"ಇದು ವಿಮರ್ಶೆಯಲ್ಲದ ಚಿಂತನ"

Tuesday, July 30, 2013

ಅಂತರಂಗದ ರಾವಣ ಭಾಗ ೫




ಯಾವುದೇ ವಸ್ತುವಿನ ಮೌಲ್ಯ ವೃದ್ಧಿಯಾಗುವುದು ಅದರ ಬೇಡಿಕೆ ಮತ್ತು ಜನಪ್ರಿಯತೆಗನುಸಾರ.  ಕಲೆಯ ಬಗ್ಗೆ ಅರಿವನ್ನು ಮೂಡಿಸಿ ಅದರ ಸ್ವಾದವನ್ನು ಅನುಭವಿಸುವಂತೆ ಮಾಡುವ ಪ್ರಚೋದನೆಯನ್ನು ಸೃಷ್ಟಿ ಮಾಡಬೇಕು ಕೇವಲ ಒಂದು ಆಟ ಒಂದು ತಾಳ ಮದ್ದಲೆ ಎಂಬಲ್ಲಿಗೆ ಇದು ಸೀಮಿತವಾಗದೆ ಅದರ ಅಸ್ವಾದನೆಯನ್ನು ತೋರಿಸಿಕೊಡಬೇಕು. ಅಸ್ವಾದಕರು ಆಸ್ವಾದನೆಯನ್ನು ಕಲಿತರೆ ಕಲೆ ತಾನಾಗಿ ಬೇಡಿಕೆಯನ್ನು ಜನಪ್ರಿಯತೆಯನ್ನೂ ವೃದ್ಧಿಸುತ್ತದೆ. ಒಂದು ಹೊಸದಾದ ಖಾದ್ಯ ಭಕ್ಷ್ಯವನ್ನು ಮಾಡಿದಾಗ ಅದರ ಅಸ್ವಾದನೆಯನ್ನು ತಿನ್ನುವ ಕ್ರಮವನ್ನು ಹೇಳಿಕೊಡುತ್ತಾರೆ. ಹೊಸತಾದ ಒಂದು ವಸ್ತು ಮಾರುಕಟ್ಟೆಗೆ ಬಿಡುವಾಗ ಅದರ ಬಳಕೆಯ ಬಗ್ಗೆಯೂ ತರಬೇತಿ ಕೊಡುತ್ತಾರೆ. ಒಂದು ವಸ್ತುವಿನ ಪೂರ್ಣ ಬಳಕೆಯ ಅರಿವಾದರೇ ಮಾತ್ರ ಆ ವಸ್ತು ಜನಪ್ರಿಯವಾಗಲು ಸಾಧ್ಯ. ಅಂತೇ ಯಕ್ಷಗಾನ ಕಲೆಯ ಅಸ್ವಾದನೆಯನ್ನೂ ತಿಳಿಸುವಂತಾಗಬೇಕು. 
‘ಮಗ ಮೇಘನಾದನ ಮರಣ‘ ಯೋಗ್ಯತಾವಂತ ಪುತ್ರನ ಮರಣ, ಅರಗಿಸಿಕೊಳ್ಳದಾದ ರಾವಣ.ಪರಾಜಯವನ್ನು ಮನಸ್ಸು ಸಾರಿಹೇಳಿದರೂ ಹಿಡಿದ ಛಲ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಮತ್ತೂ ಕ್ರೋಧಾವಿಷ್ಟನಾಗುತ್ತಾನೆ. ಇಂದ್ರಜಿತುವಿನ ಮರಣವನ್ನು  ಕಾಣುವ ರೀತಿ ಆ ದೃಷ್ಟಿ ಕೋನವೇ ಬೇರೆ.
“ ಆ ರಾಮ ಲಕ್ಷಣರ ಸಹಿತ......”
“ ಸೇಡು ಸೇಡು...ರಾಮಲಕ್ಷ್ಮಣರು ಇಬ್ಬರಲ್ಲಿ  ಆವಿರ್ಭವಿಸಿದ್ದು ಅಂದು. ಬೇಡದೇ ಇದ್ದ ಉದ್ಯೋಗ ಇದು ಅವರಿಗೆ. ಏನೇ ಆಗಲಿ ನನಗೆ ನೋವನ್ನುಂಟು ಮಾಡಿದರು. ನನ್ನ ಅಭಿಮಾನಕ್ಕೆ ಅವರು ಪ್ರತಿಸ್ಪರ್ಥಿಗಳಾದರು.ರೂಢಿಯ ಭಾಷೆಯಲ್ಲಿ ಹೇಳ್ತೇನೆ, ನನಗೆ ಪಂಥಾಹ್ವಾನವನ್ನು ಕೊಟ್ಟರು. ನನಗೆ ಸವಾಲಯಿತು ರಾಮಲಕ್ಷ್ಮಣರ ಕೃತಿ. ಅದನ್ನು ಸವಾಲನ್ನಾಗಿಯೇ ಸ್ವೀಕರಿಸಿದ್ದೇನೆ.ಆದರೇನಾದಿತು? ನನಗೆ ಗೊತ್ತುಂಟು ಪ್ರಪಂಚದಲ್ಲಿ ಇಬ್ಬರು ಸ್ಪರ್ಧಿಗಳಲ್ಲಿ ಇಬ್ಬರೂ ಜಯಿಸುವುದಿಲ್ಲ. ಜಯಿಸುವುದು ಯಾರಾದರೊಬ್ಬ. ನಾನು ಅದನ್ನು ಉದ್ದೇಶಿಸಿದವನಲ್ಲ. ಜಯ ಅಪಜಯವಲ್ಲ. ಯಾರು ಬದುಕುತ್ತಾರೆ ಯಾರು ಸಾಯ್ತಾರೆ ನೋಡುವ. ನೇರ ಯುದ್ದ,  ಸತ್ರೆ ಸತ್ತೇನು”

          “ಈಗ ನನಗೆ ತೋರ್ತದೆ ಏನೋ ಒಂದು ಕಾಣದ ಕೈಯ ಆಟ ಇದೆ ಇದರಲ್ಲಿ. ನೀನು ಆಲೋಚನೆ ಮಾಡು, ಸೀತೆಯರನ್ನು ರಘುವರರಿಗಿತ್ತು....ರಾಮನಿಗೆ ಸೀತೆಯನ್ನು ಕೊಡುವ ಮಾತು ಬಿಡು.. ಈ ಸೀತೆಯನ್ನು ತಾರದೇ ಇದ್ದರೂ ಈ ಯುದ್ದ ನಡೀತಿತ್ತು ಅಂತ ನನಗೆ ಈಗ ಅನ್ನಿಸ್ತದೆ.  ಇಂದ್ರಜಿತುವಿನ ಮರಣ ಕಂಡದ್ದರಿಂದ. ಈಗ ಸೀತೆಯನ್ನು ತಂದ ಮೇಲೆ ಇಂದ್ರಜಿತುವಿಗೆ ಮೃತ್ಯು ತಯಾರಾದದ್ದೇ? ಆದರೆ ಸರಿ ನೀನು ಹೇಳುವುದು. “ 
         
          ಮಂಡೋದರಿಯ ವಿನಂತಿ ಏನಿತ್ತು?   ಸೀತೆಯನ್ನು ಬಿಟ್ಟು ಕೊಟ್ಟು ಕಾಲಿಗೆ ಬಿದ್ದು ಶರಣಾದರೆ ಎಲ್ಲವೂ ಪರಿಹಾರವಾಗುತ್ತದೆ. ಸೀತೆಯನ್ನು ಒಪ್ಪಿಸು  ರಾಮನಿಗೆ ಶರಣಾಗು. ಇದನ್ನೆ ಇಲ್ಲಿ ಅಕ್ಷೇಪಿಸಿ ವಿಶ್ಲೇಷಿಸುತ್ತಾರೆ..  ಸೀತೆಗಾಗಿ ಈ ಯುದ್ದವಲ್ಲ. ಅದು ಹೇಗೆ?
“ಇಂದ್ರಾರಿಯ ಮರಣ ಯಾರಿಂದಾಗಬೇಕು? ಹನ್ನೆರಡು ವರ್ಷ ನಿದ್ರೆ ಆಹಾರ ಸತಿ ಸಂಗವನ್ನು ಬಿಟ್ಟವನಾಗಿರಬೇಕು. ಹೌದಲ್ಲ? ಇಂದ್ರಾರಿ...ಸತ್ತದ್ದು ಹೌದು. ಲಕ್ಷ್ಮಣನ ಕೈಯಿಂದ...ಹಾಗಾದರೆ ಅವನು ಹನ್ನೆರಡು ವರ್ಷ ಅನ್ನ ಬಿಟ್ಟದ್ದು ಯಾಕೆ?’

         ಸೀತೆಯನ್ನು ತರುವ ಮೊದಲೇ ಲಕ್ಷ್ಮಣ ನಿದ್ರಾಹಾರ ತೋರೆಯಬೇಕಾದರೆ ಅದಕ್ಕೆ ಪ್ರೇರಣೆ ಯಾರು?
 
“ ಲಕ್ಷ್ಮಣ ನಿದ್ರೆ ಬಿಟ್ಟದ್ದು ಯಾಕೆ? ಹೆಂಡತಿಯನ್ನು ಅಯೋಧ್ಯೆಯಲ್ಲಿ ಬಿಟ್ಟು ಬಂದದ್ದು ಯಾಕೆ? ಇಂದ್ರಜಿತುವನ್ನು ಕೊಲ್ಲುವುದಕ್ಕೆ ಬೇಕಾಗಿಯೋ?  ಏನು ಅಲ್ಲ...ಹಾಗಾದರೆ ಹಾಗೆ ಒಬ್ಬ ತಯಾರಾದ್ದಕ್ಕೆ ಅವನಿಗೆ ಗೊತ್ತಿಲ್ಲ ಉತ್ತರ ಹೇಳ್ಳಿಕ್ಕೆ..ಆಗ ನಾವು ಸನಾತನಿಗಳು ಆಸ್ತಿಕರು ಒಪ್ಪಿಕೊಳ್ಳುವುದು ವಿಧಿನಿರ್ಣಯವನ್ನು. ಸೀತೆಯನ್ನು ತಾರದೇ ಇದ್ದರೂ  ಇದು ಅನಿವಾರ್ಯ ತಾನೆ?”
ಲಕ್ಷ್ಮಣ ನಿದ್ರಾಹಾರ ಬಿಟ್ಟು ಹಲವು ವರ್ಷ ಕಳೆದ ಮೇಲೆ ಸೀತಾಪಹಾರ  ಯಾಕಾಯಿತು? ಸೀತೆಯಿಂದ ರಾವಣ ದಂಡಿಸಲ್ಪಟ್ಟ... ಸೀತೆಗಾಗಿ ಯುದ್ದ ಒಪ್ಪತಕ್ಕದ್ದೇ?         
“ಸೀತೆಯನ್ನು ನಾನು ತಂದದ್ದರಿಂದ..ಮಗನನ್ನು ಬಲಿಯಾಗಿ ಕೊಟ್ಟೆ ಅಂತ ಯಾರಾದರೂ ಹೇಳಿದರೆ ಅವರು ಪೂರ್ಣ ಜ್ಞಾನಿಗಳಲ್ಲ...ಸರಿ, ಇಂದ್ರಾರಿ ಸತ್ತ. ಯಾವುದೋ ದೈವದ ಕೈವಾಡ ಉಂಟು ಅಂತ ಗೊತ್ತಾಯಿತು. ನಾವೇನು ದೈವ ಎತ್ತಿ ಆಡಿದ ಕೈಗೂಸಾಗಿಯೇ ಕೊನೇ ಉಸಿರನ್ನು ಬಿಡೋಣವೇ?”
“ಆದರೂ ಪ್ರತೀಕಾರ ಸಾಧ್ಯವಾದೀತೆ ಸ್ವಾಮೀ?”
“ಕೊಲುವೆನೆಂಬ ಪ್ರತಿಜ್ಞೆ ದೈವಕ್ಕಿರಲಿ. ಗೆಲುವೆನೆಂಬ ಪ್ರತಿಜ್ಞೆ ಜೀವನಿಗೆ ಇದ್ರೆ ಅವನು ಪುರುಷ. ವೇದಾಂತದಲ್ಲಿ ಪುರುಷ ಶಭ್ದ ಉಂಟು. ಪುರುಷ ಅಂದ್ರೆ ಅದು ಚೇತನ. ರೂಢಿಯಲ್ಲಿ ಪುರುಷ,  ಸ್ತ್ರೀ ಅಂತ ದೇಹವನ್ನು ನೋಡಿ ಹೇಳುವುದು. ಒಳಗಿನ ಚೇತನ ಅದಕ್ಕೆ ಪುರುಷ ಅಂತ ಹೇಳುವುದು. ಆ ಪುರುಷ ಸಾಧಿಸಬೇಕಾದ್ದಕ್ಕೆ ಹೆಣ್ಣು ಶರೀರದಿಂದಾಗಲೀ ಅಥವಾ ಗಂಡು ದೇಹದಿಂದಾಗಲೀ ಪುರುಷಾರ್ಥಗಳು ಅಂತಲೇ ಹೇಳುದು. ಧರ್ಮ, ಅರ್ಥ, ಕಾಮ, ಮೋಕ್ಷ ಹೀಗೆ ಚತುರ್ವಿಧ ಪುರುಷಾರ್ಥಗಳು ಇದು ಹೆಣ್ಣಿಗೂ ಪುರುಷಾರ್ಥವೇ. ಗಂಡಿಗೂ ಪುರುಷಾರ್ಥವೇ. ಪುರುಷಾಯತ್ತ ಸಿದ್ಧಿ ಅಂದ್ರೆ ಅದು. ದೈವ ಏನು ಮಾಡಿತು? ದೈವ ಈ ಪೌರುಷದ ಮುಂದೆ ಸೋತೇ ತೀರಬೇಕು. ಸೋತು..... ಈ ಪುರುಷತ್ವಕ್ಕೆ ಅದು ಅಧೀನವಾಗಬೇಕು. ಇಲ್ಲದಿದ್ದರೆ ನಮ್ಮಲ್ಲಿ ಹೇಳುತ್ತಿಲ್ಲವ ಶಾಸ್ತ್ರದ ಮೋಕ್ಷಕ್ಕೆ ಅರ್ಥವೇ ಇಲ್ಲ. ಮೋಕ್ಷ ಪ್ರಾಪ್ತಿ. ಮೋಕ್ಷ ಸಿದ್ಧಿ. ಮೋಕ್ಷದಾನವಲ್ಲ ಮೋಕ್ಷವನ್ನು ಯಾರದರು ದಾನ ಮಾಡಿ ಪಡಕೊಳ್ಳುವದ್ದಲ್ಲ ಮೋಕ್ಷ ಸಿದ್ಧಿ. ಯಾರು ಕೊಡುವಂಥದ್ದಲ್ಲ ದೇವರೇ ಕೊಡುವಂಥದ್ದಾಗಿದ್ದರೆ ಮೋಕ್ಷ ಎಂಬುದು ಪುರುಷಾರ್ಥದ ಪಟ್ಟಿಯಿಂದ ಬಿದ್ದು ಹೋಗುತ್ತಿತ್ತು. ಧರ್ಮಾರ್ಥಕಾಮ....ಮೂರೇ ಪುರುಷಾರ್ಥ ಅಂತ..ಚತುರ್ವಿಧ ಪುರುಷಾರ್ಥ ಎಂಬುದು ಸತ್ಯ ಎಂದಾದರೆ..ದೈವವೋ, ವಿಧಿಯೋ , ಇನ್ನೊಂದೋ ಅದರ ಹಂಗ್ಯಾಕೆ. ಆದಕಾರಣ ಅದನ್ನು ಬದಿಗೊತ್ತಿ ನಾನು ಬೆಳೆಸಿಕೊಂಡು ಬಂಧಂತಹಾ ಯಾವ ಶಕ್ತಿವಿಶೇಷವಿದೆಯೋ. ....ಸಾಗಿ ಬಂದು ಆಗಿಹೋಯ್ತೇನೇ ನಿಮಗೆಲ್ಲ ಇದು ಹೇಳಿದ್ರೆ ತಲೆಗೆ ಹೋಗುವುದಿಲ್ಲ. ಒಬ್ಬ ಜೀವನದ ಯಾತ್ರೆಯಲ್ಲಿ ಬಹಳಷ್ಟು ಮುಂದೆ ಬಂದಾದ ಮೇಲೆ,  ಎಡವದೇ ತಡವದೇ.   ತನ್ನ ಮಾರ್ಗವನ್ನು ತಾನು ರೂಪಿಸಿಕೊಂಡು ಹೋದಮೇಲೆ, ಇನ್ನು ಮರಳಿ ಹಿಂದೆ ಬಾ.  ದಾರಿ ಬೇರೆ ಮಾಡು....ಅಂತ ಹೇಳುವವರಿಗೆ ದಾರಿಯ ಪರಿಚಯವೇ ಇಲ್ಲಾಂತ ಅರ್ಥ. ಇಲ್ಲಿಯವರೆಗೆ ಸಾಗಿ ಬಂದಿದ್ದೇನೆ.  ಸಾಗಿ ಬಂದ ನಾನು ಇನ್ನು ಹಿಂದೆ ಬರುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಒಂದುಂಟು ಬಗ್ಗುವ ಜಾತಿಯೇ ಅಲ್ಲ.  
 ಕಠಿಣವಾದದ್ದರಲ್ಲಿ ಎರಡು ಉಂಟು. ಒಂದು ಲೋಹ..ಇನ್ನೊಂದು ವಜ್ರ...ಅಥವಾ ಕಲ್ಲು ಪಾಷಾಣ..ಆದರೆ ಲೋಹಕ್ಕೆ ಒಂದು ಸ್ವಭಾವ ಉಂಟು ಬಿಸಿತಾಗಿದ್ರೆ ಮಿದುವಾಗ್ತದೆ  ಬಗ್ಗೀತು.. ಅದರೆ ಇದು ಬಿಸಿತಾಗಿದ್ರೂ ಮಾರ್ದವತೆ ಬಂದೀತು ಅಂತ ತಿಳ್ಕೊಳ್ಬೇಡ. ಇದನ್ನು ಯಾರಾದರೂ ಮುರೀಬೇಕು ಬಗ್ಗಿಸಿಬೇಕು ಅಂತ ಹೊರಟ್ರೆ.  ಅದ್ರೆ ಇದು ತುಂಡಾದೀತು. ಹೊರತು ಬಗ್ಗಲಾರದು.ರಾವಣನ ವ್ಯಕ್ತಿತ್ವ ಆ ತರಹದ್ದು. ತುಂಡಾದೀತು..ಆದರೆ ಬಿಸಿಯಾಗುವಾಗ ಕಾಠಿಣ್ಯವನ್ನ ಬಿಟ್ಟು ಕೊಟ್ಟು ಮಿದುವಾಗುವುದು.. ತಣ್ಣಗಾಗುವಾಗ ಕಾಠಿಣ್ಯವನ್ನು ತಾಳುವುದು..ಈ ಬಗೆಯ ದ್ವಂದ್ವ ರಾವಣನ ಜೀವನದಲ್ಲಿ ಇಲ್ಲ. ಆದಕಾರಣ ರಾಮಲಕ್ಷ್ಮಣರ ಸಹಿತ...ಆ ಕಪಿಭಟ ಸ್ತೋಮವನ್ನು ಗೆಲಿದು ...ಮತ್ತೆ ಆ ಕಥೆ ಬಿಡು..”
ಗೆಲ್ಲುತ್ತೇನೆ ಎನ್ನುವ ಆತ್ಮ ವಿಶ್ವಾಸದ ನುಡಿ ಕೇಳಿ ಮಂಡೋದರಿ ಕೇಳ್ತಾಳೆ..
.” ಅವರನ್ನೆಲ್ಲ ಗೆದ್ರು ಕೂಡ ಇವರು ಬರ್ತಾರ ಸ್ವಾಮಿ?”
“ ಯಾರು ಬರ್ಬೇಕು ನಿನಗೆ?”
“ ನಮ್ಮ ಮಕ್ಕಳಿಲ್ಲ ಸೇನಾ ಪತಿಗಳಿಲ್ಲ ಮಂತ್ರಿಗಳಿಲ್ಲ ...ಯಾರೂ ಬದುಕುಳಿದಿಲ್ಲ ನಮ್ಮಲ್ಲಿ..”
ಆದರೂ ರಾವಣನ ಅತ್ಮ ವಿಶ್ವಾಸ ...ಸತ್ತವರನ್ನೂ ಬದುಕಿಸಿಯೇನು...ಇಂದ್ರಾರಿ ಮಾಯಾಸೀತೆಯನ್ನು ಸೃಷ್ಟಿಸಿದ ಹಾಗೆ.. ಆದರೂ ಬಿಡಲಾರದ ಈ ಸಂಘರ್ಷದ ಒಳ ಮರ್ಮವೇನು? ರಾವಣ ಅದರ ಮರ್ಮವನ್ನು ಬಿಚ್ಚಿಡುತ್ತಾನೆ...
“ ನಮ್ಮಲ್ಲಿ  ವಿದ್ಯುಜ್ಜಿಂಹ ಇವನ ಮೂಲಕವಾಗಿ ರಾಮ ಲಕ್ಷ್ಮಣರ ತಲೆಯನ್ನು ಕೃತಕವಾಗಿ ನಿರ್ಮಿಸಿ ಸೀತೆಯ ಎದುರು ಎಸೆದಾಗ ಸೀತೆ ಆತ್ಮಹತ್ಯೆಗೆ ಹೊರಟಿದ್ದಳು. ನಾನು ಪರೀಕ್ಷೆ ಮಾಡದೆ ಯಾರಬಗ್ಗೆಯೂ ಏನೂ ಹೇಳುವವನಲ್ಲ.  ಆ ಕಡೆಗೆ ರಾಮ ಈ ಕಡೆಗೆ ಸೀತೆ...ಸಾಯದೆ ಉಳಿದ್ರು. ಆ ಮಾತು ಬೇರೆ. ಏನು ಮಾಡುದೂ..? ನಮ್ಮ ಒಬ್ಬ ರಾಮನ ಪಕ್ಶಕ್ಕೆ ಸಿಗದೇ ಇರುತ್ತಿದ್ದರೆ..ರಾಮಾಯಣದ ಅಧ್ಯಾಯ ಆ ಕಾಂಡಕ್ಕೆ ಮುಗಿದು ಮುಂದಿನ ಕಾಂಡ ರಾವಣಾಯಣ ಆಗಿಹೋಗುತ್ತಿತ್ತು. ಅಷ್ಟು ಮಂತ್ರಶಕ್ತಿಯಿದ್ದವನು ನಿನ್ನ ಗಂಡ ರಾವಣ. ರಾಮ ಲಕ್ಷ್ಮಣರನ್ನು ಗೆಲಿದ ಮೇಲೆ, ಈ ಗ್ರಹಣ ಇದೆಯಲ್ಲ ಇದು ಸರೀತದೆ..ಈ ಚಂದ್ರನಿಗೆ.  ಮತ್ತೊಮ್ಮೆ ಪೂರ್ಣ ಚಂದ್ರನಾಗಿ ರಾರಾಜಿಸಿ..ಸೃಷ್ಟಿಸಿಯೇನು...ಎಲ್ಲವನ್ನು ಸೃಷ್ಟಿಸಿಯೇನು ...ಆದರೂ...ಇಂದ್ರಜಿತುವಿನಂತಹ ಮಗನನ್ನು ಪಡೆದೇನೆ? ಅನುಮಾನ. ಮತ್ತೆ ದಶರಥನ ಹಾಗೆ ಪುತ್ರಕಾಮೇಷ್ಠಿ ಮಾಡಿ ಯಾರಿಗೊ ಹುಟ್ಟಿದವನಿಗೆ ಅಪ್ಪ ಆಗುವವ ನಾನಲ್ಲ. ಇಂದ್ರಜಿತುವನ್ನು ಸೃಷ್ಟಿಸಿದ್ದೇನೆ...ನನ್ನ ಮಗ ಅಂತ ತೋರಿಸಿಕೊಟ್ಟಿದ್ದೇನೆ..ಜನ ಮೆಚ್ಚಿದ್ದಾರೆ ಈ ಅಪ್ಪನಿಗೆ ಈ ಮಗ ಸರಿ. ಮಂಡೋದರಿ,  ಇದು ನೋವನ್ನು ಮರೆಯಿಸ್ಲಿಕ್ಕೆ ಈ ವಿಡಂಬನಾ ಶೈಲಿಯನ್ನು ಅನುಸರಿಸಿದ್ದು. ಏನು ಮಾಡಿದರೂ ಆ ನೋವು ಹೋಗುವುದಿಲ್ಲ.ನನ್ನ ಮಗ ಇಂದ್ರಾರಿ ಎಲ್ಲಿ ಮಣ್ಣಿಗೆ ಮಣ್ಣಾಗಿ ಹೋದ ಅಲ್ಲೇ ಮಣ್ಣಾಗಿ ಹೋದೇನು ಆದರೂ ಸೀತೆಯನ್ನಿತ್ತು ಶರಣಾಗು ಅಂತ ಮಾತ್ರ  ಹೇಳದಿರು.”
          ಇದು ಶೇಣಿಯವರ ಯೋಜನಾಬದ್ಧ ಅರ್ಥಗಾರಿಕೆ. ರಾವಣನನ್ನು ಪದರು ಪದರಾಗಿ ಬಿಚ್ಚಿಡುವಪರಿ. ಪ್ರಸಂಗ ಪಾತ್ರದ ಮೊದಲ ಪದದಿಂದಲೇ ಹೀಗೆ ಈ ಪಾತ್ರ ಅಭಿವ್ಯಕ್ತವಾಗುತ್ತದೆ ಎಂಬ ಕಲ್ಪನೆಯಿಂದಲೇ ತೊಡಗಿಸುತ್ತಾರೆ. ದೊಡ್ಡದಾದ ಹಣ್ಣನ್ನು ತುಂಡು ತುಂಡಾಗಿ ಕತ್ತರಿಸಿ ತಿನ್ನಲು ಕೊಟ್ಟಂತೆ... ಮೊದಲು ಹಣ್ಣಿನ ಮಧ್ಯಭಾಗವೇ ಆದರೂ ಆಗಬಹುದು.. ಕೆಳಭಾಗವಾದರೂ ಆಗಬಹುದು..ಹಣ್ಣಿನೆ ತೊಟ್ಟಿರುವ ಭಾಗವಾದರೂ ಆಗ ಬಹುದು. ಒಟ್ಟಿನಲ್ಲಿ ಆ ಪೂರ್ಣ ಹಣ್ಣಿನ ರಸಾಸ್ವಾದನೆಯನ್ನು ತೋರಿಸುವ ಯತ್ನ..ಬೇರೆ ಬೇರೆ ವಿಧದಲ್ಲಿ ತಿಂದು ಸವಿದ ಮೇಲೆ ಬೇರೆ ಬೇರೆ ಅನುಭವವಾಗುತ್ತದೆ. ಚಿತ್ರಕಥೆ ಸಂಭಾಷಣೆಯ ಕಡತವಿಲ್ಲದ ಈ ಅರ್ಥಗಾರಿಕೆ ಸಾಹಿತ್ಯ ಅದು ಯಕ್ಷಗಾನ ತಾಳ ಮದ್ದಲೆಯ ವೈಶಿಷ್ಟ್ಯ. ಮೊದಲ ಹಂತದಿಂದಲೇ ನಾವು ಕಂಡು ಅರಗಿಸಿದ ಪಾತ್ರದಲ್ಲೇ ನಿಗೂಢತೆಯನ್ನು ಸೃಷ್ಟಿಸಿ ಅದನ್ನು ಎಸಳೆಸಳಾಗಿ ಬಿಚ್ಚಿಡುವ ಕಲೆ, ಅದನ್ನು ಅಸ್ವಾದಿಸಿಯೇ ತಿಳಿಯಬೇಕು.
ಇಷ್ಟಾದರೂ ರಾವಣನ ಅಂತರಂಗ ಪೂರ್ಣವಾಗಿ ಬಹಿರಂಗವಾಗುವುದಿಲ್ಲ.
ರಾವಣ ಏನು ಹೇಳಿದರೂ ಮಂಡೋದರಿ ತನ್ನ ಯತ್ನ ಮುಂದುವರೆಸುತ್ತಾಳೆ. ರಾವಣ ಮಂಡೋದರಿ ಸಂಭಾಷಣೆ ಮುಂದುವರೆಯುತ್ತದೆ.
“ದೋಷೀ ನಿನ್ನಯ ಭಗಿನಿ...ರಕ್ಕಸ ಕುಲಘಾಸಿಗೈದಳು ತರುಣಿ.....”
“ಸ್ವಾಮೀ ತಾವು ಹೇಳುತ್ತಿದ್ದ ಈ ವಾದ ಸರಣಿಯನ್ನು ಕೇಳಿದಾಗ ನನಗೂ ಹೌದೇನೋ ಅನ್ನಿಸ್ತಾ ಇದೆ..ಆದರೆ ಈ ಪರಿಸ್ಥಿತಿ ನಮ್ಮ ಲಂಕಾರಾಷ್ಟ್ರಕ್ಕೆ ಬಂತಲ್ಲ? .ಯಾಕೆ? “
“ರಾಮನ ದೋಷದಿಂದ..”
“ಅಲ್ಲ ನನಗೆ ಹಾಗನ್ನಿಸುವುದಿಲ್ಲ...ಈ ಬಗ್ಗೆ ನನ್ನ ಮುಖ ಬೇರೆ ಅಂತ ತಾವು ಕೋಪಿಸಿಕೊಳ್ಳಬಾರದು.” ಮಂಡೋದರಿ ಅನುಮಾನಿಸುವಾಗ ರಾವಣ ಹೇಳ್ತಾನೆ...
“ರಾಮ ಎಷ್ಟೋ ದೂರದಲ್ಲಿದ್ದುಕೊಂಡು ನನ್ನ ಹೃದಯಕ್ಕೇ ನೋವು ಮಾಡಿದ. ನಿರಪರಾಧಿನಿಯಾದ ಹೆಣ್ಣಾದ ವಿವ್ಹಲೆಯಾದ ಗತಿಗೆಟ್ಟ..ನನ್ನ ತಂಗಿಯನ್ನು ಉಪಾಧಿಯಾಗಿ ಉಪಯೋಗಿಸಿಕೊಂಡ.”
“ಸ್ವಾಮೀ ಅವಳೇ ನಿಮ್ಮ ಕುಟುಂಬದವಳು, ನಿಮ್ಮ ತಂಗಿ. ಈ ಲಂಕಾರಾಷ್ಟ್ರದ ದುಸ್ಥಿತಿಗೆ ಅವಳೇ ಕಾರಣ. ನಾನೇನು ನಾದಿನಿಎಂಬ ದುರುದ್ದೇಶದಿಂದ ಮಾತ್ಸರಿಕ ದೃಷ್ಟಿಯಿಂದ ಹೇಳ್ತೇನೆ ಅಂತ ತಿಳೀಬಾರದು. ಏನುಂಟು ಅವಳಲ್ಲಿ ತುದಿಯೂ ಇಲ್ಲ ಬುಡವೂ ಇಲ್ಲ.ನನಗೆ ಅವಳ ಬಗ್ಗೆ ಯಾವುದೇ ಮತ್ಸರ ಇಲ್ಲ. ಸ್ವಾಮೀ ನನಗೆ ಅನ್ನಿಸ್ತದೆ ಈ ನಮ್ಮ ಲಂಕಾರಾಷ್ಟ್ರದ ದುರ್ಗತಿಗೆ ಅವಳೇ ದೋಷಿ. ಯಾಕೆಂದರೆ ಈಗ ರಾಮನಿಂದಾಗಿ ಇಷ್ಟೆಲ್ಲ ಆಯಿತು ಅಂತ ದೂಷಿಸಿತ್ತೀರಿ. ಅದರೆ ನನಗೆ ಅನ್ನಿಸ್ತದೆ ರಾಮನ ಬಳಿಗೆ ಹೋಗಿ , ರಾಮನಲ್ಲಿ ತನ್ನ ಅಲ್ಲ ಸಲ್ಲದ ವ್ಯವಹಾರವನ್ನು ಮುಂದಿಟ್ಟು ಆ ಬಳಿಕ ರಾಮನಿಂದ ಶಾಸ್ತಿಯನ್ನು ಪಡೆಯಬೇಕಾದ ಪರಿಸ್ಥಿತಿಯನ್ನು ತಂದ ಶೂರ್ಪನಖ ಕೃತ್ಯವೇ ದೋಷಪೂರ್ಣ ಅಂತ ನನಗನ್ನಿಸ್ತದೆ.”
“ ಅದು ಹೌದು, ಅದು ಒಂದು ಮುಖದ ವಾದ. ಅಷ್ಟು ತಿಳಿಯದೇ ಇದ್ದವನಲ್ಲ ನಾನು.ನಾನೇ ಪ್ರಾಮಾಣಿಕವಾಗಿ ಹೇಳಿಕೊಳ್ಳುತ್ತಿದ್ಡೆನಲ್ಲ...”ತಂಗಿಯೇ ಕುಲಕೆ ಕೇಡಾದಳು.. ನೀನು ಬರುವುದಕ್ಕೆ ಮೊದಲು ನಾನು ಅದನ್ನೇ ಮೆಲುಕು ಹಾಕ್ತಾ ಇದ್ದೆ. ತಂಗಿಯ ಸವಿ ಮಾತಿಗೆ ಹಂಗಿಗನಾದುದರಿಂದಲೇ ಭಂಗ ಪಡುವುದಾಯಿತೇ? ನಾನವಳನ್ನು ಮರೀಲಿಲ್ಲ. ನನಗೆ ಗೊತ್ತುಂಟು.  ಈಗ ಅವಳು ನನ್ನ ಉದ್ಧಾರಕ್ಕೋಸ್ಕರವಾಗಿ ಆ ಜನಸ್ಥಾನದಲ್ಲಿ ದುಡೀತಾ ಇದ್ದಾಳೆ ಅಂತ ನಾನು ಸ್ವಪ್ನದಲ್ಲಿಯೂ ಊಹಿಸಿದವನಲ್ಲ. ಅವಳನ್ನು ಇಲ್ಲಿಂದ ಅಲ್ಲಿಗೆ ಕಳುಹಿಸಿದರ ಹಿನ್ನೆಲೆ ಗೊತ್ತಿದ್ದವಳು ನೀನು. ಏನು ಮಾಡೋಣ ಅವಳ ಗಂಡ ನನ್ನ ಕೈಯಿಂದ ಸಾಯಬೇಕಾಯಿತು. ಕಾಲಕೇಯರನ್ನು ನಾನು ಗೆಲುವುದಕ್ಕೆ ಹೋದಾಗ ಇವನಿಗೂ ಬಂತು ವಂಶಾಭಿಮಾನ.ಇಲ್ಲಿ ಮನೆಯಳಿಯನಾಗಿದ್ದ. ನನಗೆ ಹಿಂದಿನಿಂದ ಚೂರಿ ಹಾಕುವುದಕ್ಕೆ ಯತ್ನಿಸಿದ. ನಾನವನಿಗೆ ತಂಗಿಯನ್ನು ಮದುವೆ ಮಾಡಿಕೊಡುವವರೆಗೆ ಅವನಿಗೆ ಅವನ ಊರಿನಲ್ಲಿ ಜಾಗವಿರಲಿಲ್ಲ. ಹಾಗಾದರೆ ಸ್ವಾಭಿಮಾನ ದೇಶಾಭಿಮಾನ...ಮೆಚ್ಚೋಣ ತಂಗಿಯ ಗಂಡ ಅಂತ ನೋಡದೆ ತಲೆಕತ್ತರಿಸಿದೆ. ಇವಳಿಗಾದ ನೋವನ್ನೂ ನಾನು ಅರ್ಥಮಾಡಿಕೊಳ್ಳಬಲ್ಲೆ. ಬಹುಕಾಲ ದಾಟಿದ ಮೇಲೆ ಅವಳಿಗೊಂದು ಪತಿಯೋಗವನ್ನು ಒದಗಿಸಿಕೊಡುವುದಕ್ಕೆ ಸಾಧ್ಯವಾದದ್ದು ನನಗೆ. ನಮ್ಮ ದೂರದ ಸಂಬಂಧಿ ಮಾವ ಮಾರೀಚ ಆಮಟ್ಟಿಗೆ ಚೆನ್ನಾಗಿ ದುಡಿದಿದ್ದಾನೆ. ನಿನಗೆ ಗೊತ್ತುಂಟು. ಏನನ್ನು ನೋಡಿ ಅವಳನ್ನು ಗಂಡಸರು ಮದುವೆಯಾಗುವುದು. ಸೌಂದರ್ಯವಾ? ಸ್ವಭಾವವೋ? ಏನಾದರೂ ಒಂದು ಬೇಕಲ್ಲ ಹೆಣ್ಣಿನಲ್ಲಿದ್ದದ್ದು. “
“ಯಾವೂದೇ ಸೌಂದರ್ಯ ಇಲ್ಲದ ಶೂರ್ಪನಖಿ ನನ್ನ ಅನುಗ್ರಹದಿಂದ ವಿವಾಹವಾದಳು. ಆದರೆ ದಾಪಂತ್ಯ ಜೀವನ ಅನುಭವಕ್ಕೆ ಬಾರದೆ ಅಕಾಲದಲ್ಲಿ ವೈಧವ್ಯ ಬಂತು. ನನ್ನಲ್ಲಿ ಹಗೆ ಹುಟ್ಟಿತು.
ಶೂರ್ಪನಖಿಯನ್ನು ದೋಷಿ ಎಂದು ಜರೆವ ಮಂಡೋದರಿಯ ಮಾತಿಗೆ ಒತ್ತು ಕೊಡುವಂತೆ ಶೂರ್ಪನಖಿಯ ವೃತ್ತಾಂತದೊಂದಿಗೆ ತನ್ನ ಅಂತರಂಗವನ್ನು ರಾವಣ ತೋರುವುದಕ್ಕೆ ಪ್ರಯತ್ನಿಸುತ್ತಾನೆ. ಈ ಸನ್ನಿವೇಶ ಬಹಳ ಸುಂದರವಾಗಿ ಸಾಂದರ್ಭಿಕವಾಗಿ ಪ್ರಸಂಗದಲ್ಲಿ ಹೆಣೆಯಲ್ಪಟ್ಟಿದೆ.  ರಾವಣನಿಂದ ರಾಮನನ್ನು ಕಾಣಬೇಕಾದರೆ ರಾವಣನ್ನು ಪೂರ್ಣವಾಗಿ ಅರಿಯದಿದ್ದರೆ ಹೇಗೆ?  ರಾಮ ಹುಟ್ಟುವ ಮೊದಲೇ ರಾಮನಾಮದ ಮೂಲಕ ಅವನನ್ನು  ತಿಳಿದರೂ, ರಾಮನೇನು ಎಂದು ರಾವಣ ಮೂಲಕ ತಿಳಿವಾಗ ಆ ಜ್ಞಾನಕ್ಕೆ ಹೆಚ್ಚು ಅರ್ಥ ಬರುತ್ತದೆ. ದನವನ್ನು ಕಂಡಾಗ ಎಳೆ ಕರು ಹೌ ಹಾರಿ ಹೋದ ಹಾಗೆ..ಹೋಗಿ ತಾಯಿದನದ ಕೆಚ್ಚಲನ್ನು ಕುಟ್ಟಿ ಕುಟ್ಟಿ ಹಾಲು ಕುಡಿದಂತೆ, ಇಲ್ಲಿ ತನಗೆ ಬೇಕಾದ ಅಮೃತ ಪಡೆಯಲು ತಾಯಿಯನ್ನು ಹಿಂಸಿಸಿ ನೋವನ್ನು ಕೊಡುತ್ತದೆ. ಕೊನೆಗೆ ತನಗೆ ಬೇಕಾದ್ದನ್ನು ತನಗೆ ಅರ್ಹವಾದುದನ್ನು ಪಡೆಯುತ್ತದೆ. ಆದರೂ ದನ ಆ ನೋವಿನಲ್ಲು ಸುಖವನ್ನು ಅನುಭವಿಸುತ್ತದೆ. ನೋವು ನಲಿವನ್ನು ಸಮನಾಗಿ ಕಾಣುವ ಬಗೆ ಹೀಗೆ. ರಾಮನನ್ನು ಹಿಂಸಿಸಿ ತನಗೆ ಬೇಕಾದುದನ್ನು ಪಡೆವದು ರಾವಣನ ಧೋರಣೆ.ಹಾಗಾಗಿಯೇ ರಾಮನೊಡನೆ ಸಂಘರ್ಷ.






Friday, July 12, 2013

ಅಂತರಂಗದ ರಾವಣ ಭಾಗ ೪



“ರಾಮನ ವ್ಯಕ್ತಿತ್ವ ದರ್ಶನಕ್ಕೆ ಮೂಲ ಕಾರಣ ರಾವಣ. ರಾಮನ ವ್ಯಕ್ತಿತ್ವ ಅದು ಹೀಗೆ. ಅದೊಂದು ಪರಿಪೂರ್ಣ. ಆದರೆ ಆ ಪರಿಪೂರ್ಣತೆ ಅರಿವಾಗಬೇಕಾದರೆ ಅದು ರಾವಣ ವ್ಯಕ್ತಿತ್ವದೊಂದಿಗೆ  ಘರ್ಷಿಸಬೇಕು. ರಾಮ ರಾವಣರ ಸಂಘರ್ಷಣೆಯ ಮೂಲ ಉದ್ದೇಶವೇ ರಾಮದರ್ಶನ” 

 “ ಪುರಾಣದಲ್ಲಿ ರಾಮನ ವ್ಯಕ್ತಿತ್ವವಾಗಲಿ ಕೃಷ್ಣನ ವ್ಯಕ್ತಿತ್ವವಾಗಲಿ ಅದಕ್ಕೆ ಟಿಪ್ಪಣಿ ವಿವರಣೆಯ ಅಗತ್ಯ ಬೇಡ. ರಾಮನ ವ್ಯಕ್ತಿತ್ವ ಕೃಷ್ಣನ ವ್ಯಕ್ತಿತ್ವ ಜನ ಮಾನಸದಲ್ಲಿ ಅಚ್ಚೊತ್ತಿರುವಾಗ ಅದರ ಬಗ್ಗೆ ಹೆಚ್ಚು ವಿವರಣೆಯ ಅಗತ್ಯವಿರುವುದಿಲ್ಲ. ಆದರೆ ಇದಕ್ಕೆ ಪ್ರತಿಯಾದ ರಾವಣನ ಪಾತ್ರ ಅಥವಾ ಕೌರವನ ಪಾತ್ರಗಳ ಬಗ್ಗೆ ಅರಿವಿಲ್ಲದಿದ್ದರೆ ರಾಮ ಕೃಷ್ಣ ರ ವ್ಯಕ್ತಿತ್ವ ಬೀರಬೇಕಾದ ಪ್ರಭಾವವನ್ನು ಬೀರುವುದೇ ಇಲ್ಲ.” 

“ ಒಬ್ಬ ಪಳಗಿದ ಚಿತ್ರಕಾರ ಚಿತ್ರದ ಬಗ್ಗೆ ಚಿಂತಿಸುವಷ್ಟೇ ಚಿತ್ರದ ಹಿನ್ನೆಲೆಯಬಗ್ಗೆ ಚಿಂತಿಸುತ್ತಾನೆ. ಆ ಚಿತ್ರ ಎದ್ದು ಕಾಣಬೇಕಾದರೆ ಚಿತ್ರದ ಹಿನ್ನೆಲೆ ಬಹಳ ಪ್ರಾಮುಖ್ಯವಾಗಿರುತ್ತದೆ. ಅದರಂತೆ ರಾಮನ ವ್ಯಕ್ತಿತ್ವ. ಆ ವ್ಯಕ್ತಿತ್ವ ದರ್ಶನವಾಗಬೇಕಾದರೆ ಅದಕ್ಕೊಂದು ಹಿನ್ನೆಲೆಯ ವ್ಯಕ್ತಿತ್ವ ಬೇಕಲ್ಲ. ಅದು ರಾವಣನ ವ್ಯಕ್ತಿತ್ವ” 

“ ಹಿನ್ನೆಲೆಯಲ್ಲಿ ಕಪ್ಪು ಇದ್ದಾಗಲೇ ಬಿಳಿ ಚಿತ್ರ ಗೋಚರಕ್ಕೆ ಬಂದು ಗಾಢವಾದ ಪ್ರಭಾವವನ್ನು ಬೀರುತ್ತದೆ. ಇಲ್ಲವಾದರೆ ಅದೊಂದು ಎಲ್ಲ ಬಣ್ಣದಂತೆ ಒಂದು ಬಣ್ಣವಾಗಿ ಕಾಣುತ್ತದೆ. ಆಕಾಶ ಕಪ್ಪಾಗಿದ್ದಾಲೇ ನಕ್ಷತ್ರ ದರ್ಶನವಾಗುವುದು.” 

ಖಳ ಪಾತ್ರಗಳಿಗೆ ಒಂದು ರೂಪವನ್ನು ಕೊಟ್ಟಂತಹ ಶೇಣಿಯವರ ಪ್ರತಿಪಾದನೆಗಳಿವು. ಹಲವು ಸಲ ಪ್ರಶ್ನೆಗಳು ವಿಮರ್ಶೆಗಳು ಎದುರಾದದ್ದು ಉಂಟು. ರಾವಣ ಪಾತ್ರ ವೈಭವೀ ಕರಿಸುವಾಗ ರಾಮನ ಪಾತ್ರ ಗೆಲ್ಲುವುದಿಲ್ಲ. ಮೇಲ್ನೋಟಕ್ಕೆ ಇದು ಸರಿಯಾಗಿರಬಹುದು ಎಂದು ಕಂಡರೂ ಖಳ ವ್ಯಕ್ತಿತ್ವಗಳು ಬೆಳಗುವಾಗ ಪರೋಕ್ಷವಾಗಿ ಪ್ರತಿಸ್ಪರ್ಧಿಯ ಪ್ರಭೆಯನ್ನು ಬೆಳಗಿಸುತ್ತವೆ. ಖಳ ಪಾತ್ರಗಳ ವ್ಯಕ್ತಿತ್ವವನ್ನು ಪರಿಚಯಿಸಿ ಆ ಮೂಲಕ ಹೊಸ ಹಾದಿಯನ್ನು ತೋರಿಕೊಟ್ಟವರು ಶೇಣಿಯವರು. ಇವುಗಳ ವಿಭವಗಳನ್ನು ತೋರುತ್ತ  ಆ ಪಾತ್ರದ ನಿರ್ವಹಣೆಗೂ ಒಂದು ಮಾನದಂಡವನ್ನು ತಂದು ಕೊಟ್ಟವರು. ಆನಂತರ ಇವುಗಳ  ನಿರೂಪಣೆಗಳು ಪ್ರಾಯೋಗಿಕವಾಗಿ ಹಲವು ರೀತಿಯಲ್ಲಿ ಪ್ರಸ್ತುತ ಪಡಿಸಲ್ಪಟ್ಟಿತು. ಆದರೆ ಈಗೀಗ ಖಳ ಪಾತ್ರಗಳಷ್ಟೇ ವೈಭವೀಕರಿಸಲ್ಪಡುತ್ತಾ ಪ್ರತಿಸ್ಪರ್ಧಿಯನ್ನು ಸೋಲಿಸುವುದಷ್ಟೇ ಗುರಿಯಾಗಿಸಿವೇ. ಯಕ್ಷಗಾನ ದ ಅತಿ ಯಶಸ್ವೀ ಪ್ರಸಂಗಳಲ್ಲಿ ಒಂದಾದ ದೇವಿ ಮಹಾತ್ಮೆಯಲ್ಲಿ ಮಹಿಷಾಸುರ ಪಾತ್ರ ಇದಕ್ಕೆ ಸ್ಪಷ್ಟ ಉದಾಹರಣೆ. ಮಹಿಷಾಸುರ ಪಾತ್ರ ಹೇಗಾಯಿತು ಎಂಬ ಮಾನದಂಡವೇ ಒಟ್ಟು ಪ್ರದರ್ಶನದ ಮಾನದಂಡವಾಗಿ ಬದಲಾಗಿದೆ. ಹಲವು ಸಲ ಇದು ಒಂದು ರೀತಿಯ ವಿಕೃತಿದರ್ಶನಕ್ಕೂ ಕಾರಣವಾಗಿದೆ. ದೇವಿಯನ್ನು ನೋಡುವುದಕ್ಕಿಂತ ಜಾಸ್ತಿ ಆದಿನದ ಮಹಿಷಾಸುರ ಪ್ರವೇಶಕ್ಕೆ ಹೆಚ್ಚಿನ ಮಹತ್ವವನ್ನು ಕೊಡುವುದನ್ನು ಕಾಣುವಾಗ ಮನುಷ್ಯನ ಸ್ವಭಾವವೇ ಪ್ರಶ್ನಾರ್ಹವಾಗುತ್ತದೆ. ಹಿರಿಯರು ತುಳಿದ ಹಾದಿಯನ್ನು ತಪ್ಪಾಗಿ ಕಲ್ಪಿಸುವುದರಿಂದ ಆಗುವ ವಿಕಲ್ಪಗಳತ್ತ ಚಿಂತಿಸುವ ಅಗತ್ಯವಿದೆ. ಶೇಣಿಯವರು ಹಲವು ಪಾತ್ರಗಳನ್ನು ತಮ್ಮದೇ ರೀತಿಯಲ್ಲಿ ರೂಪೀಕರಿಸಿ ಮುದ್ರೆಯನ್ನೊತ್ತಿದ್ದರೆ ಅವುಗಳ ವೈವಿಧ್ಯತೆಯೇ ವಿಶಿಷ್ಟವಾಗಿ ಗುರುತಿಸಲ್ಪಟ್ಟಿವೆ. ಅದರಲ್ಲಿ ರಾವಣ ಕೌರವ ಇನ್ನಿತರ ಯಾವುದೇ ಪಾತ್ರಗಳಾದರೂ ಪ್ರತಿಯೋಂದು ಪಾತ್ರವೂ ಸಹ ಅಧ್ಯಯನಕ್ಕೆ ಯೋಗ್ಯವಾಗಿದೆ. 

ಯಕ್ಷಗಾನ ಅರ್ಥಗಾರಿಕೆಯಲ್ಲಿ ಶೇಣಿಯವರಷ್ಟೇ ಅಲ್ಲ ಹಲವಾರು ಘನ ವಿದ್ವಾಂಸರು ಅರ್ಥಗಾರಿಕೆಗೆ ಹೊಸ ದಿಶೆಯನ್ನು ತೋರಿಸಿ ಇದೊಂದು ಸಾಹಿತ್ಯ ಪ್ರಾಕಾರವಾಗುವಂತೆ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಪ್ರತಿಯೊಂದು ಪಾತ್ರನಿರ್ವಹಣೆಯಲ್ಲೂ ಹೊಸ ಹೊಸ ಅಯಾಮಾಗಳನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳುತ್ತ ಯಕ್ಷಗಾನ ಅರ್ಥಗಾರಿಕೆಯು ಸಾಹಿತ್ಯ ಶಿಖರದ ಸೋಪಾನವಾಗುವಂತೆ ಮಾಡಿದ್ದಾರೆ. ಯಕ್ಷಗಾನ ಎಂಬುದು ಕೇವಲ ರಂಗಸ್ಥಳದ ಕಲೆಯಾಗಿ ಮಾತ್ರಾ ಬಿಂಬಿಸುವ ಹಾಗಿಲ್ಲ. ಅದರ ಹಲವಾರು ಮುಖಗಳ ದರ್ಶನವಾಗಬೇಕು. ಯಕ್ಷಗಾನ ಎಂದೊಡನೆ ಬಣ್ಣ ಬಣ್ಣದ ಝಗ ಝಗಿಸುವ ವೇಷಭೂಷಣವಷ್ಟೇ ಎಂಬಲ್ಲಿಗೆ ಸೀಮಿತವಾಗಬಾರದು. ಹಿಮ್ಮೇಳ ಪ್ರಕಾರಗಳಲ್ಲಾಗಲೀ, ಅರ್ಥಗಾರಿಕೆಯಲ್ಲಾಗಲೀ ಅದ ಸೃಜನ ಶೀಲತೆಯನ್ನು ಗುರುತಿಸುವ ಯತ್ನ ಮಾಡಬೇಕು.    ಆ ದಿಶೆಯಲ್ಲಿ ಹೊಸ ಸಂಶೋಧನೆ ನಡೆದಲ್ಲಿ ಯಕ್ಷಗಾನ ಅರ್ಥ ಗಾರಿಕೆಗೆ ಸಮಗ್ರವಾದ ಸಂಪನ್ಮೂಲವಾಗಬಲ್ಲುದು. ಕೇವಲ ಯಕ್ಷಗಾನಕ್ಕೆ ಏಕೆ ಸಮಗ್ರ ಸಾಹಿತ್ಯ ಲೋಕಕ್ಕೆ ಇದು ಬಹುದೊಡ್ಡ ಕೊಡುಗೆಯಾಗಬಲ್ಲುದು.

“ಚದುರಂಗ ಸೇನೆಗಾಗಿ ಮರುಗುವವನಲ್ಲ..... “ ಎಲ್ಲವನ್ನೂಕಳೆದು ಕೊಂಡೆವು ಎಂದು ಹಲುಬುತ್ತಿದ್ದ ಮಂಡೋದರಿಗೆ ರಾವಣ ಹೇಳುವ ಮಾತಿದು. ಆದುದರಿಂದಲೇ ವಿಚಾರಿಸಿ ಖೂಳನನು ಮಾಡೆನ್ನ ಅಂತ ಹೇಳೀದ್ದು. ಚದುರಂಗ ಸೇನಾ ನಷ್ಟಕ್ಕೆ ರಾವಣ ಮರುಗಿದನೇ?
          “ಮಂಡೋದರಿ ನಾನು ಏನನ್ನೂ ಕಳಕೊಳ್ಳಿಲ್ಲ..”

“ ಬಂದದ್ದು ಹೋಗಿದೆ ಅಂದ್ರೆ  ಅದು ಕಳಕೊಂಡದ್ದು ಅಲ್ವೇ?”  ಮಂಡೋದರಿಯ ಅಚ್ಚರಿಯ ನುಡಿ. 

“ ಇದು ಮೊದಲೂ ಇರಲಿಲ್ಲ.” 

“” ಹಾಗಾದರೆ ಬಂದದ್ದು ಹೋಗಿದೆ ಅಂದ್ರೆ ಅದು ಕಳಕೊಂಡದ್ದು ಅಲ್ಲ? ಯಾಕೆ ಹೇಳ್ತೇನೆ? ನಾನು ನಾನೆ.  ಎಲ್ಲವೂ ನನ್ನದು ನಾನು ಯಾವುದರದ್ದೂ ಅಲ್ಲ. ಕೆಲವರೆಲ್ಲ ಇದ್ದಾರೆ, ದೊಡ್ಡವರು ಯಾಕೆ? ಉಂಟು ದೊಡ್ಡ ಗಂಟು. ಅದಿಲ್ಲ ಅಂದರೆ ಅವರು ಏನೂ ಅಲ್ಲ. ರಾವಣ ಹಾಗೋ? ರಾವಣನಿದ್ದಾನೋ ಇದು ಎಲ್ಲವು ಯಾವಾಗಲೂ ಉಂಟು. ಬೇಕಾದಾವಾಗ. ಸ್ವಯಂ ಸಂಪಾದಿಸುವ ಸಾಮಾರ್ಥ್ಯ  ಇದ್ದವ ಬಡವ ಅಂತ ಹೇಳಕೂಡದು.  ಬಡವ ಯಾರು? ಈಗ ತಿನ್ನದೇ ಕಟ್ಟಿಡುವವ.  ನಾಳೆಗೆ ಏನು ಮಾಡುವ? ಕಳಕೊಂಡರೆ ಅವನಿಗೆ ಸಂಪಾದಿಸುವುದಕ್ಕಾಗುವುದಿಲ್ಲ. ಸಂಪಾದಿಸುವವನಿಗೆ ಕಳೆದುಕೊಳ್ಳುವ ಹಕ್ಕಿರುವುದು. ಏನು ನನ್ನ ಅಪ್ಪ ನನಗೆ ಕೊಟ್ಟ ಆಸ್ತಿಯೋ ಈ ಲಂಕೆ? ಅಲ್ಲ ನನ್ನಲ್ಲಿ ತುಂಬಿದಂತಹ ಈ ಐಶ್ವರ್ಯ ಏನು ವರದಕ್ಷಿಣೆಯಾಗಿ ಬಂದದ್ದೋ? ಹಾಗಾದರೆ ಎಲ್ಲವೂ ನಾನು ನನ್ನಿಂದ. ಹೀಗೆ ಹೇಳಕೂಡದು ಹೌದು. ಆದರೆ. ರಾಜ ಕಾರಿಣಿಯಾದವ ಅಧ್ಯಾತ್ಮ ವಾದಿಯಲ್ಲ. ಎಲ್ಲ ದೇವರು ಕೊಟ್ಟದ್ದು ಅಂತ ಹೇಳ್ತಾ ಕೂತ್ರೆ ನಾಳೆ ಊರಲ್ಲಿ ಪ್ರಜೆಗಳು “ ಮಹಾರಾಜ ಊರಲ್ಲಿ ಮಳೆ ಇಲ್ಲ ಬೆಳೆ ಇಲ್ಲ” ಅಂಥ ಹೇಳಿದ್ರೆ ದೇವರು ಕೊಟ್ಟಾನು ಅಂತ ಹೇಳ್ಬೇಕಾದೀತು. ಆದರೆ ಅದನ್ನು ಹೇಳುವುಕಕ್ಕೆ ಸಿದ್ಧನಿಲ್ಲದೇ ಇದ್ದಂತಹ ಪ್ರಭು...ಎಲ್ಲವನ್ನು ನಾನೇ ಮಾಡ್ತೇನೆ ಅಂತ ಒಪ್ಪಿಕೊಳ್ಳಬೇಕು. “  

          “ ಚದುರಂಗ ಸೇನೆ... ಇದು ನಾನು ಪ್ರಭುವಾದದ್ದರಿಂದ ಬಂದು ಸೇರಿದ್ದು ಇಲ್ಲಿ. ನನ್ನಿಂದ ಅದು.  ನಾನಾದ ಮೇಲೆ ಅದು. ಎಲ್ಲಾ ಆದ ಮೇಲೆ ನಮ್ಮಲ್ಲಿ ಯಾರು ಮುಖಂಡ? ನೀವೆಲ್ಲ ಕೂಡಿ ನನ್ನನ್ನು ಮುಖಂಡನನ್ನಾಗಿ ಮಾಡಿ ಅಂತ ಬೇಡಿಕೊಂಡವನಲ್ಲ. ನನ್ನ ನಾಯಕತ್ವದಲ್ಲಿ ಚಂದುರಂಗ ಸೇನೆ ವ್ಯವಸ್ಥೆ ನಾನು ಮಾಡಿದ್ದು. ಹಾಗಾಗಿ ಈ ಸಂಪೂರ್ಣ ಸೈನ್ಯ ನನಗೋಸ್ಕರ. ಅದು ನನಗಾಗಿ ನಾಶ ಅದ್ರೆ ಸಂತೋಷ ಪಡುವವ. ಯಾಕೆ? ಇಷ್ಟುದಿನ ಕಟ್ಟಿ ಸಾಕಿದ್ದೇನಲ್ಲ? ಇದು ಪ್ರಯೋಜನಕ್ಕೆ ಒಂದು ಕಾಲದಲ್ಲಿ ಬಿತ್ತು ಅಂತ ಅಂದ್ರೆ ತೃಪ್ತ ನಾನು. “

                ಸೈನಿಕರು ತನಗಾಗಿ ಸತ್ತರೂ ತೃಪ್ತನಾಗುವ ರಾವಣ ತನಗಾಗಿ ಸತ್ತ ಒಬ್ಬನಿಗಾಗಿ ಬಹಳ ಮರುಗುತ್ತಾನೆ. 

ಇಷ್ಟೆಲ್ಲ ಚದುರಂಗ ಸೇನೆ ನನಗಾಗಿ ಪ್ರಾಣ ತೆತ್ತಿತು. ಆದರೂ ಯಾರೂಅಲ್ಲಿ ತಲೆ ಕತ್ತರಿಸುವಾಗ ಜೀವ ಭಯದಿಂದ ರಾಮನಲ್ಲಿ ಶರಣಾಗಲಿಲ್ಲವಲ್ಲ.?   ಆದರೂ ಆದರೂ ಒಬ್ಬ ಜೀವಗಳ್ಳನಾಗಿ ಹೋದನಲ್ಲ ರಾಮನ ಬಳಿಗೆ. ಸಾಹೋದರ್ಯದ ವಿಷಯದಲ್ಲಿ ರಾಮ ಗೆದ್ದು ಬಿಟ್ಟ. ಎಂಥಹಾ ಅವಿಭಕ್ತ ಕುಟುಂಬ ನಮ್ಮದ್ದು. ಅಂಥಹ ಸಾಹೋದರ್ಯ ನಮ್ಮದು. ಅವನಿಗಿರುವ ಸಾಹೋದರ್ಯ ಎಂಥದ್ದು? ತನ್ನ ಬೆವರು ಬೀಳುವಲ್ಲಿ ನೆತ್ತರನ್ನೇ ಹರಿಸ ಬಲ್ಲ ಸಹೋದರ!  ಇಲ್ಲಿ  ಸಾಹೋದರ್ಯವನ್ನು ಗೌರವಿಸುವ ರಾಮ ,  ಹೋದಲ್ಲೆಲ್ಲ ಸಹೋದರ್ಯವನ್ನು ಬೇದಿಸಿಯೇ ಬಿಟ್ಟನಲ್ಲ. ಆ ಒಂದು ವಿಚಾರದಲ್ಲಿ ರಾವಣ ತನ್ನ ಸೋಲನ್ನು ಒಪ್ಪಿಕೊಳ್ಳದೆ ನಿರ್ವಾಹವಿಲ್ಲ. ಯಾಕೆ? ತನ್ನ ತಮ್ಮ ವಿಭೀಷಣನ್ನು ಆ ಕಡೆಗೆ ಸೆಳೆದುಕೊಂಡು ಬಿಟ್ಟನಲ್ಲ. ಇಲ್ಲಿ ಕೆಟ್ಟವ ಅಂತ ಅನ್ನಿಸಿಕೊಂಡರೂ ಅಲ್ಲಿ ಒಳ್ಳೆಯವ ಅಂತ ಹೊಗಳಿಸಿಕೊಂಡ, ವಿಭೀಷಣ...ಒಬ್ಬನನ್ನು ರಾವಣ ಆತ ಬದುಕಿದ್ದರೂ ಕಳೆದುಕೊಂಡ ತಾನು ಕಳೆದುಕೊಂಡರೂ ಆತ ಬದುಕಿದ್ದಾನೆ... ಇನ್ನೊಬ್ಬ ಇನ್ನೊಬ್ಬ...ತನಗಾಗಿ ಸತ್ತು ಅತನನ್ನು ಕಳೆದುಕೊಂಡು ಬಿಟ್ಟ. ಬಲು ದೊಡ್ಡ ನಷ್ಟ. ಎಂತಹಾ ಮಗ ಮೇಘನಾದ. ಅತ್ಮಾವೈ ಪುತ್ರನಾಮಾಸಿ. ಅಪ್ಪ ಮನಸ್ಸಿನಲ್ಲಿ ಭಾವಿಸಿದ್ದನ್ನು ಮಾಡಿತೋರಿಸುವವ. ಆ ಮಟ್ಟಿಗೆ ರಾವಣ ದಶರಥನಲ್ಲಿ ಸ್ಪರ್ಧಿಸಬಹುದಿತ್ತು. ಎಂತ ರಾಮನನ್ನು ಪಡೆದ ದಶರಥ? ಆತ ತಾನು ಸತ್ತು ರಾಮನನ್ನು ಉಳಿಸಿದ.  ಆದರೆ ಎಂತಹ ಪುತ್ರನನ್ನು ಬಲಿಕೊಟ್ಟು ರಾವಣ ಬದುಕಿದ. ರಾವಣ ಮರುಗಿದ.

ಮಗ ಇಂದ್ರಜಿತುವಿನ ಬಗ್ಗೆ ರಾವಣ ಅಂತರಂಗದ ಮಾತುಗಳು...” ಹುಡುಗ ಪಾದ ಮುಟ್ಟಿ ನಮಸ್ಕಾರ ಮಾಡಿಯಾನು ಮುಖ ನೋಡಿ ಅರ್ಥ ಮಾಡಿಕೊಂಡಾನು. ‘ಚಿಂತೆ ಏಕೆಲೆ ಜೀಯಾ? ರಿಪುಕುಲಕೆ ಅಂತಕನು ತಾನು..” ಇಂಥ ಮಕ್ಕಳು ಎಲ್ಲಿದ್ದಾರೆ ಯಾವ ಅಪ್ಪನಿಗಿದ್ದಾರೆ ಅಂತಹ ಇಂದ್ರಾರಿ ರಣವೀಳ್ಯವನ್ನು ಬೇಡಿದ., ನಾನೇಕೆ ಕೊಟ್ಟೆ? ಯಥಾರ್ಥಕ್ಕಾಗಿ ಹೇಳುವುದಾದರೆ..ಸತ್ತ ಸೇನೆಗೆ ಮರುಗೆನು ,ತನ್ನ ಸಾವಿಗೆ ಮರುಗನು ರಾವಣ.ಹೆತ್ತ ಮಕ್ಕಳೊಳ್ ಅಧಿಕನಲ್ಲಾ ಮಗ ಸುರೇಂದ್ರಜಿತು. ಇವತ್ತು ಅವನು ಸತ್ತು ನಾನು ಬದುಕಿದ್ದೇನೆ.  ಹೇಳಬಹುದು,  ಈಗ ಯಾಕೆ ನಿಮಗೆ ಈ ನೆನಪು ಬಂತು?  ಇದು ನೆನಪು ಬಂದದ್ದಲ್ಲ ವಿಭೀಷಣನಿಂದಾದ ವೃಣ ಕೆದಕಲ್ಪಟ್ಟಿತು. ಇಂದ್ರಾರಿಯ ಮರಣದಿಂದ ಆ ವೃಣ ಕೆದಕಲ್ಪಟ್ಟು ಎಲ್ಲ ನೆನಪಿಗೆ ಬಂತು. ಇಲ್ಲಿ ಬಂದಾಗ  ಹಿಂದೆ ನಡೆದದ್ದೆಲ್ಲ ನೆನಪಿಗೆ ಬಂತು. ಇಲ್ಲಲ್ಲವೇ ಇಂದ್ರಾರಿಗೆ ಕಟ್ಟಿದ್ದು,. ಬಂಗಾರದ ತೊಟ್ಟಿಲಲ್ಲಿ ಮಲಗಿಸಿ ಮಂಡೋದರಿ ಇಲ್ಲಲ್ಲವೇ ತೂಗಿದ್ದು. ಒಂದು ಬಾರಿ ಆ ಶಿವ ಪಾರ್ವತಿಯರಿಗೆ ಜೋಗುಳ ಹಾಡಿದ್ದೆ . ಈ ಇಪ್ಪತ್ತು ಕೈಗಳಲ್ಲಿ ಇಡೀ ಕೈಲಾಸವನ್ನೇ ಜೋಗುಳ ಹಾಡಿ ತೂಗಿದ್ದೆ. ಮತ್ತೊಮ್ಮೆ ನನ್ನ ಇಪ್ಪತ್ತು ಕೈಗಳನ್ನು ತೊಟ್ಟಿಲಾಗಿ ತೂಗಿದ್ದು ಆ ಪುತ್ರೋತ್ಸವದಲ್ಲಿ. ಅದರೆ ಅದು ಅರ್ಥ ಹೀನವಾಯಿತು. ಇದು ನಿಷ್ಫಲವಾಯಿತು. ಎಲ್ಲಿದೆ? ರಾವಣನ ಜೀವನದಲ್ಲಿ ಜೀವರಸ ಎಲ್ಲಿದೆ? ಆದರೂ ಬದುಕಿದ್ದೇನೆ ಯಾಕೆ ಬದುಕಿದ್ದೇನೆ? ಅರ್ಥಪೂರ್ಣವಾದ ಬದುಕನ್ನೇ ನಾನು ಸಾಗಿಸಿದವ. ಇನ್ನು ಬದುಕು ಇದ್ದಷ್ಟು ದಿವಸ ಅದು ಅರ್ಥ ಪೂರ್ಣವಾಗಬೇಕು ಎಂದು ಹಟತೊಟ್ಟವ. ಆದಕಾರಣ ನಿನ್ನ ರಾಮನೋ ರಣ ಭೀಮನೋ..


(ಮುಂದುವರೆಸುವ ಪ್ರಯತ್ನದಲ್ಲಿ)






Saturday, July 6, 2013

ಭಾಗವತೋ ಅಭಿನಂದನಮ್




ನಮ್ಮ ಮಿತ್ರರ ಅಥವ ನಮ್ಮ ಆತ್ಮೀಯರಲ್ಲಿ ಯಾರೋ ಒಬ್ಬರು ಮದುವೆಯಾಗಲು ಯೋಗ ಕೂಡಿಬರದೆಯೋ ಸಂಗಾತಿಯ ಹೊಂದಾಣಿಕೆಯಾಗದೆಯೋ ಹಲವರ ಮರುಕಕ್ಕೆ ಕಾರಣರಾಗುತ್ತಾರೆ. ಎಲ್ಲಾ ಅರ್ಹತೆ ಇದ್ದು ಮದುವೆಯ ಯೋಗ ಕೂಡದೇ ಇದ್ದಲ್ಲಿ ಏನು ಮಾಡೋಣ?  ಮದುವೆಯಾಗಲಿಲ್ಲ ಹೆಣ್ಣು ಅಥವಾ ಗಂಡು ಸಿಗಲಿಲ್ಲ ಎಂದು ಆತ ತನ್ನ ಸ್ವಭಾವ ಬದಲಿಸಿ ಕೆಟ್ಟವನಾಗುವುದಕ್ಕೆ ಸಾಧ್ಯವೇ? ಬಂದದ್ದು ಅನುಭವಕ್ಕೆ ಎಂದು ಪ್ರಾರಭ್ದದ ಹಾದಿಯನ್ನು ಸವೆಸುತ್ತಾ ಬದುಕುವುದು ರೂಢಿ. ಆದರೆ ಅಂಥವನು ಒಂದು ದಿನ ತನ್ನ ಮದುವೆ ಆಮಂತ್ರಣ ಹಿಡಿದು ಕೈ ಮುಂದೆ ಒಡ್ದಿದಾಗ ಕಿರುನಗುವೊಂದು ಬರದೆ ಉಳಿಯಲು ಸಾಧ್ಯವೇ? ಆ ಆಮಂತ್ರಣ ಓದುತ್ತಿದ್ದಂತೆ ಸಂಭ್ರಮಿಸುವ ಮನಸ್ಸಾಗುತ್ತದೆ. ಮದುವೆಯ ದಿನಾಂಕ ನೋಡಿ ತಮ್ಮ ಪುರುಸೊತ್ತನ್ನು ಲೆಕ್ಕ ಹಾಕುತ್ತದೆ ನಮ್ಮ ಮನಸ್ಸು.  ಇತ್ತೀಚೆಗೆ  “ ರಘುರಾಮಾಭಿನಂದನಮ್” ಎಂಬ ಆಮಂತ್ರಣದ ಕರೆಯೋಲೆ ನೋಡಿದಾಗಲೂ ಇದೇ ಭಾವ ಸುಳಿದುದಕ್ಕೆ ಅಚ್ಚರಿ ಪಡಬೇಕೋ ತಿಳಿಯದು.  ಯಾಕೆಂದರೆ ಯಕ್ಷಗಾನದ ತಮ್ಮ ಪ್ರತಿಭೆಯಿಂದ ಹಿರಿಯ ದೈತ್ಯ ಭಾಗವತ ಅಂತಲೇ ಹೇಳಬಹುದು ಶ್ರೀ ಪುತ್ತಿಗೆ ರಘುರಾಮ ಹೊಳ್ಳರು ಸನ್ಮಾನಿಸಲ್ಪಡುತ್ತಾರೆ ಎಂದಾಗ ಮುಖದಲ್ಲಿ ಕಿರುನಗುವೊಂದು ಮೂಡದೇ ಇದ್ದರೆ,  ಅವರ ಹಾಡುಗಾರಿಕೆಗೆ ಕೈಚಪ್ಪಾಳೆ ತಟ್ಟಿದುದಕ್ಕೆ ಅರ್ಥಉಂಟೇ? 


ತನ್ನ ಪ್ರತಿಭೆಗೆ ತಾನೇ ಬೆನ್ನು ತಟ್ಟಿಕೊಳ್ಳುವುದು., ತನಗೆ ಪ್ರಶಸ್ತಿಗಾಗಿ ತಾನೇ ಅರ್ಜಿಗುಜರಾಯಿಸಿ ವ್ಯವಹಾರ ಕುದುರಿಸುವುದು. ತನ್ನ ಕಲಾಪ್ರೋತ್ಸಾಹಕ್ಕೆ ತಾನೇ ಗುಂಪು ಕಟ್ಟಿ ಚಪ್ಪಾಳೆ ಹೊಡೆಸುವುದು...ಇದೆಲ್ಲ ಇಂದಿನ ಕಲಾ ಪ್ರಪಂಚದಲ್ಲಿ ಸಾಮಾನ್ಯವಾಗುವ ಅಂಶ. ಒಂದೆರಡು ರಾಗ ಕಲಿತವನು ವಾಸ್ತವದಲ್ಲಿ ಅದೂ ದೊಡ್ಡ ಸಾಧನೆಯೇ. ಆದರೂ ಒಂದೆರಡು ರಾಗ ಪಾಂಡಿತ್ಯಕ್ಕೆ ಗಾನ ಗಂಧರ್ವನೋ ಗಾನ ಕೋಗಿಲೆಯೋ ಆಗಿ ಸಪ್ತಾಹ ಆಚರಿಸಿ ಶಾಲು ಹೊದೆಸಿಕೊಳ್ಳುವುದು ಇದೆಲ್ಲ ಒಂದು ಸಾಮಾರ್ಥ್ಯಕ್ಕೆ ನಿದರ್ಶನವಾಗುತ್ತದೆ.  ಒಂದು ಸಿನಿಮಾದಲ್ಲಿ ನಟಿಸಿದ ಕೂಡಲೇ (ಸಖತ್ತಾಗಿ ಫೈಟಿಂಗ್ ಸಾಂಗುಗಳಲ್ಲಿ) ಮಿಂಚಾಗುತ್ತಾನೆ. ಯಾವುದೋ ಒಂದು ಸ್ಟಾರ್ ಬಿರುದು ಅದೂ ಕನ್ನಡ ನಟನಿಗೆ ಬಂದು ಬಿಡುತ್ತದೆ. ಹುಚ್ಚು ಕುರುಡು ಅಭಿಮಾನ ಹೆಚ್ಚಿಸುವುದೇ ಆ ನಟನ ವ್ಯವಹಾರ ಕುಶಲತನಕ್ಕೆ ನಿದರ್ಶನವಾಗುತ್ತದೆ. ಹಾಗೆ ಅಭಿಮಾನ ಹೆಚ್ಚಿದಂತೆ ಆತನ ಕಾಲ್ ಶೀಟ್ ಸಂಭಾವನೆ ಕೂಡ ಹೆಚ್ಚುತ್ತಾ ಸಾಗುತ್ತದೆ. ಇದಕ್ಕೆ ಅವನ ಭಂಡವಾಳ ಏನೂ ಇರುವುದಿಲ್ಲ. ಈ ನಡುವೆ  ಹೆಚ್ಚಿದ ಸಂಭಾವನೇ ಕೂಡ ಒಂದು ಮಾನದಂಡ (ಮಾನವೇ ದಂಡ) ವಾಗಿರುತ್ತದೆ. ಪರೋಕ್ಷವಾಗಿ ನಿರ್ಮಿಸುವ ಸಿನಿಮಾ ಬಜೆಟ್ ಕೂಡ ಹೆಚ್ಚುತ್ತದೆ. ಈ ಮಧ್ಯೆ ಬಡ ಪ್ರೇಕ್ಷಕ ಮಾತ್ರ ತನ್ನ ಕಿರು ಸಂಪಾದನೆಯಿಂದ ಟಿಕೆಟ್ ತೆಗೆದು ಈ ಬಜೆಟ್ ನ್ನು ತುಂಬಿಸುತ್ತಾನೆ. ಪರೋಕ್ಷವಾಗಿ ನಟನ ಐಷಾರಾಮಿ ಜೀವನದ ಪಲ್ಲಂಗ ಸುಖಕ್ಕೆ ಈತ ಕಷ್ಟ ಪಟ್ಟು ದುಡಿದ ಚಿಕ್ಕಾಸು ದೇಣಿಗೆಯಾಗಿ ಸಲ್ಲುವುದು ಪ್ರೇಕ್ಷಕನ ಅರಿವಿಗೇ ಬರುವುದಿಲ್ಲ. ಈತ ಸ್ಟಾರ್ ಗಿರಿ ಕೊಟ್ಟು ಅತನನ್ನು ಮೇಲಕ್ಕೆ ಏರಿಸಿಯಾಗಿಬಿಟ್ಟಿದೆ. ಇದಕ್ಕೆ ಕಲಾ ಸೇವೆಯ ಲೇಬಲ್ ಬೇರೆ. ಯಾವೋಬ್ಬ ನಟನೂ ತನ್ನ ಅಭಿಮಾನಿಗಾಗಿ ಸಂಭಾವನೆ ಇಲ್ಲದೇ ನಟಿಸಿದ ದೃಷ್ಟಾಂತ ಇದೆಯೇ? 

 ಈಗಿನ ಕಲಾ ಪ್ರಪಂಚ ವ್ಯಾಪಾರೀ ಮಯವಾಗಿದೆ  ಕೇವಲ ಕಲಾಸಂಪತ್ತು ಮಾತ್ರ ಇದ್ದರೆ ಸಾಲದು ವ್ಯವಹಾರ ಕುಶಲಿಗಳೂ ಆಗಿರಬೇಕು. ಈಗಿನ ಕಲಾಪ್ರಪಂಚ ಎಂದರೆ,  ಮೊದಲು ಊರಿನ ಗೋಳಿ ಮರದ ಅಡಿಯಲ್ಲಿ ಆಗುವ ವಾರದ ಸಂತೆಯನ್ನು ಜ್ಞಾಪಕಕ್ಕೆ ತರುತ್ತದೆ. ಸಂತೆಯಲ್ಲಿ ಹೇಗೆ? ತನ್ನಲ್ಲಿದ್ದ ವಸ್ತುವಿಗೆ ಗ್ರಾಹ್ಯ ಗುಣವಿಲ್ಲದೇ ಇದ್ದರೂ ಅದನ್ನು ತುಂಬಿಸಿ, ಅದಕ್ಕೆ ಬೇಡಿಕೆಯನ್ನು ಸೃಷ್ಟಿಸಬಲ್ಲವನು ನಿಜವಾದ ವ್ಯವಹಾರ ಕುಶಲಿ ವ್ಯಾಪಾರಿಯಾಗುತ್ತಾನೆ. ಬೇಡಿಕೆ ಕೃತ್ರಿಮದ್ದಾದರೂ ವ್ಯಾಪಾರ ಲಾಭದಾಯಕವಾಗಿರುತ್ತದೆ. ಅದೇ ಅಲ್ಲವೇ ಆಗಬೇಕಾದದ್ದು. ವ್ಯಾಪಾರ ಎನ್ನುವುದೇ ಅದಕ್ಕೆ. ಇಲ್ಲಿ ಎಲ್ಲ ಪ್ರಯೋಗಗಳೂ ಸಹಜ ಮತ್ತು ನ್ಯಾಯಯುತವಾದದ್ದು ಎನಿಸಲ್ಪಡುತ್ತದೆ. ಆದರೆ ಕಲಾ ಪ್ರಪಂಚದಲ್ಲೂ ಇದೇ ಸಹಜವಾದಾಗ ನಿಜವಾಗಿ ಕಲಾಸ್ವಾದಿ ನೈಜ ಕಲೆ ಮರೆಗೆ ಸರಿದಂತೆ ತಾನು ಮರೆಗೆ ಸರಿಯುತ್ತಾನೆ. 

ಹೊಳ್ಳಣ್ಣನಿಗೆ ಸನ್ಮಾನ ಆಗುವುದೇ ಅಪರೂಪ. ಬಹಶಃ ಮಳೆ ಬಾರದೆ ಮೋಡ ಕಪ್ಪಾಗಿ ಕಪ್ಪಾಗಿ ಗಾಳಿಯ ರಭಸಕ್ಕೆ ಎಲ್ಲೋ ಹೋದಂತೆ ಮತ್ತೊಂದು ದಿನ ಇದ್ದಕ್ಕಿದ್ದಂತೆ ಯಾವುದೇ ಸೂಚನೆಇಲ್ಲದೇ ಧೋ ಎಂದು ಮೇಘವರ್ಷವಾದರೆ...? ಹಾಗೆ ಎಂತಹ ಸನ್ಮಾನ ನೋಡಿ ಮೂರು ದಿನ ಅತ್ಯಂತ ವಿಭವದಲ್ಲಿ ವೈವಿಧ್ಯಮಯ ಸನ್ಮಾನ ಕಾರ್ಯಕ್ರಮ. ಅದು ಯಕ್ಷಗಾನ ಕೇಂದ್ರವಾದ ಮಂಗಳೂರು ಪುರಭವನದಲ್ಲಿ.ನಿಜಕ್ಕೂ ಇದು ಶ್ಲಾಘನೀಯ ಕಾರ್ಯಕ್ರಮ. ಮಿತ್ರನ ಮದುವೆಗೆ ಹೋಗಲಿಕ್ಕೆ ಆಗುತ್ತದೋ ಇಲ್ಲವೋ ಬೇರೆ ಮಾತು.. ಆದರೆ ಮದುವೆ ಅಗ್ತ್ತದಲ್ಲ ಅದಕ್ಕಿಂತ ಸಂತೋಷ ಬೇರೆ ಇರದು. 

ಹೊಳ್ಳಣ್ಣ ಯಕ್ಷಗಾನ ಕಂಡ ಅದ್ಭುತ ಭಾಗವತ. ದೈತ್ಯ ಕಂಠದ ದೈತ್ಯ ಪ್ರತಿಭೆಯ ಕಿರು ಶರೀರದ ಭಾಗವತ. ಹಲವು ಸಲ ರಂಗಸ್ಥಳದ ಸಿಂಹಾಸನದ ಹಿಂದೆ ಇವರು ಕಾಣುವುದೇ ಇಲ್ಲವೇನೋ ಎನ್ನಿಸಿದರು ಹೊರ ಹೊಮ್ಮುವ ಏರು ಶ್ರುತಿಯ ಸ್ವರ ಮಾತ್ರ ಅದ್ಭುತ ಎನಿಸಲ್ಪಡುತ್ತದೆ. ಅದು ಕಂಠದ ಪೂರ್ಣ ಸಾಮಾರ್ಥ್ಯಕ್ಕೆ ಸವಾಲು ಹಾಕಿದ ಹಾಗಿರುವ ಸ್ವರ. ಇಷ್ಟಾದರೂ ಸಲೀಸಾದ ಮುಖಭಾವ. ಸಹಕಲಾವಿದರನ್ನು ಪ್ರಚೋದಿಸುವ ಹಾವಭಾವ. ಎಲ್ಲೇಲ್ಲಿಯೋ ನೋಡಿ ಮಾತಾಡಿ ವಾಹನ ಚಲಾಯಿಸಿದರೂ ವಾಹನ ರಸ್ತೆಯಲ್ಲಿ ಸುರಕ್ಷಿತವಾಗಿ ಸಾಗಿದಂತೆ ಇರುವ ಗಾಯನ ಶೈಲಿ ನಿಜಕ್ಕೂ ಅದ್ಭುತ ಪ್ರತಿಭೆ. ತಾಳ ಬಡಿಯದೇ ಇದ್ದರೂ ಶೂನ್ಯವಾಗಿ ಇದ್ದ ತಾಳ ಧುತ್ತನೇ ಪ್ರತ್ಯಕ್ಷವಾದ ಹಾಗೆ ಇರುವ ಲಯಶುದ್ದಿ. ಇದು ಕೇವಲ ಪ್ರತಿಭೆ ಮಾತ್ರ ಇದ್ದರೆ ಸಾಲದು ಸಾಧನೆಯೂ ಬೇಕಾಗುತ್ತದೆ. ಈ ಮಟ್ಟಿಗೆ ಹೊಳ್ಳರದ್ದು ಅದ್ವಿತೀಯ ಸಾಧನೆ. ಪದ ಹೇಳುತ್ತಾ ಪಕ್ಕದವರೋಂದಿಗೇ ಕೈಸನ್ನೇ ಕಣ್ಸನ್ನೇಯಲ್ಲಿ ಮಾತನಾಡುತ್ತಾ ನಂತರದ ಚರಣವನ್ನು ಅದೇ ವೇಗದಲ್ಲಿ ಅದೇ ಲಯದಲ್ಲಿ ತೆಗೆಯುತ್ತಾರೆ. ಅದು ಎಷ್ಟು ಸಲೀಸು...? ಅಚ್ಚರಿಯಾಗದೇ ಇರಲು ಸಾಧ್ಯವೇ?

ಅರ್ಜಿ ಗುಜರಾಯಿಸದೇ ಪಾಠ ಒಪ್ಪಿಸದೇ ಖಾಸಗಿಯಾಗಿ ಅಭಿಮಾನಿಗಳಿಂದ ಸಿಗುವ ಸ್ವಯಂಪ್ರೇರಿತ ಸನ್ಮಾನ,  ಕಲಾವಿದನೆನ್ನಿಸಿಕೊಂಡವನಿಗೆ ಬಹಳ ಮೌಲ್ಯವನ್ನು ತರುತ್ತದೆ. ಇಲ್ಲಿ ಯಾವ ವಶೀಲಿಯಾಗಲೀ ಯಾವುದೇ ಅಂಧಾಭಿಮಾನವಿಲ್ಲದೆ ಅಪ್ಪಟ ಅಭಿಮಾನದಿಂದ ಸನ್ಮಾನ ನಡೆಯುತ್ತಿದ್ದರೆ ಅದಕ್ಕೆ ನಮ್ಮ ಹೊಳ್ಳಣ್ನನಷ್ಟು ಅರ್ಹವ್ಯಕ್ತಿ ಬೇರೆ ಇಲ್ಲ.
ನಮ್ಮ ಹೊಳ್ಳಣ್ಣನಿಗೆ ಶುಭ ಹಾರೈಕೆಗಳನ್ನು ಹಾರೈಸುತ್ತಾ ಸಂಭ್ರಮದಿಂದ ಸನ್ಮಾನಿಸುವ ಕಲಾಭಿಮಾನಿಗಳಿಗೆ ಈ ಮೂಲಕ ಶುಭ ಹಾರೈಕೆಗಳನ್ನು ಹಾರೈಸುತ್ತೇನೆ.
ಯಕ್ಷಗಾನಂ ಗೆಲ್ಗೆ