"ಇದು ವಿಮರ್ಶೆಯಲ್ಲದ ಚಿಂತನ"

Wednesday, January 29, 2014

ಯಕ್ಷಗಾನಕ್ಕೋರ್ವ ಡಾಕ್ಟರ್ ಶ್ರೀ ಎಂ. ಪ್ರಭಾಕರ ಜೋಷಿ

ಯಕ್ಷಗಾನದಲ್ಲಿ ಕೆಲವೊಂದು ವಿಷಮ ಪಾತ್ರಗಳು ಎಂಬ ವರ್ಗೀಕರಣವಿದೆ. ಬಳಕೆಯಲ್ಲಿ ಅದು ಹೇಗಿದೆ ಎನ್ನುವುದಕ್ಕಿಂತ  ಅಂತಹ ಪಾತ್ರಗಳನ್ನು ಹಾಗೆ ಕಲ್ಪಿಸುವುದಕ್ಕೆ ಸಾಧ್ಯವಿದೆ.  ವಿತಂಡವಾದವೇ ಇದರ ನಿಲುವು. ಅಪ್ರಾಕೃತವಾದ ಸಿದ್ದಾಂತವನ್ನು ಪ್ರತಿಪಾದಿಸುವಂತಹ ಪಾತ್ರಗಳು. ಒಂದೊಂದು ಪಾತ್ರಗಳು ಪ್ರಸಂಗಕ್ಕೆ ಹೊಂದಿಕೊಂಡು ತಮ್ಮ ನಿಲುವಿನಲ್ಲಿ ಬದಲಾವಣೆಯನ್ನು ತೋರ್ಪಡಿಸುವುದೂ ಇದೆ. ವಿಷಮವಾದವನ್ನೇ ನಿರೂಪಿಸುವಂತಹ ಪಾತ್ರಗಳು,  ಅವುಗಳು ಖಳಪಾತ್ರಗಳು ಎಂದು ವರ್ಗೀಕರಿಸುವುದಕ್ಕೆ ಬರುವುದಿಲ್ಲ. ಎಲ್ಲಾ ಬಗೆಯ ಪಾತ್ರಗಳೂ ಕೆಲವೊಮ್ಮೆ ವಿತಂಡವಾದವನ್ನೇ ನಿಲುವಾಗಿ ತೋರ್ಪಡಿಸುತ್ತವೆ. ಅಂತಹ ಪಾತ್ರಗಳ ನಿರೂಪಣೆಗೂ ವಿಶೇಷ ಅರ್ಹತೆಗಳಿರಬೇಕು. ವಿಷವಮವನ್ನು ಸಮವಾಗಿ ಬಿಂಬಿಸುವ ಪಾತ್ರಗಳು,  ಒಂದು ರೀತಿಯಲ್ಲಿ ಜಾರುವ ಒದ್ದೆ ನೆಲದಲ್ಲಿ ಭದ್ರವಾಗಿ ಸ್ಥಿರವಾಗಿ ನಿಲ್ಲುವ ನಿಲುಮೆಯನ್ನು ಹೊಂದುವಂತಹ ಪಾತ್ರಗಳು, ಇವುಗಳನ್ನು ನಿರ್ವಹಿಸಬೇಕಾದರೆ ತಲೆಯಲ್ಲಿ ಸ್ವಲ್ಪ “ಜನವಾಸ”  ಇರಬೇಕು. ಪ್ರಬಲವಾದ ಎದುರಾಳಿಗೆ ಇಕ್ಕಟ್ಟಿಗೆ ಸಿಲುಕಿಸುವುದರೊಂದಿಗೆ ಸಹಜ ಸಿದ್ದಾಂತವನ್ನು ಒರೆಗೆ ಹಚ್ಚಿ,  ಆ ಸಿದ್ದಾಂತದ ಪರೋಕ್ಷ ಪ್ರತಿಪಾದನೆ ಹೇಗೆ ಸಾಧ್ಯ ಎಂದು ತೋರುವಂತಹ ಪಾತ್ರಗಳು, ಅದು ಅಂಗದ ಸಂಧಾನದ ಪ್ರಹಸ್ತ, ವಾಮನ ಚರಿತ್ರೆ, ಕಚದೇವಯಾನೆ ಮುಂತಾದ ಪ್ರಸಂಗಗಳ ಶುಕ್ರಾಚಾರಿ, ಸತ್ಯ ಹರಿಶ್ಚಂದ್ರದ ವಿಶ್ವಾಮಿತ್ರ, ಭೀಷ್ಮ ಪರ್ವದ ಕೌರವ  ಹೀಗೆ ಹಲವು ಪಾತ್ರಗಳು ವಿಶಿಷ್ಟ ನಿಲುವಿಗೆ ಬದ್ದವಾದ ಪಾತ್ರಗಳು ಇಂತಹ ಪಾತ್ರಗಳ ನಿರ್ವಹಣೆಗೆ ವಿಶೇಷ ಅರ್ಹತೆಗಳೊಂದಿಗೆ ಸಿದ್ಧ ಹಸ್ತರು ಶ್ರೀ ಡಾ. ಎಂ. ಪ್ರಭಾಕರ ಜೋಷಿಯವರು.


ಇವರ ಪ್ರತಿಭೆಯನ್ನು ಕೇವಲ ಪಾತ್ರ ನಿರ್ವಹಣೆಯಿಂದ ಮಾತ್ರ ತುಲನೆ ಮಾಡುವುದಕ್ಕೆ ಅಸಾಧ್ಯ. ಯಕ್ಷಗಾನದ ವಿಷಯಕ್ಕೆ ಬಂದಾಗ ಬಹಳಷ್ಟು ಅದರ ಹಲವು ಮುಖಗಳಲ್ಲಿ ಜೋಷಿಯವರ ಹೆಸರು ಬರೆಯಲ್ಪಟ್ಟಿದೆ. ಇದು ಯಕ್ಷಗಾನ ಅಭಿಮಾನದ ಪ್ರಾಮಾಣಿಕ ದ್ಯೋತಕವಾಗಿ ಗೋಚರವಾಗುತ್ತದೆ. ಆದರೂ ತಾಳ ಮದ್ದಲೆ ಅರ್ಥಧಾರಿಗಳಾಗಿ ಇಂದು ಅತ್ಯಂತ ಹಿರಿಯ ಕಲಾವಿದರಾಗಿ ಶ್ರಿ ಜೋಷಿಯವರು ಪರಿಗಣಿಸಲ್ಪಡುತ್ತಾರೆ.  ವಯೋ ವೃದ್ಧರಾಗಿ ಜ್ಞಾನವೃದ್ದರಾಗಿ ಜೋಷಿಯವರು ಈ ರಂಗದಲ್ಲಿ ಮುಂಚೂಣಿಯಲ್ಲಿ ಸಲ್ಲುವ ವ್ಯಕ್ತಿ.

ಯಕ್ಷಗಾನದ ಅರ್ಥಗಾರಿಕೆ ಪರಂಪರೆಗಳ ರೂಪ ಹಲವಿದೆ. ಸಾಮಗದ್ವಯರ ಶೈಲಿ ಒಂದಾದರೆ ಶೇಣಿ ದೇರಾಜೆ ರೂಪಿಸಿದ ಪರಂಪರೆ ಮತ್ತೊಂದು. ತಮ್ಮ ವಿದ್ವತ್ ನಿಂದಲೇ ಸಾಂಪ್ರದಾಯಿಕ ಅರ್ಥಗಾರಿಕೆಯಲ್ಲಿ ಹೆಸರಾದ ಪೆರ್ಲ, ಕುಂಬಳೆ ಹೀಗೆ ಹತ್ತು ಹಲವು ಮುಖಗಳ ವೈವಿಧ್ಯತೆಯಲ್ಲಿ ಜೋಷಿಯವರ ಒಂದು ಶೈಲಿ ತೀರ ಭಿನ್ನವಾಗಿ ನಿಲ್ಲುತ್ತದೆ.

ಕರ್ಮಬಂಧನ ಪ್ರಸಂಗದ ಕೌರವನ ಪಾತ್ರವಹಿಸುತ್ತಾ ಜೋಷಿಯವರು, ಅಜ್ಜ ಭೀಷ್ಮನ ಜತೆಗಿನ ಸಂವಾದದ ಸಂದರ್ಭ  ಒಂದು ಹೀಗಿದೆ. ಗಾಂಧಾರಿ ಸಿಟ್ಟಿನಲ್ಲಿ ತನ್ನ ಬಸುರನ್ನು ಬಡಿದು ಆ ಬಸುರಿನ ನಂಜು ಸಿಡಿದು ಕೌರವರು ನೂರು ಮಂದಿಯಾದರು ಎಂದು ಭೀಷ್ಮ ಮೊದಲೇ ಹೇಳಿರುತ್ತಾನೆ. ಅದಕ್ಕೆ ಪ್ರತಿಯಾಗಿ ಇವರ ಕೌರವ ಹೇಳುವ ಮಾತು,


 “ನನ್ನ ತಮ್ಮಂದಿರು ಹುಟ್ಟಿದ್ದಲ್ಲ ತಾಯಿಯ ನಂಜು ಸುರಿದು ಚೂರು ಚೂರಾಗಿ ಬಿದ್ದದ್ದು ಅಂತ ಹೇಳುವವರಿದ್ದಾರೆ. ಅದೆಲ್ಲ ಹೇಳುವುದೇ ನಂಜಿನಿಂದ. ಅದೆಲ್ಲ ಪ್ರೀತಿಯಿದ್ದರೆ ಒಂದು ತರಹ ಕಾಣುವುದು. ಅವರನ್ನು ಆಗುವುದಿಲ್ಲ ಅಂತಾ ಅದ್ರೆ ಹಾಗೆ ಕಾಣುವುದು. ಅವತಾರ ಪುರುಷರ ಹುಟ್ಟೆಲ್ಲವೂ
 ವಿಚಿತ್ರ ಅಲ್ಲವೇ ಅಜ್ಜಾ? ನೀವು, ನಾನು, ಕೃಷ್ಣ, ಧರ್ಮರಾಯ , ಈಗಿನ ಕಾಲದಲ್ಲಿ ಎಲ್ಲ ವಿಚಿತ್ರವಾಗಿ ಹುಟ್ಟಿದವರು.“

ಒಬ್ಬನೇ ನಿಶಿತಕಾಲದಲ್ಲಿ ಬಂದೆಯಾ ಅಂತ ಭೀಷ್ಮ ಆಕ್ಷೇಪಿಸುವಾಗ  ಕೌರವನ ಮಾತು ಹೀಗಿದೆ.  “ಯಾರೇ ಒಬ್ಬ ಭೀಷ್ಮನಲ್ಲಿಗೆ ಹೋಗುತ್ತಾನೆ ಅಂತ ಸುದ್ದಿಯಾದರೆ ಸಾಕು ಈ ಕಾಲದಲ್ಲಿ ಅವನ ಸುದ್ದಿಗೆ ಯಾರೂ ಹೋಗುವುದಿಲ್ಲ. ಹಾಗಾಗಿ ನಾನು ಬರುವ ಮೊದಲೆ ಎಲ್ಲ ಪ್ರಚಾರ ಮಾಡಿ ಬಂದಿದ್ದೇನೆ ಭೀಷ್ಮನಲ್ಲಿಗೆ ಹೋಗ್ತೇನೆ ಅಂತ. ಭೀಷ್ಮನಲ್ಲಿಗೆ ಹೋಗ್ತಾನೆ ಎಂಬ ಸುದ್ದಿಯೇ  ಅಷ್ಟೊಂದು ಭದ್ರತೆ”

ಆವಾಗ ಭೀಷ್ಮ ಆ ಮಾತಿಗೆ ಅವಿಶ್ವಾಸವನ್ನು ವ್ಯಕ್ತ ಪಡಿಸುತ್ತಾ ಹೇಳುತ್ತಾನೆ  “ಆ ಮಾತಿನಲ್ಲಿ ವಿಶ್ವಾಸ ಬರುವುದಿಲ್ಲ ನನಗೆ. ನೀನು ನಿನ್ನ ಮುಖ ನೋಡು.” 

ಕೌರವನ ಪ್ರತಿಕ್ರಿಯೆ ಹೀಗಿರುತ್ತದೆ “ ನನ್ನ ಮುಖ, ಅದು ನನಗೇ ಕಾಣುವುದಿಲ್ಲ. ಕಷ್ಟ ಅದು. ಮತ್ತೆ ಕನ್ನಡಿ, ನಿಮ್ಮ ಮುಂದೆ ನೋಡ್ಲಿಕ್ಕೆ ಸಿದ್ದನಿಲ್ಲ ನಾನು.”

ಭೀಷ್ಮ ಛೇಡಿಸುತ್ತಾನೆ “ನಿನಿಗೆ ನೋಡ್ಲಿಕ್ಕೆ ಕನ್ನಡಿಯಾದರೂ ಕಾಣಬಹುದು. ನಿನ್ನ ಅಪ್ಪನಿಗೆ ಪ್ರತಿಬಿಂಬ ಬಿಡು ಕನ್ನಡಿಯೇ  ಕಾಣುವುದಿಲ್ಲ..! ನಾನು ದೋಷ ಹೇಳಿದ್ದಲ್ಲ ಸ್ಥಿತಿ ಹೇಳಿದ್ದು.”

ಕೌರವನ ಪ್ರತಿಕ್ರಿಯೆ ಹೀಗಿರುತ್ತದೆ “ನಾನು ಉತ್ತರಿಸುವುದಿಲ್ಲ. ಒಬ್ಬನು ಅಂಧನಾಗಿರುವುದು ಹಾಸ್ಯಕ್ಕೆ ವಿಷಯವಾಗುತ್ತದೆ ಎಂದಾದರೆ ಕ್ಷಮಿಸ್ಬೇಕು, ನಾನು ಅಭಿಮಾನದಿಂದ ಹೇಳ್ತೇನೆ ನಾನು ಕುರುಡನ ಮಗ. ಅಂದರೆ ಒಂದು ಮಾತು..ಕುರುಡರಿಗೆ ನೂರು ಮಕ್ಕಳಾದರೆ, ಕಣ್ಣಿದ್ದವರಿಗೆ ಎಷ್ಟಾಗಬೇಕು? ಲೋಕದಲ್ಲಿ ಒಂದು ಪ್ರಶ್ನೆ. ಆದರೆ ಕಣ್ಣಿಂದ ಮಕ್ಕಳಾಗುವುದಲ್ಲ ಅದು ಅವನನವನ  ಸಾಮಾರ್ಥ್ಯದಿಂದ.”

ಮುಂದೆ ಇದೇ ಪ್ರಸಂಗದಲ್ಲಿ,
“ಪೊರೆಯುವ ಮಹಿಮನು ವಿಪಿನಾಂತರದೊಳು ಚಲಿಸುವ.............”  ಎಂಬ ಪದಕ್ಕೆ ಕೌರವನ ಅರ್ಥದ ವಿತಂಡವಾದದ ಮಂಡನೆಯ ಸೊಗಸು  ಹೀಗಿದೆ.

 “ಪಾಂಡವರು ಧರ್ಮಾತ್ಮರಾದ್ದರಿಂದ ಕೃಷ್ಣ ಅವರಕಡೆಗೆ ಇದ್ದಾನೆ. ಇದು ಭಾಗವತ ಧರ್ಮ, ಪುಸ್ತಕದಲ್ಲಿ ಬರೆದಿಟ್ಟಿದೆ ಆದರೆ ಇದು  ಹಳತಾಗಿ ವರ್ಷ ಎಷ್ಟಾಯಿತು? ಭಕ್ತರನ್ನು ಕಾಪಾಡುತ್ತಾನೆ ಎಂಬುದು ಪುಸ್ತಕದ ಮಾತು. ಅದು ಧೈರ್ಯಕ್ಕೆ ಬೇಕು. ದೇವರಿದ್ದಾನೆ... ಕಾಪಾಡ್ತಾನೆ. ಆದರೆ ವಾಸ್ತವದಲ್ಲಿ ಹಾಗಿಲ್ಲ. ಪಾಂಡವರನ್ನು ಮುಳುಗಿಸ್ತಾನೆ ಅವರಿಗೆ ಸ್ವಯ ಇಲ್ಲ. ದೃಷ್ಟದಲ್ಲಿ ಪಾಲಿಸಿದಹಾಗೆ ಕಾಣುವುದು ಅದು. ಅದೃಷ್ಟದಲ್ಲಿ ದೇವರಿರುವುದು ನನ್ನ ಕಡೆ. ಭಕ್ತರ ಅವಸ್ಥೆ ಹೀಗಾದರೆ ಇನ್ನು ಭಕ್ತರ ಸಂತಾನ ಹುಟ್ಟಲಿಕ್ಕಿಲ್ಲ. ಯಾಕೆ? ಪೊರೆಯುವ ಮಹಿಮನು, ಹೌದೋ? ಪರಮಾತ್ಮನ ಪರಮ ಭಕ್ತರು, ಸದಾ ಅವನಿಂದ ಪೊರೆಯಲ್ಪಡತಕ್ಕವರು, ಯಾವಾಗಲೂ ಅವನ ಅನುಗ್ರಹಕ್ಕೆ ಒಳಗಾದವರು, ಹುಟ್ಟಿದ್ದು ಕಾಡಿನಲ್ಲಿ, ಪಾಂಡವ ವಿರೋಧಿಯಾಗಿ,  ಪಾಂಡವರ ಉತ್ಕರ್ಷವನ್ನು ಸಹಿಸದ, ನೀವುಹೇಳುವಂತೆ ಭೂಭಾರಕ್ಕೆ ಕಾರಣನಾದ, ಕಂಸನಂತೆ ಕೆಟ್ಟವನಾದ ನಾನು ಹುಟ್ಟಿದ್ದು ಅರಮನೆಯಲ್ಲಿ. ಹದಿನಾರು ವರ್ಷದ ವರೆಗೆ ಗೆಡ್ದೆಗೆಣಸು ತಿಂದುಕೊಂಡು, ಋಷಿಗಳ ಜತೆಗೆ ಕಳೆದವರು, ಅವರಿಗೆ ಅಜ್ಜನತ್ರ ಮಾವನತ್ರ , ಗುರುಗಳತ್ರ ಮಾತನಾಡುವ ಯೋಗ ಉಂಟಾ? ಬಂಗಾರದ ಬತ್ತವನ್ನು ಬಾಯಲ್ಲಿಟ್ಟುಕೊಂಡು ಹಂಸತೂಲಿಕಾ ತಲ್ಪದಲ್ಲಿ ಮಲಗಿದವ ನಾನು. ಈಗಲೂ ಹೇಳ್ತೇನೆ. ಏಳು ಹಂಸತೂಲಿಕ ತಲ್ಪದ ಅಡಿಯಲ್ಲಿ ಒಂದು ಮುಳ್ಳು ಇದ್ದರೆ ಮೇಲೆ ಮಲಗಿದ ನನಗೆ ಮೈಗೆ ತಾಗ್ತದೆ. ನಗಗೆ ನಿದ್ದೆ ಬರುವುದಿಲ್ಲ.  ಅಷ್ಟು ಸುಖದಲ್ಲಿ ಬೆಳೆದವನು. ಅಯ್ತು ಇಲ್ಲಿಗೆ ಬಂದರು,  ಇರಲಿ ಪಾಪ ಅಂತ ನೀವು ಹೇಳಿದಿರಿ. ನಾನು ಹೇಳಿದೆ. ದೊಡ್ದ ಮನೆಯಲ್ಲವೋ? ನೂರು ಏನು?  ನೂರ ಐದು ಏನು? ಇದ್ದರು ಇಲ್ಲಿ.  ಏನು ಮಾಡಿದರು? ಭಕ್ತರು ಮಾಡುವ ಕೆಲಸ. ಮರದಿಂದ ಬೀಳಿಸುದು, ನೀರಲ್ಲಿ ಮುಳುಗಿಸುವುದು. ಹೊಯಿಗೆಯಲ್ಲಿ ಹೊರಳಿಸುದು, ಅದಕ್ಕೆ ಪ್ರತಿಯಾಗಿ ಭಕ್ತರಲ್ಲದವರು ಮಾಡುವುದು. ವಿಷ ಕೊಡುವುದು, ಬೆಂಕಿ ಕೊಡುವುದು ...ಭಕ್ತರಲ್ಲದವರಲ್ವೋ..ಮಾಡಿದರು. ಆಯ್ತು ವಾರಣಾವತ ಕೊಟ್ಟಿತು. ಅಲ್ಲಿಂದ ಹೋದ್ರೋ. ಮತ್ತೆ ಇದ್ದದ್ದೆಲ್ಲಿ , ಕುಂಬಾರನ ಮನೆಯಲ್ಲಿ.  ಒಂದೊಂದು,  ಮನೆ ಮಾಡ್ಲಿಕ್ಕಾದ್ರೂ ಒಂದು ಬ್ರಾಹ್ಮಣರು ಯಾರೂ  ಸ್ಥಳ ಕೊಡ್ಲಿಲ್ಲ. ಎರಡು ವರ್ಷವೂ ಕುಂಬಾರನ ಮನೆಯಲ್ಲಿ. ಅಲ್ಲಿ ಭೂತ ಬಲಿ. ಬಕಾಸುರ ಅಲ್ಲಿಯ ಬೂತ. ಅದಕ್ಕಿಟ್ಟ ಆ ಕುಂಕುಮ ಚೆಲ್ಲಿದ ಅನ್ನವನ್ನು ತಿಂದಿದ್ದಾನೆ ಅವನು. ಪರಮಾತ್ಮನ ಭಕ್ತರಿಗೆ ಸಿಗುವ ಅನ್ನ ನೋಡು?   ಭೂತಕ್ಕೆ ಇಟ್ಟದ್ದು. ಅಲ್ಲಿಂದ ಬ್ರಾಹ್ಮಣ ವೇಷ ಹಾಕಿಬಂದ್ರು. ಎರಡನೆ ಸಲ ಪಾಲು ಕೊಟ್ಟಿತು. ಇಟ್ಟುಕೊಳ್ಳಿಲ್ಲ. ದ್ಯೂತಕ್ಕೆ ಕರಿಯಿತು. ಆಡುವಾಗ ಪರಮಾತ್ಮ ಭಕ್ತಾನುಗ್ರಹಕಾರಕ, ಕೊನೆಗಾದರೂ ಪರಮಾತ್ಮ ಒಂದು ದಾಳವನ್ನಾದರೂ ಅವರ ಕಡೆಗೆ ಹಾಕಿದನೋ., ನಾನೂ ಎಷ್ಟು ದೊಡ್ಡ ಅಪಾಯ ಮೈಗೆ ಎಳೆದು ಹಾಕಿಕೊಂಡೆ, ಎಲ್ಲ ರಾಜ್ಯವನ್ನು ಗೆದ್ದಾದ ಮೇಲೆ ಹೇಳಿದೆ,  ದ್ರೌಪದಿಯನ್ನು    ಒಡ್ದಿದರೆ, ಈವರೆಗೆ ನಾನು ಎಲ್ಲ ಗೆದ್ದದ್ದು ಉಂಟಲ್ಲ,  ಅದು ಒಂದು ರಾಶಿ, ದ್ರೌಪದಿ ಒಂದು ರಾಶಿ, ಒಂದೇ ಒಂದು ಆಟ ಗೆದ್ದರೆ ಎಲ್ಲ ನಿನಗೆ ಅಂತ, ಏನು ಅಪಾಯ ನೋಡಿ? ಹನ್ನೆರಡು ವರ್ಷ ಹದಿಮೂರು ವರ್ಷ ನಾನು ಹೋಗ್ಬೇಕಿತ್ತು.  ಹೇಯ್,,, ಆ ದೇವರಿಗೆ ಗೊತ್ತುಂಟು ಇವನ ಹಣೆಬರಹ, ಹಿಂದಿನ ಜನ್ಮದಲ್ಲಿ ಏನು ಪಾಪಕರ್ಮ ಮಾಡಿದ್ದಾರೋ ಏನೋ. ಆಟ ತಿರುಗಿದ್ದೆ, ಮತ್ತೆ ಗೆಡ್ಡೆಗೆಣಸು ತಿಂದದ್ದೇ.”


ಪಂಚವಟಿಯ ಶೂರ್ಪನಖಾ ಪಾತ್ರ ಇವರಿಗೆ ಅತ್ಯಂತ ಪ್ರಸಿದ್ದಿಯನ್ನು ತಂದುಕೊಟ್ಟ ಪಾತ್ರ. ಹಾಗೇನೆ ಅಂಗದ ಸಂಧಾನದ ಪ್ರಹಸ್ತ, ಆದರೂ ಇವರ ಪ್ರತಿಯೊಂದು ವಿಷಮ ಪಾತ್ರಗಳು ಕೂಡ ಉಲ್ಲೇಖನೀಯ. ಬಹಳ ವಿಚಿತ್ರವಾದ ದೃಷ್ಟಿಕೋನದಿಂದ ರೂಪಗೊಳ್ಳುವ ಪಾತ್ರ ಸರಳವಾದ ನಿರೂಪಣೆಯಿಂದ ಕೂಡಿರುತ್ತದೆ.  ಪಾತ್ರಗಳಲ್ಲಿ ಇವರು ತೋರುವ ದೃಷ್ಟಿಕೋನಗಳು,  ಇವರ ಅರ್ಥಗಾರಿಕೆಯನ್ನು ಒಂದು ಸಲ ಹಿಂಬಾಲಿಸಿದರೆ ಸಾಕು ಆ ವಾದ ಸರಣಿ ನಮ್ಮನ್ನೇ ಭ್ರಾಂತಿಗೊಳಗಾಗುವಷ್ಟು  ನೈಪುಣ್ಯತೆಯನ್ನು ಗಳಿಸುತ್ತದೆ.  ಕೌರವನ ವಿತಂಡವಾದವೂ ಸಹ ಹುಬ್ಬೇರಿಸುವಂತೆ ಮಾಡುತ್ತದೆ. ಜತೆಗೆ ಪಾತ್ರವಾಗಿ ಪಾತ್ರದೊಳಗೆ ಇವರಾಡುವ ಆಟ ಎಂದು ಹೇಳಬಹುದು, ಅದು ಪಾತ್ರದೊಂದಿಗಿನ ಸರಸ ಅಂತಲೂ ಹೇಳಬಹುದು, ಅದು ಬಹಿರಂಗದಲ್ಲಿ ವಿಡಂಬನೆಯಾಗಿ ಹೊರಹೊಮ್ಮುವ ಪರಿ ಹಲವುಸಲ ಅದ್ಭುತ ವಾಗ್ವೈಖರಿಯನ್ನು ಸೃಷ್ಟಿಸಿಬಿಡುತ್ತದೆ. ಇವರ ಅರ್ಥಗಾರಿಕೆ ಕೇಳುವಾಗ ಇವರು ಅಂತರಂಗದಲ್ಲಿ ಆ ಪಾತ್ರದೊಂದಿಗೆ ಬಹಳಷ್ಟು ಸರಸವಾಡಿದ್ದಾರೆ ಎಂದು ಮನವರಿಕೆಯಾಗಿಬಿಡುತ್ತದೆ. ಸರಳವಾದ ಶಬ್ದ ಪ್ರಯೋಗಗಳು, ಗ್ರಾಮ್ಯ ಜನಪದ ಉದಾಹರಣೆ ಉಪಮೆಗಳು ಕಲ್ಪನೆಯ ಮೇಲಾಟಗಳು ಇದು ತಾಳ ಮದ್ದಲೆಯ ಪಾತ್ರವೈಭವದ ಸೊಗಸುಗಾರಿಕೆಯನ್ನು ತೆರೆದುಕೊಡುತ್ತದೆ. ಒಂದು ರೀತಿಯ ಉಡಾಫೆ ಶೈಲಿಯಲ್ಲಿ ಮಾತುಗಳನ್ನು ಒಪ್ಪಿಸುತ್ತಾ ಸಹಜವಾಗಿ ಎದುರಾಳಿಯನ್ನು ಕಟ್ಟಿಹಾಕಿಬಿಡುತ್ತಾರೆ. ಹಾಸ್ಯ ವಿಡಂಬನೆಯ ಹದವಾದ ಮಿಶ್ರಣ ಬೆರೆತಾಗ ( ಇದು ಅವರ ಭಾಷಣ ಪ್ರವಚನಗಳಲ್ಲಿಯೂ ಧಾರಾಳವಾಗಿ ಅನುಭವಿಸಬಹುದು) ಅರ್ಥಗಾರಿಕೆ ಅಷ್ಟು ಸುಲಭವೇ ಅಂತ ಅನ್ನಿಸಿಬಿಡುತ್ತದೆ. ಪ್ರತಿಯೊಂದು ಪಾತ್ರ ಕಟ್ಟುವಾಗಲೂ ಯಕ್ಷಗಾನ ಕಲೆಯ ಬಗೆಗಿನ ಪ್ರಾಮಾಣಿಕ ಕಾಳಜಿ ಅನುಭವಕ್ಕೆ ಬರುತ್ತದೆ.  ಅದು ಕಿರಿಯ ಕಲಾವಿದರಿಗೆ ಅತ್ಯಂತ ಸಹಕಾರಿಯಾಗಿಯೂ ಇರುತ್ತದೆ.

ಸಮಗ್ರ ಯಕ್ಷಗಾನದ ವಿಚಾರಕ್ಕೆ ಬಂದರೆ, ಜೋಷಿಯವರು ಹಲವಾರು ವಾಘೆಯನ್ನು ಹಿಡಿದ ಸಾರಥಿಯಂತೆ ಕಂಡುಬರುತ್ತಾರೆ. ವಿಮರ್ಶಕ ಬರಹಗಾರ, ಅಂಕಣಕಾರ, ಯಕ್ಷಗಾನದ ಪ್ರಾಮಾಣಿಕ ಚಿಂತಕ, ಸಣ್ಣ ಚಟುವಟಿಕೆಯನ್ನೂ ಸಹ  ಬೆನ್ನು ತಟ್ಟಿ ಪ್ರೋತ್ಸಾಹಿಸುವ ಪ್ರೇರಕ ಮನೋಭಾವ,  ಹೀಗೆ ಹತ್ತು ಹಲವು ಮುಖಗಳು. ಹಾಗಾಗಿ ಕೇವಲ ಅರ್ಥಗಾರಿಕೆಗೆ ಮಾತ್ರ ಸೀಮಿತವಾಗಿ ಇವರ ಪ್ತ್ರತಿಭೆಯನ್ನು ಪರಿಗಣಿಸುವ ಹಾಗಿಲ್ಲ. ಪ್ರಾಧ್ಯಾಪಕರಾಗಿ ಆ ಅಧ್ಯಾಪನದ ಬಹಳಷ್ಟು ಗುಣಗಳು ಯಕ್ಷಗಾನದ ಉನ್ನತಿಗೂ ಸಹಕಾರಿಯಾಗಿದೆ. ಇವರು ಭಾಷಣಕ್ಕೆ ನಿಂತರೆ ನೆರೆದ ಸಭೆಯಲ್ಲಿ ಕಿವಿಗಳು ನೆಟ್ಟಗಾಗಿಬಿಡುತ್ತವೆ. ಅಂತಹ ಆಕರ್ಷಕ ಸರಳ ಶೈಲಿಯದು.  ಯಕ್ಷಗಾನದ ಬಹಳಷ್ಟು ಕಲಾವಿದರಿಗೆ ಅಭಿನಂದನಾ ಭಾಷಣವನ್ನು ಮಾಡಿದ ಬಹಳ ದೊಡ್ದ ಮನಸ್ಸು ಇವರದ್ದು.

ಯಕ್ಷಗಾನದಲ್ಲೆ ಹಲವಾರು ಹವ್ಯಾಸಗಳನ್ನು ಹುಟ್ಟು ಹಾಕಿ ಬೆಳೆಸಿದವರು. ಸಂಶೋಧಕರಾಗಿ ಲೇಖಕರಾಗಿ ಕಲೆಯ ಕೋನ ಕೊನವನ್ನು ಎಳೆದು ಬರೆದು ತೋರಿಸಿದವರು. ತಾಳ ಮದ್ದಲೆಯ ಅರ್ಥಾಗಾರಿಕೆಗೆ ಪ್ರಸಿದ್ದಿಯಾದರೂ ಗೆಜ್ಜೆ ಕಟ್ಟಿ ಕುಣಿದದ್ದನ್ನೂ ಕಂಡಿದ್ದೇನೆ. ಒಂದು ವಿದ್ಯಾಸಂಸ್ಥೆಯ ಪ್ರಾಧ್ಯಾಪಕರೂ, ಪ್ರಾಂಶುಪಾಲರೂ ಆಗಿ ಯಕ್ಷಗಾನದಂತಹ ಜಾನಪದ ಕಲೆಯಲ್ಲಿ ಇವರು ತಳೆದ ಆಸಕ್ತಿ ನಿಜಕ್ಕು ಯಕ್ಷಗಾನ ವಿದ್ಯಾಸಂಪನ್ನರ ಕಲೆ ಎಂದು ಕರೆಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಹಲವರು ಯಕ್ಷಗಾನದಲ್ಲಿ ತಮ್ಮ ಸಾಧನೆಯಿಂದ ಡಾಕ್ಟರೇಟ್ ಪಡೆದಿರಬಹುದು.    ದೆಲ್ಲಕ್ಕಿಂತ ಭಿನ್ನವಾದ ಪದವೀ ಗ್ರಹಣ ಶ್ರೀ ಜೋಷಿಯವರದ್ದು. ಡಾಕ್ಟರೇಟ್ ಎಂಬ ಶಬ್ಧಕ್ಕೆ ಹೆಚ್ಚು ಹತ್ತಿರವಾಗಬಲ್ಲ ಸೇವೆ ಇವರದ್ದು. ಯಕ್ಷಗಾನದ ವಿಷಯಕ್ಕೆ ಸಂಬಂಧಿಸಿದಂತೆ ಯಕ್ಷಗಾನದ ಡಾಕ್ಟರ್ ಆಗಿಯೇ ಇವರ ಸೇವೆ ಪರಿಗಣಿಸಲ್ಪಡುತ್ತದೆ ಎನ್ನುವುದೇ ಸೂಕ್ತ. ಒಬ್ಬ ಸಮರ್ಥ ಡಾಕ್ಟರ್ ಅಥವಾ ವೈದ್ಯ ಅನ್ನಿಸಿಕೊಳ್ಳುವುದು ದೇಹದ ಒಳಗೆ ಹೊರಗೆ ತಿಳಿಯುವಾಗ, ಹಾಗಾಗಿ  ಯಕ್ಷಗಾನದ ಒಳಗೆ ಹೊರಗೆ ಬಲ್ಲ ಇವರನ್ನು ಆ ಮಟ್ಟಿಗೆ ಇವರು ಸಮರ್ಥ ಡಾಕ್ಟರ್ ಎನಿಸಿಕೊಳ್ಳುವುದಕ್ಕೆ ಹೆಚ್ಚು ಅರ್ಹರಾಗಿರುತ್ತಾರೆ.


ಯಕ್ಷಗಾನಂ ಗೆಲ್ಗೆ

Thursday, January 23, 2014

ಯಕ್ಷಗಾನದ ವಿಷಯಾಂತರಗಳ ಒಂದು ಪ್ರವರ


          ಯಕ್ಷಗಾನ ಅಸ್ವಾದನೆಯೂ ಒಂದು ವಿದ್ಯೆ ಎಂದು ಹಲವು ಸಲ ಅನ್ನಿಸಿದ್ದಿದೆ. ಯಕ್ಷಗಾನದಲ್ಲಿ ಬಹು ಮುಖೀ ರಂಜನೆ ಇದೆಯೇನೋ ಸತ್ಯ. ನಾಟ್ಯ ಗಾಯನ ನಾಟಕೀಯತೆಯಂತೆ, ವಿನೋದ ಭಾವುಕ ಅದರ ಜತೆಗೆ ಚಿಂತನೆ ರಂಜನೆ ಯಕ್ಷಗಾನವನ್ನು ಪರಿಪಕ್ವ ಕಲೆಯ ಶಿಖರವನ್ನಾಗಿಸಿದೆ. ಆದರೂ ಇಂತಹ ಕಲೆಯ ಅಸ್ವಾದನೆ ತಿಳಿಯದೇ ಇದ್ದಲ್ಲಿ ಆ ಪರಿಪಕ್ವತೆ ಅಪೂರ್ಣವೆಂದೇ ಅನಿಸಲ್ಪಡುತ್ತದೆ. ಮಿತ್ರರೊಬ್ಬರು, ಇವರು ಮಿತ್ರವರ್ಗಕ್ಕೆ ತನ್ನನ್ನು ತಾನು ಸೇರಿಸಿಕೊಂಡವರು ಎಂದರೂ ಸೂಕ್ತ, ಅವರು ಕರೆ ಮಾಡಿ ನಿತ್ಯವು ನನ್ನಿಂದ ಸಿಗುವ ಯಕ್ಷಗಾನ ಪದಗಳ ಬಗ್ಗೆ ಮಾತನಾಡತೊಡಗಿದರು. ಎಂದೋ ಮರೆತು ಹೋಗಿದ್ದ ಮಂಡೆಚ್ಚ, ಕಡತೋಕರ ಸ್ವರವನ್ನು ಕೇಳಿದಾಗ ತಮ್ಮ ಬಾಲ್ಯದ ದಿನಗಳನ್ನು ನೆನಸಿಕೊಂಡರು. ಅಂತಹ ಮಹಾನ್ ಕಲಾವಿದರು ಮರೆವಿನ ಪರದೆಯೊಳಗೆ ಮರೆಯಾದರೆಂದರೆ ಅದು ಅವರಿಗೆ ಪ್ರಾಪ್ತವಾದ ಜೀವನ ಶೈಲಿ ಕಾರಣ. ಆದರೆ ನಿಯಮಿತವಾಗಿ ಬರುತ್ತಿದ್ದ ಈ ಕಲಾವಿದರ ಕಂಠನಾದ ಆ ಪರದೆಯನ್ನು ಸ್ವಲ್ಪ ಸ್ವಲ್ಪವಾಗಿ ಸರಿಸಿತು ಎನ್ನಬಹುದು. ಕರೆ ಮಾಡಿದವರೇ ಮೂವತ್ತಕ್ಕೂ ವರ್ಷ ಯಕ್ಷಗಾನದಿಂದ ದೂರಾಗಿ ಮರೆತು ಹೋದಂತಾದ ಜೀವನ ಶೈಲಿ ಈ ಪದಗಳ ಅಸ್ವಾದನೆಯಿಂದ ಮತ್ತೆ ನೆನಪಿಗೆ ಬಂದುದನ್ನು ಹೇಳಿದರು. ಯಕ್ಷಗಾನ ಎಂದರೆ ಬಣ್ಣದ ಬಣ್ಣದ ವೇಷ, ರಾಳದ ಎರಚಾಟದಿಂದ ಮುಗಿಲೆತ್ತರಕ್ಕೆ ಚಿಮ್ಮುವ ಬಡಬಾಗ್ನಿ ಮೈಕ್ ಇಲ್ಲದೇಯೂ ಮೈಲು ದೂರ ರಾತ್ರಿಯ ನೀರವತೆಯಲ್ಲಿ ಕೇಳುತ್ತಿದ್ದ ಚೆಂಡೆ ಪಟ್ಟುಗಳು, ಗಡ ಗಡ ನಡುಗುವ ಚಳಿಯಲ್ಲಿ ಬಯಲಾಟದ ಗದ್ದೆಯಲ್ಲಿ ಕೇವಲ ಕಣ್ಣನ್ನು ಮಾತ್ರ ಹೊರಗಿಟ್ಟು  ದೇಹವೆಲ್ಲವನ್ನೂ ಮಂದ್ರಿಯ  ಒಳಗಿಟ್ಟು,  ಮುಸುಕು ಹೊದ್ದು ಕೌತುಕದಿಂದ ನೋಡುತ್ತಿದ್ದ ಆಟಗಳು ಹೀಗೆ ಆ ನೆನಪುಗಳನ್ನು ಹಂಚಿಕೊಂಡರು. ಬಹಳ ಸಮಯದ ವಾನ ಪ್ರಸ್ಥದಿಂದ ಮೋಕ್ಷ ಹೊಂದಿ ಅರಮನೆಗೆ ಬಂದಂತೆ ಪುನಃ ಅವರಿಗೆ ಯಕ್ಷಲೋಕ ದರ್ಶನ ರವಾನೆಯಾಗುತ್ತಿದ್ದ  ನಿತ್ಯ ಪದಗಳ ಮೂಲಕ ಅಗತೊಡಗಿತು !!!  ಕೇವಲ ಒಂದೊಂದು ನಿಮಿಷದ ಪದಗಳು ಯಕ್ಷಲೋಕದ ದರ್ಶನ ಮಾಡಬೇಕೆಂದರೆ ಯಕ್ಷಗಾನದ ಆ ಜೀವನಾಡಿ  ಮತ್ತು ಅದರ ಮಿಡಿತ ಎಂಥಾದ್ದಾಗಿರಬೇಡ.?

          ಹಳೆಯ ಯಕ್ಷಗಾನದ ಆಟಗಳ ಬಗ್ಗೆ ವೇಷ ವೈಭವದ ಬಗ್ಗೆ ಹೇಳುವಾಗ ನಾನು ಹೇಳಿದೆ  “ ಯಕ್ಷಗಾನ ಎಂದರೆ ಕೇವಲ ಅಷ್ಟು ಮಾತ್ರವಲ್ಲ. ಝಗ ಝಗಿಸುವ ವೇಷ, ದಿಗಿಣ, ಅಟ್ಟ ಹಾಸ ಇಷ್ಟನ್ನು ಮಾತ್ರ ಯಕ್ಷಗಾನ ಎಂದು ತಿಳಿದುಕೊಂಡರೆ ನೀವಿನ್ನೂ ಯಕ್ಷಗಾನ ಬಯಲಿನ ತುತ್ತತುದಿಯಲ್ಲಿ ಇದ್ದೀರೆಂದೇ ಅರ್ಥ.”  ಹೌದಲ್ಲ? ಇಷ್ಟನ್ನೇ ಯಕ್ಷಗಾನ ಎಂದು ಸೀಮಿತಗೊಳಿಸಿದರೆ  ಅದು ಯಕ್ಷಗಾನ ಅಸ್ವಾದನೆಯ ವೈಫಲ್ಯ ಅಂತಲೇ ಹೆಳಬಹುದು. ಈ ಮಿತ್ರ ವ್ಯಕ್ತಿಯ ಅನುಭವ ಇಂದಿನ ವಾಸ್ತವಕ್ಕೆ ಹಿಡಿದ ಕನ್ನಡಿಯ ಪ್ರತಿಬಿಂಬದ ಹಾಗೆ ಕಂಡಿತು. ಇಷ್ಟರಲ್ಲೇ ಯಕ್ಷಚಿಂತನದ ಪುಟಗಳತ್ತ ಅವರ ಗಮನ ಹರಿಯಿತು. ನಾನು ನಿಜಕ್ಕೂ ಕೆಲವೊಂದು ಲೇಖನ  ಉಲ್ಲೇಖಿಸಿ ಪ್ರತಿಕ್ರಿಯೆ ಕೇಳಿದ್ದೆ. ಹಾಗಾಗಿ ಯಕ್ಷಚಿಂತನದ ಕೆಲವು ಲೇಖನಗಳನ್ನು ಓದಿ ಅವರು ಈಗಿನ ಕರೆಮಾಡಿದ್ದರು.  ಅದರಲ್ಲೂ ಗೀತೋಪದೇಶದ ಬಗ್ಗೆ ಬರೆದ ಲೇಖನ ಮಾಲೆಯ ಬಗ್ಗೆ ಬಹಳ ಪ್ರಭಾವಿತರಂತೆ ಮಾತನಾಡತೊಡಗಿದರು. ಕಲ್ಪನೆಯ ಬಣ್ಣದವೇಷಗಳು ಚೌಕಿಯಲ್ಲಿ ವಿಶ್ರಾಂತಿಗೆ  ಜಾರಿಕೊಂಡ ಅನುಭವ, ಅವರಿಗೂ ಕೌತುಕ ಯಕ್ಷಗಾನದಲ್ಲಿ ಈ ಬಗೆಯ ವೈಚಾರಿಕ ಜಿಜ್ಞಾಸೆ ಉಂಟೇ? ಈ ಜಿಜ್ಞಾಸೆಯ ಶೋಧನೆ ಅವರಿಗೆ ಆಶ್ಚರ್ಯವನ್ನು ತಂದಿತ್ತು.  ಇದು ಯಕ್ಷಚಿಂತನದ ಹಿರಿಮೆ ಅಂತ ಅನ್ನಿಸುವುದಿಲ್ಲ ಯಾಕೆಂದರೆ ನಾ ಬರೆದ ಲೇಖನ ಅದು ಪರ್ಯಾಪ್ತವಾಗುವುದಕ್ಕೆ ಸಾಧ್ಯವೇ ಇಲ್ಲ.  ಯಕ್ಷಗಾನದ ರೆಂಬೆಗಳನ್ನು ಹಿಡಿದಷ್ಟು ಅಲ್ಲಿ ಹಣ್ಣುಗಳ ಗೊಂಚಲು ಸಿಗುತ್ತದೆ. ತಾಳ ಮದ್ದಲೆ ಎಂಬುದು ಯಕ್ಷಗಾನದ ಒಂದು ರೆಂಬೆ. ಅದರ ಕವಲಿನ ಕವಲಾಗಿ ಹೋದದ್ದು ನನ್ನ ಲೇಖನ. ಆದರೂ  ಇಂದು ಗಮನಿಸುವಾಗ ಚಿರ ಪರಿಚಿತ ಕಲೆ ಬಹಳಷ್ಟು ಅಪರಿಚಿತವಾಗಿಯೇ ಉಳಿದಿದೆ. ಯಕ್ಷಗಾನದ ಕೆಲವೊಂದು ಅಂಗ ಮಾತ್ರ ಜನಪ್ರಿಯವಾಗಿದೆ ಎಂದನಿಸುತ್ತದೆ.
         
          ಇಂದು  ಯಕ್ಷಗಾನದ ಬಗ್ಗೆ ತಿಳಿಯಬೇಕೆಂದು ಇರುವ ಕುತೂಹಲ ಮನಸ್ಸಿಗರಿಗೆ ದೇವಿ ಮಹಾತ್ಮೆಯ ಮಹಿಷಾಸುರ ತೋರಿಸಿ ಇದು ಯಕ್ಷಗಾನ, ಕರ್ನಾಟಕದ ರಾಜ ಕಲೆ ಎಂದು ಹೇಳಿದರೆ ಯಾವುದನ್ನು ಗ್ರಹಿಸಬೇಕು?  ಅಸುರ ಸಂಹಾರ.. ಎಂಬ ಪ್ರಹಸನ ಎಂದಷ್ಟೇ ತಿಳಿಯಬೇಕು. ಇಂತಹ ಪ್ರಾಕಾರಗಳು ಉತ್ತರ ಭಾರತದ ಹಲವು ಕಡೆಯಲ್ಲಿ ಬೇರೆ ಬೇರೆ ರೂಪದಲ್ಲಿ ಪ್ರದರ್ಶಿಸುತ್ತಾರೆ. ಉತ್ತರ ಭಾರತದಲ್ಲೇ ಏಕೆ, ಯಕ್ಷಗಾನ ಪ್ರಚಲಿತದಲ್ಲಿ ಇರುವ ಕರ್ನಾಟಕದ ಕರಾವಳಿ ಪ್ರದೇಶಗಳ ಭೂತಾರಾಧನೆಯಲ್ಲಿಯೂ ಇಂತಹ ಹಲವು ರೂಪಗಳನ್ನು ಕಾಣಬಹುದು. ನಮ್ಮಜ್ಜ ಹೇಳುತ್ತಿದ್ದ ಮಾತು ಈಗಲೂ ಜ್ಜಾಪಕಕ್ಕೆ ಬರುತ್ತದೆ.. ಕಟೀಲು ಮೇಳದ ದೇವಿ ಮಹಾತ್ಮೆ ನೋಡಿ ಬಂದು ಅವರು ಹೇಳುತ್ತಿದ್ದರು..ಭೂತಕೋಲಕ್ಕೆ ಹೋಗಿ ಬಂದೆ ಎಂದು... ಇದು ಆ ಪ್ರದರ್ಶನದ ಬಗ್ಗೆ ಅವರಿಗೆ ಇದ್ದ ಸಹಜ ಪ್ರತಿಕ್ರಿಯೆ. ಹಾಗೆಂದು ಅದರಲ್ಲಿ ಸತ್ವ ಇಲ್ಲವೆಂದಲ್ಲ.. ಆದರೆ ಯಕ್ಷಗಾನ ಎಂದರೆ ಅಷ್ಟೆ ಎಂಬ ಪರಿಮಿತಿ ನಿರ್ಮಾಣವಾಗಬಾರದಲ್ಲ? ಅದರಲ್ಲೂ ಈಗ ಮಡಿಸಿಟ್ಟ ಕಂಬಳಿಯಂತೆ ಮತ್ತದನ್ನೇ ಬದಲಾವಣೆ ಇಲ್ಲದೆ ಹೊದ್ದುಕೊಳ್ಳುವ ಪ್ರಕ್ರಿಯೆ ಮೇಳಗಳಲ್ಲೂ ರೂಢಿಯಲ್ಲಿರುವಾಗ ಯಕ್ಷಗಾನ ಆಸ್ವಾದನೆ ಎಂಬುದು ಒಂದು ಸವಾಲಿನಂತೆ ಆಗಿಬಿಡುವ ಅನುಮಾನವಾಗುತ್ತದೆ.  ವಾರದಲ್ಲಿ ಐದು ದಿನವೂ ಹರಿಕೆಯಾಟವಾಗಿ ದೇವಿ ಪ್ರತ್ಯಕ್ಷವಾಗುವಾಗ ಅಲ್ಲಿ ಯಕ್ಷಗಾನವನ್ನು ಮಾತ್ರ ಮಾತಾಡುವುದು ಸೂಕ್ತವಾಗುವುದಿಲ್ಲ. ಹೊಟ್ಟೆಪಾಡು ಜತೆಯಾದಾಗ ಕಂಬಳಿ ಯಾವುದಾದರೇನು ಚಳಿ ದೂರವಾದರೆ ಸಾಕು ಎಂದು ತಿಳಿಯಬೇಕಷ್ಟೆ.

                ಯಾವುದೇ ಒಂದು ಪಾತ್ರ ಮೈದಳೆಯುವಾಗ ಅದರ ಮೂಲ ತಂತು ಒಂದೇ ಆಗಿರುತ್ತದೆ. ಅದು ರಾವಣನೋ ಭೀಮನೋ ಕೌರವನೋ ಆಗಿರಬಹುದು.  ಭಾವವೂ ಒಂದೇ ಆಗಿದ್ದರೂ ಅದು ಪ್ರಕಟವಾಗುವ ವಿಭಿನ್ನತೆ ಆಸಕ್ತಿದಾಯಕವಾಗಿರುತ್ತದೆ. ಭೀಷ್ಮನ ಹಿತೋಪದೇಶಕ್ಕೆ ಗಟ್ಟಿ ಚರ್ಮವಾಗುವ ಕೌರವ ತನ್ನ ಹಟಮಾರಿತನವನ್ನು ಪ್ರತಿಪಾದಿಸುವ ರೀತಿ ಭಿನ್ನವಾಗಿರಬಹುದು, ಕೌರವನ ಕುತರ್ಕಕ್ಕೆ ತರ್ಕಿಸುವ ಭೀಷ್ಮ  ತತ್ವಗಳನ್ನು ತೆರೆದಿಡುವ ಪರಿ ವಿಭಿನ್ನವಾಗಿರಬಹುದು. ಇದರ ವಿಭಿನ್ನತೆ ಅರಿವಾಗಬೇಕಾದರೆ ಪಾತ್ರಗಳ ಹಿಂದು ಮುಂದು ಅರಿತರೆ ಸಾಲದು, ಅದನ್ನು ನಿರ್ವಹಿಸುವ ಕಲಾವಿದನ ಜಾಣ್ಮೆಯನ್ನೂ ಅವಲೋಕಿಸಬೇಕು. ಯಕ್ಷ ಚದುರಂಗದಲ್ಲಿ ಕಲಾವಿದನ ನಡೆಯೂ ಗಮನಾರ್ಹವಾಗಿಬಿಡುತ್ತದೆ.
ಗೋವಿಂದಣ್ಣ ಗಧಾಯುದ್ದದ ಕೌರವ ಒಂದೇ ಸ್ಥಳದಲ್ಲಿ ಹತ್ತು ಸಲ ನಿರ್ವಹಿಸುವಾಗ ಅವರೊಳಗಿನ ತುಡಿತ ಎಂಥಾದ್ದಾಗಿರಬಹುದು? ಅದನ್ನು ಗಮನಿಸದೇ “ ಕಪಟ ನಾಟಕ ರಂಗ....” ಎಂಬ ಪದಕ್ಕೆ ಮಾತ್ರ ರಂಗಸ್ಥಳ ಇಣುಕಿ,  ಸಿಳ್ಳೆ ಹೊಡೆದರೆ ಕಲಾವಿದನ ಶ್ರಮ ಸಾರ್ಥಕವಾಗುವುದಾದರೂ ಹೇಗೆ?

         
ಹೀಗಿದ್ದರೂ ವ್ಯವಸಾಯೀ ಮೇಳಗಳ ಆಟಗಳು ಚರ್ವಿತ ಚರ್ವಣವಾಗಿ ತಿರುಗಿಸಿದ ಬುಗುರಿಯನ್ನೇ ಪುನಃ ತಿರುಗಿಸುವಂತೆ ಅದೇ ಪುನರಾವರ್ತಿತ ವೇಷಗಾರಿಕೆ ಸಂಭಾಷಣೆಗಳಿಂದ ಪ್ರದರ್ಶಿಸಲ್ಪಡುತ್ತವೆ. ಸಂಬಂಧಿಸಿದವರಲ್ಲಿ ಇದನ್ನು ಪ್ರಸ್ತಾಪಿಸಿದರೂ ಒಂದೆರಡು ಉತ್ತಮ ಸ್ಪಂದನೆಯ ಹೊರತು ಮಿಕ್ಕೆಲ್ಲ ಔದಾಸಿನ್ಯದ ಪ್ರತಿಕ್ರಿಯೆಯೇ ಆಗಿರುತ್ತದೆ. ಒಂದು ಮೇಳದ ಒಂದೇ ಪ್ರಸಂಗವನ್ನು ಮೊದಲ ಎರಡು ಪ್ರದರ್ಶನ ನೋಡಿದರೆ ಮೂರನೆಯದ್ದನ್ನು ನೋಡುವ ಮನಸ್ಸಾಗುವುದಿಲ್ಲ. ಆದರೂ ಮತ್ತದನ್ನೇ ನೋಡುವ ಅಭಿಮಾನಿಗಳೂ ಬಹಳಷ್ಟು ಮಂದಿ ಇದ್ದಾರೆ. ಇದೂ ಯಕ್ಷಗಾನದ ಆಕರ್ಷಣೆಗಳಲ್ಲಿ ಒಂದು ಎನ್ನಬಹುದು.
         
ಇಂದು ಯಕ್ಷಗಾನ ಹೇಗೆ ಪರಿಚಯಾತ್ಮಕವಾಗಿ ಬಿಂಬಿಸಲ್ಪಡಬೇಕೋ ಆ ರೀತಿಯಲ್ಲಿ ಬಿಂಬಿಸಲ್ಪಡುವುದಿಲ್ಲ. ಆದರ ಅಂತರಾಳದ ಆಳ ಅಗಲವನ್ನು ತಿಳಿಸುವ ಪ್ರಯತ್ನವಾಗಬೇಕು. ಯಕ್ಷಗಾನ ಪ್ರದರ್ಶನ ಮಾತ್ರದಲ್ಲೆ ಜನಪ್ರಿಯವಾಗುತ್ತದೆ ಎಂಬುದು ವಿಶ್ವಸನೀಯವಲ್ಲ. ಬದಲಾಗಿ ಅದರ ವೈವಿಧ್ಯತೆಯ ದರ್ಶನವಾಗಬೇಕು. ತಾಳ ಮದ್ದಲೆಗೆ ಬಂದರೆ ಅದರ ಅಂಗ ಅಂಗಗಳಲ್ಲಿ ಹುಗಿದಿರುವ ಕಲಾಪ್ರಜ್ಞೆ ಪ್ರಕಾಶಗೊಳ್ಳಬೇಕು. ಕೇವಲ ಮಾತುಗಾರಿಕೆಯಲ್ಲೇ ಸಾಕ್ಷಾತ್ಕಾರವಾಗುವ ಪೌರಾಣಿಕ ದರ್ಶನದ ವೈಶಿಷ್ಟ್ಯ ಅರಿವಾಗಬೇಕು. ಬಯಲಾಟದಲ್ಲಿ ವೇಷಗಾರಿಕೆಯ ವೈವಿಧ್ಯದ ಜತೆಗೆ ಹಿಮ್ಮೇಳದ ವೈವಿಧ್ಯ ಮಾತ್ರವಲ್ಲ ಅದರ ಮಟ್ಟುಗಳು ಹೀಗೆ ವಿಪುಲವಾದ ಅಂಗಗಳ ಅರಿವು ಸುಲಭದಲ್ಲಿ ಸಿಗುವಂತಾಗಬೇಕು. ಯಕ್ಷಗಾನದ ದೇವೇಂದ್ರನ ವೇಷ ಕಂಡವರೊಬ್ಬರು ಹೇಳಿದ್ದರು, ದೇವೆಂದ್ರನಿಗೆ ಮೀಸೆ ಏಕೆ? ವಾಸ್ತವದಲ್ಲಿ ದೇವತೆಗಳಿಗೆ ಮೀಸೆ ಇರುವುದೇ ಇಲ್ಲ. ನಾಟಕ ಸಿನಿಮಾದ ಅನುಭವದಿಂದ ಅವರು ಹಾಗೆ ಹೇಳಿದ್ದರೂ ಯಕ್ಷಗಾನದ ದೇವೇಂದ್ರನಿಗೆ ಮೀಸೆ ಬಳಿಯುವ ಉದ್ದೇಶವೇನು? ದೇವೆಂದ್ರ ಸ್ವರ್ಗ ಲೋಕದ ಅಧಿಪತಿ. ಸ್ವರ್ಗದ ಆಢಳಿತ ನಡೆಸುವವನು ರಾಜನಾದುದರಿಂದ ರಾಜವೇಶದಲ್ಲೇ ದೇವೇಂದ್ರ ರಂಗವನ್ನೇರಬೇಕು. ದೇವೇಂದ್ರನ ವೇಷ ಮಾತ್ರವಲ್ಲ ಕಿರೀಟ ತೊಟ್ಟ ಪರಂಪರೆಯ ಶ್ರೀ ರಾಮನ ವೇಷವೂ ರಾಜವೇಷದೊಂದಿಗೆ ಮೀಸೆಯೂ ಇರುತ್ತದೆ. ಯಕ್ಷಗಾನದಲ್ಲಿ ರಾಜವೇಷದ ಮಹತ್ವವೇನು? ಪುಂಡುವೇಷದ ವೈಶಿಷ್ಟ್ಯವೇನು? ಇದು ಸರಳವಾಗಿ ವೇದ್ಯವಾಗಬೇಕು. ಮಾತ್ರವಲ್ಲ ವೇಷಧಾರಿಯನ್ನು ಮತ್ತು ಸಂದರ್ಭಗಳನ್ನು ಹೊಂದಿಕೊಂಡು ವೇಷಗಾರಿಕೆ ಬಹಳಷ್ಟು ವೆತ್ಯಾಸಗಳನ್ನು ಹೊಂದಿರುತ್ತದೆ. ಒಡ್ಡೋಲಗದ ವೇಷದ ವೈವಿಧ್ಯವೇ ಒಂದು ಅಧ್ಯಯನದ ವಸ್ತುವಾಗಬಲ್ಲುದು.

ಸಾಮಾನ್ಯವಾಗಿ ಸೌಮ್ಯ ಪಾತ್ರಗಳೇ ಒಡ್ಡೋಲಗದ ವೇಷಗಳಾಗುತ್ತವೆ. ಆದರೂ ಹಲವು ಸಲ ವಿರಳವಾಗಿ ಅಸುರ ಪಾತ್ರಗಳೂ ಒಡ್ಡೋಲಗವಾಗುವುದು ಕಂಡುಬರುತ್ತದೆ. ಇದು ಪರಂಪರೆಯನ್ನು ಬಿಟ್ಟು ಬಳಸಲ್ಪಡುವ ಸನ್ನಿವೇಶಗಳು. “ರಾವಣ ವೇದಾವತಿ” ಪ್ರಸಂಗದಲ್ಲಿ ರಾವಣನ ಒಡ್ಡೋಲಗವನ್ನೇ ಕಾಣಬಹುದು. ಅದು ಪ್ರಸಂಗದ ರೀತ್ಯಾ ಅಲ್ಲದೇ ಇದ್ದು ಕೇವಲ ವಿಶೇಷ ಸನ್ನಿವೇಷವನ್ನಷ್ಟೆ ಗುರಿಯಾಗಿಸಿ ಪ್ರಸಂಗ ಪ್ರದರ್ಶಿಸಲ್ಪಟ್ಟಿತ್ತು ಎಂದು ನನ್ನ ಊಹೆ.  

ಒಂದು ಪ್ರದರ್ಶನದಿಂದ ಯಕ್ಷಗಾನದ  ವೇಷವನ್ನೋ ಕುಣಿತವನ್ನೋ ಕಂಡು ಕೇವಲ ಅಷ್ಟಕ್ಕೇ ಅದನ್ನು ಸೀಮಿತಗೊಳಿಸುವ ಹಾಗಿಲ್ಲ. ಪ್ರತಿಯೊಂದು ಪಾತ್ರಗಳು ಅವುಗಳ ಹಿನ್ನೆಲೆ ಅವುಗಳು ರಂಗದಲ್ಲಿ ತೆರೆದುಕೊಳ್ಳುವ ರೀತಿ, ಸಾಂದರ್ಭಿಕ ಪ್ರಯೋಗಗಳು ಇವನ್ನೆಲ್ಲ ಬೇರೆ ಬೇರೆ ದೃಷ್ಟಿಕೋನದಲ್ಲಿ ಗಮನಿಸುತ್ತಾ ಹೋದರೆ ಯಕ್ಷಗಾನ ವಿಪುಲವಾದ ಸಾಹಿತ್ಯದ ಆಕರವಾಗಿಬಿಡುತ್ತದೆ. ಒಂದು ಆಟ ನೋಡಿ ರಂಜನೆಯ ಮಟ್ಟವನ್ನಷ್ಟೆ ಅಳದು ಸುಮ್ಮನಾಗುವುದನ್ನು ಕಾಣುತ್ತೇವೆ. ಇನ್ನು ಬಹಳಷ್ಟು ಸಂದರ್ಭಗಳಲ್ಲಿ ಕಲಾವಿದರಿಗೆ ಕೈಗೆ ಸಂಭಾವನೆ ಸಿಗುವ ತನಕ ಅದೊಂದು ಯಾಂತ್ರಿಕ ಪ್ರಕ್ರಿಯೆಯಾಗಿರುತ್ತದೆ. ಕೆಲವು ಕಲಾವಿದರನ್ನು ಬಿಟ್ಟರೆ ವಸ್ತು ನಿಷ್ಠ ವಿಮರ್ಶೆಗೆ ತೆರೆದುಕೊಳ್ಳುವವರು ಬಹಳ ಕಡಿಮೆ. ಹಲವು ಸಲ ಇದು ಉದರನಿಮಿತ್ತಂ ವೇಷವಾಗುತ್ತದೆಯೇ ಹೊರತು ಇದು ಯಕ್ಷಗಾನದ ವೇಷವಾಗುವುದೇ ಇಲ್ಲ.

ಯಕ್ಷಗಾನ ಕೇವಲ ಯಕ್ಷಗಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಅದರಲ್ಲಿ ಗಮನಿಸುತ್ತಾ ಹೋದರೆ ಅದರೊಳಗೆ ತೆರೆದುಕೊಳ್ಳುವ ಲೋಕ ಬಹಳ ವಿಶಾಲವಾಗಿರುತ್ತದೆ. ಅದು ಕೇವಲ ರಂಗಸ್ಥಳದ ಮೇಲಿನ ಆಸ್ವಾದನೆಗಷ್ಟೆ ಸೀಮಿತವಾಗಿಲ್ಲ. ಸುಲಭದಲ್ಲಿ ವ್ಯಕ್ತವಾಗದ ಹಲವು ವಿಷಯಗಳಿವೆ ಎಂದನಿಸುತ್ತದೆ.




         





          

Monday, January 6, 2014

ಬಲಿಪ್ಪಜ್ಜನಿಗೆ 75 ಅಂತೆ!!!!




ಯಕ್ಷಗಾನ ಎಂದರೆ ಪರಂಪರೆಯಿಂದ ಬಂದ ಜಾನಪದ ಕಲೆ. ಈ ಪರಂಪರೆಯಲ್ಲಿ ಯಕ್ಷಗಾನ ಪರಂಪರೆಯ ಉತ್ತರದಾಯಿತ್ವದಿಂದ ಕಲೆಯ ರೂವಾರಿಯಾಗಿ ಮೆರೆದವರು ಹಿರಿಯ ಭಾಗವತ ಶ್ರೀ ಬಲಿಪ ನಾರಾಯಣ ಭಾಗವತರು. ಯುಕ್ಷಗಾನದಲ್ಲಿ ಹಾಡುಗಾರಿಕೆಯಿಂದ  ರಂಗಸ್ಥಳದ ಸೂತ್ರಧಾರನಾಗಿ ಅತ್ಯುನ್ನತ ಸ್ಥಾನ ಭಾಗವತರದ್ದು. ಹಾಗಾಗಿ ಇಲ್ಲಿ ಆ ಸ್ಥಾನದಲ್ಲಿ ಇದ್ದವರನ್ನು “ ಭಾಗವತ್ರೆ....” ಅಂತ ಗೌರವದಿಂದ ಸಂಭೋಧಿಸುವುದು  ಕೂಡ ಒಂದು ಪರಂಪರೆಯ ಅಂಗ. ಆದರೆ  ಹೀಗೆ ಕರೆಯುವಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಸಂಭೋಧಿಸಿ ಕರೆಯುವಂತಹ ಸ್ಥಾನ ವ್ಯಕ್ತಿತ್ವ ಗಳಿಸಿಕೊಂಡಿದ್ದರೆ ಅದು ಬಲಿಪ್ಪರು ಮಾತ್ರ. ಯಾಕೆಂದರೆ ಇವರನ್ನು ಭಾಗವತ ಎಂದು ಕರೆದರೆ ಅದಕ್ಕೆ ಯಕ್ಷಗಾನ ಪ್ರಪಂಚಕ್ಕೆ ಹೊರತಾಗಿಯೂ ಆಕ್ಷೇಪ ಇರಲಾರದು. ಬಲಿಪ್ಪಜ್ಜ ಗಳಿಸಿ ಉಳಿಸಿಕೊಂಡ ಸ್ಥಾನ ಅಂಥದ್ದು. ನಮ್ಮ ಬಲಿಪ್ಪಜ್ಜ!!!  ನಾವೆಲ್ಲ ನಮ್ಮ ಅಪ್ಪನ ಅಪ್ಪನನ್ನು ಅಥವಾ ಅಮ್ಮನ ಅಪ್ಪನನ್ನು ಇಷ್ಟು ಪ್ರೀತಿಯಿಂದ ಕರೆಯುದಿಲ್ಲವೋ ಅಂತ ನಮ್ಮ ಅನುಮಾನ. ಆ ಅಜ್ಜನಿಗೆ ಈಗ ಎಪ್ಪತ್ತೈದರ ಹರಯ.  ಎಡಕೈಯಿಂದ ಪಂಚೆಯನ್ನು ಮುದ್ದೆ ಮಾಡಿ ಸ್ವಲ್ಪವೇ ಎತ್ತಿ ಹಿಡಿದು ರಂಗಸ್ಥಳಕ್ಕೆ ಏರುವ ಈ ಭಾಗವತರು ಅದೇ ಭಂಗಿಯಲ್ಲಿ ಒಂದು ಸಲ ಹಿಂತಿರುಗಿ ತನ್ನ ಯಕ್ಷ ಬದುಕನ್ನು ಅವಲೋಕಿಸಿದರೆ ಛೇ .. ಅದೆಂತಹ ಅನುಭವ ಇದ್ದೀತು?  ಆಶ್ಚರ್ಯದಿಂದಲೇ ಮನಸ್ಸು ಭಾವುಕವಾಗಿಬಿಡುತ್ತದೆ. ಕಣ್ಣುಗಳು ಮುಚ್ಚಿಕೊಂಡು ನಮ್ಮ ನೆನಪುಗಳನ್ನು ಕೆದಕುವಂತೆ ಮಾಡುತ್ತದೆ. ಇಂತಹ ಒಂದು ವ್ಯಕ್ತಿತ್ವ ಇರುವುದಕ್ಕೆ ಸಾಧ್ಯವೇ?

          ಯಕ್ಷಗಾನ ಪಿತಾಮಹ ಪಾರ್ತಿಸುಬ್ಬನ ಪ್ರಸಂಗಗಳಾದ ಪಂಚವಟಿ, ಅತಿಕಾಯ ಮೋಕ್ಷ, ಇಂದ್ರಜಿತು ಕಾಳಗ ಮುಂತಾದ ಪ್ರಸಂಗಗಳ ಪದಗಳು ಬಲಿಪ್ಪರಿಗೇ ಮೀಸಲಾರಿಗಿಸಿದವುಗಳು. ವಾಲಿ ಮೋಕ್ಷ ಎಂದರೆ ನೆನಪಾಗುವುದು ಬಲಿಪ್ಪರು. ಇಲ್ಲಿಂದಲೇ ಆರಂಭವಾಗುತ್ತದೆ ಪರಂಪರೆಯ ಸೇನಾಪತಿತ್ವ. ನೆನಪಿನ ಪ್ರಕಾರ ನಲ್ವತ್ತು ವರ್ಷಗಳ ಮೊದಲು ಇದೇ ಪ್ರಸಂಗಗಳ ಪದ ಕೇಳಿ ಯಕ್ಷಗಾನದ ಹುಚ್ಚು ಹಿಡಿಸಿಕೊಂಡದ್ದು ಯಾಕೆ ಅಂತ ಸೋಜಿಗವಾದರೆ,  ಅದೇ ಪದಗಳು “ ಏತಕೇ ಮರುಳಾಹೇ ತಾತಾ...” ಅಂತ ಈಗಲೂ ಅದೇ ಬದಲಾವಣೆ ಇಲ್ಲದೆ ಆಲಾಪಿಸುವುದನ್ನು ಅಜ್ಜನ ಕಂಠದಲ್ಲಿ ಕೇಳುವಾಗ ಯಾಕೆ ಎಂಬುದಕ್ಕೆ ಉತ್ತರ ಸುಲಭದಲ್ಲಿ ಸಿಗುತ್ತದೆ.  ದಶಕದ ಹಿಂದಿನ ಮರುಳಿಗೂ ಈಗಿನ ಮರುಳಿಗೂ ವೆತ್ಯಾಸವೇ ಇಲ್ಲ. ಎಂತೆಂತಹ ಗಾಯಕರು ಅದೆಷ್ಟು ಸಲ ’ರೀ ಟೇಕ್ ಮಾಡಿ ’ ಕೊನೆಯಲ್ಲಿ ಧ್ವನಿ ಮುದ್ರಿಸಿದ ಹಾಡನ್ನು  ಅದೇ ರೀತಿ ಪುನಃ ಹಾಡುವಾಗ ಸಾಮ್ಯತೆಯಲ್ಲಿ ಬಹಳಷ್ಟು ವೆತ್ಯಾಸವನ್ನು ತೋರುತ್ತಾರೆ. ಆದರೆ ಬಲಿಪ್ಪಜ್ಜನದ್ದು ಅದೇ ’ ಏತಕೇ ಮರುಳಾಹೆ ತಾತ...” ಇದು ಸಾಧ್ಯವಾಗುವುದಾದರೂ ಹೇಗೆ ಅದೇ ಬಲಿಪ್ಪರ ಯಕ್ಷಗಾನದ ಮೇಲಿನ ಶ್ರದ್ದೆ.  ಕಲೆಯ ಬಗೆಗಿರುವ ಆ ಶ್ರಧ್ಹಾಭಕ್ತಿ,   ಯಕ್ಷಗಾನ ಪರಂಪರೆಯನ್ನು ಎರಡೂ ಕೈಯಲ್ಲೂ ಜತನದಿಂದ ಅವುಚಿ ಹಿಡಿದುಕೊಂಡ ಪರಿಯದು. ಪ್ರಭಾಕರ ಜೋಷಿಯವರು ಹೇಳುವ ಮಾತುಂಟು, “ಬಲಿಪ್ಪರನ್ನು ಲಂಡನ್ ಅಥವಾ ಇನ್ನೇಲ್ಲೋ ಒಂದಷ್ಟು ವರ್ಷ ಯಕ್ಷಗಾನದ ಸುಳಿವು ಇಲ್ಲದಂತೆ ಇರಿಸಿ, ಕೊನೆಯಲ್ಲಿ ಆ ದೇಶದ ರಾಷ್ಟ್ರ ಗೀತೆಯನ್ನು ಹಾಡುವುದಕ್ಕೆ ಕೊಟ್ಟರೂ ಅದು ಯಕ್ಷಗಾನ ರೂಪದಲ್ಲೇ ಇದ್ದೀತೆ ಹೊರತು ಬೇರೆ ಅಲ್ಲಿ ಸುಳಿಯಲಾರದು.” ಬಲಿಪ್ಪರ ಯಕ್ಷಗಾನ ಸಂಬಂಧಕ್ಕೆ ಇದಕ್ಕಿಂತಲೂ ಸೂಕ್ತವಾದ ಅಂಗೀಕಾರ ಸಿಗಲಾರದು.

         
ಬಲಿಪ್ಪರ ಪದಗಳ ಶಕ್ತಿ ಯಕ್ಷ್ಗಗಾನವನ್ನು ತುಂಬಿಕೊಂಡಿದೆ. ಅದು ಎಲ್ಲ ಕಸವನ್ನು ಸೋಸಿ ತೆಗೆದ ಮಾಲಿನ್ಯರಹಿತ   ಪರಿಶುದ್ದ ಯಕ್ಷಗಾನ ಶೈಲಿ.  ಬೇರೆ ಯಾವುದೇ ಪದಗಳನ್ನು ಕೇಳಬಹುದು. ಆದರೆ ಇವರ ಪದಗಳ ಪ್ರಭಾವವೇ ಬೇರೆ. ಅದು ಆಳಕ್ಕಿಳಿದು ಮಾಡುವ ಯಕ್ಷಮೋಹ ಅದು ಯಕ್ಷ ಸಮ್ಮೋಹನ ಅಂತಲೇ ಹೇಳಬಹುದು,  ಅದು ಗಾಢವಾದ ಪರಿಣಾಮ ಬೀರುತ್ತದೆ. ಬೇರೆ ಯಾವ ಹಾಡುಗಾರಿಕೆಯೂ ಇವರ ಸ್ಥಿರತೆಯನ್ನು ಅಲುಗಾಡಿಸಿ ಪ್ರಭಾವ ಬೀರಲಾರದು. ಯಾಕೆಂದರೆ ಈ ಪರಂಪರೆಗೆ ಶತಮಾನದ ಇತಿಹಾಸ ಬೇರು ಆಳಕ್ಕೆ ಮುಟ್ಟಿಯಾಗಿದೆ.

ಇದೆಲ್ಲ ಯಕ್ಷಗಾನದ ಅನ್ವರ್ಥಗುಣಗಳಾದರೆ ’ಬಲಿಪ್ಪರು ’ ಎಂದಾಕ್ಷಣ ಸುತ್ತಿ ಸುಳಿವ ವಿಶಿಷ್ಟ ಗುಣವಿಶೇಷಗಳಿವೆ. ಸದಾ ಶಾಂತ ಸ್ವಭಾವ, ಪ್ರತಿಯೋಂದನ್ನು ತನ್ನ ನೋಟದಲ್ಲಿ ಪರಮಾರ್ಶಿಸುವ ಚಿಕಿತ್ಸಕ ಚಿಂತನೆಗಳು, ಪುಟ್ಟ ಮಕ್ಕಳೊಂದಿಗೂ ಬಿಗುಮಾನವಿಲ್ಲದೆ ಬೆರೆಯುವ ಮಕ್ಕಳ ಮನಸ್ಸು,  ಶಿಸ್ತು ಸಂಯಮ ಎಲ್ಲವೂ  ಅವರನ್ನು ಸನ್ಮಸ್ಸಿನ ಶಿಖರಗಾಮಿಗಳಾಗಿ ಮಾಡಿದ್ದರೆ ಪ್ರಚಲಿತದಲ್ಲಿ ಮುಗ್ಘ ಮಾನವ ಎಂದು ಕರೆಸಲ್ಪಡುವ ಅವರ ಮುಗ್ಧತೆ ’ಬಲಿಪ್ಪರು’  ಎನ್ನುವುದಕ್ಕೆ ಅನ್ವರ್ಥವಾಗಿದೆ. ಆದರೂ ಈ ಮುಗ್ಧ ಮನಸ್ಸಿನೊಡನೆ ಒಂದೆರಡು ಘಂಟೆ ಕಳೆದರೆ  ನಿಮ್ಮನ್ನು ಚಕಿತರನ್ನಾಗಿ ಮಾಡುವಷ್ಟು ವಿಷಯಗಳನ್ನು ತನ್ನದೇ ಶೈಲಿಯಲ್ಲಿ ತೆರೆದಿಡುತ್ತಾರೆ. ಆವಾಗ ಬಲಿಪ್ಪರು ಮುಗ್ಧರು ಅಂತ ಒಪ್ಪಿಕೊಳ್ಳುವುದಿಲ್ಲ. ಅವರು ಪ್ರಪಂಚವನ್ನು ಕಂಡ ರೀತಿಯದು.  ವ್ಯವಹಾರ ಚತುರತೆ ಮೇಲ್ನೊಟಕ್ಕೆ ನಿಮಗೆ ಗೋಚರಿಸದಿರಬಹುದು ಆದರೆ ಅಂತರಂಗದಲ್ಲಿ ಸಿಗುವ ಸಂತೃಪ್ತ ಗೆಲುವು ಅದು ಅವರದ್ದೇ ಆಗಿರುತ್ತದೆ. ತನ್ನ ಮನೆಯ ಸಮೃದ್ಧ ಕುಟುಂಬದಲ್ಲಿ ಹಿರಿಯರಾಗಿದ್ದು ಇಂದಿಗೂ ಮರಿಮಕ್ಕಳೊಂದಿಗೆ ಅವರಿಗಿರುವ ಅತ್ಮೀಯತೆ ಆ ಕಾಳಜಿ, ಮಕ್ಕಳು ಮರಿಮಕ್ಕಳೂ ಒಂದೇ ಮನೆಯಲ್ಲಿ ಅತ್ಮೀಯವಾಗಿ ಸಾಗುವ ಅವರ ಕೌಟುಂಬಿಕ ಜೀವನ  ಯಶಸ್ವೀ ಕುಟುಂಬ ಜೀವನದ ದ್ಯೋತಕ. ಇಷ್ಟೆಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದ ಬಲಿಪ್ಪಜ್ಜನಿಗೆ ಈಗ ಎಪ್ಪತ್ತೈದರ ಹರಯ. ಈ ಇಳಿವಯಸ್ಸಿನಲ್ಲೂ ಯಕ್ಷಗಾನದ ಅವರ ಹುಮ್ಮಸ್ಸು ನೋಡಬೇಕು.  ಅಭಿಮಾನಿಗಳು ಕರೆದು ಎರಡು ಪದದ ಅದೂ ವೀರ ರಸದ ಏರಿ ಪದಗಳ ಬೇಡಿಕೆ ಇಟ್ಟರೆ,  ಇವರು ನಾಲ್ಕು ಪದ ಹಾಡಿ ಸಾಕೋ ಅಂತ ಕೇಳಿ ಅಭಿಮಾನಿಗಳ ಹೃದಯಕ್ಕೆ ಸದ್ದಿಲ್ಲದೇ ಲಗ್ಗೆ ಹಾಕುತ್ತಾರೆ.

ಐವತ್ತಕ್ಕೂ ಮಿಕ್ಕೆ ವರ್ಷಗಳನ್ನು ರಂಗಸ್ಥಳದಲ್ಲಿ ಜಾಗಟೆ ಹಿಡಿದು ಕಳೆದಿದ್ದಾರೆ. ಅದೆಂತಹ ರಂಗಾನುಭವಗಳು?  ಗಾಬರಿಯಾಗುತ್ತದೆ.  ಒಂದೆರಡು ಘಂಟೆ ಅವರೊಂದಿಗೆ ಕಳೆದರೆ ಗಂಧ ತೇದು ಪರಿಮಳ ಹರಡಿದಂತೆ ನೆನಪಿನ ಸುರುಳಿಗಳು ಬಿಚ್ಚತೊಡಗುತ್ತವೆ. ಬಲಿಪ್ಪಜ್ಜನ ಮನಸ್ಸು ಮಾತ್ರ ಮುಗ್ಧ,   ಅವರು ಪ್ರಪಂಚವನ್ನು ಕಂಡ ದೃಷ್ಟಿ ಮುಗ್ದವಲ್ಲ ಎಂದನಿಸುತ್ತದೆ. ಕಲಾಪ್ರಪಂಚವೆಂದರೆ ಸಹಜವಾಗಿ ಮತ್ಸರ ಈರ್ಷ್ಯೆ ರಾಜಕೀಯ ವಿವಾದಗಳಿಂದ ತುಂಬಿರುತ್ತದೆ. ಆದರೆ ಇಷ್ಟು ಸುದೀರ್ಘ ಕಲಾ ಜೀವನದಲ್ಲಿ ಬಲಿಪ್ಪಜ್ಜ ಇದೆಲ್ಲದರಿಂದಲೂ ದೂರವಾಗಿ ನಿಂತವರು. ಇಂದಿಗೂ ಬಲಿಪ್ಪರು ಅಜಾತ ಶತ್ರುಗಳು ಎಂದರೆ ಅತಿಶಯವಲ್ಲ. ಸುಮ್ಮನೇ ಮುಖಸ್ತುತಿಗೆ ಹೇಳುವ ಮಾತಲ್ಲವದು.  ಅದು ವಾಸ್ತವಕ್ಕೆ ಹಿಡಿದ ಕನ್ನಡಿ.

ಇಂತಹ ಬಲಿಪ್ಪಜ್ಜನಿಗೆ ಎಪ್ಪತ್ತೈದು ತುಂಬಿತೆಂದರೆ, ಸಂಭ್ರಮದಿಂದ ತಮ್ಮ ಕರ್ತವ್ಯ ನಿರ್ವಹಿಸಲು ಟೊಂಕ ಕಟ್ಟಿ ಹೊರಟಿದ್ದಾರೆ ನೋಡಿ ಸ್ವಕ್ಷೇತ್ರ ಮೂಡಬಿದ್ರೆಯ ಅಭಿಮಾನಿಗಳು.  .   “ ಬಲಿಪ ನಾರಾಯಣ ಭಾಗವತ 75”        ಎಂಬ ಶಿರೋನಾಮೆಯಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯೋನ್ಮುಖರಾಗಿದ್ದಾರೆ. ಯಕ್ಷಗಾನ ಪ್ರಪಂಚದ ಮಹನೀಯರು ಊರ ಪರವೂರ ಅಭಿಮಾನಿಗಳು,  ಯಕ್ಷಗಾನ ರಸಿಕರು ಒಂದಾಗಿ ಈ ಕಾರ್ಯದಲ್ಲಿ ತೊಡಗಿ ದೀಪದ ಮೊದಲ ಎಳೆಯನ್ನು ಉರಿಸಿ ಆಗಿದೆ.  ಸಂಪೂರ್ಣ ದೀಪ ಉರಿಯಲು ಅಭಿಮಾನಿಗಳು ಹಸ್ತ ಚಾಚಿ  ಭಾಗವತರ 75 ನ್ನು ಸ್ಮರಣೀಯವಾಗಿಸಬೇಕು. ಭಗವತ್ ವಚನವನ್ನು ತಲುಪಿಸುವವನು ಭಾಗವತ ಎಂದರೂ ಸರಿಯೆ. ಗಡಿಯಾರದ ಮುಳ್ಳಿನಂತೆ ಉದಾತ್ತ ಧ್ಯೇಯೋದ್ದೇಶಗಳನ್ನು ತಮಗರಿಯದೇ ತಮ್ಮ ನಡೆ ನುಡಿಯಲ್ಲಿ ತೋರಿಕೊಟ್ಟ ಆ ಸನ್ನಡತೆ ಈ ಮೂಲಕ ಕೃತಜ್ಞತೆಯನ್ನು ಸಲ್ಲಿಸೋಣ.  ನಮ್ಮೆದೆಯ ಅಭಿಮಾನಕ್ಕೆ ನಾವು ಮೌಲ್ಯ ಕಟ್ಟುವ ಹಾಗಿಲ್ಲ. ಆದರೂ ಅಷ್ಟೋ ಇಷ್ಟೋ ಒಂದು ಆಟದ ಹುಚ್ಚಿಗೆ ವ್ಯಯಿಸುತ್ತೇವೆ ಎಂಬ ಭಾವಕ್ಕಿಂತ ಮಿಗಿಲಾಗಿ ಇನ್ನೇನೋ ನಿರ್ವಿಕಲ್ಪ ಭಾವವೊಂದಿದೆ ಎಂದು ಕೈ ಯಲ್ಲ ಬೆರಳ ತುದಿಯಿಂದಲಾದರೂ ಯೋಜನೆಗೆ ಸಹಾಯ ಹಸ್ತ ಚಾಚುವ.

“ಯಕ್ಷಗಾನಂ ಗೆಲ್ಗೆ”