"ಇದು ವಿಮರ್ಶೆಯಲ್ಲದ ಚಿಂತನ"

Saturday, November 24, 2012

ವೈಭವ ಮತ್ತು ದಾಖಲೀಕರಣ

           ಕಾಲ ಗರ್ಭಕ್ಕೆ ಸರಿದು ಹೋದ ನಿನ್ನೆಯ ದಿನಗಳು ಅಥವ ಕಳೆದು ಹೋದ ಸಮಯ ಇತಿಹಾಸ ಎನಿಸಲ್ಪಡುತ್ತವೆ. ಸಂದು ಹೋದ ಭೂತಕಾಲ ಅದು ಇತಿಹಾಸ. ಇತಿಹಾಸದ ಅನುಭವವನ್ನು ಭವಿಷ್ಯತ್ ಕಾಲಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿ ಅವುಗಳನ್ನು ದಾಖಲಿಸಿ ಸ್ಮರಣಿಕೆಗಳನ್ನಾಗಿ ಉಳಿಸುವಂತಹ ಕಾರ್ಯ ಹಲವು ವಿಧದಲ್ಲಿ ಆಗುವುದುಂಟು. ಮುಂದಿನ ದಿನಗಳ ದೃಷ್ಟಿಯಲ್ಲಿ ಈ ಇತಿಹಾಸಗಳೇ ತಳೆಯುವ ನಿರ್ಧಾರಕ್ಕೆ ಪ್ರೇರಕವಾಗಿರುತ್ತದೆ. ಇದನ್ನು ಹೀಗೆ ಎಂದು ವರ್ಗೀಕರಿಸುವುದು ಕಠಿಣವಾದರೂ ಇತಿಹಾಸದ ದಿನಗಳನ್ನು ನೆನಪಿಸುವಂತೆ ಯಥಾ ಸೃಷ್ಟಿಯನ್ನು ಪುನಃ ಸೃಜಿಸಿ ಅದನ್ನು ದಾಖಲಿಸುವ ಪ್ರಯತ್ನ ವರ್ತಮಾನದ ಮೌಲ್ಯಕ್ಕನುಸಾರವಾಗಿ ಆಗುವುದುಂಟು. ಯಾವುದೇ ವಸ್ತುವಿನ ಮೌಲ್ಯ ಇರವುದು ಅದನ್ನು ಹೊಂದಿರುವ ಮತ್ತು ಕೊಂಡುಕೊಳ್ಳುವವನ ಅಭಿರುಚಿಯನ್ನು ಹೊಂದಿಕೊಂಡು. ಇದನ್ನು ಅವನ ಮನೋಭಾವವೇ ಅದನ್ನು ನಿರ್ಧರಿಸುತ್ತದೆ.
 
          ವಾಸ್ತವದಲ್ಲಿ ಮೌಲ್ಯ ಕಂಡುಕೊಳ್ಳಲಾಗದೆ ಇದ್ದದ್ದು ಭವಿಷ್ಯತ್ ನಲ್ಲಿ ಮೌಲ್ಯ ವನ್ನು ಪಡೆದುಕೊಳ್ಳುತ್ತದೆ. ಸ್ಥಿರ ಚರ ವಸ್ತುಗಳು ಕಾಲಕ್ಕೆ ತಕ್ಕಂತೆ ಮೌಲ್ಯ ವರ್ಧಿಸಿದರೂ ಅದು ಕೇವಲ ಭೌತಿಕ ಪ್ರಪಂಚದ ಸೊತ್ತಾಗಿರುತ್ತದೆ. ಆದರೆ ಇದೆಲ್ಲವನ್ನು ಮೀರಿ ಮಾನಸಿಕ ಭಾವನೆಗಳ ಮೌಲ್ಯಮಾಪನ ಮಾಡುವಾಗ ಕಳೆದು ಹೋದ ಘಟನೆಗಳು ಅವುಗಳ ನೆನಪುಗಳು ಬಹಳ ಮೌಲ್ಯಯುತವಾದದ್ದೆಂದು ನಂತರ ಅನಿಸುವುದುಂಟು.

          ಹಲವು ವರ್ಷಗಳ ಹಿಂದೆ ಸುಮ್ಮನೇ ಕಾಲಕ್ಕೆ ತಕ್ಕಂತೆ ಹುಚ್ಚು ಕಟ್ಟಿ , ಕತ್ತಲೆಯಲ್ಲಿ ತೆಂಗಿನ ಮಡಲಿನ ಸೂಟೇ (ದೊಂದಿ) ಉರಿಸಿಕೊಂಡು ಮೈಲು ದೂರ ನಡೆದು ನೋಡಿದ ಕಟೀಲು ಮೇಳದ ಆಟ, ಆಗ ಬರೇ ಟಿಕೆಟಿಲ್ಲದ ಧರ್ಮದ ಆಟ. ಆದರೆ, ಅದರ ಒಂದು ತುಣುಕಾದರೂ ಈಗ ಕಣ್ಣಿಗೆ ಕಾಣುವಹಾಗಿದ್ದರೇ ...? ಹೌದಲ್ಲ? ಈ ಅಸಂಭವನೀಯ ಸತ್ಯಗಳೇ ಭಾವನಾ ಸಂಘರ್ಷಕ್ಕೆ ಕಾರಣವಾಗುವುದು. ಧರ್ಮಸ್ಠಳ ಮೇಳದ ಅಂದಿನ ಆಟದಲ್ಲಿನ ಪುತ್ತೂರು ಹೆಗಡೆಯ ವೇಷ ಇಂದು ಅದಕ್ಕೆ ಮೌಲ್ಯವನ್ನು ನಿರ್ಧರಿಸುವುದು ಸಾಧ್ಯವೇ? ಈಗ ಬೇಕೆಂದರೂ ವಿಟ್ಲ ಜೋಷಿಯ ಮೂಕಾಸುರನನ್ನು ನೋಡಲು ಸಾಧ್ಯವೇ? ಶೇಣಿಯ ರಾವಣ, ಸಾಮಗರ ರಾಮ, ಕೇವಲ ಇತ್ತೀಚಿನ ಘಟನೆಗಳೇ ಈಗ ಅಪ್ರಸ್ತುತವಾಗಿ ಪರಿಣಮಿಸಿ ದಾಖಲೆಗಳೇ ಇಲ್ಲದೆ ಕೇವಲ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿವೆ. ಕೇವಲ ಕಲ್ಪನೆಯನ್ನೇ ವಿನಿಮಯ ಮಾಡಿಕೊಳ್ಳುವ ಅನಿವಾರ್ಯತೆ. ಕಾಲಗರ್ಭದ ಪುಟಳಲ್ಲಿ ತುಂಬಿರುವ ಕಲ್ಪನೆಯನ್ನು ತೋರಿಸುವುದಾದರೂ ಹೇಗೆ. ಹಾಗಾಗಿ ದಾಖಲೀಕರಣಗಳು ಭೌತಿಕ ಲೋಕದ ಪುಟಗಳಲ್ಲಿ ದಾಖಲಾದದ್ದು. 

          ಈ ದಾಖಲೀಕರಣಗಳ ಮೌಲ್ಯವನ್ನು ತುಲನೆ ಮಾಡುವುದು ಸರಿಯಲ್ಲ. ಇಂದು ಮೌಲ್ಯವನ್ನು ಕಾಣದೇ ಇದ್ದದ್ದು ಮುಂದೊಂದು ದಿನ ಮೌಲ್ಯವನ್ನು ನಿರ್ಧರಿಸಲಾಗದೇ ಇರುವಂತಹ ಸ್ಥಿತಿಗೆ ಬಂದು ಬಿಡುತ್ತದೆ. ಮೊದಲು ಹತ್ತಿಪ್ಪತ್ತು ರೂಪಾಯಿಗೆ ಸಿಗುತ್ತಿದ್ದ ಯಕ್ಷಗಾನ ಕ್ಯಾಸೆಟ್ . ಅಭಿರುಚಿಯಿದ್ದವನು ಯಾವ ಬೆಲೆ ಕೊಟ್ಟು ಕೊಂಡುಕೊಳ್ಳುತ್ತಾನೋ ಅವನಿಗೇ ಬಿಟ್ಟದ್ದು.

          ಈ ದಾಖಲೆಗಳು ಯಾವ ರೀತಿ ಅನಿವಾರ್ಯವೋ ಅದು ಕೆಲವೊಮ್ಮೆ ಗಮನಾರ್ಹ ವಿಷಯವಾಗುತ್ತದೆ. ಕೇವಲ ಕಲಾವಿದನಿಗೆ ಸಂಬಂಧಿಸಿ ಅಥವಾ ಘ್ಹಟನೆಗೆ ಸಂಬಂಧಿಸಿ ಇಲ್ಲವೇ ಸಂಪೂರ್ಣ ಯಕ್ಷಗಾನವನ್ನೆ ಸಂಬಂಧಿಸಿ ದಾಖಲಾತಿ ಮಾಡಬಹುದು. ಅದರೆ ಕಲೆಯನ್ನು ಈಗಿರುವ ರೀತಿಯಷ್ಟಾದರೂ, ಅದೇ ರೂಪದಲ್ಲಿ ಉಳಿಸಿಕೊಂಡು ಹೋಗುವುದು ದಾಖಲೀಕರಣದಷ್ಟೇ ಮಹತ್ವವನ್ನು ಪಡೆದುಕೊಳ್ಳುತ್ತದೆ. ಯಾಕೆಂದರೆ ಮುಂದೊಂದುದಿನ ಕಲಾರೂಪವೆ ರೂಪಾಂತರಗೊಂಡು ಇನ್ನೇನೋ ಆಗುವ ಸಂಭವ ಇಲ್ಲದಿಲ್ಲ. ವಾಸ್ತವವನ್ನು ಚಿಂತಿಸುವಾಗ ದಿಗಿಲಾಗುವುದುಂಟು. ಮನುಷ್ಯನ ಜೀವನ ಕ್ರಮ ಹೇಗೆ ಬದಲಾಗಿಬಿಡುತ್ತದೋ ಹೇಳುವುದು ಕಷ್ಟ.. ಮುಂದೊಂದು ದಿನ " ದನ ಹೇಗೆ ಸೆಗಣಿ ಹಾಕುತ್ತಿತ್ತು" ಎಂಬುದನ್ನು ದಾಖಲೀಕರಣದ ಮೂಲಕ ಮಾತ್ರವೇ ತೋರಿಸುವಷ್ಟು ಬದಲಾವಣೆಯ ಕ್ರಾಂತಿ ಆಗುತ್ತಿದೆ. ಹಳೆಯ ಮುಕ್ಖಾಲು ಆಣೆಯ ನಾಣ್ಯ ಬೊಗಸೆ ತುಂಬ ಹಿಡಿದು ಕೊಟ್ಟರೂ ಅದಕ್ಕೆ ಬೆಲೆ ಇದ್ದೀತೆ? ಆದರೂ ಹಿಂದಿನ ಮೆಟ್ಟಲು ಮುಂದೇ ಹತ್ತುವುದಕ್ಕೆ ಸಹಾಯ.

          ಯಕ್ಷಗಾನದಲ್ಲಿ ದಾಖಲೀಕರಣ ಹಲವು ಬಗೆಯಲ್ಲಿ ಹಲವು ಕಡೆ ನಿರಂತರವಾಗಿ ಆಗುತ್ತಾ ಇದೆ. ತಮ್ಮ ತುಲನೆಯಲ್ಲಿ ಯಾವುದು ಅಮೂಲ್ಯವೋ ಅದನ್ನು ಗೌರವಿಸಿ ಜೋಪಾನವಾಗಿಡುವ ಕಾಳಜಿ. ಕೆಲವೊಮ್ಮೆ ಈ ಜೋಪಾನವೇ ಸಂಗ್ರಹದ ಮೌಲ್ಯವನ್ನು ಹೆಚ್ಚಿಸಿಬಿಡುತ್ತದೋ ಎಂಬ ಅನುಮಾನ ಬರುತ್ತದೆ. ಎಂತಿದ್ದರೂ ಸಂಗ್ರಹ ಇದೆಯಲ್ಲ.? ಆ ತಿಳುವಳಿಕೆಯಿಂದ ಮಾತ್ರ ತೃಪ್ತರಾಗಬಹುದು. ಅಜ್ಜ ಬ್ರಹ್ಮ ಕರ್ಮದ ಪುಸ್ತಕವನ್ನು ಬಟ್ಟೆಯಲ್ಲಿ ಬಿಗಿದು ಸುತ್ತಿ ಜೋಪಾನವಾಗಿ ದೇವರಕೋಣೆಯಲ್ಲಿ ಇಟ್ಟು ಪೂಜೆ ಮಾಡಿದ ಹಾಗೆ. ಆ ಪುಸ್ತಕವನ್ನು ಬರಿದೇ ಸ್ಪರ್ಶಿಸುವುದಿದ್ದರೂ ಸ್ನಾನ ಮಾಡಿ ಮಡಿವಂತರಾಗಿ ಬರಬೇಕು. ಅಜ್ಜ ಕೊಡುವ ಮೌಲ್ಯ ಮಾತ್ರವಲ್ಲ ನಾವೂ ಗೌರವಿಸಬೇಕಾದ ಮೌಲ್ಯ. ವೆತ್ಯಾಸವೆಂದರೆ ಅಜ್ಜ ಓದಿ ಅರಗಿಸಿಕೊಂಡಿದ್ದರೆ ನಮಗೆ ಓದಿದರೂ ಅರ್ಥವಾಗದು.. ಹಾಗಾಗಿ ದೂರದಿಂದ ಭಯದಿಂದ ನೋಡುವುದಷ್ಟೇ, ಅದರೂ ಗೌರವ, ಅದು ಇದ್ದೇ ಇರಬೇಕು.

         ಇತ್ತೀಚೆಗೆ ಲಭ್ಯ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ದಾಖಲೀಕರಣಕ್ಕಾಗಿ ಹಲವಾರು ಕಡೆ ಪ್ರಯತ್ನಗಳು ನಡೆಯುತ್ತಿವೆ. ಇದು ಒಂದು ಉತ್ತಮ ಲಕ್ಷಣ.ಆದರು ಹಲವು ದಾಖಲೀಕರಣಗಳು ಮೌಲ್ಯ ಇದ್ದರೂ ಮೌಲ್ಯಗಳಿಸುವುದಿಲ್ಲ. ನೋಡಿದಾಗ ಏನೊ ಕಳಕೊಂಡ ಹಾಗೆ ವಂಚಿತರಾದೇವೋ ಎಂಬ ಭಾವ ಪ್ರಚೋದನೆಗೆ ಒಳಗಾಗುತ್ತೇವೆ. ಇದು ನನ್ನ ಅನಿಸಿಕೆ. ಹಿರಿಯ ಕಲಾವಿದರನ್ನು ಕರೆದು ಅವರ ವೈಭವದ ದಿನಗಳನ್ನು ಮರುಕಳಿಸುವಂತೆ ಮಾಡುವುದು, ಸಾಧ್ಯವಾದಷ್ಟು ಈ ಭಾವನೆಯನ್ನು ಅವರಲ್ಲಿ ಆವಾಹನೆ ಮಾಡುವಷ್ಟರ ಮಟ್ಟಿಗೆ ಸಿದ್ದರಾಗ್ತೇವೆ. ಹೌದು ಕಲೆಯ ಮೇಲೆ ಕಲಾವಿದನ ಮೇಲೆ ಇಡುವ ಆ ಅಭಿಮಾನವೇ ಹಾಗೆ. ಅದು ಬೇರೆಲ್ಲ ಚಿಂತನೆಯನ್ನು ಮುಚ್ಚುವಂತೆ, ಮರೆಯುವಂತೆ ಮಾಡಿಬಿಡುತ್ತದೆ. ಒಬ್ಬ ಬಾಲ ಕಲಾವಿದ ಬಾಲ್ಯದಲ್ಲಿ ಅದ್ಭುತವಾಗಿ ನಿರ್ವಹಿಸುತ್ತಿದ್ದ ಪಾತ್ರಗಳನ್ನು, ಅದು ಲವ ಕುಶ ಆಗಿರಬಹುದು, ಅಭಿಮನ್ಯುವಿನ ವೇಷವಾಗಿರಬಹುದು, ಅದರ ನೈಜ ವೈಭವ ಬಾಲ್ಯದ ಉತ್ತುಂಗಾವಸ್ಥೆಯಲ್ಲೇ ಹೊರಹೊಮ್ಮುತ್ತದೆ. ಅದು ಪೂರ್ಣಪ್ರಮಾಣದಲ್ಲಿ ಪ್ರಕಾಶಿಸುವಾಗಲೇ ನಿಜವಾದ ವೈಭವ ಎಂದು ಹೇಳಬಹುದು. ವಿಜಯನಗರದ ಸ್ವರ್ಣ ಯುಗ ಎಂದು ನಾವು ಚರಿತ್ರೆಯಲ್ಲಿ ದಾಖಲಾಗಿದ್ದನ್ನು ಏನು ಓದುತ್ತಿದ್ದೇವೋ ಅದು ಕೇವಲ ಆ ಕಾಲಕ್ಕೆ ಅಂದರೆ ಶ್ರೀಕೃಷ್ಣ ದೇವರಾಯನ ಆಡಳಿತಕ್ಕೆ ಮಾತ್ರ ಸೀಮಿತ. ಅದರ ನಂತರ ಅದರ ವೈಭವದ ಸ್ಮರಣೆ ಮಾತ್ರ ಸಾಧ್ಯ. ಹಾಗೆ ಒಬ್ಬ ಕಲಾವಿದನ ವೈಭವ ಎಂಬುದು ಅವಧಿ ದಾಟಿದ ಮೇಲೆ ಆಚರಿಸಲ್ಪಟ್ಟರೆ ಒಂದು ರೀತಿಯ ಅಸೌಕರ್ಯ ಮನಸ್ಸಿಗೆ ತಂದು ಕೊಂಡ ಹಾಗೆ. ಸ್ವತಃ ಕಲಾವಿದ ಎಷ್ಟು ಸ್ಪೂರ್ತಿಗೊಂಡರೂ ಎಲ್ಲೋ ಒಂದು ಕಡೆ ಕೊರತೆಯ ಸೂಕ್ಷ್ಮವಾದ ಅನುಭವ ಮನಸ್ಸಿಗಾಗುತ್ತದೆ. ಹಲವು ಸಲ ಸ್ವತಃ ಕಲಾವಿದನ ಅಂತರಂಗದಲ್ಲಿ ವೇದನೆಯ ಸ್ಪರ್ಶವಾದರೂ ಅಚ್ಚರಿಯಿಲ್ಲ. ಪ್ರೇಕ್ಷಕ ಯಾವುದೋ ಸಮ್ಮೋಹನಕ್ಕೋ ಭಾವೋದ್ವಿಗಕ್ಕೋ ಒಳಗಾಗಿ ಸ್ವೀಕರಿಸಿದರೂ ಎಲ್ಲೋ ಒಂದು ಕಡೆ ಕಸಿವಿಸಿಯಂತೂ ಇದ್ದೇ ಇರುತ್ತದೆ.

          ಒಬ್ಬ ಕಲಾವಿದನನ್ನು ಒತ್ತಾಯ ಪೂರ್ವಕವಾಗಿ ಕರೆದು ಹಾಡಿಸಿ ಅಥವಾ ಕುಣಿಸಿ ತೃಪ್ತರಾಗುವಾಗ ಸ್ವತಃ ಕಲಾವಿದನ ಮನಸ್ಸಿನಲ್ಲಿ ಏನಿರಬಹುದು? ಅಭಿಮಾನಕ್ಕೆ ಸರಿಯಾಗಿ ಸ್ಪಂದಿಸಿ ಅದಕ್ಕೆ ತಕ್ಕ ಹಾಗೆ ನೈಪುಣ್ಯವನ್ನು ತೋರಿಸುವುದಕ್ಕೆ ಆಗುತ್ತಿಲ್ಲವಲ್ಲಾ? ಈ ಭಾವನೆ ಯಾಕೆ ಬರಬಾರದು? ಆವಾಗ ಈ ಅಭಿಮಾನವೇ ಒಂದು ರೀತಿಯಲ್ಲಿ ನೋವನ್ನು ಕೊಟ್ಟಹಾಗೆ ಅನಿಸುದಿಲ್ಲವೇ? ಅದು ಹೇಗೂ ಇರಲಿ ದಾಖಲೀಕರಣದ ವಿಚಾರಕ್ಕೆ ಬಂದಾಗ ದಾಖಲಿಕರಣದ ಸಮಯ ನಿರ್ಧಾರ ಮಾತ್ರ ಬಹಳ ಪ್ರಾಮುಖ್ಯತೆಯನ್ನುಗಳಿಸುತ್ತದೆ.ಹಾಗಾಗಿ ಆ ರೀತಿಯಲ್ಲಿ ಯೋಚಿಸುವಾಗ ಪ್ರಸ್ತುತ ಉತ್ತುಂಗದ ನಿರ್ವಹಣೆಯನ್ನು ತೋರುವ ಕಲಾವಿದನ ವೈಭವದ ದಿನಗಳನ್ನು ದಾಖಲಿಸುವುದು ಅತ್ಯಂತ ಅರ್ಥಪೂರ್ಣ ಎನಿಸುತ್ತದೆ. ಹಿಂದೆ ಪಂಜಿನ ಬೆಳಕಲ್ಲಿ ಯಕ್ಷಗಾನ ನಡೆಯುತ್ತಿತ್ತು. ಹಿಂದಿನ ಕಾಲಕ್ಕೆ ಅದು ಅನಿವಾರ್ಯವಾಗಿತ್ತು. ಅದರೂ ಅದು ಈಗ ವೈಭವ ಎಂದು ಭಾವಿಸುವುದು ತಪ್ಪಲ್ಲ. ಕಷ್ಟ ಪಟ್ಟು ಆ ವಾತಾವರಣನ್ನು ಉಂಟು ಮಾಡಿ ಅದನ್ನು ಮರು ಸೃಷ್ಟಿಸಿ ದಾಖಲಿಸುವ ಉತ್ಸಾಹ ಮೆಚ್ಚತಕ್ಕದ್ದೇ ಮಾತ್ರವಲ್ಲ ವಾಸ್ತವದಲ್ಲಿ ಅದು ಅನಿವಾರ್ಯವೆನಿಸುತ್ತದೆ. ಆದರೂ ಅದು ಒಂದು ಕೃತಕ ಸೃಷ್ಟಿ ಎಂಬ ಅನಿಸಿಕೆ ಬಾರದೆ ಇರಬಹುದೇ? ಏನೋ ಸದ್ಯಕ್ಕೆ ಇಷ್ಟು ಮಾತ್ರ ಸಾಧ್ಯ ಎಂದು ತೃಪ್ತಿ ಪಟ್ಟುಕೊಳ್ಳಬಹುದು. ಆದರೂ ರಂಗದ ಮೇಲಿನ ವೈಭವ ಕಾಲ ಸಂದ ಮೇಲೆ ದಾಖಲಿಸುವುದು ಕಾಲ ಸರಿದಂತೆ ಅದು ಅದೇ ಭಾವನೆಯನ್ನು ಹೊಂದಿರುತ್ತದೆ ಎನ್ನುವುದಕ್ಕೆ ಸಾಧ್ಯವಿಲ್ಲ. ಕೇವಲ ದಾಖಲೆ ಮಾತ್ರವೇ ಉಳಿದಿರುತ್ತದೆ. ಯಾಕೆಂದರೆ ಕಣ್ಣಾರೆ ಪ್ರತ್ಯಕ್ಷ ಕಂಡವನ ಸಾಕ್ಷ್ಯ ಅನುಭವ ಅಲ್ಲಿ ಇರುವುದಿಲ್ಲ.

           ಪ್ರಸ್ತುತ ಉತ್ತುಂಗದಲ್ಲಿ ವೈಭವೀಕರಿಸುವ ಕಲಾವಿದರು ಹಲವರಿದ್ದಾರೆ. ಆದರೆ ಅವರ ಉತ್ತುಂಗದ ಈ ಹಂತವನ್ನು ಪರಮ ಉಚ್ಚ್ರಾಯ ಸ್ಥಿತಿ ಎಂದು ನಿರ್ಣಯಿಸುವುದು ತಪ್ಪಾಗುತ್ತದೆ. ಇದಕ್ಕಿಂತ ಅತ್ಯುತ್ತಮ ನಿರ್ವಹಣೆ ಮುಂದೆ ಇರಬಹುದು ಎಂಬ ಆಶಾಭಾವನ್ನು ಹೊಂದಿರಬೇಕು. ಯಾಕೆಂದರೆ ಸಮಯವನ್ನು ಊಹಿಸುವುದು ಸರಿಯಾಗುತ್ತದೆ ಹೊರತು ನಿರ್ಣಯಿಸುವುದಲ್ಲ. ಸರ್ವಾಲಂಕಾರ ಸಂಪನ್ನಗೊಂಡ ಮೇಲೆ ಮಹಾ ಪೂಜೆ. ನಂತರ ಏನಿದ್ದರೂ ದೇವರ ದರ್ಶನ ಮಾತ್ರ. ಸಮಯಾನುಸಾರ ಅದು ಎಷ್ಟು ಹೊತ್ತು ಬೇಕಾದರೂ ಇರಬಹುದು. ಆಗ ದಾಖಲೆಯ ಪುಟಗಳನ್ನು ಹೆಚ್ಚಿಸುತ್ತಾ ಹೋಗಬಹುದು. ಆದರೆ ಮುಹೂರ್ತ ಮೀರಿದ ಮೇಲೆ ಅನಿವಾರ್ಯತೆಯ ಕಂಕಣ ಬಲವನ್ನು ಅರಸುವುದು ಅನಿವಾರ್ಯ ಎನಿಸಿದರೂ ಅದು ಅಷ್ಟು ಸೂಕ್ತವಲ್ಲ.

         ಹಲವು ವೈಭವಗಳ ಮರುಸೃಷ್ಟಿಯನ್ನು ಕಂಡಿದ್ದೇವೆ. ಈ ವೈಭವದ ದಾಖಲೆಗಳು ಕೇವಲ ಮುಮ್ಮೇಳ ಅಂದರೆ ವೇಷಧಾರಿಯನ್ನು ಅವಲಂಬಿಸಿ ಇರುವುದು ಚೋದ್ಯದ ಸಂಗತಿ. ಬಹುಷಃ ಈ ವೈಭವ ಎನ್ನುವುದು ಕಣ್ಣಿಗೆ ಕಾಣುವುದಕ್ಕೆ ಮಾತ್ರವೇ ಇರುವುದೋ ಎಂಬ ಭ್ರಮೆ. ಆದರೂ ಬಹಳಷ್ಟು ಸಮಯ ಮೀರಿ ಅವಧಿ ಭಾಧಕವಾದವುಗಳೇ. ನಮ್ಮ ಮನೋಭಾವನೆಗೆ ಅನುಸರಿಸಿ ಇದರಿಂದ ನಾವು ತೃಪ್ತರಾಗಬಹುದು. ಹೆಮ್ಮೆ ಪಟ್ಟುಕೊಳ್ಳಬಹುದು. ಆದರೂ ಅತೃಪ್ತಿಯ ಛಾಯೆ ಸುಳಿಯದೆ ಇರಲು ಸಾಧ್ಯವೇ ಇಲ್ಲ.












Thursday, November 8, 2012

ಬಲಿಪ್ಪಜ್ಜ ಬರುತ್ತಿದ್ದಾರೆ

ಈಗ ಎರಡು ದಿನ ಮೊದಲು ಮಿತ್ರ ನರಸಿಂಹ ಭಟ್ ಬೇಟಿಯಾಗಿ ಯಕ್ಷಗಾನ ತಾಳ ಮದ್ದಲೆ ಕಾರ್ಯಕ್ರಮದ ಬಗ್ಗೆ ಹೇಳಿ ಚಕಿತ ಗೊಳಿಸಿದರು. ಚಕಿತನಾಗುವುದಕ್ಕೆ ಕಾರಣ ಬೇರೇನೂ ಅಲ್ಲ. ನರಸಿಂಹಣ್ಣ ಬಲಿಪ್ಪರ ಬಗ್ಗೆ ಅಪಾರವಾದ ಅಭಿಮಾನವನ್ನೂ ಗೌರವವನ್ನು ಇಟ್ಟುಕೊಂಡವರು. ಹಾಗಾಗಿ ಅವರ ಯೋಜನೆ ಇದ್ದರೆ  ಅದು ಹೇಗಿರಬಹುದು ಎಂಬ ಊಹನೆಯೇ ನನ್ನನ್ನು ಚಕಿತನನ್ನಾಗಿ ಮಾಡಿದ್ದು. ಹಲವು ದಿನಗಳಿಂದ ಯೋಚನೆಯಾಗಿಯೇ ಇದ್ದ ನನ್ನ ಯೋಜನೆ ಅವರು ದಿಢೀರನೆ ಕಾರ್ಯರೂಪಕ್ಕೆ ತಂದಿದ್ದರು. ವೇಳೆ ದಿನಾಂಕ ಸ್ಥಳ ಹೀಗೆ ಪ್ರಾಧಮಿಕವಾದ ಎಲ್ಲಾ ಸಿದ್ದತೆಯಲ್ಲಿಯೇ ಬಂದಿದ್ದರು. ಹಿರಿಯ ಕಲಾವಿದರಾದ ಶ್ರೀ ಪ್ರಭಾಕರ ಜೋಷಿ, ಶ್ರೀ ಉಮಾಕಾಂತ್ ಭಟ್, ಜಬ್ಬಾರ್ ಸಮೋ ಇವರನ್ನೇಲ್ಲ ಒಪ್ಪಿಸಿ ಕಾರ್ಯಕ್ರಮದ ರೂಪುಷೆಯ ಬಗ್ಗೆ ಚರ್ಚಿಸುವ ಉದ್ದೇಶದಲ್ಲಿ ನನ್ನ ಬಳಿಗೆ ಬಂದಿದ್ದರು. ಹಾಗೆ ನೋಡಿದರೆ ನನ್ನಲ್ಲಿ ಚರ್ಚಿಸುವಂತಹುದೇನೂ ಇರಲಿಲ್ಲ. ಯಾಕೆಂದರೆ ಹಲವಾರು ಸಾರ್ವಜನಿಕ ಕಾರ್ಯಕ್ರಮ ಮಾಡಿ ಅನುಭವ ಇದ್ದವರು ನರಸಿಂಹಣ್ಣ. ಈಗ ತನ್ನೆಲ್ಲ ತೊಂದರೆಗಳನ್ನು ಲೆಕ್ಕಿಸದೇ ಉತ್ಸಾಹಿತರಾದದ್ದು ಯಾರೂ ಅಭಿಮಾನಿಸಬೇಕಾದದ್ದೆ. ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸುವುದೆಂದರೆ ಅದು ಸುಲಭವಲ್ಲ. ಆದರೂ ಉತ್ಸಾಹ, ಅದೇ ಯೋಚನೆಯಲ್ಲಿ ಹೇಳಿದರು, ಎಲ್ಲರೀಗೂ ಒಂದು ಮೇಲ್ ಮುಖಾಂತರ ಸುದ್ದಿ ತಿಳಿಸಿಬಿಡಿ. ಇನ್ನು ಯಾರಾದರೂ ಕಾರ್ಯಕ್ರಮ ಅದೇ ದಿನ ನಿಶ್ಚಯ ಮಾಡಿದರೆ? ಬಹುಷಃ ಅವರು ಈ ರೀತಿ ಗಾಬರಿ ಮತ್ತು ಕಾಳಜಿ ವ್ಯಕ್ತ ಪಡಿಸದೇ ಇರುತ್ತಿದ್ದರೆ ನಾನು ಇದನ್ನು ಬರೆಯುತ್ತಿದ್ದೆನೋ ಇಲ್ಲವೋ ತಿಳಿಯದು. ಅವರ ಈ ಬಗೆಯ ಚಿಂತನೆ ಮಾತ್ರ ನನ್ನನ್ನು ಗಾಢವಾಗಿ ಯೋಚಿಸುವಂತೆ ಮಾಡಿತು. ಜಾಗ್ರತರಾಗಿ ಯಾವ ಜಾಗರೂಕತೆಯನ್ನು ಹೇಗೆ ತೆಗೆದುಕೊಂಡರು ನಮ್ಮ ವ್ಯವಸ್ಥೆ ಇನ್ನೂ ರಾಜಕೀಯ ಮುಕ್ತವಾಗಿಲ್ಲವಲ್ಲ ಎಂದು ಬೇಸರಿಸುಂತಾಯಿತು. ಹಿಂದೂಮ್ಮೆ ಬರೆದಿದ್ದೆ. ಕಾರ್ಯಕ್ರಮ ಯಶಸ್ಸಿನಲ್ಲಿ ಈ ರಾಜಕೀಯದ ಪ್ರಭಾವವೂ ಸಾಕಷ್ಟಿದೆ. ಅದೂ ಬೆಂಗಳೂರಿನಂತಹ ಸೀಮಿತ ಪ್ರೇಕ್ಷಕ ವಲಯದಲ್ಲಿ ಅತ್ಯಂತ ಹೆಚ್ಚು ಜೀವಂತವಾಗಿರಬೇಕಾದರೆ, ಅದು, ಅದು ಮಾತ್ರ ಚಿಂತಿಸುವ ಹಾಗೆ ಮಾಡಿದ್ದು. ">ಹಿಂದೆ ರಾಜ ಮಹಾರಾಜರುಗಳು ರಾಜ್ಯ ಉದ್ದಾರಕ್ಕಾಗಿ, ಪ್ರಜಾಕ್ಷೇಮಕ್ಕಾಗಿ ಮಂತ್ರಾಲೋಚನೆ ಮಾಡಿಕೊಂಡು ರಾಜ ನೀತಿಯನ್ನು ಪಾಲಿಸುತ್ತ ಆಳ್ವಿಕೆ ನಡೆಸುತ್ತಿದ್ದರೆ ಅದೇ ರಾಜಕೀಯ ಎಂದು ಸಾಮಾನ್ಯರಿಂದಲೂ ಗುರುತಿಸಲ್ಪಡುತ್ತಿತ್ತು. ಅಂತಹ ಗೌರವ ಭಾವದ ಹಿರಿತನದ ಪ್ರಕ್ರಿಯಯ ಭಾವವೇ ಇಂದು ಬದಲಾಗಿಬಿಟ್ಟು ಅದು ಯಕ್ಷಗಾನಕ್ಕೂ ಹಬ್ಬಿ ಅಭಿಮಾನಿಗಳ ನಿದ್ದೆಗೆಡಿಸುವುದು ಸುಳ್ಳಲ್ಲ. ಯಕ್ಷಗಾನ ಮೊದಲೆ ನಿದ್ದೆಗೆಡುವ ಕಲೆ ಅದರಲ್ಲಿ ಕಣ್ಮನ ಪಾವನವಾದರೆ ಇದರಲ್ಲಿ ಮಂಡೆಯೇ ಹಾಳಾಗಿ ಬಿಡ್ತದೆ.ನಾವು ಯಕ್ಷಗಾನ ದೃಷ್ಟಿಯಲ್ಲಿಟ್ಟು ಕಾರ್ಯಕ್ರಮ ರೂಪಿಸಬೇಕು. ಪ್ರೇಕ್ಷಕರನ್ನು ಆನಂತರ ಗಮನಿಸಬೇಕು” ನನ್ನ ಅನಿಸಿಕೆ ಹೇಳಿದೆ. ಅದಕ್ಕೆ ಕಾರಣವಿಷ್ಟೆ. ಒತ್ತಾಯದಿಂದ ಪ್ರೇಕ್ಷಕರನ್ನು ಸೆಳೆಯುವ ಕ್ರಮ ಸರಿಯಲ್ಲ. ಅಭಿಮಾನ ಇದ್ದವರು ಅಭಿರುಚಿ ಬೆಳೆಸಿಕೊಂಡವರು ಬಂದರಷ್ಟೇ ಕಾರ್ಯಕ್ರಮ ಅರ್ಥಪೂರ್ಣ ಎನಿಸುವುದು. ಕಲೆಯನ್ನು ಮನಸ್ಸಿಗೆ ಮುದನೀಡುವುದಕ್ಕಾಗಿ ಅನುಭವಿಸಬೇಕೇ ಹೊರತು ಯಾತನೆ ಅನುಭವಿಸುವುದಕ್ಕಾಗಿ ಅಲ್ಲ. ಬಹುಷಃ ಚಿಕಿತ್ಸೆಯ ರೂಪದಲ್ಲಿ ಕೆಲವೊಮ್ಬಲವಂತದಲ್ಲಿ ಯಾತನೆ ಅನುಭವಿಸುವುದುಂಟು. ಆ ರೀತಿಯಲ್ಲಿ ಅನುಭವಿಸಬೇಕೆ? ಎಷ್ಟೋ ಬಾರಿ ಕಾರ್ಯಕ್ರಮಕ್ಕೆ ಹೋದಾಗ ಕಂಡದ್ದಿದೆ ಸಂಘಟಕರ ಮೇಲಿನ ದಾಕ್ಷಿಣ್ಯಕ್ಕೆ ಹಲವರು ಕಾರ್ಯಕ್ರಮಕ್ಕೆ ಬಂದಂತೆ ಮಾಡಿ ಅಸಹನೆ ಸ್ವತಹ ಅನುಭವಿಸುವುದಲ್ಲದೆ ಪರರಿಗೂ ಅದನ್ನು ವರ್ಗಾಯಿಸಿಬಿಡುತ್ತಾರೆ. ಈ ನಿಟ್ಟಿನಲ್ಲಿ ಕಲೆಗೆ ಅದರಲ್ಲೂ ಯಕ್ಷಗಾನಕ್ಕೆ ಒತ್ತಾಯದ ಪ್ರೇಕ್ಷಕನ ಅಗತ್ಯವಿದೇಯೇ? ಸಂಖ್ಯೆಯಲ್ಲಿ ಪ್ರೇಕ್ಷಕ ಇರುವುದಕ್ಕಿಂತ ಇರುವ ಪ್ರೇಕ್ಷಕ ಸ್ವತಂತ್ರವಾಗಿ ಅನುಭವಿಸುವಂತೆ ಇರಬೇಕು. >ಬೆಂಗಳೂರಿನಂತಹ ನಗರದಲ್ಲಿ ಯಕ್ಷಗಾನಕ್ಕೆ ಬಹಳ ಸೀಮಿತ ಪ್ರೇಕ್ಷಕ ಸಂಖ್ಯೆ ಇರುತ್ತದೆ. ಇದನ್ನು ನೋಡುವುದಕ್ಕೆ ಕೇಳುವುದಕ್ಕೆ ಕೇವಲ ಅಭಿಮಾನ ಮಾತ್ರ ಇದ್ದರೆ ಸಾಲದು ಸಾಕಷ್ಟು ಶ್ರದ್ದೆ ಮತ್ತು ಪ್ರಯತ್ನವನ್ನೂ ಹಾಕಬೇಕಾಗುತ್ತದೆ. ಈ ಬಗೆಯಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಸದಾ ಹೋಗುತ್ತಿದ್ದರೆ ನಮ್ಮ ಅಭಿಮಾನ ಪ್ರೀತಿ ಲೆಕ್ಕಕ್ಕೆ ಬರುವುದು ಆನಂತರ. ನಮಗೆ ಅರಿವಿಲ್ಲದೆಯೇ ಕಾರ್ಯಕ್ರಮ ನೀಯೋಜಕರು ಸೃಷ್ಟಿಸಿದ ಪ್ರೇಕ್ಷಕ ಲೆಕ್ಕಕ್ಕೆ ನಾವು ಸೇರಿಕೊಳ್ಳುತ್ತೇವೆ. ಅಂದರೆ ಅವರಿಂದಾಗಿ ನಾವು ಯಕ್ಷಗಾನ ಪ್ರೇಕ್ಷಕರಾದ ಭಾವನೆ ಉಂಟಾಗಿಬಿಡುತ್ತದೆ. ಇದೊಂದು ರೀತಿಯ ರಾಜಕೀಯಕ್ಕೆ ಕಾರಣವಾಗುವುದು ಮಾತ್ರ ವಿಪರ್ಯಾಸ. ತಮ್ಮ ಪ್ರೇಕ್ಷಕ ವರ್ಗ ಎಂಬ ಅನಧಿಕೃತ ಮುದ್ರೆ ನಮಗರಿವಿಲ್ಲದೆಯೇ ಬಿದ್ದುಬಿಡುತ್ತದೆ.ಬೀದಿಯಲ್ಲಿ ಸ್ವತಂತ್ರವಾಗಿ ಹೋಗುತ್ತಿರುವ ಗ್ರಾಹಕನನ್ನು ವರ್ತಕರಿಬ್ಬರು ತಮ್ಮ ಸ್ಪರ್ಧೆಗೆ ಬಳಸಿಕೊಂಡಂತೆ. ಇದು ಒಂದು ರೀತಿಯಲ್ಲಿ ಪ್ರೇಕ್ಷಕರಿಗಾಗಿ ರಾಜಕೀಯವಾಗುವುದು.ಹೀಗಾಗಿ ನನ್ನ ಯೋಚನೆ ಯಕ್ಷಗಾನ ಕಾರ್ಯಕ್ರಮಗಳು ಆಹ್ವಾನವಾಗದೇ ಸೂಚನೆಯಾದರೆ ಹೇಗೆ? ಯಾಕೆಂದರೆ ಕರೆಯದೇ ಇದ್ದರೂ, ಸೆಳೆಯುವಂತಹ ಚುಂಬಕ ಶಕ್ತಿ ಯಕ್ಷಗಾನದಲ್ಲಿ ಇದೆ ಎಂಬ ವಿಶ್ವಾಸ ನನ್ನದು. ಬರೀ ಚೆಂಡೆಯ ಸದ್ದಿಗೆ ನಿಮಿರಿಸುವ ಕಿವಿ ಇದೆಯಲ್ಲ? ನಾವು ನಮ್ಮ ಕೆಲಸ ಮಾಡುವುದು.. ಅದರ ಸೂಚನೆ ಮಾತ್ರ, ಅಸಕ್ತಿಯಿದ್ದವರು ಸುಮ್ಮನೆ ಕುಳಿತಿರಲು ಸಾಧ್ಯವೇ? ನಿಮಿರುವ ಕಿವಿ ಅರಳುವ ಮನ ತಣಿಯುವ ಹೃದಯ ವ್ಯಕ್ತವಾಗುವ ಅಭಿಮಾನ ಇಷ್ಟಿದ್ದರೆ ಅರ್ಥಪೂರ್ಣವಾಗುತ್ತದೆ. ಯಕ್ಷಗಾನದಿಂದ ಪ್ರಚೋದಕನಾಗುವ ಪ್ರೇಕ್ಷಕ, ಪ್ರೇಕ್ಷಕನಿಂದ ಪ್ರಚೋದನೆಯಾಗುವ ಕಲಾವಿದ ಈ ಸಮತ್ರಿಕೋನದ ಮಧ್ಯೆ ವಿಜ್ರಂಭಿಸುವ ಕಾರ್ಯಕ್ರಮ ಬರೀ ಕಾರ್ಯಕ್ರಮವಾಗುವುದಿಲ್ಲ. ಕಲೆಯ ಆರಾಧನೆ ಎಂದಾಗುವುದು ಆಗಲೇ. ಭಕ್ತ ತಾನಾಗಿ ದೇವಾಲಯಕ್ಕೆ ಬಂದು ಪೂಜೆಯನ್ನು ಕೈಗೊಂಡಾಗಲೇ ಅದು ನಿಜವಾದ ಪೂಜೆಯಾಗುವುದು. ಆವಾಗ ಬಂದ ಪ್ರೇಕ್ಷಕ ಅಪ್ಪಟ ಯಕ್ಷಗಾನ ಪ್ರೇಕ್ಷಕನಾಗಿ ಕಾರ್ಯಕ್ರಮ ಮತ್ತಷ್ಟೂ ಅರ್ಥ ಪೂರ್ಣವಾಗುತ್ತದೆ. ವೈಯಕ್ತಿಕ ಹಿತಾಸಕ್ತಿ , ರಾಜಕೀಯದ ದ್ವೇಷ ವೈಷಮ್ಯಗಳು ಯಕ್ಷಗಾನದ ವಿಚಾರದಲ್ಲಿ ಬದಿಗೆ ಸರಿದು ನಿಲ್ಲಬೇಕು. ಸಹೋದರತ್ವದ ಸಾಹೋದರ್ಯದಲ್ಲಿ ಯಕ್ಷಗಾನ ಇವೆಲ್ಲವನ್ನು ಮೀರಿ ನಿಲ್ಲಬೇಕು. ಯಕ್ಷಗಾನ ತನ್ನ ಉಳಿವಿಗೇ ಹೋರಾಡುವಂತಹ ಸನ್ನಿವೇಶದಲ್ಲಿಈ ಚಿಲ್ಲರೆ ರಾಜಕೀಯಗಳು ಕಲೆಗೆ ಪ್ರತಿಬಂಧಕಗಳಾಗಬಾರದು.ಸುಸಂಸ್ಕೃತ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಈ ಮೂಲಕ ಬಿತ್ತರಗೊಳ್ಳಬೇಕು.ಯಕ್ಷಗಾನ ಪರಂಪರೆಯ ರಸಧಾರೆಯಲ್ಲಿ ಈ ರಾಜಕೀಯ ದ್ವೇಷಾಸೂಯೆಗಳೆಂಬ ಮಾಲಿನ್ಯ ಬದಿಗೆ ನಿಂತು ಪರಿಶುಭ್ರ ಪ್ರವಾಹ ಹರಿಯಬೇಕು. ಎಲ್ಲವನ್ನೂ ಮರೆತು ಇದೀಗ ಮೈ ಮನ ಪುಳಕಿತರಾಗುವ ಸನ್ನಿವೇಶ ಬಂದಿದೆ. ನಮ್ಮ ಬಲಿಪ್ಪಜ್ಜ ಬರುತ್ತಿದ್ದಾರೆ. ವರ್ಷಾಂತ್ಯದ ಚಳಿಗಾಲದ ಸಮಯ. ರೋಮ ರೋಮಗಳೂ ಸೆಟೆದು ನಿಲ್ಲುವಂತಹ ತಂಗಾಳಿಗೆ ಯಕ್ಷಾಗಾನದ ಝೇಂಕಾರ ಮಿಳಿತಗೊಂಡರೆ ರೋಮಗಳು ಮತ್ತಷ್ಟು ಸೆಟೆದು ನಿಲ್ಲಿವುದರಲ್ಲಿ ಅನುಮಾನವಿಲ್ಲ. ಜತೆಗೆ ಹಿರಿಯ ವಿದ್ವಾಂಸರೂ ಯಕ್ಷಗಾನ ವಾಕ್ ಪ್ರಪಂಚದ<ಮತ್ಸದ್ಧಿಗಳೂ ಆದ ಶ್ರೀ ಪ್ರಭಾಕರ ಜೋಷಿ ಮತ್ತು ವಿದ್ವಾನ್ ಶ್ರೀ ಉಮಾಕಾಂತ್ ಭಟ್ ರವರ ವಿದ್ವತ್ ಪೂರ್ಣ ಮಾತುಗಾರಿಕೆ ಮಾತ್ರವಲ್ಲ ಪರಂಪರೆಯ ಭಾಗವತಿಕೆಯ, ಯುವ ಪೀಳಿಗೆಯ ಭಾಗವತ ಶ್ರೀ ಬಲಿಪ ಶಿವಶಂಕರರ ಮಾಧುರ್ಯದ ಭಾಗವತಿಕೆಗೆ ಕಾದು ಕುಳಿತುಕೊಳ್ಳುವ ಆ ತವಕವೇ ಅಹ್ಲಾದನೀಯ ಅನುಭವ.

Saturday, November 3, 2012

ಯಕ್ಷವಾಹಿನಿ


 ಕೆಲವು ವರ್ಷಗಳ ಕೆಳಗೆ ಈ ಅಂತರ್ಜಾಲದ ಲೋಕಕ್ಕೆ ಪ್ರವೇಶ ಮಾಡಿದಾಗ ಯಕ್ಷಗಾನದ ಶಬ್ದಗಳನ್ನು ಒತ್ತಿದಲ್ಲಿ ಕೆಲವೇ ಕೆಲವು ಮಾಹಿತಿ ಸಿಗುತ್ತಿತ್ತು. ಆಗ ಇದ್ದ ಯಕ್ಷಗಾನದ ಏಕೈಕ ವೆಬ್ ಸೈಟ್ ಸಾಧ್ಯವಾದಷ್ಟು ಮಟ್ಟಿಗೆ ಸುಂದರವಾಗಿ ತನ್ನದೇ ರೀತಿಯಲ್ಲಿ ಹಲವು ಮಾಹಿತಿಗಳನ್ನು ಒದಗಿಸುತ್ತಿತ್ತು. ಆ ಕಾಲದಲ್ಲಿ ಆರ್ಕುಟ್ ಮುಂತಾದ ಸಾರ್ವಜನಿಕ ವೆಬ್ ಲೋಕ ಉಂಟು ಮಾಡಿದ ಕ್ರಾಂತಿ ಅಷ್ಟಿಷ್ಟಲ್ಲ. ಯಾವುದು ಹೇಗೆ ಪರಿಣಾಮ ಬೀರಲಿ ನಾವು ಕೆಲವು ಮಿತ್ರರಂತು ಈ ಆರ್ಕುಟ್ ಜಗತ್ತನ್ನು ಮರೆಯುವಂತಿಲ್ಲ. ಕಾರಣವಿಷ್ಟೇ ನಮ್ಮ ಇರುವಿಕೆಗೆ ಸಾಕ್ಷಿಯಾಗಿ ನಿಂತು ಬೆಸೆದ ಲೋಕ  ಈ ಅಂತರ್ಜಾಲ ಲೋಕ. ಪರಸ್ಪರ ಪರಿಚಯವಿಲ್ಲದೇನೆ ಈ ಆಟದ ಮರುಳರು ಒಂದಾದ ಬಗೆ ಮಾತ್ರ ನಮ್ಮ ಪಾಲಿಗೆ ಅದ್ಭುತ. ಕೇವಲ ಐದಾರು ಮಂದಿಗಳು ಮಾತ್ರವೇ ಆದರೂ ನಮ್ಮ ಮನದಲ್ಲಿ ಹುದುಗಿಕೊಂಡ ಯಕ್ಷಗಾನದ ಅಭಿಮಾನ ನಮ್ಮೊಳಗೆ ಕೆಲವೊಂದು ಕನಸನ್ನು, ಬಯಕೆಗಳನ್ನು ಉಂಟು ಮಾಡಿದ್ದು ಬಹಳ ಮಹತ್ವವೆನಿಸುತ್ತದೆ.  
ಆವಾಗಿನ ಸಮಯ ಯಕ್ಷಗಾನದ ಬಗ್ಗೆ ಅದರಲ್ಲೂ ತೆಂಕು ತಿಟ್ಟಿನ ಬಗ್ಗೆ ಬಹಳ ಅತ್ಯಲ್ಪ ಮಾಹಿತಿ ಮಾತ್ರವೇ ಲಭ್ಯವಿರುತ್ತಿತ್ತು. ಆಗ ಲಕ್ಷ್ಮೀನಾರಾಯಣ (ಲಾನ) ಸೃಷ್ಟಿಸಿದ ಯಕ್ಷಗಾನ ಅಂತರ್ಜಾಲ ಹಲವರಿಗೆ ಯಕ್ಷಗಾನದ ದ್ವನಿಯನ್ನು ಅಂತರ್ಜಾಲದಲ್ಲಿ ಕೇಳುವಂತೆ ಮಾಡಿತ್ತು. ತಣಿಯದ ದಾಹಕ್ಕೆ ಅಮೃತಸಿಂಚನವಾಗಿದ್ದ ಈ ತಾಣ ನಮ್ಮೋಳಗೆ ಮತ್ತೂ ಮಹದಾಶೆಗಳನ್ನು ಪ್ರಚೋದಿಸುವಂತೆ ಮಾಡಿತ್ತು.
ಆಗ  ಯಕ್ಷಗಾನ ಆಲಿಸುವುದಕ್ಕೂ ಈ ನಗರದಲ್ಲಿ  ಬಹಳ ಕಷ್ಟವಾಗಿತ್ತು. ದಿನವೂ ಕರ್ಣ ತಮ್ಮಟೆಯ ಸತ್ವ ಪರೀಕ್ಷೆಯನ್ನು ಮಾಡುವ ಈ ಎಫ್ ಎಂ ರೇಡಿಯೋ ಎಂಬ ಭೂತ ಚೇಷ್ಟೆ ಸಹಿಸದೆ ಬೇರೆ ದಾರಿಯೇ ಇಲ್ಲವಾಗಿತ್ತು. ಯಕ್ಷಗಾನ ಕೇಳೋಣವೋ ಹಳೆಯದಾದ ಸಾಕಷ್ಟು ಧೂಳನ್ನು ತುಂಬಿಕೊಂಡು ತಾನಿನ್ನು ಅಸಮರ್ಥನೆಂದು ಗೋಳಿಡುವ ಕ್ಯಾಸೆಟ್ ಅದನ್ನು ಸ್ವಲ್ಪ ತಿರುಗಿಸೋಣವೋ ಹಳೆಯದಾದ ಟೇಪ್ ರೆಕಾರ್ಡರ್ ಕೆಲಸ ಮಾಡದೆ ತಳ್ಳಿ ತಳ್ಳಿ ಅತ್ತ ಅಟ್ಟಕ್ಕೆ ಸೇರಿಯಾಗಿತ್ತು. ಬೇರೆಲ್ಲ ಸಿಕ್ಕರೂ ಯಕ್ಷಗಾನವೊಂದು ಸಿಗದ ಹಪಹಪಿಕೆ ನಮ್ಮಲ್ಲಿರುವಾಗ ಕೆಲವರು ಸಿಕ್ಕಿದ ಯಕ್ಷಗಾನ ತುಣುಕುಗಳನ್ನು ತಮ್ಮೊಳಗೆ ಹಂಚಿಕೊಂಡು ಅದರಲ್ಲೇ ತೃಪ್ತಿ ಪಟ್ಟುಕೊಳ್ಳಲಾರಂಭಿಸಿದರು. ಸಿಕ್ಕಿದ ವೀಡಿಯೊ ತುಣುಕನ್ನು YOUTUBE  ಮುಂತಾದ ಜಾಲತಾಣಗಳಿಗೆ ಏರಿಸಿ ಸಂತಸ ಪಡುತ್ತಿದ್ದೆವು. ಆಗ ಅಂತರ್ಜಾಲದಲ್ಲಿ ಹುಡುಕಿದರೆ ಸಾಕಷ್ಟು ಮಾಹಿತಿಯು ಸಿಗದಾಗ ಎಲ್ಲರೂ ಸೇರಿ ಯಕ್ಷಗಾನದ ಬಗ್ಗೆ ಅತ್ಯಲ್ಪವಾದರೂ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಾಗಲೆಂದು ಹಲವಾರು ವಿಡಿಯೋಗಳನ್ನು ಧ್ವನಿ ಮುದ್ರಣಗಳನ್ನು  ಅಲ್ಲಿ ಏರಿಸಿದೆವು. ಇಂದು ಯಕ್ಷಗಾನ ಎಂದು ಸುಮ್ಮನೇ ಅದುಮಿದರೂ ಈ ಬಗ್ಗೆ ಹಲವಾರು ಮಾಹಿತಿಗಳು  ಬಗೆ ಬಗೆಯ ಯಕ್ಷಗಾನದ ವೈವಿಧ್ಯತೆಯ ಮುಖದರ್ಶನವಾಗಿಬಿಡುತ್ತದೆ.
ಆಗ ಯಕ್ಷಗಾನದ ದ್ವನಿಮುದ್ರಣಗಳು ಸಿಗುತ್ತಿದ್ದುದೇ ಅಪರೂಪ. ಎಲ್ಲೋ ಕೆಲವರು ಸ್ವಂತ ಆಸಕ್ತಿಯಿಂದ ತಮ್ಮಲ್ಲಿರುವ ಹಳೆಯ ಕ್ಯಾಸೆಟ್ ರೂಪದ ಸಂಗ್ರಹಗಳನ್ನು ಸ್ವಂತ ಖರ್ಚಿನಲ್ಲಿ ಸಿ. ಡಿ ಗೆ ರೂಪಾಂತರಿಸಿ ಕೇಳುತ್ತಿದ್ದರೆ, ಅದರಲ್ಲಿ ಕೆಲವನ್ನು ನೀಡುತ್ತಿದ್ದರು. ಸ್ವಂತ ಖರ್ಚಿನಲ್ಲಿ ಮಾಡಿದ ಕಾರಣ ಅವುಗಳನ್ನು ಯಾರಿಗೂ ನೀಡದೆ ಸಾರ್ವಜನಿಕವಾಗಿ ಹೊರಹಾಕದೇ ಇರುತ್ತಿದ್ದರು. ಆದರೂ ಕೆಲವೊಂದು ಯಕ್ಷಗಾನ ತುಣುಕುಗಳು ಯಕ್ಷಗಾನ ಪದಗಳು ಅಲ್ಲೊ ಇಲ್ಲೋ ಸಿಗುತ್ತ ನಮ್ಮ ನಡುವೆ ಒಡಾದಿಕೊಂಡಿತ್ತು. ಹಿರಿಯ ಭಾಗವತರ ಹಲವು ಪದಗಳನ್ನು ಸಂಗ್ರಹಿಸಿಟ್ಟ ಮಿಡಿ ಉಪ್ಪಿನ ಕಾಯಿಯಂತೆ.  ಸ್ವಲ್ಪ ಸ್ವಲ್ಪವಾಗಿ ಕೇಳುತ್ತಾ ಅದರಲ್ಲೇ ತೃಪ್ತಿಪಟ್ಟುಕೊಳ್ಳುವ ಅನಿವಾರ್ಯತೆಗೆ ಒಳಗಾಗುತ್ತಿದ್ದೆವು. ಆದಿ ಶಂಕರಾಚರ್ಯ ಕ್ಯಾಸೆಟ್ ನ   ಹೊಳ್ಳರ  “ ಎನ್ನ ಶಂಕರಾ...”  ದಿನವಿಡೀ ಮೊಳಗುತ್ತ ಇರುತ್ತಿತ್ತು.
          ಆಗ ಧ್ವನಿಮುದ್ರಣದ ಸಂಗ್ರದ ಯೋಜನೆ ಮತ್ತು ಅದರ ರೂಪುರೇಷೆ ನಾನು ಸಿದ್ದ ಪಡಿಸಿದೆ. ಕ್ಯಾಸೆಟ್ ನಿಂದ ಸಿ.ಡಿ. ಗೆ ರೂಪಾಂತರಿಸುವ ತಂತ್ರಜ್ಞಾನಗಳನ್ನು ಕೇಳಿ ತಿಳಿದು ಆಬಗೆಯಲ್ಲಿ ಉದ್ಯುಕ್ತನಾಗಿ ಅಲ್ಪ ಯಶಸ್ಸನ್ನು ಗಳಿಸಿದಾಗ ಆದ ಅನಂದ ಅಷ್ಟಿಷ್ಟಲ್ಲ. ಸಿಕ್ಕ ಸಿಕ್ಕವರಲ್ಲಿ ಅವರ ಕ್ಯಾಸೆಟ್ ಸಂಗ್ರಹಿಸಿ ಬಿಡುವಿನ ವೇಳೆಯಲ್ಲಿ  ( ಇದಕ್ಕಾಗಿ ಬಿಡುವು ಮಾಡಿಕೊಂಡದ್ದೇ ಅಧಿಕ) ಅದನ್ನು ರೂಪಾಂತರಿಸಿ ಅದನ್ನು ನಾನು ಸ್ವತಹ ಕೇಳಿ ಮಿತ್ರರಿಗೆ ಹಂಚಿಕೊಂಡು ಪಡುತ್ತಿದ್ದ ಆನಂದ ಅಷ್ಟಿಷ್ಟಲ್ಲ. ಈಗಲೂ ಅದು ನಿರಂತರವಾಗಿ ಮುಂದುವರೆದಿದೆ. ಒಂದು ವೆತ್ಯಾಸವೆಂದರೆ ಆಗ ಅದಕ್ಕಾಗಿ ಅಲೆಯುತ್ತಿದ್ದ ನನಗೆ ಇಂದು ಹಲವು ಮಿತ್ರರು ಸ್ವತಹ ಅವರೇ ತಂದು ನೀಡುತ್ತಾರೆ. ಹಾಗೆ ಯಾವುದೇ ಸ್ವಾರ್ಥ ಫಲಾಪೇಕ್ಷೆ ಇಲ್ಲದೇ ಹುಟ್ಟಿಕೊಂಡ ಹವ್ಯಾಸ ಇದು. ಇದರ ಬಗ್ಗೆ ಹಿಂದೆ ಒಂದು ಸಲ ಇದೇ ಪುಟಗಳಲ್ಲಿ ಮರುಳು ಅಲ್ಲವೀ ಹವ್ಯಾಸ. ಎಂದು ಬರೆದಿದ್ದೆ. 

          ಕಲೆ ಸಾಹಿತ್ಯ ಹಂಚಿಕೊಂಡು ಸವಿದಷ್ಟು ಅದಕ್ಕೆ ರುಚಿ ಅಧಿಕವಾಗುತ್ತದೆ. ಅದಕ್ಕಾಗಿ ಪ್ರತಿ ನಿತ್ಯ ನಾನು ಕೇಳಿದ ಯಕ್ಷಗಾನದಿಂದ ಒಂದೊಂದೇ ಪದಗಳನ್ನು ಮಿತ್ರರೊಂದಿಗೆ ಹಂಚಿಕೊಳ್ಳುತ್ತಾ ಸವಿಯಲಾರಂಭಿಸಿದ ಹವ್ಯಾಸ ಇಂದು ಅದರದ್ದೇ ಅದ ಪ್ರತ್ಯೇಕ ಕ್ಸೇತ್ರವನ್ನೇ ಸೃಷ್ಟಿಸಿದೆ. ಸಮಾನ ಅಭಿರುಚಿಯ ನಾಲ್ಕೈದು ಮಿತ್ರರೊಂದಿಗೆ ತೊಡಗಿಕೊಂಡ ಹವ್ಯಾಸ ಈಗ ವಿಶ್ವದಾದ್ಯಂತ ಮಿತ್ರರಿಗೆ ಯಕ್ಷಗಾನ ಆಸ್ವಾದನೆಯ ಕಿಂಚಿತ್ ಬಯಕೆಯನ್ನು ತಣಿಸುವಂತೆ ಮಾಡಿದೆ. ಈಗಲೂ ಹಲವರು ತಮ್ಮ ಮೈಲ್ ವಿಳಾಸವನ್ನು ಕಳಿಸಿ ಆ ಮೈಲ್ ಸಮೂಹಕ್ಕೆ ತಮ್ಮದನ್ನು  ಸೇರಿಸುವಂತೆ ಕೇಳಿಕೊಳ್ಳುತ್ತಾರೆ.    ಹಲವರ ಸಂತಸದ ಪ್ರತಿಕ್ರಿಯೆ ಬಂದಾಗ ಇದೊಂದು ಹವ್ಯಾಸ ಹುಟ್ಟು ಹಾಕಿದ್ದರ ಬಗ್ಗೆ ಅಭಿಮಾನವೆನಿಸುತ್ತದೆ. ಈ ಮೂಲಕ ಹಲವು ಸನ್ಮಿತ್ರರ ಪರಿಚಯ ಮತ್ತು ಒಡನಾಟದ ಸುಖ ಲಭಿಸಿದೆ. ಅಪರಿಚಿತರೂ ಈ ಮೂಲಕ ಪರಿಚಿತ ನಗುವನ್ನು ಬೀರುವಂತೆ ಪ್ರೇರೇಪಣೆ ಗಳಿಸಿದ್ದರೆ ಅದರ ಶ್ರೇಯಸ್ಸು ಯಕ್ಷಗಾನಕ್ಕೆ ಮತ್ತು ಅದರ ಕಲಾವಿದರಿಗೆ ಸಲ್ಲಬೇಕು. ಹೀಗೆ ಮರೆಯದ ಚುಂಬಕ ಸ್ನೇಹ ಸಿಂಚನವನ್ನುಂಟು ಮಾಡುವ ಈ ಕಿರು ಯಕ್ಷಗಾನ ಪ್ರಸಾರ ಅಂತರ್ಜಾಲವನ್ನು ಹೊಕ್ಕವರಿಗೆ ಸ್ನೇಹದ ಅಂತರಂಗದರ್ಶನವನ್ನು ಮಾಡುತ್ತದೆ. ಈ ಮೇಲ್ ನಿಂದ ಮೈಲಾಚೆಗೆ  ಹರಿಯುವ ಈ ಯಕ್ಷಗಂಗೆ ಅದೆಷ್ಟು ಜನರ ಕಿವಿಯನ್ನು ಪಾವನಗೊಳಿಸುತ್ತದೋ ಅರಿಯದು. ಈ ನಡುವೆ ಆಗುವ ವಿಚಿತ್ರ ಅನುಭವಗಳು ಒಂದು ಬಗೆಯಾಗಿರುತ್ತದೆ.
 ಹಲವು ಸಲ ಊರಲ್ಲಿ ಆಟ ಆಡಿಸುವುದಿದ್ದರೆ ಬಯಲು ಅಥವಾ ಮೈದಾನ ಎಲ್ಲೆಡೆ ಇರುವುದಿಲ್ಲ. ಅವಾಗ ಮುಳಿ ಹುಲ್ಲು ಬೆಳೆಯಲೆಂದು ಬಿಟ್ಟ ಖಾಲಿ ಸ್ಥಳದಲ್ಲೇ ಆಟವಾಡುತ್ತಾರೆ. ಅತ್ತ ಯಾರೂ ಸಾರ್ವಜನಿಕವಾಗಿ ಓಡಾಡಬಾರದೆಂದು ಕಟ್ಟಿದ ಕಲ್ಲಿನ ಕೋಟೆಯನ್ನು ಒಂದೆಡೆ ಒಡೆದು ಇದಕ್ಕೆ ತಾತ್ಕಾಲಿಕ ಅನುಕೂಲ ಮಾಡಿಕೊಡುತ್ತಾರೆ. ಆ ರಹದಾರಿ ಕೇವಲ ಅ ದಿನಕ್ಕೆ ಮಾತ್ರವೇ ಸೀಮಿತವಾಗಿರುತ್ತದೆ. ಆದರೆ ಆಟ ಆಡಿ ಮೇಳ ಹೋದ ಮೇಲೂ ಆ ರಹದಾರಿ ಹಾಗೇ ತೆರೆದಿರುತ್ತದೆ. ಯಕ್ಷಗಾನದ ಉದ್ದೇಶಕ್ಕಾಗಿ ತೆರೆದಿಟ್ಟ ದಾರಿ ಆಮೇಲೆ ಬೇರೆ ಖಾಸಗೀ ಉದ್ದೇಶಕ್ಕೆ ಬಳಕೆಯಾಗುವಂತೆ ಯಕ್ಷಗಾನ ಮಿತ್ರರ ಮೈಲ್ ಗ್ರೂಪ್ ಈಗೀಗ ಅನ್ಯ ವಿಷಯಗಳಿಗೆ ಬಳಕೆಯಾಗುವಾಗ ಮಾತ್ರ ಗಾಬರಿಯಾಗುತ್ತದೆ. ತಮ್ಮ ಖಾಸಗೀ ವಿಚಾರಗಳನ್ನು ಹರಿಸಲು ದಾರಿ ಇಲ್ಲಿ ಕಂಡುಕೊಂಡಾಗ ಬಹಳ ಖೇದವಾಗುತ್ತದೆ. ಹೆಚ್ಚಿನ ಎಲ್ಲ ಮಿತ್ರರು ಇದರಿಂದ ಕಿರಿ ಕಿರಿಯನ್ನು ಅನುಭವಿಸಿದರೂ, ನನ್ನ ಮೇಲೆ ಹರಿ ಹಾಯಬಹುದಾಗಿದ್ದರೂ ಯಕ್ಷಗಾನದ ಮೇಲಿನ ಗೌರವಕ್ಕೆ ಮತ್ತು ಶಿಷ್ಟಾಚಾರಕ್ಕೆ ಸುಮ್ಮನಿರುತ್ತಾರೆ. ಎಲ್ಲರಿಗೂ ನನ್ನ ಬಗ್ಗೆ ಅರಿತಿರುವುದರಿಂದ ನಾನು ಸಮಾಧಾನ ಪಟ್ಟುಕೊಂಡರೂ ಈ ದುರ್ಬಳಕೆಗೆ ಏನೂ ಮಾಡಲಾಗದ ಅಸಹಾಯಕತೆಗೆ ಬೇಸರವಾಗುತ್ತದೆ.  ಯಕ್ಷಗಾನಕ್ಕಾಗಿ ತೆರೆದಿಟ್ಟ ದಾರಿ ಇನ್ನಾರೋ ದುರ್ಬಳಕೆ ಮಾಡಿ ಅತಿ ಬುದ್ಧಿವಂತಿಕೆ ತೋರುವಾಗ ಆ ಮುಳಿಹಿತ್ತಲಿನ ಯಜಮಾನ ತಾನೆ ಏನು ಮಾಡಿಯಾನು. ಕಲ್ಲು ಕಟ್ಟಿ ಅದನ್ನು ಪೂರ್ಣ ಮುಚ್ಚಿ ಬಿಡಬಹುದಾಗಿದ್ದರೂ ಮುಂದಿನ ಸಲ ಆಟ ಆಡಿಸುವವನು ಕೇಳಿದಾಗ ಮರು ಯೋಚಿಸುವಂತೆ ಮಾಡುವುದಿಲ್ಲವೇ? ಅಲ್ಲಿ ಕಲ್ಲಿನ ಕೋಟೆಯನ್ನು ಪುನಹ ಕಟ್ಟಿ ಅನೈಚ್ಚಿಕ ಸಂಚಾರವನ್ನು ತಡೆಯಬಹುದಾದರೂ ಇಲ್ಲಿ, ಮಾನಸಿಕವಾಗಿ ಕಲ್ಲಿನ ಗೋಡೆಯನ್ನು ಕಟ್ಟಿ ಪ್ರತಿಬಂಧಕವನ್ನು ನಿರ್ಮಿಸಬೇಕಷ್ಟೆ.
ಆದರೂ ಹರಿಯುವ ಈ ಯಕ್ಷವಾಹಿನಿ ನಿರಂತರವಾಗಿ ಹರಿಯಲೆಂದು ತಿಳಿದವರು ಯಾರೂ ಇದನ್ನು ದುರ್ಬಳಕೆ ಮಾಡಲಾರರು ಎಂಬ ಹಾರೈಕೆ ಮಾತ್ರ ಮನದಾಳದಲ್ಲಿ ಒಸರುತ್ತ ಹರಿಯುತ್ತಿದೆ.