"ಇದು ವಿಮರ್ಶೆಯಲ್ಲದ ಚಿಂತನ"

Sunday, April 13, 2014

ಹೀಗೊಂದು ಪರಾಮರ್ಶೆ

          ಒಂದು ನದಿ ತನ್ನ ಹುಟ್ಟಿನಲ್ಲಿ ಬಹಳ ಸೂಕ್ಷ್ಮ ರೂಪದಲ್ಲಿರಬಹುದು. ಆಗ ಅದರ ಚಲನೆ ಬಹಳ ವೇಗವಾಗಿ ಪ್ರಪಂಚವನ್ನು ಕಂಡ ಕೌತುಕದಿಂದ ಎಂಬಂತೆ ರಭಸವಾಗಿ ಚುರುಕಾಗಿ ಮುಂದಕ್ಕೆ ಹೋಗುತ್ತದೆ. ಆದರೆ ಅದಕ್ಕೆ ಕವಲುಗಳು ಜತೆಯಾದಂತೆ ಗಾತ್ರ ಹಿಗ್ಗಿ,  ಮುನ್ನುಗ್ಗುವ ಕೌತುಕ ಕಡಿಮೆಯಾದಂತೆ, ತನ್ನಂಗ ಪಾಂಗಗಳು ಬೆಳೆದು ಭಾರವಾದಂತೆ ಅದರ ಚಲನೆ ನಿಧಾನವಾಗುತ್ತಾ ನಿಧಾನವಾಗುತ್ತಾ ಕಡಲಿನ ಬಾಗಿಲಿಗೆ ಬಂದು ನಿಂತಾಗ ಇನ್ನು ಚಲನೆಯೇ ಇಲ್ಲವೇನೋ ಎಂಬಂತೆ ಸ್ಥಬ್ಧವಾದ ಅನುಭವ. ಇದನ್ನು ಪ್ರಕೃತಿ ನಿಯಮ ಎನ್ನುವುದು. ಇದು ಪ್ರತಿಯೊಂದು ವಿಷಯಕ್ಕೂ ಮಿಳಿತವಾಗಿ ಎಲ್ಲವೂ ಈ ನಿಯಮದ ಚೌಕಟ್ಟಿನೊಳಗೇ ಇದ್ದರೆ ಅದು ಸಹಜತೆಯನ್ನು ಬಿಂಬಿಸುತ್ತದೆ. ಆದರೆ ಅಸಹಜತೆಯನ್ನೇ ಸಹಜವನ್ನಾಗಿ ಕಾಣುವಲ್ಲಿ  ಅದನ್ನು ಸ್ವೀಕರಿಸುವಾಗ ಏನೋ ಒಂದು ತೊಡಕನ್ನು ಮನಸ್ಸು ಅನುಭವಿಸುತ್ತದೆ. ಇತ್ತಿಚೆಗಿನ ಯಕ್ಷಗಾನವನ್ನು ಕಾಣುವಾಗಲೂ ನಾವು ಈ ಅಸಹಜತೆಯನ್ನೇ ಸಹಜವೆಂಬೆಂತೆ ಅಪ್ಪಿಕೊಳ್ಳುತ್ತಿದ್ದೇವೋ ಎಂದು ಭಾಸವಾಗುತ್ತದೆ. ಯಕ್ಷಗಾನ ಯಾವುದೇ ಶಾಸ್ತ್ರೀಯತೆಯಿಂದ ಅತೀತವಾಗಿ ಬೆಳೆದುಕೊಂಡು ಬಂದು ಹೀಗೆ ಎಂದು ಇದಮಿತ್ಥಂ ಎಂದು ಹೇಳಲಾಗದ  ನಿಯಮವನ್ನು ಅಳವಡಿಸಿಕೊಂಡಂತಿದೆ.
         
          ಇಂದು ಯಕ್ಷಗಾನವನ್ನು ಕಾಣುವಾಗಲು ಕೇಳುವಾಗಲು ಬಹಳಷ್ಟು ಗೊಂದಲವನ್ನು ಪ್ರೇಕ್ಷಕ ಅನುಭವಿಸುವಂತಾಗಿದೆ. ಯಾವುದು ಸರಿ ಯಾವುದು ತಪ್ಪು ನಿರ್ಣಯಿಸುವದಕ್ಕಂತೂ ಸಾಧ್ಯವೇ ಇಲ್ಲದಂತಹ ಸಂದಿಗ್ಧತೆ. ಇದು ಸರಿ ಇದು ಹೀಗೆ ಎಂಬ ನಿರ್ಣಯಿಸುವಲ್ಲಿಯೂ ಗೊಂದಲ. ಹಾಗಾಗಿ ಮುಕ್ತವಾಗಿ ಆಸ್ವಾದಿಸುವುದಕ್ಕೂ ಸಾಧ್ಯವಾಗದಂತಹ ಸಂದಿಗ್ಧತೆ. ವಿಮರ್ಶಿಸುವವ ಎಂದಿಗೂ ಅದರ ಆಸ್ವಾದನೆಯಲ್ಲಿ ಸೋಲುತ್ತಾನೆ. ಚಿಕಿತ್ಸಕ ದೃಷ್ಟಿಯಲ್ಲೇ ಮನಸ್ಸು ಕೇಂದ್ರಿಕರಿಸುವಾಗ ಅಸ್ವಾದಿಸುವ ಮನಸ್ಸು ಯಾವುದೋ ನಿಯಂತ್ರಣಕ್ಕೆ ಒಳಗಾಗಿಬಿಡುತ್ತದೆ. ನಿಜಕ್ಕಾದರೂ ವಿಮರ್ಶೆ ಅಸ್ವಾದನೆಗೆ ಎಡೆ ಮಾಡುವುದಿಲ್ಲ. ಬೆಣ್ಣೆಯಲ್ಲಿ ಕಲ್ಲು ಉಂಟೇನೋ ಎಂದು ಹುಡುಕುವಾಗ ಆ ಬೆಣ್ಣೆಯ ಸ್ವಾದ ಸವಿಯುದಕ್ಕೇ ಆಗುವುದಿಲ್ಲ. ಕಲ್ಲು ಹುಡುಕುತ್ತಾ ಎಲ್ಲವನ್ನು ರಾಡಿ ಎಬ್ಬಿಸಿದಂತೆ ಬೆಣ್ಣೆ ನಿಜಸ್ವರೂಪವನ್ನೇ ಬದಲಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿಬಿಡುತ್ತದೆ.

          ಇಷ್ಟಾದರೂ ಯಕ್ಷಗಾನ ನೋಡುವಾಗ ಮನಸ್ಸು ಪರಾಮರ್ಶಿಸುತ್ತದೆ. ಹೀಗಾದರೆ ಹೀಗಿದ್ದರೆ ಚೆನ್ನ. ಅಸಹಜತೆಗೆ ಮರುಗುತ್ತದೆ. ಆದರೂ ವಿಮರ್ಶಿಸುವ ಮನಸ್ಸು ಅನಿಯಂತ್ರಿತವಾಗಿ ಆಸ್ವಾದಿಸುತ್ತದೆ. ಹೀಗೆ ದ್ವಂದ್ವದಲ್ಲೇ  ಹಿಮ್ಮೇಳ ಮೊಳಗುವಾಗ ಕೈಬೆರಳು ಕುಳಿತ ಆಸನದಲ್ಲಿ ಹಿತವಾಗಿ ನರ್ತಿಸಿ ಹಿಮ್ಮೇಳದ ಲಯಕ್ಕೆ ಸಹಚರನಾಗಬಯಸುತ್ತದೆ. ಅದು ಯಕ್ಷಗಾನದ ಸತ್ವ. ಒತ್ತಾಯದಲ್ಲಿ ಎಲೆಯಲ್ಲಿಕ್ಕಿದ ಅನ್ನ ಬೇಡವೆಂದರೂ ಉಂಡಹಾಗೆ. ಅನ್ನ ಅದು ಪೂಜನೀಯ ಅದನ್ನು ಎಸೆಯುವುದೇ?  

          ಇಂದು ಯಕ್ಷಲೋಕವನ್ನು ಹೊಕ್ಕು ನೋಡಿದರೆ ಇಲ್ಲಿ ಅರಳಿದ ಅರಳುತ್ತಿರುವ ಹೂವುಗಳಿಗೆ ಕೊರತೆ ಇಲ್ಲ.  ಬಿಟ್ಟ ಕಾಯಿ ಹಣ್ಣುಗಳನ್ನು ಲೆಕ್ಕವಿಡುವುದು ಕಷ್ಟ. ಸ್ಥಿರವಾಗಿ ನಿಂತು ಸ್ಥಿರತೆಯನ್ನು ಸಾರುವ ಮರಗಳನ್ನು ಕಂಡಾಗ ಹೆಮ್ಮೆಯುಕ್ಕುತ್ತದೆ. ಮೊನ್ನೆ ಯಕ್ಷಗಾನದ ಹಿರಿಯಣ್ಣ ಸಂಪಾಜೆ ರೈಗಳಲ್ಲಿ ಕೇಳಿದೆ “ ಎಷ್ಟು ಸ್ವಾಮೀ ಪ್ರಾಯ?” ಮಂದಹಾಸದಲ್ಲೇ ಹೇಳಿದರು “ ವರುಷ ಎಪ್ಪತ್ತೊಂದು!!!” ಎಪ್ಪತ್ತೊಂದು ಆದರೇನು ಚೆಂಡೆ ಪೆಟ್ಟಿಗೆ ತಲೆಯನ್ನು ನಿಮಿರಿಸಿ ಕಣ್ಣನ್ನು ಅರಳಿಸಿ ದೇಹವನ್ನು ಸೆಟೆಸಿ ಬರುವ ಆ ರಂಗ ಪ್ರವೇಶದ ಸೊಬಗೇನು? ಬೇಡ ಈ ಎಪ್ಪತ್ತೊಂದರಾಚೆ ಒಂದು ಘಳಿಗೆಯು ಸರಿಯಬಾರದು ಎಂದನಿಸುತ್ತದೆ. ಎಷ್ಟೊಂದು ವಿನಮ್ರತೆಯಲ್ಲಿ ಕಳೆದ ನನಪುಗಳನ್ನು ಹೇಳಿಕೊಂಡರು. ಕುಂಡಚ್ಚ ಭಾಗವತರು( ಇರಾ ಗೋಪಾಲಕೃಷ್ಣ ಭಾಗವತರು) ಬಲಿಪ್ಪರು ಇವರ ಒಡನಾಟ, ನೆಡ್ಲೆ ಅಜ್ಜನ ಚೆಂಡೆ ಪೆಟ್ಟುಗಳು ತಾನು ವೇಷ ಹಾಕುವುದಕ್ಕೆ ತೊಡಗುವಾಗ ಬಲಿಪ್ಪರು ಭಾಗವತರಾಗಿ ಪ್ರಸಿದ್ದರಾಗಿ ಹೋದದ್ದು ಇದನ್ನೆಲ್ಲ ಕೇಳುವಾಗ ಬೇಡವೆಂದರೂ ಈಗಿನ ಯಕ್ಷಗಾನವನ್ನು ಮನಸ್ಸು ಪರಾಮರ್ಶಿಸುತ್ತದೆ. ಈಗಿನದು ಕಳಪೆ ಎಂದಲ್ಲ. ಆದರೆ ಆ ಮಧುರ ನೆನಪುಗಳು ಎಷ್ಟು ಚಂದ.

ಇಂದು  ಯುವ ಪ್ರತಿಭೆಗಳಿಗೆ ಕೊರತೆಯಿಲ್ಲ.  ಎಂತೆಂತಹ ಸ್ವರ ಮಾಧುರ್ಯದ  ಯುವ ಭಾಗವತರು. ಅಧ್ಭುತ ಕೈಚಳಕದ ಮದ್ದಲೆಗಾರರು. ಭರವಸೆ ಗಟ್ಟಿಯಾಗುತ್ತದೆ. ಆದರೆ ಆ ಭರವಸೆ ಸ್ಥಿರವಾಗುವುದಿಲ್ಲ. ಯಾಕೆ ಹೀಗೆ?
ಮೂರು ತಾಸಿನ ಕಾಲ ಮಿತಿ ಯಕ್ಷಗಾನ ಬಯಲಾಟಕ್ಕೆ ಹೋಗುತ್ತೇನೆ. ಬಯಲಾಟ ಎನ್ನಲು ಮನಸ್ಸು ಬರುವುದಿಲ್ಲ. ಯಾಕೆಂದರೆ ಬಯಲು ಎಲ್ಲಿದೆ? ಆ ಮೂರು ತಾಸಿನಲ್ಲಿ ಇದ್ದುದೆಲ್ಲವನ್ನು ಬಡಿಸುವಾಸೆ. ನಮ್ಮಗೆ ತಿನ್ನುವ ಅನಿವಾರ್ಯತೆ. ಅಪರೂಪಕ್ಕೆ ಬಂದ ಅತಿಥಿ ಕೇವಲ ಒಂದು ಹೊತ್ತಿನ ಊಟಕ್ಕೆ ಮಾತ್ರ ಅವಕಾಶ ಎಂದಾಗ ಇದ್ದುದೆಲ್ಲವನ್ನು ಸ್ವಲ್ಪ ಸ್ವಲ್ಪವೇ ಬಡಿಸುವ ಅತಿಥೇಯ. ಯಾವುದು ಯಾವಾಗ ತಿನ್ನಬೇಕು ಎಂಬ ಪರಿವೆ ಇಲ್ಲದೆ ಸ್ವಾದದ ನಿಜ ಅನುಭವ ಸಿಗದೇ ಒದ್ದಾಡುತ್ತಾನೆ. ಊಟದ ಮಧ್ಯೆಯೇ  ... ಬರುತ್ತದೆ ನಮ್ಮ ಮನೆಯ ಕಾಫಿ ರುಚಿ ನೋಡಿ. !! ಹೇಗೆ ರುಚಿಸಬೇಕು ಹೇಳಿ?  ನಾಲ್ಕನೆಯ ಜಾವದಲ್ಲಿ ಕೇಳುವ ಮೋಹನರಾಗ ಮೊದಲ ಜಾವದಲ್ಲೇ ಮೋಹಕ ಬಾಹುಗಳಲ್ಲಿ ಬಂಧಿಸುವ ವಿಫಲ ಯತ್ನವನ್ನು ಮಾಡುತ್ತದೆ. ಯಾಕೆಂದರೆ ಮತ್ತೆ ಆಟ ಮುಗಿಯುತ್ತದಲ್ಲ?  ಮೋಹನ, ಭೈರವಿ , ಮಧ್ಯಮ, ಶುದ್ದ ಸಾವೇರಿ ಎಲ್ಲವೂ ಒಂದೇ ಸಲಕ್ಕೆ ಬಂದು ಬಿಡುವಾಗ ಯಾವುದನ್ನು ಅಪ್ಪಿಕೊಳ್ಳೋಣ? ಇಂದು ಪ್ರತಿಭೆ ಇದೆ ಆದರೆ ಪ್ರವೇಶ ಮಾತ್ರ ಅಸ್ಥಾನದ್ದಾಗಿರುತ್ತದೆ.
ಇಂದು ಮೂರು ತಾಸಿನ ಆಟದ ಪ್ರಭಾವ ಪೂರ್ಣ ರಾತ್ರಿಯ ಆಟದ ಮೇಲೂ ಆಗಿರುತ್ತದೆ. ಅದರ ಬಗೆಯೇ ಬೇರೆ.  ಅಂಬುರುಹದಳನೇತ್ರೆ ಹೇಳಿದನಂತರ ಒಡ್ಡೋಲಗದ ಪದಗಳು ನಿಧಾನಗತಿಯಲ್ಲಿ ಆರಂಭವಾಗಿ ಹಂತ ಹಂತವಾಗಿ ಪ್ರಸಂಗದ ನಡೆ ವೇಗ ಪಡೆದುಕೊಳ್ಳುತ್ತದೆ. ಅದಕ್ಕೆ ತಕ್ಕಂತೆ ಪದಗಳ ರಾಗಗಳ ಅಯ್ಕೆಯೂ ವಿಶಿಷ್ಟವಾಗಿದ್ದು  ಚೆಂಡೆ ಪದ್ದಲೆಯ ವಾದನವೂ ಆರಂಭದಲ್ಲಿ ನಿಧಾನಗತಿಯಲ್ಲೇ ಇರುತ್ತದೆ. ಆದರೆ ಈಗೀಗ ಯಾವಾಗ ನಿಧಾನವಾಗುತ್ತದೆ ಯಾವಾಗ ವೇಗ ವರ್ಧಿಸುತ್ತದೆ ಕಲ್ಪಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಕ್ರಮಾಗತವಾದ ಚಲನೆ ಇಲ್ಲದೆ ಒಂದೊಂದು ಸಲ ಕೊನೆಯ ಜಾವದ  ವೇಗವಿದ್ದು ಒಮ್ಮಿಂದೊಮ್ಮೆಲೇ ನಿಧಾನವಾಗಿಬಿಡುತ್ತದೆ. ಹೀಗೆ ವೇಗ ನಿಧಾನ ಇವುಗಳಿಗೆ ಹೊಂದಿಕೊಳ್ಳುವುದು ಸಾಧ್ಯವಾಗದೆ, ರಸ್ತೆಯಲ್ಲಿ ಹೊಂಡಗುಂಡಿ ಸಿಕ್ಕಿದಂತೆ ಪ್ರೇಕ್ಷಕನ ಯಾತ್ರೆ ಹಿತಕರವಾಗಿರುವುದಿಲ್ಲ.  ಪ್ರಸಂಗ ಒಮ್ಮೆ ಧಾವಂತದಿಂದ ಓಡಿದರೆ ಮತ್ತೊಮ್ಮೆ ನಿಧಾನವಾಗಿ,  ನಿಧಾನವಾಗಿ ಮಂದವಾಗಿಬಿಡುತ್ತದೆ. ಪ್ರೇಕ್ಷಕ ಕುಳಿತಲ್ಲಿಂದ ಮಿಸುಕಾಡತೊಡಗುತ್ತಾನೆ.
ಯಕ್ಷಗಾನ ಭಾಗವತಿಕೆ ಅದು ನಿಧಾನವಾಗಿ ಇಳಿ ಶ್ರುತಿಯಿಂದ ತೊಡಗಿ ನಂತರ ಶ್ರುತಿ ಏರಿಸುತ್ತಾ ಸಾಗಬೇಕು. ಮೇಲೆ ಹೇಳಿದ ನದಿಯ ಚಲನೆಗೆ ವ್ಯತಿರಿಕ್ತವಾಗಿ ಇರಬೇಕು.  ಆರಂಭ ನಿಧಾನವಾಗಿ ನಂತರ ವೇಗವನ್ನು ಪಡೆಯಬೇಕು. ಇದರಿಂದ ಸ್ವರ ನಿರ್ವಹಣೆ ಸುಲಭವಾಗುತ್ತದೆ. ಕೊನೆಯವರೆಗೂ ವಿರಳವಾಗಿ ಪದ ಹೇಳಬಹುದು. ಇಂದು ಕಾಲಮಿತಿಯ ಪ್ರಭಾವದಿಂದ ಧಾವಂತದ ಹಾಡುಗಾರಿಕೆಯಾಗಿಬಿಟ್ಟಿದೆ. ಯಾವಾಗ ಏರಿಸುತ್ತಾರೋ ಯಾವಾಗ ಇಳಿಸುತ್ತಾರೋ ಅದಕ್ಕೆ ನಿಯಮವಿಲ್ಲ. ಮೈಕ್ ಇಲ್ಲದೆ ಭಾಗವತಿಕೆ ಸಾಧ್ಯವಿಲ್ಲ. ಯಾಕೆಂದರೆ ತಮ್ಮ ಕಂಠದ ಬಗ್ಗೆ ತಮಗೇ ಇರುವ  ವಿಶ್ವಾಸದ ಕೊರತೆ ಇದು.  ಇಂಪಾದ ಸ್ವರ ಹೊರಡಬೇಕಿದ್ದರೆ ಎಕೋ ಇದ್ದ ಮೈಕ್ ಆಗಬೇಕು. ಆವಾಗ ಅರ್ಥ ಭಾಗವತಿಕೆ ಎದುರಿಗೆ ಇಟ್ಟ ಮೈಕ್ ಮಾಡಿದರೆ ಉಳಿದರ್ಧ ಪ್ರಯತ್ನ ಭಾಗವತನದ್ದು. ಕೆಲವೇ ಕೆಲವು ಮುಖ್ಯ ಪದಗಳನ್ನು ಮಾತ್ರ ಸ್ಪಷ್ಟ ಉಚ್ಚಾರದಲ್ಲಿ ವಿರಳವಾಗಿ ಹಾಡುತ್ತಾರೆ. ಅದರಲ್ಲೂ  ಏರಿ ಪದಗಳು ಪ್ರೇಕ್ಷಕನಿಗೆ ಬಿಡಿ ನಿತ್ಯ ಕುಣಿಯುವ ವೇಷಧಾರಿಗೂ ಅರ್ಥವಾಗುವುದಿಲ್ಲ. ಬಹಳಷ್ಟು ಪದಗಳು ಶ್ರದ್ಧೆಯಿಲ್ಲದೆ ಹರಕೆ ಸಂದಾಯವಾಗಿಬಿಡುತ್ತದೆ.
ಮಂಡೆಚ್ಚ ಕಡತೋಕ ಬಲಿಪ್ಪರು ಮೊದಲಾದ ಹಿರಿಯ ಭಾಗವತರು ಆರಂಭದಿಂದಲೇ ಕುಳಿತು ಬೆಳಗಿನವರೆಗೆ ಭಾಗವತಿಕೆ ಮಾಡುವಾಗ ಕಂಡ ಶಿಸ್ತು ಇಂದು ಮಾಯವಾಗಿದೆ. ಇಂದು ಪ್ರತಿಭೆಯಿದೆ ಆದರೆ ಅದು ಉಪಯೋಗಕ್ಕೆ ಬರುವುದಿಲ್ಲ. ಒಂದೇ ಪ್ರಸಂಗವನ್ನು ಮೊದಲ ಅವಧಿಯಲ್ಲಿ ಆಡುವುದಕ್ಕೂ ಬೆಳಗಿನ ಜಾವ ಆಡುವುದಕ್ಕೂ ವೆತ್ಯಾಸವಿರುತ್ತಿತ್ತು. ಆ ವೆತ್ಯಾಸವನ್ನು ಚಲಾವಣೆಗೆ ತರಬೇಕೆಂದರೆ ಹಿಮ್ಮೇಳ ಅದಕ್ಕೆ ತಕ್ಕುದಾದ  ಸಾಮಾರ್ಥ್ಯ ಹೊಂದಿರಬೇಕು. ಪದಗಳನ್ನು ಕಾಲಕ್ಕೆ ತಕ್ಕವಾಗಿ ರಾಗ ಲಯದಲ್ಲಿ ಹಾಡುವುದು ತಿಳಿದಿರಬೇಕು. ಒಂದೇ ಪದವನ್ನು ವಿವಿಧ ರಾಗಗಳಲ್ಲಿ ಲಯಗಳಲ್ಲಿ ಹಾಡುವ ಸಾಮಾರ್ಥ್ಯವಿರಬೇಕು.  ಅದಕ್ಕೆ ಹೊಂದಿಕೊಂಡಂತೆ ಚೆಂಡೆ ಮದ್ದಲೆಯ ವಾದನದಲ್ಲೂ ವೈವಿಧ್ಯತೆ ಇರಬೇಕು.  ವಿವಿಧ ರಾಗಗಳು ತಿಳಿದಿವೆ ಅದನ್ನು ಇಂಪಾಗಿ ಹಾಡುವುದು ಒಂದಷ್ಟು ಚಪ್ಪಾಳೆ ಗಿಟ್ಟಿಸುವುದು ಭಾಗವತಿಕೆ ಹಿಮ್ಮೇಳ ಇಷ್ಟಕ್ಕೇ ಸೀಮಿತವಾದರೆ ಅದು ಯಕ್ಷಗಾನಕ್ಕಂತೂ ಹೊಂದಿಕೊಳ್ಳುವುದಿಲ್ಲ.  ಅದಕ್ಕೆ ಗಾನವೈಭವ ಅಥವಾ ಸಂಗೀತ ಕಛೇರಿಯೇ ಸೂಕ್ತ ಅನ್ನಿಸುತ್ತದೆ. ಗಾಯಕ ಮೈದುಂಬಿ ಹಾಡುವಾಗ ಕಣ್ಣು ಮುಚ್ಚಿರುತ್ತಾನೆ ಕಿವಿ ತೆರೆದಿರುತ್ತಾನೆ. ಗಾಯನ ಶ್ರುತಿ ಬದ್ಧವಾಗಿರುವುದಕ್ಕೆ ಕಿವಿ ತೆರೆದಿರುವುದು ಅವಶ್ಯ, ಒಂದರ್ಥದಲ್ಲಿ ಗಾಯಕ ಹೊರಪ್ರಪಂಚದ ಬಗ್ಗೆ ದೃಷ್ಟಿಯಿಂದ ಕುರುಡಾಗಿರಬೇಕು. ಆದರೆ ಕಿವಿ ಹೊರಲೋಕಕ್ಕೆ ತೆರೆದಿರಬೇಕು. ಆವಾಗ ತನ್ನ ಗಾಯನದ ವಿಮರ್ಶೆ ಪ್ರತಿಕ್ರಿಯೆ ಆತನಿಗೆ ಅರ್ಥೈಸುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಇದು ವ್ಯತಿರಿಕ್ತವಾಗಿದೆ ಎಂದು ಹಲವು ಸಲ ಅನ್ನಿಸಿಬಿಡುತ್ತದೆ.
ಒಂದು ಯಕ್ಷಗಾನ ಪ್ರಸಂಗದ ಪ್ರತಿಯೊಂದು ಘಳಿಗೆಯೂ ಒಂದು ತಂತುವಿನಿಂದ ಬಿಗಿಯಲ್ಪಟ್ಟಿದೆ ಮಾತ್ರವಲ್ಲ ಅದು ಒಂದು ಸಂಕಲೆಯಲ್ಲಿ ಪ್ರತಿಯೊಂದು ವೃತ್ತವೂ ಹೇಗೆ ಪರಸ್ಪರ ಜತೆಯಾಗಿ ಹೊಂದಿಕೊಂಡು ಎಲ್ಲವೂ ಒಂದಾದಂತೆ ಭಾಸವಾಗುತ್ತದೆಯೋ,  ಅದೇ ರೀತಿ ಪ್ರತಿ ಘಳಿಗೆ ಪ್ರತಿ ಘಟನೆಗಳೂ ಒಂದಾಗಿ ಭಾಸವಾಗಬೇಕು. ಈಗಿಗ ನಡುವೆ ಇರುವ ವರ್ತುಲವನ್ನು ಬೆಸೆಯುವ ಕೊಂಡಿ ಶಿಥಿಲವಾದ ಅನುಭವಾಗುತ್ತದೆ. ಉದಾಹರಣೆಗೆ ಒಂದು ಪ್ರಸಂಗದ ಶೃಂಗಾರ ಪ್ರಸಂಗ. ಪುರುಷ ಪಾತ್ರ ಮತ್ತು ಸ್ತ್ರೀ ಪಾತ್ರದ ಸಮಾಗಮದ ಸನ್ನಿವೇಶ. ಬಹಳಷ್ಟು ಸಂದರ್ಭದಲ್ಲಿ ಇಲ್ಲಿ ಚಾಲುಕುಣಿತ ಬಳಕೆಯಲ್ಲಿದೆ. ಯಕ್ಷಗಾನದ ಹಿತದ ದೃಷ್ಟಿಯಲ್ಲಿ ಅದು ಸೂಕ್ತವೋ ಎಂಬುದು ಪರಾಮರ್ಶೆಯಲ್ಲ. ಆದರೆ ರಂಗದಲ್ಲಿ ಇದನ್ನು ಕಾಣುವಾಗ    ಈ ಶಿಥಿಲತೆಯ ಅನುಭವ ಆಗುತ್ತಿರುತ್ತದೆ. ಭಾಗವತ ಒಂದು ಪದ ಹೇಳುತ್ತಾನೆ. ಒಂದೊಂದು ಪದವು ರಾಗವೈವಿಧ್ಯತೆಯಿಂದ ಒಂದಷ್ಟು ದೀರ್ಘ ಹೊತ್ತು ಲಂಬಿಸುತ್ತದೆ. ಹಾಡು ಕುಣಿತ ಉದ್ದವಾಗಿ ಬೆಳೆದು ಪದ ಆರಂಭಕ್ಕೆ ಮೊದಲೆ ಅಂದರೆ ಆ ಪದದ ಎತ್ತುಗಡೆಯ ಮೊದಲು ಸಂಭಾಷಣೆ ಯಾವ ಹಂತವನ್ನು ಮುಟ್ಟಿದೆ ಎಂದು ಮರೆತು ಹೋಗುವಂತಾಗುತ್ತದೆ. ಹತ್ತು ಹದಿನೈದು ನಿಮಿಷದ ವರೆಗೂ ಎಳೆದ ಕುಣಿತ ಅರ್ಥಗಾರಿಕೆಯಲ್ಲಿ ಪದದ ಕುಣಿತದ ಮತ್ತು ಅಭಿನಯದ ಭಾವವೇ ವ್ಯಕ್ತವಾಗದ ಪರಿಸ್ಥಿತಿ ಬಂದು ಬಿಡುತ್ತದೆ. ಪದದಿಂದ ಪದಕ್ಕೆ ಸಂಭಾಷಣೆಯಿಂದ ಸಂಭಾಷಣೆಗೆ ಹೊಂದಾಣಿಕೆ ಮಾಡುವಲ್ಲಿ ಕಲಾವಿದ ಸೊರಗುತ್ತಾನೆ. ಮಾತ್ರವಲ್ಲ ತನ್ನ ಜತೆಗೆ ಪ್ರೇಕ್ಷಕನನ್ನು ಕೊಂಡು ಹೋಗುವಲ್ಲೂ ವಿಫಲನಾಗಿ ಬಿಡುತ್ತಾನೆ. ಹಲವು ಸಲ ಯಾವ ಮಾತಿನಿಂದ ತೊಡಗಿದ್ದು ಎಂಬುದು ಮರೆತು ಹೋಗುವಷ್ಟು ಪದ ಕುಣಿತ ಉದ್ದವಾಗಿಬಿಡುತ್ತದೆ.
 ಒಂದು ಕಥೆಯ ಅಭಿವ್ಯಕ್ತಿ ಸ್ವರೂಪವೇ ಕೆಟ್ಟಮೇಲೆ ಮತ್ತೆ ಪ್ರಸಂಗದ ಬಗ್ಗೆ ಏನು ಉಳಿಯಬಹುದು.  ಭಾಗವತರ ಪದದ ಶಬ್ದ ಶಬ್ದ ಅಕ್ಷರ ಅಕ್ಷರ ಗಳಿಗೂ ಭಾವವನ್ನು ವ್ಯಕ್ತ ಪಡಿಸುವ ಕಲಾವಿದ ಆ ಪದದ ಅರ್ಥ ಹೇಳುವಾಗ ಮಾತಿಲ್ಲದೇ ತೊದಲುವುದನ್ನು ಕಾಣಬಹುದು. ಒಂದು ಪಾತ್ರದ ಅಭಿವ್ಯಕ್ತಿ ಕೇವಲ ಪದ ಮತ್ತು ಅಭಿನಯ ಇಷ್ಟಿದ್ದರೆ ಸಾಲದು,  ಸುಂದರವಾದ ಅರ್ಥಗಾರಿಕೆಯೂ ಅತ್ಯವಶ್ಯವಲ್ಲವೇ. ಅರ್ಥಗಾರಿಕೆ ಇಲ್ಲವಾದರೆ ಅದು ಯಕ್ಷಗಾನ ಹೇಗಾದೀತು ಎಂಬ ಜಿಜ್ಞಾಸೆ ಹಾಗೆ ಉಳಿದುಬಿಡುತ್ತದೆ.  ಇಂದು ಬಹಳಷ್ಟು ಯುವಕಲಾವಿದರು ಅರ್ಥಗಾರಿಯಲ್ಲಿ ತೀವ್ರ ಬಡತನವನ್ನು ಅನುಭವಿಸುತ್ತಿದ್ದಾರೆ. ಇದು ಗಂಭೀರ ವಿಚಾರ. ಇದಕ್ಕೆ ಕಾರಣ ಅಭ್ಯಾಸದ ಮತ್ತು ಸೂಕ್ತ ತರಬೇತಿಯ ಕೊರತೆ. ಕಲಾವಿದನಾದವನು ನಿರಂತರ ಅಭ್ಯಾಸ ನಿರತನಾಗಿರಬೇಕು. ಯಾವಾಗ ಅವನ ಅಭ್ಯಾಸ ಕುಂಠಿತವಾಗುತ್ತದೋ ಆವಾಗ ಕಲಾಜೀವನವೂ ಕುಂಠಿತವಾದಂತೆ.

ಈ ಅನುಭವ ಎಷ್ಟು ಜನರಿಗೆ ಆಗಿದೆಯೋ ತಿಳಿಯದು. ಆದರೆ ಬಹಳಷ್ಟು ಮಂದಿ ಇದರಿಂದ ಹೊರತಾಗಿ ಇಲ್ಲ ಎಂಬುದಷ್ಟೇ ಹೇಳಬಹುದು. ಹಾಗಾಗಿ ಆಟಕ್ಕೆ ಎಂದು ಹೋಗಿ ಪಕ್ಕದ ಕ್ಯಾಂಟೀನ್ ನಲ್ಲಿ ಚಟ್ಟಂಬಡೆ ಚಹಾ ಸವಿಯುತ್ತ ಅಪರೂಪಕ್ಕೆ ಸಿಗುವ ಮಿತ್ರರ ಜತೆ ಪಟ್ಟಾಂಗವಂತೂ ಆಪ್ಯಾಯಮಾನವಾಗುತ್ತದೆ. ಆವಾಗ ಬಹಳಷ್ಟು ಸಲ ನೆನಪಾಗುತ್ತದೆ ಹಿಂದೆ ನೋಡಿದ ಒಂದು ಯಕ್ಷಗಾನ ಬಯಲಾಟ,  ಪ್ರಸಂಗ ನಳ ದಮಯಂತಿ...ಒಂದೇ ಒಂದು ಯುದ್ದದ ದೃಶ್ಯ (ತೆಂಕು ತಿಟ್ಟಿನಲ್ಲಿ ಇದಕ್ಕೆ ಪ್ರಾಧ್ಯಾನ್ಯತೆ ಸ್ವಲ್ಪ ಹೆಚ್ಚು) ಇಲ್ಲದ ಪ್ರಸಂಗ ಇದು. ಆದರೂ ಕುಳಿತಲ್ಲಿಂದ ಸ್ವಲ್ಪವೂ ಕದಲದೆ ಬೆಳಗ್ಗಿನವರೆಗೂ ಆಟ ನೋಡಿದ ನೆನಪು.  ಟೆಂಟ್ ಬಿಟ್ಟು ಹೊರ ಹೋಗಲು ಮನಸ್ಸಾಗದ ಆ  ಯಕ್ಷಗಾನ ಬಯಲಾಟ ಇಂದು ಬಾರಿ ಬಾರಿಗೂ ನೆನಪಾಗುತ್ತದೆ. ಈಗಿನ ಯಕ್ಷಗಾನದಲ್ಲಿ ಈ ಸಮ್ಮೋಹನ ಸಿಗುವುದು ತೀರಾ ಅಪರೂಪವಾಗಿಬಿಟ್ಟಿದೆ.

ಇಂದು ಯಕ್ಷಗಾನದಲ್ಲಿ ಪ್ರತಿಭೆಗೆ ಖಂಡಿತಾ ಕೊರತೆ ಇಲ್ಲ. ಹೊಸಪ್ರತಿಭೆಗಳು ಚಿಗುರುತ್ತಾ ಇರುತ್ತದೆ. ಆದರೆ ಆ ಪ್ರತಿಭೆಯ ಪ್ರಭೆ ಪ್ರಖರವಾಗಿ ಬೆಳಗಿ ಒಂದು ಉತ್ತಮ ಕಲಾಜೀವನ ನಡೆಸುವಲ್ಲಿ ಸೂಕ್ತ ವಾತಾವರಣದ ತಳಹದಿಯೇ ನಿರ್ಮಾಣವಾಗುವುದಿಲ್ಲ.

ಹೀಗಿದ್ದರೂ ಇಂದು ಯಾವುದು ಸರಿ ಯಾವುದು ಸರಿಯಲ್ಲ ಎಂದು ನಿರ್ಣಯಿಸುವುದಕ್ಕೆ ಸಾಮಾರ್ಥ್ಯ ಸಾಕಾಗುವುದಿಲ್ಲ. ಕಂಡದ್ದನ್ನು ಒಪ್ಪಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿಬಿಡುತ್ತದೆ. ಈ ಪರಾಮರ್ಶೆಯ ಅವಶ್ಯಕತೆ ಇದೆಯೋ ಇಲ್ಲವೋ, ಆದರೆ ಮನಸ್ಸಿನ ಅನಿಸಿಕೆಗಳು ಮಾತ್ರ ವ್ಯಕ್ತವಾಗುತ್ತ ಇರುತ್ತದೆ.



.




Saturday, April 5, 2014

ಕರ್ಣ ಭೇದನ....ಕರ್ಣ ಪಾವನ.


“ಬಾರಯ್ಯ ಭಾನು ಸುಕುಮಾರ ಎನ್ನಯ ರಥವನೇರು …………………………” ಶ್ರೀ ಕೃಷ್ಣ ಹಸ್ತಿನಾವತಿಯಿಂದ ಧುರವೀಳ್ಯವನ್ನು ತೆಗೆದುಕೊಂಡು ಹಿಂತಿರುಗುವಾಗ ಕರ್ಣನನ್ನು ಹತ್ತಿರಕ್ಕೆ ಕರೆಯುವ ಪದವಿದು. ದಶಕಗಳ ಹಿಂದೆ ಸಂಗೀತಾ ಸಂಸ್ಥೆ ಧ್ವನಿ ಮುದ್ರಿಸಿದ ಅತ್ಯಂತ ಜನಪ್ರಿಯ ಧ್ವನಿಸುರುಳಿಯ ನೆನಪಾಗುತ್ತದೆ. ಬಹುಶಃ ಆ ಮಧುರ ಸ್ಮೃತಿಯಲ್ಲೇ ಹೆಚ್ಚು ಕಮ್ಮಿ ಅದೇ ಕಲಾವಿದ ಶ್ರೇಷ್ಠರಿಂದ ಇತ್ತೀಚೆಗೆ ಕರ್ಣ ಭೇದನ ಪ್ರಸಂಗ ಅನೀರೀಕ್ಷಿತವಾಗಿ ರಂಗದಲ್ಲಿ ಕಾಣುವಂತಾಯಿತು. ಬಲಿಪ ನಾರಾಯಣ ಭಾಗವತರ ಜತೆಗೆ ಕುಂಬಳೆ ಸುಂದರ್ ರಾವ್, ಕೋಳ್ಯೂರು ರಾಮಚಂದ್ರ ರಾವ್, ಎಂ ಪ್ರಭಾಕರ ಜೋಷಿ ಮಾತ್ರವಲ್ಲ ಉಡುವೇಕೋಡಿಯವರು ಮುಂತಾದವರ ಸೇರುವಿಕೆಯಲ್ಲಿ ಮುದ್ರಣಗೊಂಡ ಧ್ವನಿ ಸುರುಳಿ ಈಗ ಇತಿಹಾಸವಾದರೆ ಆ ಇತಿಹಾಸವನ್ನು ಇನ್ನೂ ಸ್ಮೃತಿ ಪಟಲದಲ್ಲಿ ಉಳಿಸಿಕೊಂಡು ಆ ನೆನಪಿನಲ್ಲೇ  ಅನಿರೀಕ್ಷಿತವಾಗಿ ಕಾರ್ಯಕ್ರಮವೊಂದು ಮೂಡಿಬಂತು.
ಚಿತ್ರ ಕೃಪೆ : ಲಾನ

          ಕರ್ನಾಟಕ ಕಲಾದರ್ಶಿನಿ ಬೆಂಗಳೂರು ಇವರ ಆಶ್ರಯದಲ್ಲಿ ಡಾ ಶಿವರಾಮ ಕಾರಂತ ಉತ್ಸವ ಸಂದರ್ಭದಲ್ಲಿ ಹಿರಿಯ ಭಾಗವತ   ಬಲಿಪ ನಾರಾಯಣ ಭಾಗವತ ಇವರನ್ನು ಶಿವರಾಮ ಕಾರಂತ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಇಲ್ಲಿ  ಪೂರ್ವ ನಿಗದಿಯಂತೆ ಶ್ರೀಕೃಷ್ಣ ಸಂಧಾನ ತಾಳ ಮದ್ದಲೆ ತೆಂಕು ಬಡಗು ಹಿಮ್ಮೇಳದೊಂದಿಗೆ ನಡೆಯಬೇಕಿತ್ತು. ಆದರ ಬದಲಾಗಿ ಕರ್ಣ ಭೇದನ ತಾಳ ಮದ್ದಲೆ ಅದೂ ಪೂರ್ಣ ವಾಗಿ ಬಲಿಪ್ಪರ ಭಾಗವತಿಕೆಯೊಂದಿಗೆ ನೆರವೇರಿಸಲ್ಪಟ್ಟಿತು. ಈ ಮೂಲಕ ಹಿರಿಯ ಭಾಗವತರಿಗೆ ಅರ್ಥ ಪೂರ್ಣವಾಗಿ ಗೌರವ ಸಲ್ಲಿಕೆಯಾಯಿತು. ಇದಕ್ಕೆ ಸಂಘದ ಭಾರವಾಹಿಗಳನ್ನು ಅಭಿನಂದಿಸಲೇಬೇಕು.

          ಅತ್ಯಂತ ಸರಳವಾಗಿ ನಡೆದ ತಾಳ ಮದ್ದಲೆ ಇದು. ಕುಂಬಳೆ ಕೋಳ್ಯೂರು ಜತೆಯಲ್ಲಿ ಬಲಿಪ್ಪರನ್ನು ಕಂಡಾಗ ಹಳೆಯ ಸಂಗೀತಾ ಧ್ವನಿಸುರುಳಿಯ ನೆನಪಿನ ಸುರುಳಿ ಹೀಗೆ ಬಿಚ್ಚಿಕೊಂಡು ಈ ರೂಪ ಪಡೆದುಕೊಂಡದ್ದು ವಿಶೇಷವಾಗಿ ಕಂಡಿತು. ಕೃಷ್ಣ , ಮತ್ತು ಕುಂತಿ ಕರ್ಣನನ್ನು ಯುದ್ದಕ್ಕೆ ಪೂರ್ವದಲ್ಲೇ ಭೇದಿಸುವ ಪ್ರಸಂಗವಿದು. ಸಂಧಾನ ಭಂಗವಾಗಿ ಸಮರ ನಿರ್ಣಯವಾದಮೇಲೆ ಕೃಷ್ಣ ಹಸ್ತಿನಾವತಿಯ ಆಸ್ಥಾನದಿಂದ ನಿರ್ಗಮಿಸುವಾಗ “ ಬಾರಯ್ಯ ಭಾನು ಸುಕುಮಾರ...” ಎಂದು ಕರ್ಣನನ್ನು ಹತ್ತಿರಕ್ಕೆ ಕರೆದು ಅವನ ಜನ್ಮ ವೃತ್ತಾಂತವನ್ನು ಹೇಳುವ ಭಾವುಕ ಸನ್ನಿವೇಶ ನಂತರ ಕುಂತೀ ದೇವಿ ತನ್ನ ತಾಯಿ ಎಂದು ತಿಳಿದ ನಂತರ ತಾಯಿ ಕುಂತಿ ಮಗನ ಬಳಿಗೆ ಬಂದು ಮಗನಲ್ಲಿ ವರಗಳನ್ನು ಕೇಳುವ ಹೃದಯಸ್ಪರ್ಶೀ ಸನ್ನಿವೇಶ ಎಲ್ಲವೂ ಅಚ್ಚುಕಟ್ಟಾಗಿ ಮೂಡಿಬಂತು. ಶ್ರೀಕೃಷ್ಣನಾಗಿ  ಶ್ರೀವಸಂತ ಭಾರದ್ವಾಜ್ ಕಬ್ಬಿನಾಲೆ, ಕರ್ಣನಾಗಿ ಶ್ರೀಕುಂಬಳೆ ಸುಂದರ್ ರಾವ್, ಕುಂತಿಯಾಗಿ ಶ್ರೀ ಕೋಳ್ಯೂರು ರಾಮಚಂದ್ರ  ರಾವ್ ಪಾತ್ರನಿರ್ವಹಣೆ ಮಾಡಿದರು. ಬಹಳಷ್ಟು ಸಂಭಾಷಣೆ ಧ್ವನಿ ಸುರುಳಿಯ ಪುನರಾವರ್ತನೆಯಾದರೂ ಆಕರ್ಷಕವಾಗಿದ್ದು ಸಭಿಕರ ನಿಶ್ಯಬ್ಧದ ಸ್ಪಂದನೆ ಉತ್ತಮ ಆಸ್ವಾದನೆಗೆ ಸಾಕ್ಷಿಯಾಯಿತು. ಕಬ್ಬಿನಾಲೆಯವರು ಹೊಸ ದೃಷ್ಟಿಕೋನದಿಂದ ಕೃಷ್ಣನ ಪಾತ್ರವನ್ನು ಪ್ರಸ್ತುತ ಪಡಿಸಿದರೆ, ಕುಂತಿಯಾಗಿ ಕೋಳ್ಯೂರರ ಪರಕಾಯ ಪ್ರವೇಶ ಅದ್ಭುತವಾಗಿತ್ತು. ಹಂತ ಹಂತವಾಗಿ ಅವರು ಪಾತ್ರದಲ್ಲಿ ಲೀನವಾಗುವ ಪರಿ ಕಲೆಯ ಬಗೆಗಿನ ಶ್ರಧ್ದೆಯನ್ನು ಬಿಂಬಿಸುತ್ತಿತ್ತು.

          ಕೇವಲ ಕೆಲವೇ ಪದಗಳು ಮಾತ್ರ ಬಲಿಪ್ಪರು ಹಾಡುತ್ತಾರೆ ಎಂದು ನೀರೀಕ್ಷೆಯಲ್ಲಿದ್ದಾಗ ಅವರಿಂದ ಪೂರ್ಣ ತಾಳಮದ್ದಲೆಗೆ ಹಾಡಿಸಿದ್ದು ಬಲಿಪ್ಪರಿಗೆ ಸೂಕ್ತ ಗೌರವಾದರವನ್ನು ಸಲ್ಲಿಸಿದಂತೆ ಭಾಸವಾಯಿತು. ಯಾವುದೇ ಆಡಂಬರವಿಲ್ಲದ ಸರಳ ಹಿಮ್ಮೇಳ ಯಕ್ಷಗಾನದ ಸಿರಿವಂತಿಕೆಯನ್ನು ಬಿಂಬಿಸುತ್ತಿತ್ತು. ಬಲಿಪ್ಪರಿಗೆ ಹಿಮ್ಮೆಳದಲ್ಲಿ ಮದ್ದಲೆಗೆ ಸಾಥ್ ನೀಡಿದವರು ಮಿತ್ರರಾದ ಶ್ರೀ ಅವಿನಾಶ್ ಬೈಪಡಿತ್ತಾಯ. ಮದ್ದಲೆ ವಾದನದಲ್ಲಿ ಹಿಂದಿಗಿಂತಲೂ ಬಹಳಷ್ಟು ಪ್ರಾವಿಣ್ಯತೆಯನ್ನು ಗಳಿಸಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. 

          ಬಹಳ ಸಮಯದ ನಂತರ ನಮಗೆಲ್ಲ ಬಲಿಪ್ಪರ ಕಂಠದ ಒಂದೆರಡು ಪದಳನ್ನು ಕೇಳುವ ಅವಕಾಶ ಒದಗಿಬಂದದ್ದು ರೋಮಾಂಚನವನ್ನು ಉಂಟುಮಾಡಿತ್ತು. ಬಲಿಪ್ಪರ ಕಂಠದ ಪ್ರತಿಯೊಂದು ಪದಕ್ಕೂ ಅವಿನಾಶರ ಮದ್ದಲೆಯಂತೆ ನಮ್ಮ
ಚಿತ್ರ ಕೃಪೆ ಲಾನ.
ಹೃದಯವೂ ಮದ್ದಲೆಯ ಧ್ವನಿಗೆ ಸಾಥ್ ಒದಗಿಸಿದ್ದು ಪ್ರತಿಯೊಬ್ಬರ ಮುಖದಲ್ಲು ಎದ್ದು ಕಾಣುತ್ತಿತ್ತು. ತಾಳ ಮದ್ದಲೆ ಮುಗಿಸಿ ಸಭಾ ಭವನದಿಂದ ಹೊರಬಂದಾಗ  ಯಾರೋ ಹೇಳುವುದು ಕಿವಿಗೆ ಅಪ್ಯಾಯಮಾನವಾಗಿ ಕೇಳಿಸಿತು. “ ಭಾಗವತರದ್ದು ಎಂತಾ ಸ್ವರ ಮಾರಾಯ್ರೆ.. ಇದಕ್ಕೆ ತೆಂಕು ಬಡಗು ಭೇದವೇ ಇಲ್ಲ. ಇದು ಯಕ್ಷಗಾನದ ಸ್ವರ.”  ಇದು ಉತ್ಪ್ರೇಕ್ಷೆಯಲ್ಲ. ಅದೇಕೋ ಆನಂತರ ಸಭಾಂಗಣದೊಳಗೆ ಹೋಗಿ ಬೇರೆ ಯಾವುದೇ  ಪದವನ್ನು ಕೇಳುವ ಮನಸ್ಸಾಗಲಿಲ್ಲ.  ಚಿಕ್ಕಂದಿನಲ್ಲಿ ಬಡತನದ ಮಧ್ಯೆ ಅಪರೂಪವಾಗಿ ಸಿಗುವ ಪಾಯಸದ ಊಟ ಉಂಡನಂತರ ಏನನ್ನೂ ಬಡಿಸಿಕೊಳ್ಳದೇ,  ತಿನ್ನದೇ ಆ ಪಾಯಸದ ಸವಿಯನ್ನು ಹಾಗೇ ನಾಲಗೆಯಲ್ಲಿ ಉಳಿಸುವ ಪ್ರಯತ್ನ ಮಾಡುತ್ತಿದ್ದೆವು. ಹಾಗೇ ಅನೀರೀಕ್ಷಿತವಾಗಿ ಬಲಿಪ್ಪರ ಧ್ವನಿ ಪಾಯಸದ ಸಿಹಿಯಾಗಿ ಪರಿಣಮಿಸಿತು. ಇನ್ನು ಬೇರೆ ಎಲ್ಲ ಧ್ವನಿಗೂ ಅಂತರಗದ ಕರ್ಣ ಮುಚ್ಚಿಕೊಂಡು ಆದಷ್ಟು ಆ ಮಧುರ ಧ್ವನಿಯನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದ್ದು ಸುಳ್ಳಲ್ಲ. ಒಟ್ಟಿನಲ್ಲಿ ಕರ್ಣ ಭೇದನ ಕೇಳಿ ಕರ್ಣಪಾವನವಾಯಿತು.
ಚಿತ್ರಕೃಪೆ: ಮಿಥುನ್ ಸುಣ್ನಂಗುಳಿ

          ಸಾಯಂಕಾಲ ಪ್ರಶಸ್ತಿ ಪುರಸ್ಕಾರಗಳೊಂದಿಗೆ ಹೊರಟು ನಿಂತ ಬಲಿಪ್ಪಜ್ಜನನ್ನು ಬೀಳ್ಕೊಡುವಾಗ ಮನಸ್ಸು ಬಹಳಷ್ಟು ತೃಪ್ತಿಯನ್ನು ಅನುಭವಿಸಿತ್ತು.  “ಮರುಳು ಮಾಧವ ಮಹಿಯ ರಾಜ್ಯದ ಸಿರಿಗೆ ಸೋಲುವನಲ್ಲ…..” ಎಂಬ ಪದ ಕಿವಿಯಲ್ಲಿ ಇನ್ನೂ ಮಾರ್ದನಿಸುತ್ತಾ ಇತ್ತು.
          .