"ಇದು ವಿಮರ್ಶೆಯಲ್ಲದ ಚಿಂತನ"

Friday, May 20, 2022

ಅಂಧನೃಪನ ವಿಷಾದಯೋಗ

ಹಸ್ತಿನಾವತಿಯ ಚರಿತ್ರೆ ರಕ್ತ  ಚರಿತ್ರೆಯಾಗಿ ಹೋಯಿತು. ಇಂದಿಗೆ ಹದಿನೇಳು ದಿನಗಳು ಕಳೆದು ಹೋಯಿತು.

ಇಂದು ಸಂಜಯ ಬಂದಿದ್ದ. ಬಹಳ ದುಗುಡದಲ್ಲಿದ್ದ. ಕುರುಕ್ಷೇತ್ರದಲ್ಲಿ ಯುದ್ದ ಆರಂಭದಿಂದಲೂ ಸಂಜಯ ದುಗುಡವನ್ನು ಅನುಭವಿಸುತ್ತಿದ್ದ. ಇದು ನನಗೆ ಮಾತ್ರವೇ ತಿಳಿದಿತ್ತು. ಯಾಕೆಂದರೆ ಕುರುಕ್ಷೇತ್ರದ ಯಥಾವತ್ ಚಿತ್ರಣವನ್ನು ಆತ ವಿವರಿಸುತ್ತಿದ್ದ. ಪ್ರತಿಯೊಂದು ಘಟನೆಯನ್ನೂ ವಿವರಿಸುವಾಗ ನಾನು ಕುತೂಹಲದಿಂದ ಪ್ರಶ್ನೆ ಹಾಕುತ್ತಿದ್ದರೆ, ಆತ ಭಾವರಹಿತನಂತೆ ಉತ್ತರಿಸುತ್ತಿದ್ದ. ಆದರೂ ಆತನೊಳಗಿನ ಹೆಪ್ಪುಗಟ್ಟಿದ ವಿಷಾದವನ್ನು ನಾನು ಗುರುತಿಸಬಲ್ಲೆ. ಈಗ ಅದೇ ವಿಷಾದವನ್ನು ನನಗೆ ರವಾನಿಸಿ ಹೋಗಿದ್ದಾನೆ. ಹದಿನೇಳು ದಿನದ ಯುದ್ದ ಮುಗಿದಿದೆ. ಹಸ್ತಿನಾವತಿಯ ಹೆಚ್ಚಿನ ಮನೆಗಳು ಅನಾಥ ಪ್ರಜ್ಞೆಯಿಂದ ರೋಧಿಸುತ್ತವೆ. ಸೂತಕದ ಛಾಯೆ ಹಸ್ತಿನೆಯನ್ನು ಆವರಿಸಿದೆ. ಆದರೂ ಅದರೂ ಕೊನೆಯಲ್ಲಿ ಇದೇಕೆ ಆಶಾಭಾವ. ನನಗೆ ತಿಳಿಯದು. ಯುದ್ದರಂಗದಲ್ಲಿ ನನ್ನ ಪುತ್ರ ದುರ್ಯೋಧನ ಎಲ್ಲಾದರೂ ಕಾಣುತ್ತಿದ್ದಾನೆಯೇ ಎಂದು ಕೇಳಿದೆ. ಸಂಜಯ ನಿಧಾನವಾಗಿ ದುಗುಡದಿಂದ ಹೇಳಿದ ಇಲ್ಲ. ಬರೀ ಪರ್ವತದ ಎತ್ತರದ ಹೆಣಗಳು ಕಾಣುತ್ತವೆ. ಕತ್ತಲೆಯಾಗುತ್ತಿದೆ. ದೆವ್ವ ಪ್ರೇತಗಳ ಕೇಕೆ ಮಾತ್ರ ಕೇಳುತ್ತದೆ. ಆಟ್ಟಹಾಸದಿಂದ ಕೂಗಾಡುತ್ತಿದ್ದ ಭೀಮಸೇನನೂ ಬಿಡದಿಯನ್ನು ಸೇರಿಯಾಗಿದೆ. ಆಗಲೇ ನಾನು ಹೇಳಿದೆ  " ಸಂಜಯ, ದುರ್ಯೊಧನ ಇನ್ನೂ ಬದುಕಿದ್ದಾನೆ ಎಂದು ನಾನು ವಿಶ್ವಸಿಸಬಹುದೇ?  ಯಾಕೆಂದರೆ ಭೀಮನ ಅಟ್ಟ ಹಾಸ ಇನ್ನೂ ಮಾರ್ದನಿಸುತ್ತಿದೆ.  ಒಂದು ಸಲ ದುರ್ಯೋಧನ ಎಲ್ಲಿದ್ದಾನೆ? ಹೇಗಿದ್ದಾನೆ ಎಂದು ಹುಡುಕಿ ಕರೆದು ತಾ.  ಇದೀಗ ಸಂಜಯ ಬಂದಿದ್ದ. ಕಣ್ಣು ಕಾಣದೆ ದೃಷ್ಟಿ ಕಳೆದುಕೊಂಡ ನಾನು ಮಾತನ್ನೂ ಸಹ ಕಳೆದುಕೊಂಡಿದ್ದೇನೆ.

 " ಏನು ಮಾಡಲಿ ಸಂಜಯ...?" ಸ್ವರವಿಲ್ಲದ ಸ್ವರದಲ್ಲಿ ಕೇಳಿದೆ.

" ಮಹಾರಾಜ,  ಇದೇ ಮಾತನ್ನು ಕೆಲವು  ದಿನಗಳ ಮೊದಲು  ಕೇಳುತ್ತಿದ್ದರೆ ನಾನು ಸ್ಪಷ್ಟ ಉತ್ತರ ಕೊಡುತ್ತಿದ್ದೆ. ಆದರೆ ಅಂದು ಪ್ರಶ್ನೆಯನ್ನು ಕೇಳುವ ಬಯಕೆಯೂ ಇರಲಿಲ್ಲ. ಉತ್ತರವೂ ನಿನಗೆ ಬೇಡವಾಗಿತ್ತು."  ಆದರೆ ಈಗ ನಾನೇ ಉತ್ತರವಿಲ್ಲದೆ ಮೌನವಾಗಿ ನಿಂತಿದ್ದೇನೆ. ನ್ಯಾಯಾಧೀಶ ಶಿಕ್ಷೆ ವಿಧಿಸಿ ನ್ಯಾಯವನ್ನೇನೋ ಸ್ಥಿರವಾಗಿಸಬಹುದು, ಆದರೆ ಮನಃ ಸಾಕ್ಷಿ ನೀಡುವ ನ್ಯಾಯ ತೀರ್ಮಾನ ಅತನನ್ನೂ ಸಹ ಅಪರಾಧಿಯಾನ್ನಾಗಿ ಮಾಡುತ್ತದೆ. ನನ್ನ ಮನಸ್ಸಾಕ್ಷಿ ಇನ್ನೂ ಅಪರಾಧ ಪ್ರೆಜ್ಞೆಯನ್ನೇ ಒದಗಿಸುತ್ತಿಲ್ಲ. ದುರ್ಯೋಧನ ನಾಳಿನ ಸೂರ್ಯೋದಯವನ್ನು ಕಾಣುವಂತಾಗಲಿ ಎಂದು ಹಪ ಹಪಿಸುತ್ತಿದ್ದೇನೆ.  ಬೊಗಸೆತುಂಬ ತುಂಬಿದ ನೀರು ತುಟಿ ಹತ್ತಿರ ತರಬೇಕಾದರೆ ಎಲ್ಲವೂ ಸೋರಿ ಹೋಗಿ ಕೊನೆಯಲ್ಲಿ ತೊಟ್ಟು ನೀರು ಉಳಿದಂತೆ ಈಗ ದುರ್ಯೋಧನ ಒಬ್ಬ ಉಳಿದಿದ್ದಾನೆ. ಬೆರಳ ಸಂದಿನಿಂದ ಆ ಒಂದು ತೊಟ್ಟು ನೀರು ಸೋರಿ


ಹೋಗಬಹುದೇ?

         ದುರ್ಯೋಧನ ರಣ ಭೂಮಿಯಿಂದ ಪಲಾಯನ ಮಾಡಿದ್ದಾನೆ. ಕೊನೆಯಲ್ಲೂ ಆತನ ಮುಖವನ್ನು ಅಪ್ಪ ಅಮ್ಮನಿಗೆ  ತೋರಿಸದೇ ಹೋದ. ತೋರಿಸಿದರೂ ಆ ಮುಖವನ್ನು ಕಾಣುವ ಭಾಗ್ಯ ನಾನಾಗಲಿ ಗಾಂಧಾರಿಯಾಗಲೀ ಎಂದೋ ಕಳೆದುಕೊಂಡಿದ್ದೇವೆ. ದುರ್ಯೋಧನ ಕೇವಲ ಪಾಂಡವರನ್ನು ಸೋಲಿಸಬೇಕು, ಪಾಂಡವರನ್ನು ಜಯಿಸಬೇಕು ಎಂಬುದನ್ನಷ್ಟೇ ನೋಡಿದ. ಆತನಿಗೆ ಕೇವಲ ಪಾಂಡವರಷ್ಟೇ ಕಂಡದ್ದು. ಆದರೆ ಅಲ್ಲಿರುವ  ಶ್ರೀ ಕೃಷ್ಣನನ್ನು ಆತ ಕಾಣಲಿಲ್ಲ. ನಿಜಕ್ಕಾದರೆ ಶ್ರೀ ಕೃಷ್ಣನನ್ನು ಜಯಿಸುವ ಯಾವ ಯತ್ನವನ್ನೂ ಮಾಡದೇ ಇದ್ದದ್ದು ಈಗಿನ ಈ ಸೋಲಿಗೆ ಕಾರಣವಾಯಿತೇ?

 

ಸಂಜಯ, ಎಂತಹ  ಸ್ವಾಮಿ ಭಕ್ತ?  ವ್ಯಾಸರು ಬಂದು ಕೇಳಿದರಲ್ಲ. ಯುದ್ದವಂತೂ ನಡೆಯುವುದು ನಿರ್ಣಯವಾಗಿಬಿಟ್ಟಿದೆ. ನಿನಗೇನು ಬೇಕು ಮಗನೆ? ನಾನಾದರು ಏನನ್ನು ಕೇಳಿದ್ದೆ? ಏನು ಕೇಳಬಹುದಿತ್ತು ಯುದ್ದ ನಡೆಯುತ್ತದೆ  ಎಂದು ಅವರೇ ಘಂಟಾಘೋಷವಾಗಿ ಹೇಳಿದಮೇಲೆ ಯುದ್ದ ನಿಲ್ಲಿಸು ಎಂದು ಕೇಳಬಹುದೇ? ಅಲ್ಲಾ ಮಹಾರಾಜಾ ಈಗಲಾದರೂ ಎಚ್ಚತ್ತುಕೊ ಎಂಬ ಎಚ್ಚರಿಕೆಯ ಧ್ವನಿಯೇ ಅದು? ಆದರೆ, ಆದರೆ ನನಗೆ ಪಾಂಡವರ ಸೋಲು ಇದಷ್ಟೇ ಬೇಕಾಗಿತ್ತು. ಆಗಲೇ ನನಗೆ ನಂಬಿಕಸ್ಥನಾಗಿ ಕಂಡದ್ದು ಸಂಜಯ. ಆತನಿಗೆ ಯುದ್ದ ಕಾಣಬೇಕೋ?  ಬೇಡವೋ?  ಆತನೇ ಕಣ್ಣಾಗಿ ಹೋದ. ನಾನೆಂದೂ ಆತನ ಮನದ ಇಂಗಿತವನ್ನು ತಿಳಿಯಲು ಯತ್ನಿಸಲಿಲ್ಲ. ತಿಳಿಯುವ ಆವಶ್ಯಕತೆಯೇ ಒದಗಲಿಲ್ಲ. ಅಲ್ಲಿ ಇಲ್ಲಿ ಆತನೇ  ಅಸಮಾಧಾನವನ್ನು ಹೊರಹಾಕುತ್ತಿದ್ದ.  ವ್ಯಾಸರು ಸಂಜಯನಿಗೆ ಹೇಳಿದಾಗ ಆತ ಅಚ್ಚರಿಯಿಂದ ನನ್ನನ್ನು ನೋಡಿದನಂತೆ. ಅದನ್ನು ನಾನು ಹೇಗೆ ಕಾಣಬಲ್ಲೆ?  ಪಿತಾಮಹ ಭೀಷ್ಮರು ಹೇಳಿದರಂತೆ, ಆತನಿಗೆ ಕಾಣಬಾರದ್ದು ಕಂಡೇ ತೀರುವ ಹಟ.  ಏನು ಕಾಣಬಾರದ್ದು? ಹಸ್ತಿನೆಯ ಮಕ್ಕಳು ಹೊಡೆದಾಡಿಕೊಳ್ಳುವುದೇ? ಹಲವರು ಹಲವು ಬಗೆಯಲ್ಲಿ ಹೇಳಿದರು, ಈ ಕಾಲಕ್ಕೆ ಧೃತರಾಷ್ಟ್ರನಂತಹ ಮನೋರೋಗಿ ಇನ್ನೊಬ್ಬರಿಲ್ಲ. ಸ್ವಂತ ಮಕ್ಕಳ ಕಲಹವನ್ನು ಕಂಡು ಆನಂದಿಸುವ ಈತನಿಗೇತರ ಪಿತೃತ್ವ. ಸದಾ ದ್ವಂದ್ವದಲ್ಲಿಯೇ ಇದ್ದ ಈತನೇ ಯುದ್ದಕ್ಕೆ ಮೂಲ ಕಾರಣ. ಹೌದೇ, ಈ ದ್ವಂದ್ವ ಎಂಬುದು ನನಗಾಗಿ ಮಾತ್ರ ಬಾಧಿಸಿತೇ? ಅರ್ಜುನ ಯುದ್ದಾರಂಭದಲ್ಲಿ ಎರಡು ಸೇನೆಯ ನಡುವೆ ರಥವನ್ನು ತಂದು ನಿಲ್ಲಿಸುವುದಕ್ಕೆ ಶ್ರೀಕೃಷ್ಣನಿಗೆ ಹೇಳಿದ.  ನನಗೂ ಯುದ್ದದ ತವಕ ಇತ್ತು, ಹಾಗಾಗಿಯೇ ಎಲ್ಲರಿಗಿಂತಲೂ ಮೊದಲೇ ನಾನು , ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಎಂದು ಸಂಜಯನಲ್ಲಿ ಕೇಳಿದ್ದೆ. ಅರ್ಜುನ ಯುದ್ದ ಮಾಡುವುದಕ್ಕೆ ರಥ ನಿಲ್ಲಿಸುವಂತೆ ಹೇಳಿದ್ದಲ್ಲ. ಆತನಿಗೂ ದ್ವಂದ್ವ. ಆತನ ದ್ವಂದ್ವ ಭಗವಂತ ಚೆನ್ನಾಗಿ ಬಳಸಿಕೊಂಡ. ನನಗೋ ಹಾಗಾಗಲಿಲ್ಲಎಂದು ಈಗ ಅರ್ಥವಾಗುತ್ತಿದೆ. ತಮ್ಮ ಜೀವಿತಾವಧಿಯಲ್ಲಿ ಎಲ್ಲವನ್ನೂ ತ್ಯಾಗ ಮಾಡಿದ, ಹಸ್ತಿನಾವತಿಯ ಎಲ್ಲ ಉತ್ಕರ್ಷದಲ್ಲೂ ಜೀವ ಸವೆಸಿದ  ಸದ್ಯ ಹಿರಿಯ ಸ್ಥಾನದಲ್ಲಿರುವ ಭೀಷ್ಮ, ಯಾಕಾಗಿ ಯುದ್ದರಂಗಕ್ಕೆ ಬಂದರು?   ದ್ರೋಣರು ಎರಡು ಕಡೆಗೂ  ಗುರು ಸ್ಥಾನದಲ್ಲಿದ್ದವರು ಗುರುವಾಗಿ ಶಿಷ್ಯರ ಅಭ್ಯುದಯವನ್ನು ಬಯಸಬೇಕಾದವರು ಕುರುಕ್ಷೇತ್ರಕ್ಕೆ ತೀರ್ಥಯಾತ್ರೆಗೆ ಬಂದವರಲ್ಲ.  ಭೀಷ್ಮ ದ್ರೋಣರು ಕಾಮಾರ್ಥವಾಗಿ ಬಂದವರು ಎಂದು ಸ್ವತಃ ಭಗವಾನ್ ಶ್ರೀಕೃಷ್ಣನೇ ಹೇಳಿದನಲ್ಲ? ಇವರ ಹದಿನೈದು ದಿನದ ಹೋರಾಟದಲ್ಲಿ ಒಂದು ಕ್ಷಣವಾದರೂ ಪಾಂಡು ಪುತ್ರರನ್ನು ಸೋಲಿಸುವ ಇಚ್ಛೆ ಇಲ್ಲ ಎಂದು ಹೇಗೆ ಹೇಳಬಹುದು? ಹಾಗೆ ಹೇಳಿದರೆ ನಮಗೆ ಅದಕ್ಕಿಂತ ಮೇಲಿನ ದ್ರೋಹ ಇರಬಹುದೇ? ಇವರಿಗಿಲ್ಲದ ದ್ವಂದ್ವ ಇಂದು ದೃತರಾಷ್ಟ್ರನಿಗೆ ಮಾತ್ರ ಇದೆ ಎಂದು ಹೇಳುವವರಿಗೆ ದ್ವಂದ್ವ ಕಾಡುವುದಿಲ್ಲವೇ?   ಈ ದ್ವಂದ್ವದಲ್ಲೇ   ಸ್ವಂತ ಮಕ್ಕಳು ಒಬ್ಬೊಬ್ಬಾರಾಗಿ ಪ್ರಾಣ ಬಿಡುವುದನ್ನು ಕಂಡೆ.  ಈಗಲೂ ಅದೇ ಅದೇ  ಸುಯೋಧನ ಎಲ್ಲಿದ್ದಾನೆ ಎಂದು ನೋಡುವ ತವಕ. ಯಾಕೆ? 

ಪಾಂಡವರು ವನವಾಸ ಅಜ್ಞಾತವಾಸವನ್ನು ನಾಳೆ ನಾಳೆ ಎಂಬಂತೆ ಕಳೆದು ಹಸ್ತಿನಾವತಿಯ ಕದ ತಟ್ಟಿದರು. ಅವರು ಮತ್ತೆ ಬೇಡಿಕೆಯನ್ನು ಸಲ್ಲಿಸಿದರು.  ಸಂಜಯ ಎಂದಿನಂತೆ ಹೋಗಿಬಂದ. ಆತನಿಗೆ ಅಂದೇ ಅನುಮಾನ ಇತ್ತು ಅದಕ್ಕೆ ಅಲ್ಲವೇ ಬಂದು ಸುಯೋಧನನಿಗೆ ಹಿತವಚನ ಬೋಧಿಸಿದ್ದು. ಯುದ್ದ ಆತ  ನಿರೀಕ್ಷಿಸಿದ್ದ. ಯಾಕೆಂದರೆ ಇಲ್ಲಿ ದಿನ ಬೆಳಗಾದರೆ ಸುಯೋಧನ ಮತ್ತವರ ಮಿತ್ರಕೂಟದ ಚಲವಲನ ಕಂಡವನಿಗೆ ಯುದ್ದ ನಿಶ್ಚಿತ ಎಂಬುದು ಅರಿವಾಗಿತ್ತು.  ನನಗೂ ಸೂಚ್ಯವಾಗಿ ತಿಳಿಸಿದ್ದ. ಆತನ ಮಾತಿನಲ್ಲಿ ಗೂಢಾರ್ಥವಿದ್ದಂತೆ ಭಾಸವಾಯಿತು. ಇನ್ನಾದರೂ ಮಗನಿಗೆ ಬುದ್ದಿ ಹೇಳು. ಆದರೆ ನಾನು ಎಂದಿನಂತೆ ನಿರ್ಲಿಪ್ತತೆಯನ್ನು ತೋರಿಸಿದೆ. ನನ್ನ ಮನಸ್ಸಿನ ಆಳದಲ್ಲಿ ಯುದ್ದದ ಬಯಕೆ ಇದ್ದಂತೆ ಇತ್ತು. ಮಗನಿಗಾಗಿ ನಾನು ಯುದ್ದವನ್ನು ಬಯಸಿದ್ದೆ. ಇದನ್ನು ನಾನು ಮತ್ತಷ್ಟು ಕುರುಡಾಗಿದ್ದೇನೆ ಎಂದೇ ವ್ಯಾಖ್ಯಾನಿಸಿದರು.  ನಾನು ನನ್ನನ್ನೆ ಹಲವು ಬಾರಿ ಕೇಳಿಕೊಂಡಿದ್ದೆ. ಯುದ್ದ ಸರಿಯೇ? ಅಥವಾ ಯುದ್ಧವಾದರೆ.....ನನಗೆ ಆ ಭೀಮನ ಭಯ. ಆತನ ರೋಷಾವೇಷವನ್ನು ಅವರು ವನವಾಸಕ್ಕೆ ಹೊರಡಬೇಕಾದರೆ ಕಂಡವನು. ಕುರುಡನಾಗಿ ನಾನು ಕಾಣುವುದೇನು . ಆತನ ಘರ್ಜನೆಯೇ ಎದೆಯಲ್ಲಿ ನಡುಕವನ್ನು ಹುಟ್ಟಿಸಿತ್ತು. ಮೊದಲೇ ಭೀಮ ಎಂದರೆ ನನಗೆ ಆತಂಕ. ಆ ಆತಂಕದಲ್ಲೇ ಅಂದು ದ್ರೌಪದಿಗೆ  ವರವನ್ನು ಕೇಳಮ್ಮ ಎಂದು ಉದಾರತೆಯನ್ನು ತೋರಿದ್ದೆ. ಆಕೆ ನಿಜ ಕ್ಷತ್ರಿಯಾಣಿ, ಮೂರಕ್ಕೆ ಎರಡೇ ವರ ಕೇಳಿ ಸುಮ್ಮನಾದಳು. ಆಕೆಯ ಮನಸ್ಸಿನ ಆಳದಲ್ಲೂ ಯುದ್ಧದ ಬಯಕೆ ಮೊಳಕೆ ಒಡೆದಿತ್ತು. ಎಷ್ಟೆಂದರೂ ಹೆಣ್ಣು, ಆದ ಅವಮಾನ ಸುಮ್ಮನೇ ಉಳಿಸದು. ನಾನು ಕೊಟ್ಟ ಎರಡು ವರ ಕೇವಲ ತೇಪೆ ಸಾರಿಸಿದಂತಾಯಿತೇ ಎಂದು ಭಾವಿಸಿದ್ದೆ. ಆಕೆಗೂ ಯುದ್ದದ ಹಂಬಲ ಇದ್ದಿರಬೇಕು. ಮನದಾಳದಲ್ಲಿ ಒಂದು ಭಾವ ಬಲವಾಗಿ ಬೇರೂರಿದರೆ ಅದು ಬದಲಾಗುವುದಿಲ್ಲ. ಆಕೆಯಲ್ಲಿ ಅದು ಎಂದೋ ಹುಟ್ಟಿಕೊಂಡಿತ್ತು.  ಯುದ್ದ ಆಕೆ ಬಯಸಿದ್ದರೆ ಅದು ತಪ್ಪಿಲ್ಲ. ವಸ್ತುಸ್ಥಿತಿಯಲ್ಲಿ  ಈ ಅಪರಾಧ ನನ್ನ ಸುತ್ತವೇ ಸುತ್ತಿಕೊಂಡಿತು.   

            ದ್ರೌಪದಿಗೇ   ಅಂತ ಏನು ಅಲ್ಲಿದ್ದ ಎಲ್ಲರಿಗೂ ಯುದ್ದದ ಬಯಕೆ ಇತ್ತು. ಒಬ್ಬ ಧರ್ಮರಾಯನಿಗೆ ಮಾತ್ರ ಅದು ಇರಲಿಲ್ಲ. ಇಲ್ಲೋ ಭೀಷ್ಮ ದ್ರೋಣ ಕೃಪ ಯಾರಲ್ಲಿ ಕೇಳಿದರೂ ಯುದ್ದ ಬೇಡ ಅಂತ ಇದ್ದರೆ ಸುಯೋಧನ ಬೇಕು ಎಂಬಂತೆ ಇದ್ದ. ಆದರೆ ನಾನು ಯಾವುದೇ ನಿರ್ಧಾರ ತೋರದ ರೀತಿಯಲ್ಲಿದ್ದೆ. ಯುದ್ದ ಬೇಕೋ ಬೇಡವೋ ಎಂಬುದಕ್ಕಿಂತಲೂ  ನನ್ನ ಮಗ ದುರ್ಯೋಧನನ ಇಚ್ಛೆಯೇ ಮುಖ್ಯವಾಗಿತ್ತು. ನನಗೆ ತಿಳಿಯದೇ ಮಗನೆಂಬ ಮಮಕಾರ ಹೆಡೆಯಾಡಿತ್ತು. ಎಂದೋ ಚಕ್ರವರ್ತಿಯಾಗಿ  ಮೆರೆಯಬೇಕಾದವನಿಗೆ ಅರಸೊತ್ತಿಗೆ ಕುರುಡುತನ ಬಲಿತೆಗೆದುಕೊಂಡಿತು. ಈಗ ಮಗನ ಮೂಲಕ ಅದು ಬಂದು ಬಿಟ್ಟರೆ.   ಆದರೂ ನನಗಿದ್ದ ಭಯ ಯುದ್ದ ಬೇಡವೇ ಬೇಡ ಎಂದಿತ್ತು. ಆದರೆ ಪ್ರತಿಕ್ಷಣವೂ ನಾನು ಆತ್ಮವಂಚನೆ ಮಾಡುತ್ತಿದ್ದೇನೆ ಎಂದು ನನಗನಿಸುತ್ತಿತ್ತು. ಹೀಗೆ ಯುದ್ದ ನನ್ನ ಒತ್ತಾಸೆಯಲ್ಲೇ ನಡೆಯುತ್ತಿದೆಯೋ ಎಂದು ನನಗೆ ನನ್ನ ಮೇಲೇಯೇ ಅನುಮಾನ ಬರುತ್ತಿತ್ತು. ಅದಕ್ಕೆ ಕಾರಣವೂ ಇಲ್ಲದಿಲ್ಲ. ವ್ಯಾಸರು  ಏನು ಬೇಕು ಎಂದು ಕೇಳಿದಾಗ ನಾನು ಅಲವತ್ತು ಕೊಂಡಿದ್ದೆ. ಕಾಣುವುದಕ್ಕಿಲ್ಲವಲ್ಲ ಯುದ್ದ. ಆಗ ಭೀಷ್ಮಾದಿಗಳು ಮೂಗು ಮುರಿದಿದ್ದರು. ಕಣ್ಣು ಕಾಣದ ಮುದುಕನಿಗೂ ಅದೇನು ಕೆಟ್ಟ ಬಯಕೆ. ಯಾವುದನ್ನು ಕಾಣ ಬಾರದೋ ಅದನ್ನು ಕಾಣುವ ಹಂಬಲ. ವ್ಯಾಸರೂ ಅಷ್ಟೇ, ಏನು ವರ ಬೇಕು ನಿನಗೆ? ಅವರ ಮುಖ ಭಾವ ಗುರುತಿಸುವುದಕ್ಕೆ ನಾನು ಕುರುಡ. ಆದರೂ ಅವರ ಮಾತಿನ ಮರ್ಮ ಈಗ ಅರ್ಥವಾಗುತ್ತಿದೆ. " ಹೇ ಮೂರ್ಖ ಈಗ ಯುದ್ದ  ನಡೆದೇ ನಡೆಯುತ್ತದೆ. ನೋಡು ನಿನ್ನ ಮಕ್ಕಳು ನಿನ್ನ ಎದುರೇ ಪ್ರಾಣ ಕಳೆಯುತ್ತಾರೆ. ಅದನ್ನು ನೀನು ನೋಡಲೇ ಬೇಕು. ನಿನಗೆ ದೃಷ್ಟಿಯನ್ನು ಕರುಣಿಸುತ್ತೇನೆ. ಕಣ್ಣಾರೆ ನೋಡು..." ಈ ವ್ಯಂಗ್ಯ ವನ್ನು ಸೂಕ್ಷ್ಮವಾಗಿ ಗುರುತಿಸಿದ್ದೆ.  ನನಗೆ ನೋಡುವ ಬಯಕೆ ಇರಲಿಲ್ಲ , ಕೇವಲ ಕೇಳಿದರಾಯಿತು ಎಂದೆ. ಇದುವರೆಗೆ   ಪ್ರಪಂಚವೆಂದರೆ ಏನೆಂದು ಕಾಣದೇ ಇದ್ದವನಿಗೆ ಇನ್ನು ಈ ಯುದ್ದ ಕಾಣಬೇಕೇ?  ಕೇವಲ ಕಲ್ಪನೆಯಲ್ಲೇ ಇದುವರೆಗೆ ಜೀವನ ಸವೆಸಿದೆ.  ಅದೆಷ್ಟು ಸತ್ಯವೋ ಅದೆಷ್ಟು ಮಿಥ್ಯವೋ ಇನ್ನೂ ಅರಿವಾಗಲಿಲ್ಲ.  ಹಾಗಾಗಿಯೇ ಸಂಜಯ ಕಣ್ಣಾಗಿ ದೊರೆತ. 

ಹೌದು, ಈಗ ಲೋಕ ಮುಖದಲ್ಲಿ ಯುದ್ದಕ್ಕೆ ನಾನೇ ಕಾರಣ ಎಂದು ಬಿಂಬಿಸಲಾಗುತ್ತದೆ. ಎಲ್ಲರೂ ನನ್ನ ಮೇಲೆ ಗೂಬೆ ಕೂರಿಸುವಾಗ ನಾನು ಕಣ್ಣಿಲ್ಲದವನು ಎಂಬುದನ್ನು ಮರೆತುಬಿಡುತ್ತಾರೆ. ನನ್ನ ನಿಸ್ಸಹಾಯಕತೆ ಕಣ್ಣಿದ್ದವರಿಗೆ  ಹೇಗೆ ಅರಿವಾಗಬೇಕು? ಹುಟ್ಟು ಕುರುಡ ನಾನು, ಲೋಕ ಹೀಗೆ ಇದೆ ಎಂದು ಕೇಳುವುದಕ್ಕೆ ಮಾತ್ರ ಸಾಧ್ಯವಾಯಿತು. ಕಾಣುವುದಕ್ಕೆ ಸಾಧ್ಯವಾಗಲಿಲ್ಲ.  ಜಗತ್ತಿನಲ್ಲಿ ನಾನು ಏನನ್ನು ಕಂಡಿದ್ದೇನೆ? ನನ್ನ ಅಸಹಾಯಕತೆ ಹುಟ್ಟಿನಿಂದಲೇ ಜತೆಯಲ್ಲೇ ಬಂದಿದೆ. ಗಾಂಧಾರಿ, ಪರಮ ಸುಂದರಿ ಆದರೆ ಆದರೆ ಆಕೆ ಎಂತಹ ಸುಂದರಿ ಎಂದು ನಾನು ಕಂಡಿಲ್ಲ.  ನನ್ನ ಅಂಧತ್ವ ನನ್ನ ಎಲ್ಲ ಅವಕಾಶಗಳನ್ನೂ ನುಂಗಿ ನೊಣೆಯುವಾಗ ಈ ಸ್ಥಿತಿ ಯಾರಿಗೆ ಬಂದರೂ ಇದಕ್ಕಿಂತ ಹೆಚ್ಚಿನದ್ದು ಅವರಿಂದ ಹೇಗೆ ನಿರೀಕ್ಷಿಸಬಹುದು? 

ನನ್ನ ಬೆನ್ನಿಗೆ ಹುಟ್ಟಿದ ಪಾಂಡು....ಏನು ರೋಗವಿದ್ದರೂ ಕಣ್ಣಿದೆ ಎಂಬುದಕ್ಕೆಆತ ಚಕ್ರವರ್ತಿ ಎನಿಸಿಕೊಂಡ. ಸ್ವಂತ ಮಕ್ಕಳಿಗೆ ಅಪ್ಪ ಎನಿಸಿಕೊಳ್ಳಲಾರದವನು ಚಂದ್ರವಂಶದ ಪರಂಪರೆಯ ಚಕ್ರವರ್ತಿಯಾದ. ನನ್ನನ್ನು ನೋಡಬಾರದೆ,  ನೂರಕ್ಕೆ ನೂರು ಮಕ್ಕಳಿಗೂ ನಾನೇ ಆಪ್ಪ. ಆದರೆ ಈಗ ಏನಾಗಿ ಹೋಯಿತು? ಆ ಒಬ್ಬ ಭೀಮ ಇದೆಲ್ಲದಕ್ಕೂ ಎರವಾಗಿ ಹೋದದ್ದು ದುರ್ದೈವ. 

ಮಗ ಸುಯೋಧನ ನನ್ನ ಎಲ್ಲಾ ನಷ್ಟಗಳನ್ನು ತುಂಬಿಸಿಕೊಡುವ ಗುಣಗಳನ್ನು ಪಡೆದಿದ್ದ. ಎಂತಹಾ ಮತ್ಸದ್ಧಿ? ಅದಕ್ಕೆ ಸಾಕ್ಷಿಯಾಗಿ ಹನ್ನೊಂದು ಅಕ್ಷೋಹಿಣಿ ಸೈನ್ಯ ಕುರುಕ್ಷೇತ್ರ ತುಂಬಿತು. ಎಂತೆಂತಹ ಅತಿರಥ ಮಹಾರಥರು. ಭಾರತವರ್ಷದ ಶ್ರೇಷ್ಠರೆಲ್ಲರೂ ದುರ್ಯೋಧನನ ಹೆಗಲ ಪಕ್ಕದಲ್ಲೇ ಇದ್ದರು.  ಮೊನ್ನೆ ಮೊನ್ನೆ ನಡೆದ ಸಭೆ ಕಾಣಬಾರದೇ? ಸಂಜಯ ಅದನ್ನೇ ಹೇಳಿದ್ದ. ಅಂತಹ ಸುಯೋಧನ ಇಂದು ಛತ್ರ ಚಾಮರಗಳಿಲ್ಲದೆ ಸ್ವಂತ ರಕ್ಷಣೆಗೆ ಆಳುಕಾಳುಗಳಿಲ್ಲದೇ ಬರಿದೇ ಏಕಾಂಗಿಯಾಗಿ ಸುಡುಗಾಡಲಲ್ಲಿ ಅಲೆದಂತೆ ಅಲೆಯುತ್ತಾನೆ. ಕೊನೆಗೂ ಆತನ ಅತಿಯಾದ ಅತ್ಮವಿಶ್ವಾಸವೇ ಎರವಾಗಿ ಹೋಯಿತು.  ಯಾವ ಅತಿರಥ ಮಹಾರಥರು ಇದ್ದರೇನು ಬಂತು?  ಕರ್ಣ ಅಶ್ವತ್ಥಾಮ ಹೀಗೆ ಹಲವು ಪರಾಕ್ರಮಿಗಳು. ಒಬ್ಬೊಬ್ಬರಲ್ಲೂ ಒಂದೊಂದು ಬಗೆಯ ವಿಶೇಷತೆ ಇತ್ತು. ಆದರೇನು ಇವರೆಲ್ಲರಲ್ಲಿ ಇರುವ ಎಲ್ಲ ವೈಶಿಷ್ಟ್ಯಗಳೂ ಅಲ್ಲಿ ಅರ್ಜುನ ಒಬ್ಬನಲ್ಲೇ ಇತ್ತು. ದ್ರೋಣರು ಎಂದೋ ಅದನ್ನು ಗುರುತಿಸಿದ್ದರು. ಮಗನಿಗೆ ಬೋಧಿಸದೇ ಇದ್ದದ್ದನ್ನು ಅರ್ಜುನನಿಗೆ ಬೋಧಿಸಿ ಒಬ್ಬನೇ ಧನುರ್ಧರ ಎಂಬಂತೆ ಮಾಡಿದರು.  ಎಲ್ಲಾ ಅತಿರಥ ಮಹಾರಥರಿಗೆ ಮುಂಚೂಣಿಯಲ್ಲಿದ್ದವನು ಕರ್ಣ. ಆತ ನಾನಿರುವೆ ಜೀಯ ಎನ್ನುವಾಗ ನನ್ನ ಕುರುಡು ಕಣ್ಣುಗಳು ತುಂಬಿ ಬರುತ್ತಿತ್ತು. ಇನ್ನು ಅವನಿಗೆ ಏನಾಗಬೇಡ. ನಂಬಿದ , ತನಗೆ ಪಟ್ಟಾಭಿಷೇಕವಾಗದೇ ಇದ್ದರೂ ಅತನ್ನು ಅಂಗರಾಜ್ಯಕ್ಕೆ ಅರಸನಾಗಿಸಿ ಅಭಿಷೇಕ ಮಾಡಿದ. ಹೇಳುವವರು ಹಲವು ಹೇಳಿದರು ಸ್ವಂತ ಅಭಿಷೇಚನಗೊಳ್ಳದವನಿಗೆ ಯಾವ ಹಕ್ಕಿದೆ? ಆದರೆ ಚಕ್ರವರ್ತಿತ್ವ ಆತನಿಗೆ ಹುಟ್ಟಿನಿಂದಲೇ ಬಂದಿದೆ ಎಂಬ ನಂಬಿಕೆ ನನ್ನದು. ಕರ್ಣ ಮೊನ್ನೆ ಮೊನ್ನೆ ವರೆಗೂ ನೆರಳಾದ. ಆದರೆ ಹದಿನೆಂಟು ದಿನಗಳ ಯುದ್ದದಲ್ಲಿ  ಬಹು ಪಾಲು ದಿನವೂ ಹೊರಗೇ ಉಳಿದು ಬಿಟ್ಟ. ಯಾಕೆ, ದುರ್ಯೋಧನನ ನಂಬಿಕೆ ಅಪಾತ್ರವಾಗಿತ್ತೇ? ಇನ್ನು ಶಲ್ಯ ಅತನನ್ನು ಸೆಳೆದುದರಲ್ಲಿ ರಾಜಕೀಯ ಮತ್ಸದದ್ದೀತನ ಎಂದು ಹಿರಿ ಹಿರಿ ಹಿಗ್ಗಿದ್ದೆ. ಆದರೆ ಆಗಿದ್ದೇನು, ನಶೆ ಇಳಿದ ಮೇಲೆ ಶಲ್ಯ ಮಾಡಿದ್ದೇನು? 

ಜಗತ್ತಿನಲ್ಲಿ ಉತ್ಕೃಷ್ಟತೆ  ಎನಿದೆಯೋ ಅದೆಲ್ಲ ತನ್ನ ಸೈನ್ಯದಲ್ಲಿರಬೇಕು ಎಂದು ಹಟ ತೊಟ್ಟ ಸುಯೋಧನ. ರಾತ್ರಿ ರಾತ್ರಿ ಹೋಗಿ ಕಣ್ಣೀರು ಸುರಿಸಿ ಅಜ್ಜ ಭೀಷ್ಮನನ್ನು ಎಬ್ಬಿಸಿದ. ಭೀಷ್ಮ ಬಿಲ್ಲು ಹಿಡಿಯುತ್ತಾರೆ ಎಂದ ಕ್ಷಣ  ಜಯ ನಮ್ಮದೇ ಎಂದು ಬೀಗಿದೆ. ನನ್ನ ಮಗನ ಬಗ್ಗೆ ನನಗೇ ಹೆಮ್ಮೆ ಎನಿಸಿತ್ತು. ಭೀಷ್ಮ ಹೆಸರು ಕೇಳಿದರೆ ಬಿಲ್ಲೆತ್ತಿ ಯುದ್ದಕ್ಕೆ ನಿಲ್ಲುವ ಕ್ಷತ್ರಿಯ ಇಲ್ಲ.  ನಿನಗಾಗಿ ದಿನಕ್ಕೆ ಹತ್ತು ಸಾವಿರ ಮುಕುಟ ಮರ್ದನರ ತಲೆ ಕಡಿಯುತ್ತೇನೆ. ನನಗೆ ಈಗಲೂ ಅನುಮಾನ ಇದೆ, ಅಜ್ಜ ಭೀಷ್ಮರ ಇಂಗಿತ ಏನಿರಬಹುದು? ಇಲ್ಲಿ ಮನೆಯವರು ಪರಸ್ಪರ ಹೊಡೆದಾಡಿಕೊಂಡರೆ ನೀವೇಕೆ ಬಂದು ಸೇರುತ್ತೀರಿ ಎಂಬುದನ್ನು ಸಾರುವುದಕ್ಕಾಗಿ ಶಪಥ ಮಾಡಿದರೆ? ಇಂತಹ ಘನಘೋರ ಶಪಥ ಮಾಡಿದರೂ ನನ್ನ ಮಗನಿಗೆ ಒಂದು ಅವಿಶ್ವಾಸ. ಮಗನಲ್ಲಿ ಹುದುಗಿದ್ದ ಈ ಅವಿಶ್ವಾಸ ಆತನ ರಾಜಕೀಯ ಮತ್ಸದ್ದೀನಕ್ಕೆ ಸಾಕ್ಷಿ. ಆತ ಯಾರಲ್ಲೂ ವಿಶ್ವಾಸ ಇರಿಸಿಕೊಂಡವನಲ್ಲ. ಹಾಗಾಗಿ ಆತ ತನ್ನವರಲ್ಲಿ ರಹಸ್ಯವಾಗಿ ಹೇಳಿದ್ದು"ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಂ! ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಂ!" ಭೀಷ್ಮರ ರಕ್ಷಣೆಯಲ್ಲಿ ನಮ್ಮ ಸೇನೆ ಪರ್ಯಾಪ್ತವಾಗಿಲ್ಲ. ಬದಲಿಗೆ ಅಲ್ಲಿ ಭೀಮನ ಬಲ ಆ ಸೇನೆಯನ್ನು ರಕ್ಷಿಸುತ್ತದೆ.

 

ಹೌದು, ಯುದ್ದಾರಂಭದಲ್ಲೇ ಭೀಷ್ಮರು ಹೇಳಿದ್ದೇನು? ದಿನವೊಂದಕ್ಕೆ ಹತ್ತು ಸಾವಿರ ಮುಕುಟ ಮರ್ದನರನ್ನು ಸಾಯಿಸುತ್ತೇನೆ.  ಆದರೆ ಪಾಂಡವರನ್ನೇನೂ ಮಾಡುವುದಿಲ್ಲ. ಆದರೆ ಅಲ್ಲಿ ಭೀಮ, ನಾನು ಯಾರನ್ನು ಕೊಲ್ಲುತ್ತೇನೋ ಬಿಡುತ್ತೇನೋ  ಆದರೆ  ಕೌರವರನ್ನು ಕೊಂದೇ ತೀರುತ್ತೇನೆ ಎಂದುಕೊಂಡೇ ರಣ ರಂಗಕ್ಕೆ ಬಂದಿದ್ದ. ಪಾಂಡವರನ್ನು ಕೊಲ್ಲುವುದಿಲ್ಲ ಎನ್ನುವ ಭೀಷ್ಮರೆಲ್ಲಿ?  ಕೌರವರನ್ನು ಕೊಂದು ಮುಗಿಸುತ್ತೇನೆ ಎನ್ನುವ ಭೀಮನೆಲ್ಲಿ? ಹಾಗಾಗಿಯೇ ಶಿಖಂಡಿಯನ್ನು ನೋಡಿಕೊಳ್ಳಿ ಅಂತ ದುರ್ಯೋಧನ ನಮ್ಮವರಲ್ಲಿ ಹೇಳಿದ್ದ. ಆದರೆ  ಆ ಕಡೆ ಇವನಿಗಿಂತ ನೂರು ಪಟ್ಟು ಅಧಿಕ ಮತ್ಸದ್ದಿ ಶ್ರೀಕೃಷ್ಣ ಇದೆಲ್ಲವನ್ನು ಮಾಡಿಬಿಟ್ಟ.  ಯಾರು ಯಾರಿಗೆ ಏನೇನು ಬೇಕೋ ಅದೆಲ್ಲವನ್ನೂ ಒದಗಿಸಿಕೊಂಡೇ ತನ್ನ ಇಂಗಿತವನ್ನು ನಿಜವಾಗಿಸಿದ. 

ಗುರು ದ್ರೋಣ, ಒಬ್ಬ ಬ್ರಾಹ್ಮಣನಾಗಿ ಯುದ್ಧ ಮಾಡಲಾರರು ಎಂದುಕೊಂಡರೆ ಆರಂಭದಲ್ಲೇ ಯುದ್ಧೋತ್ಸಾಹ ತೋರಿಸಿದ್ದರು. ಹಸ್ತಿನಾವತಿಯ ನೂರೈದು ಮಂದಿಯನ್ನು ಇವರಷ್ಟು ಬಲ್ಲವರು ಯಾರೂ ಇಲ್ಲ. . ಕೇವಲ ವಿದ್ಯೆಯ ಭಂಡವಾಳದಲ್ಲಿ ಏನೆಲ್ಲ ಮಾಡಬಹುದು ಎನ್ನುವುದಕ್ಕೆ ದ್ರೋಣರು ಸಾಕ್ಷಿಯಾದರು. ಅರ್ಜುನ ಅವರ ಒತ್ತಾಸೆಗೆ ಜತೆಯಾಗಿ ಸಿದ್ಧವಾಗಿಬಿಟ್ಟ. ಆ ದ್ರುಪದನನ್ನು ಅರ್ಜುನನ ಕೈಯಲ್ಲೇ ಎಳೆದು ತರಿಸಿದರು. ಆದರೆ  ಛಲ ಇಲ್ಲಿ ಫಲಕೊಡಲೇ ಇಲ್ಲ. ತನ್ನ ಮಗನಿಗೂ ಹೇಳದೇ ಇದ್ದದ್ದನ್ನು ಅರ್ಜುನನಿಗೆ ಕಲಿಸಿದರು. ಆದರೆ, ತಾನು ಕಲಿಸದೇ ಇದ್ದದ್ದು ಅರ್ಜುನನಲ್ಲಿ ತುಂಬ ಇತ್ತು.    ಅವರಿಂದ ಕಲಿಯದೇ ಇದ್ದದ್ದು ಅರ್ಜುನನಲ್ಲಿ ಈ ಕಾಲಕ್ಕೆ ಬಹಳವಾಗಿ ನಿಕ್ಷೇಪವಾಗಿತ್ತು. ತನ್ನ ಗುರುವಿನ ಮುಂದೆ ಅದನ್ನೆಲ್ಲವನ್ನೂ ಪಣಕ್ಕಿಡುವ ತುಡಿತವನ್ನು ಅವನೂ  ತೋರಿಸಿದ. ಮಗ ಚಿರಂಜೀವಿ ಅಂತ ತಿಳಿದರೂ ಸಹ ವಿದ್ಯಾಗುರು ಮೋಸ ಹೋದದ್ದು ವಿಶ್ವಾಸವನ್ನೇ ತರುತ್ತಿಲ್ಲ. 

 

ಭೀಷ್ಮ ದ್ರೋಣರು ಅರ್ಥಕಾಮದಿಂದಲೇ ಯುದ್ಧರಂಗ ಪ್ರವೇಶಿಸಿದರು ಎಂದು ಶ್ರೀಕೃಷ್ಣನೇ ಹೇಳಿದ. ಯುದ್ದಾಕಾಂಕ್ಷಿಗಳಾಗಿ ಭೀಷ್ಮ ದ್ರೋಣರು ಯುದ್ದ ರಂಗಕ್ಕೆ ಬಂದರೆ ಹೊರತು ತೀರ್ಥ ಯಾತ್ರೆಗೆ ಬರಲಿಲ್ಲ. ಅವರಿಗೆ, ದೃಷ್ಟಿ ಜ್ಞಾನ ಎಲ್ಲವೂ ಇದ್ದ ಅವರಿಗೆ ಬೇಕಾಗಿ ಬಂದ ಯುದ್ದ ಧೃತರಾಷ್ಟ್ರ ಬಯಸುವಾಗ ಅದು ಈ ಕುರುಡನ ಮೂರ್ಖತನವಾಗುತ್ತದೆ.  ಇಲ್ಲಿ ಎಲ್ಲರೂ ತಮ್ಮ ತಪ್ಪಿಗೆ ತಮ್ಮ ಅಪರಾಧಕ್ಕೆ ಮತ್ತೊಬ್ಬರ ತಪ್ಪುಗಳನ್ನೇ ಸಮರ್ಥನೆಗೆ ಒದಗಿಸುತ್ತಾರೆ. ಸರಿ ಮಾಡುವ ಇಚ್ಛಾ ಶಕ್ತಿಯೂ ಇಲ್ಲ. ಅದು ಬೇಕಾಗೂ ಇಲ್ಲ. 

ಇನ್ನು ಕರ್ಣ, ವೈಯಕ್ತಿಕವಾಗಿ ಸಾಮಾರ್ಥ್ಯ ತೋರಿಸಿದ್ದು ಬಿಟ್ಟರೆ ಎರಡು ದಿನ ಪಾಂಡವ ಸೇನೆಯನ್ನು ಇದಿರಿಸಿದ್ದೇ ಸಾಧನೆಯಾಯಿತು. ಶಲ್ಯನನ್ನು ಸಾರಥಿಯನ್ನಾಗಿ ಬೇಕು ಎಂದು ಪಡೆದ. ಆದರೆ ಪ್ರತಿಕ್ಷಣವೂ ಶಲ್ಯನೊಂದಿಗೆ ವ್ಯವಹರಿಸುವುದಕ್ಕೆ ಅಹಂಭಾವವೇ ತೊಂದರೆ ಕೊಡುತ್ತಿತ್ತು. ಇನ್ನು ಶಲ್ಯನೂ ಹಾಗೆ ಯಾರ ಪ್ರೇರಣೆಯೋ ಗೂಢಾಲೋಚನೆಯೋ ಕರ್ಣನೊಡನೆ ಒಂದು ರೀತಿಯ ಅಸಹಕಾರವನ್ನೇ ಪ್ರಕಟಿಸಿದ್ದ. ಎಂತಹ ಅತಿರಥರು? ಒಟ್ಟಾಗಿ ದುಡಿಯಬೇಕು ಎನ್ನುವ ಸಾಮಾನ್ಯ ಜ್ಞಾನವೂ ಇರದ ಇವರು ಯಾವ ಪಕ್ಷ ಸೇರಿದರೂ ಅಲ್ಲಿ ಸಮಸ್ಯೆಗೆ ಕಾರಣರಾಗುತ್ತಾರೆ. ಒಟ್ಟಿನಲ್ಲಿ ಹನ್ನೊಂದು ಅಕ್ಷೋಹಿಣಿ ಸೈನ್ಯ ಇದ್ದರೂ ಭೀಮನ ಗದೆಯಿಂದ ಈ ಕೌರವರನ್ನು ರಕ್ಷಿಸುವುದಕ್ಕೆ ಸಾಧ್ಯವಿಲ್ಲದೇ ಹೋಯಿತು. 

ಆದರೂ ಒಂದು ಅವಕಾಶ ತಪ್ಪಿತೇ, ಈಗ ಕಾಡುವ ಪರಿತಾಪ. ಯುದ್ಧಾರಂಭಕ್ಕೆ ಮೊದಲೇ ಅರ್ಜುನ ರಥವನ್ನು ಎರಡು ಸೇನೆಗಳ ನಡುವೆ ನಿಲ್ಲಿಸುವಂತೆ ಶ್ರೀ ಕೃಷ್ಣನಿಗೆ  ಹೇಳಿದ್ದ. ಎಲ್ಲರಿಗೂ ಅಚ್ಚರಿಯಾಗಿತ್ತು. ಸಂಜಯ ವಿವರಿಸುವಾಗ ನನಗೂ ಅದೇ ಅಚ್ಚರಿ. ಏನಿರಬಹುದು ಅರ್ಜುನನ ಇಂಗಿತ? ಆದರೆ ಅರ್ಜುನ ಹೇಳಿದ್ದೇನು. ಗುರುಗಳು ಬಂಧುಗಳು...ಇವರನ್ನು ಹೇಗೆ ಕೊಲ್ಲಬಹುದು? ಆತನಿಗೂ ತಾನೇ ಗೆದ್ದು ಬಿಡುತ್ತೇನೆ ಎಂಬ ವಿಶ್ವಾಸ. ಆದರೆ ಎಲ್ಲರೂ ಯುದ್ಧೋತ್ಸಾಹದಲ್ಲಿ ಭುಜ ಕುಣಿಸುತ್ತಿದ್ದರೆ ಅರ್ಜುನನಿಗೆ ಮೋಹ ಆವರಿಸಿತು. ಆಗ ಶ್ರೀಕೃಷ್ಣ ಹೇಳಿದ್ದ ಈಗಲೂ ಯೋಚಿಸುವಂತೆ ಮಾಡಿದೆ. ಭೀಷ್ಮ, ದ್ರೋಣ ಕರ್ಣ ಈ ನಿನ್ನ ಬಂಧುಗಳು ಎಲ್ಲರೂ ಹತರಾಗಿ ಹೋಗಿದ್ದಾರೆ.  ಈಗ ನೀನು ನಿಮಿತ್ತ ಮಾತ್ರ. ಈ ಒಂದು ಮಾತು ಈಗಲೂ ಯೋಚಿಸುವಂತೆ ಮಾಡುತ್ತದೆ. ಆ ಮಾತು ಅರ್ಜುನನಿಗೆ ಹೇಳಿದ್ದೇ ಆಗಿದ್ದರೂ ಎಲ್ಲರಿಗೂ ಒಂದು ಎಚ್ಚರಿಕೆಯ ಸಂದೇಶವಾಗಿತ್ತು. ಎಲ್ಲರೂ ಹತರಾಗಿದ್ದಾರೆ ಎಂದ ಮೇಲೆ ಈ ಯುದ್ದ.  ದುರ್ಯೋಧನನ್ನು ಕರೆದು ಹೇಳಬಹುದಿತ್ತು. ಸುಯೋಧನ ಯುದ್ದ ನಿಲ್ಲಿಸು. ನನಗಿದ್ದ ಕೊನೆಯ ಅವಕಾಶ ಭಗವಾನ್ ಶ್ರೀ ಕೃಷ್ಣ ಒದಗಿಸಿದ್ದ. ಆದರೆ ಅದನ್ನೂ ನಾನು ಉಪಯೋಗಿಸುವ ಮನಸ್ಸು ಮಾಡಲಿಲ್ಲ.   ಈ ಯುದ್ದದ ತನಕ ಜೀವಂತ ಇದ್ದವರಿಗೆ ಇನ್ನೂ ಜೀವ ಉಳಿಸಿಕೊಳ್ಳುವ ಅವಕಾಶ ಇತ್ತೇ? ನಾನೊಮ್ಮೆ ಯೋಚಿಸಬಹುದಿತ್ತು.    ಶ್ರೀಕೃಷ್ಣ ನಿಜವಾಗಿ ಭಗವಂತ ಅನ್ನಿಸುವುದು ಇವುಗಳನ್ನು ಕೇಳಿದಾಗ. ಅಂತರಾರ್ಥವಿಲ್ಲದ ಭಗವಂತನ ನುಡಿ ಇಲ್ಲ. " ಅರ್ಜುನಾ, ಎದುರಿಗೆ ಭೀಷ್ಮ ನಿಂತಿದ್ದಾರೆ, ನಿನ್ನೊಳಗಿನ ಅಹಂ  ನ್ನು ಬದಿಗಿರಿಸು, ಅದನ್ನು ತೊಡೆದು ಹಾಕು. ಆಗ ಎದುರಿಗಿದ್ದವನು ಭೀಷ್ಮ ಎಂದು ಅನಿಸುವುದಿಲ್ಲ. ಅಜ್ಜ ಎಂಬ ಮಮಕಾರ ಇರುವುದಿಲ್ಲ. "   ಈ ಅಹಂ, ಈ ಎಲ್ಲಾ ದುರಂತಗಳಿಗೆ ಮೂಲ ಕಾರಣವಾಯಿತು. ನಾನು ನನ್ನದು ಎಂದು ತಿಳಿಯುವಲ್ಲಿ ಈ ಜಗತ್ತಿನ ವ್ಯವಹಾರವಿದೆ. ಅದು ದೂರವಾದರೆ......  ಎಲ್ಲಾ ಸಂಬಂಧಗಳೂ,  ಬಂಧುತ್ವವೂ  ನಿಂತಿರುವುದು ನಮ್ಮ ಅಹಂಭಾವದ ಮೇಲೆ.  ಭಗವಂತನ ಈ ಹಿತೋಪದೇಶ ನಮ್ಮಬಳಿಗೆ ತಲುಪುವಾಗ ತಡವಾಗಿ ಹೋಯಿತು. ಇಲ್ಲಾ ನಾವೇ ಎಡವಿದೆವು. 

ಈಗ ಸುಯೋಧನ ಹೇಗಿರಬಹುದು?  ಸಂಜಯ ಬಂದು ಹೇಳಿದ ವಾರ್ತೆ ಆಶಾಭಾವದ ಜತೆಗೆ ಆತಂಕವನ್ನೂ ತಂದಿದೆ. ಕೊನೆಗಾಲದಲ್ಲಿ ಅಜ್ಜ ಭೀಷ್ಮರ ಸಲಹೆ ಹೋಗಿ ಅಡಗಿಕೊ. ಇದುವರೆಗೂ ಸಿಂಹಾಸನದ ರಕ್ಷಣೆ ತನ್ನದೂ ಎಂದು ಹೂಂಕರಿಸುತ್ತಿದ್ದ ಭೀಷ್ಮರೇ ಹೇಳುತ್ತಾರೆ ಹೋಗಿ ಅಡಗಿಕೋ. ಸುಯೋಧನನ ಹಾದಿಗೆ ಮುದ್ರೆ ಒತ್ತಿದರೆ? ಇಂದು ಒಂದು ಕಳೆದು ಬಿಟ್ಟರೆ ನಾಳಿನ ಸೂರ್ಯೋದಯ ನಮ್ಮದಾಗುತ್ತದೆ. ನಾನಂತೂ ಸೂರ್ಯೋದಯ ಕಾಣಲಾರೆ, ಮಗ ಸುಯೋಧನ ಕಾಣಬಲ್ಲನೇ? ಅಯ್ಯೋ ಶಿವನೇ? ದೃಷ್ಠಿ ಹೀನನಾದರೂ ಬದುಕಿನಲ್ಲಿ ಏನೆಲ್ಲ ಕಾಣಬಾರದೋ ಅವೆಲ್ಲವನ್ನೂ ಕಾಣುವ ದೌರ್ಭಾಗ್ಯ ನನ್ನದು. ಈಗ ಅನ್ನಿಸುತ್ತದೆ. ನಾನು ಕಣ್ಣಿಂದ ಮಾತ್ರ ಕುರುಡಾಗಿಲ್ಲ. ಈಗ ಮನಸ್ಸಿನಿಂದಲೂ ಕುರುಡಾಗಿದ್ದೇನೆ. ಇಲ್ಲ ಆ ಪರಮಾತ್ಮನಲ್ಲಿ ಕೇಳಬೇಕಿದೆ. "ಹೇ ಭಗವಂತಾ ನನ್ನ ಮನಸ್ಸೂ ಶೂನ್ಯವಾಗಿ ಮನಸ್ಸಿನಿಂದಲೂ ನನ್ನನ್ನು  ಅಂಧನಾಗಿಸು. ಆಗ... ಆಗ... ಈ ಎಲ್ಲ ದುಗುಡವನ್ನು ಮರೆಯಬಲ್ಲೆ. "