"ಇದು ವಿಮರ್ಶೆಯಲ್ಲದ ಚಿಂತನ"

Sunday, January 31, 2016

ಪದ್ಯಾಣ ವೆಂದರೆ ಪದ್ಯಗಳ ಯಾನ


                ಬಹಳ ಹಿಂದಿನ ಯಕ್ಷಗಾನ ಬಯಲಾಟದಲ್ಲಿನ ಹಾಸ್ಯ ದೃಶ್ಯ. ಅದು ನನಗೆ ಈಗಲೂ ನೆನಪಿನಲ್ಲಿ ಉಳಿದಿದೆ. ತುಳು ಪ್ರಸಂಗ ಒಂದರ ಸನ್ನಿವೇಶವದು. ಹಾಸ್ಯಗಾರ ಭಾಗವತರ ಪದಕ್ಕೆ ಕುಣಿಯುತ್ತಾ ತನ್ನ ವಿಚಿತ್ರ ಹಾವಭಾವಗಳಿಂದ ನಗೆಯ ಅಲೆಯನ್ನು ತರಿಸುತ್ತಾನೆ. ಹೇಳಿ ಕೇಳಿ ಹಾಸ್ಯದ ಸನ್ನಿವೇಶ. ಒಂದು ಸಲ ನಕ್ಕು ಹಗುರಾಗಿಬಿಡುವ ಗಂಭೀರವಲ್ಲದ ಸನ್ನಿವೇಶ. ಆದರೆ ಗಂಭೀರ ಚಿಂತನೆಯ ಒರೆಗೆ ಹಚ್ಚುವ ಅಂಶವೊಂದು ಅಲ್ಲಿ ಅನಾವರಣಗೊಳ್ಳುತ್ತಿರುವುದು ಆವಾಗ ಯೋಚನೆಗೆ ಬರುವುದಿಲ್ಲ. ಭಾಗವತರು ಹಾಡುತ್ತಾ ಹಾಡುತ್ತಾ ಗಾಯನದ ಉತ್ತುಂಗಕ್ಕೆ ಸ್ವರವನ್ನು ಎರಿಸುತ್ತಾ ಹೋಗುತ್ತಾರೆ. ಹಾಸ್ಯಗಾರನೂ ಅದಕ್ಕೆ ತಕ್ಕಂತೆ ಅಭಿನಯಿಸುತ್ತಾ ಎದ್ದು ನಿಂತು ಹಾಡಿನ ಭಾವಕ್ಕೆ ಏರುವಿಕೆಗೆ ಸರಿಯಾಗಿ ಮತ್ತೂ ಮತ್ತೂ ಮೇಲೇರುತ್ತಾ ಹೋಗುತ್ತಾನೆ. ಅಷ್ಟೇ ಏರಿದ ಸ್ವರ ಮತ್ತೆ ಇಳಿಯುವುದಕ್ಕಾರಂಭಿಸುತ್ತದೆ. ಇಳಿಯುತ್ತದೆ ಮಧ್ಯಮ,  ಮಧ್ಯಮದಿಂದ ಮತ್ತೂ ಇಳಿಯುತ್ತಾ ಇಳಿಯುತ್ತಾ ಪಂಚಮಕ್ಕೆ ಬಂದು ...ಇನ್ನೂ ಇಳಿಯುತ್ತಾ ಗಂಟಲೊಳಗಿನ ಸ್ವರ ಆ ನಿಷಬ್ಢದಲ್ಲೂ ಸೂಕ್ಷ್ಮವಾಗಿ ಕೇಳಿಸುತ್ತದೆ.  ಆವರೆಗೆ ಏರುವಿಕೆ ಮೇಲೇರಿದ ಹಾಸ್ಯಗಾರ ಇಳಿಯುವಿಕೆಗೆ ಸರಿಯಾಗಿ ಇಳಿಯುತ್ತಾ ಇಳಿಯುತ್ತಾ ರಂಗದಲ್ಲಿ ಮಲಗಿಬಿಡುತ್ತಾನೆ. ಗಾಯನ ಸ್ವರ ಮತ್ತೂ ಇಳಿಯುತ್ತದೆ. ಆತ ಗಾಬರಿಯನ್ನು ಪ್ರಕಟಿಸಿ ರಂಗಸ್ಥಳದ ಅಡಿಭಾಗಕ್ಕೆ ದೃಷ್ಟಿ ಬೀರುತ್ತಾನೆ. ಇನ್ನೂ ಇಳಿಯುವುದಕ್ಕೆ ಜಾಗವಿದೇಯೇ ಎಂಬ ಹುಸಿ ಆತಂಕ ಮುಖದಲ್ಲಿ. ಸಭೆ ಆ ನವಿರು ಹಾಸ್ಯಕ್ಕೆ  ಬಿದ್ದು ಬಿದ್ದು ನಗಲಾರಂಬಿಸುತ್ತದೆ. ಭಾಗವತರ ಇಳಿ ಸ್ವರ ಸಭಿಕರ ಚಪ್ಪಾಳೆಯಲ್ಲಿ ಕರಗಿ ಹೋಯಿತೇನೋ ಎಂಬ ಭ್ರಮೆಯಲ್ಲಿದ್ದಂತೆ  ಒಮ್ಮಿಂದೊಮ್ಮೆಲೆ ಮಧ್ಯಮವನ್ನು ದಾಟಿ ಷಡ್ಜಕ್ಕೆ ಚಿಮ್ಮಿ ಬಿಡುತ್ತದೆ. ಆ ಸ್ವರದ ಸಂಚಲನಾ ಚೈತನ್ಯ ಗಾಬರಿ ಹುಟ್ಟಿಸುವಂತೆ ಇದ್ದರೂ ಹಾಸ್ಯದ ಸನ್ನಿವೇಶದ ನಡುವೇ ಅದರ ಬಗ್ಗೆ ಗಮನ ಹರಿಯುವುದಿಲ್ಲ. ಹೀಗೆ ಒಮ್ಮೇಲೆ ಆಕಾಶದೆತ್ತರಕ್ಕೆ ಚಿಮ್ಮಿ ಮತ್ತೆ ಪಾತಾಳದತ್ತ ಮುಖಮಾಡುವ ಆ ಗಾನವೈಖರಿಯ ಬಗ್ಗೆ ಈಗ ಯೋಚಿಸುವಾಗ ಅದ್ಭುತ ಎಂದನಿಸುತ್ತದೆ. ಬಹುಶಃ ಇದು ಯಕ್ಷಗಾನದಲ್ಲಿ ಮಾತ್ರವೇ ಸಾಧ್ಯ.

            ಮೇಲಿನ ಹಾಸ್ಯದ ಸನ್ನಿವೇಶ ಹಲವು ವೈಶಿಷ್ಟ್ಯವನ್ನು ಬಿಂಬಿಸಿ ಇಂದಿಗೂ ಮರೆಯದೇ ಉಳಿದರೆ ಅದಕ್ಕೆ ಕಾರಣ ಆ ಕಲಾವಿದ ನೈಪುಣ್ಯ. ಇದು ಸುರತ್ಕಲ್ ಮೇಳದ ತುಳು ಆಟವೊಂದರ ಸನ್ನಿವೇಶ. ಇಲ್ಲಿ ಹಾಸ್ಯಗಾರನಾಗಿ ದಿವಂಗತ ವೇಣೂರು ಸುಂದರ ಆಚಾರಿಯಾದರೆ, ಹೀಗೆ ಷಡ್ಜದಿಂದ ಪಂಚಮಕ್ಕೆ , ಪಂಚಮದಿಂದ ಷಡ್ಜಕ್ಕೆ ಸ್ವರ ಸಿಂಚನವನ್ನು ಚಿಮ್ಮಿಸುತ್ತಾ ಸ್ವರ ವೈಖರಿಯ ರಸಧಾರೆಯನ್ನು ಹರಿಸಿದವರು ಭಾಗವತ ಶ್ರೀ ಪದ್ಯಾಣ ಗಣಪತಿ ಭಟ್ ರವರು. ಬಹಳ ಪಳಗಿದ ಸಂಗೀತಗಾರನಿಗೂ ಇದು ಗಾಬರಿ ಹುಟ್ಟಿಸುವ ಕಂಠ ಸಾಮಾರ್ಥ್ಯ.  ಇಂದು ಹಲವು ಭಾಗವತರು ಮಂದ್ರದಿಂದ ತಾರಕಕ್ಕೆ ತಾರಕದಿಂದ ಮಂದ್ರಕ್ಕೆ ನಡೆಸುವ ಕಸರತ್ತನ್ನು ಹಲವು ದಶಕಗಳ ಮೊದಲು ಗಣಪಣ್ಣ ರಂಗದಲ್ಲಿ ಪ್ರಯೋಗಿಸಿದವರು. ಮಂದ್ರದಿಂದ ತಾರಕಕ್ಕೂ ತಾರಕದಿಂದ ಮಂದ್ರಕ್ಕೂ ಬೇಕಾದಂತೆ ಸಂಚರಿಸುವ ಇವರ ಸರ ಸಂಚಾರ ಅದನ್ನು ಮರೆಯುವುದಕ್ಕೆ ಸಾಧ್ಯವಿಲ್ಲ.  ಯಾವುದೇ ಪದವನ್ನು ಆರಂಭದಲ್ಲಿ ತಾರಕದಲ್ಲೇ ಎಬ್ಭಿಸುವ ಇವರ ಶೈಲಿಗೆ ಮರುಳಾಗದ ರಸಿಕನಿಲ್ಲ. ಪದ್ಯಾಣದ ಪದ ಮುದ್ರೆ ಎಂದರೆ ಅದು.

            ಎಂಭತ್ತು ತೊಂಭತ್ತರ ದಶಕದಲ್ಲಿ ಯಕ್ಷಗಾನ ಬಯಲಲ್ಲಿ ಸುರತ್ಕಲ್ ಮೇಳದ ಆಟಗಳನ್ನು ರಸಿಕರು ಮರೆಯುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಹಲವು ಕಾರಣಗಳು ಕಂಡು ಬರಬಹುದು. ಅತಿರಥ ಮಹಾರಥರೆನಿಸಿದ ಗಣ್ಯ ಕಲಾವಿದರ ಮುಮ್ಮೇಳ ಒಂದೆಡೆಯಾದರೆ ಅದಕ್ಕೊಪ್ಪುವ  ಹಿಮ್ಮೇಳ ಒಂದೆಡೆ. ಇನ್ನು ಅದ್ವಿತೀಯ ಎನ್ನಬಹುದಾದ ವಿಶಿಷ್ಟ ಪ್ರಸಂಗಗಳು. ಈ ಎಲ್ಲಾ ಪ್ರವಾಹದ ಮಧ್ಯೆ ಪ್ರತ್ಯೇಕ ರಂಗು ತುಂಬಿಕೊಂಡು ಆಕರ್ಷಣೀಯ ವಸ್ತುವಿನಂತೆ ಭಾಸವಾದರೆ ಅದು ಗಣಪಣ್ಣನ ಭಾಗವತಿಕೆ. ನನ್ನ ನೆನಪಿನಲ್ಲಿ ಚಿಕ್ಕ ಪ್ರಾಯದ ಬಾಲೆ ಚದುರೆ ಎಂದು ಹಾಡಲು ತೊಡಗುತ್ತಿದ್ದ ಆರಂಭದ ದಿನಗಳ ಆಕರ್ಷಣೆಯಂತೆ ಕ್ರಮೇಣ ಉತ್ತರಾರ್ಧದ ನಿಶಿತ ಕಾಲದಲ್ಲೂ ನಿಶೆ ಏರಿಸುತ್ತಿತ್ತು ಪದ್ಯಾಣರ ಪದ್ಯಗಳು. ಅವಾಗೆಲ್ಲ ಕೌತುಕದ ಮಾತೊಂದು ಯೋಚನೆಗೆ ಬರುತ್ತಿತ್ತು. ಪದ್ಯ ಮತ್ತು ಪದ್ಯಾಣ ಇವೆರಡು ಹೊಂದಿಕೊಂಡ ಎರಡಲ್ಲದ ಅದ್ವೈತ ಶಕ್ತಿಯೇ?
               
            ನಮ್ಮೂರಲ್ಲಿ ಸುರತ್ಕಲ್ ಮೇಳದ ಆಟ ಬಂತೆಂದರೆ ಇಡೀ ಇರುಳು ಈಸೀ ಚೆಯರಿಗೆ ಒರಗಿ ಆಟ ನೋಡುವ ಮಜವೇ ಬೇರೆ. ಆ  ಕೌತುಕ ತಣಿಯದೇ ಇದ್ದರೂ ಹಲವು ಸಲ ಕೆಲಸದ ಒತ್ತಡದಿಂದ ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಿದ್ದರೂ ಮನಸ್ಸು ತಣಿಯಬೇಕಲ್ಲ. ರಾತ್ರಿ ಎರಡು ಘಂಟೆ ಅಲಾರಾಂ ಇಟ್ಟು ಎದ್ದು ಬೈಕು ತೆಕ್ಕೊಂಡು ಆಟಕ್ಕೆ ಓಡುತ್ತಿದ್ದರೆ ಆಲಿದ್ದ ಆಕರ್ಷಣೆ ಒಂದೇ ಅದು ಗಣಪ್ಪಣ್ಣನ ಎರಡು ಪದ ಕೇಳುವ ಅದಮ್ಯ ಬಯಕೆ. ನಂತರ ಮಂಗಳದವರೆಗೂ ಯಾವುದೇ ಒತ್ತಡವಿಲ್ಲದೆ  ಗಾಯನವನ್ನು ಆಸ್ವಾದಿಸಿ ಬಿಚ್ಚಿಕೊಂಡ ಟೆಂಟ್ ಟರ್ಪಾಲನ್ನು ದಾಟಿ ನಶೆ ಏರಿದವರಂತೆ ಬರುತ್ತಿದ್ದ ನೆನಪು ಈಗಲೂ ಇದೆ.
                ಪದ್ಯಾಣ ಗಣಪತಿ ಭಟ್ ಶೈಲಿಯೇ ಹಾಗೆ,  ಅದು ಕೇಳುತ್ತಾ ಕೇಳುತ್ತ ಒಂದು ರೀತಿ ಮೋಹಕ ಬಲೆಯನ್ನು ಸುತ್ತಿಬಿಡುತ್ತದೆ. ಯಕ್ಷಗಾನ ಪದಗಳಲ್ಲಿ ರಾಗಗಳು ಸಲೀಸಾಗಿ ಅನಾವರಣಗೊಳ್ಳುವಾಗ ಎಂತಹ ವಿದ್ವಾಂಸರೂ ಅಚ್ಚರಿ ಪಡಬೇಕು. ಪರಂಪರೆಯಿಂದ ತೊಡಗಿ ನವ್ಯ ಎನ್ನ ಬಹುದಾದ ನವೀಕೃತ ಶೈಲಿ  ಯಾವುದೇ ಅದರೂ  ಈ ಶೈಲಿ ಸುಲಭವಾಗಿ ಒಗ್ಗಿಕೊಂಡು ಅಪ್ಪಿಬಿಡುತ್ತದೆ.  ಅದನ್ನು ಅಲ್ಲಗಳೆಯುವ ಮನೋಭಾವ ಅಲ್ಲಿ ಬರುವುದಿಲ್ಲ. ಒಟ್ಟಿನಲ್ಲಿ ರಂಗದ ಮೇಲೆ ಹೇಗಾಯಿತು ಇವಿಷ್ಟನ್ನೇ ನೋಡುತ್ತಿರುತ್ತದೆ.  ಮುಖ್ಯವಾಗಿ ಇವರ ಹಾಡಿನಲ್ಲಿನ ಸಂಗೀತ ಸಂಯೋಜನೆ ಬಹಳ ಅದ್ಭುತ ಎನ್ನಬೇಕಾಗುತ್ತದೆ. ಬಹುಷಃ ಇಂದಿನ ಜನಪ್ರಿಯ ಕಲೆ ಸಿನಿಮಾರಂಗದವರು ಆಟಕ್ಕೆ ಬಂದು ಇದನ್ನು ಗಮನಿಸಿದರೆ ಕಕ್ಕಾಬಿಕ್ಕಿಯಾಗುವಷ್ಟು ನಡುವಿರಳ ಗಾನದಲ್ಲಿ ರಸಧಾರೆ ಹರಿಸಬಲ್ಲರು.

            ಇದೀಗ ಗಣಪ್ಪಣ್ಣನಿಗೆ ೬೦ರ ಸಂಭ್ರಮ. ಅರುವತ್ತು ಎಂಬುದು ಮನುಷ್ಯನ ಜೀವನದ ಒಂದು ಮಹತ್ತರ ಘಟ್ಟ ಎನ್ನಬಹುದು. ಜನನದಿಂದ ತೊಡಗಿ ಆರನೇ ವಯಸ್ಸಿಗೆ  ಮನುಷ್ಯ ಪ್ರಾಪಂಚಿಕ ವ್ಯವಹಾರವನ್ನು ಕಲಿಯುವುದಕ್ಕೆ ಆರಂಭಿಸುತ್ತಾನೆ. ಕಲಿಯುತ್ತಾ ಆರರೊಂದಿಗೆ ಶೂನ್ಯವನ್ನು ಸುತ್ತುವಾಗ ಪೂರ್ಣ ಬದುಕನ್ನು ಕಂಡು ಒಂದು ಆವರಣವನ್ನು ಸುತ್ತಿಕೊಂಡ ಅನುಭವವಾಗಿ ವಯೋಮಾನದ ಸಹಜತೆಯಲ್ಲಿ ವೈರಾಗ್ಯತೆಯ ಶೂನ್ಯತೆ ಅಂಟಿಬಿಡುತ್ತದೆ. ಹೀಗೆ ೬೦ ಎಂಬುದು ಎಲ್ಲವನ್ನು ಒಳಗೊಂಡ ಒಂದು ಸಹಜ ಪಕ್ವತೆಯ ಸ್ಥಿತಿ.  ಹಾಗಾಗಿ ಇದು ಸಂಭ್ರಮ ಎಂದು ಕಂಡುಕೊಳ್ಳುವುದು ಸೂಕ್ತವೇ ಆಗಿದೆ.

            ಯಕ್ಷಗಾನಕ್ಕೆ ಒಂದು ಪರಂಪರೆ ಬೆಸೆದುಕೊಂಡಿದ್ದರೆ, ಆ ಪರಂಪರೆಯಲ್ಲಿ ಪದ್ಯಾಣ ಎಂಬ ಮನೆತನದ  ಪರಂಪರೆಯೂ  ಬೆಸೆದುಕೊಂಡಿದೆ.  ಅಂದಿನಿಂದ ಇಂದಿನವರೆಗೂ ತೇರ ಮೆರವಣಿಗೆಯ ದೈವಕ್ಕೆ ಅಲ್ಲಲ್ಲಿ ಸಲ್ಲುವ ಪೂಜಾವಿಧಿಯಂತೆ ಯಕ್ಷಗಾನಕ್ಕೆ ಸಲ್ಲುತ್ತಾ  ಈ ಪರಂಪರೆ ಮತ್ತೂ ಮುಂದುವರೆದಿದೆ.
            ಸಂಭ್ರಮದ ಹೊಸ್ತಿಲಲ್ಲಿ ಅದನ್ನು ಇದಿರುಗೊಳ್ಳುವುದಕ್ಕಾಗಿ ಅಭಿಮಾನಿಗಳು ಸಂಭ್ರಮದಿಂದ ಕಾಯುತ್ತಿದ್ದಾರೆ.  ಕಲಾವಿದನಿಗೆ ತನ್ನ ಮನೋಭಾವದ ಗೌರವದ ಮನ್ನಣೆಯನ್ನು ಸಲ್ಲಿಸುವ ಅಪೂರ್ವ ಕ್ಷಣಕ್ಕಾಗಿ ಹೃದಯದ ಹೊನ್ನ ಹರಿವಾಣದಲ್ಲಿ ಅಭಿಮಾನದ ಫಲ ಪುಷ್ಪ ಹಿಡಿದು ನಿಂತುಕೊಂಡರೆ  ಇದನ್ನು ಕಾಣುವುದು ಒಂದು ವಿಶಿಷ್ಟ ಅನುಭವ.    ಈ ಸಂಭ್ರಮ ಚಿರಸ್ಥಾಯಿಯಾಗಿ ಉಳಿಯಲಿ ಎಂದು ಹಾರೈಸುವುದರೊಂದಿಗೆ ಇಲ್ಲಿ ಯಾವುದೇ ಸ್ವಾರ್ಥ ನುಸುಳದೇ ಸಾಹೋದರ್ಯದ ಕಂಪು ಹರಡಲಿ ಎಂಬ ಹಾರೈಕೆ ಮನದುಂಬುತ್ತದೆ.   ಸ್ವಾರ್ಥ ತುಂಬಿದ ಕೊಡುಗೆ ಅದು ಕೊಡುಗೆಯಾಗುವುದಿಲ್ಲ.  ಹೆತ್ತ ತಾಯಿಗೆ ಸಹಜ ಪ್ರೀತಿಯಿಂದ ಸೀರೆ ಕುಪ್ಪಸ ವಡವೆಯನ್ನು ಕೊಡುವಾಗ ಯಾವುದೋ ಕಾರ್ಯಸಾಧನೆಯ ಸ್ವಾರ್ಥ ಅಡಗಿದ್ದರೆ ಆ ತಾಯಿ ಅದನ್ನು ಮನಸ್ಸು ತುಂಬಿ ಸ್ವೀಕರಿಸಿಯಾಳೆ? ಖಂಡಿತ ಇಲ್ಲ. ಹಾಗಾಗಿ ಇಲ್ಲಿ ನಿಸ್ವಾರ್ಥ ಕಾಮನೆಯ ಆಚರಣೆ ಸಂಭ್ರಮಿಸುತ್ತಿರರಲಿ. ಗಾನ ಮಾಧುರ್ಯವನ್ನುಂಡ ಸವಿ ನೆನಪಲ್ಲಿ ಧನಕನಗಳಿಗೆ ಮನಮಾಡದ ಹಿರಿಮೆ ಗರಿಮೆಗಳಿಗೆ ಸ್ಪಂದಿಸದ ನಿಷ್ಕಾಮ ಅಭಿಮಾನ ವಿಜ್ರಂಭಿಸಿ ಸಂಭ್ರಮ ದೀಕ್ಷೆ ಸತ್ಫಲವನ್ನು ನೀಡಲಿ ಎಂದು ಹಾರೈಸುವ.


Monday, January 25, 2016

ನಂಬಿಯಾರರ ಯಕ್ಷಸಂವಾದ


            ಹಲವು ಸಲ ನಮ್ಮ ಅನಿಸಿಕೆಗಳು ಮನಸ್ಸಿನಲ್ಲಿ ಕಲ್ಪನೆಯ ಗರಿಗಳನ್ನು ಅರಳಿಸುತ್ತಿದ್ದರೆ ಮಾತಿನಲ್ಲಿ ಅವುಗಳು  ನಿರ್ವಚಿಸುವುದಿಲ್ಲ. ಅಥವಾ ಅದನ್ನು ನಿರ್ವಚಿಸುವ ಸಾಮಾರ್ಥ್ಯ ಇರುವುದಿಲ್ಲ ಎನ್ನುವುದೇ ಸರಿ. ಷಡ್ರಸ ಭೋಜನದಲ್ಲಿ ಯಾವುದೋ ಒಂದು ಕೊರತೆ ಕಂಡಾಗ ಎಲ್ಲವೂ ಸರಿ ಇದೆ ಆದರೂ ಒಂದು ಅತೃಪ್ತಿ ಅದು ಹೇಳುವುದಕ್ಕೆ ಅರಿಯದೇ ಅದು ಕತ್ತಲಕೊಣೆಯ ಅರಸುವಿಕೆಯಾಗಿಬಿಡುತ್ತದೆ. ಹುಟ್ಟಿದ ಮಗುವಾದರೂ ಆರಂಭದಲ್ಲಿ ಅದು ಮಾತು ಕಲಿಯುವುದು ಶಬ್ದ ನಾದಗಳ ಅನುಕರಣೆಯಿಂದ. ಮನಸ್ಸಿಗೆ ತಿಳಿದರೂ ನಾಲಿಗೆ ತೊದಲುತ್ತದೆ .  ಬಾಲ್ಯದಲ್ಲಿ ನಮ್ಮಜ್ಜ ಭಜನೆಯನ್ನು ಕಲಿಸುವಾಗ ಮೊದಲು ನಾವು ಬೇರೆಯವರ ಧ್ವನಿಗೆ ತಾಳ ಬಡಿಯಬೇಕಿತ್ತು. ಅದರ ಅರ್ಥ ರಂಗೋಲಿಯನ್ನು ಬಿಡಿಸುವುದಕ್ಕೆ ಚುಕ್ಕೆಗಳನ್ನು ಮೊದಲು ಒತ್ತಿದಂತೆ ಭಜನೆಗಳನ್ನು ಕಲಿಯಲು ಅದರ ಹಾದಿಗುರುತನ್ನು ತಾಳದಿಂದ ಮೊದಲು ಹಾಕಿಬಿಡಬೇಕು. ತಾಳ ಬಡಿದವನಿಗೆ ಹಾಡುವುದು ಸುಲಭವಾಗುತ್ತದೆ. ಈ ಭಾವ ಅರ್ಥವಾದದ್ದು ಇತ್ತೀಚೆಗೆ ಶ್ರೀ ಡಾ| ಕೆ. ಎಂ.  ರಾಘವನಂಬಿಯಾರರ ಸಂದರ್ಶನವೊಂದನ್ನು ನಮ್ಮ ರಂಗಣ್ಣನ ಬ್ಲಾಗಿನಲ್ಲಿ ಕಂಡಾಗ.

            ಪ್ರಶ್ನೆಗಳು ಹೇಗೂ ಹುಟ್ಟಬಹುದು. ಆದರೆ ಉತ್ತರಗಳು ಹುಟ್ಟುವುದು ಕಷ್ಟ. ಅದಕ್ಕೆ ಅಲ್ಲವೇ ಪ್ರಶ್ನೆಯನ್ನು ಇರಿಸುವಾಗ ಒಂದು ವಾಕ್ಯದಲ್ಲಿ ಉತ್ತರಿಸಿ ಅಥವಾ ಹತ್ತು ವಾಕ್ಯಕ್ಕೆ ವಿಸ್ತರಿಸಿ ಎಂದು ನಿಬಂಧನೆಯನ್ನು ಹಾಕುವುದು. ಇಲ್ಲಿ ಪ್ರಶ್ನೆಗಿಂತ ಅದರ ಉತ್ತರವೇ ಪ್ರಧಾನವಾಗಿಬಿಡುತ್ತದೆ. ಪ್ರಶ್ನೆಗಳಿಗೆ ಬದಲಾಗಿ ಉತ್ತರಕ್ಕೇ ಅಂಕಗಳ ಮೌಲ್ಯವನ್ನು ನಿರ್ಧರಿಸಿರುವುದು. ಆದುದರಿಂದ ಉತ್ತರ ಇಲ್ಲಿ ಮಾರ್ಮಿಕವಾಗಿದ್ದಷ್ಟೂ ಅದರ ಮೌಲ್ಯ ವೃದ್ಧಿಯಾಗುತ್ತದೆ.






            ಪ್ರಶ್ನೆಗಳು ಹಲವಾರು ಬಂದು ಉತ್ತರವನ್ನು ಹಿಡಿದೆತ್ತಿಕೊಂಡು ಸರಿದು ಹೋದುವು. ಆದರಲ್ಲಿ ಕೆಲವೊಂದು ಪ್ರಶ್ನೆಗಳು ಎತ್ತಿಕೊಂಡ ಉತ್ತರಗಳನ್ನು ಕಂಡಾಗ ನಾಸಿಕಾಗ್ರವನ್ನು ತೋರುಬೆರಳು ಸ್ಪರ್ಶಿಸಿದ ಅನುಭವ. ನಂಬಿಯಾರರ ಉತ್ತರ ವಾಸ್ತವದಲ್ಲಿದ್ದ ಸತ್ಯಗಳನ್ನು ಎದುರು ತೋರಿಸಿದಂತೆ. ಸತ್ಯಗಳ ಅರಿವಿದ್ದರೂ ಆ ಸತ್ಯಾನ್ವೇಷಣೆಯ ಹಾದಿಯನ್ನು ತೋರಿ ಸತ್ಯವನ್ನು ಹೊರಗೆಡಹಿದಂತೆ. ಬಹಳಷ್ಟು ಸತ್ಯಗಳು ನಮ್ಮರಿವಿಗೆ ಬಂದವುಗಳೇ ಆಗಿರುತ್ತದೆ.  ಆದರೆ ಅದಕ್ಕೆ ರೂಪವಿರುವುದಿಲ್ಲ ಎಂಬುದು ಮತ್ತೊಂದು ಸತ್ಯ.  ಹಾಗಾಗಿ ಡಾ| ನಂಬಿಯಾರರ ಉತ್ತರ ಉದಾಹರಣೆಗಳು ಸತ್ಯವನ್ನು ತೋರಿಸಿ ಒಪ್ಪಿಕೊಳ್ಳುವಂತೆ ಮಾಡಿಬಿಡುತ್ತದೆ.

            ಈ ಸಂದರ್ಶನವನ್ನು ಹಲವಾರು ಬಾರಿ ನೋಡಿ ಕೇಳಿದ್ದೇನೆ. ಅದ್ವಿತೀಯ ಅನುಭವ. ಅದು ಹಲವು ಸಲವಾಗಿದೆ.  ಆದುದರಿಂದ ಭಾವನೆಗಳು ನನ್ನ ತಿಳುವಳಿಕೆಯ ವ್ಯಾಪ್ತಿಯಲ್ಲಿ ಅರಳಿವೆ. ಹೂವು ಅರಳುವುದಕ್ಕೆ ಅದರ ಬುಡದ ಪೋಷಕಾಂಶಗಳೂ ಕಾರಣವಾಗುವಂತೆ ನನ್ನ ತಿಳುವಳಿಕೆಯ ವ್ಯಾಪ್ತಿ ಇಲ್ಲಿ ಬಹಳ ಕಿರಿದಾಗಿದೆ ಎನ್ನಬಹುದು. ಆದರೂ ಅನುಭವ ಎಂಬುದು ಪಾಮರನ ಮನಸ್ಸಿಗೂ ಆತನಿಗೆ ಸಂಬಂಧಿಸಿದಂತೆ ಪ್ರಧಾನವಾಗಿಬಿಡುತ್ತವೆ. ಆದುದರಿಂದ ಸಂದರ್ಶನ ಆಸ್ವಾದಿಸುತ್ತಿದ್ದಂತೆ ಆ ಅನುಭವಗಳೂ ಇಲ್ಲಿ ಬೆರೆತುಕೊಂಡು ಬಿಟ್ಟಿವೆ.  ಪೂರ್ಣಸಂದರ್ಶನ ವರದಿಯಾದರೆ ಅದಕ್ಕೆ ಮಹತ್ವವಿರುವುದಿಲ್ಲ. ಅದು ಆ ಕ್ರಿಯೆ ಸಾರ್ಥಕತೆಯನ್ನೂ ತೋರಿಸುವುದಿಲ್ಲ. ಹಾಗಾಗಿ ನನ್ನ ಅನಿಸಿಕೆಗಳು ಸೀಮಿತ ಪರಿಧಿಯೊಳಗೆ ಇಲ್ಲಿ ಮಿಸುಕಾಡುತ್ತವೆ.




            ಯಕ್ಷಗಾನದ ಪದಗಳು ಛಂದೋಬದ್ಧವಾಗಿರುವುವಂತಹುಗಳು. ಅವುಗಳು ಆ ಚೌಕಟ್ಟಿನೊಳಗಿದ್ದಾಗ ಅರ್ಥವನ್ನು ಭಾವವನ್ನೂ ಉಳಿಸಿಕೊಳ್ಳುತ್ತದೆ. ಪದಗಳು ರಾಗ ಮತ್ತು ತಾಳಕ್ಕೆ ನಿಬಧ್ಧವಾಗಿರುತ್ತದೆ.  ಯಕ್ಷಗಾನದ ಪದಗಳು ಛಂದಸ್ಸಿನಿಂದ ದೂರವಾಗಿರುವುದಕ್ಕೆ ಸಾಧ್ಯವೇ ಇಲ್ಲ. ಮೊದಲು ಇವುಗಳು ಗುರುವಿನಿಂದ ಶಿಷ್ಯನಿಗೆ ನೇರವಾಗಿ ಮೌಖಿಕವಾಗಿ ದಾಟಿಸಲ್ಪಟ್ಟರೆ ಇಂದು ಅವುಗಳು ಬರಹ ರೂಪದಲ್ಲಿ ಪುಸ್ತಕ ರೂಪದಲ್ಲಿ ದೊರೆಯುತ್ತದೆ. ಪ್ರಸಂಗ ಕರ್ತೃ ಯಾವ ರಾಗ ತಾಳದಲ್ಲಿ  ಪದಗಳನ್ನು ರಚಿಸಿದನೋ  ಅದರಲ್ಲೇ ಯಕ್ಷಗಾನದಲ್ಲಿ ಹಾಡಲ್ಪಡಬೇಕು. ಇದವರ ಖಚಿತವಾದ ನಿಲುವು. ಆದರೆ ಇಂದು ಸ್ವ ಇಚ್ಛೆಯ ಚಂದಸ್ಸು ಉಪಯೋಗಿಸುವುದರಿಂದ ಪದಗಳ ಮೂಲಸ್ವರೂಪವೇ ಹೊರಟು ಹೋಗಿ ಪದಳು ಮೂಲಾರ್ಥವನ್ನೇ ಕಳೆದುಕೊಳ್ಳುತ್ತವೆ.

            ಇದು ವಾಸ್ತವಕ್ಕೆ ತೀರ ಹತ್ತಿರವಾದ ನಂಬಿಯಾರರ ಅನಿಸಿಕೆಗಳಾದರೆ ಪ್ರಸ್ತುತ ಇದಕ್ಕಿಂತ ಭೀಕರವಾಗಿದೆ ಎಂದೇ ಅನುಭವಕ್ಕೆ ಬರುತ್ತದೆ. ರಂಗದ ಮೇಲೆ ಯಾವುದೋ  ನಿಯಂತ್ರಣಕ್ಕೆ ಸಿಕ್ಕಂತೆ ಭಾಗವತ ವರ್ತಿಸುವಾಗ ವೇಷಧಾರಿಯ ಪರಿಗಣನೆಯೋ ಪ್ರೇಕ್ಷಕನ ಮನವೊಲಿಕೆಯೋ ಅಂತು ಯಕ್ಷಗಾನ ಪದಕ್ಕೆ ಪರಿಶುದ್ಧವಾದ ಛಂದಸ್ಸು ಎಂಬುದಿದೆ ಎಂಬ ಅರಿವೇ ಇರುವುದಿಲ್ಲ.  ಇಂದಿನ ಪ್ರಸಂಗ ಕರ್ತರೂ ಇದಕ್ಕೆ ವಿಹಿತವಾಗಿರಬಹುದೇ ? ಅನುಮಾನಿಸಲ್ಪಡಬೇಕಾಗುತ್ತದೆ.  ಯಕ್ಷಗಾನ ಕಲಾವಿದನಾದವನು ಹೇಗೆ,  ಕುಣಿತ, ವಾದನ,  ಸ್ವರ,  ಲಯ,  ಹೀಗೆ ಪರಿಣತಿಯನ್ನು ಪಡೆದಿರಬೇಕೋ ಅದರಂತೆ ಪ್ರಸಂಗ ಕರ್ತನಿಗೂ ಕಾವ್ಯ ವ್ಯಾಕರಣ ಛಂದಸ್ಸು ರಾಗಗಳು ಅದು ಯಕ್ಷಗಾನಕ್ಕೆ ಹೊಂದಿಕೊಂಡಂತೆ ಪರಿಜ್ಞಾನವಿರಬೇಕಾದದ್ದು ಅತೀ ಅಗತ್ಯ. ಸಂದೇಹ,  ವಾಸ್ತವದಲ್ಲಿ ಹಾಗಿರಬಹುದೇ? ಯಾವುದೋ ಒಂದು ಪ್ರಸಂಗದಲ್ಲಿ ಭಾಗವತ ತನ್ನದೇ ರಾಗ ಶೈಲಿಯಲ್ಲಿ ಹಾಡಿ ಜನಪ್ರಿಯವಾದ ಹಿಟ್ ಪದವಿದ್ದರೆ ತಮ್ಮ ಪ್ರಸಂಗದಲ್ಲೂ ಅಂತಹುದೊಂದೆರಡು ಬೇಕು ಎಂದು ಅಳವಡಿಸುವಾಗ,  ಯಕ್ಷಗಾನ ಛಂದಸ್ಸಿನ  ಬಗ್ಗೆ ಅರಿವಿರುವುದಕ್ಕೆ ಅನುಮಾನವೆಂದೆನಿಸುತ್ತದೆ. ಇಲ್ಲಿ ಛಂದಸ್ಸು ಎಂಬುದು ಅಪ್ರಸ್ತುತ ಪ್ರಸಂಗವಾಗಿಬಿಡುತ್ತದೆ.  
ಪದವನ್ನು ಹೇಳುವ ಒಂದು ಭಂಗಿ : ಚಿತ್ರ ಕೃಪೆ ರಂಗಾಥರ ವೀಡಿಯೋ ಮುದ್ರಣ

                ಯಕ್ಷಗಾನ ಒಂದು ಪರಿಪೂರ್ಣ ಕಲೆ . ಇದು ಇಲ್ಲಿ ಕಂಡು ಬರುವ ಮತ್ತೊಂದು ಪ್ರತಿಪಾದನೆ.  ಯಕ್ಷಗಾನಕ್ಕೆ ಅನ್ಯ ಕಲೆಗಳಿಂದ ಎರವಲು ಪಡೆದು ಅಳವಡಿಸುವ ಅಗತ್ಯವಿರುವುದಿಲ್ಲ. ಹಾಗೊಂದು ವೇಳೆ ಅಳವಡಿಸಿದಲ್ಲಿ ಅದು ಯಕ್ಷಗಾನದಲ್ಲಿನ ಅಧ್ಯಯನದ ಕೊರತೆಯೇ ಹೊರತು ಯಕ್ಷಗಾನಕ್ಕೆ ಒದಗಿಸುವ ಸಂಪನ್ಮೂಲವಾಗುವುದಕ್ಕೆ ಸಾಧ್ಯವಿಲ್ಲ. ಯಕ್ಷಗಾನದಲ್ಲಿ ಪರಂಪರೆಯಿಂದ ಬಂದವುಗಳು ಮೊದಲು ರೂಢಿಯಾಗಬೇಕು. ಇದು ಹಲವು ಹಿರಿಯ ಕಲಾವಿದರಿಂದ  ಮೊದಲು  ತೊಡಗಿದ ಧ್ವನಿಯ ಪ್ರತಿಧ್ವನಿ.

ತುಂಬಿದ ಕೊಡದಲ್ಲಿ ಪುನಃ ನೀರು ಸೇರುವುದಿಲ್ಲ. ಆದರೆ ಕೊಡ ಅರ್ಧತುಂಬಿದಾಗ ಅಲ್ಲಿ ಮತ್ತೊಂದು ಸೇರಿಸುವ ಅಥವಾ ಸೇರಿಕೊಳ್ಳುವ ಅವಕಾಶವಿರುತ್ತದೆ. ಹಾಗಾಗಿ ಇಲ್ಲಿ ಪೂರ್ಣವಾಗಿ ತಿಳಿದುಕೊಳ್ಳದೇ  ಅಜ್ಞಾನವನ್ನೇ ಪ್ರದರ್ಶಿಸಿದ ಹಾಗಾಗುತ್ತದೆ.

            ಪರಂಪರೆಯ ಆವಶ್ಯಕತೆಗೆ ಸಮಕಾಲೀನ ಉದಾಹರಣೆಯೊಂದು ನಂಬಿಯಾರರಿಂದ ಇಲ್ಲಿ ವ್ಯಕ್ತವಾಗುತ್ತದೆ. ಸ್ವಾತಂತ್ರ್ಯ ಹೋರಾಟ ಭಾರತದಲ್ಲಿ ಯಾಕಾಯಿತು. ನಂತರ ಸ್ವಾತಂತ್ರ್ಯ ಹೇಗೆ ಲಭಿಸಿ ಅದನ್ನು ಭಾರತೀಯ ಹೇಗೆ ಅನುಭವಿಸುವಂತಾಯಿತು? ಒಂದು ಸನಾತನ ಜೀವನ ಕ್ರಮದಲ್ಲಿ ಜೀವಿಸಿದವನಿಗೆ ವಿದೇಶಿಗಳಿಂದ ಧಾಳಿಯಾಗಿ ತನ್ನ ಪರಂಪರೆಯ ಜೀವನವನ್ನೇ ಒತ್ತೆ ಇಟ್ಟು ಗುಲಾಮರಂತೆ ಬದುಕಬೇಕಾಯಿತು. ಇದರಿಂದ ತೊಂದರೆಯಾದಾಗ ಸ್ವಾತಂತ್ರ್ಯ ಬೇಕು ಎಂಬ ಹಂಬಲವೇ ಉಂಟಾಗಿ ಆ ಪ್ರಚೋದನೆಯೇ ಹೋರಾಟಕ್ಕೆ ಮೂಲ ಕಾರಣವಾಯಿತು. ಅದರೆ ಈಗ ಸಮಕಾಲೀನ ಪರಿಸ್ಥಿತಿಯಲ್ಲಿ ಸನಾತನವನ್ನು ಬಿಟ್ಟು ಆವಿಷ್ಕಾರದ ಬದುಕನ್ನು ಅನುಭವಿಸುವ ತವಕ. ಇದರಿಂದ ಪುನಃ ವಿದೇಶಿಗಳ ಧಾಳಿಗೆ ತುತ್ತಾಗಬೇಕಾದ ಆವಶ್ಯಕತೆಯನ್ನು ಪರೋಕ್ಷವಾಗಿ ಸಾರಿದಂತೇ ಅಲ್ಲವೇ?  ಸ್ವಾತಂತ್ರ್ಯ ಹೋರಾಟದ ಮುಖ್ಯ ಧ್ಯೇಯವಾಕ್ಯ ಸತ್ಯ ಸಮತ್ವ ಮತ್ತು ಸ್ವಾತಂತ್ರ್ಯ. ಸತ್ಯವನ್ನು ಬಿಟ್ಟು ಸಮತ್ವ ಇಲ್ಲ. ಇವೆರಡನ್ನು ಬಿಟ್ಟು ಸ್ವಾತಂತ್ರ್ಯವಿಲ್ಲ.  ಇದು ಕೇವಲ ಸ್ವಾತಂತ್ರ್ಯಕ್ಕೆ ಸಂಭಂಧಿಸಿಯಲ್ಲ ಯಕ್ಷಗಾನಕ್ಕೂ ಇದು ಅಳವಡಿಕೆಯಾಗುತ್ತದೆ. ಪರಂಪರೆಯಿಂದ ಬಂದಂತಹ ಸತ್ಯವವನ್ನು ಬಿಟ್ಟು ನಮಗೇನು ತೋಚಿದವೋ ಅವುಗಳನ್ನು ಮಾಡುತ್ತೇವೆ. ಆವಾಗ ಎಲ್ಲರದ್ದು ಭಿನ್ನವಾದಾಗ ಸಮತ್ವ ಎಲ್ಲಿ ಉಳಿಯಿತು? . ಇವೆರಡು ಇಲ್ಲದಾಗ ಸ್ವಾತಂತ್ರ್ಯ ಎಲ್ಲಿ ಲಭ್ಯವಾಯಿತು.? ಅದರಂತೆ ಯಕ್ಷಗಾನದಲ್ಲೂ ಪರಂಪರೆಯನ್ನು ಬಿಟ್ಟುಮತ್ತಾವುದರೋ ಹಿಂದೆ ಸುತ್ತುವುದು  ಎಂದರೆ ನಾವು ಪುನಃ ಗುಲಾಮತನಕ್ಕೆ ತಲೆಯೊಡ್ಡಿದಂತಾಗಿಬಿಡುತ್ತದೆ.

ಯಕ್ಷಗಾನದಲ್ಲಿ ಸರಿಯಾದ ಶಿಕ್ಷಣದ ವ್ಯವಸ್ಥೆಯಾಗಬೇಕೆಂದು ನಂಬಿಯಾರರ ಮತ್ತೊಂದು ಧ್ವನಿ.
ಇಂದು ಸರಿಯಾದ ಶಿಕ್ಷಣದ ವ್ಯವಸ್ಥೆ ಇಲ್ಲ. ಅಧುನಿಕ ರಂಗಭೂಮಿಯ ಸಿನಿಮಾ ನಾಟಕ  ಮುಂತಾದವುಗಳ ಪ್ರಭಾವಗಳು ಯಕ್ಷಗಾನದಲ್ಲಿ ಬಹಳಷ್ಟು ಆಗಿದೆ. ಇದು ಪೂರ್ಣವಾದ ಅರಿವಿಲ್ಲದೆ ಅಗಿರುವಂಥವುಗಳು.  ಅಲ್ಪಸ್ವಲ್ಪ ಕಲಿತವನು ರಂಗವೇರುವ ಅವಕಾಶ ಇಲ್ಲಿ ಧಾರಾಳವಾಗಿ ಉಂಟು. ಇದರಿಂದ ಆತ ಮಾಡುವುದೆಲ್ಲವೂ ಪ್ರಯೋಗಗಳೇ ಆಗುತ್ತವೆ ಹೊರತು ಅದು ಯಕ್ಷಗಾನವಾಗುವುದಕ್ಕೆ ಸಾಧ್ಯವಿಲ್ಲ. ಇಂದು ಆ ಪ್ರಯೋಗಗಳನ್ನೇ ಯಕ್ಷಗಾನವೆಂದು ಪ್ರೋತ್ಸಾಹಿಸುತ್ತಾರೆ. ಇದು ಸರಿಯಲ್ಲ. ಕಥಕ್ಕಳಿಯಲ್ಲಿದ್ದಂತೇ ಇಲ್ಲಿ ಕಠಿಣವಾದ ನಿಯಮವೊಂದನ್ನು ಜಾರಿಗೊಳಿಸಬೇಕು. ಪೂರ್ಣವಾಗಿ ಪಾರಂಗತನಾದವನಿಗಷ್ಟೆ ರಂಗವೇರುವ ಅವಕಾಶ ಅಥವಾ ಕಲಿಸುವ ಅರ್ಹತೆಯನ್ನು ನೀಡುವಂತಾಗಬೇಕು.ತಪ್ಪಿದ್ದಲ್ಲಿ ಇದು ಶಿಕ್ಷಾರ್ಹ ಅಪರಾಧವಾಗುವಂತೆ ಪರಿಗಣಿಸಲ್ಪಡಬೇಕು.  ಅದರಂತೇ  ಇಂದು ಪ್ರೇಕ್ಷಕನಾದವನು ಮೊದಲು ಕೈಕಟ್ಟಿ ಕುಳಿತು ಚಪ್ಪಾಳೆ ಶಿಳ್ಳೆ ಬಡಿಯದೆ ಯಕ್ಷಗಾನವನ್ನು ಮೌನವಾಗಿ ನೋಡಬೇಕು. ಕಲೆಯ ತಿಳುವಳಿಕೆ ಇಲ್ಲದೇ ಆಗುವಂತಹ ಪ್ರಯೋಗಗಳು ಪ್ರೇಕ್ಷಕನ ಪ್ರೋತ್ಸಾಹ ಪಡೆದಲ್ಲಿ ಅದು ಮೌಢ್ಯವೇ ಆಗಿಬಿಡುತ್ತದೆ. ಪ್ರೇಕ್ಷಕ ದಡ್ಡತನವನ್ನು ತೋರಿದಲ್ಲಿ ಆ ದೌರ್ಬಲ್ಯವನ್ನುಉಪಯೋಗಿಸುವ ಕಲಾವಿದ ಅಪಕ್ವವಾದ ಪ್ರಯೋಗವನ್ನೇ ಮುಂದುವರಿಸುತ್ತಾನೆ.  ಪ್ರೇಕ್ಷಕನ ಸ್ಥಾನ ಗೌರವಾನ್ವಿತವಾದದ್ದು. ಸಭಾಲಕ್ಷಣದಲ್ಲಿ ಪ್ರೇಕ್ಷಕನ ಸ್ಥಾನ ದೇವತೆಗಳದ್ದು. ಆದುದರಿಂದ ಆ ಘನತೆಯನ್ನು ಉಳಿಸಿಕೊಳ್ಳಬೇಕು.  

ನಾನು ಹಲವು ಕಥಕ್ಕಳಿಯನ್ನು ನೋಡಿದ್ದೇನೆ, ಅಲ್ಲಿ ಪ್ರದರ್ಶನ ಮಧ್ಯೆ ಚಪ್ಪಾಳೆ ಶಿಳ್ಳೆ ಹೊಡೆದ ನಿದರ್ಶನ ನನಗೆ ಸಿಕ್ಕಿಲ್ಲ.  ಇದು ತುಲನೆಯಲ್ಲ. ಇದು ಪ್ರೇಕ್ಷಕ ಧರ್ಮದ ಪ್ರತಿಪಾದನೆ ಮಾತ್ರ. ಪ್ರೇಕ್ಷಕನಲ್ಲಿನ  ಅಜ್ಞಾನ ಯಕ್ಷಗಾನದ ದೌರ್ಬಲ್ಯವಾಗಬಾರದು. ಗ್ರಾಹಕ ಯಾವ ಮನೋಧರ್ಮವನ್ನು ಹೊಂದಿರುತ್ತಾನೋ ಅದನ್ನೆ ವರ್ತಕ ಅನುಸರಿಸಿಬಿಡುತ್ತನೆ. ಇದು ಸಾಮಾನ್ಯ.  ಯಕ್ಷಗಾನದಲ್ಲಿ ಆಧುನಿಕತೆ ಬಳಕೆಯಾದಾಗ ಅದಕ್ಕೆ ಪ್ರೋತ್ಸಾಹ ದೊರೆತಲ್ಲಿ ಅದು ಯಕ್ಷಗಾನಕ್ಕೆ ಸಿಗುವ ಪ್ರೋತ್ಸಾಹವಾಗುವುದಿಲ್ಲ.  ಸಿನಿಮಾ ಅಥವಾ ನಾಟಕ ಯಕ್ಷಗಾನದಲ್ಲಿ ಪ್ರೋತ್ಸಾಹಿಸಲ್ಪಡುತ್ತಿದ್ದರೆ ಅದು ಯಕ್ಷಗಾನವಾಗುವುದಕ್ಕೆ ಸಾಧ್ಯವೇ? ಇದು ಅರ್ಧ ತುಂಬಿದ ಕೊಡದಲ್ಲಿ ಮತ್ತೇನನ್ನೋ ತುಂಬಿಸಿ ಭಾರ ತೂಗಿಸುವ ಕುಟಿಲ ತಂತ್ರಗಾರಿಕೆ.

ಇಂದು ಯಕ್ಷಗಾನದಲ್ಲಿ ಕಲಾವಿದನನ್ನು ಹೊಂದಿಕೊಂಡು ಪ್ರಯೋಗಗಳಾಗುತ್ತದೆ. ಕಾಲ ಮಿತಿಯ ವೇಗದ ಪರಿಧಿಯೊಳಗೆ ಕಲಾವಿದನಿಗೆ ಹೊಂದಿಕೊಂಡು ವೇಗ ನಿರ್ಣಯಿಸಲ್ಪಡುತ್ತದೆ ಹೊರತು ಪ್ರಸಂಗವನ್ನು ಹೊಂದಿಕೊಂಡು ಅಲ್ಲ. ಕಲಾವಿದನ ವೇಗಕ್ಕೆ ಹೊಂದಿಕೊಳ್ಳದ ಹಿಮ್ಮೇಳದವನು ಪರಿಪೂರ್ಣ ತಜ್ಞನಾಗಿದ್ದರೂ ಅಸಮರ್ಥನಾಗಿ ಬಿಂಬಿಸಲ್ಪಡುತ್ತಾನೆ. ಪರಂಪರೆಯಿಂದ ಬಂದ ಹಿರಿಯ ಕಲಾವಿದ ಒಂದು ವೇಷವನ್ನು ನಿರ್ವಹಿಸುವಾಗ ಆ ಪ್ರಸಂಗಕ್ಕೆ ಮತ್ತು ಕಾಲಕ್ಕೆ ಹೊಂದಿಕೊಂಡು ಪರಂಪರೆಯಂತೆ ನಿಧಾನವಾಗಿ ಕುಣಿದರೆ ಆ ಹಿರಿಯ ಕಲಾವಿದನನ್ನು ವೃದ್ಧನಾಗಿ ಅಸಮರ್ಥ ಎಂದೇ ಪರಿಗಣಿಸುತ್ತಾರೆ ಹೊರತು ಮೂಲದಲ್ಲಿನ ಯಕ್ಷಗಾನದ ಅರಿವು ಅವರಲ್ಲಿರುವುದೇ ಇಲ್ಲ. 

ಹಿರಿಯ ಭಾಗವತರೊಬ್ಬರು ಕಾಲಮಾನಕ್ಕೆ ತಕ್ಕಂತೆ ಯಾವುದೋ ಒಂದು ಪದವನ್ನು ಆ ವೇಷಕ್ಕೆ ಮತ್ತು ಸಂದರ್ಭಕ್ಕೆ ಹೊಂದಿಕೊಂಡು ನಿಧಾನವಾಗಿ ಹಾಡಿದರೆ ಹಿರಿಯ ಮದ್ದಲೆ ವಾದಕ ಪೂರ್ಣ ಅರಿವಿದ್ದರೂ ಆ ತಾಳಕ್ಕೆ ಹೊಂದಿಕೊಳ್ಳಲಾಗದೇ ತಡಬಡಾಯಿಸಿ ಅಸಹಾಯಕನಾಗಿಬಿಡುತ್ತಾನೆ. ಕಾರಣ ಆತ ಈ ವೇಗದ ಇನ್ಸ್ ಟಂಟ್ ಯಕ್ಷಗಾನಕ್ಕೆ ಹೊಂದಿಕೊಂಡು ಪೂರ್ಣವಾಗಿ ಬದಲಾಗಿರುತ್ತಾನೆ. ಇದು ಹಿರಿಯ ಮದ್ದಲೆಗಾರರೊಬ್ಬರ ನೈಜ ಅಳಲು. ಹಾಗಾದರೆ ಯಕ್ಷಗಾನ,  ಯಕ್ಷಗಾನವಾಗಿ ಉಳಿದಿಲ್ಲ ಎಂಬುದಕ್ಕೆ ಬೇರೆ ನಿದರ್ಶನ ಬೇಕಿಲ್ಲ.

            ಯಕ್ಷಗಾನದಲ್ಲಿ ನಿರ್ದೇಶಕನ ಅವಶ್ಯಕತೆಯಿದೆಯೇ? ಇಲ್ಲಿ ಭಾಗವತನ ಸ್ಥಾನ ನಿರ್ದೇಶನಕ್ಕೆ ಪರ್ಯಾಪ್ತವೆ?
            ಯಕ್ಷಗಾನಕ್ಕೆ ಇರುವಂತಹುದು ಮೂಲವಾಗಿ ಒಂದು ಚೌಕಟ್ಟು. ಇದು ಪರಂಪರೆಯಿಂದ ಬಂದದ್ದು. ಒಂದು ವೇಷದ ಪ್ರವೇಶದಲ್ಲಿ,  ದೇವೇಂದ್ರ ಅರ್ಜುನ ಹೀಗೆ ಯಾವುದೇ ವೇಷವಾದರೂ ಅದಕ್ಕೊಂದು ಕ್ರಮ ಸಿದ್ಧವಾಗಿರುತ್ತದೆ. ಇದು ಪ್ರಸಂಗ ಯಾವುದೇ ಆಗಿರಲಿ ಇಲ್ಲೊಂದು ಸಾಮಾನ್ಯ ನಿಯಮವಿರುತ್ತದೆ. ಹಾಗಾಗಿ ಯಕ್ಷಗಾನದಲ್ಲಿ ಪರಂಪರೆಯನ್ನು ತಿಳಿದಾಗ ಮತ್ತು ಅನುಸರಿಸಿದಾಗ ಮುಂದಿನದ್ದು ಸುಲಭವಾಗುತ್ತದೆ. ಪರಂಪಯಿರುವುದು ಸುಲಭಮಾಡುವುದಕ್ಕೆ  ಹೊರತು ಅದೊಂದು ಬಂಧನವಲ್ಲ. ಯಕ್ಷಗಾನದಲ್ಲಿ ನಿರ್ದೇಶಕನ ಸ್ಥಾನವಿದ್ದರೆ ಆತನಿಗೆ ಪರಂಪರೆಯ ಸಂಪೂರ್ಣ ಜ್ಞಾನವಿರತಕ್ಕದ್ದು. ಇದು ಅರಿವಿದ್ದು ಮಾಡಿದಲ್ಲಿ ನಿರ್ದೇಶಕನ ಸ್ಥಾನ ತಪ್ಪಲ್ಲ. ನಿರ್ದೇಶನಕ್ಕಿಂತಲೂ ಇಂದು ಮೊದಲು ಆಗಬೇಕಾದ ಕೆಲಸವೆಂದರೆ ಪರಂಪರೆಯನ್ನು ಕಲಿತುಕೊಳ್ಳುವುದು.  ಇದು ನಂಬಿಯಾರರ ಬಹಳ ಸರಳವಾದ ನಿರೂಪಣೆ.  ಸುಮ್ಮನೇ ಅವರರವರ ಮೂಗಿನ ನೇರಕ್ಕೆ ನಿರ್ದೇಶನ ಮಾಡಿದರೆ ಅದು ನಿರ್ದೇಶನವಾಗಬಹುದು ಆದರೆ ಅದು ಯಕ್ಷಗಾನವಾಗುವುದಿಲ್ಲ. 

ಯಕ್ಷಗಾನದಲ್ಲಿ ಪರಂಪರೆ ಎಂದಾಗ ನಿಂತ ನೀರನ್ನು ಕಂಡಂತೆ ಭಾವಿಸುವುದನ್ನು ಕಾಣಬಹುದು. ಹೊಸತನ ಕೊಡುವುದರಲ್ಲೂ ಪಡೆಯುವುದರಲ್ಲೂ ಒಂದು ಅನಾರೋಗ್ಯಕರ ವಾತಾವರಣ ಕಾಣಬಹುದು.   ಪರಂಪರೆ ಎಂದಾಗ  ಇಲ್ಲೊಂದು ಪರಂಪರೆಯಿಂದ ಬಂದ ನಿಯಮವಿರುತ್ತದೆ. ಆ ನಿಯಮದ ಒಳಗೆಯೇ ಪ್ರಸಂಗ ಹೊಸೆದಿರುತ್ತದೆ. ಹಾಗಾಗಿ ಅದನ್ನು ಬಿಟ್ಟು ಇಷ್ಟದಂತೆ ಮಾಡುತ್ತೇ ವೆ ಎಂದರೆ ಅದು ಯಕ್ಷಗಾನವಾಗುವುದಿಲ್ಲ.

          ಯಕ್ಷಗಾನ ಭಾಗವತಿಕೆಯ ಸಂಗೀತದ ಬಗ್ಗೆ ಪ್ರಸ್ತಾಪ ಬಂದಾಗ ಯಕ್ಷಗಾನ ಹಾಡುಗಾರಿಕೆಯಲ್ಲಿ ಸಂಗೀತವೆಂದರೆ ಆಲಾಪನೆ ಮಾಡಿ ಕಛೇರಿ ಮಾಡುವ ಸಂಗೀತವಲ್ಲ. ಇದು ಕೇವಲ ರಂಗ ಸಂಗೀತ.  ತಾಳದ ಒಳಗೇ ಸಂಗಿತವಿರಬೇಕು. ತಾಳ ಛಂದಸ್ಸಿಗೆ ಹೊಂದಿಕೊಂಡು ಇರುತ್ತದೆ.  ಅಂದರೆ ಛಂದಸ್ಸಿನ ಒಳಗೆ ತಾಳ ಮತ್ತು ಸಂಗೀತವಿದ್ದಾಗ ಅದು ಯಕ್ಷಗಾನ ಹಾಡುಗಾರಿಕೆಯಾಗುತ್ತದೆ. ಯಕ್ಷಗಾನ ಭಾಗವತಿಕೆಯಲ್ಲಿ ಮೊದಲು ತಾಳವನ್ನು ಕಲಿಯಬೇಕು. ಅದರ ದಸ್ತಗಳನ್ನು ಕಲಿಯಬೇಕು ತಾಳದ ಬಿಡ್ತಿಗೆಯನ್ನೂ ಮುಕ್ತಾಯವನ್ನೂ ಕಲಿತನಂತರ,   ಆ ತಾಳಕ್ಕೆ ಪದವನ್ನು ಓದುವುದನ್ನು ಕಲಿಯಬೇಕು. ಅಂದರೆ ತಾಳಕ್ಕೆ ಮಾತ್ರಾಗಣದ ಅನುಸಾರ ಪದವನ್ನು ಕೂರಿಸುವುದಕ್ಕೆ ಅಭ್ಯಾಸ ಮಾಡಬೇಕು. ಇದೆಲ್ಲದರ ನಂತರ ಅದನ್ನು ಹಾಡುವುದಕ್ಕೆ ಕಲಿಯಬೇಕು. ಇದರ ನಡುವೆ ಆತ ಸ್ವರಾಭ್ಯಾಸ ಮಾಡಬೇಕು.  ಆದರೆ ಇಂದು ಹೀಗಾಗದೆ ತಾಳ ಛಂದಸ್ಸನ್ನು ಬಿಟ್ಟು ಕೇವಲ ರಾಗವಿಸ್ತಾರವನ್ನು ಮಾಡಿದರು. ಇದರಿಂದ ಯಕ್ಷಗಾನ ಕುಣಿತ ಬಲ್ಲ ಕಲಾವಿದನೂ ತಾನು ಹೇಗೆ ಕುಣಿಯುವುದಪ್ಪ ಎಂಬಂತಹ ಸ್ಥಿತಿ ನಿರ್ಮಾಣವಾಗಿಬಿಟ್ಟಿತು.  ಯಕ್ಷಗಾನ ಭಾಗವತಿಕೆಗೆ ಬಲಿಪ್ಪರು ಮತ್ತು ಅಗರಿಯವರ ದಾರಿ ಅದು ಅನುಸರಿಸಲೇ ಬೇಕು.  ಹಾಗಿದ್ದಲ್ಲಿ ಮಾತ್ರ ಅದು ಯಕ್ಷಗಾನವಾಗಿ ಉಳಿಯುವುದಕ್ಕೆ ಸಾಧ್ಯವಾಗುತ್ತದೆ. ಪ್ರಸಂಗದಲ್ಲಿ ಸೂಚಿತ ರಾಗದಲ್ಲೇ ಪದಗಳನ್ನು ಹಾಡುವಂತಾಗಬೇಕು. ಇಲ್ಲಿ ಇರುಂವಂತಹುದನ್ನು ಮೊದಲು ಪೂರ್ಣವಾಗಿ ಕಲಿಯಬೇಕು. ಸ್ವಂತಿಕೆಯ ಅಗತ್ಯವಿರುವುದಿಲ್ಲ.

ಯಕ್ಷಗಾನದಲ್ಲಿ ಬಡತನವನ್ನು ಗುರುತಿಸುವ ಅಗತ್ಯವಿಲ್ಲ. ಪ್ರಸಂಗದಲ್ಲಿ ಸೂಚಿಸಿದ ರಾಗದಲ್ಲಿ ಹಾಡಲು ಅಸಮರ್ಥನಾದವನು ಆ ಪ್ರಸಂಗ ನಡೆಸುವುದಕ್ಕೆ ಅಸಮರ್ಥ ಎಂದು ಸಾರಿದಂತೇ ಅಲ್ಲವೆ? ಹಾಗಾಗಿಯೇ ಇವರ ಮಾತುಗಳು ಮನಸ್ಸಿಗೆ ನಾಟುತ್ತವೆ. ಅಲ್ಲವೆನ್ನುವುದಕ್ಕೆ ಕಾರಣಗಳಿರುವುದೇ ಇಲ್ಲ. ನಂಬಿಯಾರರ ಖಚಿತವಾದ ಮಾತುಗಳು ಇಂದಿನ ವರ್ತಮಾನಕ್ಕೆ ಹಿಡಿದ ಕನ್ನಡಿಯಂತೆ ಭಾಸವಾಗುತ್ತದೆ. ಇಂದು ಪರಂಪರೆಯನ್ನು ಅನುಸರಿಸಿದವನ ಸ್ಥಿತಿ ಮೂಗರ ಸಂತೆಯಲ್ಲಿ ಮಾತು ಬಲ್ಲವನೂ  ಮಾತಿಲ್ಲದ ವ್ಯವಹಾರ ಮಾಡುವಂತಾಗಿದೆ.

    ಸುಮಾರು ನಾಲ್ಕುನೂರು ವರ್ಷಗಳಷ್ಟು ಹಳೆಯ ಅಂದರೆ ಸರಿ ಸುಮಾರು ಹದಿನೈದು ತಲೆಮಾರುಗಳ ಬುದ್ಧಿಮತ್ತೆ ನಮ್ಮಲ್ಲಿವರೆಗೆ ದಾಟಿ ಬಂದಿದೆ. ಇದು ಇಂದಿನ ಯಾವುದೇ ತಂತ್ರಜ್ಞಾನದ ಸಹಾಯದಿಂದ ಅಲ್ಲ. ಕೇವಲ ಶೃತಿ  ಸ್ಮೃತಿಯಿಂದಾಗಿ ಬಾಯಿಯಿಂದ ಕಿವಿಗೆ ಕಿವಿಯಿಂದ ಬಾಯಿಗೆ ಹರಿದು ಬಂದಂತಹ ಅಮೂಲ್ಯ ಕಲೆಯಿದು. ಇತ್ತೀಚಿನ ಮೂವತ್ತು ನಲ್ವತ್ತು ವರ್ಷಗಳಲ್ಲಿ ನಾವದನ್ನು ಹಾಳು ಮಾಡುತ್ತೇವೆ ಎಂದರೆ ಇದಕ್ಕಿಂತ ಬೇರೆ ದುರಂತ ಬೇಕೆ?  ಮನನೊಂದ ಮಾತು.  ಎಂತಹಾ ಕಟು ಸತ್ಯವಿದು.

ಪ್ರಸಂಗ ಪುಸ್ತಕ ಅಥವಾ ಬರಹ ರೂಪದಲ್ಲಿ ಬಳಕೆಗೆ ಬಂದದ್ದು ಕೆಲವು ದಶಕಗಳಿಂದ ಇರಬಹುದು. ಆದರೆ ಅದುವರೆಗೆ ಅದು ಹರಿದು ಬಂದ ಬಗೆಯನ್ನು ಕಲ್ಪಿಸೋಣ. ಇದೊಂದೇ ನಿದರ್ಶನ ಸಾಕು ಯಕ್ಷಗಾನ ಒಂದು ಪರಂಪರೆಯ ಕಲೆ ಎಂದು ಹೇಳುವುದಕ್ಕೆ. ಆ ಶುದ್ದ ಪರಂಪರೆ ನಮ್ಮ ವರ್ತಮಾನದಲ್ಲೇ ಕೊಂಡಿ ಕಳಚಿ ಇನ್ನೇನೋ ರೂಪ ತಾಳಬೇಕೆ? ಯಕ್ಷಗಾನದಲ್ಲಿ ಕಿಂಚಿತ್ ಅಭಿಮಾನ ಗೌರವ ಪ್ರೀತಿ ಇದ್ದಲ್ಲಿ ಆ ಪರಂಪರೆಯನ್ನು ಉಳಿಸುವ ನಿಷ್ಠೆಯತ್ತ ಮನ ಹರಿಯಬೇಕು.

ಯಕ್ಷಗಾನ ಶಾಸ್ತ್ರಿಯ ಕಲೆಯಲ್ಲ. ಹೀಗೆ ಹೇಳಬಹುದು. ಅದರ ಸತ್ಯಾಸತ್ಯತೆಯ ವಿಶ್ಲೇಷಣೆಗಿಂತ ಯಕ್ಷಗಾನ ಪದಗಳ ರಾಗ ತಾಳ ಛಂದಸ್ಸು ಅವುಗಳು ಬೆಳೆದು ಬಂದರೀತಿ ಶುದ್ದ ಶಾಸ್ತ್ರೀಯತೆಯ ಅನುಭವವನ್ನು ಕೊಡುವುದಿಲ್ಲವೇ? ಇಲ್ಲಿ ಯಕ್ಷಗಾನ ಶೈಲಿಯಲ್ಲಿ ಬಳಕೆಯಾಗುವ ಸಂಗೀತದ ರಾಗಗಳು ನರ್ತನ ಶೈಲಿಗಳು ಯಕ್ಷಗಾನಕ್ಕಾಗುವಾಗ ಬೇರೆಯೇ ರೂಪವನ್ನು ಪಡೆದುಕೊಂಡಿದೆ.

             ಯಕ್ಷಗಾನದಲ್ಲಿ ಪುರಾಣ ಪ್ರಸಂಗಗಳು ಮೂಲ ಪುರಾಣದಂತೆ ಇಲ್ಲ , ಏಕಿಲ್ಲ ಎಂಬುದಕ್ಕೆ ಸ್ಪಷ್ಟವಾದ ವಿವರಣಿ ಇಲ್ಲಿ ಸಿಗುತ್ತದೆ.  ಪುರಾಣ ಪ್ರಸಂಗಗಳು ಯಾವ ರಂಗ ಪ್ರಾಕಾರಗಳಲ್ಲೂ ಮೂಲ ಪುರಾಣದಂತೆ ಇಲ್ಲ. ರಂಗ ಪ್ರಾಕಾರಗಳು ಇರುವುದು ರಸವನ್ನು ಸೃಷ್ಟಿಸುವುದಕ್ಕೆ. ರಸವಿರುವುದು ಆಸ್ವಾದನೆಗೆ. ಪುರಾಣ ದರ್ಶನಕ್ಕೆ ಮೂಲ ಪುರಾಣ ಕೃತಿಗಳ ಪಾರಾಯಣ ಮಾಡಬಹುದು. ಆಮೂಲಕ ತಿಳಿದುಕೊಳ್ಳಬಹುದು.  ಆದರೆ ರಂಗಕ್ಕೆ ಅವುಗಳನ್ನು ತರುವ ಉದ್ದೇಶ ಕಥೆಯನ್ನು ಹೇಳುವುದಕ್ಕಲ್ಲ.  ರಂಗದಲ್ಲಿ ರಸಗಳೇ ಪ್ರಧಾನ. ಪುರಾಣ ಅದಕ್ಕೆ ಮಾಧ್ಯಮ.  ಹಾಗಾಗಿ ರಂಗಕ್ಕನುಸಾರವಾಗಿ ರಸೋತ್ಪತ್ತಿಗೆ ಅನುಕೂಲವಾಗುವಂತೆ ಇಲ್ಲಿ ಬದಲಾವಣೆ ಸಾಧ್ಯವಾಗುತ್ತದೆ.

            ನಂಬಿಯಾರರು ಸರಳವಾಗಿ ವಿವರಿಸುತ್ತಾ ಚಿಂತನೆಯ ಹೊಸ ಬಿತ್ತನೆಯನ್ನು ಬಿತ್ತುತ್ತಾರೆ ಎಂದನಿಸುತ್ತದೆ.  ರಾಮಾಯಣದ ಕಥೆ ತಿಳಿದಿದ್ದರೂ ಯಕ್ಷಗಾನವನ್ನೋ ನಾಟಕವನ್ನೋ ನೋಡುವ ಕುತೂಹಲವೇಕೆ? ಅಲ್ಲಿ ಕಥೆಯನ್ನು ತಿಳಿಯುವ ಉದ್ದೇಶವಿರುವುದಿಲ್ಲ. ಕಾದಂಬರಿಯನ್ನೋ ಕಥೆಯನ್ನೋ ಸಿನಿಮಾ ಅಥವಾ ನಾಟಕವಾಗಿ ರಂಗದ ಮೇಲೆ ತರುವಾಗ ಮೂಲ ಕಥೆಯಂತೆ ಅಲ್ಲಿ ಚಿತ್ರಿತವಾಗುತ್ತದೆಯೇ? ಇಲ್ಲ. ರಂಗಕ್ಕನುಸಾರವಾಗಿ ಅಲ್ಲಿ ಬದಲಾವಣೆ ಕಾಣಬೇಕಾಗುತ್ತದೆ. ಅಲ್ಲಿ ಆಸ್ವಾದಿಸಬಲ್ಲ ರಸಾನುಭವವೇ ಪ್ರಧಾನವಾಗುತ್ತದೆ. ಕಥೆ ಓದುವಾಗ ಆಗುವ ರಸೋತ್ಪತ್ತಿಗೂ ಕಥೆ ರಂಗದ ಮೇಲೆ ಕಾಣುವಾಗ ಆಗುವ ರಸೊತ್ಪತ್ತಿಗೂ ವೆತ್ಯಾಸ ಇರುತ್ತದೆ.

            ಇನ್ನೊಂದು ಪ್ರಮುಖ ಪ್ರಶ್ನೆ. ಈ ಮೊದಲು ಶೇಣಿಯವರ ರಾವಣ ಪಾತ್ರವನ್ನು ನನ್ನ ಬ್ಲಾಗ್ ಲೇಖನದಲ್ಲಿ ಬರೆದಾಗ ಆಸಕ್ತರೊಬ್ಬರೂ ಇದೇ ರೀತಿಯ ಜಿಜ್ಞಾಸೆಯನ್ನಲ್ಲಿ ಇಟ್ಟಿದ್ದರು. ಯಕ್ಷಗಾನದಲ್ಲಿ ಖಳ ಪಾತ್ರದ ವಿಜ್ರಂಭಣೆ ಅಥವಾ ವೈಭವೀ ಕರಿಸುವುದು ಸರಿಯೇ?  ಮೇಲೆ ಹೇಳಿದ ರಸೋತ್ಪತ್ತಿ ಪ್ರಧಾನವಾಗುವಾಗ ಖಳ ಪಾತ್ರ ವೈಭವೀಕರಿಸಲ್ಪಟ್ಟರೆ ಆ ಮಟ್ಟಿಗೆ ರಸೋತ್ಪತ್ತಿ ಪ್ರಾಮಾಣಿಕರಿಸಲ್ಪಟ್ಟಿತ್ತು ಎಂದು ತಿಳಿದುಕೊಂಡರೆ, ಖಳ ಪಾತ್ರ ವೈಭವೀಕರಣ ತಪ್ಪಲ್ಲ ಎಂದನಿಸುತ್ತದೆ. ಆದರೆ ಇದೇ ಪ್ರಶ್ನೆಗೆ ನಂಬಿಯಾರ ವಿವರಣೆ ಸಹಜವಾಗಿ ಸರಳವಾಗಿ ಬರುತ್ತದೆ.

            ಯಾವುದೇ ಕಥೆಯಲ್ಲಿ ನಾಯಕ ಪಾತ್ರಗಳು ಮತ್ತು ಖಳ ಪಾತ್ರಗಳು ಇರುತ್ತವೆ. ಖಳ ಪಾತ್ರಗಳ ಯೋಗ್ಯತೆಗಳು ಹೆಚ್ಚಾಗುವಾಗ ಖಳನನ್ನು ಸೋಲಿಸುವ ನಾಯಕಪಾತ್ರಗಳ ಯೋಗ್ಯತೆಯೂ ಸಹಜವಾಗಿ ಹೆಚ್ಚೇ ಇರಬೇಕಾಗುತ್ತದೆ. ಹಾಗಾಗಿ ಖಳ  ಪಾತ್ರ ವಿಜ್ರಂಭಿಸುವಾಗ ಅದನ್ನು ಸೋಲಿಸುವ ನಾಯಕ ಪಾತ್ರವೂ ಪರೋಕ್ಷವಾಗಿ ವೈಭವೀಕರಿಸಿದಂತೆ. ಯೋಗ್ಯತಾವಂತ ಖಳನನ್ನು ಸೋಲಿಸುವಾಗ ನಾಯಕನ ಯೋಗ್ಯತೆಯೂ ಅದಕ್ಕಿಂತ ಹೆಚ್ಚೇ ಅಲ್ಲವೇ?

         ಹೀಗೆ ಸಂದರ್ಶನ ಕೇವಲ ಸಂದರ್ಶನವಾಗಿ ಇಲ್ಲಿ ಕಂಡುಬರುವುದಿಲ್ಲ. ಹಲವು ನಿಷ್ಠೂರ ಸತ್ಯದ ಪ್ರತಿಪಾದನೆಯಂತೆ ಇಲ್ಲಿ ಕಂಡುಬಂದರೆ ಇದು  ಅಗಾಧವಾದ ತಿಳುವಳಿಕೆಯ ಕಿಂಚಿತ್ ದರ್ಶನಂತೆ ಭಾಸವಾಗುತ್ತದೆ. ಅದಕ್ಕಾಗಿ ಇದನ್ನು ಗಮನವಿಟ್ತು ನೋಡಬೇಕು. ಕಿವಿಯಾರೆ ಕೇಳಬೇಕು.  ಡಾ| ರಾಘವ ನಂಬಿಯಾರ ಬಗ್ಗೆ ನಾವು ಹೇಳುವುದಲ್ಲ ತಿಳಿಕೊಳ್ಳುವ ಅಗತ್ಯವಿದೆ. ಅವರು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಆದರೆ ಈ ಸಂವಾದ ಅದನ್ನು ವ್ಯಕ್ತ ಪಡಿಸುತ್ತದೆ. ಯಕ್ಷಗಾನ ಪದಗಳನ್ನು ಹೇಳುವಾಗ ಇವರು ಭಾಗವತನಂತೆ ಅವತರಿಸಿಬಿಡುತ್ತಾರೆ, ಅರ್ಥಗಾರಿಕೆ,  ವೇಷಗಾರಿಕೆ ಕುಣಿತ ಎಲ್ಲದರಲ್ಲೂ ಸಮ ಪ್ರಮಾಣದ ಪ್ರೌಢಿಮೆಯನ್ನು ತೋರುತ್ತಾರೆ. ಹೆಚ್ಚೇಕೆ ಪ್ರೇಕ್ಷಕನಾಗಿಯೂ ಶುದ್ದ ಅವಲೋಕನವನ್ನು ಮಾಡುತ್ತಾರೆ. ಪ್ರತಿಯೋಂದೂ ವಿಚಾರಗಳೂ ಇವರ ಸಂಶೊಧನೆಯ ಹಾದಿಯಲ್ಲಿ ಸಿಕ್ಕ ನಿಲ್ದಾಣಗಳು. ಸಹಜವಾಗಿ ನಿಲ್ದಾಣಗಳ ಬಗ್ಗೆ ಅಲ್ಲಿಂದ ಸರಿದು ಹೋದಮೇಲೆ ಅಲ್ಲಿಯ ಸ್ಥಿತಿಗತಿಯ ಬಗ್ಗೆ ಅರಿವಿರುವಿದಿಲ್ಲ. ಆದರೆ ಇಲ್ಲಿ ಸರಿದು ಹೋದ ನಿಲ್ದಾಣಗಳಲ್ಲಿ ಇವರ ಅವಲೋಕನ ದೃಷ್ಟಿ ಸರಿದಾಡುತ್ತಾ ಇರುತ್ತದೆ. ಹಾಗಾಗಿಯೇ ವಾಸ್ತವದ ಆಗು ಹೋಗುಗಳಬಗ್ಗೆ ಮಾತನಾಡುತ್ತಾರೆ. ಯಕ್ಷಗಾನದಂತೆ ಕೇರಳದ ಕಥಕ್ಕಳಿಯ ಬಗ್ಗೆಯೂ ಹೀಗೆ ಪ್ರವಚಿಸಬಲ್ಲರು ಅಷ್ಟೇ ಏಕೆ ಸಂಗೀತದ ಸ್ವರ ಆಲಾಪಗಳ ಬಗ್ಗೆಯೂ ಇವರ ಮಾತು ಪ್ರಬುದ್ಧತೆಯನ್ನು ಸಾರುತ್ತದೆ. ಇದಲ್ಲವೇ ಸಂಶೋಧಕನ ನಿಜವಾದ ಅರ್ಹತೆ. ಹಾಗಾಗಿಯೇ ಸಂವಾದ ಮುಗಿದಾಗ ಅನ್ನಿಸುತ್ತದೆ. ಯಕ್ಷಗಾನಕ್ಕೊಂದು ಲಾಕ್ಷಣಿಕ ಗ್ರಂಥವಾಗಬೇಕು. ಅದಕ್ಕೆ ಇವರು ಸಂಪಾದಕರಾಗಬೇಕು.  ಯಕ್ಷಗಾನಕ್ಕೊಂದು ಮಾನ್ಯತೆಯ ವಿಶ್ವವಿದ್ಯಾನಿಲಯ  ಸ್ಥಾಪನೆಯಾಗಬೇಕು, ಅದಕ್ಕಿವರು ಪ್ರಾಚಾರ್ಯರಾಗಬೇಕು.  ಎಲ್ಲದಕ್ಕೂ ಮೊದಲು ಯಕ್ಷಗಾನಕ್ಕೆ ಆ ಸೇವಾಭಾಗ್ಯ ಒದಗಿಬರಬೇಕು.

            “ಈ ರೀತಿಯ ಸಂವಾದವನ್ನು ತೆರೆದಿಟ್ಟ ಶ್ರೀ ರಂಗನಾಥ ಸಿತ್ಲರ ಪರಿಶ್ರಮ ಪ್ರಶಂಸನೀಯ.”  ಈ ಒಂದು ವಾಕ್ಯ ಸಾವಿರ ಮಾತುಗಳನ್ನು ಹುದುಗಿಸಿದಂತೆ. ಯಾಕೆಂದರೆ ನಿಸ್ವಾರ್ಥ ಸೇವೆ ಎಂದೂ ಯಾವ ಫಲವನ್ನೂ ನಿರೀಕ್ಷಿಸುವುದಿಲ್ಲ. ಹಾಗಾಗಿ ಈ ಒಂದರಲ್ಲಿ ಸಾವಿರವನ್ನು ತುಂಬಿಕೊಡುವ ಬಯಕೆ ಇದು.
ಯಕ್ಷಗಾನಂ ಗೆಲ್ಗೆ