"ಇದು ವಿಮರ್ಶೆಯಲ್ಲದ ಚಿಂತನ"

Saturday, May 18, 2013

ಅಂತರಂಗದ ರಾವಣ ಭಾಗ ೧


 ಅಂಬಾವೃತ್ತಾಂತವನ್ನು ಬರೆದಾಗ ಹಲವರು ನನ್ನ ಕಿರು ಪ್ರಯತ್ನವನ್ನು ಪ್ರಶಂಸಿಸಿ ಸ್ಪಂದಿಸಿದರು. ಬಹಳ ಹಿಂದೆ ನಡೆದ 'ಭೀಷ್ಮ ವಿಜಯ" ತಾಳಮದ್ದಲೆಯ ನಿರೂಪಣೆ ಇದು. ಹಲವಾರು ತಾಳಮದ್ದಲೆಯನ್ನು ಕಂಡು ಕೇಳಿದಾಗ ನಮ್ಮ ಮನಸ್ಸಿಗಾಗುವ ಅನುಭವಗಳು ವರ್ಣನಾತೀತ. ತಾಳಮದ್ದಲೆಯ ಅರ್ಥಗಾರಿಕೆಯಲ್ಲಿ ಅಡಗಿರುವ ವೈಚಾರಿಕ ಸಂವಾದಗಳು, ನಿಂತ ನಿಲುಮೆಯಲ್ಲೇ ಕೇವಲ ವಾಕ್ ಸಾಮಾರ್ಥ್ಯದಿಂದ ಪಾತ್ರಗಳನ್ನು ಕಟ್ಟುವ ಪರಿ, ಆ ಸಂಭಾಷಣೆಯನ್ನು ಬೆಳೆಸಿ ಪೌರಾಣಿಕ ಲೋಕವನ್ನು ಕಣ್ಣೆದುರಿಗೆ ತರುವ ರೀತಿ ಬಹುಶಃ ಬೇರೆ ಯಾವುದೇ ಕಲಾಪ್ರಾಕಾರದಲ್ಲಿ ಕಂಡುಬರಲು ಸಾಧ್ಯವಿಲ್ಲ. ಇಂತಹ ಅದ್ಭುತ ಪ್ರಪಂಚ ಎಷ್ಟು ಅದ್ಭುತವಾಗಿ ಇದೆಯೋ ಅಷ್ಟೇ ಅಪರಿಚಿತವೂ ಆಗಿರುವುದು ವಿಪರ್ಯಾಸವೇ ಅಂತ ಹೇಳಹುದು. ಬರಹ ರೂಪದಲ್ಲಿ ಸೃಷ್ಟಿಯಾದ ಹಲವು ಪೌರಾಣಿಕ ಕಾವ್ಯಗಳು ಕಥನಗಳು ಸಾಹಿತ್ಯಲೋಕವನ್ನು ಆಳುತ್ತಿದ್ದರೆ ಅವುಗಳಿಗೆ ಸರಿಮಿಗಿಲಾಗಿ ಯಕ್ಷಗಾನ ತಾಳ ಮದ್ದಲೆಯ ಅರ್ಥಗಾರಿಕೆ ಪ್ರಪಂಚ ಸೃಷ್ಟಿಯಾಗಿದೆ. ವಿಚಿತ್ರವೆಂದರೆ ಕಲ್ಪನೆಗೆ ಸಿಗದಷ್ಟು ವಿಭಿನ್ನ ರೂಪದಲ್ಲಿ ಪೌರಾಣಿಕ ಲೋಕ ಸೃಷ್ಟಿಯಾಗುತ್ತಿದ್ದರೆ ಬರಹ ರೂಪದ ಸಾಹಿತ್ಯಕ್ಕೆ ಸಿಕ್ಕಷ್ಟು ಮನ್ನಣೆ ಈ ಅರ್ಥಗಾರಿಕೆ ಪ್ರಪಂಚಕ್ಕೆ ದಕ್ಕಲಿಲ್ಲ. ಇದು ಒಂದು ವಿಪರ್ಯಾಸ ಅಂತಲೇ ಹೇಳಬೇಕು. ಒಬ್ಬ ಯಕ್ಷಗಾನ ಅರ್ಥಧಾರಿ ತನ್ನ ಪಾತ್ರವನ್ನು ವಿಭ್ಹಿನ್ನವಾಗಿ ಕಾವ್ಯಾತ್ಮಕವಾಗಿ ಕಟ್ಟಿ ಆ ಕಾವ್ಯಾನ್ನವನ್ನು ಉಣಬಡಿಸುತ್ತಿದ್ದರೆ ಬರಹರೂಪದಲ್ಲಿ ಅದು ಇಲ್ಲದೇ ಇರುವ ಒಂದು ಕಾರಣಕ್ಕಾಗಿ ಆ ಪ್ರತಿಭೆ ಅಪರಿಚಿತವಾಗಿಯೇ ಉಳಿದಿದೆ. ಇಂದಿನ ತಾಂತ್ರಿಕತೆಯಲ್ಲಿ ದೃಶ್ಯವಾಗಿಯೋ ಶ್ರಾವ್ಯವಾಗಿಯೋ ಲಭ್ಯವಾದರೂ ಅದು ಆಸಕ್ತರನ್ನು ಕೂಡ ತಲುಪುವಲ್ಲಿ ವಿಫಲವಾಗಿದೆ ಅಂತಲೇ ಹೇಳಬಹುದು. ಅದರ ಲಭ್ಯತೆಯೂ ಸಿಮೀತ ವೃತ್ತದೊಳಗೇ ಇರುವುದರಿಂದ ಬಾಹ್ಯ ಲೋಕಕ್ಕೆ ಎಲೆಮರೆಯಾಗಿಯೇ ಉಳಿಯುತ್ತದೆ.

ಹಲವು ಸಲ ಯಕ್ಷಗಾನ ತಾಳ ಮದ್ದಲೆಯನ್ನು ಕಂಡರೂ ಕೇಳಿದರೂ ನಮ್ಮ ತಿಳುವಳಿಕೆಗೆ ಮೀರಿದ ನಮಗೆ ಅರ್ಥವಾಗದ ವಿಚಾರಗಳು ಹಾಗೇ ಉಳಿದುಬಿಡುತ್ತದೆ. ಕೆಲವೊಮ್ಮೆ ಅರ್ಥವಾಗದೇ ಅದು ಅಸಕ್ತಿಯನ್ನು ಕಳೆದುಕೊಳ್ಳುತ್ತದೆ. ಅರ್ಥಗಾರಿಕೆಯಾಗಲೀ ಅದರಲ್ಲಿನ ಹಾಡುಗಾರಿಕೆಯಾಗಲೀ ವ್ಯಕ್ತಿಯಿಂದ ವ್ಯಕ್ತಿಗೆ ಅದನ್ನು ಕಾಣುವ ಗ್ರಹಿಸುವ ಪರಿ ಭಿನ್ನವಾಗಿರುತ್ತದೆ. ಹೀಗಾಗಿ ವೈಶಿಷ್ಟ್ಯಪೂರ್ಣ ತಾಳ ಮದ್ದಲೆಯ ಅರ್ಥಗಾರಿಕೆಯೊಂದಿಗೆ ಅವುಗಳ ವಿಶಿಷ್ಟತೆಯನ್ನು ತಮ್ಮ ಚಿಂತನೆಗೆ ಅನುಸಾರ ಯಥಾವತ್ತಾಗಿ ತೆರೆದಿಟ್ಟರೆ ಒಂದು ತಾಳ ಮದ್ದಲೆಯ ಅರ್ಥಗಾರಿಕೆಯನ್ನು ಬರಹ ರೂಪದಲ್ಲಿ ಕಂಡ ಹಾಗೆ ಆಗುತ್ತದೆ. ಅದರಂತೆ ಕೆಲವು ತಾಳ ಮದ್ದಲೆಯನ್ನು ಬರಹ ರೂಪದಲ್ಲಿ ಮಂಡಿಸುವ ಪ್ರಯತ್ನ ಮಾತ್ರ ಇಲ್ಲಿದೆ. ಇದರಲ್ಲಿ ತಪ್ಪು ಅಭಾಸಗಳು ಬಹಳಷ್ಟು ಇದ್ದರೂ ಇರಬಹುದು, ಹಾಗಿದ್ದರೂ ಪ್ರಾಮಾಣಿಕವಾಗಿ ಇದರೊಳಗಿನ ಪ್ರಾಮಾಣಿಕ ಕಾಳಜಿ ಎಂದರೆ ಯಕ್ಷಗಾನ ಅರ್ಥಗಾರಿಕೆ ಪ್ರಪಂಚದ ಕಿಂಚಿತ್ ದರ್ಶನ ಮಾಡುವ ಪ್ರಯತ್ನ ಮಾತ್ರ. ಚಿಂತನೆಗೆ ಒತ್ತು ಕೊಟ್ಟು ಸಲಹೆ ಸೂಚನೆಗೆ ಸಾಧ್ಯವಾದಷ್ಟು ಕಿವಿ ಮತ್ತು ಹೃದಯವನ್ನು ತೆರೆದಿಡುವ ಪ್ರಯತ್ನವನ್ನು ಮಾಡುತ್ತ ಒಂದು ತಾಳಮದ್ದಲೆಯ ಅರ್ಥ ಗಾರಿಕೆ ಪ್ರಪಂಚವನ್ನು ಸಾಧ್ಯವಾದಷ್ಟು ಪರ್ಯಟನೆ ಮಾಡೋಣ. ಇದರಲ್ಲಿ ಎಷ್ಟು ದೂರ ಪಯಣಿಸುತ್ತೇವೊ ಅದನ್ನು ಕಾಲವೇ ಹೇಳಬೇಕು ಇಲ್ಲಿ ಅಭಿಮಾನ ತುಂಬಿದ ಪ್ರಾಮಾಣಿಕ ನಿಸ್ವಾರ್ಥ ಪ್ರಯತ್ನ ಮಾತ್ರ ನಮ್ಮದು . ಗಮನವಿಟ್ಟು ಸಹನೆಯಿಂದ ಪೂರ್ಣವಾಗಿ ಓದುವಿರೆಂಬ ಬಯಕೆಯ ಸ್ವಾರ್ಥ ಮಾತ್ರ ಇಲ್ಲಿದೆ.

ಅಂತರಂಗದ ರಾವಣ
ಬಹಳ ಹಿಂದೆ ಉತ್ತರ ಕರ್ನಾಟಕದ ಊರೊಂದರಲ್ಲಿ ನಡೆದ ತಾಳಮದ್ದಲೆ ಇದು. ಪ್ರಸಂಗ "ರಾವಣ ವಧೆ" ಇದು ಇನ್ನೊಂದು ಬಗೆಯಲ್ಲಿ ರಾವಣ ಅಂತರಂಗ ತಿಳಿದು ಹೇಳುವ ಬಗೆ "ರಾವಣ ಮೋಕ್ಷ" ಹೌದಲ್ಲ, ನಮಗೆ ತೊಂದರೆ ಕೊಡುವ ಪ್ರಾಣಿಯನ್ನು ನಾವು ಕೊಂದರೂ ಅದನ್ನು ಹಾಗೆ ಬಿಡುವ ಹಾಗೆ ಇಲ್ಲ.

ಹಿಂದಿನ ತಾಳ ಮದ್ದಲೆಗಳೆಂದರ ಅದರ ಬಗ್ಗೆ ಒಂದೆರಡು ಮಾತಾದರೂ ಹೇಳುವವರಿಗೆ ಹೇಳುವುದು ರೋಮಾಂಚನವಾದರೆ ಕೇಳುಗರಿಗೆ ಕೇಳುವ ತವಕ. ಬಡಗುತಿಟ್ಟು ಹಿಮ್ಮೇಳದಲ್ಲಿ ಶ್ರೀ ನೆಬ್ಬೂರು ಕಡತೋಕರಂತ ಹಿರಿಯ ಭಾಗವತರು ಇದ್ದರೆ ಮುಮ್ಮೇಳದ ಅರ್ಥ ಧಾರಿಗಳಾಗಿ..ಶೇಣಿ ಮೂಡಂಬೈಲು ಮುಂತಾದವರು ಮುಮ್ಮೇಳದ ಅರ್ಥಗಾರಿಕೆಯ ಆಯಾಮವನ್ನು ತೋರಿಸಿಕೊಟ್ಟರು. ಶೇಣಿಯವರ ರಾವಣ ಎಂದರೆ ಅದು ಮಾತಿನಲ್ಲೆ ರಾವಣನ ಅಪರಾವತಾರವನ್ನು ತೋರಿಕೊಡುತ್ತಾರೆ. ತಾಳ ಮದ್ದಲೆಯಲ್ಲಿ ಹಲವಾರು ಪಾತ್ರಗಳಿಗೆ ತಮ್ಮ ಛಾಪನ್ನು ಒತ್ತಿದರೂ ಶೇಣಿಯವರ ರಾವಣ ಎಂದರೆ ಅದು ಏಕಮೇವಾದ್ವೀತೀಯ ಪಾತ್ರ. ಉಡುಪಿ ಮಠಾಧೀಶರು ಶೇಣಿಯವರಿಗೆ ಹೇಳಿದ್ದರಂತೆ 'ನೀವು ರಾವಣನ ಪಾತ್ರ ಮಾಡಬಾರದು" ಈ ಮಾತು ಪರೋಕ್ಷವಾಗಿ ರಾವಣನ ಪಾತ್ರ ಹೇಗೆ ರಂಗದ ಮೇಲೆ ವಿಜ್ರಂಭಿಸುತ್ತದೆ ಎಂಬುದಕ್ಕೆ ಉದಾಹರಣೆ. ಸ್ವಾಮಿಗಳ ಮಾತಿಗೆ ಮುಖ್ಯ ಕಾರಣವೆಂದರೆ ಶೇಣಿಯವರ ರಾವಣ ರಂಗದಲ್ಲಿದ್ದರೆ ರಾಮನ ಪಾತ್ರ ಸೋತುಬಿಡುತ್ತದೆ. ಇದು ಒಟ್ಟು ಕಲ್ಪನೆಗೆ ವಿರೋಧಾಬಾಸವನ್ನು ನೀಡುವುದರಿಂದ ಖಳ ಪಾತ್ರದ ವೈಭವೀಕರಣವಾಗುತ್ತದೆ. ಅದರೆ ಇತ್ತೀಚೆಗೆ ಯಕ್ಷಗಾನದಲ್ಲಿ ಈ ಖಳ ಪಾತ್ರದ ವೈಭವೀಕರಣ ಬಹಳ ಕೀಳಭಿರುಚಿಯಿಂದ ಕೂಡಿರುತ್ತದೆ. ರಾಮನ ಪಾತ್ರದ ಅರ್ಥಗಾರಿಕೆ ಕುಣಿತಗಳಿಗೆ ಸಿಗುವ ಮಹತ್ವಕ್ಕಿಂತ ತಡ್ಪೆ ಕಿರೀಟದ ರಾವಣ ಹೇಗೆ ಕುಣಿದ ಎಂಬುದೇ ಆಗಿಬಿಡುತ್ತದೆ. ಅದನ್ನೇ ಹವ್ಯಾಸಿಗಳು ಅನುಕರಿಸುವುದು ಒಂದು ಖಯಾಲಿಯಾಗಿಬಿಟ್ಟಿದೆ. ದೇವಿ ಮಹತ್ಮೆಯಲ್ಲಿ ಮಹಿಷಾಸುರನ ಪ್ರವೇಶಕ್ಕೂ ಕುಣಿತಕ್ಕೂ ಸಿಗುವ ಮಹತ್ವ ದೇವಿಯ ಉದ್ಭವಕ್ಕೆ ಸಿಗುವುದೇ ಇಲ್ಲ ಇದು ಸದಭಿರುಚಿಯ ದುರಂತ ಎನ್ನಬೇಕಷ್ಟೆ. ಹೀಗಾದರೂ ಶೇಣಿಯವರು ಕೊನೇಯ ಕ್ಷಣದಲ್ಲಿ ರಾಮನ ಪಾತ್ರವನ್ನು ತಮ್ಮ ರಾವಣನ ಅರ್ಥಗಾರಿಕೆಯಿಂದ ಉತ್ತುಂಗಕ್ಕೆ ಏರಿಸಿಬಿಡುತ್ತಿದ್ದರು. ಶೇಣಿಯವರ ರಾವಣ ಎಂದರೆ ಅದು ಮಾತಿನಲ್ಲೇ ರಾವಣನ ಪರಕಾಯ ಪ್ರವೇಶದ ಸಾಕ್ಷಾತ್ಕಾರ. ಯಕ್ಷರಸಿಕರು ಬಹಳಷ್ಟು ನೆನಪಿಸುವ ಈ ತಾಳ ಮದ್ದಲೆಯ ವಿಶೇಷ ಮತ್ತು ನನ್ನೆಣಿಕೆಯ ವಿಶ್ಲೇಷಣೆಯೊಂದಿಗೆ ಇದನ್ನು ಲಿಪಿ ರೂಪದಲ್ಲಿ ಮಂಡಿಸುವ ಯತ್ನ ನನ್ನದು. ಇದರ ತಪ್ಪು ಒಪ್ಪುಗಳು ಆಭಾಸಗಳು ಏನಿದ್ದರೂ ಒಟ್ಟು ಒಂದು ಸದಭಿರುಚಿಯ ಆಸ್ವಾದನೆಯನ್ನು ಉಂಟುಮಾಡಲಿ ಎಂಬ ಆಶಯದಿಂದ ಅದೇ ರೀತಿ ಇದು ಗ್ರಾಹ್ಯವಾಗಲಿ ಎಂಬ ಮನದಾಳದ ಬಯಕೆ ಮಾತ್ರ ಇಲ್ಲಿದೆ.
ರಾವಣ ವಧೆ...ಇದು ಹಲವು ಹೆಸರಿನಲ್ಲಿ ಹಲವು ರೂಪದಲ್ಲಿ ರಂಗದ ಮೇಲೆ ಬಯಲಾಟವಾಗಿ ತಾಳ ಮದ್ದಲೆಯಾಗಿ ಆಡಲ್ಪಡುತ್ತದೆ. ರಾವಣ ಮಂಡೋಡರಿಯ ಸಂಭಾಷಣೆ ಪೂರ್ವಾರ್ಧದಲ್ಲಿದ್ದರೆ ಉತ್ತರಾರ್ಧದಲ್ಲಿ ಶ್ರೀರಾಮ ಮತ್ತು ಮಾತಲಿ ಸಂವಾದ ಕೊನೆಯಲ್ಲಿ ರಾಮ ರಾವಣರ ಸಂವಾದ ಇವುಗಳು ಈ ಪ್ರಸಂಗದ ವೈಶಿಷ್ಟ್ಯಗಳು. ಈ ಪ್ರಸಂಗ ಬರೆದವರು ಪ್ರಸಂಗ ಕರ್ತ ಕಾಸರಗೋಡು ಸುಬ್ರಾಯ. ಮಗನಾದ ಮೇಘನಾದನ ಮರಣದಿಂದ ಮಾನಸಿಕವಾಗಿ ಬಹಳಷ್ಟು ಖತಿಗೊಂಡ ರಾವಣ ವಿಲಪಿಸುವಲ್ಲಿಂದ ಪ್ರಸಂಗ ಆರಂಭವಾಗುತ್ತದೆ.

" ಓಲಗದೊಳಿರುತಿರಲು ರಾವಣನಾಳುಗಳು...." ಎಂಬ ಪದದಿಂದ ಸಾಮಾನ್ಯವಾಗಿ ಅರಂಭ ಮಾಡುವುದನ್ನು ಕಂಡಿದ್ದೇನೆ. ಅದರಂತೆ ಇಲ್ಲೂ ರಾವಣನ ಓಲಗ ಚಾವಡಿಗೆ ರಾವಣನ ಆಳುಗಳು ಬಂದು ನಡುಗುತ್ತ ಯುದ್ದದ ವೃತ್ತಾಂತಗಳನ್ನು ಯಥಾರೀತಿ ಹೇಳತೊಡಗುತ್ತಾರೆ. ರಾಮನ ಪರಾಕ್ರಮದಿಂದ ರಾವಣನ ಮೂಲಬಲ ಕ್ಷಯಿಸುತ್ತಿದ್ದುದ್ದನ್ನು ಕಣ್ಣಾರೆ ಕಂಡು ಗಾಬರಿಯಾಗಿ ರಾವಣನೊಡನೆ ಅಲ್ಲಿನ ವೃತ್ತಾಂತವನ್ನು ಹೇಳುತ್ತಾ.. 'ಗೂಢ ಬ್ರಹ್ಮನೊಳು ಹಗೆ ಮಾಡಿ ಕೆಡದಿರು" ಎಂದು ಉಪದೇಶ ಮಾಡುತ್ತಾನೆ. ರಾಮನ ಯುದ್ದವನ್ನು ಕಂಡಾಗ ಆ ಮಹಾದೇವನೇ ನಿಂತು ಯುದ್ದಮಾಡುತ್ತಾ ಈ ಲಂಕೆಯನ್ನೇ ಸರ್ವನಾಶ ಮಾಡುತ್ತಾನೋ ಎಂದು ಭಾಸವಾಗುತ್ತದೆ. ಹಾಗಾಗಿ ಹತ್ತು ಶಿರವನ್ನು ರಾಮನ ಪದತಲಕ್ಕೆ ಬಾಗಿಸಿ ಅನುಗ್ರಹಕ್ಕೆ ಪಾತ್ರವಾಗಿ ಈ ಲಂಕಾ ಸಾಮ್ರಾಜ್ಯವನ್ನು ಉಳಿಸಬೇಕು. ರಾವಣೋ ಲೋಕ ರಾವಣಃ ಎಂದು ಕರೆಸಿಕೊಂಡ ರಾವಣನ ಅವನತಿಯನ್ನು ಯಃಕಶ್ಚಿತ್ ಒಬ್ಬ ದೂತ ಗುರುತಿಸಿದ್ದು ಮಾತ್ರವಲ್ಲ ಅದನ್ನು ರಾವಣನ ಮುಂದೆ ನಿಂತು ಹೇಳುತ್ತಾನೆ ಎಂದರೆ ವಿಪರ್ಯಾಸ.
ರಾಮ ವಾಸ್ತವದಲಿ ಹೆಂಡತಿಗೆ ಗಂಡನಾಗಿ ತಾಯಿಗೆ ಮಗನಾಗಿ ಮಾನವನಂತೆ ವರ್ತಿಸುವುದಿದ್ದರೂ ಅವನಲ್ಲಿ ಯಾವುದೋ ತಿಳಿಯದ ಶಕ್ತಿಯಿದೆ ಒಂದು ನಿಗೂಢತ್ವವಿದೆ. 'ರಾಮ' ಎಂದರೆ ಏನು ಎಂದು ಪೂರ್ಣವಾಗಿ ತಿಳಿಯದಾಗ ಯಾವುದು ತಿಳಿಯದಂತೆ ನಿಗೂಢವಾಗಿ ಇರುತ್ತದೆಯೋ ಅದನ್ನು ಬ್ರಹ್ಮನಿಗೆ ಅರೋಪಿಸಿ ಗೂಢಬ್ರಹ್ಮ ಎಂದು ಹೇಳುವುದುಂಟು. ಯಾವ ಶಕ್ತಿಯನ್ನು ತುಲನೆ ಮಾಡಿ ಕಲ್ಪಿಸಲು ಅಸಾಧ್ಯವಾಗುತ್ತದೋ ಅದನ್ನು ಬ್ರಹ್ಮನೆಂದು ಹೇಳುವುದನ್ನು ಕೇಳಿ ಅದನ್ನೇ ದೂತ ಹೇಳುವ ಮಾತು "ಗೂಢ ಬ್ರಹ್ಮನೊಳು ಹಗೆ ಮಾಡಿ ಕೆಡದಿರು ,,,,,ರಾಮನಿಗೆ ಶರಣಾಗು" .

ರಾವಣ ಹತಾಶನಾಗುತ್ತಾನೆ. ತನ್ನದೆಲ್ಲವನ್ನು ಕಳೆದುಕೊಂಡ ದುಗುಡ ಒಂದೆಡೆಯಾದರೆ ಕುಸಿಯುತ್ತಿರುವ ಘನತೆ ಇನ್ನೊಂದೆಡೆ. ಶೇಣಿಯವರು ರಾವಣನ ಅಂತರಂಗವಾಗಿ ವಿಲಪಿಸುತ್ತಾರೆ. ಯಃಕಶ್ಚಿತ್ ಒಬ್ಬ ದೂತ ಲಂಕೆಯನಾಯಕ ಏನು ಮಾಡಬೇಕು ಎಂದು ಸಲಹೆ ಒಬ್ಬ ದೂತ ಕೊಡುವ ಕಾಲಬಂತೆ. ಬಂದರೆ ಅದು ರಾವಣನ ಅರಸೊತ್ತಿಗೆಯಾದೀತೆ. 'ಪ್ರಜಾಪ್ರಭುತ್ವವಾದೀತಲ್ಲ?" ರಾವಣನದ್ದು ಸರ್ವಾಧಿಕಾರ ಎಂದು ಪರೋಕ್ಷದ ಧ್ವನಿ ಇದು.

"ಇಂತೆಂದಚರರ ಬೀಳ್ಗೊಟ್ಟು....." ದುಮ್ಮಾನದ ವಿಷಾದದಿಂದ ಹತಾಶನಾದ ರಾವಣ ಅಂತರಂಗದಲ್ಲಿ ಬಳಲಿ ಸ್ವಗತವಾಗಿ ಶೋಕಿಸುತ್ತಾನೆ. ಅಂತರಂಗದ ದಳ್ಳುರಿ ಶಮನಕ್ಕೆ ದಾರಿ ಅಂತಃ ಪುರದಲ್ಲಿ ಕಂಡುಕೊಳ್ಳುತ್ತ ಬಂದು ಅಂತರಂಗದಲ್ಲೇ ಚಿಂತಿಸುತ್ತಾನೆ. " ಮನಸ್ಸು ದೇಹ ವಿಶ್ರಾಂತಿಯನ್ನು ಬಯಸುತ್ತದೆ ಆದರೆ ಬುದ್ಧಿ ಶಾಂತಿಯನ್ನು ತರುತ್ತದೆ. ರಾವಣ ಇದನ್ನೆಲ್ಲ ನೀನು ಯಾಕೆ ಚಿಂತಿಸುತ್ತಿ? ವಿವೇಕ ವಂಚಿಸುವುದಿಲ್ಲ ಸತ್ಯವನ್ನೇ ಗ್ರಹಿಸುತ್ತದೆ ಆದರೆ ಮನಸ್ಸು ಅದನ್ನು ಜೀರ್ಣಿಸಿಕೊಳ್ಳುವುದಿಲ್ಲ." ಎಷ್ಟು ಸರಳವಾದ ತತ್ವ. ಬುದ್ಧಿಯಲ್ಲಿ ತೋಚಿದ್ದು ಮನಸ್ಸು ಒಪ್ಪಿಕೊಳ್ಳುವುದಿಲ್ಲ. ಶ್ರೀಮಂತ ಬಡವನಾಗ್ತಾನೆ, ವಿದ್ವಾಂಸ ಮೂರ್ಖನಾಗಿ ಬುದ್ಧಿ ಭ್ರಮಣೆ ಹೊಂದುತ್ತಾನೆ, ಹುಟ್ಟಿದವನು ಸಾಯ್ತಾನೆ...ಆದರೆ ಬದುಕಿನಲ್ಲಿ ಬುದ್ದಿಯ ನಿರ್ದೇಶನ ಪರ್ಯಾಪ್ತವಾಗುವುದೇ ಇಲ್ಲ. ಶೇಣಿಯವರು
ಸರಳವಾಗಿ ಗೂಢಾರ್ಥವನ್ನು ಬಿಂಬಿಸುವ ಬಗೆ ಹೀಗೆ "ಸಾವು ಎದುರಿದ್ದರೂ ಸಾವಿನ ಘಳಿಗೆಯವರೆಗೂ ಬದುಕಿನ ಬಗ್ಗೆ ಚಿಂತಿಸುತ್ತೇವೆ. "
ಎಷ್ಟೊ ಸಲ ಈ ಬುದ್ಧಿಯ ವೃತ್ತಿಯನ್ನು ಇನ್ನೊಬ್ಬರಲ್ಲಿ ಕಾಣುವುದು ಹೆಚ್ಚು. ಕೆಲವರು ನಮ್ಮ ಸಂವೇಧನೆ ಅರಿಯದೇ " ಯಾಕೆ ಅಳ್ತಿಯ ಪ್ರಪಂಚದಲ್ಲಿ ಇದು ಇದ್ದದ್ದೆ." ಹುಟ್ಟು ಸಾವು ನೋವು ನಲಿವು ಇದಕ್ಕೆ ಸ್ಪಂದಿಸದೇ ಹೇಳುವ ಮಾತು. ಆದರೆ ಸಂವೇದನೆ ಅರಿತವರು ನಮ್ಮ ದುಃಖದಲ್ಲಿ ಒಂದಾಗಿ ದುಃಖಿಸುತ್ತಾರೆ. ಇಬ್ಬರೂ ಸಹೋದರರ ಬುದ್ಧಿಯನ್ನು ರಾವಣ ವಿಮರ್ಶಿಸುವ ಬಗೆ ಇದು. ಒಬ್ಬನ ನಂತರ ಹುಟ್ಟಿದ ವಿಭೀಷಣ ಸಂವೇದನೆ ಇಲ್ಲದೇ ಉಪದೇಶ ಮಾಡ್ತಾನೆ. ಅವನು ಬುದ್ಧಿವಂತ! ಅವನ ಉಪದೇಶ ಬುದ್ಧಿ ಹೌದು ಅಂತ ಅಗೀಕರಿಸಿದರೂ ಮನಸ್ಸು ಒಪ್ಪಿಕೊಳ್ಳದೇ ರೋಧಿಸುತ್ತದೆ. ಅದರೆ ಕುಂಭಕರ್ಣ ಬುದ್ಧಿಗೆ ಹೊಳೆದದ್ದು ಹೇಳುತ್ತಾನೆ ಜತೆಗೆ ದುಃಖದಲ್ಲಿ ಪಾಲ್ಗೊಂಡು ಒಂದಾಗ್ತಾನೆ. ಅದಕ್ಕಾಗಿ ಕುಂಭಕರ್ಣನನ್ನು ಅನುಮೋದಿಸಿದರೆ ವಿಭೀಷಣನನ್ನು ವಿಛ್ಚೇದಿಸುತ್ತದೆ. ಇಲ್ಲಿ ಬುದ್ಧಿಯ ತಿರಸ್ಕಾರವಲ್ಲ.. ಬುದ್ಧಿಗೂ ಮನಸ್ಸಿಗೂ ಹತ್ತಿರವಾದದ್ದು ಯಾವುದು ಅದು. ಅದುದರಿಂದಲೇ ಸಮಾನ ವ್ಯಸನ ಶೀಲರು ಒಂದಾಗುವುದೇ ಇದಕ್ಕೆ.

ರಾವಣ ಭಾವುಕನಾಗಿ ಕುಂಭಶ್ರವಣನನ್ನು ಸ್ಪರಿಸುತ್ತಾನೆ. ಯುದ್ಧಕ್ಕೆ ಹೋದ ಕುಂಭ ಶ್ರವಣನಲ್ಲಿ ವಿಭಿಷಣ ಎದುರಾದಾಗ ಸಹಜವಾಗಿ ಉಪದೇಶಿಸುತ್ತಾನೆ.." ಅಣ್ಣ ನಿನಗೂ ಗೊತ್ತು ನಮ್ಮಣ್ಣ ಅನ್ಯಾಯಗಾರ. ಅದು ಗೊತ್ತಿದ್ದು ನೀನು ಉಪದೇಶಿಸಿದ್ದಿಯಾ...ಆದರೂ ಇಂದು ಅವನ ಪರವಾಗಿ ಯುದ್ಧಕ್ಕೆ ಬಂದಿದ್ದಿಯಾ. ನಿನ್ನ ನಿಲುಮೆ ಏನು. ಅದಕ್ಕೆ ಒಂದು ಭದ್ರತೆ ಇಲ್ಲ. ದ್ವಂದ್ವ. ಹಾಗೂ ಹೇಳುತ್ತಿ ಹೀಗು ಹೇಳುತ್ತಿ. ಆದರೆ ನನ್ನನ್ನು ನೋಡು ಹೇಳಿದ್ದನ್ನೇ ಮಾಡಿ ತೋರಿಸಿದ್ದೇನೆ"

ಸಹೋದರ ವಿಭೀಷಣನ ಉಪದೇಶವನ್ನೆ ಹೀಯಾಳಿಸುತ್ತಾನೆ ಕುಂಭಕರ್ಣ ಅದು ಹೇಗೆ? " ವಿಭೀಷಣ ನಿನಗೆ ಮುಖದಲ್ಲಿ ಚರ್ಮ ಇದೇಯೇನೋ? ನಮಗೆ ಬುದ್ದಿಮಾತ್ರ ಇರುವುದೇ? ( ಬದುಕುವುದಕ್ಕೆ ಬುದ್ಧಿ ಮಾತ್ರ ಸಾಕೇ? ಮನಸ್ಸು ಬೇಡವೇ?) ಸಂವೇದನೆ ಇಲ್ಲವೇ? ಸುಖ ದುಃಖಗಳ ಅರಿವೇ ಇಲ್ಲವೋ? ನೀನು ವ್ಯವಹಾರಿಯೇ ಅಲ್ಲ. ( ಅದರ ಅರ್ಥ ಪ್ರಾಪಂಚಿಕ ವ್ಯವಹಾರವನ್ನು ಅರಿತವನಲ್ಲ ಎಂದು) ಆದಕಾರಣ ನಾನು ಬುದ್ಧಿಗೆ ತೋಚಿದ್ದನ್ನು ಅಣ್ಣನಿಗೆ ಹೇಳಿದ್ದೇನೆ. ಅಣ್ಣ ಮೂರ್ಖನೇನು ಅಲ್ಲ. ಅಣ್ಣ ಅದನ್ನು ಆಕ್ಷೇಪಿಸಲೂ ಇಲ್ಲ. ಅವನು ಕೇಳಿದ್ದು ಒಂದೇ ಯುದ್ಧಕ್ಕೆ ಹೋಗುತ್ತಿಯೋ ಇಲ್ಲವೋ ಎಂದು. ಹಾಗಾಗಿ ಯುದ್ಧಕ್ಕೆ ಬಂದಿದ್ದೇನೆ ಯಾಕೆ?

ಬುದ್ಧಿ ಮತ್ತು ಮನಸ್ಸಿನ ವಿಕಲ್ಪಗಳು ಗೊತ್ತಾಗುವುದು ಕುಂಭಕರ್ಣನ ಮಾತುಗಳಲ್ಲಿ. " ಮೊದಲು ಅಣ್ಣ ಎಲ್ಲೆಲ್ಲಿ ದಿಗ್ವಿಜಯಕ್ಕೆ ಹೋಗಿದ್ದಾನೆ ಅಲ್ಲೆಲ್ಲ ನಾವು ಅವನನ್ನು ಹಿಂಬಾಲಿಸಿದ್ದೇವೆ. ಎಲ್ಲಿಗೆ ಹೋದರೂ ನಮ್ಮಣ್ಣ ಒಬ್ಬನೇ ಹೋದವನಲ್ಲ. ನಮ್ಮನ್ನೂ ಜತೆಗೆ ಕರೆದು ಕೊಂಡು ಹೋದವನು. ಇನ್ನೆಲ್ಲಿಗೆ ಹೋಗ್ತಾನೋ ಎಲ್ಲಿಗೆ ಹೊರಟಿದ್ದಾನೋ ಈಗ ಒಂದು ದಾರಿ ಹಿಡಿದ್ದಾನೆ ಅದರಲ್ಲಿ ಅವನು ಒಬ್ಬನೇ ಹೋಗಬೇಕೆ? ಯಾಕೆ ಅವನ್ನು ಒಬ್ಬನನ್ನು ಬಿಡಬೇಕು. ಅಲ್ಲಿಗೇ ನಾವೂ ಯಾಕೆ ಹೋಗಬಾರದು? "

ಇದರ ಗೂಢಾರ್ಥವನ್ನು ಹಲವು ಬಗೆಯಲ್ಲಿ ಕಂಡುಕೊಳ್ಳಬಹುದು. ರಾವಣ ಅಂತ್ಯದಲ್ಲಿ ಮೋಕ್ಷದ ಹಾದಿ ಹಿಡಿದಾಗ ಅಲ್ಲಿ ಅವನನ್ನು ಒಬ್ಬನೇ ಬಿಡುವುದು ಸರಿಯೇ? ಎಂತಹ ಮಾತು? ಶೇಣಿಯವರು ರಾವಣ ಅಂತರಂಗದರ್ಶನ ಎಷ್ಟು ಸುಂದರವಾಗಿ ಮಾರ್ಮಿಕವಾಗಿ ಮಾಡಿಬಿಡುತ್ತಾರೆ.

(ಮುಂದುವರಿಯುವುದು)












Thursday, May 9, 2013

ಅಂತ್ಯವಾದ ಅಂಬಾ ವೃತ್ತಾಂತ


ಅಂಬಾ ವೃತ್ತಾಂತ ೪
ದೊಡ್ದದು ಎಂಬ ಒಂದು ಮಾನವನ್ನು ಯಾವುದೇ ವಿಷಯದಲ್ಲಿ ಅರೋಪಿಸುವಾಗ ಚಿಕ್ಕದು ಎಂಬುದರ ಅಸ್ತಿತ್ವ ಅಲ್ಲಿರಬೇಕಾಗುತ್ತದೆ. ಚಿಕ್ಕದು ಎಂದು ಇದ್ದಲ್ಲಿ ದೊಡ್ಡದು ಎಂದಿರಲೇಬೇಕಲ್ಲ. ಅಥವಾ ದೊಡ್ಡದು ಇದ್ದರೆ ಮಾತ್ರವೇ `ಚಿಕ್ಕದು' ಎಂಬ ವಿಶೇಷಣ ಅರ್ಥವನ್ನು ಕಂಡುಕೊಳ್ಳುತ್ತದೆ. ದೊಡ್ಡದು ಎಂಬುದು ಇದ್ದರೆ ಅದನ್ನು ಸಣ್ಣದರ ಎದುರು ನಿಲ್ಲಿಸಿ ತೂಗಿ ನೋಡಿದಾಗ ದೊಡ್ಡದು ಎಂದಾಗುತ್ತದೆ. ಭೀಷ್ಮ ಪರಶುರಾಮರ ತಾರ್ಕಿಕ ಸಮರದ ಫಲವೇ "ಭೀಷ್ಮ ವಿಜಯ". ಭೀಷ್ಮ ಕನ್ಯಾಪಹಾರ ಮಾಡಿದ. ಬಳಿಕ ತಮ್ಮನಿಗೆ ಬಲವಂತವಾಗಿ ವಿವಾಹ ಮಾಡಿಸಿದ ಒಪ್ಪದಿದ್ದ ಅಂಬೆ ಶೋಷಿತಳಾದಳು. ಹೀಗೆ ಲೋಕಾಪವಾದ ಮೇಲ್ನೋಟಕ್ಕೆ ಕಂಡು ಬರುತ್ತದೆ. ಅಗಸನ ಸಣ್ಣ ಮಾತಿಗೆ ಜಾನಕಿಯನ್ನು ದೂರ ಮಾಡಿದ ರಾಮ ರಾಮನವ್ಯಕ್ತಿತ್ವಕ್ಕೆ ಸಣ್ಣ ಮಾತಾದರೂ , ಅಲ್ಲಿ ಕಳಂಕ ಸಣ್ಣದಾದರೂ ಅದರ ಪರಿಣಾಮ ದೊಡ್ಡದಾಗಿರುತ್ತದೆ. ಶ್ವೇತ ಪರದೆಯ ಮೇಲೆ ಒಂದು ಸಣ್ಣ ಕಲೆಯಾದರೂ ಅದೇ ಎದ್ದು ಕಾಣುವ ಹಾಗೆ ಭೀಷ್ಮನ ಬದುಕಿನ ಶ್ವೇತ ವಸನದ ಕಲೆ ತೊಳೆಯಲ್ಪಡಬೇಕು ಇದು ಗುರು ಸಂಕಲ್ಪ. ಹಾಗಾಗೀ ಸಂಘರ್ಷಕ್ಕೇ ಒತ್ತು ಕೊಟ್ಟು ಅದಕ್ಕೆ ಕುರುಕ್ಷೇತ್ರವನ್ನೆ ಅಯ್ಕೆ ಮಾಡಿಕೊಂಡರು ಗುರು ಜಮದಗ್ನಿ ಸಂಜಾತ ಪರಶುರಾಮರು. ಭೀಷ್ಮ ಯುದ್ದವನ್ನೇ ಬಯಸಿಯಾನು ಎಂದು ಗುರುಗಳು ಮೊದಲೇ ಊಹಿಸಿಯಾಗಿತ್ತು. ಯಾಕೆಂದರೆ ಪ್ರಿಯ ಶಿಷ್ಯನ ಮನಸ್ಸು ಪರಶುರಾಮರಂತಹ ಗುರುಗಳು ಅರಿಯದೇ ಹೋದಾರೆ? ಹಾಗಾಗಿ ಸಂಘರ್ಷ ಅನಿವಾರ್ಯ ಎಂದು ಅವರು ಕಂಡುಕೊಂಡಾಗಿತ್ತು. ತಾಮ್ರದ ಪಾತ್ರೆಯನ್ನು ತೊಳೆಯಲು ಬೂದಿಯನ್ನೇ ಬಳಸಿದಂತೆ ಬೂದಿ ಬಳಿದು ಕಪ್ಪಾದ ಪಾತ್ರೆ ತೊಳೆದ ನಂತರ ಮತ್ತಷ್ಟು ಪ್ರಭೆಯನ್ನು ಗಳಿಸಿಬಿಡುತ್ತದೆ. ಹಾಗಾಗಿ ಕುರುಕ್ಷೇತ್ರದಲ್ಲಿ ವೈಚಾರಿಕ ಭಸ್ಮದಿಂದ ಭೀಷ್ಮನ ವ್ಯಕ್ತಿತ್ವವನ್ನು ಪರಿಶುದ್ದಗೊಳಿಸುವುದಕ್ಕೆ ಗುರುಗಳು ಮುಂದಾದರು.

ಹಸ್ತಿನಾವತಿಯ ಪ್ರತಿನಿಧಿಯಾಗಿ ಭೀಷ್ಮ ಬರೆದ ಪತ್ರಕ್ಕೆ ಪ್ರತಿಕ್ರಿಯೆಯನ್ನು ಕಾಶೀರಾಜ ನೀಡಲಿಲ್ಲ. ಹಸ್ತಿನಾವತಿಯ ಯುವರಾಜನ ಬಗ್ಗೆ ಇದು ಅಸಮ್ಮತಿಯಾದರೂ ಭೀಷ್ಮ ಸಹಿಸುತ್ತಿದ್ದನೇನೋ. ಆದರೆ ಕರಿಪುರರದ ಭೀಷ್ಮ ರರಿಯದಹಾಗೆ ಎಂದು ಕಾಶೀರಾಜ ಬಗೆದನೋ ಅದಕ್ಕೆ ವಿರುದ್ದವಾಗಿ ಪ್ರತಿಕ್ರಿಯಿಸಬೇಕಾದದ್ದು ಚಕ್ರವರ್ತಿ ಪ್ರತಿನಿಧಿಯಾಗಿ ಭೀಷ್ಮನಿಗೆ ಅನಿವಾರ್ಯವಾಗುತ್ತದೆ. ಹಾಗಾಗಿ ನಾನು ಕನ್ಯಾರ್ಥಿಯಾಗದೇ ಪ್ರತಿನಿಧಿಯಾಗಿ ಹೋದೆ. ಇದು ಗುರುಗಳಲ್ಲಿ ಭೀಷ್ಮನ ನಿವೇದನೆ.

ಗುರುಗಳು ಹೇಳುತ್ತಾರೆ "ಭೀಷ್ಮರರಿಯದ ಹಾಗೆ... ಎಂದು ತೋರುವುದಕ್ಕೆ ಮೊದಲಾಗಿ ಪತ್ರ ಬರೆದು ಕನ್ಯೆಯರನ್ನು ಕೇಳಿದ ಹಸ್ತಿನಾವತಿಯವರೇ ಇದಕ್ಕೆ ಪರೋಕ್ಷವಾಗಿ ಕಾರಣರಾಗುತ್ತಾರೆ. ಹಾಗಾಗಿ ಸ್ವಯಂವರಕ್ಕೆ ಭೀಷ್ಮ ಅಡ್ಡಬರುತ್ತಾನೆ. ಎಂದುಕೊಂಡು ಭೀಷ್ಮ ರರಿಯದ ಹಾಗೆ ಎಂದು ಸಾಮಂತರಸರಿಗೆ ಅಹ್ವಾನವನ್ನು ನೀಡಿದ."

ಭೀಷ್ಮರರಿಯದ ಹಾಗೆ ಎಂಬ ಒಕ್ಕಣಿಕೆಯಿಂದ ಕಾಶೀರಾಜ ಯಾವುದೋ ಹಿನ್ನೆಲೆಯನ್ನು ಅಡಗಿಸಿಟ್ಟಿದ್ದಾನೆ ಎಂದು ಬಹಿರಂಗವಾಗಿ ಹೇಳಿದಂತೆ ಅಲ್ಲವೇ? ಅದರ ಅರ್ಥ ಹಸ್ತಿನಾವತಿಯವರು ಕೇಳಿ ಕನ್ಯಯರರನ್ನು ನೀಡದೇ ಹಸ್ತಿನಾವತಿಯರಲ್ಲಿ ದೌರ್ಬಲ್ಯವಿದೆ ಎಂದು ಜಾಹೀರು ಮಾಡಿದಂತೆ. ಕಾಶೀ ಕನ್ಯೆಯರನ್ನು ಪರಿಗ್ರಹಿಸುವಲ್ಲಿ ಹಸ್ತಿನೆಯ ರಾಜ ಸಮರ್ಥನಲ್ಲ. ಆ ಸಾಮಾರ್ಥ್ಯವನ್ನು ಪ್ರಶ್ನಿಸುವಂತೆ ಮತ್ತು ಅದಕ್ಕೆ ವಿರುದ್ಧವಾಗಿ ಇದು ಧೂರ್ತ ಗೂಢಾಲೋಚನೆ. ಹಾಗಾಗಿ ಯಾವುದೇ ರೀತಿಯಲ್ಲಿ ಭೀಷ್ಮ ರಂಗ ಪ್ರವೇಶ ಮಾಡುವುದು ಅನಿವಾರ್ಯವಾಯಿತು. ಹಸ್ತಿನಾವತಿಯಲ್ಲಿ ಸಾಮಾರ್ಥ್ಯ ಯಾವ ರೀತಿಯಲ್ಲಿ ನಿಕ್ಷೇಪವಾಗಿದೆ ಎಂದು ತೋರಿಸಿ ಕೊಡಬೇಕಿತ್ತು. ಚಕ್ರವರ್ತಿ ಮಾನ್ಯಮಾಡದ ಸ್ವಯವಂರವನ್ನು ಭೀಷ್ಮ ಭೇದಿಸುವುದಕ್ಕಾಗಿಯೇ ಬಂದ. ಭೀಷ್ಮನ ಯೋಚನೆ ಒಂದೇ ನೋಟಕ್ಕೆ ಅರ್ಥವಾಗುವುದಿಲ್ಲ ಬಗೆದಷ್ಟು ಬಗೆದಷ್ಟು ಇದಕ್ಕೆ ಹಲವಾರು ವಿಚಾರಗಳು ಪುಷ್ಟಿಯನ್ನು ಕೊಡುತ್ತವೆ.

ಹಾಗಾದರೆ ಸ್ವಯಂವರಕ್ಕೆ ಹೋಗದಂತೆ ಮೊದಲೇ ಸಾಮಂತರನ್ನು ತಡೆಯಬಹುದಾಗಿತ್ತಲ್ಲ? ಎಂಬ ಪ್ರಶ್ನೆ ಬರುತ್ತದೆ. ತನಗೆ ಸುದ್ದಿ ಬಂದಾಗ ಅರಸರೆಲ್ಲ ಹೋಗಿಯಾಗಿತ್ತು. ಹಾಗಾಗಿ ಅಲ್ಲಿ ಪ್ರವೇಶ ಮಾಡಿದಾಗಲೇ ಯುದ್ದ ನಿಂತಾಗಿತ್ತು. ನಿಂತಿದ್ದ ಕನ್ಯೆಯರಿಗೆ 'ಏರಿರೆನ್ನಯ ರಥವನು' ಎಂದು ಆಜ್ಞಾಪಿಸಿದ. ಗುರುಗಳು ಕೇಳುತ್ತಾರೆ. ಆಗ ಯಾರು ತಡೆಯಲಿಲ್ಲವೇ ? ಯಾರೂ ಪ್ರತಿಭಟಿಸಲಿಲ್ಲವೇ? ಯಾರೂ ಯುದ್ದಕ್ಕೆ ಬರಲಿಲ್ಲವೆ?

ಇಲ್ಲ ಯಾರೂ ಏಳಲಿಲ್ಲ. ಆದರೆ ಸಾಲ್ವನೊಬ್ಬ ಪ್ರತಿಭಟಿಸಿದ. ಆದರೆ ಆತ ಅಲ್ಲಿ ಆಮಂತ್ರಣ ಇದ್ದು ಹೋದವನೇ ಅಲ್ಲ. ಸಾಲ್ವನ ಪ್ರತಿಭಟನೆ ಗಣಿಸಬೇಕಾದದ್ದೇ ಅಲ್ಲ. ಯಾಕೆಂದರೆ ಗಿಂಡಿಯಲ್ಲಿ ನೀರಿಟ್ಟು ಮನೆಯ ಯಜಮಾನ ಸಭೆಯಲ್ಲಿ ವಿನಂತಿಸುತ್ತಾನೆ ಭೋಜನಕ್ಕೆ ಏಳಿ, ಎಂದಾಗ ಹಾದಿಯಲ್ಲಿ ಹೋಗುವ ಭಿಕ್ಷುಕ ಕೂಡ ಬಂದಿದ್ದರೆ ಎದ್ದು ನಿಲ್ಲುತ್ತಾನೆ. ಹಾಗೆಂದು ಅವನನ್ನು ಯಜಮಾನ ಸ್ವಾಗತಿಸಿದ ಎಂದರ್ಥವಲ್ಲ. ಹಾಗಾಗಿ ಸಾಲ್ವನ ಪ್ರತಿಭಟನೆ ಲೆಕ್ಕಕ್ಕಿಲ್ಲದೇ ಹೋಯಿತು.

ಪಾತ್ರ ಪೋಷಣೆಗೆ ಏಕಾಂಗಿಯಾದ ನಿರ್ವಹಣೆಗಿಂತ ಪ್ರತಿ ಪಾತ್ರಧಾರಿಯೂ ಸಮರ್ಥವಾಗಿ ಸ್ಪಂದಿಸಿ ಪ್ರತಿದ್ವಂದ್ವಿಯಾದಾಗ ಮಾತ್ರ ಯಾವುದೇ ಪಾತ್ರ ವಿಜ್ರಂಭಿಸುತ್ತದೆ. ಇಲ್ಲಿ ಸೋಲು ಗೆಲುವಿನ ಸ್ಪರ್ಧೆಗಿಂತ ವೈಚಾರಿಕ ಮಥನ ಪ್ರಾಮುಖ್ಯತೆಯನ್ನು ಪಡೆಯಬೇಕು.ಇಲ್ಲಿ ಮೂಡಂಬೈಲು ಶಾಸ್ತ್ರಿಗಳ ಪರಶುರಾಮ ಸಾಕ್ಷಾತ್ ಅನ್ವರ್ಥ ಗುರುವಿನಂತೆ ವಿಜ್ರಂಭಿಸುತ್ತದೆ ಮುಂದೆ ಪರಶುರಾಮರು ಕೇಳುತ್ತಾರೆ ಭೀಷ್ಮನಾಗಲೀ ಸಾಲ್ವನಾಗಲೀ ಅಲ್ಲಿಗೆ ಹೋದ ಉದ್ದೇಶವೊಂದೇ. ಕನ್ಯಾಪಹಾರ. ಕ್ಷತ್ರಿಯೋಚಿತವಾಗ ರಾಕ್ಷಸವಿವಾಹ. ಸಾಲ್ವನಾದರೋ ರಾಕ್ಷಸನಾಗಿ ಒಂದು ವೇಳೆ ಅಂಬೆಯನ್ನು ಅವನೇ ವಿವಾಹವಾಗುತ್ತಿದ್ದ.. ಆದರೆ ಸ್ವಯಂವರದಲ್ಲಿ ನಿಲುವು ಮಾತ್ರದಿಂದಲೇ ಸೇರಿದ ಎಲ್ಲ ಅರಸರನ್ನು ಸೋಲಿಸಿದ ಭೀಷ್ಮನ ಬಗ್ಗೆ ಕಾಶೀಕುವರಿಯರು ಕಡೆಗಣ್ಣ ನೋಟ ಬೀರಿ ಒಂದು ರೀತಿಯಲ್ಲಿ ಭೀಷ್ಮನಿಗೆ ಒಲಿದೇ ರಥವನ್ನು ಹತ್ತಿದರು. ಹಾಗಾದರೆ ಉಳಿದವರ ಮಾತು ಹಾಗಿರಲಿ ಸಾಲ್ವನನ್ನು ಕಡೆಗಣಿಸಿ ಅಂಬೆ ರಥವನ್ನು ಏರಿದ್ದರಲ್ಲಿ ತಪ್ಪಿಲ್ಲ. ಸಾಲ್ವನಿಂದಲು ಸಾಮಾರ್ಥ್ಯವಂತ ಭೀಷ್ಮ ಎಂಬ ಅವಳ ಆಯ್ಕೆ ಸರಿಯಾಗಿಯೇ ಇತ್ತು.

ಭೀಷ್ಮ ಹೇಳುತ್ತಾನೆ " ಆಕೆ ರಥ ಏರಿದ್ದು ತಪ್ಪಲ್ಲ. ನಾನು ಕನ್ಯೆಯರನ್ನು ತಂದದ್ದು ತಪ್ಪಲ್ಲ"
ಇದಕ್ಕೆ ಗುರುವಿನ ನೇರವಾದ ಅಕ್ಷೇಪ... " ಭೀಷ್ಮ ಕನ್ಯೆಯರನ್ನು ತಂದದ್ದು ತಪ್ಪಲ್ಲ ಆದರೆ ಮದುವೆಯಾಗದೇ ಇದ್ದದ್ದು ತಪ್ಪು"
ಭೀಷ್ಮನೇ ಮದುವೆಯಾಗಬೇಕು ಎನ್ನುವುದಕ್ಕೆ ವೈಚಾರಿಕ ವಿವಾಹಗಳಲ್ಲಿ ಎಂಟು ವಿಧ. ಬ್ರಹ್ಮ, ದೈವ,ರಾಜಾಪತ್ಯ, ಆರ್ಷ್ಯ , ಈ ನಾಲ್ಕೂ ವಿವಾಹಗಳ ಒಕ್ಕಣೆ ಹೇಗೆ? ಇಲ್ಲಿ ಕನ್ಯಾಪಿತೃ ಕನ್ಯೆಯರನ್ನು ಕೊಡುವುದು. ಅಲ್ಲಿ ಪಿತೃವಿಗೇ ಪ್ರಾಮುಖ್ಯ ಸ್ಥಾನ, ಆದರೆ ಉಳಿದ ನಾಲ್ಕು ವಿವಾಹಗಳು ರಾಕ್ಷಸ ಗಾಂಧರ್ವ ಆಸುರ ಪೈಶಾಚ ಇದರಲ್ಲಿ ಕನ್ಯೆಯರನ್ನು ಮದುವೆ ಆಗುವುದು ಅಂತ ಇರುವುದು..ಇಲ್ಲಿ ಕ್ಷತ್ರಿಯೋಚಿತ ಕನ್ಯಾಪಹಾರ ಎಂದಾಗುವಾಗ ಅವರನ್ನು ವಿವಾಹವಾಗಬೇಕಿತ್ತು.

ಹೌದಲ್ಲ ? ರಾಕ್ಷಸ ವಿವಾಹದ ರೀತಿಯಲ್ಲಿ ಪ್ರವೃತ್ತ ನಾಗುವಾಗ ಅಪಹರಿಸಿದವನೇ ಮದುವೆ ಆಗುವುದು. ಆದರೂ ಭೀಷ್ಮನ ಸಮರ್ಥನೆ ಬೇರೆಯೇ ಇರುತ್ತದೆ. ಅದರ ಭಾವ ಹೀಗಿದೆ.
' ಬ್ರಹ್ಮ ದೈವ ಮೊದಲಾದ ವಿವಾಹ ಪದ್ದತಿಯಲ್ಲಿ ಕನ್ಯಾದಾನ.. ಕನ್ಯಾಪಿತೃ ಕನ್ಯೆಯನ್ನು ದಾನ ಮಾಡುತ್ತನೆ.ಅಲ್ಲಿ ಕನ್ಯಾದಾನ ಇದ್ದರೆ ಉಳಿದ ರಾಕ್ಷಸ ವಿವಾಹದಲ್ಲಿ ಕನ್ಯಾಗ್ರಹಣ. ಗ್ರಹಣ ಎಂಬ ಶಬ್ದದಲ್ಲಿ ಪಾಣೀಗ್ರಹಣ ಎಂಬುದು ಸೇರುವುದಿಲ್ಲ. ಅಂದರೆ ಇದು ಕನ್ಯಾ ಸಂಗ್ರಹ. ಅಲ್ಲಿ ಕನ್ಯಾ ಪಿತೃ ವರನ ಕಾಲು ತೊಳೆದು ಮಧುಪರ್ಕಾದಿಗಳನ್ನು ಕೊಟ್ಟು ಪೂಜಿಸಿ ದದಾಮಿ ಅಂತ ಹೇಳಬೇಕು. ಇಂಥಾ ಗೋತ್ರ ಇಂಥಾ ಸೂತ್ರ ಇಂಥಾ ಪ್ರವರ ಇಂಥವನ ಮಗಳು ಇಂಥವನ ಮರಿಮಗಳು ಇಂಥಹಾ ಹೆಸರಿನ ಕನ್ಯೆ ಅಂತ ಹೇಳಿ ನಿಲ್ಲಿಸುವಾಗ,,,ವರನ ಕಡೆಯಿಂದ ಅದನ್ನೆ ಪುನಹ ಹೇಳಿದಾಗ ಅದು ಆರ್ಷ್ಯ ವಿವಾಹ ಪದ್ಧತಿ ಅಲ್ಲಿ ಕನ್ಯೆಯನ್ನು ದಾನ ಮಾಡುವಾಗ ಕೊಡುತ್ತೇನೆ ಅಂತ ಹೇಳುವಾಗ ದೃಣ್ಣಾನಿ ಅಂತ ಹೇಳಬೇಕು. ಹಾಗಾಗಿ ಹುಡುಗಿಯ ಕೈ ಮೇಲೆ ಇಟ್ಟು ಹುಡುಗನ ಕೈ ಕೆಳಗಿಟ್ಟು ವಿವಾಹ ನಡೆಸುವುದು, ಕ್ಷತ್ರಿಯರಾದವರು ಉಳಿದ ನಾಲ್ಕು ಪದ್ದತಿಯಲ್ಲಿ ವಿವಾಹವಾದಾಗ ಕನ್ಯಾ ಗ್ರಹಣ ಅಂದರೆ ಕನ್ಯೆಯರನ್ನು ಸಂಪಾದಿಸುವುದು ಎಂದರ್ಥ. ಯಾವನು ಸಂಪಾದನೆಗೆ ಹೋಗುತ್ತಾನೋ ಅವನೇ ಅದಕ್ಕೆಯಜಮಾನ ಎಂಬುದು ಶಾಸ್ತ್ರದಲ್ಲಿ ಸ್ಪಷ್ಟವಾಗಿ ಹೇಳಲಿಲ್ಲ. ಆದರೆ ವಾಡಿಕೆಯಲ್ಲಿ ಕನ್ಯಾರ್ಥಿಯಾದವನೇ ಹೋಗಿ ತಂದದ್ದು ರೂಢಿ, ಕನ್ಯಾರ್ಥಿಯ ಪರವಾಗಿ ಮತ್ತೊಬ್ಬ ಹೋಗಬಾರದು ಎಂದಿಲ್ಲ.'

ಅದರೂ ಇಷ್ಟೆಲ್ಲ ವಿವಾದ ಚರ್ಚೆಗೆ ಕಾರಣವಾದ ಈ ಪ್ರಕರಣದಲ್ಲಿ ತನ್ನ ಕೊನೆಯ ನಿಲುವನ್ನು ಭೀಷ್ಮ ಸ್ಪಷ್ಟ ಪಡಿಸುತ್ತಾನೆ. ಏರಿರೆನ್ನಯ ರಥವನು ಎನ್ನುವಾಗ ಆಕೆ ರಥವೇರದೇ ಇರುತ್ತಿದ್ದರೆ, ಏರಿದರೂ ಸಾಲ್ವನಿಗೆ ದಂಡಿಸುವಾಗ ತನ್ನ ಪ್ರತಿಭಟನೆಯನ್ನು ಸಲ್ಲಿಸುತ್ತಿದ್ದರೆ ಅವಾಗಲಾದರೂ ತನ್ನ ಮನದ ಅಭಿಲಾಷೆಯನ್ನು ಹೇಳಿರುತ್ತಿದ್ದರೆ ಪ್ರಕರಣ ಇಷ್ಟು ಮುಂದಕ್ಕೆ ಹೋಗುತ್ತಿರಲಿಲ್ಲ. ಏನೇ ಆಗಲಿ ಗುರುಗಳೇ ನೀವು ಬಂದ ಮೇಲೆ ಇದು ಇತ್ಯರ್ಥವಾಗದೆ ಇರಬಾರದು. ನಿಮಗಾಗಿ ನಾನು ಯಾವುದೇ ತ್ಯಾಗಕ್ಕೂ ಸಿದ್ಧನಿದ್ದೇನೆ. ಹಾಗದರೆ ಗುರುವಾಕ್ಯ ಎನು?

"ಗುರುವಾಕ್ಯ ಲಂಘನ. ದೋಷವು" ಎಂದು ತಿಳಿದೇ ಗುರುವಾಕ್ಯಕ್ಕಾಗಿ ನಿರೀಕ್ಷಿಸುತ್ತಾನೆ.
ಗುರು ಪರಶುರಾಮರ ಅಪ್ಪಣೆ ಗುರುವಾಕ್ಯ ಒಂದೇ "ಗುರುವಿಗಾಗಿ ಬ್ರಹ್ಮ ಚರ್ಯವನ್ನು ತ್ಯಾಗಮಾಡಿ ಈಕೆಯನ್ನು ವರಿಸು. ಇದು ಗುರುವಾಕ್ಯವೂ ಹೌದು ಗುರುವಿನ ವಾಕ್ಯವೂ ಹೌದು. ಈ ಗುರುವಾಕ್ಯವನ್ನು ಉಲ್ಲಂಘಿಸಿದೆಯಂತಾದರೆ . " ಅದೋಷವೂ ಬರುತ್ತದೆ ಮಾತ್ರವಲ್ಲ ಈ ಸ್ತ್ರೀಯ ಕಣ್ಣಿರು ಕೋಡಿ ಕೋಡಿಯಾಗಿ ಹರಿದು ಅದು ನಿನ್ನದೆಲ್ಲವನ್ನು ನಾಶಮಾಡುತ್ತದೆ..."
ಭೀಷ್ಮ ಗುರುವಿನ ಕೊನೆಯ ಮಾತು ಕೇಳಿ ಚೋದ್ಯದಿಂದ ಪರೋಕ್ಷವಾಗಿ ಛೇಡಿಸುತ್ತಾನೆ ವ್ಯಂಗ್ಯವಾಗಿ ನುಡಿಯುತ್ತಾನೆ . " ಸ್ತ್ರೀಯ ಕಣ್ಣೀರು ಭೂಮಿಗೆ ಭಿದ್ದರೆ ಸರ್ವ ನಾಶವಾಗುತ್ತದೆ. ಹೆಂಗಸಿನ ಕೊರಳ ರಕ್ತ ಕೆಳಕ್ಕೆ ಬಿದ್ದರೆ ಲೋಕ ಶಾಂತಿಯಾಗುತ್ತದೆ" ವ್ಯಂಗ್ಯವಾಗಿ ಛೇಡಿಸುತ್ತಾನೆ. ತಂದೆಯ ಆಣತಿಯಂತೆ ತಾಯಿಯ ತಲೆ ಕಡಿದ ಕಥೆಯನ್ನು ಪರೋಕ್ಷವಾಗಿ ನೆನಪಿಸುತ್ತಾನೆ.

'ಬ್ರಹ್ಮ ಚರ್ಯವನ್ನು ತ್ಯಾಗ ಮಾಡಿ ಅಂಬೆಯನ್ನು ವರಿಸು' ಎಂಬ ಗುರು ವಚನ ಅದು ಕೇವಲ ವ್ಯಕ್ತಿನಿಷ್ಠವಾಗಿ ಬಂದಿದೆ. ಭೀಷ್ಮ ಗುರುವಚನವನ್ನು ವಿಶ್ಲೇಶಿಸುತ್ತಾ " ಗುರು ಅಪ್ಪಣೆ ಮಾಡಿದರೆ ಯಾವ ತ್ಯಾಗಕ್ಕೂ ಸಿದ್ದನಿದ್ದೇನೆ ಆದರೆ ಗುರುಗಳು ಬಯಸಿದ ತ್ಯಾಗವಾದರೂ ಏನು? ಬ್ರಹ್ಮ ಚರ್ಯ..., ಅಂಬೆಗೆ ನಾನು ತಾಳಿಕಟ್ಟಿದರೆ ಅಲ್ಲಿಗೆ ಪ್ರಕರಣ ಮುಗಿಯಿತು. ಇಲ್ಲಿ ಅಂಬೆ ಏನು ತಪ್ಪಲಿಲ್ಲ ಎಂಬ ಸಿದ್ದಾಂತವನ್ನು ಗುರುಗಳು ಪ್ರತಿಪಾದಿಸಿದಂತೆ ಅಲ್ಲವೇ? ಅಂಬೆ ಇಲ್ಲಿ ಅಪರಾಧಿನಿಯೇ ಅಲ್ಲ. ಆಗಲಿ ಆಕೆ ಅಪರಾಧಿನಿ ಆಗಬೇಕು ಎಂಬ ಆಕ್ಷೇಪ ನನಗಿಲ್ಲ. ಅದರೆ, ಇಲ್ಲಿ ಭೀಷ್ಮ ಅಪರಾಧಿ ಅಂತ ಸ್ಥಾಪಿಸಲ್ಪಡುತ್ತದೆ. ಯಾಕೆ ಭೀಷ್ಮ ತಪ್ಪು ಮಾಡಿದ ನಂತರ ಮದುವೆಯಾದ..ಹಾಗಾಗಿ, ನಾನು ಅಪರಾಧಿ ಅಂತ ಹೇಳಿದರೆ ನಾನು ಅಪರಾಧಿ ಅಲ್ಲ ಅಂತ ಸಾಧಿಸುವ ಸ್ವಾತಂತ್ರ್ಯ ನನಗುಂಟು. ಅಪಾರಧಿ ಅಲ್ಲದೇ ಇದ್ದವನಿಗೆ ತಾವು ವಿಧಿಸಿದ ಶಿಕ್ಷೆ ಏಷ್ಟು ದೊಡ್ಡದು? ತೆಂದೆಗೆ ಬೇಕಾಗಿ ಮರಣ ಪರ್ಯಂತರ ಬ್ರಹ್ಮ ಚರ್ಯವನ್ನು ಕೈಗೊಂಡವನು, ಸಿಂಹಾನಸವನ್ನು ನಾನು ಏರುವುದಿಲ್ಲ ಎಂದು ಪ್ರತಿಜ್ಞೆ ಮಾಡಿದವನು, ಇದರಿಂದಾಗಿಯೇ ನಾನು ಭೀಷ್ಮ ಅಂತ ದೇವತೆಯಿಂರಿಂದ ಕರೆಯಿಸಿಕೊಂಡವನು. ಗುರುಗಳು ಹೇಳಬಹುದು.. ಈ ಪ್ರಶಸ್ತಿ ಬೇಡ ಹಿಂತಿರುಗಿಸು...ಹೋಗಲಿ ತಂದೆ 'ಹೇಳಿದರು ಇಚ್ಛಾಮರಣಿಯಾಗು ಮಗನೆ' ಈ ವರವನ್ನು ನಾನು ಎಲ್ಲಿಗೆ ಹಿಂತಿರುಗಿಸಲಿ? ಬ್ರಹ್ಮ ಚರ್ಯ ತ್ಯಾಗ ಮಾಡಿದ್ದಕ್ಕೆ ಪ್ರತಿಫಲ ಪಡೆದಾಗಿದೆ. ಯಾರಿಂದ ಪಡೆದಿದ್ದೇನೋ ಅವರಿಗೆ ಇದನ್ನು ಹಿಂದಿರುಗಿಸುವುದು ಹೇಗೆ? ತಂದೆ ಈಗ ಬದುಕಿಲ್ಲ. ಆದರೂ ಇನ್ನೂ ಒಂದಿದೆ. ಈ ಗುರು ವಚನ ಅಂಬೆಗೆ ಅನುಗ್ರಹವೇ ಆಗುತ್ತದೆ. ಸಾಲ್ವನೇ ಇದ್ರೆ ಸಾಕು ಅಂತ ಹೇಳಿದವಳವಳು. ಈಗ ಭೀಷ್ಮನೇ ಅವಳಿಗೆ ಗಂಡ ಅಂತಾದರೆ ಅವಳಿಗೆ ಎಷ್ಟು ದೊಡ್ಡ ಲಾಭವನ್ನೇ ಒದಗಿಸಿಕೊಟ್ಟ ಹಾಗಿ ಆಗುತ್ತದೆ. ಹಾಗಾದರೆ ಅವಳಿಗೆ ಮಹಾಲಾಭ ಆದರೆ ಭೀಷ್ಮನಿಗೆ ? ಇರಲಿ ಈಗ ಗುರುವಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ದ ಅಂತ ಹೇಳಿಯಾಗಿದೆ. ಈಗೇನು ಬ್ರಹ್ಮ ಚರ್ಯ ಗುರುವಿಗಾಗಿ ತ್ಯಾಗಮಾಡಬೇಕೆ? ತಂದೆಗಾಗಿ ಶರೀರ ಸುಖವನ್ನು ತ್ಯಾಗ ಮಾಡಿಯಾಗಿದೆ ಅಂದರೆ ದಾಂಪತ್ಯವನ್ನು ತ್ಯಾಗ ಮಾಡಿದ್ದೇನೆ. ಅಧಿಕಾರವನ್ನೂ ತ್ಯಾಗ ಮಾಡಿದ್ದೇನೆ ಹಾಗೆ ತ್ಯಾಗ ಮಾಡಿ ಬ್ರಹ್ಮ ಚರ್ಯವನ್ನು ಪಡೆದುಕೊಂಡದ್ದು. ಈಗ ತ್ಯಾಗ ಮಾಡಿದ್ದನ್ನು ಪುನಃ ಪಡೆಯುವುದಕ್ಕೆ ಆಗುತ್ತದೆಯೇ? ತ್ಯಾಗ ಮಾಡಿದ್ದು ಈಗ ನನ್ನ ಸ್ವಾಧೀನ ಇದೇಯೇ? ನನ್ನ ಸ್ವಾಧೀನ ಇಲ್ಲದೆ ಇದ್ದದ್ದನ್ನು ಒಂದು ಸಲ ಬ್ರಹ್ಮಾರ್ಪಣ ಎಂದು ತುಲಸೀ ನಿರನ್ನು ಬಿಟ್ಟದ್ದನ್ನು ಪುನಃ ಹೊಂದುವುದು ಸಾಧ್ಯವೇ? ವಿಚಿತ್ರವೀರ್ಯನ ಅಧಿಕಾರ ಸ್ಥಿರವಾಗಿರುವುದಕ್ಕೆ ಅಧಿಕಾರವನ್ನೂ ದಾಂಪತ್ಯ ಜೀವನವನ್ನೂ ತ್ಯಾಗ ಮಾಡಿಯಾಗಿದೆ. ಈಗ ಗುರುವಿಗಾಗಿ ಏನನ್ನು ತ್ಯಾಗ ಮಾಡಬೇಕು?"

" ತಂದೆಗಾಗಿ ಬಿಟ್ಟ ಸುಖವನ್ನು ಗುರುವಿಗಾಗಿ ಹಿಡಕೊಂಡರೆ ಏನಾಗುತ್ತದೆ? ಗುರುವಿಗಾಗಿ ಬ್ರಹ್ಮ ಚರ್ಯ ಸ್ವೀಕರಿಸಿದ್ದಲ್ಲ. ತಂದೆ ಶಂತನುಗಾಗಿ ತಾಯಿ ಸತ್ಯವತಿ ದೇವಿಗಾಗಿ ಮತ್ತು ಸಹೋದರ ವಿಚಿತ್ರವೀರ್ಯನಿಗಾಗಿ. ಅದನ್ನು ಬಿಡಬೇಕಿದ್ದರೆ ಅವರೇ ಹೇಳಬೇಕು. ಈಗ ಬ್ರಹ್ಮ ಚರ್ಯ ಬಿಟ್ಟೆನೆಂದಾದರೆ ಮೊದಲೊಬ್ಬ ಹೇಳಿದ್ದಂತೆ ಸನ್ಯಾಸದಲ್ಲಿ ಮತ್ತೆ ಸನ್ಯಾಸ ಉಂಟಾ? ಸನ್ಯಾಸದಲ್ಲಿ ಪುನಃ ಸನ್ಯಾಸ ಎನುಂಟು ? ಸನ್ಯಾಸದಲ್ಲಿ ಬಿಡುವುದಕ್ಕೇನುಂಟು.. ಸನ್ಯಾಸವನ್ನೇ ಬಿಟ್ಟು ಪುನಃ ಗೃಹಸ್ಥಾಶ್ರಮ ಸ್ವೀಕರಿಸುವುದೇ? ಆದುದರಿಂದ ಇಲ್ಲಿ ನಿಮಗಾಗಿ ಏನು ಬಿಡಬೇಕು ಹೇಳಿ. ಇನ್ನು ಗುರುವಿಗಾಗಿ ಬಿಡುವುದಕ್ಕೆ ನನ್ನಲ್ಲಿ ಇರುವುದು ಒಂದೇ ಪ್ರಾಣ, ಬಿಟ್ಟರೆ ಅದನ್ನೆ ಬಿಟ್ಟೇನು. ಮತ್ತೊಮ್ಮೆ ಅಪ್ಪನೇ ಪ್ರತ್ಯಕ್ಷ ವಾಗಿ ಹೇಳಿದರೂ ಬಿಟ್ಟದ್ದು ಬಿಟ್ಟದ್ದೆ. ಇಲ್ಲಿ ಅಂಬೆಯೂ ತಪ್ಪು ಮಾಡಿದ್ದಾಳೆ ಭೀಷ್ಮನೂ ತಪ್ಪು ಮಾಡಿಯಾಗಿದೆ. ಹಾಗಿದ್ದಲ್ಲಿ ಭೀಷ್ಮನ ತಪ್ಪಿಗೆ ಶಿಕ್ಷೆಕೊಟ್ಟರೆ, ತಪ್ಪು ಮಾಡಿದ ಅಂಬೆಗೆ ವರಕೊಟ್ಟ ಹಾಗೆ ಅಲ್ಲವೇ? ಹಾಗಾಗಿ ಇಲ್ಲಿ ಪ್ರಾಣವನ್ನಾದರೂ ಬಿಟ್ಟೇನು. ಅದರೆ ಬ್ರಹ್ಮ ಚರ್ಯ ಬಿಡುವ ಪ್ರಶ್ನೆಯೇ ಇಲ್ಲ."

ಭೀಷ್ಮ ತನ್ನ ನಿಲುಮೆಯನ್ನು ಸಮರ್ಥಿಸುವಾಗ ಪರಶುರಾಮ ತನ್ನ ನಿಲುಮೆಯನ್ನು ಸ್ಪಷ್ಟ ಪಡಿಸುತ್ತಾರೆ. ತಂದೆಯ ಮಾತಿನಂತೆ ತಾಯಿಯ ಕೊರಳನ್ನರಿದು ಪುನಃ ತಾಯಿಯನ್ನು ಬದುಕಿಸಿದೆ. ಸಂಹಾರದಿಂದ ಸೃಷ್ಟಿ ಇಲ್ಲಿ ಆಯಿತು. ಒಂದು ವೇಳೆ ತಾನು ತಾಯಿಯ ತಲೆ ಕಡಿಯದೇ ಇರುತ್ತಿದ್ದರೆ, ತಾಯಿಯ ರಕ್ತ ಬೀಳದೇ ಇರುತ್ತಿದ್ದರೆ ಇಡೀ ಸಂಸಾರವೇ ಶಾಪಕ್ಕೆ ತುತ್ತಾಗಿ ನಾಶವಾಗುತ್ತಿತ್ತು. ಅದೇ ರೀತಿ ಭೀಷ್ಮನೂ ತ್ಯಾಗಮಾಡಿ ಒಂದು ಹೆಣ್ಣಿನ ಬದುಕನ್ನು ರಕ್ಷಿಸಬೇಕು.

ಗುರುಗಳು ಸಂಸಾರವನ್ನು ಉಳಿಸುವುದಕ್ಕಾಗಿ ತಾಯಿಯ ತಲೆಕಡಿದು ಪುನಃ ಬದುಕಿಸಿದಂತೆ ಭೀಷ್ಮನು ಅದೇ ರೀತಿ ತನ್ನ ಸಮರ್ಥನೆಯನ್ನು ಮತ್ತು ಬಲಪಡಿಸಿಕೊಳ್ಳುತ್ತಾನೆ. ತಾನಿಂದು ವಿವಾಹವಾದರೆ ತಾಯಿ ಸತ್ಯವತೀ ದೇವಿಯವರಿಗೂ ಸಿಂಹಾಸನದ ಹಕ್ಕಿಲ್ಲ, ವಿಚಿತ್ರ ವೀರ್ಯನಿಗೆ ಪಟ್ಟದ ಹಕ್ಕು ತಪ್ಪುತ್ತದೆ. ಅರ್ಥಾತ್ ಚಂದ್ರವಂಶ ವಿಚ್ಛೇದವಾಗುತ್ತದೆ. ತನ್ನ ಬ್ರಹ್ಮ ಚರ್ಯ ಎಲ್ಲಿವರೆಗೆ ಸ್ಥಿರವಾಗಿರುತ್ತದೋ ಅಲ್ಲಿವರೆಗೆ ಈ ಸತ್ಯವತೀ ಸಂತಾನಕ್ಕೆ ಪಟ್ಟ ಸ್ಥಿರವಾಗಿರುತ್ತದೆ. ತಮಗೆ ತಮ್ಮ ಮನೆತನ ಉಳಿಸುವುದಕ್ಕೆ ತಾಯಿಯ ತಲೆ ಕಡಿಯುವುದು ಧರ್ಮವಾದರೆ ತನ್ನ ಮನೆ ಉಳಿಸುವುದು ತನ್ನ ಕರ್ತವ್ಯವೂ ಆಗಿರುತ್ತದೆ. ಅಚ್ಚುಕಟ್ಟಾದ ಭೀಷ್ಮನ ಸಮರ್ಥನೆ.

ಹೀಗೆ ಉಪಸಂಹಾರವಾಗಿಬಿಡುತ್ತದೆ.
ಯಾವ ತರ್ಕದಲ್ಲೂ ಇತ್ಯರ್ಥಕ್ಕೆ ಬಾರದಾಗ ಕ್ಷತ್ರಿಯರಿಗಿರುವ ಮಾರ್ಗ ಒಂದೇ ಯತೋ ಧರ್ಮಃ ತತೋಜಯಃ ಹಾಗಾಗಿ ಹೋರಾಟ. ಇಲ್ಲಿ ಭೀಷ್ಮ ಇಛ್ಚಾಮರಣಿ ಗುರು ಪರಶುರಾಮರು ಚಿರಂಜೀವಿಗಳು. ಎರಡೂ ಕಡೆಗೆ ಪ್ರಾಣದ ಬಯಕೆ ಇಲ್ಲ. ಹಾಗಿದ್ದಲ್ಲಿ ಧರ್ಮ ಎಲ್ಲಿರುತ್ತದೋ ಅಲ್ಲಿ ಜಯವಿರುತ್ತದೆ. ಶಸ್ತ್ರಕ್ಕೆ ತೀರ್ಮಾನವನ್ನು ಬಿಟ್ಟಂತೆ ಗುರು ಶಿಷ್ಯರು ಹೋರಾಟಕ್ಕೆ ಸಿದ್ಧವಾಗುತ್ತಾರೆ. ಇಲ್ಲಿ ಗುರುಗಳು ಶಿಷ್ಯನ ಸತ್ವವನ್ನು ಪೂರ್ಣವಾಗಿ ಪರೀಕ್ಷಿಸಿದಂತಾಗುತ್ತದೆ. ಶಿಷ್ಯ ಎಷ್ಟು ಧರ್ಮಾತ್ಮನೆಂದು ಇಲ್ಲಿ ಗುರುಗಳು ಶಿಷ್ಯನ ಸತ್ವವನ್ನು ಪೂರ್ಣವಾಗಿ ಪರೀಕ್ಷಿಸಿದಂತಾಗುತ್ತದೆ. ಶಿಷ್ಯ ಪರೀಕ್ಷೆಗೆ ಸಿಧ್ಧನಾದಂತಾಗುತ್ತದೆ.ಹಾಗಾಗಿ ಭೀಷ್ಮ ಮಾಡಿದ ತಪ್ಪೀಗೂ ಒಂದು ಪರಿಮಾರ್ಜನೆಯ ದಾರಿ ಸಿಕ್ಕಹಾಗಾಗುತ್ತದೆ. ಶಿಷ್ಯನಿಗೆ ಗುರು ಸೋಲಬೇಕಾಗುತ್ತದೆ. ತನ್ಮೂಲಕ ಭೀಷ್ಮನ ವಿಜಯವೇ ಆಗಿಬಿಡುತ್ತದೆ.