ಗೀತೋಪದೇಶ ಯಕ್ಷಗಾನ ಹೀಗೊಂದು
ವ್ಯಾಖ್ಯಾನ ಭಾಗ ೧
“ಪರಿಕಿಸು
ಪಾರ್ಥನೆ .......... ... ಕರದೊಳು ಶಸ್ತ್ರಾಸ್ತ್ರವ ಧರಿಸುತ ತಿರುವುತ ಮೀಸೆಯನು...” ಕುರು ಕ್ಷೇತ್ರ ಯುದ್ದದಲ್ಲಿ ಸೇನೆಯ ಮಧ್ಯೆ ರಥವನ್ನು ತಂದು ನಿಲ್ಲಿಸು ಎಂದ ಅರ್ಜುನನ್ನು
ನೋಡಿ ಕೃಷ್ಣ
ಅನುಮಾನದಿಂದ ಪಾರ್ಥನ ಮುಖ ನೋಡಿ ಹೇಳುವ ಮಾತಿದು
“ ಕೌರವ ಸೇನೆಯ ಮಧ್ಯ
ತಮ್ಮ ರಥವನ್ನು ತಂದು ನಿಲ್ಲಿಸು ಕೃಷ್ಣಾ. ಬಹು ಸಮಯದಿಂದ ಕಾಯುತ್ತಿದ್ದ ಸಮಯವಿದೋ ಬಂದಿದೆ. ಆ
ಕೌರವನ ಕಡೆಯಿಂದ ಬಂದವರ ಆ ಸುಟ್ಟ ಮುಖವನ್ನೊಮ್ಮೆ
ನೋಡಿ ಬಿಡುತ್ತೇನೆ.” ಆವರೆಗೆ ಹತಾಶರಾಗಿ ಕಾದಿದ್ದು ಬಳಿಕ ಕ್ರೋಧ ಭುಗಿಲೆದ್ದು ಎಲ್ಲ
ಸಿದ್ದತೆಯನ್ನು ಈ ದಿನಕ್ಕಾಗಿ ಮೀಸಲಿರಿಸಿದ ಅರ್ಜುನನ ಮಾತು ಹರಿಗೆ ಅನುಮಾನವನ್ನು ತರುತ್ತದೆ.
ಅವಾಗ ನಂತರದ ಮಾತಿಗೆ ಪೀಠಿಕೆಯಾಗಿ ಕೃಷ್ಣನಾಗಿ ಶೇಣಿಯವರು ಅರ್ಜುನನಲ್ಲಿ ಕೇಳುತ್ತಾರೆ, ಆತನ
ಕ್ರೋಧದ ಪ್ರಾಮಾಣಿಕತೆಯ ಬಗ್ಗೆ ಅನುಮಾನಿಸಿ ಕೇಳುತ್ತಾರೆ.” ಹೌದಲ್ಲ...? ಹೌದಲ್ಲ..?” ಹೀಗೆ ಎರಡು ಬಾರಿ ಕೇಳುವ
ಅಗತ್ಯವಾದರೂ ಏನು ? ಮಹಾಭಾರತ ಅಥವಾ ಕುರುಕ್ಷೇತ್ರದ ಮಾತೇಕೆ. ಭಗವತ್ಗೀತೆಯ ಸನ್ನೀವೇಶವನ್ನು
ಅರಿಯದೇ ಇರುವವರು ಯಾರು? ಪವಿತ್ರ ಗೀತೋಪದೇಶದ ದಿವ್ಯ ಜ್ಯೋತಿಯನ್ನು ಬೆಳಗುವುದಕ್ಕೆ ಇದೊಂದು
ಕಿಡಿಹಚ್ಚಿದ ಮಾತು. ಹೌದಲ್ಲಾ? ಕೌರವಾದಿಗಳ ಮೇಲೆ
ಉಕ್ಕಿಬಂದ ಕ್ರೋಧ ಆ ಸಿಟ್ಟು ನಿಜವಾದದ್ದೇ? ಕೃಷ್ಣನಿಗೆ ಅನುಮಾನ. ಅದಕ್ಕಾಗಿ ಹೌದಲ್ಲಾ? ಎಂಬ
ಉದ್ಗಾರ.
ಬಹಳ ಸ್ವಾರಸ್ಯ ಪೂರ್ಣ ಮಾತುಗಾರಿಕೆಯ ಪ್ರಸಂಗ ಗೀತೋಪದೇಶದ ಮಹತ್ವದ
ಪುಟ ತೆರೆದುಕೊಳ್ಳುವುದೇ ಇಲ್ಲಿಂದ. ಪುಣ್ಯಾತ್ಮರು ಸಂಘಟಿಸಿದ ಅಪೂರ್ವವಾದ ತಾಳ ಮದ್ದಲೆ ಇದು.
ಶೇಣಿ, ಪೆರ್ಲ ಮಾರೂರು, ಜೋಷಿ ಮುಂತಾದವರ ವಾಕ್ಚಾತುರ್ಯ ಎನ್ನಬಹುದೇ? ಇದನ್ನು ಕೇವಲ ವಾಕ್ಚಾತುರ್ಯಕ್ಕೆ ಸೀಮಿತಗೊಳಿಸಿ
ಅಂದಾಜಿಸುವುದು ಸರಿಯಲ್ಲ. ಇಲ್ಲಿ ಚಾತುರ್ಯದ ಮಾತಿಗಿಂತಲೂ ಸತ್ವಯುತ ಮಾತುಗಳು ಮಾತ್ರವಲ್ಲ
ಕುರುಕ್ಷೇತ್ರದ ಆ ಸನ್ನಿವೇಶದ ಮರು ಸೃಷ್ಟಿ ಎನ್ನಬೇಕಾಗುತ್ತದೆ. ಪ್ರಸಂಗ ಭೀಷ್ಮ
ಸೇನಾಧಿಪತ್ಯದೊಂದಿಗೆ ಅರಂಭವಾಗುತ್ತದೆ.
ಹಸ್ತಿನಾವತಿಯ ರಾಜ ಸಭೆಯ ಮಂತ್ರಾಲೋಚನೆಯಂತೆ
ಭೀಷ್ಮರನ್ನು ಸೇನಾಧ್ಯಕ್ಷನನ್ನಾಗಿ ಮಾಡುವುದು,
ಅದರ ಉಪಕ್ರಮದಂತೆ ಕೌರವ ರಾತ್ರಿ ಭೀಷ್ಮರಿದ್ದಲ್ಲಿಗೆ ಹೋಗಿ ಭೀಷ್ಮರನ್ನು ಒಡಂಬಡಿಸುವ
ಸಂಭಾಷಣೆ. ಕೌರವನಾಗಿ ಪ್ರಭಾಕರ ಜೋಷಿ ಮತ್ತು ಭೀಷ್ಮನಾಗಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ
ಅರ್ಥಧಾರಿಗಳಾದರೆ ನಂತರ ಗೀತೋಪದೇಶ ಆನಂತರ ಚಕ್ರ ಗ್ರಹಣ. ಹೀಗೆ ಮೂರು ಭಾಗವನ್ನು ಸಮನ್ವಯಗೊಳಿಸಿ
ಒಂದು ತಾಳ ಮದ್ದಲೆ. ಅದರೂ ಇದರಲ್ಲಿ ತಾಳ ಅಡಿರೇಖೆ ಎಳೆದಂತೆ ಗೀತೋಪದೇಶ ವಿಶಿಷ್ಟವಾದ
ಪ್ರಯೋಗವೆನಿಸಲ್ಪಡುತ್ತದೆ. ಹದಿನೆಂಟು ಅಧ್ಯಾಯದ ಭಗವದ್ಗೀತೆಯನ್ನು..ವಿಷಾದ ಯೋಗ, ಸಾಂಖ್ಯಯೋಗ, ಕರ್ಮ
ಯೋಗ...ಎಲ್ಲವನ್ನೂ ಸಂಕ್ಷೇಪಿಸಿ ಸುಂದರವಾಗಿ ಪ್ರಯೋಗಕ್ಕೆ ತಂದಿದ್ದಾರೆ. ಅವೆಲ್ಲವನ್ನು ಇನ್ನೂ
ಕಿರಿದಾಗಿಸಿ ಬರಹದಲ್ಲಿ ತರುವ ಪ್ರಯತ್ನ ಇದು. ಇದು ಒಂದು ದೃಷ್ಟಿ ಕೋನದ ಅಪೂರ್ಣ ಭಾವಾನುವಾದ
ಎನ್ನಬಹುದು. ಯಾಕೆಂದರೆ, ಪ್ರತಿ ಸಲ ಕೇಳಿದಾಗಲು ಹೊಸ ಹೊಸ ಅರ್ಥವನ್ನು ಒಡಲಿಂದ ಹೊರ ಹಾಕುವ ಇದರ
ಪರಿಪೂರ್ಣವನ್ನು ವ್ಯಾಖ್ಯಾನಿಸುವುದು ಸಾಧ್ಯವೇ ಇಲ್ಲ ಎನ್ನಬಹುದು.
ಕುರುಕ್ಷೇತ್ರ ಎಂದಾಗ ಬರೀ ಯುದ್ದರಂಗದ ಬಿಸಿ ಬಿಸಿ ಸನ್ನಿವೇಶದ
ಕಲ್ಪನೆಯ ಹೊರತಾಗಿ ಗೀತೋಪದೇಶವನ್ನು ಪ್ರಯೋಗಾತ್ಮಕವಾಗಿ ತೋರಿಸಿದ್ದು ಅದ್ಭುತವೆನಿಸಲ್ಪಡುತ್ತದೆ.
ಅರ್ಜುನ ತನ್ನನ್ನಾವರಿಸಿದ ಬಂದ ಕ್ಲೈಬ್ಯದಿಂದ ಖಿನ್ನನಾಗುತ್ತಾನೆ. ಸುತ್ತಲೂ ಸೇರಿದ
ಬಂಧುವರ್ಗವನ್ನು ಕಂಡು ಮೋಹಪರವಶನಾಗುತ್ತಾನೆ. ಆವಾಗ ಕೃಷ್ಣ ಮಹತ್ವವಾದ ಗೀತೋಪದೇಶವನ್ನು ಮಾಡಿ
ಮೋಹನಷ್ಟವಾಗುವಂತೆ ಮಾಡುತ್ತಾನೆ. ಭಗವದ್ಗೀತೆಯ ಈ ಭಾಗ ಯಾರಿಗೆ ತಿಳಿದಿಲ್ಲ ಹೇಳಿ. ಭಗವದ್ಗೀತೆಯ ಪ್ರವಚನವಾದರೆ ಅದೆಷ್ಟು ಪ್ರಭಾವ
ಬೀರುವುದೋ ಆದರೆ ಯಕ್ಷಗಾನಕ್ಕಿಂತ ಸರಳವಾಗಿ ಮಾರ್ಮಿಕವಾಗಿ ಗೀತೋಪದೇಶದ ಸಾರವನ್ನು ಸಾರುವ ಕಲೆ ಬೇರೆ ಇರಲಾರದು. ಯಕ್ಷಗಾನದ
ವೈಶಿಷ್ಟ್ಯತೆಗೆ ಸಾಕ್ಷಿಯಾಗಿ ಇದು ಮೂಡಿ ಬಂದಿದೆ. ಗೀತೆಯ ಸಾರವನ್ನು ಸರಳವಾಗಿ ಇಲ್ಲಿ ತೋರಿಸಿದ
ರೀತಿಯಿಂದ ಯಕ್ಷಗಾನ ತಾಳಮದ್ದಲೆಯ ಸ್ವರೂಪಕ್ಕೆ ಒಂದು ಟಿಪ್ಪಣಿ ಬರೆದಂತೆ ಭಾಸವಾಗುತ್ತದೆ.
ಕೌರಾವಾದಿಗಳ ಮಧ್ಯೆ ಪಾರ್ಥನ
ಮಾತಿನಂತೆ ರಥ ನಿಲ್ಲಿಸುತ್ತಾನೆ ಕೃಷ್ಣ. ‘ಹೌದಲ್ಲ ಹೌದಲ್ಲ’ ಎಂಬ ಮಾತಿನ ಧ್ವನಿ ಅರಿವಾಗುವುದು ಆವಾಗಲೇ. ಕ್ರೋಧ ಭಾವದಿಂದ ವೈರಿಗಳ ಸುಟ್ಟ ಮುಖವನ್ನೊಮ್ಮೆ ನೋಡಿಬಿಡುತ್ತೇನೆ ಎಂದ ಪಾರ್ಥನ ಮಾತು ಆ
ವೈರ ಭಾವ ಸ್ಥಾಯಿಯಾಗಿ ಉಳಿಯದೇ…ಆ ಮುಖಗಳನ್ನು ನೋಡಿ ಕ್ರೋಧ ವೈರ ದೂರಾಗಿ
ಅಲ್ಲಿ ಮೋಹ…ಬರೀ ಮೋಹ ಆವರಿಸಿಬಿಡುತ್ತದೆ.
ಮಹಾಭಾರತ ಮಹತ್ತರ ಘಟನೆಗೆ, ದಿವ್ಯ ಮುಹೂರ್ತಕ್ಕೆ ಈ ಮೋಹವೇ ಕಾರಣವಾಗಿಬಿಟ್ಟಿತು. “ಹೌದಲ್ಲ’
ಎಂಬ
ಕೃಷ್ಣನ ಧ್ವನಿಯಲ್ಲಿ ತುಂಬಿದ್ದ ಶಂಕೆ ಏನೂಂತ ವೇದ್ಯವಾಗುವುದು ಮುಂದೆ.
ಎಂದಿನ ಶೈಲಿಯಂತೆ ಶೇಣಿಯವರು ಕಷ್ಣನಾಗಿ ತಮ್ಮ ಮಾತನ್ನು
ಮಧ್ಯದಿಂದಲೇ ಪ್ರಾರಂಬಿಸಿಬಿಡುತ್ತಾರೆ.
ಬಂದವರನ್ನೇಲ್ಲಾ ಅದೇ ದೃಷ್ಟಿಯಿಂದ ಪಾರ್ಥ ಕಾಣಲಾರ ಎಂಬ ಸಂದೇಹ ನಿಜವಾಗುತ್ತದೆ. .”
ಹೌದಲ್ಲಾ...” ಎಂಬುದರ ನಿಗೂಢಾರ್ಥ ಅರಿವಾಗುತ್ತದೆ. ಮುಂದಿನ ಘಟನೆಗೆ ಇದು ಮಾತಿನ ಪೀಠಿಕೆ.
“ಪರಿಕಿಸು ಪಾರ್ಥನೆ ನಿಂದಿಸ ರಿಪುಮೋಹರದೊಳು ರಥಿಗಳನು. ಕರದೊಳು ಶಸ್ತ್ರಾಸ್ತ್ರಗಳುರೆ
ಧರಿಸುತ ತಿರುಹುತ ಮೀಸೆಯನು”
ಸೇನೆಯ ಮಧ್ಯದಲ್ಲಿ ರಥವನ್ನು ತಂದು ನಿಲ್ಲಿಸಿ ಕೃಷ್ಣ
ಹೇಳುತ್ತಾನೆ. ಪರಿಕಿಸು ಪಾರ್ಥನೆ ಎಂದು
ತೊಡಗುತ್ತಾ ವಿರೋಧಿಗಳಾಗಿ ಬದಲಾದ
ದಾಯಾದಿಗಳನ್ನು, ಇಲ್ಲಿ ನಾವಾಗಿ ಬಯಸದೇ ಇದ್ದರೂ ಈಗ ಸನ್ನಿಹಿತವಾಗಿರುವ ಈ ಯುದ್ದ, ಇಲ್ಲಿ ಯಾರೆಲ್ಲ ಬಂದಿದ್ದಾರೆ ಪರಿಕಿಸು. ಬೇಡದೇ
ಇದ್ದರೂ ನಿರ್ಣಯವಾದ ಈ ಯುದ್ದ. ನಾವಾಗಿ ಬಯಸದೇ ಇದ್ದರೂ ಅನಿವಾರ್ಯವಾಗಿ ರಣವೀಳ್ಯವನ್ನು ಕೈನೀಡಿ
ತೆಗೆದುಕೊಂಡಿದ್ದೇವೆ. ಪಾಂಡವರ ರಾಯಭಾರಿಯಾಗಿ ಹೋದಾಗ ಇಲ್ಲಿ ಈಗ ಯಾರೆಲ್ಲ ಬಂದಿದ್ದಾರಲ್ಲ
ಅವರೆಲ್ಲ ಅಲ್ಲಿದ್ದರು. ಅಲ್ಲಿ ಇವರೆಲ್ಲ ಇದ್ದಂತೆ ಏನಾಯಿತು ಕೃಷ್ಣನನ್ನು ದೈಹಿಕವಾಗಿ
ಬಂಧಿಸುವಲ್ಲಿಯ ವರೆಗೂ ಹೋಯಿತು. ಆಗ ಯಾರು ಪ್ರತಿಭಟಿಸಲಿಲ್ಲ. ರಾಯಭಾರಿತ್ವವನ್ನು ತುಸು
ಬದಿಗಿರಿಸಿ ಬಂದ ವಿಪತ್ತನ್ನು ಎದುರಿಸಿ ಕೃಷ್ಣ ಹೊರಬಂದುದಾದರೂ ಯಾಕೆ? ಕೃಷ್ಣನಾಗಿ ಶೇಣಿಯವರು
ಕೊಡುವ ವಿಶ್ಲೇಷಣೆ, ಕೃಷ್ಣ ರಾಯಭಾರಿಯಾಗಿ
ಹೋದವನು. ಯುದ್ದಕ್ಕಾಗಿ ಹೋದವನಲ್ಲ, ಮಾತ್ರವಲ್ಲ ಕೌರವನೊಡನೆ ಕೃಷ್ಣನ ಯುದ್ದವಲ್ಲ. ಒಂದು ವೇಳೆ
ಕೌರವನಲ್ಲಿ ಯುದ್ದ ಎಂದಾದರೆ ಆ ಕೌರವ ಮತ್ತೆ ಒಳಗೆ ಹೋದಾನೋ? ತಾನು ಆಯುಧಗ್ರಹಣ ಮಾಡುವುದಿಲ್ಲ
ಎಂಬ ಮಾತಿದೆಯಲ್ಲ? ಯುದ್ದಕ್ಕಾಗಿ ಹೋದವನೂ ಅಲ್ಲ,
ಹಾಗಾಗಿ ಅಯುಧ ಹಿಡಿಯದ ತನಗೆ ಆದ ಅಪಮಾನವನ್ನು ಪಾರ್ಥ ಹೇಗೆ
ಸ್ವೀಕರಿಸುತ್ತಾನೆ? ಪಾರ್ಥನ ಪ್ರತಿವಿಧಿ ಏನು? ಶಸ್ತ್ರ
ರಹಿತನಾದ ಕೃಷ್ಣನಿಗೆ ಸುರಕ್ಷಿತ ಸ್ಥಳ ಪಾರ್ಥ ಸಾನ್ನಿದ್ದ್ಯದ ರಥವಲ್ಲದೇ ಬೇರೆ ಯಾವುದು? ಪಾರ್ಥನ ಸಾಮಾರ್ಥ್ಯದ ಬಗ್ಗೆ ಕೃಷ್ಣ
ತನ್ನ ಭರವಸೆಯನ್ನು ಹೀಗೆ ವ್ಯಕ್ತ ಪಡಿಸುವ ಮರ್ಮವಾದರೂ ಏನು? ಪಾರ್ಥ ಮೋಹಪರವಶನಾಗಬಾರದು. ಹೀಗೆ ಹೇಳುತ್ತಾ ಪರೋಕ್ಷವಾಗಿ ಪಾರ್ಥನ ರಥ ಸೇನೆಯ ಮಧ್ಯೆ
ನಿಲ್ಲಿಸಿದ ಕಾರಣವನ್ನು ಹೇಳುತ್ತಾನೆ. ಹೀಗೆ ಪಾರ್ಥನ ರಥಿಕನಾಗಿ ಕೇಳುತ್ತಾನೆ ಕೃಷ್ಣ. ..ಪರಿಕಿಸು ಪಾರ್ಥನೇ..
“ ಕೂಡೆ ಪರಿಕಿಸುತಾಗ ಪಾರ್ಥನು ಮೂಡಿದಶ್ರುಗಳಿಂದ ಶಿರವೊಡೆದಾಡಿದನು .........”
ಸೇನೆಯ
ಮಧ್ಯೆ ನಿಂತ ಅರ್ಜುನ ಕೃಷ್ಣನ ಅನುಮಾನದಂತೆ ಭಾವ ಪರವಶನಾಗಿಬಿಡುತ್ತಾನೆ. ಕೌರವನ ಕಡೆಯಿಂದ ಬಂದ
ಮೂರ್ಖರ ಸುಟ್ಟ ಮುಖವನ್ನೊಮ್ಮೆ ನೋಡುವ ಬಯಕೆಯನ್ನಾಡಿದ ಅರ್ಜುನ, ಕೌರವ ಸೇನೆಯಲ್ಲಿರುವ
ಒಬ್ಬೊಬ್ಬರನ್ನೇ ಗುರುತಿಸುತ್ತಾನೆ. ಎಲ್ಲರೂ ಬಂಧುಗಳು. ತಾವಾದರೋ ಫಲಾಪೇಕ್ಷೆಯಿಂದ ಯುದ್ದ
ಅನಿವಾರ್ಯವಾಗಿ ಯುದ್ಧಕ್ಕೆ ಬಂದವರು. ಆದರೆ ಯಾವುದೇ ಫಲಾಪೇಕ್ಷೆಯಿಲ್ಲದೆ ಬಂದವರು.. ಗುರುಗಳಾದ
ದ್ರೋಣ , ಕೃಪ..ತುತ್ತು ಕೊಟ್ಟು ಸಲಹಿದ ಭೀಷ್ಮ , ಇತರ ಬಂಧು ಮಿತ್ರಾದಿಗಳು, ನಾವು ರಾಜ್ಯವನ್ನು
ಹೊಂದಬೇಕಿದ್ದರೆ ಜಯ ಪಡೆಯಬೇಕು. ಅದೆಂತಹ ಜಯ? ಇವರನ್ನೆಲ್ಲ ಕೊಂದರೆ ಮಾತ್ರ. ಇವರನ್ನು ಕೊಂದ
ಮೇಲೆ ಎಲ್ಲ ಬಂಧು ಬಳಗ ಹತರಾದ ಮೇಲೆ ಸಿಗುವ ಆ ಜಯ, ಆ ಜಯದ ಅಗತ್ಯವಾದರೂ ಏನು? ಯುದ್ದರಂಗಕ್ಕೆ
ಬಂದು ಇವರನ್ನೆಲ್ಲಾ ಕಂಡಾಗ ತನ್ನಲ್ಲಿ ಬಂದ ಈ ಭಾವ,
ಮೊದಲಾಗಿ ತನ್ನಣ್ಣ ಧರ್ಮಜನಲ್ಲಿ ಯುದ್ಧ ನಿರ್ಣಯದ ಮೊದಲೇ ಬಂದಿತ್ತಲ್ಲವೇ? ಆತ ಇದನ್ನೆಲ್ಲ
ಕಲ್ಪಿಸಿದ್ದ. ಅದಕ್ಕಾಗಿ ಕೃಷ್ಣನಲ್ಲಿ ಹೇಳಿದ್ದ,
ಕುಲನಾಶದಿಂದ ಮಲಿನವಾಗುವ ಆ ಶ್ವೇತ ಛತ್ರ ಬೇಡ ನನಗೆ.
ಕೇವಲ ರಾಜ್ಯಕ್ಕಾಗಿ ಮಣ್ಣಿಗಾಗಿ ಅಧಿಕಾರಕ್ಕಾಗಿ ಈ ಯುದ್ದ. ಅವರು ಬುದ್ಧಿ ಶೂನ್ಯರು ಮೂರ್ಖರು ಆದರೆ ನಾವು
ತಿಳಿದವರು, ನಮಗೆ ಬುದ್ಧಿ ಬೇಡವೇ? ಎಂತಹ ಪಾಪ
ಕಾರ್ಯವಾಗುತ್ತಿತ್ತು,
“ ಕೃಷ್ಣಾ. ಪರಿಕಿಸಿ ನೋಡಿದೆ ಚೆನ್ನಾಗಿ ನೋಡಿದೆ.”
“ಪರೀಕ್ಷೆಯಲ್ಲಿ
ಏನು ಕಂಡಿತು?”
“ ಬಂಧುವರ್ಗವ ನಿಷ್ಕಾರುಣ್ಯದಿಂದಲೆ ಕೊಂದು | ಬಂದಿಹ ರಾಜ್ಯ ಬೇಡೆನಗೆ | ಇಂದಿರೇಶನೆ ಧುರಕಾಂಕ್ಷೆಯಿಲ್ಲೆನಗೀಗ
| ಬೆಂದಿತೆನ್ನೊಡಲು ಮೋಹದೊಳು | ಇಂದಿರೇಶನೆ | “
“ ಓ
ಶ್ರೀಹರೀ..ಶತ್ರುಗಳಾಗಿ ಬಂದವರ ಮುಖನೋಡುವ ಕಾತುರವಿತ್ತು. ಆದರೆ ಇಲ್ಲಿ, ಈಗ ಈ ಸೇನಾ ಸಮುದ್ರದಲ್ಲಿ ಒಬ್ಬನೇ ಒಬ್ಬ ಶತ್ರುವನ್ನು ಗುರುತಿಸದಾದೆ.” ಅರ್ಜುನ
ಹತಾಶನಾಗಿ ಹೇಳುತ್ತಾನೆ.( ಪೆರ್ಲ ಪಂಡಿತರು ಸಹಜವಾಗಿ ಅರ್ಜುನನ ಕಾಯ ಪ್ರವೇಶಿಸುತ್ತಾರೆ. ) ಎಲ್ಲರೂ
ಬಂಧುವರ್ಗವು. ಇಲ್ಲಿ ಶತ್ರುಗಳು ಯಾರು? ಎಲ್ಲರನ್ನು
ಬಂಧು ಮಿತ್ರ ಸಹಜರನ್ನಾಗಿಯೆ ಕಂಡು ಶತ್ರುವನ್ನು
ಕಾಣದಾದ ಅರ್ಜುನ. ಈಯುದ್ದದ ಕೊನೇಯ ಫಲ ಏನು? ಜಯ... ಆ ಜಯದಿಂದ ತಮ್ಮ ರಾಜ್ಯಪ್ರಾಪ್ತಿ. ರಾಜ್ಯ
ಯಾಕೆ? ಪ್ರಪಂಚದ ಭೋಗ ವಿಲಾಸಗಳನ್ನು ಅನುಭವಿಸುವುದಕ್ಕೆ. ಈ ಇಂದ್ರಿಯಗಳ
ದಾಸನಾಗುವುದಕ್ಕೆ..ಅಷ್ಟಕ್ಕಾಗಿ ಈ ಬಂಧು ಹತ್ಯೆ. ಎಲ್ಲರನ್ನು ಕೊಂದು ಬಹುದೊಡ್ಡ ಶ್ಮಶಾನ
ನಿರ್ಮಾಣ ಮಾಡಿ ಮತ್ತೆ ರಾಜ್ಯ? ಆದುದರಿಂದ ಬೇಡ ರಥವನ್ನು ಹಿಂದಕ್ಕೆ ತಿರುಗಿಸು. ಯಾವುದು ಬೇಡ..
ಕಾಡಿಗೆ..ನಾನು ಕಾಡಿಗೆ ಹೋಗ್ತೆನೆ.
ಕೃಷ್ಣ ಕೇಳ್ತಾನೆ “ ಮಧೆಯ
ಒಂದು ಪ್ರಶ್ನೆ ಕೇಳಲೇ? ಕಾಡಿಗೆ ರಥವನ್ನು ಹಾರಿಸುವ.
ಕಾಡಿನಲ್ಲಿ ಹೋಗಿ ಏನು ಮಾಡುವುದು?”
“ ತಪಸ್ಸು ...ಇದೆಯಲ್ಲ?”
“ಊಟಕ್ಕೆ?”
“ಕಂದಾಹಾರ, ವಾತಾಹಾರ
.ಜಲಾಹಾರ....”
“ ಹಾಗಿದ್ರೆ ಅದು ಬೇಕು.
ಇಲ್ಲಿ ಇದು ಬೇಡ ಮತ್ತೊಂದು ಬೇಕು... ಅದು ಒಂದು ಬೇಕು..”
ಈ ಇಂದ್ರಿಯದ ಆಶೆಯ
ಗೂಡಾರ್ಥವನ್ನು ಶೇಣಿಯವರು ಸರಳವಾಗಿ ತೋರಿಸುತ್ತಾರೆ.
(ಇನ್ನೂ ಇದೆ
ಮುಂದಿನಭಾಗದಲ್ಲಿ)
“
