ಎರಡು
ವಾರದ ಮೊದಲು ಒಂದು ದಿನ ಬೆಳಗ್ಗೆ ಒಬ್ಬರು ಕರೆ ಮಾಡಿ “ನಿಮ್ಮಲ್ಲಿಗೆ ಬರುತ್ತಿದ್ದೇನೆ. ಯಾವ
ಹೊತ್ತಿಗೆ ಬರಲಿ” ಎಂದು ಕೇಳಿದರು. ಒಂದು ಬಾರಿ
ಗೊಂದಲಕ್ಕೊಳಗಾದೆ. ಕಾರಣ ಇಷ್ಟೆ ಕರೆದ ವ್ಯಕ್ತಿ ನಮ್ಮೂರಿನ ಜನ. ಸುಮಾರು ಒಂದು ವರ್ಷದಿಂದ ಕರೆ
ಮಾಡುತ್ತಿದ್ದರು. ಕೆಲವು ಯಕ್ಷಗಾನದ ಧ್ವನಿ
ಮುದ್ರಣವನ್ನು ಬೇಡುತ್ತಿದ್ದರೆ. ನಾನು ಹಾಗೆ ಬನ್ನಿ ಕೊಡುವ ಎಂದು ಹಾರಿಸುತ್ತಿದ್ದೆ. ಹಾಗೆ ಕರೆ
ಮಾಡಿ ಬೇಡಿಕೆ ಸಲ್ಲಿಸುವವರ ಸಂಖ್ಯೆ ಬಹಳಷ್ಟು ದೊಡ್ಡದಿದೆ. ಕೆಲವರು ದುಡ್ದಿನ ಅಮಿಷವನ್ನು
ಒಡ್ಡಿದ ಉದಾಹರಣೆ ಇಲ್ಲದಿಲ್ಲ. ಹೆಚ್ಚಿನವರು
ವಾಟ್ಸಪ್ ಮೂಲಕ ಈ ಮೇಲ್ ಮೂಲಕ ಶೇರು ಮಾಡಿ ಎಂದು ಹೇಳುತ್ತಿದ್ದರೆ ನಾನು ಅಂಥವುಗಳನ್ನು ಸಹಜವಾಗಿ
ನಿರ್ಲಕ್ಷಿಸುತ್ತಿದ್ದೆ. ಆದರೆ ಈ ಮಹನೀಯರು
ಅದಾವುದನ್ನು ಕೇಳದೆ ನೇರವಾಗಿ ಬೆಂಗಳೂರಿಗೆ ಬಂದು ಎಷ್ಟೊತ್ತಿಗೆ ಬರಲಿ ಎಂದು ಕೇಳುತ್ತಿದ್ದಾರೆ.
ಅನಿರೀಕ್ಷಿತ ವಿದ್ಯಾಮಾನ ನನಗೆ. ಆದರು ಅವರ ಅಭಿಮಾನ ಮತ್ತು ಪ್ರಾಮಾಣಿಕತೆಗೆ ಬಗ್ಗೆ
ಮೆಚ್ಚುಗೆಯನಿಸಿತು.
ನಾನಿರುವ
ಹೊತ್ತನ್ನು ತಿಳಿದು ರಾತ್ರಿ ಎಂಟುಗಂಟೆಗೆ ನಮ್ಮ ಮನೆ ಹುಡುಕಿಕೊಂಡು ಬಂದೇ ಬಿಟ್ಟ ಜನವನ್ನು ನೋಡಿ
ಮನಸ್ಸಿನಲ್ಲೇ ನಗು ಬಂತು. ಹೀಗೆ ರಾತ್ರಿ ಹೊತ್ತು
ಆಟಕ್ಕೆ ಬಂದಹಾಗೆ ಇವರಂತೆ ಹಲವರು ಬರುತ್ತಾರೆ ಬಂದು ಒಂದಷ್ಟು ಯಕ್ಷಗಾನ ಧ್ವನಿಯನ್ನು
ಸಂಗ್ರಹವನ್ನು ನೋಡಿ ಕಣ್ಣರಳಿಸುತ್ತಾರೆ. ಹಾಗೆ
ಬಂದವರಿಗಿಂತಲೂ ಈಗ ಬಂದವರು ಬಹಳ ವಿಬ್ಭಿನ್ನ. ಹಾಗೆ ಕಾಣುವುದಕ್ಕೆ ಕಾರಣವೂ ಇದೆ. ಹೆಚ್ಚಿನವರು
ಬೆಂಗಳೂರಲ್ಲಿದ್ದುಕೊಂಡು ಅಥವಾ ಇಲ್ಲಿಗೆ ಇನ್ನಿತರ ಕೆಲಸದ ನಿಮಿತ್ತ ಬಂದವರು ಇಲ್ಲಿಗೆ ಬಂದರೆ, ಇನ್ನು ಕೆಲವರು ನನ್ನ ಮೇಲಿನ ಆತ್ಮಿಯತೆಯಿಂದ
ಬರುತ್ತಿದ್ದರು.. ಆದರೆ, ಈ ವ್ಯಕ್ತಿ ಕೇವಲ ನನ್ನ ಯಕ್ಷಗಾನ ಕೇಳಿ ಕೊಟ್ಟರೆ ಒಂದಷ್ಟು
ತೆಗೆದುಕೊಂಡು ಹೋಗುವುದಕ್ಕೋಸ್ಕರವೇ ದೂರದ ಊರಿನಿಂದ
ಬಂದಿದ್ದರು ! ಅಚ್ಚರಿಯಾಯಿತು. ಹಲವು
ರೀತಿಯ ಅಭಿಮಾನಗಳನ್ನು ಇಲ್ಲಿ ಕಂಡ ನನಗೆ ಇದು ಬಹಳ ವಿಶಿಷ್ಟವಾಗಿ ಕಂಡಿತು. ಹಾಗೆ ನನ್ನ ಅಭಿಮಾನ
ಇವರೊಂದಿಗೆ ತುಲನೆ ಮಾಡಿದಲ್ಲಿ ನನ್ನದು ಏನೇನು ಅಲ್ಲದ ಅಭಿಮಾನ.
ಬಂದವರು
ಅವರ ಅನುಭವ ಅಭಿಮಾನಗಳ ಪೈಕಿ ಒಂದಷ್ಟು ಪ್ರವರ ಒಪ್ಪಿಸಿದರು. ಬಲಿಪ್ಪರ ಬಗ್ಗೆ ಅಪಾರವಾದ ಅಭಿಮಾನ ಇದ್ದ ಅವರಿಗೆ ಅದೇ ಧ್ವನಿ
ಮುದ್ರಣಗಳನ್ನು ಕೇಳುವ ಹಂಬಲ. ಕೆಲವನ್ನು ಹಾಕಿ ಕೇಳಿಸಿದೆ. ಅತ್ಯಂತ ಹಳೆಯ ಧ್ವನಿಮುದ್ರಣದ ಕೆಲವು ಪದಗಳನ್ನು ಕೇಳಿ
ಭಾವುಕರಾಗಿಬಿಟ್ಟರು. “ ಏನೇ ಹೇಳಿ ಮಾರಾಯ್ರೆ ಬಾಕಿ ಎಲ್ಲರ ಪದವೂ ಕೇಳಿಕ್ಕೆ ಒಳ್ಳೆದಾಗ್ತದೆ.
ಆದರೆ ಯಕ್ಷಗಾನದ ಸರಿಯಾದ ಅನುಭವ ಆಗುವುದು ಬಲಿಪ್ಪರ ಪದ ಕೇಳುವಾಗ. ಅದು ವೇಷ ಕಣ್ಣೆದುರು ಕುಣಿದ
ಹಾಗೆ ಆಗ್ತದೆ.” ಕೇವಲ ಎರಡು ವಾಕ್ಯಗಳಲ್ಲಿ ವಿಪುಲವಾದ ಅರ್ಥವನ್ನು
ತುಂಬಿಸಿ ಹೇಳಿಬಿಟ್ಟರು. ಪರಂಪರೆಯ ಗಾಢವಾದ ಅನುಭವವನ್ನು ಅಹ್ಲಾದವಾಗಿ ಹೃದಯಕ್ಕೆ ತುಂಬಿಸುವ
ಭಂಗಿಯಲ್ಲಿ ಕೇಳುತ್ತಾ ಕುಳಿತುಬಿಟ್ಟರು.
ಅವರಿಗಾಗಿ
ಹಳೆಯ ಬಲಿಪ್ಪ ಮತ್ತು ಕುದ್ರೆಕೊಡ್ಲು ರವರ ಪದ ಒಂದನ್ನು ಹಾಕಿದೆ. ಆಗ ಅವರ ಮುಖದ ಭಾವನೆ ಓದುವುದೇ ನನಗೊಂದು ಕೌತುಕವಾಗಿತ್ತು. ಅವರು ಹೇಳಿದರು “ ಹಳೆಯದನ್ನು ಕೇಳಬೇಕು. ಆಗ
ಸ್ಪಷ್ಟವಾಗುತ್ತದೆ, ಈಗಿನದ್ದು ಎಷ್ಟು ಹಾಳಾಗಿದೆ ಎಂದು.” ಅದನ್ನು ಅಲ್ಲಗಳೆಯುವ ಮನಸ್ಸಾಗಲಿಲ್ಲ.
ಕೆಟ್ಟದ್ದರ ಪರಿಚಯವಿದ್ದರೆ ಒಳ್ಳೆಯದರ
ಅನುಭವವಾಗುತ್ತದೆ. ಇದು ಒಳ್ಳೆಯ ಸಿದ್ಧಾಂತ. ಆದರೆ ವಾಸನೆ ಎಂದು ತಿಳಿಯಬೇಕಾದರೆ ಪರಿಮಳದ
ಅಗತ್ಯವಿರುವುದಿಲ್ಲ. ಅಂತರಂಗದ ಸ್ಪಂದನೆ ಜಾಗ್ರತವಾಗಬೇಕು ಅಷ್ಟೆ. ಮತ್ತೊಂದಿದೆ ದುರ್ವಾಸನೆಯೇ
ಅಭ್ಯಾಸವಾದ ಮೇಲೆ ಮೊದಲು ಮೂಗು ಮುಚ್ಚಿದರೂ ನಂತರ
ಮೂಗು ಹಿಡಿಯದೆ ಓಡಾಡುವಂತೆ ಎಲ್ಲ ಸಹಜವಾಗಿಬಿಡುತ್ತದೆ. ಇದು ಪ್ರಕೃತಿ ನಿಯಮ.
ಅವರತಾಳ
ಬಡಿಯುತ್ತಿದ್ದ ಕೈಯನ್ನು ಚಾಚಿ ನನ್ನ ಕೈ
ಹಿಡಿದು ಹೇಳಿದರು. “ಬಹಳ ಸಂತೋಷವಾಯಿತು ಮಾರಾಯ್ರೆ.
ಇದು ಕೇಳುವುದಕ್ಕೆ ಮಾತ್ರವಲ್ಲ ಉಳಿಸಿಕೊಳ್ಳುವುದಕ್ಕೂ ಭಾಗ್ಯಬೇಕು. “ ಇದರ ಮರ್ಮಾರ್ಥ
ಹೀಗೆ ಎಂದು ನಿರ್ಣಯಿಸುವುದರಲ್ಲಿ ನಾನು ವಿಫಲನಾದೆ. .
ಹೌದು, ಪ್ರತಿನಿತ್ಯವೂ, ಇಡೀ ದಿನ ಸಮಯವಿಲ್ಲದೇ ಇದ್ದರೂ ರಾತ್ರಿ ಮಲಗುವಾಗ ಒಂದೆರಡಾದರೂ ಬಲಿಪ್ಪರ ಪದ ಕೇಳಿ ಮಲಗುವುದು
ರೂಢಿಯಾಗಿದೆ. ಸಂಧ್ಯೆಯ ಗಾಯತ್ರಿಯಂತೆ ಅದು ಗಾಢವಾಗಿ ಬದುಕಿಗೆ ಹೊಸೆದುಕೊಂಡಿದೆ.
ಹಾಗಾಗಿ ಅವರ ಆಸ್ವಾದನೆಯ ಅನುಭವದ ಆಳವನ್ನು ಅರಿಯಬಲ್ಲೆ. ಅದನ್ನು ಅವರ ಮುಖದಲ್ಲಿ ಓದಬಲ್ಲೆ. ನನ್ನಲ್ಲಿಗೆ ಬಂದ
ಉದ್ದೇಶವನ್ನೆ ನೋಡುತ್ತಾ ಪರಾಂಬರಿಸುತ್ತಿದ್ದೇನೆ. ಕಲೆಯ ಮೇಲಿನ ಸುಪ್ತ ಅಭಿಮಾನವನ್ನು ಕಂಡೆ. ಸುಪ್ತವಾದ
ಅಭಿಮಾನ ಕಲೆಯನ್ನು ಗಾಢವಾಗಿ ತನ್ಮಯತೆಯಿಂದ ಅನುಭವಿಸುತ್ತದೆ. ಯಾಕೆಂದರೆ ಅಲ್ಲಿ ಮನಸ್ಸಿನ ಭಾವನೆಗಳೆಲ್ಲವೂ
ಅನುಭವಿಸುವುದರಲ್ಲಿ ಕೇಂದ್ರಿಕೃತವಾಗಿರುತ್ತದೆ. ಅಲ್ಲಿ ಆಡಂಬರ ಇಲ್ಲ. ಅಭಿಮಾನಗಳ ಮಾತ್ಸರ್ಯದ ಮೇಲಾಟವಿಲ್ಲ.
ಕೇವಲ ಅನುಭವಿಸುವುದಷ್ಟೇ. ಇಂದು ಅಭಿಮಾನದಲ್ಲೂ ಸ್ಪರ್ಧೆ.
ಅದನ್ನು ತೋರಿಕೊಡುವುದರಲ್ಲೂ ಸ್ಪರ್ಧೆ. ಹೋಗಲಿ ಅದನ್ನು ಅನುಭವಿಸುವುದರಲ್ಲೂ ಸ್ಪರ್ಧೆ. ಸ್ಪರ್ಧೆ
ಎಂದಾಗ ಅಲ್ಲಿ ಹಿಂದಿಕ್ಕುವುದೇ ಪ್ರಧಾನವಾಗಿ ಸ್ವಪ್ರತಿಷ್ಠೆಯ ಕೈ ಮೇಲಾಗುತ್ತದೆ. ಇಂದು ಯಕ್ಷಗಾನದಲ್ಲಿ ಒಂದಷ್ಟು ರಾಜಕೀಯ ಎಂಬುದು ಮಿಳಿತವಾಗಿದ್ದರೆ
ಅದಕ್ಕೆ ಒಂದು ಮುಖ್ಯ ಕಾರಣ ಈ ಅಭಿಮಾನದ ಸ್ಪರ್ಧೆ. ತಮ್ಮ ಅಭಿಮಾನ ಇನ್ನೊಬ್ಬರು ಗುರುತಿಸಬೇಕೆನ್ನುವ
ತುಡಿತ. ಅವೆಲ್ಲದರ ನಡುವೆ ಇಂತಹ ಅಭಿಮಾನಗಳನ್ನು ಕಂಡಾಗ
ಮೌನದ ನಗುವೊಂದು ಮೂಡಿ ಮರೆಯಾಗುತ್ತದೆ.
ಕೆಲವೊಂದು
ಯಕ್ಷಗಾನ ಮುದ್ರಣಗಳನ್ನು ತಮ್ಮ ಮೊಬೈಲ್ ಗೆ ರವಾನಿಸುವಂತೆ ಕೇಳಿದರು. ಇಲ್ಲ ಎನ್ನುವ ಮನಸ್ಸಾಗುವುದಿಲ್ಲ.
ಕೆಲವೊಂದು ನೀಡಿದ ನಂತರ ಹೇಳಿದೆ ಜೋಪಾನ. ನಿಮ್ಮಂತಹವರ ಕೈಗೆ ಸಿಕ್ಕಿದರೆ ಪರವಾಗಿಲ್ಲ. ಎಲ್ಲಿದ್ದರೂ
ಅದರ ಗೌರವವನ್ನು ಉಳಿಸುವ ಭಾವನೆ ಇರುತ್ತದೆ. ಬಯಲಾಟ
ಮುಗಿವವರೆಗೆ ಅಲ್ಲಿ ಇಲ್ಲಿ ಭದ್ರವಾಗಿ ಕೈಯಲ್ಲಿ ಓಡಾಡುವ ಕರಪತ್ರ ಆನಂತರ ಚರಂಡಿಯಲ್ಲಿ ಕಾಣಸಿಗುತ್ತದೆ. ಇದು ವಾಸ್ತವ.
ಸಂತೃಪ್ತಿಯಿಂದ
ಎದ್ದು ನಿಂತು ಕಂಕುಳಲ್ಲಿ ಬ್ಯಾಗ್ ನೇತಾಡಿಸಿ ನಮಸ್ಕಾರ ಹೇಳಿದರು. ಹೊರಟು ನಿಂತ ಅವರ ಜತೆ ಅಂಗಳದ
ವರೆಗೂ ಬಂದು ಬೀಳ್ಕೊಟ್ಟೆ. ನಿಧಾನವಾಗಿ ಕೈ ಆಡಿಸುತ್ತಾ ಬೆನ್ನು ತೋರಿಸಿ ನಡೆದು ಬಿಟ್ಟರು. ಕೈಯಲ್ಲಿದ್ದ ಮೊಬೈಲ್ ನ್ನು ಕಿವಿಗಾನಿಸಿ ಯಕ್ಷಗಾನವನ್ನು
ಕೇಳುತ್ತಾ ನಿಧಾನವಾಗಿ ನಡೆದು ಹೋಗುತ್ತಿದ್ದ ಅವರನ್ನು ರಸ್ತೆಯ ತಿರುವಲ್ಲಿ ಮರೆಯಾಗುವವರೆಗೂ ನೋಡುತ್ತಾ
ನಿಂತೆ. ಅಭಿಮಾನವನ್ನು ಏಕಾಂಗಿಯಾಗಿ ಅನುಭವಿಸುವುದರಲ್ಲಿ ಒಂದು ಸುಖವಿದೆ ಎಂದನಿಸಿತು.