"ಇದು ವಿಮರ್ಶೆಯಲ್ಲದ ಚಿಂತನ"

Thursday, December 27, 2012

ಮತ್ತೊಂದು ಚರಿತ್ರೆ ವಾಮನ ಚರಿತ್ರೆ


ಮತ್ತೊಂದು ಜಡಿ ಮಳೆ ನಿಂತ ಅನುಭವ. ತಿಂಗಳಾರಂಭದಲ್ಲಿ ಮಳೆ ಬರುತ್ತದೆ ಎಂಬ ನಿರೀಕ್ಷೆ. ಸಮಯ ಹತ್ತಿರ ಆಗುತ್ತಿದ್ದಂತೆ ಇನ್ನೇನು ಎರಡು ದಿನವಿರುವಾಗ ಮೋಡ ಕರಿಗಟ್ಟಿ ದಟ್ಟವಾದ ಅನುಭವಾಗತೊಡಗಿತು. ಮೊಡ ಒಂದೆಡೆ ಸೇರಿ ಬಿರುಗಾಳಿ ಬೀಸತೊಡಗಿದಾಗ ಪ್ರಾಣಿ ಪಕ್ಷಿಗಗಳು ಛಾವಣಿಯ ಆಸರೆಗೆ ಓಡುತ್ತ ಏದುಸಿರು ಬಿಡುತ್ತಾ ಬಂದಂತೆ ಹತ್ವಾರ್ ಸಭಾಂಗಣದೆಡೆಗೆ ಬಂದೇ ಬಿಟ್ಟರು. ಶುರುವಾದ ವರ್ಷಧಾರೆ ಸೂರ್ಯನಸ್ತಮಿಸಿ ಕತ್ತಲಾಗುತ್ತಿದ್ದಂತೆ ನಿಂತಂತಾಗಿ ಮಳೆಯ ಸಿಂಚನಕ್ಕೆ ತಣ್ಣಗಾಗಿ ನಿಡುದಾದ ಉಸಿರನೆಳೆಯುತ್ತ ವಾಸ್ತವದತ್ತ ಮರಳಿದರು. ಕಾರ್ಯಕ್ರಮ ಮುಗಿದು ಒಬ್ಬೊಬ್ಬರೆ ಚದುರಿದಾಗ ಆದ ಅನುಭವ. ರಸ್ತೆ ಬದಿಯ ಛಾವಣಿಯಂತೆ ಹತ್ವಾರ್ ಸಭಾಂಗಣ ನಿರ್ಮಾನುಷವಾಗಿ ಯಥಾಸ್ಥಿತಿಗೆ ಮರಳಿತು.


ಹೇಮಂತ ಋತುವಿನ ಚಳಿಗಾಲದ ಯಕ್ಷಮಿತ್ರರ ಅಧಿವೇಶನ ಈ ಪರಿಯಲ್ಲಿ ನಡೆಯಬಹುದು ಎಂದು ನಾವು ಅಂದುಕೊಳ್ಳಲಿಲ್ಲ. ಬಾರದವರ ಪಾಲು ನಾವು ಹಂಚಿ ತಿಂದಂತೆ ನಮ್ಮಲ್ಲೇ ಹಂಚಿಕೊಂಡೆವು ಇಲ್ಲಿ ಹಂಚಿಕೊಳ್ಳುವುದೆಲ್ಲಿ ಬಂತು? ಹರಿಯುವ ಭಾಗಿರಥಿಯ ತೀರ್ಥವನ್ನು ಶಿರದಲ್ಲಿ ಧರಿಸಿದಂತೆ ಕೆಲವರಾದರೆ ಕೆಲವರು ಅದರಲ್ಲಿ ಮುಳುಗೆದ್ದರು. ಅವರವರ ತಂಬಿಗೆಯ ಗಾತ್ರಕ್ಕೆ ತುಂಬಿಕೊಂಡಂತೆ ಎನ್ನಬಹುದು.



ತಿಂಗಳಾಂತ್ಯದ ದಿನಮಾತ್ರವಲ್ಲ.. ವರ್ಷಾಂತ್ಯದ ದಿನಗಳೂ ಹೌದು. ಅನೇಕರಿಗೆ ಆ ಕಾರಣವೂ ಸಮಯವನ್ನು ನಿಯಂತ್ರಿಸತೊಡಗಿತ್ತು. ನಮ್ಮ ಬಳಗದ ಹಲವರು ಬರಲಿಲ್ಲ. ಬಾರದವರನ್ನು ನೆನಪಿಸುತ್ತ ನಾವಂತೂ ಪಟ್ಟಾಗಿ ಕುಳಿತು ಸುಖಿಸಿದ ಕ್ಷಣಗಳು. ಅದು ಮಗುದೊಮ್ಮೆ ಬರಬಾರದೇ? ಹತ್ವಾರ್ ಸಭಾಂಗಣದ ಅಂಗಣ ದಿನಾಂಕ ಡಿಸಂಬರ್ ೨೫ಕ್ಕೆ ಸ್ವಲ್ಪ ಸ್ವಲ್ಪವೇ ತುಂಬಿಕೊಳ್ಳತೊಡಗಿತು. ಈ ಸಲ ಕೇವಲ ಯಕ್ಷಗಾನ ತಾಳ ಮದ್ದಲೆಯಲ್ಲ ಜತೆಗೆ ಮಧ್ಯಾಹ್ನದ ತನಕ ವಿಚಾರ ಸಂವಾದವೂ ವ್ಯವಸ್ಥಯಾಗಿತ್ತು. ಆರಂಭಿಸುವ ಕ್ಷಣದವರೆಗೂ ಏನು ಎತ್ತ ಎಂಬ ಕಲ್ಪನೆಯಿಲ್ಲದೆ ಹೊಸ ಆಟಕ್ಕೆ ತೊಡಗಿಕೊಂಡ ಕ್ರೀಡಾಳುಗಳಂತಾಗಿತ್ತು ಮನಸ್ಥಿತಿ. ಆದರೆ ಹಿರಿಯರು ಅದೆಲ್ಲವನ್ನು ಮರೆಸುವಂತೆ ವಿಚಾರ ಸಂವಾದ ನಡೆಸಿಕೊಟ್ಟುಬಿಟ್ಟರು. " ತಾಳ ಮದ್ದಲೆಯಲ್ಲಿ ಅರ್ಥಗಾರಿಕೆ" ವಿಚಾರ ಸಂವಾದ ವಿದ್ವಾಂಸರೊಂದಿಗೆ ಪ್ರೇಕ್ಷಕರೂ ಸೇರಿಕೊಂಡು ಸುಂದರವಾಗಿ ರೂಪುಗೊಳ್ಳುವಂತೆ ಮಾಡಿದರು. ಮಿತ್ರರಾದ ಗೋವಿಂದ ಭಟ್ ನಿರೂಪಣೆಯಿಂದ ತೊಡಗಿದ ಕಾರ್ಯಕ್ರಮದ ಆರಂಭದಲ್ಲಿ ಕೇಶವಪ್ರಶಾಂತ್ ಬರೆಕೆರೆ ಪ್ರಾಸ್ತವಿಕ ಮತ್ತು ಸ್ವಾಗತ ಭಾಷಣ ಮಾಡಿದರು.



ಆರಂಭದಲ್ಲಿ ಯಕ್ಷಗಾನ ವಿಮರ್ಶಕರು ವಿದ್ವಾಂಸರೂ ಆದ ಡಾಕ್ಟರ್ ಎಂ ಪ್ರಭಾಕರ ಜೋಷಿ ವಾದವನ್ನು ಮಂಡಿಸುತ್ತಾ ಸಾಗಿದರು. ತಾಳ ಮದ್ದಲೆಯ ಕಲ್ಪನೆ ಏನಿದೆ? ನಿಜವಾಗಿ ಈ ಕಲ್ಪನೆಗೆ ಸರಿಯಾದ ಅರ್ಥವನ್ನು ಕಲ್ಪಿಸಿ ಕೊಟ್ಟರು. ಕೆಲವೊಂದು ವಿಚಾರಗಳು ತಿಳಿದಿರುತ್ತದೆ. ಆದರೆ ಅದಕ್ಕೆ ರೂಪವಿರುವುದಿಲ್ಲ. ಅತ್ಯಂತ ಸರಳವಾದ ನಿರೂಪಣೆಯಿಂದ ತಿಳಿಸಿಕೊಟ್ಟರು. `ತಾಳ ಮದ್ದೆಲೆ ಎಂದರೆ ಅದು ರಂಗದ ಮೇಲೆ ನಿರ್ಮಾಣವಾಗುವ ನಾಟಕ` ಎಷ್ಟು ಸರಳವಾದ ಕಲ್ಪನೆ. ಈ ನಾಟಕಕ್ಕೆ ಚಿತ್ರಕಥೆ ಎಲ್ಲಿ? ಸಂಭಾಷಣೆ ಎಲ್ಲಿ? ಇಲ್ಲ. ಕಂಡರೆ ಒಂದು ಪ್ರಸಂಗ ಪುಸ್ತಕ .. ಅದೂ ಹಲವು ಸಲ ಇರದಿರಬಹುದು. ಇದ್ದರೂ ಅದು ಅರ್ಥವಾಗುವುದು ಕಷ್ಟ. ಹಾಗಾಗಿ ತಾಳ ಮದ್ದಲೆಯ ವೈಶಿಷ್ಟ್ಯಗಳನ್ನು ತೆರೆದಿಡುತ್ತ ಅದನ್ನು ಸ್ಥೂಲವಾಗಿ ಚೊಕ್ಕವಾಗಿ ವಿವರಿಸುತ್ತ ಸಾಗಿದರು. ಅರ್ಥಧಾರಿ ಪಾತ್ರಸಂಬಂಧವನ್ನು ಅರಿತಿರಬೇಕು. ಇದಕ್ಕಾಗಿ ಕೃಷ್ಣ ಸಂಧಾನದ ಕೌರವನ ಪಾತ್ರದ ಮೂರು ಹಂತವನ್ನು ಮನ ಮುಟ್ಟುವಂತೆ ವಿವರಿಸಿದ ರೀತಿ ಅದ್ಭುತವಾಗಿತ್ತು. ಇದರ ಜತೆಗೆ ಕೆಲವು ರೋಚಕ ಅನುಭವಗಳನ್ನು ಹಂಚಿಕೊಂಡ ಪರಿ ಅದ್ಭುತವಾಗಿತ್ತು. ಸಂವಾದದಲ್ಲಿ ವೇದಿಕೆ ಹಂಚಿಕೊಂಡ ಇತರ ಹಿರಿಯರೆಂದರೆ ವಿದ್ವಾನ್ ಶ್ರೀ ಉಮಾಕಾಂತ್ ಭಟ್ ಮೇಲು ಕೋಟೆ ಇವರು ಅದ್ಬುತವಾಗಿ ಮಾತನಾಡಿದರು. ಶ್ರೀ ಜಬ್ಬಾರ್ ಸಮೋ ತಮ್ಮ ನಿರರ್ಗಳ ವಾಕ್ ಸರಣಿಯನ್ನು ಹರಿಸಿ ತಮ್ಮ ಅನುಭವದ ಜತೆಗೆ ಅರ್ಥಧಾರಿಗಳು ಹೊಂದಿರ ಬೇಕಾದ ಸಮಯ ಸ್ಪೂರ್ಥಿಯನ್ನು ವಿವರಿಸಿದರು. ಮತ್ತೋರ್ವ ವಿದ್ವಾಂಸರಾದ ಶ್ರೀ ಅನಂದರಾಮ ಉಪಾಧ್ಯ. ವೃತ್ತಿಯಲ್ಲಿ ಪ್ರಾಧ್ಯಾಪಕರಾದ ಇವರು ಉತ್ತಮ ಸಲಹೆ ಸೂಚನೆಯನ್ನು ಕೊಟ್ಟರು. ಇದೆಲ್ಲಕ್ಕಿಂತ ಸುಂದರವಾಗಿ ನೆರೆದ ಸಭಿಕರೂ ಉತ್ಸಾಹದಿಂದ ಸಂವಾದದಲ್ಲಿ ತೊಡಗಿಕೊಂಡದ್ದು ಪ್ರೇಕ್ಷಕರ ಜತೆಗೆ ರಂಗ ಭೂಮಿ ಎಂಬ ಮಾತಿಗೆ ಅರ್ಥವನ್ನು ಒದಗಿಸಿತ್ತು.



ಮಧ್ಯಾಹ್ನಭೋಜನ ವಿರಾಮಕ್ಕೆ ಶ್ರೀ ವೆಂಕಟರಾಜ್ ಭಟ್ ಮಾಲಿಕರು ದೋಸೆ ಮನೆ ಇವರ ಸಹಾಯದಿಂದ ಭೋಜನದ ವ್ಯವಸ್ಥೆಯಾಗಿತ್ತು. ಉತ್ಕೃಷ್ಟ ಸ್ವಾದದ ಊಟ ನಂತರ ಸರಿಯಾಗಿ ಮೂರು ಗಂಟೆಗೆ ಗಜ ಮುಖದವಗೆ ಎಂಬ ಗಣಪತಿ ಸ್ತುತಿಯಿಂದ ತಾಳ ಮದ್ದಲೆ ವಾಮನ ಚರಿತ್ರೆ ಆರಂಭಗೊಂಡಿತು. ಹಿಮ್ಮೇಳದಲ್ಲಿ ಮೊದಲಿಗೆ ಶ್ರೀ ಬಲಿಪ ಶಿವಶಂಕರ ಭಟ್ ಭಾಗವತರಾಗಿ ಮದ್ದಲೆಯಲ್ಲಿ ಶ್ರೀ ಕುದ್ರೆಕೊಡ್ಲು ರಾಮಮೂರ್ತಿ, ಇವರ ತಂದೆ ಹಾಗು ಅಜ್ಜ ಇಬ್ಬರೂ ಮಹಾನ್ ಚೆಂಡೆ ಮದ್ದಲೆ ವಾದಕರು. ಚೆಂಡೆಯಲ್ಲಿ ಶ್ರೀ ಅವಿನಾಶ್ ಬೈಪಡಿತ್ತಾಯ. ಹಲವು ವರ್ಷಗಳ ಹಿಂದೆ ಬಲಿಪ ಶಿವ ಶಂಕರ ಭಟ್ ಬಂದದ್ದು ಬಿಟ್ಟಲ್ಲಿ ಈ ಭಾಗಕ್ಕೆ ಅವರು ಅಪರಿಚಿತರೆ. ಹಿರಿಯ ಭಾಗವತ ಬಲಿಪ್ಪರ ಮಗನಾಗಿ ಅದೇ ಪರಂಪರೆಯ ಅಪ್ಪಟ ಶೈಲಿ. ಖಚಿತವಾದ ತಾಲ ಲಯ ಮತ್ತು ಇಂಪಾದ ಸ್ವರದಿಂದ ಇವರ ಭಾಗವತಿಕೆ ಕೇಳಿದರೆ ಒಂದು ಮಧುರ ಪರಂಪರೆಯ ಯಕ್ಷಗಾನದ ಅನುಭವವಾಗುತ್ತದೆ. ಸರಳ ಹಾಗು ಸುಂದರವಾಗಿ ಪ್ರಸ್ತುತಗೊಳ್ಳುವ ಇವರ ಪದಗಳು ಕರ್ಣಾನಂದಕರವಾಗಿರುತ್ತವೆ. ಮೊದಲಾರ್ಧದಲ್ಲಿ ಈ ಬಲಿಪ ಪುತ್ರ ಯಶಸ್ವಿಯಾಗಿ ಪ್ರೇಕ್ಷಕರ ಮನಗೆದ್ದರೆ, ಉತ್ತರಾರ್ಧ ಹಿರಿಯ ಭಾಗವತ ಬ್ರಹ್ಮ ಬಲಿಪ ನಾರಾಯಣ ಭಾಗವತರ ಪಾರಮ್ಯಕ್ಕೆ ಸಾಕ್ಷಿಯಾಗಿಬಿಟ್ಟಿತು. ಇವರ ಬಗ್ಗೆ ನಾವೇನು ಹೇಳಿದರು ಅದು ಕೇವಲ ಸಾಂಕೇತಿಕ ಅಕ್ಷರಗಳ ಜೋಡಣೆಯಾಗಿಬಿಡುತ್ತದೆ. ಅದು ಸಂಪೂರ್ಣವೂ ಪರ್ಯಾಪ್ತವೂ ಆಗಿರುವುದಿಲ್ಲ. ನಮ್ಮ ಮಾತುಗಳಿಂದ ಮಿಕ್ಕಿದ್ದು ಬಹಳ ಇದೆ ಅನ್ನಿಸುತ್ತದೆ.ಆದರೂ ಇವರ ಸರಳತೆ ಮತ್ತು ವೈಶಾಲ್ಯತೆಯಿಂದ ನಮ್ಮನ್ನು ಮಕ್ಕಳಂತೆ ಕಂಡು ಕಿರುನಗುವಿನಿಂದಲೇ ಅಭಿನಂದಿಸುವ ರೀತಿ ಇದು ನಮ್ಮ ಬಲಿಪ್ಪಜ್ಜ ಎಂಬ ಅಭಿಮಾನವನ್ನು ನೂರ್ಮಡಿಗೊಳಿಸುತ್ತದೆ. ಅವರ ಸಮಕ್ಷಮದಲ್ಲಿ ಸಲುಗೆಯೂ ಗೌರವವೂ ಏಕ ಕಾಲದಲ್ಲಿ ಹೊರ ಹೊಮ್ಮುತ್ತದೆ ಇದಕ್ಕೆ ಅವರ ನಿರಾಡಂಬರ ಸರಳ ವ್ಯಕ್ತಿತ್ವವೇ ಕಾರಣ. ಇದಕ್ಕೂ ಸಣ್ಣ ನಿದರ್ಶನ..ಇಷ್ಟು ಹಿರಿಯ ಭಾಗವತರು..ಮೊನ್ನೆ ಶ್ರುತಿ ಪೆಟ್ಟಿಗೆಯ ಶ್ರುತಿಯನ್ನು ಹೊಂದಿಸುವುದಕ್ಕಾಗಿ ಆ ಶ್ರುತಿ ಪೆಟ್ಟಿಗೆಯ ಬಾಲಕಿಯನ್ನು ಹುಡುಕಿ ಕೊಂಡು ಹೋಗಿ - " ಅದು ಪಂಚಮದಿಂದ ಷಡ್ಜಕ್ಕೆ ಮಾಡುವುದು ಹೇಗೆ?" ಇಂತಹ ವಿಚಾರಗಳೇ ಇವರನ್ನು ಆಕಾಶಕ್ಕೇರಿಸುವುದು. ಬೇರೆ ಯಾವುದೇ ಕಲಾವಿದನಾದರೂ ಆ ಪುಟ್ಟ ಬಾಲಕಿಯ ಬಳಿಗೆ ಹೋಗಿ ಇಷ್ಟು ಸಹಜವಾಗಿ ಕೇಳುವುದಕ್ಕಿತ್ತೇ?



ಇನ್ನು ಅರ್ಥಗಾರಿಕೆಯಲ್ಲಿ ಅತ್ಯಂತ ಹಿರಿಯ ಕಲಾವಿದರ ಸಮಾಗಮ. ವೈರೋಚನಿ (ಬಲಿ) ಯ ಪಾತ್ರದಲ್ಲಿ ಡಾಕ್ಟರ್ ಎಂ. ಪ್ರಭಾಕರ ಜೋಷಿ. ವಾಮನ ಪಾತ್ರದಲ್ಲಿ ವಿದ್ವಾನ್ ಶ್ರೀ ಉಮಾಕಾಂತ್ ಭಟ್ ಮೇಲುಕೊಟೆ, ಶುಕ್ರಾಚಾರ್ಯನಾಗಿ ಶ್ರೀ ಜಬ್ಬಾರ್ ಸಮೊ ಸಂಪಾಜೆ, ಕಶ್ಯಪನಾಗಿ ಶ್ರೀ ಸುಧನ್ವ ದೇರಾಜೆ. ಸಂಧ್ಯಾವಳಿಯಾಗಿ ನಮ್ಮವರೇ ಆದ ಶ್ರೀ ರಘುರಾಮ್ ಭಟ್ ಮುಳಿಯ.. ಎಲ್ಲರ ಸಹಭಾಗಿತ್ವದಲ್ಲಿ ಒಟ್ಟು ವೇದಿಕೆ ಕಂಗೊಳಿಸಲ್ಪಟ್ಟಿತು. ಒಟ್ಟು ವಾತಾವರಣ ಅಹ್ಲಾದಕರವಾಗಿ ಸಂಪನ್ನಗೊಂಡಾಗ ಬೃಹತ್ ವರ್ಷಧಾರೆ ನಿಂತ ಅನುಭವಾಯಿತು.



ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಇದೆಲ್ಲ ನಮ್ಮ ಮಾತು. ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುವಂತಹ ಯತ್ನ. ಕಾರಣ ಇಷ್ಟೆ ನೆರೆದ ಪ್ರೇಕ್ಷಕವರ್ಗದ ಪ್ರತಿಕ್ರೆಯೆಯ ಪ್ರತಿಫಲನ. ಈ ರೀತಿ ತಟ್ಟಿಸಿಕೊಳ್ಳುತ್ತಿದೆ. ಇದು ತಪ್ಪಲ್ಲ ಎಂಬ ಗ್ರಹಿಕೆ. ಎಲ್ಲದಕ್ಕಿಂತಲೂ ಅಧಿಕ ಮೌಲ್ಯವನ್ನು ನಾನು ಗುರುತಿಸಿದ್ದು ಆ ಪ್ರೇಕ್ಷಕವರ್ಗ.. ನಿಜಕ್ಕೂ ಆ ಪ್ರೇಕ್ಷಕ ವರ್ಗ ಅದ್ಭುತವಾಗಿತ್ತು. ಯಕ್ಷಗಾನಕ್ಕೆ ಅದರಲ್ಲೂ ಬೆಂಗಳೂರಲ್ಲಿ ಈ ರೀತಿಯ ಪ್ರೇಕ್ಷಕರಿದ್ದಾರೆಯೇ ಕಾರ್ಯಕ್ರಮದ ಆರಂಭದಿಂದಲೇ ಇದು ಹಲವು ಬಾರಿ ಉದ್ಗರಿಸುವಂತೆ ಮಾಡಿತ್ತು. ಯಾವುದೇ ಕಲೆ ಸಾಹಿತ್ಯ ಜೀವಂತವಾಗಿರುವುದು ಅದನ್ನು ಅಸ್ವಾದಿಸುವ ಮನಸ್ಸು ಇರುವಲ್ಲಿ.ಗ್ರಾಹಕನಿಲ್ಲದಿದ್ದಲ್ಲಿ ವ್ಯಾಪರ ಇರಬಹುದೆ? ಮೌಲ್ಯ ಅರಿತವರು ಇದ್ದಾಗ ವಸ್ತುವಿಗೆ ಮೌಲ್ಯ ಬರುತ್ತದೆ. ಇಂತಹ ಪ್ರೇಕ್ಷಕ ವರ್ಗ ಇದ್ದಾಗ ಸಂಯೋಜಕರ ಜವಾಬ್ದಾರಿ ಹೆಚ್ಚುತ್ತದೆ. ಮಾತ್ರವಲ್ಲ ಅವರು ಅತ್ಯಂತ ಜಾಗೃತರಾಗಿರಬೇಕು. ಪ್ರೇಕ್ಷಕ ತೃಪ್ತಿ ಹೊಂದಿದರೂ ಸಂಯೋಜಕ ತೃಪ್ತನಾಗಬಾರದು. ಹಾಗಾಗಿ ಪ್ರತಿಕ್ರಿಯೆಗೆ ಸದಾ ಕಿವಿ ತೆರೆದಿರುತ್ತದೆ. ಕಾರ್ಯಕ್ರಮ ಮುಗಿದು ಈ ವರೆಗೂ ಮಿತ್ರರು ಕೇಳುತ್ತಿದ್ದಾರೆ ಏನು ಪ್ರತಿಕ್ರಿಯೆ ಇದೆ....? ಈ ಬಾರಿ ಪ್ರತಿಕ್ರಿಯೆಗಳು ತನ್ನದೇ ರೀತಿಯ ವಿಶೇಷತೆಯನ್ನು ಪಡೆದುಕೊಂಡಿವೆ. ಬಂದ ಪ್ರೇಕ್ಷಕರಲ್ಲಿ ಅನೇಕರು ಬಹು ನಿರೀಕ್ಷೆಯಿಂದ ಬಂದಂತೆ ಭಾಸವಾಗಿತ್ತು. ಕಾರ್ಯಕ್ರಮದ ಆರಂಭದಿಂದಲೇ...ಆ ಪ್ರತಿಕ್ರಿಯೆ ಕೇಳುವಾಗ ಮೈರೋಮಾಂಚನಗೊಳ್ಳುತ್ತಿತ್ತು. ಕ್ರೀಡ ಪಂದ್ಯದ ನೇರ ವೀಕ್ಷಕ ವಿವರಣೆಯಂತೆ ಪ್ರತಿಕ್ರಿಯೆಯೂ ನೇರವಾಗಿ ಬರತೊಡಗಿತ್ತು ! ಒಂದು ರೀತಿಯ ಲೈವ್ ಕಾಮೆಂಟರಿ!! ಆದರೂ ಇವರೆಲ್ಲರ ನಮ್ಮ ಮೇಲಿನ ಅತಿ ನಿರೀಕ್ಷೆಯು ಮನಸ್ಸಿನಲ್ಲಿ ಭಯವನ್ನು ಹುಟ್ಟಿಸಿದೆ. ಸಹೃದಯರ ಹೃದಯ ಪರೀಕ್ಷೆ ನಮ್ಮಿಂದ ಆಗಬಾರದಲ್ಲ?

ಇನ್ನೊಂದು ಮಾತು ಬಹಳ ಮುಖ್ಯ.. ಈ ಕಾರ್ಯಕ್ರಮದ ನೆರಳು ಪಲ್ಲವಿ ಸಾಂಸ್ಕೃತಿಕ ವೇದಿಕೆ ಬೆಂಗಳೂರು ಇದರ ರೂವಾರಿಯಾದ ಶ್ರೀ ಎಂ. ನರಸಿಂಹ ಭಟ್ ರವರು. ತನ್ನ ದುರ್ಬಲತೆಯನ್ನು ಮೀರಿ ಕಾರ್ಯಕ್ರಮ ಕ್ಕೆ ಉತ್ಸಾಹ ತೋರಿದವರು. ಇನ್ನೋರ್ವರು ನಮ್ಮ ಶ್ರೀ ಗೋವಿಂದ ಭಟ್ ರವರು ವೃತ್ತಿಯಲ್ಲಿ ಫೋಟೋ ಗ್ರಾಫರ್. ಇವರ ಉತ್ಸಾಹ ಇದೆಲ್ಲ ನನಗಾದ ಹೊಸ ಅನುಭವಗಳು. ಎಲ್ಲವೂ ಮರೆಯದ ಮುದ್ರೆಯನ್ನು ಒತ್ತಿವೆ.

ಒಂದೆಡೆ ಅತ್ಯಂತ ಹಿರಿಯ ಕಲಾವಿದರು ನಮ್ಮಲ್ಲಿ ಸಹೃದಯರಾಗಿ ಹೊಂದಿಕೊಂಡು ನಡೆದರೆ.. ಇನ್ನೊಂದೆಡೆ ಸಭ್ಯ ಪ್ರೇಕ್ಷಕ ವರ್ಗ. ಇದಕ್ಕೆ ಕಾರಣ ಮೇಲ್ನೋಟಕ್ಕೆ ಒಂದೇ. ಇದು ಬಲಿಪ್ಪಜ್ಜನ ಕಾರ್ಯಕ್ರಮ. ಸ್ಥೂಲವಾಗಿ ಹೇಳಬೇಕೆಂದರೆ ಎಡಬಲಗಳು ಆ ಮಾಹಾನ್ ವ್ಯಕ್ತಿಗೆ ತನ್ನದೇ ರೀತಿಯ ನಮನಗಳನ್ನು ಸಲ್ಲಿಸಿದ್ದವು. ಆ ನಮನಕ್ಕೆ ಸಂವಹನ ವಸ್ತು ಮಾತ್ರ ನಾವಾಗಿದ್ದದ್ದು ನಮ್ಮ ಭಾಗ್ಯ.











Monday, December 24, 2012

ಭಾಗವತ ಸಂವಾದ


ನಿರೀಕ್ಷೆಯಂತೆ ಬಲಿಪ್ಪ ನಾರಾಯಣ ಭಾಗವತರ ಸಂದರ್ಶನದ ನೇರ ಪ್ರಸಾರ ಮುಂಜಾನೆಯ ಚಳಿಯೊಂದಿಗೆ ರೋಮಾಂಚನವನ್ನು ಉಂಟು ಮಾಡಿಬಿಟ್ಟಿತು. ಮೊದಲ ದಿನ ಹಲವರಿಗೆ ಸಂದೇಶವನ್ನು ಕಳುಹಿಸಿದ್ದಾಯಿತು. ಎಲ್ಲರೂ ಬಹಳ ಉತ್ಸಾಹದಿಂದ ಸ್ಪಂದಿಸಿಬಿಟ್ಟರು. ಮುಂಜಾನೆಯ ಹಲವು ನಿಯಮಿತ ಕೆಲಸಗಳ ಸಮಯವನ್ನು ಹೊಂದಿಸಿಕೊಂಡು ಟಿ.ವಿ.ಯನ್ನು ಹಾಕಿದ್ದಾಯಿತು. ಅದಾಗಲೇ ಕಾರ್ಯಕ್ರಮ ಅರಂಭವಾಗಿ ಕೆಲವು ಸೆಕೆಂಡುಗಳು ಸರಿದುದಕ್ಕೆ ಸಾಕ್ಷಿಯಾಗಿ ಬಲಿಪ್ಪಜ್ಜನ ಮುಖ ಪರದೆ ಮೇಲೆ ಬೆಳಗುತ್ತಿತ್ತು.

ಆರಂಭಿಕ ಸಂಪ್ರದಾಯದೊಂದಿಗೆ ಕಾರ್ಯಕ್ರಮ ಆರಂಭವಾಗಿಬಿಟ್ಟಿತು. ದೊಡ್ದ ಕೊಪ್ಪರಿಗೆಯ ಮುಂದೆ ಸಣ್ಣ ಕೌಳಿಗೆ ಸೌಟು ಹಿಡಿದು ನಿಂತಂತೆ ಸಂದರ್ಶಕರನ್ನು ನೋಡಿದಾಕ್ಷಣ ಅನ್ನಿಸಿತು. ಯಾಕಾಗಿರಬಹುದು? ಯಕ್ಷಗಾನಕ್ಕೆ ಸಂಬಂಧಿಸಿದಂತೆ ಬಲಿಪ್ಪರಿಗೆ ಇರುವ ಜ್ಞಾನ ಪ್ರಶ್ನಾತೀತ. ಬೃಹತ್ ಜ್ಞಾನ ಭಂಡಾರ ಅವರು. ಅವರೆದುರು ಯಕ್ಷಗಾನದ ಬಗ್ಗೆ ಒಂದು ಸಣ್ಣ ಪ್ರಶ್ನೆ ಕೇಳುವುದಕ್ಕೂ ತಿಳುವಳಿಕೆ ಅವಶ್ಯ. ಸಂದರ್ಶಕರಿಗೆ ಈ ಬಗ್ಗೆ ಎಷ್ಟು ಅರಿವಿದೆಯೋ ನನಗೆ ಗೊತ್ತಿಲ್ಲ. ಆದರೂ ಹೀಗನ್ನಿಸಿತು. ಇದು ಅನಿಸಿದ ಪ್ರಾಮಾಣಿಕ ಅನಿಸಿಕೆ ಮಾತ್ರ. ಆದರೂ ಇದು ಬಹಳ ಶ್ರೇಷ್ಠ ಅಂತ ಅಂದುಕೊಳ್ಳುತ್ತೇನೆ. ನಿಗದಿತ ಮುಕ್ಕಾಲು ಗಂಟೆಯೊಳಗೆ ಸಂದರ್ಶನ ಮುಗಿಸಬೇಕಾದ ಅನಿವಾರ್ಯತೆ ಇದೆ. ಕೆಲವೆಲ್ಲ ಪರಿಮಿತಿಯೊಳಗೆ ವ್ಯವಹರಿಸ ಬೇಕಾದ ಕಾರಣ ಬೇಡವೆಂದರೂ ಆ ಕಾರಣಗಳೇ ಮೊದಲು ಕಂಡುಬಿಡುತ್ತವೆ. ಬಲಿಪ್ಪರು ಟೀವಿ ಪರದೆ ಮೇಲೆ ಅದೂ ನೇರ ಪ್ರಸಾರ..ಇವಿಷ್ಟೇ ಸಾಕು ನಮ್ಮಂತಹವರಿಗೆ ರೋಮಾಂಚನವಾಗಲಿಕ್ಕೆ. ಮತ್ತೆ ದೂರದರ್ಶನದಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಯಾವ ಕಾರ್ಯಕ್ರಮವಾದರೂ ನೋಡಿಬಿಡುವ ಮನಸ್ಸಾಗುತ್ತದೆ. ಆದರೂ ಇತ್ತೀಚೆಗೆ ಸರಕಾರಿ ದುಡ್ದು ಅದಷ್ಟು ಕಸಿದುಕೊಳ್ಳುವ ಎಂಬ ಮನೋಭಾವದಿಂದ ಯಕ್ಷಗಾನಕ್ಕೆ ಸಂಬಂಧಿಸಿ ಕಾರ್ಯಕ್ರಮಗಳು ಬರುತ್ತಿರುತ್ತವೆ. ಕೆಲವನ್ನು ನೋಡುವಾಗ ಎಲ್ಲ ನವರಸಗಳೂ ಒಂದು ಪಾಕ ಮಾಡಿ ಮುಸುರೆಗೆ ಎಸೆದಂತೆ ಭಾಸವಾಗುತ್ತವೆ. ಅರ್ಹತೆಇಲ್ಲದ ಕಲೆಯನ್ನು ಅಪಹಾಸ್ಯಕ್ಕೆ ತಳ್ಳುವಂತಹ ಕಾರ್ಯಕ್ರಮಗಳು. ಇದರ ಸಾರ್ಥಕತೆ ಏನು ಎಂದು ಬಗೆದರೂ ಉತ್ತರ ಸಿಗುವುದಿಲ್ಲ. ಕೇವಲ ಸರಕಾರದ ದುಡ್ಡು. ಈ ಮೂಲಕ ಜೇಬಿಗಿಳಿಸುವ. ಅಂತೂ ಯೋಜನೆ ಕಾರ್ಯಗತವಾಗಬೇಕು. ಹಾಗಾಗಿ ಇದೆಲ್ಲ ಗಮನಿಸಿದರೆ ಇದು ಬಹಳ ಶ್ರೇಷ್ಠ ಅನಿಸುವುದಿಲ್ಲವೇ? . ಹೌದು ಚಂದನದ ಮುಖ ಚಂದನವಾಗುವುದು ಇಂಥವುಗಳಿಂದಲೇ.
ಎಂದಿನಂತೆ ಔಪಚಾರಿಕ ಪ್ರಶ್ನೆಗಳ ಮರುಕಳಿಕೆ ಇಲ್ಲೂ ಆಗಿದೆ. ಬಲಿಪ್ಪರು ತಮ್ಮ ಜೀವ ಮಾನದಲ್ಲಿ ಇಂತಹ ಪ್ರಶ್ನೆಗಳನ್ನು ಅದೆಷ್ಟು ಸಲ ಇದಿರಿಸಿದ್ದಾರೋ ಗೊತ್ತಿಲ್ಲ. ಆದರೂ ಬಲಿಪ್ಪರ ವೈಶಿಷ್ಟ್ಯತೆ ಎಂದರೆ ಪ್ರಶ್ನೆಗಳು ಹಳೆಯದೇ ಆದರೂ ಅದರ ಉತ್ತರ ಮಾತ್ರ ವೈವಿದ್ಧ್ಯತೆಯಿಂದ ಕೂಡಿರುತ್ತವೆ. ಹೊಸ ರೂಪದ ಉತ್ತರಗಳನ್ನು ಕೇಳುವಾಗ ನಮಗೆ ಎದೆಯೊಳಗೆ ಕಚಗುಳಿಯಿಟ್ಟಂತೆ ಆಗುವುದು ಸುಳ್ಳಲ್ಲ. ಮುಗ್ಧತೆಯ ಭಾವದ ಉತ್ತರಗಳಾದರೂ ಬಲಿಪ್ಪರು ಉತ್ತರದಲ್ಲಿ ಮುಗ್ಧರಲ್ಲ ಅಂತ ಅನಿಸುತ್ತದೆ. "ಮೊದಲಿನವರು ಕಲೆಗಾಗಿ ಸಾಲ ಮಾಡಿ ಕಲೆ ಉಳಿಸಿದರು. ಈಗಿನವರು ದುಡ್ದಿಗಾಗಿ ಕಲೆ ಹಿಂದೆ ಬೀಳ್ತಾರೆ" ಬಲಿಪ್ಪಜ್ಜನ ಮಾತುಗಳು ಕೆಲವೊಮ್ಮೆ ನಿರಾಶೆಯ ಒಂದು ನಗುವನ್ನು ನಮ್ಮ ಮುಖದಲ್ಲಿ ತರಿಸುತ್ತದೆ. ನಯವಾದ ಪ್ರತಿಕ್ರಿಯೆಯಾದರೂ ಅರ್ಥ್ ಮಾಡಿಕೊಳ್ಳುವವನಿಗೆ ಖಾರವಾದ ಚಾಟಿ ಏಟಿನಂತೆ ಇರುತ್ತವೆ. ಆದರೆ ಅದನ್ನು ಅರ್ಥ ಮಾಡಿಕೊಂಡು ಪೆಟ್ಟು ತಿನ್ನುವವರು ಬೇಕಲ್ಲ? ಹಾಗಾಗಿ ಇಂತಹ ಮಾತುಗಳು ಹಲವು ಸಲ ಕರ್ಣ ತಮ್ಮಟೆಯನ್ನು ಸ್ಪರ್ಶಿಸದಂತೆ ಆಕಡೆಗೆ ಜಾರಿಸಿಬಿಡುತ್ತಾರೆ.

ಬಲಿಪ್ಪರ ಮಾತುಗಳೇ ಹಾಗೆ. ಮನಸ್ಸನ್ನು ತೆರೆದಿಟ್ಟ ಪ್ರಾಮಾಣಿಕ ಮಾತುಗಳು. ಆಡುವುದರಲ್ಲು ಮನದೊಳಗೂ ಕಪಟವಿಲ್ಲ. ಯಾರನ್ನೂ ದ್ವೇಷಿಸದ ಕೇವಲ ಕಲೆಯನ್ನು ಮಾತ್ರ ಚಿಂತಿಸುವ ಮನಸ್ಸಿನ ಮಾತುಗಳು. ಈ ನಿಷ್ಕಪಟ ನಿಷ್ಕಲ್ಮಷವನ್ನು ಕೇವಲ ಕೆಲವು ಮಾತುಗಳಿಂದ ಹೇಳುವುದು ಅಸಾಧ್ಯ. ಕಪಟವಿಲ್ಲದ ಮಾತು ಇವರ ಹಿಂದೆ ಕುಳಿತು ಇವರ ಆಸನದ ಕಾಲುಗಳನ್ನು ಅಲುಗಾಡಿಸಿದವರೂ ಯೋಚಿಸುವಂತೆ ಮಾಡುತ್ತವೆ. ಆದರೆ ಯೋಚಿಸುವ ಅರ್ಥೈಸುವ ಮನಸ್ಸು ಬೇಕು.

ಕಾರ್ಯಕ್ರಮ ಹೇಗಿತ್ತು ಎನ್ನುವುದಕ್ಕಿಂತ ಕಾರ್ಯಕ್ರಮ ಕಂಡೆವಲ್ಲ ಅದೇ ಬಹಳ ಸಂತೃಪ್ತಿಯನ್ನು ಕೊಡುತ್ತದೆ. ಕಾರ್ಯಕ್ರಮದ ಮಾಹಿತಿಯನ್ನು ಮೊದಲಾಗಿ ಹಂಚುವುದಕ್ಕಾಗಿ ನಾವೆಲ್ಲ ಬಹಳ ಆಸಕ್ತಿಯಿಂದ ಪ್ರಯತ್ನಿಸಿದ್ದೇವೆ. ದೂರದ ವಿದೇಶದ ಮಿತ್ರರಿಗೆ ಕಾಣುವುದಕ್ಕೆ ಸಾಧ್ಯವಾದೀತೆ ಎಂದು ಮೊದಲ ದಿನ ರಾತ್ರಿ ಅಂತರ್ಜಾಲದ ಲೋಕ ಬಹಳಷ್ಟು ಸುತ್ತಾಡಿ ಒಂದು ವೆಬ್ ತಾಣವನ್ನು ಫೇಸ್ ಬುಕ್ ನಲ್ಲಿ ಹಾಕಿದೆ.ಹಾಗಾಗಿ ಸಂದರ್ಶನ ಕಾರ್ಯಕ್ರಮ ಮುಗಿದಾಗ ದೂರದ ಅಮೇರಿಕದ ಮಿತ್ರ ಕೂಡ ನೋಡಿ ಧನ್ಯವಾದ ಸಂದೇಶ ತಿಳಿಸಿದ್ದ. ಆ ಕ್ಷಣ ನಿಜಕ್ಕೂ ಧನ್ಯತೆಯ ಭಾವ ಆವರಿಸಿಬಿಟ್ಟಿತು. ಬಲಿಪ್ಪಜ್ಜ ಎಲ್ಲಿ? ಚಂದನ ಎಲ್ಲಿ? ನಾನು ಎಲ್ಲಿ? ದೂರದ ಅಮೇರಿಕ ಎಲ್ಲಿ? ಇಲ್ಲಿ ಮುಂಜಾನೆ ಆದರೆ ಅಲ್ಲಿ ರಾತ್ರಿ.. ಆದರೂ ಯಕ್ಷಗಾನದ ಮೇಲಿನ ಅಭಿಮಾನ ಮಹಾನ್ ಕಲಾವಿದರ ಮೇಲಿನ ಅಭಿಮಾನ ಈ ಮೂಲಕ ಹೊರ ಹೊಮ್ಮಿತಲ್ಲ.

Sunday, December 9, 2012

ರಂಗಸ್ಥಳದಲ್ಲಿ ಚಪ್ಪರಮಂಚ

          ರಸ್ತೆಯ ಬದಿಗೆ ಬೆಳೆದ ಮರವೊಂದು ಹೊರಲೋಕಕ್ಕೆ ತನ್ನ ನಿಜ ಬಣ್ಣವನ್ನು ತೋರದೆ ಸ್ಥಿತ ಪ್ರಜ್ಞನಂತೆ ನಿಂತು ಬಿಟ್ಟಿದೆ. ಅದೆಷ್ಟು ಸ್ಥಿತ ಪ್ರಜ್ಞತೆಯೆಂದರೆ ತನ್ನ ಪರಿಚಯವನ್ನೂ ಅದು ಹೊರಲೋಕಕ್ಕೆ . ತೋರಗೊಡುವುದಿಲ್ಲ.. ಇದೊಂದು ಕಾರಣವಷ್ಟೇ. ಮರ ಹೇಗಿದ್ದರೇನು? ಅದರ ಪರಿಚಯದಿಂದ ಆಗಬೇಕೇನು? ಹೊರ ಪ್ರಪಂಚದ ಈ ಅಸಡ್ಡೆಗೆ ಮರ ಸ್ಥಿತಪ್ರಜ್ಞನಾಗಿ ಬೆಳೆದದ್ದರಲ್ಲಿ ಆಶ್ಚರ್ಯವೂ ಇಲ್ಲ. ಈ ಅಸಡ್ಡೆ ಮತ್ತು ಸ್ಥಿತ ಪ್ರಜ್ಞತೆಯ ನಡುವೆ ಕಳೆದು ಹೋಗುವ ವಿಷಯಗಳು ಕೆಲವೊಮ್ಮೆ ಅಚಾನಕ್ಕಾಗಿ ಪ್ರಕಾಶಕ್ಕೆ ಬರುತ್ತದೆ. ಮರ ತನ್ನ ಇರವನ್ನು ತಿಳಿಸದೇ ಇದ್ದರೂ ಮರದ ತುದಿಯಲ್ಲಿ ಬಿಟ್ಟ ಕುಸುಮವೊಂದು ಅರಳಿ ಪರಿಮಳ ಬೀರಿ ತನ್ನ ಇರವಿನ ಜತೆ ಮರದ  ಅಸ್ತಿತ್ವವನ್ನೂ  ಲೋಕಕ್ಕೆ ಸಾರಿಬಿಡುತ್ತದೆ. ಲೋಕದ ತಳ್ಳಿಯೇ ಬೇಡ ಎಂದು ತನ್ನ ಮೈ ಅಡಗಿಸಿ ಕುಳಿತ ಮರದ ಮೌಲ್ಯ ಆಗ ಅರಿವಿಗೆ ಬರುತ್ತದೆ. ಹಾಗೆಂದು ಆ ಮರಕ್ಕೆ ಕುಸುಮ ಹೊಸತೇನೂ ಅಲ್ಲ...  ಅದು ಹೂವರಿಳಿಸುವುದು ಸಹ  ಹೊಸತೇನೂ ಅಲ್ಲ. ಆದರೆ ಜನ ಅದನ್ನು ಮರೆತಿದ್ದಾರೆ. ಅರಳಿ ಹೂವು ಕಂಪು ಪಸರಿಸಿದಾಗ ಮರದ ಬಗ್ಗೆ ಯೊಚಿಸ ತೊಡಗುವುದು.

          ಈ ವರ್ಷ ಯಕ್ಷಗಾನದ ಯುಗ ಪುರುಷ ಎನ್ನಿಸಿಕೊಂಡ ಕುರಿಯ ವಿಠಲ ಶಾಸ್ತ್ರಿಗಳ ಜನ್ಮ ಶತಮಾನೋತ್ಸವದ ಅಂಗವಾಗಿ ಹಲವಾರು ದಾಖಲಾರ್ಹ ಕಾರ್ಯಕ್ರಮಗಳು ಏರ್ಪಾಡಾದುವು. ಪ್ರತೀಯೋಂದು ಕೆಲವು ವಿಚಾರಗಳಲ್ಲಿ ಮಹತ್ವವನ್ನು ಪಡೆದುಕೊಂಡಿದೆ. ಹೀಗೆ ಇತ್ತೀಚೆಗಷ್ಟೇ ಉಜಿರೆಯಲ್ಲಿ ನಡೆದ ಕುರಿಯ ಜನ್ಮ ಶತಮಾನೋತ್ಸವದ ಅಮೂಲ್ಯ ವೀಡಿಯೋ ತುಣುಕೊಂದು ನೋಡುವ ಅವಕಾಶ ಲಭ್ಯವಾಯಿತು. ಹಿರಿಯ ಕಲಾವಿದರು ನಡೆಸಿಕೊಟ್ಟ ಯಕ್ಷಗಾನ ಪೂರ್ವ ರಂಗದ ಅಪೂರ್ವ ಸನ್ನಿವೇಶ. ಬಹುಶಃ ಯಕ್ಷಗಾನದಲ್ಲಿ ಇಂದಿನ ತಲೆಮಾರು ಕಂಡು ಕೇಳರಿಯದ ಭಾಗ. “ ಚಪ್ಪರ ಮಂಚ”  ಪೂರ್ವ ರಂಗವೇ ಪಶ್ಚಿಮದತ್ತ ಚಲಿಸಿ ಅಸ್ತಮಾನಕ್ಕೆ ಸಿದ್ಧವಾಗಿರುವಾಗ ಪೂರ್ವ ರಂಗದ ಅಪೂರ್ವ ಭಾಗ ಕಾಣುವುದಕ್ಕೆ ಉಂಟೇ ಕೇಳುವುದಕ್ಕೆ ಉಂಟೇ? ಆದರೂ ಮರದ ತುದಿಯಲ್ಲಿ ಅರಳಿದ ಕುಸುಮ ಪರಿಮಳ ಬೀರಿದಂತೆ ಆ ಪೂರ್ವ ರಂಗದ ಹಿತವಾದ ಅನುಭವ ಕಂಡಂತಾಯಿತು.
          ಯಕ್ಷಗಾನ ಪೂರ್ವ ರಂಗ ಎಂದೊಡನೆ ಇಂದು ಜ್ಞಾಪಕಕ್ಕೆ ಬರುವ ಮೊದಲ ಹೆಸರು ಶ್ರೀ ಬಲಿಪ್ಪ ನಾರಾಯಣ ಭಾಗವತರು. ಎಲ್ಲರೂ ರಸ್ತೆಯನ್ನು ಹೆದ್ದಾರಿಯನ್ನಾಗಿಸಿ ಚತುಷ್ಪಥವಾಗಿಸಿ ಇಂದಿನ ಸಮಯವಿಲ್ಲದ ಆದ್ಭಾನಕ್ಕೆ ಉತ್ತರ ಕಂಡುಕೊಂಡಂತೆ ಯಕ್ಷಗಾನದಲ್ಲೂ ಚತುಪ್ಷಥದ ಪ್ರಯಾಣದ ನೆನಪು ಬರುವಂತೆ ಮಾಡಿದ್ದಾರೆ. ಸಾಂಪ್ರದಾಯಿಕವಾದುವುಗಳನ್ನೆಲ್ಲ ಬದಿಗೆ ಸರಿಸುತ್ತ ಮೌಲ್ಯವನ್ನು ಅಣಕವಾಡುತ್ತ ಓಡುವಾಗ ಈ ಓಟಕ್ಕೆ ಒಂದು ಸಲ ತಡೆಯೊಡ್ಡಿದ ಹಾಗೆ ಈಗ ಪೂರ್ವರಂಗ. ಇಲ್ಲಿಯೂ ಪೂರ್ವರಂಗ ನೆನಪಾಗುವಾಗ ಬಲಿಪ್ಪರ ಮನೆಯಂಗಳದ ತುದಿಗೆ ಬಂದು ನಿಲ್ಲಬೇಕು.

          ಇಲ್ಲಿ  ಉಳಿದ   ಪೂರ್ವರಂಗದ ಭಾಗವನ್ನು ನಡೆಸಿಕೊಟ್ಟವರು ಶ್ರೀಪ್ರಸಾದ ಬಲಿಪರು.  ಹೆಚ್ಚಿನ ಯುವ ಭಾಗವತರು ಸಾಂಪ್ರದಾಯಿಕತೆಯನ್ನು ಬದಿಗೆ ತಳ್ಳಿ ಏಣಿ ಇಟ್ಟು ಮರ ಹತ್ತುವ ಜಾಣತನವನ್ನು ತೋರುತ್ತಾರೆ. ಹೇಗಾದರೇನು ಭಾಗವತರ ಪೇಟ ಧರಿಸಿದರಾಯಿತು. ಭಾಗವತ ಪಟ್ಟ ಸಿದ್ದಿಸಿದ ಹಾಗೆ. ಆದರೆ ಅದು ಕೇವಲ ಪೇಟ ಧರಿಸಿದ ಭಾಗವತ ವೇಷ ಎಂಬುದು ಅರಿವಿಗೆ ಬರುವುದು ಇಂತಹ ಸಂದರ್ಭದಲ್ಲಿ.   ಹಾಗೇಯೇ ಈ ಪೂರ್ವ ರಂಗದಲ್ಲಿ ಅತ್ಯಪೂರ್ವವೆನಿಸಿದ ಚಪ್ಪರ ಮಂಚ ಏರಿ ತೋರಿಸಿದ್ದು ಶ್ರೀ ಬಲಿಪ್ಪ ನಾರಾಯಣ ಭಾಗವತ ಮತ್ತು  ಶ್ರೀ ಸೂರಿಕುಮೇರು ಗೋವಿಂದ ಭಟ್ಟರು ಜತೆಗೆ ಹಿರಿಯ ಮದ್ದಲೆವಾದಕರಾದ ಶ್ರೀ ಪದ್ಯಾಣ ಶಂಕರನಾರಾಯಣ ಭಟ್.

          ಯಕ್ಷಗಾನ ಪೂರ್ವ ರಂಗ ಒಂದು ಸಾಂಪ್ರದಾಯಿಕ ಆರಾಧನಾ ಕ್ರಮದಂತೆ. ಮೇಲ್ನೋಟಕ್ಕೆ ಕಾಲಯಾಪನೆ ಎಂದು ಭಾಸವಾದರೂ ಅದಕ್ಕೆ ಅದರದ್ದೇ ಆದ ಮಹತ್ವ ಇದೆ. ಇದನ್ನು ಮನಗಂಡು ಹಲವರು ಇದರ ಮಹತ್ವವನ್ನು ಅರಿತು ವಿವರಿಸಿದ್ದಾರೆ. ಪೂರ್ವರಂಗದಲ್ಲಿ ಮೊದಲ ಭಾಗ ಕೇಳಿಕೆ ಕೇಳಿ ಬಡಿಯುವುದು ಇದು ರಂಗಸ್ಥಳದ ಹೊರಗೆ. ನಂತರ ಕೋಡಂಗಿ ಕುಣಿತ (ಇದೂ ಈಗಿನ ಪೂರ್ವರಂಗದಲ್ಲಿ ಕಡಿತಕ್ಕೊಳಗಾಗಿದೆ).  ಕೋಡಂಗಿ ಕುಣಿತ ಮತ್ತು ಬಾಲಗೋಪಾಲ ಕುಣಿತ ಒಂದೇ ಹಂತದಲ್ಲಿ ನಡೆಯುತ್ತದೆ. ಆನಂತರ  ಸ್ತ್ರೀ ವೇಷಗಳು ಮತ್ತು ಹಾಸ್ಯಗಾರನ ವೇಷ. ಈಗ ಕೆಲವು ಕಡೆ ಇಲ್ಲಿಗೆ ಯಕ್ಷಗಾನ ಪ್ರಸಂಗ ಅರಂಭವಾಗುತ್ತದೆ. ಸ್ರೀ ವೇಷ ಆದ  ನಂತರ ಅರ್ಧ ನಾರೀಶ್ವರ ಆ ಮೇಲೆ ಷಣ್ಮುಖ ಸುಬ್ರಾಯ ಈ ಭಾಗ ಇಂದು ಪ್ರಾತ್ಯಕ್ಷಿಕೆಯಲ್ಲಿ ಪ್ರದರ್ಶಿಸಿ ಪರಿಚಯವಾದರೂ ಸಹ ಇದರ ನಂತರದ “ಚಪ್ಪರ ಮಂಚ” ಕುಣಿತದ ಬಗ್ಗೆ ಯಾರಿಗೂ ತಿಳಿಯದು. ಹಿರಿಯ ಕಲಾವಿದರಲ್ಲಿ ಇದರ ಬಗ್ಗೆ ಗೊತ್ತಿದ್ದವರು ಬಲಿಪ್ಪರು ಮಾತ್ರ!  ಈ ಚಪ್ಪರ ಮಂಚ ನೋಡಿದಾಗ ಆಶ್ಚರ್ಯವಾಗುವುದು, ಹೀಗೆ ಅದೆಷ್ಟು ಅನುಭವದ ಪುಟಗಳು ಬಲಿಪ್ಪರ ಭಂಡಾರದಲ್ಲಿ ತೆರೆಯದೆ ಉಳಿದು ಬಿಟ್ಟಿದೆ?

          ಬಹಳ ಹಿಂದಿನ ನೃತ್ಯ ಸಂಪ್ರದಾಯ ಚಪ್ಪರಮಂಚ. ಇದರಲ್ಲಿ ಮುಖ್ಯವಾಗಿ ಒಂದು ಸ್ತ್ರೀ ವೇಷ. ಆವಾಗ  ವೇಷದ ಆಭರಣಗಳನ್ನು ಒಂದು ಸ್ಥಳದಿಂದ ಇನ್ನೊಂದು ಕಡೆಗೆ ದೊಡ್ಡ ಗಾತ್ರದ ಬೆತ್ತದ ಪೆಟ್ಟಿಗೆಯನ್ನು ಸುರಕ್ಷಿತವಾಗಿ ಹೊತ್ತುಕೊಂಡು ಸಾಗಿಸುವುದಕ್ಕಾಗಿ ಉಪಯೋಗಿಸುತ್ತಿದ್ದರು. ಅತ್ಯಂತ ಹಗುರವಾದ ಈ ಪೆಟ್ಟಿಗೆ ಕಿರೀಟ ಆಭರಣಗಳ ಸಾಗಾಣಿಕೆಗೆ ಅತ್ಯಂತ ಸೂಕ್ತವಾಗಿತ್ತು. ನನಗೆ ಈ ಪೆಟ್ಟಿಗೆಯನ್ನು ನೋಡಿದ ನೆನಪಿದೆ. ಈ ಪೆಟ್ಟಿಗೆಯ ಮುಚ್ಚಳವನ್ನು ಚಪ್ಪರ ಮಂಚದಲ್ಲಿ ಸ್ತ್ರೀ ವೇಷದವರು ಸೊಂಟಕ್ಕೆ ಕಟ್ಟಿ ಅದನ್ನು ಚಪ್ಪರ ಮಂಚದ ಸಂಕೇತವಾಗಿಸಿ ವಿಶೇಷ ನೃತ್ಯವನ್ನು ಪ್ರದರ್ಶಿಸುತ್ತಿದ್ದರು. ಇಲ್ಲಿ ಬಲಿಪ್ಪರ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಲ್ಪಟ್ಟ ಚಪ್ಪರ ಮಂಚ ನೃತ್ಯದಲ್ಲಿ ಮೂರು ಪದಗಳು ಹಾಡಲ್ಪಟ್ಟಿವೆ. ಬಾಯಿ ತಾಳಗಳಿಂದ ಕೂಡಿದ ಈ ಪದಗಳು ಅತ್ಯಂತ ವಿಶಿಷ್ಟವಾಗಿದೆ. ಬಲಿಪ್ಪರ ಜತೆಗೆ ಸೂರಿಕುಮೇರಿಯವರು ಅಪರೂಪದ ನೃತ್ಯವನ್ನು ಪ್ರದಶಿಸಿದರೆ ಶಂಕರಣ್ಣನ ಮದ್ದಲೆ ಅದ್ಭುತವಾಗಿ ಮೂಡಿ ಬಂದಿದೆ. ಕೇವಲ ಮೂರು ಪದಕ್ಕಾಗಿ ರಂಗ ಸ್ಥಳ ಏರಿದ್ದು ಒಂದು ವಿಶೇಷತೆ ಎನ್ನಿಸುತ್ತದೆ.  

          ಕುರಿಯ ವಿಠಲ ಶಾಸ್ತ್ರಿ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಇಂತಹ ಒಂದು ಪ್ರಾಕಾರವನ್ನು ನೆನಪಿಗೆ ತಂದು ಕೊಂಡದ್ದು ಸಹ ಪ್ರಾಮುಖ್ಯವೆನಿಸಲ್ಪಡುತ್ತದೆ. ಇಲ್ಲವಾದರೆ ಇದನ್ನು ದೈರ್ಯವಾಗಿ ಮತ್ತು ಆಸಕ್ತಿಯಿಂದ ನಡೆಸುವವರು ಇಲ್ಲದೆ ಮುಂದಿನ ಜನಾಂಗಕ್ಕೆ ಇಂತಹದ್ದೊಂದು ಇತ್ತು ಎನ್ನುವುದಕ್ಕೆ ಯಾವುದೇ ದಾಖಲೆಯೂ ಉಳಿಯುತ್ತಿರಲಿಲ್ಲ. ಇದಕ್ಕಾಗಿ ಶತಮಾನೋತ್ಸವ ಸಮಿತಿಯ ಭಾರವಾಹಿಗಳ ಆಸಕ್ತಿಗೆ ಮತ್ತು ಕರ್ತೃತ್ವ ಶಕ್ತಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ಇಪ್ಪತ್ತು ನಿಮಿಷದ ಈ ವಿಡಿಯೋ ತುಣುಕು ನೋಡಿ ಆದ ಮೇಲೆ ಭೇಷ್ ಬಲಿಪ್ಪಜ್ಜ.. ಬೇಷ್ ಗೋವಿಂದಣ್ಣ ಎನ್ನುವುದಲ್ಲದೆ ಶಂಕರಣ್ಣನ ಮಾಂತ್ರಿಕ ಸ್ಪರ್ಶಕ್ಕೆ  ಮನಸ್ಸು ಆ ಹಿಂದಿನ ಕಾಲವನ್ನು ಕಲ್ಪಿಸುವುದಾರೊಂದಿಗೆ  ಒಂದು ನಿಟ್ಟುಸಿರು ಹೊರಬರುತ್ತದೆ. ಪರಂಪರೆಯ ಪುಟಗಳಲ್ಲಿ ಇನ್ನು ಇಂತಹ ಪುಟಗಳೆಷ್ಟಿವೆಯೋ..? ತರೆದು ನೋಡುವ ಭಾಗ್ಯವಾದರೂ ನಮಗಿದೆಯೇ?