ಕಟೀಲು ಕ್ಷೇತ್ರದಲ್ಲಿ ನಡೆಯುವ ಯಕ್ಷ ಸತ್ಸಂಗ ಎಂಬ ಕಾರ್ಯಕ್ರಮದಲ್ಲಿನ ಒಂದು ಅಭಾಸಕರ ಪ್ರವೃತ್ತಿಯಿಂದ ಬೇಸತ್ತು,. ಇದರಿಂದ ತೀವ್ರವಾಗಿ ನೊಂದ ಮನಸ್ಸಿನಿಂದ ಈ ಅನಿಸಿಕೆಗಳನ್ನು ಹೇಳುತ್ತಿದ್ದೇನೆ. ಅತೀ ಹಿರಿಯ ವ್ಯಕ್ತಿಗಳೆನಿಸಿದವರ ಸಹಭಾಗಿತ್ವದಲ್ಲಿ ನೇತೃತ್ವದಲ್ಲಿ ನಡೆಯುವ ಒಂದು ಮೂರ್ಖತನದ ಪರಮಾವಧಿ ಇದು.
ಈ ಕಾರ್ಯಕ್ರಮದಲ್ಲಿ ಯಕ್ಷಗಾನದ ಹೆಚ್ಚಿನ ಎಲ್ಲಾ ಭಾಗವತರುಗಳು ಹಾಡಿದ ಹಾಡುಗಳ ಧ್ವನಿ ಮುದ್ರಿಕೆಯನ್ನು ಬಿಡುಗಡೆ ಮಾಡುವ ಮೂಲಕ ತಮ್ಮಲ್ಲಿನ ಸ್ವಾರ್ಥ ಬುದ್ದಿಯ, ಕುತ್ಸಿತ ಮನಸ್ಸನ್ನು ಪ್ರದರ್ಶನ ಮಾಡುತ್ತಿದ್ದಾರೆ ಎಂದೇ ನನ್ನ ಅಭಿಪ್ರಾಯ. ಯಾಕೆಂದರೆ, ಈ ಮುದ್ರಿಕೆಯಲ್ಲಿ ಅಕ್ಷಯ ಕೃಷ್ಣ ರ ಸಂಗ್ರಹ ಎಂದು ಹಲವು ಹಾಡುಗಳನ್ನು ಕ್ರೋಢೀಕರಿಸಿ ಮುದ್ರಿಸಲಾಗಿದೆ. ವಾಸ್ತವದಲ್ಲಿ ಅದರಲ್ಲಿ ಬಹಳಷ್ಟು ಹಾಡುಗಳು ನನ್ನ ಸಂಗ್ರದಿಂದ ಈ ಮೊದಲು ಉಚಿತವಾಗಿ ಯಾವುದೇ ಸ್ವಾರ್ಥವಿಲ್ಲದೆ ಹಂಚಿಕೊಂಡು ಪ್ರಸಾರವಾದವುಗಳಾಗಿವೆ. ಇದನ್ನು ಅಕ್ಷಯ ಕೃಷ್ನರಲ್ಲಿ ಖಚಿತ ಪಡಿಸಿಯೇ ಈ ಪ್ರತಿಕ್ರಿಯೆಯನ್ನು ಮಂಡಿಸುತ್ತಿರುವುದು. ಹೀಗಿದ್ದು ನನ್ನ ಅನುಮತಿ ಬಿಡಿ ನನಗೆ ಒಂದು ಸೂಚನೆಯನ್ನೂ ನೀಡದೇ ಈರೀತಿಯ ವರ್ತನೆಯನ್ನು ತೋರುವ ಸತ್ಸಂಗ ಕಾರ್ಯಕ್ರಮದ ನಿರ್ವಾಹಕರುಗಳಾದ ಡಾಕ್ಟರ್ ಶ್ರೀ ಪದ್ಮನಾಭ ಕಾಮತ್, ಶ್ರೀ ಹರಿನಾರಾಯಣ ಅಸ್ರಣ್ಣ ಮತ್ತು ಇತರರಿಗೆ ಶೋಭೆ ತರುವಂಥಹುದೇ? ಇದು ಈ ಕ್ಷೇತ್ರದ ಘನತೆಗೆ ಪಾವಿತ್ರ್ಯತೆಗೆ ತಕ್ಕುದಾದುದೆ? ಎಂಬುದು ಪ್ರಶ್ನೆ. ಇದು ಅತ್ಯಂತ ಮೂರ್ಖತನದ ದುಡ್ಡು ಮತ್ತು ಹೆಸರು ಮಾಡುವ ತೆವಲು ಎಂದರೆ ತಪ್ಪಾಗಲಾರದು. ದುಡ್ಡುಮಾಡುವ ತೆವಲು ಇರುವುದು ಸಮಾಜದಲ್ಲೀ ಹೀನ ಪ್ರವೃತ್ತಿಯನ್ನು ನಡೆಸುವವರಿಗೆ. ಆ ಕೆಲಸಕ್ಕೆ ಇವರು ಈ ಪವಿತ್ರವಾದ ಕ್ಷೇತ್ರವನ್ನು ಉನ್ನತವಾದ ಕಲೆಯನ್ನೂ ಮಾಧ್ಯಮವಾಗಿ ಬಳಸಿಕೊಂಡಿದ್ದಾರೆ ಎಂದಾದರೆ ಈ ಹೀನ ಸಂಸ್ಕೃತಿಗೆ ಏನು ಹೇಳಬೇಕು.
ನನ್ನಲ್ಲಿರುವ ಧ್ವನಿಮುದ್ರಣ ಸಂಗ್ರಹಕ್ಕೆ ಸುಮಾರು ಏಳೆಂಟು ವರ್ಷಗಳ ಶ್ರಮವಿದೆ. ಅದು ಕೇವಲ ನನ್ನ ಒಬ್ಬನಿಂದ ಆಗಿ ಹೋದ ಕಾರ್ಯವಲ್ಲ. ನನ್ನಂತೆ ನನ್ನ ಮಿತ್ರ ಬಳಗ ನನ್ನ ಕಾರ್ಯದಲ್ಲಿ ಸಹಕಾರವನ್ನು ನೀಡಿ ನನ್ನನ್ನು ಪ್ರೋತ್ಸಾಹಿಸಿ ಮತ್ತು ಆ ಸಂಗ್ರಹಗಳಿಗೆ ನಿಸ್ವಾರ್ಥದಿಂದ ಕೇವಲ ಯಕ್ಷಗಾನ ಕಲೆಯ ಹಿತದೃಷ್ಟಿಯಿಂದ ನೆರವಾದವರು. ಈಗ ಯಾವುದೋ ಮೂರ್ಖರ ದುಡ್ಡಿನ ತೆವಲಿಗೂ ಹೆಸರು ಗಳಿಸುವ ತೆವಲಿಗೂ ಅದು ಉಪಯೋಗವಾಗಿಬಿಟ್ಟಿತು ಎಂದಾದರೆ ನಮ್ಮೆಲ್ಲರ ಶ್ರಮಕ್ಕೆ ನಮ್ಮ ಭಾವನೆಗೆ ಅವಹೇಳನ ಮಾಡಿದಂತೆ ಅಲ್ಲವೇ? ಇದರಲ್ಲಿ ಹೆಚ್ಚಿನವರೆಲ್ಲರೂ ಅತಿ ವಿದ್ಯಾವಂತರೂ ವಿದ್ವಾಂಸರೂ ಮಹನೀಯರು ಇವರಿಗೆಲ್ಲ ಇದು ಶೋಭೆ ತರುವಂತಹುದೆ? ಇದಕ್ಕೆಲ್ಲ ಅವರಲ್ಲಿ ಯಾವ ಉತ್ತರವಿದೆ? ಆದರೆ ಇವರೆಲ್ಲ ಇದಕ್ಕೆ ಉತ್ತರಿಸುವುದಕ್ಕೆ ಬಾಧ್ಯಸ್ಥರು.
ನಾನಾಗಲೀ ನನ್ನ ಮಿತ್ರ ವರ್ಗವಾಗಲಿ ಈ ಮೇಲ್ ಮುಖಾಂತರ ಅಥವಾ ಇನ್ನಿತರ ಮಾಧ್ಯಮದಲ್ಲಿ ಯಕ್ಷಗಾನದ ಬೆಳವಣಿಗೆ ಪ್ರೋತ್ಸಾಹವನ್ನು ಹೊಂದಿಕೊಂಡು ಯಕ್ಷಗಾನದ ಬಗ್ಗೆ ಒಂದು ಜಾಗೃತಿಗೆ ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಯಾವುದೇ ಫಲಾಪೇಕ್ಷೆ ಇಲ್ಲದೇ ಹಂಚಿಕೊಳ್ಳುತ್ತಿದ್ದೆವು. ಇದರ ಮೂಲ ಉದ್ದೇಶ ನಿಸ್ವಾರ್ಥ ಸೇವೆ ಮಾತ್ರ. ಈ ರೀತಿಯಿಂದ ನಾನು ಈ ಮೇಲ್ ನಲ್ಲಿ ಬಹಳ ದೊಡ್ದ ಬಳಗವನ್ನೇ ಹೊಂದಿದವನು. ಅದು ಐದಾರು ವರ್ಷಗಳ ಹಿಂದಿನ ಕಥೆ. ಆದರೆ ಈವರೆಗೆ ಎಲ್ಲೂ ಅದು ಸ್ವಾರ್ಥ ಪಿಶಾಚತ್ವಕ್ಕೆ ಬಲಿಯಾಗಲಿಲ್ಲ. ಈಗ ಅದು ಆಯಿತೆಂದರೆ ಮನುಷ್ಯನ ಪಿಪಾಸು ತನಕ್ಕೆ ಏನೆನ್ನಬೇಕು?
ನನ್ನಿಂದ ಹಂಚಿಹೋದ ಧ್ವನಿಮುದ್ರಣದ ಬಗ್ಗೆ ನಾನು ಹೇಳುವುದಲ್ಲ ಅದನ್ನು ಸ್ವೀಕರಿಸಿ ಪ್ರೋತ್ಸಾಹಿಸಿದ ಬಳಗವೇ ಮಾತನಾಡುತ್ತದೆ. ಹಲವಾರು ಕ್ಯಾಸೆಟ್ ಗಳು ತೀರ ಜೀರ್ಣಾವಸ್ಥೆಯಲ್ಲಿದ್ದರೆ ಅದನ್ನು ತಡರಾತ್ರಿಯವರೆಗೂ ಛಲದಿಂದ ದುರಸ್ತಿಗೊಳಿಸಿ ಕಂಪ್ಯೂಟರ್ ನಲ್ಲಿ ದಾಖಲಿಸುವುದಕ್ಕೆ ಬಹಳಷ್ಟು ಶ್ರಮವನ್ನು ವಿನಿಯೋಗಿಸಿದವನು. ಅದರ ಸಂಗ್ರಹಕ್ಕಾಗಿಯೂ ಬಹಳಷ್ಟು ಸಮಯವನ್ನು ಧನವನ್ನೂ ವ್ಯಯಮಾಡಿದವನು. ಇದು ಕೇವಲ ಯಕ್ಷಗಾನದ ಅಮೂಲ್ಯ ರತ್ನಗಳು ದಾಖಲೆಯಲ್ಲಿ ಉಳಿದು ಬಿಡಲಿ ಎಂಬ ಉದ್ದೇಶಮಾತ್ರ ಅಲ್ಲಿತ್ತು. ಈ ಯಕ್ಷಗಾನ ಧ್ವನಿ ಮುದ್ರಣಗಳನ್ನು ಮೂಲದಲ್ಲಿ ನಿರ್ಮಿಸಿದ ಕಲಾವಿದರುಗಳಿಗೆ, ನಿರ್ಮಾತೃಗಳಿಗೆ ಸದಾ ಕೃತಜ್ಞನಾಗಿ ಇದು ಮಾರಾಟದ ವಸ್ತುವಾಗಬಾರದು. ಕೇವಲ ಚಿಲ್ಲರೆ ದುಡ್ಡಿನ ಆಸೆಗೆ ಇದರ ಮೌಲ್ಯ ಸೀಮಿತಗೊಳ್ಳದೇ ಮೌಲ್ಯವನ್ನು ನಿರ್ಧರಿಸಲಾಗದ ವಸ್ತುವೆಂದೇ ನನ್ನ ಅನಿಸಿಕೆ. ನನಗೆ ಇದರಿಂದ ಕೀರ್ತಿಯನ್ನೋ ಹಣವನ್ನೋ ಆರ್ಜಿಸುವ ಇರಾದೇ ಇರುತ್ತಿದ್ದರೆ ಇಷ್ಟುವರ್ಷ ಅದನ್ನು ಹಾಗೇ ಇರಿಸಬೇಕಿತ್ತೇ? ಬುದ್ಧಿ ಇದ್ದವರು ತಿಳಿದುಕೊಳ್ಳಬೇಕು. ನನ್ನಲ್ಲಿ ಬಂದು ಕೇಳಿದವರಿಗೆ ಧರ್ಮಾರ್ಥವಾಗಿ ಅಭಿಮಾನದಿಂದ ಹಂಚಿದ ನನಗೆ ಈಗ ಇವರ ಈ ಸ್ವಾರ್ಥ ಪ್ರವೃತ್ತಿಯಿಂದ ತೀವ್ರವಾದ ಅಘಾತವಾಗಿದೆ. ಬಣ್ಣ ಬಣ್ಣದ ಕವರ್ ನಲ್ಲಿ ತಮ್ಮ ತಮ್ಮ ಕಲರ್ ಪೋಟೋದೊಂದಿಗೆ ಸಿ, ಡಿ. ಅಥವಾ ಡಿವಿಡಿಯನ್ನು ಬಿಡುಗಡೆಮಾಡುವ ಇವರ ಪ್ರಚಾರ ಪ್ರಿಯ ಸ್ವಾರ್ಥ ಲೋಲುಪತೆಗೆ ನಿಸ್ವಾರ್ಥ ಯಕ್ಷಗಾನ ಅಭಿಮಾನಿಗಳ ಶ್ರಮ ಬೇಕಾಗಿತ್ತೆ?
ಒಂದುವೇಳೆ ಇಂತಹ ಧ್ವನಿ ಮುದ್ರಣವನ್ನು ಉಚಿತವಾಗಿ ಯಕ್ಷಗಾನ ಅಭಿಮಾನಿಗಳಿಗೆ ಹಂಚುತ್ತಿದ್ದರೆ ನಮ್ಮ ಆಕ್ಷೇಪವಿರುತ್ತಿರಲಿಲ್ಲ. ಆದರೆ ಇದನ್ನು ಮಾರಟ ಮಾಡುವುದು ಮತ್ತು ಅವರಲ್ಲಿನ ಹೆಸರು ಮಾಡಬೇಕೆನ್ನುವ ಮೂಲ ಸ್ವಾರ್ಥಮಯ ಉದ್ದೇಶ ಮಾತ್ರ ನಮ್ಮ ನಿಸ್ವಾರ್ಥ ಉದ್ದೇಶವನ್ನು ಅಣಕಿಸುವಂತೆ ಅವಹೇಳನ ಮಾಡುವಂತಹುದಾಗಿದೆ. ಇದೊಂದು ಅಕ್ಷಮ್ಯ ಅಪರಾಧ. ಯಕ್ಷಗಾನ ಸಂಬಂಧಿಸಿದ ಈ ಕಾರ್ಯಕ್ರಮಕ್ಕೆ ನನ್ನ ಯಾವುದೇ ಅಕ್ಷೇಪವಾಗಲೀ ಇರುವುದಿಲ್ಲ. ಕಾರ್ಯಕ್ರಮ ನಡೆಯಲಿ ಯಕ್ಷಗಾನಂ ಗೆಲ್ಗೆ ಎಂದು ಹಾರೈಸುವವ ನಾನು.
ಇದರ ಪದಾಧಿಕಾರಿಗಳು ಇದರಲ್ಲಿ ಭಾಗಿಯಾದವರೆಲ್ಲರೂ ಈ ಸ್ವಾರ್ಥ ಸಾಧನೆಯ ಅಭಾಸಕ್ಕೆ ಉತ್ತರಿಸಬೇಕಾದವರು. ದಕ್ಷಯಜ್ಞದಲ್ಲಿ ಭಾಗಿಯದವರೆಲ್ಲರೂ ಈಶ್ವರ ದ್ವೇಷಿಗಳು ಎಂದು ಶಿವನು ಪರಿಗಣಿಸಿದ ಹಾಗೆ, ಇದು ಸಮಸ್ತ ಯಕ್ಷಗಾನಕ್ಕೆ ಅವಮಾನಿಸಿ ಲೇವಡಿ ಮಾಡಿದಂತೆ. ತೀರಾ ವಿಷಾದನೀಯ ಮತ್ತು ಅವಹೇಳನಕಾರೀ ಕೃತ್ಯವಿದು. ಈ ಬಳಗದಲ್ಲಿರುವ ಎಲ್ಲರೂ ಇದಕ್ಕೆ ಜವಾಬ್ದಾರರು.
ಈ ಧ್ವನಿ ಮುದ್ರಣ ಬಿಡುಗಡೆಯಾಗುವ ಪ್ರಕಟನೆಯನ್ನು ಕಂಡು ನಮ್ಮ ಹಲವು ಮಿತ್ರರು ಈಬಗ್ಗೆ ಹಾಡುಗಲನ್ನು ಒದಗಿಸಿದ ಸಂಗ್ರಹಕಾರಲ್ಲಿ ಕೇಳಿದಾಗ ಉಡಾಫೆಯಿಂದ ಮತ್ತು ಪ್ರಶ್ನೆಯ ಗಂಭೀರತೆಯನ್ನು ತಿಳಿಯದೇ ಪ್ರತಿಕ್ರಿಯಿಸಿದ್ದಾರೆ. ಸ್ವತಃ ನಾನೂ ಸಹ ಅಕ್ಷಯ ಕೃಷ್ಣರಲ್ಲಿ ಕೇಳಿದಾಗ ಅಗಲೂ ಅವರೂ ತೀರ ನೀರಸವಾಗಿ ಉಡಾಫೆಯಿಂದ ಸಂದೇಶದ ಉತ್ತರ ನೀಡಿದ್ದಾರೆ. ಇದು ನಿಜಕ್ಕೂ ಖೇದನೀಯ.
ಮೂಲತಃ ನಿರ್ಮಿಸುವಾಗ ನಾನಾಗಲೀ ನಮ್ಮ ಮಿತ್ರರಾಗಲೀ ಸಂಬಂಧಿಸಿದವರಿಂದ ನಿರ್ಮಾತೃಗಳಿಂದ ಯಾವುದೇ ಹಕ್ಕುಗಳನ್ನು ಆಗಲೀ ಸಮ್ಮತಿಯನ್ನಾಗಲೀ ಪಡೆದಿಲ್ಲ ನಿಜ. ಅದು ಅಪರಾಧವೂ ಹೌದು. ಹಿಂದಿನನ ಮೌಲ್ಯ ಕಟ್ಟಲಾಗದ ಪಳೆಯುಳಿಕೆಗಳನ್ನು ಉಳಿಸಿ ಸಂರಕ್ಷಿಸುವಲ್ಲಿ ಇದು ಅಪರಾಧ ಎಂದು ಪರಿಗಣಿಸಬೇಕಾದ್ದಿಲ್ಲ ಎಂಬುದು ನಮ್ಮ ನಂಬಿಕೆ. ನಿರ್ನಾಮವಾಗಿ ಹೋಗುವ ಅಮೂಲ್ಯ ವಸ್ತುಗಳನ್ನು ಉಳಿಸುವ ಏಕಮಾತ್ರ ಉದ್ದೇಶಮಾತ್ರ ಆಗ ನಮ್ಮಲ್ಲಿ ಇದ್ದದ್ದು. ಮತ್ತು ಅದನ್ನು ಜನಮಾನಸದಲ್ಲಿ ಜೀವಂತವಾಗುವಂತೆ ಮಾಡಿ ಕಲೆ ಮತ್ತು ಕಲಾವಿದರ ಸ್ಮರಣೆಯನ್ನು ಜಾಗೃತವಾಗಿಸುವ ನಿಸ್ವಾರ್ಥ ಉದ್ದೇಶದಿಂದ ಮಾಡಿದೆವು. ಇದನ್ನು ಚಿಕ್ಕಾಸೂ ಬೇಡದೆ ಮಾರಾಟ ಮಾಡದೆ ಉಳಿಸಿಕೊಂಡು ಬಂದಿದ್ದೇವೆ.
ಇನ್ನು ಇದಕ್ಕಾಗಿ ಸೃಷ್ಟೀಕರಣವನ್ನೋ ಇನ್ನೇನೋ ಮುಚ್ಚಿಹಾಕುವ ವಿವರಣೆಯನ್ನು ಇವರುನೀಡಬಹುದು. ಆದರೆ ಅಷ್ಟೆ ಸಾಕೆ? ಇದರಿಂದ ಸಂಗ್ರಹವಾದ ಹಣವನ್ನು ಕ್ಷೇಮನಿಧಿಯೋ ಮತ್ತೋಂದು ಎಂದು ಸಮಾಧಾನ ಪಡಿಸುವ ಮಾತುಗಳಿರಬಹುದು. ಆದರೆ ಒಂದು ಸಲ ಚೌರ್ಯತನದಿಂದ ಕದ್ದದ್ದನ್ನು ಕಾಣಿಕೆಯಾಗಿಯೋ ದಾನವಾಗಿಯೋ ನೀಡಿದ್ದಲ್ಲಿ ಮಾಡಿದ ಕಳ್ಳತನ ಅಪರಾಧ, ಸಾಚವಾಗುವುದಕ್ಕೆ ಸಾಧ್ಯವಿದೆಯೆ? ಸಾಧ್ಯವಿದೇ ಎಂದಾದರೆ ಇವರ ಮನೋಭಾವದ ಬಗ್ಗೆ ಮರುಗಬೇಕು.
