"ಇದು ವಿಮರ್ಶೆಯಲ್ಲದ ಚಿಂತನ"

Saturday, July 30, 2011

ವಾಸ್ತವದ ಜಿಜ್ಞಾಸೆಗಳು



ಮನೆಗೆ ಬಂದ ಯಕ್ಷಗಾನ ಪ್ರೇಮಿಯೊಬ್ಬರು ಕುಶಲವಾಗಿ ಮಾತನಾಡುತ್ತಾ ಕೌತುಕದಿಂದ ಕೇಳಿದರು “ ಇಷ್ಟೆಲ್ಲ ಅಭಿಮಾನ ಇಟ್ಟು ಇಷ್ಟು ಕೆಲಸ ಮಾಡ್ತೀರಿ. ಆದರೂ ನೀವು ಯಕ್ಷಗಾನ ಕಾರ್ಯಕ್ರಮದಲ್ಲಿ ಕಂಡು ಬರುವುದು ಕಡಿಮೆಯೆ ಅಲ್ವ?”
ಅವರ ಮಾತು ಅಲ್ಲಗಳೆಯುವ ಮನಸ್ಸಾಗಲಿಲ್ಲ. ಕೆಲವೊಮ್ಮೆ ಅನ್ನಿಸುತ್ತದೆ. ಹೋಗುವುದಕ್ಕಿಂತಲೂ ಹೋಗದಿರುವುದಕ್ಕೆ ಹೆಚ್ಚು ಕಾರಣಗಳು ಬೇಗನೇ ಸಿಕ್ಕಿಬಿಡುತ್ತವೆ. ಇದಕ್ಕಿಂತಲೂ ಮೊದಲು ಹಲವು ಸಲ ವ್ಯಕ್ತ ಪಡಿಸಿಯೂ ಇದ್ದೇನೆ. ಊರಲ್ಲಿರುವಾಗ ಅಂದಿನ ಕಾಲವೊಂದಿತ್ತು ಚೆಂಡೆ ಪೆಟ್ಟು ಕೇಳಿದಾಕ್ಷಣ ಕಾಲ ಮರೆತು ಹೊರಟು ಬಿಡುವ ಕಾಲ. ಅದು ಏಷ್ಟು ಮತ್ತು ಹೇಗೆ ನೋಡಿದ್ದೇನೆ ಎಂಬುದರ ಬಗ್ಗೆ ಯೋಚಿಸುವುದಕ್ಕಿಂತ ಹಾಗೆ ಒಂದು ಹೋಗುವುದು ಅನಿಯಂತ್ರಿತ ಅಭ್ಯಾಸದಂತೆ. ಹುಲ್ಲು ಕಂಡಾಗ ಹಸು ಸುಮ್ಮನೆಯಾದರು ಬಾಯಿ ಇಕ್ಕಿದಂತೆ. ಆದರೆ ಇತ್ತಿಚೆಗೆ ಬೆಂಗಳೂರಿನ ಸಹಜಗುಣವೆಂಬಂತೆ ಅದರಲ್ಲೂ ಚೌಕಾಶಿ ಮಾಡುವಂತಾಗಿದೆ. ಬಿಡುವಿಲ್ಲದ ಕೆಲಸ ಮೇಲ್ನೋಟಕ್ಕೆ ಅನಿಸಿದರೂ ದಿನವೀಡಿ ನಗರ ಸುತ್ತುವ ನನಗೆ ಕಾರ್ಯಕ್ರಮಕ್ಕಾಗಿ ಹತ್ತಿಪ್ಪತ್ತು ಕಿಲೋಮೀಟರ್ ಟ್ರಾಫಿಕ್ ನಲ್ಲಿ ಸಂಚರಿಸುವುದು ಆಧ್ವಾನವಾಗಿ ಕಾಣುತ್ತದೆ. ಮೇಲ್ನೋಟಕ್ಕೆ ಇದೆಲ್ಲ ಸಹಜವಾಗಿ ಕಂಡರೂ ಮುಖ್ಯವಾಗಿ ಮನಸ್ಸಿಗೊಪ್ಪುವ ಕಾರ್ಯಕ್ರಮದ ಹಪಹಪಿಕೆ ಮಾತ್ರ ತೀರುವುದಿಲ್ಲ. ಕೆಲವೊಮ್ಮೆ ಹೋಗಿ ವಿಷಣ್ಣ ಮನಸ್ಕನಾಗುವುದಕ್ಕಿಂತ ಹೋಗದಿರುವುದೇ ಲೇಸು ಎಂದು ತೋರುವುದೇ ಅಧಿಕ. ಕಾಲ ಕಳೆದಂತೆ ಬದಲಾದ ದಿಶೆಯೆಡೆಗೆ ತೆವಳುವುದಲ್ಲ ಓಡುತ್ತದೆ. ಬದಲಾವಣೆ ಅನಿವಾರ್ಯವೋ ಎಂಬಂತೆ ಬದಾಲಾಯಿಸಿಕೊಂಡು ಆವಿಷ್ಕರಿಸುವತ್ತ ಸಾಗುವಾಗ ಔದಾಸಿನ್ಯ ಅನಿವಾರ್ಯವಾಗಿಬಿಟ್ಟಿದೆ.
ಇತ್ತೀಚೆಗೆ ಜರಗಿದ ಒಂದು ಸಾರ್ವಜನಿಕ ಕಾರ್ಯಕ್ರಮವೊಂದನ್ನು ಕಂಡಾಗ ಈ ಅವಿಷ್ಕಾರಗಳೂ ಅವುಗಳ ಗುರಿಯೂ ಗೊಂದಲಮಯವಾದಂತೆ ಭಾಸವಾಗುತ್ತದೆ. ಸರಕಾರೀ ಕಾರ್ಯಕ್ರಮದಂತಹ ಅದ್ದೂರಿ ಕಾರ್ಯಕ್ರಮ. ದೇಶವಿದೇಶದ ಗಣ್ಯರ ಉಪಸ್ಥಿತಿ. ನಮ್ಮ ಮನೆಯಂಗಳದ ಕಾರ್ಯಕ್ರಮಕ್ಕೆ ಜಾಹೀರಾತಿಗಾದರೂ ಯಕ್ಷಗಾನ ತೋರಿಸಿಬಿಡುವ ಅಭಿಮಾನವೇ ದೊಡ್ಡದು ಎಂದು ಭಾವಿಸಬಿಡೋಣ. ತೆಂಕು ಬಡಗು ಯಕ್ಷಗಾನ ಬಂದ ಅತಿಥಿಗಳಿಗೆ ತೋರಿಸಿ ಯಕ್ಷಗಾನ ಕಲೆಯ ಪರಿಚಯ ಮಾಡಿಸಿ ಕೃತಾರ್ಥರಾಗುವ ಬಗೆ. ದೊಡ್ಡ ವೇದಿಕೆ ವೇದಿಕೆಯ ಮುಕ್ಕಾಲುಭಾಗ ಗಣ್ಯರ ಆಸನ ಮತ್ತು ಅವರ ಚೇಲಾಗಳಿಂದ ಭರ್ತಿ. ಬಂದವರಿಗೆ ಯಕ್ಷಗಾನ ನೋಡುವ ಒಂದು ಕುತೂಹಲ ಉಂಟೋ ಇಲ್ಲವೋ. ಆದರೂ ನಮ್ಮ ಜಿಲ್ಲೆಯ ರಾಜಕಲೆಯಾದ ಯಕ್ಷಗಾನ ಎಂದು ವೇಶಗಳು ಬಂದು ವೇದಿಕೆಯ ಉಳಿದ ಆಯಕಟ್ಟಿನ ಜಾಗದಲ್ಲಿ ಒಂದೆರಡು ಗಿರಕಿ ಸುತ್ತಿ ಮರಳುತ್ತವೆ. ತೆಂಕು ಯಕ್ಷಗಾನವೆಂದರೆ ಕುತ್ತು ಹಾರುವುದು ಮತ್ತು ಬಡಗು ಎಂದರೆ ಮಂಡಿಯೂರಿ ಗಿರಕಿ ಇಲ್ಲಿಗೆ ಯಕ್ಷಗಾನ ಚೆಂಡೆಯ ಅಬ್ಬರದಲ್ಲಿ ಮುಗಿದು ಬಿಡುತ್ತದೆ. ಇದನ್ನು ನೋಡಿದಾಗ ನಿತ್ಯವೂ ಯಕ್ಷಗಾನವೂ ನೋಡುವವನಿಗೂ ಹೊಸದಾಗಿ ಅಂದೇ ನೋಡುವವನಿಗೂ ಯಾವ ಬಗೆಯ ಅನುಭವ ಆಗಬಹುದು. ದೇಶ ವಿದೇಶದ ಗಣ್ಯರಿಗೆ ಯಕ್ಷಗಾನ ತೋರಿಸಿದ್ದು ಮಹತ್ಕಾರ್ಯವಾಗಿಬಿಡುತ್ತದೆ. ವೇದಿಕೆ ಇಳಿದ ಕ್ಷಣವೆ ಆ  ಪುಣ್ಯಾತ್ಮರು ಎಲ್ಲವನ್ನೂ ಮರೆತು ಬಿಡುತ್ತಾರೆ.

ಒಂದು ಸಲ ಮಂಗಳೂರಲ್ಲಿ ಕೆಲಸ ಮಾಡಿದ್ದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರ ಕಛೇರಿಗೆ ಹೋಗಿದ್ದೆ. ಕುಶಲಮಾತನಾಡುತ್ತ ಇಂತಹ ಕಾರ್ಯಕ್ರಮದಲ್ಲಿ ಯಕ್ಷಗಾನ ನೋಡಿದ ಬಗ್ಗೆ ಹೇಳಿದರು. ಅವರಿಗೆ ನೆನಪಿದ್ದುದು ಬಣ್ಣ ಬಣ್ಣದ ಝಗಝಗಿಸುವ ವೇಶ ಮಾತ್ರ. ಅಲ್ಲಿ ಒಂದೆರಡು ಗಿರಕಿಯನ್ನು ಅದ್ಧೂರಿಯಾಗಿ ನೋಡಿದವರಿಗೆ ಇನ್ನೇನು ತಾನೇ ನೆನಪುಳಿಯಲು ಸಾಧ್ಯ? ಯಕ್ಷಗಾನ ಎಂದರೆ ಅಷ್ಟೇ ಅಲ್ಲ ಎಂದು ನಾನು ಸಾಧ್ಯವಾದಷ್ಟು ವೈವಿಧ್ಯತೆಯನ್ನು ಬಣ್ಣಿಸಿದರು ಅವರೆಷ್ಟು ಅರಿತುಕೊಂಡರೋ ನಾನರಿಯೆ? ರಾಮಾಯಣವಾಗಲಿ ಮಹಾಭಾರತವಾಗಲಿ ಅಥವಾ ಭಾಗವತವಾಗಲಿ ಅದರ ಪಾತ್ರ ವೈವಿಧ್ಯತೆಗಳನ್ನು ಯಕ್ಷಗಾನ ಅಭಿಮಾನಿಗಳು ಅರಿತುಕೊಂಡ ಬಗೆಗಳೆಷ್ಟು?  ನಾಲ್ಕೈದು ಗಂಟೆಗಳ ಅವಧಿಯಲ್ಲಿ ರಂಗವನ್ನು ನಿಯಂತ್ರಿಸಿ ವೈವಿಧ್ಯಮಯವಾಗಿ ಹಾಡುವ ಭಾಗವತನ ನೈಪುಣ್ಯ ಸಾಮಾರ್ಥ್ಯಗಳೇನು? ಒಂದೇ ಪಾತ್ರಕ್ಕೆ ಅವರವರ ದೃಷ್ಟಿಕೋನದಲ್ಲಿ ಚೌಕಟ್ಟಿನ ಒಳಗೆ ವೈವಿಧ್ಯಮಯ ನಾಟ್ಯಾಭಿನಯವನ್ನು ತೋರಿಸಿ ಅದನ್ನು ಅಭಿವ್ಯಕ್ತೀ ಗೊಳಿಸುವ ಯಕ್ಷಗಾನ ಕಲಾವಿದನ ಸಾಮಾರ್ಥ್ಯವೇನು? ಯಾವುದೇ ಚಿತ್ರಕಥೆ ಸಂಭಾಷಣೆಯ ಲಿಖಿತ ರೂಪವಿಲ್ಲದೇ ಬರೀ ಮಾತುಗಾರಿಕೆಯಿಂದಲೇ ಯಕ್ಷಗಾನದ  ಪಾತ್ರಪ್ರಪಂಚ ದರ್ಶನ ಮಾಡಿಸುವ ಕಲಾವಿದನ ಸಾಮಾರ್ಥ್ಯ ಕಡಿಮೇಯೇನು?  ಯಾವುದೇ ಕಲೆಯಾದರೂ ಇಂದು ವೇದಿಕೆ ಮೇಲೆ ಪ್ರದರ್ಶನ ಗೊಳ್ಳುವುದು ಹೆಚ್ಚೆಂದರೆ ಮೂರು ನಾಲ್ಕು ಘಂಟೆಗಳ ಅವಧಿ. ಇರುಳಿಡೀ ವೇದಿಕೆಮೇಲೆ ಬರೀ ಸಂಕೇತ ರೂಪದಲ್ಲೆ ಅದ್ಭುತ ಲೋಕವನ್ನೇ ತೋರಿಸುವ  ಯಕ್ಷಗಾನ ಕಲಾವಿದರ ಸಾಮಾರ್ಥ್ಯ ನಗಣ್ಯವಾಗಿ ಚಿತ್ರಿಸುತ್ತಿದ್ದೇವೋ ಎಂಬ ಅನುಮಾನ ಬರುವುದಿಲ್ಲವೆ?  
ಗಣರಾಜ್ಯೋತ್ಸವ ಅಥವ ಇನ್ನಿತರ ಸಾರ್ವಜನಿಕ ಕಾರ್ಯಕ್ರಮದ ಮೆರವಣಿಗೆಯಲ್ಲಿ, ಅಥವಾ ರಿಯಾಲಿಟಿ ಶೋಗಳಲ್ಲಿ ಸಿನಿಮಾ ಹಾಡುಗಳಲ್ಲಿ ಯಕ್ಷಗಾನದ ವೇಶ ಮತ್ತು ಅಲ್ಪ ಕುಣಿತವನ್ನು ತೋರಿಸಿ ಯಕ್ಷಗಾನ ಎಂದರೆ ಇಷ್ಟೇನೆ ಎಂದು ಬಿಂಬಿಸುವಂತೆ ಮಾಡಿ ತಿಳುವಳಿಕೆಯನ್ನು ಸೀಮಿತಗೊಳಿಸುವ ಪ್ರವೃತ್ತಿಯಿದೆಯಲ್ಲ ಅದು ಒಂದು ರೀತಿಯ ಅಸಡ್ಡೆ ಎನಿಸುದಿಲ್ಲವೆ?
ವೈವಿಧ್ಯಮಯ ಪೌರಾಣಿಕ ಪಾತ್ರಗಳೆಷ್ಟು ಬಗೆ. ಇಂದಿನ ರಾವಣ ಒಂದು ಬಗೆಯಾದರೆ ನಾಳಿನ ಭೀಮ ಇನ್ನೊಂದು ಬಗೆ. ಸುಂದರವಾಗಿ ಕೆತ್ತಿದ ಪಾತ್ರಗಳಾಗಲಿ ಅದನ್ನು ಕಟ್ಟಿ ಬೆಳೆಸುವ ವೈವಿಧ್ಯಮಯ ಹಿಮ್ಮೇಳವನ್ನಾಗಲಿ,ವಿವಿಧರೀತಿಯಲ್ಲಿ ಹಾಡುವ ಭಾಗವತನ ಪ್ರತಿಭೆಯಾಗಲೀ ಎಲ್ಲವನ್ನೂ ಬದಿಗೆ ಸರಿಸಿ ಈ ಸಂಕುಚಿತಗೊಂಡ ಯಕ್ಷಗಾನ ಮುಂದೊಂದು ದಿನ ಅದುವೇ ಸ್ಥಾಯಿಯಾದರೆ ಅಚ್ಚರಿ ಪಡಬೇಕಿಲ್ಲ. ಒಂದು ಕಾರ್ಯಕ್ರಮ ಮಾಡಿ ಸೇರಿದ ಜನ ಸಂಖ್ಯೆಯಿಂದಲೋ ಬಂದು ಸೇರಿದ ಗಣ್ಯರಿಂದಲೋ ಒಟ್ಟು ಸೇರಿದ ಹಣ ದಿಂದಲೋ ಕಾರ್ಯಕ್ರಮದ ಯಶಸ್ಸನ್ನು ತುಲನೆ ಮಾಡಿದಾಗ ನಿಜವಾದ ಪ್ರೇಕ್ಷಕ ಅಪರೂಪಾವಾಗುವುದರಲ್ಲಿ ಸಂಶಯವಿಲ್ಲ.

ಪೂರ್ಣವಾದ ಯಕ್ಷಗಾನ ಮಾಡಿದರೂ ಉತ್ತಮವಾದ ಯಕ್ಷಗಾನದ ಅಂತಃಸತ್ವ ಏನಿದೆಯೋ ಅದನ್ನು ಮರೆಮಾಚಿ ಪ್ರೇಕ್ಷಕನ ದಿಕ್ಕುತಪ್ಪಿಸುವ ಕೆಲಸ ಮಾತ್ರ ಅವ್ಯಾಹತವಾಗಿ ನಡೆದು ಬಂದಿದೆ. ಇಂದು ಮೂಲ ರೂಪದಿಂದ ಭಿನ್ನವಾಗಿ ವಿಕೃತವಾಗಿ ಚಿತ್ರಿಸಿದ ಹಲವು ಪಾತ್ರಗಳು ನಮ್ಮ ಕಣ್ಣ ಮುಂದೆ ಇದೆ.ಅದು ರಕ್ತ ರಾತ್ರಿಯ ಅಶ್ವಥ್ಹಾಮ ಅಗಿರಬಹುದು, ದೇವಿ ಮಹಾತ್ಮೆಯ ರಕ್ತಬೀಜ ಆಗಿರಬಹುದು ಅದರ ಬಗ್ಗೆ ಬರೆಯುತ್ತಾ  ಹೋದರೆ ಅಂತ್ಯವಿಲ್ಲದಾಗಬಹುದು. ನಾವು ಮಿತ್ರರೆಲ್ಲ ಸೇರಿ ಐದು ದಿನ ದೇವಿ ಮಹಾತ್ಮೆಯ ಪ್ರಸಂಗ ಪುಸ್ತಕ ಬಿಡುಗಡೆ ಮಾಡಿದೆವು, ಇದಕ್ಕಾಗಿ ಶ್ರಮವಹಿಸಿದ ಕೈಗಳು ಅದು ಕೈಗಳಲ್ಲ. ಆದರೆ ಆ ಪ್ರಸಂಗ ಕೇವಲ ಮಹಿಷೋತ್ಪತ್ತಿಗೆ ಸೀಮಿತ ವಾದದ್ದು ಮಾತ್ರ ನಮ್ಮ ದಿಕ್ಕು ತಪ್ಪಿದ ಅಭಿರುಚಿಗೆ ಸಂಕೇತವಾಗಿದೆ. ಹಲವು ವೈಶಿಷ್ಟ್ಯ ಪೂರ್ಣ ಪಾತ್ರಗಳು ಮತ್ತು ಸನ್ನಿವೇಶಗಳು  ಆ ಬೃಹತ್ ಪ್ರಸಂಗಗಳಲ್ಲಿವೆ. ಮಹಾಮಾಯೆ ಶ್ರೀದೇವಿಯ ಮಹಿಮೆಯನ್ನು ಹಲವು ರೀತಿಯಲ್ಲಿ ಬಿಂಬಿತವಾಗಿದೆ ಆದರೆ ಆ ಮಹಿಮಾಖ್ಯಾನಗಳು ಎಲ್ಲವನ್ನೂ ಬದಿಗಿರಿಸಿ ಕೇವಲ ಮಹಿಷನೆಂಬ ದುರುಳನ ಕಥೆಯೇ ವೈಭವೀಕರಿಸಲ್ಪಡುತ್ತದೆ.
ಇಂದಿನ ಯಕ್ಷಗಾನ ಕಲಾವಿದರ ಪೌರಾಣಿಕ ಜ್ಞಾನ ತೀವ್ರವಾಗಿ ಕುಸಿಯುತ್ತಿದೆ. ಅದರ ಬಗ್ಗೆ ಆಸಕ್ತಿಯೂ ಕಡಿಮೆಯಾಗಿದೆ ಇದರಿಂದಾಗಿ ಮೊದಲು ಯಾರೋ ಯಾವುದನ್ನೋ ಹೇಳಿದುದನ್ನು  ಯಥಾವತ್ತಾಗಿ ಹೇಳಿ ತಮ್ಮ ಚೌರ್ಯದ ಪಾಂಡಿತ್ಯವನ್ನು ಮೆರೆಸುವ ಅನಿವಾರ್ಯತೆ ಇಂದಿನ ಕಲಾವಿದರಿಗೆ ಬಂದಿದೆ. ಚೌರ್ಯವಾಗಲಿ ನಕಲೀಕರಣವಾಗಲಿ ಇಂದು ಸಹಜವೆಂಬಂತೆ ಆಗಿದೆ. ಬ್ಲಾಗ್ ಲೇಖನಗಳನ್ನು ಕದಿಯುವುದು, ಇತರ ಕೃತಿಗಳನ್ನಾಗಲಿ ಸೃಷ್ಟಿಗಳನ್ನಾಗಲೀ ಕದಿಯುತ್ತಿದ್ದೇನೆ ಅಥವ ನಕಲು ಮಾಡುತ್ತಿದ್ದೇನೆ ಎಂಬುದನ್ನೂ ಸಹ ಹೇಳುತ್ತ ಚೌರ್ಯವನ್ನೂ , ಅಪರಾಧವನ್ನೂ ಪ್ರಾಮಾಣಿಕತೆಯಿಂದ ಒಪ್ಪಿಕೊಂಡಂತೆ ಮಾಡಿ, ತಮ್ಮ ದಾರಿದ್ರ್ಯವನ್ನು ಪ್ರದರ್ಶಿಸುವವರು  ಇರುವಾಗ ಇಲ್ಲಿಯೂ ಅದು ಬಳಕೆಯಾಗುವುದು ಅತಿಶಯವೆನಿಸುವುದಿಲ್ಲ. ಯಾವೂದೋ ತಾಳ ಮದ್ದಲೆಯ ಅಥವಾ ಬಯಲಾಟದ ಅರ್ಥಗಾರಿಕೆಯನ್ನು ಯಥಾವತ್ತಾಗಿ ನಕಲು ಮಾಡುವುದು, ಅದು ಸ್ವ ಸೃಷ್ಟಿ ಎಂಬಂತೆ ಬಿಂಬಿಸುವ ಪ್ರಯತ್ನ ಇದೆಲ್ಲ ಜ್ಞಾನಾರ್ಜನೆಯ ಕೊರತೆಯನ್ನು ತೋರಿಸುತ್ತದೆ. ಹಿಂದಿನ ಶ್ರೇಷ್ಠ ಕಲಾವಿದರು ನಿರೂಪಿಸಿದ ಪಾತ್ರದ ದೃಷ್ಟಿಕೋನವನ್ನು ಅನುಸರಿಸಿ ತಮ್ಮದೇ ರೀತಿಯಲ್ಲಿ ರೂಪಿಸಿಕೊಳ್ಳಬೇಕೆ ಹೊರತು ಅಧ್ಯಯನ ಶೀಲತೆ ಕೊರತೆಯಿಂದ ಅದನ್ನು ನಕಲೀಕರಿಸಬಾರದಲ್ಲ. ಮೊದಲಿನವರು ಯಾವುದೇ ಒಂದು ಜಿಜ್ಞಾಸೆ ಎದುರಾದಾಗ ಅದಕ್ಕಾಗಿ ಶ್ರಮವಹಿಸಿ ಹಲವು ಗ್ರಂಥಗಳಿಂದ ಅಥವ ಇನ್ನಿತರ ಮೂಲಗಳಿಂದ ಆ ಜಿಜ್ಞಾಸೆಗೆ ಪರಿಹಾರವನ್ನು ಕಂಡುಕೊಂಡು ತಮ್ಮ ಜ್ಞಾನವನ್ನು ವೃದ್ಧಿಸುತ್ತ ಯಕ್ಷಗಾನ ಅತ್ಯಂತ ವೈಶಿಷ್ಟ್ಯವೆನಿಸಿದ ಅರ್ಥಗಾರಿಕೆ ಹಾಗು ಪಾತ್ರವೈಭವವನು ಮೆರೆದಿರುತ್ತಾರೆ. ಇಂದು ಆ ಸೃಜನ ಶೀಲತೆ ಮತ್ತು ಅಧ್ಯಯನದ ಕೊರತೆಯಿಂದ ಪಾತ್ರಧಾರಿಗಳಲ್ಲಿ ಭಾಗವತರಲ್ಲಿ ಪೌರಾಣಿಕ ಜ್ಞಾನದ ಕೊರತೆಯಿದೆ ಎಂದು ಅನ್ನಿಸುತ್ತದೆ. ಇಂದು ಅರ್ಥಗಾರಿಕೆಯ ವೈಭವನ್ನು ಸಾಕ್ಷಾತ್ಕಾರಗೊಳಿಸುವ ತಾಳಮದ್ದಲೆಯ ಪ್ರಾಕಾರ ಮೊದಲಿನಂತೆ ವಿಜ್ರಂಭಿಸುವುದಿಲ್ಲ. ಹಾಗಾಗಿ ಮಹನೀಯರು ಹೇಳುವ ಮಾತಿದೆ “ ಶೇಣಿಯ ನಂತರ ತಾಳ ಮದ್ದಲೆಯಲ್ಲಿ ಆಸಕ್ತಿಯೇ ಹೊರಟು ಹೋಗಿದೆ” ಎಂದು. ಹೀಗಾಗಲು ಮುಖ್ಯ ಕಾರಣ ಕಲಾವಿದರ ಪೌರಾಣಿಕ  ಜ್ಞಾನದ ಕೊರತೆಯ ಜತೆಗೆ ಕಲಿಯುವ ಕೊರತೆ. ಒಂದೆರಡು ವೇದಿಕೆ ಏರಿದಾಗಲೇ ತಮ್ಮ ತನವನ್ನು ಹಿರಿದಾಗಿಸಿ ಶಲ್ಯ ತೊಟ್ಟು ಅರ್ಥಧಾರಿಗಳಾಗುವ ಢಾಂಬಿಕತನದ ಪ್ರದರ್ಶನ. ತಾಳಮದ್ದಲೆಯೆಂದರೆ ಮಾತಿಗೆ ಪ್ರತಿ ಮಾತು ಚರ್ಚೆ, ತರ್ಕ ಕುತರ್ಕಗಳೇ ಆಗಿ ಅಭಾಸಗಳು ಸರ್ವೇಸಾಮಾನ್ಯವಾಗುವಾಗ ಜನಪ್ರಿಯತೆಯ ಹಾದಿ ಕವಲು ಹೊಡೆಯುತ್ತದೆ. ಹಾಗೆಂದು ಕಲಾವಿದ ಶ್ರೇಷ್ಠರು ಇಲ್ಲವೆಂದಲ್ಲ. ಆದರೆ ಅದರ ಸಂಖ್ಯೆ ಕ್ಷೀಣಿಸುತ್ತಾ ಇದೆ ಎಂದು ಅನ್ನಿಸುತ್ತದೆ.
ವೈಶಂಪಾಯನದಲ್ಲಿ ಕೌರವ ಜಲಸ್ತಂಭನ ವಿದ್ಯೆಯಿಂದ ಆಡಗಿಕುಳಿತ. ಶರಶಯ್ಯೆಯಲ್ಲಿ ಯೋಗ ಶಕ್ತಿಯಿಂದ ಭೀಷ್ಮರು ಒರಗಿದರು.. ಇದೆಲ್ಲ ಹೋರನೋಟಕ್ಕೆ ಸೂಚ್ಯವಾಗಿ ಹೇಳುವುದಾದರು ಜಲಸ್ತಂಭನವಾಗಲೀ ಯೋಗವಾಗಲಿ ಅದನ್ನು ಅಭ್ಯಸಿಸಿ ಅದು ಎಂದರೆ ಏನು ಎಂಬ ಪೂರ್ಣ ಜ್ಞಾನ ಸಾಧನೆಗೆ ತೊಡಗುವ ಆಸಕ್ತಿಯೇ ಹೊರಟು ಹೋಗಿದೆ. ಕುತೂಹಲದಿಂದ ಹಲವು ವಿದ್ಯೆಗಳನ್ನು ಕಲಿತ ಮಹಾನ್ ಕಲಾವಿದರು ರಂಗದಲ್ಲಿ ತೋರಿಸಿದ ಕೆಲವನ್ನು ಅನುಕರಿಸುತ್ತೇವೆಯೋ ಹೊರತು ಅವರು ಕಲಿತ ವಿದ್ಯೆಯತ್ತ ತಿರುಗಿಕೂಡ ನೋಡುವ ಬುದ್ದಿಯನ್ನು ತೋರಿಸುವುದಿಲ್ಲ. ಹೊಸ ತಲೆಮಾರಿನ ಕೆಲವೇ ಕಲಾವಿದರು ಪ್ರಾಮಾಣಿಕವಾಗಿ ಪಾತ್ರಗಳ ಪರಕಾಯ ಪ್ರವೇಶಕ್ಕೆ ಯತ್ನಿಸುತ್ತಾರೆ.   ಮಿಕ್ಕುಳಿದ ಅಧಿಕವೂ ಹಿಂದೆ ಮಾಡಿದ್ದುದರ ವರದಿ ಮಂಡನೆಯೆ ಆಗಿರುತ್ತದೆ.  ವೈಚಾರಿಕ ವಿಷಯಗಳ ಮಂಡನೆಯಾದರೂ ಅದಕ್ಕೆ ಪ್ರೇಕ್ಷಕ ಸ್ಪಂದಿಸುವ ಭರವಸೆಯೂ ಇಲ್ಲ. ಒಟ್ಟಿನಲ್ಲಿ ಕ್ಷಿಪ್ರ ಹಾದಿಗಳ ಅನುಸರಣೆಯೇ ಆಗಿರುತ್ತದೆ.
ಮೊಬೈಲ್ ಗೆ ಕರೆ ಮಾಡಿದಾಗ ಕರೆ ಮಾಡಿದವನಿಗೆ ನಮ್ಮ ಮನೋಧರ್ಮಕ್ಕೆ ಅನುಸಾರವಾಗಿ ಹಾಡು ಸಂಗೀತವನ್ನು ಕೇಳಿಸಿದಂತೆ ಅದು ನಮ್ಮ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತೆ, ಅದೇ ರೀತಿ ನಮ್ಮ ಅಭಿರುಚಿಗಳು ನಮ್ಮ ಮನೋಧರ್ಮಕ್ಕೆ ಹಿಡಿದ ಕನ್ನಡಿ.ಮನೋಧರ್ಮ ವ್ಯಕ್ತಿಗನುಸಾರವಾಗಿ ವೆತ್ಯಸ್ತವಾಗಿದ್ದರೂ ಹತ್ತು ಜನರು ಉಪಯೋಗಿಸುವ ಹಾದಿ ಹತ್ತು ಜನರೂ ಉಪಯೋಗಿಸಲು ಯೋಗ್ಯವಾಗುವಂತೆ ಸುಸ್ತಿಥಿಯಲ್ಲಿ ಮತ್ತು ಹೊಲಸಾಗದಂತೆ ಶುಚಿಯಾಗಿಡುವುದು ಉಪಯೋಗಿಸುವ ಪ್ರತೀಯೊಬ್ಬರ ಕರ್ತವ್ಯ.






Thursday, July 14, 2011

ಯಕ್ಷ ಚಿಂತನ: ಕಲಾಸೇವೆಯ ಭ್ರಾಮಕ ಲೋಕ

ಯಕ್ಷ ಚಿಂತನ: ಕಲಾಸೇವೆಯ ಭ್ರಾಮಕ ಲೋಕ: "ಯಾವುದೇ ಕಾರ್ಯಕ್ರಮವಾಗಲೀ ಆ ಕಾರ್ಯಕ್ರಮದ ವಿಷಯಕ್ಕೆ ಸಂಬಂಧಿಸಿದ ಧ್ವನಿ ಮುದ್ರಣಗಳೋ, ಪುಸ್ತಕಗ ಅಥವ ಪತ್ರಿಕೆಗಳೋ ಕಾರ್ಯಕ್ರಮ ನಡೆಯುವ ಪರಿಸರದಲ್ಲೇ ಪ್ರದರ್ಶನ ಮತ್ತು ಮಾರ..."

Wednesday, July 13, 2011

ಕಲಾಸೇವೆಯ ಭ್ರಾಮಕ ಲೋಕ

ಯಾವುದೇ ಕಾರ್ಯಕ್ರಮವಾಗಲೀ ಆ ಕಾರ್ಯಕ್ರಮದ ವಿಷಯಕ್ಕೆ ಸಂಬಂಧಿಸಿದ ಧ್ವನಿ ಮುದ್ರಣಗಳೋ, ಪುಸ್ತಕಗ ಅಥವ ಪತ್ರಿಕೆಗಳೋ ಕಾರ್ಯಕ್ರಮ ನಡೆಯುವ ಪರಿಸರದಲ್ಲೇ ಪ್ರದರ್ಶನ ಮತ್ತು ಮಾರಾಟ ಮಾಡುವಂತಹುದು ಸರ್ವೇ ಸಾಮಾನ್ಯ. ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಾಗಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಧ್ವನಿ ಮುದ್ರಣಗಳು ಸಂಗೀತ ಕಲಾವಿದರ ವಿಶೇಷ ಮಾಹಿತಿಯನ್ನು ಹೊತ್ತ ಪುಸ್ತಕಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿರುತ್ತಾರೆ. ಕೆಲವೊಮ್ಮೆ ಅತ್ಯಮೂಲ್ಯವಾದ ಸಂಗ್ರಾಹ್ಯ ವವಸ್ತುಗಳು ಸಿಗುತ್ತವೆ. ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಇದರದ್ದೇ ಆದ ಪಾತ್ರ ಅಥವ ಸೇವೆ ಶ್ಲಾಘನೀಯ. ಇದಕ್ಕೆಂದೇ ಬರುವ ಆಸಕ್ತರೂ ಇರುತ್ತಾರೆ. ಈ ಬಗೆಯ ಪ್ರವೃತ್ತಿ ಯಕ್ಷಗಾನ ಕಾರ್ಯಕ್ರಮಗಳಲ್ಲೂ ಕಂಡುಬರುತ್ತದೆ. ಧ್ವನಿ ಮುದ್ರಣ ವಿನ್ಯಾಸದಲ್ಲಿ ಕ್ಯಾಸೆಟ್ ಯುಗ ಕಳೆದು ಸುಲಭ ರೀತಿಯ ಅನುಕೂಲಕರವೂ ಆದ ಸಿ. ಡಿ. ಅಥವಾ ಡಿ.ವಿ.ಡಿ ರೂಪಕ್ಕೆ ಬದಲಾಗಿ ಉಂಟು ಮಾಡಿದ ಕ್ರಾಂತಿ ಸಾಮಾನ್ಯವಾದುದೇನೂ ಅಲ್ಲ.  ಯಾವುದೇ ಕಾರ್ಯಕ್ರಮವಾದರೂ ಈ ದ್ವನಿ ಮುದ್ರಣಗಳ ಮಾರುಕಟ್ಟೆ ಈ ಬಗೆಯಲ್ಲಿ ತೆರೆದುಕೊಂಡ ರೀತಿ ಕೆಲವೊಮ್ಮೆ ಕುತೂಹಲಕರವೂ ಆಶ್ಚರ್ಯಕರವೂ ಆಗಿರುತ್ತದೆ.


ಇಂದು ರವೀಂದ್ರ ಕಲಾಕ್ಷೇತ್ರದಲ್ಲೋ, ಪುರಭವನದಲ್ಲೋ ಯಕ್ಷಗಾನ ಕಾರ್ಯಕ್ರಮವಿದ್ದರೆ ಕನಿಷ್ಠ ಪಕ್ಷ ಒಂದಾದರೂ ಮಾರಾಟ ಮಳಿಗೆ ಇದ್ದು ಬಂದ ಆಸಕ್ತರ ಸೇವೆಯನ್ನು ತನ್ನದೇ ರೀತಿಯಲ್ಲಿ ಮಾಡುವುದು ಶ್ಲಾಘನೀಯವೇ. ಇಲ್ಲವಾದರೆ ಬೆಂಗಳೂರಿನಂತಹ ನಗರದಲ್ಲಿ ಯಕ್ಷಗಾನದ ಬಗೆಗಿನ ಮಾಹಿತಿ ಮುಖ್ಯವಾಗಿ ಸುಲಭದಲ್ಲಿ ಸಿಗುವುದು ಈ ರೂಪದಲ್ಲೇ ಹಲವು ವೀಡಿಯೊಗಳು ಆಡಿಯೊಗಳು ಅವುಗಳ ಜಗತ್ತು ಕೌತುಕಪೂರ್ಣವದರು ಕೆಲವೊಮ್ಮೆ ಏಕತಾನತೆಯಿಂದ ಕೂಡಿರುವುದನ್ನು ಬಲ್ಲವರ ಅಂಬೋಣ.

ಇತ್ತೀಚೆಗೆ ಹಲವು ಭಾಗವತರ ಅಥವಾ ಇನ್ನಿತರ ಕಲಾವಿದರ ವಿಶೇಷಣವನ್ನು ಒಳಗೊಂಡ ಧ್ವನಿಮುದ್ರಣ ಹಲವಾರು ಇರುವುದನ್ನು ಕಾಣಬಹುದು. ಇವುಗಳ ಬಗ್ಗೆ ಕುತೂಹಲದಿಂದ ಗಮನಿಸಿದರೆ ಇದು ಯಾವೂದೋ ಕಾಲದ ಕ್ಯಾಸೆಟ್ ನ ಪದಗಳನ್ನು ತುಂಡು ತುಂಡು ಮಾಡಿ ನಂತರ ಅವುಗಳನ್ನು ಹೊಸೆದು ಆಕರ್ಷಕ ರಕ್ಷಾಕವಚದೊಂದಿಗೆ ಸಿ ಡಿ ಅಥವಾ ಡಿ. ವಿ. ಡಿ ರೂಪದಲ್ಲಿ ಮಾರುಕಟ್ಟೆಗೆ ಬಿಟ್ಟಿರುತ್ತಾರೆ. ಕೆಲವೆಲ್ಲ ಹೊಸ ನಿರ್ಮಾಣಗಳೂ ವಿಶೇಷವಾಗಿ ನಿರ್ಮಿಸಲ್ಪಟ್ಟಿರುತ್ತವೆ. ಒಂದು ಸಲ ಕಲಾಕ್ಷೇತ್ರದ ಕಾರ್ಯಕ್ರಮಕ್ಕೆ ಹೋಗಿದ್ದವನು ಇದರ ಬಗ್ಗೆ ಕುತೂಹಲದಿಂದ ಗಮನಿಸಿದೆ. ಹೆಸರಾಂತ ಭಾಗವತರ ಅದು ಯಾರೋ ಆಗಿರಬಹುದು ಅವರ ಆಕರ್ಷಕ ಪೋಟೋ ಮುದ್ರಿಸಿ ಸುಂದರವಾಗಿ ವಿನ್ಯಾಸಗೊಳಿಸಿ ಸಿ. ಡಿ. ಯನ್ನು ಮಾರಾಟಕ್ಕೆ ಇಟ್ಟಿದ್ದರು. ಅದಕ್ಕೆ ಆಕರ್ಷಕ ಹೆಸರಿನ ನಾಮಕರಣವೂ ಆಗಿರುತ್ತದೆ. ಆಸಕ್ತಿ ಮೂಡಿ ಅವುಗಳನ್ನು ತೆಗೆದು ನೋಡಿದರೆ ಅಧಿಕವೂ ಹಿಂದೆ ಬಂದ ಕ್ಯಾಸೆಟ್ ನ ಪದಗಳನ್ನು ಪುನಃ ಭಟ್ಟಿ ಇಳಿಸಿ ನಿರ್ಮಿಸಲಾಗಿತ್ತು. ಅದಕ್ಕೆ ಅಪವಾದವೆಂಬಂತೆ ಹೊಸ ನಿರ್ಮಾಣಗಳು ಇಲ್ಲದಿರಲಿಲ್ಲ. ಆದರೆ ಇವುಗಳ ಸಂಖ್ಯೆ ಮಾತ್ರ ತೀರ ಅಲ್ಪ. ಆವಾಗ ಅನ್ನಿಸಿಬಿಟ್ಟದ್ದು ನಮ್ಮಗಳ ಬೌದ್ದಿಕ ದಾರಿದ್ರ್ಯದ ಬಗ್ಗೆ.ಕೆಲವೆಲ್ಲ ಕ್ಯಾಸೆಟ್ ನಿರ್ಮಿಸಿದವರೇ ಪುನಃ ಸಿ.ಡಿ ರೂಪದಲ್ಲಿ ನಿರ್ಮಿಸಿ ಮಾಡುವುದು ಔಚಿತ್ಯಪೂರ್ಣವಾಗಿದ್ದರೂ ಇದರಲ್ಲಿ ವ್ಯಾಪಾರೀ ಬುದ್ದಿಯ ಚಾಣಾಕ್ಷತೆ ಇಲ್ಲದಿಲ್ಲ.

ಹಾಗಾಗಿ ಕುತೂಹಲ ಮೂಡಿ ಒಂದು ಸಿ.ಡಿ. ಯ ಬಗ್ಗೆ ಅದರ ಮುಖ್ಯ ಭಾಗವತ ಕಲಾವಿದರಲ್ಲಿ ಈ ಬಗ್ಗೆ ಕೇಳಿದಾಗ ಬಹಳ ಕಳವಳ ಉಂಟಾಯಿತು. ಅವರ ಆಕರ್ಷಕ ಭಾವಚಿತ್ರವನ್ನು ವಿನ್ಯಾಸಗೊಳಿಸಿ ಅ ದ್ವನಿ ಮುದ್ರಣವನ್ನು ಹೊಸ ಹೆಸರಿನೊಂದಿಗೆ ಮಾರುಕಟ್ಟೆಗೆ ತಳ್ಳಿದ್ದರು.  ಅದರ ಬಗ್ಗೆ ಅವರಲ್ಲಿ ವಿಚಾರಿಸಿದೆ, “ ಇವುಗಳಲ್ಲಿ ನಿಮಗೆ ಎನಾದರೂ ಸಿಗುತ್ತಿದೆಯೆ?” ನಸುನಗುತ್ತ ಆ ವಿಚಾರವನ್ನು ಗಂಭೀರವಾಗಿ ಪರಿಗಣಿಸದೆ ಅವರು ಹೇಳಿದ್ದರು  ಅದು ಪುನಹ ರಚನೆಗೊಂಡು ಮಾರುಕಟ್ಟೆಗೆ ಹಾಕಿದ್ದೇ ಅವರಿಗೆ ತಿಳಿದಿಲ್ಲ. ಒಂದು ಕಾಲದಲ್ಲಿ ಸ್ವ ನೈಪುಣ್ಯತೆಯಿಂದ   ನೀಲಾಂಬರಿಯೋ ಸಾವೇರಿಯೋ ಹಾಕಿ ಆಲಾಪಿಸಿದ್ದು, ಹೊರಗೆ ಅವರ ಪೋಟೋವನ್ನೇ ತೋರಿಸಿ ಮಾರಾಟಕ್ಕಿಟ್ಟದ್ದು ಅಲ್ಲೇ ಒಳಗಿದ್ದ ಇವರ ಅರಿವಿಗೆ ಬಂದಿರಲಿಲ್ಲ. ಅದರ ಬಗ್ಗೆ ಅವರಿಗೆ ಆಸಕ್ತಿಯೂ ಇದ್ದಿರಲಾರದು. ಅದಕ್ಕೂ ಹಲವು ಕಾರಣಗಳೂ ಇರಬಹುದು.  ಯಾವುದೋ ಕಾಲದಲ್ಲಿ ಮಾಡಿದ ಕ್ಯಾಸೆಟ್ ನ ಬಗ್ಗೆ ಸಂಭಾವನೆ ತೆಗೆದುಕೊಂಡು ನಿರ್ಮಾತೃಗಳು ಋಣಮುಕ್ತರಾಗಿರುತ್ತಾರೆ. ಹಾಗಾಗಿ ಸಭ್ಯತೆಯ ಕಲಾವಿದರೂ ಯಾರು ಆ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವುದೂ ಇಲ್ಲ. ನಮ್ಮ ಯಕ್ಷಗಾನ ಕಲಾವಿದರು ಯಾರು ಆ ಬಗ್ಗೆ ವ್ಯವಹಾರ ಕುಶಲಿಗರಲ್ಲ. ಯಾವುದೋ  ಬಗೆಯ  ಕಲಾವಿದ ಕೇವಲ ತನ್ನ ಹಕ್ಕುಗಳಿಗಾಗಿ ಹಲವಾರು ಲಕ್ಷಗಳಷ್ಟು ತೆಗೆದುಕೊಂಡು ತೃಪ್ತಿಯಾಗದೆ ಮತ್ತೂ ನ್ಯಾಯಾಲಯದ ಕಟ್ಟೆ ಏರುವ ಪ್ರಮೇಯವನ್ನು ನೋಡುತ್ತೇವೆ. ಆಬಗೆಯಲ್ಲಿ ನೋಡುವಾಗ ಯಕ್ಷಗಾನ ಕಲಾವಿದರು ನಿಜಕ್ಕೂ ಹೃದಯವೈಶಾಲ್ಯರು.  ಸೌಜನ್ಯತೆಗಾಗಿ ಒಂದು ವಾಕ್-ಮೂಲಕ ಅಪ್ಪಣೆಯಲ್ಲ ಭಿನ್ನವಿಸಿಕೊಂಡರೂ ಸಾಕಲ್ಲವೆ? ಸೌಜನ್ಯತೆ ಸೌಹಾರ್ದತೆಗೆ ವಿಶೇಷವಾಗಿ ಗುರುತಿಸಲ್ಪಡುವವರು ನಾವು.  ಇಂದು ಇವುಗಳೆಲ್ಲ ವಾಸ್ತವದಲ್ಲಿ ಅಪರೂಪವಾಗಿಬಿಟ್ಟದ್ದು ಖೇದವನಿಸುವುದಿಲ್ಲವೆ?

    ಕಿಸೆಯಲ್ಲಿ ದುಡ್ಡಿಲ್ಲದಾಗ ಯಕ್ಷಗಾನ ಆಟವಾಡಿಸುವ ಯಕ್ಷಗಾನ ಪ್ರೇಮದಂತೆ  ಈ ಸೇವೆಯೂ ದಿಶೆಯಲ್ಲಿ  ಸಾಗುವುದು ಬಹಳವಾಗಿ ನಿಟ್ಟುಸಿರಿಗೆ ಕಾರಣವಾಗಿಬಿಡುತ್ತದೆ. ಇಂದು ಕಲಾ ಸೇವೆಯ ಮುಖದಲ್ಲಿ ಇದನ್ನು ಧನಾದಾಯದ ಮೂಲವಾಗಿ ಸಿ. ಡಿ. ನಿರ್ಮಿಸುವುದೋ ಇಲ್ಲ ಯಕ್ಷಗಾನ ಕಾರ್ಯಕ್ರಮ ಏರ್ಪಡಿಸುವುದನ್ನು ಕಂಡಾಗ ಎಲ್ಲವೂ ಬಹುಕೃತವೇಶಂನಂತೆ ತೋರಿಬಿಡುತ್ತದೆ.ಇದರ ನಡುವೆ ನಿಸ್ವಾರ್ಥವಾಗಿರುವ ನಿಷ್ಕಾಮ ಕರ್ಮಿಗಳ ಶ್ರಮ ವಿಡಂಬನೆಯ ವಸ್ತುವಾಗಿ ಭ್ರಮಿಸುವಂತಾಗುತ್ತದೆ.  1970-80 ರ ದಶಕದಲ್ಲಿ ಯಕ್ಷಗಾನ ಮೇಳಗಲ ಪರ್ವಕಾಲ. ಹೆಚ್ಚಿನ ಎಲ್ಲಾ ವ್ಯವಸಾಯೀ ಮೇಳಗಳು ವ್ಯಾಪಾರಿ ದೃಷ್ಟಿಯಲ್ಲಿ ಡೇರೆಯ ಒಳಗೆ ನುಸುಳಿಕೊಂಡವು ಮತ್ತು ಅದರಲ್ಲೆ ಚೆನ್ನಾಗಿ ದುಡಿದವು ಎನ್ನಬಹುದು. ಆವಾಗ ಅದು ವಿಮರ್ಷೆಗೆ ಒಳಗಾದರೂ ಗಂಬೀರವಾಗಿ ಪರಿಗಣಿಸಲ್ಪಡಿಲಿಲ್ಲ. ಯಕ್ಷಗಾನಕ್ಕೆ ಸಂಬಂದಿಸಿದಂತೆ ಆಗಿನ ಕಾಲ, ಈಗ ಅದೇ ಅಗಿ ಉಳಿದಿಲ್ಲ. ದುಡ್ಡು ತೆತ್ತು ಬಿಡಿ ಪುಕ್ಕಟೆಯಾದರು ಪ್ರೇಕ್ಷಕರ ಕೊರತೆ ಬಹಳಷ್ಟಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಕೈ ಖಾಲಿಯಾದಾಗ ಹಣಗಳಿಕೆಯ ಸಾಧನವಾಗಿ  ಯಕ್ಷಗಾನ ಕಾರ್ಯಕ್ರಮ ಮಾಡಿದಂತೆ  ಈ ಧ್ವನಿ ಮುದ್ರಣದ ಸಿ. ಡಿ. ಅವಿಷ್ಕಾರವು ವಿಪರೀತದ ಹಂತ ತಲುಪಿದೆ. ಅದು ನಮ್ಮ  ಕಲಾವಿದರ ಗಂಟಲದ್ವನಿಯಾಗಲಿ ಕೈಬಡಿತದ ಶ್ರಮವಾಗಲೀ ಬೆವರು ಸುರಿಸಿದ ಕುಣಿತವಾಗಲಿ.. ಅದನ್ನು ಉಪಯೋಗಿಸಿ ಅದರ ಮೂಲಕ ಬಂದ ಹಣ ಇನ್ನಾವುದೋ ಉದ್ದೇಶಕ್ಕೆ ವಿನಿಯೋಗವಾಗುವುದು ಸರಿಯೇ? ಹೊಟ್ಟೇ ಪಾಡಿಕೆ ಒಬ್ಬ ಬಡ ಕಲಾವಿದ ಇದನ್ನು ಮಾಡಿದರೆ ಸಂದರ್ಭಾನುಸಾರ ಕ್ಷಮಾರ್ಹ ಎಂದೆನಿಸಿದರೂ  ಅದು ಸಾರ್ವತ್ರಿಕವಾಗಬಾರದಲ್ಲ? ಮೊದಲು ನಿರ್ಮಿಸಿದವುಗಳನ್ನೆ ಬೇರೆ ಇನ್ನಾವುದೋ ಹೆಸರಿಟ್ಟು ಒಂದುವಿಧದ ನಕಲಿಯನ್ನೇ ಹೊಸತಾಗಿ ಭ್ರಮಿಸುವಂತೆ ಮಾಡುವ ಉದ್ದೇಶವಾರೂ ಏನು? ಕೇವಲ ವಿತ್ತಾಕರ್ಷಣೆಯಲ್ಲವೆ?  ಯಾವುದೋ ಒಂದು ಕಾಲದಲ್ಲಿ ನಾವೆಲ್ಲ ಮಿತ್ರರು ಆಸಕ್ತರು ಪರಸ್ಪರ ಹಂಚಿಕೊಂಡ ಯಕ್ಷಗಾನ ಪದಗಳು ಸಿ. ಡಿ. ರೂಪದಲ್ಲಿ ಬಂದಾಗ ಮನುಷ್ಯನ ದುರಾಸೆಗೆ ದಿಗಿಲಾಗುತ್ತದೆ. ಮೊದಲೆಲ್ಲ ಯಕ್ಷಗಾನ  ಕ್ಯಾಸೆಟ್ ಹೊರತರಬೇಕಿದ್ದರೆ ಸ್ವಲ್ಪ ಮೂಲಧನ ಹಾಗೂ ಅಪಾರ ಶ್ರಮ ಸಮಯ ವ್ಯಯ ಮಾಡಬೆಕಿತ್ತು. ಕಲಾವಿದರ ಸಾಮಾರ್ಥ್ಯ ಒರೆಗೆ ಹಚ್ಚಿ ಅದನ್ನೆ ಭಂಡವಾಳದಂತೆ ಬಳಸಬೇಕಾಗುತ್ತಿತ್ತು. ಈಗೀಗ ತಂತ್ರಜ್ಞಾನ ಬದಲಾದಂತೆ ಎಲ್ಲವು ಸುಲಭವಾಗಿದೆ. ನಕಲಿ ಮಾಡುವುದಾಗಲಿ ಆ ಮೂಲಕ ಲಜ್ಜೆಯಿಲ್ಲದ ಅಮಾನವೀಯ ಪ್ರವೃತ್ತಿಯನ್ನು ತೋರಿಸುವುದಾಗಲೀ ಒಂದು ರೀತಿಯ ಪತನವನ್ನೇ ಉತ್ಥಾನವೆಂದು ತೋರಿಸುವುದು ನಮ್ಮ ಸಾಂಸ್ಕೃತಿಕ ದಾರಿದ್ರ್ಯದ ಸಂಕೇತ. ಯಾವ ಕಲೆ ನಮ್ಮ ಮನಸ್ಸಿನ ಚೇತನಕ್ಕೆ , ಭಾವಶುದ್ದಿಗೆ ಜ್ಞಾನವೃದ್ದಿಗೆ ಅಥವ ಇನ್ನಾವುದೋ ಸತ್ಕರ್ಮಗಳ ಪ್ರೇರಣೆಗೋ ಕಾರಣವಾದ ಕಲೆ, ಜನನಿಯ ಸ್ಥಾನದಲಿ ಸ್ತನ್ಯ ಪಾನ ಸಮಾನವನ್ನು ಕೊಡಬಲ್ಲ ಕಲೆಯನ್ನು ಕೇವಲ ಕ್ಷುಲ್ಲಕ ಸ್ವಾರ್ಥ ಸಾಧನೆಗೆ ಬಳಸುವುದು ಜನನಿಯನ್ನೆ ಅಡವಿಟ್ಟು ಜೂಜಾಡಿದಂತೆ ಅಲ್ಲವೆ? ಪ್ರತೀಯೊಂದರಲ್ಲೂ ಹಣ ಅಥವಾ ಅದಾಯದ ಮೂಲವನ್ನಾಗಿ ಬಿಂಬಿಸುವುದು ಅಕ್ಷಮ್ಯವೆಂದೇಕೆ ಅನ್ನಿಸುವುದಿಲ್ಲ? ಇಂತಹ ಸ್ವಾರ್ಧಿಗಳ ನಡುವೆ ನಿಜ ಆಸ್ವಾದಕ ಸತ್ವಪರೀಕ್ಷೆಗೆ ಗುರಿಯಾಗುತ್ತ ಪರಿತಪಿಸಬೇಕೆ? ಒಟ್ಟಿನಲ್ಲಿ ಈ ಕಲೆಯನ್ನು ಇವರು ಕಾಣುವ ದೃಷ್ಟಿಕೋನ ಸುಸ್ಪಷ್ಟ ಅದು ಬದಲಾಗಬೇಕಿದೆ.
.



         
          

Monday, July 4, 2011

ಬೆಂಗಳೂರಿನ ಒಂದು ಆಟ !!!!


ಮಳೆಗಾಲ ಬಂತೆಂದರೆ ಬೆಂಗಳೂರಿನಂತಹ ನಗರದಲ್ಲಿ ಊರಿನ ವೃತ್ತಿಪರ ಕಲಾವಿದರ ಯಕ್ಷಗಾನ ಕೂಟಗಳು ನೋಡುವಂತಹ ಅವಕಾಶ ಸಿಕ್ಕಿಬಿಡುತ್ತದೆ. ಅದರಂತೆ ಈ ಭಾನುವಾರದಂದು ಒಂದು ಯಕ್ಷಗಾನ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ನೋಡುವ ಅವಕಾಶವೂ ಒದಗಿಬಂತು. ಊರಿನ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದವರು ಹಾಗು ಇತರ ಅತಿಥಿಕಲಾವಿದರ ಕೂಡುವಿಕೆಯೊಂದಿಗೆ ಯಕ್ಷಗಾನ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಸಂಪೂರ್ಣ ಶ್ರೀದೇವಿ ಮಹಾತ್ಮೆ. ಕೆಲವು ಬೆರಳೆಣಿಕೆಯ  ಅಂಶಗಳು ಬಿಟ್ಟರೆ ಬೇರೆ ಹೇಳೀಕೊಳ್ಳುವ ಅಂಶವೇನು ಇಲ್ಲದೇ ಹತ್ತರ ಒಟ್ಟಿಗೆ ಹನ್ನೊಂದಾದ ಕಾರ್ಯಕ್ರಮವಾಗಿತ್ತು ಎಂಬುದು ವಿಷಾದನೀಯ.

ಬಹಳ ಶ್ರಮ ವಹಿಸಿ ಅಯೋಜಕರು ಕಾರ್ಯಕ್ರಮ ರೂಪಿಸಿದ್ದರು. ಅದಕ್ಕಾಗಿ  ಕ್ಕಿರಿದು ತುಂಬಿದ ಪ್ರೇಕ್ಷಕರು ತೆಂಕುತಿಟ್ಟು ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆ ಇಲ್ಲ ಎಂಬುದನ್ನು ಹೇಳುವಂತಿತ್ತು. ತೆಂಕುತಿಟ್ಟು ಯಕ್ಷಗಾನಗಳು ಬಹಳ ಕಡಿಮೆ ಸಂಖ್ಯೆಯಲ್ಲಿ ಏರ್ಪಡುವುದರಿಂದ ಇಂತಹ ಕಾರ್ಯಕ್ರಮಗಳು ಬಹು ಮುಖ್ಯ ಎನಿಸಿಕೊಳ್ಳುತ್ತವೆ. ಆದರೂ ಯಕ್ಷಗಾನ ಪ್ರದರ್ಶನ ಮಾತ್ರ ತುಂಬ ನೀರಸವಾಗಿಯೇ ಇತ್ತು. ಮೊದಲಾಗಿ ಆಯ್ಕೆ ಮಾಡಿದ ಪ್ರಸಂಗ. ಹೆಚ್ಚಾಗಿ ತೆಂಕುತಿಟ್ಟಿನ ವೈಶಿಷ್ಟ್ಯ ಎನ್ನಬಹುದಾದ ಪ್ರಸಂಗಗಳಲ್ಲಿ ಒಂದು ಈ ದೇವಿ ಮಹಾತ್ಮೆ ಪ್ರಸಂಗ. ಇದು ಒಳಾಂಗಣವಾಗಿ,ಹಾಲ್ ನ ಒಳಗೆ ಆಡುವುದಕ್ಕೆ ಅಷ್ಟೊಂದು ಸೂಕ್ತ ಅಂತ ಅನ್ನಿಸುವುದಿಲ್ಲ.  ಸೇರಿದ ಬಹಳಷ್ಟು ಕಲಾವಿದರು ಹವ್ಯಾಸಿಗಳಾಗಿದ್ದುದರಿಂದ ಆ ಮಟ್ಟಿಗೆ ಕಾರ್ಯಕ್ರಮ ತುಂಬ ಶ್ರಮವಹಿಸಿದ್ದುದು ಎದ್ದು ಕಾಣುವ ಅಂಶವಾಗಿತ್ತು. ಹಿಮ್ಮೇಳ ಆರಂಭದಲ್ಲಿ ತೀರ ಕಳಪೆ ಎನ್ನುವಷ್ಟರ ಮಟ್ಟಿಗೆ ವ್ಯಕ್ತವಾಗುತ್ತಿತ್ತು. ಒಟ್ಟು ಶೃತಿಯಲ್ಲಿ ಎಲ್ಲೊ ಸಣ್ಣ ತೊಂದರೆ ಇದ್ದಂತೆ ಅನ್ನಿಸುತ್ತಿತ್ತು. ಮದ್ದಲೆ ಸಾಧಾರಣಕ್ಕಿಂತ ಕೆಳಮಟ್ಟದಲ್ಲಿತ್ತು. ನಿಜಕ್ಕೂ ಹೊಸಮೂಲೆ ಗಣೇಶ್ ಭಟ ಕುಳಿತಲ್ಲಿಂದ ಹಿಮ್ಮೇಳದ ಸ್ವರೂಪ ತಕ್ಕ ಮಟ್ಟಿಗೆ ಬದಲಾಗಿಬಿಟ್ಟರೂ ಮದ್ದಲೆವಾದನ ಮಾತ್ರ ಹೊಂದಿಕೊಳ್ಳಲು ಶ್ರಮವಹಿಸುತ್ತಿತ್ತು.

ಮುಮ್ಮೇಳದಲ್ಲಿ ವಿಷ್ಣು ಹಾಗೂ ಮಧು ಕೈಟಭ ವೇಷಗಳು ಪರವಾಗಿಲ್ಲ ಅನ್ನಿಸಿದರೂ ಒಟ್ಟಿನಲ್ಲ್ಲಿ ನೀರಸವಾಗಿ ಸಾಗಿದ ಪ್ರದರ್ಶನ ಈ ದೇಣಿಗೆ ಸಾಕಾಗಲಿಲ್ಲ.  ಮಧು ಕೈಟಭ ಪ್ರವೇಶ ಡಿಜಿಟಲ್ ಮಾದರಿ ಸ್ಪೆಶಲ್ ಇಫೆಕ್ಟ್ ಕೊಟ್ಟು ಮಾಡಿದ್ದು ಅಷ್ಟೊಂದು ಸೂಕ್ತ ಅನ್ನಿಸಲಿಲ್ಲ. ಹಿಮ್ಮೇಳ ಹಿಂಭಾಗ ಎತ್ತರದ ವೇದಿಕೆ ಅದರ ಹಿಂಭಾಗ ದಿಂಗಂತದ ಆಕಾಶ ಅಲ್ಲಿಂದ ಆರ್ಭಟಿಸುತ್ತ ಇಳಿದು ಬರುವ ಮಧು ಕೈಟಭ ..ಆದರೆ ರಂಗ ಸ್ಥಳಕ್ಕೆ ಪ್ರವೇಶ ಮಾತ್ರ ಅಬ್ಬರಿಸದೇ ಹೊಯಿತು. ಒಟ್ಟಿನಲ್ಲಿ ಯಕ್ಷಗಾನಕ್ಕೆ ಇಂತಹ ಅದ್ದೂರಿಯ ಅಗತ್ಯ ಇದೆಯೆ?

ಹೊಸಮೂಲೆಯ ಆಗಮನದಿಂದ ವೇಗ ಹೆಚ್ಚಿಸಿಕೊಂಡರೂ ಮಾಲಿನಿಯ ಪಾತ್ರ ಆ ವೇಗವನ್ನು ಕುಗ್ಗಿಸಿ ಅನಾವಶ್ಯಕವಾಗಿ  ಹಿಡಿದೆಳೆಯಿತು. ಮಾತ್ರವಲ್ಲ ಮಾಲಿನಿಯ ಪಾತ್ರವೂ ತೀರ ಸಾಮಾನ್ಯವಾಗಿಯೇ ಇತ್ತು. ಒಂದು ಕಾಲದ ಮೇಳದ ಕಲಾವಿದರು ಇವರೇ ಎಂದು ಅನುಮಾನಿಸುವಂತೆ ಅನ್ನಿಸಿತು. ಮಹಿಷಾಸುರನ ಪ್ರವೇಶ ದೊಂದಿ ರಾಳ ರಹಿತವಾಗಿದ್ದರೂ ರಂಗಸ್ಥಳ ಪ್ರವೇಶಕ್ಕೆ ಬರೋಬ್ಬರಿ ಅರ್ಧ ಗಂಟೆ ತೆಗೆದು ಕೊಂಡರು ರಂಗದ ಹೋರಗಿದ್ದ ಸರ್ಕಸ್ ನಷ್ಟು ರಂಗದ ಮೇಲೆ ಇರದೆ ನಿರೀಕ್ಷೆಯನ್ನು ಹುಸಿಯಾಗಿಸಿತು. ಮಹಿಷಾಸುರ ಪ್ರವೇಶಕ್ಕೆ ಅತ್ಯಂತ ಪ್ರತಿಭಾವಂತ ಚೆಂಡೆವಾದಕರು ಮತ್ತು ನಿಡ್ಲೆ ಅಜ್ಜನ ಶಿಷ್ಯರೂ ಆದ ಸುಬ್ರಹ್ಮಣ್ಯ ಶಾಸ್ತ್ರಿ ಚೆಂಡೆ ಹಿಡಿದರೂ ಹಿನ್ನೆಲೆಯಲ್ಲಿ ಕರ್ಕಷವಾಗಿ ಅದಾವುದೋ ಚೆಂಡೆವಾದನವನ್ನು ಮೈಕ್ ಗಳಲ್ಲಿ  ಮೊಳಗಿಸಿ ಒಟ್ಟು ಆಟವನ್ನೇ  ಕುಲಗೆಡಿಸಿಬಿಟ್ಟ ಹಾಗೆ ಅನ್ನಿಸಿತು. ಹಿಮ್ಮೇಳದ ಚೆಂಡೆವಾದನದ ಬಗ್ಗೆ ವಿಶ್ವಾಸ ಕೊರತೆಯಿಂದ ಹೀಗೆ ಮೊಳಗಿಸಿ ಒಂದು ರೀತಿಯಲ್ಲಿ ಅತ್ಯುತ್ತಮ ಕೈಚಳಕವನ್ನು ಆನಂದಿಸುವ ಅವಕಾಶವನ್ನೆ ಇಲ್ಲದಂತೆ ಮಾಡಿದರು. ಕಟೀಲು ಮೇಳದ ಆಟಗಳಲ್ಲು ಇಂತಹ ಒಂದು ಸಂಪ್ರದಾಯ ಇದೆ.ಅದು ಏಕೆ ಬೆಳೆದು ಬಂತೋ ಎಂಬುದು ಕೆಲವೊಮ್ಮೆ ಆಶ್ಚರ್ಯವಾಗುತ್ತದೆ. ಅಲ್ಲಿ ಚೆಂಡೆಯ ಬದಲು ಬ್ಯಾಂಡ್ ವಾದ್ಯಗಳು ಮೊಳಗಿ ಚೆಂಡೆಯ ವೈಷಿಷ್ಟ್ಯವನ್ನೇ ನುಂಗಿ ಹಾಕಿಬಿಡುತ್ತದೆ. ಯಕ್ಷಗಾನದ ಹಿಮ್ಮೇಳದ ಮೇಲೆ ವಿಶ್ವಾಸದ ಕೊರತೆಯನ್ನು ಇದು ಸಾರುವುದಿಲ್ಲವೇ? ಇದು ಒಂದು ರೀತಿಯಲ್ಲಿ ಶ್ರೀಮಂತ ಕಲೆಯ ಪ್ರತಿಭೆಯನ್ನು ಗೇಲಿ ಮಾಡಿದಂತೆ ಎಂದು ಏಕೆ ಅನ್ನಿಸುವುದಿಲ್ಲ?

ಮಹಿಷಾಸುರ ಅಬ್ಭರದ ಪದವಾದ “ ಧಾರುಣಿಯ ಮೇಲೆ ಕಣ್ಣೀರ ಸುರಿಸುತ್ತಿರಲು...” ಪದಕ್ಕೆ ಹೊಸಮೂಲೆಯ ತಾರಕ ಸ್ವರಕ್ಕೆ ಮಹಿಷಾಸುರನ ಅಬ್ಬರವೇ ಇರಲಿಲ್ಲ..!!! ಪ್ರವೇಶದಲ್ಲಿ ಸೀಟ್ ಮೆಲೆ ಹತ್ತಿ ಏನೆಲ್ಲ ಸರ್ಕಸ್ ತೋರಿಸಿ ಫೊಟೊ ಪೊಸ್ ಕೊಟ್ಟದ್ದು ಅಭಾಸವಾಗಿ ಕಂಡಿತು. ಒಟ್ಟಿನಲ್ಲಿ ಸಭಾ ರಂಜನೆ. ಇನ್ನು ಮುಂದಿನ ಭಾಗ ನೋಡಿ ಸಮಯ ವ್ಯಯ ಮಾಡುವ ಅನಿವಾರ್ಯತೆ ಇರಲಿಲ್ಲ. ಒಟ್ಟಿನಲ್ಲಿ ಒಂದು ನೀರಸ ಯಕ್ಷಗಾನ. ಆದರು ವಿಶೇಷ ಆಸಕ್ತಿ ವಹಿಸಿ ತೆಂಕು ತಿಟ್ಟು ಯಕ್ಷಗಾನವನ್ನು ಶ್ರಮವಹಿಸಿ ಸಂಘಟಿಸಿದ್ದಾರೆ ಅದು ನಿಜಕ್ಕು ಅಭಿನಂದನಾರ್ಹ.