"ಇದು ವಿಮರ್ಶೆಯಲ್ಲದ ಚಿಂತನ"

Wednesday, October 27, 2021

ಬದಲಾಗದ ಸತ್ಯ

       ಮೊನ್ನೆ ಒಬ್ಬರು ಮಿತ್ರರು ಒಂದು ಯೂಟ್ಯೂಬ್ ಯಕ್ಷಗಾನವನ್ನು ಕಳುಹಿಸಿದ್ದರು. ಇಂತಹ ವಿಷಯಗಳು ಆಸಕ್ತಿಯನ್ನು ಕಳೆದುಕೊಂಡು ಬಹಳ ದಿನಗಳು ಕಳೆದು ಹೋಗಿದೆ.  ಅದನ್ನು ನೋಡಿ ವಿಮರ್ಶೆ ಬರೆಯುವಂತೆ ಸಂದೇಶ ಕಳುಹಿಸಿದರು. ನಾನು ಯಾವುದೇ ಪ್ರತಿಕ್ರಿಯೇ ತೋರಲಿಲ್ಲ. ನನಗೆ ಆಸಕ್ತಿ ಇಲ್ಲ. ಆದರೆ ಅವರು ಬಿಡಬೇಕಲ್ಲ. ಪ್ರತಿಕ್ರಿಯೆ ಇಲ್ಲದೆ ಇರುವಾಗ ಕರೆ ಮಾಡಿದರು. ನೋಡಿ ಚೆನ್ನಾಗಿದೆ ಅಂತ ಒತ್ತಾಯ ಮಾಡಿದರು. ನಾನು ಸಮಯವಾದಾಗ ನೋಡುತ್ತೇನೆ ಎಂದು ಸಾಗ ಹಾಕಿದೆ. ಇಲ್ಲ ಮರುದಿನ ಪುನಃ ಕರೆ ಮಾಡಿದಾಗ ಒಂದು ಸಲ ನೋಡೋಣ ಎಂದು ನೋಡಿದೆ. ಅಷ್ಟೇ  ಒಂದಷ್ಟು ಹಾರಿಸಿ ನೋಡುವ ಪ್ರಚೋದನೆಯನ್ನು ಹತ್ತಿಕ್ಕಿಕೊಳ್ಳಲಾಗಲಿಲ್ಲ.  ಒಂದಷ್ಟು ನೋಡಿ ಮತ್ತೆ ಅದನ್ನು ನಿಲ್ಲಿಸಿಬಿಟ್ಟೆ.  ಆ ಮಿತ್ರರು ಮರುದಿನ ಪುನಃ ಕರೆ ಮಾಡಿ ಅಭಿಪ್ರಯ ಕೇಳಿದರು. ಇಂತಹ ಸನ್ನಿವೇಶದಲ್ಲಿ ಪ್ರಜ್ಞಾವಂತರು ಜಾಣತನದಿಂದ ವರ್ತಿಸುವುದು ಕ್ಷೇಮಕರ. ಯಾಕೆಂದರೆ ನಮಗನಿಸಿದ್ದನ್ನು ನೇರವಾಗಿ ಹೇಳಿದರೆ ಮಾನಸಿಕ ಆರೋಗ್ಯ ಹದಗೆಡಬಹುದು. ಆದರೆ ಸನ್ನಿವೇಶ ತೀರಾ ವ್ಯತಿರಿಕ್ತವಾಗುತ್ತದೆ.ನಮ್ಮ ಪ್ರತಿಕ್ರಿಯೆ ಹೇಗಾದರು ಪಡೆಯುವ ಇಕ್ಕಟ್ಟಿಗೆ ಸಿಲುಕಿಸಿಬಿಡುವ ಆತುರವಿರುತ್ತದೆ.     

        ಪುನಃ ಹೇಗಿತ್ತು ಎಂಬ ಪ್ರಶ್ನೆ. ನಾನು ಪೂರ್ಣವಾಗಿ ನೋಡಿಲ್ಲ. ಯಾಕೆ ನೋಡಿಲ್ಲ ಮರು ಪ್ರಶ್ನೆ ಒಡನೆಯೇ ಬರುತ್ತದೆ. ಸ್ಥಿತಿ ಎಲ್ಲಿವರೆಗೆ ಎಂದರೆ ಹೇಗಾದರೂ ನಮ್ಮ ಪ್ರತಿಕ್ರಿಯೆಯನ್ನು ಪಡೆದೇ ತೀರುವ ಹಪಹಪಿಕೆ ಇರುತ್ತದೆ. ಹಾಗಾಗಿ ಅನಾವಶ್ಯಕ ವಿವಾದಗಳು ಹುಟ್ಟಿಕೊಳ್ಳುವ ಅಪಾಯವಿರುತ್ತದೆ. ಮತ್ತೊಂದು , ನಾನಂತೂ ನನ್ನ ಅನುಭವಕ್ಕೆ ಸೀಮಿತವಾಗಿ ನಿಲ್ಲುವವನು. ನನ್ನ ಅನುಭವ ಹೇಗೋ ಹಾಗೆ ಆ ತಳಹದಿಯಲ್ಲೇ ಅನಿಸಿಕೆಗಳು ಚಿಗುರೊಡೆಯುತ್ತವೆ. 

        ಕೊನೆಗೆ ನಿಷ್ಠೂರವಾಗಿ ಹೇಳಿದೆ, ಬಾಯಿಮುಚ್ಚಿಸುವುದೋಂದೆ ಉದ್ದೇಶ. ಹಲವು ಸಲ ನಂಬರ್ ಬ್ಲಾಕ್ ಮಾಡಿಬಿಡಬಹುದು. ಸುಮ್ಮನೇ ವೈಷಮ್ಯ ದಾಕ್ಷಿಣ್ಯ. ಹಾಗಾಗಿ ನಾನು ಹೇಳಿದೆ.  ಅಸಲೀ ಶುದ್ದ ಸಂಗೀತ ನನ್ನಲ್ಲಿ ಬೇಕಾದಷ್ಟು ಇದೆ. ನಾನು ಅದರಲ್ಲೇ ಕೇಳುತ್ತೇನೆ. ಅವರಿಗೆ ಮೊದಲಿಗೆ ಅದರ ಆಳ ಅರ್ಥವಾಗಲಿಲ್ಲ. ನಂತರ ಅರ್ಥವಾಯಿತು. ಆನಂತರ ಅವರ ಕರೆಯೂ ಇಲ್ಲ. ಸಂದೇಶಗಳೂ ಇಲ್ಲ. ಬಹುಶಃ ವೈಷಮ್ಯ ಯಾಕೆ ಅಂತ ನಾನು ದಾಕ್ಷಿಣ್ಯ ತೋರಿದೆನೋ ಅದು ಸುಮ್ಮನೆ ಅಂತ ಸಾಬೀತಾಯಿತು.  ಗಾನ ಗಾಯನವಾಗಿ ಬದಲಾಗಿ ಹೋಗಿರುವುದಕ್ಕೆ ನನ್ನಲ್ಲಿ ಯಾವ ಆಕ್ಷೇಪವೂ ಇಲ್ಲ. 

          ಬೆಂಗಳೂರಲ್ಲಿ ಬೇಕಾದಷ್ಟು ಮಂಗಳೂರು ಸ್ಟೋರ್ ಗಳು ಇವೆ.   ಹೆಚ್ಚಾಗಿ ನಮ್ಮೂರಿನ ಹಲವಾರು ಸಾಮಾಗ್ರಿಗಳು, ಕುಚ್ಚಿಲಕ್ಕಿಯಿಂದ ತೊಡಗಿ ತರಕಾರಿ ತಿಂಡಿಗಳು ಔಷಧಿಗಳು ಪಾತ್ರೆ ಪಗಡೆಗಳು ಊರಿನದ್ದು ಅಂತ ಇಲ್ಲಿ ಮಾರಾಟವಾಗುತ್ತಿದೆ. ತೆಂಗಿನಕಾಯಿ ಸಹ ಇದು ಊರಿನಿಂದ ಅಂತ ಹೇಳಿ ಒಂದಕ್ಕೆ ಎರಡು ದರ ಪೀಕಿಸುವವರೂ ಇದ್ದಾರೆ. ಅಸಲಿಗೆ ಅಲ್ಲೆ ಗಾಡಿಯವನಿಂದ ತೆಂಗಿನ ಕಾಯಿ ತಂದಿಟ್ಟಿರುತ್ತಾರೆ ! ಎಲ್ಲರೂ ಅಲ್ಲ ಕೆಲವರು. ಇನ್ನು ತಿಂಡಿಗಳು ಹೆಚ್ಚಾಗಿ ಇಲ್ಲೆ ತಯಾರದರೂ ಮಂಗಳೂರಿನದ್ದು ಅಂತ ಬಣ್ಣ ಹಚ್ಚಿಬಿಡುತ್ತಾರೆ. ಅಸಲಿಗೆ ಅದು ಎಲ್ಲವೂ ತಯಾರಾಗುವುದು ಬೆಂಗಳೂರಲ್ಲೆ.  ಕೊಳ್ಳುವವರಿಗೂ ನಮ ಊರುದಕ್ಲು ಅಂತ ಭ್ರಮೆ ಇರುತ್ತದೆ. ಇಷ್ಟೆಲ್ಲಾ ಸಿಗುತ್ತಿದ್ದರೂ ನಾವು ಊರಿಗೆ ಹೋದರೆ ಊರಿನಿಂದಲೆ ಕುಚ್ಚಿಲಕ್ಕಿ ಮೂಟೆ ಹಲಸಿನಕಾಯಿ ಇನ್ನಿತರ ಸಾಮಾನು ಕಾರಿನಲ್ಲಿ ಜಾಗವಿಲ್ಲದೆ ಇದ್ದರೂ ತುಂಬಿಸಿ ಬಿಡುತ್ತೇವೆ. ಯಾಕೆ ಊರಿನಿಂದ ತಾಜಾ ಅಸಲಿ ಸಿಗುವಾಗ ಇಲ್ಲಿ ಸಿಗುವ ಅನುಮಾನದ ವಸ್ತು ಯಾಕೆ? ಮೂಲದಲ್ಲಿ ಏನಿದೆ ಅದನ್ನೇ ಪಡೆಯುವ ಬಯಕೆ. 

           ಹೌದು ಈಗಿನ ಕಾಲವೆಂದರೆ ನಕಲಿ ಯುಗ ಮೂಲದ ಅಸಲೀ ಬದಲಾಗಿ ನಕಲಿಯೇ ಅಸಲಿಯಾಗಿ ಅವತಾರ ಎತ್ತುತ್ತಿದೆ. ಹಾಗಾಗಿ ಮೂಲದ ಅಸಲಿಯ ಹಿಂದೆ ಹೋಗಿ ಆದಷ್ಟು ಉತ್ಕೃಷ್ಟ ಪರಿಶುದ್ದವನ್ನು ಪಡೆಯುವ ಬಯಕೆ ಎಲ್ಲರಿಗೂ ಇರುತ್ತದೆ. ಅಲ್ಲಿಂದ ತಂದು ಇಲ್ಲಿ ಎರಡು ದಿನ ಕಳೆದು ಬಾಡಿದ ಬಸಲೆ ಬೆಂಡೇಕಾಯಿ ಗಿಂತ ಊರಿಗೆ ಹೋದಾಗ ಅಲ್ಲಿಂದ ಶುದ್ಧವಾಗಿದ್ದದ್ದನ್ನೇ ತರುವ ಬಯಕೆ ಯಾರಿಗಿಲ್ಲ ಹೇಳಿ? ಹಾಗಾಗಿ ಅಸಲೀ ಸಂಗೀತವನ್ನು ಕೇಳುವುದಕ್ಕೆ ಯಕ್ಷಗಾನವನ್ನು ನೋಡುವ ಅನಿವಾರ್ಯತೆ ನನಗೆ ಇಲ್ಲ.ಶುದ್ದವಾದ ಸಂಗೀತಸಿಗುವ ತಾಣಗಳು ಬೇಕಾದಷ್ಟು ಇರುವಾಗ ಈ ರೂಪಾಂತರಿಯ ಹಿಂದೆ ಹೋಗುವ ಅನಿವಾರ್ಯತೆ ಯಾಕೆ?  ಅಲ್ಲಿ ಒಂದರ ಜತೆ ಇನ್ನೊಂದು ಉಚಿತ ಅಂತ  ಎಣ್ಣೆಯ ಜತೆ ಮಡ್ಡಿನ ರೂಪದ ಹಿಂಡಿಯನ್ನು ಪಡೆಯುವ ಸಂಭವ ಯಾರಿಗೆ ಬೇಕು? ಹಾಗಾಗಿ ಯಕ್ಷಗಾನ ಅರ್ಧಕ್ಕೆ ನಿಲ್ಲಿಸಿದ್ದೆ. ಇದು ಕೇವಲ ನನ್ನ ಅಭಿರುಚಿಗೆ ಸಂಭಂಧಿಸಿದ ವಿಚಾರ. 

                ಯಕ್ಷಗಾನ ಬದಲಾಗಿದೆ. ಬದಲಾಗುವ ಅನಿವಾರ್ಯತೆ ಇದ್ದರೂ ಇರಬಹುದು. ಆದರೆ ಕೇಳುವ ಅನಿವಾರ್ಯತೆ ನನಗಿಲ್ಲ. ಹಾಗಾಗಿ ಸಂಗೀತಮಯ ಲೋಕದ ಹೊರ ಬಾಗಿಲಿನಿಂದಲೇ ಒಮ್ಮೆ ಇಣುಕಿ ಮತ್ತೆ ವಾಪಾಸಾಗಿಬಿಡುತ್ತೇನೆ. 

         ಈಗಂತೂ ಹಲವು ಶೈಲಿಗಳು ಅವತಾರ ಎತ್ತಿವೆ. ಎಲ್ಲವನ್ನೂ ಅಧಿಕೃತವಾಗಿಸುವ ಹಂಬಲ ಎಲ್ಲರಲ್ಲು ಇರುತ್ತದೆ. ಆದರೆ ಮೂಲ ಅಥವಾ ಅಸಲಿಯಾದದ್ದು ಎಂಬುದೊಂದು ಇದೆ ಎಂಬುದನ್ನು ತಳ್ಳಿಹಾಕುವ ಹಾಗಿಲ್ಲ.  ಆದರೆ ವಾಸ್ತವದಲ್ಲಿ  ಈ ಮೂಲದ ಅಸಲಿಯ ಅಸ್ತಿವಾರದ ಮೇಲೆ  ನಕಲಿಯ ಸೌಧ ಎದ್ದು ನಿಲ್ಲುತ್ತದೆ. ಅದನ್ನು ನಕಲಿ ಅಂತ ಹೇಳಬೇಕೆ ಬೇಡವೆ ಎಂಬ ಅನುಮಾನ ಇದೆ. ಆದರೂ ಅಸಲಿಯ ದ್ವಂದ್ವ ಅಂತ ಉಪಯೋಗಿಸಿದ್ದೇನೆ.   ಮೂಲ ಪಂಚಾಗ ಮಣ್ಣಿನಡಿಯಲ್ಲಿ ಹೂತು ಹೋಗುವಂತೆ ಅದು ಮರೆಯಾಗಿ ಹೋಗಿದೆ. ನಕಲಿಗೆ ತಾನು ಅಸಲಿಯ ಮೇಲೆ ನಿಂತಿದ್ದೇನೆ ಎಂಬ ಪರಿವೆಯೇ ಇಲ್ಲದಂತೆ ಮೇಲೆ ನಗುತ್ತಿದೆ ಎನ್ನುವುದಕ್ಕಿಂತ ಅಟ್ಟಹಾಸ ಮೆರೆಯುತ್ತದೆ. 

        ಅದೇನಿದ್ದರೂ ಅಭಿರುಚಿಯೊಂದೇ ಅಸ್ತಿತ್ವಕ್ಕೆ ಕಾರಣವಾಗುತ್ತದೆ. ಹಾಗಾಗಿ ಮೂಲದಲ್ಲಿ ಯಾವುದು ಎಂಬುದರ ಗಂಭೀರ ಚಿಂತನೆ ಇರುವುದಿಲ್ಲ. ಬೆಂಗಳೂರಿನ ಹೊರವಲಯದಲ್ಲಿ ದೊಡ್ಡ ಆಲದ ಮರ ಒಂದಿದೆ. ಜಗತ್ಪ್ರಸಿದ್ಧ ಬೃಹತ್ ಆಲದ ಮರ. ಬಹಳಷ್ಟು ಮಂದಿ ಕೌತುಕದಿಂದ ಅದನ್ನು ನೋಡುತ್ತಾರೆ. ವಿಪರ್ಯಾಸವೆಂದರೆ ಈಗ ನಾವು ಕಾಣುತ್ತಿರುವ ಮರ ಅದು ಮೂಲದಲ್ಲಿರುವ ಮರವೇ  ಅಲ್ಲ. ಮೂಲದಲ್ಲಿ ಹುಟ್ಟಿದ ಮರ ಎಂದೋ ಸತ್ತು ಹೋಗಿದೆ. ಅದರ ಬಿಳಲಷ್ಟೇ ಉಳಿದು ನೋಡಿದವರು ಅದೇ ಮೂಲದ ಮರ ಎಂಬ ಭ್ರಮೆಯಲ್ಲಿರುತ್ತಾರೆ. ಯಕ್ಷಗಾನಕ್ಕೆ ಸಂಬಂಧಿಸಿ ಇದೇ  ಭ್ರಮೆ ಎಂದರೆ ಬಹಳ ಅರ್ಥ ಪೂರ್ಣವಾಗುತ್ತದೆ. ಸರಿ ಯಾವುದು?  ತಪ್ಪು ಯಾವುದು?  ಎಂಬ ಚರ್ಚೆಗಿಂತಲೂ  ಸತ್ಯ ಯಾವುದು ಎಂಬುದರ ಅರಿವು ಮಾತ್ರ ಮುಖ್ಯವಾಗುತ್ತದೆ. ಇಲ್ಲಿ ಅಭಿರುಚಿ ಮಾತ್ರ ವಾಸ್ತವದ ಸತ್ಯ. ಹಲವು ಸಲ ಅಭಿರುಚಿ ಎಂಬುದು ಎಲ್ಲದಕ್ಕೂ ಅತೀತವಾಗಿರುತ್ತದೆ.  ಯಾವುದೇ ತಿಂಡಿಗೂ ಸಮೃದ್ಧವಾಗಿ ಚಟ್ನಿ ಹಾಕಿ ಸವಿಯುವ ತಮಿಳರ ಮುಂದೆ ಐಸ್ಕ್ರೀಂ ತಂದಿಟ್ಟರು "ಚಟ್ಟಿ ಇಲ್ಲೇಯಾ " ಅಂತ ರಾಗವೆಳೆದರೆ ಆಶ್ಚರ್ಯ ಪಡಬೇಕಿಲ್ಲ. ಅದು ಅಭಿರುಚಿ ಎಂದು ಸುಮ್ಮನಾಗಬೇಕು. ಆದರೂ ಇದರನಡುವೆ ಸತ್ಯ ಏನೆಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವಷ್ಟು ಮನೋಧರ್ಮವನ್ನಾದರೂ ರೂಢಿಸಿಕೊಳ್ಳಬೇಕು.  ಯಾಕೆಂದರೆ ಸತ್ಯ ಅದು ಬದಲಾಗುವುದಿಲ್ಲ.  ಏನಂತೀರಿ? 


ಎಂದಿಗೂ....ಯಕ್ಷಗಾನಂ ಗೆಲ್ಗೆ.