"ಇದು ವಿಮರ್ಶೆಯಲ್ಲದ ಚಿಂತನ"

Saturday, April 24, 2021

ವಿದ್ಯಯಾಮೃತ ಮಶ್ನುತೇ

             ಬಾಲ್ಯದಲ್ಲಿ ನಮ್ಮಲ್ಲಿ ಕೇಳುವ ಒಂದು ಪ್ರಶ್ನೆ ದೊಡ್ಡವನಾದ ಮೇಲೆ ಏನಾಗುತ್ತಿಯಾ? ಇದು ಬಹುತೇಕ ಎಲ್ಲ ಮಕ್ಕಳಲ್ಲೂ ಕೇಳುವ ಸಾಮಾನ್ಯ ಪ್ರಶ್ನೆ. ಈ ಪ್ರಶ್ನೆಯನ್ನು ಗಂಡು ಮಕ್ಕಳಲ್ಲಿ ಕೇಳಿದರೆ, ಹೆಚ್ಚಿನ ಮಕ್ಕಳು ಹೇಳುವ ಉತ್ತರ, ದೊಡ್ಡೋನಾದ ಮೇಲೇ ನಾನು ಬಸ್ ಡ್ರೈವರ್ ಆಗ್ತೇನೆ. ಮಕ್ಕಳಿಗೆ ಡ್ರೈವರ್ ಕೆಲಸ ಎಂದರೆ ಒಂದು ಕನಸು. ಬಾಲ್ಯದಲ್ಲಿ ಬಸ್ಸು ಬಿಡದ ಮಕ್ಕಳಿರಲಾರರು. ಈಗ ಆಟದ ಶೈಲಿ ಬದಲಾಗಿದೆ.  ಆದರೆ ಚಾಲಕ ವಿದ್ಯೆ ಅದೆಷ್ಟು ಗಹನವಾದದ್ದು ಎಂದರೆ ಆಶ್ಚರ್ಯವಾಗುತ್ತದೆ.  ಹಲವಾರು ಜನರ ಜೀವ ಕೈಯಲ್ಲಿ ಹಿಡಿದು ಕೊಂಡು ಹೋಗುವ ಕೆಲಸ.

ನಮ್ಮ ಪೈವಳಿಕೆಯಲ್ಲಿ ಓಡುವ ಎಲ್ಲಾ ಬಸ್ಸುಗಳ ಡ್ರೈವರ್ಗಳು ಒಂದು ಕಾಲದಲ್ಲಿ ನನಗೆ ತೀರ ಪರಿಚಿತರಾಗಿದ್ದರು. ಅದರಲ್ಲಿ ಕೆಲರು ಅತ್ಯಂತ ಆತ್ಮೀಯರಾಗಿದ್ದರು. ಕಿಸೆಯಲ್ಲಿ ದುಡ್ಡು ಇಲ್ಲದೇ ಇದ್ದರೂ ಬಸ್ಸಿನಲ್ಲಿ ಓಡಾಡಬಹುದಿತ್ತು. ಆಗ ತಲಪಾಡಿ ಬಸ್ಸಿನ ಚಾಲಕಮಿತ್ರನೊಬ್ಬ ಇದ್ದ. ಅವಿದ್ಯಾವಂತ,  ಆದರೆ ಡ್ರೈವಿಂಗ್ ಮಾತ್ರ ಸುಂದರ ಕಾವ್ಯಮಯ. ಆತನಲ್ಲಿ ಸಲುಗೆಯಿಂದಲೆ ಒಂದು ಸಲ ಕೇಳಿದ್ದೆ. “ ಎಂಕ್ ಡ್ರೈವಿಂಗ್ ಪಂಡ್ ದ್ ಕೊರ್ಪಾರಾ?” ( ನನಗೆ ಡ್ರೈವಿಂಗ್ ಹೇಳಿ ಕೊಡುವಿರ?) ನಾನು ಕೇಳಿದ್ದು ಏಕ್ ದಂ ಬಸ್ ಡ್ರೈವಿಂಗ್ ಕಲಿಸುವುದಕ್ಕೆ.  ಆತ, ಆ ಅವಿದ್ಯಾವಂತ ಡ್ರೈವರ್ ಹೇಳಿದ ಮಾತು ಈಗಲೂ ನನಗೆ ನೆನಪಿದೆ. ಅಣ್ಣೆರೆ, ಗುರುಸೇವೆ ಮಲ್ತ್ ಕಲ್ತ್ ದೇ. ಗುರುವೆರ್ ನ  ಅಡಿವಸ್ತ್ರಲಾ ದೆಕ್ಕ್ ದ್ ಕಲ್ತಿನ ವಿದ್ಯೆ ಉಂದು. ಆತ್ ಕಷ್ಟ ಉಂಡಣ್ಣ. ಗಾಡಿ ಏರ್ಲ ಬಲಿಪ್ಪಾವೇರ್ ಆಂಡ ನಿಜವಾಯಿನ ಡ್ರೈವಿಂಗ್ ಅವು ಕಲ್ತ್ ದೇ ಬರೋಡು. ಪೊಕ್ಕಡೇ ಬರ್ಪುಜ್ಜಿ. (ಅಣ್ಣಾ, ಗುರು ಸೇವೆ ಮಾಡಿ ಕಲಿತಿರುವೆ. ಗುರುಗಳ ಅಡಿವಸ್ತ್ರವನ್ನೂ ತೊಳೆದು ಕಲಿತ ವಿದ್ಯೆ ಇದು.  ಅಷ್ಟು ಕಷ್ಟವಿದೆ. ಗಾಡಿ ಯಾರೂ ಓಡಿಸಿಯಾರು,  ಆದರೆ ನಿಜವಾದ ಡ್ರೈವಿಂಗ್ ಅದು ಕಲಿತೇ ಬರಬೇಕು. ಸುಮ್ಮನೇ ಬರಲಾರದು). 

ವಿದ್ಯೆ ಹಲವು ವಿಧ ಇರಬಹುದು. ಆದರೆ ಪ್ರಪಂಚದ ಅಸ್ತಿವಾರವೇ ವಿದ್ಯೆ. ಎಲ್ಲದರ ಅಡಿಗಲ್ಲು ಈ ವಿದ್ಯೆ. ಅದು ತಪಸ್ಸಿನಂತೆ ತಿಳಿದೋ ತಿಳಿಯದೇಯೊ ಅದನ್ನು ಅನುಸರಿಸಿ ಅದರಿಂದಲೇ  ಭವಿಷ್ಯ ಕಟ್ಟುವುದು.

ಪರಿಪೂರ್ಣ ವಿದ್ಯಾರ್ಥಿ ಮಾತ್ರವೇ ವಿದ್ಯೆಯ ಬಗ್ಗೆ ಪೂರ್ಣ ಅಧಿಕಾರವನ್ನು ಹೊಂದಿರುತ್ತಾನೆ.  ಅದು ಲಭ್ಯವಾಗುವುದು ಪೂರ್ಣ ಅಧ್ಯಯನದಿಂದ ಮತ್ತು ಯೋಗ್ಯಗುರುವಿನಿಂದ.  ವಿದ್ಯಾರ್ಥಿ ಹುದ್ದೆ ವಿದ್ಯಾ ಪಯಣವೆಂದರೆ ಅದು ನಿತ್ಯವೂ ಅನಂತ. ಜೀವನ ಪರ್ಯಂತ.

ವಾಹನ ಚಾಲನೆ ಅಥವಾ ಡ್ರೈವಿಂಗ್ ಇದನ್ನು ಹವ್ಯಾಸ ಮಾಡಿಕೊಂಡವರ ಸಂಖ್ಯೆ ಬಹಳವಿದೆ. ಅದರಲ್ಲೂ ಬೈಕ್ ಕಾರ್ ಡ್ರೈವಿಂಗ್ ಕಲಿತ ಆರಂಭದಲ್ಲಿ ಅವುಗಳನ್ನು ಓಡಿಸುವುದು ಎಂದರೆ ನೋವು ಹಸಿವು ಎಲ್ಲವನ್ನು ಮರೆಸುತ್ತದೆ. ನಾನು ಮೊದಲು ಸೈಕಲ್ ಕಲಿತು  ಆನಂತರ ಒಬ್ಬನೇ ಪೈವಳಿಕೆ ಶಾಲಾ ಮೈದಾನದಲ್ಲಿ ಸೈಕಲ್ ಓಡಿಸಿದ ಅನುಭವ ಮರೆಯಲಾರೆ. ಹಾಗೇ ಕಾರ್ ಡ್ರೈವಿಂಗ್ ಕಲಿತು ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ದೊಡ್ಡ ಬಳ್ಳಾಪುರದಿಂದ ಬೆಂಗಳೂರು ತನಕ ಮೂದಲ ಬಾರಿಗೆ  ಕಾರು ಒಬ್ಬನೇ ಸ್ವತಂತ್ರವಾಗಿ ಓಡಿಸಿದ್ದು ಮರೆಯಲಾರೆ.  ವಾಹನ ಚಾಲನೆ,  ಅದೊಂದು ಕಲೆ.

 ಹಿಂದೊಮ್ಮೆ ಮಿತ್ರರೊಬ್ಬರ ಜತೆಗೆ ಮಿಲಿಟರಿ ಚಾಲಕ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದೆ. ಮಿಲಿಟರಿ ಪೋಲೀಸ್ ಇಲಾಖೆಗಳ ಚಾಲಕ ಸಿಬ್ಬಂದಿಗಳಿಗೆ ಅಲ್ಲಿ ಪರೀಕ್ಷೆ ಮಾಡಿ ಆಯ್ಕೆ ಮಡುತ್ತಿದ್ದರು. ಕ್ಯಾಂಪ್ ಒಳಗಡೆ ವಿಶಾಲವಾದ ಮೈದಾನ ಮತ್ತು ಹೊರಗೆ ಇರುವಂತೆ ರಸ್ತೆಗಳು ಸೂಚನಾ ಫಲಕಗಳು, ಬಸ್ ತಂಗುದಾಣ, ರೈಲ್ವೇ ಹಳಿ ಹೀಗೆ ಪರೀಕ್ಷೆಯ ಸಕಲ ಅಂಗಗಳೂ ಅಲ್ಲಿದ್ದವು. ಅಲ್ಲಿದ್ದ ಇನ್ಸ್ ಪೆಕ್ಟರ್ ಒಬ್ಬರು ವಾಹನ ಚಾಲನೆಯ ಬಗ್ಗೆ ಹೇಳುವಾಗ ನಿಜಕ್ಕೂ ವಾಹನ ಚಲಾಯಿಸುವ ವಿದ್ಯೆ ಅಷ್ಟೊಂದು ವಿಶೇಷವೇ ಅಂತ ಅನ್ನಿಸದೇ ಇರಲಾರದು. ಹೌದು ವಾಹನ ಚಾಲನೆ ಕೇವಲ ವಾಹನವನ್ನು ಓಡಿಸುವುದಲ್ಲ. ಅದರಲ್ಲಿ ಹಲವು ಸಂಗತಿಗಳಿವೆ ಅದನ್ನು ಅರಿತರೆ ಮಾತ್ರ ಆತ ಪೂರ್ಣ ಪ್ರಮಾಣದಲ್ಲಿ ಚಾಲಕನಾಗಬಲ್ಲ. ರಸ್ತೆಯಲ್ಲಿ ವಾಹನ ಓಡಿಸಬೇಕಿದ್ದರೆ ಚಾಲಕನಿಗೆ ಯಾವೆಲ್ಲ ಅರ್ಹತೆಗಳಿರಬೇಕು ಇದನ್ನು ತಿಳಿದರೆ ಇಂದು ಶೇಕಡ ಎಪ್ಪತ್ತೈದು ಮಂದಿ ವಾಹನ ಓಡಿಸುವಂತಿಲ್ಲ. ಡ್ರೈವಿಂಗ್ ಕೇವಲ ವಿದ್ಯೆಯಲ್ಲ. ಅದೊಂದು ಕಲೆ. ಡ್ರೈವರ್ ಎಂದರೆ ಒಂದು ಗೌರವಾನ್ವಿತ ಹುದ್ದೆ. ಆತ ಅದರ ಬಗ್ಗೆ ಎಷ್ಟು ಅಭ್ಯಾಸ ಮಾಡಿದ್ದಾನೆ ಎಂಬುದರಲ್ಲಿ ಚಾಲನೆ ಗೌರವಾನ್ವಿತ  ಅಂತ ಅನ್ನಿಸಿಕೊಳ್ಳುವುದು. ಚಾಲಕನಾದವನು ತಾನು ಓಡಿಸುವ ವಾಹನದ ಪ್ರತಿಯೊಂದು ಭಾಗವನ್ನು ಅರಿತಿರಬೇಕು. ಆಗಲೇ ಆತ ಚಾಲಕನಾಗುವುದು.

ಒಂದು ವಾರದಲ್ಲಿ ಡ್ರೈವಿಂಗ್ ಕಲಿತು ರಸ್ತೆಯಲ್ಲಿ ರಾಜ ಠೀವಿಯಲ್ಲಿ ಹೋಗುವುದನ್ನು ಕಾಣುವಾಗ ಡ್ರೈವರ್ ಎರಡು ವರ್ಷ ಕಲಿತಿರುವ ಡ್ರೈವಿಂಗ್ ಆದರೂ ಯಾವುದು? ಅದನ್ನೇ ವಿದ್ಯೆ ಎನ್ನುವುದು.ಒಂದು ವಾರದಲ್ಲಿ ಕಲಿಯುವುದಕ್ಕೂ ಎರಡುವರ್ಷ ಕಲಿತಿರುವುದಕ್ಕೂ ವೆತ್ಯಾಸವಿಲ್ಲವೇ? ಇದೆ, ಅದರ ಮೌಲ್ಯದಿಂದ ಗುರುತಿಸಬೇಕು. ಇಂದಿನ ಕ್ಷಿಪ್ರಯುಗದಲ್ಲಿ ಕಲಿಯುವವರಿಗೆ ಈ ಮೌಲ್ಯ ಅರ್ಥವಾಗುವುದಿಲ್ಲ.

 

ವಿದ್ಯಯಾಮೃತ ಮಶ್ನುತೆ, ಎಂದು ಜ್ಞಾನಿಗಳು ಹೇಳುತ್ತಾರೆ. ಪ್ರಪಂಚದ ಇರುವಿಕೆಯ ಕುರುಹಾದ ಜ್ಞಾನದ ರಹದಾರಿಯೇ ವಿದ್ಯೆ. ಆ ವಿದ್ಯೆ ಅಮೃತ ಸದೃಶ. ಗುರು ವಿದ್ಯಾದಾನವನ್ನು ಮಾಡುವಾಗ ಅದು ಶಿಷ್ಯನಲ್ಲಿ ಅಮೃತವಾಗಿ ನಿಕ್ಷೇಪಿಸಲ್ಪಡಬೇಕು. ಆ ಮೌಲ್ಯವನ್ನು ಶಿಷ್ಯನೂ ಅರ್ಥವಿಸಬೇಕು. ಆಗಲೇ ವಿದ್ಯೆ ಅದೇ ರೀತಿಯಲ್ಲಿ ಶಿಷ್ಯನಲ್ಲಿ ನಿಕ್ಷೇಪವಾಗುತ್ತದೆ.  ಆವಾಗಲೇ ವಿದ್ಯೆ ಅಮೃತವಾಗುತ್ತದೆ.

ಒಬ್ಬ ಸಾಮಾನ್ಯ ಚಾಲಕನಲ್ಲಿದ್ದ ಪ್ರಜ್ಞೆ ಇಂದು ಅತಿ ವಿದ್ಯಾವಂತರಲ್ಲೇ ನಾಶವಾಗಿದೆ. ಹಾಗಾಗಿಯೇ ಪರಂಪರಾಗತವಾಗಿ ಗುರುವಿನಿಂದ ಬಂದದ್ದು ಮೂಲ ಆಶಯವನ್ನು ಮರೆತು ಹೊಸ ಆವಿಷ್ಕಾರದಲ್ಲಿ ಬದಲಾವಣೆಯಾಗಿದೆ.  ತನ್ನ ಗುರುವಿನಿಂದ ಉಪದೇಶಿಸಲ್ಪಟ್ಟ ವಿದ್ಯೆಯನ್ನು ಗುರುವಿನ ಅನುಮತಿ ಇಲ್ಲದೇ ಬದಲಾಯಿಸುವುದಕ್ಕೆ ಅಧಿಕಾರವಿಲ್ಲ. ಒಂದು ವಿದ್ಯೆಯನ್ನು ಸಂಪೂರ್ಣವಾಗಿ ಅರಿತವನು ಅದನ್ನು ಬದಲಾಯಿಸುವುದಕ್ಕೆ ಮನಸ್ಸು ಮಾಡುವುದೂ ಇಲ್ಲ. ಈ ಮೌಲ್ಯದ ಅರಿವಿಲ್ಲದೇ ಇಂದು ಪರಂಪರೆ ಸಾಂಪ್ರದಾಯಿಕ ವಿಚಾರಗಳು ಬದಲಾಗಿವೆ.  ಕಲೆ ಕಲಾವಿದ ಬದಲಾಗುತ್ತಾನೆ. ಅಪೂರ್ಣವಾದ ಜ್ಞಾನದಿಂದಲೇ ಅದನ್ನು ಬದಲಿಸುತ್ತಾನೆ. ಅದಕ್ಕೆ ಹಲವು ಸ್ವಯಂ ನಿರ್ಮಿತ ಕಾರಣಗಳನ್ನು ಕೊಡುತ್ತಾನೆ. ಅದರಲ್ಲೇನೂ ಇಲ್ಲ ಎಂಬ ಬೇಜವಾಬ್ದಾರೀ  ಚಿಂತನೆಗಳು ಹಿರಿಯರ ಹೆಜ್ಜೆಗಳನ್ನು ಅಳಿಸಿಹಾಕಿವೆ.  ಗುರು ಹಿರಿಯರು ಕೇವಲ ಅಲಂಕಾರಿಕ ವಸ್ತುಗಳಾಗುವಾಗ ಇವುಗಳೆಲ್ಲ ಸಹಜ.  ಪರಮಾತ್ಮನ ಮೇಲೆ ಭಕ್ತಿಯೂ ಇಲ್ಲ,  ಇದ್ದರೂ  ಅದರ ಹಾದಿ ಕ್ರಮಿಸುವ ಇಚ್ಛಾಶಕ್ತಿ ಇಲ್ಲ.

ಯಾವುದೇ ವಸ್ತುವಿನಲ್ಲಿ ಬದಲಾವಣೆ ಅವಶ್ಯವಾದರೆ ಅದರಲ್ಲಿ ನ್ಯೂನ್ಯತೆ ಇರಬೇಕು. ಇದು ಅರಿವಾಗಬೇಕಾದರೆ ಅದರ ಬಗ್ಗೆ ಸರಿಯಾದ ಮಾಹಿತಿ ಅರಿತಿರಬೇಕು. ಇಲ್ಲವಾದರೆ ಅದರಲ್ಲಿ ಕಾಣುವ ನ್ಯೂನ್ಯತೆ ಅಥವಾ ಕೊರತೆ ಅದು ನಮ್ಮದೇ ಕೊರತೆಯಾಗಿರುತ್ತದೆ.  ಅದರ ಪರಿಪೂರ್ಣ ಜ್ಞಾನ ಗಳಿಸದೇ ಇರುವುದು ನಮ್ಮ ತಪ್ಪಾಗಿರುತ್ತದೆ. ನಮ್ಮ ಸಮಸ್ಯೆಗಳನ್ನೇ ಅದರ ಹೇರಿ ಮೇಲೆ ಹೇರಿ ತಾವು ನಿರಪರಾಧಿಗಳಂತೆ ಮುಖವಾಡ ಹಾಕುತ್ತೇವೆ.  ನಮ್ಮ ತಪ್ಪನ್ನು ವಸ್ತುವಿನಲ್ಲಿ ಹೇರಿದರೆ ನಾವು ಆತ್ಮವನ್ನು ವಂಚಿಸಿದಂತೆ. ವಿದ್ಯೆಯನ್ನು ಸರಿಯಾಗಿ ತಿಳಿಯದೆ, ಅದರ ಪರಿಪೂರ್ಣತೆ ಸಾಧ್ಯವಾಗದಿದ್ದರೆ ಅದರಲ್ಲಿ ಬದಲಾವಣೆಯನ್ನು ಬಯಸುವ ಅಧಿಕಾರ ಯಾರಿಗೂ ಇಲ್ಲ. ಆದರೂ ಸುಡುವ ಬಿಸಿಲಿಗೆ  ಅಜ್ಜನೆಟ್ಟ ಆಲದ ಮರದ ನೆರಳನ್ನೇ ಹುಡುಕುವಾಗ ಅಜ್ಜನ ನೆನಪಾಗುವುದಿಲ್ಲ.  ತಾವು ಸುರಕ್ಷಿತರಾದರೆ ಸಾಕು ಎಂಬ ಸ್ವಾರ್ಥ.  ಆದರೆ ದುರಂತಗಳು ಅನಾಹುತಗಳು ಎದುರಾಗುವಾಗ ಅದನ್ನು ಅನುಭವಿಸುವುದಕ್ಕೆ ತಾವಿರುವುದಿಲ್ಲ. ನಮ್ಮ ಮುಂದಿನ ಜನಾಂಗಕ್ಕೆ ನಾವು ನಿರ್ಮಿಸಿಕೊಡುವ ಪರಂಪರೆ ದುರಂತವನ್ನೇ ತಂದಿಡುತ್ತವೆ ಎಂಬುದನ್ನು ಮರೆಯಬಾರದು.