"ಇದು ವಿಮರ್ಶೆಯಲ್ಲದ ಚಿಂತನ"

Saturday, February 21, 2009

ಯಕ್ಷೋಪಾಸನೆಯ ಸುವಾಸನೆ

ಗೋವಿಂದ ಭಟ್ಟರ ಉಪಾಸನೆಯ ಹರಡಿದ ಕಂಪನ್ನು ತುಸು ನಾನು ಆಘ್ರಾಣಿಸಿದೆ.ತುಸು ಗಾಢವಾದ ಪರಿಮಳ. ತುಸುವಾದರೂ ಅದರ ವರ್ತುಲದ ಸುಳಿಯೊಳಗೆ ಇದ್ದ ಅನುಭವ. ಅತ್ಯಂತ ಅಭಿಮಾನಭಾಜನರು ಏನು ಮಾಡಿದರೂ ಒಪ್ಪಿಕೊಳ್ಳುವ ಅನಿವಾರ್ಯತೆ ಇಲ್ಲಿಲ್ಲ. ಪ್ರಾಮಾಣಿಕ ಸಮಗ್ರ ಜೀವನ ದರ್ಶನವಾದಹಾಗಾಯಿತು.

ಅವರ ಸಾಧನೆಯ ಅಥವಾ ಕ್ರಿಯೆಯ ಬಗ್ಗೆ ವಿಶ್ಲೇಷಣೆ ಮಾಡುವಷ್ಟು ದೊಡ್ಡವ ನಾನಲ್ಲ. ಅದರೂ ಉಪಾಸನೆಯನ್ನು ಓದಿ ಆದನಂತರ ಮನಸ್ಸಿನ ಅನಿಸಿಕೆ ಹೇಳಿದ್ದರಲ್ಲಿ ತಪ್ಪಿಲ್ಲ ಎಂದೇ ಕೆಲವು ಅನಿಸಿಕೆಗಳು ಮಾತ್ರ ವ್ಯಕ್ತ ಮಾಡುವ ಬಯಕೆ ಇದು. ಆರಂಭದಲ್ಲಿ ಸಂಪ್ರದಾಯದಂತೆ ಹಿರಿಯ ವ್ಯಕ್ತಿಗಳ ಮುನ್ನುಡಿ ಮೆರುಗನ್ನು ನೀಡಿವೆ. ಭಟ್ಟರನ್ನು ಹತ್ತಿರದಿಂದ ಬಲ್ಲ ಮಹನೀಯರ ನುಡಿಗಳನ್ನು ಓದಿದಾಗ ಮುಂದೆ ಓದುವಂತೆ ಪ್ರೇರೇಪಿಸುತ್ತವೆ.ಆತ್ಮ ಕಥೆಯುದ್ದಕ್ಕೂ ಪ್ರಾಮಾಣಿಕತೆ ಮೆರೆವ ತುಡಿತ ಕಾಣುತ್ತದೆ. ಹೃದಯವನ್ನು ಕಲುಕುವ, ಮಾನವ ಸಂಭಂಧಗಳ ಸೆಲೆಗಳು ಸಂವಹನಗಳು ಭಟ್ಟರ ಅನುಭವದ ಗಾಢ ಸಂವೇದನೆಯನ್ನು ಓದುಗನಲ್ಲಿ ಉಂಟುಮಾಡುತ್ತವೆ. ಯಕ್ಷಗಾನ ಕಲಾವಿದನ ವೈಯ್ಯಕ್ತಿಕ ಬದುಕು ಸಾಂಪತ್ತಿಕವಾಗಿ ದುರ್ಭರವೇ. ಎಲ್ಲೋ ಕೆಲವು ಇದಕ್ಕೆ ವಿರುದ್ದವಾದ ನಿದರ್ಶನ ಸಿಗಬಹುದು. ಅದು ತೀರ ದುರ್ಲಭವೇ.

ಬಾಲ್ಯದ ಬಡತನದ ದಿನಗಳು ಅವುಗಳನ್ನು ವಿವರಿಸುತ್ತ, ಕೆಲವು ಘಟನೆಗಳಲ್ಲಿ ಗೋವಿಂದ ಭಟ್ಟರು ಕೌಟುಂಬಿಕವಾಗಲಿ, ಸಾಮಾಜಿಕವಾಗಲಿ ಮನುಷ್ಯ ಸಂಭಂಧಗಳನ್ನು ನವಿರಾಗಿ ಅವರು ಕಂಡು ಕೊಂಡ ರೀತಿಯಲ್ಲಿ ಪ್ರಾಮಾಣಿಕವಾಗಿ ಮುಂದಿಡುತ್ತಾರೆ.ದಾಯಾದಿಗಳೊಂದಿಗೆ ಬೆಳೆದ ಕಳೆದ ಬದುಗು ಬವಣೆಗಳು ಬಹುಶ: ಇದು ಸಾಮನ್ಯವಾಗಿ ಇರುವಂತಹ ವಿಷಯಗಳೇ ಆದರೂ ಭಟ್ಟರು ವಿಶೇಷವಾಗಿ ಘಟಿಸಿದ ಕೆಲವು ಘಟನೆಗಳನ್ನು ಹೇಳುತ್ತಾ ನಮ್ಮ ಮನಸ್ಸಿಗೆ ಇನ್ನು ಹತ್ತಿರದವರಾಗಿಬಿಡುತ್ತಾರೆ. ಘಟನೆಗಳನ್ನು ಓದುತ್ತಿದ್ದಂತೆ, ಮನೆಯಲ್ಲಿ ಜತೆಗೆ ವಾಸಿಸುವ ಕುಟುಂಬದವರಾಗಿಯೋ, ಸಮೀಪದ ಬಂಧುವಾಗಿಯೋ, ಅಥವಾ ಸ್ನೇಹಿತನಾಗಿಯೋ ಭಾಸವಾದರೆ ಅಚ್ಚರಿ ಪಡಬೇಕಿಲ್ಲ. ಭಟ್ಟರನ್ನು ಸಮೀಪದಿಂದ ಬಲ್ಲವರಿಗೆ ಇದು ಅಚ್ಚರಿಯೂ ಆಗಲಾರದು. ಯಕ್ಷಗಾನ ಕಲೆಗೆ ಹೇಗೆ ಹತ್ತಿರವದರೋ ಅದೇ ರೀತಿ ಯಾವುದೇ ವ್ಯಕ್ತಿಗೆ ತುಂಬ ಬೇಗನೆ ಹತ್ತಿರವಾಗಬಲ್ಲರು. ಈ ಕಲೆಯೂ ಅವರಿಗೆ ಸಿದ್ದಿಸಿದೆ. ಹಾಗಾಗಿ ಘಟನೆಯನ್ನು ಮುಂದಿಡುವಲ್ಲಿ ಆ ಗುಣ ಶಿಸ್ತು ಕಾಣಬಹುದು. ಇದರಿಂದಾಗಿ ಪುಸ್ತಕ ಓದುತ್ತಿದ್ದಂತೆ ಭಟ್ಟರ ಮೇಲೆ ಆತ್ಮೀಯ ಗೌರವ ಬೆಳೆದುಬಿಡುತ್ತದೆ.

ಅವರ ಬಾಲ್ಯದ ಕೆಲವು ಘಟನೆಗಳು ಹೃದಯಕ್ಕೆ ಹತ್ತಿರವಾಗಿ ಒಂದು ಕ್ಷಣ ಕಣ್ಣುಗಳನ್ನು ತೇವವನ್ನಾಗಿಸಿವೆ. ಬಾಲ್ಯದಲ್ಲಿ ಮನೆಯಿಂದ ತಪ್ಪಿಸಿಕೊಂಡು ಓಡಿ ಹೋಗಿ ವಿಟ್ಲ ಜಾತ್ರೆಯಲ್ಲಿ ತಂದೆಯ ಕೈಗೆ ಸಿಕ್ಕು ವಿಟ್ಲದಿಂದ ತೆಂದೆಯ ಹೆಗಲ ಮೇಲೆ ಮಲಗಿ ಹೋಗುವಾಗ ಭಟ್ಟರು ತಂದೆಯ ಮಮತೆಯನ್ನು ಸವಿಯುವ ಬಗೆ ತಂದೆ ಭಾವುಕರಾಗಿ ಹೇಳುವ ಮಾತುಗಳನ್ನು ಓದಿದಾಗ ಆಗುವ ಅನುಭವೇ ಬೇರೆ. ಸ್ವತಹ ಅನುಭವಿಸಿ ಅದನ್ನು ನೆನಪಿಸುವ ಭಟ್ಟರ ಅನುಭವ ಹೇಗಿರಬಹುದು.? ತಮ್ಮ ಹುಟ್ಟಿದ ಮೇಲೆ ಅಪ್ಪನ ಹೆಗಲ ಮೇಲೆ ಮಲಗುವ ಭಾಗ್ಯ ಬಂದಿಲ್ಲ.. ಮತ್ತು ಅದನ್ನು ಪುಟ್ಟ ಬಾಲಕನಾಗಿ ಗೋವಿಂದ ಅನುಭವಿಸುವ ಅ ಸಂವೇದನೆ ಹಾಗೇ ಅಪ್ಪ ಮಗನ ನಡುವಿನ ಈ ಸಂಭಂಧ ವ್ಯಕ್ತವಾಗುವುದೇ ಇಂತಹ ಸನ್ನಿವೇಶದಲ್ಲಿ!!!

ಇನ್ನೊದು ಭಾವುಕ ಸನ್ನಿವೇಶ ಅಮ್ಮ ಮತ್ತು ಮಗುವಿನ ನಡುವೆ. ಬದುಕಿನ ಮೊತ್ತ ಮೊದಲ ಸಲ ಮೇಳದ ಪ್ರವಾಸ ಮುಗಿಸಿ ಬರುವ ಬಾಲಕ ಗೋವಿಂದ. ಹೋಗುವಾಗಲೇ ತಾಯಿಯಲ್ಲಿ ಹೇಳಿ ಆಗಿದೆ ವರ್ಷಕ್ಕೆ ಐದು ನೂರು ರೂಪಾಯಿ ಸಂಬಳ ಎಂದು. ಅದರೆ ಬರುವಾಗ ನಿರೀಕ್ಷೆಯಂತೆ ದುಡ್ಡು ಸಿಗದೆ, ಕೊನೆಗೆ ಹೇಗೋ ಮಾಡಿ ಸ್ವಲ್ಪ ದುಡ್ಡು ತಾಯಿಗೆ ಕೊಡಲೆಂದು ಮನೆಗೆ ಬಂದು ತಾಯಿ ಕೈಗೆ ದುಡ್ಡು ಹಾಕುವಾಗ ಮಗನ ಅಗಲಿಕೆಯಿಂದ ಬಳಲಿ ಆ ಮಹಾತಾಯಿ ಅ ದುಡ್ಡಿನ ಕಡೆಗೆ ನೋಡದೆ, ಬಾಚಿ ತಬ್ಬಿಕೊಂಡು ಅಳುವಾಗ ತಾಯಿ ಮಗನ ನಡುವಿನ ಗಾಢವಾದ ಸಂಬಂಧ ತೆರೆದು ಕೊಳ್ಳುತ್ತದೆ. ಓದುಗನ ಕಣ್ಣು ಹನಿ ತುಂಬಿ ಮುಂದೆ ಓದಲಾಗುವುದೇ ಇಲ್ಲ. ಈ ಎರಡು ಸನ್ನಿವೇಶಗಳು ಮನಮುಟ್ಟುತ್ತವೆ. ಗೋವಿಂದಣ್ಣ ಪುಸ್ತಕದ ನಡುವಿಂದ ಎದ್ದು ಬಂದ ಹಾಗೆ ಭಾಸವಾದರೆ ಅಚ್ಚರಿಯಿಲ್ಲ.

ಅನಿವಾರ್ಯತೆಯಿಂದ ಪ್ರತೀ ಕ್ಷೇತ್ರವನ್ನೂ ಆಯ್ಕೆ ಮಾಡಿಕೊಂಡರೂ ಎಲ್ಲೂ ರಾಜಿ ಮಾಡಿಕೊಂಡವರಲ್ಲ. ಎಂದರೆ, ಕಲಾಭಿಮಾನ ಅಥವಾ ಕಲೆಯ ಮೇಲಿನ ಪ್ರೀತಿಯಿಂದ ಯಕ್ಷಗಾನಕ್ಕೆ ಬಂದುದಲ್ಲ, ಕೇವಲ ಬದುಕಿನ ಆರ್ಥಿಕ ಪರಿಸ್ಥಿತಿ ಜೀವನ ನಿರ್ವಹಣೆಗಾಗಿ ವೇಷಧಾರಿಯದದ್ದು.ಹಾಗೆಯೇ ಮನೆಯ ಬಳಿಯಲ್ಲಿ ದೇವಸ್ಥಾನ ನಿರ್ಮಿಸಿದ್ದು ತೀವ್ರವಾದ ಭಕ್ತಿಯಿಂದಲ್ಲ. ಇದನ್ನು ಅವರು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ. ಬಹುಶಃ ಗೋವಿಂದಣ್ಣ ಎಲ್ಲರಿಗೂ ಅತ್ಮೀಯರಾಗುದು ಇಂಥಹ ವಿಶಿಷ್ಟ ಗುಣಗಳಿಂದಲೇ. ಹಾಗೆಂದು ಎಲ್ಲಿಯೂ ಆಯ್ಕೆ ಮಾಡಿಕೊಂಡ ಕ್ಷೇತ್ರಕ್ಕಾಗಲಿ, ಹಿಡಿದ ಕೆಲಸವನ್ನಾಗಲಿ ಎಂದೂ ಅಸಡ್ಡೆಯಿಂದ ಕಂಡವರಲ್ಲ. ಪ್ರಾಮಾಣಿಕವಾಗಿ ಎಷ್ಟು ಸಾಧ್ಯವೋ ಅಷ್ಟು ಮಾಡಿ ಅವರ ವೈಶಿಷ್ಟ್ಯವನ್ನು ಮೆರೆದಿದ್ದಾರೆ. ಕನಸಿನಲ್ಲೂ ಊಹಿಸಲು ಅಸಾಧ್ಯವಾದ ಕೆಲಸಗಳನ್ನು ತಮ್ಮದೇ ರೀತಿಯಲ್ಲಿ ಸಾಧಿಸಿ ತೋರಿಸಿದ್ದಾರೆ.

ಯಕ್ಷಗಾನ ಕಲಾಸಕ್ತರಿಗೆ ಅಥವಾ ಯಕ್ಷಗಾನ ಕಲಾವಿದ್ಯಾರ್ಥಿಗಳಿಗೆ ಅನೇಕ ಮಾಹಿತಿಯನ್ನು ನೀಡಿದ್ದಾರೆ. ಬಹುಶಃ ಯಕ್ಷಗಾನ ಕೆಲವು ಮಾಹಿತಿಗಳನ್ನು ಸೂಕ್ಷ್ಮವಾಗಿ ಕೆಲವನ್ನು ವಿಸ್ತಾರವಾಗಿ ನೀಡಿದ್ದಾರೆ. ಅತಿ ಹಿರಿಯ ಭಾಗವತರ ಬಗ್ಗೆ ಹೇಳುತ್ತಾ ಅಗರಿ ಮಂಡೆಚ್ಚ ಬಲಿಪ್ಪರ ಬಗ್ಗೆ ಕೆಲವೇ ವಾಕ್ಯದಲ್ಲಿ ಹೇಳಿದ್ದರೆ, ತಮ್ಮ ನೆಚ್ಚಿನ ಕಡತೋಕರ ಬಗ್ಗೆ ಸವಿಸ್ತಾರವಾಗಿ ಅವರ ವಿಶೇಷತೆ ಅರ್ಹತೆ ಮತ್ತು ವೈಖರಿಯನ್ನು ಉಲ್ಲೇಖಿಸಿದ್ದಾರೆ. ಇತರ ಹಿರಿಯ ಭಾಗವತರ ಬಗ್ಗೆ ಇನ್ನು ಸ್ವಲ್ಪ ವಿವರವಾದ ವಿವರಣೆಯ ಓದುಗನ ನಿರೀಕ್ಷೆ ನಿರೀಕ್ಷೆಯಾಗಿಯೇ ಉಳಿಯುತ್ತದೆ. ಗೋವಿಂದ ಭಟ್ಟರಂತಹ ಜ್ಞಾನಿಗಳಿಂದ ಈ ಹಿರಿಯ ಕಲಾವಿದರ ಬಗ್ಗೆ ಅವರ ವಿಶೇಷತೆ ಬಗ್ಗೆ ಇವರು ಕಂಡುಕೊಂಡ ಇವರ ಅನುಭವದ ಬಗ್ಗೆ ಇನ್ನೂ ಉಲ್ಲೇಖವಿರುತ್ತಿದ್ದರೆ?!! ಅಂತ ಅನ್ನಿಸಿಬಿಡುತ್ತದೆ.

ಇಡೀ ಪುಸ್ತಕದಲ್ಲಿ ಉತ್ಪ್ರೇಕ್ಷೆಯಿಲ್ಲದೆ ಭಟ್ಟರು ತಮ್ಮ ನೈಜ ಪ್ರಾಮಾಣಿಕತೆಯನ್ನು ಹೆಜ್ಜೆ ಹೆಜ್ಜೆಗೆ ನಿರೂಪಿಸಿದ್ದಾರೆ. ಪುಸ್ತಕ ಓದಿ ಮುಗಿಸಿದಾಗ ನಮ್ಮ ಭಟ್ಟರ ಬಗ್ಗೆ ಇನ್ನೂ ಅಭಿಮಾನ ಈ ಕಾರಣಕ್ಕಾಗಿಯೇ ಜಾಸ್ತಿಯಾಗುವುದು. ಅವರ ಮೇಲಿನ ಅಭಿಮಾನಕ್ಕೆ ಪೂರಕವಾಗಿ ಮಾತ್ರ ಈ ಲೇಖನ. ಇಷ್ಟನ್ನೂ ಬರೆಯುವ ಅರ್ಹತೆಯಾಗಲಿ ತಿಳುವಳಿಕೆಯಾಗಲಿ ನನಗಿದೆಯೇ ? ಎಂದು ಹಲವು ಸಲ ನನ್ನಲ್ಲೇ ಪ್ರಶ್ನಿಸಿದ್ದೇನೆ. ಖಂಡಿತ ಇವುಗಳು ಯಾವುದೂ ನನ್ನಲ್ಲಿ ಇಲ್ಲ.. ಇರುವುದು ಅವರ ಮೇಲಿನ ಉತ್ಕಟ ಅಭಿಮಾನ ಮಾತ್ರ.

Wednesday, February 11, 2009

ನಾನು ಮತ್ತು ಯಕ್ಷಗಾನ


"ನಾನು ಮತ್ತು ಯಕ್ಷಗಾನ"
ಹೀಗೆ ಹೇಳುವ ಅರ್ಹತೆಯೇ ನನಗಿದೆಯೋ ಎಂಬ ಅನುಮಾನ.ಶೇಣಿಯಂಥ ಮಹಾ ಕಲಾವಿದರ ಮಾತುಗಳನ್ನು ನಾನು ಹೇಳಬಹುದೇ?ಇಂದಿನ ಕಲೆಯ ಸ್ಥಿತಿಗತಿಗಳನ್ನು ನೋಡುವಾಗ ಹೀಗೆ ಹೇಳುವ ಅನಿವಾರ್ಯತೆ ಪ್ರತಿಯೊಂದು ಯಕ್ಷಗಾನ ಪ್ರೇಮಿಗೆ ಬಂದುಬಿಡಬಹುದು.

೧೦-೧೨ ವರ್ಷಗಳ ಹಿಂದೆ ಇದ್ದ ಪರಿಸ್ಥಿತಿ ಈಗ ಇಲ್ಲ . ನಮ್ಮೂರಲ್ಲಿ ಹಲವು ಮೇಳಗಳು ವಿಜ್ರ೦ಭಿಸುತ್ತಿದ್ದ ಕಾಲವದು. ಉದಯವಾಣಿ ಪತ್ರಿಕೆಯ ಕೊನೆಯ ಪುಟದ ಒಂದು ಸಾಲು ಪೂರ್ಣವಾಗಿ ಮೇಳಗಳ ಅಂದಿನ ಆಟದ ಮಾಹಿತಿ ಇರುತ್ತಿತ್ತು. ನಮ್ಮೂರಿನ ಆಟಕ್ಕೆ ಕ್ಷಣ ಗಣನೆಯನ್ನು ನಾವು ಆವಾಗ ಲೆಕ್ಕ ಹಾಕುತ್ತಿದ್ದೆವು. ಎಲ್ಲ ಗತಕಾಲದ ನೆನಪುಗಳಂತೆ ನಿರಾಶೆಯಿಂದ ಹೇಳಬೇಕಷ್ಟೆ. ಊರನ್ನು ಬಿಟ್ಟು ಬೆಂಗಳೂರಲ್ಲಿ ನೆಲೆಸಿದ ಪರಿಣಾಮವೋ ಬದುಕು ಯಾ೦ತ್ರಿಕವಾಗಿ ಬದಲಾದ ಪರಿಣಾಮವೋ ಅಂತು ಬದಲಾವಣೆಯನ್ನು ಸ್ವೀಕರಿಸುವ ಅನಿವಾರ್ಯತೆ ಬಂದುಬಿಟ್ಟಿದೆ.ಬೆರಳೆಣಿಕೆಯ ಮೇಳಗಳು, ಕಲಾವಿದರು, ಅವುಗಳ ಸ್ಥಿತಿಗತಿಗಳು ಸಂಕ್ರಮಣ ಕಾಲಕ್ಕೆ ನಾವೇ ಪ್ರೆಕ್ಷಕರಾಗುವ ಅಸಹನೀಯ ಪರಿಸ್ತಿತಿ.

ಇದೆಲ್ಲವನ್ನೂ ಬದಿಗಿಟ್ಟು ಯಕ್ಷಗಾನ ನನಗೆ ಏಕೆ ಹಿತವಾಗಿದೆ.ಮೈಮನಗಳಲ್ಲಿ ರೋಮಾಂಚನ ತರುವ ಈ ಕಲೆಯ ಆಕರ್ಷಣೆ ಬದುಕಿನಲ್ಲಿ ಏಕೆ ಇನ್ನೂ ಉಳಿದು ಕೊಂಡಿದೆ. ಎಲ್ಲವೂ ವಿಸ್ಮಯ. ಮನಸ್ಸನ್ನು ಮುದಗೊಳಿಸುವ ಹಲವು ಕಲೆಗಳು ಜನಜನಿತವಾಗಿರಬಹುದು ಅದರೂ ಯಕ್ಷಗಾನ ಎಲ್ಲವನ್ನೂ ಮೀರಿ ನಿಲ್ಲುವ ಅದರ ಸೆಳೆತ, ಇಂದಿನ ಯಾ೦ತ್ರಿಕ ಜೀವನದಲ್ಲಿ ದುಃಖ ದುಮ್ಮಾನಗಳನ್ನು ದೂರಿಕರಿಸುವ ಅದರ ಗುಣ ನನ್ನಲ್ಲಿ ಹಲವುಸಲ ಚಿಂತನೆಯನ್ನು ತೊಡಗುವಂತೆ ಮಾಡಿದೆ .

ಬಾಲ್ಯದ ಅಧಿಕ ದಿನಗಳು ಮಂಗಳೊರು ಪರಿಸರದಲ್ಲೇ ಕಳೆದುದರಿಂದಲೋ ಏನೋ ಅಧಿಕವಾಗಿ ಕಟೀಲು ಮೇಳದ ಆಟಗಳನ್ನೇ ನೋಡುತ್ತಿದ್ದೆ. ಇದಕ್ಕೆ ಹಲವು ಕಾರಣಗಳಿದ್ದುವು. ಆಗಿನ ದಿನಗಳಲ್ಲಿ ವ್ಯವಸಾಯಿ ಟೆಂಟು ಮೇಳಗಳ ಆಟ ನೋಡುವುದು ಆರ್ಥಿಕವಾಗಿ ಕಷ್ಟಸಾಧ್ಯವಾಗಿತ್ತು. ಕಟೀಲು ಮೇಳದ ಆಟಗಳು ಬಯಲಾಟಗಳೇ ಆಗಿರುತ್ತಿದ್ದುದರಿಂದ ಸುಲಭದಲ್ಲೇ ನೋಡುವುದು ಸಾಧ್ಯವಾಗಿತ್ತು. ಬಲಿಪ್ಪ ನಾರಾಯಣ ಭಾಗವತರು ನಮ್ಮ ಮನೆಗೆ ಪರಿಚಿತ ವ್ಯಕ್ತಿಯಾಗಿರುವುದರಿಂದಲೂ ಕಟೀಲು ಮೇಳ ಇಷ್ಟವಾಗಿತ್ತು. ಪೌರಾಣಿಕ ಚಿತ್ರಣಗಳು ಬಾಲ್ಯದ ಮನಸ್ಸಿನಲ್ಲಿ ಅಚ್ಚಳಿಯದ ಮುದ್ರೆಗಳನ್ನೋತ್ತುತ್ತಿದ್ದವು. ಶುಂಭ ನಿಶು೦ಭ ಚಂಡ ಮುಂಡ ವೇಷಗಳನ್ನು ನೋಡಿ ಭಯದಿಂದ ವೇದಿಕೆ ಸಮೀಪದಿಂದ ದೂರ ಓಡಿ ಹೋದದ್ದಿದೆ. ದೇವಿ ದುಷ್ಟ ಸಂಹಾರ ಮಾಡುವಾಗ ಸಂಭ್ರಮಾಶ್ಚರ್ಯದಿಂದ ನೋಡಿದ್ದೇನೆ. ಪೌರಾಣಿಕ ಕಥೆಗಳನ್ನು ಓದಿದಾಗ ಕೇಳಿದಾಗ ಈ ಯಕ್ಷಗಾನ ವೇಷಗಳೇ ಕಣ್ಣ ಮುಂದೆ ಬರುತ್ತಿದ್ದವು.ಮಹಾವಿಷ್ಣುವಿನ ಪಾತ್ರಗಳಿರುವ ಯಕ್ಷಗಾನ ತುಂಬ ಕುಶಿಯಾಗುತ್ತಿದ್ದವು. ಹಲವು ಸಲ ಚೌಕಿಗೆ ಹೋಗಿ ನೋಡಿದ್ದಿದೆ ವಿಷ್ಣುವಿನ ವೇಷ ಇದೆಯೋ ಇಲ್ಲವೊ ಎಂದು. ಮೊದಲೇ ವಿಷ್ಣುವಿನ ವೇಷ ರಂಗಸ್ಥಳದ ಹಿಂದೆ ಬಂದು ನಿಂತಿದ್ದರೆ ಏನೋ ಒಂದು ಅವ್ಯಕ್ತ ಸಂಭ್ರಮದಿಂದ ಪ್ರವೇಶಕ್ಕೆ ಕಾಯುತ್ತ ಕುಳಿತಿರುತ್ತಿದ್ದೆವು. ಆ ಬಾಲಿಶ ಮನಸ್ಸಿನ ಕಲ್ಪನೆಗಳು ಈಗ ಕಿರುನಗುವನ್ನು ತರುತ್ತದೆ.

ಬಾಲ್ಯ ಕಳೆದು ಬೆಳೆದು ಬಂದ ಹಾಗೆ ಲೋಕ ಪರಿಸರ ಜ್ಞಾನ ಬೆಳೆದ ಹಾಗೆ ಪಕ್ವತೆಗನುಸಾರ ಅಭಿರುಚಿ ಬೆಳೆದು ಬಂತು. ವ್ಯವಸಾಯಿ ಮೇಳಗಳ ಆಟಗಳನ್ನೂ ನೋಡುವ ಹಾಗಾಯಿತು. ವ್ಯವಸಾಯಿ ಮೇಳಗಳ ಅಚ್ಚುಕಟ್ಟು, ನಿಖರತೆ ಸೋಜಿಗವಾಗಿತ್ತು. ನಾನು ಮೊದಲಾಗಿ ಕರ್ನಾಟಕ ಮೇಳದ "ಸೋರ್ಕುದ ಸಿರಿಗಿಂಡೆ" ಎಂಬ ತುಳು ಪ್ರಸಂಗ ಸುಮಾರು ೧೯೭೫ರಲ್ಲಿ ನೋಡಿದ್ದು. ಅದು ತುಳು ಭಾಷೆಯಲ್ಲಿ ಯಕ್ಷಗಾನ ಎಂದಾಗ ಯಾಕೋ ಅದ್ಭುತ ಅನಿಸಿತ್ತು. "ಕಾಂತು ಕಬೇದಿ" ಎಂಬ ಇನ್ನೊಂದು ಪ್ರಸಂಗವನ್ನೂ ಅದೇ ವರ್ಷ ನೋಡಿದ ನೆನಪೂ . ಎರರಡೂ ಆಗಿನ ಕಾಲದಲ್ಲಿ ಅದ್ಭುತ ಅನ್ನಿಸಿತ್ತು. ಕುಂಡಾವು ಮೇಳದ ಆಟಗಳು ಕೆಲವು ನೋಡಿದ್ದೇ. ಯಕ್ಷಗಾನದ ಅದ್ಭುತ ಪುಂಡು ವೇಷಧಾರಿ ಕ್ರಿಶ್ಚನ್ ಬಾಬು ವೇಷ ನೋಡಿದ್ದು ಆವಾಗಲೇ. ಈ ವೇಷಧಾರಿಯ ವೇಷಗಳು ಎಂದಿಗೂ ಚಿರಸ್ಮರಣೀಯ. ಅಂತಹ ಯುವ ಪ್ರತಿಭಾವಂತ ಕಣ್ಮರೆಯಾದದ್ದು ನಂಬಲಾಗದ ಸತ್ಯವಾಗಿತ್ತು.

ಹೀಗೆ ನನ್ನ ೧೩-೧೪ ನೆ ವಯಸ್ಸಿನಲ್ಲಿ ಧರ್ಮಸ್ಥಳ ಮೇಳದ ಆಟ ನೋಡುವ ಭಾಗ್ಯ.. ಮೊದಲಾಗಿ ಕುಮಾರ ವಿಜಯ ಪ್ರಸಂಗ, ಅಂತರದ ಅವಧಿಯಲ್ಲಿ ಮಹಾಬ್ರಾಹ್ಮಣ ಇದು ನನ್ನಲ್ಲಿ ತುಂಬ ಪ್ರಭಾವ ಬೀರಿತು .ಕಡತೋಕ ಮಂಜುನಾಥ ಭಾಗವತ ,ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ಗೋವಿಂದ ಭಟ್, ಕುಂಬ್ಳೆ ಸುಂದರ್ ರಾವ್, ಪಾತಾಳ ವೆಂಕಟರಮಣ ಭಟ್, ವಿಟ್ಲ ಗೋಪಾಲಕೃಷ್ಣ ಜೋಷಿ, ಪುತ್ತೂರು ನಾರಯಣ ಹೆಗಡೆ ಮುಂತಾದವರ ವೇಷಗಳನ್ನು ಗಮನಿಸುವ ಹಂತಕ್ಕೆ ಬಂದಿದ್ದೆ. ಕುಂಬ್ಳೆ ಪಾತಾಳರ ವಿಶ್ವಾಮಿತ್ರ ಮೇನಕೆ ಗೋವಿಂದ ಭಟ್ ಇವರ ರಾಜ ಕೌಶಿಕ ಹಾಗು ವಿಶ್ವಾಮಿತ್ರ ಪಾತ್ರಗಳು ಬಹುಶ ಇನ್ನು ಅಂತಹುದು ನೋಡುವುದು ಸಾಧ್ಯವಿಲ್ಲವೇನೋ.

ಶೇಣಿ ಗೋಪಾಲ ಕೃಷ್ಣ ಭಟ್, ಶಂಕರ ನಾರಾಯಣ ಸಾಮಗ ರಾಮದಾಸ ಸಾಮಗರ ವೇಷಗಳನ್ನು ನೋಡಲು ಶುರು ಮಾಡಿದಮೇಲೆ ಯಕ್ಷಗಾನ ನಿಜ ಸತ್ವ ಏನು ಎಂದು ಅರಿವಿಗೆ ಬಂದದ್ದು. ಮಾತಿನಿಂದಲೇ ಪ್ರೇಕ್ಷಕರನ್ನು ಆಕರ್ಷಿಸಿ ಹಿಡಿದಿಡಬಲ್ಲ ಇವರ ಸಾಮರ್ಥ್ಯಗಳು, ಯಕ್ಷಗಾನದ, ಇಲ್ಲವೇ ಪೌರಾಣಿಕ ಪಾತ್ರಗಳ ಅನ್ವರ್ಥತೆಯನ್ನು ಇವರ ಪಾತ್ರ ನಿರ್ವಹಣೆ ಸಾರಿದಾಗ ಯಕ್ಷಗಾನವೆ ಸರ್ವಸ್ವ ಅನ್ನಿಸಿತು. ಯಕ್ಷಗಾನದಿಂದ ಜನರಲ್ಲಿ ಪೌರಾಣಿಕ ಪ್ರಜ್ಞೆ, ಸುಸಂಸ್ಕೃತ ನಡವಳಿಕೆ ಮುಂತಾದುವುಗಳ ಬಗ್ಗೆ ತಿಳುವಳಿಕೆಯನ್ನು ಜಾಗ್ರತಗೊಳಿಸುವಲ್ಲಿ ಇಂತಹ ವಾಗ್ಮಿಗಳ ಕೊಡುಗೆ ಅಪಾರ. ಶೇಣಿ ಸಾಮಗರ ಅರ್ಥಗಾರಿಕೆಯನ್ನು ಮನನ ಮಾಡುವಲ್ಲಿ ಮೊದಮೊದಲು ತುಂಬ ಶ್ರಮ ಪಟ್ಟಿದ್ದೇನೆ.ತೆರೆದಿಟ್ಟ ಗ್ರಂಥದಂತೆ ಇನ್ನೆಂದೂ ದಾಖಲೆಯಲ್ಲಿ ಸಿಗದ ಇವರುಗಳ ಅರ್ಥ ಮಾಲಿಕೆಗಳು ಕೇವಲ ಮನದಾಳದ ಶರಧಿಯಲ್ಲಿ ಮೇಲಕ್ಕೆ ಬಾರದ ಮುತ್ತುಗಳಾಗಿ ಹೋಗಿವೆ. ಅರ್ಥಗಾರಿಕೆ ವಿಶಿಷ್ಟ ಕಲೆ. ಬಹುಶ ತೆಂಕು ತಿಟ್ಟು ಯಕ್ಷಗಾನಕ್ಕೆ ಅದು ಅಧಿಕವಾಗಿ ಒಲಿದಿದೆ.ಹಲವು ವಾಗ್ಗೇಯಕಾರರ ಸೇವೆ ಇಲ್ಲಿ ಲಭ್ಯವಾಗಿ ಪೌರಾಣಿಕ ಘಟನೆಗಳ ಬಗ್ಗೆ ತೀರ ಪಾಮರ, ಅವಿದ್ಯಾವಂತ ಕೂಡ ಪಾಂಡಿತ್ಯ ಪೂರ್ಣ ಚರ್ಚೆ ಮಾಡಬಲ್ಲ ಸಾಮರ್ಥ್ಯ ಒಲಿದಿದೆ. ಇದು ಯಕ್ಷಗಾನ ಕಲಾಸಕ್ತನಿಗೆ ದೊರಕಿದ ಒಂದು ಉಚಿತ ಕೊಡುಗೆ. ಅರ್ಥಗಾರಿಕೆಯ ರುಚಿ ಯಾವಾಗ ಹಿಡಿಸಿಕೊಂಡೆನೋ ಅಲ್ಲಿಂದ ತೊಡಗಿತು ತಾಳ ಮದ್ದಳೆಯ ಹವ್ಯಾಸ. ಕೇವಲ ಹಾಡು ಮಾತಿನಿಂದ ಜನರನ್ನು ಹಿಡಿದಿಡಬಲ್ಲ ಕಲೆ ಬಹುಶ ಬೇರೆ ಎಲ್ಲೂ ಈ ರೀತಿ ಸಿಗದು. ಕಣ್ಣು ಕಾಣದ ಕುರುಡನೂ ಯಕ್ಷಗಾವನ್ನೂ ಜ್ನಾನಾರ್ಜನೆಯನ್ನೂ ಮಾಡುವಂತಹ ಈ ಕಲೆಯ ವೈಶಾಲ್ಯ ಬಹುಶ ಬೇರೆ ಯಾವ ಕಲೆಗೂ ಸಿದ್ದಿಸಿಲ್ಲವೆಂದು ಹಲವು ಸಲ ಅನ್ನಿಸಿದ್ದಿದೆ. ಹಲವು ತಾಳ ಮದ್ದಲೆ ಕೂಟ ಕಂಡಿದ್ದೇನೆ. ಹೆಸರಾಂತ ಕಲಾವಿದರ ಅರ್ಥಗಾರಿಕೆಯನ್ನು ಸವಿದಿದ್ದೇನೆ. ಬಲಿಪ್ಪರ ಭಾಗವತಿಕೆಯ ತಾಳಮದ್ದಲೆ ಎಂದರೆ ತುಂಬ ಉತ್ಸುಕನಾಗುತ್ತಿದ್ದೆ.


ಯಕ್ಷಗಾನ ಇಂದು ಹಾಸ್ಯ ಪ್ರಧಾನವಾಗಿ ಬದಲಾವಣೆ ಕಂಡಿದೆ. ಒಂದು ಮೇಳದಲ್ಲಿ ಇಬ್ಬರಿಗಿಂತಲೂ ಅಧಿಕ ಹಾಸ್ಯಗಾರರು ಅಥವಾ ಸಾಮನ್ಯ ಕಲಾವಿದನೂ ಹಾಸ್ಯಗಾರನಾಗಿ ಕಾಣುವ ಬಯಕೆ, ಅಧಿಕ ಪ್ರಸಂಗವಾಗುವ ಹಾಸ್ಯ ಪ್ರಸಂಗಗಳು, ಯಕ್ಷಗಾನ ಮೂಲ ಸತ್ವವನ್ನು ಮರೆತ ಹಾಸ್ಯಗಳು ಹಲವು ಕಾರಣಗಳು ನಾನು ಹಲವು ಆಟಗಳನ್ನು ನೋಡುವಲ್ಲಿ ನಿರುತ್ಸಾಹವನ್ನು ತರಿಸಿದೆ. ಮೊದಲಿನ ಹಾಸ್ಯ ಇಂದು ಮೆಲುಕು ಹಾಕಿದರೂ ಮುಖದಲ್ಲಿ ಕಿರುನಗುವನ್ನು ತರಿಸುತ್ತದೆ.

ವಿಟ್ಲ ಜೋಷಿ ,ಪೆರುವೊಡಿಯ ನಾರಯಣ ಭಟ್, ನಾನು ಮೆಚ್ಚಿದ ಅತ್ಯುತ್ತಮ ಹಾಸ್ಯಗಾರರು. ಅದರೂ ಇನ್ನಿತರ ಕೆಲವರ ಹಾಸ್ಯ ಪ್ರತಿಭೆಗೆ ಮಾರುಹೊದದ್ದಿದೆ. ಹಲವು ಬಗೆಯ ಹಾಸ್ಯ ವೈವಿಧ್ಯಗಳನ್ನೂ ಕಂಡಿದ್ದೇನೆ. ವಿಟ್ಲ ಜೋಷಿಯವರ ಹಾಸ್ಯ ಎಷ್ಟು ಸಮಯ ಕಳೆದರೂ ಅದು ನವ್ಯತೆಯನ್ನು ಹೊಂದಿರುತ್ತದೆ. ತಾನು ನಗದೇ ಗಂಭೀರವಾಗಿದ್ದುಕೊಂಡು ನೆರೆದ ಸಭೆ ಎದ್ದು ಬಿದ್ದು ನಗಿಸುವ ರೀತಿ, ಹೀಗಿದ್ದರೂ ತಾನು ಮಾತ್ರ ಸ್ಥಿತಪ್ರಜ್ಞನ ಹಾಗೆ ನಿಲ್ಲುವ ಪರಿ ಅದೆಂತಹ ಗಂಭೀರ ಹಾಸ್ಯ!!! ಅದೇ ರೀತಿ ಅದ್ಭುತ ಅಭಿನಯದಿಂದ ನಗೆ ಹೊನಲನ್ನು ಸದಾ ಜೀವಂತ ಇಡುವ ಪೆರುವೊಡಿಯವರ ಹಾಸ್ಯ. ಅಂತಹ ಹಾಸ್ಯಗಳನ್ನು ಸವಿಯುವಲ್ಲಿ ಇಂದಿನ ಜನಾಂಗ ವಂಚಿತವಾಗಿದೆ ಎಂದೆ ನನ್ನ ನಂಬಿಕೆ. ಹಲವು ವಿಧದ ಹಾಸ್ಯ ಪ್ರತಿಭೆಯನ್ನು ಹೊಂದಿದ ಕಲಾವಿದರ ಶೈಲಿಯಾಗಲಿ ಕ್ರಮವಾಗಲಿ ಇಂದಿನ ಕಲಾವಿದರಲ್ಲಿ ಸಂಪೂರ್ಣ ನಶಿಸಿ ಹೋಗಿದೆಯೆಂದೆ ನನ್ನ ಭಾವನೆ . ಸ್ವಂತಿಕೆಯಿಲ್ಲದ ಯಾವುದೊ ಸವುಕಲು ನಕಲು ಹಾಸ್ಯಗಳು, ಕೇವಲ ಜನಾಕರ್ಷಣೆ ಗಳಿಸುವುದಕ್ಕೆ ಸಭ್ಯತೆಯ ಎಲ್ಲೇ ಮೀರಿದ ಹಾಸ್ಯಗಳು ಇಂದು ಜನಪ್ರಿಯವಾಗುವುದು ಬದಲಾದ ಪ್ರೇಕ್ಷಕ ಅಭಿರುಚಿಯೇ , ಇಲ್ಲ ಅಭಿರುಚಿಯ ಹಾದಿ ತಪ್ಪಿಸುವಿಕೆಯೇ? ಸಭ್ಯ ಹಾಸ್ಯ ಮರೆಯಾದ ಬಗೆ ಮಾತ್ರ ತುಂಬ ವಿಚಿತ್ರ ಅನ್ನಿಸುತ್ತದೆ. ಹಾಸ್ಯ ಎಂದಾಕ್ಷಣ ಮಿಜಾರು ಅಣ್ಣಪ್ಪ ಇವರ ಹಾಸ್ಯದ ಬಗ್ಗೆ ಹೇಳದಿರುವುದು ಹೇಗೆ ಸಾಧ್ಯ? ಮಿಜಾರು ಹಾಸ್ಯ ಎಂದರೆ ಅನುಭವದ ಮೂಸೆಯಲ್ಲಿ ಹೊರಬಂದ ಹಾಸ್ಯಗಳು. ತೀರ ಸರಳವಾದ ಗಂಭೀರ ತತ್ವಗಳನ್ನು ಸಾರುವ ಹಾಸ್ಯ. ಇವರ ಅನಿಮುತ್ತುಗಳ ಮಾತಿನ ಹಾಸ್ಯ, ಕೆಲವು ಜನಪದ ಗಾದೆಗಳು ಇವರದ್ದೇ ಸ್ವಂತ ರಚನೆಯೋ ಎಂದು ಅನುಮಾನಿಸಿದ್ದೇನೆ. ಒಂದು ರೀತಿಯ ದಯನೀಯ ಸ್ವಭಾವದ ಹಾಸ್ಯ ನಾನು ತುಂಬ ಮೆಚ್ಚಿಕೊಂಡಿದ್ದೇನೆ. ಕರುಣಾಜನಕ ಸನ್ನಿವೇಶವನ್ನು ಇನೂ ಮಾರ್ಮಿಕವಾಗಿ ಮಾಡುವಂತೆ ಇವರ ವಿಡಂಬನೆಯ ಹಾಸ್ಯಕ್ಕೆ ಹಲವುಸಲ ಮಾರು ಹೋಗಿದ್ದೇನೆ. ಇಂತಹ ಹಾಸ್ಯಗಳ ಮುಂದುವರಿಕೆ ಅಥವಾ ಸರಿಯಾದ ಅನುಕರಣೆ ಇಂದು ಕಾಣುವುದೇ ದುಃಸ್ಸಾಧ್ಯ. ಆದರೆ ಇಂದು ಹಾಸ್ಯ ಪ್ರೇಕ್ಷಕನಿಂದ ಕರತಾಡನ ಗಿಟ್ಟಿಸುವ ಉದ್ದೇಶವನ್ನು ಮಾತ್ರವೇ ಹೊಂದಿದೆ. ಅನನ್ಯ ಪ್ರತಿಭೆಗಳಿದ್ದರೂ ಅವಕಾಶ ಇಲ್ಲದೆಯೋ ಸ್ವಂತಿಕೆಯನ್ನು ತೋರ್ಸಿವಲ್ಲಿ ವಿಫಲವಾಗಿಯೋ ಅಂತು ಹಾಸ್ಯ ಕೇವಲ ನಗುವುದಕ್ಕೆ ಮಾತ್ರ ಸೀಮಿತವಾಗಿದೆ.

ಹೀಗೆ ಯಕ್ಷಗಾನ ನನ್ನ ಬದುಕಿನ ಹಲವು ರಸ ನಿಮಿಷಗಳಿಗೆ ನಿಮಿತ್ತವಾಗಿ ಈಗ ಮಾನಸಿಕವಾಗಿಯೂ ಉತ್ತ್ತಮ ಚಿಂತನೆಗಳಿಗೆ ಪೂರಕವಾಗಿ ಬದುಕಿನಲ್ಲಿ ಒಂದಾಗಿದೆ ಅಂತಾಳೆ ನನ್ನ ಭಾವನೆ. ಮನರಂಜನೆಗೋ ಕಾಲಕ್ಷೇಪಕ್ಕೋ ಹಲವು ದಾರಿಗಳಿದ್ದರೂ ಯಕ್ಷಗಾನದಂತೆ ಮನಸ್ಸಿಗೆ ಮುದವನ್ನು ಕೊಡುವ ಸಾಧನ ಬೇರಿಲ್ಲ. ಈ ಕಲೆಯ ಯಾವುದಾದರೂ ಒಂದು ಅಂಗವಾಗಿದ್ದರೆ ಒಳ್ಳೆಯದಲ್ಲವೇ? ಬಾಲ್ಯದಲ್ಲಿ ಚೆಂಡೆ ಮದ್ದಲೆ ವಾದನದ ಬಗ್ಗೆ ಅಭಿರುಚಿ ಇದ್ದರು ಕಲಿಯುವ ಅವಕಾಶ ಒದಗಲಿಲ್ಲ. ಹೀಗಿದ್ದರೂ ಇಂದು ಕೇವಲ ಕಲೆಯನ್ನು ಆಸ್ವಾದಿಸುವ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರೆ ಮನಸ್ಸಿಗೆ ಹಿತವಾಗುವ ಯಕ್ಷಗಾನ ಸಿಗುವುದೇ ದುಸ್ತರ. ಕಲಾವಿದ ಅನ್ನಿಸಿಕೊಳ್ಳುವುದಕ್ಕಿಂತ ಉತ್ತಮ ಪ್ರೇಕ್ಷಕ ಅನ್ನಿಸಿಕೊಳ್ಳುವುದೇ ಸೂಕ್ತ. ಈಗಿನ ಕಾಲಕ್ಕೇ ಅದು ಮತ್ತು ಅರ್ಥಪೂರ್ಣ.

Monday, February 2, 2009

ಯಕ್ಷ ಸಿಂಚನ




ಕಳೆದ ವರ್ಷದಂತೆ ಈ ವರ್ಷವೂ ಆತ್ಮೀಯ ಮಿತ್ರ ಕಜೆ ಸುಬ್ರಮಣ್ಯ ಭಟ್ ನಮ್ಮ ಮನೆಯಲ್ಲಿ ಜನವರಿ ೨೮ ರಂದು ಪಿತೃ ಕಾರ್ಯ ನಿಮಿತ್ತ ಹಾಗು ಸ್ಮರಣಾರ್ಥ ಯಕ್ಷಗಾನ ತಾಳಮದ್ದಲೆ ಏರ್ಪಡಿಸಿದ್ದೇವೆ ಬರಬೇಕು ಎಂದರು. ನಾನು ಖಂಡಿತ ಬರುವೆ ಎಂದು ಆಶ್ವಾಸನೆ ಇತ್ತೆ. ನಿಜವಾಗಿ ಹೇಳುವುದಾದರೆ ಅದು ಆಶ್ವಾಸನೆ ಅಲ್ಲ. ನನ್ನ ಮನದಾಳದ ಬಯಕೆಯನ್ನೇ ನಾನು ಹೇಳಿದ್ದೆ.


ಬೆಂಗಳೂರುವಾಸಿಯಾದಮೇಲೆ ಯಕ್ಷಗಾನದ ನಿಜ ಸಿಂಚನವನ್ನು ಅನುಭವಿಸದೇ ಇದ್ದದ್ದು ಹೆಚ್ಚು.ಹೀಗಾಗಿ ತುಂಬ ಉತ್ಕಟ ಅಭಿಲಾಷೆಯಿಂದಲೇ ಕಾತರನಗಿದ್ದೆ. ಮೊದಲೇ ಮುಖ್ಯ ಕಲಾವಿದರು ಯಾರು ಎಂದು ನಿಗದಿಯಾಗಿತ್ತು.ಅದು ನನ್ನತಹವನಿಗೆ ತುಂಬ ರೋಮಾಂಚನ ತರುವ ವಿಷಯವೇ ಆಗಿತ್ತು. ಮುಖ್ಯವಾಗಿ ಬಲಿಪ್ಪರ ಪದ ತನ್ಮಯರಾಗಿ ಕೇಳಬೇಕೆಂದರೆ ಅದು ಅಂತಹ ವಾತಾವರಣವೂ ಬೇಕು. ನಿರಾಡಂಬರ ಹಾಗು ನಿರ್ದಿಷ್ಟ ಸೀಮಿತ ಪ್ರೇಕ್ಷಕರು ಕೇವಲ ಯಕ್ಷಗಾನದ ಪರಂಪರೆಯ ಸರಳ ಕಾರ್ಯಕ್ರಮವನ್ನು ಸವಿಯುವ ಮನೋಧರ್ಮ ಇದ್ದವರು, ಬಹುಶ ಇಂತಹ ವಾತವರಣ ಬೆಂಗಳೂರಲ್ಲಿ ಸಿಗುವುದು ಈಗಿನ ಮಟ್ಟಿಗೆ ದುಸ್ತರ.ಇಂಥ ವಾತಾವರಣದಲ್ಲಿ ಬಲಿಪ್ಪರ ಹಾಗು ಮಹಾ ಕಲಾವಿದರ ಮಿಲನ ಅಂದ್ರೆ ಅದು ಹೇಗಿರಬಹುದು ಎಂದು ಊಹಿಸಿಯೇ ರೋಮಾಂಚನವಾಗುವುದು.

ಈ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ರೂಪಿತವಾದದ್ದೇ ಒಂದು ವಿಶಿಷ್ಟ ಉದ್ದೇಶದಿಂದ. ಶ್ರೀ ರಾಮಕೃಷ್ಣ ಭಟ್ಟರು ಸ್ವತಹ ಯಕ್ಷಗಾನ ಕಲೆಯ ಉತ್ಕಟ ಅಭಿಮಾನಿ ಹಾಗೂ ಕಲಾವಿದರಾಗಿದ್ದರು. ಪುತ್ತಿಗೆ ರಘುರಾಮ ದಿ ಹೊಳ್ಳರ ತಂದೆಯವರಾದ ರಾಮಕೃಷ್ಣ ಜೋಯಿಸರ ಒಡನಾಡಿಯಾಗಿ, ಹಿರಿಯ ಹಾಗು ಕಿರಿಯ ಬಲಿಪ್ಪರ ಉತ್ಕಟ ಅಭಿಮಾನಿಯಾಗಿದ್ದವರು. ಹಾಗೆ ನೋಡಿದರೆ ಆ ಮನೆಯಲ್ಲಿ ಎಲ್ಲರೂ ಬಲಿಪ್ಪರ ಅಭಿಮಾನಿಗಳೇ . ಬಲಿಪ್ಪರ ಮೇಲಿನ ಅವರ ಅಭಿಮಾನ ಕಂಡಾಗ ತುಂಬ ಸಂತಸ ಪಟ್ಟಿದ್ದೇನೆ. ಹೀಗೆ ಪಿತೃಗಳ ಕಾರ್ಯಕ್ರಮದಲ್ಲಿ ವೇದ ಪಾರಾಯಣ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಸಂಪ್ರದಾಯದಲ್ಲಿ ಹೇಳಿದೆ. ಆದರೆ ಇಲ್ಲಿ ಅವರ ಸ್ಮರಣೆಗಾಗಿ ವೇದ ಪಾರಾಯಣಕ್ಕೆ ಸಮನಾಗಿ ಯಕ್ಷಗಾನ ಕಾರ್ಯಕ್ರಮ. ಯಕ್ಷಗಾನ ಕಲೆಯನ್ನು ಅವರು ಕಂಡ ಬಗೆ ಕಂಡು ಸಂತೋಷವಾಯಿತು. ಹಾಗಾಗಿ ಯಕ್ಷಗಾನ ಕಲೆಗೆ ತದ್ರೀತಿ ತಮ್ಮ ಒಂದು ಸಣ್ಣ ಕಾಣಿಕೆ ಎಂದೇ ಯಥಾ ಶಕ್ತಿ ಸೇವೆಯನ್ನು ಸಲ್ಲಿಸಿ ಕೃತಾರ್ಥರಾಗಿದ್ದಾರೆ. ಕಾಣಿಕೆ ಅಂದ್ರೆ ಅಷ್ಟೇ ಅಲ್ಲವೇ ನಮ್ಮಿಂದ ಎಷ್ಟು ಸಾಧ್ಯ ಅಷ್ಟು ಸಲ್ಲಿಸುವುದು. ಅದು ಭಕ್ತಿ ಅಭಿಮಾನದ ಸಂಕೇತ.

ಮುನ್ನಾದಿನ ರಾತ್ರಿ ಪ್ರಯಾಣಿಸಿ ಬೆಳಗ್ಗೆ ವೇಣೂರು ತಲಪಿದೆ. ಸುಬ್ಬಣ್ಣ ( ಸ್ನೇಹದಿಂದ) ಸಂಭ್ರಮಿಸಿ ಕಾಯುತ್ತ ಇದ್ದರು. ತುಂಬ ಲವಲವಿಕೆಯಿಂದ ಬರ ಮಾಡಿಕೊಂಡು ಉಪಚಾರ ಮಾಡಿ ಮನೆಯರನ್ನೆಲ್ಲ ಪರಿಚಯಿಸಿದರು. ತನ್ನ ಮೆನೆಯೇ ಎಂಬಂತೆ ಭಾವಿಸುವ ಹಾಗೆ ಉಪಚಾರ. ಸ್ನೇಹಾಚಾರ. ಬಹುಶ ಆದಿನ ತುಂಬ ಉದ್ವೇಗದಿಂದ ಇದ್ದರು ನಮ್ಮ ಮಿತ್ರರು. ಅದು ಸಹಜ ಅಲ್ಲವೇ.?

ಒಂದು ಅವ್ಯಕ್ತ ಸಂತೋಷದಿಂದ ಅವರ ಸಿದ್ದತೆಗಳನ್ನು ಅವಲೋಕಿಸುತ್ತ ಅದು ಇದು ಹರಟುತ್ತ ಇದ್ದೆವು. ಹೋದ ಕೂಡಲೇ ಹೇಳಿದರು ಬಾಯರಿನಿಂದ ಯಾರೋ ಬರುತ್ತಾರೆ, ಅವರ ಜತೆಗೆ ಹೊಳ್ಳರು ಬರುವವರಿದ್ದಾರೆ ಎಂದು ನಾನು ಬಾಯರಿನವನು ಅದುದರಿಂದಲೋ ಏನೋ ಖುಷಿಯಿಂದಲೇ ಹೇಳಿದರು. ನನಗೆ ಅದು ಮೊದಲೇ ತಿಳಿದ ವಿಚಾರವಾಗಿತ್ತು. ಹಾಗೆ ಬರುವವರು ಕೂಡ ನನ್ನ ಮಿತ್ರರೇ ಆಗಿದ್ದರು.

ಮಧ್ಯಾಹ್ನದ ಬಿಸಿ ಏರುತ್ತ ಇದ್ದ ಹಾಗೆ ಕಾರ್ಯಕ್ರಮದ ಕಾವು ಕೂಡ ಏರುತ್ತ ಹೋಯಿತು. ಜನ ಒಬ್ಬೊಬ್ಬರಾಗಿ ಆಗಮಿಸುತ್ತಿದ್ದರು. ಮೂಡಂಬೈಲು ಗೋಪಾಲ ಕೃಷ್ಣ ಶಾಸ್ತ್ರಿಗಳು ಮೊದಲಾಗಿ ಬಂದರು. ಅನಂತರ ರಘುರಾಮ ಹೊಳ್ಳರು ನನ್ನ ಬಾಯಾರಿನ ಮಿತ್ರರ ಕಾರಿನಲ್ಲಿ ಬಂದಿಳಿದರು. ಸುಣ್ಣ೦ಬಲ ವಿಶ್ವೇಶ್ವರ ಭಟ್, ಮಧೂರು ವಾಸುದೇವರಂಗ , ವಿಷ್ಣು ಶರ್ಮ ಮುಂತಾದವರು ಒಬ್ಬೋರಾಗಿ ಬರುತ್ತಿದ್ದಂತೆ ಕಾರ್ಯಕ್ರಮದ ಬಿಸಿಎರುತ್ತ ಹೋಯಿತು.

ಅಚ್ಚು ಕಟ್ಟಾದ ಭೋಜನ ವ್ಯವಸ್ಥೆ. ರುಚಿಯಾದ ಹಳ್ಳಿ ಭೋಜನ ಖಾಸಗಿ ಕಾರ್ಯಕ್ರಮವಾದರೂ ಅತಿ ಹೆಚ್ಚು ಸಹೃದಯ ಕಲಾಭಿಮಾನಿಗಳೇ ತುಂಬಿದ್ದರು. ಊಟಕ್ಕೆ ಎಲ್ಲರೂ ಕುಳಿತು ಕೊಳ್ಳಬೇಕಾದರೆ ನಮ್ಮ ಬಲಿಪ್ಪಜ್ಜನ ಆಗಮನವಾಯಿತು. ಎಲ್ಲರ ಊಟವೂ ಆಯಿತು.

ಮಹಾಲಿಂಗೇಶ್ವರ ಯಕ್ಷಗಾನ ಸಂಘದ ಸದಸ್ಯರು ತಾಳಮದ್ದಲೆ ವ್ಯವಸ್ಥೆ ಮಾಡುವಲ್ಲಿ ತುಂಬ ಸಹಕರಿಸಿದರು. ಬಲಿಪ್ಪರು ಹೊಳ್ಳರು ಶಾಸ್ತ್ರಿಗಳು ಪ್ರಸಂಗದ ನಡೆಯ ಬಗ್ಗೆ ಚರ್ಚಿಸುತ್ತ, ಹೊಳ್ಳರು ಬಲಿಪ್ಪರಲ್ಲಿ ಕೇಳಿದರು
" ನೀವು ಯಾವಾಗ ಕುಳಿತುಕೊಳ್ಳುವಿರಾ? "
ಬಲಿಪ್ಪರು ಎಂದಿನಂತೆ
" ನೀವು ಎಲ್ಲಿ ಬಿಡ್ತಿರೋ ಅಲ್ಲೇ ಸಾಕು."

ಹೊಳ್ಳರು
" ಹಾಗಿದ್ರೆ ನಾನು ಮೊದಲು ಶುರು ಮಾಡ್ತೇನೆ ಆಮೇಲೆ ನೀವು ಮುಂದುವರೆಸಿ"

ಹೀಗೆ ಉಭಯರೂ ಸೇರಿ ಪ್ರಸಂಗದ ಚರ್ಚೆ ಆಗಬೇಕಾದರೆ..ಓರ್ವ ಅಭಿಮಾನಿ ಯೊಬ್ಬರು ಹೇಳಿದರು ಬಲಿಪ್ಪ ಹೊಳ್ಳರ ಜತೆಯಾದ ದ್ವಂದ್ವ ಭಾಗವತಿಕೆ ಬೇಕೆ ಬೇಕು. ೨ ಪದ ಅದರೂ ಸಾಕು. ಹೀಗೆ ಕಾರ್ಯಕ್ರಮದ ರೂಪು ರೇಷೆ ಸಿದ್ದಗೊಂಡು, ಧ್ವನಿ ವರ್ಧಕದವರು ವಿಡಿಯೋ ದವರು ಎಲ್ಲ ವ್ಯವಸ್ಥೆ ಅದಕೂಡಲೇ ಹೊಳ್ಳರು ಕುಳಿತಲ್ಲಿಂದ ಎದ್ದು ಬಲಿಪ್ಪರ ಕಾಲು ಮುಟ್ಟಿ ನಮಸ್ಕರಿಸುತ್ತ.
" ಭಾಗವತರೆ ನಾನು ಶುರು ಮಾಡುತ್ತೇನೆ. "
ಎಂದು ಅನುಮತಿ ಕೇಳಿದಾಗ ಒಂದು ಘಳಿಗೆ ಭಾವಪೂರ್ಣ ಸನ್ನಿವೇಶ ಕಾಣುವಂತಾಯಿತು. ನಿಜಕ್ಕೂ ಹೊಳ್ಳರು ಬೇರೆ ಕಲಾವಿದರಿಗೆ ಮೇಲ್ಪಂಕ್ತಿ ಹಾಕಿ ಕೊಟ್ಟಂತಾಯಿತು. ಇಂತಹ ನಿರಾಡಂಬರ ನಿಗರ್ವೀ ಗುಣ ಇರುವುದರಿಂದಲೇ ಇಂದಿಗೂ ಹೊಳ್ಳರು ಅಗ್ರಮಾನ್ಯ ಭಾಗವತರಾಗಿ ಮೆರೆಯುತ್ತಿದ್ದಾರೆ.ಕಲಾವಿದನಿಗೆ ಇರಬೇಕಾದ ಮೊದಲ ಗುಣ ಅದು.

ತಾಳಮದ್ದಲೆ ಕಾರ್ಯಕ್ರಮವನ್ನು ಪೂರ್ಣವಾಗಿ ವಿವರಿಸುವುದು ಅಸಾಧ್ಯ. ಮದ್ದಲೆಯಲ್ಲಿ ಸುಬ್ರಹ್ಮಣ್ಯ ಶಾಸ್ತ್ರಿಗಳ ಕೈಚಳಕ ತುಂಬ ಕುಶಿ ಕೊಟ್ಟಿತು. ಹೊಳ್ಳರ ಎಂದಿನ ಅದ್ಭುತ ಉತ್ಸಾಹದ ಭಾಗವತಿಕೆ. ಹೊತ್ತು ಕಳೆದಂತೆ ಮೆರುಗನ್ನು ಪಡೆಯುತ್ತಾ ಸಾಗಿತು. ಜತೆಗೆ ಸುಧನ್ವನಾಗಿ ಸುಣ್ಣ೦ಬಲ ವಿಶ್ವೇಶ್ವರ ಭಟ್ ಅದ್ಭುತ ಅರ್ಥಗಾರಿಕೆಯನ್ನು ಪ್ರದರ್ಶಿಸಿದರು. ತನ್ಮಯರಾಗಿ ಅವರ ಅವರ ಮಾತುಗಳನ್ನು ಅಲಿಸುವುದೇ ಒಂದು ಪುಣ್ಯ.ಪ್ರಭಾವತಿಯಾಗಿ ವಾಸುದೇವ ರಂಗ ಭಟ್ ಅರ್ಥಗಾರಿಕೆ ಕೂಡ ಉತ್ತಮವಾಗಿದ್ದರೂ ಶ್ರುತಿಯಲ್ಲಿ ಹೊಂದಾಣಿಕೆಯಾದಂತೆ ಅನ್ನಿಸಲಿಲ್ಲ. ಸಾಹಿತ್ಯ ಹಾಗು ಶಬ್ದ ಪಾಂಡಿತ್ಯ ಸಾಕಷ್ಟು ಇದ್ದರೂ ಯಾಕೋ ಶ್ರುತಿಯ ಅಸಮರ್ಪಕದಿಂದ ಸಹಜ ಆಕರ್ಷಣೆ ಇರರಲಿಲ್ಲ.

ಸತಿಗೆ ಶೋಡಷದ ಪದದಿಂದ ಹಿಮ್ಮೇಳದಲ್ಲಿ ಹೊಳ್ಳರ ಜತೆಗೆ ಬಲಿಪ್ಪರು ದ್ವನಿಗೂಡಿಸಿದಾಗ ನೆರೆದಿದ್ದ ಜನರ ಸಂಭ್ರಮಕ್ಕೆ ಪಾರವೇ ಇಲ್ಲ.ಹೊಳ್ಳರು ತಮ್ಮ ಜಾಗಟೆಯ ಬದಲಾಗಿ ಬಲಿಪ್ಪರ ಜಾಗಟೆಯಲ್ಲಿ ಹೊಂದಿಕೊಂಡು ಅತಿ ಉತ್ಸಾಹದಿಂದಲೇ ಕೈಯಲ್ಲಿ ತಾಳ ಹಾಕಿ ಪದ ಹೇಳಿದಾಗ ನೆರೆದಿದ್ದ ಜನ ಕರತಾಡನ ಮಾಡಿ ಸಂತಸ ವ್ಯಕ್ತ ಪಡಿಸಿದರು.

ಅರ್ಜುನನಾಗಿ ಶಾಸ್ತ್ರಿಗಳು ಅಮೋಘ ಅರ್ಥಗಾರಿಕೆಯನ್ನು ತೋರ್ಪಡಿಸಿದರು. ಅರ್ಜುನ ಕೃಷ್ಣರ ಪ್ರವೇಶದ ನಂತರ ಬಲಿಪ್ಪರು ಗತಕಾಲದ ಯಕ್ಷವೈಭವ ಎಂದರೆ ಏನು ಎಂದು ತೋರಿಸಿದ ಹಾಗಿತ್ತು. ಕೃಷ್ಣನಾಗಿ ವಿಷ್ಣು ಶರ್ಮ ಸಮಯೋಚಿತ ಅರ್ಥಗಾರಿಕೆ ಮೆರೆದರು. ಸೂರ್ಯಾಸ್ತ ವಾಗುತ್ತಿದ್ದಂತೆ ಸೂರ್ಯನೊಂದಿಗೆ ತಾಳಮದ್ದಲೆಯ ಕಾರ್ಯಕ್ರಮವೂ ಮಂಗಳ ಹಾಡಿದಾಗ ನೆರೆದಿದ್ದ ಜನರಲ್ಲಿ ಸಂತ್ರಿಪ್ತಿಯ ಮನೋಭಾವ. ನೇತ್ರ ಮನಸು ಕರ್ಣ ಜತೆಗೆ ಉದರವನ್ನೂ ತ್ರಪ್ತಿ ಪಡಿಸಿಕೊಂಡು ನೆರೆದವರು ಸಂಪ್ರೀತರಾದರು.ಅದ್ಭುತ ತಾಳ ಮದ್ದಲೆಗೆ ಬಲಿಪ್ಪರು ಮಂಗಳ ಹದಿ ಮುಗಿದ ಕೂಡಲೇ ವಿಡಿಯೋ ಕ್ಯಾಮೆರಾ ಬೆಳಕು ಕೂಡ ನಂದಿಸಿದಾಗ ತಿಳಿದದ್ದು ಕತ್ತಲೆಯಾಗಿದೆ ಬೆಳಕನ್ನು ಉರಿಸಲೇ ಇಲ್ಲ ಎಂದು. ಅಷ್ಟೊಂದು ತಲ್ಲೀನರಾಗಿ ಯಕ್ಷ ಸಿಂಚನವನ್ನು ಅನುಭವಿಸಿದಾಗ ಮುಗಿದು ಹೋಯಿತೆ ಇಂದಿನ ದಿನ ಅನ್ನಿಸಿತು. ಹಿರಿಯರ ಅರ್ಥಪೂರ್ಣ ಸ್ಮರಣೆ ಇಂತಹ ಕಿರಿಯರನ್ನು ಪಡೆದ ಹಿರಿಯರು ನಿಜಕ್ಕೂ ಧನ್ಯರು.