ಸುಮಾರು ಎಪ್ಪತ್ತರದ ದಶಕದ ಸಮಯವದು. ಮಂಗಳೂರಿನ ಉರ್ವಸ್ಟೋರ್ ನಲ್ಲಿ ಒಂದು ಯಕ್ಷಗಾನ ಬಯಲಾಟ. ಯಾವುದೋ ಆಯ್ಯಪ್ಪ ಸೇವಾ ಸಮಿತಿಯವರು ಪೂಜೆಯ ಸಮಯದಲ್ಲಿ ಆಯೋಜಿಸಿದ್ದ ಬಯಲಾಟವದು. ಮಂಗಳೂರಿನ ಸುತ್ತ ಮುತ್ತ ಆಗ ಬಯಲಾಟವೆಂದರೆ ಸಾವಿರಕ್ಕಿಂತಲೂ ಕಡಿಮೆ ಸಭೆ ಇರುತ್ತಿರಲಿಲ್ಲ. ವ್ಯವಸಾಯಿ ಮೇಳಗಳ ಆಟ ನಾವೆಲ್ಲ ನೋಡುವ ಅವಕಾಶ ಬಹಳ ಕಡಿಮೆ. ಇದು ಬಯಲಾಟ. ಅಯ್ಯಪ್ಪ ಭಕ್ತರೂ ಜತೆಗೆ ಆಟದ ಹುಚ್ಚಿನವರು ಅಂತೂ ಸಭೆ ತುಂಬಾ ಸೇರಿತ್ತು. ಸಹಜವಾಗಿ ಆಟದ ಗದ್ದಲಕ್ಕಿ ಉಳಿದ ಗದ್ದಲವೇ ಹೆಚ್ಚಾಗಿತ್ತು. ಅಂತೂ ಕೊನೆಗೆ ಚೆಂಡೆ ಪೆಟ್ಟು ಶುರುವಾಗಿ ಆಟ ಶುರುವಾಯಿತು. ಆದರೂ ಗದ್ದಲ ಕಡಿಮೆಯಾಗಲಿಲ್ಲ. ಪೂರ್ವ ರಂಗ ಮುಗಿದ ಕೂಡಲೇ ಮುಖ್ಯ ಭಾಗವತರ ಪ್ರವೇಶ. ಭಾಗವತರಾಗಿ ಬಂದ ವ್ಯಕ್ತಿಯನ್ನು ಹಲವರು ಅಚ್ಚರಿಗೊಂಡರು. ಅಪ್ಪಟ ಬಿಳಿ ಬಣ್ಣದ ಭಾಗವತರನ್ನು ನೋಡಿ ಫಾರಿನ್ ಭಾಗವತ ಅಂತ ಹೇಳುವುದಕ್ಕೆ ತೊಡಗಿದರು. ನಮಗೂ ಅಷ್ಟೆ ತೀರ ಅಪರಿಚಿತರಾಗಿದ್ದ ಭಾಗವತರು. ಗದ್ದಲದ ನಡುವೆ ಆಟದತ್ತ ಗಮನ ಅಷ್ಟಕ್ಕಷ್ಟೇ. ಒಂದು ರೀತಿಯ ಜಾತ್ರೆಯ ವಾತಾವರಣ. ಸರಿ ನಡು ರಾತ್ರಿ ಕಳೆಯಬೇಕಾದರೆ ಭಾಗವತರ ಹಾಡು ಮಾಧುರ್ಯವನ್ನು ಪ್ರಖರವಾಗಿಸುತ್ತಾ ಹೋಯಿತು. ಅದುವರೆಗೆ ಗದ್ದಲವಷ್ಟೇ ಕೇಳುತ್ತಿದ್ದ ಅಷ್ಟು ದೊಡ್ಡ ಸಭೆ ಶಾಂತವಾಯಿತು. ಫಾರಿನ್ ಭಾಗವತ ಅಂತ ತಾತ್ಸಾರದಿಂದ ಕಂಡವರು ಎಲ್ಲವನ್ನೂ ಮರೆತು ಭಾಗವತರ ಗಾನ ಮಾಧುರ್ಯಕ್ಕೆ ಶರಣಾಗಿಬಿಟ್ಟರು. ಸಭೆ ಶಾಂತವಾಗಿ ಆ ಗಾನ ಮಾಧುರ್ಯದಲ್ಲಿ ಮಿಂದು ಮೈಮರೆತಂತೆ ಇತ್ತು.
ಹೀಗೆ ಪ್ರೇಕ್ಷಕನನ್ನು ಮಂತ್ರಮುಗ್ಧ ಗೊಳಿಸಿದ ಗಾರುಡಿಗ ಬೇರೆ ಯಾರೂ ಅಲ್ಲ. ಯಕ್ಷಗಾನ ವಲಯದಲ್ಲಿ ತನ್ನ ಶ್ವೇತವರ್ಣದಿಂದ ಫಾರಿನ್ ಭಾಗವತ ಅಂತ ಕರೆಸಿಕೊಳ್ಳುತ್ತಿದ್ದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು. ನಾನು ಅಷ್ಟೇ ಬಾಲಕನಾಗಿದ್ದರೂ ಈ ಹೊಸ ಭಾಗವತರ ಭಾಗವತಿಕೆ ಪರಿಚಯ ನನಗೂ ಆಗಿತ್ತು. ನಿಜಕ್ಕಾದರೆ ಅವರು ಬಾಯಾರು ಪೈವಳಿಕೆ ಸುತ್ತಮುತ್ತ ಸಣ್ಣ ಪುಟ್ಟ ಆಟ ಕೂಟಗಳಿಗೆ ಪದ ಹೇಳುವುದಕ್ಕೆ ಹೋಗುತ್ತಿದ್ದ ಭಾಗವತರು. ಹಾಗಾಗಿ ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನಮಗೂ ಒಂದು ರೀತಿಯ ತಾತ್ಸಾರ ಇದ್ದದ್ದು ಸುಳ್ಳಲ್ಲ. ಆದರೆ ಅವನ್ನೆಲ್ಲವನ್ನು ಮರೆಸುವಂತೆ ಅಂದು ಶಾಸ್ತ್ರಿಗಳು ವಿಜ್ರಂಭಿಸಿದ ರೀತಿ ಅದ್ಭುತವಾಗಿತ್ತು. ಕೇವಲ ಬಲಿಪ್ಪ ಕುಂಡಚ್ಚ ಭಾಗವತರ ಕಟೀಲು ಮೇಳದ ಆಟದ ಭಾಗವತಿಕೆ ಕೇಳಿದ್ದ ನಮಗೆ ನಿಜಕ್ಕು ಹೊಸ ಅನುಭವದು.
ತೆಂಕ ಬೈಲು ಈ ಹೆಸರು ಕೇಳಿದರೆ ಅತ್ಯಂತ ವಿಲಕ್ಷಣ ಅನುಭವವಾಗುತ್ತದೆ. ಯಾವ ಇಸಂ ಗೂ ಹೋಲಿಸಲಾಗದ ಒಂದು ವಿಶಿಷ್ಟ ಗಾನ ಮಾಧುರ್ಯ ಈ ಹೆಸರಿಗೆ ಅಂಟಿಕೊಂಡು ಬಿಟ್ಟಿದೆ. ವಾಸ್ತವದಲ್ಲಿ ತೆಂಕ ಬೈಲು ಭಾಗವತರು ಪ್ರೀತಿಯಿಂದ ಬೊಳ್ಳೆ ಭಾಗವತರು ಅಂತ ಕರೆಸಿಕೊಳ್ಳುತ್ತಿದ್ದ ಇವರು ತನ್ನ ಜೀವಿತಾವಧಿಯ ರಂಗಸ್ಥಳದಲ್ಲಿ ಹವ್ಯಾಸಿಯಾಗಿಯೇ ಜನಪ್ರಿಯರಾದವರು. ನಮ್ಮೂರು ಪೈವಳಿಕೆ ಬಾಯಾರು ಕನ್ಯಾನ ಆಸು ಪಾಸು ಶಾಲೆಯ ಸ್ಕೂಲ್ ಡೇ ಆಟಗಳಿಗೆ ಭಾಗವತರಾಗುತ್ತಿದ್ದ ಇವರಿಗೆ ಸ್ವತಃ ಇವರ ಪ್ರತಿಭೆಯ ಗಾತ್ರದ ಅರಿವಿಲ್ಲ. ಅದಕ್ಕೆ ಕಾರಣ ಇವರ ವಿಲಕ್ಷಣ ವ್ಯಕ್ತಿತ್ವ. ಯಾವುದೇ ಸ್ವಾರ್ಥಕ್ಕೂ ಒಳಗಾಗದ ಭಾಗವತರು. ತನ್ನದು ಏನೂ ಅಲ್ಲ ಎಂಬ ಭಾವನೆ ಮೊನ್ನೆ ಮೊನ್ನೆಯವರೆಗೂ ಅವರಲ್ಲಿ ಕಂಡಿದ್ದೇನೆ. ಆದರೆ ಆನೆಗೆ ಅದರ ಗಾತ್ರದ ಅರಿವಿಲ್ಲದಂತೆ ಇವರ ಪ್ರತಿಭೆಯ ಎತ್ತರ ಯಾರಿಂದಲೂ ಲೆಕ್ಕಹಾಕುವುದು ಸಾಧ್ಯವಿಲ್ಲದ ಮಾತು.
ಏಷ್ಟೇ ದೊಡ್ಡ ಕೂಟ ಇರಲಿ ಸಣ್ಣ ಕೂಟ ಇರಲಿ ತೆಂಕಬೈಲು ಶಾಸ್ತ್ರಿಗಳಿಗೆ ಎಲ್ಲವೂ ಒಂದೇ. ತಾನು ಸಹಜ ಗಾಯಕನಂತೆ ಹಾಡಿ ಬಿಡುತ್ತಾರೆ. ಅದು ಹೇಗಾಯಿತು ಎಂಬುದರ ಬಗ್ಗೆ ಚಿಂತಿಸುವುದಿಲ್ಲ. ಮುಖ ಕೆಂಪಗಾಗಿಸಿ ತನ್ಮಯರಾಗಿ ಹಾಡುವುದಷ್ಟೇ ಅವರ ಸಹಜತೆ. ಯಕ್ಷಗಾನ ಲೋಕ ಒಂದು ರೀತಿಯಲ್ಲಿ ಇವರನ್ನು ಗಣನೆಗೆ ತೆಗೆದುಕೊಂಡದ್ದು ಕಡಿಮೆಯೆ. ಅನಧೀ ಕೃತ ಭಾಗವತರನ್ನಾಗಿ ಇವರನ್ನು ಕಂಡದ್ದೇ ಹೆಚ್ಚು. ಆದರೆ ಅದಾವುದಕ್ಕೂ ಇವರು ತಲೆಕೆಡಿಸಿಕೊಂಡವರಲ್ಲ. ಹಿಮ್ಮೇಳದಲ್ಲಿ ಎಷ್ಟೇ ದೊಡ್ಡ ವ್ಯಕ್ತಿ ಇದ್ದರು ಇವರಿಗೆ ಅದು ಲೆಕ್ಕಕ್ಕೆ ಇಲ್ಲ. ಇವರು ಸಹಜ ಹಕ್ಕಿಯಾಗಿ ಹಾಡಿಬಿಡುತ್ತಾರೆ. ಹತ್ತು ಸಲ ಸ್ವಲ್ಪ ಕಳಪೆಯಾದರೂ ಒಂದು ಸಲ ಅದ್ಭುತವಾಗಿ ಹಾಡಿಬಿಡುತ್ತಾರೆ. ಆದರೆ ಜನ ಹುಚ್ಚರಂತೆ ಒಂದು ಸಲ ಇಂದೇಕೆ ಆಗಬಾರದು ಎಂಬ ತವಕದಲ್ಲಿ ಇವರ ಭಾಗವತಿಕೆ ಕೇಳುವುದಕ್ಕೆ ಸೇರಿ ಬಿಡುತ್ತಾರೆ. ಆ ಒಂದು ದಿನದ ಭಾಗವತಿಕೆಗಾಗಿ ಉಳಿದೆಲ್ಲ ವೈಫಲ್ಯಗಳನ್ನು ಮರೆಯುತ್ತಿದ್ದ ಪ್ರೇಕ್ಷಕ ಇದ್ದರೆ ಅದು ತೆಂಕಬೈಲು ಭಾಗವತರಿಗೆ ಮಾತ್ರ. ಇದೇ ಅವರ ವಿಲಕ್ಷಣ ಶೈಲಿ. ವಿಚಿತ್ರವೆಂದರೆ ಹಲವರು ಇದನ್ನು ಅನುಕರಿಸಿ ಎಡವಿ ಬಿದ್ದದ್ದು ಇದೆ. ಅದು ನಿಜವಾದ ತೆಂಕಬೈಲು ಮಾಧುರ್ಯ.
ಕರ್ಣ ಪರ್ವ, ಜಾಂಬವತಿ ಕಲ್ಯಾಣ, ಲಲಿತೋಪಖ್ಯಾನ ಈ ಪ್ರಸಂಗದ ಪದಗಳನ್ನು ತೆಂಕಬೈಲು ಕಂಠದಲ್ಲಿ ಕೇಳುವುದೆಂದರೆ ಅದೊಂದು ವಿಸ್ಮಯ ಅನುಭವವನ್ನು ಕೊಡುತ್ತದೆ. ಕೇಳುಗರನ್ನು ಮಂತ್ರಮುಗ್ಧವಾಗಿಸುವ ಆ ಇಂಪು ಯಾವುದಕ್ಕೂ ಹೋಲಿಸುವುದು ಸಾಧ್ಯವಿಲ್ಲ. ರಾಗದ ವೈವಿಧ್ಯ ಇವರಿಗಾಗಿಯೇ ಶಾಸ್ತ್ರಿಯತೆಯನ್ನು ಬದಲಿಸಿಕೊಳ್ಳುತ್ತದೆ. ಯಕ್ಷಗಾನ ಮಾತ್ರವಲ್ಲ ಸಂಗೀತದಲ್ಲೂ ಇವರ ಜ್ಞಾನ ಅಪಾರ. ಆದರೆ ಇವರಿಗೆ ಇವರ ಪ್ರತಿಭೆಯಬಗ್ಗೆ ಗಂಭೀರ ಚಿಂತನೆ ಇದ್ದಂತೆ ಭಾಸವಾಗುವುದಿಲ್ಲ. ಯಾವುದೇ ಸ್ಟಂಟ್ ಮಾಡದೆ ಅತಿ ಸಾಮಾನ್ಯರಂತೆ ಮುಗ್ಧತೆಯಿಂದಲೇ ವ್ಯವಹರಿಸುತ್ತಾರೆ. ಇವರ ಪ್ರತಿಭೇ ಬೇರೆಯಾರಿಗೆ ಇದ್ದರೂ ಅದನ್ನು ನಗದೀಕರಿಸುವ ವ್ಯವಹಾರ ಕುಶಲತೆಯನ್ನು ತೋರುತ್ತಿದ್ದರು. ಆದರೆ ಅತ್ಯಂತ ಮುಗ್ಧರಾದ ಇವರು ಕೊನೆಯ ಕಾಲದಲ್ಲೂ ಸರಳವಾಗಿ ಏನೂ ಅರಿಯದವರಂತೆ ಇದ್ದು ಬಿಟ್ಟರು. ಯಾವುದೇ ಮೇಳಕ್ಕೂ ಒತ್ತೆ ಇಟ್ಟುಕೊಳ್ಳದೆ ಬಹುತೇಕ ಹವ್ಯಾಸಿಯಾಗಿ ವೃತ್ತಿಪರರಿಗಿಂತಲೂ ಹೆಚ್ಚಿನ ಪ್ರತಿಭೆಯನ್ನು ತೋರಿಸಿದವರು. ಒಂದೆರಡು ರಾಗ ಕಲಿತು ಜಾಗಟೆ ಹಿಡಿದು ರಂಗಸ್ಥಳ ಏರಿ ಜನಪ್ರಿಯತೆಯ ಸ್ವಾರ್ಥದ ಹಿಂದೆ ಹೋಗುವ ಇಂದಿನ ಭಾಗವತರುಗಳು ಇವರ ಪ್ರತಿಭೆಯನ್ನು ಗಮನಿಸಬೇಕು.
ಯಕ್ಷಗಾನ ಲೋಕ ಅದ್ಭುತವಾದ ಗಾನ ಗಾರುಡಿಗನನ್ನು ಕಳೆದುಕೊಂಡಿದೆ. ಅವರ ಸ್ಥಾನ ಯಾರಿಂದಲೂ ತುಂಬುವುದಕ್ಕೆ ಸಾಧ್ಯವಿಲ್ಲ. ಇವರು ನಮ್ಮನ್ನಗಲಿದರೂ ಇವರ ಅದ್ಭುತ ಶೈಲಿಯ ಇಂಪಾದ ಸ್ವರ ನಮಗೆ ಸ್ಮರಣೆಯಾಗಿ ಉಳಿದಿದೆ. ಹೆಸರಿಗೆ ತಕ್ಕಂತೆ ತೆಂಕ ಬೈಲಿನ ಗಾನ ಮಾಧುರ್ಯವನ್ನು ಯಕ್ಷಗಾನ ರಸಿಕ ಮರೆಯುವುದಕ್ಕಿಲ್ಲ. ಮತ್ತೂ ಮತ್ತೂ ನೆನಪಾಗುತ್ತಾರೆ. ಅವರ ಆತ್ಮಕ್ಕೆ ಭಗವಂತನು ಶಾಂತಿಯನ್ನು ಕರುಣಿಸಲಿ.

