"ಇದು ವಿಮರ್ಶೆಯಲ್ಲದ ಚಿಂತನ"

Tuesday, September 4, 2012

ಸ್ಥಿತ್ಯಂತರ ಭಾಗ - ೨



ಭಾಗ ೧ ರಿಂದ ಮುಂದುವರೆಸಿ
ಪದವಿಲ್ಲದೇ ಅರ್ಥ ಹೇಳಿದಂತೆ ಮಾತಿನ ಮಲ್ಲ...ಮಾತೇ ಇಲ್ಲ ಎಂಬಂತಾಗಿಬಿಟ್ಟಿತು. ಹಳೆಯ ಜೀವನ ಚರಿತ್ರೆ ಪುಟಗಳು  ಧೂಳು ಕೊಡವಿಕೊಂಡು ಅಕ್ಷರಗಳು ಸ್ಪುಟವಾಗಿ ಗೋಚರಿಸತೊಡಗಿದವು. ಹೌದು, ಸುಮಂಗಲ ಒಂದು ಕಾಲದ ರೋಮಾಂಚನ ತುಂಬುವ ಅಕ್ಷರಗಳು ಈಗ ಆ ರೋಮಾಂಚನವನ್ನು ನೆನಪಿಗೆ ತಂದವು. .ಸ್ನಾನ ಮಾಡಿ ಒದ್ದೆ ಕೂದಲಿಗೆ ಬಿಳಿ ಬೈರಾಸನ್ನು ಬಿಗಿಯಾಗಿ ಕಟ್ಟಿ ಶುಭ್ರ ಮುಖದಲ್ಲಿ ಪ್ರಸನ್ನ ಭಾವದಿಂದ ಅಚ್ಹರಿಯ ಕಣ್ಣುಗಳಿಂದ ತನ್ನನ್ನೇ ನೋಡುತ್ತಿದ್ದಾಳೆ..ಫಳ ಫಳ ಹೊಳೆಯುವ ಕಣ್ಣಿನ ಹೊಳಪು  ಇನ್ನೂ ಹಾಗೆ ಇದೇ ..ಹೊಳಪಲ್ಲೂ ಸೂರ್ಯಕಿರಣಗಳು ಮಿಂಚುತ್ತಿವೆಯೇ? ತೇವಗೊಂಡ ಕಣ್ಣುಗಳ ತೇವ ಇನ್ನೂ ಆರಿಲ್ಲವೇ? ಎಲ್ಲವೂ ಕ್ಷಣ ಚಿತ್ತದ ಭಾವಗಳು. ಆದರೆ  ಈಗ ಆ ಮನೋಭಾವದ ಕಿಂಚಿತ್ ಆದರೂ ಮುಖದಲ್ಲಿ ವ್ಯಕ್ತವಾದರೆ ಅಸಭ್ಯ ಎನಿಸಲಾರದೆ? ಯಾವ ವಿಪರೀತ  ಕಲ್ಪನೆಯೂ ಇಲ್ಲದ ಒಂದು ಸಾಮಾನ್ಯ ಭಾವ...ಸಂಸ್ಕೃತರಿಗೆ ಮಾತ್ರ ಸಾಧುವೇನೋ?  ಹಾಗಾಗಿ  ಪರಿಚಯದ ನಗೆ ನಕ್ಕು  ಪಡಸಾಲೆಯ ಕುರ್ಚಿಯಲ್ಲಿ ಕುಳತುಕೊಳ್ಳಲು ಅಣಿಯಾದಾಗ ಇಲ್ಲಿ ಬೇಡ ಒಳಗೆ ಬನ್ನಿ ಎಂದು ಅತ್ಮೀಯ ಭಾವದಿಂದ ಒಳಗೆ ಕರೆದ ಸುಮಂಗಲಳನ್ನು ಹಿಂಬಾಲಿಸಿ  ಮನೆಯ ಒಳಗೆ ನಡೆದರು. ಅದು ಹೌದು ಭಾವಗಳು ಸಂಸ್ಕಾರದ ಅಚ್ಚಿನಲ್ಲಿ ಎರಕ ಹೊಯ್ಯಲ್ಪಡುತ್ತವೆ. ಅಸಹಜವೇ ಸಹಜವಾಗಿರುವ ಸಂಸ್ಕಾರವೇ ಇದಕ್ಕೆ ನಿದರ್ಶನ. ಬಹಿರಂಗವಾಗುವ ಭಾವ ಹೇಗೆ ಸಂಸ್ಕಾರವನ್ನು ಅವಲಂಭಿಸದೇಯೋ ಅಂತರಂಗದ ಭಾವವೂ ಅದನ್ನೆ ಅವಲಂಬಿಸಿದೆ. ಕೆಲವೆಲ್ಲ ಕಲ್ಪಿಸುವುದೂ ಅಪರಾಧ ಎಂದು ಅನಿಸುತ್ತದೆ.  ತಾಯಿಯಲ್ಲಿ ಕಲ್ಪಿಸಲಾಗದೇ ಇದ್ದದ್ದನ್ನು ಸಹಧರ್ಮಿಣಿಯಲ್ಲಿ ಕಲ್ಪಿಸಿದ ಹಾಗೆ. ಮನಸ್ಸನ್ನು ರೂಪಿಸುವ ಸಂಸ್ಕಾರದ ನಿಯಂತ್ರಣ ವಿಚಿತ್ರ ಎನಿಸಲ್ಪಡುತ್ತದೆ. ನಿತ್ಯವೂ ರಾತ್ರಿಯಾಗುತ್ತಿದ್ದಂತೆ ನಶೆ ಏರಿಸುತ್ತಿದ್ದ ತಮ್ಮ ಸಹವರ್ತಿಗೆ ಒಂದು ಸಲ ಉಪದೇಶ ಮಾಡಿ ಹೇಳಿದ್ದು ವಿಚಿತ್ರ ಆದರೂ ಪರಿಣಾಮಕಾರಿಯಾಗಿತ್ತು. ಸಾಯಂಕಾಲದ ಹೊತ್ತು ಸ್ನಾನ ಮಾಡಿ ಶುಚಿಯಾಗಿ .ಬಿಳಿ ಪಂಚೆಯನ್ನು ಧರಿಸು.... ಸ್ನಾನ ಮಾಡಿ ಶುಚಿಯಾದ ದೇಹ ಮನಸ್ಸಿಗೆ ಮುದವನ್ನು ನೀಡಿದರೆ ಆ ಮುದವನ್ನು ಬಿಳಿ ವಸ್ತ್ರ ಕಾಪಿಡುತ್ತದೆ. ಮಾತ್ರವಲ್ಲ ಬಿಳಿ ವಸ್ತ್ರ ಉಟ್ಟು ಹೆಂಡದಂಗಡಿ ಹೊಕ್ಕುವುದು ಅಸಹಜವೆನ್ನಿಸುತ್ತದೆ. ಅಥವ ಶುಭ್ರವಾದ ನಂತರ ತೂರಾಡುವುದು ಒಂದು ರೀತಿಯಲ್ಲಿ ಕಿರಿ ಕಿರಿಯೇ ಅನ್ನಿಸಿಬಿಡುತ್ತದೆ. ಶುಭ್ರವಾಗಿ ಆದ ಮುದವಾದ ಅನುಭವ ಮತ್ತೆ ಬಿಳಿವಸ್ತ್ರ ಅದರಿಂದ ಹೊರ ಬಾರದ ಇಕ್ಕಟ್ಟಿಗೆ ತಂದು ಸಿಲುಕಿಸುತ್ತದೆ. ಈ ದ್ವಂದ್ವದಲ್ಲಿ ಆ ಸಮಯ ಕಳೆಯುತ್ತದೆ... ಮತ್ತೆ ಬೇರೆ ಇನ್ನೆನಾಗಬೇಕು ಸಂಸ್ಕಾರ ರೂಪುಗೊಳ್ಳುವ ಬಗೆ ಅದು.
          ಛೇ ಘಳಿಗೆಯೊಳಗೆ ಮನಸ್ಸು ಯಾವೆಲ್ಲ ಯೋಚನೆ ಮಾಡಿತಲ್ಲ. ಅಷ್ಟರಲ್ಲಾಗಲೇ ಒಳಗೆ ಬಂದಾಗಿತ್ತು. ಬಹುಷಃ  ತೀರ ಆತ್ಮೀಯ ಬಂಧುಗಳಿಗೆ ಮಾತ್ರ ಅಂತರಂಗದ ಗೃಹದ ಒಳಗೆ ಪ್ರವೇಶ.  ಈಚಣ್ಣ ಬಂಧು ಎಂಬ ಅಂಗೀಕಾರವೇ? ಈಚಣ್ಣನಿಗೆ ಹಾಗೆ ಅಂದುಕೊಳ್ಳುವುದಕ್ಕೆ ಕಾರಣವಿತ್ತಲ್ಲ?

          ಆಗಿನ್ನು ಹದಿ ಹರಯವನ್ನು ಮೀರಿದ ವಯಸ್ಸು. ಶಾಲೆಯಲ್ಲಿದ್ದಾಗಲೇ ಸಾಕಷ್ಟು ಯಕ್ಷಗಾನ ತರಬೇತಿಯಾಗಿದ್ದ ತಾನು ಬಾಲಕರಲ್ಲಾಗಲೇ ಪ್ರಸಿದ್ದ ಕಲಾವಿದನಂತಾಗಿದ್ದದ್ದು. ಶಾಲೆಯ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತನ್ನ ಅಂಗ ಪ್ರಾಧಾನ್ಯತೆಯನ್ನು ಪಡೆದದ್ದು.... ನೆರೆಕೆರೆ, ನಿತ್ಯ ಪರಿಚಿತರಂತಹ ಮನೆಯಿಂದ ತಾನು ಮತ್ತು ಸುಮಂಗಲ ಒಂದೇ ಹಾದಿಯಲ್ಲಿ ಶಾಲೆಯ ಹಾದಿಯಲ್ಲಿ ಪಯಣಿಗರಾಗಿ ಅದು ಹೇಗೋ ಆತ್ಮೀಯತೆ,  ಸಲುಗೆ ಬೆಳೆದದ್ದು. ಅಷ್ಟಿಷ್ಟು ಯಕ್ಷಗಾನದ ಅಭಿರುಚಿ ಆಕೆಯಲ್ಲಿ ತರಿಸಿ ಆಕೆಗೆ ಪ್ರಾಥಮಿಕ ಗುರುವಾದದ್ದು, ಅದು ಬಾಲ್ಯದ ದಿನಗಳಾದರೂ ಅದಕ್ಕೂ ಒಂದು ಅರ್ಥವಿದೆ ಎಂದು ಹಲವು ಸಲ ಅನ್ನಿಸಿದ್ದಿದೆ. ಅವಾಗ ಅಲ್ಲದಿದ್ದರೂ ಹದಿ ಹರಯ ದಾಟಿದ ನಂತರ ವಯೋಸಹಜವಾಗಿ ಆತ್ಮೀಯತೆ ಸಲುಗೆಯ ರೂಪವೇ ಬದಲಾಗಿ ಹೋದದ್ದು ಎಲ್ಲ ನಿಮಿತ್ತದಂತೆ ಆಗ ಅನಿಸಿತ್ತು.

          ಹೈಸ್ಕೂಲು ಮುಗಿಸಿ ಆಕೆ ಮುಂದಿನ ಶಿಕ್ಷಣಕ್ಕೆ ಇನ್ನೂ ಪ್ರೌಢೆಯಾಗಿ ಕಾಲೇಜು ಹೋಗ ತೊಡಗಿದರೂ ತಾನು ಹೈಸ್ಕೂಲು ಫೇಲ್ ಆಗಿ.. ಮುಂದೆ ಯಕ್ಷಗಾನವನ್ನೇ ಗಟ್ಟಿ ಮಾಡಿಕೊಂಡದ್ದು ಬಾಲ್ಯದ ಕನಸುಗಳೆಲ್ಲ ಯಕ್ಷಗಾನದ ವೇಷಗಳಂತೆ ಭಾಸವಾಗತೊಡಗಿತು. ಹೌದಲ್ಲ? ತಮ್ಮ ನಡುವಿನ ಪ್ರೀತಿಯಲ್ಲಿ ಅರ್ಥವಿತ್ತು.. ಆದರೆ ತನ್ನ ಜೇಬು ಎಂದೂ ಅರ್ಥವಿಲ್ಲದೇ ಜೀವನ ಅರ್ಥವನ್ನು ಮನವರಿಕೆ ಮಾಡಿಸುತ್ತಿತ್ತು. ಯಕ್ಷಗಾನದಲ್ಲಿ ಸಹಜವಾಗಿ ಒಂದೊಂದಾಗಿ ಸಿದ್ಧಿ ಸಾಧನೆಗಳು ರಂಗಸ್ಥಳದ ಒಡ್ಡೋಲಗದಂತೆ ಕಳೆ ಕಟ್ಟತೊಡಗಿದರೂ. ಭಲ್ಲಿರೇನಯ್ಯಾ ಎಂದು ತೊಡಗಿಸುವ ಮಾತು ನಿಜ ಜೀವನದಲ್ಲಿ ಅರ್ಥವನ್ನೇ ತರಲಿಲ್ಲ. ಯಕ್ಷಗಾನದಲ್ಲೂ ಹಾಗೆ ಕೆಲವು ಪದಗಳಿಗೆ ಅರ್ಥವೇ ಇಲ್ಲ!! ಅರ್ಥ ಎಂದರೆ ಅಲ್ಲಿ ಅರ್ಥ ಹೇಳುವುದಕ್ಕಿಲ್ಲ. ಸಂದರ್ಭೋತವಾಗಿ ಪದವನ್ನು  ಮಾತ್ರ ಭಾಗವತರು ಹಾಡಿ ಮುಂದಿನ ಹಂತಕ್ಕೆ ದಾಟಿಸುತ್ತಾರೆ.  ಒಂದು ವೇಳೆ ಅರ್ಥವನ್ನು ಹೇಳಿದರೂ ಅದು ಅಭಾಸವಾಗಿಬಿಡುತ್ತದೆ. ಅರ್ಥವೇ ಅರ್ಥವನ್ನು ಕಳೆದುಕೊಳ್ಳುತ್ತದಲ್ಲ ಎಂದು ಸಲ ವಿಡಂಬನೆಯಿಂದ ಸಂವಾದಿಸಿದ್ದು ಉಂಟು. ಆದರೆ ಅರ್ಥವಿಲ್ಲದ ಪದಗಳು ಅರ್ಥವಿಲ್ಲದೇ ಸಂದರ್ಭಕ್ಕೆ ಮತ್ತು ಕಥೆಗೆ ಅರ್ಥವನ್ನು ಕೊಡುತ್ತಿತ್ತು. ಅಲ್ಲಿ ಶೂನ್ಯಾರ್ಥವಾಗಿ ಅರ್ಥವನ್ನು ಕೊಡುತ್ತಿದ್ದದ್ದು ನಿಜ ಜೀವನದಲ್ಲಿ ಮಾತ್ರ ವಿಪರ್ಯಾಸವನ್ನೇ ಬಿಂಬಿಸತೊಡಗಿತ್ತು. ಕ್   ಕೈಯಲ್ಲಿ ಅರ್ಥವಿಲ್ಲದಿದ್ದರೂ ಅರ್ಥಪೂರ್ಣ ಪ್ರೀತಿಗೆ ಕೊರತೆ ಇರಲಿಲ್ಲ. ಆದರೂ ಇಲ್ಲಿ ಇದ್ದ ಶೂನ್ಯಾರ್ಥ ಮತ್ತೂ ಶೂನ್ಯತೆಯನ್ನೇ ಬಿಂಬಿಸುವುದು ವಿಪರ್ಯಾಸವಲ್ಲವೇ.?
  ಬಹುಶಃ ಪ್ರೀತಿ ಗಾಢವಾಗುವುದು ಅಂತಹ ಸಂದಿಗ್ಧಾವಸ್ಥೆಯಲ್ಲೇ ಇರಬೇಕು. ಅನನುಕೂಲ,  ಪ್ರತಿಕೂಲ , ಪ್ರತಿರೋಧ ಇದ್ದಾಗಲೇ ನಮ್ಮೊಳಗಿನ ಕಥಾ ನಾಯಕತ್ವ ಆವೇಶಗೊಳ್ಳುವುದು. ಪ್ರತಿಯೊಬ್ಬರೂ ಅವರವರ ಬದುಕಿನ ಕಥೆಗೆ ಅವರೇ ನಾಯಕನೋ ನಾಯಕಿಯೋ ಆಗಿರುತ್ತಾರಲ್ಲ?  ಅತ್ಯಂತ ಉತ್ಕಟವಾದ ಪ್ರೇಮಾಚರಣೆಯಲ್ಲಿ ನಾವುಗಳು ಒಂದಾಗಿದ್ದೇವೆ ಭ್ರಮೆ ಆವರಿಸಿಕೊಳ್ಳುವುದು. ಎಲ್ಲ ವಯೋಸಹಜವಾದ ಮೌಢ್ಯ ಎಂದು ಈಗ, ಇಷ್ಟು ದೂರ ಸಾಗಿ ಬಂದ ಮೇಲೆ ಅನ್ನಿಸುವುದಿದೆ. ಹಸಿವೆಯಲ್ಲೋ, ಹೊಟ್ಟೆತುಂಬಿಯೋ ದುಃಖದಲ್ಲೋ ಸಂತಸದಲ್ಲೋ ಅಂತು ದಿನದ ಪ್ರತಿ ಘಳಿಗೆಯೂ ಸ್ವಲ್ಪ ಸ್ವಲ್ಪವಾಗಿ ಕಳೆದು ಹೋಗುತ್ತಿರುವಾಗ ಇರುವಾಗ ಆನುಭವಿಸುವ ವರ್ತಮಾನದ ಸಮಯದ ಮೌಲ್ಯ ಅರಿವಾಗುವುದಿಲ್ಲ. ಇದ್ದ ಸ್ಥಿತಿಯೇ ಸ್ಥಾಯೀಭಾವವಾಗಿಬಿಡುತ್ತದೆ.

          ಹೌದಲ್ಲ..?  ತಾನು ಚಿಂತಿಸುವಾಗಲೂ ಯಕ್ಷಗಾನದ ಪಾತ್ರವಾಗುತ್ತಿದೇನೆಯೇ? ಮನದೊಳಗೇ ನಕ್ಕರು ಈಚಣ್ಣ.   ಆದರೆ ತನ್ನ ಪ್ರೇಮ ಸಂಪೂರ್ಣವಾಗಿ ಅರ್ಥವನ್ನು ಕಳೆದುಕೊಂಡದ್ದು ತಾನೊಬ್ಬ ಯಕ್ಷಗಾನ ಕಲಾವಿದನಾಗಿ ರೂಪುಗೊಂಡ ಕಾರಣ, ಆಟದವನಿಗೆ ಕೂಸನ್ನು ಕೊಡಲಾರೆ ಎಂದು ಸುಮಂಗಲಳ ಅಪ್ಪ ಛಲತೊಟ್ಟಾಗ ಬಹಳಷ್ಟು ಭ್ರಮನಿರಸನ ಗೊಂಡಿದ್ದರು. ಆವರೆಗೆ ತಪಸ್ಸು ಎಂದು ತಿಳಿದ ಯಕ್ಷಗಾನದ ಹಾದಿಯೂ ವೈಫಲ್ಯದ ದರ್ಶನವನ್ನೇ ಮಾಡಿಸಿತಲ್ಲ? ಯಕ್ಷಗಾನದ ವೇಷ ಭೂಷಣಗಳು ಕಳಚಿ ಬಿಚ್ಚಿಟ್ಟರು ಮತ್ತೂ ಅದು ಮತ್ತೊಂದು ರೂಪದಲ್ಲಿ  ಮೈಗೆ ಅಂಟಿಕೊಂಡು ಅಣಕಿಸಿದಂತೆ ಭಾಸವಾಗಿತ್ತು. ರಂಗಸ್ಥಳದಿಂದ ದೂರವಾದಾಗ ಬಣ್ಣ ಕಳೆದುಕೊಂಡ ವೇಷದಂತೆ, ವಜ್ರ ವೈಢೂರ್ಯ ಅಭರಣಗಳು ಹೊಳಪನ್ನು ಕಳೆದುಕೊಂಡಂತೆ ಬದುಕೂ ವೇಷ ಕಳಚಿ ನಿಂತು ಬಿಟ್ಟಿತಲ್ಲ. ಸಂಸಾರಿಕ ಬದುಕಿಗೆ ಆಟದವನು ಸಲ್ಲುವುದಿಲ್ಲವೇ?  ವೇಷವೇ ಇಲ್ಲ ಪಾತ್ರೆವೇ ಇಲ್ಲ. ಬರೀ ಆಟದ ನೋಟಿಸಿನಲ್ಲಿ ಮುದ್ರಿಸಿದ ಹೆಸರು ಮಾತ್ರವೇ ಆಗಿಹೋಯಿತು. ಸುಮಂಗಲ ಅನ್ಯರಿಗೆ ಮಂಗಲವಾಗಿ ಪರಿಣಮಿಸಿ ಅರ್ಥಹೀನತೆಯೇ ಬದುಕಿನ ಅರ್ಥ ಎಂದು ತೋರಿಕೊಟ್ಟ ಮೇಲೆ  ವಿಶ್ವಾಮಿತ್ರ ತಪಸ್ಸಿಗೆ ಕುಳಿತಂತೆ ಈಚಣ್ಣ ಸ್ತಿತ ಪ್ರಜ್ಞರಾಗಿರಾಗಿಬಿಟ್ಟರು. 
 (ಕ್ಷಮಿಸಿ... ಇನ್ನೂ ಇದೆ)

Saturday, September 1, 2012

ಸ್ಥಿತ್ಯಂತರ ಒಂದು ಕಧೆ

ಭಾಗ-೧
ಒಂದು ಕಥೆ ಹೇಳುವುದಕ್ಕೆ ಹೊರಟಾಗ ಮನಸ್ಸಿನಲ್ಲಿ ಗಂಟು ಹಾಕಿ ಹುದುಗಿಸಿಟ್ಟುದನ್ನು ಹೊರತಂದು ಬಿಚ್ಚಿದಂತೆ. ದೂರದಿಂದ ಹೊರೆಯೊಂದನ್ನು ಹೊತ್ತು ತಂದು ಇಳಿಸಿ ಬಿಚ್ಚಿ ಒಳಗಿನ ಕೌತುಕದ ವಸ್ತುವನ್ನು ತೋರಿಸಿದಂತೆ. ಒಂದು ನಿರಾಳ ಭಾವ. ಆ ವರೆಗಿನ ಆಯಾಸವೆಲ್ಲ ಪರಿಹಾರವಾದಂತೆ. ಕಥೆ ಅಂದರೆ ಅದನ್ನು ಸಂದರ್ಭಾನುಸಾರ ಹಲವು ರೀತಿಯಲ್ಲಿ ಉಪಯೋಗಿಸುವುದುಂಟು. ಸೂಚ್ಯಾರ್ಥವನ್ನು ಹೇಳುವುದಕ್ಕೆ. ಹೇಳಬೇಕಾದುದನ್ನು ನೇರವಾಗಿ ಹೇಳಲು ಅಸಾಧ್ಯಾವಾದಗ ಕಥಾ ಮೂಲಕ ಪರೋಕ್ಷವಾಗಿ ಹೇಳಿ ಉದ್ದೇಶ ಈಡೇರಿಸಿಕೊಳ್ಳುವುದಕ್ಕೆ,   ಕೆಲವೊಂದು ಸಲ ಮುಖಾಮುಖಿಯಾಗಿ ಹೇಳಲು ಮುಜುಗರ ಪಡುವಾಗ ಕಥೆಯನ್ನು ಉಪಯೋಗಿಸುವುದುಂಟು. ದೂರವಾಣಿ ಎಂಬ ಸಂಪರ್ಕಸಾಧನ ಬಂದಂತಹ ಸಮಯದಲ್ಲಿ ನಮ್ಮಲ್ಲಿ ಒಬ್ಬರು ಹೇಳುತ್ತಿದ್ದರು, “ಮುಖಾಮುಖಿಯಾಗಿ ಬೈದು ಹೇಳಲಿಕ್ಕೆ ಅಸಾಧ್ಯವಾದದನ್ನು ಸಾಧ್ಯ ಮಾಡುವಂತಹ ಸಂಪರ್ಕ ಸಾಧನ ಈ ದೂರವಾಣಿ ದೂರದಿಂದಲೆ ಬೈದು ಬಿಡಬಹುದು.”  ನಮ್ಮಲ್ಲಿ ಒಬ್ಬರು ಇದ್ದರು ಎದುರಿಗೆ ಕಂಡರೆ ಬಹಳ ಸೌಜನ್ಯದ  ಸಾಧು ಮನುಷ್ಯ. ಪರರು ಹೇಳಬೇಕಾದುದೆಲ್ಲವನ್ನು ಹೇಳಿದರೂ ತಾನು ಹೇಳಬೇಕಾದುದನ್ನು ಹೇಳಲು ಸಂಕೋಚ ಪಡುವ ಪಾಪದ ಮನುಷ್ಯ. ಆದರೆ ಈ ಫೋನು ಮಾಡುವಾಗ ಅದೆಲ್ಲಿ ಇರುತ್ತದೋ,  ಮುಖನೋಡಿ ಬೈಯಲಾಗದೇ ಇದ್ದುದನ್ನೆಲ್ಲ ಕಕ್ಕಿ ಮನಸ್ಸು ಹಗುರ ಮಾಡಿಕೊಳ್ಳುವ ಅವರ ಸ್ವಭಾವ. ಇಂದು ಫೋನಿನಲ್ಲಿ ವಾಚಾಮಗೋಚರವಾಗಿ ಬೈದು ಮರುದಿನ ಸಿಕ್ಕಿದಾಗ ಅದೇ ಮಾಮುಲೀ ಸಾಧು ಮನುಷ್ಯನಂತೆ ಮಾತನಾಡವುದನ್ನು ಕಂಡಾಗ ಅನ್ನಿಸುತ್ತದೆ, ಈ ಫೋನ್ ಎಂಬ ಸಾಧನ ಬಾರದಿರುತ್ತಿದ್ದರೆ ಈ ಮನುಷ್ಯ ಅತ್ಯಂತ ಸಂಭಾವಿತ ವ್ಯಕ್ತಿಯಾಗಿಬಿಡುತ್ತಿದ್ದರಲ್ಲ. ಆದರೆ ಈ ಕಥೆಗೂ ಈ ಯಾವುದೇ ವಿಷಯಗಳಿಗೂ ಪರಸ್ಪರ ಸಂಬಂಧವೇ ಇಲ್ಲ. ಇದು ಕೇವಲ ಕಥೆ. ಕೆಡುಕಿಲ್ಲದ ವೈಷಮ್ಯವಿಲ್ಲದ ಲೋಕ ಕಲ್ಪನೆಗೆ ಮಾತ್ರ ಸರಿ. ವಾಸ್ತವದಲ್ಲಿ ಅದು ಅಸಂಭವ.ಅವಾಸ್ತವಿಕ ಎನ್ನಬಹುದು. ಆದರೆ ನಮ್ಮ ಕಲ್ಪನೆಯ ಕಥೆಯಲ್ಲಿ ವಾಸ್ತವವಲ್ಲವೇ? ಹಾಗಾಗಿ ಆ ಪ್ರಯತ್ನ ಇಲ್ಲೀಯೂ ಬರಿಸುವ ಯತ್ನ. ವೈಷಮ್ಯವಿಲ್ಲದ ಕೆಟ್ಟವರಿಲ್ಲದ ಕೆಟ್ಟ ಯೋಚನೆಗಳಿಲ್ಲದ ಲೋಕ. ಪ್ರಾರಭ್ದವಶಾತ್ ದೈವ ಚಿತ್ತ ಮಾತ್ರ ಕೆಡುಕಾಗಬಹುದು, ಮನುಷ್ಯಚಿತ್ತ ಕೆಡುಕಾಗಬಾರದು. ಕೆಟ್ಟ ದೇಹ...ಅಂಗವಿಹೀನ ದೇಹ ಅದು ದೈವ ಚಿತ್ತ. ಆದರೆ ಮನಸ್ಸಿನ ಯೋಚನೆಗಳು ಮನುಷ್ಯ ಚಿತ್ತ.

ಈಚಣ್ಣ ತನ್ನ ಪಾತ್ರ ಮುಗಿಸಿ, ಚೌಕಿಯ ಒಂದು ಬದಿಯಲ್ಲಿ ಕಳಚಿಟ್ಟ ವೇಷದ ಒಂದೊಂದೇ ವಸ್ತುಗಳನ್ನು ಜೋಡಿಸಿಡುತ್ತಿದ್ದರು. ಇದೇನು ಕಥೆಯ ಆರಂಭದಲ್ಲೇ ಪಾತ್ರ ಮುಗಿಸಿ ವೇಷ ಕಳಚಿತೇ? ಹೌದು, ಯಕ್ಷಗಾನ ಕಲಾವಿದರ ನಿಜ ಕಥೆ ಆರಂಭವಾಗುವುದು ವೇಷ ಕಳಚಿದ ಮೇಲೆಯೆ. ರಂಗದ ಮೇಲಿನ ಪಾತ್ರಗಳು ಹಲವು ಸಲ ಹೃದಯದ ದ್ವನಿಯಾಗುತ್ತವೆಯೋ ಹೊರತು ಅದು ವಾಸ್ತವವಾಗುವುದಿಲ್ಲ. ಕನ್ನಡಿಯ ಒಳಗಿನ ವಸ್ತು ಅದೇನಿದ್ದರೂ ಮಿಥ್ಯ.  ಕೈಗೆ ಸಿಗದು. ಕನ್ನಡಿಯ ಒಳಗಿನ ವಸ್ತು ಸಿಗಬೇಕಾದರೆ ಅದಕ್ಕೆ ಅಭಿಮುಖವಾಗಿ ಪ್ರಯತ್ನಿಸಿದರೆ ಕೆಲವೊಮ್ಮೆ ಕೈಗೆ ಸಿಗಬಹುದೇನೋ. ಒಂದು ರೀತಿಯ ವಿರೋಧಾಭಾಸದ ಪಯಣವಾಗಬೇಕು.  ಕಲಾವಿದರ ಬದುಕು ಹಾಗೆ. ವಿರೋಧಾಭಾಸವೇ? ಅಲ್ಲಿ ತೆರೆದಾಗ ಇಲ್ಲಿ ಮುಚ್ಚಿತು. ಇಲ್ಲಿ ತೆರೆದಾಗ ಅಲ್ಲಿ ಮುಚ್ಚಿತು.  ಅಪರೂಪಕ್ಕೆ ಇದಕ್ಕೆ ತದ್ವಿರುದ್ದ ಎನಿಸಿದರು ಅದು ಸಹಜವಾಗುವುದಿಲ್ಲ. ಅದುವೇ ಕಲಾಜೀವನ.
ಎಲ್ಲರಂತೆ ಕಲಾವಿದರಾದ ಈಚಣ್ಣನದ್ದು ಇಲ್ಲಿ ಮುಚ್ಚಿತು ಎಂದು ಸುಮ್ಮನಿರುವ ಹಾಗಿಲ್ಲ. ಇದು ಮುಚ್ಚಿದ ಮೇಲೆ ತೆರೆದುಕೊಂಡ ಜಗತ್ತಿನಲ್ಲಿ ನಿಜ ಪಾತ್ರವನ್ನು ಅಭಿನಯಿಸಬೇಕು. ಇದು ಎಲ್ಲರಿಗೂ ಅನಿವಾರ್ಯ. ಆದರೂ ಕಥೆ, ಕಥೆಯಾಗಬೇಕಲ್ಲ? ಬಣ್ನ ಎಲ್ಲ ತೆಗೆದು ಹಾಗಿದ ಚಲ್ಲಣ ಕಳಚಿ ಪಂಚೆ ಅಂಗಿ ತೊಟ್ಟು ತಾಂಬೂಲ ಹಾಕಿದರೆಂದರೆ ಯಕ್ಷಗಾನದ ಪಾತ್ರ ಮುಗಿಯಿತು ಮತ್ತೊಂದು ಆರಂಭವಾಯಿತು ಎಂದೇ ಅರ್ಥ. ಒಂದರ ಅಂತ್ಯದಲ್ಲಿ ಇನ್ನೊಂದರ ಆರಂಭ,  ಬಹುಷಃ ಇಲ್ಲಿಗೆ ಹೆಚ್ಚು ಸೂಕ್ತವೋ ಎನೋ?
ತಾಂಬೂಲ ಜಗಿದು ಜಗಿದು ಉಗುಳು ರಸ ಬಾಯಿತುಂಬಿ ಮೈ ಮನ ಚುರುಕಾದಂತೆ ಅನಿಸಿದಾಗ, ಚುರುಕಾಗುವ ಅವಶ್ಯಕತೆಯೇ ಇಲ್ಲ. ಯಾಕೆಂದರೆ ಚಟುವಟಿಕೆಗೆ ವಿಶ್ರಾಂತಿಯೇ ಇಲ್ಲದ ಮೇಲೆ ಚುರುಕಾಗುವುದೇನು ಬಂತು. ಅಥವಾ ಎಲೆ ಅಡಿಕೆ ಹಾಕಿದರೆ ಚುರುಕಾಗುತ್ತದೆ ಎಂದಿಲ್ಲವಲ್ಲ. ಅವರರವ ಭಾವ ಅಷ್ಟೇ. ಬಾಯಿಒಂದು ಬದಿಯಲ್ಲಿ ತಾಂಬೂಲವನ್ನು ಸರಿಸಿ ಚೌಕಿಯಿಂದ ಒಂದಷ್ಟು ದೂರ ಹೋಗಿ ಬಾಯಿಯಲ್ಲೇ ಹಿಂಡಿದ ರಸವನ್ನು ಪಿಚಕ್ಕನೆ ಉಗಿದು ತಿರುಗಿದಾಗ ದೂರದಲ್ಲೇ ಬರುತ್ತಿರುವ ನಾರು ಭಟ್ಟರನ್ನು ಕಂಡು ಒಂದು ನಿಟ್ಟುಸಿರು ಬಿಟ್ಟರು. ನಾರು ಭಟ್ಟರ ಕುರಿತು ಹೇಳುವುದಿದ್ದರೆ ಅವರ ಪೂರ್ಣ ಹೆಸರು ಸಂತೇ ಮನೆ ನಾರಾಯಣ ಭಟ್ಟ ಅಂತ. ಅದನ್ನೇ ನಾರು ಅಂತ ಸಣ್ಣದು ಮಾಡುವುದಕ್ಕೂ ಒಂದು ಕಾರಣವಿದೆ. ಅವರ ಸ್ವಭಾವ ನಾರಿನಂತೆ ಅಂತ ಬಲ್ಲವರು ಹೇಳುವುದಿದ್ದರೂ ಆ ಸ್ವಭಾವಕ್ಕೆ ಸಹಜ ಎನ್ನುವಂತೆ ಅವರ ಒಂದೊಂದೇ ಕೆಲಸಗಳು. ಸಂತೇ ಮನೆ ಅವರ ಹಿರಿಯರಿಂದ ಬಂದ ಮನೆ. ಸ್ವಲ್ಪ ತೋಟ ಗುಡ್ಡೆ ಹೀಗೆ ಹಳ್ಳಿ ಜಮೀನು. ಆ ಊರಿಗೆ ಮೊತ್ತ ಮೊದಲಾಗಿ ರಬ್ಬರ್ ತಂದು ಅದರ ಕೃಷಿಮಾಡಿದವರು ಈ ನಾರು ಭಟ್ಟರು. ರಬ್ಬರಿನಂತಿರುವ ಅವರ  ಸ್ವಭಾವಕ್ಕೆ ಹೊಂದಿಕೊಂಡ ರಬ್ಬರು ಕೃಷಿ ಅವರಿಗೆ ಈ ಹೆಸರನ್ನು ತಂದಿದೆ ಅಂತ ಕೆಲವರ ಅಂಬೋಣ. ಕೆಲವು ವರ್ಷ ಮೊದಲು ಇದ್ದ ತೋಟ ಮನೆ ಮಾರಿ ಮಕ್ಕಳ ಸಂಪಾದನೆಯಲ್ಲಿ ಅಲ್ಲಿ ಇಲ್ಲಿ ಅಂತ ಜೀವನ ಸಾಗಿಸುತ್ತ ಇರುವಾಗ ಒಂದು ಸೈಡು ಬಿಸಿನೆಸ್ಸು ಅದುವೇ ಮದುವೇ ದಲ್ಲಾಳಿ. ಒಂದು ಸಲ ಗುರಿಯಿಟ್ಟು ಭಟ್ಟರು ಅಂಟಿಕೊಂಡರೆ ಅಲ್ಲಿಗೆ ಮುಗೀತು. ಸ್ವಭಾವ ಸಹಜದಂತೆ ಈ ನಾರು ಬೇಗನೇ ಬಿಡುವುದಿಲ್ಲ. ಕರಗುವುದೂ ಇಲ್ಲ.
ತನ್ನನ್ನೇ ಕಾಣಲು ಬರುವ ನಾರು ಭಟ್ಟರನ್ನು ಕಂಡ ಈಚಣ್ಣ ಚೌಕಿಯ ಒಳ ನಡೆಯುವ ಮನಸ್ಸು ಮಾಡಲಿಲ್ಲ. ಚೌಕಿಯ ಒಳಗೆ ಈ ನಾರು ಹಿಡಕೊಂಡರೆ ಉಳಿದವರು ಏನು ಕಥೆ ಅಂತ ಸಂಕಲನ ಶುರು ಮಾಡಿಬಿಡುತ್ತಾರೆ. ಹಾಗಾಗಿ ಮತ್ತೂ ಸ್ವಲ್ಪ ದೂರ ಹೋಗಿ ನಿಂತಾಗ ಊಹಿಸಿದಂತೆ ನಾರು ಅಲ್ಲಿಗೇ ಕಾಲೆಳೆದುಕೊಂಡು ಬಂದರು.
ಭಟ್ಟರು ಔಪಚಾರಿಕ ಮಾತುಗಳನ್ನು ಚುಟುಕಾಗಿ ಮುಗಿಸಿ ಹೇಳಿದರು “ ಕೂಸಿನ ಜಾತಕ ಸರಿ ಹೋಗ್ತದೆ...”  ಇನ್ನು ಮುಚ್ಚು ಮರೆ ಏಕೆ? ಈ ಭಟ್ಟರ ಆಗಮನದ ಮುಖ್ಯ ಕಾರಣವೇ ಅದು. ಈಚಣ್ಣನಿಗೆ ಪ್ರಾಯಕ್ಕೆ ಬಂದು ನಿಂತ ಮಗಳಿದ್ದಾಳೆ. ಒಬ್ಬಳೇ ಮಗಳು ಸುನಂದ. ಅವಳಿಂದ ನಂತರ ಮಗ ಒಬ್ಬ ಇದ್ದಾನೆ ಅವನಿನ್ನು ಸ್ವಲ್ಪ ಚಿಕ್ಕವನು. ಬಡತನದ ಜೀವನ ಏಂದೋ ಕಳೆದಿದ್ದರೂ ಶ್ರೀಪತಿಯವರಿಗೆ ಈಗಲೂ ಬಹಳ ಅನುಕೂಲ ಎಂದು ಹೇಳುವ ಹಾಗಿಲ್ಲ. ಜೀವನ ಸಾಗುತ್ತದೆ. ಒಬ್ಬಳೇ ಮಗಳು.. ಇವಳು ಹುಟ್ಟುವ ಸಮಯದಲ್ಲಿ ಹೆಣ್ಣು ಮಗುವಾ.....  ಎಂದು ಗುಣು ಗುಣಿಸಿದವರೂ ಇದ್ದಾರೆ.  ಹಾಗೆಂದು ಇವರಿಗೆ ಅಧೀರತೆ ಎನೂ ಇರಲಿಲ್ಲ ಯಾವುದಾದರೇನು ಭ್ರೂಣ ಮಾಗಿ ಅವಯವ ತುಂಬಿ ಮನುಷ್ಯ ರೂಪ ಪಡೆದಿಲ್ಲವೇ?
ಈಚಣ್ಣ ಒಂದು ಕ್ಷಣ ಹೊತ್ತು ಕಣ್ಣು ಮುಚ್ಚಿ
“ ನಿಮಿಗೆ ಗೊತ್ತುಂಟಲ್ಲ ಈಗ ಬೇರೆ ಒಂದು ಕಡೆ ಕೊಟ್ಟಿದ್ದೇನೆ ಜಾತಕ, ಆ ಮಾಣಿ  ದೊಡ್ಡ ಕಂಪೆನಿಯಲ್ಲಿ  ಒಳ್ಳೆ ಕೆಲಸದಲ್ಲಿ   ಬೇರೆ ಇದ್ದಾನೆ. ಬಹುಷಃ ಅಸ್ಟ್ರೇಲಿಯ ಇಂಗ್ಲಂಡೊ ..ಅಲ್ಲಿದ್ದಾನ. ಬಹುಶಃ ಮಗಳು ಕೂಡ ಅದನ್ನೇ ನೋಡಿಯಾಳು.”
ಭಟ್ಟರಿಗೆ ಇದೆಲ್ಲ ಮಾಮೂಲಿ ಮಾತುಗಳು. ಬ್ರಾಹ್ಮಣರ ಹುಡುಗಿಯರಿಗೆ ಈ ಮಾದರಿ ಡಿಮಾಂಡು ಬಂದಮೇಲೆ ಅವರು ಹೇಳಿದ್ದೇ ಮಾತು. ತಾನು ತಂದ ಹುಡುಗ ನಾಗೇಶನಿಗೆ ಕೆಲಸ ಹೇಳುವಂತಹುದು ಏನೂ ಇಲ್ಲ. ಹಾಗೆಂದು ಅವನಿಗೆ ಕೆಲಸ ಮಾಡಿ ಬದುಕುವ ಅನಿವಾರ್ಯತೆಯೂ ಇಲ್ಲ.  ಹತ್ತಿರದ ನಗರದಲ್ಲಿ ಎರಡು ಫ್ಲಾಟ್ ಬಾಡಿಗೆ, ಒಂದು ವ್ಯಾಪಾರ   ಮನೆಯಲ್ಲಿ ತೋಟ ಅದು ಇದು ಅಂತ.. ಇರುವ ಒಬ್ಬನೇ ಮಗ. ಎಲ್ಲಕ್ಕಿಂತ ಮಿಗಿಲಾಗಿ ಅತ್ಯಂತ ಸಂಭಾವಿತ ಹುಡುಗ...
ಹೌದು ಹುಡುಗ ನಾಗೇಶನ ಬಗ್ಗೆ ಈಚಣ್ಣ ಚೆನ್ನಾಗಿ ಬಲ್ಲರು. ಬಹಳ ಸಾಧು. ತೀರ ಅಪರಿಚಿತ ಏನೂ ಅಲ್ಲ. ಆದರೂ ನಾನು ಸೋಲ ಬಾರದಲ್ಲ. ಸುನಂದ ಇತ್ತೀಚೆಗಷ್ಟೆ ಎಂ.ಬಿ. ಎ ಮುಗಿಸಿ ಇನ್ನೇನೋ ಕಲೀತಾ ಇದ್ದಾಳೆ. ಅವಳಿಗೂ ಆತುರ ಏನಿಲ್ಲ. ತನ್ನ ಕಾಲ ಮೇಲೆ ತಾನು ನಿಲ್ಲುವುದು ಮಾತ್ರವಲ್ಲ ಉತ್ತಮ ಭವಿಷ್ಯದ ಯೋಜನೆ ಹಾಕಿಬಿಟ್ಟಿದ್ದಾಳೆ. ಹಾಗೆ ಹೀಗೆ ಯೋಚಿಸುವ ಹುಡುಗಿಯಲ್ಲ. ತಾನು ಕಲಿತು ಕೆಲಸ ಹಿಡಿದು ತನ್ನ ವಿದ್ಯಾಭ್ಯಾಸಕ್ಕಾಗಿ ಅಪ್ಪ ಮಾಡಿದ ಸಾಲವನ್ನು ತೀರಿಸಿದ ನಂತರೆವೇ ಮದುವೆ ಬಗ್ಗೆ ಯೋಚನೆ ಮಾಡುವ ಅವಳ ಮನಸ್ಸು ಕಂಡಾಗ ಹೆಣ್ಣು ಮಗುವಾದರೇನಂತೆ ಎಷ್ಟೆಲ್ಲಾ ಯೋಚನೆ ಮಾಡ್ತಿದ್ದಾಳೆ. ಮದುವೆಯಾದ ಮೇಲೆ ತನ್ನ ಆದಾಯ ಅಪ್ಪನಿಗೆ ಸಲ್ಲಿಸುವಲ್ಲಿ ಅವಳಿಗೆ ವಿಶ್ವಾಸವಿರೆಲಿಲ್ಲ. ಇದನ್ನೆಲ್ಲ ಈ ಭಟ್ಟರಿಗೆ ಹೇಳುವುದಕ್ಕೆ ಆಗ್ತದೆಯೆ? ಆದರೂ ಭಟ್ಟರು ಬಿಡಲಾರರು. ಭಟ್ಟರು ಒಂದುವಾರದಿಂದ ಬೆನ್ನು ಹತ್ತಿ ಪೋನ್ ಮಾಡಿ ಇಂದಿನವರೆಗೆ ಕಾದಿದ್ದರು. ಇಂದು ಮೇಳದ ಆಟ ಇಲ್ಲಿ ಅಂತ ಗೊತ್ತಿದ್ದ ಕಾರಣ ಏನೂ ಹೇಳುವ ಹಾಗಿಲ್ಲ. ನಾಗೇಶನ ಮನೆ ಇರುವುದು ಇಲ್ಲೆ ಹತ್ತಿರ..!!!
ಪಂಚೆ ಎತ್ತಿ ಕಟ್ಟುತ್ತ ಭಟ್ಟರು ಹೊರಡುವ ಸೂಚನೆಯನ್ನು ತೋರಿಸಿದರು. ಈಚಣ್ಣನನ್ನೇ ನೋಡುವ ಮುಖಭಾವದಲ್ಲಿ ಹಲವಾರು ಭಾವ ಒಂದೇ ಸಲಕ್ಕೆ ಕಂಡ ಹಾಗಾಯಿತು. ನವರಸಗಳನ್ನೂ ರಂಗದಲ್ಲಿ ನಾಜೂಕಾಗಿ ಅಭಿವ್ಯಕ್ತಿಗೊಳಿಸುತ್ತಿದ್ದ ಈಚಣ್ಣನೂ ಆ ಭಾವ ಪ್ರಕಟನೆಗೆ ಬೆರಗಾಗಿ ಹೋದರು. ಅಂದು ಆಟ ಆಡಿಸಿದ ಶೆಟ್ಟರ ಮನೆಯ ಹಿಂದಿನ ಗುಡ್ಡ ಹತ್ತಿ ಇಳಿದು ಚಿಕ್ಕ ತೊರೆಯನ್ನು ಸಂಕವನ್ನು ದಾಟಿದರೆ ನಾಗೇಶನ ಮನೆಯ ಬೇಲಿಯ ದಣಪೆಯನ್ನು ದಾಟಬೇಕು. ಅಲ್ಲಿಂದ ಸ್ವಲ್ಪದೂರ ಅವರದೇ ತೋಟದ ಓಣಿಯಲ್ಲಿ ನಡೆದು ಆ ತುದಿಯಲ್ಲಿರುವ ದಣಪೆ ದಾಟಿದರೆ ಒಂದು ಮಣ್ಣಿನ ರಸ್ತೆ. ಇದು ಇತ್ತೀಚೆಗೆ ಆದ ರಸ್ತೆ. ರಸ್ತೆಯ ಕೂಗಳತೆಯಲ್ಲೆ ನಾಗೇಶನ ಮನೆ.
ತೋಟವನ್ನು ಹಾದು ದಣಪೆ ದಾಟಿ ಮಣ್ಣರಸ್ತೆಗೆ ಇಬ್ಬರೂ ಬಂದರು. ದೂರದಲ್ಲಿ  ನಾಗೇಶನ ಮನೆಯ ಗೇಟು ಆ ಬದಿಗೆ ನಿಂತ ಕಾರು ಕಂಡಿತು. ಕಾರಿನ ಪಕ್ಕವೇ ಹೊಸ ಬೈಕು ಕಂಡಿತು. ಇದು ರಸ್ತೆಗೆ ತೆರೆದು ಕಾಣುವಂತೆ ಇದ್ದಹಾಗೆ ಭಾಸವಾಯಿತು. ಅದಕ್ಕೆ ಕಾರಣವಿಲ್ಲದಿಲ್ಲ. ಮದುವೆ ಪ್ರಾಯದ ಗಂಡು ಮಗ ಬ್ರಾಹ್ಮಣರ ಮನೆಯಲ್ಲಿದ್ದರೆ ಆ ಮನೆಯ ಸಿರಿವಂತಿಕೆ ಅಲ್ಪ ಸ್ವಲ್ಪ ಹೊರಗೆ ಪ್ರದರ್ಶನವಾಗದಿದ್ದರೆ ಹೇಗೆ? ಗೇಟು ತೆರೆದು ಸೂಕ್ಷ್ಮವಾದ ದೃಷ್ಟಿಯನ್ನು ಬೀರುತ್ತ ನಿಧಾನವಾಗಿ ಮನೆಯ ಅಂಗಳಕ್ಕೆ ಬಂದು ನಿಂತಾಗ ಈಚಣ್ಣ ದಂಗಾಗಿ ಬಿಟ್ಟರು.
          (ಮುಂದೆ ಭಾಗ ೨ರಲ್ಲಿ)