"ಇದು ವಿಮರ್ಶೆಯಲ್ಲದ ಚಿಂತನ"

Tuesday, December 22, 2020

ಯಕ್ಷ ಗೋವಿಂದ

ಪ್ರತೀ ವರ್ಷವೂ ಉದಯವಾಣಿ ಪತ್ರಿಕೆಯಲ್ಲಿ ಧರ್ಮಸ್ಥಳ ಮೇಳದ ಆಟದ ಸವಿವರ ಪ್ರಕಟವಾಗುತ್ತದೆ. ಈ ಸಲದ ಪ್ರಕಟನೆಯನ್ನು ಕಾಣುವಾಗ ಮನಸ್ಸು ಒಂದಿಷ್ಟು ಭಾರವದದ್ದು ಸತ್ಯ. ಮೊದಲು ಧರ್ಮಸ್ಥಳದ ಮೇಳ ಊರಿಗೆ ಬಂದಾಗ ಮೈಕು ಕಟ್ಟಿದ ಜೀಪು ರಸ್ತೆಯೆಲ್ಲ  ಕರಪತ್ರವನ್ನು ಚೆಲ್ಲಿ ಹೋದಾಗ ಸಂಭ್ರಮದಿಂದ ಕೈಗೆತ್ತಿಕೊಳ್ಳುವುದಿತ್ತು.  ಅದರಲ್ಲಿದ್ದ ಕಲಾವಿದರ ಹೆಸರು ಬಾಯಿಪಾಠ ಮಾಡಿಕೊಳ್ಳುವವರೆಗೂ ಆಟದ ಚಟ ಅಂಟಿಕೊಂಡಿತ್ತು. ಹಾಗಾಗಿ ಧರ್ಮಸ್ಥಳದ ಮೇಳದ ಆಟ ಎಂದರೆ ನಮಗೆ ಮಕ್ಕಳಿಗೆ ಯಕ್ಷಗಾನದ ಮಾದರೀ ಸಂಹಿತೆ ತೆರೆದಂತೆ.  ಉದಯವಾಣಿಯಲ್ಲಿ ಬರುತ್ತಿದ್ದ ಆಟದ ವಿವರ ನಮ್ಮೂರ ಅಂಗಡಿಯ ಗೋಡೆಗೆ ಅಂಟಿಸುತ್ತಿದ್ದರು. ಇವತ್ತು ಎಲ್ಲಿ ಆಟ ಅಂತ ನೋಡುವುದು, ನಮ್ಮೂರಲ್ಲಿ ಈವರ್ಷ ಇದೆಯೋ ಇಲ್ಲವೋ,  ಇದ್ದರೆ ಮರುದಿನ ರಜಾ ದಿನವೋ ಅಂತ ಲೆಕ್ಕ ಹಾಕುತ್ತಿದ್ದೆವು. ಎಲ್ಲದಕ್ಕಿಂತ ಮೊದಲು ಅದರಲ್ಲಿದ್ದ ಕಲಾವಿದರ ವಿವರ ಓದುವುದು.

     ಈ ಸಲವೂ ಉದಯವಾಣಿ ಜಾಹೀರಾತು ಪ್ರಕಟನೆ ನೋಡಿದಾಗ ಮೊದಲು ದೃಷ್ಟಿ ಹೋದದ್ದು ಕಲಾವಿದರ ಪಟ್ಟಿಗೆ. ನಾನು ಬಾಲ್ಯದಿಂದಲೂ ಅಲ್ಲಿ ಗಮನಿಸುತ್ತಿದ್ದ ಒಂದು ಹೆಸರು ಈ ಸಲ ಮಾಯವಾಗಿತ್ತು. ಅದುವೇ ಸೂರಿಕುಮೇರಿ ಗೋವಿಂದ ಭಟ್ಟರ ಹೆಸರು. ಹೆಚ್ಚಾಗಿ ಕಲಾವಿದರ ಅಗ್ರಪಂಕ್ತಿಯಲ್ಲಿ ಇರುತ್ತಿದ್ದ ಈ ಹೆಸರು ಇಂದು ಮಾಯವಾಗಿದೆ. ಮನಸ್ಸು ಭಾರವಾಗುತ್ತಿದೆ.  ಹಾಗೆ ನೋಡಿದರೆ ಧರ್ಮಸ್ಥಳ ಮೇಳಕ್ಕೆ ಬಂದ ಕಲಾವಿದರೆಷ್ಟು ಬಿಟ್ಟು ಹೋದ ಕಲಾವಿದರೆಷ್ಟು ಲೆಕ್ಕವಿಲ್ಲ. ಅದೆಷ್ಟೇ ಇರಬಹುದು ಆದರೆ ಅಂದಿನಿಂದ ಇಂದಿನವರೆಗೆ ಆ ಜಾಗವನ್ನು ಖಾಯಂ ತನ್ನದಾಗಿಸಿ ಉಮೇದುವಾರಿಕೆಯನ್ನು ಸಲ್ಲಿಸುತ್ತಿದ್ದ ಗೋವಿಂದ ಭಟ್ಟರ ಹೆಸರು ಈ ಸಲ ಬಿಟ್ಟು ಹೋದದ್ದಲ್ಲ. ಹಲವು ಸಲ ಕರಪತ್ರದಲ್ಲಿ ಧರ್ಮಸ್ಥಳದ ಮಂಜುನಾಥನ ಹೆಸರಿನಷ್ಟೇ ಇದೂ ಶಾಶ್ವತ ಅಂತ ಅನ್ನಿಸಿಬಿಡುತ್ತಿತ್ತು . ಸರಿ ಸುಮಾರು ಐದಾರು ದಶಕಗಳು ಸಂದು ಹೋಯಿತು. ಗೋವಿಂದ ಭಟ್ಟರು ಅಂತೂ ನಿವೃತ್ತರಾದರು. ವಯಸ್ಸಿಗೂ ಸವಾಲೆಸೆದು ರಂಗವೇರಿ ಧೂಳೆಬ್ಬಿಸುತ್ತಿದ್ದ ಕಾಲುಗಳು ಈಗ ವಿರಾಮವನ್ನು ಬಯಸಿದೆ ಎಂದರೆ  ಕಾಲಯಾವುದನ್ನೂ ಬಿಡುವುದಿಲ್ಲ. ಅಪಾರವಾದ ಶಿಷ್ಯವರ್ಗ ಇವರದ್ದು. ಇಂದು ಬಹಳಷ್ಟು ಮೇಳದ ಕಲಾವಿದರು ಒಂದಲ್ಲ ಒಂದು ವಿಧದಲ್ಲಿ ಇವರಿಗೆ ಶಿಷ್ಯರು. ತನ್ನ ಕಣ್ಣೆದುರೇ ಇವರ ಶಿಷ್ಯರು ನಿವೃತ್ತಿ ಪಡೆದರು ಇನ್ನು ಕೆಲವರು ನಿವೃತ್ತಿಯ ಅಂಚಿನಲ್ಲಿದ್ದಾರೆ..ಹಾಗಿದ್ದರೂ ಇವರು ಸಕ್ರಿಯವಾಗಿ ರಂಗದಲ್ಲಿ ಪ್ರವೃತ್ತರಾಗಿದ್ದರು. ಶಿಸ್ತುಬದ್ದ ಜೀವನ ಕ್ರಮವೇ ಇದಕ್ಕೆ ಕಾರಣ.

 

         ನಾನು ಗೋವಿಂದ ಭಟ್ಟರನ್ನು ಮೆಚ್ಚಿಕೊಂಡದ್ದು ಅವರ ವೇಷವನ್ನು ಕುಣಿತವನ್ನು ನೋಡಿಯಲ್ಲ. ಯಾಕೋ ಅವರನ್ನು ಇಷ್ಟ ಪಡುವುದರಲ್ಲಿ ಯಕ್ಷಗಾನ ಒಂದು ವಿಷಯವೇ ಅಲ್ಲ ಅಂತನ್ನಿಸುತ್ತದೆ. ಯಕ್ಷಗಾನದಲ್ಲಿ ಇವರನ್ನು  ಇಷ್ಟ ಪಡದೇ ಇರುವ ಹಲವು ಸಂಗತಿಗಳು ಇವೆ. ಇಷ್ಟಪಡುವ ಸಂಗತಿಗಳೂ ಇವೆ.  ನಾನು ಹಲವು ಯಕ್ಷಗಾನದ ಹಿರಿಯ ಕಲಾವಿದರನ್ನು ಹತ್ತಿರದಿಂದ ಕಾಣುತ್ತೇನೆ. ಹಲವರನ್ನು ಕಂಡಾಗ ಯಕ್ಷಗಾನವನ್ನೇ ಕಂಡ ಅನುಭವವಾಗುತ್ತದೆ. ಯಕ್ಷಗಾನವಲ್ಲದೇ ಬೇರೇನೂ ಇಲ್ಲ ಎಂಬಂತಹ ಅನುಭವವಾಗುತ್ತದೆ. ಇವರನ್ನು ಕಾಣುವಾಗ ನನಗೆ ಆ ಅನುಭವ ಆಗುವುದಿಲ್ಲ. ಹಾಗಾಗಿ ನಾನು ದೃಷ್ಟಿಯಲ್ಲಿ ಕಾಣುವುದೂ ಇಲ್ಲ. ಅದಕ್ಕೆ ಕಾರಣ ಇವರಲ್ಲಿರು ಗೌರವ. ಯಕ್ಷಗಾನದ ಬಗ್ಗೆ ಹೇಳಿದರೆ ಇದೊಂದು ವಿಮರ್ಶೆಯಾಗಬಹುದು. ಇದು ವಿಮರ್ಷೆಯಲ್ಲ. ಇದು ಕೇವಲ ಅನುಭವ ಅನಿಸಿಕೆಗಳು. 

        

         ಮೊನ್ನೆ ಮೊನ್ನೆ ಅವರು ಹೇಳಿದ್ದಿದೆ, ನಾನು ಯಕ್ಷಗಾನಕ್ಕೆ ಬಯಸಿ ಬಂದವನಲ್ಲ.  ಕಲೋಪಾಸಕನಾಗಿ ಬಂದೆ.  ಕಲೋಪಾಸನೆ ಎಂಬ ಪುಸ್ತಕದಲ್ಲೂ ಅವರು ಇದನ್ನೇ ಹೇಳಿದ್ದರು. ಈ ನನ್ನ ಮೆಚ್ಚಿಕೆಯೂ ಸರಿ ಸುಮಾರು ಅದೇ ಭಾವದಲ್ಲಿ ಇದೆ ಅಂತ ನನ್ನ ಅನಿಸಿಕೆ.  ಯಾಕೆಂದರೆ ಯಕ್ಷಗಾನ ಅವರಿಗೆ ಕಲೆಯಿಂದ ಬಯಸದೇ ಇದ್ದರೂ  ವೃತ್ತಿಯಲ್ಲಿ ಅದನ್ನು ಅನುಭವಿಸಿದರು. ಇಷ್ಟವನ್ನು ಬದಿಗಿಟ್ಟು  ಅದನ್ನು  ಬಹಳ ಶ್ರದ್ಧೆಯಿಂದಲೇ ನೋಡಿದರು.  ನಾನು ಮೆಚ್ಚಿಕೊಂಡದ್ದು ಆ ಶ್ರದ್ದೆಯನ್ನು. ಯಕ್ಷಗಾನ ದ್ವಿತೀಯ ವಿಷಯವಾಗಿ ಅವರಲ್ಲಿ ನಾನು ಕಾಣುತ್ತೇನೆ. ಬಹುಶಃ ಯಕ್ಷಗಾನವನ್ನು ಅವರು ತೀವ್ರವಾಗಿ ಬಯಸಿಕೊಂಡು ಬಂದಿದ್ದರೆ, ಅದು ಪ್ರಮುಖ ಆದ್ಯತೆಯಾಗಿದ್ದರೆ ಬಹುಶಃ ಇಂದು ಅವರ ಬಗೆಗಿನ ವಿಮರ್ಶೆಗೆ ಅವಕಾಶವೇ ಇರುತ್ತಿರಲಿಲ್ಲ. 

            ಒಬ್ಬ ವ್ಯಕ್ತಿಯಾಗಿ ಇವರು ಬಹಳ ಇಷ್ಟವಾಗುತ್ತಾರೆ.  ಅವರ ಸಾಧನೆ ಕೌತುಕದ ವಿಷಯವಾಗುತ್ತದೆ. ಇಂದಿಗೂ ನಂಗೆ ಕರೆ ಮಾಡಿ ಮಾತನಾಡುತ್ತಾರೆ. ಆ ಆತ್ಮೀಯತೆ. ಆ ಸರಳತೆ ಇಷ್ಟವಾಗುತ್ತದೆ. ದಶಕದ ಮೊದಲಿನ ಗೋವಿಂದ ಭಟ್ಠರಿಗೂ ಈಗಿನ ಗೋವಿಂದಣ್ಣನಿಗೂ ವೆತ್ಯಾಸವೇ ಇಲ್ಲ. ಎಷ್ಟೋ ಸಲ ನಾನೇ ಹೇಳಿದ್ದೆ ಇನ್ನೂ ಯಾಕೆ ವೇಷ ಮಾಡ್ತೀರಾ? ಆಗ ಕಿರು ನಗುವಷ್ಟೇ ಉತ್ತರ.  ಒಂದು ಸಲ ಕರೆ ಮಾಡಿ ಹೇಳಿದ್ದರು, ಕಣ್ಣ ದೃಷ್ಟಿ ಕಡಿಮೆಯಾಗಿದೆ. ನೋಡಿದರೆ ಪರಿಚಯವೇ ಸಿಗುವುದಿಲ್ಲ. ರಂಗಸ್ಥಳದ ಲೈಟು ಬಹಳ ಫ್ರಖರ. ಅದನ್ನು ಕಡಿಮೆ ಮಾಡಬೇಕು.‌ಇಲ್ಲದಿದ್ದರೆ ಕಲಾವಿದರ ಕಣ್ಣು ಉಳಿಯುವುದಿಲ್ಲ. ಹೌದು, ನಾವು ವೇಷ ಕಾಣಬೇಕು ಅಂತ  ಲೈಟು ಹೆಚ್ಚಿಸುತ್ತಾ ಹೋಗುತ್ತೇವೆ. ಆದರೆ ಕಲಾವಿದ ಜಗತ್ತನ್ನು ಕಾಣಬೇಕೆಂಬ ಪ್ರಜ್ಞೆ ನಮ್ಮಲ್ಲಿ ಇಲ್ಲ.

 

                ಅವರ ಶ್ರದ್ಧೆಯಬಗ್ಗೆ ಹೇಳುವುದಿದ್ದರೆ ಹಲವು ವಿಷಯಗಳು ಸಿಗುತ್ತವೆ. ಧರ್ಮಸ್ಥಳ ಮೇಳದ ಇತಿಹಾಸ ತೆರೆದು ನೋಡಿದರೆ ಅದಕ್ಕ ಹಲವು ಪುರಾವೆಗಳು ಸಿಗುತ್ತವೆ. ಮೊದಲೆಲ್ಲ ಬೇರೆ ಮೇಳೆದಲ್ಲಿ ಸಾಮಾಜಿಕ ಅಂದರೆ ಪೌರಾಣಿಕ ಅಲ್ಲದೇ ಇದ್ದ ಹೊಸ ಪ್ರಸಂಗಗಳು ಪ್ರತಿವರ್ಷವೂ ಇರುತ್ತಿತ್ತು. ಆಗ ಧರ್ಮಸ್ಥಳ ಮೇಳದಲ್ಲಿ ಹೊಸ ಹೊಸ ಪೌರಾಣಿಕ ಪ್ರಸಂಗಗಳು ಪ್ರತಿವರ್ಷವೂ ಇದ್ದು ಮೇಳದ ಪ್ರವಾಸ ಅತ್ಯಂತ ಉತ್ಕೃಷ್ಟವಾಗಿರುತ್ತಿತ್ತು. ಪ್ರಸಂಗಕರ್ತರಾದ ಅಮೃತ ಸೋಮೇಶ್ವರ, ರಾಘವ ನಂಬಿಯಾರರು ಬರೆದ ಪ್ರಸಂಗಗಳು ಮೇಳದ ಯಶಸ್ವೀ ಪ್ರಸಂಗಗಳಾಗಿ ಪ್ರದರ್ಶನ ಗೊಂಡವು. ಇಂದು ಆ ಪ್ರಸಂಗಗಳನ್ನು ಬೇರೆ ಮೇಳಗಳು ಆಡಿದರೂ ಧರ್ಮಸ್ಥಳ ಮೇಳದ ಆ ಪ್ರದರ್ಶನಗಳಿಗೆ ಹೋಲಿಸಿದರೆ ಪೇಲವವಾಗಿಬಿಡುತ್ತದೆ. ಅದಕ್ಕೆ ಕಾರಣವಾಗಿ ಗೋವಿಂದ ಭಟ್ಟರ ಪಾತ್ರವೂ ಇದೆ. ಹೊಸ ಪ್ರಸಂಗಗಳು ಬಂದಾಗ ಪಾತ್ರವಿಂಗಡನೆಯಾದಾಗ ಮೇಳದ  ಪ್ರಮುಖ ಮೂರು ಕಲಾವಿದರಲ್ಲಿ ಕೇಂದ್ರೀಕೃತವಾಗುತ್ತಿತ್ತು. ಯಾಕೆಂದರೆ ಇವರಲ್ಲಿ ಒಬ್ಬರಲ್ಲ ಒಬ್ಬರು ರಂಗದ ಮೇಲೆ ಇರುತ್ತಿದ್ದರು. ಸನ್ನಿವೇಶ ಪ್ರಸಂಗ ನಡೆಯೇ ಹಾಗಿರುತ್ತಿತ್ತು. ಕಡತೋಕ ಭಾಗವತರ ಚಾಣಾಕ್ಷತೆ ಅದು. ಆ ಮೂರು ಕಲಾವಿದರಲ್ಲಿ ಒಬ್ಬರು ಕುಂಬಳೆ ಸುಂದರಾವ್ ಆದರೆ ಇನ್ನೊಬ್ಬರು ಪುತ್ತೂರು ನಾರಾಯಣ ಹೆಗ್ಗಡೆಯವರು. ಇವರೊಂದಿಗೆ ಗೋವಿಂದ ಭಟ್ಟರು ಒಬ್ಬರಾಗಿದ್ದರು. ಉಳಿದಿಬ್ಬರು ವಯೋಮಿತಿಯಿಂದ ಮತ್ತು ಪ್ರವೃತ್ತಿಯಿಂದ ಹೆಚ್ಚು ಕುಣಿತಗಾರರಲ್ಲ. ಆದರೆ ಗೋವಿಂದ ಭಟ್ಟರು ಎಲ್ಲವನ್ನು ಅವಾಹನೆ ಪಡೆದು ಮೂವರಲ್ಲಿ ಒಬ್ಬರಾಗಿ ಮಿಂಚಿದರು. ಇವರಿರುವಷ್ಟು ಹೊತ್ತು ರಂಗಸ್ಥಳದಲ್ಲಿ ಮಿಂಚು ಹರಿಯುತ್ತಿತ್ತು.

 

                ಗೋವಿಂದ ಭಟ್ಟರು ಜೀವನದಲ್ಲಿ ಪಳಗಿದ ವ್ಯವಹಾರಸ್ಥ. ಹಾಗಾಗಿ ವಾಸ್ತವದ ಸತ್ಯವನ್ನು ಅವರು ಬೇಗ ತಿಳಿಯುತ್ತಾರೆ. ಹೀಗಾಗಿ ಬಿಡದೇ ಒಂದು ವಿರಕ್ತಿ ಅವರನ್ನು ಹಿಂಬಾಲಿಸುತ್ತಾ ಬರುತ್ತದೆ. ನನ್ನಲ್ಲಿ ಮಾತನಾಡುವಾಗ ಹಲವುಸಲ ನನಗೆ ಹೀಗೆ ಅನಿಸಿದ್ದಿದೆ.  ಹಾಗೆಂದು ವಿರಾಗಿಯಲ್ಲ. ಇದು ಕೇವಲ ನನ್ನ ಭಾವನೆ. ಪ್ರತಿ ಸಲ ನನ್ನನ್ನು ಕಂಡಾಗ ಪ್ರೀತಿಯಿಂದಲೇ ಹತ್ತಿರ ಕರೆದು ಮಾತನಾಡುತ್ತಾರೆ. ಚೌಕಿಕೆ ಹೋದರೆ ಬಣ್ಣದ ಪೆಟ್ಟಿಗೆಯ ಮೇಲೆ ನನ್ನನ್ನು ಕೂರಿಸಿ  ನನ್ನವರ ಕ್ಷೇಮ ಸಮಾಚಾರ ವಿಚಾರಿಸುತ್ತಾರೆ. ಮತ್ತು ಬಹಳಷ್ಟು ವಿಷಯಗಳನ್ನು ಮಾತನಾಡುತ್ತಾರೆ. ಇಲ್ಲೆಲ್ಲ ಯಕ್ಷಗಾನದ ವಿಷಯವೇ ಇರುವುದಿಲ್ಲ.

      ಗೋವಿಂದ ಭಟ್ಟರದು ಅವರು ಹೇಳುವಂತೆ ಬಾಲ್ಯದಿಂದಲೇ ಬಹಳ ಸಾಹಸಮಯ ಜೀವನ. ಬದುಕಬೇಕು ಎಂಬ ಛಲವೇ ಅವರನ್ನು ಬದುಕಿಸಿತು. ಆನಂತರ ಆ ಛಲವೇ ತಾನು ಉಳಿಯಬೇಕು ಎಂಬ ನೆಲೆಯಲ್ಲಿ ಪ್ರಕಟಗೊಂಡು ಇದೀಗ ಅರುವತ್ತಕ್ಕೂ ಹೆಚ್ಚು ವರ್ಷ ರಂಗದ ಮೇಲೆ ಸಕ್ರಿಯರಾಗಿರುವಂತೆ ಮಾಡಿದೆ. ಅಧ್ಬುತವಾದ ಕ್ಷಮತೆ. ಯಾವುದೇ ದುರ್ವ್ಯಸನಗಳಿಗೆ ಒಪ್ಪಿಸದೇ ಒಬ್ಬ ಯೋಗಿಯಂತೆ ಬದುಕಿದರು. ನನ್ನಲ್ಲೂ ಯೋಗ ಪ್ರಜ್ಞೆಯನ್ನು ಹುಟ್ಟಿಸಿದ್ದೂ ಅವರೆ. ಅದರಿಂದಲೇ ಬಹಳಷ್ಟು ಪ್ರಚೋದನೆಗೊಂಡೆ. ಯೋಗ ಎಷ್ಟು ಪ್ರಬಲ ಅಂತ ಅವರೇ ಸಾಕ್ಷಿಯಾಗಿ ಮುಂದಿರುವಾಗ ನನಗೆ ಆಯ್ಕೆ ಮಾಡುವುದು ಬಹಳ ಸುಲಭವಾಗಿತ್ತು. ವ್ಯಕ್ತಿಯಾಗಿ ಸೂರಿಕುಮೇರಿ ಗೋವಿಂದ ಭಟ್ಟರು ಇಷ್ಟವಾಗುತ್ತಾರೆ. ಈಗ ಧರ್ಮಸ್ಥಳ ಮೇಳದ ಕರಪತ್ರದಲ್ಲಿಇವರ ಹಸರು ಇಲ್ಲದೇ ಇರಬಹುದು. ಕೇವಲ ಮಂಜುನಾಥನ ಹೆಸರು ಇದೆ. ಆದರೆ ಅದು ಇರುವ ವರೆಗೆ ಇವರ ಸ್ಮರಣೆ ನೆನಪು ಉಳಿಯುತ್ತದೆ. ಮೇಳದ. ಚರಿತ್ರೆಯ ಕೆಲವು ಪುಟಗಳಲ್ಲಿ ಕೆಲವು ಪುಟಗಳಾದರೂ ಇವರಿಗೆ ಮೀಸಲಾಗುತ್ತವೆ.   ಧರ್ಮಸ್ಥಳ ಮೇಳದ ಮಹಾಬ್ರಾಹ್ಮಣ , ನಾನು ಬಾಲ್ಯದಲ್ಲಿ ನೋಡಿದ ಪ್ರಸಂಗ. ಅದರಲ್ಲಿ ಸೂರಿಕುಮೇರಿಯವರ ಕೌಶಿಕ ವಿಶ್ವಾಮಿತ್ರನ ಪಾತ್ರ ನೋಡಿ ಬಹಳ ಪ್ರಭಾವಿತನಾಗಿದ್ದೆ. ಇದನ್ನು ಹಲವು ಸಲ ಅವರಲ್ಲೇ ಮುಖತಃ ಹೇಳಿದ್ದೆ. ಯಕ್ಷ ಕೌಶಿಕ ಎಂಬ ಅನ್ವರ್ಥನಾಮದಲ್ಲಿ ಲೇಖನವನ್ನೂ ಬರೆದಿದ್ದೆ. ಇನ್ನು  ಯಕ್ಷಕೌಶಿಕನನ್ನು ರಂಗದಲ್ಲಿ ಕಾಣುವುದಕ್ಕೆಸಾಧ್ಯವಿರಲಾರದು.  ಅವರ ಮುಂದಿನ ಜೀವನ ಸುಖಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸುತ್ತೇನೆ.