"ಇದು ವಿಮರ್ಶೆಯಲ್ಲದ ಚಿಂತನ"

Monday, December 7, 2015

ಪತಂಗ ಚಲನೆಯ ರಜತ ಚಂದ್ರ

            ವಾರಿಜಗಂಧಿನಿ ಕೀರಭಾಷಿಣಿ ಮುದ್ದು   ನೀರೆ ನೀ ಬಾಗಿಲ ತೆರೆಯೆ …………….
ಶೃಂಗಾರ ರಸದ ಪದ ಮಧುರವಾದ ಅಲಾಪನೆಯೊಂದಿಗೆ ಬರುತ್ತಿದ್ದರೆ ಅದಕ್ಕೊಪ್ಪುವ ಸಹಜವಾದ ಹೆಜ್ಜೆಗಾರಿಕೆಯ ನೃತ್ಯಾಭಿನಯ ರಂಗದಲ್ಲಿ ಮೈದಳೆಯುತ್ತಿತ್ತು. ಶ್ರೀಕೃಷ್ಣ ಪಾರಿಜಾತ ಪ್ರಸಂಗದ ಶೃಂಗಾರ,  ಮತ್ಸರ,  ಹಾಸ್ಯ, ಲಾಸ್ಯಗಳಿಂದ ಕೂಡಿದ ಒಂದು ಸನ್ನಿವೇಶವದು. ನಾರದ ತಂದಿತ್ತ ಪಾರಿಜಾತ ಪುಷ್ಪವನ್ನು ಶ್ರೀಕೃಷ್ಣ ರುಕ್ಮಿಣಿಗೆ ತೊಡಿಸುತ್ತಾನೆ. ಆಲ್ಲಿಂದ ಸಮಸ್ಯೆಯ ಆರಂಭವಾಗುತ್ತದೆ. ಈ ಸಮಾಚಾರವನ್ನು ಬಣ್ಣಗಟ್ಟಿ ಸಖಿ ತನ್ನೊಡತಿ ಸತ್ಯಭಾಮೆಗೆ ವರದಿಯೊಪ್ಪಿಸುತ್ತಾಳೆ.  ಸತ್ಯಭಾಮೆ ಸವತಿ ಮಾತ್ಸರ್ಯದಿಂದ ಅಂತಃ ಪುರದ ಬಾಗಿಲು ಭದ್ರ ಪಡಿಸಿ ಮುನಿಸಿನಿಂದ ಇರುವಾಗ ಶ್ರೀಕೃಷ್ಣ ರಮಿಸುತ್ತಿರುವ ದೃಶ್ಯ. ಸತ್ಯಭಾಮೆಗಾಗಿ ಎಲ್ಲವೂ ಆಗುವ ಶ್ರೀಕೃಷ್ಣ ಪರಿಪರಿಯಾಗಿ ಮನವೊಲಿಸುವ ಸಂದರ್ಭದಲ್ಲಿ ಶ್ರೀಕೃಷ್ಣ ಪಾತ್ರಧಾರಿಯ ಉತ್ಕೃಷ್ಟ ಅಭಿನಯ ಮಾತುಗಾರಿಕೆ ಎಲ್ಲಕ್ಕಿಂತ ಮಿಗಿಲಾಗಿ ಮೋಹಕವಾದ  ಅಪ್ಪಟ ಯಕ್ಷಗಾನದ ನರ್ತನ ಮನಸೆಳೆಯುತ್ತದೆ.  ಭಾಗವತರ ಪದಕ್ಕೆ ಲಯಬದ್ಧ ಮದ್ದಲೆವಾದನ ಹೇಗಿರಬೇಕು ಎಂದು ಸೂಚಿಸುವಂತಹ  ಹೆಜ್ಜೆಕಾರಿಕೆ.   ಆ ಹೆಜ್ಜೆಗಾರಿಕೆಯ ಮೆಲುವಾದ ಸದ್ದಿನಲ್ಲಿ ಮದ್ದಲೆಯ ನಾದ ಹೊರಹೊಮ್ಮಿದ ಹಾಗೆ ಭಾಸವಾಗುತ್ತಿತ್ತು. ಅಷ್ಟಾಂಗನೆಯರ ಮಡಿಲಿನಿಂದ ಮಡಿಲಿಗೆ ಹೃದಯದಿಂದ ಹೃದಯಕ್ಕೆ ಹಾರುವಂತೆ ಸೌಮ್ಯನರ್ತನ.  ಪರಿಪೂರ್ಣ ಹಸ್ತಮುದ್ರೆಯ ಸಂಕೇತ, ಭುಜದೆತ್ತರಕ್ಕೆ ಹಿಡಿದ ಕೈಯಲ್ಲಿ ಸುಲಲಿತವಾದ ವಿನ್ಯಾಸದ ಅಂಗಭಂಗಿ,  ರಂಗಸ್ಥಳದ ಸುತ್ತಗಲಕ್ಕೂ ಚಲಿಸುವ ರಂಗ ತುಂಬುವ ನಾಟ್ಯ,  ಅತ್ತಿಂದಿತ್ತ ಇತ್ತಿಂದತ್ತ ಹೀಗೆ ರಸಭರಿತ ನಾಟ್ಯಾಭಿನಯವನ್ನು ಕಂಡಾಗ ಯಾರೀತ ನುರಿತ ಕಲಾವಿದ? ಅಚ್ಚರಿ ಪ್ರಶ್ನೆಗೆ ಸಹ ವೀಕ್ಷಕನ ಉತ್ತರ ಬೇರೆ ಆತ ಯಾರೂ ಅಲ್ಲ.... ಅದು ನಮ್ಮ ಚಂದ್ರಶೇಖರ ಧರ್ಮಸ್ಥಳ.



            ರಂಗದ ಮೇಲಿನ ಜೀವನಕ್ಕೆ ರಜತಪರ್ವವನ್ನು ಆಚರಿಸುವ ಚಂದ್ರ ಶೇಖರರ ವೇಷ ಕಾಣುವಾಗ ಅದಾಗಲೇ ಇಪ್ಪತ್ತೈದು ಕಳೆಯಿತೆ ?  ಎಂಬ ಅನುಮಾನ ಬರುವುದು ಸಹಜ. ದಣಿವರಿಯದ ಸುಂದರ ನಾಟ್ಯ ನೋವರಿಯದ ನಗುಮುಖ,  ಪಾತ್ರಕ್ಕೆ ಒಪ್ಪುವ ಹಿತಮಿತವಾದ ಪರಿಶುದ್ದ ಮಾತುಗಾರಿಕೆ. ಎಲ್ಲವನ್ನು ಮೀರಿ ನಿಲ್ಲುವ ಸರಳ ಹಾಗು ವಿನಮ್ರ ನಡತೆ ಹೀಗೆ ಓರ್ವ ಪುಂಡುವೇಷಧಾರಿಯಾಗಿಯೋ ಕಲಾವಿದನಾಗಿಯೋ ಯೋಗ್ಯತೆಗಳು ಏನಿರಬೇಕೋ ಅದೆಲ್ಲವನ್ನು ಹೊಂದಿಕೊಂಡ ರಂಗದ ಪಾದರಸ ಚಲನೆಗೆ ಇಪ್ಪತೈದರ ರಂಗಾನುಭವ ಎಂದರೆ ಅಚ್ಚರಿಯಾಗುತ್ತದೆ.

             ಯಾವುದೇ ವೇಷವಿತ್ತರೂ ಅದನ್ನು ನಿಭಾಯಿಸುವ ಆತ್ಮ ವಿಶ್ವಾಸ ಕಲಾವಿದನನ್ನು ಪರಿಪೂರ್ಣವಾಗಿಸುತ್ತದೆ. ಪ್ರಸಂಗ ಮತ್ತು ಹಿಮ್ಮೇಳಕ್ಕೆ ಕಲಾವಿದನಾದವನು ಭಾರವಾಗಬಾರದು. ಆವಾಗ ಸ್ವ ಅಸ್ತಿತ್ವಕ್ಕೆ ಅಭದ್ರತೆಯ ವಾಸನೆ ಬಡಿಯುತ್ತದೆ. ಇದು ಮೊದಲು ಪ್ರಕಟಗೊಳ್ಳೂವುದು ಒಬ್ಬ ಪುಂಡುವೇಷಧಾರಿಯ ಪಾತ್ರಗಳಲ್ಲಿ.   ಪುಂಡುವೇಷವೆಂದರೆ ಮೇಳದ ಪ್ರಧಾನ ಆಕರ್ಷಣೆಯ ಕೇಂದ್ರ ಬಿಂದು. ಅದೆಷ್ಟೇ ಹಿರಿಯ ಕಲಾವಿದರು ರಂಗದಲ್ಲಿದ್ದರೂ ಪುಂಡುವೇಷದ ಪ್ರವೇಶವೆಂದರೆ ಪ್ರೇಕ್ಷಕರ ಮೈಛಳಿ ದೂರವಾದಂತೆ. ಆತ ಕುಣಿಯುತ್ತಿದ್ದರೆ ಉತ್ಸಾಹಿಗಳ ಕೈ ಕಾಲು ಅರಿವಿಲ್ಲದೇ  ನೆಲದ ಪರಿವೆಯನ್ನು ಕಳೆದುಕೊಂಡು ಬಿಟ್ಟಿರುತ್ತದೆ. ಇಲ್ಲಿ ಪ್ರಮುಖ ಅಂಶವೆಂದರೆ ಅಸಂಖ್ಯ ದಿಗಿಣ ಗಿರಕಿಯಿದ್ದರೆ ಪುಂಡುವೇಷವಾಗುವುದಿಲ್ಲ.  ಶುದ್ದ ಕರಾರುವಕ್ಕಾದ ಹೆಜ್ಜೆಗಾರಿಕೆಯ ನಾಟ್ಯಾಭಿನಯ ಇದು ಮಿತಿಯೊಳಗಿರಬೇಕು.  ಜತೆಯಲ್ಲಿ ಸ್ಪಷ್ಟ  ಉಚ್ಚಾರದ ನಿರರ್ಗಳ ಸಂದರ್ಭೋಚಿತ ಮಾತುಗಾರಿಕೆಯೂ ಇರಬೇಕು. ಸಹಕಲಾವಿದರ ನಿರ್ವಹಣೆಗೆ ಚೈತನ್ಯವನ್ನು ತುಂಬುತ್ತಾ ಪ್ರಸಂಗದ ಜೀವನಾಡಿಯಾಗಿರಬೇಕು.   ಈ ಎಲ್ಲಾ ಸರ್ವಾಂಗ ಗುಣಗಳು ಚಂದ್ರಶೇಖರರಲ್ಲಿ ಅಡಕವಾಗಿದೆ ಎಂದರೆ ಅದು ಅತಿಶಯವಲ್ಲ.  ಆದರೆ ಈ ಎಲ್ಲವನ್ನು ಮೀರಿದ ಗುಣವೊಂದು ಚಂದ್ರಣ್ಣನಲ್ಲಿದ್ದರೆ ಅದು ಬಿಗುಮಾನವಿಲ್ಲದ ಸರಳ ನಡತೆ.  ಸಹಕಲಾವಿದರಿಗೆ ಮತ್ತು ಪ್ರೇಕ್ಷಕರಿಗೆ ಹತ್ತಿರವಾಗುವುದು ಇದರಿಂದಲೇ.
ಚಿತ್ರ ಕೃಪೆ ರಾಧಾಕೃಷ್ಣ ಭಟ್ ಕೊಂಗೊಟ್

 ಪುಂಡುವೇಷವಾಗಲೀ,  ರಾಜವೇಷವಾಗಲೀ , ಬೊಬ್ಬಿರಿಯುವ ಬಣ್ಣದವೇಷವೇ ಆಗಲಿ ಅಥವಾ ಸ್ತ್ರೀವೇಷವೇ ಆಗಲಿ ಭೇದವಿಲ್ಲ. ಅದನ್ನು ಆತ್ಮ ವಿಶ್ವಾಸದಿಂದ ಸ್ವೀಕರಿಸಿ ಅಷ್ಟೇ ಯಶಸ್ವಿಯಾಗಿ ರಂಗದಲ್ಲಿ ಸಾಕ್ಷಾತ್ಕರಿಸಿಬಿಡುತ್ತಾರೆ.  ಇದು ಕಲಾವಿದನಾಗಿ ಇರಬೇಕಾದ ಹಿರಿಯ ಆದ್ಯತೆ.  ವೇಷ ಒಪ್ಪಿದ ಮೇಲೆ ಹಿಮ್ಮೇಳದಬಗ್ಗೆ ತಲೆಕೆಡಿಸಿಕೊಳ್ಳುವ ಜಾಯಮಾನವಿಲ್ಲ. ಸ್ವ ಸಾಮಾರ್ಥ್ಯಕ್ಕೆ ಅನುಗುಣವಾಗಿ ರಂಗ ಮೇಲಿನ ನಿರ್ವಹಣೆಗೆ ಪ್ರಾಮಾಣಿಕರಾಗಿರುತ್ತಾರೆ.  ಹೀಗಾಗಿ ಯಾವುದೇ ಕೂಟಗಳಿಗೂ ಇವರ ಆಯ್ಕೆ ಸುಲಭವಾದರೂ ಇವರ ಲಭ್ಯತೆಯೇ ಇತ್ತೀಚೆಗೆ ಕಠಿಣವಾಗಿಬಿಟ್ಟಿದೆ.

ಪುಂಡುವೇಷವೆಂದರೆ ಆರಂಭದ ಮಿಂಚಿನ ಪ್ರವೇಶದಿಂದ ತೊಡಗಿ ಪಾತ್ರ ನಿರ್ವಹಣೆ ಸಮಾಪ್ತಿಯ ವರೆಗೂ ಚಿಗರೆಯ ಚಲನೆಯಿರಬೇಕು. ಅದರಲ್ಲೂ ಪ್ರವೇಶ,  ಅದು ಮಿಂಚಿನ ವಿದ್ಯುತ್ ಸಂಚಾರವನ್ನುಂಟು ಮಾಡಬೇಕು. ಚಕ್ರವ್ಯೂಹದ ಅಭಿಮನ್ಯುವಿನಂತ ಪಾತ್ರಗಳು ಆಕರ್ಷಣೆಯನ್ನು ಗಳಿಸುವುದು ಇಂಥವುಗಳಿಂದ.  ಹಿಂದೆ ಜೋಡಾಟವೊಂದರಲ್ಲಿ ಶ್ರೀ ಕೋಳ್ಯೂರು ರಾಮಚಂದ್ರ ರಾಯರು ಅಭಿಮನ್ಯು ಮಾಡಿದಾಗ ಅಭಿಮನ್ಯುವಿನ ಮಿಂಚಿನ ಪ್ರವೇಶದಿಂದಲೇ ಆ ಪ್ರಸಂಗ ಅರ್ಧದಷ್ಟು ಜನಾಕರ್ಷಣೆಯನ್ನು ಪಡೆದುಕೊಂಡಿತ್ತು. ಪ್ರಸಂಗ ಮುಕ್ತಾಯದವರೆಗೂ ಪ್ರೇಕ್ಷಕನ ಕದಲದ ನೋಟ ಈ ರಂಗಸ್ಥಳದತ್ತ ನೆಟ್ಟಿತ್ತು.  ಇದನ್ನು ಹಲವು ಹಿರಿಯ ಭಾಗವತರಾದಿ ಕಲಾವಿದರೂ ಇಂದಿಗೂ ನೆನಪಿಸುತ್ತಾರೆ. ಇಂತಹ ಪ್ರಸಿದ್ದ ಕಲಾವಿದರ ಶಿಷ್ಯತ್ವದ ಗರಡಿಯಲ್ಲಿ ಪಳಗಿದ ಮೇಲೆ,  ಇವರನ್ನು ಕಂಡಾಗ ಆಲದ ಮರದ ಬಳ್ಳಿಯೊಂದು ಇಳಿದು ನಂತರ ಬೃಹತ್ ಮರವಾಗಿ ಬೆಳೆದಂತೆ ಭಾಸವಾಗುತ್ತದೆ.  ಸಮರ್ಥಗುರುವಿಗೆ ಅತಿ ಸಮರ್ಥ ಶಿಷ್ಯ ಎನ್ನಬಹುದು.

ಇತ್ತೀಚೆಗೆ ಪುಂಡುವೇಷದ ಕಲ್ಪನೇಯೇ ರೂಪಾಂತರ ಹೊಂದಿದೆ. ಗಿರಕಿ ದಿಗಿಣದ ಯೋಗ್ಯತೆಯೊಂದೇ ಮಾನದಂಡವಾಗುತ್ತದೆ. ಕನಿಷ್ಠವಾಗುವ ರಂಗ ಪ್ರಜ್ಞೆ, ಉಚ್ಚಾರ ಶುದ್ಧಿಯಿಲ್ಲದ ಕೇವಲ ಏದುಸಿರಲ್ಲಿ ಸಿಕ್ಕಿಕೊಳ್ಳುವ ಮಾತುಗಾರಿಕೆ ಒಟ್ಟು ಪುಂಡುವೇಷದ ಕಲ್ಪನೆಯನ್ನೇ ಬದಲಿಸಿಬಿಟ್ಟಿದೆ.  ಹದಿನೈದು ನಿಮಿಷ ಕುಣಿಯುವಾಗ ಒಂದು ನಿಮಿಷ ಮಾತನಾಡುವ ಚೈತನ್ಯವಾಗಲೀ ಸಾಮಾರ್ಥ್ಯ ವಾಗಲೀ ಇರುವುದಿಲ್ಲ.  ಚಂದ್ರಶೇಖರರ ಪಾತ್ರನಿರ್ವಹಣೆ ಇವುಗಳನ್ನೆಲ್ಲ ಮೀರಿ ನಿಂತುಬಿಡುತ್ತದೆ.  ಪುಂಡುವೇಷವೆಂದರೆ ಯಕ್ಷಗಾನದಲ್ಲಿ ಮಾದರಿಯಾಗುವುದು ಹಿಂದಿನ  ಶ್ರೇಷ್ಠ ದಂತ ಕಥೆ  ಕಿಶ್ಚನ್ ಬಾಬು ಅವರ ಪಾತ್ರಗಳು. ಬಾಲ್ಯದಲ್ಲಿ ಇವರ ಒಂದೆರಡು ವೇಷನೋಡಿದ ಭಾಗ್ಯ ನನಗೂ ಇತ್ತು. ಆನಂತರ ಅದೇ ಪರಂಪರೆಯಲ್ಲಿ ಶಿವರಾಮ ಜೋಗಿ ಶ್ರೀಧರಭಂಡಾರಿ ಹೀಗೆ ಹಲವರು ಬೆಳೆದು ಬಂದರು. ಶ್ರೀಧರ ಭಂಡಾರಿ ತನ್ನ ಮಿಂಚಿನ ನಿರ್ವಹಣೆಯಿಂದ  ಇಂದಿಗೂ ಚಲಾವಣೆಯ ನಾಣ್ಯವಾಗಿಯೇ ಗುರುತಿಸಲ್ಪಟ್ಟರೆ, ಜೋಗಿಯವರ ಹಳೆಯ ಪಾತ್ರಗಳು ಇಂದಿಗೂ ಕಣ್ಣಿಗೆ ಕಟ್ಟುತ್ತಿವೆ. ಇವರ ವೇಷ ಕಂಡಾಗ ಕೇವಲ ದಿಗಿಣಹಾಕುವುದೊಂದೇ ಪುಂಡುವೇಷದ ಮಾನದಂಡವಲ್ಲ ಎಂಬುದನ್ನು ಕಾಣಬಹುದು. ರಂಗದ ನಿಲುಮೆ,  ಲಯಬದ್ದ ಆಕರ್ಷಕ ಹಿತಮಿತವಾದ ಕುಣಿತ ಮತ್ತು ನಿರರ್ಗಳ ಮಾತುಗಾರಿಕೆ ಸಂದರ್ಭೋಚಿತ ನಿರ್ವಹಣೆ ಇಲ್ಲಿ ಅತೀ ಅಗತ್ಯವಾಗುತ್ತದೆ. ಈ ಗುಣಗಳಿಂದ ಜನಾಕರ್ಷಣೆಯನ್ನು ಗಳಿಸಿದವರು.  ಇವುಗಳೆಲ್ಲವನ್ನು ಪ್ರೇಕ್ಷಕ ಚಂದ್ರಶೇಖರರವಲ್ಲಿ ಕಾಣುವ ಪ್ರಯತ್ನವನ್ನು ಮಾಡುತ್ತಿರುತ್ತಾನೆ. 


ಪುಂಡು ವೇಷಧಾರಿ ಸಕಾಲಿಕವಾಗಿ ಪಾತ್ರದ ಸ್ಥಿತ್ಯಂತರಗಳನ್ನು ಪಾಲಿಸಿಕೊಳ್ಳಬೇಕು. ಕೇವಲ ಪುಂಡುವೇಷಕ್ಕಷ್ಟೇ ಸೀಮಿತವಾದರೆ ನಂತರ ಆ ದೈಹಿಕ ಕ್ಷಮತೆಯನ್ನು ಉಳಿಸಿಕೊಳ್ಳುವುದಕ್ಕೆ ಹೆಣಗಾಡಬೇಕಾಗುತ್ತದೆ. ಇದು ಒಟ್ಟು ನಿರ್ವಹಣೆಯಲ್ಲಿ ಪ್ರಭಾವವನ್ನು ಬೀರುತ್ತದೆ. ಹಾಗಾಗಿ ರಾಜವೇಷವೋ ಮತ್ತೋಂದೋ ಬದಲಾವಣೆಯನ್ನು ಸಕಾಲಿಕವಾಗಿ ತಂದುಕೊಳ್ಳುವ ಅನಿವಾರ್ಯತೆ ಇದೆ.  ಇಂದು ಪುಂಡುವೇಷದಷ್ಟೇ  ರಾಜವೇಷದಂತಹ ಕಿರೀಟವೇಷಗಳನ್ನು ಚಂದ್ರಶೇಖರರು ಸುಲಭದಲ್ಲೇ ನಿರ್ವಹಿಸುತ್ತಾರೆ. ಇದು ಪರಿಪೂರ್ಣತೆಯ ಸಂಕೇತವೆನ್ನಬೇಕು. ಹಾಗೇನೆ ಇವರ ಗಾಳಿಯಲ್ಲಿ ತೇಲುವಂತಹ  ನೃತ್ಯ ಶೈಲಿ ಬಹಳ ಆಕರ್ಷಣೀಯ.  ನೃತ್ಯದಿಂದ ರಂಗದ ಪತಂಗವಾಗುವ ಈ ಚಂದ್ರನ ರಜತ ಪ್ರಭೆ ಸದಾ ಪ್ರಖರವಾಗಿ ಬೆಳಗಲೆಂಬ ಆಶಯಗಳೊಂದಿಗೆ ಓರ್ವ ಕಲಾವಿದನ ಉತ್ತುಂಗತೆಯನ್ನು  ತಲುಪುವಲ್ಲಿ ಈ ರಜತ ಸಂಭ್ರಮವು ಸೋಪಾನವವಾಗಿ ಆ ಭವ್ಯತೆಯನ್ನು ಒದಗಿಸಲಿ ಎಂದು ಹಾರೈಸುವ.    

            

Friday, December 4, 2015

ಅಭಿಮಾನದ ಅಪಮೌಲ್ಯ

            ಇದು ಕಳೆದ ಲೇಖನದ ಮುಂದುವರಿದ ಭಾಗ ಎನ್ನಬೇಕೋ  ಎಂದನಿಸುತ್ತದೆ.  ಘಟನೆಗಳು ಹಾಗೆ ದೂರದರ್ಶನದ ಸರಣಿಯಂತೆ ಒಂದನ್ನೊಂದು ಹೊಂದಿಕೊಂಡಿದ್ದರೆ ಅದೇ ಮುಂದುವರಿದಂತೆ ಭಾಸವಾಗುತ್ತದೆ.  ಹಾಗೇ ಆಸಕ್ತಿ ಇದ್ದಲ್ಲಿ ಮುಂದುವರೆಸಿ.....

ಇತ್ತೀಚೆಗೆ "ಅತಿಕಾಯ ಮೋಕ್ಷ" ಎಂಬ ಯಕ್ಷಗಾನ ಪ್ರಸಂಗದ ಧ್ವನಿಮುದ್ರಣ   ವಾಟ್ಸ್ ಅಪ್ ನಲ್ಲಿ ಹರಿದಾಡುತ್ತಾ ನನ್ನ ಮೊಬೈಲ್ ಗೂ ಬಂತು. ಸುಮಾರು ಮೂರು ನಾಲ್ಕು ಘಂಟೆಯ ತಾಳಮದ್ದಲೆ ಇಷ್ಟು ಸಂಕೀರ್ಣವಾಗಿ ಹರಿದಾಡಿ ನನ್ನ ಬಳಿಗೆ ಬರುತ್ತದೆ ಎಂದರೆ ತಂತ್ರಜ್ಞಾನವನ್ನು ಹೊಗಳಬೇಕೋ ಅಲ್ಲ ಅವಿಷ್ಕಾರದ ಬಗ್ಗೆ ವ್ಯರಾಗ್ಯವನ್ನು ವ್ಯಕ್ತಪಡಿಸಬೇಕೋ ತಿಳಿಯಲಿಲ್ಲ. ಉತ್ತರಕನ್ನಡದ ಗಡಿಗೆಹೊಳೆಯಲ್ಲಿ ಬಹಳ ಹಿಂದೆ ದಶಕಗಳ ಕೆಳಗೆ ಆದ ತಾಳ ಮದ್ದಲೆಯದು.  ಹೊಸ್ತೋಟ ಶೇಣಿ ಪೆರ್ಲ ತೆಕ್ಕಟ್ಟೆ ಹೀಗೆ ಶ್ರೇಷ್ಠ ಕಲಾವಿದರ ನೈಪುಣ್ಯತೆಯಿಂದ  ಕೂಡಿದ ಸುಂದರ ಧ್ವನಿಮುದ್ರಣವದು. ಆದರೆ ಇದರಲ್ಲಿ ಅಚ್ಚರಿ ಪಡುವಂತಹುದು ಏನಿದೆ ಎಂದು ಅಚ್ಚರಿಯೇ?

            ಬಂದ ದ್ವನಿ ಮುದ್ರಣದ ಕಡತವನ್ನು ಇಳಿಸಿ ಕೇಳಿದೆ. ಕೇಳಿದಾಗ ಅನುಮಾನಗೊಂಡು ಪರಿಶೀಲಿಸಿದಾಗ ಅರಿವಿಗೆ ಬಂತು. ಇದು ನನ್ನ ಸಂಗ್ರಹದಲ್ಲಿದ್ದ ಒಂದು ಯಕ್ಷಗಾನ. ಇದರಲ್ಲಿ ವಿಚಿತ್ರವೇನು. ಸಂಗತಿ ಇರುವುದು ಇಲ್ಲೇ. ಮಹನೀಯರೊಬ್ಬರಿಂದ ವಿನಿಮಯದ ರೂಪದಲ್ಲಿ ಸಂಗ್ರಹಿಸಿದ್ದ ಅಮೂಲ್ಯ ಸಂಗ್ರಹವದು. ಅದರಂತೆ ನನ್ನಲ್ಲಿದ್ದ ಅಮೂಲ್ಯ ಸಂಗ್ರಹ , ಸಮಯ ಮತ್ತು ಶ್ರಮವನ್ನು ಇದಕ್ಕಾಗಿ ವಿನಿಯೋಗಿಸಿದ್ದೆ.  ಇದರ ಬಗ್ಗೆ ಖೇದವಿಲ್ಲ. ಆದರೆ ಒಂದು ವಸ್ತು ಸಂಗ್ರಹಿಸಲ್ಪಡುವುದು ಅದರ ಮೌಲ್ಯದ ಯೋಗ್ಯತೆಯಿಂದ. ಅತ್ಯಮೂಲ್ಯವಾಗಿರುವಂತಹುದು ಅದು ಸಂಗ್ರಾಹ್ಯವಾಗಿರುತ್ತದೆ.  ಇಲ್ಲವಾದರೆ ಸಂಗ್ರಹಕ್ಕೆ ಅರ್ಥವೆಲ್ಲಿಯದು?

ಇನ್ನು ಮೌಲ್ಯ ಮಾಪನ ಅದು ನಮ್ಮಲ್ಲೇ ಇರುತ್ತದೆ.  ನಮ್ಮ ಸಂಗ್ರಹಕ್ಕೆ ನಾವು ಮೊದಲು ಮೌಲ್ಯವನ್ನು ಗೌರವವನ್ನು ಕೊಡಬೇಕು. ನಾವೇ ಅದನ್ನು ನೀಡದೆ ಇದ್ದಲ್ಲಿ ಮೌಲ್ಯರಹಿತವಾದ ಸಂಗ್ರಹವಾಗುತ್ತದೆ.  ವರ್ತಕ ತನ್ನ ಅಂಗಡಿಯಲ್ಲಿ ಸಂಗ್ರಹಿಸಿಡುವ ಪ್ರತಿವಸ್ತುವಿನ ಮೌಲ್ಯವನ್ನು ಅರಿಯಬೇಕು. ಹಾಗಿದ್ದಲ್ಲಿ ವರ್ತಕನಾಗಿ ಯಶಸ್ಸನ್ನು ಗಳಿಸುವುದಕ್ಕೆ ಇದು ಮೊದಲ ಆದ್ಯತೆಯಾಗಿರುತ್ತದೆ. ಹೆಣ್ಣನ್ನು ಮದುವೆ ಮಾಡಿಕೊಡುವಾಗ ಮಗಳ ಮೇಲೆ ತಂದೆಗೆ ಪ್ರೀತಿ ಮಮಕಾರ ಗೌರವ ಇದ್ದಲ್ಲಿ ಆಕೆಯ ಗಂಡನ ಆಯ್ಕೆಯಲ್ಲೂ ಆತ ಕಾಳಜಿವಹಿಸುತ್ತಾನೆ. ಇಲ್ಲವಾದರೆ ಅದು ಅಸ್ಥಾನಕ್ಕೆ ಸಲ್ಲುವ ದಾನವಾಗಿ ಪರಿಣಮಿಸುತ್ತದೆ.

            ಹೀಗೆ ನಮ್ಮಲ್ಲಿರುವ ಮೌಲ್ಯಯುತ ವಸ್ತು, ಅದು ಅದರ ಬೆಲೆಯನ್ನು ತಿಳಿದವರ ಕೈಸೇರಬೇಕೆಂದು ಬಯಸುತ್ತಾರೆ. ಮಂಗನ ಕೈಗೆ ಮಾಣಿಕ್ಯ ಕೊಟ್ಟರೇನು ಬಂತು. ಮಂಗ ಒಂದು ಸಲ ಅದನ್ನು ನೋಡಿ ಮತ್ತೆ ಸ್ಥಳ ನೋಡದೆ ಎಸೆದುಬಿಡುತ್ತದೆ.  ಹಾಗೆಂದು ಅದೇ ವಸ್ತು ಮೌಲ್ಯ ತಿಳಿದ ವ್ಯಾಪರಿಯ  ಕೈ ಸೇರುವುದನ್ನು ಬಯಸಬಹುದೇ?  ವ್ಯಾಪಾರಿಯಾದವನು ವಸ್ತುವಿನ ಮೌಲ್ಯವನ್ನು ಅರಿಯುವಲ್ಲಿ ಮತ್ತು ಅದನ್ನು ಹೊಂದುವುದರಲ್ಲಿ ಆತನ ವ್ಯಾಪಾರಿ ಸ್ವಾರ್ಥವಿರುತ್ತದೆ.  ಸುಂದರವಾದ ದೇವರ ಮೂರ್ತಿ ಅಂಗಡಿಯಲ್ಲಿದ್ದರೆ ,  ಅಂಗಡಿಯಾತನಿಗೆ ಅದಕ್ಕೆ ನಮಸ್ಕರಿಸುವ ಅಥವಾ ಪೂಜಿಸುವ ಆವಶ್ಯಕತೆ ಇರುವುದಿಲ್ಲ. ಅದೇ ಭಕ್ತನೊಬ್ಬ ಅದನ್ನು ಒಯ್ಯುವಾಗ ಅವನು ಕಟ್ಟುವ ಮೌಲ್ಯ ಬೇರೆಯದೇ ಆಗಿರುತ್ತದೆ. ಆ ಮೌಲ್ಯವನ್ನು ಆತ ಎಲ್ಲಿಯವರೆಗೆ ಗೌರವಿಸುತ್ತಾನೊ ಅಲ್ಲಿಯ ತನಕ ಆ ಮೂರ್ತಿ ಆತನಲ್ಲಿ ಸುರಕ್ಷಿತವಾಗಿರುತ್ತದೆ.
           
            ಅಂದಿನ ವೃತ್ತ ಪತ್ರಿಕೆಯ ಬೆಲೆ ಅಂದು ರಾತ್ರಿಕಳೆಯುವವರೆಗೆ ಸೀಮಿತ. ಮರುದಿನದ ಪತ್ರಿಕೆ ಬಂದಾಗ ಇದು ನಿನ್ನಯ ಮೌಲ್ಯವಿಲ್ಲದ ಸಂಗ್ರಹದ ಮೇಲೆ ರದ್ದಿಯಾಗಿ ಬಿದ್ದಿರುತ್ತದೆ. ಅದರಂತೆ ನಮ್ಮ ಭಾಷೆಯ ಪತ್ರಿಕೆಯ ಮೌಲ್ಯವನ್ನು  ಅನ್ಯಭಾಷಿಕ ನೀಡಬೇಕೆಂದೇನೂ ಇಲ್ಲ.  ಇಂದಿನ ಪತ್ರಿಕೆಯಾದರೂ ಆತನಿಗೆ ಅರ್ಥವಿಲ್ಲದ ರದ್ದಿಯಾಗಿರುತ್ತದೆ. ಒಂದು ವಸ್ತುವಿನ ಯೋಗ್ಯತೆ ಗುರುತಿಸಲ್ಪಡುವುದಕ್ಕೆ ಸ್ಥಾನದ ಅವಶ್ಯಕತೆಯೂ ಇರುತ್ತದೆ ಎಂಬುದನ್ನು ಇದು ತೋರಿಸುತ್ತದೆ.  ರಸ್ತೆ ಬದಿಯಲ್ಲಿ ಕರಪತ್ರ ಹಂಚುವವನ ಕೈಯ್ಯಲ್ಲಿ ಇರುವವರೆಗೆ ಕರಪತ್ರ ಸುಂದರವಾಗಿ ಕಾಣುತ್ತದೆ. ಒಂದು ಸಲ ಆತನ ಕೈಯಿಂದ ಅದು ವಿತರಿಸಲ್ಪಟ್ಟಿತೋ ಆಮೇಲೆ ಎಲ್ಲೆಂದರಲ್ಲಿ ಕಸದ ತೊಟ್ಟಿಯಲ್ಲೂ ಬಿದ್ದಿರುತ್ತದೆ. ಹಂಚಿಕೊಳ್ಳುವುದು ತಪ್ಪಲ್ಲ. ಆದರೆ ಅದು ಗೌರವವಯುತವಾಗಿರಬೇಕು.  ಮೌಲ್ಯವನ್ನು ಉಳಿಸಬೇಕು. ಬೆಲೆ ಬಾಳುವ ವಸ್ತು ಒಂದನ್ನು ನಾವು ಅಂಗಡಿಯಿಂದ ಹಣತೆತ್ತು ತರುತ್ತೇವೆ. ಆದರೆ ಮನೆಗೆ ತಂದಾಗ ಅಂತಹುದೇ ವಸ್ತುವನ್ನು ಪಕ್ಕದ ಮನೆಯವನೋ ಸ್ನೇಹಿತನೋ ತನಗೆ ಉಪಯೋಗವಿಲ್ಲವೆಂದು ಉಚಿತವಾಗಿ ಮನೆಯಲ್ಲಿ ತಂದಿಟ್ಟಿರುತ್ತಾನೆ. ಕೈ ಹಿಸುಕಿಕೊಳ್ಳುವಂತಾಗುವುದಿಲ್ಲವೆ? ಹೀಗೆ  ಯಾವುದೇ ವಸ್ತುವು ಸುಲಭವಾಗಿ ಧಾರಾಳವಾಗಿ ಸಿಗುತ್ತದೆ ಎಂದಾದರೆ ಅದರ ಮೌಲ್ಯ ಉಳಿಯುವುದಕ್ಕೆ ಸಾಧ್ಯವೇ?

            ಮಂಗಳೂರಿನ ಪುರಭವನದಲ್ಲಿ ಯಕ್ಷಗಾನ ಬಯಲಾಟವೊಂದು ನಡೆಯುತ್ತಿರುತ್ತದೆ. ಹಿರಿಯ ಕಲಾವಿದರೊಬ್ಬರಲ್ಲಿ ಜಾಗವಿಲ್ಲವೆಂದು ಅಲವತ್ತುಕೊಂಡಾಗ ಅವರು ಹೇಳಿದ ಮಾತು ಬಹಳ ಅರ್ಥಪೂರ್ಣವಾಗಿ ಕಾಣುತ್ತದೆ. “ ಆಟ ನೋಡುವವರು ಸ್ಥಳವಿಲ್ಲದೇ ಕಿಟಿಕಿ ಬಾಗಿಲುಗಳಲ್ಲಿ ಇಣುಕಿ ತುದಿಗಾಲಲ್ಲಿ ನಿಂತು ನೋಡುವಂತಿರಬೇಕು. ಹಾಗೆ ಕಷ್ಟ ಪಟ್ಟು ನೋಡುವಾಗ ನಮಗೂ ನಮ್ಮ ಕಾಳಜಿಯ ಅರ್ಥವಾಗುತ್ತದೆ . ಉತ್ಸಾಹ ನೂರ್ಮಡಿಸುತ್ತದೆ.” ಹೀಗೆ ಯಕ್ಷಗಾನವನ್ನು ಕಷ್ಟ ಪಟ್ಟು ಕಾಣುವಾಗ ಅದರ ಮೌಲ್ಯ ವೃದ್ದಿಯಾಗುತ್ತದೆ. 

             ಹೀಗಾಗಿ ಮೊಬೈಲ್ ನಿಂದ ಮೊಬೈಲ್ ಗೆ ಹಗುರವಾಗಿ ಹರಿದಾಡುವ ಯಕ್ಷಗಾನವನ್ನು ಕಂಡಾಗ ಇಲ್ಲಿ ಅಚ್ಚರಿಯೊಂದಿಗೆ ಮನಸ್ಸು ತಳಮಳವನ್ನು ಅನುಭವಿಸುತ್ತದೆ.  ಕಾರಣವಿಷ್ಟೆ.   ಹಗಲು ರಾತ್ರಿ ಪರಿಶ್ರಮಪಟ್ಟು ಅಭಿಮಾನದಿಂದ ಗಳಿಸಿದ್ದನ್ನು ಸಹೃದಯದಿಂದ ಹಂಚಿಕೊಂಡಾಗಿದೆ.  ಇಲ್ಲಿರುವ ಸಂಗ್ರಹಕ್ಕೆ ಅನ್ಯರು ಮೌಲ್ಯವನ್ನು ನೀಡುತ್ತಾರೆ ಎನ್ನುವಾಗ ಆ ಸಂಗ್ರಹಕ್ಕೆ ಮತ್ತಷ್ಟೂ ಅರ್ಥವಿರುತ್ತದೆ ಎಂಬ ಭಾವನೆ.  ಆದರೆ ಆ ಮೌಲ್ಯದ ಸ್ವರೂಪ ನಿಸ್ವಾರ್ಥತೆಯಿಂದ ಕೂಡಿರಬೇಕು. ಇದೇ ಭಾವದಲ್ಲಿ ನನ್ನ ಬಳಿಯಿಂದ ಹಲವರು ಅಮೂಲ್ಯ ಸಂಗ್ರಹವನ್ನು ಸಂಕೋಚವಿಲ್ಲದೇ ಕೇಳಿ ಪಡೆದಿರುತ್ತಾರೆ. ಅದರಲ್ಲೂ ಕೆಲವರು ಹೆತ್ತ ತಾಯಿಯ ಮೇಲೆ ಆಣೆಇಟ್ಟ ಭಾವದಲ್ಲಿ ಯಾರಿಗೂ ಕೊಡುವುದಿಲ್ಲ ಎಂಬ ವಾಗ್ದಾನವನ್ನು ಆಧರಿಸಿ ನನ್ನಿಂದ ಪಡೆದದ್ದಿದೆ. ವಾಸ್ತವದಲ್ಲಿ ಹೆತ್ತ ತಾಯಿ ಎನ್ನುವುದಕ್ಕೆ ಇಲ್ಲಿ ವಿಶಾಲವಾದ ಅರ್ಥವಿದೆ. ಹೇಳಿ ಕೇಳಿ ಯಕ್ಷಗಾನವನ್ನು ಅತಿಯಾದ ಪ್ರೀತಿ ಅಭಿಮಾನದಿಂದ ಕಾಣುವವರಿಗೆ ಯಕ್ಷಗಾನ ಕೇವಲ ಕಲೆಯಾಗದೆ ಅದು ಹೆತ್ತತಾಯಿಗೆ ಸಮಾನವಾಗಿರುತ್ತದೆ. ಅದಕ್ಕೆ ಆ ಗೌರವವನ್ನು ಮೌಲ್ಯವನ್ನು ಹೃದಯದಿಂದ ನೀಡುತ್ತಾರೆ.  ಹೀಗೆ ನಂಬಿಕೆ ವಿಶ್ವಾಸದಿಂದ ಪಡೆದವರು ತಮ್ಮ ತಾಯಿಯನ್ನೇ ಸಾರ್ವಜನಿಕವಾಗಿ ಮೌಲ್ಯರಹಿತವಾಗಿ ಕಾಣುತ್ತಾರೆ ಎಂದ ಮೇಲೆ ಇಲ್ಲಿ ಯಕ್ಷಗಾನಕ್ಕಾಗಲೀ ಅದರಂಗಗಳಾದ ಕಲಾವಿದರಿಗಾಗಲೀ ಗೌರವವೆಲ್ಲಿ ಬಂತು? ತಮ್ಮ ಹೆಸರು ದುಡ್ಡು ಮಾಡುವ ಸ್ವಾರ್ಥಕ್ಕೆ ಹೆತ್ತತಾಯಿಯನ್ನಾದರೂ ಪರಭಾರೆ ಮಾಡುವ ಈ ಮನೋಭಾವದಿಂದ ಮೌಲ್ಯವನ್ನು ನಿರೀಕ್ಷಿಸುವುದು ನನ್ನಂತಹವನಿಗೆ ಮೂರ್ಖತನವಾಗಿ ಕಾಣುತ್ತದೆ.   ಮನೆಯ ಹೆಣ್ಣುಮಗಳನ್ನು ಹೆತ್ತವರು ಧಾರೆ ಎರೆದು ಮದುವೆ ಮಾಡಿ ಕೊಟ್ಟ ನಂತರ  ತಾವಿತ್ತ ಪ್ರೀತಿ ಗೌರವ ಸೇರಿದ ಮನೆಯಲ್ಲೂ ಸಿಗಬೇಕೆಂದು ಅವರು ಬಯಸುತ್ತಾರೆ. ಆಗಲೇ ಆ ಹೆಣ್ಣಿನ ಬದುಕಿಗೆ ಅರ್ಥ ಮತ್ತು ಮೌಲ್ಯ ಪ್ರಾಪ್ತಿಯಾಗುತ್ತದೆ.  ಬದಲಿಗೆ ಆ ಹೆಣ್ಣು ಬೀದಿಗೆ ಬಂದು ನಿಂತರೆ ಹೇಗಾಗ ಬೇಡ. ಇದರ ಅಂತರಾರ್ಥ  ಸಂಸ್ಕಾರವಂತ ಮನಸ್ಸಿಗೆ ಮಾತ್ರವೇ ಅರ್ಥವಾಗಬಹುದು.

            ಹಂಚಿ ಹೋದದ್ದರಲ್ಲಿ ಖೇದವಿಲ್ಲ. ಆದರೆ ಅದನ್ನೆ ತಮ್ಮ ಪಿತ್ರಾರ್ಜಿತ ವಸ್ತುವಿನಂತೆ ಭಾವಿಸಿ ಮಾರಾಟಕ್ಕಿಟ್ಟು ಹಣಮಾಡುವ ಮನೋಭಾವ ತೋರಿದರೆ ನಾವು ಅಭಿಮಾನಿಸುವ ಯಕ್ಷಗಾನದ ಮೌಲ್ಯ ಎಲ್ಲಿ ಉಳಿಯಿತು?  ನಮ್ಮ ಮೌಲ್ಯ ಮಾಪನದಲ್ಲಿ ಬೆಲೆಗೆ ನಿಲುಕಲಾಗದ ಯಕ್ಷಗಾನ ಒಂದು ಐವತ್ತು ಅರುವತ್ತು ರುಪಾಯಿಯ ಸಿ ಡಿ ಯಲ್ಲಿ ಹೊರಗೆ ಸಿಗುತ್ತದೆ ಎಂದಾದರೆ ಇದನ್ನು ತೆವಲು ಎನ್ನದೆ ಬೇರೆ ಎನಾದರು ಗೌರವಯುತ ಮಾತುಗಳಲ್ಲಿ ಕೊಂಡಾಡಬೇಕೆ? ಇದನ್ನೇ ಹೆತ್ತವ್ವೆಯ ಪ್ರೀತಿಯನ್ನು ಮಾರಾಟಕ್ಕಿಡುವುದು ಎನ್ನಬಹುದು.  ನಿಮಗೆ ಹೇಗನ್ನಿಸುತ್ತದೆ.  ಇದನ್ನು ಓದಿ ಪರಿವರ್ತನೆಯಾಗುತ್ತದೆ ಎಂಬ ವಿಶ್ವಾಸವಿಲ್ಲ. ಆದರೆ ಮನದಿಂಗಿತ ಅದರಂತೆ ಹಂಚಿ ಹೋಗಲಿ ಎಂಬ ಸಮಾಧಾನ ಅಷ್ಟೆ.