“ಹೊಸದನ್ನು ನಾವು ಮೌಲ್ಯ ಕೊಟ್ಟು ಕೊಂಡುಕೊಳ್ಳುವಾಗ
ನೆನಪುಗಳು, ಕಳೆದುಕೊಂಡ ಹಳೆಯದರ ಮೌಲ್ಯವನ್ನು
ನೆನಪಿಸುತ್ತವೆ.”
ಮನುಷ್ಯ
ಭಾವನಾರಹಿತನಾಗಿ ಬದುಕುವುದಕ್ಕೆ ಸಾಧ್ಯವಿಲ್ಲ. ಭಾವನೆಗಳು ಅಸ್ತಿತ್ವದ ಸಂಕೇತಗಳಾಗಿವೆ.
ಹರಿಪದಗಳ ಹೊಸ್ತಿಲಲ್ಲಿ ನಿಂತ ಬಲಿ ಚಕ್ರವರ್ತಿ
ತಲೆಯನ್ನು ಒಡ್ಡಿ ಹರಿಯ ಮೂರನೇ ಪಾದದ ಧೂಳನ್ನು ಸೋಕಿಸಿ ಪದ ಭಾರವನ್ನು ಹೊರುವುದಕ್ಕೆ
ಸಿದ್ದನಾಗುತ್ತಾನೆ. ಶರಣನಾಗಿ ಶ್ರೀ ಹರಿಯಲ್ಲಿ ಕೇಳುತ್ತಾನೆ ತಾನು ಪಾತಾಳದ ಆಳಕ್ಕೆ
ತಳ್ಳಲ್ಪಟ್ಟರೂ ಈ ಭೂಮಿಯ ಕಿಂಚಿತ್ ಮೋಹ ಇನ್ನು ಉಳಿದುಕೊಂಡಿದೇಯೋ ಎಂಬ ಅನುಮಾನ, ಹಾಗಾಗಿ ಸಂವತ್ಸರದ ಒಂದು ದಿನ ಈ ಭೂಮಿಯನ್ನು ನೋಡುವಂತೆ ಅನುಗ್ರಹಿಸು.
ಪರಮಾತ್ಮ ಸುಪ್ರೀತನಾಗಿ ಅನುಗ್ರಹಿಸುತ್ತಾನೆ. ಆನಂತರ ಬಲಿ ಚಕ್ರವರ್ತಿ ಕಾರ್ತಿಕ ಮಾಸದ ಶುದ್ದ
ಪಾಡ್ಯದಿನ ಭೂಮಿ ವೀಕ್ಷಣೆಗೆ ಬರುತ್ತಾನೆ. ಆತನಿಗೆ ಪ್ರಜೆಗಳು ಹೇಗೆ ಪರಮಾತ್ಮನ
ಉಪಾಸಕರಾಗಿರುತ್ತಾರೋ ಎಂದು ಕಾಣುವ ತವಕ.
ಆದರೆ ನಮ್ಮ ಆಚಾರ ವಿಚಾರಗಳು ಬದಲಾಗಿವೆ. ಆಚರಣೆಗಳಿಗೆ
ಅರ್ಥ ಹುಡುಕಿ ಚೌಕಾಶಿ ಮಾಡಿ ಆಚರಿಸುವಾಗ ಬದಲಾವಣೆ ಸಹಜ.
ಬದಲಾದ ಕಾಲಘಟ್ಟದಲ್ಲಿ ಈಗೀಗ ಬಲಿ ಚಕ್ರವರ್ತಿ ಬಂದು
ಪ್ರಜೆಗಳನ್ನು ನೋಡುವ ತವಕ ವಿದ್ದರೆ, ಪ್ರಜೆಗಳು ತುಸುವಾದರೂ ಬದಲಾಗಿದ್ದಾರೋ ಎಂದು ಕಾಣುವ
ಹಂಬಲವಿರಬಹುದು. ಯಾಕೆಂದರೆ ಮನುಷ್ಯ ಪರಂಪರೆಯ
ಆಚಾರ ವಿಚಾರಗಳನ್ನು ಕೇವಲ ಪರಂಪರೆ ಎಂಬ ಕಾರಣಕ್ಕೆ ಅದನ್ನುಕಡೆಗಣಿಸಿಬಿಟ್ಟಿದ್ದಾನೆ. ಜನ
ಬದಲಾಗಿದ್ದಾರೆ ಎಂದು ನೋಡುವುದಕ್ಕಿಂತ ಜನ ಜೀವನದಲ್ಲಿ ಪರಂಪರೆ ಎಷ್ಟು ಉಳಿದುಕೊಂಡಿದೆ ಎಂದು
ನೋಡಬೇಕು. ಬಹುಷಃ ಸಂವತ್ಸರಕ್ಕೆ ಒಂದು ದಿನ ಬರುವ ಬಲಿ ಚಕ್ರವರ್ತಿ ಇನ್ನು ಅರುವತ್ತು ಸಂವತ್ಸರಗಳ
ಒಂದು ಆವರ್ತನ ಮುಗಿಯುವವರೆಗೂ ತನ್ನ ಬರುವ ಅವಧಿಯನ್ನು ವಿಸ್ತರಿಸಿಬಿಡಬಹುದು.
ಪರಂಪರೆಯ ಬಗ್ಗೆ ಹೇಳುವಾಗ ನಿರಾಶೆ ಮೂಡುವುದು ಸಹಜ.
ಬೇಡ ಬೇಡವೆಂದರೂ ಪರಂಪರೆ ಅಷ್ಟೋ ಇಷ್ಟೋ ಉಳಿಯುತ್ತಿದ್ದರೆ, ಅದಕ್ಕೆ ಪರಂಪರೆಯಲ್ಲಿರುವ
ಗಟ್ಟಿತನವೇ ಕಾರಣ. ಇಲ್ಲವಾದರೆ ಅಷ್ಟೂ ಬೇಡವಾದರೂ ಸಹ ಪರಂಪರೆ ಮತ್ತೂ ಸಹ ಜೀವ ಸೆಲೆಯನ್ನು ಉಳಿಸಿ
ಉಸಿರಾಡುವುದಾದರೂ ಯಾಕೆ?
ಈತ್ತೀಚೆಗೆ ಆತ್ಮೀಯ ಮಿತ್ರ ರಂಗಣ್ಣ ( ಕಟೀಲು ಸಿತ್ಲ ರಂಗನಾಥ ರಾವ್) ಯಕ್ಷಗಾನ ತಾಳ ಮದ್ದಲೆಯ ಸಂಪೂರ್ಣ ವೀಡಿಯೋ ಒಂದನ್ನು ಅಂತರ್ಜಾಲಕ್ಕೇರಿಸಿದರು. ವಾಸ್ತವದಲ್ಲಿ ಅದನ್ನು ನನ್ನಿಂದಲೇ ಪಡೆದುಕೊಂಡಿದ್ದರು.
ಅದು ನನ್ನ ಇನ್ನೋರ್ವ ಆತ್ಮೀಯ ಮಿತ್ರ ವೇಣೂರು
ಸುಬ್ಬಣ್ಣನ ಮನೆಯ ತಾಳಮದ್ದಲೆಯ ವೀಡಿಯೋ. ಕೆಲವು
ವರ್ಷಗಳ ಹಿಂದಿನ ಹಳೆಯ ತಾಳ ಮದ್ದಲೆಯ ಕಾರ್ಯಕ್ರಮವದು.
ಈ ಮೊದಲು ಹಲವು ಸಲ ಅದನ್ನು ನೋಡಿದರೂ ಅಂತರ್ಜಾಲದಲ್ಲಿ ಒಂದು ಸಲ ನೋಡಿದೆ. ಅದರಲ್ಲಿ ಆರಂಭದ ಸ್ತುತಿ
ಪದ್ಯದ ಮೊದಲಿಗೆ ಗೂಂಯ್ ಎನ್ನುವ ಹಾರ್ಮೋನಿಯಂ ಶ್ರುತಿ ಕೇಳಿಯೇ ನೆನಪುಗಳು ಗರಿಗೆದರುತ್ತವೆ.
ಇದಕ್ಕೆ ಕಾರಣಗಳು ಹಲವಿರಬಹುದು. ಆದರೆ ಅತಿ ಗಂಭೀರ ವಿಷಯವೆಂದರೆ ಬದಲಾದ ಕಾಲಘಟ್ಟದಲ್ಲಿ ಬದಲಾಗಿ
ಹೋದ ಕಲಾ ಸ್ವರೂಪ, ತುಮುಲದಿಂದ
ಅನಿವಾರ್ಯತೆಯನ್ನು ಒಪ್ಪಿಕೊಳ್ಳುವಂತೆ ಮಾಡಿತು.
ಯಾವೂದೊ ಹಳೆಯ ಯಕ್ಷಗಾನ ಪದವನ್ನು ಮಿತ್ರಬಳಗದಲ್ಲಿ ಹಂಚಿಕೊಂಡಾಗ ಮಿತ್ರರೊಬ್ಬರು
ಹೇಳಿದ್ದರು, ಹಾರ್ಮೋನಿಯಂ ಶ್ರುತಿಯಲ್ಲಿ ಬಲಿಪ್ಪಜ್ಜನ ಪದಕೇಳುವುದರಲ್ಲಿ ಒಂದು ಸುಖವಿದೆ. ಮಿತ್ರರ ಮಾತು ಸತ್ಯ ಎಂಬುದಕ್ಕೆ ಪುರಾವೆ ಎಂಬಂತೆ ಆ
ಶ್ರುತಿ ಗುಂಯ್ ಎನ್ನುತ್ತಾ ಸುತ್ತಿಕೊಂಡು ಆ ಸುಳಿಗೆ ಸಿಕ್ಕಿಸಿಕೊಳ್ಳುವ ಹಾಗೆ ಮಾಡಿತು.
ಕೇವಲ ಒಂದು ಶ್ರುತಿಯ ನಾದವೇ ಬದಲಾಗಿಹೋದ ನೋವುಗಳ
ಕಥೆಯನ್ನು ಹೇಳುವುದಾದರೆ ಹೇಳದೆ ಉಳಿವ ಕಥೆಗಳೆಷ್ಟಿರಬಹುದು? ಲೆಕ್ಕ
ಹಾಕಿ. ಮನೆಯಲ್ಲಿ ತಾಳ ಮದ್ದಲೆಯೋ ಯಕ್ಷಗಾನ ಬಯಲಾಟವೋ ಆದರೆ ಅಲ್ಲಿ ಹಾರ್ಮೋನಿಯಂ ಕದ
ಎಳೆಯುವುದಕ್ಕೆ ಹುಡುಗರಲ್ಲಿ ಸ್ಪರ್ಧೆ ಇರುತ್ತಿತ್ತು. ಭಾಗವತರ ಹಿಂದಿನ ಒಂದು ಪ್ರೇರಣೆ ಶಕ್ತಿಯಂತೆ
ಇದ್ದ
ಅತ್ಯಂತ ಸೂಕ್ಷ್ಮ ಸ್ಥಾನ ಇಂದು ಶ್ರುತಿ ಪೆಟ್ಟಿಗೆಯ ಎಕತಾನತೆಯ ಧ್ವನಿಗೆ ಶೂನ್ಯವಾಗಿ
ಹೋಗಿದೆ. ಈಗಲೂ ಆ ಶ್ರುತಿಯ ನಾದ ಕೇಳುವಾಗ
ಯಕ್ಷಗಾನ ಲೋಕಕ್ಕೆ ಜಾರಿ ಬೀಳುವ ಅನುಭವವಾಗುತ್ತದೆ.
ಅದನ್ನೆ ಯಕ್ಷಾಕರ್ಷಣೆ ಎನ್ನುವುದು. ಇಂದಿನ ಯಕ್ಷಗಾನದಲ್ಲಿ
ಅದು ಇಲ್ಲವಾಗಿ ಹೋಗಿದೆ.
ಪ್ರಾಪಂಚಿಕ
ವ್ಯವಹಾರಗಳೇ ಹಾಗೆ ಕೆಲವೊಮ್ಮೆ ತೀರ ಪ್ರಾಪಂಚಿಕವಾಗಿ ವ್ಯಾವಹಾರಿಕವಾಗಿಬಿಡುತ್ತದೆ. ಆ
ವ್ಯವಹಾರಗಳೇ ನೆನೆಪಿನ ಮೌಲ್ಯವನ್ನು ಅಲ್ಲಲ್ಲಿ ನೆನಪಿಸುತ್ತವೆ. ಕೆಲವು ವರ್ಷದಿಂದ ಹಿಂದಿನ
ನೆನಪುಗಳೇ ಹೀಗೆ ಬಹಳ ಹಿಂದೆ ಹೋದಂತೆ ಭಾಸವಾದರೆ ಯಕ್ಷಗಾನ ಬದಲಾಗುವ ವೇಗ ಗಾಬರಿಹುಟ್ಟಿಸುತ್ತದೆ.
ಹಾಗಾದರೆ ದಶಕ ಶತಕಗಳ ಹಿಂದಿನ ಯಕ್ಷಗಾನ ಹೇಗಿರಬಹುದು? ನಾವು ಕಲೆಗೆ ಹೊಸ ಮೌಲ್ಯವನ್ನು
ಕಟ್ಟಿಕೊಡಬಹುದು. ಆದರೆ ಹಳೆಯ ಮೌಲ್ಯದಿಂದ ಅದನ್ನು ಕಳೆಯುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ
ಹಳೆಯ ಮೌಲ್ಯದ ಗಾತ್ರ ಅಷ್ಟು ದೊಡ್ಡದಿರುತ್ತದೆ. ಪರಂಪರೆ ಎನ್ನುವುದೇ ಅದಕ್ಕೆ. ವಿಚಿತ್ರವೆಂದರೆ
ನಾವು ಅದನ್ನೇ ಕೆತ್ತಿ ಕೆತ್ತಿ ಗಾತ್ರ ಚಿಕ್ಕದಾಗಿಸಿ ಅದರಿಂದಲೇ ಹೊಸದನ್ನು ಕಳೆಯುವ ಯತ್ನ
ಮಾಡುತ್ತೇವೆ ಎನಿಸುತ್ತದೆ. ಯಕ್ಷಗಾನ ಅಷ್ಟೊಂದು ಬದಲಾಗಿ ಹೋಗಿ ಈಗ ಎಷ್ಟು ಹಳೆಯದು ಎಷ್ಟು ಉಳಿದುಕೊಂಡಿದೆ ಎಂದು ಅಗಾಗ
ಬಲಿ ಚಕ್ರವರ್ತಿಯಂತೆ ಹೋಗಿ ನೋಡಬೇಕಾಗಿದೆ.
ಸದ್ಯ ಊರಿಗೆ ಹೋಗಿದ್ದಾಗ ಮಿತ್ರರೊಬ್ಬರು ಹೇಳಿದ
ಮಾತು ವಸ್ತುಸ್ಥಿತಿಯ ಸತ್ಯದಂತೆ ಭಾಸವಾಗಿತ್ತು.
ಆಟಕ್ಕೆ ಹೋಗಿದ್ದಿರಾ? ಎಂದು ಕೇಳಿದ್ದಕ್ಕೆ ಅವರ ಉತ್ತರ ನನಗೆ ಆಶ್ಚರ್ಯವನ್ನು ತಂದಿಲ್ಲ....!!!
ಯಾಕೆ ತಂದಿಲ್ಲ? ಅವರು ಹೇಳಿದರು, ಇಲ್ಲಣ್ಣ ಈಗ ಹೋಗುವುದಕ್ಕೆ ಸಮಯವೂ ಇಲ್ಲ. ಮತ್ತೆ ಇಲ್ಲದ ಸಮಯ
ಉಂಟು ಮಾಡಿ ಹೋಗುವಷ್ಟು ಸೆಳೆತವೂ ಉಂಟಾಗುವುದಿಲ್ಲ? ಏನು ಉಳಿದಿದೆ ಅಂತ ಒಂದು ಸಲ ಇಣುಕಿದಂತೆ, ವರ್ಷಕ್ಕೆ ಒಮ್ಮೆ ಹೋಗುವುದು ಹೇಗಿದೆ ಅಂತ ನೋಡುವುದು ?.
ಆದರೆ ಏನೂ ಉಳಿದಿಲ್ಲ ಅಂತ
ಗಾಬರಿಯಾಗುತ್ತದೆ. ಆಗ ಬಲಿ ಚಕ್ರವರ್ತಿಯ ಕಥೆ
ನೆನಪಾಯಿತು. ಸಾಕಷ್ಟು ನನ್ನ ಮನಸ್ಥಿತಿಗೆ ಅವರು
ಕನ್ನಡಿ ಹಿಡಿದು ನಿಂತ ಹಾಗೆ ಭಾಸವಾಯಿತು. ಕೇವಲ
ಹಾರ್ಮೊನಿಯಂ ಶ್ರುತಿಯೇ ಈ ಕಥೆಗಳಿಗೆ ಸಾಕ್ಷ್ಯವನ್ನು ಒದಗಿಸುತ್ತದೆ ಎಂದಾದರೆ ಘನವಾದ
ಸಾಕ್ಷ್ಯಗಳು ಅದೆಷ್ಟು ಸಿಗಲಾರದು?
ಯಕ್ಷಗಾನ ಬದಲಾಗಿದೆ. ಬದಲಾವಣೆಗಳು ಅನಿವಾರ್ಯವೋ
ಎಂಬುದನ್ನು ವಿವೇಚಿಸುವುದಕ್ಕೆ ಸಮಯವಿಲ್ಲದಂತೆ ಮಾಡಿ ಬದಲಾಗುತ್ತದೆ. ಯಕ್ಷಗಾನ ಜನಪ್ರಿಯವಾಗಿದೆ.
ನೋಡುಗರ ಆಡುಗರ ಸಂಖ್ಯೆ ಹೆಚ್ಚಿದೆ. ಆದರೆ ಏನನ್ನು ನೋಡುತ್ತಾರೆ? ಏನನ್ನು ಆಡುತ್ತಾರೆ ಎಂಬುದನ್ನು
ಅರ್ಥವಾಗದ ಪ್ರೇಕ್ಷಕನೂ ಇದರ ನಡುವೆ ಎಡತಾಕಿಕೊಂಡಿರುತ್ತಾನೆ ಎಂಬುದು ಗೊತ್ತೇ ಇರುವುದಿಲ್ಲ.
ಅತ್ಯಂತ ಶ್ರೀಮಂತ ಕಲೆ ಯಕ್ಷಗಾನ. ಕೆಲವೇ ಮಂದಿ ಇದ್ದರೂ
ಹಲವು ಮಂದಿ ಇದ್ದರೂ ಹೀಗೆ ಹೊಂದಿಕೊಳ್ಳುವ ಕಲೆ ಮತ್ತೊಂದಿರಲಾರದು. ಬೀದಿಯಲ್ಲೇ ಆಗಲಿ ಮನೆಯ
ಪಡಸಾಲೆಯಲ್ಲೇ ಆಗಲಿ ಯಕ್ಷಗಾನ ನಮಗೆ ಬೇಕಾದಂತೆ
ಹೊಂದಿಕೊಳ್ಳುತ್ತದೆ. ಆದರೆ ನಾವು ಅದಕ್ಕೆ ಹೊಂದಿಕೊಳ್ಳದೇ ಅದನ್ನು ಮತ್ತಷ್ಟು
ಕೆಡಿಸಿಬಿಡುತ್ತೇವೆ. ಬದಲಾವಣೆ ಅನಿವಾರ್ಯವಾದರೂ ಬದಲಾಗದೇ ಇರುವುದನ್ನು ಬದಲಿಸುವುದು
ಮೂರ್ಖತನವಾಗುತ್ತದೆ. ದುರಹಂಕಾರವೆಂದರೆ ಏನೂ ಬದಲಾಗಿಲ್ಲ ಎಂಬ ವೇಷ ತೊಟ್ಟು ಆಷಾಢ ಭೂತಿತನವನ್ನು
ತೋರುವುದು.
ಹಲವು ಮಿತ್ರರು ತಮ್ಮ ಯಕ್ಷಗಾನ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಕಳುಹಿಸಿ ಗೌರವ
ಪ್ರೀತಿಯಿಂದ ಕರೆಯುತ್ತಾರೆ. ಇನ್ನೇಲ್ಲೋ ಇದ್ದರೆ
ಬನ್ನಿ ಹೋಗುವ ಎಂದು ಸಹಯಾತ್ರೆಗೆ ಆಹ್ವಾನಿಸುತ್ತಾರೆ. ಹೋಗೋಣವೆಂದು ಅನಿಸಿದರೂ ಆಕರ್ಷಣೆ ಎಂಬುದು
ಒಂದು ಇದ್ದರೆ ಹೋಗುವ ಹೆಜ್ಜೆಗಳು ಮುಂದಡಿಯಿಡುತ್ತವೆ.
ಕೊರತೆ ಇರುವುದು ಅಲ್ಲೇ. ಆದರೂ
ಕೆಲವೊಮ್ಮೆ ಸಮಯ ಹೊಂದಿಸಿಕೊಂಡು ಹೋಗುವುದಿದೆ. ಹೀಗೆ ಹೋದನಂತರ ಮಿತ್ರರು ಕೇಳುತ್ತಾರೆ
ಹೇಗಿತ್ತು. ಆಗ ಅಹಿತವಾಗಿರುವಂತಹುದು ಹೇಳುವುದಕ್ಕೆ ದಾಕ್ಷಿಣ್ಯವೋ ಮತ್ತೆಂತಹುದೋ
ಅಡ್ಡಬಂದರೆ, ಒಳ್ಳೆಯದು ಹಿತವಾಗಿರುವಂತಹುದು
ಸಿಗದೆ ತಡವರಿಸುವಂತಾಗಿ ಆತ್ಮ ಸಾಕ್ಷಿಗೆ ವಿರುದ್ದದ ಪ್ರವೃತ್ತಿ ಎದುರಾಗುತ್ತದೆ. ಕರೆದವರಿಗೂ ಹಾಗೇ ಬಂದರೆ ಕಾರ್ಯಕ್ರಮದ ಬಗ್ಗೆ ಒಂದಷ್ಟು
ವಿಚಾರಗಳು ಅಂತರ್ಜಾಲದಲ್ಲಿ ಹೊರಹಾಕಬಹುದು ಎಂದು ಮನಸ್ಸಿನಲ್ಲಿರುತ್ತದೆ. ಹಲವು ಸಲ ಕಾರ್ಯಕ್ರಮಕ್ಕೆ ಹೋಗುವಾಗ ಇರುವ ಉತ್ಸಾಹ
ಹೊರಟು ಬರುವಾಗ ಇರುವುದಿಲ್ಲ. ಮಾತ್ರವಲ್ಲ ಮನಸ್ಸು ಕಳವಳಿಸಿ ಹೋಗುತ್ತದೆ. ಈ ಕೆಲಸಗಳ ನಡುವೆ
ಬಿಡುವು ಮಾಡಿಕೊಂಡು ಹೋಗಿರುವಾಗ ಬಿಟ್ಟು ಬಂದ ಕೆಲಸಗಳನ್ನು ನೆನಸಿ ಮನಸ್ಸು ಮತ್ತಷ್ಟು
ಖಿನ್ನವಾಗುತ್ತದೆ. ಇದನ್ನು ನೋಡುವುದಕ್ಕೆ ಅಷ್ಟೆಲ್ಲ ಬಿಟ್ಟು ಬರುವ ಅವಶ್ಯಕತೆ ಇತ್ತೇ?
ನಮ್ಮ ಸಮಯಕ್ಕೆ ಬೆಲೆ ಇರುವ ಪ್ರವೃತ್ತಿಯೇ
ನಮ್ಮದಾಗಬೇಕು. ಹಾಗಾಗಿ ಸಮಯವನ್ನು ವ್ಯಯಿಸುವ ಕಾರ್ಯಕ್ರಮಗಳೂ ಸಹ ಯಾವುದಾದರೂ ಒಂದು ರೀತಿಯಲ್ಲಿ
ಬೆಲೆಯನ್ನು ತರುವಂತಹುದಾಗಿರಬೇಕು. ಆದರೆ ಹೋದ ಮೇಲೆ ಮನಸ್ಸಿಗೆ ಹಿತವಾಗದೇ ಇದ್ದದ್ದು
ಅನುಭವಿಸುವಂತಾಗುವಾಗ ಸಮಯದ ಅಪಮೌಲ್ಯ ಮನಸ್ಸನ್ನು ಇರಿಯುತ್ತದೆ. ಯಾವಾಗಲಾದರೊಮ್ಮೆ ಹೀಗೆ ಅಂತ ಸಮಾಧಾನ
ಪಟ್ಟುಕೊಂಡರೂ ಸಹ ಕೆಲವೊಮ್ಮೆ ನಮ್ಮ ಅನುಭವಗಳು ಪ್ರತಿಕ್ರಿಯೆಯಾಗಿ ಹೊರಗೆ ಬರುತ್ತವೆ. ಅದಕ್ಕೆ
ವಿಮರ್ಶೆ ಎಂಬ ಅನಧಿಕೃತವಾದ ಸ್ಥಾನವನ್ನೂ ನೀಡುತ್ತಾರೆ.
ವಾಸ್ತವದಲ್ಲಿ ಅದು ವಿಮರ್ಶೆಯಲ್ಲ. ಅನಿಸಿಕೆ ಮಾತ್ರ. ವಿಮರ್ಶೆಯಲ್ಲಿ ಸರಿ ತಪ್ಪುಗಳ
ಸಮತೂಕವಿರುತ್ತದೆ. ಅನಿಸಿಕೆಯಲ್ಲಿ ಆ ಪರಿಧಿ ಇರುವುದಿಲ್ಲ. ಅದು ಕೇವಲ ಅಭಿರುಚಿ. ಹೀಗಿದ್ದರೂ
ಇಲ್ಲೊಂದು ವಿಚಿತ್ರ ಪ್ರವೃತ್ತಿ ವಿಡಂಬನೆಯನ್ನು ಬಿಂಬಿಸುತ್ತದೆ.
ಹಲವು ಸಲ ಪುಕ್ಕಟೆ ಒಂದಿಷ್ಟು ಪ್ರಚಾರದ ಹಂಬಲದಿಂದ
ಕರೆಯುತ್ತಾರೆ. ಪ್ರಚಾರದಂತಹ ಸ್ವಾರ್ಥವಿದ್ದಲ್ಲಿ ಸರಿ ತಪ್ಪುಗಳ ಪರಾಮರ್ಶೆ ಇರುವುದಿಲ್ಲ. ಕೇವಲ
ಹೊಗಳುವಿಕೆಯ ನಿರೀಕ್ಷೆಮಾತ್ರವೇ ಇದ್ದು ತಪ್ಪುಗಳನ್ನು ಹೇಳಿದಾಗ ಪ್ರತಿಕೂಲ ಪರಿಣಾಮವನ್ನೂ
ಅನುಭವಿಸುವ ಹಾಗಾಗುತ್ತದೆ. ಹಾಗಾಗಿ ಹೋಗಿ ಹೊಗಳು ಭಟ್ಟರ ಉದ್ಯೋಗಮಾಡುವುದಕ್ಕಿಂತ
ಹೋಗದಿರುವುದರಲ್ಲೇ ಹೆಚ್ಚು ಸೌಕರ್ಯವನ್ನು ಮನಸ್ಸು ಅನುಭವಿಸುತ್ತದೆ.
ಒಂದು ಸಲ ಓರ್ವ ಮಹಾನುಭಾವರೊಬ್ಬರು ತಮ್ಮ ಕಾರ್ಯಕ್ರಮದ
ವೀಡಿಯೋವೊಂದರನ್ನು ಯೂ ಟ್ಯೂಬ್ ಲಿಂಕ್ ಕೊಟ್ಟು
ನೋಡುವಂತೆ ಬಲವಂತ ಪಡಿಸಿದಿದರು. ನೋಡಿ ಅಭಿಪ್ರಾಯ ಸೂಚಿಸುವಂತೆ ಪರಿ ಪರಿಯಾಗಿ ಕೇಳಿಕೊಂಡರು.
ನಾನು ನಯವಾಗಿ ನಿರಾಕರಿಸಿದೆ. ಇಲ್ಲ ನನಗೆ ಅದರಲ್ಲಿ ಆಸಕ್ತಿ ಇಲ್ಲ. ಸಮಯವಾದಾಗ ನೋಡುತ್ತೇನೆ
ಎಂದರೂ ಕೇಳದೆ ಪದೇ ಪದೇ ನೋಡಿದಿರಾ ಎಂದು ಕೆಣಕುವುದಕ್ಕೆ ತೊಡಗಿದರು. ನಾನು ಅದನ್ನು ನೋಡಿ ಲೇಖನ
ಬರೆಯಬಹುದು ಎಂಬ ನಿರೀಕ್ಷೆ ಅವರದ್ದು. ನಾನು ಕೇವಲ ನನ್ನ ಮನಸ್ಸಿಗಾಗಿ ಲೇಖನ ಬರೆಯುತ್ತೇನೆಯೆ
ಹೊರತು ಇನ್ನೊಬ್ಬರಿಗಾಗಿ ಅವರಿಚ್ಛೆಯಂತೆ ಬರೆದು ಪ್ರಚಾರಗಿಟ್ಟಿಸುವ ಆಸಕ್ತಿ ಲವ ಲೇಶವನ್ನೂ
ಹೊಂದಿಲ್ಲ. ಎಷ್ಟೊ ಸಲ ಹಲವು ಮಿತ್ರರೂ
ಲೇಖನಗಳನ್ನು ಪತ್ರಿಕೆಗೆ ಕಳುಹಿಸುವಂತೆ ಒತ್ತಾಯಿಸಿದರೂ ನಾನು ಯಾವುದೇ ಪ್ರಚಾರದ ಉದ್ದೇಶ ಇರದೇ
ಇದ್ದುದರಿಂದ ನನ್ನ ಪರಿಧಿಯಲ್ಲೇ ಅದನ್ನೇ ಬ್ಲಾಗುಗಳಲ್ಲಿ ಪ್ರಕಟಿಸುತ್ತಾ ಅದರಲ್ಲೇ ತುಂಬು
ತೃಪ್ತಿಯನ್ನು ಅನುಭವಿಸುತ್ತಿದ್ದೆ. ಆದರೆ ಇಂತಹ ಉದಾತ್ತ ಧ್ಯೇಯಗಳು ಹಲವರಿಗೆ
ಅರ್ಥವಾಗುವುದಿಲ್ಲ. ಪ್ರತಿಯೊಂದು ಕಾರ್ಯಗಳಲ್ಲೂ ಮಾಡಿರುವುದಕ್ಕಿಂತ ಅಧಿಕ ಪ್ರಚಾರವನ್ನೇ
ಧ್ಯೇಯವಾಗಿಸುವವರಿಗೆ ಬದುಕಿನ ಸರಳ ತತ್ವಗಳು ಅದರ ಅನಿವಾರ್ಯತೆಗಳು ಅರ್ಥವಾಗಲಾರವು. ಪರಿ
ಪರಿಯಾಗಿ ಸಲ್ಲಿಸಿದ ಬೇಡಿಕೆಯಲ್ಲಿ ಪ್ರಸ್ತುತ ಈ ಮಹಾನುಭಾವನ ಕಿರಿ ಕಿರಿಯನ್ನು ತಾಳದೇ
ದಾಕ್ಷಿಣ್ಯದಿಂದ ಯೂಟ್ಯೂಬ್ ತೆರೆದು ಆತನ ವಿಡೀಯೊವನ್ನು ನೋಡಿದೆ. ಮನಸ್ಸು ಬಹಳಷ್ಟು ತಳಮಳವನ್ನು
ಅನುಭವಿಸಿ ನನ್ನ ನಿಜವಾದ ಅನಿಸಿಕೆಯನ್ನು ಲೇಖನ ಬರೆದು ಪ್ರಕಟಿಸಿದೆ. ನನ್ನ ಲೇಖನ ಬಹಳಷ್ಟು ತೀಕ್ಷ್ಣವಾಗಿಯೇ ಇತ್ತು. ಮನಸ್ಸು
ಅನುಭವಿಸಿದ ಹಿಂಸೆ ಅಲ್ಪ ಸ್ವಲ್ಪ ಅದರಲ್ಲಿ ವ್ಯಕ್ತವಾಗಿತ್ತು. ಬೇಡವೆಂದರೆ ಕೇಳದೆ ನನ್ನನ್ನು
ಬಲವಂತ ಪಡಿಸಿದ ನೋವು ಒಂದೆಡೆ. ಒಂದೆಡೆಯಿಂದ ಕಲೆಯ ಔನ್ನತ್ಯವನ್ನು ಗೇಲಿ ಮಾಡುವಂತಹ ಪ್ರವೃತ್ತಿ
ಮನಸ್ಸು ಬಹಳಷ್ಟು ತೊಂದರೆ ಅನುಭವಿಸುವಂತೆ ಮಾಡಿತ್ತು. ಪರಿಣಾಮ ಅಷ್ಟರವರೆಗೆ ಕೇವಲ ಕಲೆಯ ಬಗ್ಗೆ
ಮಾತ್ರ ಸೀಮಿತವಾಗಿ ನಮ್ಮ ನಡುವೆ ಇರುತ್ತಿದ್ದ
ವಿಚಾರ ಬಿಟ್ಟು ಆತ ಏಕಾ ಏಕಿ ವೈಯಕ್ತಿಕ ಅವಹೇಳನಕ್ಕೆ ತೋಡಗಿದ. ಹಾಗಾಗಿ ಅನಾವಶ್ಯಕ ತೊಂದರೆ
ಅನುಭವಿಸುವುದರಿಂದ ಇಂತಹ ವಸ್ತುಗಳ ಸಹವಾಸಕ್ಕೆ ಹೋಗದಿರುವುದರಲ್ಲೇ ಹೆಚ್ಚು ಕ್ಷೇಮವಿದೆ. ಎಷ್ಟು ಸಂಭಾವಿತರೂ ಸಹ ಸತ್ಯವಾದ ವಿಮರ್ಶೆಯ ಕತ್ತಿಗೆ
ಕೊರಳೊಡ್ಡುವುದಿಲ್ಲ.
ಯಾವುದೇ ಅಭಿರುಚಿಯಲ್ಲಿ ಪ್ರತಿಕ್ರಿಯೆ ಅನಿವಾರ್ಯ.
ಯಾಕೆಂದರೆ ಜೀವಂತಿಗೆಯ ಲಕ್ಷಣವೇ ಪ್ರತ್ರಿಕ್ರಿಯೆ. ಊಟವಾದ ಮೇಲೆ ಉಪ್ಪು ಜಾಸ್ತಿಯಾಯಿತು ಹುಳಿ
ಹಿತವಾಗಿತ್ತು. ಸಿಹಿ ಇನ್ನೂ ಬೇಕಿತ್ತು. ಇಂತ ಪ್ರತಿಕ್ರಿಯೆ ನೀಡದೇ ಇದ್ದರೆ ಹಾಕಿದ ಊಟಕ್ಕೆ ಜೀವ
ಕಳೆ ಬರುವುದಕ್ಕೆ ಸಾಧ್ಯವೇ. ಮನುಷ್ಯ ಪ್ರಾಣಿಗಿಂತ ಭಿನ್ನವಾಗಬೇಕು. ನಾಯಿಯೋ ಹಸುವೋ ಹಾಕಿದರೆ
ಸಿಹಿಯಾದರೂ ಹುಳಿಯಾದರೂ ಅದರ ಪ್ರತಿಕ್ರಿಯೆ ಇರುವುದಿಲ್ಲ. ಮನುಷ್ಯ ತನ್ನ ಅನುಭವವನ್ನು ಹೋರ ಹಾಕಬೇಕು ಅದುವೇ ಆತನ
ಜೀವಂತಿಕೆಯ ಅಸ್ತಿತ್ವದ ಲಕ್ಷಣ. ಆದರೆ ಇಲ್ಲಿ ವಿಮರ್ಶಕ ಎಂಬ ಪಟ್ಟ ಸಿಕ್ಕಿದಹಾಗೆ
ಪ್ರತಿಕ್ರಿಯೆಗೆ ಆ ಮಾನದಂಡ ಸಿಗುವಿದಿಲ್ಲ. ಮೊದಲಾಗಿ ಹೀಗೆ ವಿಮರ್ಶಕ ಅನಿಸಿಕೊಳ್ಳುವುದರಲ್ಲೇ
ಒಂದು ಅವ್ಯಕ್ತ ಅಸಮಾಧಾನವಿರುತ್ತದೆ. ವ್ಯಂಗ್ಯ ಬೇಡದೇ ಇದ್ದರು ಸುಪ್ತವಾಗಿರುತ್ತದೆ. ಇಷ್ಟೆಲ್ಲ
ಕಂಡು ಬರೆಯುವಾಗ ಇಂತಹ ಸೂಕ್ಷ್ಮ ವಿಚಾರಗಳು ಅರ್ಥವಾಗದ್ದೇನಲ್ಲ.
ಹಲವುಸಲ ಅಂತರ್ಜಾಲದಲ್ಲಿ ವೀಡಿಯೋ ನೋಡಿ ವಿಮರ್ಶೆ
ಬರೆಯಬೇಡಿ ಎಂಬ ಅಹವಾಲು ಬೇರೆ ಇರುತ್ತದೆ. ಫೆಸ್ ಬುಕ್ ಆಗಲಿ ಮತ್ತೊಂದೇ ಆಗಲಿ ನಮ್ಮ ಕಣ್ಣೆದುರು
ಬರುವ ಅವಶ್ಯಕತೆಯಾದರೂ ಏನು? ನಮ್ಮ ಮನೆಯಗಂಗಳಕ್ಕೆ ಬಂದ ಮೆರವಣೆಗೆಯಬಗ್ಗೆ ಅನಿಸಿಕೆ ವ್ಯಕ್ತ
ಪಡಿಸಬಾರದು ಎಂದರೆ ಆ ನ್ಯಾಯದ ಸ್ವರೂಪವೇ ಅರ್ಥವಾಗುವುದಿಲ್ಲ. ಕೇವಲ
ಹೊಗಳಿಕೆಯನ್ನಷ್ಟೆ ಬಯಸುವ ಇಂತಹ ಪ್ರವೃತ್ತಿ ಅದು ಮೂರ್ಖತನ ಮತ್ತು ತೀರ ಬಾಲಿಶವಾದ
ಪ್ರವೃತ್ತಿಯಾಗಿರುತ್ತದೆ. ಸಾರ್ವಜನಿಕ ಜೀವನವೆಂದರೆ ಅದು ಗಾಜಿನ ಮನೆಯಲ್ಲಿದ್ದಂತೆ. ಇದರ ಬಗ್ಗೆ
ಪರಿಜ್ಞಾನವಿರಿಸಿ ಸಾರ್ವಜನಿಕ ವೃತ್ತಿಯನ್ನು ತೊಡಗಿಸಬೇಕು. ಸಾರ್ವಜನಿಕವಾಗಿ ತೆರೆದು ಕೊಂಡಾಗ ಪರ
ವಿರೋಧ ಎಲ್ಲವೂ ಸಹಜ. ಹಲವು ಸಲ ಪರವಾಗಿದ್ದ ಪ್ರತಿಕ್ರಿಯಗಳು ಕಣ್ಣೆದುರು ಬಾರದೇ ಹಾಗೇ ಉಳಿಯುತ್ತವೆ. ಹಾಗೇಯೇ
ವಿರೋಧವಾಗಿದ್ದ ಪ್ರತಿಕಿಯೆಗಳೂ ಸಹ ಬೇಡದೇ ಇದ್ದರೂ ಕಣ್ಣೆದುರಿಗೆ ಬಂದು ಬಿಡುತ್ತವೆ. ಪರ ವಿರೋಧ
ಅವಿಭಾಜ್ಯವಾಗಿ ಸ್ವೀಕರಿಸುವಾಗ ಯಾವ ತೊಂದರೆಯೂ
ಇರುವುದಿಲ್ಲ. ಮಾತ್ರವಲ್ಲ ಕಲಾವಿದನಾದವನು ಮೊದಲು ಅಳವಡಿಸಿಕೊಳ್ಳಬೇಕಾದ ಗುಣವಿದು. ಈಗ ನನ್ನ ಲೇಖನಗಳೇ ಆದರೂ ಸಹ ಯಾರೂ ಹೊಗಳಿದರೂ
ತೆಗಳಿದರೂ ನನ್ನ ಪ್ರತಿಕ್ರಿಯೇ ಒಂದೇ. ಯಾಕೆಂದರೆ ಅದರ ಇತಿಮಿತಿಗಳು ಅದು ನನಗಷ್ಟೇ
ಸೀಮಿತವಾಗಿರುತ್ತವೆ. ನನಗೆ ತಿಳಿಯದೇ ಅದನ್ನು ವಿರೋಧಿಸುವವರೂ ಇರಬಹುದು.
ಸಾರ್ವಜನಿಕವಾಗಿ ಅದು ಪ್ರಕಟವಾದಾಗ ಇದೆಲ್ಲ ಸಹಜ. ಹಾಗಿರುವಾಗ ಪರವಾಗಿ ಹೊಗಳಿ ಬರೆದಾಗ ಮಾತ್ರ ಮುಖ ಅಗಲ ಮಾಡಿ ಸ್ವೀಕರಿಸುವ ಮನೋಭಾವ ಅವರಲ್ಲಿರುವ
ಸಂಕುಚಿತ ಬುದ್ದಿಯನ್ನು ತೋರಿಸುತ್ತದೆ.
ವ್ಯಕ್ತಿ ಪರವಾದ ಆಕ್ಷೇಪ ದೂರುಗಳಿದ್ದರೆ ಖಾಸಗಿಯಾಗಿ
ವೈಯಕ್ತಿಕವಾಗಿ ಕಂಡು ಹೇಳಬೇಕು. ಯಕ್ಷಗಾನದ
ಬಗ್ಗೆ ಇರುವುದಿದ್ದರೆ ಅದನ್ನು ಸಾರ್ವಜನಿಕವಾಗಿ
ಹೇಳಿದರೂ ಪರವಾಗಿಲ್ಲ. ಇದೊಂದು ವಿಚಿತ್ರ ನ್ಯಾಯ. ಯಕ್ಷಗಾನದ ಮಾನ ಸಾರ್ವಜನಿಕವಾಗಿ ಹರಾಜಾದರೂ ಪರವಾಗಿಲ್ಲ
ವ್ಯಯಕ್ತಿಕವಾಗಿದ್ದದ್ದು ಅದನ್ನು ಖಾಸಗಿಯಾಗಿ ರಹಸ್ಯವಾಗಿಯೇ ಹೇಳಬೇಕು. ಮಳೆಗೆ ಮನೆಯ ಸೂರು ಸೋರುತ್ತಿದ್ದರೂ ಒಳಗೆ
ಹವಾನಿಯಂತ್ರಿತ ಜೋಡಿಸಿ ದೊಡ್ದ ಟೀವಿಯನ್ನು ಹಾಕಿ ನೋಡಿದಂತೆ. ಮನೆ ದುರಸ್ತಿಗೊಳಿಸುವುದಕ್ಕೆ
ಹಣವಿಲ್ಲದವನಿಗೆ ಬೇರೆಲ್ಲಾ ಐಷಾರಾಮಿ ವಸ್ತುವನ್ನು ಅನುಭವಿಸುವ ತವಕ. ಕಲೆ ಉಳಿದರೆ ಕಲಾವಿದನಿಗೆ
ಉಳಿಗಾಲ ಎಂಬ ಸಾಮಾನ್ಯ ಜ್ಞಾನದ ಕೊರತೆ. ಇದನ್ನು
ವಿಶ್ಲೇಷಿಸುವುದಕ್ಕೆ ಘನವಿದ್ವತ್ತಿನ ಅಗತ್ಯವಿಲ್ಲ. ಬದುಕಿನ ಸಾಮಾನ್ಯ ಜ್ಞಾನ ಸಾಕು. ವೈಯಕ್ತಿಕವಾದ ತಪ್ಪುಗಳನ್ನು ವ್ಯಕ್ತಿ ಗತವಾಗಿ ಅರಸಿ
ಹೇಳುವಷ್ಟು ಕೆಲಸವನ್ನು ಪ್ರೇಕ್ಷಕನಿಗೆ ಕೊಡಬೇಕೆ? ತಮ್ಮ ತಪ್ಪುಗಳು ಹೇಗೆ ಸಿಕ್ಕಿದರೂ
ಹೆಕ್ಕಿಕೊಳ್ಳುವವನಿಗೆ ತಿದ್ದುವುದಕ್ಕೆ ಹಲವು ಅವಕಾಶಗಳು ಸಿಗುತ್ತವೆ. ಸಾರ್ವಜನಿಕವಾಗಿ ಪ್ರಾಮಾಣಿಕನಾಗಿ
ಇರುವವನು ಯಾವ ಆಕ್ಷೇಪಗಳಿಗೂ ತಲ್ಲಣಿಸುವುದಿಲ್ಲ. ತಪುಗಳನ್ನು ಆಕ್ಷೇಪಗಳನ್ನು ಮುಕ್ತಮನಸ್ಸಿನಿಂದ
ಸ್ವೀಕರಿಸುವಾಗ ಸಿಗುವ ನೆಮ್ಮದಿ ಅದನ್ನು ಅಡಗಿಸಿಟ್ಟು ತೋರಿಕೆಯ ಮುಖವಾಡದಲ್ಲಿ ಸಿಗುವುದಿಲ್ಲ.
ಅದು ಮತ್ತಷ್ಟು ಅಧೀರನನ್ನಾಗಿಸಿ ಭಯಭೀತರನ್ನಾಗುವಂತ ಮಾಡುತ್ತದೆ.
ಮನುಷ್ಯ ಸಾರ್ವಜನಿಕ ಜೀವನದಲ್ಲಿ ಪ್ರವೃತ್ತಿಯನ್ನು
ತೋರಿಸುವುದು ಆಸಕ್ತಿಯನ್ನು ತೋರಿಸುವುದು ಖಾಸಗೀ ಜೀವನದ ಏಕತಾನತೆಯನ್ನೋ ಬೇಸರವನ್ನೋ
ಮರೆಸುವುದಕ್ಕೆ. ತಲೆಯಲ್ಲಿ ಬೇಕಾದಷ್ಟು ಮಂಡೆ ಬಿಸಿಗಳು
ಇರುವಾಗ ಒಂದಷ್ಟು ನಿರಾಳವಾಗುವ ಎಂದು ಇಂತಹ
ಸಾರ್ವಜನಿಕ ಕಾರ್ಯಕ್ರಮ, ಸಾರ್ವಜನಿಕ
ಚಟುವಟಿಕೆಗಳತ್ತ ಮನಸ್ಸು ಮಾಡುವುದು. ಇಲ್ಲಿ ಬಂದಾಗ ಬೇರೊಂದು ಬಿಸಿ ಮನಸ್ಸಿಗೆ ತಟ್ಟಿದರೆ ಮತ್ತೆ
ಇವುಗಳ ಅವಶ್ಯಕತೆಯಾದರೂ ಏನು? ಕಾರ್ಯಕ್ರಮ ಮುಗಿಸಿಯೋ ಅರ್ಧದಲ್ಲೋ ಎದ್ದು ಬರುವಾಗ ಈ ಎಲ್ಲ
ಯೋಚನೆಗಳು ಮನಸ್ಸನ್ನು ವ್ಯಗ್ರವಾಗಿಸುತ್ತವೆ. ಕೆಲವು ಸಲ ಅದು ಪ್ರತಿಕ್ರಿಯೆಯಾಗಿ ಲೇಖನಗಳಲ್ಲಿ
ಹೊರ ಹೊಮ್ಮಿಬಿಡುತ್ತವೆ. ಅದು ಇನ್ನಷ್ಟು
ಸಮಸ್ಯೆಗಳಿಗೆ ಕಾರಣವಾಗಿ ಇರುವ ನೆಮ್ಮದಿ ಮತ್ತಷ್ಟು ಕೆಡಿಸಿಕೊಳ್ಳುವ ಪ್ರಮೇಯವೇ ಹೆಚ್ಚು. ಹಾಗಾಗಿ ಯಕ್ಷಗಾನ ಯಾವಾಗಲಾದರೋ ಒಮ್ಮೆ ನೋಡಿ ಬಿಡುವ
ಸಾಧನವಾಗಿ ಬಲಿ ಚಕ್ರವರ್ತಿಯಂತೆ ಈಗ ಹೇಗಿದೆ ಎಂದು ನೋಡುವ ತವಕವಷ್ಟೇ ಉಳಿದುಕೊಂಡಿದೆ.
