುರುಸ್ಥಾನದ ಹಿರಿಯರಿಗೆ ನವರಸಗಳ ಅರಿವಿದ್ದರೂ ಇರಬಹುದು. ಯಾಕೆಂದರೆ ಸಂಪ್ರದಾಯ ಪರಂಪರೆಯಿಂದ ಬಹಳಷ್ಟನ್ನು ಇವರು ಆರ್ಜಿಸಿಕೊಂಡಿರುತ್ತಾರೆ. ಆದರೆ ಯುವ ತಲೆಮಾರಿನ ಹಣೆ ಪಟ್ಟಿ ಕಟ್ಟಿಕೊಂಡವರಲ್ಲಿ ಈ  ಅಜ್ಞಾನ ಬಹಳಷ್ಟನ್ನು ನಿರೀಕ್ಷಿಸಬಹುದು. ಯಾಕೆಂದರೆ, ಒಂದೆರಡು ಹೆಜ್ಜೆ ಕಲಿತ ಕೂಡಲೇ ದೊಡ್ದ ವೇಷಕ್ಕೇ ಸ್ವಯಂ ತೇರ್ಗಡೆಗೊಳ್ಳುವ ಇಂದಿನ ಕಲಾವಿದರು, ಕೆಲವು ರಂಗಸ್ಥಳದ ಅನುಭವ ಸಿಕ್ಕಿದೊಡನೆ ಕಲಿಸುವ ಗುರು ಸ್ಥಾನಕ್ಕೆ ಸ್ವಯಂ ತೇರ್ಗಡೆ ಪಡೆದಿರುತ್ತಾರೆ!! ಅನುಕರಣೆಯನ್ನಷ್ಟೇ ರಂಗದಲ್ಲಿ  ಇಂದು ಕಂಡುಬರುತ್ತದೆ. ಯಾಕೆಂದರೆ ಪೂರ್ಣ ಪ್ರಮಾಣದ ಶಿಕ್ಷಣದ ಕೊರತೆ ಇದಕ್ಕೆ ಕಾರಣ. ಶೆಟ್ಟಿಗಾರ ಮಹಿಷಾಸುರ “ ಹಾಗೆ ಕುಣಿದ” ಎಂದು ಅದನ್ನೆ ಅನುಕರಿಸಿ ಆ ಸ್ಥಾನವನ್ನು ಪಡೆಯುವ ಹಂಬಲ. ಅದೇ ಶೆಟ್ಟಿಗಾರ ಆ ವಿದ್ಯೆಯನ್ನೂ, ಆ ನೈಪುಣ್ಯವನ್ನು ಗಳಿಸುವುದಕ್ಕೆ ಗುರು ಸೇವೆ ಎಷ್ಟು ಮಾಡಿರಬಹುದು ಎಂಬುದನ್ನು ಗಮನಿಸುವುದಕ್ಕೆ ಹೋಗುವುದಿಲ್ಲ.  ಯಾಕೆಂದರೆ ಮುಖ್ಯ ರಸ್ತೆಯ ಪ್ರಯಾಣಕ್ಕಿಂತ ಆಡ್ಡರಸ್ತೆಯ ಪ್ರಯಾಣವೇ ಹಿತಕರವಾಗಿ ಕಂಡುಬರುತ್ತದೆ. ಮಹಿಷಾಸುರ ಹಾಗೆ ಕುಣಿದ ಹೀಗೆ ಕುಣಿದ ಎಂದು ಅದನ್ನೆ ಅನುಕರಿಸುವಾಗ ಇಲ್ಲಿ ನವರಸಗಳ ಬಗ್ಗೆ ಯೋಚಿಸುವುದು ಯಾವಾಗ?   ಈ ಅನುಕರಣೆ ಎಂಬುದು ಕೊನೆಗೆ ಅಧುನಿಕ ಗುರು ಸ್ಥಾನ ಪಡೆಯುವುದಕ್ಕೂ ಇದು  ಅನ್ವಯವಾಗುತ್ತದೆ.

ಈಗೀಗ ಯಕ್ಷಗಾನ ತುಣುಕುಗಳು ಅಂತರ್ಜಾಲದಲ್ಲಿ ಸರಮಾಲೆಯಾಗಿ ಮಿಂಚುತ್ತಿರುತ್ತವೆ. ಯಕ್ಷಗಾನದ ಮಟ್ಟಿಗೆ ಇದೊಂದು ಒಳ್ಳೆಯ ಬೆಳವಣಿಗೆ. ಆದರೆ ಚಿಂತೆಯಾಗುವ ವಿಚಾರ ಇಲ್ಲಿಯೂ ಇದೆ.  ಶ್ರೀ ದೇವಿ ಮಹಾತ್ಮೆಯ ದೇವಿಯ ಪಾತ್ರದ ತುಣುಕೊಂದನ್ನು ಕಾಣುವಾಗ ದೇವಿಗೂ ಭಸ್ಮಸುರದ ಮೋಹಿನಿಗೂ ವೆತ್ಯಾಸವೇ ಇಲ್ಲದಂತಹ ರಸಾಭಿವ್ಯಕ್ತಿ  ಪ್ರಸ್ತುತ ವಾದರೆ ಯಾವುದನ್ನು ಹೇಳಬೇಕು? ದೇವಿ ಎಂದರೆ ಆದಿ ಮಾಯೆ, ಸರ್ವ ಭಾವನೆಯಿಂದಲೂ ಅತೀತವಾದ ಶಕ್ತಿಯದು. ಕದಂಬವನದಲ್ಲಿ ಉಯ್ಯಾಲೆಯಲ್ಲಿ ತೂಗುತ್ತಿರುವಾಗ ಚಂಡ ಮುಂಡರು ಮೋಹ ಪರವಶರಾಗುವ ಸನ್ನಿವೇಶ. ಈ ಸನ್ನಿವೇಶದಲ್ಲಿ ದೇವಿಯ ಶೃಂಗಾರ ಲಾಸ್ಯದ ಅವಶ್ಯಕತೆ ಯಾಕೋ ಗೊತ್ತಾಗುವುದಿಲ್ಲ.

ಶ್ರೀದೇವಿ ಆದಿಮಾಯೆ, ಆಕೆ ಜಗನ್ಮೋಹಿನಿ ರೂಪ. ತನ್ನ ಕಿರುನಗುವಿನಿಂದಲೇ ಸುಗ್ರೀವನನ್ನು ಕೊಲ್ಲುವ, ಹೂಂಕಾರದಿಂದ  ಧೂಮ್ರಾಕ್ಷನನ್ನು ಭಸ್ಮಮಾಡುವ ಈಕೆಗೆ ರಕ್ಕಸರಾದ ಚಂಡ ಮುಂಡರನ್ನು ಮತಿಭ್ರಾಂತರನ್ನಾಗಿ ಮಾಡುವುದಕ್ಕೆ ಶೃಂಗಾರ ಲಾಸ್ಯದ ಅಗತ್ಯವಿದೆಯೇ?        ಅಸುರರಿಗೆ ಅದಿ ಮಾಯೆ ಕೇವಲ ದಿವ್ಯ ಮಾಯೆಯಿಂದಲೇ ಮೋಹ ಪರವಶಳಾಗಿ ಮಾಡುತ್ತಾಳೆ. ಮಾತ್ರವಲ್ಲ ಯಕ್ಷಗಾನದಲ್ಲಿ ಸಾಂಕೇತಿಕ ಅಭಿನಯ ಕ್ರಮಗಳೇ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಇಲ್ಲಿ ಕದಂಬವನದ ಚಿತ್ರಣ ಮಾತಿನಲ್ಲಿ ಕಟ್ಟಿದಂತೆ ಸಮ್ಮೋಹನಕ್ಕೂ  ಕದಂಬವನದ ಪರಿಸರ ಇದಕ್ಕೆ ಪ್ರೇರೇಪಣೆ ಕೋಡುತ್ತಿರುತ್ತದೆ. ಅಷ್ಟೇ ಅಲ್ಲ ಶ್ರೀದೇವಿಯ ಪಾತ್ರವೆಂಬುದು ಗಾಂಭೀರ್ಯದಿಂದ ಕೂಡಿದ ಪಾತ್ರ. ಆದುದರಿಂದ  ಚಂಡ ಮುಂಡರಲ್ಲಿ ಉನ್ಮಾದ ಪ್ರವೃತ್ತಿಯನ್ನು ಪ್ರೇರೇಪಿಸುವಂತೆ ಲಾಸ್ಯಭಾವ ಆವಶ್ಯಕತೆ ಇದೆ ಎಂದು ಅನಿಸುವುದಿಲ್ಲ. ಯಕ್ಷಗಾನ ಪೌರಾಣಿಕ ಸಂಭಂದೀ ಕಲೆ. ಹಾಗಾಗಿ ಆ ಪಾತ್ರದ ಸ್ವಭಾವ ಪೌರಾಣಿಕ ಹಿನ್ನೆಲೆ ಅರಿಯದೆ,  ಪ್ರೇಕ್ಷಕ ಬಯಸುತ್ತಾನೆ ಎಂದು ಪಾತ್ರ ಪರಿಧಿಯಿಂದ ಅತೀತವಾದುದನ್ನು ತೋರಿಸಬಹುದೇ? ಗಮನಿಸಬೇಕು,  ಇದು ಸ್ವ ಅಭಿರುಚಿಯ ಅಭಿವ್ಯಕ್ತಿಯೇ ಹೊರತು ಪಾತ್ರದ ಅಭಿವ್ಯಕ್ತಿಯಾಗಿರುವುದಿಲ್ಲ.

ಕಲೆಯಲ್ಲಿ ಸೃಜನ ಶೀಲತೆ ಇರಬೇಕು. ಅದು ಕಲೆಯ ಮೂಲ ಆಶಯಕ್ಕೆ ಹೊಂದಿಕೊಂಡೇ ಇರಬೇಕು. ಹಾಗಿದ್ದಲ್ಲಿ ಕಲೆಯ ಅಭ್ಯುದಯ ಸಾಧ್ಯವಾಗುತ್ತದೆ. ಸೃಜನ ಶೀಲತೆಯೊಂದೇ ಕಲೆಯ ಜೀವಂತಿಕೆಯ ಲಕ್ಷಗಣವಾಗಬಾರದು. ಭರತನಾಟ್ಯವೋ ಮುದ್ರೆಗಳೋ ಇನ್ನಿತರ ಜನಪದ ಪ್ರಭಾವಗಳು ಮುಂತಾದ ಶಾಸ್ತ್ರೀಯ ಗುಣಗಳು ಕಲೆಯಲ್ಲಿ ಅಲವಡಿಸಲ್ಪಡುವುದಕ್ಕೆ ಆಕ್ಷೇಪವಿರುವುದಿಲ್ಲ. ಅದು ಅಸಹ್ಯವೂ ಆಗುವುದಿಲ್ಲ. ಆದರೆ ದೇವಿ ಮೋಹಿನಿಯಾಗುವುದು ಮಾತ್ರ ನಮ್ಮ ಹೆತ್ತವ್ವೆಯನ್ನು ಆ ಮಟ್ಟದಲ್ಲಿ ಚಿತ್ರಿಸದಂತೇ ಆಗಿಬಿಡುತ್ತದೆ. ನವೀಕರಣ ಸೃಜನ ಶೀಲತೆ ಮತು ಮನೋರಂಜನೆಯ ದೃಷ್ಟಿಯಲ್ಲಿ ಸಿನಿಮೀಯ ದೃಶ್ಯ ಸಾದೃಶ್ಯವನ್ನು ರಂಗದಲ್ಲಿ ತೋರಿಸುವುದು. ಸಿನಿಮಾ ಹಾಡಿನ ರಾಗಗಳ ಅಸಹ್ಯ ಮಿಶ್ರಣವನ್ನು ಯಕ್ಷಗಾನದೊಂದಿಗೆ ಬೆರೆಸುವುದು ಇದೊಂದು ರೀತಿ ಹಾಲಿಗೆ ಹೆಂಡ ಬೆರೆಸಿ ಕುಡಿದಂತೆ. ಚೌತಿಯ ಗಣಪನಿಗೆ ಪ್ಯಾಂಟು ಶರ್ಟು ತೊಡಿಸಿ ಗನ್ನು ಹಿಡಿಸಿ ಪೂಜೆ ಮಾಡಿದಂತೆ ಈ ಕೀಳು ಮಟ್ಟದ ಅಭಿರುಚಿ ಯಾವ ಮನೋಭಾವವನ್ನು ತೋರಿಸುತ್ತದೆ? ನಮ್ಮ ಹೆತ್ತತಾಯಿಯನ್ನು ವಿರೂಪ ಮಾಡಿ ನೋಡಿ ರಂಜನೆಯನ್ನು ಅನುಭವಿಸಿದಂತೆ ಅಲ್ಲವೇ? ಪವಿತ್ರ ತೀರ್ಥವನ್ನು ಸ್ವೀಕರಿಸುವಾಗ ನಮ್ಮ ದೇಹ ಮನಸ್ಸು ಶುದ್ದಿಯಾಗಿರಬೇಕು. ಇಲ್ಲವಾದರೆ ಸ್ವೀಕರಿಸುವ ತೀರ್ಥಕ್ಕೆ ಅರ್ಥವೇ ಇರುವುದಿಲ್ಲ.

ಕಥಕ್ಕಳಿಯಲ್ಲಿ ’ನವರಸಗಳು’  ಗಾಢವಾದ ಮುಖವರ್ಣಿಕೆಯ ಹೊರತಾಗಿಯೂ ಅನುಭವಕ್ಕೆ ಬರುತ್ತದೆ. ಕ್ಷಣ ಕ್ಷಣಕ್ಕೆ ದೃಶ್ಯದಿಂದ ದೃಶ್ಯಕ್ಕೆ ಕೇವಲ ಅಭಿನಯದಿಂದ ಇದು ವ್ಯಕ್ತವಾಗುವಾಗ ರೋಮಾಂಚನವಾಗುತ್ತದೆ. ಯಕ್ಷಗಾನದಲ್ಲಿ ವಿಪುಲವಾದ ಅವಕಾಶ ಇದ್ದರೂ ಇದರ ಅನುಭವ ಕೆಲವೊಮ್ಮೆ ಮಾತ್ರ ಸಾಧ್ಯವಾಗುತ್ತದೆ. ಕಥಕ್ಕಳಿಯನ್ನು ಯಕ್ಷಗಾನವನ್ನು ಹೋಲಿಸುವುದು ತಪ್ಪಾಗುತ್ತದೆ ಒಂದು ಶಾಸ್ತ್ರೀಯ ಕಲೆಯಾದರೆ ಇನ್ನೊಂದು ಜಾನಪದ ಕಲೆ.  ಆದರೂ ಯಾವುದೋ ಅಸಹ್ಯವನ್ನೂ ಅಸಹಜತೆಯನ್ನೂ ಬಳಕೆಗೆ ತರುವ ಬದಲಾಗಿ ಕಲೆಯ ಮೂಲ ಆಶಯಕ್ಕೆ ಹೊಂದಿಕೊಂಡಂತಹ ಗುಣಗಳನ್ನು ಬಳಸುವುದು  ಸೂಕ್ತ ಎನಿಸಲ್ಪಡುತ್ತದೆ. ಯಕ್ಷಗಾನದಲ್ಲಿ ಈ ಭಾವನೆಗಳು ವ್ಯಕ್ತವಾಗುವುದೇ ಇಲ್ಲವೆಂದಲ್ಲ, ಕೆಲವು ಕಲಾವಿದರಿಗೆ ಮಾತ್ರ ಇದರ ಪೂರ್ಣ ತಿಳುವಳಿಕೆಯಿದ್ದು ಬಹಳಷ್ಟು ಮಂದಿ ಈ ಜ್ಞಾನದಿಂದ ಹೊರತಾಗಿಯೇ ಇದ್ದಾರೆ. ಅದಕ್ಕಾಗಿ ಇದನ್ನು ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಬಳಸುವಂತಾಗಬೇಕು. ವಿಪರ್ಯಾಸವೆಂದರೆ ಶಿಕ್ಷಣ ತನ್ನ ಗುಣವನ್ನು ಕಳೆದುಕೊಂಡರೆ ಗುರು ಸ್ಥಾನ ಇನ್ನೇನೋ ಬಯಸುತ್ತದೆ.

ಯಕ್ಷಗಾನದಲ್ಲಿ ನವರಸಗಳ  ಅಭಿವ್ಯಕ್ತಿ ಇಲ್ಲ ಎಂದು ತಿಳಿದರೆ ತಪ್ಪಾಗುತ್ತದೆ. ಎಲ್ಲವೂ ಬಳಕೆಯಲ್ಲಿದೆ ಆದರೆ ಅದೆಲ್ಲ ಅನುಕರಣೆಯಿಂದ ಕೂಡಿರುತ್ತದೆ. ಇದರ ಪರಿಪೂರ್ಣತೆ ಸಾಧಿಸಬೇಕಾದಾರೆ ಪರಿಪೂರ್ಣ ಶಿಕ್ಷಣದ ಅಗತ್ಯವೂ ಇರುತ್ತದೆ. ವಾಸ್ತವದಲ್ಲಿ ಯಕ್ಷಗಾನದಲ್ಲಿ ನವರಸಗಳ ಅಭಿವ್ಯಕ್ತಿಯ ಬಗ್ಗೆ ಯೋಚಿಸುವುದಿಲ್ಲ. ಬದಲಾಗಿ ಸಿನಿಮಾ ದೃಶ್ಯವನ್ನು ರಂಗಕ್ಕೆ ಹೊಂದಿಸುವ ಪ್ರಯತ್ನ ಮಾಡಲ್ಪಡುತ್ತದೆ. ಯಕ್ಷಗಾನ ವೇಷಗಳ ವಿವಿಧ ಭಂಗಿಗಳು ಸಿನಿಮಾ ನಟರ ಶೈಲಿಯಲ್ಲಿ  ಎದ್ದು ನಿಲ್ಲುತ್ತವೆ. ಈ ಸಂಕಲನ ಮಿಶ್ರಣಗಳು ನಮ್ಮ ಅಭಿರುಚಿಯ ದರ್ಶನವಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಕೂಡ ಇಲ್ಲವಾಗಿದೆ. ಯಾವುದನ್ನು ಬಳಕೆಗೆ ತರಬೇಕೊ ಅದನ್ನು ಗಂಭೀರವಾಗಿ ಚಿಂತಿಸದೇ ಅನಾವಶ್ಯಕ ದುರಹಂಕಾರಿ ಪ್ರವೃತ್ತಿಯ ಬೆಳವಣಿಗೆಯಾಗುತ್ತಿದೆ. ಸ್ವಲ್ಪ ಪ್ರಸಿದ್ಧಿ ಸಿದ್ಧಿಯಾದೊಡನೆ ಸ್ಥಾನ ಮಾನ ಅರಿಯದ ವರ್ತನೆ ಸಹೃದಯೀ ಅಭಿಮಾನೀ ಪ್ರೇಕ್ಷಕನನ್ನು ರಂಗಸ್ಥಳದಿಂದ ದೂರ ಸರಿಸುತ್ತದೆ ಎಂಬುದನ್ನು ಮರೆಯಬಾರದು.

 ಹಿಂದೆ ಕಲಾವಿದರೂ ಪ್ರಾಯಸಂದು ವಯೋ ವೃದ್ಧರಾದಾಗ ತಮ್ಮ ಶಿಷ್ಯವರ್ಗದಿಂದ ಹಲವು ಚಾಕರಿಯನ್ನು ಮಾಡಿಸುತ್ತಿದ್ದರು. ಇಲ್ಲ ಶಿಷ್ಯವರ್ಗವೇ ಗುರುಭ್ಯೋ ನಮಃ ಎಂಬ ಭಾವದಿಂದ ನಿಷ್ಕಾಮಿಗಳಾಗಿ ಗುರುಸೇವೆಯನ್ನು ಮಾಡುತ್ತಿದ್ದರು. ಇಲ್ಲಿ ಗುರು ಶಿಷ್ಯ ಸಂಬಂಧ  ಭಾವನಾ ಪ್ರಪಂಚದ ತಳಹದಿಯಾಗಿರುತ್ತದೆ. ಆದರೆ ಇಂದು ಇದರಲ್ಲೂ ದುರಹಂಕಾರೀ ಪ್ರವೃತ್ತಿ ಕಂಡುಬರುತ್ತದೆ. ತಾನು ದೈಹಿಕನಾಗಿ ಸಮರ್ಥನಾದರೂ ಪ್ರಪಂಚ ಮುಖಕ್ಕೆ ತೋರಿಸುವುದಕ್ಕಾಗಿ ಅನಾವಶ್ಯಕ ದುಡಿಮೆಯನ್ನು ಪಡೆಯುತ್ತಾರೆ. ಅದಕ್ಕಾಗಿ ಭಟ್ಟಂಗೀತನ ಕೂಡ ಬೆಳೆಯುವುದು ಇನ್ನೊಂದು ದುರ್ದೆಶೆ. ಕಲೆಗಿಂತ ತಾನು ದೊಡ್ಡವನೆಂಬ ಅಹಂಭಾವ. ಕಲೆಗಿಂತಲೂ ತನ್ನ ಸ್ಥಾನ ಮಾನ ಹಿರಿಯದು ಎಂಬ ಚಿಲ್ಲರೆ ಬುದ್ದಿ. ಸಲಾಮು ಪಡೆದುಕೊಳ್ಳುವುದಕ್ಕಾಗಿ ಯಾವ ಹಂತಕ್ಕೂ ಇಳಿಯುವ ಸ್ವಾರ್ಥ. ಕಲೆಗಿಂತಲೂ ತನ್ನ ಸ್ಥಾನ ದೊಡ್ಡದು ಎಂದು ತೋರುವ ಪ್ರವೃತ್ತಿಯಿಂದ ಹಲವು ಸಲ ಕಲಾವಿದನೊಂದಿಗೆ ಕಲೆಯೂ ವಿಜ್ರಂಭಿಸಬಹುದು. ಆದರೆ ಈ ವಿಜ್ರಂಭಣೆಯ ಹಿರಿಮೆ ಗಾಳಿ ತುಂಬಿದ ಬಲೂನಿನಂತೆ ತಾತ್ಕಾಲಿಕ, ಇದನ್ನು ಇನ್ನಷ್ಟು ವಿಶ್ಲೇಶಿಸಬಹುದು ಆದರೆ ಬರೀ ’ಛೇ...’ ಎಂಬ ಉದ್ಗಾರವಷ್ಟೇ ಅಂತಿಮ ಪ್ರತಿಕ್ರಿಯೆಯಾಗಬಲ್ಲುದು.   ಎಪ್ಪತರ ದಶಕದ ಪ್ರಾಯ ಸಂದು ಹೋದರೂ ಗೋವಿಂದ ಭಟ್ಟರಂತಹ ಯಕ್ಷಗುರುಗಳು ಅಪಾರ ಶಿಷ್ಯವರ್ಗವನ್ನು ಪಡೆದಿದ್ದರೂ ಸಹ  ಇಂದಿಗೂ ಸ್ವಾವಲಂಬಿಯಾಗಿ ತಮ್ಮ ಕೆಲಸವನ್ನು ತಾವೇ ಮಾಡುತ್ತಾರೆ. ಇಂದಿಗೂ ಅವರು ಪರರಿಂದ ಚಾಕರಿಯನ್ನು ಮಾಡಿಸಿದ್ದನ್ನು ಕಂಡ ನಿದರ್ಶನವೇ ಇರಲಾರದು. ಆದರೆ ಸ್ವಯಂ ಸೃಷ್ಟಿಸಿದ ಜನಪ್ರಿಯತೆಯಿಂದ ಉನ್ಮತ್ತರಾಗಿ ಅರ್ಧರಾತ್ರಿಯಲ್ಲಿ ಛತ್ರಿ ಹಿಡಿಯುವ ಪ್ರವೃತ್ತಿ ಇಂದಿನ ಯುವ ಪೀಳಿಗೆಯಲ್ಲಿ ಇದೆ ಎಂದಾಗ ಯಾವುದನ್ನು ಬಳಕೆಗೆ ತರಬೇಕೋ ಅದನ್ನು ಯೋಚಿಸುವುದಕ್ಕೆ ಸಮಯವಾದರೂ ಎಲ್ಲಿದೆ?

ಕಲೆಯೆಂಬುದು ಹರಿಯುತ್ತಿರುವ ನದೀ ಪ್ರವಾಹದಂತೆ. ಆ ಪ್ರವಾಹದಲ್ಲಿ ಬೃಹತ್ ಮರವೂ ತೇಲಿ ಬರಬಹುದು ಅಥವಾ ಸಣ್ಣ ತೃಣವೂ ತೇಲಿ ಬರಬಹುದು. ಆದರೆ ಯಾವುದೂ ಸ್ಥಿರವಲ್ಲ. ಹರಿಯುತ್ತಲೋ ಮುಳುಗುತ್ತಲೋ ಇರುತ್ತದೆ. ಕಲಾವಿದ ಎಷ್ಟು ದೊಡ್ದವನಾದರೂ ಕಾಲ ಮಿತಿಯನ್ನು ಮೀರುವುದು ಅಸಾಧ್ಯ.



Sunday, December 22, 2013

ಗೀತೋಪದೇಶ ಯಕ್ಷಗಾನ ಹೀಗೊಂದು ವ್ಯಾಖ್ಯಾನ ಭಾಗ – ೪

ವಿಶ್ವರೂಪ ದರ್ಶನ
“ಧೃತ ರಾಷ್ಟ್ರ ಹುಟ್ಟು ಕುರುಡ   ಜನ್ಮಾಂಧ. ಕೈಹಿಡಿದ ಸತಿ ಗಾಂಧಾರಿ ಕಣ್ಣಿದ್ದೂ ಕಣ್ಣಿಗೆ ಬಟ್ಟೆ ಕಟ್ಟಿ ಅಂಧಳಾಗಿ ಪತಿವೃತೆಯ ವೇಷತೊಡುತ್ತಾಳೆ. ಇದ್ದ ಕಣ್ಣನ್ನೂ ಕಟ್ಟಿಕೊಂಡ ಅವಳು ಬುದ್ಧಿಯಿಂದ ಕುರುಡಿಯಾಗಿಬಿಡುತ್ತಾಳೆ. ದುರಂತ ಅಂದರೆ ಇದು. ಇವರಿಬ್ಬರೂ ಕುರುಡರಾದರೆ,  ಹುಟ್ಟಿದ ಮಕ್ಕಳು ಕೆಟ್ಟ ಕೌರವ ಸಂತಾನವಾಗದೇ ಬೇರೆ ಇನ್ನೇನಾಗಲು ಸಾಧ್ಯ?  ಸಂಸಾರದಲ್ಲಿ ಒಂದೋ ಅಪ್ಪ ಕಣ್ಣು ತೆರೆದಿರಬೇಕು ಇಲ್ಲಾ ಅಮ್ಮನ ಕಣ್ಣು ತೆರೆದಿರಬೇಕು ಇಬ್ಬರ ಕಣ್ಣು ಕಾಣುವ ಕೆಲಸ ಮಾಡದಿದ್ದಾಗ ಹುಟ್ಟಿದ ಮಕ್ಕಳು ಕೌರವ ಸಂತಾನದಂತೆ ಕೆಟ್ಟ ಮಕ್ಕಳೇ ಆಗಿಬಿಡುತ್ತಾರೆ. ಅಪ್ಪ ಅಮ್ಮನ ಸ್ಥಾನಕ್ಕೆ ಮಹಾ ಭಾರತದ ಸಂದೇಶವಿದು.  ಕಣ್ಣಿದ್ದೂ ಕುರುಡಾದ ಗಾಂಧಾರಿ ಒಂದೆಡೆ  ಹೃದಯದಿಂದಲೂ ಮತಿಯಿಂದಲೂ ಕುರುಡನಾದ ಧೃತರಾಷ್ಟ್ರ ಒಂದೆಡೆ.“

ಅಜ್ಞಾನದ ಅರಿವು ಉಂಟು ಅಂತ ಭಾಸವಾದಾಗ ಆ ಅಜ್ಞಾನವನ್ನು ಹೋಗಲಾಡಿಸುವುದಕ್ಕೆ ಒಂದು ಉಪಾಧಿ ಅಂದರೆ ಮಾಧ್ಯಮವನ್ನು ಸೃಷ್ಟಿಸಬೇಕಾಗುತ್ತದೆ. ನಗರದಲ್ಲಿ ಇದ್ದಂತಹ ಮಕ್ಕಳಿಗೆ ಪಾಠ ಹೇಳುವಾಗ ಕಾಡಿನಲ್ಲಿ ಒಂದು ಸಿಂಹ ಅಂತ ಉಂಟು. ಸಿಂಹವನ್ನು ತೋರಿಸುವುದಕ್ಕೆ  ಹಾಗೆ ಸಿಂಹದ ಹತ್ತಿರ ಕೊಂಡು ಹೋಗುವುದು ಸಾಧ್ಯವೇ? ಅದಕ್ಕಾಗಿ ಸಿಂಹದ ಅರಿವನ್ನು ಉಂಟು ಮಾಡುವುದಕ್ಕೆ ಬೇರೆ ಮಾಧ್ಯಮವನ್ನು ಬಳಸಬೇಕಾಗ್ತದೆ.   ಪ್ರತ್ಯಕ್ಷ ಸಿಂಹದ ಬಳಿಗೆ ಹೋದರೆ ಹೋದವನು ಇರುವುದು ಇಲ್ಲ.,  ಹಾಗಾಗಿ ನೇರ ಬ್ರಹ್ಮವನ್ನು ಮುಟ್ಟಿದವನು ಬ್ರಹ್ಮವೇ ಆಗ್ತಾನೆ. ಈ ಬ್ರಹ್ಮವನ್ನು ತೋರಿಸಿಕೊಡುವಲ್ಲಿ ಒಂದು ಅರ್ಥವತ್ತಾದ ಮಾಧ್ಯಮ ಉಪಾಧಿ ಸೃಷ್ಟಿಸಬೇಕು. ಅದುವೇ ಕರ್ಮ. ಕರ್ಮ ಎಂದರೇನು ಎಂಬುದು ಇಲ್ಲಿ ಅರ್ಥವಾಗುತ್ತದೆ. ಈ ಕರ್ಮ ಅಜ್ಞಾನದಿಂದ ಹುಟ್ಟುತ್ತದೆ.  ಈ ಅಜ್ಞಾನ ಹುಟ್ಟುವುದನ್ನೇ “ಮಾಯೆ” ಎನ್ನಬೇಕು.


ಚಿತ್ರ ಕೃಪೆ : ಉಲ್ಲಾಸ್

ಮಾಯೆ ಎಂದರೆ ಏನು? ಬಹಳ ಸರಳವಾದ ಉದಾಹರಣೆ ಇಲ್ಲಿ ಬಳಸಿದ್ದಾರೆ. ಗಣಿತ ಶಾಸ್ತ್ರದಲ್ಲಿ ಶೂನ್ಯ ಜಾಗಕ್ಕೆ ಅಲ್ಲಿಯ ಮೌಲ್ಯ ತಿಳಿಯದೇ ಇದ್ದಾಗ ಒಂದು ಸಂಖ್ಯೆಯ ಬದಲು ಒಂದು ಅಕ್ಷರವನ್ನು ಕಲ್ಪಿಸುವುದು. ಹಾಗೆ ಅ ಅಜ್ಞಾನಕ್ಕೆ ಒಂದು ಕಲ್ಪನೆ, ಅದು ಮಾಯಾ ಅಂತ ಕಲ್ಪಿಸುವುದು. ಅದನ್ನು ಕಲ್ಪಿಸದ ವಿನಹ ಜ್ಞಾನಕ್ಕೆ ರೂಪ ಸಿಗುವುದಿಲ್ಲ. ಮಾಯೆ ಎಂದರೆ ಇಲ್ಲಿ ಅದು ಭಗವಂತನಿಂದಲೇ ಹುಟ್ಟಿತು ಎಂದು ಕಲ್ಪಿಸಿಕೊಳ್ಳಲಾಗುತ್ತದೆ. ಇದು ಕೇವಲ ಕಲ್ಪನೆ. ಯಾಕೆ? ಅದು ಉಂಟು ಅಂತ ಕಲ್ಪಿಸದೇ ಜ್ಞಾನದ ಹಾದಿ ಹುಡುಕುವುದಕ್ಕೆ ಸಾಧ್ಯವಾಗುವುದಿಲ್ಲ.  ಇಲ್ಲಿ ಜ್ಞಾನ ಎಂಬುದು ಕೊನೆಯ ಹಂತ.  ಇಲ್ಲಿ ಕೊನೆಯ ಹಂತವನ್ನು ಪ್ರಥಮ ಅಂತ ಅಂಗೀಕರಿಸಿದರೆ ಇದು ಸುಲಭ. “ ಅಹಂ ಬ್ರಹ್ಮಾಸ್ಮಿ” ಅಂತ ಮೊದಲೇ ಹೊಳೆದರೆ ಮತ್ತೆ ಅದರ ಮಾಧ್ಯಮ ಸುಲಭದಲ್ಲಿ ಸಿಗುತ್ತದೆ.

ಒಬ್ಬ ತಂದೆಗೆ ಮೂರು ಮಕ್ಕಳಿದ್ದರಂತೆ. ಮೂರು ಮಕ್ಕಳಿಗೆ ಎಲ್ಲವನ್ನು  ಅವನು ಪಾಲು ವಿಂಗಡಿಸಿಟ್ಟ. ಹಿರಿಯ ಮಗನಿಗೆ ತನ್ನ ಅಸ್ತಿಯಲ್ಲಿ ಅರ್ಧ ಪಾಲು ಇಟ್ಟ. ಎರಡನೆಯವನಿಗೆ ಅದರ ಅರ್ಧ, ಕೊನೆಯವನಿಗೆ ಕೊನೆಯ ಅರ್ಧ. ಅವನು ಬರೆದು ಇಟ್ಟದ್ದರಿಂದ ಅದು ಹಾಗೆ ಪಾಲಾಗಬೇಕು. ಅವನ ಎಲ್ಲ ಸೊತ್ತುಗಳು ಪಾಲಾಯಿತು. ಅವನ ಯಜಮಾನಿಕೆಯಲ್ಲಿ ಏಳು ಪ್ರಾಣಿಗಳು ಇತ್ತು. ಏಳು ಪ್ರಾಣಿ ಅದು ದನ ಎಂದು ಇಟ್ಟುಕೊಳ್ಳುವ. ಆ ಏಳನ್ನು ಹೇಗೆ ಪಾಲು ವಿಂಗಡಿಸುವುದು? ದೊಡ್ಡವನಿಗೆ ಅರ್ಧ, ಏಳರ ಅರ್ಧ ಅದು ಸಾಧ್ಯವಾಗುವುದಿಲ್ಲ. ಹಾಗಾಗಿ ವಿಂಗಡನೆ ಕಠಿಣವಾಯಿತು. ಆವಾಗ ಬುದ್ಧಿವಂತನೊಬ್ಬ ಏನು ಮಾಡಿದ ತನ್ನ ಕೊಟ್ಟಿಗೆಯಲ್ಲಿದ್ದ ಒಂದು ದನವನ್ನು ತಂದು ಈ ಏಳರ ಒಟ್ಟಿಗೆ ಕಟ್ಟಿದ. ಆನಂತರ ಪಾಲು ಸುಲಭವಾಯಿತು. ಏಳು ಮತ್ತು ಒಂದು ಎಂಟರ ಅರ್ಧ ನಾಲ್ಕು, ಎರಡನೆಯವನಿಗೆ ಉಳಿದ ನಾಲ್ಕರ ಅರ್ಧ ಎರಡು, ಮೂರನೆಯವನಿಗೆ ಮತ್ತೆ ಉಳಿದ ನಾಲ್ಕರ ಅರ್ಧ ಒಂದನ್ನು ಕೊಟ್ಟು ಉಳಿದ ಒಂದನ್ನು ಬುದ್ಧಿವಂತ ಹಿಂದಕ್ಕೆ ತೆಗೆದುಕೊಂಡ. ಆದ್ದರಿಂದ ಈ ಮಾಯೆ ಎಂಬುದು ಈ ಎಂಟನೇ ಪ್ರಾಣಿಯ ಹಾಗೆ. ಅದಿಲ್ಲದೇ ಈ ಏಳರನ್ನು ವಿಂಗಡಿಸುವ ಹಾಗಿಲ್ಲ. ಆ ಎಂಟು ಸೇರದ ವಿನಃ ಇದು ಪೂರ್ಣ ಆಗುವುದೇ ಇಲ್ಲ.

ಇದರ ಬದಲು ಕೊನೆಯಿಂದ ಪಾಲು ಮಾಡುತ್ತಾ ಬಂದಲ್ಲಿ, ಕೊನೆಯವನಿಗೆ ಒಂದು, ಮಧ್ಯದವನಿ ಅದರ ಇಮ್ಮಡಿ ಎರಡು, ಹಿರಿಯವನಿಗೆ  ಇದರ ಇಮ್ಮಡಿ ನಾಲ್ಕು ಹೀಗೆ ಮಾಯೆ ಎಂಬ ಎಂಟನೆಯದ್ದನ್ನು ಸೇರಿಸದೆ ಪಾಲು ಮಾಡುವುದಕ್ಕೆ ಸಾಧ್ಯವಾಗುತ್ತದೆ.

ಈ ಗಣಿತ ಸಮಸ್ಯಾ ರೂಪವನ್ನು ಇಲ್ಲಿ ಬಹಳ ಸೂಕ್ತವಾಗಿ ಬಳಸಿಕೊಂಡಿದ್ದಾರೆ. ಎಂಟನೆಯ ಮಾಯೆಯನ್ನು ಉಂಟು ಅಂತ ನಂಬಿದ್ರೆ ಉಂಟು ಇಲ್ಲಾ ಅಂತ ತಿಳಿದಲ್ಲಿ ಇಲ್ಲ. ಬಹಳ ಜಾಣತನ ಉದಾಹರಣೆಯ ಬಳಕೆ ಇದು. ಇಲ್ಲಿ ಅಜ್ಞಾನ ಎಂಬುದು ಉಂಟು ಎಂದು ತಿಳಿದುಕೊಂಡು ಜ್ಞಾನವನ್ನು ಹೊಂದುವುದಕ್ಕೆ ಕರ್ಮ ಎಂಬ ಉಪಾಧಿಯನ್ನು ಸೃಷ್ಟಿಸುವಾಗ ನಾವು ಎಂಟನೆಯ ಮಾಯೆಯನ್ನು ಅವಲಂಬಿಸಲೇ ಬೇಕಾಗುತ್ತದೆ ಎಂಬುದನ್ನು ಇಲ್ಲಿ ಹೇಳಲಾಗುತ್ತದೆ. ಜ್ಞಾನದ ಸಂಪೂರ್ಣ ಅರಿವಿದ್ದಾಗ ಈ ಅಜ್ಞಾನ ಮಾಯೆ ಕರ್ಮ ಇದೆಲ್ಲ  ಹುಟ್ಟಿಕೊಳ್ಳುವುದಿಲ್ಲ. ಅದುದರಿಂದ ಜ್ಞಾನ ಕರ್ಮದ ಬಗ್ಗೆ ತಿಳಿಯುವಲ್ಲಿ ಹಲವನ್ನು ಅರ್ಥಮಾಡಿಕೊಳ್ಳಬೇಕಿದೆ.

“ವಾಸಾಂಸಿ ಜೀರ್ಣಾನಿ ಯಥಾ ವಿಹಾಯಾ ನವಾನಿ ಗೃಹ್ಣಾತಿ ನರೋಪರಾಣಿ | ತಥಾ ಶರೀರಾಣಿ ವಿಹಾಯಾ ಜೀರ್ಣಾನ್ಯ ನ್ಯಾನಿ ಸಂಯಾತಿ ನವಾನಿ ದೇಹೀ"

"ಒಬ್ಬ ಮನುಷ್ಯನು ಹೇಗೆ ಹಳೆಯ ಬಟ್ಟೆಗಳನ್ನು ಬಿಟ್ಟು ಹೊಸ ಬಟ್ಟೆಗಳನ್ನು ತೊಟ್ಟುಕೊಳ್ಳುವನೋ ಹಾಗೆಯೇ ಆತ್ಮವು ಜೀರ್ಣವಾದ ದೇಹವನ್ನು ಬಿಟ್ಟು ಹೊಸ ದೇಹವನ್ನು ಸ್ವೀಕರಿಸುತ್ತದೆ. “

ಹುಟ್ಟು ಸಾವು ಅದರ ಸಣ್ಣ ವಿಶ್ಲೇಷಣೆಯನ್ನು ಭಗವದ್ಗೀತೆಯ ಈ ಶ್ಲೋಕದೊಂದಿಗೆ ವಿಷದೀಕರಿಸಲ್ಪಡುತ್ತದೆ.
ಜ್ಞಾನ ಎಂದರೇನು ಎಂದು ವಿವರಿಸಿದ ನಂತರ, ಆ ಜ್ಞಾನ ಸಿದ್ಧಿಗೆ ಕರ್ಮವನ್ನು ಹೇಳಲ್ಪಡುತ್ತದೆ. ಅದು ಎಂತಹ ಕರ್ಮ? ಕಾಮ್ಯಕರ್ಮವಾಗಿರಬಾರದು. ಒಂದು ಬಯಕೆಯನ್ನು ಗುರಿಯಾಗಿಸಿ ನಿರ್ವಹಿಸಿದ ಕರ್ಮವಾಗಬರದು, ಬದಲಾಗಿ ನಿಷ್ಕಾಮ ಕರ್ಮ. ಇದಕ್ಕೆ ಮೇಲಿನ ಶ್ಲೋಕವನ್ನು ಇಲ್ಲಿ ಉದ್ದರಿಸಲ್ಪಟ್ಟದ್ದು. ಒಬ್ಬ ಸನ್ಯಾಸಿ ಅತಿ ಜೋಪಾನದಿಂದ ಬಹಳ ಮಮತೆಯಿಂದ ಜಿಂಕೆಯ ಮರಿಯೊಂದನ್ನು ಸಾಕಿದನಂತೆ. ಒಂದು ಬಾರಿ ಆ ಜಿಂಕೆ ಕಳೆದು ಹೋದಾಗ ಅದರ ನೆನಪಲ್ಲೇ ವಿಲ ವಿಲ ಒದ್ದಾಡಿ ಪ್ರಾಣಬಿಟ್ಟನಂತೆ. ಆನಂತರ ಅವನ ಆತ್ಮ ಒಂದು ಜಿಂಕೆಯಾಗಿಯೇ ಜನ್ಮ ತಳೆಯಿತು. ಅಂದರೆ ಇಲ್ಲಿ ಬಂದ ಕರ್ಮ ವಾಸನೆ. ಹಳೆಯ ಬಟ್ಟೆಯನ್ನು ಕಳಚಿ ಹೊಸ ಬಟ್ಟೆಯನ್ನು ತೊಡುವಾಗ ಇಂತಹುದೇ ಬಟ್ಟೆ ತೊಡಬೇಕೆಂದೇನು ನಿಯಮವಿಲ್ಲವಲ್ಲ. ಹಾಗೆ ಇಲ್ಲಿ ಆ ಕರ್ಮ ವಾಸನೆ ಬಿಡದೇ ಹೋಯಿತು.

ಅನುಸರಿಸುವ ಕರ್ಮ ಕಾಮ್ಯ ಕರ್ಮವಾಗಿರದೆ ನಿಷ್ಕಾಮ ಕರ್ಮವಾಗಿರಬೇಕು. ಆ ಕರ್ಮ ಹೇಗಿರಬೇಕು? ಹಿಂದಿನ ಕರ್ಮವಾಸನೆಯನ್ನು ತೊಳೆಯುವಂತಹುದಾಗಿರಬೇಕು. ಬಹಳ ಚಿಂತನೆಯ ವಿಷಯ ಇಲ್ಲಿ ಪ್ರಸ್ತಾಪಿಸಲ್ಪಟ್ಟಿದೆ. ಕೆಲವನ್ನು ಸರಳವಾಗಿಯಾದರೂ ನಿರೂಪಿಸದೇ ಇದ್ದಲ್ಲಿ ಈ ವಿವರಣೆ ಪರಿಪೂರ್ಣವಾಗುವುದಿಲ್ಲ. ಈ ಜನ್ಮದ ಕರ್ಮ,  ಪೂರ್ವಜನ್ಮದ ಕರ್ಮವಾಸನೆಯನ್ನು ತೊಳೆಯುವಂತಹುದಾಗಿರಬೇಕು.  ಅದಕ್ಕೆ ಒಂದು ಉದಾಹರಣೆ, ಪೂರ್ವ ಕರ್ಮದಿಂದಲೇ ಈಗಿನ ಕರ್ಮ ಉಂಟಾಗಿರುವುದು. ಆ ಕರ್ಮ ಶುದ್ದಿಕರಿಸಲ್ಪಡಬೇಕು. ನೀರಿನಿಂದಲೇ ಕೆಸರು ಉಂಟಾಗುತ್ತದೆ. ಆ ಕೆಸರನ್ನು ತೊಳೆಯುವಲ್ಲಿ ನೀರೇ ಹೇಗೆ ಉಪಯೋಗಿಸಲ್ಪಡುತ್ತದೆಯೋ ಹಾಗೆ. ನೀರಿನಿಂದ ಉಂಟಾದ ಕೆಸರನ್ನು ತೊಳೆಯುವುದಕ್ಕೆ ಕೆಸರು ಇಲ್ಲದೇ ಇದ್ದಂತಹ ಶುದ್ದ ನೀರನ್ನು ಉಪಯೋಗಿಸಲ್ಪಡಬೇಕು. ಅದಕ್ಕೆ ನಿಯತವಾದ ಕರ್ಮವನ್ನು ಅದೂ ನಿಷ್ಕಾಮ ಕರ್ಮವನ್ನು ಅಚರಿಸುತ್ತಾ ಹೋಗಬೇಕು. ಕರ್ತವ್ಯಕ್ಕಾಗಿ ಕರ್ತವ್ಯ. ನಿತ್ಯ ಕರ್ಮದ ಸಂಧ್ಯಾವಂದನೆಯ ಸಂಕಲ್ಪ ಮಂತ್ರ  ’ಮಮೋಪಾತ್ತ ದುರಿತ ಕ್ಷಯದ್ವಾರಾ...’ ಎಂಬ  ಸಂಕಲ್ಪವಾಗಬೇಕೇ ಹೊರತು ಧನಂ ಧಾನ್ಯಮ್  ಎಂಬ ವಾಂಛೆ ಇರಕೂಡದು. ಇದರ ಅರ್ಥ, ನಾವು ನಿತ್ಯ ಮಾಡುವ ದೈವೋಪಾಸನೆ ಅದು ನಿತ್ಯ ಕರ್ಮ. ಅಲ್ಲಿ ಕರ್ಮವೇ ಸಂಕಲ್ಪ.  ಅದರಲ್ಲಿ ಬೇಡಿಕೆ ಇರಕೂಡದು. ಅದು ಅನಿವಾರ್ಯ ಮಾಡಲೇ ಬೇಕಾದ ಕ್ರಿಯೆ. ವೃತ ಪೂಜೆ ಮುಂತಾದವುಗಳು ಕಾಮ್ಯ ಕರ್ಮ ಎನಿಸಲ್ಪಡುತ್ತದೆ. ಇದರಲ್ಲಿ ಒಂದು ನಿರ್ದಿಷ್ಟ ಬಯಕೆಯನ್ನು ಗುರಿಯಾಗಿಸಿ ಈ ಕಾರ್ಯದ ಸಂಕಲ್ಪ ಮಾಡುತ್ತಾರೆ.

ಕರ್ಮದ ವಿವರಣೆಯ ನಂತರ ಭಗವಂತನ ಹಿತೋಪದೇಶ ಮುಂದುವರೆಯುತ್ತದೆ. ಇಲ್ಲಿ ಹಲವಾರು ವಿಚಾರಗಳು ಪುಂಖಾನು ಪುಂಖವಾಗಿ ಎಸೆಯಲ್ಪಡುವಾಗ ಹಲವು ಸಲ ಮೂಲ ಧಾರೆಯನ್ನು ಹಿಂಬಾಲಿಸುವುದು ಬಹಳ ಕಷ್ಟವಾಗುತ್ತದೆ. ಆದರೆ ಯಕ್ಷಗಾನದ ಅರ್ಥಗಾರಿಕೆಯ ಸೊಗಸು ಮತ್ತದರ ಕ್ರಮ ಅರ್ಥವಾದಾಗ ಅದು ಕಠಿಣವೆನಿಸುವುದಿಲ್ಲ
.
ಇಲ್ಲಿ ಬಂಧುವರ್ಗ ನಷ್ಟ ಹೊಂದಿ ತರುವ ಜಯ ಅರ್ಥವಿಲ್ಲದ್ದು ಯಾರಿಗಾಗಿ ಈ ಜಯವಾಗಬೇಕೋ ಅವರೇ ನಷ್ಟ ಹೊಂದಿದರೆ?,  ಅದು ಇನ್ನಷ್ಟು ದುಃಖಗಳಿಗೆ ಕಾರಣವಾಗುತ್ತದೆ ಎಂಬ ಶಂಕೆಯನ್ನು ಬಿಡಬೇಕು. ಇಲ್ಲಿ ರಾಜ್ಯ ಪ್ರಾಪ್ತಿಯಲ್ಲ. ಕರ್ತವ್ಯಕ್ಕಾಗಿ ಕರ್ತವ್ಯ. ಕ್ಷತ್ರಿಯನಿಗೆ ಯುದ್ದವೇ ಕರ್ತವ್ಯ. ಸುಖ ದುಃಖ ಲಾಭ ನಷ್ಟ ಇದನ್ನು ಸರೀದೂಗಿಸಿಕೊಂಡು ಸ್ಥಿತಪ್ರಜ್ಞನಾಗಿ ಯುದ್ದ ಮಾಡಬೇಕು. ಇಲ್ಲಿ ಜಯ ಲಾಭವಾದರೆ ಹಿಗ್ಗದೆ ನಷ್ಟವಾದರೆ ದುಃಖಿಸದೇ ಇದು ಕರ್ತವ್ಯ ನಿರ್ವಹಿಸುವ ಯೋಗವೆಂಬಂತೆ ಸ್ವೀಕರಿಸಿ ಇದನ್ನು ಕರ್ಮ ಯೋಗವಾಗಿ ಆಚರಿಸಬೇಕು.

ಇಲ್ಲಿ ಬ್ರಹ್ಮ ಸ್ವರೂಪವಾಗಿಯಲ್ಲ, ಕೃಷ್ಣ ಭಗವತ್ ಸ್ವರೂಪನಾಗಿ ಉಪದೇಶ ಮಾಡ್ತಾನೆ. ಹಾಗಾಗಿಯೇ ಈ ಗೀತಾಮೃತ ಭಗವದ್ಗೀತೆ ಎನಿಸಲ್ಪಡುತ್ತದೆ.  

ಇಲ್ಲಿ ಬರುವ ನಾಲ್ಕು ಹಂತಗಳ ವಿರವರಣೆಯನ್ನು ಸ್ಥೂಲವಾಗಿ ಪ್ರಸ್ತುತ ಪಡಿಸಲಾಗಿದೆ. ಇದು ಕೇವಲ ಇಲ್ಲಿನ ದೃಷ್ಟಿಕೋನ. ಈ ತಾಳ ಮದ್ದಲೆ ಕೇಳಿದ ಅಷ್ಟೂ ಸಲವೂ ಹೊಸ ಹೊಸ ಅರ್ಥ ಕಲ್ಪನೆಗಳನ್ನು ಮೊಗೆ ಮೊಗೆದು ಕೊಡುವ ಅರ್ಥಗಾರಿಕೆ ಅತ್ಯಂತ ವಿಶಿಷ್ಟ ಎನಿಸಲ್ಪಡುತ್ತದೆ.ಯಕ್ಷಗಾನ ಅರ್ಥ ಸಾಹಿತ್ಯದ ಪುಟಗಳು ಅದೆಷ್ಟು ವಿಶಾಲವಾಗಿದೆ ಎಂದು ಆಶ್ಚರ್ಯವಾಗುತ್ತದೆ. ಆರಂಭದಲ್ಲಿ ಅರ್ಜುನನಿಗೆ ಉಂಟಾದ ವಿಷಾದ ಯೋಗ. ತನ್ನ ವಂಶದ ಮಕ್ಕಳ ಕಲಹವನ್ನು ಶಮನ ಮಾಡಬೇಕಾದ ಹಿರಿಯನಿಗೆ ಈ ಕಲಹವನ್ನು ಕಾಣುವ ತವಕ. ಮನೆ ಮಂದಿಯ ಜಗಳಕ್ಕೆ ಊರನ್ನೇ ಸೇರುವಂತೆ ಮಾಡಿ ಎಲ್ಲರನ್ನು ಸಾಕ್ಷಿಗಳನ್ನಾಗುವಂತೆ ಮಾಡಿದರೂ ಅದನ್ನು ಕಾಣುವ ತವಕ. ಕಿರಿಯರ ಜಗಳದಲ್ಲಿ ಹಿರಿಯರು ದೇಣಿಗೆ ಸಲ್ಲಿಸಬಾರದು. ಆದರೆ ವಿಪರ್ಯಾಸವೆಂದರೆ ಯುದ್ದ ಸಾರುವ ಮೊದಲ ಶಂಖನಾದ ಹೊರಡುವುದೇ ಭೀಷ್ಮನ ರಥದಿಂದ ! ಇದು ಮತ್ತೊಂದು ವಿಪರ್ಯಾಸ.

ಅರ್ಜುನನ ಕ್ಲೈಬ್ಯದ ನಂತರ ಅದಕ್ಕೆ ಕಾರಣಗಳನ್ನು ಹುಡುಕಿ ನಾನು ನನ್ನದು ಎಂಬುದರ ವಿಶ್ಲೇಷಣೆ. ನಂತರ ನಾನು ಮಾತು ಅತ್ಮದ ವ್ಯಾಖ್ಯಾನ. ಕೊನೆಯಲ್ಲಿ ಜ್ಞಾನ ಮತ್ತು ಕರ್ಮದ ಬಗೆಗಿನ ಉಪದೇಶ. ಸ್ಥೂಲವಾಗಿಯಾದರೂ ಇದನ್ನು ವಿಶಿಷ್ಟವಾಗಿ ಅಳವಡಿಸಿದ ರೀತಿ, ಯಕ್ಷಗಾನದ ತಾಳಮದಲೆಯ ಮಟ್ಟಿಗೆ ಸಾಹಸ ಮಯವಾಗುತ್ತದೆ. ಯಾಕೆಂದರೆ ಒಂದು ಬೃಹದ್ ಗ್ರಂಥದ ವಿಚಾರ ಸಂಪತ್ತಿನ ಲೆಕ್ಕ ಒಪ್ಪಿಸುವ ಹಾಗೆ ಆಗಬಾರದು, ಬದಲಾಗಿ ವಿಚಾರ ಸಂಪತ್ತಿನ ಮೌಲ್ಯ ಅರಿವನ್ನು ಉಂಟು ಮಾಡುವ ಹಾಗಿರಬೇಕು. ಇಲ್ಲಿ ಒಪ್ಪಿಸುವ ಒಂದೊಂದು ವಾಕ್ಯವೂ ಮುದ್ರಾವಾಕ್ಯದಂತೆ ಗಂಭೀರತೆಯಿಂದ ಕೂಡಿಬರಬೇಕು. ಶ್ರೀಕೃಷ್ಣನಾಗಿ ಶೇಣಿ ಗೋಪಾಲ ಕೃಷ್ಣ ಭಟ್ ಮಾತು ಅರ್ಜುನನಾಗಿ ಪೆರ್ಲ ಕೃಷ್ಣ ಭಟ್ ಸೂಕ್ತವಾಗಿ ಈ ಕಾರ್ಯವನ್ನು ನಿರ್ವಹಿಸಿದ್ದಾರೆ. ಇಲ್ಲಿ ಬರುವ ಪ್ರತಿಯೊಂದು ವೈಚಾರಿಕ ಜಿಜ್ಞಾಸೆಯನ್ನು ಒಪ್ಪಿಸುವುದು ಮತ್ತು ಪರಿಹರಿಸುವುದು ಇವೆರಡನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎನ್ನಬಹುದು. ಕೃಷ್ಣನ ಪ್ರತಿಯೊಂದು ವೈಚಾರಿಕ ವಿವರಣೆಯ ನಂತರ ಆ ವಿವರಣೆಗಳು ಅರ್ಥಾವಾಗುವುದು ಅರ್ಜುನನ ಅಂತಿಮ ಟಿಪ್ಪಣಿ ಒಪ್ಪಿಸಿದಾಗ. ಶೇಣಿಯವರು ಪುಂಖಾನು ಪುಂಖವಾಗಿ ಮರದ ಮೇಲಿನ ಹಣ್ಣುಗಳನ್ನು ಗೊಂಚಲು ಗೊಂಚಲಾಗಿ ಉದುರಿಸಿದಂತೆ ವಿಚಾರಗಳನ್ನು ಪ್ರವಚಿಸುತ್ತಾ ಹೋದರೆ,  ಅದನ್ನು ಅದೇ ವೇಗದಲ್ಲಿ ಗ್ರಹಿಸುವ ಶಕ್ತಿ ನಮ್ಮಲ್ಲಿರುವುದಿಲ್ಲ ಎಂದಾಗ, ಬಿದ್ದ ಹಣ್ಣುಗಳನ್ನೆಲ್ಲ ಹೆಕ್ಕಿ ಬುಟ್ಟಿಯಲ್ಲಿ ಅಂದವಾಗಿ ಜೋಡಿಸಿಡುವ ಹಾಗೆ ಪೆರ್ಲ ಕೃಷ್ಣ ಭಟ್ಟರು ಅದಕ್ಕೆ ಒಂದು ಸೂಕ್ತ ಮುಕ್ತಾಯವನ್ನು ಒದಗಿಸುತ್ತಾರೆ. ಹಾಗೆ ಗೀತೋಪದೇಶದ ಪರಿಸಮಾಪ್ತಿಯೂ ಸುಂದರ ಮುಕ್ತಾಯದೊಂದಿಗೆ ಸಮಾಪನಗೊಳ್ಳುತ್ತದೆ. ಬಹುಶಃ ಈ ಕೊನೆಯ ಟಿಪ್ಪಣಿ ಇಲ್ಲವಾದರೆ ಇದನ್ನೆಲ್ಲ ಪೋಣಿಸಿ ಅರ್ಥ ಮಾದಿಕೊಳ್ಳುವುದೂ ಕಠಿಣ.

ಇನ್ನು ಈ ಪ್ರಸಂಗದ ಬಗ್ಗೆ ಕಲಾವಿದರ ಬಗ್ಗೆ ಒಂದೆರಡು ಅನಿಸಿಕೆಗಳನ್ನು ಹೇಳದೇ ಇದ್ದರೆ ಅದು ಅಪೂರ್ಣವಾದೀತು.
ಚಿತ್ರ ಕೃಪೆ : ಉಲ್ಲಾಸ್
“ ಗೀತೋಪದೇಶ” ಇದೂ ಮಹಾಭಾರತದ ಭೀಷ್ಮ ಪರ್ವದಲ್ಲಿ ಬರುವ ಪ್ರಸಂಗ. ಯಕ್ಷಗಾನದಲ್ಲೂ ಹಾಗೆ ಭೀಷ್ಮ ಪರ್ವ ಪ್ರಸಂಗದಲ್ಲಿ ಆರಂಭದಲ್ಲಿ ಕೌರವ ಭೀಷ್ಮ ಸಂವಾದ, ನಂತರ ಗೀತೋಪದೇಶ ಆಮೇಲೆ ಕರ್ಮಬಂಧ ಮತ್ತು ಭೀಷ್ಮ ಪರ್ವ. ವಾಸ್ತವದಲ್ಲಿ ಈ ಗೀತೋಪದೇಶ ಪ್ರಸಂಗ ಮಾತ್ರ ಅಪರೂಪವಾಗಿದೆ ಮಾತ್ರವಲ್ಲ ಅದು ಇಲ್ಲವೇ ಇಲ್ಲ ಎನ್ನ ಬಹುದು. ಇದು ನಮ್ಮ ಚಿಂತನೆಯು ಹರಿಯುವ ದಿಕ್ಕನ್ನು ತೋರಿಸುತ್ತದೆ. ಯಾಕೆಂದರೆ ಇದನ್ನು ಅನುಭವಿಸಬೇಕಾದರೆ ನಮ್ಮಲ್ಲಿ ವಿವೇಚನಾ ಶಕ್ತಿ ಇರಬೇಕು. ದುರಂತವೆಂದರೆ ವಿವೇಚನೆಯು ಕಷ್ಟವಾಗಿ ಅದರಲ್ಲೂ ನಾವು ಆರಾಮವನ್ನು ಸುಲಭವನ್ನು ಬಯಸುತ್ತೇವೆ. ಹಾಗಾಗಿ ಪ್ರಸಂಗದ ಈ ಭಾಗವನ್ನೇ ಕಿತ್ತು ಹಾಕಲಾಗುತ್ತದೆ. ಯಕ್ಷಗಾನ ಅಥವಾ ತಾಳ ಮದ್ದಲೆ ಎಂದರೆ ಯಾವುದಾದರೂ ’ಕಾಳಗ” ಇರಲೇ ಬೇಕೆಂಬ ಅಲಿಖಿತ ನಿಯಮವಿದೆ. ಯಾಕೆಂದರೆ ಎದುರಾಳಿಗೆ ಮಾನಿನ ವ್ಯಂಗ್ಯದಿಂದ (ಡೋಸು) ತಿವಿದು ಚಪ್ಪಾಳೆ ಗಿಟ್ಟಿಸಿದರೆ ಅದು ತಾಳ ಮದ್ದಲೆ ಎಂಬ ಕಲ್ಪನೆ ಇದೆ. ಅರೋಗ್ಯ ಪೂರ್ಣವಾದ ಸಂವಾದ ವೈಚಾರಿಕ ಮಂಥನ ದೂರವಾಗಿಯೇ ಉಳಿದಿದೆ. ಒಳ್ಳೆಯದನ್ನು ಯೋಚಿಸದಷ್ಟೂ ಸೋಮಾರಿಗಳಾಗಿ ಬಿಟ್ಟಿದ್ದೇವೆ ಎಂದನಿಸುತ್ತದೆ.


ಇಲ್ಲಿ ಪೆರ್ಲ ಮತ್ತು ಶೇಣಿ ಸಂವಾದದ ಜತೆಯಾಟ ಅದು ಮೌಲ್ಯದ ಕರಂಡಕವನ್ನು ಅಲುಗಾಡಿಸಿ ಪರೀಕ್ಷಿಸಿ ಇಟ್ಟ ಹಾಗೆ. ನಮ್ಮ ವಿವೇಚನಾ ಶಕ್ತಿ ಮತ್ತು ಬುದ್ದಿ ಮತ್ತೆಯನ್ನು ಒರೆಗೆ ಹಚ್ಚುತ್ತದೆ. ಪೆರ್ಲ ಪಂಡಿತರು ಮಹಾ ಮೇಧಾವಿಗಳು ಗುರುಗಳು ಶಾಲಾ ಶಿಕ್ಷಕರಾಗಿ ಇಲ್ಲಿ ಬಂದ ಸಮಸ್ಯಾ ಪರಿಹಾರವನ್ನು ಅದನ್ನು ಅರ್ಜುನ ಅರ್ಥ ಮಾಡಿಕೊಂಡ ವಿಧಾನವನ್ನು ಸರಳವಾಗಿ ವಿವರಿಸಿದ್ದಾರೆ. ಇನ್ನು ಶೇಣಿಯವರ ಬಗ್ಗೆ ಹೇಳುವುದೇನಿದೇ ಎಂದೇ ಮೂಗಿನಲ್ಲಿ ಬೆರಳು ಸವರ ಬೇಕಾಗುತ್ತದೆ. ಅದ್ಭುತ ಜ್ಞಾನ ಸಿದ್ದಿ. ಹುಟ್ಟಿನಿಂದಲೇ ಬಡತನ, ಕಷ್ಟ ಕರ ಜೀವನ. ಇರುಳಿಡೀ ಯಕ್ಷಗಾನ ತಿರುಗಾಟ ಹಾಗಿದ್ದೂ ಬಿಡುವಿಲ್ಲದ ಪ್ರವೃತ್ತಿಯಲ್ಲಿ ಇವರಿಗೆ ಈ ಪಾಂಡಿತ್ಯ ಸಿದ್ದಿಸಿದ ಬಗೆ ಹೇಗೆ? ಇಷ್ಟೆಲ್ಲ ವಿಷಯ ಸಂಗ್ರಹ ಸಾಧನೆಯಾಗಬೇಕಾದರೆ ಅವರು ಇದನ್ನೆಲ್ಲ ಓದಿದದ ಸಮಯವಾದರೂ  ಯಾವಾಗ?

ಕನ್ನಡ ಕನ್ನಡ  ಹೋರಾಟ ಎಂದು ಬೊಬ್ಬಿಡುವವರು ಕನ್ನಡದ ಬಗ್ಗೆ ನಿಜವಾದ ಅಭಿಮಾನವಿದ್ದರೆ ಯಕ್ಷಗಾನ ತಾಳ ಮದ್ದಲೆಯ ಅರ್ಥಗಾರಿಕೆ ಪುಟಗಳನ್ನು ಅವರು ತೆರೆದು ನೋಡಬೇಕು. ಕೇವಲ ಪಾರಂಪರಿಕ ಗ್ರಾಮ್ಯ ಶಿಕ್ಷಣದಿಂದ ಇಲ್ಲಿ ಸಾಧಿಸಿದ ಮಹಾನ್ ಸಾಧಕರ ಸಾಧನೆಯನ್ನು ನೋಡಬೇಕು.
ಇನ್ನು ಪ್ರಸಂಗದ ಅಂತಿಮ ಹಂತದತ್ತ ಮರಳುವ.
ಬಂಧು ಹತ್ಯೆ ಮಹಾ ಪಾಪ, ದಯಾ ಭಾವ ಮತ್ತು ಪಾಪಭಯದಿಂದ ತಾನು ಕೊಲ್ಲಲಾರೆ. ಕೊಂದು ಪಾತಕಿಯಾಲಾರೆ ಎನ್ನುತ್ತಾನೆ ಅರ್ಜುನ, ಆವಾಗ ಕೊಲ್ಲುವುದು ಎಂದರೇನು? ಕೃಷ್ಣ ಕೊಲ್ಲುವುದನ್ನು ಮನವರಿಕೆ ಮಾಡಿಕೊಡುತ್ತಾನೆ. ಯಾರನ್ನು ಕೊಲ್ಲುವುದು ? ಆತ್ಮ ಕ್ಕೆ ಸಾವಿಲ್ಲ  ಆದುದರಿಂದ ಆತ್ಮವನ್ನು ಸಾಯಿಸುವುದು ಸಾಧ್ಯವಿಲ್ಲ. ಇನ್ನು ಶರೀರ ಅದು ಜಡವಾದದ್ದು. ಅದನ್ನು ಕೊಲ್ಲುವುದು ಎನ್ನುವುದೇ ಅಸಮಂಜಸ. ಹಾಗಾಗಿ ಇದು ಪಾಪ ಎಂದು ತಿಳಿಯುವುದು ಭ್ರಮಿಸುವುದು ಸರಿಯಲ್ಲ.  ಮತ್ತೆ ಇನ್ನು ಕೊಲ್ಲುವುದಕ್ಕೆ ಅರ್ಜುನ ಯಾರು?
ಇನ್ನು ಆತ್ಮಹುಟ್ಟುವುದಿಲ್ಲ. ಅದಕ್ಕೆ  ರೂಪವಿಲ್ಲ. ಗುಣವಿಲ್ಲ. ಅದು ಸಾಯುವುದಿಲ್ಲ ಎಂದು ಉಪದೇಶಿಸಿ ಆತ್ಮತತ್ವದ ಜ್ಞಾನವನ್ನು ಪಾರ್ಥನಿಗೆ ತೋರಿಸಿಕೊಡುತ್ತಾನೆ. ಆವಾಗ ಅತ್ಮ ತತ್ವ ತಿಳಿದವನು ಯಾವುದೂ ಬೇಡ ಎಂದು ವೈರಾಗ್ಯತಾಳಿ ಸನ್ಯಾಸಿಅಯಾಗಬಹುದಲ್ಲ ಎಂಬ ಜಿಜ್ಞಾಸೆ ಅರ್ಜುನನಲ್ಲಿ ಹುಟ್ಟಿಕೊಳ್ಳುತ್ತದೆ. ಆವಾಗ ಕರ್ಮ ಭೋಧೆಯನ್ನು ಬೋಧಿಸುತ್ತಾನೆ. ಹುಟ್ಟಿದ ಜೀವಿಗೆ ಕರ್ಮ ಅನಿವಾರ್ಯ ಎಂದು ಕರ್ಮ ಬೋಧೆ ಮಾಡುತ್ತಾನೆ. ಮನುಷ್ಯನಾಗಿ  ಜನ್ಮವೆತ್ತುವಾಗ ಅದಕ್ಕೆ ಕರ್ಮ ವಾಸನೆ ಯಿರುತ್ತದೆ. ಹಿನ್ನೆಲೆಯಾಗಿ ಒಂದು ಕರ್ಮ ಇರುತ್ತದೆ. ಜನ್ಮ ವೆತ್ತಿದ ಮೇಲೆ ಅದಕ್ಕೆ ಹುಟ್ಟಿನಿಂದಲೇ ಒಂದು ಸಂಸ್ಕಾರವಿರುತ್ತದೆ.   ಆದುದರಿಂದ ಕ್ಷತ್ರಿಯನಾದ ಅರ್ಜುನನಿಗೆ ಯುದ್ದ ಮಾಡುವುದೇ ಕರ್ಮ ಎಂದು ಪ್ರೇರೇಪಿಸುತ್ತಾನೆ. ಅದುವೇ ಕ್ಷತ್ರಿಯ ಸ್ವಧರ್ಮ. ಮಾತ್ರವಲ್ಲ ಕರ್ಮವು ಕಾಮ್ಯಕರ್ಮವಾಗದೇ ನಿಷ್ಕಾಮ ಕರ್ಮ ವಾಗಬೇಕು. ಕರ್ಮ ಫಲದ ಬಯಕೆ ಇರಬಾರದು. ಆವಾಗ ಮೋಕ್ಷ ಸಿದ್ಧಿಯಾಗುತ್ತದೆ.

ಕೊಲ್ಲುವುದಕ್ಕೆ ನೀನು ಯಾರು. ಕಾಲದಿಂದ ಎಲ್ಲರು ಹಥಿಸಲ್ಪಟ್ಟವರು. “ನಾಹಂ ಕರ್ತ   ಹರಿಕರ್ತಾ ನಿಮಿತ್ತ ಮಾತ್ರಂ ಭವ”   ಎಂದು ವಿಶ್ವರೂಪ ದರ್ಶನವನ್ನು ಮಾಡಿಸುತ್ತಾ ಸರ್ವ ಸಂದೇಹವನ್ನು ನಿವಾರಿಸುತ್ತಾನೆ ಕೃಷ್ಣ. ಇಲ್ಲಿ ಮತ್ತೂ ಒಂದು ಉಪಮೆಯನ್ನು ಸೇರಿಸುತ್ತಾರೆ ಶೇಣಿಯವರು. ದೇಹವೆಂದರೆ ಧರ್ಮಕ್ಷೇತ್ರ ಎಂತಲೂ ಹೇಳುತ್ತಾರೆ. ದೇಹಕ್ಕೆ  ಕರ್ಮವೇ ಧರ್ಮ. ಧರ್ಮ ಕ್ಷೇತ್ರ ಎಂದರೆ ಕುರು ಕ್ಷೇತ್ರ. ’ಕುರು’ ಎಂದರೆ ’ಮಾಡು’  ’ಕರ್ಮ’ ಎಂದೂ ಹೇಳಬಹುದು. ಹಾಗಾಗಿ ದೇಹವೆಂಬ ಕುರುಕ್ಷೇತ್ರದಲ್ಲಿ ಯುದ್ದ ವೆಂಬುದು  ಕರ್ಮ.
ಚಳಿಯಾದಾಗ ದಪ್ಪ ವಸ್ತ್ರ ಹೊದೆಯುತ್ತೇವೆ. ಸೆಕೆಯಾದಾಗ ಇದ್ದ ವಸ್ತ್ರತೆಗೆದು ಗಾಳಿಗೆ ಮೈ ಒಡ್ಡುತ್ತೇವೆ. ಮತ್ತೂ ಸಾಕಾಗಾದಾಗ ಕೈಯಲ್ಲಿ ಬೀಸಣಿಗೆ ತೆಗೆದುಕೊಂಡು ಗಾಳಿಬೀಸುತ್ತೇವೆ. ಈ ಬೀಸಣಿಗೆಯಲ್ಲಿ ಗಾಳಿ ಎಲ್ಲಿಂದ ಹುಟ್ಟಿಕೊಂಡಿತು? ಅದು ಬೀಸಣಿಗೆಯಲ್ಲಿ ಹುಟ್ಟಿದ್ದಲ್ಲ. ವಾತಾವರಣದಲ್ಲಿ ಇದ್ದ ಗಾಳಿ ಅನುಭವಕ್ಕೆ ಬರಬೇಕಾದರೆ ಬೀಸಣಿಗೆ ಒಂದು ಉಪಾಧಿಯಾಯಿತು.  ಬೀಸಣಿಗೆಯಲ್ಲಿ ಈ ಕರ್ಮ ತುಂಬಿಕೊಂಡು ಅದನ್ನು ನಿರ್ವಹಿಸುವುದು ನಮ್ಮ ದೇಹದ ಅಂಗವಾದ ಕೈ ಅದು ಕ್ರಿಯೆಯ ಸಂಕೇತ.  ಇಲ್ಲಿ ಬೀಸಣಿಗೆಯನ್ನು ನಿರ್ಮಿಸುವುದು ನಾವೇ. ಅದನ್ನು ಬೀಸುವುದಕ್ಕೆ ಕೈಯೂ ನಮ್ಮದೇ. ಇಲ್ಲಿ ನಮ್ಮ ಚಿತ್ತ ಶುದ್ದಿಯಾಗುವವರೆಗೆ ಕ್ರಿಯೆಯನ್ನು ನಾವೇ ಮಾಡಬೇಕಾಗುತ್ತದೆ. ಶಭ್ದ ಮಾತ್ರದಿಂದ ಅನುಭವವನ್ನು ಹೇಳುವುದು ಅಸಾಧ್ಯ ಪಾಯಸ ಮಾಡಿ ತೋರಿಸ ಬಹುದು. ಆದರೆ ಅದರ ರುಚಿಯನ್ನು ಮಾಡಿ ತೋರಿಸುವುದಕ್ಕೆ ಆಗುವುದಿಲ್ಲ ಅದು ಅನುಭವಕ್ಕೆ ಬರಬೇಕು. ಆ ಅನುಭವ ಪಡೆಯುವುದಕ್ಕಾಗಿ ವಿಶ್ವರೂಪವನ್ನು ಸಾಕ್ಷಾತ್ಕರಿಸುತ್ತಾನೆ ಶ್ರೀಕಷ್ಣ.  ಅಲ್ಲಿಗೆ “ ನಷ್ಟೋ ಮೋಹಃ ಸ್ಮ್ ತಿರ್ಲಭ್ದಾತ್ವ ತ್ಪ್ರಸಾದಾನ್ಮಯಾಚ್ಯುತ | ಸ್ಥಿತೋಸ್ಮಿ ಗತಸಂದೇಹಃ ಕರಿಷ್ಯೇ ವಚನಂತವ || “  ಎಂದು ಅರ್ಜುನ ಮೋಹ ನಷ್ಟವಾಯಿತು ಎಂದು ಯುದ್ದಕ್ಕೆ ಅಣಿಯಾಗುತ್ತಾನೆ.

:ಮಂಗಳಂ:

Monday, December 16, 2013

ನಾನು ಎಂದರೆ ಏನು? " ಗೀತೋಪದೇಶ ಒಂದು ವಿಶ್ಲೇಷಣೆ " ಭಾಗ – ೩

ಭಾಗ – ೩

ಫಸಲು ತೆಗೆಯಲೆಂದು ರೈತ  ಬೆಳೆ ಬೆಳೆಯುತ್ತಾನೆ. ಬೆಳೆದ ಬೆಳೆಗೆ ಭದ್ರವಾದ ರಕ್ಷಣೆ ಬೇಕೆಂದು ಬೇಲಿ ಹಾಕುತ್ತಾನೆ. ಹಲವು ಸಲ ಭದ್ರವಾದ ಬೇಲಿಯ ಒಳಗೆ ಮುಖ್ಯಬೆಳೆಗಿಂತಲೂ ಬಲಿಷ್ಠವಾಗಿ ಕಳೆ ಗಿಡಗಳೂ ಬೆಳೆಯುತ್ತವೆ. ಬೇಲಿ ಎಂಬುದು ಕೆಟ್ಟದ್ದಕ್ಕೂ ಒಳ್ಳೆಯದಕ್ಕೂ ಏಕಕಾಲದಲ್ಲಿ ರಕ್ಷಣೆಯನ್ನು ಕೊಡುತ್ತದೆ. ಅಥವಾ ಒಳ್ಳೆಯದರ ರಕ್ಷಣೆಯನ್ನು ಉಪಯೋಗಿಸಿ ಕೆಟ್ಟದ್ದು ಜೀವ ಹಿಡಿದು ಬದುಕುತ್ತವೆ.   ಸಕಾಲದಲ್ಲಿ ಆ ಕಳೆಯನ್ನು ಗುರುತಿಸಿ ಅದನ್ನು ನಿರ್ಮೂಲನ ಮಾಡುವ ಕರ್ಮದಲ್ಲಿ ರೈತ ಗಮನ ಹರಿಸಬೇಕು. ವಾಸ್ತವದ ಪ್ರಪಂಚ ವ್ಯವಹಾರಗಳೇ ಹೀಗೆ ವಿಪರ್ಯಾಸ. ಕರ್ಮ ಚ್ಯುತನಾದಾಗ ಸಿಗುವ ಫಲ ಪೂರ್ಣವಾಗಿರುವುದಿಲ್ಲ.

ಮೋಹ ವಶನಾದ ಅರ್ಜುನನಿಗೆ ಕೃಷ್ಣ ಕರ್ಮ ಬೋಧೆಯನ್ನು ಮಾಡುತ್ತಾನೆ. ಬಂಧು ವರ್ಗವ ಕೊಲ್ಲಲಾರೆ ಎಂದವನು ಕೊಲ್ಲುವುದು ಏನು ಮತ್ತು ಕೊಲ್ಲುವುದು  ಯಾರು ಎಂಬ ಜಿಜ್ಞಾಸೆಗೆ ಒಳಗಾಗಿ ತನ್ನನ್ನು ಅರಿಯುವ ಹಂತಕ್ಕೆ ಬರುತ್ತಾನೆ. ನಾನು ಯಾರು? ಬಹುಶಃ ಪ್ರತಿಯೊಬ್ಬರಲ್ಲೂ ಈ ವಿವೇಚನೆಯ ಕೊರತೆ ಈ ವ್ಯಾವಹಾರಿಕ ಪ್ರಪಂಚದಲ್ಲಿ ಬಾಧಿಸುತ್ತದೆ. ವ್ಯಾವಹಾರಿಕ ಮತ್ತು ಪಾರಾಮಾರ್ಥಿಕದ ಮಧ್ಯೆ ಇರುವ ತನ್ನನ್ನು ಅರಿವ ಜ್ಞಾನ ಇದೆಯಲ್ಲ. ಅದನ್ನು ಮರೆತುಬಿಡುತ್ತಾನೆ. ನಾನು ಯಾರು ನಾನು ಏನು ಎಂಬುದರ ಅರ್ಥ ಕಂಡುಕೊಂಡಾಗ ಈ ಪ್ರಪಂಚದ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಸಾಧ್ಯವಾಗುತ್ತದೆ. ಯಾಕೆಂದರೆ ಈ ಜ್ಞಾನ ಮೂಡಿದಾಗ ಜೀವ ಭಾವದ ಆಶೆ ಕಳೆದು, ಅಹಂಭಾವದಿಂದ ಮುಕ್ತರಾಗುವುದು ಮಾತ್ರವಲ್ಲ ಜೀವಿಸುವ ಪ್ರತಿಕ್ಷಣವನ್ನೂ ದುಗುಡ ದುಮ್ಮಾನ ಇಲ್ಲದ ಜೀವನ ತನ್ನದಾಗಿಸುವ ಪ್ರೇರಣೆ ಬರುತ್ತದೆ. ಸುಖ ದುಃಖ ಎಲ್ಲವೂ ನಮ್ಮ ರಕ್ಷಣೆಯಲ್ಲೇ ಬೆಳೆಯುತ್ತದೆ. ಎಂಬ ಜ್ಞಾನ ಮೂಡುವಾಗ ದುಃಖವನ್ನು ಬದಿಗಿಟ್ಟು ಸುಖದತ್ತ ಗಮನ ಹರಿಸುತ್ತಾನೆ. ಸುಖ ಎಂದರೆ ಯಾವುದು ಎಂಬ ವಿವೇಚನೆಗೆ ತೊಡಗುತ್ತಾನೆ.

ಇಂದಿನ ವ್ಯಾವಹಾರಿಕ ಪ್ರಪಂಚದ ಸಮಸ್ಯೆಗಳು ಕೇವಲ ಲೌಕಿಕ ಸಮಸ್ಯೆಗಳು. ಅದೇ ಪರಮಾರ್ಥದ ಸಮಸ್ಯೆಗಳಾಗಿ ಭಾಸವಾಗುತ್ತದೆ. ಇದಕ್ಕೆ ಮೂಲ ಕಾರಣ ’ನಾನು’ ಏನು ಎಂದು ತಿಳಿಯದೇ ಇರುವುದು. ನನ್ನನ್ನು ನಾನು ತಿಳಿದುಕೊಂಡಿಲ್ಲ ಎಂಬ ಪ್ರಾಥಮಿಕ ಜ್ಞಾನವೂ ಇರುವುದಿಲ್ಲ. ಆ ಅರಿವಿನ ದಾಹ ಸ್ಪುರಣೆಯಾದಾಗ ಲೌಕಿಕ ಪ್ರಪಂಚದ ಸತ್ಯದ ಅರಿವಿನ ಹಾದಿಯನ್ನು ಅರಸುವ ಮನಸ್ಸಾಗುತ್ತದೆ. ಹಾಗಾಗಿ ಅರ್ಜುನನಿಗೆ ತನ್ನನ್ನು ಅರಿಯುವ ದಾಹ ಮೂಡುತ್ತದೆ. ಅದಕ್ಕಾಗಿ ಶ್ರೀಹರಿಯಲ್ಲಿ ಕೇಳುತ್ತಾನೆ “ಕೃಷ್ಣ, ನಾನು ಯಾರು ನಾನು ಏನು ಎಂದು ತಿಳಿವ ಪ್ರಚೋದನೆಯಾಗಿದೆ. ನಾನು ಯಾರು?”
ಆರು ನೀನೆಲೆ ಪಾರ್ಥ ಬಂಧು ವರ್ಗಗಳೆಲ್ಲಿ | ತೋರಿಸು ರಣಕೆ ನಿಂದು| ಕಾರುಣ್ಯದಿಂದ ಶೋಕವಗೊಂಡು | ಪರಿಣಕೆ ಕೇಡಾದೆ ಹೇಸಿಗೆಯು||.


ಎಲ್ಲವರಲ್ಲಿಯೂ ಇರುವಂತಹ ಒಂದು ಭಾವ “ನಾನು”  ಇದನ್ನು ಎಲ್ಲರಲ್ಲಿಯೂ ಗುರುತಿಸಬಹುದು. ಅರ್ಜುನನಲ್ಲಿ ಇದ್ದ ನಾನು ಎಂದು ತಿಳುವಳಿಕೆ ಬಂದಾಗ ಪ್ರತಿಯೊಬ್ಬರಲ್ಲಿ ಇರುವ ನಾನು ಅದೇ ಆಗಿರುತ್ತದೆ. ಇದು ಆತನಿಗೆ ಅರಿವಿಗೆ ಬಂದಿರುತ್ತದೆ. ನಾನು ನನ್ನ ಜೀವ ನನ್ನ ಭಾವ ಹೀಗೆ ಪ್ರತ್ಯೇಕಿಸಿದ ಅರ್ಜುನನ ಸಮಸ್ಯೆಯಲ್ಲಿ ಹರಿವಿಶ್ಲೇಷಣೆ ಹೀಗಿದೆ.

ಇಲ್ಲಿ ನನ್ನ ಜೀವ ನನ್ನ ಭಾವ ನನ್ನದು ನನ್ನದು ಎಂಬುದಕ್ಕೆ’ಮಮಕಾರ’  ಅಂತ ಹೇಳಬಹುದು. ನನ್ನದು ಅಂತ ನಾವು ಯಾವುದನ್ನು ಹೇಳುತ್ತೇವೋ ಆ ವಸ್ತುವಿಗೆ ನಮಗೆ ಇದ್ದಂತಹ  ಮಮಕಾರ ಇರಬಹುದೇ? ಅದು ನಮ್ಮ ಬಗ್ಗೆ ನನ್ನದು ಅಂತ ಹೇಳುವುದೇ ಇಲ್ಲ ? ಯಾಕೆಂದರೆ  ಅದಕ್ಕೆ ’ನಾನು’ ಎಂಬುದೇ ಇಲ್ಲ ! ಈ ಪ್ರಪಂಚದಲ್ಲಿ ವಸ್ತುಗಳು ಎರಡು ವಿಧ ಒಂದು ಜಡ ಇನ್ನೊಂದು ಚೇತನ. ಜಡ ಎಂದರೆ ಉಂಟು ಅಂತಲೇ ಅರ್ಥವಲ್ಲ. ವಾಸ್ತವದಲ್ಲಿ ಇದು ’ಉಂಟು’ ಎಂಬುದರಿಂದ ಉಂಟು ಅಂತ ತೋರುವುದು. ’ನಾನು’ ಎಂಬುದು ಗುರುತಿಸದೇ ಇರುವಾಗ ನನ್ನದು ಎಂಬುದು ಸೃಷ್ಟಿಯಾಗುತ್ತದೆ. ನನ್ನದು ಎಂಬುದು ಸೃಷ್ಟಿಯಾಗುವುದು ಯಾವಾಗ? ನಾನು ಎಂಬುದನ್ನು ಪೂರ್ಣವಾಗಿ ತಾತ್ವಿಕವಾಗಿ ಗುರುತಿಸದೇ ಇರುವಾಗ.    ನಾನು ಎಂದರೆ ಜೀವ ಭಾವ. ಇದು ಪ್ರತಿಯೊಬ್ಬರಲ್ಲಿಯೂ ಇರುವಂಥದ್ದು. ಈ ಜೀವ ಭಾವವನ್ನು  ’ಅಹಂ” ಅಹಂಕಾರ ಎನ್ನಬಹುದು. ಅಹಂ ಎಂದರೆ ನಾನು ಎಂಬ ಭಾವನೆ. ನಿಜವಾದ ನಾನು ಎಂಬುದಕ್ಕೆ ಅಹಂ ಇರುವುದೂ ಇಲ್ಲ. ಯಾಕೆಂದರೆ ನಾನು ಎಂಬುದು ಉಳಿಯುವುದಿಲ್ಲ ಎಂದು ಮೊದಲೇ ಹೇಳಿಯಾಗಿದೆ. ನಾನು ಎಂಬುದಕ್ಕೆ ಅಸ್ತಿತ್ವವೇ ಇರುವುದಿಲ್ಲ.  ಆಗ ಅಹಂ ಭಾವ ಎಲ್ಲಿ ಉಳಿಯುತ್ತದೆ? ಅವಾಗ ಮಮಕಾರವೂ ಇರುವುದಿಲ್ಲ.

ಜೀವ ಹೋದಾಗ ನಾವು ಹೇಗೆ ನನ್ನ ಜೀವ ಅಂತಲೇ ಹೇಳ್ತೇವೆ. ನಾವು ಅಂತ ಹೇಳುವುದಿಲ್ಲ. ಹಾಗಾದರೆ ನಾನು ಏನು? ದೇಹವಲ್ಲ, ಬುದ್ಧಿಯಲ್ಲ, ಚಿತ್ತವಲ್ಲ...ಅಹಂಕಾರವೂ  ಅಲ್ಲ. ಅಹಂಕಾರ ಎಂದರೆ ಅದು ಜೀವ ಭಾವ, ಲೌಕಿಕವಾದ ಪ್ರಕೃತಿಯಲ್ಲಿ ಬಿಂಬಿಸುವಂತಹುದು. ಕನ್ನಡಿಯಲ್ಲಿ ನಮ್ಮ ಬಿಂಬವನ್ನು ಕಂಡ ಹಾಗೆ. ಕನ್ನಡಿಗೆ ಅನುಸರಿಸಿ ಆ ಬಿಂಬ ಕಾಣುತ್ತೇವೆ. ಚಂದ್ರ ಆಕಾಶದಲ್ಲಿ ಸ್ಥಿರವಾದ ರೂಪದಲ್ಲಿ ಇದ್ದರೂ ಹರಿಯುತ್ತಿರುವ ನೀರಿನಲ್ಲಿ ಚಂದ್ರ ಬಿಂಬ ಅಲ್ಲೊಲ ಕಲ್ಲೋಲ ಸ್ಥಿಯಲ್ಲಿ ಕಂಡು ಬರುತ್ತದೆ. ಅದಕ್ಕೆ ಕಾರಣ ನೀರು. ಹಾಗಿದ್ದರೂ ಚಂದ್ರನಿಗೆ ಸ್ಥಿರವಾದ ರೂಪ ಇದೆ ಅಂತ ನಾವು ಒಪ್ಪಿಕೊಳ್ಳುತ್ತೇವೆ ಯಾಕೆ ಮೂಲ ಚಂದ್ರನನ್ನು ನಾವು ನೋಡಿರುವುದಿಲ್ಲ.  ಹಾಗಾಗಿ ಪ್ರಕೃತಿಯಲ್ಲಿ ಕಾಣುವ ಅಹಂ ಎಂಬುದು ಕೇವಲ ಅಹಂ ಭಾವ ಅಷ್ಟೇ.  ಅದು ತತ್ವ ಅಲ್ಲ. ಈ ಅಹಂಭಾವವನ್ನು ’ನಾನು’ ಅಂತ ಗುರುತಿಸಬೇಕು. ನಾನು ಎಂಬುದು ಸರ್ವನಾಮ. ಪ್ರತಿಯೊಬ್ಬರಲ್ಲಿಯೂ ಇರುವಂತಹ ಅಹಂಭಾವಕ್ಕೂ ಹಿಂದೆ ಹೇಳಿದಂತಹ ಅಹಂ ಎಂಬ ತತ್ವ ಅದು ಸಮಾನವಾದ ಗುಣಕ್ರಮಗಳೂ ಇರುವಂಥಹುದು.

ಜಾಗೃತಾವಸ್ಥಯಲ್ಲಿ ನಮ್ಮ ಅಹಂ ಭಾವ ಸುಖ ದುಃಖ ಕಷ್ಟ ನಷ್ಟ ಎಲ್ಲವನ್ನು ಅನುಭವಿಸುತ್ತದೆ. ಎನಾದರೂ ಅದರೆ ಅದು ನನಗಾಯಿತು ಎಂದು ತಿಳಿದುಕೊಳ್ಳುತ್ತೇವೆ. ಇದಕ್ಕೆ ವಿಪರೀತವಾದದ್ದು ದ್ವಂದ್ವ ಕೆಲವೊಮ್ಮೆ ಕನಸಿನಲ್ಲೂ ಅನುಭವಿಸುತ್ತೇವೆ. ಕೆಲವೊಂದು ಸಲ ಎಚ್ಚರದಲ್ಲಿ ಆದದ್ದನ್ನೇ ಸ್ವಪ್ನದಲ್ಲಿ ಕಾಣುತ್ತೇವೆ.  ಎರಡೂ ಸಂಭಂಧ ಇಲ್ಲವಾದರೂ ಹೋಲಿಕೆ ಕೆಲವೊಮ್ಮೆ ಇರುತ್ತದೆ. ಎಚ್ಚರದಲ್ಲಿ ಶ್ರೀಮಂತನಾದವನು ಸ್ವಪ್ನದಲ್ಲಿ ಬಡವನಾಗಿ ಭಿಕ್ಷಾಟನೆ ಮಾಡುವುದೂ ಇರಬಹುದು. ಹಾಗಾದರೆ ಇದರಲ್ಲಿ ಸತ್ಯ ಯಾವುದು? ಎರಡೂ ಸತ್ಯವೇ. ಎರಡು ಸ್ಥಿತಿಗಳೂ ಸತ್ಯವೇ. ಎಚ್ಚರದಲ್ಲಿ ಅದು ಸತ್ಯ ಸ್ವಪ್ನದಲ್ಲಿ ಇದು ಸತ್ಯ. ಆದರೆ ಎರಡೂ ತೀರ ಭಿನ್ನ. ಇದಕ್ಕೆ ಅವಸ್ಥೆ ಅಂತ ಹೆಸರು. ಈ ಅವಸ್ಥೆಯಲ್ಲಿ ಅನುಭವಿಸುವವನು  ಭೋಕ್ತ್ರು  ಅದನ್ನೇ ಅಹಂಭಾವ ಅದನ್ನೇ ಜೀವ ಅಂತ ಹೇಳುವುದು. ಸುಷುಪ್ತಿಗೆ ಬಂದಾಗ ಗಾಢ ನಿದ್ರೆ. ಗಾಢ ನಿದ್ರೆಯಲ್ಲಿ ದ್ವಂದ್ವ ಇರುವುದಿಲ್ಲ. ಸ್ವಪ್ನವೂ ಇಲ್ಲ.  ಜಾಗರವೂ ಇರುವುದಿಲ್ಲ. ಮತ್ತೇನಿರುತ್ತದೆ? ಏನೂ ಇರುವುದಿಲ್ಲ. ಈ ಸುಷುಪ್ತಿಯನ್ನೇ ದೈನಂದಿನ ಮರಣ ಅಂತ ಹೇಳುವುದು. ಎರಡರ ಅನುಭವ ಒಂದೇ ಆಗಿರುತ್ತದೆ. ಈ ಅನುಭವ ಅರ್ಜುನನದ್ದೂ ಹೌದು ಭೀಷ್ಮನದ್ದು ಹೌದು ಇದು ಎಲ್ಲ ಪಶು ಪಕ್ಷಿಗಳ ಸಾರ್ವತ್ರಿಕವಾದಂತಹ ಅನುಭವ. ಗಾಢನಿದ್ರೆಯನ್ನು ಆ ಜೀವಾತ್ಮ ಅನುಭವಿಸುತ್ತದೆ. ನಿದ್ದೆಯನ್ನು ಶರೀರ ಅನುಭವಿಸುತ್ತದೆಯೇ? ಇಲ್ಲ.   ನಿದ್ರೆಯನ್ನು ಅನುಭವಿಸುವುದೂ ಅಹಂಭಾವವೇ ಆಗಿರುತ್ತದೆ. ಯಾಕೆಂದರೆ ನಿದ್ದೆ ಮಾಡಿದವನು ಮರುದಿನ ಎದ್ದು ಸುಖವಾಗಿ ನಿದ್ದೆ ಮಾಡಿದೆ ಎಂದು ಹೇಳುವುದು ಯಾಕೆ? ಆ ನಿದ್ದೆಯನ್ನು ಅನುಭವಿಸುವುದು ಜೀವನೇ ಆಗಿರುತ್ತದೆ. ಅದೂ ಅಹಂಭಾವವೇ.   ಆದರೆ ನಿದ್ರೆಯಲ್ಲಿ ಅನುಭವ ಪರಿಣಾಮ ಏನು ಆಗಿರುವುದಿಲ್ಲ. ಕೇವಲ ಅನುಭವ. ದುಃಖವೂ ಇಲ್ಲ.  ಸುಖವೂ ಇಲ್ಲ. ಇಲ್ಲಿ ದ್ವಂದ್ವ ಇಲ್ಲ. ಗಾಢ ನಿದ್ರೆಯ ಅನುಭವ ಎಲ್ಲರದ್ದೂ ಒಂದೇ ಆಗಿರುತ್ತದೆ. ಮರುದಿನ ಮರಣ ದಂಡನೆ ವಿಧಿಸಬೇಕಾದ ಖೈದಿಯೂ ವಿಧಿಸುವ ನ್ಯಾಯಾಧೀಶನು ಮೊದಲ ದಿನದ ಗಾಢನಿದ್ರೆಯಲ್ಲಿ ಒಂದೇ ಅನುಭವವನ್ನು ಪಡೆಯುತ್ತಾರೆ. ಹಾಗಾದರೆ ಗಾಢ ನಿದ್ರಾವಸ್ಥೆಯಲ್ಲಿ ಸರ್ವ ಜೀವರ ಅನುಭವ ಒಂದೇ ಅಂತ ಆಗ್ತದೆ.

ಈಗ ಅರ್ಜುನ ಮಾನಸಿಕವಾಗಿ ಒಂದು ನಿರ್ಣಯಕ್ಕೆ ಬರುತ್ತಾನೆ. ಈ ಮೊದಲು  ನಾನು ಶತ್ರುಗಳನ್ನು ಕೊಲ್ಲುತ್ತೇನೆ ಅಂತ ಹೇಳುವಾಗ, ಇಲ್ಲಿ ನಾನು ಬೇರೆ ಶತ್ರು ಬೇರೆ ಅಂತ ಭಾವಿಸಿ ಹೇಳಿದ್ದ. ವಾಸ್ತವದಲ್ಲಿ ತಾನು ಭೀಷ್ಮ ದ್ರೋಣ ಅಥವ ಯಾರನ್ನೆ ಆಗಲಿ ಅವರನ್ನು ಆತ ಗುರುತಿಸಿರುವುದು ಕೇವಲ ಜಡವಾದ ಶರೀರವನ್ನು ಹೊಂದಿಕೊಂಡು. ಅಂದರೆ. ಕೇವಲ ಶರೀರದಿಂದ ಮಾತ್ರ ಅವರು ಭೀಷ್ಮ ದ್ರೋಣಾದಿಗಳಾಗಿ ಗುರುತಿಸಲ್ಪಡುತ್ತಾರೆ. ಆದರೆ ಜಡವಾದ ಶರೀರವೇ ಅವರಲ್ಲ. ಅದು ಸತ್ಯವೂ ಅಲ್ಲ. ಭೀಷ್ಮನ ತಲೆ ಕಡಿದಾಗ.. ಅದು ಭೀಷ್ಮನ ಹೆಣ ಅಂತ ಹೇಳುತ್ತಾರೆಯೇ ಹೊರತು ಅದು ಭೀಷ್ಮ ಅಂತ ಹೇಳುವುದಿಲ್ಲ. ಹಾಗಾದರೆ ಭೀಷ್ಮ ಅಂತ ಹೇಳವುದು ಯಾವುದನ್ನು? ಜಡವಾದ ಹೆಣ ಬೇರೆ. ಅದರಲ್ಲಿ ಇದ್ದ ಆತ್ಮ ಬೇರೆ. ಶರೀರಕ್ಕೆ ಅವಸ್ಥಾ ಭೇದ ಉಂಟು. ಅದು ಹುಟ್ಟುತ್ತದೆ. ಬೆಳೆಯುತ್ತದೆ ಸಾಯುತ್ತದೆ. ಒಳಗಿರುವ ಜೀವಕ್ಕೆ ಅದು ಯಾವುದೂ ಇಲ್ಲ. ಒಳಗಿನ ಜೀವ ಬೇರೆ ಹೊರಗಿನ ಶರೀರ ಬೇರೆ. ಹಾಗಾದರೆ ಮೊದಲೇ ಜಡ ಎಂದು ತಿಳಿದ ದೇಹವನ್ನು ಕೊಲ್ಲುವುದು ಎಂದರೆ ಅದು ಅರ್ಥ ಹೀನ. ಒಂದು ಕಲ್ಲನ್ನು ಸಾಯಿಸುವಂತೆ. ಹಾಗೆ ಒಳಗಿದ್ದ ಅತ್ಮ,  ಅದನ್ನು ಕೊಲ್ಲುವುದಕ್ಕೆ ಸಾಧ್ಯವೇ? ಇಲ್ಲ. ಸಾಧ್ಯವೇ ಇಲ್ಲ. ಆದುದರಿಂದ ಕೊಲ್ಲುತ್ತೇನೆ ಎಂಬ ಅರ್ಜುನನ ನಂಬುಗೆ ಅದು ಅಸಂಗತ?

ಯಾವುದಕ್ಕೆ ನಾಶ ಇದೆಯೋ ಅದನ್ನು ಮತ್ತೊಬ್ಬ ನಾಶ ಮಾಡಬೇಕಾದ್ದಿಲ್ಲ. ಜೀವವನ್ನೂ ನಾಶ ಮಾಡುವ ಹಾಗಿಲ್ಲ. ಇಲ್ಲಿ ಅಹಂಭಾವವೇ ಜೀವವಾಗಿ ತೋರಿಸಿದ್ದು. ಈ ಅಹಂಭಾವ ಎಂಬ ಜೀವಭಾವಕ್ಕೂ ನಾಶವಿದೆ. ಪ್ರಕೃತಿಯಲ್ಲಿ ಪ್ರತಿಬಿಂಬಿಸುವ ಆವರಣ ವಿಕ್ಷೇಪದಿಂದ ಕೂಡಿದ ಒಂದು ಅವಸ್ಥೆಯಲ್ಲಿ ಮಾತ್ರಾ ಆನಂದವನ್ನು ಅನುಭವಿಸುವ ಅಹಂಕಾರ ಜೀವಭಾವ. ಆದಕಾರಣ ಜೀವರು ಅಂತ ಹೇಳಿಕೊಳ್ಳುವ ಅಹಂಭಾವಕ್ಕೂ ಗಾಢನಿದ್ರೆಯಲ್ಲಿ ಒಂದೇ ಅನುಭವ ಬರುತ್ತದೆ. ಆ ಜೀವಭಾವಕ್ಕೆ ಅಧಿಷ್ಠಾನ ಅದರ ಒಳಗಿನದ್ದು. ಅದು ಗಾಢನಿದ್ದೆಯನ್ನು ಅನುಭವಿಸುವುದಿಲ್ಲ, ಎಚ್ಚರವನ್ನೂ ಅನುಭವಿಸುವುದಿಲ್ಲ. ಸ್ವಪ್ನವನ್ನೂ ಅನುಭವಿಸುವುದಿಲ್ಲ. ಎಲ್ಲದಕ್ಕೂ ಅದು ಸಾಕ್ಷಿಯಾಗಿರುತ್ತದೆ. ಆದುದರಿಂದ ಈ ಅವಸ್ಥೆಯಿಂದ ಜಾಗೃತಗೊಂಡ ಜೀವಕ್ಕೆ ಅದರಿಂದಲಾಗಿ ಪ್ರಜ್ಞೆ ಹುಟ್ಟುವುದು. ಹಾಗಾಗಿ ಅವಸ್ಥೆಯ ಅನುಭವನ್ನು ಅದು ಕಂಡುಕೊಳ್ಳುತ್ತದೆ. ’ಸುಖವಾಗಿ ನಾನು ನಿದ್ದೆ ಮಾಡಿದೆ’ ಅಂತ ನಾವು ಹೇಳುವುದಿಲ್ಲವೇ? ಅದಕ್ಕೆ ’ ಜ್ಞಾನ  ’ ಅಂತ ಹೆಸರು. ಆ ಜ್ಞಾನ ಸ್ವರೂಪಕ್ಕೆ ನಾವಿಲ್ಲಿ ಹೇಳುವುದು ’ಸತ್’,   "ನಾಸತೋ ವಿದ್ಯತೇ ಭಾವೋ”   ಅಸ್ತಿತ್ವದಲ್ಲಿ ಇಲ್ಲದೇ ಇರುವುದು ಉಳಿಯುವುದಿಲ್ಲ. ಉಳಿಯುವಂತದ್ದು ಶಾಶ್ವತವಾಗಿ ಬದಲಾವಣೆ ಹೊಂದುವುದಿಲ್ಲ. ಇಲ್ಲಿ ಆತ್ಮವೇ ಶಾಶ್ವತ. ಅದಕ್ಕೆ ಬದಲಾವಣೆ ಇಲ್ಲ.  ಈ ಗಾಢನಿದ್ದೆ, ಸ್ವಪ್ನ ಮತ್ತು ಎಚ್ಚರ ಈ ಮೂರು ಅವಸ್ಥೆಯನ್ನು ಅನುಭವಿಸುವ ಅಹಂಭಾವ, ಅದು ಉಪಾಧಿಯ ಸಂಬಂಧದಿಂದ ಬಂದದ್ದೇ ಹೊರತು ಅದರ ಸ್ವಭಾವ ಗುಣದಿಂದ ಅಲ್ಲ. ಆದುದರಿಂದ ಇಲ್ಲಿ ಕೊಲ್ಲುವವನು ಯಾರು? ಕೊಲ್ಲಲ್ಪಡುವವನು ಯಾರು? ಆದುದರಿಂದ ಮೊದಲೇ ಚೇತನ ಇಲ್ಲದಂತಹ  ಆನಾತ್ಮವಾದ ವಸ್ತುಗಳು,  ಈ ವಸ್ತುಗಳಿಗೆ ನಿಜವಾದ ಜ್ಞಾನದಲ್ಲಿ  ಅಸ್ತಿತ್ವವೇ ಇಲ್ಲದಿರುವಾಗ ಅದನ್ನು ಕೊಲ್ಲುವುದು ಅದಂರೆ ಅರ್ಥಹೀನವಲ್ಲವೇ?

ಕತ್ತಲೆಯಲ್ಲಿ ಮಾರ್ಗ ಕ್ರಮಣ ಮಾಡುವಾಗ ದಾರಿಯಲ್ಲಿ ಬಿದ್ದ ಸರ್ಪವನ್ನು ಹೋಲುವ  ಯಾವೂದೋ ಒಂದು ಉಪಾಧಿ ಅದು ಹಗ್ಗವೋ ಇನ್ನೊಂದೋ ಆಗಿರಬಹುದು, ಅದನ್ನು ಹಾವು ಅಂತ ಭ್ರಮಿಸಿ, ಬೆಳಕನ್ನು ತಂದಾಗ ಭ್ರಮೆ ಕರಗಿ ಅದು ನಿರ್ಜೀವ ವಸ್ತು ಎಂದು ಅರಿವಾಗುತ್ತದೆ. ಆ ಬೆಳಕಿನಿಂದ  ಅರ್ಥಾತ್ ಜ್ಞಾನದಿಂದ  ಆ ವಸ್ತುವನ್ನು ಕೊಂದ ಎನ್ನುವುದಕ್ಕಾಗುವುದೇ?   ಕೊಲ್ಲುವುದಕ್ಕೆ ಆ ಇವನು ಕಂಡ ಹಾವು ಹುಟ್ಟಿರಬೇಕಲ್ಲ. ಹುಟ್ಟದೇ ಇದ್ದ ಹಾವನ್ನು ಕೊಲ್ಲುವುದೆಲ್ಲಿಂದ ? ಹಾಗಾಗಿ ಇವುಗಳೆಲ್ಲ ಮಧ್ಯದಲ್ಲಿ ವ್ಯಕ್ತವಾಗುವಂತವುಗಳು. ಮಧ್ಯದಲ್ಲಿ ಕಂಡ ಇವುಗಳು ಹುಟ್ಟಲೇ ಇಲ್ಲ ಮತ್ತೆ ಅದಕ್ಕೆ ಸಾವು ಎಲ್ಲಿಂದ? ಯಾವುದಕ್ಕೆ ಹುಟ್ಟು ಇಲ್ಲ ಸಾವು ಇಲ್ಲ ಅದು ನಿಜವಾದಂತಹ ’ನಾನು’.

ಈ ನಾನು ಎಂಬುದಕ್ಕೆ ಇಲ್ಲಿ ಕನ್ನಡಿಯ ಉದಾಹರಣೆಯನ್ನು ನೀಡುತ್ತಾರೆ.  ಮೂಲಸ್ವರೂಪ ಕನ್ನಡಿಯಲ್ಲೋ ಜಲದಲ್ಲೋ ಪ್ರತಿಬಿಂಬಿಸಿ ಕಾಣುತ್ತದೆ. ಹಲವಾರು ತರಹದ ಕನ್ನಡಿಗಳಲ್ಲಿ ಒಂದೊಂದು ವಿಧದಲ್ಲಿ ಕಾಣುತ್ತದೆ. ಚಪ್ಪಟೆಯಾಗಿಯೋ ಉದ್ದವಾಗಿಯೋ ಕಾಣುತ್ತದೆ. ಇದು ಕನ್ನಡಿಯ ದೋಷವಲ್ಲ. ಕನ್ನಡಿಯ ಹಿಂದೆ ಇರುವ ಲೇಪನ. ಆ ಲೇಪನ ತೆಗೆದರೆ ಮತ್ತೆ ಪ್ರತಿಬಿಂಬವೇ ಇರುವುದಿಲ್ಲ. ಎಲ್ಲಿಯವರೆಗೆ ಈ ಲೌಕಿಕವಾದ ವಸ್ತುಗಳನ್ನು ಈ ಉಪಾಧಿಗಳಿಂದ ನೋಡುತ್ತೇವೆಯೋ ಆವಾಗ ಇವುಗಳೆಲ್ಲ ಮಸುಕು ಮಸುಕಾಗಿ ಕಾಣುವುದು.
ಈಗ ಅರ್ಜುನನಿಗೆ ’ಸದ್ವಸ್ತು ಆತ್ಮಾ’ ,  ಈ ಲೋಕದ ಸತ್ಯ ಮತ್ತು ಅಸತ್ಯದ ಜ್ಜಾನ ಉಂಟಾಗುತ್ತದೆ. ಆತ್ಮ ಒಂದೇ ಸತ್ಯ. ಅದೊಂದೇ ಅಸ್ತಿತ್ವದಲ್ಲಿ ಇರುವುದು. ಮಿಕ್ಕೆಲ್ಲವು ಮಿಥ್ಯ ಅಂದರೆ ಅಸತ್ಯವಾದವುಗಳು  ಎಲ್ಲವೂ ಭ್ರಮೆ . ಈ ದೇಹ ಈ ಬಂಧುವರ್ಗ ಇದೆಲ್ಲ ಮಿಥ್ಯ ಭ್ರಮೆ, ಭ್ರಮಾಧೀನವಾದದ್ದು  ಎಂಬ ಅರಿವಾದಾಗ ಅರ್ಜುನ ಮತ್ತಷ್ಟು ವಿಷಾದಕ್ಕೆ ಒಳಗಾಗುತ್ತಾನೆ. ಈ ಬಂಧು ಸ್ನೇಹ ಈ ಮೋಹ ವೈಷಮ್ಯ ಈ ಉಪಾಧಿಗಳು ಭ್ರಮೆ ಎಂದಾದರೆ,  ಆಭ್ರಮೆಯಿಂದ ಹೊರಬರಬೇಕು.  ಎಲ್ಲವೂ ಅಸತ್ಯ ಎಂದಾದರೆ ಎಲ್ಲವನ್ನು ತ್ಯಾಗ ಮಾಡುವುದೇ ಸೂಕ್ತ. ತ್ಯಾಗ ಮಾಡಿ ಕಾಡಿಗೆ ಹೋಗುವುದೇ ಲೇಸು.

ಪಾರ್ಥನ ಈ ಜಿಜ್ಞಾಸೆಯನ್ನು ಕೃಷ್ಣ  ಪರಿಹರಿಸುತ್ತಾನೆ. ಬಂಧುಗಳಾಗಿ ಕಂಡದ್ದು ಭ್ರಾಂತಿ ಎಂದಾದರೆ  ಇವುಗಳು ಬ್ರಹ್ಮಮಯವಾಗಿ ಕಾಣಬೇಕು. “ಸರ್ವಂ ಖಲುವಿದಂ ಬ್ರಹ್ಮಾ”  ಬ್ರಹ್ಮವನ್ನು ಅರಿಯಬೇಕು. ಭ್ರಹ್ಮ ವನ್ನು ಅರಿಯಬೇಕಾದರೆ ಬ್ರಹ್ಮಮಯವಾಗಿ ಕಾಣಬೇಕು. ಅದು ಕಾಣಬೇಕಿದ್ದರೆ ಬ್ರಹ್ಮವೇ ಆಗಬೇಕು. ಆ ಬ್ರಹ್ಮ ಜ್ಞಾನ ಅರಿಯಬೇಕಾದರೆ, ಬ್ರಹ್ಮವೇ ಆಗಬೇಕಾದರೆ ಸಾಕಷ್ಟು ಅಡೆತಡೆಗಳೀದ್ದಾವೆ. ಜಗತ್ತಿನ ಹುಟ್ಟು ಸಾವು ಎಂದರೆ ಅದು ಶೃಂಖಲೆಯ ಹಾಗೆ. ಹುಟ್ಟುತ್ತಾನೆ ಸಾಯ್ತಾನೆ,  ಮತ್ತೆ ಹುಟ್ಟುತ್ತಾನೆ ಹಾಗಾದರೆ ಈ ಹುಟ್ಟು ಸಾವಿನ ಆದಿ ಯಾವುದು ಅದು ಗೊತ್ತಿಲ್ಲ. ಅನಾದಿ. ಅನಾದಿ ಎಂದರೆ ಅದು ಅಸತ್ಯ ಎಂಬರ್ಥವೂ ಇದೆ. ಅಸತ್ಯ ಎಂದರೆ ಕಣ್ಣಿಗೆ ಕಾಣದಿದ್ದದ್ದು. ಇದನ್ನು ತಿಳಿಯಬೇಕಾದರೆ ಆ ಜ್ಞಾನವನ್ನು ಅರಿಯಬೇಕಾದರೆ ಕರ್ಮವನ್ನು ಅರಿಯಬೇಕು.

 ಇನ್ನು ಕೃಷ್ಣ ಕರ್ಮದ ಬಗ್ಗೆ ತಿಳಿಸಿಕೊಡುತ್ತಾನೆ. ಆತ್ಮಸತ್ಯ ಆತ್ಮ ,,ಸಾವು ಇದನ್ನೇ ಯೋಚಿಸಿ ಐಹಿಕ ಲೋಕದಲ್ಲಿ ಕಾಣುವವುಗಳನ್ನು ಭ್ರಾಂತಿ ಎಂದು ತಿಳಿದು ಈ ಭ್ರಮಾಲೋಕದಿಂದ ಪಲಾಯನ ಮಾಡುವ ಹಾಗಿಲ್ಲ.  ಪಾರಮಾರ್ಥಿಕ ಎಂದು ಜಗತ್ತಿನಲ್ಲಿ ಯಾವುದನ್ನು ತಿಳಿಯುತ್ತೇವೋ ಅದರತ್ತ ಎಲ್ಲವನ್ನು ತ್ಯಜಿಸಿ ಹೋಗುವುದಲ್ಲ. ಹುಟ್ಟಿದ ಗಿಡ ಮರವಾಗಿ ಸತ್ತು ಕಾಷ್ಠವಾಗುತ್ತದೆ. ಅದು ಮೊದಲೇ ಅರಿವಾಗಿ ಕಾಷ್ಠವಾಗುವುದಕ್ಕಾಗುತ್ತದೇಯೇ. ಬದುಕಬೇಕು ಬದುಕಬೇಕಾದರೆ ಈ ಲೌಕಿಕ ಕರ್ಮ ಸಂಬಂಧವನ್ನು ಹೊಂದಿಕೊಳ್ಳಬೇಕು. ಎಲ್ಲವನ್ನು ಬಿಟ್ಟು ಕಾಡಿಗೆ ಹೋಗುತ್ತೇನೆ ಎಂದಾಗ ಕಾಡಿಗೆ ಹೋಗಿ ಏನು ತಿನ್ನುವುದು? ಬದುಕಬೇಕಾದರೆ ತಿನ್ನಬೇಕು.  ತಿನ್ನುವುದು ಎಂದಾಗ ಅದು ಈ ಕರ್ಮಕ್ಕೆ ಬಂಧನದ ಸಂಕೇತ.

ಅನಾದಿಯನ್ನು ತಿಳಿಯಬೇಕಾದ್ರೆ ಅದು ನಮ್ಮ ಬುದ್ಧಿಗೆ ನಮ್ಮ ಹೃದಯದ ಮೂಲಕವಾಗಿ ಮುಟ್ಟಬೇಕು. ಬ್ರಹ್ಮ ಒಂದೇ ಸತ್ಯ. ಬ್ರಹ್ಮ ಮಯವಾಗಿ ಕಾಣಿಸಬೇಕಾದರೆ ಅದು ಅನುಭವಕ್ಕೆ ಬರಬೇಕು. ಆ ಅನುಭವ ಹೃದಯದಲ್ಲಿ ಹುಟ್ಟಬೇಕು. ಆ ಅನುಭವ ಹೃದಯದಲ್ಲಿ ಹುಟ್ಟದಿರುವುದಕ್ಕೆ ಕಾರಣ ಅಜ್ಞಾನ. ಈ ಅಜ್ಞಾನ ಉಂಟು ಅಂತ ತಿಳಿದು ಅದಕ್ಕೆ ಒಂದು ಉಪಾಧಿಯನ್ನು ಸೃಷ್ಟಿಸುವುದು. ಇರುಳು  ಹಗ್ಗವೇ ಎಂದು ಗೊತ್ತಾದವನಿಗೆ ಹಾವು ಹೇಗೆ ಹುಟ್ಟಿತು?  ಅಂತ ಕೇಳಿದರೆ. ಅದು ಅಜ್ಞಾನದಿಂದ ಹುಟ್ಟಿತು. ಈ ಅಜ್ಞಾನ ಯಾವಾಗ ಹುಟ್ಟಿತು? ಹಗ್ಗದಲ್ಲಿ ಹಾವನ್ನು ಕಂಡಾಗಲೇ ಅಜ್ಞಾನ ಹುಟ್ಟಿಕೊಂಡಿತು. ಈ ಅಜ್ಞಾನ ಯಾವಾಗ ಹುಟ್ಟಿತೋ ಅಲ್ಲಿಂದ ತೊಡಗಬೇಕು. ಈ ಅಜ್ಞಾನ ಯಾಕೆ ಹುಟ್ಟಿತು?  ಇದನ್ನು ಅರಿಯಬೇಕಾದರೆ ಒಂದು ಮಾಧ್ಯಮವನ್ನು ಸೃಷ್ಟಿಸಬೇಕು.

 ಈ ಮಾಧ್ಯಮ ಯಾವುದು? ಅದರ ಸೃಷ್ಟಿ ಹೇಗೆ?
(ಇನ್ನೂ ಇದೆ ಮುಂದಿನಭಾಗದಲ್ಲಿ)


Sunday, December 8, 2013

ಗೀತೋಪದೇಶ ಯಕ್ಷಗಾನ ಹೀಗೊಂದು ವ್ಯಾಖ್ಯಾನ ಭಾಗ – ೨ " ನಾನು ಮತ್ತು ನನ್ನದು"


“ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ”  ಎಂಬ ಭಗವಂತನ ನಿಯತಿಗೆ ಹಲವು ಸವಾಲುಗಳು ಎದುರಾಗುತ್ತದೆ. ಕೌರವ ಮೊದಲಾಗಿ ಹರಿಯಲ್ಲಿ ಕೇಳಿಬಿಡುತ್ತಾನೆ ಚಕ್ರವನ್ನು ಧರಿಸದೇ ಇರಬೇಕು. ಆದರೆ  ಹರಿಗೆ ಧರ್ಮ ಸ್ಥಾಪನೆಗೋಸ್ಕರ  ತಾನು ಹೋರಾಡದೆ ತನ್ನ ಹೋರಾಟ ಸಂಘಟಿಸಬೇಕು. ಆ ಮೂಲಕ ಅಧರ್ಮಿಯರನ್ನು ನಾಶ ಮಾಡಿ ಧರ್ಮವನ್ನು ಸ್ಥಿರವಾಗಿಸಬೇಕು. ಹೋರಾಟದ ಹಾದಿಯಲ್ಲಿ ಎದುರಾಗುವ ಸವಾಲುಗಳಲ್ಲಿ ಕೌರವಾದಿಗಳ ಯುದ್ದ ತಂತ್ರಗಳನ್ನು ಎದುರಿಸುವ ಸವಾಲುಗಳು ಒಂದು ಬಗೆಯಾದರೆ ತಾನು ಯಾವುದನ್ನು ಅಯುಧವಾಗಿ ಪರಿಗಣಿಸಿ ಸ್ವೀಕರಿಸಿರುವೆನೋ ಅದನ್ನು ಸಿದ್ಧಗೊಳಿಸಿ ಜಾಗ್ರತಗೊಳಿಸುವುದು ಇನ್ನೊಂದು ಸವಾಲು. ಅವೆಲ್ಲದರ ನಡುವೆ ಅರ್ಜುನನಿಗೆ ಆವರಿಸಿದ ಈ ಮೋಹ ಅದರಿಂದ ಉಂಟಾದ ಕ್ಲೈಬ್ಯ ಅಥವಾ ಷಂಢತನ ಇದನ್ನು ಸಹ ಸವಾಲಾಗಿ ಪರಿಗಣಿಸಬೇಕು. ಇದಕ್ಕಾಗಿಯೆ ಅರ್ಜುನನಿಗೆ ಧರ್ಮ ಕರ್ಮಗಳ ಸೂಕ್ಷ್ಮದ ಜಿಜ್ಞಾಸೆಗಳಿಗೆ, ಧರ್ಮ ಕ್ಷೇತ್ರ ಕುರುಕ್ಷೇತ್ರದಲ್ಲೇ ಉತ್ತರವನ್ನು ತೋರಿಸುತ್ತಾನೆ ಶ್ರೀ ಹರಿ. ಈ ಹಿನ್ನೆಲೆಯಲ್ಲಿ ಗೀತೋಪದೇಶ ಪ್ರಸಂಗದ ಕೃಷ್ಣನ ಪಾತ್ರವನ್ನು ವಹಿಸುವುದು ಒಂದು ಸವಾಲೇ  ಆಗಿಬಿಡುತ್ತದೆ. ಒಂದು ಕ್ಷಿಷ್ಟ ವಿಷಯದ ಪಾಠ ಪುಸ್ತಕವಿರುತ್ತದೆ. ವಿದ್ಯಾರ್ಥಿಗೆ ಅದನ್ನು ಮೊದಲಾಗಿ ಅದೆಷ್ಟು ಬಾರಿ ಓದಿದರೂ ಅರ್ಥವಾಗುವುದಿಲ್ಲ. ಆದರೆ ಅಧ್ಯಾಪಕನಾದವನು ಆ ಪಾಠವನ್ನು ಉಪದೇಶಿಸಿದ ನಂತರ ಅದು ಸುಲಭವಾಗಿ ಗ್ರಾಹ್ಯವಾಗಿಬಿಡುತ್ತದೆ. ಈ ಪ್ರಸಂಗವನ್ನು ಕೇಳಿದ ಮೇಲೆ ಗೀತೆಯ  ವಿಚಾರ ಸರಳವಾಗಿ ಅರ್ಥವಾಗಿಬಿಡುತ್ತದೆ.

“ಕೆರಳಿ ಮುರಹರನಾಗಲು ಎಲೆ ನರನೇ ಧುರದಿ ಮರುಕವಿರಿಸುವರು........................”

ಅಲ್ಲಿ ಸೇರಿದ್ದ ಆ ಹನ್ನೊಂದು ಅಕ್ಷೋಹಿಣಿ ಸೇನೆಯಲ್ಲಿ  ಒಬ್ಬರೇ ಒಬ್ಬರು ಶತ್ರುಗಳನ್ನು ಕಾಣಲಾರದ ಸ್ಥಿತಿ ಅರ್ಜುನನದ್ದು. ಆತನಿಗೆ ಆವರಿಸಿದ ಮೋಹ ಕೃಷ್ಣನಿಗೆ ತನ್ನ ಹಾದಿಯ ಮುಳ್ಳಾಗಿ ಭಾಸವಾಗುತ್ತದೆ. ಆತನ ಮೋಹವನ್ನು ಕೃಷ್ಣ ವಿಶ್ಲೇಷಿಸುವ ರೀತಿ ಹೀಗೆ. ವಿರೋಧಿ ಪಾಳಯದಲ್ಲಿ ಶತ್ರುಗಳು ಗೋಚರಿಸುವುದಿಲ್ಲ ಎಂಬುದು ಅರ್ಜುನನ ವೈಯಕ್ತಿಕ ಭಾವ. ಯಾಕೆ? ಇಲ್ಲಿ ಅರ್ಜುನನಲ್ಲದೇ ಇದ್ದವರದ್ದು ದೃಷ್ಟಿದೋಷ ಎಂದು ಪರಿಗಣಿಸಬಹುದೇ? ಅರ್ಜುನನಲ್ಲದೇ ಪ್ರತಿಪಕ್ಷವಾಗಿ ಇನ್ನು ಇದ್ದಾರೆ.ಅವರೆಲ್ಲರ ದೃಷ್ಟಿಯುಲ್ಲಿ ವೈರಿಗಳು ಗೋಚರಿಸುತ್ತಾರೆ. ಈ ಇಷ್ಟೂ ಜನರಿಗೆ ವೈರಿಗಳು ಕಾಣಿಸುತ್ತಾರೆ. ಅರ್ಜುನನಿಗೆ ಮಾತ್ರ ವಿರೋಧಿಗಳೇ ಕಾಣುವುದಿಲ್ಲ.

ಆ ಮುದುಕ ಧೃತರಾಷ್ಟ್ರ ಮಹಾರಾಜ, ಆತನಿಗೆ ಜನ್ಮ ಪರ್ಯಂತ ಏನನ್ನೂ ನೋಡುವ ಬಯಕೆ ಆಗಲಿಲ್ಲ. ಹೆಂಡತಿ ಕಪ್ಪೋ ಬಿಳಿಯೋ ಅದನ್ನು ತಿಳಿವ ಆಶೆ ಉಂಟಾಗಲಿಲ್ಲ. ಕೌಟುಂಬಿಕವಾದ ಸಾಂಸಾರಿಕವಾದ ಯಾವುದನ್ನೂ ಕಾಂಚನವಾಗಲೀ ಕಾಮಿನಿಯಾಗಲೀ ನೋಡುವ ಬಯಕೆ ಹುಟ್ಟಲಿಲ್ಲ. ಹೋಗಲಿ ತನ್ನನ್ನು ಸ್ವತಹ ನೋಡುವ ಆಶೆಯೂ ಹುಟ್ಟದವನಿಗೆ ಕೊನೆಯಲ್ಲಿ ಹುಟ್ಟಿದ ಆಶೆ,  ಯುದ್ದವನ್ನು ಕಾಣಲಾರೆನಲ್ಲಾ? ಹಿರಿಯರಾದವರಿಗೆ ಮಕ್ಕಳು ಜಗಳವಾಡುವುದನ್ನಾಗಲೀ ಸಾಯುವುದನ್ನಾಗಲಿ ಕಾಣುವ ಬಯಕೆ ಹುಟ್ಟುವುದಿಲ್ಲ. ಅವುಗಳು ಒಂದು ವೇಳೆ ಬಂದರೂ ಇದ್ದ ಕಣ್ಣನ್ನು ಮುಚ್ಚಿ ನೋಡಲಾರೆ ಎಂದು ಕುಳಿತಿರಬೇಕಾದಲ್ಲಿ ಇವನಿಗೆ ಅದನ್ನು ಬಲವಂತವಾಗಿ ಕಾಣುವ ಬಯಕೆ...!!! ಅದೂ ಹೇಗೆ ವರ ಪಡೆದು ಶ್ರಮ ವಹಿಸಿ ಮಕ್ಕಳು ಜಗಳಾಡುವುದನ್ನು ದೃಷ್ಟಿ ಇಲ್ಲದ ಕಣ್ಣಿನಿಂದ ನೋಡುವ ಹಂಬಲ. ಧೃತರಾಷ್ಟ್ರನ ಈ ಯುದ್ಧದ ಹಂಬಲವೇ ಕೌರವಾದಿಗಳ ರಕ್ತದಲ್ಲೂ ಹರಿದು ಬಂತು. ಇಲ್ಲವಾದರೆ ಅವನೇ ಬಿಟ್ಟುಕೊಟ್ಟು, ವಾಸಮಾಡಲು ಕಳುಹಿಸಿದ ಅರಗಿನಾಲಯ ಸುಟ್ಟು ಹೋಯ್ತು ಆನಂತರ ಪಾಂಡವರು ಸುಟ್ಟು ಹೋದರು ಎಂದು ಕಣ್ಣೀರು ಹಾಕಿದ.  ಕುರುಡ ಕಣ್ಣೀರು ಹಾಕಿದ. ಅವನ ಕಣ್ಣೀರು ಅವನಿಗೇ ಕಾಣಿಸದು. ಅದರಂತೇ ಆ ಪ್ರಕರಣದ ಸತ್ಯಾಸತ್ಯತೆಯನ್ನು,  ಹಸ್ತಿನಾವತಿಯಲ್ಲಿ ತಮ್ಮ ಅರಮನೆಗೆ ಬೆಂಕಿ ಕೊಟ್ಟವನಾರು? ಇದನ್ನೆಲ್ಲ  ವಿಚಾರಣೆ ಮಾಡುವ ಯೋಚನೆಯೂ ಕಾಣಲಿಲ್ಲ.

ದ್ರೌಪದಿಗೆ ತಾನೇ ಸ್ವತಃ ವರವಾಗಿ ನೀಡಿದ ರಾಜ್ಯವನ್ನು ಸುಹ್ರುದ್ಯೂತವಾಡಿ ಪುನಃ ವಶ ಮಾಡಿಕೊಂಡ ಮಕ್ಕಳನ್ನು ನೋಡಿ ಕುರುಡ ನಿಜವಾಗಿಯೂ ಕಣ್ಣು ಮುಚ್ಚಿದ. ಮಹಾ ಪಾತಕಿಗಳಾದ ದುರ್ಯೋಧನಾದಿಗಳು,  ಇನ್ನು ಅಜ್ಜ ಭೀಷ್ಮ, ಪಾಂಡವರ ಬಗ್ಗೆ ಪ್ರೀತಿ ಉಂಟು ಆದರೆ, ನೆಂಟರಬಗ್ಗೆ ಪ್ರೀತಿ ಉಂಟು ಆದರೆ ಧಾನ್ಯ ವೆಚ್ಚ ಮಾಡ್ಬೇಕಲ್ಲ ಎಂದು ಹೇಳಿದ ಹಾಗೆ. ಅಂತಹ ಭೀಷ್ಮರು ಯುದ್ದೋತ್ಸಾಹದಿಂದ ಸೇನಾಪತಿಯಾಗಿ ಶಂಖವನ್ನು ಮೊಳಗಿಸಿದ್ದಾರೆ.ಯುದ್ದಾರಂಭಕ್ಕೂ ಮೊದಲೇ ಧರ್ಮರಾಯನಲ್ಲಿ ಭೀಷ್ಮರು ಹೇಳಿದ್ದರು ’ಎಲ್ಲರೂ ಅರ್ಥ ದಾಸರು. ಆದರೆ ಅರ್ಥ ಯಾವಾಗಲೂ ದಾಸ್ಯವನ್ನು ಮಾಡುವುದಿಲ್ಲ’  “ಅರ್ಥಸ್ಯ ಪುರುಷೋ ದಾಸಃ”  ಇಲ್ಲಿ ಭೀಷ್ಮ ಬಂದದ್ದು ಹಾಗೆ ಅರ್ಥದಾಸನಾಗಿ. ಬಂದವರೆಲ್ಲರೂ ಅರ್ಥದಾಸರಾಗಿ. ಅದುದರಿಂದ ಇಲ್ಲಿ ಧರ್ಮ ಜಿಜ್ಜಾಸುವಾಗಿ ಯೋಚಿಸುವುದಲ್ಲ. ಪುರುಷರೆಲ್ಲ ಕೊಲ್ಲಲ್ಪಟ್ಟರೆ ಶ್ಮಶಾನವಾಗುತ್ತದೆ ಸ್ತ್ರೀಯರೆಲ್ಲರೂ ವಿಧವೆ ಯಾದರೆ ವರ್ಣ ಸಂಕರವಾಗುತ್ತದೆ, ಸನಾತನ ಧರ್ಮವೇ ಕೆಟ್ಟುಹೋಗುತ್ತದೆ. ನಿನ್ನಂತಹವನಿಗೆ ಈ ಚಿಂತನೆ ಬರುವುದು ಸಹಜವೇ ಆದರೂ ಅದು ಅಸ್ಥಾನದಲ್ಲಾಗುತ್ತದೆ. ಆದುದರಿಂದ ಆ ಮಾನಸಿಕ ದೌರ್ಬಲ್ಯವನ್ನು ಬಿಡು ಎತ್ತು ಗಾಂಢೀವ ಮಾಡು ಯುದ್ದ.  ಶ್ರೀ ಕೃಷ್ಣ ಪರಿ ಪರಿಯಾಗಿ ವಿವೇಚಿಸಿ ವಿಶ್ಲೇಷಿಸಿ ಹೇಳುತ್ತಾನೆ.

ಆದರೂ ಅರ್ಜುನನ ಮನಸ್ಸು ಪ್ರಚೋದನೆಗೆ ಒಳಗಾಗುದಿಲ್ಲ. ಹರಿಯ ಉತ್ತೇಜಿಸುವ ಮಾತುಗಳು ಉತ್ಸಾಹವನ್ನು ತರುವುದಿಲ್ಲ...
“ಅರಿಗಳು ಪಂಚ ಪಾತಕರೆಂದು ಬಲ್ಲೆನು |  ತರಿಯಲೀವರ ವಂಶವಳಿದು ಪರದೊಳು ತಿಲಜನ  ಶೂನ್ಯ ರಾಪರು ಮತ್ತೆ ತರುಣೀಯರಿಗೆ ಶೋಕವಹುದು || ”

ಅದುವರೆಗೆ ಶತ್ರುತ್ವ ಅರಿಯದ ಬಗ್ಗೆ ಪಾರ್ಥ ಹೇಳುತ್ತಿದ್ದರೆ ಈಗ ಶತ್ರುತ್ವ ಯಾಕಾಗಿ ಇರಬೇಕು? ಶತ್ರುತ್ವದ ಅರ್ಥವಾದರೂ ಏನು ? ಈ ಬಗ್ಗೆ ಹರಿಯುತ್ತದೆ ಚಿಂತನೆ. ಲಾಕ್ಷಾಗೃಹದ ಘಟನೆ. ಅಣ್ಣ ಭೀಮಸೇನನಿಗೆ ವಿಷ ಉಣ್ಣಿಸಿದ್ದು, ಕಪಟ ದ್ಯೂತವಾಡಿದ್ದು, ದ್ರೌಪದೀ ವಸ್ತ್ರಾಪಹಾರ,  ಇದಾವುದೂ ಪ್ರತೀಕಾರವನ್ನು ಪ್ರಚೋದಿಸುವುದಿಲ್ಲ. ಯಾಕೆ? ಯಾವುದು ಕೇಳಿದರು ಮನಸ್ಸಿನಲ್ಲಿ ಸ್ಥ್ರಿರತೆ ಒದಗುವುದಿಲ್ಲ. ಯುದ್ದ ಎಂದಾಗ ಯುದ್ದೋತ್ಸಾಹ ಬರಬೇಕು. ಉತ್ಸಾಹದಿಂದ ಚೈತನ್ಯ ಬರಬೇಕು. ಆನಂತರ ಯುದ್ದ. ಇದೆಲ್ಲದಕ್ಕೂ ಮುಖ್ಯ ವಿಪಕ್ಷದಲ್ಲಿದ್ದವರ ಮೇಲೆ ಶತ್ರು ಭಾವ ಬರಬೇಕು. ಶತ್ರುತ್ವ ಇಲ್ಲವಾದರೆ ಆ ಯುದ್ದ ಸರಿಯಾದ ಯುದ್ದವೇ?

ಶತ್ರುತ್ವ ಯಾಕೆ ಹುಟ್ಟಬೇಕು. ಪ್ರತೀಕಾರದಿಂದ. ನಮಗಾದ ಕಷ್ಟ ವಂಚನೆಗೆ ಅದನ್ನು ಎಸಗಿದವನ ಮೇಲೆ ಪ್ರತೀಕಾರ. ಅದರಿಂದ ಯುದ್ದ. ಯುದ್ದ ಅಂದರೆ ಕೊಲ್ಲುವುದು. ನಮಗೆ ಆಗದ ಶತ್ರುವನ್ನು ಕೊಲ್ಲುವುದು. ಒಂದೋ ನಾವು ಸಾಯಬೇಕು ಇಲ್ಲಾ ಅವನು ಸಾಯಬೇಕು. ಒಂದು ವೇಳೆ ಅವನು ಸತ್ತರು ನಾವು ಏನು ಶಾಶ್ವತರೆ? ಒಂದು ಘಳಿಗೆ ಯಾರು ಮೊದಲು ಸಾಯುತ್ತಾನೋ ಅದೇ ಯುದ್ದದ ಉದ್ದೇಶ. ಕೊಲ್ಲುವುದು ಅಂದರೆ ಅದು ಶಾರೀರಿಕವಾದಂತಹ ಶಕ್ತಿಯನ್ನು ಅವಲಂಬಿಸಿರುವಂತಹುದು. ಇದೆಲ್ಲ ಬೇಕಾಗುವುದು ಯಾವಾಗ? ಮನುಷ್ಯರಿಗೆ ವಿವೇಚನೆಗೆ ಸಿಕ್ಕಿ ಪರಿಹಾರವನ್ನು ಕಾಣದಾದಾಗ ಮತ್ತೆ ಅಯುಧ ಕೈಗೆ ತೆಗೆದುಕೊಳ್ಳುವುದು. ಈ ಅಯುಧ ಅಂದ್ರೆ ಎರಡು ಕೋಣಗಳು ಇದ್ದ ಹಾಗೆ. ಅಲ್ಲಿ ಬುದ್ಧಿಗೆ ಸ್ಥಾನವಿಲ್ಲ. ಶರೀರದಲ್ಲಿ ಏಷ್ಟು ಶಕ್ತಿ ಉಂಟೋ ಅದರ ಹಾಗೆ. ಯಾರು ಗೆಲ್ತಾನೋ ಅವನು ತೋರಿಸಿದ್ದೇ ನ್ಯಾಯ. ಹಾಗಿದ್ದರೆ ಈ ಯುದ್ದ ಅಂದ್ರೆ ಕೊಲ್ಲುವುದು... ಯಾರನ್ನು ಕೊಲ್ಲುವುದು? ಯಾಕೆ ಕೊಲ್ಲುವುದು? ಯಾರನ್ನಾದರೂ ಕೊಂದರೂ ತಾನೇನು ಅಜರಾಮರನೇ? ಯಾವಾಗಲಾದರೂ ನಾನೂ ಸಾಯಬೇಕು. ಯುದ್ದ ಕ್ಕೆ ಹೊರಟವರು ಯೋಚಿಸುವುದೇನು? ತಾನು ಸಾಯುವ ಮೊದಲು ಅವನು ಸಾಯಬೇಕು. ಇದೆ ಅಲ್ಲವೆ ಯುದ್ದ?   ಹಾಗಾದರೆ ಕೊಲ್ಲುವುದು ಇದು ಸಮಸ್ಯೆಗೆ ಪರಿಹಾರವಲ್ಲ. ಇದು ತನ್ನಿಂದಾಗದು. ಹಾಗಾಗಿ ಅವರು ಬದುಕಲಿ. ಅರ್ಜುನ ಹೇಳ್ತಾನೆ “ ನಾನು ಸಾಯಬೇಕಾದರೆ ಸಾಯ್ತೇನೆ. ಆದರೆ ಕೊಲ್ಲಲಾರೆ ಕೃಷ್ಣಾ” ಯಾಕೆ ಈ ದೌರ್ಬಲ್ಯವೋ, ಇದು ಹೃದಯ ದೌರ್ಬಲ್ಯವೇ?”  ತಿಳಿಯದೇ ಶ್ರೀಕೃಷ್ಣನಲ್ಲೇ  ಶ್ರೇಯಸ್ಸಿನ ಹಾದಿಯನ್ನು ಕೇಳುತ್ತಾನೆ. ಆ ಹಾದಿಯನ್ನು ತೋರಿಸುವ ಗುರುತ್ವವನ್ನು ಶ್ರೀಕೃಷ್ಣನಲ್ಲಿ ಕಾಣುತ್ತಾನೆ.

ಈವರೆಗೆ ಶತ್ರುತ್ವ ಕಾಣಲಾರೆ ಎಂದವನು ಈಗ ಕೊಲ್ಲಲಾರೆ, ಬಂಧು ವರ್ಗ ಗುರು ಹಿರಿಯರು ಇವರೆನ್ನಲ್ಲ ಕೊಂದು ಪಾತಕಿಯಾಗಲಾರೆ ಎನ್ನುತ್ತಿದ್ದಾನೆ.  ಮುಂದೆ ಕೊಲ್ಲುವುದರ ಬಗ್ಗೆ, ಪಾತಕದ ಬಗ್ಗೆ  ಶ್ರೀಕೃಷ್ಣ ವಿಶ್ಲೇಶಿಸುವಂತಾಗುತ್ತದೆ.
“ ಅರ್ಜುನ, ಇದು ಹೃದಯ ದೌರ್ಬಲ್ಯವೇ? ಆದರೆ ಯಾಕೆ?  ನೀನು ಕೇವಲ ಭಾವುಕನಾಗಿ ಮಾತನಾಡುತ್ತಿರುವೆ. ವಿವೇಕವನ್ನು ಜಾಗೃತ ಗೊಳಿಸಿಲ್ಲ. ವಿವೇಕ ಬುದ್ದಿ ಶಕ್ತಿ ಎಲ್ಲರಿಗೂ ಇದೆ.ಇದಕ್ಕೆ ವ್ಯವಸಾಯತ್ಮಕವಾದ ಬುದ್ದಿ ಬೇಕು.  ಕೌರವ ಕರ್ಣಾದಿಗಳಿಗೂ ಬುದ್ಧಿ ಇದೆ. ಆದರೆ ಧರ್ಮರಾಯನ ತಮ್ಮ ನೀನು. ನಾನು ಇಲ್ಲಿ ಹೇಳುತ್ತಿರುವಂತಹ ಬುದ್ದಿ,  ಧಿಯೋಯೋನಃ ಪ್ರಚೋದಯಾತ್ ಅಂತ ಹೇಳುವ ಸದ ಸದ್ವಿವೇಕ. ಅದರಿಂದ ಇದನ್ನು ನೋಡಬಲ್ಲೆ. ಹಾಗಾಗಿ ಆರಂಭದಲ್ಲಿ ಪರಿಕಿಸು ಪಾರ್ಥನೇ  ಅಂತ ಹೇಳಿದ್ದು.”

ಆದರೆ ಅರ್ಜುನ ಭಾವುಕ ಮನಸ್ಸಿನಿಂದಷ್ಟೇ ಪರಿಕಿಸಿದ. ಭಾವುಕ ಮನಸ್ಸು ವಿವೇಕವನ್ನು ಆವರಿಸಿತ್ತು. ಭಾವುಕತನ ಹೃದಯ ವೈಶಾಲ್ಯ ಇರಬೇಕು ಆದರೆ ಅದನ್ನು ನಿಯಂತ್ರಿಸುಂತಹ  ವಿವೇಕ, ಗಾಳಿ ಇಲ್ಲದ ಕಡೆಯಲ್ಲಿ ದೀಪ ಹೇಗೆ ನೇರವಾಗಿ ಉರಿಯುತ್ತದೋ ಅದೇ ರೀತಿ ಆ ಸೂಕ್ಷ್ಮ ಬುದ್ದಿ ಇರಬೇಕು. ಅರ್ಜುನನಲ್ಲಿ ಇರುವ ಸೂಕ್ಷ್ಮ ಬುದ್ದಿ, ಜ್ಯೋತಿಗೆ ಆವರಣ ಇದ್ದು  ಆ ಆವರಣ ಮಾಸಿದಂತೆ,  ಭಾವುಕತನದ ಲೇಪನ ಅದನ್ನು ಮಾಸಿತ್ತು. ಹಾಗಾಗಿ ಆ ಭಾವುಕತನವನ್ನು ಕಳಚಿಟ್ಟು ಯೋಚಿಸಬೇಕು.     ವಿವೇಕದ ನಿಜವಾದ ಪ್ರಭೆ ಹೊರಗೆ ಬರಬೇಕು.

ಕೊಲ್ಲಲಾರೆ ಎಂದ ಅರ್ಜುನನಿಗೆ,  ಈಗ ಕೊಲ್ಲುವುದು ಮತ್ತು ಕೊಲ್ಲಲ್ಪಡುವುದು ಇವೆರಡರ ಬಗೆಗಿನ ವಿಶ್ಲೇಷಣೆ ಸರಳವಾಗಿ ವಿವರಿಸಲ್ಪಡುತ್ತದೆ. ಇದು ಅಹಂಮಿಕೆ, ಅಥವಾ ಅಹಂಕಾರದ ವಿಶ್ಲೇಷಣೆಯೂ ಆಗಿಬಿಡುತ್ತದೆ.  

ಶ್ರೀ ಕೃಷ್ಣ  “ ಅರ್ಜುನ, ಕೊಲ್ಲುವುದು, ಕೊಲ್ಲಲ್ಪಡುವುದು. ಇದು ಎರಡೇ ವಿಷಯ ಇಲ್ಲಿ. ನೀನು ಕೊಲ್ಲುವುದು. ಅವರು ಕೊಲ್ಲಲ್ಪಡುವುದು ನಿನ್ನಿಂದ.  ಕೊಲ್ಲುವುದು ಯಾರು?”
ಅರ್ಜುನ  “ ನಾನು. ನಾನು ಕೊಲ್ಲುವುದು.” 
ಶ್ರೀ ಕೃಷ್ಣ : “ ನಾನು... ಈ ನಾನು ಅಂದ್ರೆ ಏನು?”
ಈಗ ಜ್ಯೋತಿಯ ಆವರಣ ಮಸುಕಾಗಿದ್ದದ್ದು ತುಸು ತಿಳಿಯಾಗುತ್ತದೆ. ಅರ್ಜುನ ಹೇಳ್ತಾನೆ
ಅರ್ಜುನ:  “ ನಾನು ಅಂದ್ರೆ  ನಾನೇ..ನಾನೇ ಕೊಲ್ಲುವುದು.”
ಶ್ರೀ ಕೃಷ್ಣ : “ ನಿನ್ನಿಂದ ಕೊಲ್ಲಲ್ಪಡುವುದು ಯಾರು? ಇದನ್ನು ನೀನಲ್ಲ ಅವರು ಹೇಳ್ಬೇಕು ಹೇಗೆ?. ಸಾಯಲ್ಪಡುವುದು
’ನಾನು’ “  ಈ ನಾನು ಎಂಬುದು ವ್ಯಕ್ತಿಯಾಗಿ ಪ್ರತಿಯೊಬ್ಬನ ಸ್ವಗತ. ನಿನ್ನನ್ನು ನೀನು ಹೇಗೆ ನಾನು ಅಂತ ಹೇಳ್ತಿಯೋ ಹಾಗೆ, ಅವರನ್ನು ಅವರು ಹೇಳುವುದು “ ನಾನು”  ಅಂತಲೇ ..ನಾನು ಎಂಬುದು ಸರ್ವನಾಮ.”
ಅರ್ಜುನ : “ಎಲ್ಲರಿಗೂ ನಾನು ಎಂಬ ಹೆಸರು ಉಂಟು. ಆದರೆ ನಾನು ಎಂದು ಪ್ರತ್ಯೇಕ ಯಾರೂ ಇಲ್ಲ.”
ಶ್ರೀ ಕೃಷ್ಣ : “ ಹಾಗಾದರೆ ಪ್ರತಿಯೊಬ್ಬರಲ್ಲಿಯೂ  ಇದ್ದ ನಾನು ಯಾರು? ಭೀಷ್ಮ ದ್ರೋಣ ಅವರೂ ಸ್ವಕೀಯವಾಗಿ ಹೇಳುವಾಗ ನಾನು ಅಂತಲೇ ಹೇಳಬೇಕಲ್ಲವೆ? ನೀನು ನಿನ್ನನ್ನು ನಾನು ಅಂತ ಹೇಳುತ್ತಿ. ಹಾಗಾದರೆ ಕೊಲ್ಲುವುದು ಯಾರೂಂತ ಆಯಿತು? ಕೊಲ್ಲುವುದು ಯಾರು?  ನಾನು, ಸಾಯುವುದು ಯಾರು?  ನಾನು.”

ನಾನು ಮತ್ತು ನನ್ನದು ಇದರ ನಡುವಿನ ಸಂಬಂಧ ಇಲ್ಲಿ ಸರಳವಾಗಿ ವಿಶ್ಲೇಶಿಸಲಾಗಿದೆ.
ಅರ್ಜುನ ಮುಂದುವರೆಸುತ್ತಾನೆ.. ನಾನು ಎಂದು ಎಲ್ಲರೂ ಹೇಳಬಹುದು. ಇಂಥವನ ಮಗ.. ಮೊಮ್ಮಗ ಗೋತ್ರ ಸೂತ್ರ ಪ್ರವರ ಎಲ್ಲವು ಹೇಳಬಹುದು. ನಾನು ಅಂತ ಅವನು ಹೇಳುವುದು ಯಾರನ್ನು ಅವನನ್ನೇ.!!!

“ ನಾನು ಅಂದರೆ ಯಾರು? ನಾನು ಅಂದರೆ ಅರ್ಜುನ. ಹಾಗಾದರೆ ನನ್ನ ಶರೀರ ಅಂತ ಹೇಳುವಾಗ, ನಾನು ಬೇರೆ ಶರೀರ ಬೇರೆ ಅಂತ ಅಯ್ತಲ್ಲ?  ನಾನು ಮತ್ತು ನನ್ನ ಶರೀರ. ಹಾಗೇ ಪ್ರತಿಯೊಂದು ನನ್ನ ಮನೆ. ಹೀಗೆ ನನ್ನದು ನನ್ನದು ...ಹಾಗಾದರೆ ನನ್ನ ಅಂತ ಹೇಳುವಾಗ ನಾನು ಅಂತ ಬೇರೆ ಉಂಟು ಅಂತಾಯ್ತು. ಹಾಗೆ ನನ್ನ ಬುದ್ಹಿ. ನನ್ನ ಮನಸ್ಸು, ನನ್ನ ಭಾವ, ನನ್ನ ಹೃದಯ, ಹೀಗೆ ಇದನ್ನೆಲ್ಲ ಹೇಳುವಾಗ ದೇಹದ ಪ್ರತಿಯೊಂದನ್ನು ವಿಭಾಗಿಸಿ ಹೇಳಿಕ್ಕೆ ಆಗ್ತದೆ. ನನ್ನ ತಲೆ, ನನ್ನ ಕಾಲು,  ನನ್ನ ಕೈ.”
ಇಲ್ಲಿ ’ನಾನು ಮತ್ತು ದೇಹವನ್ನು’ ಬೇರೆಯಾಗಿಸುವ ಚಿಂತನೆ ಬಹಳ ಸರಳವಾಗಿ ಗೋಚರವಾಗುತ್ತದೆ. ದೇಹದ ಪ್ರತಿಯೊಂದು ಅಂಗವನ್ನು ನನ್ನ ಕೈ ನನ್ನ ಕಾಲು ಅಂತ ಬೇರೆ ಬೇರೆಯಾಗಿ ತೆಗೆದಿರಿಸಿದರೆ.. ಕೊನೆಯಲ್ಲಿ ನಾನು ಎಂಬುದು ಎಲ್ಲಿ ಸಿಗುತ್ತದೆ.. ನಾನು ಎಂಬುದು ಷಷ್ಠೀ ವಿಭಕ್ತಿಯಾಗಿ ಉಳಿಯುತ್ತದೆ. ನನ್ನದು ಎಂಬುದು ಸಮಷ್ಠಿಯಲ್ಲಿ ನಾನು ಅಲ್ಲದೇ ಹೋಗ್ತದೆ.
ಹಲವು ಸಲ ನಾನು ಎಂಬುದಕ್ಕೆ ಪರ್ಯಾಯವಾಗಿ ನನ್ನ ಜೀವ ಅಂತ ಹೇಳುವುದುಂಟು. ಜೀವ ಹೋಯ್ತು...ಆಗ ನಾನು ಬೇರೆ ಜೀವ ಬೇರೆಯಾಗಿ ನಿಲ್ಲುತ್ತದೆ. ಈಗ ಅರ್ಜುನನಿಗೆ ಎಲ್ಲ ತೊಡಕಾಗಿ ಗೋಚರಿಸುತ್ತದೆ. ನಾನು ಬೇರೆ ಜೀವ ಬೇರೆ ಎಂಬ ತತ್ವಾರ್ಥವಾಗುವಾಗ ಈ ತೊಡಕು ಗುರುತಿಸಲ್ಪಡುತ್ತದೆ. ಆದರೆ  ಆ ತೊಡಕನ್ನು ಗುರುತಿಸದೇ ಇದ್ದವರು ಈಗ ಅಯುಧ ಹಿಡಿದು ವಿರೋಧಿಗಳಾಗಿ ಕೊಲ್ಲುತ್ತೇನೆ ಎಂದು ಮುಂದೆ ಬಂದಿದ್ದಾರೆ.

ಅರ್ಜುನನಿಗೆ ಆರಂಭದಲ್ಲಿ ಉಂಟಾದ ಬಂಧು ಮೋಹ ಅದರಿಂದ ಉಂಟಾದ ಯುದ್ದ ನಿರುತ್ಸಾಹ, ಈಗ ಬಂಧು ಮೋಹ ಹರಿಸುವಂತಹ ಚಿಂತನೆ.

ನಾನು ಬೇರೆ ಶರೀರ ಬೇರೆ. ನಾನು ನನ್ನದು ಬೇರೆ ಬೇರೆ ಎಂಬ ಸಿದ್ದಾಂತ ಅರಿವಾದಾಗ ನನ್ನದು ಎಂಬುದು ನಾನಲ್ಲ ಎಂದಕೊಂಡಾಗ. ‘ನನ್ನ ಬಂಧುಗಳು’ ಅದೂ ಬೇರೆಯಾಗಿಯೇ ನಿಲ್ಲುತ್ತದೆ. ಬಂಧು ಇದು ಕೂಡಾ ಷಷ್ಠೀ ಯಾಗಿಯೇ ಉಳಿಯುವುದು. ಆವಾಗ ’ನನ್ನದು’  ಎಂಬ ಷಷ್ಠಿಯ  ನಾಶ ಯಾವುದರಿಂದ ’ನಾನು’  ಎಂಬ ಪ್ರಥಮದಿಂದ. ನಾನು ಎಂಬುದರಿಂದ ನನ್ನದು ಎಂಬುದನ್ನು ನಾಶ ಮಾಡಿದಾಗ ನಮ್ಮನ್ನು ನಾವೇ ನಾಶ ಮಾಡಿದ ಹಾಗೆ ಆಗುವುದೇ? ಹಾಗಾಗಿ ನಾನು ನನ್ನದು..ನನ್ನದು ನಾನಲ್ಲ..ಈ ಎರಡು ವಿಭಜನೆ ಒಟ್ಟು ತಾತ್ಪರ್ಯವಾಗುತ್ತದೆ.

ಈಗ ಅರ್ಜುನ ’ನಾನು’  ಏನು ಎಂದು ಪ್ರಶ್ನೆ ಮಾಡಿಕೊಳ್ಳತೊಡಗುತ್ತಾನೆ. ನಾನು ಹುಟ್ಟಿನಿಂದ ಪಡೆದಂತಹ ಈ ದೇಹ ನಾನಲ್ಲ ಹಾಗಾದರೆ ನಾನು ಯಾರು?

 (ಇನ್ನೂ ಇದೆ ಮುಂದಿನಭಾಗದಲ್ಲಿ)

         


Saturday, November 30, 2013

ಗೀತೋಪದೇಶ ಯಕ್ಷಗಾನ ಹೀಗೊಂದು ವ್ಯಾಖ್ಯಾನ ಭಾಗ ೧

ಗೀತೋಪದೇಶ ಯಕ್ಷಗಾನ ಹೀಗೊಂದು ವ್ಯಾಖ್ಯಾನ ಭಾಗ ೧
“ಪರಿಕಿಸು ಪಾರ್ಥನೆ .......... ... ಕರದೊಳು ಶಸ್ತ್ರಾಸ್ತ್ರವ ಧರಿಸುತ  ತಿರುವುತ ಮೀಸೆಯನು...”  ಕುರು ಕ್ಷೇತ್ರ ಯುದ್ದದಲ್ಲಿ ಸೇನೆಯ ಮಧ್ಯೆ ರಥವನ್ನು ತಂದು ನಿಲ್ಲಿಸು ಎಂದ ಅರ್ಜುನನ್ನು ನೋಡಿ  ಕೃಷ್ಣ ಅನುಮಾನದಿಂದ ಪಾರ್ಥನ ಮುಖ ನೋಡಿ ಹೇಳುವ ಮಾತಿದು

“ ಕೌರವ ಸೇನೆಯ ಮಧ್ಯ ತಮ್ಮ ರಥವನ್ನು ತಂದು ನಿಲ್ಲಿಸು ಕೃಷ್ಣಾ. ಬಹು ಸಮಯದಿಂದ ಕಾಯುತ್ತಿದ್ದ ಸಮಯವಿದೋ ಬಂದಿದೆ. ಆ ಕೌರವನ ಕಡೆಯಿಂದ ಬಂದವರ ಆ ಸುಟ್ಟ ಮುಖವನ್ನೊಮ್ಮೆ  ನೋಡಿ ಬಿಡುತ್ತೇನೆ.” ಆವರೆಗೆ ಹತಾಶರಾಗಿ ಕಾದಿದ್ದು ಬಳಿಕ ಕ್ರೋಧ ಭುಗಿಲೆದ್ದು ಎಲ್ಲ ಸಿದ್ದತೆಯನ್ನು ಈ ದಿನಕ್ಕಾಗಿ ಮೀಸಲಿರಿಸಿದ ಅರ್ಜುನನ ಮಾತು ಹರಿಗೆ ಅನುಮಾನವನ್ನು ತರುತ್ತದೆ.

ಅವಾಗ ನಂತರದ ಮಾತಿಗೆ ಪೀಠಿಕೆಯಾಗಿ ಕೃಷ್ಣನಾಗಿ ಶೇಣಿಯವರು ಅರ್ಜುನನಲ್ಲಿ ಕೇಳುತ್ತಾರೆ, ಆತನ ಕ್ರೋಧದ ಪ್ರಾಮಾಣಿಕತೆಯ ಬಗ್ಗೆ ಅನುಮಾನಿಸಿ ಕೇಳುತ್ತಾರೆ.” ಹೌದಲ್ಲ...? ಹೌದಲ್ಲ..?” ಹೀಗೆ ಎರಡು ಬಾರಿ ಕೇಳುವ ಅಗತ್ಯವಾದರೂ ಏನು ? ಮಹಾಭಾರತ ಅಥವಾ ಕುರುಕ್ಷೇತ್ರದ ಮಾತೇಕೆ. ಭಗವತ್ಗೀತೆಯ ಸನ್ನೀವೇಶವನ್ನು ಅರಿಯದೇ ಇರುವವರು ಯಾರು? ಪವಿತ್ರ ಗೀತೋಪದೇಶದ ದಿವ್ಯ ಜ್ಯೋತಿಯನ್ನು ಬೆಳಗುವುದಕ್ಕೆ ಇದೊಂದು ಕಿಡಿಹಚ್ಚಿದ ಮಾತು. ಹೌದಲ್ಲಾ?  ಕೌರವಾದಿಗಳ ಮೇಲೆ ಉಕ್ಕಿಬಂದ ಕ್ರೋಧ ಆ ಸಿಟ್ಟು ನಿಜವಾದದ್ದೇ? ಕೃಷ್ಣನಿಗೆ ಅನುಮಾನ. ಅದಕ್ಕಾಗಿ ಹೌದಲ್ಲಾ? ಎಂಬ ಉದ್ಗಾರ. 

ಬಹಳ ಸ್ವಾರಸ್ಯ ಪೂರ್ಣ ಮಾತುಗಾರಿಕೆಯ ಪ್ರಸಂಗ ಗೀತೋಪದೇಶದ ಮಹತ್ವದ ಪುಟ ತೆರೆದುಕೊಳ್ಳುವುದೇ ಇಲ್ಲಿಂದ. ಪುಣ್ಯಾತ್ಮರು ಸಂಘಟಿಸಿದ ಅಪೂರ್ವವಾದ ತಾಳ ಮದ್ದಲೆ ಇದು. ಶೇಣಿ, ಪೆರ್ಲ ಮಾರೂರು, ಜೋಷಿ ಮುಂತಾದವರ ವಾಕ್ಚಾತುರ್ಯ ಎನ್ನಬಹುದೇ?  ಇದನ್ನು ಕೇವಲ ವಾಕ್ಚಾತುರ್ಯಕ್ಕೆ ಸೀಮಿತಗೊಳಿಸಿ ಅಂದಾಜಿಸುವುದು ಸರಿಯಲ್ಲ. ಇಲ್ಲಿ ಚಾತುರ್ಯದ ಮಾತಿಗಿಂತಲೂ ಸತ್ವಯುತ ಮಾತುಗಳು ಮಾತ್ರವಲ್ಲ ಕುರುಕ್ಷೇತ್ರದ ಆ ಸನ್ನಿವೇಶದ ಮರು ಸೃಷ್ಟಿ ಎನ್ನಬೇಕಾಗುತ್ತದೆ. ಪ್ರಸಂಗ ಭೀಷ್ಮ ಸೇನಾಧಿಪತ್ಯದೊಂದಿಗೆ ಅರಂಭವಾಗುತ್ತದೆ.  ಹಸ್ತಿನಾವತಿಯ ರಾಜ ಸಭೆಯ ಮಂತ್ರಾಲೋಚನೆಯಂತೆ  ಭೀಷ್ಮರನ್ನು ಸೇನಾಧ್ಯಕ್ಷನನ್ನಾಗಿ ಮಾಡುವುದು,  ಅದರ ಉಪಕ್ರಮದಂತೆ ಕೌರವ ರಾತ್ರಿ ಭೀಷ್ಮರಿದ್ದಲ್ಲಿಗೆ ಹೋಗಿ ಭೀಷ್ಮರನ್ನು ಒಡಂಬಡಿಸುವ ಸಂಭಾಷಣೆ. ಕೌರವನಾಗಿ ಪ್ರಭಾಕರ ಜೋಷಿ ಮತ್ತು ಭೀಷ್ಮನಾಗಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅರ್ಥಧಾರಿಗಳಾದರೆ ನಂತರ ಗೀತೋಪದೇಶ ಆನಂತರ ಚಕ್ರ ಗ್ರಹಣ. ಹೀಗೆ ಮೂರು ಭಾಗವನ್ನು ಸಮನ್ವಯಗೊಳಿಸಿ ಒಂದು ತಾಳ ಮದ್ದಲೆ. ಅದರೂ ಇದರಲ್ಲಿ ತಾಳ ಅಡಿರೇಖೆ ಎಳೆದಂತೆ ಗೀತೋಪದೇಶ ವಿಶಿಷ್ಟವಾದ ಪ್ರಯೋಗವೆನಿಸಲ್ಪಡುತ್ತದೆ. ಹದಿನೆಂಟು ಅಧ್ಯಾಯದ ಭಗವದ್ಗೀತೆಯನ್ನು..ವಿಷಾದ ಯೋಗ, ಸಾಂಖ್ಯಯೋಗ, ಕರ್ಮ ಯೋಗ...ಎಲ್ಲವನ್ನೂ ಸಂಕ್ಷೇಪಿಸಿ ಸುಂದರವಾಗಿ ಪ್ರಯೋಗಕ್ಕೆ ತಂದಿದ್ದಾರೆ. ಅವೆಲ್ಲವನ್ನು ಇನ್ನೂ ಕಿರಿದಾಗಿಸಿ ಬರಹದಲ್ಲಿ ತರುವ ಪ್ರಯತ್ನ ಇದು. ಇದು ಒಂದು ದೃಷ್ಟಿ ಕೋನದ ಅಪೂರ್ಣ ಭಾವಾನುವಾದ ಎನ್ನಬಹುದು. ಯಾಕೆಂದರೆ, ಪ್ರತಿ ಸಲ ಕೇಳಿದಾಗಲು ಹೊಸ ಹೊಸ ಅರ್ಥವನ್ನು ಒಡಲಿಂದ ಹೊರ ಹಾಕುವ ಇದರ ಪರಿಪೂರ್ಣವನ್ನು ವ್ಯಾಖ್ಯಾನಿಸುವುದು ಸಾಧ್ಯವೇ ಇಲ್ಲ ಎನ್ನಬಹುದು.

ಕುರುಕ್ಷೇತ್ರ ಎಂದಾಗ ಬರೀ ಯುದ್ದರಂಗದ ಬಿಸಿ ಬಿಸಿ ಸನ್ನಿವೇಶದ ಕಲ್ಪನೆಯ ಹೊರತಾಗಿ ಗೀತೋಪದೇಶವನ್ನು ಪ್ರಯೋಗಾತ್ಮಕವಾಗಿ ತೋರಿಸಿದ್ದು ಅದ್ಭುತವೆನಿಸಲ್ಪಡುತ್ತದೆ. ಅರ್ಜುನ ತನ್ನನ್ನಾವರಿಸಿದ  ಬಂದ  ಕ್ಲೈಬ್ಯದಿಂದ ಖಿನ್ನನಾಗುತ್ತಾನೆ. ಸುತ್ತಲೂ ಸೇರಿದ ಬಂಧುವರ್ಗವನ್ನು ಕಂಡು ಮೋಹಪರವಶನಾಗುತ್ತಾನೆ. ಆವಾಗ ಕೃಷ್ಣ ಮಹತ್ವವಾದ ಗೀತೋಪದೇಶವನ್ನು ಮಾಡಿ ಮೋಹನಷ್ಟವಾಗುವಂತೆ ಮಾಡುತ್ತಾನೆ. ಭಗವದ್ಗೀತೆಯ ಈ ಭಾಗ ಯಾರಿಗೆ ತಿಳಿದಿಲ್ಲ ಹೇಳಿ.  ಭಗವದ್ಗೀತೆಯ ಪ್ರವಚನವಾದರೆ ಅದೆಷ್ಟು ಪ್ರಭಾವ ಬೀರುವುದೋ ಆದರೆ ಯಕ್ಷಗಾನಕ್ಕಿಂತ ಸರಳವಾಗಿ ಮಾರ್ಮಿಕವಾಗಿ ಗೀತೋಪದೇಶದ ಸಾರವನ್ನು  ಸಾರುವ ಕಲೆ ಬೇರೆ ಇರಲಾರದು. ಯಕ್ಷಗಾನದ ವೈಶಿಷ್ಟ್ಯತೆಗೆ ಸಾಕ್ಷಿಯಾಗಿ ಇದು ಮೂಡಿ ಬಂದಿದೆ. ಗೀತೆಯ ಸಾರವನ್ನು ಸರಳವಾಗಿ ಇಲ್ಲಿ ತೋರಿಸಿದ ರೀತಿಯಿಂದ ಯಕ್ಷಗಾನ ತಾಳಮದ್ದಲೆಯ ಸ್ವರೂಪಕ್ಕೆ ಒಂದು ಟಿಪ್ಪಣಿ ಬರೆದಂತೆ ಭಾಸವಾಗುತ್ತದೆ.

ಕೌರಾವಾದಿಗಳ ಮಧ್ಯೆ ಪಾರ್ಥನ ಮಾತಿನಂತೆ ರಥ ನಿಲ್ಲಿಸುತ್ತಾನೆ ಕೃಷ್ಣ. ‘ಹೌದಲ್ಲ ಹೌದಲ್ಲ’  ಎಂಬ ಮಾತಿನ ಧ್ವನಿ ಅರಿವಾಗುವುದು ಆವಾಗಲೇ. ಕ್ರೋಧ ಭಾವದಿಂದ ವೈರಿಗಳ ಸುಟ್ಟ ಮುಖವನ್ನೊಮ್ಮೆ ನೋಡಿಬಿಡುತ್ತೇನೆ ಎಂದ ಪಾರ್ಥನ ಮಾತು ಆ ವೈರ ಭಾವ ಸ್ಥಾಯಿಯಾಗಿ ಉಳಿಯದೇ…ಆ ಮುಖಗಳನ್ನು ನೋಡಿ ಕ್ರೋಧ ವೈರ ದೂರಾಗಿ ಅಲ್ಲಿ ಮೋಹ…ಬರೀ ಮೋಹ ಆವರಿಸಿಬಿಡುತ್ತದೆ. ಮಹಾಭಾರತ ಮಹತ್ತರ ಘಟನೆಗೆ,  ದಿವ್ಯ  ಮುಹೂರ್ತಕ್ಕೆ ಈ ಮೋಹವೇ ಕಾರಣವಾಗಿಬಿಟ್ಟಿತು. “ಹೌದಲ್ಲ’  ಎಂಬ  ಕೃಷ್ಣನ ಧ್ವನಿಯಲ್ಲಿ ತುಂಬಿದ್ದ ಶಂಕೆ ಏನೂಂತ ವೇದ್ಯವಾಗುವುದು ಮುಂದೆ.

 ಎಂದಿನ ಶೈಲಿಯಂತೆ ಶೇಣಿಯವರು ಕಷ್ಣನಾಗಿ ತಮ್ಮ ಮಾತನ್ನು ಮಧ್ಯದಿಂದಲೇ ಪ್ರಾರಂಬಿಸಿಬಿಡುತ್ತಾರೆ.  ಬಂದವರನ್ನೇಲ್ಲಾ ಅದೇ ದೃಷ್ಟಿಯಿಂದ ಪಾರ್ಥ ಕಾಣಲಾರ ಎಂಬ ಸಂದೇಹ ನಿಜವಾಗುತ್ತದೆ. .” ಹೌದಲ್ಲಾ...” ಎಂಬುದರ ನಿಗೂಢಾರ್ಥ ಅರಿವಾಗುತ್ತದೆ. ಮುಂದಿನ ಘಟನೆಗೆ ಇದು ಮಾತಿನ ಪೀಠಿಕೆ.

“ಪರಿಕಿಸು ಪಾರ್ಥನೆ ನಿಂದಿಸ ರಿಪುಮೋಹರದೊಳು ರಥಿಗಳನು. ಕರದೊಳು ಶಸ್ತ್ರಾಸ್ತ್ರಗಳುರೆ ಧರಿಸುತ ತಿರುಹುತ ಮೀಸೆಯನು”
 ಸೇನೆಯ ಮಧ್ಯದಲ್ಲಿ ರಥವನ್ನು ತಂದು ನಿಲ್ಲಿಸಿ ಕೃಷ್ಣ ಹೇಳುತ್ತಾನೆ. ಪರಿಕಿಸು ಪಾರ್ಥನೆ  ಎಂದು ತೊಡಗುತ್ತಾ   ವಿರೋಧಿಗಳಾಗಿ ಬದಲಾದ ದಾಯಾದಿಗಳನ್ನು, ಇಲ್ಲಿ ನಾವಾಗಿ ಬಯಸದೇ ಇದ್ದರೂ ಈಗ ಸನ್ನಿಹಿತವಾಗಿರುವ ಈ ಯುದ್ದ,  ಇಲ್ಲಿ ಯಾರೆಲ್ಲ ಬಂದಿದ್ದಾರೆ ಪರಿಕಿಸು. ಬೇಡದೇ ಇದ್ದರೂ ನಿರ್ಣಯವಾದ ಈ ಯುದ್ದ. ನಾವಾಗಿ ಬಯಸದೇ ಇದ್ದರೂ ಅನಿವಾರ್ಯವಾಗಿ ರಣವೀಳ್ಯವನ್ನು ಕೈನೀಡಿ ತೆಗೆದುಕೊಂಡಿದ್ದೇವೆ. ಪಾಂಡವರ ರಾಯಭಾರಿಯಾಗಿ ಹೋದಾಗ ಇಲ್ಲಿ ಈಗ ಯಾರೆಲ್ಲ ಬಂದಿದ್ದಾರಲ್ಲ ಅವರೆಲ್ಲ ಅಲ್ಲಿದ್ದರು. ಅಲ್ಲಿ ಇವರೆಲ್ಲ ಇದ್ದಂತೆ ಏನಾಯಿತು ಕೃಷ್ಣನನ್ನು ದೈಹಿಕವಾಗಿ ಬಂಧಿಸುವಲ್ಲಿಯ ವರೆಗೂ ಹೋಯಿತು. ಆಗ ಯಾರು ಪ್ರತಿಭಟಿಸಲಿಲ್ಲ. ರಾಯಭಾರಿತ್ವವನ್ನು ತುಸು ಬದಿಗಿರಿಸಿ ಬಂದ ವಿಪತ್ತನ್ನು ಎದುರಿಸಿ ಕೃಷ್ಣ ಹೊರಬಂದುದಾದರೂ ಯಾಕೆ? ಕೃಷ್ಣನಾಗಿ ಶೇಣಿಯವರು ಕೊಡುವ ವಿಶ್ಲೇಷಣೆ,  ಕೃಷ್ಣ ರಾಯಭಾರಿಯಾಗಿ ಹೋದವನು. ಯುದ್ದಕ್ಕಾಗಿ ಹೋದವನಲ್ಲ, ಮಾತ್ರವಲ್ಲ ಕೌರವನೊಡನೆ ಕೃಷ್ಣನ ಯುದ್ದವಲ್ಲ. ಒಂದು ವೇಳೆ ಕೌರವನಲ್ಲಿ ಯುದ್ದ ಎಂದಾದರೆ ಆ ಕೌರವ ಮತ್ತೆ ಒಳಗೆ ಹೋದಾನೋ? ತಾನು ಆಯುಧಗ್ರಹಣ ಮಾಡುವುದಿಲ್ಲ ಎಂಬ ಮಾತಿದೆಯಲ್ಲ? ಯುದ್ದಕ್ಕಾಗಿ ಹೋದವನೂ ಅಲ್ಲ,   ಹಾಗಾಗಿ  ಅಯುಧ ಹಿಡಿಯದ ತನಗೆ ಆದ ಅಪಮಾನವನ್ನು ಪಾರ್ಥ ಹೇಗೆ ಸ್ವೀಕರಿಸುತ್ತಾನೆ? ಪಾರ್ಥನ ಪ್ರತಿವಿಧಿ ಏನು?  ಶಸ್ತ್ರ ರಹಿತನಾದ ಕೃಷ್ಣನಿಗೆ ಸುರಕ್ಷಿತ ಸ್ಥಳ ಪಾರ್ಥ ಸಾನ್ನಿದ್ದ್ಯದ ರಥವಲ್ಲದೇ ಬೇರೆ ಯಾವುದು?  ಪಾರ್ಥನ ಸಾಮಾರ್ಥ್ಯದ ಬಗ್ಗೆ ಕೃಷ್ಣ ತನ್ನ ಭರವಸೆಯನ್ನು ಹೀಗೆ ವ್ಯಕ್ತ ಪಡಿಸುವ ಮರ್ಮವಾದರೂ ಏನು? ಪಾರ್ಥ ಮೋಹಪರವಶನಾಗಬಾರದು.  ಹೀಗೆ ಹೇಳುತ್ತಾ ಪರೋಕ್ಷವಾಗಿ ಪಾರ್ಥನ ರಥ ಸೇನೆಯ ಮಧ್ಯೆ ನಿಲ್ಲಿಸಿದ ಕಾರಣವನ್ನು ಹೇಳುತ್ತಾನೆ. ಹೀಗೆ ಪಾರ್ಥನ ರಥಿಕನಾಗಿ  ಕೇಳುತ್ತಾನೆ ಕೃಷ್ಣ. ..ಪರಿಕಿಸು ಪಾರ್ಥನೇ..

“ ಕೂಡೆ ಪರಿಕಿಸುತಾಗ ಪಾರ್ಥನು ಮೂಡಿದಶ್ರುಗಳಿಂದ ಶಿರವೊಡೆದಾಡಿದನು .........”
ಸೇನೆಯ ಮಧ್ಯೆ ನಿಂತ ಅರ್ಜುನ ಕೃಷ್ಣನ ಅನುಮಾನದಂತೆ ಭಾವ ಪರವಶನಾಗಿಬಿಡುತ್ತಾನೆ. ಕೌರವನ ಕಡೆಯಿಂದ ಬಂದ ಮೂರ್ಖರ ಸುಟ್ಟ ಮುಖವನ್ನೊಮ್ಮೆ ನೋಡುವ ಬಯಕೆಯನ್ನಾಡಿದ ಅರ್ಜುನ, ಕೌರವ ಸೇನೆಯಲ್ಲಿರುವ ಒಬ್ಬೊಬ್ಬರನ್ನೇ ಗುರುತಿಸುತ್ತಾನೆ. ಎಲ್ಲರೂ ಬಂಧುಗಳು. ತಾವಾದರೋ ಫಲಾಪೇಕ್ಷೆಯಿಂದ ಯುದ್ದ ಅನಿವಾರ್ಯವಾಗಿ ಯುದ್ಧಕ್ಕೆ ಬಂದವರು. ಆದರೆ ಯಾವುದೇ ಫಲಾಪೇಕ್ಷೆಯಿಲ್ಲದೆ ಬಂದವರು.. ಗುರುಗಳಾದ ದ್ರೋಣ , ಕೃಪ..ತುತ್ತು ಕೊಟ್ಟು ಸಲಹಿದ ಭೀಷ್ಮ , ಇತರ ಬಂಧು ಮಿತ್ರಾದಿಗಳು, ನಾವು ರಾಜ್ಯವನ್ನು ಹೊಂದಬೇಕಿದ್ದರೆ ಜಯ ಪಡೆಯಬೇಕು. ಅದೆಂತಹ ಜಯ? ಇವರನ್ನೆಲ್ಲ ಕೊಂದರೆ ಮಾತ್ರ. ಇವರನ್ನು ಕೊಂದ ಮೇಲೆ ಎಲ್ಲ ಬಂಧು ಬಳಗ ಹತರಾದ ಮೇಲೆ ಸಿಗುವ ಆ ಜಯ, ಆ ಜಯದ ಅಗತ್ಯವಾದರೂ ಏನು? ಯುದ್ದರಂಗಕ್ಕೆ ಬಂದು ಇವರನ್ನೆಲ್ಲಾ ಕಂಡಾಗ  ತನ್ನಲ್ಲಿ ಬಂದ ಈ ಭಾವ, ಮೊದಲಾಗಿ ತನ್ನಣ್ಣ ಧರ್ಮಜನಲ್ಲಿ ಯುದ್ಧ ನಿರ್ಣಯದ ಮೊದಲೇ ಬಂದಿತ್ತಲ್ಲವೇ? ಆತ ಇದನ್ನೆಲ್ಲ ಕಲ್ಪಿಸಿದ್ದ.  ಅದಕ್ಕಾಗಿ ಕೃಷ್ಣನಲ್ಲಿ ಹೇಳಿದ್ದ, ಕುಲನಾಶದಿಂದ ಮಲಿನವಾಗುವ ಆ ಶ್ವೇತ ಛತ್ರ ಬೇಡ ನನಗೆ.  ಕೇವಲ ರಾಜ್ಯಕ್ಕಾಗಿ ಮಣ್ಣಿಗಾಗಿ  ಅಧಿಕಾರಕ್ಕಾಗಿ ಈ ಯುದ್ದ.  ಅವರು ಬುದ್ಧಿ ಶೂನ್ಯರು ಮೂರ್ಖರು ಆದರೆ ನಾವು ತಿಳಿದವರು,  ನಮಗೆ ಬುದ್ಧಿ ಬೇಡವೇ? ಎಂತಹ ಪಾಪ ಕಾರ್ಯವಾಗುತ್ತಿತ್ತು,

“ ಕೃಷ್ಣಾ. ಪರಿಕಿಸಿ ನೋಡಿದೆ ಚೆನ್ನಾಗಿ ನೋಡಿದೆ.”
“ಪರೀಕ್ಷೆಯಲ್ಲಿ ಏನು ಕಂಡಿತು?”
“ ಬಂಧುವರ್ಗವ ನಿಷ್ಕಾರುಣ್ಯದಿಂದಲೆ ಕೊಂದು | ಬಂದಿಹ ರಾಜ್ಯ ಬೇಡೆನಗೆ | ಇಂದಿರೇಶನೆ ಧುರಕಾಂಕ್ಷೆಯಿಲ್ಲೆನಗೀಗ | ಬೆಂದಿತೆನ್ನೊಡಲು ಮೋಹದೊಳು | ಇಂದಿರೇಶನೆ | “
“ ಓ ಶ್ರೀಹರೀ..ಶತ್ರುಗಳಾಗಿ ಬಂದವರ ಮುಖನೋಡುವ ಕಾತುರವಿತ್ತು. ಆದರೆ ಇಲ್ಲಿ,  ಈಗ ಈ ಸೇನಾ ಸಮುದ್ರದಲ್ಲಿ  ಒಬ್ಬನೇ ಒಬ್ಬ ಶತ್ರುವನ್ನು ಗುರುತಿಸದಾದೆ.” ಅರ್ಜುನ ಹತಾಶನಾಗಿ ಹೇಳುತ್ತಾನೆ.( ಪೆರ್ಲ ಪಂಡಿತರು ಸಹಜವಾಗಿ ಅರ್ಜುನನ ಕಾಯ ಪ್ರವೇಶಿಸುತ್ತಾರೆ. ) ಎಲ್ಲರೂ ಬಂಧುವರ್ಗವು. ಇಲ್ಲಿ ಶತ್ರುಗಳು ಯಾರು?  ಎಲ್ಲರನ್ನು ಬಂಧು ಮಿತ್ರ ಸಹಜರನ್ನಾಗಿಯೆ  ಕಂಡು ಶತ್ರುವನ್ನು ಕಾಣದಾದ ಅರ್ಜುನ. ಈಯುದ್ದದ ಕೊನೇಯ ಫಲ ಏನು? ಜಯ... ಆ ಜಯದಿಂದ ತಮ್ಮ ರಾಜ್ಯಪ್ರಾಪ್ತಿ. ರಾಜ್ಯ ಯಾಕೆ? ಪ್ರಪಂಚದ ಭೋಗ ವಿಲಾಸಗಳನ್ನು ಅನುಭವಿಸುವುದಕ್ಕೆ. ಈ ಇಂದ್ರಿಯಗಳ ದಾಸನಾಗುವುದಕ್ಕೆ..ಅಷ್ಟಕ್ಕಾಗಿ ಈ ಬಂಧು ಹತ್ಯೆ. ಎಲ್ಲರನ್ನು ಕೊಂದು ಬಹುದೊಡ್ಡ ಶ್ಮಶಾನ ನಿರ್ಮಾಣ ಮಾಡಿ ಮತ್ತೆ ರಾಜ್ಯ? ಆದುದರಿಂದ ಬೇಡ ರಥವನ್ನು ಹಿಂದಕ್ಕೆ ತಿರುಗಿಸು. ಯಾವುದು ಬೇಡ.. ಕಾಡಿಗೆ..ನಾನು ಕಾಡಿಗೆ ಹೋಗ್ತೆನೆ.
ಕೃಷ್ಣ ಕೇಳ್ತಾನೆ “ ಮಧೆಯ ಒಂದು ಪ್ರಶ್ನೆ ಕೇಳಲೇ?  ಕಾಡಿಗೆ ರಥವನ್ನು ಹಾರಿಸುವ. ಕಾಡಿನಲ್ಲಿ ಹೋಗಿ ಏನು ಮಾಡುವುದು?”
 “ ತಪಸ್ಸು ...ಇದೆಯಲ್ಲ?”
“ಊಟಕ್ಕೆ?”
“ಕಂದಾಹಾರ, ವಾತಾಹಾರ .ಜಲಾಹಾರ....”
“ ಹಾಗಿದ್ರೆ ಅದು ಬೇಕು. ಇಲ್ಲಿ ಇದು ಬೇಡ ಮತ್ತೊಂದು ಬೇಕು... ಅದು ಒಂದು ಬೇಕು..” 
ಈ ಇಂದ್ರಿಯದ ಆಶೆಯ ಗೂಡಾರ್ಥವನ್ನು ಶೇಣಿಯವರು ಸರಳವಾಗಿ ತೋರಿಸುತ್ತಾರೆ.
(ಇನ್ನೂ ಇದೆ ಮುಂದಿನಭಾಗದಲ್ಲಿ)

“