"ಇದು ವಿಮರ್ಶೆಯಲ್ಲದ ಚಿಂತನ"

Thursday, May 7, 2015

ಭಕ್ತ ರುಕ್ಮಾಂಗದ ಭಾಗ ೧


“ರಕ್ತಿ ಇದ್ದವನಿಗೆ ವಿರಕ್ತಿಯನ್ನು ಹೊಂದುವುದಕ್ಕೆ ಸಾಧ್ಯ. ಕಾಮ ಬಲ್ಲವನಿಗೆ ಅದರಿಂದ ದೂರವಾಗುವುದು ಸಾಧ್ಯವಾಗುತ್ತದೆ. ಜೀವನದಲ್ಲಿ ರಕ್ತಿಯನ್ನು ಅನುಭವಿಸಿದವನು ವಿರಕ್ತಿಯನ್ನೂ ಹೊಂದುತ್ತಾನೆ. ಕಾಮ ಮತ್ತು ಯಮ ಜಂಟಿ ಜೀವಿಗಳು”  ಇದು  ರುಕ್ಮಾಂಗದ ಚರಿತ್ರೆಯ ಸ್ಥಾಯೀ ಭಾವ. ಕಾಮವನ್ನು ಅರಿತುಕೊಂಡೇ ಮೋಕ್ಷವನ್ನು ಸಾಧಿಸುವ ಮಹಾನ್ ಭಗವದ್ಭಕ್ತ ರುಕ್ಮಾಂಗದನ ಭಕ್ತಿ ಚರಿತ್ರೆ. . ಯಕ್ಷಗಾನದ ವಿಶಿಷ್ಟ ಪ್ರಸಂಗಗಳಲ್ಲಿ ಒಂದು ರುಕ್ಮಾಂಗದ ಚರಿತ್ರೆ. ಬಯಲಾಟವಾಗಿಯೂ ತಾಳ ಮದ್ದಲೆಯಾಗಿಯೂ ರಂಗಕ್ಕೆ ಹೊಂದಿಕೊಳ್ಳುವ ಪ್ರಸಂಗವಿದು. ಈ ಪ್ರಸಂಗದ ಹಳೆಯ ತಾಳ ಮದ್ದಲೆಯೊಂದರ ಧ್ವನಿ ಮುದ್ರಣ ಮನುಷ್ಯ ಜೀವಿತದ ಪಾರಮಾರ್ಥಿಕ ಪ್ರಪಂಚವನ್ನು ಒಂದು ಸಲ ಸುತ್ತಾಡಿಸುತ್ತದೆ. ಇಲ್ಲಿ ಹಿಮ್ಮೇಳದ ಭಾಗವತರಾಗಿ ಹಿರಿಯರಾದ ಶ್ರೀ ನಾರಣಪ್ಪ ಉಪ್ಪೂರ ಮತ್ತು ಕಡತೋಕ ಮಂಜುನಾಥ ಭಾಗವತರ ಹೃದಯ ಸ್ಪರ್ಶೀ ಭಾಗವತಿಕೆಯೊಂದಿಗೆ ಹಿಮ್ಮೇಳ ಒದಗಿದರೆ, ರುಕ್ಮಾಂಗದನಾಗಿ ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ ಮತ್ತು ಜಗನ್ಮೋಹಿನಿಯಾಗಿ ಶ್ರೀ ಕೆ. ಗೋವಿಂದ ಭಟ್ ನಿರ್ವಹಿಸಿದ್ದಾರೆ.
ಸಹಜವಾಗಿ ಈ ತಾಳ ಮದ್ದಲೆಯಲ್ಲಿಯೂ ರುಕ್ಮಾಂಗದನಾಗಿ ಶೇಣಿಯವರು ಆದ್ಯಂತವಾಗಿ ವ್ಯಾಪಿಸಿಬಿಡುತ್ತಾರೆ. ಒಂದು ಪಾತ್ರವನ್ನೂ,  ಜತೆಗೆ  ಪ್ರಸಂಗವನ್ನೂ ಮತ್ತದರ  ಸ್ಥಾಯೀ ಭಾವವನ್ನು ಮಾತಿನ ಮೂಲಕ ಮನಸ್ಸಿನಲ್ಲಿ ಮುದ್ರಿಸಿಬಿಡುವುದು ಅದು ಸುಲಭದ ಮಾತಲ್ಲ. ಕಾಮದ ವಶವರ್ತಿಯಾದ ರುಕ್ಮಾಂಗದ ಅದನ್ನು ಮೀರಿ ವಿರಕ್ತೀ ಭಾವದ ಭಕ್ತಿಯಿಂದ  ಭಗವಂತನನ್ನು ಸಾಕ್ಷಾತ್ಕರಿಸುವ  ಪ್ರಸಂಗವಿದು. ಇದರಲ್ಲಿ ಮಗನಾದ ಧರ್ಮಾಗಂದನ ದಿಗ್ವಿಜಯಕ್ಕೆ ಹೆಚ್ಚು ಮಹತ್ವವನ್ನು ಕೊಡದೆ ರಕ್ತ ಮತ್ತು ವಿರಕ್ತದ ದರ್ಶನವನ್ನಷ್ಟೆ ಇಲ್ಲಿ ಕಾಣಬಹುದು.
ಆರಂಭದಲ್ಲಿ ರುಕ್ಮಾಂಗದನ ಆಸ್ಥಾನಕ್ಕೆ ನಾರದನ ಆಗಮನವಾಗುತ್ತದೆ. ಒಬ್ಬನು ದಾರ್ಶನಿಕ ಎಂದೆನಿಸಿಕೊಳ್ಳಬೇಕಾದರೆ ಆರಂಭದಲ್ಲಿ ವ್ಯಷ್ಟಿ ದರ್ಶನವಾಗಿ ಆಮೇಲೆ ಪ್ರಪಂಚದ ಸಮಷ್ಟೀ ದರ್ಶನವಾಗಬೇಕು. ಪ್ರಾಪಂಚಿಕ ವೈಶಾಲ್ಯತೆಯನ್ನು ಕಾಣಬೇಕಾದರೆ ಅದರ ಆಳ ಅಗಲ ಎತ್ತರವನ್ನು ತಿಳಿದುಕೊಳ್ಳಬೇಕು. ಎಲ್ಲಕ್ಕಿಂತ ಮೊದಲು ವ್ಯಷ್ಟಿ ದರ್ಶನದ ಮೂಲಕ ತನ್ನನ್ನು ತಾನು ತಿಳಿದುಕೊಳ್ಳಬೇಕು. ಈ ತಳಹದಿಯಲ್ಲಿ ಶೇಣಿಯವರು ರುಕ್ಮನ ಮುಖದಲ್ಲಿ ಅರ್ಥವಿಸುತ್ತಾರೆ. ಪ್ರಾಪಂಚಿಕ ವ್ಯವಹಾರಿಯಾಗಿ ಅರಸನಾಗಿ ಕ್ಷತ್ರಿಯ ರುಕ್ಮಾಗಂದ ಗುರುತಿಸಿಕೊಂಡರೂ ತನ್ನ ತಾನು ತಿಳಿದುಕೊಳ್ಳುವ ತುಡಿತವನ್ನು ಅನುಭವಿಸುತ್ತಾನೆ. ನಾನು ಯಾರು ಎಂಬುದು ಅರಸನಾಗಿ ಜನಾಂಗ ಗುರುತಿಸಿಕೊಂಡರೂ ನಾನು ಏನು ಎಂಬುದು ನಿರುತ್ತರವಾದ ಪ್ರಶ್ನೆಯಾಗಿಯೆ ಉಳಿದು ಬಿಡುತ್ತದೆ. ನಾರದರು ಇದನ್ನು ಗುರುತಿಸಿ ಪ್ರಶ್ನೆಗೆ ಉತ್ತರವನ್ನು ಹುಡುಕುವ ಮಾರ್ಗವನ್ನು ತೋರಿಸಿಕೊಡುವಲ್ಲಿಂದ ಕಥಾಭಾಗ ಆರಂಭವಾಗುತ್ತದೆ.
ನಾರದರನ್ನು ಯಥಾಪ್ರಕಾರ ಷೋಢಷೋಪಚಾರಮಾಡಿದಾಗ ನಾರದರೇ ಬಂದಕಾರಣವನ್ನು ಉಸುರುತ್ತಾರೆ. ಜೀವರುಗಳಿಗೆ ಹಿಡಿದ ಕರ್ಮಬಂಧನದ ಮುಕ್ತಿಯನ್ನು ಹೇಗೆ ಗಳಿಸಬಹದು ಎಂಬುದನ್ನು ವಿವರಿಸುತ್ತಾರೆ. ಮನುಷ್ಯನು ಹುಟ್ಟಿದಾಗ ಆತ್ಮನಿಂದ ದೂರಾಗಿ ಅಹಂಕಾರದಿಂದ ಕೂಡಿದ ಜೀವನನ್ನು ಮಾಡುತ್ತಾ ಜೇಡರ ಬಲೆಯಲ್ಲಿ ಜೇಡ ತಾನೇ ಸಿಲುಕಿದಂತೆ ತನ್ನ ಕರ್ಮದ ಬಂಧನದಲ್ಲಿ ತಾನೇ ಸಿಲುಕುತ್ತಾನೆ. ಇದನ್ನು ವಿಕೃತಿ ಎಂದು ವಿವರಿಸುತ್ತಾನೆ.
          ವಿಕೃತಿಯ ಬಗ್ಗೆ ರುಕ್ಮಾಂಗದ (ಶೇಣಿಯವರು)  ಒಂದು ನಿದರ್ಶನವನ್ನು ವಿವರಿಸುತ್ತಾನೆ. ಒಂದು ಬಾಳೆಯ ಹಣ್ಣನ್ನು ಕಂಡಾಗ ನಾಗರೀಕತನದ ಸಂಸ್ಕಾರದಿಂದ ಆ ಬಾಳೆಯ ಹಣ್ಣಿನ ಸಿಪ್ಪೆತೆಗೆದು ಒಳಗಿನ ಹಣ್ಣನ್ನು ಮಾತ್ರವೇ ತಿನ್ನುತ್ತಾನೆ. ಇನ್ನು ಕೋಣವೊಂದು ಆ ಹಣ್ಣನ್ನು ಕಂಡರೆ ಅದನ್ನು ಸಿಪ್ಪೆ ಸಹಿತ ತಿಂದು ಬಿಡುತ್ತದೆ. ಮೊದಲನೆಯದ್ದು ಸಂಸ್ಕೃತಿ. ಎರಡನೆಯದ್ದು ಪ್ರಕೃತಿ. ಆದರೆ ಎರಡಕ್ಕೂ ಹೊರತಾಗಿ ಮೂರನೆಯ ಒಂದು ಕ್ರಮವಿದೆ ಅದು ವಿಕೃತಿ. ಇಲ್ಲಿ ಹಣ್ಣನ್ನೂ ತಿನ್ನದೇ ಅದರ ರಸವನ್ನು ಹಿಂಡಿ ಅದನ್ನು ಸಂಸ್ಕರಿಸಿ ಅದರಲ್ಲಿ ಯಾವುದೋ ಪೇಯವನ್ನು ಮಾಡಿ ಅದು ವಿಕೃತಿ. ಅಹಂಕಾರ ರೂಪನಾದ ಜೀವಾತ್ಮನು ತಾನೇ ತಾನಾಗಿ ಮಾಡಿಕೊಳ್ಳುವಂತಹುದು.  ಹಾಗಾದರೆ ಇದರಿಂದ ಹೊರಗೆ ಬರುವುದು ಹೇಗೆ? ಆಗ ನಾರದರು ವಿವರಿಸುತ್ತಾರೆ.
          ಮನುಷ್ಯನಾಗಿ ಹುಟ್ಟಿದ ಮೇಲೆ ಆತನಿಗೆ ನಾಲ್ಕು ದಾರಿಗಳು ತೆರೆದುಕೊಳ್ಳುತ್ತವೆ. ಪಾಪ ಮಾಡಿ ಅಧಃಪತನ ಅಧೋಲೋಕಕ್ಕೆ ಹೋಗಬಹುದು. ಪುಣ್ಯಕರ್ಮಗಳನ್ನು ಮಾಡಿ ಪಿತೃಯಾನಕ್ಕೆ ಹೋಗಬಹುದು, ಯೋಗಿಯಾಗಿ ದೇವಯಾನಕ್ಕೆ ಹೋಗಬಹುದು, ಭಕ್ತನಾಗಿ ಪರಮಾತ್ಮನ ಸಾಯುಜ್ಯವನ್ನು ಸೇರಬಹುದು. ಹಾಗಾಗಿ ಭಗವಂತನ ನಾಮ ಸ್ಮರಣೆ ಮಾಡಿ ಭಗವಂತನ ಕೃಪೆಗೆ ಪಾತ್ರನಾಗಬೇಕು.
          ಆವಾಗ ರುಕ್ಮಾಂಗದ ಒಂದು ಜಿಜ್ಞಾಸೆಯನ್ನು ಮುಂದಿಡುತ್ತಾನೆ, ಭಗವಂತನ ಕೃಪೆ ಅದನ್ನು ಭಗವಂತ ನೀಡುವುದೋ ಅಲ್ಲಾ ನಾವು ಗಳಿಸುವುದೋ? ದೇವರಿಗೆ ಬೇಕಾದವನು ಅಥವಾ ಬೇಡದವನು ಎಂಬುದಿಲ್ಲ. ಹಾಗಾಗಿ ದೇವರು ನಮಗೆ ಬೇಕು.   ಹಾಗಾಗಿ ಆ ಕೃಪೆಯೂ ನಮಗೆ ಬೇಕು. ಇದಕ್ಕೆ  ಬಹಳ ಸ್ವಾರಸ್ಯವಾದ ಸೂಕ್ತ ಉದಾಹರಣೆಯೊಂದಿಗೆ ವಿಶ್ಲೇಷಣೆಯನ್ನು ಕೊಡುತ್ತಾರೆ. ಗಾಳಿ ಎಲ್ಲಾ ಕಡೆಯೂ ಬೀಸುತ್ತದೆ. ಒಬ್ಬ ಮನೆಯಲ್ಲಿ ಬಾಗಿಲು ಹಾಕಿ ಕಂಬಳಿ ಹೊದ್ದು ಮಲಗಿ ಸೆಕೆ ಅಂತ ಬೊಬ್ಬೆ ಹೊಡೀತಾನೆ. ಅವನಿಗೆ ಸೆಕೆ ಆಗುತ್ತಿದ್ದರೆ ಅದಕ್ಕೆ ಗಾಳಿ ಹೊಣೆಯಲ್ಲ. ಆವಾಗ, ಕೋಣೆಯ ಬಾಗಿಲು ತೆರೆದಿಟ್ಟು, ಇನ್ನೂ ಗಾಳಿ ಸಾಕಾಗುವುದಿಲ್ಲ ಎಂಬಾಗ ಕೋಣೆಯಿಂದ ಹೊರಬಂದು ಮತ್ತೂ  ಗಾಳಿ ಸಿಗುವುದಿಲ್ಲ ಎಂದಾಗ,  ಬೀಸಣಿಗೆಯಿಂದ ಬೀಸಿ ಗಾಳಿಯನ್ನು ಸಂಪಾದಿಸುತ್ತಾನೆ. ಇಲ್ಲಿ ಗಾಳಿ ಬೀಸಣಿಗೆ ಒಳಗಿನಿಂದ ಹುಟ್ಟಿಕೊಳ್ಳುತ್ತದೋ.ಇಲ್ಲ,...     ಬೀಸಣಿಗೆ ಎಂಬುದು ಗಳಿಸುವಲ್ಲಿ ಒಂದು ಉಪಾಧಿ.  ಗಾಳಿಯನ್ನು ಚಲಾಯಿಸುವಂತಹ ಕರ್ಮಕ್ಕೆ ಬೀಸಣಿಗೆ ಎಂಬುದು ಉಪಾಧಿಯಾಗಿರುತ್ತದೆ.
          ಭಗವಂತನ ಕೃಪೆಗೆ ಏನು ಮಾಡಬೇಕು? ತಿಂಗಳಲ್ಲಿ ಎರಡು ದಿವಸ ವೃತವನ್ನು ಆಚರಿಸಬೇಕು. ದಶಮಿಯಿಂದ ತೊಡಗಿ ಎಕಾದಶಿಯವರೆಗೆ ನಿದ್ರಾಹಾರವನ್ನು ತೊರೆದ ಉಪವಾಸವನ್ನು ದೇವರ ನಾಮಸ್ಮರಣೆ ಮಾಡಬೇಕು. ದ್ವಾದಶಿಯ ಸೂರ್ಯೋದಯದಲ್ಲಿ ಪಾರಣೆಯನ್ನು ಗೈಯ್ಯಬೇಕು.  ಉಪವಾಸವೆಂದರೆ ಸಮೀಪದವಾಸ. ಅಂದರೆ ಭಗವಂತನ ಸಮೀಪವಾಸ. ಭಗವಂತ ಸಮೀಪವಿದ್ದ ಅನುಭವದಲ್ಲಿ ಮಾಡುವ ವೃತ. ಏಕಾದಶಿ ವೃತದಲ್ಲಿ ಶ್ರೀಮನ್ನಾರಾಯಣ ಸ್ಮರಣೆಯಿಂದ ಆ ಭಗವಂತನ ಕೃಪೆಯನ್ನು ಗಳಿಸಿ ಆ ಮೂಲಕ ಪರಮಾತ್ಮನ ಸಾಯುಜ್ಯಪದವಿಯನ್ನು ಗಳಿಸಬೇಕು. ರಾಜನಾದವ ಈ ವೃತವನ್ನು ಆಚರಿಸಿದರೆ ಪ್ರಜೆಗಳೂ ಅದನ್ನು ಅನುಸರಿಸುತ್ತಾರೆ.
          ಏಕಾದಶೀ ವೃತನಿಷ್ಠನಾದ ರುಕ್ಮಾಂಗದ ಪ್ರಜೆಗಳ ಮನವಿಯಂತೆ ಒಂದು ದಿನ ಬೇಟೆಗಾಗಿ ಕಾಡಿಗೆ ಹೋಗುತ್ತಾನೆ. ಕಾಡಿನ ಏಕಾಂತದ ಸನ್ನಿವೇಶದಲ್ಲಿ ಶೇಣಿಯವರು ರುಕ್ಮಾಂಗದನ ಪಾತ್ರದ ಸೂಕ್ಷ್ಮವನ್ನು ಬಿಚ್ಚಿಡುತ್ತಾ ಪಾತ್ರದ ಅಸ್ತಿವಾರವನ್ನು ಮತ್ತಷ್ಟು ಬಲಪಡಿಸುತ್ತಾರೆ. ಶೇಣಿಯವರ ಪಾತ್ರ ವೈಖರಿಯ ಸೊಗಸು ಇರುವುದು ಇಲ್ಲೇ. ಮುಂದೆ ಬರುವ ಸನ್ನಿವೇಶಕ್ಕೆ ಪಾತ್ರವನ್ನು ಮೊದಲೇ ಸಿದ್ದಪಡಿಸುತ್ತಾರೆ. ಪ್ರಸಂಗ ನಡೆ ಮೊದಲೇ ಅರಿವಿದ್ದ ಪ್ರೇಕ್ಷಕ ಮಾತುಗಾರಿಕೆ ದಿಕ್ಕನ್ನು ಮೊದಲೇ ಊಹಿಸಿ ಅರ್ಥಗಾರಿಕೆಯನ್ನು ಮತ್ತಷ್ಟು ನಿರಾಳವಾಗಿ ಅನುಭವಿಸಬಹುದು. ನಿರಾಳವಾಗಿ ಎನ್ನುವುದಕ್ಕೆ ಮತ್ತಷ್ಟು ಅರ್ಥವಿದೆ. ತುದಿ ಬುಡ ಅರಿವಾಗದ ಸಂಭಾಷಣೆ ಹಲವುಸಲ ಪ್ರೇಕ್ಷಕನಿಗೆ ಮಾತುಗಾರಿಕೆಯ ಜಾಡನ್ನು ಹಿಡಿಯುವುದಕ್ಕೆ ಕಷ್ಟ ಪಡಬೇಕಾಗುತ್ತದೆ. ಹೀಗಾಗಿ ಪ್ರೇಕ್ಷಕ  ಗೊಂದಲದಲ್ಲಿ ಸಿಲುಕುವ ಹಾಗೆ ಆಗುತ್ತದೆ.  ಅಪ್ರತಿಮ ವಾಗ್ಮಿಗಳಾದರೆ ಹಲವು ಸಲ ಪ್ರೇಕ್ಷಕನಿಗೆ ಮಾತುಗಾರಿಕೆಯನ್ನು ಪೂರ್ಣವಾಗಿ ಅನುಭವಿಸುವುದಕ್ಕೆ ಅವಕಾಶವೇ ಸಿಗುವುದಿಲ್ಲ.
          ಇಲ್ಲಿ ರುಕ್ಮಾಂಗದ ಬೇಟೆಯಾಡಿ ಒಂದಷ್ಟು ವನವಿಹಾರವನ್ನು ಏಕಾಂತದಲ್ಲೇ ಅನುಭವಿಸುತ್ತಾನೆ. ಆವಾಗ ಮನುಷ್ಯನ ಜೀವನದ ಅಪೂರ್ಣತೆಯತ್ತ ದೃಷ್ಟಿ ಹೋಗುತ್ತದೆ. ಮನುಷ್ಯ ಎಂದು ಪೂರ್ಣತೆಯನ್ನು ಗಳಿಸುವುದೇ ಇಲ್ಲ. ಒಂದಲ್ಲ ಒಂದು ಅಪೂರ್ಣತೆ ಬದುಕಿನಲ್ಲಿ ಇದ್ದೇ ಇರುತ್ತದೆ. ಆ ಪೂರ್ಣತೆಯನ್ನು ಸಾಧಿಸುವುದೇ ಜೀವನಾಂತ್ಯದವರೆಗಿನ ಸಾಧನೆಯಾಗುತ್ತದೆ. ಇಲ್ಲಿ ಅರಮನೆಯಿಂದ ದೂರವಾಗಿ ಬಂದವನು ಕಟ್ಟಿಕೊಂಡು ಬಂದ ಬುತ್ತೀ ಊಟವನ್ನು ಉಣ್ಣುತ್ತಾನೆ. ಅರಮನೆಯ ನಿತ್ಯ ಮೃಷ್ಟಾನ್ನ ಉಂಡವನಿಗೆ ಈ ಸರಳ ಗಂಜಿ ಊಟವೂ ಮೃಷ್ಟಾನ್ನದ ಅಪೂರ್ಣತೆಯನ್ನೇ ತೋರಿಸುತ್ತದೆ. ಆ ಮಧುರ ಸ್ವಾದಕ್ಕೆ ಸಂತಸ ಪಡುತ್ತಾನೆ. ಅದಕ್ಕೆ ಒಂದು ಸಣ್ಣ ಉದಾಹರಣೆಯನ್ನು ಶೇಣಿಯವರು ನೀಡುವ ಬಗೆ ಹೀಗೆ,  ಹಳ್ಳಿಯ ಮಕ್ಕಳು ಶ್ರೀಮಂತರ ಮಕ್ಕಳೊಂದಿಗೆ ಬೆರೆವಾಗ ಒಳ್ಳೆಯ ರಸಬಾಳೆ ಹಣ್ಣನ್ನು ಬಯಸಿ ಕೇಳಿ ತಿನ್ನುವಾಗ, ಶ್ರೀಮಂತರ ಮಕ್ಕಳು ಹಳ್ಳಿಯವರಿಗೆ ಬೇಡದೇ ಆದ ಗೇರು ಹಣ್ಣು ಉಂಟ ಅಂತ ಕೇಳುವುದು. ಇದು ಎರಡೂ ಕಡೆ ಇರುವ ಅಪೂರ್ಣತೆಯನ್ನು ತೋರಿಸುತ್ತದೆ. ಸೂಚ್ಯವಾಗಿ ಅರಸನಾದ ರುಕ್ಮಾಂಗದ ಯಾವೂದೋ ಅಪೂರ್ಣತೆಯನ್ನು ಅನುಭವಿಸುತ್ತಾನೆ ಎಂಬುದು ಸ್ಪಷ್ಟವಾಗುತ್ತದೆ.
          ಎಲ್ಲ ಸುಖ ಸೌಭಾಗ್ಯಗಳು ಇದ್ದ ರುಕ್ಮಾಂಗದ ಸುಖದ ಹಾದಿ ತೋರಿಸಿ ಎಂದು ನಾರದರಿಗೆ ಶರಣು ಹೋಗುತ್ತಾನೆ. ನಾರದರ ಉಪದೇಶವನ್ನು ಗ್ರಹಿಸುತ್ತಾನೆ. ವೈರಾಗ್ಯ ಬಡವನಿಗೆ ಬಂದರೆ ಪ್ರಯೋಜನ ಇಲ್ಲ. ವೈರಾಗ್ಯ ಬಂದರೆ ಅದು ಶ್ರೀಮಂತನಿಗೆ ಬರಬೇಕು. ಬಲು ದೊಡ್ಡ ಅತೃಪ್ತಿ ಅದು ಶ್ರೀಮಂತಿಕೆಯಲ್ಲೇ ಬರುತ್ತದೆ. ಬಡವನಲ್ಲಿ ಆ ಅತೃಪ್ತಿ ಬಂದಲ್ಲಿ ಅದು ನಷ್ಟವಾಗುವುದಕ್ಕೆ ಏನೂ ಇರುವುದಿಲ್ಲ.
          ಹೊಟ್ಟೆತುಂಬ ಊಟ ಮಾಡಿ ಮಲಯಾಚಲದ ಮಲಯ ಮಾರುತಕ್ಕೆ ಮೈ ಒಡ್ಡಿದಾಗ ಮತ್ತೊಂದು ಅತೃಪ್ತಿ ಹೆಡೆಯಾಡುತ್ತದೆ. ಅದರ ಸಂಕೇತವೆಂಬಂತೆ ಮಲಯಾಚಲದ ಮಾರುತದಲ್ಲಿ ಗಾಯನವೊಂದು ಕೇಳಿ ಬರುತ್ತದೆ. ಮಧುರವಾದ ಗಾಯನವನ್ನು ಹೊಗಳುವ ಪರಿ ಹೀಗಿದೆ.
          ಈ ಸಂಗೀತವನ್ನು ಶುಷ್ಕವಾದ ಶಬ್ದ ಪ್ರಪಂಚದಿಂದ ವರ್ಣಿಸುವುದಕ್ಕೆ ಸಾಧ್ಯವಿಲ್ಲ.  ವರ್ಣಿಸಿದರೆ ಅದರ ಮಾಧುರ್ಯ ಕೆಡ್ತದೆ. ಸಕ್ಕರೆಯ ಸಿಹಿಯನ್ನು ಏನೂಂತ ವರ್ಣನೆ ಮಾಡಬಹುದು? ಸಿಹಿಯಾಗಿದೆ. ಯಾವ ಸಿಹಿ? ಪ್ರಿಯವಾದ ರಾಗವಿದು ಕಲ್ಯಾಣಿರಾಗ  ಇಂಪಾಗಿ ಅಲೆ ಅಲೆಯಾಗಿ ತೇಲಿ ಬರುತ್ತಿದೆ. ಇದನ್ನು ಏನು ವರ್ಣಿಸಿದರೂ ಅದು ಶುಷ್ಕ ಪಾಂಡಿತ್ಯವಾಗಿಬಿಡುತ್ತದೆ.  ಇದು ಸಂಗೀತದ ಅನುಭವ. ಈ ಅನುಭವ ಸವಿಯಾಗಿದೆ. ಆದರೆ ಇದಕ್ಕಿಂತಲೂ ಇದರ ನೆನಪು ಸವಿ ಹೆಚ್ಚು.  ಅನುಭವ ಅದು ತಾತ್ಕಾಲಿಕ. ಆದರೆ ನೆನಪು ಅದು ಚಿರಕಾಲದ್ದು.
          ಕೇಳಿದ ಸಂಗಿತದಲ್ಲಿನ  ರಾಗದ ಅನುಭವದ ವರ್ಣನೆ ಹೀಗೆ, ಕೇವಲ ಒಂದು ಸ್ವರ ಬದಲಾವಣೆಯಿಂದ ಮೇಳವೇ ಬೇರೆ ಆಗಿ ಹೋಯಿತು. ಪ್ರತಿ ಮಧ್ಯಮವನ್ನು ಸೇರಿಸಿದಾಗ ಕಲ್ಯಾಣಿ ರಾಗವಾದಂತೆ ಪ್ರತಿ ಮಧ್ಯಮದ ಬದಲಿಗೆ ಶುದ್ಧ ಮಧ್ಯಮವನ್ನು ಸೇರಿಸಿದಾಗ ವರ್ಗವೇ ಬೇರಾಗಿ ರಾಗ ಶಂಕರಾಭರಣವಾಗಿಬಿಟ್ಟಿತು. ಏನು ಶಂಕರಾಭರಣವಿದು. ಇದಕ್ಕೆ ಕೇವಲ ಕಿವಿ ಇದ್ದರೆ ಸಾಲದು. ಹೃದಯದಲ್ಲೂ  ಗೊತ್ತಿರಬೇಕು. ಆಗ ಇದರ ಅನುಭವ ಹೃದ್ಯವಾಗುತ್ತದೆ.
          ಎಂತಹಾ ಶ್ರುತಿ ಮಧುರವಾದ ಗಾಯನವಿದು. ಗಾಯನಕ್ಕೆ ಶ್ರುತಿ ಅಧಾರವಾಗಿರುತ್ತದೆ. ಶ್ರುತಿ ಅದು ತಾಯಿ ಇದ್ದ ಹಾಗೆ. ಲಯ ಅದು ತಂದೆ ಇದ್ದಹಾಗೆ. ಕೆಲವೊಮ್ಮೆ ತಂದೆಯ ಗುರುತಿಲ್ಲದಿದ್ದರೂ ಅದರ ಇರವಿನ ಅರಿವು ಇದ್ದರೆ ಸಾಕಾಗ್ತದೆ. ಅದು ಏನು ಎಂಬ ಅರಿವು ಇದ್ದರೆ ಸಾಕು. ಆದರೆ ತಾಯಿ ಗುರುತಿಲ್ಲದೇ ಇದ್ದರೆ ಬದುಕು ಹೇಗಾದೀತು?  ಶ್ರುತಿ ಆದ ಮೇಲೆ ಲಯ.
          ಈ ಪ್ರಪಂಚದ ಉತ್ಪತ್ತಿ ಕಾರಣೀ ಭೂತವಾದ ನಾದ, ನಾದದ ಮೂಲವೇ ಓಂಕಾರ. ನಾದದಿಂದಲೇ ಮಂತ್ರ. ಮಂತ್ರೋಚ್ಚಾರಕ್ಕೆ ನಾದವೇ ಪ್ರಧಾನ. ಹೀಗೆ  ನಾದದಿಂದ ಪ್ರಪಂಚ ಉತ್ಪತ್ತಿಯಾದಹಾಗೆ ತನ್ನ ಹೃದಯದಲ್ಲಿ ಕೇಳಿದ ಸಂಗೀತದ ನಾದದ ಅಲೆಯನ್ನು ಉತ್ಪತ್ತಿಗೊಳಿಸಿತು. ಈ ನಾದದ ಶಬ್ದ ಮನಸ್ಸಿನಲ್ಲಿ ಬಯಕೆಗಳನ್ನು ಹುಟ್ಟಿಸಿ ಹಾಕುತ್ತದೆ. ಒಂದು ಸಲ ಈ ನಾದಮಯ ಶಬ್ದ ಕೇಳಿಸಿತೋ ಆನಂರ ಸ್ಪರ್ಶದ ಬಯಕೆಯಾಗುತ್ತದೆ. ಶಬ್ದ ಸ್ಪರ್ಶ ಎರಡು ಅನುಭವಾದಾಗ ರೂಪ ದರ್ಶನದ ಬಯಕೆಯಾಗುತ್ತದೆ. ಇವಿಷ್ಟು ಬಯಕೆಗಳು ಮನಸ್ಸಿನಲ್ಲಿ ಉತ್ಪತ್ತಿಯಾದಮೇಲೆ ನಂತರದ ಬಯಕೆಗಳು ಅನಿವಾರ್ಯವಾಗಿ ಬಿಡುತ್ತದೆ.ಎಂತಹಾ ಸುಂದರ ವಿಶ್ಲೇಷಣೆಯಿದು?

          ನಾದ ಸ್ಪರ್ಶ ಅನುಭವವಾದ ಮೇಲೆ ರಸ ಗಂಧ ಇವುಗಳ ಬಯಕೆ ಅನಿವಾರ್ಯವಾಗಿಬಿಡುತ್ತದೆ. ಶಬ್ದ ಸ್ಪರ್ಶ ಆದನಂತರ??? ರುಕ್ಮಾಂದನ  ಮನಸ್ಸು ಆ ರೂಪದರ್ಶನಕ್ಕೆ ತವಕಿಸುತ್ತದೆ. 

(ಮುಂದುವರೆಯುವುದು)