ಇಪ್ಪತ್ತು ಇಪ್ಪತ್ತೈದು ವರ್ಷಗಳ ಹಿಂದೆ ಒಂದು ಸಿನಿಮಾಕ್ಕೆ ಹೋಗಬೇಕೆಂದರೆ ಎರಡು ವಾರದ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಅದಕ್ಕೆ ಸಮಯ ಹೊಂದಿಸಿ ಕೆಲಸದ ಒತ್ತಡ ಎಲ್ಲ ಮುಗಿಸಿ ಮನೆ ಮಂದಿಯ ಎಲ್ಲರ ಸಮಯ ಹೊಂದಿಸಿ ಒಂದು ಸಿನಿಮಾಕ್ಕೆ ಕುಟುಂಬ ಸಹಿತ ಹೋಗುವುದು, ಬರುವಾಗ ಹೋಟೆಲಿಗೆ ಹೋಗಿ ಮಸಾಲೆ ದೋಸೆ ತಿಂದು ಮನೆಗೆ ಬರುವುವುದೆಂದರೆ ಅದೊಂದು ಸಂಭ್ರಮ. ಆನಂತರ ಒಂದೆರಡುವಾರ ನೋಡಿದ ಸಿನಿಮಾದ ಪರಿಣಾಮ ಹಾಗೇ ಇದ್ದುಬಿಡುತ್ತಿತ್ತು. ಸಿನಿಮಾದ ಕುರಿತು ಚರ್ಚೆ. ಹೀಗೆ ಒಂದು ಸಿನಿಮಾ ವೀಕ್ಷಣೆ ಎಂದರೆ ಅದೊಂದು ಸಂಭವ... ಆದರೆ ಈಗ? ಹಾಗಿತ್ತು ಎಂದು ಈಗಿನ ಮಕ್ಕಳಿಗೆ ಹೇಳಿದರೆ ಅಚ್ಚರಿ ಮಾತ್ರವಲ್ಲ, ನಮ್ಮದು ಮೂರ್ಖತನವಾಗಿಬಿಡುತ್ತದೆ. ಸಿನಿಮಾದ ಬಗ್ಗೆ ಹಾಗೆ ಸಂಭವಿಸುವುದಕ್ಕೆ ಏನುಂಟು?
ಇನ್ನು ನಮ್ಮೂರಲ್ಲಿನ ಯಕ್ಷಗಾನ ಬಯಲಾಟದ ವಿಷಯ ಇನ್ನಷ್ಟು ರೋಚಕ. ಸಿನಿಮಾದಂತೆ ಒಂದು ಹೊತ್ತಿನ ಕಾರ್ಯಕ್ರಮವಲ್ಲ. ರಾತ್ರಿ ಯಿಂದ ಬೆಳಗಿನ ತನಕದ ಒಂದು ಬಿಡು ಬೀಸಿನ ಕಾರ್ಯಕ್ರಮ. ಒಂದೆರಡು ತಿಂಗಳ ಮೊದಲೆ ಊರ ಹೋಟೆಲ್ ಅಂಗಡಿಗಳ ಬಾಗಿಲಿಗೆ ಆಟದ ನೋಟೀಸು ಅಂಟಿಸಿಬಿಡುತ್ತಾರೆ. ಆಗಲೇ ದಿನ ಲೆಕ್ಕ ಹಾಕಿ ಆಟಕ್ಕೆ ಹೋಗುವ ಕಾರ್ಯಕ್ರಮದ ರೂಪು ರೇಷೆ ಸಿದ್ದವಾಗುತ್ತದೆ. ಹಣವಿಲ್ಲದವರೇ ಹೆಚ್ಚಿರುವುದರಿಂದ ಖರ್ಚು ಹಿಡಿದಿಟ್ಟು ಹಣ ಉಳಿಸುವುದಕ್ಕೆ ತೊಡಗುತ್ತೇವೆ. ಚಿಲ್ಲರೆ ಖರ್ಚಾದರೂ ಹಾಗೆ ಕೂಡಿಡುವುದು ಒಂದು ಸಂಭ್ರಮ. ಯಕ್ಷಗಾನದ ಹುಚ್ಚು....ಸಿನಿಮಾದ ಹುಚ್ಚಿಗಿಂತಲೂ ದೊಡ್ಡ ಹುಚ್ಚು. ಅದು ದೀರ್ಘ ಅವಧಿಯ ನಶೆ.
ಆಗಿನ ಯಕ್ಷಗಾನ ಬಯಲಾಟಗಳು ಹಾಗಿತ್ತೋ ಅಲ್ಲ ಮನುಷ್ಯರಿಗೆ ಸಿಗುವ ಮನರಂಜನೆ ಸೀಮಿತವಾಗಿತ್ತೋ ಅಂತ ಹೇಳುವುದು ಕಷ್ಟವಾದರೂ....ಆಗಿನ ಯಕ್ಷಗಾನ ಬಯಲಾಟದ ಉತ್ಕೃಷ್ಟತೆಯನ್ನು ತಳ್ಳಿಹಾಕುವ ಹಾಗಿಲ್ಲ. ಒಂದಿಷ್ಟು ಕಣ್ಣೆವೆ ಮುಚ್ಚಿದರೂ ಎಲ್ಲಿ ಆಟದ ಅನುಭವ ಕಳೆದು ಹೋಗುತ್ತದೋ ಎಂಬ ಆತಂಕದಲ್ಲಿ ನಿದ್ದೆಯನ್ನು ಕಟ್ಟಿ ಕುಳಿತು ಮರುದಿನಕ್ಕೆ ನಿದ್ದೆಯನ್ನು ಕೂಡಿಸಿಟ್ಟು , ಮರುದಿನ ಅದನ್ನು ದಿನವಿಡಿ ವ್ಯಯಿಸುವ ಮಜವೇ ಬೇರೆ.
ಕ್ರಮೇಣ... ಈಗ ಬಾರದ ನಿದ್ದೆ ಬಂದು ಬಿಡುತ್ತದೆ. ಇಲ್ಲದ ಕೆಲಸ ನೆನಪಾಗಿಬಿಡುತ್ತದೆ. ಅಂತೂ ಯಕ್ಷಗಾನ ಅಲ್ಲವಾ ಅಂತ ಹೋದರೂ..... ಬುಡವನ್ನೂ ನೋಡುವುದಿಲ್ಲ ತುದಿಯೂ ನೋಡುವುದಿಲ್ಲ...ಸಿಕ್ಕಿದ ಸ್ನೇಹಿತರೊಂದಿಗೆ ಪಟ್ಟಾಂಗ ಹೊಡೆದು ಹೊರಗೆ ಸಿಕ್ಕಿದ ಚಟ್ಟಂಬಡೆ ಚಹ ಸವಿಯುವುದರಲ್ಲೇ ಅರ್ಧ ಆಟ ಕಳೆದುಬಿಡುತ್ತದೆ.
ಕಾಲಕ್ಷೇಪಕ್ಕೆ ಅಂದರೆ ಸಮಯ ಕಳೆಯಲು ಮನರಂಜನೆ ಅಂತಾದರೂ ಮೊದಲು ಸಮಯಾವಕಾಶ ಮಾಡಿಕೊಂಡು ಆಟಕ್ಕೆ ಮತ್ತೆ ಸಿನಿಮಾ ನೋಡಲು ಹೋಗುವುದಿತ್ತು. ಈಗ ಸಮಯ ಇದ್ದರೂ ಹೋಗುವ ಮನಸ್ಸಾಗುವುದಿಲ್ಲ ಕಾರಣಗಳು ಹಲವಿರಬಹುದು. ಕೈಯ ಬೆರಳ ತುದಿಯಲ್ಲೇ ಬೇಕಾದಷ್ಟು ಮನರಂಜನೆಯ ವೈವಿಧ್ಯಮಯ ಅಭಿರುಚಿಗಳಿರುತ್ತವೆ ಎಂಬುದು ಒಂದಾದರೆ ಈಗ ಮೊದಲಿನ ಉತ್ಕೃಷ್ಟತೆ ಇಲ್ಲ ಎಂಬುದು ಅಷ್ಟೇ ಮುಖ್ಯವಾಗುತ್ತದೆ.
ಪರಿವರ್ತನೆ ಜಗದ ನಿಯಮ. ಇದು ಜಗತ್ತು ಪರಿವರ್ತಿಸುತ್ತಿದೆಯೋ ಇಲ್ಲ ಮನುಷ್ಯ ಸ್ವತಃ ಪರಿವರ್ತಿಸುತ್ತಿದ್ದಾನೊ ಇಲ್ಲಾ ಇದು ಪ್ರಕೃತಿಯ ಸಹಜ ಧರ್ಮವೋ ಜಿಜ್ಞಾಸೆ ಜಿಜ್ಞಾಸೆಯಾಗಿಯೇ ಉಳಿದಿದೆ. ಇದರ ಪರಿಣಾಮವೋ ಎನೋ ನಾವು ನಮ್ಮ ಜನಾಂಗ ಅಂದರೆ ಈಗ ನಲ್ವತ್ತರಿಂದ ಮೇಲಿನ ವಯೋಮಾನದವರು ಅಗಾಧವಾದ ಬದಲಾವಣೆಯನ್ನು ಪರಿವರ್ತನೆಯನ್ನ ಪ್ರತ್ಯಕ್ಷವಾಗಿ ಕಂಡು ಹೋಗಿದ್ದೇವೆ. ಜಗತ್ತು ಬದಲಾದಂತೆ ಅದಕ್ಕೆ ಹೊಂದಿಕೊಂಡು ಹಲವಾರು ಬದಲಾವಣೆಗಳಾಗಿವೆ. ಮೊದಲು ಪತ್ರ ಬರೆದು ಪ್ರತಿಕ್ರಿಯೆಗೆ ತಿಂಗಳವರೆಗೆ ಕಾಯುತ್ತಿದ್ದವರು ಇಂದು ಮಿಂಚಿನಂತೆ ಕ್ಷಣ ಮಾತ್ರದಲ್ಲಿ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದಾರೆ. ಈ ಬದಲಾವಣೆ ಮನರಂಜನೆ ಮತ್ತು ಹವ್ಯಾಸಗಳಲ್ಲಿಯೂ ತನ್ನ ಪ್ರಭಾವವನ್ನು ಬೀರಿ ಜನರ ಅಭಿರುಚಿಯನ್ನೇ ಬದಲಾಯಿಸಿದೆ. ಮೊದಲು ಆಟದಲ್ಲಿ ವೇಷ ಹಾಕಿ ದಿನ ಕಳೆದು ಅದು ಪತ್ರಿಕೆಯಲ್ಲಿ ಬಂದು , ಆ ಪತ್ರಿಕೆ ಕಲಾವಿದನ ಕೈಗೆ ಸಿಗುವಾಗ, ಅಥವಾ ಯಾರೋ ಹೇಳುವಾಗ ಆತನಿಗೆ ಮಾಡಿದ ಪಾತ್ರವನ್ನು ನೆನಪಿಸುವ ಅಗತ್ಯ ಇರುತ್ತಿತ್ತು. ಈಗ ಹಾಗಿಲ್ಲ. ಪಾತ್ರ ಮಾಡಿ ವೇದಿಕೆಯಿಂದ ಕೆಳಗಿಳಿಯಬೇಕಾದರೆ ಅದಕ್ಕೆ ಪ್ರತಿಕ್ರಿಯೆ ಸಿಕ್ಕಿಬಿಡುತ್ತದೆ.
ಸಿನಿಮಾ ವೀಕ್ಷಣೆ ಇರಲಿ ಟಿ ವಿ ವೀಕ್ಷಣೆ ಇರಲಿ ಈಗ ಬಹಳ ಸಂಕೀರ್ಣವಾಗಿದೆ. ಮನೆಯಲ್ಲೇ ಟೀವಿ ಹಾಕಿ ಕೇಬಲ್ ಸಿಕ್ಕಿಸಿ ವಿದ್ಯುತ್ ಇದ್ರೆ ಮಾತ್ರ ನೋಡುವ ಕಾಲ ಕಳೆದಾಗಿದೆ. ಎಲ್ಲಿ ಬೇಕೆಂದರಲ್ಲಿ ಇವುಗಳನ್ನೆಲ್ಲ ನೋಡುವ ಅವಕಾಶಗಳಿವೆ. ಇದರಿಂದ ಈಗ ಉತ್ಕೃಷ್ಟತೆ ಎಂಬುದು ಅಷ್ಟು ಸುಲಭ ಸಾಧ್ಯವಾಗುವುದಿಲ್ಲ. ಕಲಾವಿದರೂ ಬಹಳ ಎಚ್ಚರದಿಂದ ಇರಬೇಕಾಗುತ್ತದೆ. ಈ ಎಚ್ಚರಿಕೆಯ ಘಂಟೆ ಬಹಳ ಹಿಂದೆಯೇ ಮೊಳಗಿತ್ತು, ಆದರೆ ಸಿನಿಮಾರಂಗ ಅದರಲ್ಲೂ ಕನ್ನಡ ಸಿನಿಮಾರಂಗವಾಗಲೀ ,ನಮ್ಮ ಯಕ್ಷಗಾನ ರಂಗವಾಗಲೀ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಈಗ ನೋಡಬಹುದು, ಹಲವು ಸಿನಿಮಾ ಮಂದಿರಗಳು ಮುಚ್ಚುತ್ತಿವೆ. ಮೊದಲಿನಂತೆ ಸಿನಿಮಾಗಳು ತಯಾರಾಗುವುದಿಲ್ಲ. ವ್ಯಾಪಾರವನ್ನೇ ಗುರಿಯಾಗಿಸಿಕೊಂಡ ನಿರ್ಮಾಪಕರು ಇದಕ್ಕೆ ಭಂಡವಾಳ ಹೂಡುವುದಕ್ಕೆ, ಅಥವಾ ಸಾಲ ಕೊಡುವವರು ಸಾಲ ಕೊಡುವುದಕ್ಕೆ ಹಿಂಜರಿಯುತ್ತಾರೆ. ಕಾರಣ ಇಷ್ಟೆ ಉತ್ಕೃಷ್ಟತೆಯ ಕೊರತೆ. ಉತ್ತಮ ಸಿನಿಮಾಗಳು ಇಲ್ಲ. ದೊಡ್ಡ ದೊಡ್ಡ ತಾರಾಮೌಲ್ಯ ಇದ್ದ ತಾರೆಗಳ ಹೆಸರೆ ಮರೆತು ಹೋಗುವಷ್ಟು ಅವರ ಸಿನಿಮಾ ವಿರಳವಾಗಿ ಹೋಗಿದೆ. ಸಿನಿಮಾಮಂದಿರದ ಮುಂದೆ ದೊಡ್ಡ ದೊಡ್ಡ ಕಟೌಟ್ ನಿಲ್ಲಿಸುವುದು ಅಪರೂಪವಾಗಿದೆ. ಜನರಿಗೆ ಪ್ರಜ್ಞೆ ಬಂದಿದೆ. ಬೇರೆ ಭಾಷೆಯ ವೈವಿಧ್ಯ ಮಯ ಸಿನಿಮಾಗಳು ಭಾಷೆ ತಿಳಿಯದೇ ಇದ್ದರೂ ನೋಡುವ ಅವಕಾಶಗಳಿವೆ. ಹಾಗಾಗಿ ಈ ಎಚ್ಚರಿಕೆಯ ಘಂಟೆಯ ಸದ್ದನ್ನು ಮೊದಲು ಕೇಳಿಸಿಕೊಳ್ಳಲಿಲ್ಲ. ಈಗ ಅದು ಕಠೋರವಾಗಿ ಅನುಭವಕ್ಕೆ ಬಂದಿದೆ. ಕೋವಿಡ್ ಸಮಯದಲ್ಲಿ ಸಿನಿಮಾರಂಗ ಮುಚ್ಚಲ್ಪಟ್ಟಾಗ ಸಿನಿಮಾ ತಂತ್ರಜ್ಞರು ಕಲಾವಿದರು ಹೊಟ್ಟೆ ಪಾಡು ಎಂದು ಹುಯಿಲಿಟ್ಟದ್ದನ್ನು ಕಂಡಿರಬಹುದು. ಆದರೆ ಈಗ ಕೋವಿಡ್ ಅಲ್ಲದೇ ಇದ್ದರೂ ಹೊಟ್ಟೆಪಾಡಿನ ಬಗ್ಗೆ ಮಾತನಾಡುವ ಧೈರ್ಯ ಯಾವ ಕಲಾವಿದನಿಗೂ ಇಲ್ಲ. ಯಾಕೆಂದರೆ ಕಲೆಗೆ ಮಾಡಿದ ಅಪಚಾರ ಅದನ್ನು ಅನುಭವಿಸುವ ಹಂತ ಬಂದಿದೆ. ಆಗ ಹೊಟ್ಟೆ ಪಾಡು ಏನು ಮಾಡೋಣ ಅಂತ ಕಲಾರಂಗವನ್ನು ಭಿಕ್ಷಾ ಪಾತ್ರೆ ಮಾಡಿಕೊಂಡವರು ಈಗ ಅಕ್ಷರಶಃ ಭಿಕ್ಷಾ ಪಾತ್ರೆಯನ್ನು ಕೈಗೆ ಎತ್ತಿಕೊಳ್ಳುವ ಸ್ಥಿತಿ ಬಂದಿದೆ. ಸಿನಿಮಾ ರಂಗ ಮುಚ್ಚುಕುರಿತು ಚಿಂತನೆ ನಡೆದಿದೆ.
ಯಕ್ಷಗಾನವೂ ಸಿನಿಮಾ ಕ್ಕಿಂತ ಏನೂ ಭಿನ್ನವಾಗಿಲ್ಲ. ಹೊಟ್ಟೆ ಪಾಡು ಅಂತ ಎಲ್ಲವನ್ನೂ ರಾಜಿ ಮಾಡಿಕೊಂಡು ಅಪಸವ್ಯಗಳನ್ನೇ ಸವ್ಯಗಳಾಗಿಸಿ ಕಲೆ ಭಿಕ್ಷೆಯನ್ನು ಕೊಡುತ್ತಿದೆ ಎಂಬುದನ್ನೇ ಮರೆತು ವರ್ತಿಸಿದವರು ಈಗ ಪಾಠ ಕಲಿಯುತ್ತಿದ್ದಾರೋ ಇಲ್ಲವೋ ಅಂತೂ ಆ ಹಂತಕ್ಕೆ ಬಂದು ತಲುಪಿದ್ದಾರೆ. ಹೇಗಿತ್ತು ಯಕ್ಷಗಾನ ಅಂತ ಕೇಳಿದರೆ ಪಾಪ ಹೊಟ್ಟೆ ಪಾಡು....ಎಂದು ಪ್ರೇಕ್ಷಕ ಸುಮ್ಮನಾಗಿಬಿಡುತ್ತಾನೆ. ಮೊದಲು ಬಸ್ ಸ್ಟಾಂಡ್ ನಲ್ಲಿ ಬಸ್ ನಲ್ಲಿ ಹೋಗಿ ಕುಳಿತಾಗ ಭಿಕ್ಷುಕರು ಯಾವುದೋ ಹಾಡನ್ನು ವಿಕಾರವಾಗಿ ಹಾಡುತ್ತಾ ಕೈ ಒಡ್ಡುತ್ತಿದ್ದರು. ಈಗಲೂ ಇರಬಹುದು. ಅವರ ಹಾಡಿಗೆ ವ್ಯಾಕರಣ ಇಲ್ಲ, ಆ ಸಂಗೀತಕ್ಕೆ ಶ್ರುತಿಯೂ ಬೇಡ ತಾಳವೂ ಬೇಡ. ಹಾಗೆಲ್ಲ ಇದ್ದರೂ ಯಾರೂ ಅದನ್ನು ವಿಚಾರಿಸುವುದೂ ಇಲ್ಲ, ಹತ್ತಿರ ಬಂದು ಹಾಡು ಹೇಳಿದರೆ ಅದನ್ನು ಕೇಳಿಸುವ ಮನಸ್ಸೂ ಇರುವುದಿಲ್ಲ. ಹಾಗೇ ಭಿಕ್ಷೆ ಹಾಕಿ ಬಿಡುತ್ತಿದ್ದರು. ಇಷ್ಟಾದರೂ ನಾನು ಗಂಟಲು ಹರಿದು ಚಿಲ್ಲರೆ ಸಂಪಾದಿಸಿದ್ದೇನೆ ಎಂದು ಭಿಕ್ಷುಕ ತಿಳಿಯುತ್ತಿದ್ದ. ಭಿಕ್ಷುಕನಿಗೆ ಯಾವ ಪರಿಮಿತಿಯೂ ಇಲ್ಲ. ಆದರೆ ನಾಗರೀಕ ಸಮಾಜದಲ್ಲಿ ಎಲ್ಲ ಪರಿಮಿತಿಗಳು ಇದ್ದರೂ ಸಹ ಕಲಾವಿದ ಹೊಟ್ಟೆ ಪಾಡಿಗೆ ಅಂತ ಕಲೆಯನ್ನು ಭಿಕ್ಷುಕನಿಗಿಂತಲೂ ದೊಡ್ಡ ಭಿಕ್ಷಾಪಾತ್ರೆಯನ್ನಾಗಿ ಮಾಡಿಬಿಟ್ಟ. ಇದನ್ನು ಒಪ್ಪಿಕೊಳ್ಳುವುದಕ್ಕೆ ಆತ್ಮಾಭಿಮಾನ ಎದುರಾಗಬಹುದು. ಆದರೆ ವಾಸ್ತವ ಹಾಗೇ ಇದೆ. ಮೊದಲು ಕಲಾವಿದ ಔದಾಸಿನ್ಯ ಮೆರೆದರೆ ಈಗ ಸರದಿ ಪ್ರೇಕ್ಷಕನದ್ದು. ಯಾಕೆಂದರೆ ಪ್ರೇಕ್ಷಕನಿಗೆ ಹಲವಾರು ಅವಕಾಶಗಳಿದ್ದರೆ...ಕಲಾವಿದನಿಗೆ ಇದ್ದ ಒಂದು ಅವಕಾಶವೂ ಮುಚ್ಚುವ ಹಂತ ತಲುಪಿದೆ.
ಮೊದಲು ಆಟದ ಟಿಕೇಟ್ ಯಾವುದೋ ಹೋಟೇಲಲ್ಲಿ ಇಟ್ಟರೂ ಖರ್ಚಾಗಿ ಹೋಗುತ್ತಿತ್ತು. ಆಟದ ನೋಟೀಸು ಹಿಡಿದು ಬಂದರೆ ಕೆಲವು ಕಡೆ ಅದಕ್ಕೊಂದು ಗೌರವ ಇರುತ್ತಿತ್ತು. ನೋಟೀಸನ್ನು ಸಾದ್ಯಂತವಾಗಿ ಓದಿ ಅದರ ಬಗ್ಗೆ ಚರ್ಚಿಸುತ್ತಿದ್ದರು. ಹಾಗೆ ದುಡ್ದುಕೊಟ್ಟರೂ ಕಾರ್ಯಕ್ರಮಕ್ಕೆ ತಪ್ಪದೇ ಹೋಗಿಬಿಡುತ್ತಿದ್ದರು. ಈಗ ಯಾರೋ ಒಬ್ಬ ನೋಟೀಸು ಹಿಡಿದು ವಂತಿಗೆಗೆ ಬರುತ್ತಾನೆ ಎಂದರೆ ಕಣ್ಣು ತಪ್ಪಿಸಿಕೊಳ್ಳುತ್ತಾರೆ. ಒಂದು ವೇಳೆ ಕೈಗೆ ನೋಟಿಸೂ ಕೊಟ್ಟರೂ ಅದನ್ನು ಓದದೇ ಕೈಗೆ ಒಂದಷ್ಟು ದುಡ್ಡು ಎಸೆದು ಸುಮ್ಮನಿದ್ದು ಬಿಡುತ್ತಾರೆ. ನೋಟಿಸು ಕೊಟ್ಟಾಗ ನಮಗೆ ಬರುವುದಕ್ಕೆ ಸಮಯ ಇಲ್ಲಾ ಕಾರ್ಯಕ್ರಮ ಒಳ್ಳೆದಾಗಲೀ ಎಂದು ಮುಖ ಸ್ತುತಿಗೆ ಹೇಳಿ ಬಂದದ್ದಕ್ಕೆ ಭಿಕ್ಷೆ ಕೊಟ್ಟು ಕಳುಹಿಸಿಬಿಡುತ್ತಾರೆ.
ಕಲಾವಿದರು ಸಭೆಯನ್ನು ಪ್ರೇಕ್ಷಕನನ್ನು ಆಳುವ ಕಾಲವಿತ್ತು. ಈಗ ಆ ಅಧಿಕಾರ ದಂಡ ಪ್ರೇಕ್ಷಕನ ಕೈಯಲ್ಲಿದೆ. ವಾಸ್ತವದಲ್ಲಿ ಅದು ಹಾಗೆಯೇ ಇರಬೇಕು. ಆದರೆ ಅದು ಕಲೆಯ ಮೌಲ್ಯವನ್ನು ಹೊಂದಿಕೊಂಡು ಆಗಿರಬೇಕು. ಯೋಚಿಸಬೇಕು ಕ್ರಿಕೇಟ್ ನಲ್ಲಿ ಯಾವಾಗಲೂ ಬ್ಯಾಟ್ಸ್ ಮನ್ ಹೆಚ್ಚು ಮುಂದೆ ಇರುತ್ತಾನೆ, ಬೌಲರ್ ಯಾವಾಗಲು ಒಂದಷ್ಟು ಹಿಂದೆ. ಆದರೆ ಯೋಚಿಸಿದರೆ, ಬ್ಯಾಟ್ಸ್ ಮನ್ ಗೆ ಒಂದೇ ಬಾಲ್ ಸಾಕು ಔಟ್ ಆಗಿ ಪಂದ್ಯದಿಂದ ಹೊರಬೀಳಲು. ಅದೇ ಸಮಯ ಬೌಲರ್ ಗೆ ಕಡಿಮೆ ಎಂದರೆ ಆರು ಬಾಲ್ ಗಳ ಅವಕಾಶಗಳಿರುತ್ತವೆ. ಬ್ಯಾಟ್ಸ್ ಮನ್ ಒಂದೇ ಬಾಲ್ ಗೆ ಹೊರನಡೆದರೆ ಕೊನೆಯಲ್ಲಿ ಬರುವುದು ಬೌಲರ್. ಹೀಗೆ ಅವಗಣಿಸಲ್ಪಟ್ಟದ್ದು ಮುನ್ನೆಲೆಗೆ ಬಂದೇ ಬರುತ್ತದೆ. ಅದನ್ನೇ ಸಮಯ ಎನ್ನುವುದು. ಅದನ್ನೆ ಬದಲಾವಣೆ ಎನ್ನುವುದು. ಒಂದಿಷ್ಟಾದರೂ ತಾವು ಮಾಡುವ ವೃತ್ತಿಗೆ ವೃತ್ತಿ ಧರ್ಮ, ತಮಗೆ ಅನ್ನ ಹಾಕಿದ ಕೈಗೆ ಕೃತಜ್ಞತೆಯ ಭಾವ ಇರುತ್ತಿದ್ದರೆ, ಈಗ ಹೀಗಾಗುತ್ತಿತ್ತೊ ಇಲ್ಲವೋ ಆದರೆ ನಾವು ಪ್ರಾಮಾಣಿಕವಾಗಿ ನ್ಯಾಯ ಸಲ್ಲಿಸಿದ್ದೇವೆ ಎಂಬ ಆತ್ಮ ತೃಪ್ತಿಯಾದರೂ ಸ್ವಂತವಾಗಿ ಇರುತ್ತಿತ್ತು. ಈಗ ಅದಕ್ಕೂ ಪಶ್ಚಾತ್ತಾಪ ಹಂತವೂ ಸ್ವಯಂಕೃತ ಅಪರಾಧದಿಂದ ಕಳೆದು ಹೋಗಿದೆ.