
ಅಂದು ನನ್ನ ಬಾಲ್ಯದ ದಿನಗಳು. ತುಂಬಾ ಬಡತನದ ದಿನಗಳು. ಆವಾಗ ನನ್ನ ಅಜ್ಜನೊಂದಿಗೆ ಹೆಗಲಲ್ಲಿ ಜೋಳಿಗೆ ನೇತಾಡಿಸಿಕೊಂಡು ಪೌರೋಹಿತ್ಯಕ್ಕೆ ಹೋಗುವ ಕಾಲಘಟ್ಟ. ಸಾಧಾರಣ ಮೈಲು ಗಟ್ಟಲೆ ನಡೆದೇ ಹೋಗುವುದು ಮತ್ತು ಒಂದು ಮನೆಯ ಸಮಾರಂಭಕ್ಕೆ ಹೋದೆವೆಂದರೆ ಆ ಮನೆಯಲ್ಲಿ ೩-೪ ದಿನ ವಾಸ್ತವ್ಯ. ಕೆಲವೊಮ್ಮೆ ಒಂದು ತರಹದ ಶಿಕ್ಷೆ ಎಂದೆನಿಸುತ್ತಿತ್ತು. ಆದರೂ ಹೊಟ್ಟೆ ತುಂಬಾ ಊಟ ಕೈಗೆ ಅಲ್ಪ ಸ್ವಲ್ಪ ದಕ್ಷಿಣೆ, ಬಟ್ಟೆ ಇಂತಹ ಲೋಭ ಅಪೇಕ್ಷಿತನಾಗಿ ಏನೋ ಅಜ್ಜನ ಜತೆ ಹೋಗುತ್ತಿದ್ದೆ. ಅಜ್ಜನಿಗೂ ನಾನೆಂದರೆ ಒಂದು ಸಲೀಸು. ಯಾಕೆಂದರೆ ಅವರಿಗೆ ಎದುರಾಡುವ ಸ್ವಭಾವ ನನ್ನದಾಗಿರಲಿಲ್ಲ. ಒಂದು ರೀತಿಯ ನನ್ನ ಸಾಧುತನ (ಇದು ನಾನು ತಿಳಿದುಕೊಂಡದ್ದು) ಇಷ್ಟವಾಗಿತ್ತೋ ಏನೋ. ಅಜ್ಜ ಎಂದರೆ ನನ್ನ ತಾಯಿಯ ತಂದೆ.ಹೆಸರು ಮಠ ಅಚ್ಚುತ ಭಟ್ಟ.ಸಾಧಾರಣ ಊರೆಲ್ಲ ಬಲ್ಲ ವ್ಯಕ್ತಿ. ಋಗ್ವೇದ ಪಾರಂಗತರಾದ ಅವರಲ್ಲಿ ಕೆಲವು ಸಮಯ ವೇದ ಮಂತ್ರ ವಿದ್ಯಾರ್ಥಿಯಾಗಿದ್ದೆ. ಅದೇ ಜೀವನ ತುಂಬಾ ಮೇಲ್ಮಟ್ಟದ್ದು ಅಂತ ಈಗಿನ ಮನೋಭಾವಕ್ಕೆ ಯೋಚನೆ ಬರುವುದುಂಟು.
ಆವಾಗ ಚೇವಾರು ನಮ್ಮ ಪೈವಳಿಕೆ ಪಂಚಾಯತಿನ ಕುಗ್ರಾಮ. ಈಗಿರುವ ಡಾಮರು ರಸ್ತೆ ಆವಾಗ ಕಲ್ಲು ಮಣ್ಣಿನ ಕಚ್ಚಾ ರಸ್ತೆಯಾಗಿತ್ತು.ದಿನದಲ್ಲಿ ಶಂಕರ್ ವಿಟ್ಟಲ್ ಬಸ್ ಒಂದು ಸಲ ಬಂದು ಹೋಗುತ್ತಿತ್ತು.ಅವಾಗ ನಮಗೆಲ್ಲ ಬಸ್ ಪ್ರಯಾಣ ಕನಸಿನ ಪ್ರಯಾಣ. ಕಾಲಿಗೆ ಚಪ್ಪಲಿಯೂ ಇಲ್ಲದೆ ಆ ಗುಡ್ಡ ಕಾಡಿನಲ್ಲಿ ತುಂಡು ಬೈರಾಸು ಉಟ್ಟು ನಡೆಯುತ್ತಿದ್ದ ದಿನಗಳನ್ನು ನೆನದರೆ ಕಷ್ಟವಾದರೂ ಈಗ ಅನ್ನಿಸುತ್ತದೆ ಎಂತಹ ಸುವರ್ಣಯುಗ.!!!
ಚೇವಾರು ಎಂದರೆ ಆಗ ಒಂದು ಶಾಲೆ, ಒಂದು ಸರ್ಕಾರೀ ಆಸ್ಪತ್ರೆ (ಅದು ಕೇವಲ ಒಂದು ಸಣ್ಣ ಕೋಣೆ ಮಾತ್ರ), ಒಂದು ಸಣ್ಣ ಹೋಟೆಲು , ಒಂದು ಗೂಡಂಗಡಿ, ಕಮ್ತಿ ಯವರ ರೇಶನ್ ಅಂಗಡಿ, ಒಂದು ಟೈಲರ್ ಶಾಪು, ಹೀಗೆ ಎಂದು ನೆನಪು. ಇಂತಹ ಚೇವಾರಿನ ದೊಡ್ಡ ಮನೆಯೊಂದರಲ್ಲಿ ಆದಿನ ಉಪಯನ ಸಂಸ್ಕಾರ. ನಮ್ಮಜ್ಜ ಪುರೋಹಿತರು. ನಾನು ಅವರ ಬಾಲಂಗೋಚಿ.
ದೊಡ್ಡ ಮನೆ ಬೇರೆ ಯಾರದ್ದೂ ಅಲ್ಲ ಆವಾಗ ಯಕ್ಷಗಾನದ ಚೆಂಡೆ ಮದ್ದಲೆ ಸದ್ದು ದಿನನಿತ್ಯ ಮೊಳಗುವ ಕಮ್ತಿಯವರ ಮನೆಯಾಗಿತ್ತು. ತುಂಬಾ

ದೊಡ್ಡ ಮನೆ. ಹಾಗೂ ಊರಿನ ಗಣ್ಯ ವ್ಯಕ್ತಿಗಳೂ ಆಗಿದ್ದರು. ಪ್ರಖ್ಯಾತ ಚೆಂಡೆ ಮದ್ದಲೆ ವಾದಕರಾದ ಚೇವಾರು ರಾಮಕೃಷ್ಣ ಕಾಮತ್ ಮತ್ತು ಜನಾರ್ದನ ಕಾಮತ್ ಅವರುಗಳ ಮನೆಯಾಗಿತ್ತು. ಅವರ ಮಕ್ಕಳ ಉಪನಯನ ಕಾರ್ಯಕ್ರಮ ಎಂದೇ ನನ್ನ ನೆನಪು.ಈ ವಿವರಣೆಗಳು ಪ್ರತಿ ಶತ ಕರಾರುವಾಕ್ ಎಂದು ಹೇಳುವುದಿಲ್ಲ. ಆದರೆ ನಾನು ಹೇಳುವಂತಹ ಮುಖ್ಯ ವಿಷಯಗಳಿಗೆ ಕೇವಲ ಇದು ವಿಶೇಷಣ ಅಷ್ಟೇ.ನೆನಪಿನ ಸುಳಿಯಿಂದ ಒಂದೊಂದೇ ಆಯ್ಕೆ ಮಾಡಿ ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ಇದು ಎಷ್ಟು ಪ್ರಾಮುಖ್ಯವೋ ಅದು ನನಗೆ ತಿಳಿಯದು.
ರಾಮಕೃಷ್ಣ ಕಮ್ತಿಗಳು ಚೆಂಡೆ ಕಮ್ತಿಗಳು ಎಂದೇ ನನ್ನ ಅಜ್ಜ ಹೇಳುವ ರೀತಿ.ಅಜ್ಜ ಹೇಳುವಂತೆ ಅವರ ಚೆಂಡೆವಾದನ ತುಂಬಾ ಇಷ್ಟ ಪಡುತ್ತಿದ್ದರು. ಬಲು ದೂರದವರೆಗೆ ಮೈಕಿಲ್ಲದೆ ಸ್ಪಷ್ಟವಾಗಿ ಕೇಳುತ್ತಿದ್ದ ಅವರ ಚೆಂಡೆ ಪೆಟ್ಟುಗಳ ಬಗ್ಗೆ ಸದಾ ಹೇಳುತ್ತಿದ್ದರು.ಅಬ್ಬರದ ಚೆಂಡೆ ಅವರದ್ದು ಎಂದು ಒಂದು ಪ್ರತೀತಿ ಇತ್ತು. ನಮ್ಮ ಸುತ್ತ ಮುತ್ತಲಿನ ಯಕ್ಷಗಾನ ಕಾರ್ಯಕ್ರಮದಲ್ಲಿ ಚೆಂಡೆ ಕಮ್ತಿಯರ ಚೆಂಡೆ ಇಲ್ಲವಾದರೆ ಅದು ಸಪ್ಪೆ ಎಂದು ಹಲವರು ಹೇಳುವುದನ್ನು ಹಲವು ಸಲ ಕೇಳಿದ್ದೇನೆ. ಅವರ ತಮ್ಮ ಚೇವಾರು ಜನಾರ್ದನ ಕಾಮತ್. ಇವರೂ ಹಾಗೆ ಚೆಂಡೆ ಮದ್ದಲೆ ವಾದಕರು. ಹಾಗೆ ಹೇಳುವದಾದರೆ ಆ ಮನೆಯಲ್ಲಿ ಎಲ್ಲರೂ ಕಲಾವಿದರೆ ಎಂದು ನನ್ನ ಭಾವನೆ. ಚೇವಾರು ಶಂಕರ್ ಕಾಮತ್ ಕೂಡ ಉತ್ತಮ ಕಲಾವಿದ. ಇದಕ್ಕಿಂತ ಹೆಚ್ಚಾಗಿ ಅಲ್ಲಿಯ ಬಗ್ಗೆ ನನಗೆ ತಿಳಿಯದು.ಅಲ್ಪ ಸ್ವಲ್ಪ ಹಿರಿಯರು ಹೇಳಿದುದೆ ನನ್ನ ತಿಳುವಳಿಕೆ.
ಈ ಇಬ್ಬರು ವ್ಯಕ್ತಿಗಳು ನಾನು ಯಕ್ಷಗಾನದ ವೇದಿಕೆಯಲ್ಲಿ ಕಂಡ ಪ್ರಥಮ ಚೆಂಡೆ ಮದ್ದಲೆ ವಾದಕರು ಇದು ನನಗೆ ಚೆನ್ನಾಗಿ ನೆನಪಿದೆ. ಚೇವಾರು ಶಾಲೆಯಲ್ಲಿ ನಡೆದ ಯಾವುದೊ ಕಾರ್ಯಕ್ರಮಕ್ಕೆ ಯಕ್ಷಗಾನ ಬಯಲಾಟವಿತ್ತು. ಪ್ರಸಂಗ ಇನ್ನು ನೆನಪಿದೆ. ಕರ್ಣಾವಸಾನ. ದೇವಕಾನ ಕೃಷ್ಣ ಭಟ್, ಪೂಕಳ ಲಕ್ಷ್ಮೀನಾರಯಣ ಭಟ್, ಕಟ್ಟದ ಮನೆ ಕೃಷ್ಣ ಭಟ್ ಹೀಗೆ ಕಲಾವಿದರು ಇದ್ದುದು ನೆನಪು. ಆವಾಗ ಕಮ್ತಿಯರ ಚೆಂಡೆ ಕೇಳಿದ್ದೆ.ಆಗಿನ ಆಟಗಳೆಲ್ಲ ತುಂಬಾ ಸರಳವಾದ ಯಕ್ಷಗಾನ ಪ್ರದರ್ಶನಗಳು. ಈಗೀಗ ಮಸಾಲೆ ಅಧಿಕವಾಗಿ ಯಕ್ಷಗಾನ ಮರೆಯಾಗಿದೆ.

ಆದಿನ ಅಂದರೆ ಆ ಮನೆಯ ಸಮಾರಂಭದ ಕೊನೆಯ ದಿನವೋ ನೆನಪಿಲ್ಲ ದೊಡ್ಡದಾಗಿ ಮೈಕು ಹಾಕಿದ್ದರು. ಆಗಿನ ಮೈಕು ಎಂದರೆ ಮನೆಯ ಹತ್ತಿರದ ದೊಡ್ಡ ಮರದ ತುದಿಗೆ ಕಟ್ಟುವುದು. ಅದು ಊರೆಲ್ಲ ಸಮಾರಂಭ ಇಲ್ಲೇ ಎಂದು ಸಾರುತ್ತಿತ್ತು. ಮೈಕದಲ್ಲಿ ಸ್ವ ಅಭಿಮಾನದ ಪ್ರತೀಕವೆಂಬಂತೆ ಯಕ್ಷಗಾನ ಒಂದು ಮೊಳಗುತ್ತಿತ್ತು. ನಾನು ಅಂಗಳದ ಮೂಲೆಯಲ್ಲಿಟ್ಟ ಈಸಿಚೆಯರ್ ನಲ್ಲಿ ಒರಗಿ ಯಕ್ಷಗಾನ ಆಲಿಸುತ್ತ ಎರಡು ಕೈಗಳಿಂದ ಈಸಿಚೆಯರ್ ಆಕಡೆ ಈಕಡೆ ಮದ್ದಲೆಯಂತೆ ಬಾರಿಸುತ್ತ ಒಂದು ವಿಧದಲ್ಲಿ ತಲ್ಲೀನನಾಗಿದ್ದ ನೆನಪು. ಹೊರಗೆ ಏನು ಇದೆ ಎಂಬುದರ ಪರಿವೆ ಇಲ್ಲ. ಅದೊಂದು ರೀತಿ ಯಕ್ಷಗಾನದ ಮರುಳು. ಅದು ಈಗಲೂ ಇದೆ, ಕೆಲವೊಮ್ಮೆ ಹೊರ ಪ್ರಪಂಚದ ಅರಿವು ಮರೆತು ಕೈಯಾಡಿಸಿ ಮುಜುಗರ ಅನುಭವಿಸಿದ್ದಿದೆ.
ಹೀಗೆ ತಲ್ಲೀನನಾಗಿದ್ದಾಗ ಜನಾರ್ದನ ಕಮ್ತಿಯರು ಬಂದು ನನ್ನಲ್ಲಿ ಕೇಳಿದರು " ನೀನು ಮದ್ದಲೆ ಬಾರಿಸ್ಲಿಕ್ಕೆ ಕಲಿಯುತ್ತಿಯ ?" ಒಂದು ಕ್ಷಣ ವಿಚಲಿತವಾಯಿತು ಮನಸ್ಸು. ಏನು ಹೇಳಬೇಕೆಂಬುದೇ ತೋಚಲಿಲ್ಲ. ಉತ್ಸಾಹವೇನೋ ಇತ್ತು. ಒಂದೇ ಏಟಿಗೆ ಉತ್ತರ ಹೇಳುವ ಮನೋಭಾವ, ಹಾಗು ಪರಿಸ್ಥಿತಿ ನನ್ನದಲ್ಲ. ಅಜ್ಜನಲ್ಲಿ ವೇದ ಮಂತ್ರಗಳ ಪಾಠವೆ ಸರಿಯಾಗಿ ಕಲಿಯಲು ಅಸಾಧ್ಯವಾದ ಕಾಲ. ಹೊಟ್ಟೆ ಹಸಿವು ನಾಳೆ ಮನೆಯಲ್ಲಿ ಊಟವ ಹೊರಗೆ ಊಟವ ಎಂಬಂತ ಸ್ಥಿತಿ. ಸ್ವತಂತ್ರವಾಗಿ ನಮ್ಮ ನಿಲುಮೆಯನ್ನು ಹೇಳಿಕೊಳ್ಳಲಾಗದ ಅಸಹನೀಯ ಬದುಕು. "ಅಜ್ಜನಲ್ಲಿ ಕೇಳ್ಬೇಕು " ಎಂದು ಒಂದು ರೀತಿ ಹುಡುಗಾಟಿಕೆಯಲ್ಲೇ ಉತ್ತರಿಸಿದೆ. ಅವರು ಏನು ತಿಳಿದುಕೊಂಡರೋ ತಿಳಿಯದು. ಮತ್ತೆ ಅಜ್ಜನಲ್ಲೂ ಇದನ್ನೇ ಪ್ರಸ್ತಾಪ ಮಾಡಿದರು. ಅಜ್ಜ ನನ್ನನ್ನು ದುರುಗುಟ್ಟಿದಾಗ ಮುಂದಿನದು ಏನೆಂದು ಹೇಳುವುದು? ವಾಪಸಾಗುವಾಗ ಅಜ್ಜನಿಂದ ಎಚ್ಚರಿಕೆಯ ಸಮಾಧಾನ.
" ನಿನಿಗೆ ನಾನೇ ಗುರು. ನನ್ನಿಂದ ಮೇಲಿನ ಗುರು ನಿನಗೆ ಬೇಡ."
ಅಂತೂ ನನ್ನಲ್ಲಿ ಮದ್ದಲೆಗಾರನಾಗುವ ಲಕ್ಷಣ ಆ ಮಹನೀಯರು ಹೇಗೆ ಕಂಡುಕೊಂಡರೋ ಅಂತೂ ಒಬ್ಬ ಕಲಾವಿದನಾಗುವ ಅವಕಾಶ ಇಲ್ಲವಾಯಿತು.
ಹೀಗೆ ಮದ್ದಲೆ ಎಂದರೆ ಒಂದು ತರಹ ಮನಸ್ಸಿಗೆ ಮುದನೀಡುವ ಸಾಧನವಾಯಿತು. ನನ್ನ ತಂದೆಯವರೂ ಮೃದಂಗ ವಾದಕರಾಗಿದ್ದರು. ಅವರು ಈ ಯಕ್ಷಗಾನದ ಪದ್ದತಿಯಲ್ಲ. ಕರ್ನಾಟಕ ಸಂಗೀತವೋ ಅದರ ರೀತಿ ಏನೆಂದು ನನಗೆ ಈಗಲೂ ತಿಳಿದಿಲ್ಲ. ಭರತ ನಾಟ್ಯಕ್ಕೆ ಮೃದಂಗವಾದಕರಾಗಿ ಹೋಗುತ್ತಿದ್ದರು. ಮಂಗಳೂರಿನ ಕಲಾನಿಕೆತನದಲ್ಲಿ ಮಾಸ್ತರಾಗಿ ಕೆಲಸ ಕೂಡ ಮಾಡ್ತಿದ್ದರು ಎಂದು ಕೇಳಿದ್ದೆ. ಆದರ ಬಾಲ್ಯದಿಂದಲೇ ಅವರ ಸಂಸರ್ಗವನ್ನು ಕಳೆದುಕೊಂಡೋ ಅಂತೂ ಅವರ ಬಗೆಗಿನ ಅರಿವು ಮಿತಿಯೊಳಗೆ ಮಾತ್ರ. ಬಹುಶಃ ಈ ಅನುವ0ಷಿಕ ಗುಣ ನನ್ನಲ್ಲಿ ಕಂಡುಕೊಂಡರೋ ತಿಳಿಯದು.ಮದ್ದಲೆ ವಾದನ(ಕೇಳುವುದು ಮಾತ್ರ) ಎಂದರೆ ಈಗಲೂ ನನ್ನಾಸಕ್ತಿ. ಅದು ಶಾಸ್ತ್ರಿಯ ಸಂಗೀತವೇ ಇರಲಿ, ಯಕ್ಷಗಾನವೇ ಇರಲಿ.

ಮದ್ದಲೆ ಮತ್ತು ಮೃದಂಗ ಹಲವರಿಗೆ ತಿಳಿದಿದೆಯೋ ಇಲ್ಲವೊ ಎರಡೂ ವಿಭ್ಭಿನ್ನ ಪ್ರಾಕಾರ ಎಂದು ನನಗೆ ಕೆಲವು ಸಮಯಗಳ ಮೊದಲು ತಿಳಿಯುತು. ಮೃದಂಗ ಎಂದರೆ ಮದ್ದಲೆಯ ನವೀಕೃತ ಹೆಸರೋ ಎಂದು ಸಣ್ಣವರಿರುವಾಗ ಭಾವಿಸಿದ್ದೆವು.ಮೃದಂಗ ಮದ್ದಲೆಯಿಂದ ಸ್ವಲ್ಪ ಉದ್ದ ಕಡಿಮೆ.ಮದ್ದಲೆ ಉದ್ದವಾಗಿ ಸುಮಾರು ೨೧ ರಿಂದ ೨೩ ಇಂಚು ಇದ್ದು ಮೃದಂಗ ೧೯ ರಿಂದ ೨೦ ಇಂಚು ಉದ್ದ ಇದೆ. ಮೃದಂಗದ ಶ್ರುತಿ ಸ್ವಲ್ಪ ಇಳಿ ಶ್ರುತಿಯಿದ್ದು ಎಡ ಬಲ ಸಾಮನ್ಯ ಒಂದೇ ರೀತಿ ಇದೆ. ಮದ್ದಲೆಯ ಎಡ ಬಲ ತುಸು ವೆತ್ಯಾಸದಿಂದ ಕೂಡಿದೆ. ಇದು ನನಗೆ ಇತ್ತೀಚೆಗಷ್ಟೇ ತಿಳಿದು ಬಂತು. ಯಕ್ಷಗಾನದಲ್ಲಿ ಈಗ ಮದ್ದಲೆ ಬಾರಿಸುವವರು ಇಲ್ಲವೇ ಇಲ್ಲ ಎಂದು ನನ್ನ ಅನಿಸಿಕೆ. ಅದನ್ನು ಬಾರಿಸುವುದು ತುಂಬಾ ಕಠಿಣ ಎಂದು ಕೇಳಿದ್ದೇನೆ.
ಯಕ್ಷಗಾನದಲ್ಲಿ ಮದ್ದಲೆ ವಾದಕರು ಶ್ರುತಿಯವನನ್ನು ಬಿಟ್ಟರೆ ಭಾಗವತರಿಗೆ ತೀರ ಹತ್ತಿರದವರು. ಆದರೆ ಶ್ರುತಿ ಬಾರಿಸಲು ಹೆಚ್ಚೇನು ನೈಪುಣ್ಯತೆ ಅವಶ್ಯಕತೆ ಇಲ್ಲ. ಹಾಗಾಗಿ ಭಾಗವತರ ಆತ್ಮಕ್ಕೆ ಹತ್ತಿರವಾಗುವವರು ಮದ್ದಲೆಯವರು, ಚೆಂಡೆಯವರು ಆನಂತರವೇ. ಆದರೆ ಇತ್ತೀಚಿಗೆ ಯಕ್ಷಗಾನದಲ್ಲಿ ಚೆಂಡೆ ಸದ್ದು ಅಧಿಕವಾದಂತೆ ಯಕ್ಷಗಾನ ಕಂಡಾಗ ನನಗೆ ಅನ್ನಿಸುತ್ತದೆ. ನನ್ನ ಅನಿಸಿಕೆ ಪ್ರಕಾರ ಭಾಗವತಿಕೆ ರೈಸುದು ಮದ್ದಲೆವಾದನ ಮಾತ್ರ ಇರುವಾಗಲೇ. ಹಿಮ್ಮೇಳದ ಸದ್ದು ದೂರದಲ್ಲಿ ನಿಂತು ಗಮನಿಸಿದರ ಮದ್ದಲೆಯ ನಿನಾದವೇ ಪ್ರಧಾನವಾಗಿ ಅಂತರಾಳದ ಧ್ವನಿಯಂತೆ ಮೊಳಗುತ್ತದೆ. ಒಂದು ರೀತಿಯ ಹೃದಯದ ಮಿಡಿತ ಇದ್ದ ಹಾಗೆ. ಆದರೆ ಯಕ್ಷಗಾನ ಎಂದರೆ ಚೆಂಡೆಯ ಅಬ್ಬರವೇ ಕಣ್ಣುಮುಂದೆ ನಿಲ್ಲುವುದು. ಅದೊಂದು ರೀತಿಯ ತಪ್ಪು ಕಲ್ಪನೆ ಎಂದೇ ನನ್ನ ಅನಿಸಿಕೆ. ಸಮರ್ಥ ಭಾಗವತ ಯಾವುದೇ ಪದವನ್ನಾದರೂ ಕೇವಲ ಶ್ರುತಿ ಮತ್ತು ಮದ್ದಲೆ ವಾದನದಲ್ಲೇ ಮೇಲೆ ಹಾಕಬಲ್ಲ.ಮದ್ದಲೆಗೆ ಪ್ರಾಧಾನ್ಯತೆ ಕೊಟ್ಟಲ್ಲಿ ಯಕ್ಷಗಾನ ಹೆಚ್ಚೆಚ್ಚು ಕಳೆಕಟ್ಟಬಲ್ಲುದು .
ಮದ್ದಲೆಯೂ ಕಲಾವಿದನೂ ಜತೆಯಾಗಿ ವಿಶ್ರಾಂತಿಯಲ್ಲಿ
ಚೆಂಡೆ ಇದ್ದರೆ ಅಥವಾ ಚೆಂಡೆಯ ಪದ ಇದ್ದರೆ ಮಾತ್ರ ಆಟ ರೈಸುದು ಎಂಬ ತಪ್ಪು ಕಲ್ಪನೆ ಹೆಚ್ಚಿನವರಲ್ಲಿ ಇದೆ. ತಾಳ ಲಯ ತಪ್ಪಿದರೆ ಯಾವ ಸಲಕರಣೆ ಇದ್ದರೂ ಅದು ಅಷ್ಟೇ.
ಈ ಮದ್ದಲೆ ವಾದನವನ್ನು ಈ ರೀತಿಯಾಗಿ ಹಿಮ್ಮೇಳದಲ್ಲಿ ತುಂಬಾ ಇಷ್ಟ ಪಡುತ್ತೇನೆ. ನಮ್ಮ ಬಲಿಪರು ಕೆಲವು ಪ್ರಸಂಗಗಳನ್ನು ಅದು ಚೆಂಡೆ ಪ್ರಸಂಗ ಇದು ಮದ್ದಲೆ ಪ್ರಸಂಗ ಅಂತ ವರ್ಗೀಕರಣ ಮಾಡ್ತಾರೆ. ಇದರಲ್ಲಿ ಮದ್ದಲೆ ಪ್ರಸಂಗ ಎಂದರೆ ನನಗೆ ತುಂಬಾ ಆನಂದವನ್ನು ಕೊಡುತ್ತದೆ.
ಹಲವು ಕಲಾವಿದರ ಶೈಲಿಯನ್ನು ಗುರುತಿಸಿದ್ದೇನೆ. ಮದ್ದಲೆಯಲ್ಲಿ ನಾನು ಅತ್ಯಂತ ಇಷ್ಟ ಪಟ್ಟ ಕಲಾವಿದ ಕಿರಿಯ ಕುದ್ರೆಕೊಡ್ಲು ರಾಮಭಟ್ . ಹಿರಿಯ ರಾಮಭಟ್ ಬಗ್ಗೆ ನಾನು ಹೇಳುವಲ್ಲಿ ತೀರ ಅಶಕ್ತ ಏಕೆಂದರೆ,ಅವರು , ನಾನು ಕಂಡೆ ಇಲ್ಲದ ಮಹಾನ್ ಕಲಾವಿದರು. ಕಿರಿಯರು ನನ್ನ ತಂದೆಯ ಸಹಚರರಾಗಿ ಇದ್ದುದನ್ನು ಕ್ಷೀಣವಾಗಿ ಮನಸ್ಸು ನೆನಪಿಸುತ್ತದೆ. ಅದಕ್ಕಾಗಿ ನಾನು ಇಷ್ಟವದದ್ದಲ್ಲ. ಹಲವು ವರ್ಷ ಮೊದಲು ಪೆರ್ಲ ಕೃಷ್ಣ ಭಟ್ ರವರ ತಾಳಮದ್ದಲೆ ಬಳಗವಿತ್ತು. ಅದರಲ್ಲಿ ಹಿಮ್ಮೇಳದಲ್ಲಿ ಬಲಿಪ್ಪರೊಂದಿಗೆ ಕುದ್ರೆಕೊಡ್ಲು ರಾಮಭಟ್ ಮತ್ತು ಪುಂಡಿಕ್ಕಾಯಿ ಕೃಷ್ಣ ಭಟ್ ಇದ್ದರು ಇವರ. ಹಿಮ್ಮೇಳ ಕೇಳುವುದೆಂದರೆ ಅದು ನಿಜಕ್ಕೂ ಒಂದು ಶ್ರೇಷ್ಠ ಹಿಮ್ಮೇಳ. ಬಲಿಪ್ಪರಿಗೆ ಹಿತವಾದ ಸಾಥ್ ನೀಡುವ ಈ ಚೆಂಡೆ ಮದ್ದಲೆ ವಾದಕರು ಅದ್ಭುತ ಲೋಕವನ್ನೇ ಸೃಷ್ಟಿಸ ಬಲ್ಲರು. ಇವರ ಜತೆಗಾರಿಕೆಯ ಹಲವು ಯಕ್ಷಗಾನಗಳು ನನ್ನ ಅಮೂಲ್ಯ ಸಂಗ್ರಹಗಳಲ್ಲಿ ಇವೆ. ಹೀಗೆ ರಾಮಭಟ್ ಮದ್ದಲೆ ಅಂದರೆ ಬಲಿಪ್ಪರಿಗೆ ಸರಿಯಾದ ಜತೆಗಾರಿಕೆ ಅಂತ ನನ್ನ ಭಾವನೆ. ನಾನು ಇಗಲೂ ಅದನ್ನು ತುಂಬಾ ತನ್ಮಯನಾಗಿ ಅನುಭವಿಸುವವನು. ಇನ್ನು ಮೊನ್ನೆ ನಮ್ಮನ್ನಗಲಿದ ಮಹಾ ಕಲಾವಿದ ಚಿಪ್ಪಾರು ಅವರ ಚೆಂಡೆಯ ಬಗ್ಗೆ ಹೆಚ್ಚಿನವರು ಹೊಗಳಿದರೆ ನಾನು ಅವರ ಚೆಂಡೆಗಿಂತ ಮದ್ದಲೆ ವಾದನವನ್ನು ಬಹಳವಾಗಿ ಇಷ್ಟಪಡುತ್ತೇನೆ. ಲೋಕ ಕಂಡ ಅದ್ಭುತ ಮದ್ದಲೆ ಅಥವಾ ಮೃದಂಗ ವಾದಕರು. ಹೀಗೆ ಹಲವರ ಕೈಚಳಕವನ್ನು ಸವಿಯುವ ಮನೋಭಾವ. ಗೋರೆ, ಪದ್ಯಾಣ ಶಂಕರಣ್ಣ, ಉಪಾದ್ಯಾಯ, ಇವರುಗಳ ಮದ್ದಲೆ ವಾದನ ಒಂದು ರಸಪೂರ್ಣ ಹಿಮ್ಮೆಳವಾಗಿರುತ್ತದೆ. ಹೀಗೆ ತೆಂಕು ಬಡಗು ಎರಡು ಶೈಲಿಯನ್ನು ರೂಢಿಸಿಕೊಂಡ ಅಡೂರು ಗಣೇಶ್ ರವರ ಮದ್ದಲೆ ಪ್ರತಿಬೆ ಕೂಡ ಪ್ರಶಂಸಾರ್ಹವೆ. ಹೊಸನಗರ ಮೇಳದ ಯುವ ಕಲಾವಿದ ಅಡೂರು ಹರೀಶ್ ಕೂಡ ಒಬ್ಬ ಉತ್ತಮ ಮದ್ದಲೆ ವಾದಕ. ಒಬ್ಬ ಉತ್ತಮ ಚೆಂಡೆ ವಾದಕ ಮದ್ದಲೆ ವಾದಕನಿಗೆ ರಂಗದಲ್ಲಿ ಮನ್ನಣೆ ಕೊಡುತ್ತಾನೆ. ಏಕೆಂದರೆ ಭಾಗವತನ ಪದದ ತಾಳ ಗುರುತಿಸುವ ಕೆಲಸ ಮದ್ದಲೆ ವಾದಕನದ್ದು. ಅನಂತರ ಚೆಂಡೆಯವನು ಹಿಂಬಾಲಿಸಬೇಕು. ಇದು ಕ್ರಮ. ಆದರೆ ಕೆಲವೊಮ್ಮೆ ಚೆಂಡೆ ಸುಮ್ಮನೆ ಹರಟೆ ಮಾಡಿ ಗೊಂದಲ ಮಾಡಿ ಮದ್ದಲೆ ವಾದನ ಕೇಳದಂತೆ ಮಾಡಿದಾಗ ನನ್ನಂತಹವನಿಗೆ ಅಸಹನೆಯಾಗುತ್ತದೆ.ಚೆಂಡೆವಾದಕ ಮದ್ದಲೆ ವಾದಕನನ್ನು ಹಿಂದಿಕ್ಕುವ ಧೋರಣೆ ತಳೆದರೆ, ಇಲ್ಲ, ಮದ್ದಲೆಗಾರನ ನಡೆ ಅರ್ಥವಾಗದೆ ಹೋದರೆ, ಇಂತಹ ಕಿರಿ ಕಿರಿಗಳು ಆಗುವುದು ಸಹಜ. ಇಬ್ಬರಲ್ಲೂ ಸ್ಪರ್ಧೆ ಇರದೇ ಪರಸ್ಪರ ಮಾನಸಿಕ ಹೊಂದಾಣಿಕೆ ಇದ್ದರೆ, ಅಂತಹ ಹಿಮ್ಮೇಳ ಒಂದು ರಸಗವಳವಿದ್ದಂತೆ. ಗೋರೆ ಮತ್ತು ದೇಲಂಥ ಮಜಲು ಈಗಿರುವಲ್ಲಿ ಉತ್ತಮ ಹೊಂದಾಣಿಕೆಯ ಹಿಮ್ಮೆಳವಾದಕರು. ಇದು ನನ್ನ ಅಭಿಮತ.
ಹಲವುಸಲ ಈ ಮದ್ದಲೆ ವಾದನದ ಲಯವಿನ್ಯಾಸ ಕೇಳಿದಾಗ ನಾನು ಮದ್ದಲೆಗಾರನಾಗದೆ ಇದ್ದರೂ ಪರವಾಗಿಲ್ಲ ಅದರ ಮಟ್ಟುಗಳ, ಧೀಂ...ತರಿಕಿಟ ...ತಾಳಗಳ ಅಲ್ಪ ಜ್ಞಾನವನ್ನಾದರೂ ಗಳಿಸಬೇಕೆಂಬ ಮಹದಾಸೆ ಇದೆ. ಆದರೆ ಇಂದಿಗೂ ನಾನು ಮದ್ದಲೆ ವಾದನ ತನ್ಮಯನಾಗಿ ಆಲಿಸುವ ಪ್ರೆಕ್ಷಕನಾಗಿಯೇ ಉಳಿದಿದ್ದೇನೆ. ಅದರೂ ಈ ರಸಾಸ್ವಾದನೆಗೆ ಎಲ್ಲ ತಿಳಿದಿರಬೇಕೆಂದು ನಿಯಮವೇನೂ ಇಲ್ಲವಲ್ಲ .ಮದ್ದಲೆ ವಾದನದ ಕುರಿತು ಬರೆಯುವ ಜ್ಞಾನ ನನ್ನಲ್ಲಿಲ್ಲ ಆದರೂ ಉತ್ತಮ ಮದ್ದಲೆ ವಾದನ ಕೇಳಿ ಆನಂದಿಸುವ ತುಡಿತ ಇದ್ದೆ ಇದೆ. ಅಡುಗೆ ರುಚಿ ಆಸ್ವಾದಿಸಲು ಅಡುಗೆ ಮಾಡಿ ತಿಳಿದಿರಬೇಕೆಂದೇನು ಇಲ್ಲವಲ್ಲ.ಉತ್ತಮವಾದ ಭಕ್ಷ್ಯದ ಗುಣಗಳನ್ನು ಹೇಳಲು ಅದು ಸರಿಯಾಗಿ ರುಚಿನೋಡುವ ಮನೋಭಾವ ಇದ್ದರೆ ಸಾಕು. ಎಲ್ಲರೂ ವರ್ತಕರಾದರೆ ಗ್ರಾಹಕ ಯಾರು.? ವೇದಿಕೆ ಕಲಾವಿದರಿಂದಲೇ ತುಂಬಿದರೆ ಪ್ರೇಕ್ಷಕನೂ ಬೇಕಲ್ಲ ? ಹಾಗಾಗಿ ಪ್ರಾಮಾಣಿಕವಾಗಿ ನನ್ನ ಅಭಿಪ್ರಾಯ ಇಷ್ಟೇ ಇಂದಿಗೂ ನಾನು ಯಕ್ಷಗಾನದ ಸಾಧಾರಣ ಪ್ರೇಕ್ಷಕ ಮಾತ್ರ.