ಪ್ರತಿಷ್ಠಿತ ವ್ಯಕ್ತಿಗಳು ಹಲವು ಸಲ ಮತ್ತು ಕೆಲವು ಸಂದರ್ಭಗಳಲ್ಲಿ ನಿಯಮದಿಂದ ಮುಕ್ತವಾಗಿರುತ್ತಾರೆ. ಸಾಮಾಜಿಕ ಕಾನೂನುಗಳು ನಿಯಮಗಳು ಕೇವಲ ಸಾಮಾನ್ಯರಿಗೆ ಮಾತ್ರ ಸೀಮಿತವಾಗಿರುತ್ತವೆ. ಪ್ರತಿಷ್ಠೆ ಎಂಬುದು ಅವರಿಗೆ ತಾವು ಎಸಗಿದ ಪ್ರಮಾದಗಳಿಂದ ಹೊರತಾಗಿರುವುದಕ್ಕೆ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಇದು ಪಕ್ಷದಲ್ಲೂ ಜಾತಿ ಧರ್ಮಗಳಲ್ಲು ಸರ್ವೇ ಸಾಮಾನ್ಯ. ಒಬ್ಬ ಪ್ರತಿಷ್ಠಿತ ವ್ಯಕ್ತಿ ಮಾಡಿದ ತಪ್ಪನ್ನು ಪ್ರಶ್ನಿಸುವ ಹಕ್ಕು ಸಾಮಾನ್ಯನಿಗೆ ಇರುವುದಿಲ್ಲ. ಹಲವು ಸಲ ಆತ ಮಾಡಿದ ಒಳ್ಳೆಯ ಕೆಲಸಗಳನ್ನು ಹೇಳಿಯೋ ಮಾಡಿದ ಅನ್ಯಾಯಗಳನ್ನು ವಿರೋಧಿಸುವ ಅಥವಾ ಪ್ರಶ್ನಿಸುವ ಅರ್ಹತೆಯೂ ಉಳಿದವರಿಗಿರುವುದಿಲ್ಲ. ಎಲ್ಲಾ ಕಾನೂನುಗಳಿಗೆ ಅತೀತವಾಗಿರುವುದೇ ಪ್ರತಿಷ್ಠೆಯಾಗಿ ಪರಿಗಣಿಸುತ್ತಾರೆ. ಪ್ರತಿಷ್ಠೆ ಎಂದರೆ ನಿಯಮಗಳನ್ನು ಮೀರಿ ನಿಲ್ಲುವುದೇ ಆಗಿರುತ್ತದೆ. ಇದು ಕೇವಲ ಈಗಿನ ಕಾಲಕ್ಕೆ ಸೀಮಿತವಾಗಿರುವುದಲ್ಲ. ಮಹಾಭಾರತದಲ್ಲೂ ಇಂತಹ ಹಲವು ಘಟನೆಗಳನ್ನು ಕಾಣಬಹುದು. ಅದರಲ್ಲೂ ಧರ್ಮ ಸೂಕ್ಷ್ಮವನ್ನು ಅರಿತಂತಹ ಧರ್ಮಿಷ್ಠ ಎಂದು ಕರೆಸಿಕೊಂಡ ಭೀಷ್ಮ ದ್ರೋಣರಿಂದಲೂ ಈ ತಪ್ಪುಗಳು ಆದಂತೆ ಭಾವಿಸಬಹುದು.
ದ್ಯೂತದಲ್ಲಿ ಧರ್ಮರಾಯ ತನ್ನದೆಲ್ಲವನ್ನೂ ಕಳೆದುಕೊಳ್ಳುತ್ತಾನೆ. ತುಂಬಿದ ಸಭೆಯ ಮಧ್ಯೆ ತನ್ನ ತಮ್ಮಂದಿರನ್ನೂ ಒತ್ತೆ ಇಟ್ಟು ಪಗಡೆಯಾಟದಲ್ಲಿ ಪರಾಜಿತನಾಗುತ್ತಾನೆ. ಕೊನೆಯಲ್ಲಿ ವಿಚಿತ್ರವಾಗಿ ತನ್ನನ್ನು ತಾನು ಪಣವಾಗಿರಿಸಿ ಅಲ್ಲೂ ಸೋಲನುಭವಿಸುತ್ತಾನೆ. ಆನಂತರ ದ್ರೌಪದಿಯನ್ನೂ ಪಣವಾಗಿರಿಸಿ ಅಲ್ಲೂ ಸೋತುಹೋದಾಗ ದುರ್ಯೋಧನ ದ್ರೌಪದಿಯನ್ನು ಕರೆದು ತರುವಂತೆ ಪ್ರತಿಗಾಮಿಯನ್ನು ಕಳುಹಿಸುತ್ತಾನೆ. ಆಗ ಆಕೆ ಧರ್ಮ ಸೂಕ್ಷ್ಮದ ಒಂದು ಪ್ರಶ್ನೆಯನ್ನು ಮುಂದಿಡುತ್ತಾಳೆ. ಧರ್ಮರಾಯ ಸ್ವತಃ ಸೋತನಂತರ ತನ್ನನ್ನು ಅಂದರೆ ದ್ರೌಪದಿಯನ್ನು ಪಣವಾಗಿರಿಸಿದನೆ? ಆತನಿಗೆ ತನ್ನನ್ನು ಪಣವಾಗಿರಿಸುವ ಹಕ್ಕು ಉಳಿದಿರುತ್ತದೆಯೆ? ಈ ಪ್ರಶ್ನೆಗೆ ಯಾರೂ ಉತ್ತರಿಸುವುದಿಲ್ಲ. ನಶೆ ಏರಿದವನ ಮುಂದೆ, ವ್ಯಸನಿಯ ಮುಂದೆ, ಮೂರ್ಖರ ಮುಂದೆ ಈ ಧರ್ಮಸೂಕ್ಷ್ಮದ ನ್ಯಾಯ ಅನ್ಯಾಯ ಕಾನೂನುಗಳ ಪ್ರಶ್ನೆ ಕೇಳುವುದೇ ಮೂರ್ಖತನ. ಅಲ್ಲೂ ಅದೇ ಸಂಭವಿಸುತ್ತದೆ. ಪ್ರತಿಗಾಮಿಯ ಮಾತಿಗೆ ದ್ರೌಪದಿ ಬರದೆ ಹೋದಾಗ ಕೌರವ ದುಶ್ಯಾಸನನ್ನು ಕಳುಹಿಸಿ ಆಕೆಯನ್ನು ಎಳೆದು ತರುವಂತೆ ಆಜ್ಞಾಪಿಸುತ್ತಾನೆ. ಯಾವುದೇ ಹಿತವಚನ ಆತ ಕೇಳುವ ಸ್ಥಿತಿಯಲ್ಲಿ ಆತ ಇದ್ದಾನೋ ಇಲ್ಲವೋ ಬೇರೆ...ಆದರೆ ಅದಕ್ಕೆ ಭೀಷ್ಮ ದ್ರೋಣರೂ ಮೌನವಾಗಿ ಕೌರವಾದಿಗಳ ದುರ್ವರ್ತನೆಗೆ ಪರೋಕ್ಷವಾಗಿ ಬೆಂಬಲವನ್ನೇ ಸೂಚಿಸಿದಂತೆ ವರ್ತಿಸುತ್ತಾರೆ. ಏಕಾಂಬರೆಯಾಗಿ ರಜಸ್ವಲೆಯಾಗಿದ್ದ ದ್ರೌಪದಿಯನ್ನು ಯಾವುದೇ ಪರಿಗಣೆನೆ ಇಲ್ಲದೆ ಎಳೆದು ತರಲಾಗುತ್ತದೆ. ಪವಿತ್ರವಾದ ಆಕೆಯ ಮುಂದಲೆಯನ್ನುಎಳೆದು ತರುವುದನ್ನು ವಿವರಿಸುವುದಕ್ಕೆ ಮುಂದೆ ವೈಶಂಪಾಯನರಿಗೆ ಕೂಡ ಸಾಧ್ಯವಾಗುವುದಿಲ್ಲ. ಅಷ್ಟು ಭೀಭತ್ಸವಾಗಿರುತ್ತದೆ. ಹೀಗಿದ್ದರೂ......
ಮುಂದೆ ದ್ರೌಪದಿ ಎಲ್ಲರ ಎದುರಲ್ಲಿ ಹಿರಿಯ ಭೀಷ್ಮರಿಂದ ನ್ಯಾಯ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ಭೀಷ್ಮನೆಡೆಗೆ ನೋಡಿ ಅದೇ ಪ್ರಶ್ನೆ ಕೇಳುತ್ತಾಳೆ. ಭೀಷ್ಮರು ತಮ್ಮ ಸ್ಥಾನ ಪ್ರಕಾರ ಅದನ್ನು ಪ್ರತಿಭಟಿಸಿ ಆಕ್ಷೇಪಿಸಬಹುದು ಎಂಬ ನಿರೀಕ್ಷೆ ಆಕೆಯಲ್ಲಿತ್ತು. ಆದರೆ ಅವರು ವರ್ತಿಸಿದ ರೀತಿಯೆ ಪ್ರಶ್ನಾರ್ಹವಾಗುತ್ತದೆ. ದ್ರೌಪದಿಯ ಪ್ರಶ್ನೆಗೆ ಅವರು ಮೌನವಾಗಿದ್ದರು ಒಪ್ಪಿಕೊಳ್ಳಬಹುದಿತ್ತೋ ಏನೋ ಆದರೆ ಅವರು ಅದಕ್ಕೆ ಪ್ರತಿಕ್ರಿಯಿಸಿದ್ದು ಮತ್ತೊಂದು ಭೀಷ್ಮರು ಮಾಡಿದ ಪ್ರಮಾದಕ್ಕೆ ಸಾಕ್ಷಿಯಾಗುತ್ತದೆ. ಇದನ್ನುಮೂಲ ವ್ಯಾಸ ಭಾರತದಲ್ಲಿ ಹೇಳಿದ ರೀತಿಯನ್ನು ಹೀಗೆ ವಿಶ್ಲೇಷಿಸಲಾಗುತ್ತದೆ.
ದ್ರೌಪದಿಯ ಪ್ರಶ್ನೆಗೆ ಭೀಷ್ಮರು ಎಷ್ಟು ಉಡಾಫೆಯಿಂದ ಉತ್ತರಿಸುತ್ತಾರೆ ಎಂದರೆ, ಈ ಪ್ರಶ್ನೆಗೆ ಉತ್ತರಿಸುವ ಶಕ್ತಿ ಇಲ್ಲ ಎಂದು ಮೊದಲೇ ಹೇಳುತ್ತಾರೆ. ಆದರೂ ಮೌನವಾಗಿರದೆ, " ನಿನ್ನ ಯಜಮಾನ ಅಂದರೆ ಧರ್ಮರಾಯ ನಿನ್ನನ್ನು ಪಣವಾಗಿ ಒಡ್ಡುವ ಅಧಿಕಾರ ಇಲ್ಲದೇ ಇರುತ್ತಿದ್ದರೆ ಅವನು ಪಣವಾಗಿ ಒಡ್ಡುತ್ತಲಿರಲಿಲ್ಲ." ಹಾಗಾಗಿ ಇದು ಸರಿ ಇದೆ. ಒಡ್ದಿದ್ದು ಸರಿ ಇದೆ ಎಂದು ಪರೋಕ್ಷವಾಗಿ ಹೇಳಿದಂತಾಯಿತು. ಒಂದು ವೇಳೆ ಅವರು ಮೌನವಾಗಿರುತ್ತಿದ್ದರೆ ಒಂದು ವಿಧದ ಅಸಮ್ಮತಿ ಎಂದು ತಿಳಿಯಬಹುದಾಗಿತ್ತೋ ಏನೋ..ಆದರೆ ಅವರು ಪರೋಕ್ಷವಾಗಿ ಸರಿ ಇದೆ ಎಂದು ಹೇಳಿದ್ದು ಕೌರವಾದಿಗಳ ದೌರ್ಜನ್ಯಕ್ಕೆ ಮತ್ತಷ್ಟು ಅವಕಾಶವನ್ನು ಒದಗಿಸಿಕೊಟ್ಟಂತಾಯಿತು. ಭೀಷ್ಮರಿಂದ ಅಪಸ್ವರ ಬರಲಿಲ್ಲ ಎಂದಾಕ್ಷಣ ಕೌರವರ ತೋಳಿಗೆ ಮತ್ತಷ್ಟು ಶಕ್ತಿ ಬಂತು. ಅವರು ಇಷ್ಟಕ್ಕೆ ನಿಲ್ಲಲಿಲ್ಲ ಮತ್ತೂ ವಿವರಿಸುತ್ತಾರೆ, ಇದು ಬಹಳ ವಿಚಿತ್ರವಾಗಿದೆ, ಎಂಬುದನ್ನು ಗಮನಿಸಬೇಕು. "ಆತ್ಮನಃ ಪತ್ನಿ....." ಪತ್ನಿಯಾದವಳು ಅರ್ಧಾಂಗಿ, ಎಂತಹ ಆಪತ್ಕಾಲದಲ್ಲೂ ಪತ್ನಿ ಆತ್ಮದ ಅರ್ಧ ಭಾಗ. ಒಂದು ಆತ್ಮದ ಅರ್ಧ ಭಾಗ ಸೋತ ಮೇಲೆ ಇನ್ನೊಂದು ಆತ್ಮದ ಅರ್ಧ ಭಾಗ ಇಡುವುದರಲ್ಲಿ ತಪ್ಪಿಲ್ಲ. ಯುಧಿಷ್ಠಿರನೇ ಸೋಲು ಅಂತ ಒಪ್ಪಿಕೊಂಡಮೇಲೆ ನಾನು ಏನು ಹೇಳಬಹುದು?
ವರ್ತಮಾನ ಕಾಲದಲ್ಲಿ ಚಂದ್ರವಂಶದಲ್ಲಿ ಯಾಕೆ ಭರತಖಂಡದಲ್ಲೇ ಭೀಷ್ಮರು ಅತ್ಯಂತ ಹಿರಿಯವ್ಯಕ್ತಿಗಳು. ಧರ್ಮ ಅಧರ್ಮಗಳನ್ನು ಅದರ ಸೂಕ್ಷ್ಮಗಳನ್ನು ಅವರು ಧರ್ಮರಾಯನಿಂದ ಮೊದಲೆ ಕಂಡವರು. ಅವರಿಂದ ನಂತರ ಎರಡು ತಲೆಮಾರಿನ ಧರ್ಮರಾಯನಿಗೆ ಧರ್ಮದ ನಿರ್ಣಯ ಬಿಟ್ಟುಬಿಟ್ಟು ಜವಾಬ್ದಾರಿ ಕಳೆದುಕೊಳ್ಳುತ್ತಾರೆ ಎಂದರೆ ಭೀಷ್ಮರಂತಹ ವ್ಯಕ್ತಿಗೆ ಸೂಕ್ತವೆನಿಸುವುದಿಲ್ಲ. ಹಸ್ತಿನಾವತಿಗೆ ಕಾಶೀರಾಜ ಅವಮಾನಿಸಿದ್ದಾನೆ ಎಂದು ಅಲ್ಲಿಗೆ ಹೋಗಿ ಕಾಶೀರಾಜನ ಪುತ್ರಿಯರನ್ನು ಕರೆದು ರಾಕ್ಷಸ ರೀತೆಯಲ್ಲೆ ಕರೆದು ತರುವ ಭೀಷ್ಮನಿಗೆ ಇಲ್ಲಿ ಹಸ್ತಿನಾವತಿಯ ಹೆಣ್ಣು ಮಗಳಿಗೆ ಅದ ಅವಮಾನಕ್ಕೆ ಹೀಗೆ ಪ್ರತಿಕ್ರಿಯಿಸುವುದು ವಿಚಿತ್ರವಾಗಿರುತ್ತದೆ. ಒಂದು ವೇಳೆ ಅದನ್ನು ಪ್ರತಿಭಟಿಸುವ ಶಕ್ತಿ ಇಲ್ಲದೇ ಇದ್ದರೆ ಅದಕ್ಕೆ ಪ್ರೇಕ್ಷಕರಾಗಿ ಇರದೆ ಅಲ್ಲಿಂದ ಎದ್ದು ಹೋಗಬಹುದಿತ್ತು. ಆದರೆ ಭೀಷ್ಮ ದ್ರೋಣರು ಇಬ್ಬರೂ ಇದಕ್ಕೆ ಮೌನ ಪ್ರೇಕ್ಷಕರಾಗಿ ಉಳಿದುಕೊಂಡದ್ದು ಅವರು ಎಸಗಿದ ಮಹಾಪರಾಧವಾಗಿತ್ತು. ಇದನ್ನು ಮುಂದೆ ಶ್ರೀಕೃಷ್ಣ ತೀಕ್ಷ್ಣವಾಗಿ ವಿಮರ್ಶಿಸುತ್ತಾನೆ. ಭಗವದ್ಬೀತೆಯ ಸಂದರ್ಭದಲ್ಲಿ ಇದನ್ನೇ ಅರ್ಜುನನಿಗೆ ಹೇಳುತ್ತಾನೆ. ಇವರೆಲ್ಲ ಧರ್ಮದ ಶತ್ರುಗಳು. ಅವರನ್ನು ಎಂದೋ ಕೊಂದು ಹಾಕಿದ್ದೇನೆ. ನೀನು ಈಗ ನೆಪ ಮಾತ್ರ. ಹಸ್ತಿನವತಿಯ ಪ್ರತಿಷ್ಠೆಯನ್ನು ಉಳಿಸುವುದಕ್ಕೋಸ್ಕರ ಅಥವಾ ಕೌರವರನ್ನು ಎದುರು ಹಾಕಿಕೊಳ್ಳುವ ಮನಸ್ಸಿಲ್ಲದೇ ಭೀಷ್ಮ ದ್ರೋಣರು ಮೌನವಾಗಿದ್ದರು.
ನಿಯಮ ಎಂಬುದು ಕೆಲವು ವರ್ಗಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಇನ್ನು ಕೆಲವರು ನಿಯಮ ಪಾಲನೆ ತಮಗೆ ಸೇರಿದ್ದಲ್ಲ ಎಂದು ತಿಳಿದುಕೊಳ್ಳುವುದು ಮಹಾಭಾರತ ಕಾಲದಿಂದಲೂ ನಡೆದುಕೊಂಡು ಬಂದಿದೆ. ಒಂದು ಸಮಾಜದಲ್ಲಿ ಅಥವಾ ಜಾತಿಯಲ್ಲಿ ಪ್ರತಿಷ್ಠಿತ ವ್ಯಕ್ತಿಯನ್ನು ಪ್ರಶ್ನಿಸುವುದು ವಿಮರ್ಶಿಸುವುದು ಅಪರಾಧವಾಗಿ ಪರಿಣಮಿಸುವುದು ನಮ್ಮ ಬದುಕಿನಲ್ಲಿ ಹಲವು ಸಲ ಅನುಭವಕ್ಕೆ ಬರುತ್ತದೆ. ಮಹಾಭಾರತದಲ್ಲಿ ಭೀಷ್ಮ ದ್ರೋಣರೂ ಈ ಪಕ್ಷಪಾತಕ್ಕೆ ಒಳಗಾಗಿ ಹೋದದ್ದು ಮಹಾಭಾರತದ ದೊಡ್ಡ ದುರಂತಕ್ಕೆ ಕಾರಣವಾಯಿತು.
ಕೃತಜ್ಞತೆಗಳೊಂದಿಗೆ , ಆಧಾರ : ಕೆ ಎಸ್ ನಾರಾಯಣ ಆಚಾರ್ಯ ಅವರ ಮಹಾಭಾರತ ಪ್ರವಚನ.

