"ಇದು ವಿಮರ್ಶೆಯಲ್ಲದ ಚಿಂತನ"

Monday, October 31, 2011

ಮನದಾಳದ ನುಡಿನಮನ


ಮುಂಜಾನೆ ಸೂರ್ಯನುದಿಸುವ ಮೊದಲೆ ಮೊಬೈಲ್ ರಿಂಗಣಿಸಿ ಮತ್ತೊಂದು ಸೂರ್ಯಾಸ್ತಮಾನದ ಸುದ್ದಿಯನ್ನು ಒರೆಯಿತು. ಹೌದು,  ಯಕ್ಷಗಾನ ಹಿರಿಯ ಭಾಗವತ ಯುಗ ಪ್ರವರ್ತಕ, ಉಭಯ ತಿಟ್ಟುಗಳಲ್ಲೂ ಸಮಾನ ಗೌರವವನ್ನು ಆರ್ಜಿಸಿಕೊಂಡ ಶ್ರೀ ಕಡತೋಕ ಮಂಜುನಾಥ ಭಾಗವತರು ನೆನಪಿನಂಗಳಕ್ಕೆ ಸರಿದು ಹೋದರು. ಇನ್ನು ಕಡತೋಕ ಬರೀ ನೆನಪೆಂಬುದು ವಾಸ್ತವದ ಕಟು ಸತ್ಯವಾಯಿತು.

          ಯಕ್ಷಗಾನದಲ್ಲಿ ಕಡತೋಕ ಮಂಜುನಾಥ ಭಾಗವತರ ಹೆಸರನ್ನು ಕೇಳದವರು ಅಥವ ಅರಿಯದವರು ಯಾರೂ ಇರಲಾರರು. ಒಂದು ಹೊಸ ಅಧ್ಯಾಯವನ್ನು ರೂಪಿಸಿ ಮೆರೆದಾಡಿದ ಭಾಗವತರು.  ಇಂದಿನ ಹಲವು ಮೇರು ಕಲಾವಿದರನ್ನು ರೂಪಿಸುವಲ್ಲಿ ಕಡತೋಕರ ಕೊಡುಗೆ ಅಪಾರ. ಇವರಂತಹ ಸರ್ವಾಂಗೀಣ ಭಾಗವತರನ್ನು ಬಹುಷಃ ಯಕ್ಷಗಾನ ಪ್ರಪಂಚ ಕಾಣುವುದು ಅಸಾಧ್ಯ. ದಶಕಗಳ ಕಾಲ ಶ್ರೀ ಧರ್ಮಸ್ಠಳ ಮೇಳದ ಭಾಗವತರಾಗಿ ಮೇಳದ ಸುವರ್ಣ ಯುಗಕ್ಕೆ ಮೂಲ ಕಾರಣಕರ್ತರೆನಿಸುವ ಕಡತೋಕರ ವೈಭವದ ದಿನಗಳನ್ನು ಯಕ್ಷಗಾನ ಪ್ರೇಮಿ ಮರೆಯುವುದುಂಟೇ? ಇವರ ಕೈ ತಾಳಕ್ಕೆ ಕುಣಿಯದ ಇವರ ಪದಕ್ಕೆ ಅರ್ಥ ಹೇಳದ ಹಿರಿಯ ಕಲಾವಿದರಿದ್ದಾರೆಯೆ? ಅದೋಂದು ಸುಯೋಗವೆಂದು ತಿಳಿದುಕೊಂಡವರು ಹಲವರು.
ಕಡತೋಕರ ಸ್ಮರಣೆಗಾಗಿ ಈ ಪದಗಳು


          ಇವರ ಸಾಮಾರ್ಥ್ಯ ವಿಶೇಷಗಳನ್ನು ಕೇವಲ ಒಂದೆರಡು ವಾಕ್ಶಗಳಲ್ಲೋ  ಮಾತುಗಳಲ್ಲೋ ಹೇಳುವುದು ಅಸಾಧ್ಯವಾದ ಕಾರ್ಯ. ರಂಗದ ಮೇಲೆ ಹಲವು ಅವಿಸ್ಮರಣೀಯ ನೆನಪುಗಳನ್ನು ಕೇವಲ ಯಕ್ಷಗಾನ ಕಲಾವಿದರಿಗೆ ಮಾತ್ರವಲ್ಲ ಸಮಸ್ತ ಯಕ್ಷಗಾನ ಅಭಿಮಾನಿಗಳಿಗೆ ಉಳಿಸಿದವರು. ಧರ್ಮಸ್ಥಳ ಮೇಳದ ಅಂದಿನ ಯಕ್ಷಗಾನ ವೈಭವವನ್ನು ಹೇಳುವುದಿದ್ದರೆ, ಅದರಲ್ಲಿ ಬಹುಪಾಲು ಇವರ ವೈಭವಕ್ಕೇ ಸಾಕ್ಷಿಯಾಗಿಬಿಡುತ್ತದೆ. ಹತ್ತು ಹಲವು ಪ್ರಸಂಗಗಳು ಜತೆಯಲ್ಲಿ ಹಿಮ್ಮೇಳದಲ್ಲಿ ಜತೆಯಿದ್ದ ದಿವಂಗತ ಚಿಪ್ಪಾರು ಬಲ್ಲಾಳರು ಮುಮ್ಮೇಳದ ಅದ್ವಿತೀಯ ಕಲಾವಿದರೆಂದು ಗುರುತಿಸಲ್ಪಟ್ಟ  ಪುತ್ತೂರು ನಾರಾಯಣ ಹೆಗಡೆ, ಎಂಪೆಕೆಟ್ಟೆ ರಾಮ ರೈ , ಚಂದ್ರಗಿರಿ ಅಂಬು, ವಿಟ್ಲ ಜೋಷಿ.  ಈಗಿನ ಹಿರಿಯ ಕಲಾವಿದರಾದ ಸೂರಿಕುಮೇರಿ ಗೋವಿಂದ ಭಟ್, ಕುಂಬಳೇ ಸುಂದರ್ ರಾವ್, ಪಾತಾಳ ವೆಂಕಟ್ರಮಣ ಭಟ್ ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಪ್ರತೀಯೊಬ್ಬರ ಸಾಮಾರ್ಥ್ಯದಲ್ಲೂ ಕಡತೋಕರ ಹೆಸರು ಪ್ರಸ್ತಾಪವಾಗದೇ ಇರುವುದು ಅಸಾಧ್ಯದ ಮಾತು. ಕಡತೋಕ ಮತ್ತು ಚಿಪ್ಪಾರು ಬಲ್ಲಾಳರ ಹಿಮ್ಮೇಳ ವೈಭವ ಬಹುಶಃ ಯಕ್ಷಗಾನದ ಒಂದು ಮರೆಯಲಾಗದ ಅದ್ಭುತವೆನ್ನಬಹುದು.

          ಕಂಚಿನ ಕಂಠದ ಭಾಗವತರು ಇನ್ನಿಲ್ಲ ಎಂದಾಗ ಒಂದು ಘಳಿಗೆಯಾದರೂ ಸ್ತಂಭೀ ಭೂತರಾಗುವ ಹಲವು ಕಲಾವಿದರು ಮತ್ತು ಯಕ್ಷಗಾನ ಅಭಿಮಾನಿಗಳಿದ್ದಾರೆ. ಇದು ಕಡತೋಕರು ಅಚ್ಚಳಿಯದೆ ಬಿಟ್ಟು ಹೋದ ಕಲಾವಿದ ವ್ಯಕ್ತಿತ್ವದ ನೆನಪು. ತೆಂಕು ಬಡಗು ಎಂಬ ಪ್ರಬೇಧ ವೆತ್ಯಾಸಗಳಿಲ್ಲದೆ ಇವರಂತೆ ಸಮಾನ ಪ್ರಭೆಯಿಂದ ಮೆರೆದವರು ಇರಲಾರರು.ಅದ್ಭುತ ಗಾಯಕ ಅದ್ಭುತ ಭಾಗವತ, ಅದ್ಭುತ ರಂಗ ನಿರ್ದೇಶಕ  ಹೀಗೆ ಹಲವು ಅದ್ಭುತಗಳಿಗೆ ಹೆಸರಾದ ಶ್ರೀ ಕಡತೋಕ ಮಂಜುನಾಥ ಭಾಗವತರು ಇಲ್ಲವೆಂದರೆ ಸೂರ್ಯಾಸ್ತಮಾನವಾಗಿ ಗಾಢ ಮೌನದ  ಇರುಳು ಕವಿದ ಅನುಭವ. ಆ ಅಂಧಕಾರದ ಇರುಳಲ್ಲಿ ಇವರು ಬಿಟ್ಟು ಹೋದ ಮಧುರ ನೆನಪುಗಳು ದೀವಿಗೆಯಾಗಿ ಇವರು ಹಾಕಿ ಕರೆದ ದಾರಿಯನ್ನು ತೋರುವಂತಾಗಲಿ. ನಮ್ಮನ್ನಗಲಿದ ದಿವ್ಯಾತ್ಮಕ್ಕೆ ಪರಮಾತ್ಮನು ಸದ್ಗತಿಯನ್ನು ಕರುಣಿಸಲಿ ಎಂಬ ಹೃದಯಾಂತರಾಳದ ಪ್ರಾರ್ಥನೆ ಇದು.



Tuesday, October 25, 2011

ಸ್ಮರಣೀಯ ಸಂಸ್ಮರಣೆ



ಬಹು ನಿರೀಕ್ಷೆಯಂತೆ ತಾಳ ಮದ್ದಲೆ ಸಪ್ತಾಹವೊಂದು ಬೆಂಗಳೂರಲ್ಲಿ ಆಯೋಜನೆಗೊಂಡು ಮಳೆಗಾಲದ ಕೊನೆಯ  ಬೃಹತ್ ಯಕ್ಷಗಾನ ಚಟುವಟಿಗೆ ಸಾಕ್ಷಿಯಾಯಿತು. ಒಂದು ವಾರಗಳ ಕಾಲ ಬೆಂಗಳೂರಿನ ಪುತ್ತಿಗೆ ಮಠದಲ್ಲಿ  ಚೆಂಡೆ ಮದ್ದಲೆಯ ಸದ್ದು ಮಾರ್ದನಿಗೊಂಡಿತು. ಕೆಲವು ಉತ್ತಮ ಪ್ರಸಂಗಗಳು ಅಯೋಜನೆಗೊಂಡದ್ದು ಈ ಬಾರಿಯ ವಿಶೇಷ.. ವಾಮನ ಚರಿತ್ರೆ ಚೂಡಾಮಣಿ...ಅತಿಕಾಯ ಮೋಕ್ಷ. ಹೀಗೆ ಸಾಮಾನ್ಯವೆನಿಸಲ್ಪಡುವ ಪ್ರಸಂಗಗಳಿಗಿಂತ ಭಿನ್ನವಾದ ಪ್ರಸಂಗಗಳತ್ತ ಗಮನ ಹರಿಸಿದ್ದು ವೈಶಿಷ್ಟ್ಯವಾಗಿತ್ತು.  ಊರಿನ ಹಿರಿಯ ಕಲಾವಿದರ ಸಾನ್ನಿದ್ಯವನ್ನು ತಾಳ ಮದ್ದಲೆ ಅಭಿಮಾನಿಗಳು ಸಂತಸದಿಂದಲೇ ಸ್ಪಂದಿಸಿ ಯಶಸ್ವಿಯಾಗಿ ಸಮಾಪನೆಗೊಂಡಿತು.ಒಂದು ಬೃಹತ್ ಕಾರ್ಯಕ್ರಮವನ್ನು ತಕ್ಕ ಮಟ್ಟಿಗೆ ಯಶಸ್ವಿಯಾಗಿ ಪೂರೈಸಿದ   ಗಾನ ಕಲಾಪ್ರತಿಷ್ಠಾನದ ಸದಸ್ಯರಿಗೆ ಕೃತಜ್ಞತೆಗಳು

ಏಳುದಿನದ ಪ್ರಸಂಗಗಳಲ್ಲಿ ಮೂರುದಿನ ಮಾತ್ರ ಹೋಗಿ ಅನುಭವಿಸುವುದಕ್ಕೆ ಸಾಧ್ಯವಾಗಿ ಆ ಮೂರುದಿನದ ಕಾರ್ಯಕ್ರಮದಲ್ಲಿ “ಕರ್ಣ ಭೇದನ, ಕರ್ಣಾವಸಾನ”   “ಭಕ್ತ ಸುಧನ್ವ” ಮತ್ತು ಕೊನೆಯ ದಿನದ “ಶರಸೇತು ಬಂಧನ” , ಹೀಗೆ ಮೂರು ತಾಳ ಮದ್ದಲೆಯನ್ನು ಆಸ್ವಾದಿಸುಂವತಾಯಿತು. ಅದರಲ್ಲಿ ಕರ್ಣಾವಸಾನ ಸಾಧಾರಣ ಮಟ್ಟದಲ್ಲಿತ್ತು. ತೆಂಕಬೈಲು ಭಾಗವತಿಕೆ ಒಂದು ಬಹಳ ನಿರೀಕ್ಷೆಯಲ್ಲಿತ್ತು. ಆದರೆ ಅದನ್ನು ಸಮಯಾಭಾವದಿಂದ ಆಸ್ವಾದಿಸುವುದು ಆಗದೇ ಹೋಯ್ತು.

ಮೊದಲ ಪ್ರಸಂಗ ಕರ್ಣ ಭೇದನ ಭಾವಪೂರ್ಣ ಸನ್ನಿವೇಶದ ಪ್ರಸಂಗ. ಕರಪತ್ರದಲ್ಲಿದ್ದಂತೆ ಪಾತ್ರಹಂಚಿಕೆಯಾಗದೇ ಇದ್ದದ್ದು ಅಚ್ಚರಿ ತಂದಿತ್ತು. ಕೃಷ್ಣನಾಗಿ ವಾಸುದೇವ ರಂಗ ಭಟ್, ಕರ್ಣನಾಗಿ ಉಜಿರೆ ಅಶೋಕ ಭಟ್, ಕುಂತಿಯಾಗಿ ಸುಧನ್ವ ದೇರಾಜೆ ಕರ್ಣ ಭೇದನದದ ಪಾತ್ರಗಳಲ್ಲಿದ್ದರೆ ಮೊದಲು ಕೃಷ್ಣ ಆನಂತರ ತಾಯಿ ಕುಂತಿ ಹೀಗೆ ಇಬ್ಬರು ಕರ್ಣನ ಮರ್ಮ ಭೇಧನವನ್ನು ಪರೋಕ್ಷವಾಗಿ ಮಾಡುವ ಮಾರ್ಮಿಕ  ಸಂದರ್ಭಗಳು ಹೃದ್ಯವಾಗಿ ಮೂಡಿ ಬಂದರೂ ಸಂಭಾಷಣೆ ಅರ್ಥಗಾರಿಕೆ ಅತ್ಯಂತ ದೀರ್ಘವಾಗಿ ಯಾವ ಪದಕ್ಕೆ ಅರ್ಥ ಎಂಬುದೇ ಮರೆತು ಹೋಗುತ್ತಿತ್ತು. ಅಗತ್ಯಕ್ಕಿಂತ ಹೆಚ್ಚೇ ಸಮಯವನ್ನು ಇದು ತೆಗೆದು ಕೊಂಡು ನಂತರದ ಕರ್ಣವಾಸನದ ಮೊದಲ ಎರಡು ಪದಕ್ಕೆ ಕಿಚ್ಚು ಹತ್ತಿಸಿದಂತಾಗಿ ಅದು ಶಮನವಾಗಬೇಕಾದ್ರೆ ಬರೊಬರಿ ಒಂದು ಘಂಟೆ ತೆಗೆದು ಕೊಂಡಿತು. ಸುಣ್ಣಂಬಳ ಮತ್ತು ಜಬ್ಬಾರ್ ಅವರ ಕರ್ಣಾರ್ಜುನ ಬಿಸಿ ಬಿಸಿ ಚರ್ಚೆಗೆ ಸಂದರ್ಭವೊದಗಿಸಿದ್ದು ಮಾತ್ರವಲ್ಲ ಶಾಸ್ತ್ರಿ ಪದ್ಯಾಣರ ದ್ವಂದ್ವ ಇದನ್ನು ಮತ್ತೂ ಸ್ವಲ್ಪ ಲಂಬಿಸಿತು.ಅಪರೂಪಕ್ಕೆ ಶಾಸ್ತ್ರಿಗಳ ಪದ ಕೇಳುವ ಅವಾಕಾಶ ಸಿಕ್ಕಿತಲ್ಲ ಎಂದು ನಿರೀಕ್ಷೆ ಇಟ್ಟು ಹೊದಾಗ ತೃಪ್ತಿಯಾಗುವಂತೆ ಆಸ್ವಾದಿಸುವುದು ಅಸಾಧ್ಯವಾಗಿಬಿಟ್ಟಿತು. ನನ್ನ ಅನಿಸಿಕೆಯಂತೆ ಆದಿನ ದ್ವಂದ್ವದಲ್ಲಿ ಹಾಡಿದುದಕ್ಕಿಂತಲೂ ಶಾಸ್ತ್ರಿಗಳು ಏಕಾಂಗಿಯಾಗಿ ಹಾಡುವಾಗ ಮೈದುಂಬಿ ಹಾಡಿದ್ದರು. ಕೆಲವು ಪದಗಳಂತು ಆತ್ಯುತ್ತಮ ರಾಗ ಭಾವ ತುಂಬಿ ಹಾಡಿದಾಗ ಇದಕ್ಕೆ ಮೀಸಲಿಟ್ಟ ಸಮಯ ಅತ್ಯಂತ ಕಡಿಮೆಯಾಯಿತಲ್ಲ ಎಂದನಿಸಿತು. ಸರ್ಪಾಸ್ತ್ರ ಮತ್ತು ಕರ್ಣರ ಸಂಭಾಷಣೆ ಮಧ್ಯೆ ಶಲ್ಯನ ಪಾತ್ರ ಮಾತನಾಡುವುದು ಹೊಸಕ್ರಮದಂತೆ ಕಂಡಿತು ಮಾತ್ರವಲ್ಲ ಅದು ಸ್ವಲ್ಪ ಕಿರಿ ಕಿರಿಯಾದಂತೆ ಭಾಸವಾಗುತ್ತಿತ್ತು. ಪದವಿಲ್ಲದ ಅರ್ಥಕ್ಕೆ ಇದೊಂದು ಸೇರ್ಪಡೆ.    ಅದು ಅಲ್ಲದೆ ನೆರೆದ ಸಭಿಕರಲ್ಲಿ ಹಲವರ ಮೊಬೈಲ್ ರಿಂಗಣಿಸುವುದು... ಪಕ್ಕದಲ್ಲೆ ಹಲವರು ದೊಡ್ಡದಾಗಿ ಆಡುವ ಮಾತುಗಳು ಅತ್ಯಂತ ರಸಭಂಗವನ್ನುಂಟು ಮಾಡುತ್ತಿತ್ತು. ಹಲವಾರು ಸಲ ಸಂಘಟಕರು ಮನವಿ ಮಾಡಿದರೂ ಇದು ಅವ್ಯಾಹತವಾಗಿ ಮರುಕಳಿಸುತ್ತಿತ್ತು. ಕೊನೇ ಪಕ್ಷ ತಮ್ಮ ಮೊಬೈಲ್ ನ್ನು ನಿಶ್ಯಭ್ದ ಸ್ಥಿತಿಗೆ (silent mode)  ಇಡಲಾಗದ ಸಂಸ್ಕಾರವಂತರು ನಮ್ಮೂರಿನವರೇ ಎಂದು ಅನಿಸಿಬಿಟ್ಟಿತು. ಎಲ್ಲೋ ಸಂದಿಗೊಂದಿಯಲ್ಲಿಟ್ಟ ಮೊಬೈಲ್ ರಿಂಗ್ ಆಗಿ ಸುತ್ತಮುತ್ತಲಿನವರ ಗಮನ ಸೆಳೆದು ಆ ಮೊಬೈಲ್ ತಣ್ಣಗಾಗುವುದಕ್ಕೆ ಹಲವಾರು ಘಳಿಗೆ ತೆಗೆದುಕೊಳ್ಳುತ್ತಿತ್ತು. ಯಾರಕರೆ ಎಂದು ನೋಡುವುದಕ್ಕೆ ಸ್ವಲ್ಪ ಹೊತ್ತು ಆನಂತರ ಆ ಕರೆಯನ್ನು ಸ್ವೀಕರಿಸುವುದಕ್ಕೆ ಸ್ವಲ್ಪ ಹೊತ್ತು  ಮತ್ತೆ ಮಾತನಾಡಲು ಒಂದಿಷ್ಟು ಹೊತ್ತು.. ಒಟ್ಟಿನಲ್ಲಿ  ಉಳಿದವರ ಸಹನೆ ಪರೀಕ್ಷಾ ಪ್ರಸಂಗ ಇದರ ಮಧ್ಯೆ.   ಕರೆ ಬಂದಾಗ ಎದ್ದು ಹೊರ ಹೋಗಿ ಮಾತನಾಡಲಾಗದಷ್ಟು ಸಂಸ್ಕಾರವಂತರು ಇದ್ದುದು ಅತ್ಯಂತ ಬೇಸರ ಹಾಗು ಕಳವಳಕಾರಿ ವಿಚಾರ. ಇನ್ನು ಕಾರ್ಯಕ್ರಮವಾದಾಗ ಇದರಬಗ್ಗೆ ಎಚ್ಚರ ವಹಿಸುವುದು ಅತ್ಯಂತ ಅವಶ್ಯ. ಅತಿಥಿಗಳು ಬರುವಾಗಲೇ ಮುಖ್ಯದ್ವಾರದಲ್ಲಿ ಎಚ್ಚರಿಸಿ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡರೆ ಹೇಗೆ? 

ಮರುದಿನದ ಚೂಡಾಮಣಿ ಪ್ರಸಂಗವನ್ನು ಅತ್ಯಂತ ಹೆಚ್ಚು ನಿರೀಕ್ಷೆ ಮಾಡಿದ್ದೆ ಆದಿನ ಹೋಗುವುದಕ್ಕಾಗದೆ ಮರುದಿನದ ಭಕ್ತ ಸುಧನ್ವ ಪ್ರಸಂಗಕ್ಕೆ ಉತ್ಸುಕನಾಗಿಯೇ ಹೋಗಿದ್ದೆ. ಬಹುದಿನದಿಂದ ನಂತರ ಪುತ್ತಿಗೆ ಹೊಳ್ಳರ ಭಾಗವತಿಕೆ ಮತ್ತು ಪದ್ಯಾಣ ಶಂಕರಣ್ಣನ ಮದ್ದಲೆ ಸವಿಯುವ ಬಹುವಾದ ನಿರೀಕ್ಷೆ ಇತ್ತು. ಆ ನಿರೀಕ್ಷೆ  ಮತ್ತು ಬಯಕೆ ಮಾತ್ರ ಅತ್ಯಂತ ತೃಪ್ತಿಯಿಂದ ನೆರವೇರಿತು. ಚೆಂಡೆಯಲ್ಲಿ ಮಾಂಬಾಡಿ ವೇಣು ತುಸು ಪಳಗಿದಂತೆ ಕಂಡು ಬಂದಿತು. ಹೊಳ್ಳ ಮತ್ತು ಪದ್ಯಾಣದವರ ಸಾನ್ನಿಧ್ಯವನ್ನು ವೇಣು ಸರಿಯಾಗಿ ಬಳಸಿಕೊಂಡರು.  ಸುಧನ್ವನಾಗಿ ಉಜಿರೆಯವರು ಮತ್ತು ಪ್ರಭಾವತಿಯಾಗಿ ಉದಯೋನ್ಮುಖ ಬೆಂಗಳೂರು ಅರ್ಥಧಾರಿ ರಾಜೇಶ್ ಅಜ್ಜಾವರ ಅತ್ಯಂತ ಸಮರ್ಪಕವಾಗಿ ನಿರ್ವಹಿಸಿದರು. ಉತ್ತಮ ಚುರುಕು ಸಂಭಾಷಣೆಯಿಂದಲೂ ಉತ್ತಮ ಹಿಮ್ಮೇಳದಿಂದಲೂ ಸಮಯ ಸರಿದದ್ದೆ ತಿಳಿಯಲಿಲ್ಲ. ಸತಿ ಶಿರೋಮಣಿ ಪ್ರಭಾವತಿ,.... ನಳಿನಾಕ್ಷಿ ಕೇಳೆ ಈಗ..... ಸತಿಗೆ ಷೋಡಶದ ೠತು ಸಮಯ..ಈ ಪದಗಳು ಮತ್ತು ಮತ್ತು ಮೆಲುಕು ಹಾಕುವಂತಿತ್ತು. ಶಂಕರಣ್ಣನ ಮದ್ದಲೆ ಮಾತ್ರ ಅದ್ಭುತವಾಗಿತ್ತು. ತಾಳಮದ್ದಲೆ ಕಳೆದು ದಿನ ಸಂದರೂ ಇನ್ನೂ ಅ ಮದ್ದಲೆಯ ನಿನಾದದ ಗುಂಗು ಹಾಗೆ ಇದೆ ಎಂದರೆ ಅದೆಷ್ಟು ಉತ್ಕೃಷ್ಟವಾಗಿರಬಹುದು? ಅಲ್ಲಿಯ ವರೆಗೂ  ಆ ಕರ್ಷಣೆಯನ್ನು ಉಳಿಸಿಕೊಂಡ ಪ್ರಸಂಗ ಪ್ರಭಾವತಿಯ ನಿರ್ಗಮನವಾಗುತ್ತಿದ್ದಂತೆ ಸಪ್ಪೆಯೆನಿಸತೊಡಗಿತು. ಸುಧನ್ವಾರ್ಜುನರ ಯುದ್ಧ ಸನ್ನಿವೇಶ ಪರಸ್ಪರ ಉಭಯಕುಶಲೊಪರಿ ಮಾತನಾಡಿಕೊಂಡಂತೆ ಅನಿಸಿತು. ಯುದ್ದ ಸನ್ನಿವೇಶದ  ಕಲ್ಪನೆಯ ಭಾವವು ಅಲ್ಲಿ ಬರಲಿಲ್ಲ ಕೃಷ್ಣನ ಪ್ರವೇಶದನಂತರ ಪ್ರಸಂಗ ಚುರುಕುಗೊಂಡರು ಆಗ ಸಮಯ ಮೀರಿಹೊಗಿತ್ತು.
         
          ಕೊನೆಯ ದಿನದ ಶರಸೇತು ಬಂಧನ ಬಹಳ ಉತ್ತಮವಾಗಿತ್ತು. ಎಲ್ಲವನ್ನು ಮರೆಸುವಂತಹ ಕಾರ್ಯಕ್ರಮವಾಗಿ ಮೂಡಿಬಂತು. ಶುರುವಿನಿಂದಲೇ ಉತ್ತಮ ಲಯದಲ್ಲಿ ಆರಂಭವಾದ ತಾಳ ಮದ್ದಲೆ ಕೊನೆಯ ಕ್ಷಣದವರೆಗೂ ಆ ಬಿಸುಪನ್ನು ಕಾಯ್ದು ಕೊಂಡಿತು. ಎಂದಿನಂತೆ ಶಂಕರಣ್ಣನ ಮದ್ದಲೆ ಸರಸದ ಮಾತು ಆಡುತ್ತಿದ್ದರೆ ಮಧ್ಯದಲ್ಲಿ ಮಾಂಬಾಡಿಯವರ ಚೆಂಡೆ ಸರಸದ ಕಾವ್ಯವನ್ನೇ ಬರೆಯುತ್ತಿತ್ತು ಸುಮಾರು ಹನ್ನೆರಡು ವರ್ಷಗಳ ಬಳಿಕ ಮಾಂಬಾಡಿಯವರ ಚೆಂಡೆವಾದನ ಸವಿಯುವ ಘಳಿಗೆ ಕೂಡಿಬಂದುದು ಅದ್ಭುತ ಸ್ಮರಣೀಯ ಕಾರ್ಯಕ್ರಮವನ್ನಾಗಿಸಿತು. ಚೆಂಡೆಯ ವೈವಿಧ್ಯ ಮಯ ಸ್ವರ ಲಯಕ್ಕೆ ಪ್ರೇಕ್ಷಕರು ನಿಬ್ಬೆರಗಾದರು. ತಾಳ ಮದ್ದಲೆಯ ಸನ್ನಿವೇಶಗಳಲ್ಲಿ ಅಷ್ಟೇನು ಮಹತ್ವವಿಲ್ಲದ ಪದಗಳು ಅಂದರೆ ವೀರರಸದ ಏರಿ ಪದಗಳಲ್ಲಿ ಕೂಡ ವಿಶೇಷತೆಯನ್ನು ಬರಿಸಿದ್ದು ಹಿರಿಯ ಕಲಾವಿದರ ಕಲಾನೈಪುಣ್ಯಕ್ಕೆ ಸಾಕ್ಷಿ. ಅತ್ಯುತ್ತಮ ತಾಳಮದ್ದಲೆಯನ್ನು ಕಾಣುವ ಸೌಭಾಗ್ಯ ಒದಗಿಬಂದದ್ದು ಸುಳ್ಳಲ್ಲ.

          ಇಂತಹ ಬೃಹತ್ ಯೋಜನೆಗಳನ್ನು ನಿರ್ವಹಿಸುವುದು ಬಹಳ ಶ್ರಮದಾಯಕ ಕೆಲಸ. ಎಲ್ಲವೂ ಸರಿ ಎಂದು ಊಹಿಸಿದಾಗ ಕಲಾವಿದರ ಲಭ್ಯತೆ ಪ್ರಶ್ನಾರ್ಹವಾಗಿ ನಿರ್ವಹಣೆ ಅತ್ಯಂತ ಕಠಿಣವಾಗುವುದು. ಆದರೂ ಕೆಲವೊಂದು ಅನಿಸಿಕೆಗಳು ಸುಳಿಯದೆ ಉಳಿಯುವುದಿಲ್ಲ. ಮೊದಲಾಗಿ ಇದು ಹಿರಿಯ ಅರ್ಥಧಾರಿ ಹರಿದಾಸ ರಾಮದಾಸ ಸಾಮಗರ ಸಂಸ್ಮರಣೆಯ ಕಾರ್ಯಕ್ರಮವಾಗಿದ್ದುದು ಶ್ಲಾಘನೀಯ. ಈ ರೂಪದಲ್ಲಿ ಹಿರಿಯರನ್ನು ಸ್ಮರಿಸುವುದು ಒಂದು ರೋಮಾಂಚನದ ಸಂಗತಿ. ಆದರೂ ಕಾರ್ಯಕ್ರಮದಲ್ಲಿ ಕೆಲವು ಇನ್ನೂ ಕೆಲವು ಕಲಾವಿದರ  ಉಪಸ್ಥಿತಿಯಿದ್ದಲ್ಲಿ ಹೆಚ್ಚು ಅರ್ಥಪೂರ್ಣವಾಗಿರುತ್ತಿತ್ತು. ರಂಗದಲ್ಲಿ ಸಾಮಗರ ಹೆಚ್ಚು ಒಡನಾಡಿಯಾಗಿದ್ದ ರಂಗದಲ್ಲಿ ಜತೆಯಾಗಿ ಮಿಂಚುತ್ತಿದ್ದ ಯಕ್ಷದಂಪತಿಗಳೆಂದು ಅನ್ವರ್ಥವಾಗಿರುತ್ತಿದ್ದ ಶ್ರೀ ಕೋಳ್ಯೂರು ರಾಮಚಂದ್ರ ರಾಯರು ಇರಬೇಕಿತ್ತು.  ಮಾತ್ರವಲ್ಲ ಹಿರಿಯ ಕಲಾವಿದರಾದ ಸಾಮಗರ ಶಿಷ್ಯರೆಂದು ಗುರುತಿಸಲ್ಪಟ್ಟ ಶ್ರೀಸೂರಿಕುಮೇರಿಯವರೂ ಇರುತ್ತಿದ್ದರೆ..  ಅಲ್ಲದೇ ಭಾಗವತ ದಿನೇಶ ಅಮ್ಮಣ್ಣಾಯರನ್ನಾಗಲಿ, ಕುರಿಯ ಗಣಪತಿ ಶಾಸ್ತ್ರಿಗಳನ್ನು ಅಥವಾ ಬಲಿಪ್ಪರನ್ನು( ಇದು ನಾವು ಸೂಚಿಸುವ ಹೆಸರೆಂದು ಪರಿಗಣಿಸದೇ ಇದ್ದರೂ)  ಇವರನ್ನೆಲ್ಲ ಲಕ್ಷಿಸದೇ ಇದ್ದದ್ದು ಒಂದು ರೀತಿಯ ಅವಗಣನೆಯೇ ಆಗಿ ಕಂಡು ಬರುತ್ತದೆ. ಒಂದು ವಾರದ ಸಪ್ತಾಹದಲ್ಲಿ ಒಂದು ದಿನವಾದರೂ  ಇವರೆಲ್ಲರನ್ನು ಗಣನೆಗೆ ತೆಗೆದು ಕೊಳ್ಳದಿದ್ದ ಕಾರಣವೇನು ಎಂದು ಅರ್ಥವಾಗುವುದಿಲ್ಲ. ಇದರಲ್ಲಿ ಸೂರಿಕುಮೇರಿಯವರು ಬೆಂಗಳೂರಿನಲ್ಲಿ ವರ್ಷದಲ್ಲಿ ಹಲವು ಬಾರಿ ಕಾಣಿಸಿಕೊಳ್ಳುವುದರಿಂದ ಉಳಿದ ಕಲಾವಿದರ ಲಭ್ಯತೆ ಅಥವಾ ಇನ್ನಿತರ ಕಾರಣಗಳೇನೇ ಇದ್ದರು ಮೇಲಿನ ಹಿರಿಯರು ಅವಗಣಿಸಲ್ಪಡುವುದು ಮಾತ್ರ ಸುಳ್ಳಲ್ಲ. ಪದೇ ಪದೇ ಮರುಕಳಿಸುವ ಮುಖಗಳೇ ಪುನಃ ಪುನಃ ಚರ್ವಿತ ಚರ್ವಣವಾಗುವುದು ಚಿಂತೆಯನ್ನು ತರಿಸುತ್ತದೆ. ಕಾರ್ಯಕ್ರಮದ ಕರಪತ್ರ ನೋಡಿ ಮಿತ್ರರೊಬ್ಬರು ಹೇಳಿದ್ದರು ಇದು ಸುಣ್ಣಂಬಲ ಅರ್ಥವೈಭವಾಗತ್ತದೆ. ಹಾಗಾಗಿದ್ದರೆ ಒಂದು ರೀತಿಯ ತೃಪ್ತಿಯೂ ಇರುತ್ತಿತ್ತು. ಆದರೂ ಮಹತ್ವದ ಪಾತ್ರಗಳು ಅವರಿಂದ ನಿರ್ವಹಿಸಲ್ಪಡಲಿಲ್ಲ.

         
ಒಟ್ಟಿನಲ್ಲಿ ಕೋನೆಯ ಅವಧಿಗೆ ಕಾರ್ಯಕ್ರಮ ಸ್ತುತ್ಯರ್ಹವಾಗಿತ್ತು. ಶುಭ ನಿಮಿತ್ತವೆಂಬಂತೆ ಆದಿನ ಹೊರಗಿನ ಕಿರಿ ಕಿರಿ ಶಬ್ದ ಮಾಲಿನ್ಯದ ರಸಭಂಗ ಅಷ್ಟಾಗಿ ಬಾಧಿಸಲಿಲ್ಲ. ಆದರೂ ಯಕ್ಷಗಾನ ತಾಳಮದ್ದಲೆಗೆ ಆ ಸ್ಥಳ ಅಷ್ಟೊಂದು ಸೂಕ್ತ ಎಂದು ಅನ್ನಿಸುವುದಿಲ್ಲ. ಮಧ್ಯೆ ಮಧ್ಯೆ ಆಗುವ ಶಬ್ದ ಮಾಲಿನ್ಯ ಬಹಳ ರಸಭಂಗವನ್ನುಂಟು ಮಾಡುತ್ತದೆ.ದ್ವನಿ ವರ್ಧಕದ ಎಕ್ಕೊ... ಸ್ವರವೂ ಇದರ ಜತೆ ಇನ್ನೊಂದು. ವಾಹನಗಳು ಪಾರ್ಕಿಂಗ್ ಸ್ಥಳಕ್ಕೆ ಬರಬೇಕಾದರೆ ಕಡಿದಾದ ಚಡಾವನ್ನು ಹತ್ತಿ ಬರುವುದರಿಂದ ಆಗಾಗ ಮೊದಲ ಗೇರ್ ನಲ್ಲೆ ಬರುವ ವಾಹನಗಳು ಸಭೆಯಲ್ಲಿ ಕುಳಿತ ಎಲ್ಲರ ತಲೆಯನ್ನು ಟೇಬಲ್ ಪ್ಯಾನ್ ಅಗಿ ಪರಿವರ್ತಿಸುವುದು  ತಮಾಷೆಯಂತೆ ಭಾಸವಾಗುತ್ತಿತ್ತು.   ಹಿರಿಯ ಪ್ರಸಂಗ ಕರ್ತ ಭಾಗವತರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಸನ್ಮಾನ, ಯಕ್ಷಗುರುಗಳೆಂದು ಪರಿಗಣಿಸಲ್ಪಟ್ಟ ಮಾಂಬಾಡಿ ಸುಬ್ರಹ್ಮಣ್ಯ ಭಟ್ ರವರನ್ನು ಆದರಿಸಿದ ಹಾಗೇ  ಇನ್ನೂ ಹಲವು ಸಂಗತಿಗಳು ರೋಮಾಂಚನವನ್ನುಂಟು ಮಾಡುತ್ತವೆ. ಬೆಂಗಳೂರಿಗರ ಪಾಲಿಗೆ ಮತ್ತೋಂದು ಸ್ಮರಣೀಯ ಕಾರ್ಯಕ್ರಮ.

. 

Wednesday, October 19, 2011

ಭಗವಂತನೊಳಗೊಂದು ಭಾಗವತ




ಭಗವಂತನಿಗೂ ಭಾಗವತನಿಗೂ ಮೇಲ್ನೋಟಕ್ಕೆ ಕಾಣುವ ಒಂದು ವೆತ್ಯಾಸ ಶೂನ್ಯ, ಇದರ ಅರ್ಥ ಇಬ್ಬರಲ್ಲೂ ವೆತ್ಯಾಸವೇ ಇಲ್ಲ.  ಅದು ಶೂನ್ಯ ಎಂತಲೂ, ಬರಣಿಗೆಯಲ್ಲಿ ಅಥವಾ ಉಚ್ಚಾರದಲ್ಲಿ ಭಗವಂತನಲ್ಲಿರುವ ಶೂನ್ಯ ಬೇರ್ಪಡಿಸಿದರೆ ಅದು ಭಗವತ ಅಥವಾ ಭಾಗವತ. ಭಗವಂತ ಸರ್ವಾಂತರ್ಯಾಮಿ. ಎಲ್ಲೆಲ್ಲೂ ಅವನ ಅಸ್ತಿತ್ವವಿದೆ.  ಹಾಗಾದರೆ ಶೂನ್ಯದಲ್ಲೂ ಅಸ್ತಿತ್ವ ಗುರುತಿಸಬಹುದಾದಲ್ಲಿ ಶೂನ್ಯದಿಂದ ಭಗವಂತನನ್ನು ಬೇರ್ಪಡಿಸಬೇಕು. ಅದನ್ನು ಹೀಗೆ ವಿಶ್ಲೇಷಣೆ ಮಾಡಿದರೆ ಶೂನ್ಯದಲ್ಲಿರುವ ಭಗವಂತನನ್ನು ಹೊರತೆಗೆದು ಅಂದರೆ ಭಗವಂತನ ದರ್ಶನವನ್ನು ಮಾಡಿಸುವ ಕಾರ್ಯ ಭಾಗವತನದ್ದು. ಈ ಶಭ್ದ ಮೌಲ್ಯ ತುಲನೆಯನ್ನು ಹಲವಾರು ವಿದ್ವಾಂಸರು ಮಾಡುತ್ತಾ ಭಾಗವತ ಎಂಬ ಪದಕ್ಕೆ ಅನ್ವರ್ಥವನ್ನು ಯಕ್ಷಗಾನದಲ್ಲಿ ಕಂಡುಕೊಂಡ ಹಾಗೆ ಗ್ರಹಿಕೆಯಾಗುತ್ತದೆ. ಹೀಗಿರುವಾಗ ಭಾಗವತನ ಜವಾಬ್ದಾರಿ ಅತ್ಯಂತ ಗಂಭೀರವಾದದ್ದು ಮತ್ತು ಗುರುತರವಾದದ್ದು.ಶೂನ್ಯ ಎಲ್ಲಿದೆಯೋ ಅಲ್ಲಿ ಭಾಗವತನನ್ನು ಬರಿಸಿದರೆ ಅಲ್ಲಿ ಭಗವಂತನ ದರ್ಶನವಾಗುತ್ತದೆ. ಎಷ್ಟು ಸುಂದರ ಕಲ್ಪನೆ.!!

ಯಕ್ಷಗಾನದಲ್ಲಿ ಆದ್ಯ ಸ್ಥಾನ ನೀಡುವ ಮೂಲಕ ಭಾಗವತ ಶಬ್ದ ಮತ್ತು ಸ್ಥಾನ ಮಹತ್ವದ ಅರ್ಥ ಕಲ್ಪಿಸಲಾಗಿದೆ. ಭಾಗವತ ಎಂಬ ಶಬ್ದಕ್ಕೆ ಭಗವತ್ ಭಕ್ತ ಅರ್ಥವಿದ್ದರೆ ಗಾಯಕ ಎಂಬ ಅರ್ಥವೂ ಇದೆ.   ಹಾಗಾಗಿ ಯಕ್ಷಗಾನದಲ್ಲೂ ಗಾಯನವೇ ಪ್ರಧಾನವಾಗಿರುವ ಸ್ಥಾನಕ್ಕೆ ಭಾಗವತ ಎಂಬ ಶಬ್ದ ಬಳಕೆಗೆ ಬಂದುದಿರಬಹುದು. ಯಕ್ಷಗಾನದಲ್ಲಿ ಅನಾದಿಕಾಲದಿಂದಲೂ ಭಾಗವತರಿಗೆ ಪರಮೋಚ್ಚ ಸ್ಥಾನ. ಯಕ್ಷಗಾನದ ಪ್ರತಿಯೊಂದು ವಿಭಾಗದಲ್ಲೂ ಪರಿಣತಿ ಮತ್ತು ಅಪಾರವಾದ ಜ್ಞಾನ ಅನುಭವ ಪಡೆದಾಗಲೇ ಈ ಪದವಿ ಪ್ರಾಪ್ತಿಯಾಗುವುದು.  

ಯಕ್ಷಗಾನದಲ್ಲಿ ಭಾಗವತ ಸ್ಥಾನ ಅತ್ಯಂತ ಗೌರವಯುತವಾದುದು. ಭಾಗವತರ ನಿಲುಮೆಯೇ ಅಂತಿಮ. ಆ ಸ್ಥಾನಕ್ಕೆ ತಕ್ಕುದಾದ ನ್ಯಾಯ ಒದಗಿಸಲು ಭಾಗವತರು ಬಹಳ ನಿಷ್ಠೂರವಾಗಿಯೂ ಇರಬೇಕಾಗುತ್ತದೆ.  ಭಾಗವತರು ನಿಷ್ಠೂರವಾಗಿ ನಡೆದುಕೊಂಡ ಹಲವು ಉದಾಹರಣೆಗಳು ಕಥೆಗಳು ಯಕ್ಷಗಾನದಲ್ಲಿ ಭಾಗವತ ಎಷ್ಟು ಪ್ರಧಾನವಾಗುತ್ತಾರೆ ಎಂಬುದಕ್ಕೆ ನಿದರ್ಶನವಾಗಿದೆ.  ಬಹಳ ಹಿಂದೆ ಮಂಗಳೂರಿನ ಉರ್ವಸ್ಟೋರಿನಲ್ಲಿನ ಕಟೀಲು ಮೇಳದ ಹರಕೆ ಆಟ. ಹರಕೆ ಸಲ್ಲಿಸುವರು ದೇವಿಯ ಪರಮ ಭಕ್ತರು.  ಅತ್ಯಂತ ಅನುಕೂಲವಂತರೂ ಸಾರ್ವಜನಿಕವಾಗಿ ಗಣ್ಯವ್ಯಕ್ತಿಗಳೂ ಆಗಿದ್ದರು. ಅಂದು ಆಟ ನಡೆಯುತ್ತಿತ್ತು. ವಾಡಿಕೆಯಂತೆ ದೇವಿ ಮಹಾತ್ಮೆ ಪ್ರಸಂಗ.  ಬಹಳ ಅದ್ಧೂರಿಯಾಗಿ ನಡೆಯುತ್ತಿದ್ದ ಪ್ರದರ್ಶನ. ಅಸಂಖ್ಯ ಸಂಖ್ಯೆಯಲ್ಲಿ ನೆರೆದ ಪ್ರೇಕ್ಷಕರು. ಸೇವೆ ಸಲ್ಲಿಸುವ ಗಣ್ಯವ್ಯಕ್ತಿಗಳಿಗೆ ದೇವಿ ಭಕ್ತಿ ಅವೇಶ ಮನಸ್ಸಿನಲ್ಲಿ ಮೂಡಿತು. ಹಾಗಾಗಿ ದೇವಿ ಪ್ರತ್ಯಕ್ಷವಾಗುವ ಸಂದರ್ಭವೊಂದರಲ್ಲಿ ಹೂವಿನ ಮಾಲೆಯೋ ನೋಟಿನ ಮಾಲೆಯೊ ಜ್ಞಾಪಕವಿಲ್ಲ, ದೇವಿಯ ಕೊರಳಿಗೆ ಹಾಕುವುದಕ್ಕಾಗಿ ವೇದಿಕೆಗೆ ಪ್ರವೇಶಿಸುವವರಿದ್ದರು. ಆದರೆ ಅಂದು ಭಾಗವತರು ನಿಷ್ಠೂರವಾಗಿ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ.  ಭಾಗವತನಿಗೆ ಮೊದಲು ಗೌರವ ಸಲ್ಲಿಸಿ ಆಮೇಲೆ ವೇಶಕ್ಕೆ ಗೌರವ ಸಲ್ಲಿಸಿ. ರಂಗಸ್ಥಳದಲ್ಲಿ ಪಾತ್ರ ಯಾವುದಾದರೂ ಭಾಗವತನೇ ದೊಡ್ಡವ ಎಂದು ಬಿಟ್ಟರು.

ಯಕ್ಷಗಾನ ತಾಳಮದ್ದಲೆಯಲ್ಲಿ ಇತ್ತೀಚೆಗೆ ನಡೆದ ಒಂದು ಘಟನೆ. ಹಿರಿಯ ಭಾಗವತರೊಬ್ಬರು ಮೊದಲೆ ಕಾರ್ಯಕ್ರಮದ ಸ್ಥಳದಲ್ಲಿದ್ದರು. ನಂತರ ಬಂದ ಆದಿನದ ಪ್ರಸಿದ್ದ ಅರ್ಥಧಾರಿಗಳೊಬ್ಬರು ಬಂದವರೇ ಹಿರಿಯ ಭಾಗವತರನ್ನು ತಮ್ಮ ಬಳಿಗೆ ಬರುವಂತೆ ಕರೆ ಕಳುಹಿದರು. ಸ್ವಭಾವತಹ ಸಾಧುವಾದರೂ ರಂಗದ ಮೇಲೆ ನಿರ್ದಾಕ್ಷಿಣ್ಯವಾಗಿ ವರ್ತಿಸುವ ಸ್ವಭಾವದ ಭಾಗವತರು..” ಅವರೇ ನಾನಿದ್ದಲ್ಲಿಗೆ ಬರಲಿ. ಇವತ್ತಿನ ಕಾರ್ಯಕ್ರಮಕ್ಕೆ ನಾನೇ ಭಾಗವತ. ಯಾರೇ ಆದರೂ ನಾನಿದ್ದಲ್ಲಿಗೇ ಬರಲಿ.” ಎಂದು ಬಿಟ್ಟು ಭಾಗವತ ಸ್ಥಾನದ ಹಿರಿಮೆಯನ್ನು ತೋರಿಸಿಕೊಟ್ಟರು.

ಇತ್ತೀಚೆಗೆ ಹಲವು ಕಡೆ ಭಾಗವತರ ಶ್ರಮ ಕಡಿಮೆ ಮಾಡುವುದಕ್ಕೋ ಅಥವ ಭಾಗವತ ಕಾರ್ಯವ್ಯಾಪ್ತಿಯನ್ನು ಕುಂಠಿತಗೊಳಿಸುವುದನ್ನು ಕಾಣಬಹುದು. ಅದರ ಸ್ವರೂಪವೇ ನಿರ್ದೇಶಕ ಎಂಬ ಸ್ವತಂತ್ರ ಹುದ್ದೆಯ ಸೃಷ್ಟಿ. ಈ ಸಂದರ್ಭದಲ್ಲಿ ಭಾಗವತರು ಕೇವಲ ಸಾಮಾನ್ಯ ಅಂಗವಾಗಿ ಕೇವಲ ಹಾಡುವುದಷ್ಟಕ್ಕೇ  ಸೀಮಿತವಾಗಿಬಿಡುತ್ತಾರೆ. ಯಾವ ರೀತಿಯಲ್ಲಿ ಹಾಡುವುದಕ್ಕೆ ಮಾತ್ರ ಸೀಮಿತ ಗೊಂಡರೂ ಭಾಗವತರಿಗೆ ಅನಿವಾರ್ಯ ಕರ್ಮಗಳು ಸುತ್ತಿಕೊಂಡು ಅವರು ಪರೋಕ್ಷವಾಗಿ ಪ್ರಧಾನವಾಗಿಯೇ ಬಿಡುತ್ತಾರೆ. ಇದು ಕೆಲವೊಂದು ಸಲ ಭಾಗವತರ ಸಾಮಾರ್ಥ್ಯವನ್ನು ತೋರಿಸಿಬಿಡುತ್ತದೆ. ನಿರ್ದೇಶಕನ ಪದವಿಯೇ ಗೌಣವಾಗುವ ಸಂದರ್ಭವೇ ಅಧಿಕ. ಯಕ್ಷಗಾನಕ್ಕೆ ಸಂಬಂಧಿಸಿ ಅಷ್ಟೊಂದು ತಾದಾತ್ಮ್ಯ ಸಂಬಂಧ ಮತ್ತು ಸ್ಥಾನ ಭಾಗವವತರದ್ದು. ಭಾಗವತ ಸ್ಥಾನದ ಗೌರವವನ್ನು ಭಾಗವತರು ರಕ್ಷಿಸುವುದು ಎಷ್ಟು ಅನಿವಾರ್ಯವೋ ಅಷ್ಟೇ ಅನಿವಾರ್ಯತೆ ಪ್ರತಿಯೊಂದು ಅಂಗಗಳಿವೆ. ಹಿಮ್ಮೇಳದ ಸಹಕಲಾವಿದರಾಗಲೀ, ವೇಶಧಾರಿಗಳಾಗಲೀ ಆ ಸ್ಥಾನವನ್ನು ಗೌರವಿಸುವುದು ಅನಿವಾರ್ಯ ಮಾತ್ರವಲ್ಲ ಅದು ಪ್ರಮಾಣರೂಪವು ಹೌದು. ಯಾರು ಹೇಗೆ ಸ್ವತಂತ್ರ ಪ್ರವೃತ್ತರಾದರು, ಇನ್ನಿತರರು ಬಾಲ ಬಿಚ್ಚಿದಂತೆ ಭಾಸವಾದರೂ  ಯಾವುದಾದರೂ ಮುಖ್ಯ ಹಂತದಲ್ಲಿ ಬಾಲದ ತುದಿ ಭಾಗವತರ ಕೈಯಲ್ಲೇ ಇರುತ್ತದೆ. ಇದು ಸರ್ವ ವಿದಿತ. ಅದುವೇ ಯಕ್ಷಗಾನದ ವೈಶಿಷ್ಟ್ಯ. ಇದನ್ನು ಅರಿತಾಗಲೇ ಭಾಗವತರಿಗೆ ಭಾಗವತರ ಮೌಲ್ಯ ಅರಿವಾಗುವುದು. ನಿಜವಾದ ಪದವಿಗೌರವ ಲಭ್ಯವಾಗುವುದು. ಅದಕ್ಕಾಗಿ ಪ್ರತೀ ಕ್ಷಣ ರಂಗಸ್ಥಳವನ್ನೂ ಗಮನಿಸುತ್ತಾ ಇರಬೇಕು. ಭಾಗವತರು ರಂಗದ ಮೇಲೆ ಶಿಸ್ತಿನಿಂದ ಇದ್ದರೆ ಬಾಲವೂ ಶಿಸ್ತಿನಿಂದ ಇರಬೇಕಾದುದು ಅನಿವಾರ್ಯವಾಗಿಬಿಡುತ್ತದೆ. ಪದೇ ಪದೇ ಪಕ್ಕದವರತ್ತ ಮಾತನಾಡುವುದು, (ಇತ್ತೀಚೆಗಿನ ಅಸಹ್ಯವೆಂದರೆ ಮೊಬೈಲ್ ಬಳಸುವುದು)  ಅಗಾಗ ಚೌಕಿಯತ್ತ ಎದ್ದು ಹೋಗಿ ಇಣುಕುವುದು , (ಮರಿ ಭಾಗವತರೆಂದು ಕರೆಸಿಕೊಳ್ಳುವುವರು ಇದನ್ನೂ ಅನುಕರಿಸಿಬಿಡುತ್ತಾರೆ...!!!) ಇದೆನ್ನೆಲ್ಲಾ  ಅಶಿಸ್ತು ಎಂದು ಪರಿಗಣಿಸುವುದಕ್ಕೆ ಮಾಹಾಜ್ಞಾನದ ಅವಶ್ಯಕತೆ ಏನು ಬೇಕಾಗಿಲ್ಲ. ಯಕ್ಷಗಾನಕ್ಕೇ ತೀರ ಅಪರಿಚಿತನಾದವನೂ ಇದನ್ನು ಹೇಳಬಲ್ಲ.

ಭಾಗವತರಲ್ಲಿ ಕರ್ತವ್ಯ ಪ್ರಜ್ಞೆ ಹೇಗೆ ಸದಾ ಇರಬೇಕೋ ಅದರ ಅರಿವು ಸಹಕಲಾವಿದರಲ್ಲಿಯೂ ಇರಬೇಕು. ನಮ್ಮ ಮನೆಯ ಹಿರಿಯರನ್ನು ನಾವು ಗೌರವ ಪ್ರೀತಿಯಿಂದ ಕಂಡರೆ ಊರವರೂ ಕಾಣುವರು. ಗೌರವವನ್ನು ಉಳಿಸಿಕೊಳ್ಳುವುದು ಹಿರಿಯರಿಗೆ ಎಷ್ಟು ಅನಿವಾರ್ಯವೋ ಅದನ್ನು ಗಳಿಸಿಕೊಳ್ಳುವುದು ಅಷ್ಟೇ ಅನಿವಾರ್ಯ. ಈ ಅನಿವಾರ್ಯತೆ ಕೇವಲ ಹಿರಿಯರಿಗೆ ಸಂಬಂಧಿಸಿ ಮಾತ್ರ ಉಳಿಯುವುದಿಲ್ಲ ಕಿರಿಯರೆಲ್ಲರಿಗೂ ಇದು ಅನಿವಾರ್ಯವಾಗಿ ಬಿಡುತ್ತದೆ. ಇದು ಮಹತ್ವದ ಅರಿವೂ ಆಗಿರುತ್ತದೆ. ಭಾಗವತ ಪದವಿ ಅದು ಬರೀದೇ ಬರುವುದಲ್ಲ. ಬರಿದೇ ಬಂದರು ಅದು ಉಳಿಯುವುದೂ ಇಲ್ಲ. ಮಾತ್ರವಲ್ಲ ಅದನ್ನು ತಾಳಿಕೊಂಡು ನಿರ್ವಹಿಸುವ ಸಾಮಾರ್ಥ್ಯವೂ ಇರುವುದಿಲ್ಲ. ಬರೀದೆ ಎರಡು ಪದ ಹೇಳಿದಲ್ಲಿ ಭಾಗವತನೂ ಆಗಲಾರ. ಅದಕ್ಕೆ ಅವಿರತ ಶ್ರಮದಿಂದ ಸಾಧಿಸಿದ ಜ್ಞಾನವನ್ನು ನಿಧಿಯಾಗಿ ಹೊಂದಬೇಕು. ಅಥವಾ ಹೊಂದುವಲ್ಲಿ ಉದ್ಯುಕ್ತನಾಗಿ ಅದನ್ನು ಸಾಧಿಸುವ ಕಲಿಯುವ ಮನೋಭಾವವಾದರೂ ಇರಬೇಕು. ಹಾಗಿದ್ದರೆ ಮಾತ್ರ ಶೂನ್ಯದಲ್ಲಿ ಭಾಗವತನ್ನು ತಂದು ಭಗವಂತನನ್ನಾಗಿಸಬಹುದು.










Friday, October 7, 2011

ಅರ್ಥ ಪೂರ್ಣ ಅರ್ಥವೈಭವ

ಇತ್ತೀಚೆಗೆ ಉಜಿರೆಯಲ್ಲಿ ಹಿರಿಯ ಕಲಾವಿದರಾದ ಸೂರಿಕುಮೇರಿ ಗೋವಿಂದ ಭಟ್ಟರ ಅರ್ಥ ವೈಭವ ಎಂಬ ತಾಳಮದ್ದಲೆ ಸಪ್ತಾಹ ಜರಗಿತ್ತು. ಕಳೆದ ಬಾರಿಯಂತೆ ಈ ಬಾರಿಯೂ ವಿಶೇಷವಾಗಿ ಸಪ್ತಾಹವು ಅತಿ ಯಶಸ್ವಿಯಾಗಿ ನಡೆಸಲ್ಪಟ್ಟಿತ್ತು. ಅದನ್ನು ಆಲಿಸುವ ಸೌಭಾಗ್ಯವಷ್ಟೇ ನಮಗೆ ಸಾಧ್ಯವಾದದ್ದು. ಇದಕ್ಕೆ ಮೊದಲಾಗಿ ನಮ್ಮ ಮಿತ್ರ ಸುಬ್ಬಣ್ಣನಿಗೆ ಯಥಾವತ್ತಾಗಿ ಧನ್ಯವಾದ ಸಲ್ಲಿಸಬೇಕು.


ಉತ್ತಮವಾದ ಪ್ರಸಂಗ ಆಯ್ಕೆಯಿಂದ ಹಿಡಿದು ಉತ್ತಮ ಹಿಮ್ಮೇಳ ಮುಮ್ಮೇಳವನ್ನು ಒಟ್ಟಾಗಿ ಸೇರಿಸಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು. ಅದರಲ್ಲೂ ಗಮನ ಸೆಳೆದ ಪ್ರಸಂಗಗಳು ರಾಜಾ ಕೌಶಿಕ, ಗಧಾಯುದ್ದ, ಭಸ್ಮಾಸುರ, ಭೀಷ್ಮಾರ್ಜುನ, ಹಿರಣ್ಯ ಕಶಿಪು ವಧೆ ಮತ್ತು ಇಂದ್ರಜಿತು ಕಾಳಗ. ಎಲ್ಲದರಲ್ಲೂ ಗೋವಿಂದಣ್ಣ ವಿಜ್ರಂಭಿಸಿದ ಪರಿ ನೋಡಿದರೆ ಇದು ಅವರು ಕಡೆದ ಒಂದೊಂದೇ ಪಾತ್ರಗಳನ್ನು ಚೆನ್ನಾಗಿ ಹೊಳಪು ಬರುವಂತೆ ತೊಳೆದು ಒಪ್ಪಗೊಳಿಸಿ ಪುನಃ ಪ್ರದರ್ಶಿಸಿದಂತೆ ಇತ್ತು. ಕೇವಲ ರಂಗದ ಮೇಲೆಯೇ ಸರಿ ಎನ್ನಿಸುವಂತ ಪ್ರಸಂಗಗಳಿಗೆ ಜೀವ ತುಂಬಿಸುತ್ತಿದ್ದ ಪಾತ್ರಗಳನ್ನು ಅಷ್ಟೆ ಸಮಂಜಸವಾಗಿ ಮತ್ತು ವೈಭವವನ್ನು ಸಾಕ್ಷಾತ್ಕರಿಸುವಂತೆ ತಾಳ ಮದ್ದಲೆಯಲ್ಲೂ ವೈಭವೀಕರಿಸಿದ್ದು ಗೋವಿಂದಣ್ಣನ ಪ್ರತಿಭೆಗೆ ನಿದರ್ಶನವಾಗಿ ಪರಿಣಮಿಸಿತು. ಹಲವು ಬಗೆಯ ಹಲವು ವಿಧದ ಪಾತ್ರಗಳು ಕೇವಲ ವಾಙ್ಮಯ ಶಕ್ತಿಯಿಂದ ಜೀವತಳೆದು ನಿಂತವೆಂದರೆ ಆಶ್ಚರ್ಯವಾಗಿಬಿಡುತ್ತದೆ. ತಮ್ಮ ಆಳವಾದ ಮತ್ತು ಹರಿತವಾದ ಕಂಠದಿಂದ ಗೋವಿಂದಣ್ಣ ಕೌಶಿಕನಾಗಿ ಕೌರವನಾಗಿ ಅಸುರ ಭಸ್ಮಾಸುರನಾಗಿ ಮೆರೆದ ಪರಿ ಗೋವಿಂದಣ್ಣನನ್ನು ಅರಿತವರಿಗೇ ಆಶ್ಚರ್ಯವೆನಿಸುವಷ್ಟು ರೀತಿಯಲ್ಲಿ ಪ್ರಸ್ತುತವಾಗಿತ್ತು. ಗಧಾಯುದ್ದವೆಂಬ ಪ್ರಸಂಗ ಅಪರೂಪವೆನ್ನಿಸುವಂತೆ ತಾಳಮದ್ದಲೆಯಲ್ಲಿ  ಪ್ರಸ್ತುತವಾಗುವುದು ಇದೆ. ಗೋವಿಂದಣ್ಣ ಹಾಗು ಪುತ್ತಿಗೆ ರಘುರಾಮ ಹೊಳ್ಲರ ಜೊತೆಗಾರಿಕೆಯ ಜುಗಲ್ ಬಂದಿ ರಂಗಸ್ಥಳದ ಮೇಲೆ ವರ್ತಮಾನದಲ್ಲಿ ಅತ್ಯಂತ ಪ್ರಸಿದ್ದ. ಆದರೆ ಇಲ್ಲಿ ತಾಳ ಮದ್ದಲೆ ರೂಪದಲ್ಲಿ ಇಲ್ಲಿ ರೂಪಗೊಂಡದ್ದು ವೈಶಿಷ್ಟ್ಯವಾಗಿತ್ತು. ಮಾತ್ರವಲ್ಲ ಅದು ಯಶಸ್ಸನ್ನು ಕಂಡದ್ದು ಇಬ್ಬರ ಅಂತರಂಗದ ಪ್ರತಿಭೆಗೆ ಸಾಕ್ಷಿಯಾಗಿತ್ತು.



         ಹಿರಣ್ಯ ಕಶಿಪು ಎಂಬ ಕಥಾನಕ ಅಧಿಕವಾಗಿ ಯಕ್ಷಗಾನ ಬಯಲಾಟಗಳಲ್ಲಿ, ತ್ರಿಜನ್ಮ ಮೋಕ್ಷ ಅಥವಾ ದಶಾವತಾರ ಪ್ರಸಂಗಗಳಲ್ಲಿ ಒಂದು ಭಾಗವಾಗಿ ಕಂಡು ಬರುವ ಒಂದು ಬಯಲಾಟದ ಪ್ರಸಂಗ. ಕೇವಲ ಹಿರಣ್ಯ ಕಶಿಪು ಪಾತ್ರವೇ ಇದರಲ್ಲಿ ಎದ್ದು ಕಾಣುವುದು ಸಾಮಾನ್ಯ. ಹಾಗಾಗಿ ತಾಳಮದ್ದಲೆಯಲ್ಲಿ ಇದು ಯಶಸ್ವಿಯಾಗುವುದು ಅತ್ಯಂತ ಕಷ್ಟಕರ. ತಾಳಮದ್ದಲೆಯಲ್ಲಿ ಎರಡು ಪಾತ್ರಗಳ ಸಂಭಾಷಣೆಗೆ ಒತ್ತು ಕೊಟ್ಟ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಳ್ಳುವುದು ಸಾಮಾನ್ಯ. ಪರಸ್ಪರ ಸಂಭಾಷಣೆಯಿಂದಲ್ಲೆ ಪಾತ್ರಗಳನ್ನು ಕಟ್ಟಿ ಬೆಳೆಸುವ ಕಾರಣ ಹಿರಣ್ಯ ಕಶಿಪು ಎಂಬ ಕಥಾಭಾಗವನ್ನು ಒಂದು ತಾಳ ಮದ್ದಲೆಯಾಗಿ ಆಯ್ಕೆಮಾಡುವುದು ತೀರ ಅಪರೂಪ. ಅದರೂ ಇಲ್ಲಿ ಅದೇ ವೈಶಿಷ್ಟ್ಯವೆಂಬಂತೆ ಆಯ್ಕೆ ಮಾಡಿದ್ದು ಮಾತ್ರವಲ್ಲ ಕೂಟದ ಯಶಸ್ವಿ ತಾಳಮದ್ದಲೆಯಲ್ಲಿ ಇದೂ ಒಂದಾಗಿ ಪರಿಣಮಿಸಿತು. ಎಂತಹ ಹಿರಣ್ಯ ಕಶಿಪು ಎಂತಹ ಕಯಾದು ಇದಕ್ಕೆ ಹೊಂದಿಕೆ ಆಗುವಂತೆ ಪ್ರಹ್ಲಾದ ಮತ್ತು ಚಂಡಾ ಮರ್ಕರ ಪಾತ್ರಗಳು ಸುಂದರವಾಗಿ ಹೊಂದಾಣಿಕೆಯಲ್ಲಿ ಮೂಡಿಬಂದರೆ, ಅಮ್ಮಣ್ಣಾಯ ನೇತೃತ್ವದಲ್ಲಿ ಹಿಮ್ಮೇಳವೈಭವ ಕೂಟದ ಅತ್ಯಂತ ಯಶಸ್ವಿ ಹಿಮ್ಮೇಳವಾಗಿ ಕಂಡುಬಂದಿತು.ನಿಧಾನವಾಗಿ ಶ್ರುತಿ ಎರಿಸುತ್ತ ಸಹಜವಾಗಿ ತನ್ನ ತನ್ಮಯತೆಯಲ್ಲಿ ಹಾಡಿದ ಅಮ್ಮಣ್ಣಾಯರು ಅತ್ಯಮೋಘವಾಗಿ ಕಂಡುಬಂದರು. ಅಂದಿನ ಅಮ್ಮಣ್ಣಾಯರ ಭಾಗವತಿಕೆಯನ್ನು ಸ್ಥಳದಲ್ಲಿದ್ದು ಅಸ್ವಾದಿಸಿದವರು ಬಹಳ ಪುಣ್ಯವಂತರು.ನೆರೆದ ಅವರ ಅಭಿಮಾನಿ ವೃಂದಕ್ಕೆ ಹೊಟ್ಟೆತುಂಬುವಂತಹ ತೃಪ್ತಿಯ ರಸದೌತಣವನ್ನು ಉಣಬಡಿಸಿದರು. ಅದಕ್ಕೆ ಹೊಂದುವಂತೆ ಶೃತಿಯನ್ನು ಏರಿಸುತ್ತ ಸಾಗಿದ ಗೋವಿಂದಣ್ಣನ ಹಿರಣ್ಯಕಶಿಪುವಿನ ಪಾತ್ರ ವೈಭವ ಮತ್ತೊಂದು ಅದ್ಭುತವಾಗಿ ಪರಿಣಮಿಸಿತು.ಯಾವುದೇ ಪಾತ್ರವಾದರೂ ಅದು ಅಟವಾಗಲೀ ತಾಳಮದ್ದಲೆಯಾಗಲೀ ಗೋವಿಂದಣ್ಣನಿಗೆ ಅದು ಸವಾಲೇ ಅಲ್ಲ. ಕಠಿಣವಾದ ಹಿರಣ್ಯಕಶಿಪುವಿನ ಪಾತ್ರ  ಅತನ ಕಠಿಣವಾದ ವ್ಯಕ್ತಿತ್ವ ದೊಂದಿಗೆ ಅಷ್ಟೇ ಸುಂದರವಾಗಿ ಮೂಡಿಬಂತು.

           ಇದರಲ್ಲಿ ಬರುವ ಇನ್ನೊಂದು ಪ್ರಮುಖವಾದ ಕಯಾದುವಿನ ಪಾತ್ರ. ಕೋಳ್ಯೂರರಲ್ಲಿ ಆವೇಶಗೊಂಡಿತು. ಹಿರಿಯ ಕಲಾವಿದರಾದ ಕೋಳ್ಯೂರರ ಹಾಗೆ ಸ್ತ್ರೀ ಪಾತ್ರಗಳಿಗೆ ಜೀವ ತುಂಬಬಲ್ಲವರು ಯಾರೂ ಇಲ್ಲ. ಅತ್ಯಂತ ಸಾಂದರ್ಭಿಕ ಹಾಗು ಮಾರ್ಮಿಕ ಮಾತುಗಾರಿಕೆಯಲ್ಲಿ ಎಂದಿನ ತಮ್ಮ ಭಾವಾವೇಶದ ಅರ್ಥಗಾರಿಕೆಯ ಮೂಲಕ ತಾಳಮದ್ದಲೆಯಲ್ಲಿ ಕಯಾದುವಿನ ಪಾತ್ರವೂ ಅತಿಮುಖ್ಯವೆನಿಸಲ್ಪಡುತ್ತದೆ ಎಂಬುದನ್ನು ತೋರಿಸಿಕೊಟ್ಟರು. ಇವರ ಅನನ್ಯ ಅರ್ಪಣಾಭಾವ ತಾಳ ಮದ್ದಲೆಯ ಇತಿಮಿತಿಯಲ್ಲಿ ಪಾತ್ರವನ್ನು ಪೋಷಿಸುವ ಕ್ರಮ ಇಂದಿನ ಕಲಾವಿದರು ಮಾತ್ರವಲ್ಲ ಕಾರ್ಯಕ್ರಮವನ್ನು ಮಾಡುವ ಸಂಘಟಕರೂ ಗಮನಿಸಬೇಕಾದ ಅಂಶವಾಗಿದೆ. ಬಹುಶಃ ಅಂದು ಇವರ ಪಾತ್ರಕಂಡು ತೇವವಾಗದ ಕಣ್ಣುಗಳು ಇರಲಾರದು. ಹೆಣ್ಣಿನ ತಾಯ್ತನದ ಅಂತರಾಳದ ಭಾವನೆಗಳನ್ನು ಹೆಣ್ಣಿಗಿಂತ ಚೆನ್ನಾಗಿ ಬಿಡಿಸಿ ವ್ಯಕ್ತಪಡಿಸುವ ಸಮರ್ಥರು ಎಂದರೆ ಅದು ಕೋಳ್ಯೂರು ಮಾತ್ರ. ಕಯಾದುವಿನ ಪಾತ್ರದ ಮೂಲಕ ಅದನ್ನೆಲ್ಲ ತೆರೆದಿಟ್ಟ ಪರಿ ಅದ್ಭುತ.



                 ಹೀಗಿದ್ದರೂ ಇಂದು ಅಮ್ಮಣ್ಣಾಯರಿಗಾಗಲೀ ಕೋಳ್ಯುರರಿಗಾಲಿ ಒಂದು ರೀತಿಯ ಅವಗಣನೆ ಕಂಡು ಕಾಣದಂತೆ ಭಾಸವಾಗುತ್ತದೆ. ಇದು ಒಂದು ರೀತಿಯ ನೋವಿನ ಸಂಗತಿ. ಇದು ಕೇವಲ ಒಂದೆಡೆಗೆ ಸೀಮಿತವಾಗಿ ಉಳಿದಿಲ್ಲ. ಯಕ್ಷಗಾನ ಇಂದು ಹಲವು ಸವಾಲುಗಳನ್ನು ಎದುರಿಸಿ ಉತ್ಕರ್ಷೆಯಲ್ಲಿದ್ದರೂ ಈ ಸವಾಲುಗಳಲ್ಲಿ ಯಕ್ಷಗಾನದ ಈ ಒಳರಾಜಕೀಯಗಳು ಅತೀ ದೊಡ್ಡ ಸವಾಲಾಗಿ ಕಲೆಯ ಅಭಿಮಾನಿಗಳಿಗೆ ಕಿರಿಕಿರಿಯನ್ನೊದಗಿಸುತ್ತದೆ. ಹಲವರ ಅಭಿರುಚಿ ಅಭಿಮಾನಗಳು ಭಿನ್ನ ಭಿನ್ನವಾಗಿದ್ದರೂ ಇದು ಒಂದು ಪರಂಪರೆಯ ಒಳಗೆ ನುಸುಳಿಕೊಂಡಿರುವುದು ಶೋಚನೀಯವೆನಿಸುವುದಿಲ್ಲವೆ? ಶತಾಯ ಗತಾಯ ತನಗಾಗದವರ ಕಾರ್ಯಕ್ರಮಕ್ಕೆ ವಿಘ್ನವುಂಟು ಮಾಡಿ ವಿಘ್ನ ಸಂತೋಷವನ್ನು ಪಡೆದುಕೊಳ್ಳುವ ಈ ಆಟದ ರಾಜಕೀಯಗಳೇ ಇಂದು ಸಂಘಟಕರ ಮೊದಲ ಸವಾಲಾಗಿ ಪರಿಣಮಿಸಿ ಇದರಿಂದ ದೂರ ಉಳಿಯುವ ಪ್ರಮೇಯವೇ ಅಧಿಕ. ಈ ಎಲ್ಲ ಸವಾಲುಗಳನ್ನು ಕ್ರಮಿಸಿ ಒಂದು ಕಾರ್ಯಕ್ರಮ ನಡೆಯಿತೆಂದರೆ ಅದು ನಿಜ ಅರ್ಥದಲ್ಲಿ ದೊಡ್ಡ ಕಲಾಸೇವೆ.