ವ್ಯರ್ಥವಾಗುವ
ಗುರುಸ್ಥಾನ
ಹೇಳಿಕೇಳಿ ಅದು ಶಿವಮೊಗ್ಗದ ರೈಲು ನಿಲ್ದಾಣ. ಯಕ್ಷಗಾನ ತೀರ
ಅಪರಿಚಿತವಲ್ಲದೇ ಇದ್ದರೂ ಅಲ್ಲಿದ್ದ ಜನ ಜಂಗುಳಿಯಲ್ಲಿ
ಯಕ್ಷಗಾನದ ಬಗ್ಗೆ ತಿಳಿದವರು ಇರಲಾರದು ಎಂದೇ ನನ್ನ ಅನಿಸಿಕೆಯಾಗಿತ್ತು.
ಈ ಅನಿಸಿಕೆಯನ್ನು ಸುಳ್ಳಾಗಿಸುವಂತೆ ಹತ್ತಿರದಲ್ಲಿ ಕುಳಿತಿದ್ದ ವಯೋ ವೃದ್ಧರು ಕೇಳಿದರು
ಅದು “ ಶೇಣಿಯವರ ಪುಸ್ತಕನಾ? “
ಶೇಣಿ ಭಾರತವನ್ನು
ಓದುತ್ತಿದ್ದ ನಾನು ಒಂದು ಸಲ ಅವಾಕ್ಕಾಗಿ ಅವರ ಮುಖನೋಡಿ ಒಂದಷ್ಟು ಹೊತ್ತು ದಿಗ್ಮೂಢನಾದೆ. ನಂತರ ಹೂಂ ಹೌದೆಂದು ತಲೆಯಾಡಿಸಿದೆ. .
ಹೀಗೆ ಮೊನ್ನೆ ಮಧ್ಯಾಹ್ನ ಶಿವಮೊಗ್ಗದ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾದು
ಕುಳಿತಿದ್ದೆ. ಕಾರಣಾಂತರದಿಂದ ಬೆಂಗಳೂರಿನಿಂದ
ರೈಲು ಬರುವ ವೇಳೆ ಬಹಳ ವಿಳಂಬಿಸಿತ್ತು. ಅದರ ಪ್ರಕಟಣೆ ನಿಲ್ದಾಣ ತುಂಬೆಲ್ಲ
ವ್ಯಾಪಿಸಿತ್ತು. ತಡವಾದ ರೈಲಿಗೆ ಕಾಯುವುದೆಂದರೆ
ಅದು ಒಂದು ಯಾತನೆಯೇ ಸರಿ. ರೈಲು ನಿಲ್ದಾಣ
ಬಹಳಷ್ಟು ತುಂಬಿ ಕುಳಿತುಕೊಳ್ಳುವುದಕ್ಕೆ ಜಾಗವೇ ಇರಲಿಲ್ಲ. ಕೊನೆಗೆ ಬೆಂಚೊಂದರಲ್ಲಿ ಕುಳಿತಿದ್ದ ವೃದ್ಧರೊಬ್ಬರು
ಸ್ವಲ್ಪ ಸರಿದು ಕುಳಿತುಕೊಳ್ಳುವುದಕ್ಕೆ ಅನುವು ಮಾಡಿಕೊಟ್ಟರು. ಸಮಯವಿದೆಯಲ್ಲ, ಎಂದು ಕೊಂಡು ತಂದಿದ್ದ ಅತ್ಯಂತ ಹಳೆಯ ಪುಸ್ತಕವನ್ನು
ಮಡಿಲಲ್ಲಿರಿಸಿ ಓದುವುದಕ್ಕಾರಂಭಿಸಿದೆ. ಯಕ್ಷಗಾನ ಮೇಧಾವಿ ವಾಗ್ಮಿ ಸರಸ್ವತೀ ಸಂಜಾತ ಹರಿದಾಸ
ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ಟರ ಅರ್ಥಗಾರಿಕೆಯ ಕುರಿತಾದ ಬ್ರಹತ್ ಗ್ರಂಥವದು!!! ಶೇಣಿಯವರ ಮುಖಚಿತ್ರ
ಪುಸ್ತಕದ ಮೇಲಿತ್ತು.
ಒಂದು ಸಲ ನನ್ನಿಂದ
ಆ ಪುಸ್ತಕವನ್ನು ಕೊಂಡು ನೋಡಿದರು. ನಂತರ ಕೆಲವು
ಅನಿಸಿಕೆಗಳನ್ನು ಹೇಳಿದರು . ಯಥಾವತ್ ಆ
ಅನಿಸಿಕೆಗಳು ಇಲ್ಲಿ ವ್ಯಕ್ತವಾಗಿವೆ. ಶಬ್ದಗಳು
ವೆತ್ಯಾಸವಾದರೂ ಆ ಭಾವಗಳು ಸಾಧ್ಯವಾದಷ್ಟು ವ್ಯಕ್ತವಾಗಿವೆ. ಬಹಳಷ್ಟು ವಿಚಾರಗಳು ಬಂದರೂ ಒಂದು
ವಿಚಾರ ನನಗೆ ಗಮನಾರ್ಹ ಎನಿಸಿತು.
“ ಶೇಣಿಯವರು ಬಹಳ
ದೊಡ್ಡ ಕಲಾವಿದರು. ಅವರ ಅರ್ಥ ಕೇಳುವುದಕ್ಕಾಗಿಯೇ ಮೈಲುಗಟ್ಟಲೆ ರಾತ್ರಿ ಹಗಲು ವೆತ್ಯಾಸ ವಿಲ್ಲದೇ
ನಡೆದು ಹೋಗಿದ್ದೇವೆ. ಅದೊಂದು ಕಾಲವಿತ್ತು.
ಅವರ ರಾವಣ ಕೇಳಿ ಹೀಗೂ ಉಂಟೆ ಅಂತ
ಆಶ್ವರ್ಯವಾಗಿತ್ತಿತ್ತು. ಅದನ್ನು ನಮ್ಮ
ಮಾತಿನಲ್ಲಿ ಹೇಳುವುದು ಕಷ್ಟ. ಒಂದೆರಡು ಘಂಟೆಯ ಅರ್ಥ ಕೇಳಿ ದಿನವಿಡೀ ಅದರ ಬಗ್ಗೆ
ಯೋಚಿಸುವಂತಾಗುತ್ತಿತ್ತು. ಕೇವಲ ಅವರ ನಾಲಿಗೆಯಲ್ಲಿ ನಲಿದದ್ದು ನೋಡಿ ಪುಸ್ತಕವಾಗಿದೆ. “
ಅದು ಹೌದು,
ಶೇಣಿಯವರು ಮಾತನಾಡಿದ್ದು ನೆನಪಾಗಿ ಉಳಿಯುತ್ತಿತ್ತು. ಅ ಅರ್ಥಗಳು ತಲೆಯಲ್ಲಿ ಹಿಡಿಸಲಾರದಷ್ಟು
ವಿಪುಲ ವಿಚಾರಗಳನ್ನು ಹೊಂದಿದ್ದರೆ ಇನ್ನು ಕೆಲವು ಹೊಸ ಚಿಂತನೆಗೆ ಪ್ರಚೋದನೆ ಕೊಡುತ್ತಿತ್ತು. ಅವರ ವಿದ್ವತ್ತು
ಅರ್ಥಗಾರಿಕೆಯಲ್ಲಿ ವಿದ್ಯುತ್ಸಂಚಾರ ಮಾಡಿ ವಿಹರಿಸುತ್ತಿತ್ತು.. ಅದೊಂದು ಶತಮಾನದ
ವೈಚಿತ್ರ. ಮೈಲು ಗಟ್ಟಲೆ ನಡೆದು ಹೋಗುವಂತಹ
ಸೆಳೆತವನ್ನು ಒಂದು ನಾಲಗೆ ಸೃಷ್ಟಿಸುವುದೆಂದರೆ ಅದು ಪ್ರವಚನವಲ್ಲ, ಭಾಷಣವಲ್ಲ, ವೇದಾಂಗ
ಉಪನಿಷತ್ತು ಯಾವುದೂ ಅಲ್ಲ. ಆದರೆ ಅದೆಲ್ಲವೂ ಆಗಿ ಆ ಸೆಳೆತ ಸೃಷ್ಟಿಯಾಗುತ್ತಿತ್ತು. ವಾಙ್ಮಯ ಪ್ರಪಂಚದ ವಿಸ್ತಾರವನ್ನು
ಕಂಡು ಬೆರಗಾಗುತ್ತಿದ್ದೆವು.
ಇದೀಗ ವಯೋವೃದ್ದರ
ಅನಿಸಿಕೆಗಳಲ್ಲಿ ಅತಿಶಯಗಳಿಲ್ಲ.
“ ಶೇಣಿಯವರು
ಅರ್ಥಗಾರಿಕೆಗೆ ಒಂದು ಆಯಾಮವನ್ನು ಸೃಷ್ಟಿ ಮಾಡಿದವರು. ಯಕ್ಷಗಾನ ಪಾತ್ರಗಳು ಎಂದರೆ ಅದು
ಹೀಗೆ ಅಂತ ನಮಗೆ ಅನ್ನಿಸಿದ್ದು ಅವರ ಅರ್ಥ
ಗಾರಿಕೆ ಕೇಳಿ. ಆದರೆ ಆ ಅಯಾಮಗಳೆಲ್ಲ ಈಗ ಆಕಾರವನ್ನು ಕಳೆದುಕೊಂಡಿದೆ. ಅವರ ಅರ್ಥಗಾರಿಕೆಯಲ್ಲಿ
ವಿದ್ವತ್ತು ಇತ್ತು ಈಗ ಎಂತದು. ಅವರನ್ನು ಅನುಕರಿಸುತ್ತಾರೆ. ಅದು ಸರಿಯಾದ ಅನುಕರಣೆಯೂ ಅಲ್ಲ
ಎಂಥದೋ ಒಂದು ಒಟ್ಟು ಅವರನ್ನು ಗೇಲಿ ಮಾಡಿದಂತೆ ”
“ ಈಗ ತಂಡ
ಕಟ್ಟಿಕೊಂಡು ಯಕ್ಷಗಾನ ಎಲ್ಲ ಮಾಡ್ತಾರೆ. ಅದರಲ್ಲಿ ಎಂಥದು ಉಂಟು ಅಂತ ಬೇಸರ ಆಗ್ತದೆ. ಇನ್ನು ಕೆಲವರ ಅರ್ಥ ಕೇಳಿದರೆ ಎಲ್ಲ ಎಂಜಲು ಎಲೆಯ
ಮೇಲಿನ ಕಾಗೆ ನೆನಪಾಗ್ತದೆ. ಬರೇ ಕ್ಯಾಸೆಟ್ ಸಿಡಿ ಕೇಳಿ ನೋಡಿ ರಂಗಸ್ಥಳ ಹತ್ತುತ್ತಾರೆ.
ಕ್ಯಾಸೆಟ್ ಕೇಳಿ ಅರ್ಥ ಹೇಳುವುದಕ್ಕೆ ಕಲಿತರೆ ಬೇರೇನು ಆಗಬಹುದು? ಈಗಿನವರಿಗೆ ಗುರುಗಳ ಅಗತ್ಯ
ಇಲ್ಲ. ಎಲ್ಲ ಏಕಲವ್ಯ ಸಂತಾನದವರು. ಅರ್ಥ ಧ್ವಂಸಿಗಳು, ಕೇವಲ ಅರ್ಥಗಾರಿಕೆಯಲ್ಲ ಇಡೀ ಯಕ್ಷಗಾನವೇ
ಹಾಗಾಗಿ ಹೋಗಿದೆ.”
ಕೇವಲ ಶೇಣಿಯವರ ಚಿತ್ರ
ಒಂದು ಇಷ್ಟು ವಿಚಾರಗಳನ್ನು ಹಂಚಿಕೊಳ್ಳುವುದಕ್ಕೆ ಪ್ರಚೋದಿಸುತ್ತಿದ್ದರೆ ಶೇಣಿಯವರ ಪಾತ್ರಗಳ ಹಿನ್ನೆಲೆಯದು ಯಾವ ತರಹ ಇರಬಹುದು?
ಎಲ್ಲವನ್ನು ಹೋಲಿಸಿ
ನೋಡುವುದು ಸರಿಯಲ್ಲ. ಆದರೂ ಶೇಣಿಯವರು ನಿರ್ಮಿಸಿದ ಅರ್ಥಗಾರಿಕೆಯ ಪ್ರಪಂಚ ವಿಸ್ತಾರ ಅತಿ ದೊಡ್ಡದು.
ಅದರೊಳಗಿನ ವಿಹಾರ ಕಂಡವನೇ ಬಲ್ಲ. ಆ ಪ್ರಪಂಚವನ್ನು ಅಂಗೈಯಲ್ಲಿ ಹಿಡಿದಂತೆ ಕ್ಯಾಸೆಟ್ ಸಿಡಿಗಳು. ಹಾಗಿದ್ದರೂ
ಅದರ ಶಿಷ್ಯತ್ವ ಅಂಗೀಕರಿಸಿ ವೇದಿಕೆ ಏರುತ್ತಾರೆ ಎಂದರೆ ಯಕ್ಷಗಾನ ಅಷ್ಟು ಸರಳ ವಸ್ತುವಾಗಿ ಬದಲಾಯಿತೆ
ಎಂದು ಅಚ್ಚರಿಯಾಗುತ್ತದೆ.
ಹೀಗೆ ಇರುವ
ಸ್ವಲ್ಪ ಹೊತ್ತಿನಲ್ಲಿ ಬಹಳಷ್ಟು ವಿಚಾರಗಳನ್ನು ಹಂಚಿಕೊಂಡರು. ಶೇಣಿಯ ಸಮಕಾಲೀನ ಕಲಾವಿದರ ಬಗ್ಗೆ
ಅಪಾರವಾದ ಗೌರವನ್ನು ಇಟ್ಟುಕೊಂಡಿದ್ದರು. ವಸ್ತು
ಸ್ಥಿತಿಯ ಚಿತ್ರಣಗಳು ಸಿಗಬೇಕಾಗದರೆ ಹೀಗೆ ಅಂದಿನ ಪ್ರೇಕ್ಷಕರ ಮನಸ್ಸನ್ನು ತಿಳಿಯಬೇಕು. ಆದರೆ ಇಂದು ಆ ಪ್ರೇಕ್ಷಕ ವರ್ಗ ದೂರವಾಗುತ್ತದೆ. ಈಗ ಕೆಲವರಾದರೂ ಗತಕಾಲದ ನೆನಪಿಗೆ ಸಾಕ್ಷ್ಯವಾಗಿದ್ದಾರೆ. ಅದೆಷ್ಟು ಸಮಯ?
ಆ ನಂತರ ಸಾಕ್ಷ್ಯವೂ ಲಭ್ಯವಾಗುವುದಿಲ್ಲ. ಪರಂಪರೆಗಳು ನಾಶವಾದಂತೆ ಸಾಕ್ಷ್ಯಗಳೂ ಇಲ್ಲವಾಗಿ ಇಂದು ಅದೇನು ಕಾಣುತ್ತದೆಯೋ ಅದೆ ಸತ್ಯವಾಗಿ ಮುಂದಿನ
ಪೀಳಿಗೆಗೆ ರವಾನೆಯಾಗುತ್ತಿದೆ.
ಈಗ ನಮ್ಮ ನಡುವೆ ವರ್ಷಗಟ್ಟಲೆ ಗುರು ಸೇವೆ ಮಾಡಿ ವಿದ್ಯೆ ಕಲಿತ ಕಲಾವಿದರು ಇಂದಿಗೂ
ಇದ್ದಾರೆ. ಗುರು ಮುಖೇನೆ ಕಲಿತ ವಿದ್ಯೆಯ ಬೆಲೆ ಅಂತಹ ಕಲಾವಿದರಿಂದಲೇ ಕೇಳಿ ತಿಳಿಯಬೇಕು. ಇಂದು ಆ
ಗುರು ಪರಂಪರೆ ಕೇವಲ ತಾಂತ್ರಿಕತೆಗೆ ಇಳಿದು ಬಿಟ್ಟಿದೆ. ಸುಲಭದಲ್ಲಿ ಲಭ್ಯವಾಗುವ ತತ್ರಾಂಶಗಳೇ ಗುರುಗಳು.
ಯಕ್ಷಗಾನದ ಪ್ರತಿಯೊಂದು ಅಂಗಕ್ಕೂ ಒಂದೊಂದು ಗುರು ಪರಂಪರೆಯಿದೆ. ವೇಷ ಭೂಷಣದಿಂದ ತೊಡಗಿ ರಂಗ
ವಿನ್ಯಾಸದವೆರೆಗೂ ಗುರು ಸ್ಥಾನವಿದೆ. ಆದರೆ ಮಹತ್ವದ ವಿಚಾರಗಳಿಗೆ ಗುರು ದೂರವಾಗಿಬಿಡುತ್ತಾನೆ.
ಕ್ಯಾಸೆಟ್ ಕೇಳಿ ಜಾಗಟೆ ತಾಳ ಹಿಡಿದು ಭಾಗವತನಾಗುತ್ತಾನೆ. ಏಲ್ಲೋ ಒಂದು ಕ್ಯಾಸೆಟ್ ನಲ್ಲಿ
ಕೇಳಿದ ಪದವನ್ನು ಹಾಗೇ ಉರು ಹೊಡೆದು ಒಪ್ಪಿಸಿಬಿಡುತ್ತಾನೆ. ಚಪ್ಪಾಳೆಯ ಜೊತೆಗೆ ಮತ್ತಷ್ಟು ಕಾರ್ಯಕ್ರಮವನ್ನು
ಗಿಟ್ಟಿಸುತ್ತಾನೆ. ಎಲ್ಲವನ್ನೂ ಮಾಡಿದರೂ ಆತ್ಮ ವಿಮರ್ಶೆ ಒಂದನ್ನು ಬಿಟ್ಟು ಬಿಡುತ್ತಾನೆ. ಕ್ಸಾಸೆಟ್ ಅರ್ಥ ಕೇಳಿ
ತಾಳಮದ್ದಲೆಯಲ್ಲಿ ಮೈಕ್ ಮುಂದೆ ಮುಖ ಹಿಡಿಯುತ್ತಾನೆ. ಶಲ್ಯ ಜುಬ್ಬದ ಹೊರಾವರಣ ಭರ್ಜರಿಯಾಗಿರುತ್ತದೆ. ಒಳಗೆಲ್ಲ ಶೂನ್ಯ. ಇದ್ದರೂ
ಈ ಕ್ಯಾಸೆಟ್ ಗಳ ಒಂದಷ್ಟು ಸುರುಳಿಗಳಷ್ಟೇ.
ಇಲ್ಲಿ ವರ್ಷಗಟ್ಟಲೆ ಗುರು ಸೇವೆ ಮಾಡಿ ಕಲಿತ
ವಿಚಾರಗಳು ಕೇವಲ ಯಃಕಶ್ಚಿತ್ ವಿಚಾರಗಳಾಗಿ ಭಾಸವಾಗುತ್ತದೆ. ಗುರುವಿಲ್ಲದೇ ಕಲಿಯುವಷ್ಟು
ಸುಲಭವಾಗಿಬಿಟ್ಟಿತೇ ಯಕ್ಷಗಾನ? ಶುದ್ದವಾದ
ಪರಂಪರೆಯ ಕಲೆ ಯಕ್ಷಗಾನ. ಅದೇ ಶುದ್ದ ಪರಂಪರೆಯಿಂದ ಯಕ್ಷಗಾನ ದೂರವಾಗುವುದಕ್ಕೆ ಇಂತಹ
ಶಿಷ್ಯೋತ್ತಮ ರೂವಾರಿಗಳೂ ಕಾರಣವಾಗುತ್ತಾರೆ. ಯಕ್ಷಗಾನವೆಂದರೆ ಕೇವಲ ಅರ್ಥಗಾರಿಕೆಯೂ ಅಲ್ಲ, ಕೇವಲ ಹಾಡುಗಾರಿಕೆಯೂ ಅಲ್ಲ. ಆದರ ವ್ಯಾಪಕತ್ವವನ್ನು
ತಿಳಿಯದೇ ತಾನೋಬ್ಬ ಅದರ ಕಲಾವಿದ ಎಂದು ಸಾರ್ವಜನಿಕವಾಗಿ ಬಿಂಬಿಸಿಕೊಳ್ಳುವುದು ಕೇವಲ ಹೆಸರು
ಮಾಡಬೇಕೆಂಬ ಸ್ವಾರ್ಥವನ್ನಷ್ಟೇ ಬಿಂಬಿಸುತ್ತದೆ ಹೊರತು ಅದರಲ್ಲಿ ಯಕ್ಷಗಾನ ಅಭಿಮಾನ
ಕಾಣುವುದಿಲ್ಲ. . ಅಷ್ಟಕ್ಕೂ ಯಕ್ಷಗಾನದ ಬಗ್ಗೆ ಲವ ಲೇಶವಾದ ಅಭಿಮಾನ ಗೌರವ ಇದ್ದರೆ ಕ್ಯಾಸೆಟ್
ಸಿಡಿಗಳು ಕೇವಲ ಪ್ರೇರಣೆಯ ಮೂಲವಾಗಬೇಕೆ ಹೊರತು ಅದುವೇ ಪರಿಪೂರ್ಣವಾಗಬಾರದು. ಆದರೆ ಹೆಸರು ಗಳಿಸುವ ತವಕದಲ್ಲಿ ಈ ಚಿಂತನೆಗಳು ಹೊಳೆಯುವುದೇ ಇಲ್ಲ. ಪ್ರೇಕ್ಷಕನ
ದುರ್ದೈವವೋ ಯಕ್ಷಗಾನದ ದುರ್ದೈವವೋ ತಿಳಿಯುವುದಿಲ್ಲ.
ನಮ್ಮಲ್ಲಿ
ಶ್ರೇಷ್ಠವಾದ ಪರಂಪರೆ ಇದೆ. ಅದು ಸುಮ್ಮನೇ ಹುಟ್ಟಿ ಬೆಳೆದದ್ದಲ್ಲ. ಅದರ ಬೇರುಗಳಲ್ಲಿ
ಮಹತ್ಸಾಧನೆಯ ಜೀವಜಲ ಇನ್ನೂ ಜೀವಂತವಾಗಿದೆ. ಸಿ. ಡಿ ಕ್ಯಾಸೆಟ್ ನೋಡಿ ಯಕ್ಷಗಾನ ಕಲಾವಿದರಾಗಿ ಅದು
ಸಾಧನೆ ಎಂದು ಸಾರ್ವಜನಿಕವಾಗಿ ಬಿಂಬಿಸುವಲ್ಲಿ
ಮೂರ್ಖತನದ ಮನೋಭಾವವಿದೆ. ಸ್ವ ಹವ್ಯಾಸಕ್ಕಾಗಿ ಕೇಳಬಹುದು. ಕಲಿಯಬಹುದು. ಆದರೆ ಅದನ್ನು
ಸಾರ್ವಜನಿಕವಾಗಿ ಬಿಂಬಿಸುವಾಗ ಶುದ್ದ ಗುರು ಪರಂಪರೆಯನ್ನು ಅವಹೇಳಿಸಿದಂತೆ. ದ್ರೋಣರು ಬೆರಳನ್ನು ಕಿತ್ತುಕೊಂಡಂತೆ ಇಂದು ಗುರು ತನ್ನ ಹಕ್ಕು ಸ್ವಾಮ್ಯವನ್ನು
ಸ್ಥಾಪಿಸುವ ಪ್ರಮೇಯ ಇರುವುದಿಲ್ಲ. ಯಾಕೆಂದರೆ ವಾಸ್ತವದಲ್ಲಿ
ಎಲ್ಲ ನಿರ್ಜೀವ ವಸ್ತುಗಳಲ್ಲವೇ?
ವರ್ಷಗಳ ಹಿಂದೆ ಹವ್ಯಾಸಿ
ಅಭಿಮಾನಿಯೊಬ್ಬರು ರಾತ್ರಿ ಹತ್ತು ಘಂಟೆಗೆ ಕರೆ ಮಾಡಿ ಅದಾವುದೋ ಪ್ರಸಂಗದ ಧ್ವನಿ ಮುದ್ರಣ(ಆಡಿಯೋ) ಇದೆಯಾ ಎಂದು ಕೇಳಿದರು. ಇದೆ
ಎಂದಾಗ ಈಗ ಬರುತ್ತೇನೆ ಕೊಡಬಹುದಾ? ಎಂದು ವಿನಂತಿಸಿಕೊಂಡರು. ಅದಾಗಲೇ ರಾತ್ರಿ ತಡವಾಗಿದ್ದರು
ಆದೀತು ಬೇಗ ಬನ್ನಿ ಅಂತ ಹೇಳಿದೆ. ಹಾಗೆ ಹೀಗೆ ಹನ್ನೊಂದರ ಸುಮಾರಿಗೆ ಬಂದು ಅವರಿಗೆ ಬೇಕಾದ
ಯಕ್ಷಗಾನ ಧ್ವನಿ ಮುದ್ರಣವನ್ನು ಮೊಬೈಲ್ ಗೆ ಏರಿಸಿಕೊಂಡರು. ಈ ರಾತ್ರಿಯಲ್ಲಿ ಅದರ ಆವಶ್ಯಕತೆ ಏನು
ವಿಚಾರಿಸಿದಾಗ ತಿಳಿದದ್ದು ಇಷ್ಟೆ. ಯಾವುದೋ ತಾಳ ಮದ್ದಲೆಯಲ್ಲಿ ಅರ್ಥ ಹೇಳುವುದಕ್ಕೆ ಪರಿಕರವಾಗಿ
ಇದನ್ನು ಪಡೆದುಕೊಂಡಿದ್ದರು. ಮುಂದೆ ಅವರು ಅದನ್ನು ಹೇಗೆ ಉಪಯೋಗಿಸಿಕೊಂಡರು ಎಂದು ತಿಳಿಯದು.
ಆದರೆ ಹೀಗೆ ಕ್ಯಾಸೆಟ್ ಕೂಡ ಗುರುಸ್ಥಾನವನ್ನು ಅಲಂಕರಿಸುವುದು ವಿಡಂಬನೆಯ ಸಂಗತಿ. ಆ ತಡ ರಾತ್ರಿಯಲ್ಲಿ ಬಂದು ತೆಗೆದುಕೊಂಡು ಹೋಗಿದ್ದರೂ ಆನಂತರ ನನ್ನ ಯಕ್ಷಗಾನ ಸಂಗ್ರಹದ ಬಗ್ಗೆ ಯಾರಿಗೂ ಹಂಚಿಕೊಳ್ಳದಿರುವುದು ಇರುವುದಾದರೂ ಯಾಕೆ
ಎಂದು ಅವಹೇಳನವಾಗಿ ಪ್ರತಿಕ್ರಿಯಿಸಿದ್ದರು. ಯಾವುದೇ
ವಸ್ತುವನ್ನು ಉಪಯೋಗಿಸುವುದರಲ್ಲಿ ಶುದ್ದವಾದ ಮನೋಭಾವ ಸತ್ ಸಂಕಲ್ಪ ಅತೀ ಅಗತ್ಯ. ಕಲೆ ವಿದ್ಯೆ ಸಂಸ್ಕಾರವನ್ನು
ಪ್ರತಿಬಿಂಬಿಸುತ್ತದೆ ಎಂದು ಶೇಣಿಯವರು ಎಲ್ಲೋ ಹೇಳಿದ್ದು ಇಲ್ಲಿ ಅಣಕಿಸುವಂತೆ ಭಾಸವಾಗುತ್ತದೆ.
ಯಕ್ಷಗಾನವಾಗಲೀ
ಅಥವಾ ಇನ್ನಿತರ ಯಾವುದೇ ಕಲೆಯಾಗಲಿ ಅದನ್ನು ನೋಡಿ ಕೇಳಿ ಕಲಿಯುವುದು ಅಭಿರುಚಿಯನ್ನು
ಅವಲಂಬಿಸಿರುತ್ತದೆ. ಆದರೆ ಅದನ್ನು ಪರಿಪೂರ್ಣವೆಂದು ತಿಳಿದು ತನಗೆ ತಾನೆ ಕಲಾವಿದ
ಸ್ಥಾನಮಾನವನ್ನು ತಂದುಕೊಳ್ಳುವುದು ಮೂರ್ಖತನ. ಗುರು ಸೇವೆ ಮಾಡಿ ತಮ್ಮ ಜೀವನ ಬಹುಪಾಲನ್ನು
ವಿನಿಯೋಗಿಸಿ ಅದನ್ನು ಕಲಿತು ತಪಸ್ಸಾಗಿ ಕಂಡವರ ಮಾರ್ಗ ವ್ಯರ್ಥ ಎಂದಾಗಬಾರದು. ಹೊಸ ತಲೆಮಾರಿನ
ವಕ್ರಮಾರ್ಗದಲ್ಲಿ ಪರಂಪರೆಯ ಅವಹೇಳನವಾಗಬಾರದು. ಪೂರ್ಣ ಜೀವನವನ್ನು ಅನುಭವಿಸಿ ಮೋಕ್ಷವನ್ನು
ಪಡೆಯುವುದಕ್ಕೂ ನದಿಗೆ ಹಾರಿ ಕೈಲಾಸ
ಕಾಣುವುದಕ್ಕೂ ವೆತ್ಯಾಸವಿದೆ.
