ಯಕ್ಷಗಾನ ಮಾಹಾಯಜ್ಞ
(ತೆಂಕುತಿಟ್ಟು ಹಿತರಕ್ಶಣಾ
ವೇದಿಕೆ ಸುಳ್ಯ. ಇವರು ಕೆಲವು ವರ್ಷಗಳ ಕೆಳಗೆ ಆಯೋಜಿಸಿದ
ಮಹಾಭಾರತ ಪ್ರಸಂಗದ ಬಗೆಗಿನ ಅನಿಸಿಕೆಗಳು
)
ಪ್ರಸಂಗ : ಶ್ರೀಕೃಷ್ಣ ಪರಂಧಾಮ –
ಪಾಂಡವ ಸರ್ಗಾರೋಹಣ
ನಡ ನಡುಗುತಿಹ ಭೀಮ ಸೇನನ ಕೈ ಹಿಡಿದು
ಓಲೈಸುತ್ತಾ ಒರೆದನು, ಬಿಡು ಮನದ ಶೋಕವನು. ಅದೋ
ಅದೋ ಸುರಪುರ ಬಂತು ನೋಡೆನುತ.
ಕುಸಿದು
ಕುಳಿತ ಭೀಮಸೇನನಿಗೆ ಅಣ್ಣ ಯುಧಿಷ್ಠಿರ ಧರ್ಮರಾಯ ಹೇಳುವ ಮಾತು, ಅದು ವರೆಗೂ ಎಲ್ಲ ಅಡೆತಡೆಗಳನ್ನು ಮೀರಿ ಕಳೆದು ಹೋದ
ಸತಿ ಸಹೋದರರನ್ನು ಲೆಕ್ಕಿಸದೆ ಸ್ಥಿರ ಚಿತ್ತದಿಂದ ಮುಂದೆ ಹೋಗುತ್ತಿದ್ದರೆ , ಹಿಂದೆಯೇ ಹೆಜ್ಜೆ
ಹಾಕುತ್ತಿದ್ದ ಭೀಮಸೇನನ ರೋದನ ಬಹಳ ಹಿಂದಿನಿಂದ ಕೇಳುತ್ತದೆ. ದ್ರೌಪದಿ ನಕುಲ ಸಹದೇವ ಹೆಚ್ಚೇಕೆ
ಮಹಾ ವಿಕ್ರಮಿಯಾದ ಅರ್ಜುನ ಸತ್ತು ಬಿದ್ದಾಗಲೂ ವಿಚಲಿತನಾಗದ ಧರ್ಮರಾಯ ಹಿಂದಿರುಗಿ ನೋಡುತ್ತಾನೆ.
ಶತಗಜತ್ರಾಣಿ ನಿತ್ರಾಣಿಯಾಗಿ ನೆಲಕ್ಕೊರಗಿದ್ದಾನೆ. ಸರಿದು ಭೀಮ ಸೇನನ ಕೈಹಿಡಿದು ಧರ್ಮರಾಯ ಹೇಳುವ
ಆ ಸನ್ನಿವೇಶ ಮಹಾಭಾರತದ ಅಂತ್ಯದ ದುರಂತದ
ಚಿತ್ರಣವನ್ನು ಯಥಾವತ್ತಾಗಿ ಚಿತ್ರಿಸುತ್ತದೆ.
ನೂರು
ಚದರಡಿಯ ರಂಗಸ್ಥಳದ ಒಳಗೆ ಒಂದು ಪೌರಾಣಿಕ
ಲೋಕವನ್ನು ಸ್ಥೂಲವಾಗಿ ತೋರಿಸುತ್ತಿದ್ದರೆ, ಯಕ್ಷಗಾನದ ಪರಂಪರೆಯ ಅಗಾಧತೆಗೆ ಮನಸ್ಸು ಭಾರವಾಗುತ್ತದೆ.
ಅತಿರೇಕದ ಭಾವಾಭಿನಯವಿಲ್ಲ. ದೇಹದಂಡನೆಯ ಗುರಿಯಾಗುವ ಕುಣಿತವಿಲ್ಲ. ಸಂಗೀತ ಕಛೇರಿಯನ್ನು ಮೀರಿ
ವಿರಾಮ ಎಲ್ಲಿ ಎಂದು ತಿಳಿಯದ ಆಲಾಪನೆ ಇಲ್ಲ. ಇಲ್ಲಿನ ಹಿತ ಮಿತವಾದ ಭಾಗವತರ ಭಾಮಿನಿಯ ಆಲಾಪನೆ,
ನಮ್ಮನ್ನು ಸನ್ನಿವೇಶದ ಆಳಕ್ಕೆ ಮತ್ತಷ್ಟು ಸೆಳೆಯುತ್ತಾ ಸಾಗುತ್ತದೆ. ಅಣ್ಣಾ, ಎನ್ನುವ ಆರ್ತನಾದದ ಭೀಮನ ಕರೆ ಅದುವರೆಗಿನ ಪಾಂಡವ
ಸಾಹೋದರ್ಯವನ್ನು ತೋರಿಸುತ್ತದೆ. ಕೇವಲ ಸಂಕೇತಗಳೆಂಬಂತೆ ಈ ದುರಂತ ಚಿತ್ರಣವನ್ನು
ಕೊಡುವಾಗ, ರಂಗಸ್ಥಳದಲ್ಲಿ ನೋಡಿದುದಕ್ಕಿಂತಲೂ ಹೆಚ್ಚು ಮನಸ್ಸು ಕಲ್ಪಿಸುತ್ತದೆ. ಯಕ್ಷಗಾನ ಎಂದರೆ ಪ್ರೇಕ್ಷಕ ಕಲ್ಪನೆಗೂ ಮುಖವಾಗುವಾ
ಒಂದು ಕಲೆ. ಪಾಂಡವರ ಮಹಾ ಪ್ರಸ್ಥಾನವನ್ನು ಕಲ್ಪಿಸುತ್ತಾ ಮನಸ್ಸಿನಲ್ಲೇ ಆ ಚಿತ್ರಣವನ್ನು
ಚಿತ್ರಿಸುತ್ತದೆ. ರಂಗಸ್ಥಳದ ಕೆಲವು ಅಡಿಯೊಳಗೇ ಕೇವಲ ಸಂಕೇತವಾಗುವ ಯಕ್ಷಗಾನ, ತನ್ನೊಳಗೆ
ಅವ್ಯಕ್ತವಾಗಿರುವ ಕಲ್ಪನೆಗಳನ್ನು ತೋಳೆರಡರಲ್ಲಿ ಎತ್ತಿ ಕೊಟ್ಟ ಅನುಭವ. ಪರಂಪರೆಯ
ಯಕ್ಷಗಾನವೆಂದರೆ ಇದು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ತೆಂಕುತಿಟ್ಟು ಯಕ್ಷಗಾನ
ಹಿತರಕ್ಷಣಾ ವೇದಿಕೆ ಹೆಸರಿಗೊಪ್ಪುವಂತೆ ತೆಂಕುತಿಟ್ಟು
ಮಾತ್ರವಲ್ಲ ಸಮಗ್ರಯಕ್ಷಗಾನದ ಹಿತಕ್ಕೆ ಒಂದು ಅವಕಾಶವನ್ನು ಕಲ್ಪಿಸಿದೆ ಎಂದುಕೊಂಡರೆ ಅತಿಶಯವಾಗಲಾರದು. ಕೇವಲ ವಿಡೀಯೋವನ್ನು ನೋಡಿದರೂ ಅವ್ಯಕ್ತವಾಗುವ ಭಾವನೆಗಳಿಗೆ ಅಂತ್ಯವವೇ ಇಲ್ಲದಂತೆ ಒಂದು
ಯಕ್ಷಗಾನ ಕೇವಲ ಯಕ್ಷಗಾನವಾಗಿ ಹೇಗೆ ಮನಸ್ಸನ್ನು ಆವರಿಸಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿಯಾಗುತ್ತದೆ.
ತೆಂಕುತಿಟ್ಟು
ಯಕ್ಷಗಾನದ ಪರಂಪರೆಯ ಮಾರ್ಗಸೂಚಿ ಯಾವುದು ಎಂದು ತಿಳಿಯದೆ ಇಂದಿನ ತಲೆಮಾರಿನ ಪ್ರೇಕ್ಷಕ ಯಾವುದೋ
ಒಂದು ವಿಕಲ್ಪವನ್ನು ಯಕ್ಷಗಾನ ಎಂಬಂತೆ ತಿಳಿದು ಹಾದಿ ತಪ್ಪುವಾಗ ದಾಖಲಾಗುವ ಇಂತಹ ಪ್ರಯತ್ನಗಳು
ನಿಜಕ್ಕೂ ದಾರಿ ಸೂಚಕವಾಗಿ ಪರಂಪರೆಯ ಯಕ್ಷಗಾನ ಲೋಕದ ಹಾದಿ ಇದು ಅಂತ ತೋರಿಸುತ್ತದೆ. ವರ್ತಮಾನದ
ಸಂಕ್ರಮಣದಲ್ಲಿ ಇದು ಅತ್ಯಂತ ಶ್ಲಾಘನೀಯ ಕರ್ಯ. ಹಾಗೆ ನೋಡಿದರೆ ಎರಡು ಮೂರುವರ್ಷಗಳ ಹಿಂದಿನ
ಚಿತ್ರಣವಷ್ಟೇ ಇದು. ಆದರೂ ಸಾರ್ವಕಾಲಿಕ ಸತ್ಯವನ್ನು ತೋರಿಸುತ್ತದೆ.
ತೆಂಕು ತಿಟ್ಟು
ಹಿತರಕ್ಷಣಾ ವೇದಿಕೆ ಸುಳ್ಯ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ಸಹಯೋಗದಲ್ಲಿ
ಸುಮಾರು ಇಪ್ಪತ್ತು ಮಹಾಭಾರತದ ಯಕ್ಷಗಾನ
ಪ್ರಸಂಗಳನ್ನು ಶುದ್ದ ಪರಂಪರೆಯ ಆವರಣದಲ್ಲಿ
ಇಲ್ಲಿ ಚಿತ್ರಿಸಿ ದಾಖಲೆಗೆ ಸೇರಿಸಲಾಗಿದೆ. ಇದಕ್ಕೆ ಯಕ್ಷಗಾನದ ಅತ್ಯಂತ ಹಿರಿಯ ಕಲಾವಿದರ
ಸಹಕಾರವು ಅತ್ಯಂತ ಶ್ಲಾಘನೀಯ. ಹೀಗೊಂದು ಇದೆ ಅಂತ ಸಾಕ್ಷೀಕರಿಸುವುದಕ್ಕೆ ಇದು ಒಂದು ಪ್ರಬಲ
ಮಾಧ್ಯಮವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಷ್ಟೆಲ್ಲ ಪ್ರಸಂಗಳು ಚಿತ್ರಣಗೊಂಡರೂ ಈಗ ನೋಡುವುದಕ್ಕೆ
ಸಾಧ್ಯವಾಗಿದ್ದು ಎರಡು ಮಾತ್ರ ಶ್ರೀಕೃಷ್ಣ ಪರಂಧಾಮ ಮತ್ತು ಪಾಂಡವ ಸರ್ಗಾರೋಹಣ. ಮುಂದಿನದ್ದು
ಇನ್ನೂ ನೋಡಬೇಕಿದ್ದರೂ ಅವಕಾಶವಂತೂ ವಿಪುಲವಾಗಿ ಇದೆ.
ಶ್ರೀಕೃಷ್ಣ
ಪರಂಧಾಮದ ಶ್ರೀಕೃಷ್ಣನಾಗಿ ಯಕ್ಷಗಾನದ ಹಿರಿಯ ಕಲಾವಿದ ಶ್ರೀ ಕೈರಂಗಳ ಕೃಷ್ಣ ಮೂಲ್ಯ ಯಕ್ಷಗಾನ
ಪರಂಪರೆಯ ಕೃಷ್ಣನ ಮೂಲಕ ಪರಂಧಾಮದ ಶ್ರೀಕೃಷ್ಣ ಹೇಗಿದ್ದ ಎಂಬುದನ್ನು ತೋರಿಸಿಕೊಂಡುತ್ತಾರೆ. ಅತ್ಯಂತ ಚುರುಕಿನ ಚಲನೆಯ ಪಾತ್ರ ಪ್ರಸ್ತುತಿ
ಸಂಕ್ಷೇಪವಾಗಿ ಮನ ಮುಟ್ಟುತ್ತದೆ. ಧರ್ಮರಾಯನಾಗಿ ವಾಟೆಪಡ್ಪು ಶ್ರೀ ವಿಷ್ಣು ಶರ್ಮರು
ಗಮನಸೆಳೆಯುತ್ತಾರೆ. ಪರೀಕ್ಷಿತನನಾಗಿ ಹಿರಿಯ ಕಲಾವಿದ ಶ್ರೀ ಶೀನಪ್ಪ ರೈ ಸಂಪಾಜೆಯವರು ಮಾರ್ಗದರ್ಶಿಯಂತೆ
ಗಮನ ಸೆಳೆಯುತ್ತಾರೆ. ಅಂತೆಯೇ ಭೀಮನ ಪಾತ್ರ
ನಿರ್ವಹಿಸಿದ ಶ್ರೀ ಬಾಲಕೃಷ್ಣ ಗೌಡ ಮಿಜಾರು ಇವರು ಗಮನಾರ್ಹ ಪ್ರದರ್ಶನವನ್ನು ಕೊಟ್ಟಿದ್ದಾರೆ. ಮುಂಚೂಣಿಯ ಪಾತ್ರಗಳು ವೈಭವೀಕರಿಸುವಲ್ಲಿ ಪೊಷಕ
ಪಾತ್ರಗಳದ್ದು ಸ್ಥಾನ ಮಹತ್ವವೆನಿಸುತ್ತದೆ. ಇಲ್ಲಿ ಪೋಷಕ ಪಾತ್ರಗಳು ತಮ್ಮ ಕರ್ತವ್ಯವನ್ನು
ಸಮರ್ಥವಾಗಿ ನಿಭಾಯಿಸಿವೆ.
ಶ್ರೀ ಕೃಷ್ಣ
ಪರಂಧಾಮ ಪಾಂಡವ ಸ್ವರ್ಗಾರೋಹಣ, ಎರಡೂ ಒಂದು ರೀತಿಯ ಸೌಮ್ಯ ಪ್ರಸಂಗಗಳು. ಹಾಸ್ಯಕ್ಕೆ ಅವಕಾಶವೇ
ಇಲ್ಲ. ಹಾಗೂ ಇದರಲ್ಲಿ ತಮ್ಮ ಚಟಕ್ಕೆ ಹಾಸ್ಯವನ್ನು ಸೇರಿಸಿದರೆ ಪ್ರಸಂಗದ ರಸಾಭಿವ್ಯಕ್ತಿಗೂ
ರಸಾಸ್ವಾದನೆಗೂ ಗಂಭೀರವಾದ ಊನ ಬರುತ್ತದೆ. ಇಂದಿನ ಬಯಲಾಟಗಳನ್ನು ನೋಡುವಾಗ ಇದು ಆಡಬಲ್ಲ
ಪ್ರಸಂಗವೇ ಅಲ್ಲ. ಅಂತಹ ಪ್ರಸಂಗವನ್ನೂ ಸಹ ಪರಂಪರೆಯ ದಾರದಲ್ಲಿ ಸುಂದರವಾಗಿ ಪೋಣಿಸಲಾಗಿದೆ.
ಇದಕ್ಕೆ ಕಾರಣ ಇಲ್ಲಿಯ ಸಮರ್ಥ ಹಿಮ್ಮೆಳ ಮತ್ತು ದಕ್ಷ ನಿರ್ದೇಶನ. ಚೆಂಡೆ ಮದ್ದಲೆಗಳಂತೂ ತಮ್ಮ ಝೇಂಕಾರವನ್ನು ನಿರಂತರವಾಗಿ
ಒದಗಿಸುವುದು ಮಾತ್ರವಲ್ಲ ಅದರ ಗುಂಗಿನಿಂದ ನಮಗೆ ಹೊರಬರುವುದು ಸಾಧ್ಯವಾಗುವುದಿಲ್ಲ. ಹಿರಿಯ
ಭಾಗವತ ಶ್ರೀ ಬಲಿಪ ನಾರಾಯಣ ಭಾಗವತ ಮತ್ತು ಶ್ರೀ ಪುಂಡಿಕೈ ಗೋಪಾಲ ಕೃಷ್ಣ ಭಟ್ ಇವರ
ಭಾಗವತಿಕೆ ಅಪರೂಪವೆಂಬಂತಹ ಪ್ರಸಂಗಗಳನ್ನು
ಸುಲಲಿತವಾಗಿ ಪರಂಪರೆಯ ನೆರಳಲ್ಲಿ ಪ್ರದರ್ಶನ ಕಾಣುವಲ್ಲಿ ಹಿಮ್ಮೇಳದ ಮುನ್ನೆಲೆಗೆ ಬಂದು
ನಿಲ್ಲುತ್ತವೆ. ಮೈನವಿರೇಳಿಸುವ ಭಾಗವತಿಕೆ ಇಡೀ ಪ್ರಸಂಗದ ಜೀವಾಳ.
ಎರಡೂ ಪ್ರಸಂಗಗಳು
ಅಪರೂಪ ಮಾತ್ರವಲ್ಲ ಇದುವರೆಗೂ ತೀರಾ ವಿರಳ ಪ್ರದರ್ಶನವನ್ನುಕಂಡಿದೆ. ಅದಕ್ಕೆ ಕಾರಣಗಳು ಹಲವಿರಬಹುದು. ಅದರೆ ಅದನ್ನು ಇಲ್ಲಿ
ಸಮರ್ಥವಾಗಿ ಪ್ರದರ್ಶಿಸಿ ದಾಖಲೆಯ ಪುಟಕ್ಕೆ ಸೇರಿಸಿದ್ದಾರೆ. ತೆಂಕು ತಿಟ್ಟಿನಲ್ಲಿ ಕೇವಲ
ಚೆಂಡೆಗೆ ಮಾತ್ರಾ ಅವಕಾಶ. ಗಿರಿಕಿ ಹೊಡೆಯುವುದು ಕುತ್ತು ಹಾರುವುದು ಬಿಟ್ಟರೆ ತೆಂಕಿನಲ್ಲಿ ಏನು
ಇಲ್ಲ ಎಂದು ಮಾಹಾತ್ಮೆಯಂತಹ ಪ್ರಸಂಗ ನೋಡಿ ಮೂಗು ಮುರಿಯುವರು ಕನಿಷ್ಠ ಪಕ್ಷ ಈ ವಿಡಿಯೋವನ್ನು
ನೋಡುವುದು ಸೂಕ್ತ. ಪರಂಪರೆಯ ಕಾಠಿಣ್ಯತೆಯೇ ಇದಕ್ಕೆ ಕಾರಣ. ಪರಂಪರೆಯ ಯಕ್ಷಗಾನ ಹೇಗಿರುತ್ತದೆ
ಎಂಬುಕ್ಕೆ ಈ ಯಕ್ಷಗಾನವನ್ನು ನೋಡಲೇ ಬೇಕು. ಇಂದು
ಯಕ್ಷಗಾನಕ್ಕೆ ಅನಿವಾರ್ಯವಾಗುವುದು, ಪ್ರದರ್ಶನವೊಂದಕ್ಕೆ ಸಾವಿರ ಸಾವಿರ ಸಂಭಾವನೆ ಪಡೆಯುವ ತಾರಾಮೌಲ್ಯದ ಕಲಾವಿದರಲ್ಲ. ಪರಂಪರೆಯ ಆಳವಾದ ಜ್ಞಾನ
ಮಾಹಿತಿ ಇರುವ ಕಲಾವಿದರು ಎಂಬುದು ಇದನ್ನು ನೋಡುವಾಗ ಸ್ಪಷ್ಟವಾಗುತ್ತದೆ.
ಇಂದಿನ ವರ್ತಮಾನದ
ಯಕ್ಷಗಾನ ಪ್ರದರ್ಶನಗಳಲ್ಲಿ ಪರಂಪರೆಯ ಬಲು ಮುಖ್ಯ ಅಂಶಗಳೇ ಮಾಯವಾಗಿಬಿಟ್ಟಿವೆ. ಹಾಸ್ಯ ಅಪಹಾಸ್ಯದ
ವೆತ್ಯಾಸವೇ ತಿಳಿಯದ ಹಾಸ್ಯ ಪ್ರಜ್ಞೆ, ಕೇವಲ ದೇಹದಂಡನೆ ಕಂಠ ಶೋಷಣೆಗೆ ಸೀಮಿತವಾಗುವ ಕುಣಿತ
ಇಷ್ಟಕ್ಕೇ ಯಕ್ಷಗಾನ ಸೀಮಿತವಾಗಿದೆ. ಕುಣಿದರೂ ಹಾಡಿದರೂ ಅದರಲ್ಲಿ ಯಕ್ಷಗಾನ ಪರಂಪರೆ ಎಲ್ಲಿದೆ
ಅಂತ ಹುಡುಕುವಂತಾಗಿದೆ. ರಂಗದಲ್ಲಿ ಪಾತ್ರ ಮಾಡುವವರಿಗಂತು ಸ್ವಯಂ ಕೃತ ಅಪರಾಧವೆಂಬಂತೆ ಪರಂಪರೆಯ
ಬಗ್ಗೆ ತಿಳಿದಿಲ್ಲ. ಇನ್ನು ಪ್ರೇಕ್ಷಕ ಇದನ್ನೇ ಪರಂಪರೆ ಎಂದು ತಿಳಿದು ಮನೋರಂಜನೆಗೆ
ವಶವಾಗುತ್ತಾನೆ. ಹೀಗಿದ್ದರೂ ಕೆಲವು ಲೇಖಕರು
ತಮ್ಮ ಸ್ವಾರ್ಥಕ್ಕೆ ಪತ್ರಿಕೆಯಲ್ಲಿ ಪಾರಂಪರಿಕೆ ಕಲೆ ಅಂತ ಇಂತಹ ಯಕ್ಷಗಾನವನ್ನು ಬರೆಯುವುದನ್ನು
ಕಾಣಬಹುದು. ಹೀಗೆ ಬರೆಯಬೇಕಾದರೆ ಯಕ್ಷಗಾನದ ಪರಂಪರೆಯ ಖಚಿತ ಮತ್ತು ಸ್ಪಷ್ಟ ಅರಿವು ಇರಬೇಕಾದದ್ದು
ಅತೀ ಅವಶ್ಯ. ಇಲ್ಲವಾದರೆ ಮುಂದಿನ ಪೀಳಿಗೆಗೆ
ಮಾಡುವ ಘೋರ ವಂಚನೆಯಾಗುತ್ತದೆ., ಪತ್ರಿಕೆಯಲ್ಲಿ ತಮ್ಮ ಲೇಖನ ಬರಬೇಕೆಂಬ ಸ್ವಾರ್ಥಕ್ಕೆ ಒಂದು ಶುದ್ದ ಪರಂಪರೆಯನ್ನು ಅವಮಾನಿಸುವುದು ಸರಿಯಲ್ಲ. ಪರಂಪರೆಯ
ಅಶಂಶಗಳನ್ನು ಸಾರಾಸಗಟಾಗಿ ಅಳಿಸಿ ಹಾಕಿದ ಯಕ್ಷಗಾನಗಳು ಪಾರಂಪರಿಕ ಅಂತ ಹೆಸರಿಸುವುದು ತಮ್ಮ
ಅರಿವಿನ ಕೊರತೆಯನ್ನು ತೋರಿಸುವುದು ಮಾತ್ರವಲ್ಲ ತಮ್ಮ ಮೂರ್ಖತನ ಪ್ರದರ್ಶಿಸುವುದು ಆತಿರುತ್ತದೆ.
ಇಲ್ಲಿ ದಾಖಲಾದ ಈ
ಪ್ರಸಂಗದ ಭಾಗವತಿಕೆಯನ್ನು ಒಂದು ಸಲ ಗಮನಿಸಿದರೆ ಪರಂಪರೆಯ ಗಟ್ಟಿತನ ಅರಿವಾಗುತ್ತದೆ. ಯಾವುದೇ
ಪದವನ್ನು ಕೇಳಿ ಅದರ ರಾಗ ಯಾವುದು ಎಂದು ರಾಗದ ಬೆನ್ನು ಹತ್ತಿದರೆ ಅದನ್ನು ತಿಳಿಯುವುದಕ್ಕೆ
ಸಾಧ್ಯವಾಗುವುದಿಲ್ಲ. ಯಾಕೆಂದರೆ ಇಲ್ಲಿ ಹಾಡುವ ಪದಗಳು ಯಕ್ಷಗಾನದ ಮಟ್ಟು ಇದನ್ನೇ ಆಧರಿಸಿವೆ.
ಇದೇ ಪರಂಪರೆಯ ಯಕ್ಷಗಾನ. ಸಾಮಾನ್ಯವಾಗಿ ಇಂದು
ಭಾಗವತ ಪದ ಹೇಳಿದೊಡನೆ ಅದರ ರಾಗ ವೈಖರಿಯ ಬಗ್ಗೆ ಚರ್ಚೆಯಾಗುತ್ತದೆ. ಹೀಗೆ ರಾಗಾಧಾರಿತ ಯಕ್ಷಗಾನ
ಅದು ನವೀಕರಣ ಲೇಪನದ ಯಕ್ಷಗಾನವೇ ಹೊರತು ಅದು ಪರಂಪರೆಯ ಯಕ್ಷಗಾನವಲ್ಲ. ಇದರ ಸ್ಪಷ್ಟ ಅರಿವಿರದೆ
ಯಕ್ಷಗಾನದ ಬಗ್ಗೆ ಬರೆದು ಪರಂಪರೆಯನ್ನು ಮತ್ತಷ್ಠು ಕತ್ತಲಲ್ಲಿಡುವ ಮೂರ್ಖ ಪ್ರಯತ್ನ ನಡೆಯುತ್ತಲೇ
ಇದೆ.
ಇಂತಹ ವೈರುಧ್ಯಗಳ
ನಡುವೆ ಇಂತಹ ಒಂದು ಘನಕಾರ್ಯ ಸದ್ದಿಲ್ಲದಂತೆ ನಡೆದು ಹೋಗಿದೆ.
ವರ್ಷದಲ್ಲಿ ಕೆಲವಾದರೂ ಇಂತಹ ಪ್ರದರ್ಶನಗಳು ಯಾವುದೇ
ಸ್ವಾರ್ಥವಿಲ್ಲದೇ ಪ್ರದರ್ಶನಗೊಳ್ಳಗೇಕು. ಆಗ ಪರಂಪರೆಯ ಅರಿವು ಉಂಟಾಗಿ ಅದರ ಜೀವ ಸತ್ವವನ್ನು
ಶಾಶ್ವತವಾಗಿಸುವುದಕ್ಕೆ ಸಾಧ್ಯವಿದೆ. ಆ
ನಿಟ್ಟಿನಲ್ಲಿ ಇದು ಸ್ತುತ್ಯರ್ಹ ಕಾರ್ಯ.
ತೆಂಕುತಿಟ್ಟು ಹಿತರಕ್ಷಣವೇದಿಕೆಯ ಈ ಕಾರ್ಯ ಇತಿಹಾಸದ ಮಹತ್ವ ಪುಟಗಳಲ್ಲಿ ದಾಖಲಾರ್ಹವಾಗಿದೆ.
ಶ್ರೀ ಚಂದ್ರ
ಶೇಖರ ದಾಮ್ಲೆ ಮತ್ತವರ ಬಳಗದ ಅವಿರತ ಶ್ರಮದಿಂದ ಇಂತಹ ಒಂದು ’ಯಕ್ಷಗಾನದ
ಮಹಾಯಜ್ಞ’ ನೆರವೇರಿದೆ. ಯಾವುದೇ ಕಾರ್ಯಗಳಾಲಿ ಅದು ಸುಲಲಿತವಾಗಿ ನೆರವೇರುವುದು
ಅದಕ್ಕೆ ಸಹಾಯವಾಗಿ ಪ್ರಾಯೋಜಕತ್ವ ಲಭಿಸಿದಾಗ.
ಹಾಗಾಗಿ ಇಲ್ಲಿ ಬೆಂಗಳೂರು ಕನ್ನಡ ಪ್ರಾಧಿಕಾರದ ಪ್ರಾಯೋಜಕತ್ವವನ್ನು ಪ್ರತ್ಯೇಕವಾಗಿ
ಸ್ಮರಿಸಬೇಕಾಗುತ್ತದೆ. ಯಾವುದೇ ಕಾರ್ಯವಿರಲಿ ಇಂದು ಪ್ರಾಯೋಜನ ಕೊಡುವವರು ಅನಾವಶ್ಯಕ ಮೂಗು
ತೂರಿಸಿ ಒಟ್ಟು ಕಾರ್ಯದಲ್ಲಿ ಮಾಲಿನ್ಯವನ್ನು ಸೃಷ್ಟಿಸುತ್ತಾರೆ. ಪ್ರದರ್ಶನ ನಡೆಸುವ ಯಜಮಾನ ತನ್ನ ಮಗ ಎನ್ನುವ ಮೋಹದಿಂದ
ಸಣ್ಣದಾದರೂ ಒಂದು ವೇಷ ಹಾಕಿ ರಂಗಸ್ಥಳ ಏರಲಿ ಎಂದು ಬಯಸುವುದು ತಾವು ಮಾಡುವ ಯಕ್ಷಗಾನ ಸೇವೆಗೆ
ಅಪಚಾರ ಎಸಗಿದಂತೆ. ಯಕ್ಷಗಾನ ಕೆಟ್ಟರು
ಪರವಾಗಿಲ್ಲ ತನ್ನ ಮಗ ವೇಷ ಹಾಕಿ ಕುಣಿಬೇಕು. ಆದರೆ ಅಂತಹ ಯಾವುದೇ ಆಭಾಸಗಳು ಇಲ್ಲಿ ನೆರವೇರದೆ ಸಂಘಟಕರ
ಆಶಯ ಬಹಳಷ್ಟು ನೆರವೇರಿದೆ ಎಂದು ಈ ಪ್ರದರ್ಶನವನ್ನು ನೋಡಿಯೇ ಕಲ್ಪಿಸಬಹುದಾಗಿದೆ. ಏನಿದ್ದರೂ
ಮುಂದೆ ಯಕ್ಷಗಾನದ ಪರಂಪರೆಯ ಉಳಿವಿಗೆ ಇದು ಪ್ರೇರಕವಾಗಲಿ.
ಸುಮಾರು ಐದಾರು ವರ್ಷಗಳ
ಹಿಂದೆ ನಡೆದ ಈ ಘನವಾದ ಕಾರ್ಯ ಹಾಗೇ ಸುಪ್ತವಾಗಿತ್ತು. ಆದರೆ ಅದನ್ನು ಯೂಟ್ಯುಬ್
ಮಾಧ್ಯಮದಲ್ಲಿ ಬಿತ್ತರಿಸಿ ಆಸಕ್ತ ಪ್ರೇಕ್ಷಕನ ಮಡಿಲಿಗೆ ತಲುಪಿಸುವಲ್ಲಿ ಮಿತ್ರ ಶ್ರೀ ಕಟೀಲು ಸಿತ್ಲ ರಂಗನಾಥರು
ದಾಖಲೀಕರಣಕ್ಕಾಗಿ ಸ್ಥಾಪಿಸಿದ ಯಕ್ಷರಂಗ ಕಟೀಲು ಸಿತ್ಲ ಪೌಂಡೇಶನ್ (ರಿ) ಕಾರಣವಾಯಿತು.
ವಿಡಿಯೋವನ್ನು ಸಂಕಲಿಸಿ ಅದನ್ನು ಅಂತರ್ಜಾಲಕ್ಕೆ ಹರಿದು ಎಲ್ಲ ಪ್ರೇಕ್ಷಕನಿಗೂ
ಸುಲಭದಲ್ಲಿ ಸಿಗುವಂತೆ ಮಾಡಿದ ಈ ಕಾರ್ಯಕ್ಕೆ ಪ್ರತ್ಯೇಕ ಧನ್ಯವಾದಗಳು ಸಲ್ಲಬೇಕು.
ಯಕ್ಷಗಾನಂ
ಗೆಲ್ಗೆ.
