ದೇವಸ್ಥಾನಕ್ಕೆ ಹೋದಾಗ ದೊಡ್ದದಾದ ಹೂಮಾಲೆಯೊಂದು ಪ್ರಸಾದವಾಗಿ ಪ್ರಸಾದಿಸಿದಾಗ, ಕೆಲವೊಮ್ಮೆ ಸಿಕ್ಕಿದ ಹೂಮಾಲೆಯಿಂದ ಸಣ್ಣ ಚೂರೊಂದನ್ನು ಅಥವಾ ಹೂವಿನ ಎಸಳೊಂದನ್ನು ತೆಗೆದು ಮುಡಿಗೇರಿಸುತ್ತಾರೆ. ಯಾಕೆಂದರೆ ಇಡೀ ಹೂಮಾಲೆಯನ್ನು ಧರಿಸುವವರೂ ಜತೆಗಿರುವುದಿಲ್ಲ. ಅದನ್ನು ಜೋಪಾನವಾಗಿ ಮನೆಗೆ ತೆಗೆದುಕೊಂಡು ಹೋದರೂ ಮನೆಗೆ ಅದು ತಲುಪುವ ಹಾಗಿಲ್ಲ. ಹಾಗಾಗಿ ಪ್ರಸಾದವನ್ನು ಪ್ರಸಾದಂತೆ ಸ್ವೀಕರಿಸಿ ಹೂಮಾಲೆಯನ್ನೇ ಧರಿಸಿದಂತೆ ತೃಪ್ತರಾಗುತ್ತಾರೆ. ದೊಡ್ಡ ಕೊಪ್ಪರಿಗೆಯಲ್ಲಿ ಪಕ್ವಾನ್ನವೋ ಪರಮಾನ್ನವೋ ಸಿದ್ದವಾಗಿ ಹೆಬೆಯಾಡುತ್ತಿರುತ್ತದೆ. ಕಂಡಾಗ ಹಲವು ಸಲ ಒಂದೆರಡು ಚಮಚೆ ಕೈಗೆ ಸುರಿದುಕೊಂಡು ರುಚಿನೋಡುವ ಚಪಲ ಹುಟ್ಟುತ್ತದೆ. ಹಾಗೆಂದು ಊಟಮಾಡಿ ಪೂರ್ಣವಾಗಿ ಅದನ್ನು ಸವಿಯುವ ಮನಸ್ಸು ಇರುವುದಿಲ್ಲ ವ್ಯವಧಾನವೂ ಇಲ್ಲ.! ಇದು ಇಂದಿನ ವೇಗದ ಪ್ರಪಂಚದಲ್ಲಿ ಬದಲಾದ ಅಭಿರುಚಿ ವ್ಯಕ್ತವಾಗುವ ಕ್ರಮ. ತಮಗೆಷ್ಟು ಬೇಕೋ ಅಷ್ಟನ್ನು ಮಾತ್ರ ತಿಕ್ಕಿ ತಿಕ್ಕಿ ನೋಡುವ ಕ್ರಮ. ಯಕ್ಷಗಾನವೂ ಇಂದು ಬದಲಾಗಿ ಬದಲಾಗಿ ತಮಗೆಷ್ಟು ಬೇಕೋ ಅಷ್ಟನ್ನು ಮಾತ್ರ ಸವಿಯುವ ಪ್ರವೃತ್ತಿಯಾಗುತ್ತಿದೆ. ಆದರೂ ಅದನ್ನೇ ಪೂರ್ಣ ಸಾಧಿಸಿ ತೊರಿಸುವಾಗ ಹಿರಿಯರು ಕಟ್ಟಿದ ದೊಡ್ದ ಮನೆ ಪ್ರಾಚ್ಯ ವಸ್ತು ರೂಪವಾಗಿ ಕೂಡ ಉಳಿಸದಂತೆ ಭಾಸವಾಗುತ್ತದೆ. ದೊಡ್ಡ ಮನೆಯ ಕೋಣೆ ಕೋಣೆಗಳನ್ನು ತುಂಡು ತುಂಡಾಗಿ ಮಾಡಿ ಕೆಲವನ್ನು ನಾಶಮಾಡಿ ಇನ್ನೇನೋ ಮಾಡಿ ಒಟ್ಟಾರೆ ಪತನದ ಹಾದಿಯನ್ನೆ ಸರ್ವಸ್ವ ಎಂದು ನಂಬಿದ ಹಾಗೆ ಅನಿಸುತ್ತದೆ.
ಕೆಲವು ಸಮಯದ ಮೊದಲು ಪ್ರಸಿದ್ಧ ಭಾಗವತರೊಬ್ಬರಲ್ಲಿ ಹೀಗೆ ಮಾತಿಗೆ ಕೇಳಿದ್ದೆ "ಈಸಲ ನಿಮಗೆ ಮೇಳದಲ್ಲಿ ಮದ್ದಲೆಗೆ ಜನ ಯಾರು ?" ಯಾವುದೇ ಭಾವ ಇಲ್ಲದೇ ಅವರು ಹೇಳಿದರು ( ಅಥವಾ ಅವರ ಅಂತರಂಗದ ಭಾವ ಏನೋ? ಅದು ನನಗೆ ಅರಿವಾಗದೇ ಇರಬಹುದು) " ನಾನು ಈಗ ಅದನ್ನೆಲ್ಲ ನೋಡುವುದಿಲ್ಲ....ನನ್ನ ಕೆಲಸ ಮಾಡುವುದು ಬರುವುದು" ಇಲ್ಲಿ " ಕೆಲಸ " ಎಂದರೆ ಹೇಗೆ ಅದರ ಪರಿಪೂರ್ಣತೆಯ ಬಗ್ಗೆ ವಿವರಣೆ ವಿಶ್ಲೇಷಣೆಯ ಬಗ್ಗೆ ಹೇಳುವುದಲ್ಲ. ಬದಲಾಗಿ ಕಲಾವಿದನಿಗೆ ಈ ಭಾವ ಬಂದಲ್ಲಿ ಕಲೆಯನ್ನು ಕಲೆಯಾಗಿ ಕಾಣಲು ಸಾಧ್ಯವೇ ? ಕಾರಣ ಏನೇ ಇದ್ದರೂ ಇದರ ಅರಿವಿಲ್ಲದ ಪ್ರೇಕ್ಷಕ ಪಾಲಿಗೆ ಬಂದದ್ದು ಎಂದು ತೃಪ್ತನಾಗುವ ಬಗೆಯನ್ನು ಕಾಣುವ ಪ್ರಯತ್ನ ಮಾಡುತ್ತಾನೆ. ದೂರಕ್ಕೆ ಪ್ರಯಾಣಿಸುವ ರೈಲು ಬಂಡಿಯಲ್ಲಿ ಹಲವು ಸಲ ಮೂಲ ಜಾಗದಿಂದ ಹೊರಟ ರೈಲು ಭೋಗಿಯನ್ನು ಕಳಚಿಕೊಂಡೋ ಬೇರೆ ಭೋಗಿಯನ್ನು ಸೇರಿಸಿಕೊಂಡೋ ಅಥವಾ ಇನ್ನೊಂದು ರೈಲಿಗೆ ಸೇರಿಕೊಂಡೋ ಹೊರಟ ರೂಪದಲ್ಲಿ ಗಮ್ಯವನ್ನು ಸೇರುವುದಿಲ್ಲ. ಸಿಬ್ಬಂದಿಗಳು ಬದಲಾಗುತ್ತಾ ಹೋಗಿ ಅಂತ್ಯದಲ್ಲಿ ಒಟ್ಟು ಪ್ರಯಾಣದ ಸ್ವರೂಪವೇ ಬದಲಾದಂತೆ ಭಾಸವಾಗುತ್ತದೆ. ಯಾವುದೋ ಒಂದು ರೂಪದಲ್ಲಿ ಗಮ್ಯವನ್ನು ಸೇರಿ ಗುರಿ ಸಾಧಿಸುವ ಹಾಗೆ ಯಕ್ಷಗಾನ ಬದಲಾಗಿದೆ.
ಈ ಬಾರಿಯ ಯಕ್ಷಗಾನ ಪತ್ರಿಕೆಯ ಯಕ್ಷಪ್ರಭದಲ್ಲಿನ ಲೇಖನವೊಂದು ಮನಸ್ಸಿಗೆ ಹಿಡಿದ ಕನ್ನಡಿಯಂತೆ ಭಾಸವಾಗಿ ವಾಸ್ತವದತ್ತ ಮುಖಮಾಡುವಂತೆ ಮಾಡಿತು. " ಯಕ್ಷಗಾನ ಕಲೆ ಕಲಾವಿದ X ಜಿಜ್ಞಾಸು ಪ್ರೇಕ್ಷಕ" ಪೆರ್ನಡ್ಕ ಶ್ಯಾಮ ಭಟ್ಟ ಬರೆದ ಈ ಲೇಖನದಲ್ಲಿ ಹಲವಾರು ವಾಸ್ತವಾಂಶಗಳನ್ನು ಮನ ಮುಟ್ಟುವಂತೆ ಲೇಖಕರು ಹೇಳುವ ಪ್ರಯತ್ನವನ್ನು ಮಾಡಿದ್ದಾರೆ. ವ್ಯಕ್ತವಾಗದೇ ಉಳಿವ ನಮ್ಮ ಭಾವನೆಗಳು ಸ್ಪಂದನೆಗೆ ಸಿಕ್ಕಿವೆಯೇ ಎಂದು ಅನುಮಾನಿಸುವ ಹಾಗೆ ಲೇಖನ ಅಚ್ಚು ಕಟ್ಟಾಗಿ ಪ್ರಕಟವಾಗಿದೆ. ಮೊದಲಾಗಿ ಹಿಮ್ಮೇಳದ ಬಗ್ಗೆ ಬರೆಯದಿದ್ದರೆ ಉತ್ತಮ ಎಂದು ಬರೆಯಲು ಮನಸ್ಸಿಲ್ಲದಿದ್ದರೂ ಬರೆದಿದ್ದಾರೆ. ಇದು ಅಪ್ರಚೋದಿತ ಉದ್ಗಾರದಂತೆ.ಕೆಲವೊಂದು ಸಲ ನಾವು ನಗುವುದೇ ಬೇಡ ಎಂದು ಬಿಗುವಿನಲ್ಲಿ ಕುಳಿತಿದ್ದರೂ ಹಾಸ್ಯ ನಮ್ಮನ್ನು ಅನಿಯಂತ್ರಿತವಾಗಿ ನಗುವಂತೆ ಮಾಡುತ್ತದೆ. ಹಾಗೆಈಗಿನ ಹಿಮ್ಮೇಳವು ಬೇಡದೇ ಇದ್ದರೂ ಇಲ್ಲಿ ಪ್ರಚೋದನೆ ಕೊಟ್ಟಂತೆ ಭಾಸವಾಯಿತು. ಹಲವು ಸಲ ಭಾಗವತ ರಾಗಾಲಾಪನೆ ಹಿಗ್ಗಿಸುತ್ತಾ ಹೋಗುತ್ತಾನೆ. ಈಗಿನ ಪ್ರೇಕ್ಷಕ ರೋಮಾಂಚನಗೊಂಡು ಪ್ರತಿಕ್ರಿಯಿಸಲು ಕಾದಿರುವುದನ್ನು ಗಮನಿಸಿ ಮತ್ತೂ ಅಲಾಪನೆಯನ್ನು ದೀರ್ಘಿಸುತ್ತಾನೆ. ರಂಗದ ಮೇಲಿನ ಪಾತ್ರಧಾರಿ ಈ ರಾಗ ನನ್ನ ಪಾತ್ರಕ್ಕಾಗಿಯೇ ಅಲ್ಲ ಪ್ರೇಕ್ಷಕನಿಗಾಗಿಯೇ ಎಂಬ ಅನುಮಾನದಲ್ಲಿ ಮೆರವಣಿಗೆಯ ಪ್ರತಿಮೆಯಂತೆ ಸ್ತಭ್ದವಾಗಿ ನಿಂತು ಬಿಡುತ್ತಾನೆ!! ಮತ್ತೆ ಮಾಡುವುದೇನು? ಸಂಗೀತ ಕಛೇರಿಯೋ ಯಕ್ಷಗಾನವೋ ಗೊಂದಲ. ಅತ್ತ ಸಂಗೀತಕ್ಕೂ ನ್ಯಾಯವಿಲ್ಲ ಇತ್ತ ಯಕ್ಷಗಾನಕ್ಕೂ ನ್ಯಾಯವಿಲ್ಲ. ಯಾಕೆಂದರೆ ಭಾಗವತನಿಗೆ ಎರಡರದ್ದೂ ಪೂರ್ಣ ಜ್ಞಾನವೇ ಸಿದ್ಧಿಸಿರುವುದಿಲ್ಲ. ಎರಡೂ ಸರಿಯಾಗಿ ಬರುವುದಿಲ್ಲ. ಈ ನಡುವೆ ಪ್ರೇಕ್ಷಕ ಕಿರಾಣಿ ಅಂಗಡಿಯ ಮುಂದೆ ನಿಂತುಕೊಂಡು ಪಕ್ಕದ ಬಟ್ಟೆ ಅಂಗಡಿಯನ್ನು ನೋಡುವಂತೆ ಯಾವುದಕ್ಕೆ ಗ್ರಾಹಕನಾಗುವುದು? ಯಾವುದನ್ನು ಗ್ರಹಿಸುವುದು? ಎಂಬ ಗೊಂದಲದಲ್ಲಿ ಬೀಳುತ್ತಾನೆ. ಕೊನೆಗೆ ಅಂತು ರಂಜನೆ ಸಿಕ್ಕಿತಲ್ಲ ಎಂದುಕೊಳ್ಳುತ್ತಾನೆ. ಹಾಗಾಗಿ ಇಂದು ರಂಜನೆ ಯಾವುದರಲ್ಲಿ ಸಿಗುತ್ತದೆ ಅಷ್ಟನ್ನು ಮಾತ್ರ ರಂಗದಲ್ಲಿ ತಂದು ಚಪ್ಪಾಳೆ ತಟ್ಟಿ ಖುಷಿ ಪಡುವುದು. ಗಮನಿಸಿ ಇಂದಿನ ಎಷ್ಟು ಜನ ಯುವಭಾಗವತರಿಗೆ ಏರು ಪದ ವಿರಳವಾಗಿ ಉಚ್ಚರಿಸಲು ಬರುತ್ತದೆ? ಕೇವಲ ಒಂದೆರಡು ಪದವನ್ನಷ್ಟೇ ಗುರಿಯಾಗಿಸಿ ಪ್ರಸಂಗ ಸೂಚಿಸುತ್ತಾರೆ ಮತ್ತು ಆ ಎರಡು ಪದಕ್ಕೆರಾಗ ಪೋಣಿಸುವುದರಲ್ಲೇ ತೊಡಗಿ ಬೇರೆ ಎಲ್ಲವೂ ಹರಕೆ ಸಂದಾಯವಾಗಿಬಿಡುತ್ತದೆ. ಅದನ್ನು ಯಕ್ಷಗಾನ ಎಂದು ಬಿಂಬಿಸುವಾಗ ಎಷ್ಟಿದ್ದರೇನು ಇಷ್ಟು ಇವತ್ತಿಗೆ ಸಾಕು ಎಂದು ಬಡಿಸಿದ ಹಾಗೆ.
ಬೆಂಗಳೂರಿನಲ್ಲಿ ಪ್ರಸಿದ್ದ ಗಾಯಕರೊಬ್ಬರು ಯಕ್ಷಗಾನವನ್ನು ನೋಡಿ ಪ್ರತಿಕ್ರಿಯಿಸುತ್ತಾರೆ.. "ಯಕ್ಷಗಾನ ಭಾಗವತರು ವಿರಳ ವಿಲ್ಲದೆ ಅರ್ಥವಾಗದಂತೆ ಹಾಡುತ್ತಾರೆ ಯಾಕೆ? ಸ್ಪಷ್ಟವಾದ ಉಚ್ಚಾರ ಯಾಕೆ ಇಲ್ಲ? ಇದು ವಿದ್ಯಾಭ್ಯಾಸದ ಕೊರತೆಯೇ?" ವಿಪುಲವಾದ ಜ್ಜಾನವನ್ನೂ ಸಂಸ್ಕಾರವನ್ನೂ ಅಕ್ಷರಾಭ್ಯಾಸ ಇಲ್ಲದಿದ್ದರೂ ಯಕ್ಷಗಾನದ ಮೂಲಕ ತೋರಿಕೊಟ್ಟ ಕಲಾವಿದರು ಈ ಪ್ರತಿಕ್ರಿಯೆ ಕೇಳಿದರೆ ಹೇಗಾಗಬಹುದು? ಭಾಷಾವಿಜ್ಞಾನದಲ್ಲಿ ಸ್ನಾತಕರಾದವರಿಗೂ ತಿಳಿಯದಷ್ಟು ವ್ಯಾಕರಣ, ಪೌರಾಣಿಕ ಜ್ಞಾನ ಕಥೆ ಉಪನಿಷತ್ತುಗಳ ತಿಳುವಳಿಕೆ, ಹಲವು ಯಕ್ಷಗಾನ ಕಲಾವಿದರಿಗೆ ತಿಳಿದಿರುತ್ತದೆ. ಧರ್ಮ ಕರ್ಮಗಳ ಬಗ್ಗೆ ಸಿದ್ಧಾಂತವನ್ನು ಮಂಡಿಸುವ ಕಲಾವಿದನ ಅನುಭವದ ಜ್ಞಾನಕ್ಕೆ ಸಿಗುವ ಮನ್ನಣೆ ಎಂದರೆ ಇದೇ ಎನು? ಈ ಪ್ರತಿಕ್ರಿಯೆಯ ಆಳ ಎಷ್ಟು? ಹೊಸ ಪ್ರೇಕ್ಷಕನಲ್ಲಿ ಯಕ್ಷಗಾನದ ಗಾಯನದ ಬಗ್ಗೆ ಯಾವ ಕಲ್ಪನೆ ಬರುತ್ತದೆ? ಅದರ ಪರಿಣಾಮವೇನು? ಯೋಚಿಸುವ ಶಕ್ತಿ ವ್ಯವಾಧಾನ ಇದೆಯೇ? ಅಥವಾ ನಮಗೆ ಕೇವಲ ರಂಜನೆ ಮಾತ್ರ ಸಾಕೇ?
ಯಕ್ಷಗಾನ ಪರಂಪರೆಯ ಪೂರ್ವ ರಂಗವಂತು ಕಾಲ ನಿಯಮಕ್ಕೆ ಸಿಕ್ಕಿ ದೂರವಾಗುತ್ತದೆ. ಸೀಮಿತ ಮೂರು ಘಂಟೆಯಲ್ಲಿ ಇರುವ ಯಕ್ಷಗಾನದಲ್ಲಾದರೂ ಪರಂಪರೆ ಎಷ್ಟು ಬಳಕೆಯಾಗುತ್ತದೆ. ಅನಾವಶ್ಯಕ ದುಂದು ವೆಚ್ಚ ಅದ್ದೂರಿತನದ ಬ್ಯಾಂಡು ವಾಲಗ ಸಿಡಿಮದ್ದಿನ ಸದ್ಧುಗದ್ದಲಕ್ಕೆ ಪ್ರಾಮುಖ್ಯತೆಯೇ ಹೊರತು ರಂಗಸ್ಥಳದ ಯಕ್ಷಗಾನಕ್ಕಲ್ಲ. ಒಬ್ಬ ಬಣ್ಣದ ವೇಷಧಾರಿ ಚೌಕಿಯಲ್ಲಿ ಗಂಟೆಗಿಂತಲೂ ಹೆಚ್ಚು ಅವಧಿಯಲ್ಲಿ ಬಂಧಿಯಂತೆ ಕುಳಿತು ಚುಕ್ಕಿ ಇಟ್ಟು ಬಣ್ಣ ಹಚ್ಚಿ ಅಬ್ಬರದಲ್ಲಿ ರಂಗ ಪ್ರವೇಶ ಮಾಡಿದರೆ... ಪ್ರೇಕ್ಷಕ ಮಾತ್ರ ರಂಗಕ್ಕೆ ಬೆನ್ನು ಹಾಕಿ ದೂರದಲ್ಲಿ ಸಿಡಿಯುವ ಪಟಾಕಿಯನ್ನು ನೋಡುತ್ತಿರುತ್ತಾನೆ. ಇದು ಇಂದಿನ ಅಧ್ದೂರಿ ಯಕ್ಷಗಾನ. ಬಣ್ಣದವೇಷದೊಂದಿಗೆ ಯಕ್ಷಗಾನವೂ ರಂಗದಲ್ಲಿ ಏಕಾಂಗಿಯಾಗಿಬಿಡುತ್ತದೆ.ಬ್ಯಾಂಡು ಗದ್ದಲ, ಆಕಡೆಯಿಂದ ಸಿಡಿ ಮದ್ದಿನ ಗದ್ದಲ ಒಂದು ವೇಳೆ ನಿಜವಾದ ಯಕ್ಷಗಾನ ಸಿಗಬೇಕಾದರೆ ಅದು ಅದೃಷ್ಟವಿದ್ದಲ್ಲಿ ಒಂದಷ್ಟು ಹೊತ್ತಿನ ನಂತರ ಸಿಗುತ್ತದೆ. ಸಿಡಿ ಮದ್ದು ಗದ್ದಲ ಅದ್ದೂರಿ ತನ ಇದ್ದಲ್ಲಿ ಆಟ ರೈಸುತ್ತದೆ ಎಂಬ ಕಲ್ಪನೆ.
ಇನ್ನು ಪುಂಡುವೇಷ ಅಥವಾ ಸ್ತ್ರೀ ವೇಷವಾಗಲೀ ಚಾಲೂಕುಣಿತದ ತಕ ಥೈ ಒಂದ ಅರ್ಧ ಗಂಟೆ ಕುಣಿದ ಮೇಲೆ...ಪುಂಡುವೇಷದವನಾದರೇ ಒಂದಷ್ಟು ಗಿರಕಿ ಹೊಡೆದ ಮೇಲೆ..ಕೆಲವೊಮ್ಮೆ ಗಿರಕಿಯಲ್ಲಿ ಮಾತ್ರ ಗಮನ ಹರಿಸಿ ಬಾಕಿ ಕುಣಿತವೇ ಇಲ್ಲದೆ ನಿಂತ ಮೇಲೆ ಮೈಕಿನಲ್ಲಿ ಉಸಿರಾಟದ ಬುಸುಗುಟ್ಟುವಿಕೆ ಮಾತ್ರ ಕೇಳಬಹುದು...ಅರ್ಥಗಾರಿಕೆಯೇ ಇಲ್ಲ. ಅರ್ಥ ಗಾರಿಕೆಯಲ್ಲಿ ಸಾಧನೆಯ ಕೊರತೆ ಕಂಡುಬರುತ್ತದೆ. ಸರಿಯಾದ ಭಾಷಾಜ್ಞಾನವೂ ಇಲ್ಲದೆ ಉದುರುವ ಅಣಿಮುತ್ತುಗಳನ್ನು ಕೇಳಿದರೆ ಯಾವುದು ಮುಖ್ಯವಾಗಬೇಕೋ ಅದು ಮೂಲೆಗುಂಪಾಗಿರುತ್ತದೆ. ಗಮನಿಸಿ ಕೋಳ್ಯೂರಂತೆ ಪಾತಾಳದವರಂತೆ ಭಾವನಾತ್ಮಕ ಸ್ತ್ರೀ ವೇಷದ ಅರ್ಥಗಾರಿಕೆ ಇಂದು ರಂಗದಲ್ಲಿ ಕಾಣುವುದಕ್ಕಿದೆಯೇ? ಅರ್ಥ ಗಂಟೆ ಚಾಲುಕುಣಿತ ಬಳುಕಿಸಿದ ಮೇಲೆ ಮತ್ತೆ ಮೊದಲು ಹೇಳಿದಂತೆ ಬುಸುಗುಟ್ಟುವಿಕೆ ಮಾತ್ರ, ಮತ್ತೆ ಅರ್ಥಗಾರಿಕೆ ಪ್ರೇಕ್ಷಕ ಕಲ್ಪಿಸಿಕೊಂಡರೆ ಸಾಕು. ಯಕ್ಷಗಾನಕ್ಕೆ ಹೊಂದಿಕೆಯಾಗದೇ ಇದ್ದದ್ದನ್ನು ಅಟ್ಟಾಡಿಸಿ ಓಡಿ ಹಿಡಿದು ತಂದು ರಂಗದಲ್ಲಿ ತುರುಕುವಾಗ ಪರಂಪರೆ ಕೇವಲ ನಗೆಪಾಟಲಾಗಿ ಬಿಡುತ್ತದೆ. ಪರಂಪರೆಯ ಮೇಲಿನ ಅಭಿಮಾನ ಪ್ರೀತಿಯನ್ನು ಯಾವಾಗಲಾದರೂ ಒಮ್ಮೆ ಪೂರ್ವ ರಂಗದ ವಿಚಾರ ಸಂಕಿರಣವೋ, ಪೂರ್ವರಂಗದ ಕಮ್ಮಟವನ್ನೋ ಮಾಡಿ ತೋರಿಸಿದರಷ್ಟೇ ಸಾಕು ಎಂಬ ಭಾವ. ಅದೂ ಪರಿಪೂರ್ಣವಾದ ಜ್ಞಾನವನ್ನು ಅದರ ತಿಳುವಳಿಕೆಯನ್ನು ತಿಳಿದ ವ್ಯಕ್ತಿಗಳು ಬೇಡ. ಒಟ್ಟು ಒಂದು ಹರಕೆ ಸಲ್ಲಿಸಿ, ತೆಗೆದ ವೀಡಿಯೋದಲ್ಲಿ ಅಥವಾ ಫೋಟೋದಲ್ಲಿ ಹಾಕಿದ ದೊಡ್ಡ ಬ್ಯಾನರ್ ಕಂಡರೆ ಸಾಕು. ಅಷ್ಟೇ ಕ್ರಿಯಾತ್ಮಕ ದರ್ಶನ.
ಹೆಸರಾಂತ ಕಲಾವಿದರು ಇದ್ದಲ್ಲಿ ಯಕ್ಷಗಾನ ಅದ್ಧೂರಿಯಾಗಿ ಯಶಸ್ವಿಯಾಗುತ್ತದೆ ಎಂಬ ಭಾವನೆ ಇದೆ. ಆದರೆ ಈ ನಿರೀಕ್ಷೆ ಹುಸಿಯಾದದ್ದೇ ಹೆಚ್ಚು. ರಾಜಕೀಯ ಪಕ್ಷ ತನ್ನ ಆಡಳಿತವನ್ನು ಸ್ಥಿರಗೊಳಿಸುವುದಕ್ಕೆ ರೂಪಿಸು ಜಂಬೋ ಮಂತ್ರಿ ಮಂಡಲದಂತೆ. ಒಳಗೊಳಗೇ ಅಥವಾ ಬಹಿರಂಗವಾಗಿ ಅಸಮಾಧಾನ ತುಂಬಿ ಮಾತ್ಸರ್ಯ ಹಗೆತನದಿಂದ ಕಾಲೇಳೆವ ತಂತ್ರದಿಂದ ಉತ್ತಮ ಅಭಿವೃದ್ಧೀ ಪರ ಕೆಲಸಗಳು ಮರೀಚಿಕೆಯಾದಂತೆ ಉತ್ತಮ ಕಾರ್ಯಕ್ರಮವೂ ನಡೆಯುವುದಿಲ್ಲ. ಇದು ಕೇವಲ ಒಂದು ಪ್ರದರ್ಶನಕ್ಕೆ ಸೀಮಿತವಾಗದೆ ಪ್ರಸಿದ್ಧ ಮೇಳಗಳಲ್ಲಿ ಒಳಗೊಳಗೇ ನಡೆವ ಅತ್ಯಂತ ಕೀಳುಮಟ್ಟದ ರಾಜಕೀಯ ಪ್ರತಿಷ್ಠೆಗೂ ಅನ್ವಯವಾಗುತ್ತದೆ. ಪ್ರಸಿದ್ಧ ಕಲಾವಿದರ ನಡುವೆ ಉತ್ತಮ ಸೌಹಾರ್ದತೆಯ ಸಂವಹನ ಸಾಧ್ಯವಾಗದೇ ಕೇವಲ ಹರಕೆ ಅಟಗಳು ನಿಜಾರ್ಥದಲ್ಲೂ ಹರಕೆಯೇ ಆಗಿಬಿಡುತ್ತವೆ. ಒಂದೆರಡು ಪ್ರಸಿದ್ಧ ಕಲಾವಿದರೀದ್ದರೂ ಮೇಳ ಒಟ್ಟು ಸಮನ್ವಯ ಸಾಧಿಸಿ ಉತ್ತಮ ಯಕ್ಷಗಾನವನ್ನು ನೀಡುವುದನ್ನು ಕಾಣಬಹುದು. ಒಳಗಿನ ಹುಳುಕನ್ನೂ ದೌರ್ಬಲ್ಯವನ್ನು ಮರೆಮಾಚುವುದಕ್ಕೆ ಪ್ರೇಕ್ಷಕನ ದಿಕ್ಕು ತಪ್ಪಿಸುವುದಕ್ಕೆ ಪ್ರಸಿದ್ಧ ಕಲಾವಿದರನ್ನು ಬೆರೆಸುವ ಈ ತಂತ್ರಗಳು ಒಟ್ಟು ಕಲೆಯನ್ನು ಕಾಣುವ ದೃಷ್ಟಿಕೋನವನ್ನೇ ಪ್ರಶ್ನಿಸಿದಂತಾಗುತ್ತದೆ. ಭಾಗವತನಾದವ ತನ್ನಲ್ಲಿರುವ ಆತ್ಮ ವಿಶ್ವಾಸದ ಕೊರತೆಗೆ ಪ್ರಸಿದ್ದ ಕಲಾವಿದರನ್ನು ಸೇರಿಸುವ ಹುನ್ನಾರ ಮಾಡಿದ್ದಲ್ಲಿ ಯಕ್ಷಗಾನಕ್ಕಿಂತ ಮಿಕ್ಕುಳಿದ ವಿಚಾರಗಳೇ ಗಮನಾರ್ಹವಾಗಿಬಿಡುತ್ತದೆ.ಆದರೆ ಸಮರ್ಥ ಭಾಗವತ ಇರುವ ಕಲಾವಿದರಿಂದಲೇ ಪ್ರತಿಭೆಯನ್ನು ಒರೆಗೆ ಹಚ್ಚುವ ಸವಾಲನ್ನು ದಿಟ್ಟವಾಗಿ ಸ್ವೀಕರಿಸುತ್ತಾನೆ. ಇಂತಹ ಭಾಗವತರಿಗೇ ಪ್ರಾಮಾಣಿಕ ಪ್ರೋತ್ಸಾಹ ಮಾತ್ರ ಸಿಗುತ್ತಿಲ್ಲ. ಹಾಗಾಗಿ ಕೆಟ್ಟ ರಾಜಕೀಯ ದುರಾಡಳಿತ ಮುಂತಾದವುಗಳಿಂದ ಆಗಾಗ ಮರುಕಳಿಸುವ ಅರ್ಥಹೀನ ಮತದಾನದಿಂದ ಈಗಿನ ಮತದಾರ ಬೇಸತ್ತು ದೂರವಾದಂತೆ ಯಕ್ಷಗಾನದಿಂದ ಪ್ರೇಕ್ಷಕ ವಿಮುಖನಾಗುತ್ತಿದ್ದಾನೆ. ಕೆಲವೊಮ್ಮೆ ಅನಿವಾರ್ಯತೆಯಿಂದ ಹತ್ತಿರವಾದರೂ ಅದನ್ನೇ ನಿಜವೆಂಬ ಭ್ರಮೆಯಲ್ಲಿ ತೇಲಿ ಬಿಡುತ್ತೇವೆ. ಮೊದಲು ಬೆಳಗಿನ ವರೆಗೆ ಪ್ರೇಕ್ಷಕನನ್ನು ಹಿಡಿದಿಟ್ಟ ಯಕ್ಷಗಾನ ಇಂದು ಪ್ರೇಕ್ಷಕನಿಂದ ಬೇಕೆಂದೇ ದೂರ ಮಾಡಲ್ಪಟ್ಟಿದೆ ಅಂತಾನೆ ಹೇಳಬಹುದು. ಬೆಳಗಿನ ಜಾವದಲ್ಲಿ ಪ್ರವೇಶವಾಗುವ ಪ್ರಸಿದ್ಧ ಕಲಾವಿದನ ವೇಷಕ್ಕೆ ಆಟದ ಪೂರ್ವ ರಂಗ ಅರಂಭವಾಗುವ ಮೊದಲು ಜಾಗ ಹಿಡಿದಿಟ್ಟು ಕುಳಿತಿರುತ್ತಿದ್ದ ಪ್ರೇಕ್ಷಕ ಇಂದೂ ಹಾಗೆ ಇದ್ದಾನೆ... ಅಂತಹ ಕಲಾವಿದ ಮಾತ್ರ ಇಲ್ಲ.