"ಇದು ವಿಮರ್ಶೆಯಲ್ಲದ ಚಿಂತನ"

Tuesday, December 23, 2014

ಸುದರ್ಶನ ಗ್ರಹಣ


ತಂದೆಯಳಿದ ದಿವಸದಿಂದ ನಮ್ಮ ರಕ್ಷಿಸಿ |
ಇಂದು ಕುರು ನೃಪಗೆ ಸಹಾಯದಿಂದ  ಗರ್ಜಿಸಿ
ಬಂದು ಪಸುಳರೊಡನೆ ಕಾದುವುದು ವಿವೇಕವೆ |
ಕಂದರುಭಯ ಪಕ್ಷದಲ್ಲಿ ನಿಮಗೆ ಭೇದವೆ |

          ಶೂನ್ಯ ಹಸ್ತನಾಗಿ ತನ್ನ ತಾಯಿ ಕುಂತಿಯ ಕೈಬೆರಳನ್ನು ಹಿಡಿದು ಋಷಿಗಳ ಜತೆಯಲ್ಲೇ ಹಸ್ತಿನಾವತಿಯನ್ನು ಪ್ರವೇಶಿಸಿದ ಅದೇ ಶಿಶು, ಬಹಳಷ್ಟು ಸಾಧನೆ ಮಾಡಿ ಇಂದು ಭೀಷ್ಮನಲ್ಲಿ ಕೇಳುವ ಪ್ರಶ್ನೆ ಇದು..ಕಂದರುಭಯ ಪಕ್ಷದಲ್ಲಿ ನಿಮಗೆ ಭೇದವೆ? ಅಜ್ಜನಲ್ಲಿ ಕೇಳುವಲ್ಲಿವರೆಗೆ  ಈ ಮಗುವಿನ ಸಾಧನೆ ಮುಂದುವರೆದು ಬಿಟ್ಟಿತಲ್ಲ? ಏದುಸಿರು ಬಿಡುತ್ತಾ ಕೈಯಲ್ಲಿ ಗಾಂಢೀವವನ್ನು ಎತ್ತಿಹಿಡಿದು ಅರ್ಜುನ ಕೇಳುತ್ತಿದ್ದಾನೆ?. ಭೀಷ್ಮ ತಾನು ನೋಡುತ್ತಾನೆ. ಹಿಂದೊಮ್ಮೆ ಗೋಗ್ರಹಣ ಪ್ರಕರಣದಲ್ಲಿ ಅರ್ಜುನನ ಎದುರಾದ ಬಗೆಗೂ ಇಂದು ಎದುರು ನಿಂತ ಬಗೆಗೂ ಅಜಗಜಾಂತರ ವೆತ್ಯಾಸ.

           ತಂದೆ ಮಡಿದ ದಿವಸದಿಂದ ಎಮ್ಮ ರಕ್ಷಿಸಿ..... ಆ ರಕ್ಷಣೆಯ ನೆನಪುಂಟಲ್ವ. ಅಂದಿನ ಆ ರಕ್ಷಣೆಗೂ ಇಂದಿನ ಈ ಹಸ್ತಿನಾವತಿಯ ಸೇನಾಧಿಪತ್ಯದ ರಕ್ಷಣೆಗೂ ಅರ್ಥ ಒಂದೇ...ಅದು ಈ  ಅರ್ಜುನನಿಗೆಲ್ಲಿ ಅರಿವಾಗಬೇಕು? ನಾನೂ ಇಂದು ಅದನ್ನೇ ಕೇಳಬೇಕು..ಎನ್ನ.ತಂದೆಯಳಿದ  ದಿವಸದಿಂದ......ಈ ಹಸ್ತಿನೆಯ ಸಿಂಹಾಸನದ ರಕ್ಷಣೆ, ಆದರೆ ಯಾರಲ್ಲಿ ಕೇಳುವುದು?  ಅಣ್ಣತಮ್ಮಂದಿರು ಜಗಳ ಮಾಡುವುದು ಊರವರಿಗೆ ವಿನೋದ ಇರಬಹುದು ಆದರೆ ಆದರೆ ಹೆತ್ತ ತಾಯಿಗೆ?

 ಯುದ್ದಾರಂಭದ ಮೊದಲೇ ಸಾವಿರ ಮುಕುಟ ಮರ್ದನರ ಶಿರವನ್ನು ಕತ್ತರಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದರೂ ಪಾಂಡವರನ್ನು ಏನೂ ಮಾಡುವುದಿಲ್ಲ ಎಂದು ಹೇಳಿದವನು ನಾನು. ಬಹುಶಃ ಅದರ ಅರಿವಿದ್ದೇ ಇಂದು ಎದುರು ಬಂದು ನಿಂತಿದ್ದಾನೋ? “ಕಂದರುಭಯ ಪಕ್ಷದಲ್ಲಿ ನಿಮಗೆ ಭೇದವೆ.” ಇದು ಶ್ರೀಕೃಷ್ಣನ ಪ್ರಚೋದನೆಯ ಮಾತೇ?   ಅಲ್ಲ ಶ್ರೀಕೃಷ್ನನ ಇರಾದೆಯೇ ಇದಾಗಿರಬಹುದೇ? ಯಾವುದು ತಪ್ಪು? ಯಾವುದು ಸರಿ?  ಎಂದು ಇತ್ಯರ್ಥಕ್ಕೆ ಸಿಗದೇ ಇರುವಾಗ ಕ್ಷತ್ರಿಯರಾದವರು ನಾವು ಮಾಡುವುದೊಂದೆ, ಹಿಂದೆ ಗುರು ಪರಶುರಾಮರಲ್ಲಿಯೂ ಅದನ್ನೇ ಕಂಡವನು ಹಾಗಾಗಿ ಇಂದು ಅದೇ ಶಸ್ತ್ರಗಳ ಮೂಲಕ ಕಂಡುಕೊಳ್ಳಬೇಕು. ಈ ವರೆಗೆ ಪಾರ್ಥನ ಹಲವು ಪರಾಕ್ರಮಗಳ ವರದಿಯನ್ನಷ್ಟೆ ಕೇಳಿದವನು,, ಇಂದು ಈ ಮೊಮ್ಮಗ ಕ್ಷತ್ರಿಯೋಚಿತ ರೀತಿಯಲ್ಲೇ ಯುದ್ದ ಅರಂಭಿಸಿದ.  ಪಿತಾಮಹನಾದ ತನಗೆ, ಶರಸಂಧಾನದ ಮೂಲಕವೇ ಅಭಿವಾದನವನ್ನು ಮಾಡುತ್ತ ಶರಗಳೆರಡನ್ನು ತನ್ನ ಚರಣಗಳ ಮಧ್ಯೆಯೇ ನೆಟ್ಟುಬಿಟ್ಟನಲ್ಲ?

  ಇದೀಗ ಅವನ ಅಸ್ತ್ರಗಳ ಮೊನಚು ಎಂಥಾದ್ದು ಎಂದು ಕಾಣುವ ಬಯಕೆ. ಅದೋ ಅದೋ ನರನಾರಾಯಣರು ಎದುರೇ ನಿಂತ ಮೇಲೆ ತೋರಬೇಕಲ್ಲವೇ ಪರಶುರಾಮರಿಂದ ಕಲಿತದ್ದು.

ಭೀಷ್ಮ ಬಾಣಗಳ ಸುರಿಮಳೆಯನ್ನೇ ಸುರಿಸುತ್ತಾನೆ.

          ಶರವರ್ಷ ಧಾರೆಯನ್ನು ಹರಿಸುವಾಗ ಮೊಮ್ಮಗನ ಬಗ್ಗೆ ಯೋಚಿಸುವುದಿಲ್ಲ ಭೀಷ್ಮ. ಗುರು ಸೇವೆ ಮಾಡಿ ಕಲಿತ ಧನುರ್ವೇದವದು. ಅಲ್ಲಿ ಬಿಲ್ಲನ್ನು ಹೆದೆ ಏರಿಸಿದಾಗ ಭೀಷ್ಮನಿಗೆ ಲೋಕ ಕಾಣುವುದಿಲ್ಲ . ಈವರೆಗಿನ ಯುದ್ದಗಳಲ್ಲಿ ಅದು ವ್ಯಕ್ತವಾಗಿದೆ. ಮಾತ್ರವಲ್ಲ.... ಸೋಲಿಸುವ ಪಣವನ್ನು ಇಬ್ಬರೂ ಕಟ್ಟಿಯಾಗಿದೆ.   ಯುದ್ದಾರಂಭದಲ್ಲಿ ಹೇಳಿದ ಮಾತು ಪಾಂಡವರನ್ನೇನು ಮಾಡಲಾರೆ ಎಂಬುದು ಆದರೂ ಬಾಣಗಳ ಪ್ರವಾಹ, ಅಲ್ಲಿ ಕೃಷ್ಣನಿದ್ದಾನೆ, ಹಾಗಾಗಿ ಭೀಷ್ಮ ನಿಶ್ಚಿಂತೆಯಿಂದ ವೈವಿಧ್ಯಮಯವಾಗಿ ಯುದ್ದ ಪ್ರಕಟನೆಯನ್ನು ತೋರಿಸುತ್ತಾರೆ. ಬಹುಶಃ ತನ್ನದೆಲ್ಲವನ್ನೂ ತೋರುವ ತವಕವೂ ಸೇರಿಕೊಂಡಿತ್ತು. ಎದುರಿಗೆ ತನ್ನ ಮೊಮ್ಮಗ ಜಗತ್ತು ಕಂಡ ಮೂರು ಲೋಕದ ಗಂಡು ಪಾರ್ಥನಲ್ಲವೇ?  

       ಯುಕ್ತವಾದಂತಹ ಶರಸಂಧಾನ ಮಾಡಿದರೆ. ಭೀಷ್ಮ ಆಶ್ಚರ್ಯ ಚಕಿತನಾಗಿ ತುಟಿಗೆ ಬೆರಳನ್ನು ತೋರುತ್ತಾನೆ. ಪ್ರಯೋಗಿಸಿದ ಒಂದು ಅಸ್ತ್ರವೂ ಅರ್ಜುನನ್ನು ಘಾಸಿಗೊಳಿಸುವುದಿಲ್ಲ !!. ಆದರೆ ಆತನ ಅಸ್ತ್ರ ನೇರಾಗಿ ತನ್ನನ್ನು ಆಕ್ರಮಿಸುತ್ತದೆ. ಮಾತ್ರವಲ್ಲ ತನ್ನ  ಸಾರಥಿಯೂ ಪ್ರಜ್ಞೆಯನ್ನು ಕಳೆದುಕೊಂಡನಲ್ಲಾ,  ಏನಿದು? ತಿಳಿಯದೇ ಕೃಷ್ಣನತ್ತ ದೃಷ್ಟಿ ಹರಿಸಿದರೆ...... ಆತ ಅದೇ ಕಿರುನಗುವಿನಲ್ಲಿ ಸಾರಥ್ಯದಲ್ಲೇ ಮಗ್ನನಾಗಿದ್ದಂತೆ ಭಾಸವಾಗುತ್ತದೆ.

          ಎಲಾ ಎಲಾ ಕೃಷ್ಣಾ ನಿನ್ನ ಜಾಣತನವೇ? ನಿನ್ನ ಸಾರಥೀತನದ ಪಾತ್ರ ತನ್ನ ಸೀಮೆಯನ್ನು ಮೀರುವುದಕ್ಕೆ ಕಾರಣ ಪಾರ್ಥ ಸಂರಕ್ಷಣೆ. ಆ ಕಾರ್ಯದಲ್ಲಿ ತನ್ನ ಕಡೆಗಿನ ಗಮನ ಕಡೆಗಣಿಸಲ್ಪಟ್ಟಿತೇ.? ಇದೆಯಲ್ಲಾ ಆತನದ್ದೇ ಇನ್ನೊಂದು ರೂಪ,  ಗುರುವಾಗಿ ದಯಪಾಲಿಸಿದ್ದು, ಪರಶುರಾಮ ದತ್ತ ಶರ...

ಭಳಿರೆ ವಂಜರೆ ಪಾರ್ಥ ಎನುತ ಸಕಲ ಶಸ್ತ್ರದಿ |
ಹಳಚಲಪಜಯವು ಕಿರೀಟಿಗಾಗದಂದದಿ ||
ನಳಿನನಾಭ ರಥವ ನಡೆಸುತಿರಲು ಭೀಷ್ಮನು |
ಬಳಲಿ ಹರಿಯ ಗೆಲುವೆನೆಂದು ಕ್ರೋಧಗೊಂಡನು||

ಪರಶುರಾಮದತ್ತ ಶರವ ತೆಗೆದು ಪೂಡಲು |
ಉರಿಯನುಗುಳ್ವ ಶರವು ಹರಿಯ ಹಣೆಗೆ ನಾಂಟಲು
ಪೊರಳಿದವು ತುರಗ ಹನುಮನಳುಕೆಸ್ಯಂದನ |
ತಿರುಗುಲಸುರಹರನ ನೊಸಲು ಬಿರಿದುದಾಕ್ಷಣ ||
          
ಗುರುಗಳಾದ ಪರಶುರಾಮರು ನೀಡಿದ್ದ ಅಸಿರತ್ನವೆಂಬ ಶರ ಗುರುವಿನ ಇನ್ನೊಂದು ಅವತಾರವಾದ ಶ್ರೀಕೃಷ್ಣನ ಮೇಲೆ ಪ್ರಯೋಗಿಸುತ್ತಾನೆ. ಈ ಬಾರಿ ಭೀಷ್ಮನ ಬಾಣ ಗುರಿತಪ್ಪುವುದಿಲ್ಲ. ಕೃಷ್ಣನ ನೊಸಲು ಒಡೆದು ರಕ್ತ  ಚಿಮ್ಮುತ್ತದೆ. ಪಾರ್ಥನ ರಥದ ಕುದುರೆಗಳು ನಿಯಂತ್ರಣದಿಂದ ಹೊರಬರುತ್ತವೆ.  ತ್ರೇತಾಯುಗದ ಯುದ್ದವನ್ನು ಕಂಡು  ಈ ಯುದ್ದವನ್ನು ಕಾಣಲಾರೆ ಎಂದು ತಿರುಗಿದ ಹನುಮ ಒಂದು ಕ್ಷಣ ಕಂಪಿಸುತ್ತಾನೆ.,


ನೊಸಲೊಡೆದು ರಕ್ತ ಸೂಸಲು ದೃಗುದ್ವಯದಿ ಕಿಡಿ |
ಮಸಗಲೌಡ್ಜಗಿದು ಘನರೋಷದಿಂ ಕುರುಬಲವ |
ನಸಿಯರೆದು ಭೀಶ್ಮನ ವಿಭಾಸುವೆನೀರೇಳು ಜಗವೆರಸಿ ಶತಕೋಟಿಯು ||
ಬಿಸಜಪೀಠ ಮಹೇಷ ಶಕ್ರ ವೈವಸ್ವತರ್ |
ಮುಸುಕಿದಂ ಬಿಡೆನೆಂದ ಗರ್ಜಿಸುತ ವಾಘೆಯಂ |
ಬಿಸುಟು ಚಕ್ರವಗೊಂಡು ದುಮ್ಮಿಕ್ಕಲಾಗ ಚತುರ್ದಶಭುವನ ತಲ್ಲಣಿಸಿತು ||

          ನೊಸಲೊಡೆದು ರಕ್ತ ಚಿಮ್ಮುತ್ತಿದ್ದಂತೆ ಶ್ರೀಹರಿ ಕುದುರೆಯ ವಾಘೆಗಳನ್ನು ಕಿತ್ತೆಸೆಯುತ್ತಾ ರಥದಿಂದ ದುಮ್ಮಿಕ್ಕುತ್ತಾನೆ. ಸಕಲ ತತ್ವ ಶಾಸ್ತ್ರಗಳಲ್ಲಿ ಪಾರಂಗತನಾದ ಓರ್ವ ಜ್ಞಾನಿ ಭೀಷ್ಮ,  ಹೀಗೆ ವರ್ತಿಸುವುದೇ? ಭೀಷ್ಮ ಮಾತಿನಲ್ಲಿ ಈ ವರೆಗೆ ಕರ್ಮ ಜಿಜ್ಞಾಸೆಯಲ್ಲಿ ಹೋರಾಟಕ್ಕೆ ನಿಂತವನು, ಈವಾಗ ನೇರ ಹೋರಾಟಕ್ಕೆ ಇಳಿದುಬಿಟ್ಟನಲ್ಲ?   ಪ್ರಳಯ ರುದ್ರನಾಗಿ ಬಿಡುತ್ತಾನೆ. ಕಣ್ಣುಗಳು ದಾವಾನಲವನ್ನು ವಮನ ಮಾಡುತ್ತಿದ್ದರೆ ಭೂಮಿಯೇ ಕಂಪಿಸುತ್ತದೆ, ವಾಘೆಯನ್ನು ಬಿಸುಟ ಕೈಯಲ್ಲಿ ಸುದರ್ಶನ ಜ್ವಲಿಸುತ್ತದೆ. ಶತರುದ್ರರೇ ಬರಲಿ, ಯಾವ ಶಕ್ತಿಯೇ ಇದಿರಾಗಲಿ ಕ್ಷತ್ರಿಯ ಧರ್ಮ ಯುದ್ದ ಧರ್ಮವನ್ನು ಮರೆತ ಭೀಷ್ಮನ ಶಿರಸನ್ನು ಕಡಿದು ಚೆಲ್ಲುತ್ತೇನೆ ಎಂದು ಆರ್ಭಟಿಸುತ್ತಿರಬೇಕಾದರೆ, ಕೈಯಲ್ಲಿ ವಾಘೆಯ ಬದಲು ಸುದರ್ಶನ ಕಾಣಿಸಿಕೊಳ್ಳುತ್ತದೆ. ಯಾರು ಬೇಕಾದರೂ ಬರಲಿ ಎಂದು ಕ್ರೋಧದಿಂದ ಶ್ರೀಕೃಷ್ಣ ಭೀಷ್ಮನ ರಥದತ್ತ ಧಾವಿಸಬೇಕಾದರೆ ಚತುರ್ದಶ ಭುವನ ತಲ್ಲಣಿಸಿತು.
ಯಾರಕೈಯಲ್ಲಿ ಸುದರ್ಶನವನ್ನು ಕಾಣಬೇಕೆಂದು ಬಯಸಿದನೋ...ಯಾರನ್ನು ಸಾರಥೀ ಸ್ಥಾನದಿಂದ ಕೆಳಕ್ಕಿಳಿಯುವಂತೆ ಪ್ರೇರೆಪಿಸಿದನೋ ಆತ ಅವೆರಡನ್ನೂ ಪೂರೈಸಿ ಇತ್ತಲೇ ಧಾವಿಸಿ ಬರುತ್ತಿದ್ದಾನೆ. ದಾವಾನಿಲ ತನ್ನನ್ನೇ ಸುಡುವುದಕ್ಕೆ ಧಾವಿಸಿ ಬರುತ್ತದೆ. ತನ್ನನ್ನು ಸುಡಬಲ್ಲುದೇ? ಇಲ್ಲ ಈ ಸಮಸ್ತ ಭೂಮಂಡಲವನ್ನು ಸುಡುವುದೇ? ಸುಡುವುದೋ ಇಲ್ಲವೋ ಆ ತರ್ಕವಲ್ಲ, ಆದರೆ... ಆದರೆ  ಈ ಭೀಕರ ರುದ್ರ ರೂಪವನ್ನು ಕಾಣುವ ಶಕ್ತಿಯಾದರೂ ಯಾರಿಗಿದೆ?

ಹರಿಯ ಖಾತಿಯ ತಡೆವಾರೆಂ |
ದೆರಡು ಬಲ ಬೆರಗಾಗಿ ಕಣ್ಮು |
ಚ್ಚಿರಲು ಭೀಷ್ಮನು ಬೆದರಿ ರಥದಿಂದಿಳಿದು ನಡೆತಂದು ||
ದುರಿತವನದಾವಾಗ್ನಿ ಲಕ್ಶ್ಮೀ |
ವರ ಮುಕುಂದ ಮುರಾರಿ ಜಯವೆನಂ |
ತೆರಗಿ ಮಗುಳೆದ್ದಚ್ಯುತನ ಮೃದುಕರವ ಪಿಡಿದೆಂದಾ ||

          ಸಿಟ್ಟಿನಿಂದ ಕಂದನಿಗೆ ತಾಯಿ ಹೊಡೆಯುವುದಕ್ಕೆ ಕೈ ಎತ್ತಿದಾಗ, ಆ ಮಗು ತಾಯಿಯ ಆ ರೂಪವನ್ನು ನೋಡಲಾಗದೆ, ತಾಯಿಯ ಏಟನ್ನೂ ತಪ್ಪಿಸಿಕೊಳ್ಳಲೂ ಅಗದೇ ತಾಯಿಯನ್ನು ಮತ್ತಷ್ಟು ಬಿಗಿದಪ್ಪಿ ಹಿಡಿಯುತ್ತದೆ. ತಾಯಿಯ ಕ್ರೋಧದಿಂದ ತಪ್ಪಿಸಿಕೊಳ್ಳಲು ಬೇರೆ ಯಾವುದನ್ನೂ ಆ ಪುಟ್ಟ ಕಂದನೂ ಆಶ್ರಯಿಸುವುದಿಲ್ಲ. ಬದಲಾಗಿ ಆಮ್ಮನ ಸಿಟ್ಟು ಹೆಚ್ಚಾದಷ್ಟು ಅಮ್ಮನನ್ನೇ ತಬ್ಬಿ ಹಿಡಿವಂತೆ ಭೀಷ್ಮ ಮಗುವಾಗಿಬಿಡುತ್ತಾನೆ. ಲೋಕವನ್ನೇ ಸುಟ್ಟುಬಿಡುವ ದಾವಾಗ್ನಿಯನ್ನು ಶಮನ ಮಾಡುವ ಯಾವ ಶಕ್ತಿಯೂ ತನ್ನ ಬಳಿ ಇಲ್ಲ. ತನ್ನಮ್ಮನ ಜನ್ಮ ಸ್ಥಾನ ಅದೇ ಹರಿಪಾದವಲ್ಲವೇ? ಭೋರ್ಗರೆದು ಉಕ್ಕಿ ಬರುವ ತನ್ನವ್ವೆ ಗಂಗಾ ಮಾತೆಯನ್ನೇ ಕಾಣುತ್ತಾನೆ. ಹಾಗಾಗಿ ಈ ಪ್ರವಾಹವನ್ನು ಬೇರಾವುದೇ ಶಕ್ತಿಯಿಂದ ಎದುರಿಸಲಾಗದು. ಭೀಷ್ಮ ತನ್ನ ಅಸ್ತ್ರ ಶಸ್ತ್ರಗಳನ್ನೆಲ್ಲ ಬಿಸುಟು ಕೈ ಎತ್ತಿ ಬರುವ ಹರಿಯ ಮೃದುಕರವನ್ನು ಹಿಡಿಯುತ್ತಾ....ಸ್ವಾಮೀ ಸ್ವಾಮಿ.....

ಶ್ರೀಮನೋಹರ ಸ್ವಾಮಿ ಪರಾಕು |
ಪ್ರೇಮದೊಳೆನ್ನಯ ಮಾತ ಲಾಲಿಸಬೇಕು ||
ಎನ್ನಯ ಕಂಠವ ನಿರಿಯಲು ಚಕ್ರವ |
ಚಿನ್ಮಯ ಕೈಯಲಿ ಪಿಡಿದಿಹೆಯಾ ||
ಚೆನ್ನಾಯ್ತು ಸೇವಕ ಜಯವ ಪಾಲಿಸೆ ಲೋಕ |
ವನ್ನು ರಕ್ಷಿಪ ದೇವ ಮಹಾನುಭಾವ ಶ್ರೀಮನೊಹರ ||

ಓ ಚಿನ್ಮಯ ಮೂರ್ತಿಯೇ, ನಿನ್ನ ಅಭಿನಯ ಚೆನ್ನಾಗಿದೆ. ರಾಗಾದಿ ವಿಕಾರಗಳು ನಮ್ಮಂತಹ ಪ್ರಾಕೃತ ಪುರುಷರ ಚಿತ್ತದಲ್ಲಿ. ಪ್ರಕೃತಿಯ ಪರಿಧಿಯನ್ನು ಮೀರಿ ನಿಂತಿರುವ ಕೇವಲ ಚಿನ್ಮಾತ್ರವಾದಂತಹ ದಿವ್ಯ ಮೂರ್ತಿಯನ್ನು ಹೊಂದಿರುವಂತಹ ನಿನ್ನಲ್ಲಿ, ಪ್ರಕೃತಿ ಜನ್ಯವಾದಂತಹ ರಾಗಾದಿ ವಿಕಾರಗಳು ಹುಟ್ಟುವುದಾದರೂ ಹೇಗೆ ಸ್ವಾಮಿ? ಪ್ರಕೃತಿಯ ನಿಯಮದಂತೆ ಹುಟ್ಟಿಕೊಂಡವನೋ ಹೇಳು. ವಸುದೇವ ದೇವಕಿಯರ ಮಡಿಲಲ್ಲಿ ನಿನಗೆ ಬೇಕು ಎಂಬಾಗ ಅವತರಿಸಿದವನು ನೀನು. ನಿನಗೆ ಬೇಕೂಂತ ಹಾಲು ಕುಡಿದವನೂ ಅಲ್ಲ ಬೇಡಾಂತ ಎಸೆದವನೂ ಅಲ್ಲ. ನಗು ಬಂದ್ರೆ ಅದು ನಗುವು ಅಲ್ಲ ಅತ್ತರೆ ಅದು ಅಳುವೂ ಅಲ್ಲ. ಎಲ್ಲವೂ ನಿನ್ನ ಲೀಲೆ ಎಂದು ತಿಳಿದುಕೊಂಡವರು ಸ್ವಾಮಿ ನಾವು.

ಕೌರವನ ಅನ್ನದ ಋಣ, ಕೆಟ್ಟ ಅಹಾರ ದೇಹದಲ್ಲಿ ಕೆಟ್ಟ ಪರಿಣಾಮವನ್ನೇ ಉಂಟು ಮಾಡಿದಂತೆ ಅದು ನನ್ನಿಂದ ಏನೆಲ್ಲ ಹೇಳಿಸಿತು. ಏನೆಲ್ಲ ಪ್ರೇರೇಪಣೆಯನ್ನು ಕೊಟ್ಟಿತು. ಅಸಿರತ್ನ ಶರ ಪ್ರಯೋಗಿಸಿದ್ದು ಹೌದು. ನಿನ್ನ ನೊಸಲು ಒಡೆದದ್ದು ಹೌದು ರಕ್ತ ಬಂದದ್ದೂ ಹೌದು. ಅಪರಾಧ ಆಗಿದ್ರೆ ಮನ್ನಿಸಬೇಕು. ನನ್ನಿಂದ ಯಾವುದನ್ನು ಮಾಡಿಸಬಾರದೋ ಅವನ್ನೆಲ್ಲ ಮಾಡಿಸಿತು.ಆದರೆ ಈಗ   ವಿಶುದ್ದ ಅಂತಃ ಕರಣ ನಾನು. ಕೆಟ್ಟದ್ದು ಎಲ್ಲ ತೊಳೆದು ಹೋಯಿತು ಸ್ವಾಮಿ.

ಅರ್ಜುನನನ್ನು ಗೆಲ್ಲಿಸ್ತೇನೆ ಅಂತ ವಾಘೆಯನ್ನು ಹಿಡಿದೆ. ಈಗ ಅದನ್ನು ಬಿಸುಟು ಚಕ್ರವನ್ನು ಹಿಡಿದಿದ್ದಿಯಲ್ಲ.  ಯಾಕೆ ನನ್ನನ್ನು ಕೊಲ್ಲುವುದಕ್ಕೆಯೇ? ಅಲ್ಲ, ಇದು ನನ್ನನ್ನು ಗೆಲ್ಲಿಸುವುದಕ್ಕೇಯೇ?  ಅರ್ಜುನ ಗೆದ್ದರೆ ಅಜ್ಜ ನಾನು ಗೆಲ್ಲಬೇಕಲ್ಲ?   ಹರಿಯ ಮಾಯವನುಳಿದು..ಎಂದು ದ್ರೋಣರು ಸುಯೋಧನನಿಗೆ ಯುದ್ದಾರಂಭದ ಮೊದಲೇ ಹೇಳಿದ ಬಗೆಯಲ್ಲಿ,  ಈ ಹರಿಯನ್ನು ಇದಿರಿಸುವಲ್ಲಿ ಮೊದಲು ಮಾಡಿದ್ದು ನನ್ನನ್ನು. ಇಂದು ಇದಿರಾದದ್ದು ಹೌದು ಸ್ವಾಮಿ ಆದರೆ ಆ ಮಾಯೆಯನ್ನು ಕಂಡೆನಲ್ಲಾ ಸ್ವಾಮಿ. ಕಣ್ಣುಗಳು ದಾವಾನಲವನ್ನು ಉಗುಳ್ತಾ ಇದೆ. ಉಸಿರು ಬುಸುಗುಡುತ್ತಾ ಇದೆ. ಇದು ಹರಿಯ ರೂಪವೇ? ಕೈಯಲ್ಲಿ ಚಕ್ರ ತಿರುಗುತ್ತಾ ಇದೆ...ಈ ರೂಪ ಯಾರನ್ನು ಶಿಕ್ಷಿಸುವುದಕ್ಕಾಗಿ? ಚಕ್ರವನ್ನು ಹಿಡಿವ ಕೈಯಲ್ಲಿ ನನ್ನ ಮೊಮ್ಮಗನ ರಥದ ಕುದುರೆಯ ವಾಘೆಗಳನ್ನು ಕಂಡು,  ಅಲ್ಲಿ ಚಕ್ರವನ್ನು ಕಾಣುವ ಬಯಕೆ ಆದದ್ದು ಸತ್ಯ. ಆದರೆ ಸ್ವಾಮಿ ಅದು ನನ್ನ ತರಿಯುವುದಕ್ಕೆ ಎಂದಾದರೆ,  ಹಲವು ದುರುಳರನ್ನು ತರಿದ ಚಕ್ರ. ಆಗ ರೂಪ ಇದೇ ಇತ್ತೋ ತಿಳಿಯದು. ಹೆಚ್ಚೇಕೆ ಶಿಶುಪಾಲನನ್ನು ಸಹನೆಯಿಂದಲೇ ತರಿದೆ. ಸ್ವಾಮಿ ಅವರೆಲ್ಲರಿಗಿಂತಲೂ ದುರುಳ ನಾನಾದೆನಾದರೆ, ಇಗೋ ತಲೆ ತಗ್ಗಿಸಿದ್ದೇನೆ, ಕೊರಳು ಬಗ್ಗಿಸಿದ್ದೇನೆ ಕಡಿದುಬಿಡು. ಹೋಗಲಿ ಈ ಜೀವ. ನಿನ್ನ ಆಗ್ರಹಕ್ಕೆ ತುತ್ತಾದ ಜೀವಿಗೆ ಮತ್ತೆ ಬದುಕುವ ಹಕ್ಕು ಇಲ್ಲ. ಮತ್ತಿನ್ನು ಈ ಭೀಷ್ಮನಿಗೆ ಬೇಕೆ ಹೇಳು?

ಅಲ್ಲ ಸ್ವಾಮಿ ಇದು ವಾಸ್ತವ ಅಲ್ಲ.  ಇದು ಅಭಿನಯ. ಯಾಕೆ ಹೇಳ್ತಾ ಇದ್ದೇನೆ?  ಹಿಂದೆ ಇದೇ ಅವತಾರದಲ್ಲಿ ಚಾಣೂರ ಮುಷ್ಠಿಕರನ್ನು ಕೊಂದೆ, ಕಂಸನನ್ನು ಕೊಂದೆ ಆವಾಗ ನಿನ್ನ ಕೈಯಲ್ಲಿ ಚಕ್ರವಿತ್ತೇ?  ಹಿರಣ್ಯ ಕಶಿಪುವನ್ನು ಕೊಂದೆಯಲ್ಲ. ಪ್ರಹ್ಲಾದನನ್ನು ಉದ್ದರಿಸುವುದಕ್ಕೆ ಆವಾಗ ಚಕ್ರ ಹಿಡಿದಿಯೋ? ಈಗ ಬೇರೆ ಯಾವ ಅಯುಧವೂ ಸಿಕ್ಕಲಿಲ್ಲ. ಚಕ್ರ ಹಿಡಿದಿದ್ದಿ . ನಿನಗೆ ಕೊಲ್ಲುಬೇಕೆಂಬ ಬಯಕೆ ಇದ್ದಲ್ಲಿ ಚಕ್ರವೇ ಆಗಬೇಕೆಂದೇನೂ ಇಲ್ಲ. ಕೈಯ  ಶಂಖವಾದರೂ ಸರಿಯೇ. ಅದರ ನಾದದಿಂದ ಪಾತಾಳ ಗರ್ಭದ ರಕ್ಕಸರ ಎದೆಯನ್ನು ಬಗೆಯುವ ನೀನು,  ಈ ಯುದ್ದಾರಂಭದ ಮೊದಲು ಅದನ್ನು ಮೊಳಗಿಸಿ ಶತ್ರುಪಾಳಯದ ಎದೆಯನ್ನೇ ಬಿರಿಯುವಂತೆ ಮಾಡಿದವನು . ಅದರಿಂದಲೇ ಊದಿ ನನ್ನನ್ನು ಸಂಹರಿಸಬಹುದಿತ್ತಲ್ಲವೇ? ನೀನು ಹಾಗೆ ಮಾಡಲಿಲ್ಲ. ಚಕ್ರವನ್ನು ಹಿಡಿದೆ. ನಿನ್ನ ಹರಿ ಎಲ್ಲೇಲ್ಲು ಇದ್ದಾನೋ? ಈ ಕಂಬದೊಳಗೂ ಇದ್ದಾನೋ? ಇದ್ದಾನೆ. ಎಂದು ಪ್ರಹ್ಲಾದ ಹೇಳಿದಾಗ ಕಂಬಂದಿಂದ ಒಡೆದು ಬಂದವನು ನೀನು. ಯಾಕೆ. ಆ ಭಾಗವತೋತ್ತಮ ಪ್ರಹ್ಲಾದನ ಮಾತುಗಳು ಸುಳ್ಳಾಗಬಾರದಲ್ಲಾ? ಇಲ್ಲೂ ಹಾಗೆ, ಸಾಯುವ ಕಾಲಕ್ಕೆ ಈ ಮುದುಕ ಏನೋ ಹೇಳಿದ.  ನಿನ್ನ ಕೈಯಲ್ಲಿ ಚಕ್ರ ಹಿಡಿಸುತ್ತೇನೆ ಎಂದು. ಪ್ರಹ್ಲಾದನ ಹಾಗೆ ಪೂರ್ಣ ಜ್ಞಾನದಿಂದಲೂ ಅರ್ಪಣಾ ಭಾವದಿಂದಲೂ ಹೇಳಿದ ಮಾತುಗಳಲ್ಲ. ಕೇವಲ ನಾನು ನಿನ್ನ ಭಕ್ತ ಎಂಬ ಅಹಂಕಾರದಿಂದ ಒದರಿದ ಮಾತುಗಳು. ಸ್ವಾಮೀ ಆದರೂ ಅದು ನಿನ್ನ ಅನುಗ್ರಹಕ್ಕೆ ಕಾರಣವಾಯಿತಲ್ಲ? ಚಕ್ರ ಹಿಡಿಯದೇ ಇದ್ದರೇನಂತೆ? ಬದಲು ಪಾಂಡವರನ್ನೇ ಆಯುಧಗಳನ್ನಾಗಿ ಮಾಡಿಕೊಂಡವನು ನೀನು. ಮೂಢ ಕೌರವ ಇದು ತಿಳಿಯದೇ ಹೋದ.

ಇಂದಿರೇಶನೆ ನಾನು ಇವರ  ಜಗಳವನ್ನು
ನಿಂದು ಈಕ್ಷಿಸಲಾರೆ ತಿಳಿದು ಕಣ್ಣಾರೆ ||
ಎಂದಾದರೀ ಕಾಯ ಎರವಿನೊಡವೆ ಜೀಯ
ಇಂದೇ ಪೋಗಲಿ ತೀರ್ಚು | ಚಕ್ರವನೆಚ್ಚು || ಶ್ರೀಮನೋಹರ ||

ಸ್ವಾಮೀ..ಈವರೆಗೆ ನನ್ನ ಮಾತು ಕೇಳು ಎಂದು ನಿನ್ನಲ್ಲಿ ಹೇಳಿದವನಲ್ಲ. ಇಂದು ಈಗ ಹೇಳ್ತಾ ಇದ್ದೇನೆ..ಸ್ವಾಮೀ ಎನ್ನ ಮಾತ ಕೇಳು. ಬೇರೆ ಯಾರಾದರೂ ನನ್ನ ಮಾತು ಕೇಳ್ತಾರೆಯೇ? ಆ ವಿಶ್ವಾಸ ಹೊರಟು ಹೋಯಿತು ಸ್ವಾಮಿ. ಒಂದು ಕಾಲದಲ್ಲಿ ಭೀಷ್ಮ ಹೇಳಿದ ಮಾತು ಶಿಲಾ ಲೇಖವಾಗಿತ್ತು..ನನ್ನ ಹೆಸರೇ ನನ್ನ ಮಾತನ್ನು ಕೇಳುವಂತೆ ಮಾಡ್ತಿತ್ತು. ಆದರೆ ಇಂದು ಸ್ವಾಮಿ ಪ್ರಪಂಚ ಬಿಡಿ ನನ್ನ ಮಕ್ಕಳು ಮೊಮ್ಮಕ್ಕಳು ಕೇಳುವುದಿಲ್ಲ.  ಭೀಷ್ಮ ಈ ವರೆಗೆ ಎಲ್ಲಿಯೂ ಸೋತ ಇತಿಹಾಸವಿಲ್ಲ. ಪ್ರಪಂಚವನ್ನು ಗೆದ್ದು ಬಂದ ಭೀಷ್ಮನ ಸೋಲು ಅರಿವಾಗುವಾಗುವುದು... ಈ ಮಕ್ಕಳನ್ನು ನೋಡುವಾಗ. ಕುರುಕ್ಷೇತ್ರದಲ್ಲಿ ಈ ವರೆಗೆ ಗೆಲ್ಲುತ್ತಾ ಬಂದೆ ಸ್ವಾಮಿ. ಗೆಲ್ಲುತ್ತೇನೆ ಎಂದುಕೊಂಡೇ ಇಲ್ಲಿ ಪ್ರವೇಶ ಮಾಡಿದೆ. ಆದರೆ ಸ್ವಾಮಿ ಕುರುಕ್ಷೇತ್ರದ ಯುದ್ದ ಆರಂಭವಾಯಿತು ಎಂದರೆ ಅದು ಭೀಷ್ಮನ ಅತಿ ದೊಡ್ಡ ಸೋಲು. ಇದನ್ನು ತಿಳಿಯದವನಲ್ಲ. ಆದರೆ ಅಭಿನಯಿಸುವುದಕ್ಕೆ ಪಾತ್ರವಾಗಿ ವೇದಿಕೆ ಏರಿದ ಮೇಲೆ ತನ್ನ ಹೆಂಡತಿಯೋ ತಾಯಿಯೋ ಬಂದಳು ಎಂದು ಮಾತನಾಡುವುದಕ್ಕೆ ಆಗುವುದೇ? ಹಾಗಾಯಿತು ಸ್ವಾಮಿ.

          ಬದುಕುಬೇಕು ಎಂಬ ಬಯಕೆಯಿಂದ ನಾನು ಈವರೆಗೆ ಬದುಕನ್ನು ಸಾಗಿಸಿದವನಲ್ಲ. ಆಹಾರದಲ್ಲಾಗಲೀ ನಿದ್ರಾ ಭಯ, ಮೈಥುನಾದಿಗಳಲ್ಲಾಗಲೀ ನನ್ನನ್ನು ನಾನು ತೊಡಗಿಸಿಕೊಂಡವನೂ ಅಲ್ಲ. ಅದಕ್ಕೆ ನಾನು ದಾಸನಾದವನೂ ಅಲ್ಲ. ಎಳವೆಯಲ್ಲಿಯೇ ಈ ವಂಶದ ಅಭಿವೃದ್ಧಿಗೆ ನಾನು ಕಂಕಣತೊಟ್ಟವನು. ಕೃಷ್ಣಾ ಒಳ್ಳೆಯದಾಗಲೀ ಅಂತ ಬಯಸಿದೆ. ನನ್ನ ಬಯಕೆ ಅಸ್ಥಾನದ್ದೂ ಅಲ್ಲ ಆಪಾರ್ಥವನ್ನು ಕಲ್ಪಿಸುವಂಥದ್ದೂ ಅಲ್ಲ.  ಮಾಡಿದ್ದೆಲ್ಲ ಒಳ್ಳೆಯದಕ್ಕೆಂತಲೇ ಮಾಡಿದ್ದು.  ನಿನಗೆ ಗೊತ್ತುಂಟು. ಆದರೆ ಹಾಗೆ ಆಗಲಿಲ್ಲ. ಎಲ್ಲ ವೈಪರೀತ್ಯವನ್ನೇ ಉಂಟು ಮಾಡಿತು. ಸಾಕಾಯಿತು. ನನ್ನ ಮಕ್ಕಳು ನನ್ನ ಮಕ್ಕಳು, ಒಳ್ಳೆದಾದರೂ,  ತುಂಬಿದ ಸಂಸಾರ ಕಂಡು ಕೃಷ್ಣಾ ಅಂತ ಕಣ್ಣು ಮುಚ್ಚಿಯೇನು. ಇವರ ಹೆಗಲ ಮೇಲೆ ಹೋದೇನು ಅಂತ ತಿಳ್ಕೊಂಡೆ. ಆಗೋದಿಲ್ಲ ಕೃಷ್ಣ. ಆಗು ಮಾಡುವುದಕ್ಕೆ ನಿನ್ನಿಂದಲೂ ಆಗಲಿಲ್ಲ ಯುದ್ದವೇ ಆಗ್ತಾ ಇದೆ. ಯಾರೆ ಸಾಯಲಿ ಸೂತಿಕ ನನಗೆ ತಾನೆ. ಆದಕಾರಣ ಯುದ್ದದಲ್ಲಿ ಯಾರು ಉಳೀತಾರೆ ಯಾರು ಅಳೀತಾರೆ ಇನ್ನು ಕಾಣಲಾರೆ. ಇನ್ನು ನೋಡಲಾರೆ. ಹಾಗಂತ ಜೀವಗಳ್ಳನಾಗಿ ಸಾಯಲಾರೆ. ನಾನು ಇಚ್ಛಾಮರಣಿ  ಆದರೆ ನನ್ನಲ್ಲಿ ಬದುಕುವ ಆಶೆ ತುಂಬುವುದಕ್ಕಾಗಿಯೇ ನನ್ನಪ್ಪ ಆ ವರ ದಯಪಾಲಿಸಿದನೋ ಏನೊ? ಈ ವರೆಗೆ ಮರಣದ ಇಚ್ಛೆ ಆಗಲೇ ಇಲ್ಲ. ಬದುಕಿದೆ ಬದುಕಿದೆ, ಇಂದಲ್ಲ ನಾಳೆ ಸರಿಯಾದೀತು.  ಕೃಷ್ಣಾ ಯಾಕೆ ಹುಟ್ಟಿಸಿದೆಯೋ ಗೊತ್ತಿಲ್ಲ.  ಹುಟ್ಟಿಸಿದ್ದಕ್ಕೆ ಈವರೆಗೆ ಬದುಕಿಸಿದೆ. ಸಾಕು ಮಾಡು ನಮ್ಮ ತಂದೇ ಚಕ್ರ ಬಿಡು. ಹೋಗಲಿ ಈಜೀವ.

ಎನಲು ಕಿರುನಗೆಗೂಡಿ ಚಕ್ರವ |
ದನುಜದಲ್ಲಣ ಮುಚ್ಚಿ ವರಸ್ಯಂ |
ಬಲಿಸುವೆಯ ಮುಂದಿನ್ನರಣ್ಯವ ಮರುಳಲಾ ಮಗನೆ ||
ಕೊಲುವರಾರೆನ್ನನು ಜಗತ್ಪ್ರಯ |
ದೊಳಗೆ ಸಾಕಿದು ಪಡೆವೆ ಮುಕ್ತಿಯ |
ನಳಲಬೇಡೆಂದೊರೆದು ಕೃಷ್ಣಗೆ ನಮಿಸಿ ಕಳುಹಿದನು ||

ಇದು ಭೀಷ್ಮರನ್ನು ತರಿಯುವುದಕ್ಕೆ ಹಿಡಿದ ಚಕ್ರವಾ? ಚಕ್ರ ಎಲ್ಲಿ? ಹಿಡೀತೇನೆ ಚಕ್ರ ಎಂದು ಈವರೆಗೆ ಕೃಷ್ಣ ಚಕ್ರವನ್ನು ಹಿಡಿದವನಲ್ಲ. ಚಕ್ರ ಹಿಡಿವ ಸಂಕಲ್ಪ ಮಾತ್ರ ಸಾಕು.   ಭೀಷ್ಮ ಹೇಗೆ ವೇದಿಕೆಯ ಮೇಲೆ ಪಾತ್ರವಾಗಿ ಅಭಿನಯಿಸಿದನೋ..ಹಾಗೇ...ಇದು ಕೃಷ್ಣನ ಅಭಿನಯ. ಈಗ ಭೀಷ್ಮ ವೇದಿಕೆ ಬಿಟ್ಟು ಇಳಿದನೋ? 
ಭೀಷ್ಮರೆ? ಈವರೆಗೆ ಕೌರವನ ಉಪ್ಪಿನ ಋಣ ಅಂತ ಹೇಳಿದವರು ನೀವು. ಏನು ಕೌರವ ಹುಟ್ಟುವ ಮೊದಲು ಉಪ್ಪನ್ನು ತಿಂದಿಲ್ಲವೇ? ಆ ಉಪ್ಪಿನ ಋಣ ತೀರಿಸುವುದಕ್ಕಾಗಿಯೇ ಚಕ್ರ ಹಿಡಿದದ್ದು. ಇನ್ನು ಸಾಲ ಉಂಟೋ ಕೌರವನಲ್ಲಿ ? ಇಲ್ಲ. ಈಗ ಶರಣಾಗಿದ್ದೀರಿ ನನಗೆ. ನೊಂದೆ, ಇನ್ನು ನೋಯುವುದಕ್ಕೆ ಈ ಶರೀರದಲ್ಲಿ ಶಕ್ತಿಯಿಲ್ಲ. ಆದಕಾರಣ ಈ ಬಂಧನದಿಂದ ನನ್ನನ್ನು ಬಿಡಿಸು ಎಂಬ ಧ್ವನಿ ತಾನೆ? ಇವರ ಕಲಹವ ನೋಡಿ ಸಹಿಸಲಿಕ್ಕೆ ಆಗುದಿಲ್ಲ ಕೃಷ್ಣಾ. ಈಗ ಹೇಗೆ ತೃಪ್ತಿಯಾಯಿತೇ? ಯುದ್ದಾರಂಭದ ಮೊದಲು ನಿಮ್ಮ ಮೇಲೆ ಕೌರವನಿಗೂ ಕರ್ಣನಿಗೂ ಒಂದು ಅನುಮಾನವಿತ್ತು. ಎಂತಹ ಶಪಥವನ್ನು ಮಾಡಿದರೂ ಪಾಂಡವರನ್ನೇನೂ ಮಾಡುವುದಿಲ್ಲ, ಎಂಬ ಮಾತು, ಭೀಷ್ಮರನ್ನು ಪಾಂಡವ ಪಕ್ಷಪಾತಿಯನ್ನಾಗಿ ಅನುಮಾನದಿಂದ ಕಾಣುವ ಹಾಗೆ ಮಾಡಿತ್ತು. ಈಗ ಅರ್ಜುನನ ಆಯುಧ ಸಾಲದೆ ಕೃಷ್ಣ ಚಕ್ರ ಹಿಡಿದ.... ಸಾಲದೇ ಇಷ್ಟು. ಇನ್ನು ಕೌರವನ ಉಪ್ಪಿನ ಋಣ ತೀರಿತಲ್ಲ? ಭೀಷ್ಮ ಕೌರವನಿಗಾಗಿ  ದುಡಿದ. ತೃಪ್ತಿಯಾಯಿತಲ್ಲಾ?


          ಅರ್ಜುನಾ.... ಅಗೋ ಸೂರ್ಯಾಸ್ತವಾಗ್ತಾ ಇದೆ. ಇಂದಿಗೆ ಈ ಯುದ್ದ ಸಾಕು. ಬಿಡದಿಗೆ ನಡೆಯೋಣ. 

Tuesday, November 25, 2014

ಕೃಷ್ಣಾಭಿರಕ್ಷಿತಂ

ಪಾರ್ಥನ ಸಾರಥ್ಯವನ್ನು ವಹಿಸಿಕೊಂಡ ಶ್ರೀಕೃಷ್ಣ ತಾನು ಪಾರ್ಥ ಸಾರಥಿ ಎಂದು ಕರೆಸಿಕೊಳ್ಳುವುದರಲ್ಲೂ ವಾತ್ಸಲ್ಯವನ್ನು ಪ್ರಕಟ ಪಡಿಸುತ್ತಾನೆ. ಪಾರ್ಥನ ರಥ ತನ್ಮೂಲಕ ಪಾಂಡವರ ರಥಕ್ಕೆ ಹಾದಿಯನ್ನು ತೋರಿಸುತ್ತಾನಾದರೆ, ಈ ಭೀಷ್ಮನ ರಥ ಎಂಟುನೂರು ವರ್ಷಗಳಿಂದ ನಿಂತಲ್ಲೇ ನಿಂತಿರುವುದು ಗಮನಕ್ಕೆ ಬಾರದೇ ಹೋಯಿತಲ್ಲ? ಈ ಭವದ ಜೀವನದಲ್ಲಿ ಕರ್ಮದ ಭಾಧೆಯಿಂದ ಒಬ್ಬ ನರಳುತ್ತಾನೆ ಎಂದರೆ ನಾರಾಯಣನ ನಾಮಸ್ಮರಣೆಯಿಂದ ಕರ್ಮಬಂಧನವನ್ನು ತೊಲಗಿಸಿ ಈ ಭವದ ಜೀವಕ್ಕೆ ಒಂದು ಲಕ್ಷ್ಯವನ್ನು ತೋರಬಹುದು. ಭೀಷ್ಮ ನಗುವುದು ಅದಕ್ಕೆ. ತನ್ನ ನೋವಿನಿಂದ ಬಂದ ವಿಷಾದದ ನಗುವಲ್ಲ. ಯಾವಾತನು ಕರ್ಮಬಾಧೆಯಿಂದ ಮುಕ್ತಿಯನ್ನು ಕರುಣಿಸಬೇಕೋ ಆತನೇ ಸ್ವತಃ ಕರ್ಮದ ಬಾಧೆಯಿಂದ ನರಳಿ ಈಗ ಪಾರ್ಥನ ಸಾರಥಿಯಾಗಿದ್ದಾನೆ ಎಂದಾದರೆ ಭೀಷ್ಮ ತನ್ನ ಬಂಧನವನ್ನು ಕ್ಷಣ ಹೊತ್ತು ಮರೆಯುತ್ತಾನೆ. ಸಾಕ್ಷಾತ್  ಶೂಲಿಯಾದ ಪರಮೇಶ್ವರನಿಗೆ ಬ್ರಹ್ಮನ ಕಪಾಲ ಬಿಡಲಿಲ್ಲ. ಅತ್ತ ಸೃಷ್ಟಿಕರ್ತನಾದ ಬ್ರಹ್ಮ ನಿರಂತರ ಜೀವಿಗಳನ್ನು ಸೃಷ್ಟಿಸುತ್ತಾ ಭೂಮಿಯ ಕೂಲಿಯಾಳುವಿನಂತೆ ಭಾಧೆಗೆ ಒಳಗಾದ ಇವರಿಬ್ಬರನ್ನು ಬಿಡದ ಕರ್ಮ ಬಾಧೆ  ಸರ್ವ ಶಕ್ತ ಆದಿನಾರಾಯಣನಾದ  ನಿನಗೂ ಅಂಟಿಕೊಂಡು ನೀನು ಕರ್ಮ ಬದ್ಧನಾದ ದೇವನೇ ಆದೆ.

ಗರುಡಧ್ವಜನದ ಕೇಳುತ ಗಂಗಾ | ತರಳನ ನುಡಿಗಳನು ||
ದುರಿತಗಳೊದಗದ ತೆರದೊಳು ಶರಣರ | ಪೊರೆವುದೆ ಬಿರುದೆನ್ನ||
ಭೀಷ್ಮ ಪರ್ವದ ಆದಿ ಭಾಗದಲ್ಲಿ ಗೀತೋಪದೇಶ ಪ್ರಸಂಗವೂ ಬರುತ್ತದೆ. ಮೋಹವಶನಾದ ಅರ್ಜುನನಿಗೆ ಬಂಧುಮೋಹವನ್ನು ತ್ಯಜಿಸುವಂತೆ ಶ್ರೀಕೃಷ್ಣ ತನ್ನ ವಿಶ್ವರೂಪವನ್ನು ತೋರಿಸುತ್ತಾನೆ. ಪ್ರಪಂಚದ ಸಕಲ ಆಗು ಹೋಗುಗಳಿಗೂ ಮೂಲ ಸ್ವರೂಪದ ನಿಮಿತ್ತ ರೂಪನೇ ನಾನು ಎಂದು ತೋರಿಸಿ ಯುದ್ದಕ್ಕೆ ಅಣಿಯಾಗುವಂತೆ ಮಾಡುತ್ತಾನೆ. ಭೀಷ್ಮ ದ್ರೋಣ ಮೊದಲಾದವರು ಕಾಲದ ಘಾತಕ್ಕೆ ಮೊದಲೇ ಹತರಾದವರು. ನೀನು ನಿಮಿತ್ತ ಮಾತ್ರದವನು, ಹೀಗೆ ಶ್ರೀಕೃಷ್ಣ ಜಗದ್ಗುರುವಾಗಿ ಉಪದೇಶ ಮಾಡುತ್ತಾನೆ. ಅಲ್ಲಿ ಪಾರಮಾರ್ಥಿಕ ಬದುಕಿನ ಬಗ್ಗೆ ವಿರಳವಾಗಿ ಪಾರ್ಥನಿಗೆ ಭೋಧಿಸುವ ಪ್ರಸಂಗವದು. ಆದರೆ ಇಲ್ಲಿ ಅದೇ ಬಗೆಯ ಪ್ರಶ್ನೆಗಳಿಗೆ ಕುಚೋದ್ಯದಿಂದಲೇ ಶ್ರೀಕೃಷ್ಣ ಉತ್ತರಿಸುತ್ತಾನೆ. ಅಥವ ಉತ್ತರವನ್ನು ತೋರಿಸುತ್ತಾನೆ ಎಂದರೂ ಸರಿಯೇ. ಯಾಕೆಂದರೆ ಅರ್ಜುನ ಶುದ್ಧ ಮನಸ್ಸಿನಿಂದ ತಾನು ಏನೂ ಅಲ್ಲ ತನ್ನಲ್ಲೇನೂ ಇಲ್ಲ ಎಂಬ ಭಾವದಲ್ಲಿ ತನ್ನನ್ನು ಶ್ರೀಕೃಷ್ಣನಿಗೆ ಸಮರ್ಪಿಸಿಕೊಳ್ಳುತ್ತಾನೆ. ಅತ್ಯಂತ ವಿನಮ್ರ ವಿಧೇಯಕನಂತೆ ಹರಿಯನ್ನು ಅನುಸರಿಸುತ್ತಾನೆ. ಆದರೆ ಭೀಷ್ಮ ವಯೋವೃದ್ಧ ವಯಸ್ಸಿನಲ್ಲಿ ತನ್ನಿಂದ ಅದೆಷ್ಟೊ ಪಾಲು ಹಿರಿಯ, ಮಾತ್ರವಲ್ಲ ಸಕಲ ತತ್ವ ಶಾಸ್ತ್ರಗಳಲ್ಲಿ ಪಾರಂಗತ. ಇಂಥವನಲ್ಲಿ ಸಮದಂಡಿಯಾಗಿಯೇ ಮಾತನಾಡುತ್ತಾನೆ. ಹೀಗೆ ಒಂದೇ ಪ್ರಸಂಗದಲ್ಲಿ (ಭೀಷ್ಮ ಪರ್ವ) ಎರಡು ಬಗೆಯನ್ನು ಕಾಣುವುದಕ್ಕೆ ಸಾಧ್ಯವಾಗುತ್ತದೆ.
ಹಲವಾರು ಕರ್ಮ ಬಂಧ ತಾಳ ಮದ್ದಲೆಯ ಅರ್ಥಗಾರಿಕೆಯನ್ನು ಗಮನಿಸಿದಾಗ ಪೆರ್ಲ ಶ್ರೀಕೃಷ್ಣ ಭಟ್ಟರ ಕೃಷ್ಣ ನನಗೆ ಬಹಳ ಇಷ್ಟವಾಗುತ್ತದೆ. ಅತ್ಯಂತ ಸರಳವಾದ ವಿವರಣೆ. ಸಂಭಾಷಣೆಯಲ್ಲಿ ಹಂತ ಹಂತವಾಗಿ ಮೇಲೆ ಹೋಗುವ ರೀತಿ ಅಂತಿಮ ಹಂತದಲ್ಲಿ ಎಲ್ಲಿ ತಲಪಬೇಕೋ ಅಲ್ಲಿಗೆ ಗುರಿಮುಟ್ಟಿಸುವ ಅರ್ಥಗಾರಿಕೆಯದು. ಪ್ರೇಕ್ಷಕ ಗಮನವಿಟ್ಟು ಕೇಳುವಂತೆ ಮಾಡುವುದಲ್ಲದೆ ಆ ಸಂದರ್ಭದ ಸಾರಾಂಶವನ್ನು ಮನವರಿಕೆ ಮಾಡುತ್ತದೆ. ಕರ್ಮಬಂಧ ಅರ್ಥಗಾರಿಕೆಗೆ ಸವಾಲೆನಿಸುವ ಪ್ರಸಂಗ. ಯಕ್ಷಗಾನ ಪದಗಳ ಒಳ ಭಾವಾರ್ಥವೇನು? ಆ ಸನ್ನಿವೇಶವೇನು? ಮತ್ತು ಆ ಪಾತ್ರದ ವ್ಯಕ್ತಿತ್ವವೇನು? ಇದಿಷ್ಟನ್ನು ಸೂಕ್ಷ್ಮವಾಗಿ ಗಮನಿಸಿರಬೇಕಾಗುತ್ತದೆ. ಬಹಳಷ್ಟು ಅರ್ಥಧಾರಿಗಳು ತಾಳ ಮದ್ದಲೆ ಎಂದರೆ ತಮ್ಮ ಪಾಂಡಿತ್ಯದರ್ಶನಕ್ಕೆ ಇರುವ ರಹದಾರಿ ಎಂದು ತಿಳಿದು ಔಚಿತ್ಯ ಮೀರಿ ಈ ಪ್ರಸಂಗದ ಮೂಲ ಸ್ವಭಾವವನ್ನೇ ಮರೆಸಿಬಿಡುವ ಪ್ರಮೇಯ ಕಾಣಬಹುದು. ಚಂಡೆ ಬಡಿಲಿಕ್ಕೆ ಪರಿಣತಿ ಇದ್ದರೆ ಸಾಲದು ಭಾಗವತರ ಪದಕ್ಕೆ ತಕ್ಕ ನುಡಿಸುವ ಜಾಣ್ಮೆಇರಬೇಕು. ಹಾಗೆಯೆ ಅರ್ಥಗಾರಿಕೆ ಸಂದರ್ಭೋಚಿತವಾಗಿ ಹರಿದುಬಂದರೆ ಅದು ಕಾವ್ಯಮಯವಾಗುತ್ತದೆ.
ಇಲ್ಲೊಂದು ಸಾಮಗರ ಭೀಷ್ಮ ಮತ್ತು ಪೆರ್ಲ ಪಂಡಿತರ ಶ್ರೀಕೃಷ್ಣ ಬಹಳ ಸ್ವಾರಸ್ಯವಾಗಿತ್ತು. ಸಂಭಾಷಣೆಯಲ್ಲಿ ವಿಷಯ ಮಂಡನೆ ಮತ್ತು ಅದರ ಅಂತಿಮ ಹಂತ ಬಹಳ ಮಾರ್ಮಿಕವವಾಗಿ ಮೂಡಿಬಂದಿತ್ತು.
“ಆದಿನಾರಾಯಣ ಎಂಬ ಒಂದು ತತ್ವ!      ಈ ಆದಿನಾರಾಯಣ ಎಂಬುದನ್ನು ನಾವು ಯಾವುದನ್ನು ಉದ್ದರಿಸಿ ಹೇಳುತ್ತೇವೊ, ಆದಿ ಅಂದರೆ ಎಲ್ಲದಕ್ಕೂ ಕಾರಣೀಭೂತವಾದದ್ದು,  ಎಲ್ಲ ಶಕ್ತಿಗೂ ಮೂಲಭೂತವಾದದ್ದು, ಎಲ್ಲದಕ್ಕಿಂತಲೂ ಮೊದಲು ಇರುವಂತಹುದು, ಅಂತಹ ಒಂದು ತತ್ವ…..ಆ ತತ್ವವನ್ನು ಕಂಡವರು ಯಾರು? ವೇದ ಮಂತ್ರಗಳ ಆಧಾರದಿಂದ ಋಷಿಮುನಿಗಳು ತಾವು ಕಂಡ ಸತ್ಯವನ್ನು ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ. ಈ ವಿಶಾಲವಾದಂತಹ ಸೃಷ್ಟಿಗೆ ಆದಿಯಾದಂತಹ ಒಂದು ಶಕ್ತಿ ಇರಬೇಕು. ಸರ್ವಶಕ್ತಿ,  ಅದು ಈಶ್ವರನ ಅಸ್ತಿತ್ವ ಎಂದು ಸಾಧಿಸಬಹುದಾದರೆ, ಆ ಈಶ್ವರನ ಅಸ್ತಿತ್ವಕ್ಕೆ ಯಾರು ಕಾರಣ? ಆ ಸ್ಥಿತಿಗೆ ಅನಾಸ್ಥಾ ಎಂದು ಕರೆದರು. ಇದನ್ನೆಲ್ಲ ಯೋಚಿಸಿ ಆ ಸ್ಥಿತಿ ಪರ ಬ್ರಹ್ಮ ಎಂಬ ತತ್ವ ಹೇಳಿದ್ದಾರೆ. ಇಲ್ಲಿ ತತ್ವ ಎಂಬುದು ಜ್ಞಾನ ರೂಪವಾಗಿ ಕಂಡುಕೊಳ್ಳಬೇಕು. ಯಾಕೆಂದರೆ ಪರಬ್ರಹ್ಮ ಕಂಡವರು ಯಾರು? ಯಾರೂ ಕಾಣದಿದ್ದ ಒಂದು ತತ್ವ!! ಹೀಗೆ ತತ್ವ ಮಾತ್ರ ಲೋಕದ ಮುಂದಿದ್ದರೆ, ಅದನ್ನು ಕಂಡವರು ಯಾರು? ಈ ತತ್ವ ಯಾರಿಗೂ ಅನುಭವಕ್ಕೆ ಬಂದದ್ದಿಲ್ಲ. ಸ್ವತಃ ಭೀಷ್ಮನೂ ಈ ಮಟ್ಟಿಗೆ ಅನುಭವ ರಹಿತನೇ. ಆದರೂ ಆತನಿಗೆ ತಿಳಿದಿದೆ ಅದು ಕೇವಲ ಜ್ಞಾನ. ಜ್ಞಾನ ಬೇರೆ ಅನುಭವ ಬೇರೆ. ಜ್ಜಾನ ಮತ್ತು ಅನುಭವದ ವಿಶ್ಲೇಷಣೆ ಬಹಳ ಸುಲಭ. ಜ್ಞಾನ ಎಲ್ಲರಿಗೂ ಇರಬಹುದು. ಆದರೆ ಅನುಭವ ಇರಲಾರದು. ಯಾರಿಗೆ ಈ ಎಕಂ ಸತ್... ಈ ಸತ್ಯ ಒಂದೇ, ಅಥವಾ ಪರಬ್ರಹ್ಮದ ಅನುಭವ ಉಂಟಾಗುತ್ತದೋ ಅವರಿಗೆ ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅವರಿಗೆ ಈ ಜೀವರು ಬೇರೆಯಲ್ಲ. ಇದೊಂದೇ ಸತ್ಯವೆಂದು ತಿಳಿದು ಉಳಿದವೆಲ್ಲ ಮಿಥ್ಯ ಎಂದು ತಿಳಿದುಕೊಂಡಿರುತ್ತಾರೆ. ತಿಳಿದುಕೊಳ್ಳುವುದು ಮುಖ್ಯವಲ್ಲ, ಪರಬ್ರಹ್ಮದ ಅನುಭವವಾಗಬೇಕು. ಅನುಭವ ಹೊಂದಿದವನು ಈ ಕರ್ಮದ ಬಗೆಗಿನ ಜಿಜ್ಞಾಸೆಯನ್ನು ಮಂಡಿಸುವುದೇ ಇಲ್ಲ.  ಹೀಗೆ ಭೀಷ್ಮನ ಪ್ರಶ್ನೆಗೆ ಪ್ರಶ್ನೆಯಲ್ಲೇ ಉತ್ತರವನ್ನು ತೋರಿಸುತ್ತಾರೆ.
ಪರಬ್ರಹ್ಮದ  ಅನುಭವ ಭೀಷ್ಮನಿಗಾಗಲಿಲ್ಲ. ಹಾಗಿರುವಾಗ ಇಲ್ಲಿ ಇದು ವ್ಯಾವ ಹಾರಿಕ ಪ್ರಪಂಚದಲ್ಲಿ ಇದ್ದುಕೊಂಡು ಯೊಚಿಸುವಾಗ ಭಗವಂತ ಅವತರಿಸುವಾಗ ವ್ಯಾವಹಾರಿಕ ಪ್ರಪಂಚದಲ್ಲಿದ್ದುಕೊಂಡೇ ತನ್ನ ನಿರ್ಗುಣ ನಿರಾಕಾರಗಳನ್ನು ಬದಿಗಿಟ್ಟು ವ್ಯವಹರಿಸುತ್ತಾನೆ.  ಭಗವಂತ ಇಲ್ಲಿ ಆಕಾರವನ್ನು ತಾಳುತ್ತಾನೆ. ಅಕಾರಕ್ಕೆ ತಕ್ಕ ವ್ಯವಹಾರವನ್ನು ಮಾಡುತ್ತಾನೆ. ಹಲವು ಅವತಾರಗಳನ್ನು ಕಾಣುತ್ತಾನೆ. ಆದರೆ ಒಂದು ಅವತಾರದಲ್ಲಿ ಮಾಡಿದ ಕರ್ಮದ ಫಲ ಮತ್ತೊಂದು ಅವತಾರದಲ್ಲಿ ಅನುಭವಿಸಿದ್ದು ಯಾರಾದರೂ ಕಂಡದ್ದುಂಟೇ? ಮತ್ಸಾವತಾರದ ಕರ್ಮ ಫಲ ಕೂರ್ಮಾವತಾರದಲ್ಲಿ ಕಂಡಬಗ್ಗೆ ನಿದರ್ಶನ ಇದೆಯೇ? ಇಲ್ಲ.  ಯಾವುದೋ ಅವತಾರದ ಫಲ ಇನ್ನೊಂದು ಅವತಾರ ಎತ್ತುವುದಕ್ಕೆ ಕಾರಣವೇ ಅಲ್ಲ. ಹಾಗಿರುವಾಗ ಇದು ಕರ್ಮದಿಂದ ಬಂದಂತಹಾ ಅವತಾರಗಳಲ್ಲ.
ಕರ್ಮ ಬಾಧೆ ಇಲ್ಲ ಎಂದಾದಾಗ ಭವವಂತನ ಕ್ರಿಯೆಯಲ್ಲಿ ಇದರ ದರ್ಶನವಾದರೂ ಯಾಕೆ? ಪ್ರಾಪಂಚಿಕ ವ್ಯವಹಾರದಲ್ಲಿ ಭಗವಂತನ ಭಕ್ತರು ಎಂದು ಕರೆಸಲ್ಪಡುವವರಿಗಾಗಿ ಈ ಕರ್ಮ ಬಂಧನದ ಪ್ರದರ್ಶನ. ಅದಕ್ಕೆ ಸೂಕ್ತವಾದ ಒಂದು ಉದಾಹರಣೆ, ಬಾಯಿಬರದ ತೊದಲುತ್ತಿರುವ ಮಗುವಿನೊಡನೆ ತಾಯಿ ತೊದಲು ನುಡಿಯಲ್ಲೇ ಮಾತನಾಡುತ್ತಾಳೆ. ಹಾಗೆಂದು ತಾಯಿಗೆ ಮಾತುಬರುವುದಿಲ್ಲ ಎಂದಾಗುತ್ತದೆಯೇ? ಇಲ್ಲ. ಕೇವಲ ಮಗುವಿಗಾಗಿ ಆ ಕರ್ಮವನ್ನು ಅಂಟಿಸಿಕೊಳ್ಳುತ್ತಾ ಬಾಯಿಬರದವಳಂತೆ ನಟಿಸುತ್ತಾಳೆ. ಮಗುವಿಗಾಗಿ ಅವಳು ಹಾಗೆಯೇ ಮಾತನಾಡಬೇಕಾಗುತ್ತದೆ. ಇಲ್ಲವಾದಲ್ಲಿ ಆ ಮಗುವಿಗೆ ಅರ್ಥವಾಗುವುದಿಲ್ಲ. ಮಾತ್ರವಲ್ಲ ಈ ವ್ಯವಹಾರಗಳನ್ನು ಮಗು ಕಲಿಯುವುದೂ ಇಲ್ಲ.  ವ್ಯಾವಹಾರಿಕ ಪ್ರಪಂಚದಲ್ಲಿ ಬರುವ ಇಂತಹ ಶರಣರನ್ನು ಪೊರೆಯುವುದಕ್ಕಾಗಿ ಈ ಪ್ರಪಂಚದ ವ್ಯವಹಾರಗಳಲ್ಲಿ ಒಂದಾಗಿಬಿಡುತ್ತಾನೆ. ಕರ್ಮಕ್ಕೆ ಅಧೀನನಾದವನಂತೆ ವ್ಯವಹರಿಸುತ್ತಾನೆ.

ಎಲ್ಲರೂ ಭೂಮಿಗೆ ಪತನ ಹೊಂದಿ ಹುಟ್ಟಿಕೊಳ್ಳುತ್ತಾರೆ. ಆದರೆ ಭಗವಂತ ಅವತಾರ ಎತ್ತುತ್ತಾನೆ. ಪತನ ಎಂದರೆ ಬೀಳುವುದು. ಒಬ್ಬ ಆನೆಯ ಮೇಲಿನಿಂದ ಸವಾರ ಇಳಿದು ಬರುವುದಕ್ಕೂ ಬೀಳುವುದಕ್ಕೂ ವೆತ್ಯಾಸವಿದೆ. ಹೀಗೆ ಅವತಾರ ಎತ್ತಿಬಂದ ಭಗವಂತ, ಕೆಸರಿನಲ್ಲಿ ಬಿದ್ದ ಮಗುವನ್ನು ಎತ್ತುವುದಕ್ಕೋಸ್ಕರ ತಾಯಿ ಆಲ್ಲಿರುವ ಕೆಸರನ್ನು ಮೆತ್ತಿಸಿಕೊಂಡಹಾಗೆ ಇಲ್ಲಿ ಭಗವಂತನಿಗೆ  ಕರ್ಮಬಂಧ. ಮಗುವನ್ನು ಎತ್ತಿ ಆದನಂತರ ಕೆಸರನ್ನು ತೊಳೆದುಕೊಂಡಹಾಗೆ ಆ ಕರ್ಮವನ್ನು ಭಗವಂತ ಅಂಟಿಸಿಕೊಳ್ಳುವುದಿಲ್ಲ. ಅರ್ಥಾತ್ ಆ ಕರ್ಮಕ್ಕೆ ಮತ್ತೊಂದು ಜನ್ಮವನ್ನು ಎತ್ತುವುದಿಲ್ಲ. ಹೀಗೆ ಕೆಸರಲ್ಲಿ ಬಿದ್ದ ಶರಣರನ್ನು ಪೊರೆಯುವುದು ಭಗವಂತನ ಕೆಲಸ. ಭಗವಂತನದ್ದು ಎಲ್ಲವೂ ಅಭಿನಯ. ಪರ ಇಚ್ಛಾಪ್ರಾರಭ್ದ ದಂತೆ ಶರಣರಿಗಾಗಿ ಎಲ್ಲವನ್ನು ಅಭಿನಯಿಸುವುದು. ಹಾಗೆ ಇಲ್ಲಿ ಅರ್ಜುನ ಶರಣನಾಗಿ ಕ್ಷಣ ಕ್ಷಣವೂ ತನ್ನನ್ನು ಅನುಸರಿಸುತ್ತಾನೆ. ಕೃಷ್ಣಾ...ಎಂದು ಮೊರೆಯಿಡುತ್ತಾನೆ. ಹಾಗಾಗಿ ಅವನ ಉದ್ಧಾರಕ್ಕೆ ಈ ಸಾರಥ್ಯ ಹೊರತು ಇದು ಯಾವುದೋ ಅವತಾರ ಕರ್ಮದ ಪ್ರಭಾವವಲ್ಲ.

ಪಂಕಜಾಕ್ಷ ಭೇದವೇಕೊ | ಕಿಂಕರನಲ್ಲವೆ ನಾನು ||
ಶಂಕೆಯೇನೈ ಪಾರ್ಥನಧಿಕ | ಕಿಂಕರನಾಗಿಹನೇ ನಿನಗೆ ||
ನಿರ್ಗುಣನೂ ನಿರಾಕಾರಿಯೂ ಆದಂತಹ ಶ್ರೀಕೃಷ್ಣ ವ್ಯವಹಾರಿಕ ಪ್ರಪಂಚದ ಸಂಬಂಧವನ್ನು ತಿಳಿಸಿ ಹೇಳಿದಾಗ, ಆ ಸಂಬಂಧವನ್ನು ಹೊಂದಿಕೊಂಡೆ ಭೀಷ್ಮ ಪಂಕಜಾಕ್ಷ ಎಂದು ಉದ್ಧರಿಸಿ ರೂಪಸಾದೃಶವನ್ನು ಕಲ್ಪಿಸುತ್ತಾನೆ. ತಾವರೆ ಸೂರ್ಯನನ್ನು ಕಂಡು ಅರಳುತ್ತದೆ. ತಾವರೆ ಅರಳುವುದೋ ಅಲ್ಲ ಸೂರ್ಯ ತಾನು ಅರಳಿಸುವುದೋ ಎಂಬ ಸಂಶಯ ಇದ್ದರೂ ತಾವರೆ ಸೂರ್ಯನಿಗಾಗಿ ಅರಳುವುದೋ ಅಥವಾ ತಾವರೆಗಾಗಿ ಸೂರ್ಯ ಉದಯಿಸುವುದೋ ತಾವರೆ ತನಗಾಗಿ ಅಂತ ಹೇಳಿಕೊಳ್ಳುತ್ತದೆ, ಕವಿಕಲ್ಪನೆ ಏನೆ ಇದ್ದರೂ,  ಅರಳಿದ ತಾವರೆ ಸೂರ್ಯನಿಗೆ ಅಭಿಮುಖವಾಗಿ ತನ್ನೆಲ್ಲ ಎಸಳುಗಳನ್ನು ಚಾಚುತ್ತದೆ. ಎಲ್ಲ ಎಸಳುಗಳೂ ಸೂರ್ಯನನ್ನು ಕಂಡು ಸಮಾನವಾದ ಸಂತೋಷವನ್ನು ಹೊಂದುತ್ತದೆ. ಆದರೆ ಇಲ್ಲಿ ಇನ್ನೊಂದು ಜಿಜ್ಞಾಸೆ ಸೂರ್ಯ ಕೇವಲ ತಾವರೆಗಾಗಿ ಮಾತ್ರವಲ್ಲವಲ್ಲ ಅರಳುವುದು? ಎಲ್ಲರಿಗೂ ಸಮಾನವಾಗಿ ಬೆಳಕನ್ನು ಕೊಡುವ ಸೂರ್ಯ ಯಾರಲ್ಲೂ ಭೇದವನ್ನು ಕಲ್ಪಿಸುವುದಿಲ್ಲ.
ಶರಣರ ಪೊರೆವುದೆ ಬಿರುದೆನ್ನ ಎನ್ನುವ ಶ್ರೀಕೃಷ್ಣ  ಶರಣರಲ್ಲಿ ಭೇದವನ್ನು ಕಾಣುತ್ತಿದ್ದಾನೆಯೆ? ಶರಣರಲ್ಲಿ ಕುಂಟನೋ ಕುರುಡನೋ ಕುರೂಪಿಯೋ ಎಂಥವನೇ ಆಗಿರಲಿ, ಶರಣರ ಪೊರೆವುದು ಇದರಲ್ಲಿ ಭಿನ್ನತೆಯಿಲ್ಲ. ವೆತ್ಯಾಸವಿದ್ದರೂ ಇಲ್ಲಿ ಅರ್ಜುನನಲ್ಲಿ ಭೀಷ್ಮನಿಗಿಂತ ಅದೆಂತಹಾ ವೆತ್ಯಾಸವನ್ನು ಭಗವಂತ ಗುರುತಿಸಿದ?
“ ಶ್ರೀ ಕೃಷ್ಣ, ಅರ್ಜುನ ಶರಣನೆಂದು ಅವನನ್ನು ಪೊರೆದೆ, ಎನಗೆ ಮತ್ಸರವಿಲ್ಲ.  ಈ ಒಂಭತ್ತು ದಿನ ಆತನ ರಥದ ಸಾರಥಿಯಾದೆ, ಹೌದಲ್ಲ? ಇನ್ನು ಒಂದಷ್ಟು ದಿನ ದಿನ ಯಾಕೆ ಒಂದಷ್ಟು ಘಳಿಗೆ ನನ್ನ ರಥದ ಸಾರಥಿಯಾಗು. ಅಷ್ಟನ್ನೂ ಮಾಡಲಾಗದ ನೀನು ನನ್ನಿಂದಲೂ ಶ್ರೇಷ್ಠವಾದ ಭಕ್ತಿಯನ್ನು ಅವನಲ್ಲಿ ಏನು ಕಂಡೆ?
ಇಲ್ಲಿ ನೀನು ಪೊರೆಯುವುದನ್ನು ಅಭಿನಯ ಎಂದು ಹೇಳಬೇಡ. ಅಭಿನಯ ಎಂಬುದು ಕೃತ್ರಿಮ. ಒಬ್ಬಾತ ರಂಗದ ಮೇಲೆ ಅಭಿನಯಿಸುತ್ತಾ ತನ್ನ ಹೆಂಡತಿ ಸತ್ತಳೂ ಎಂದು ದುಃಖಿಸಿದರೆ, ವಾಸ್ತವದಲ್ಲಿ ಅವನ ಹೆಂಡತಿ ರಂಗದ ಎದುರಿಗೇ ಕುಳಿತು ಇವನ ಅಭಿನಯವನ್ನು ನೋಡುತ್ತಿರುತ್ತಾಳೆ.!! ಅಂದರೆ ಅಭಿನಯ ಎಂಬುದು ಕಲೆ, ಹಾಗಾಗಿ ಕಲೆ ಎಂಬುದು ಕೃತ್ರಿಮ. ಅದು ಯಥಾರ್ಥತೆಗೆ ವಿರೋಧವಾದದ್ದು.  ಅದು ನಿಜವಾದರೆ ಕಲೆಯಾಗಿ ಉಳಿಯುವುದಿಲ್ಲ.  ಒಬ್ಬ ಮನುಷ್ಯನೇ ಬಂದು ನಿಂತರೆ ಆಶ್ಛರ್ಯವಾಗುವುದಿಲ್ಲ. ಆದರೆ ಮನುಷ್ಯನಂತಿರುವ ಮಣ್ಣಿನ ಬೊಂಬೆಯನ್ನು ತಂದಿರಿಸಿದರೆ ಬೆರಗಾಗುತ್ತೇವೆ. ಬೊಂಬೆ ಎಂಬುದು ನಿಜವಾದ ಮನುಷ್ಯನಲ್ಲದೇ ಇದ್ದರೂ ಶ್ರೇಷ್ಠ ಕಲೆಯಾಗಿ ಗೋಚರಿಸುತ್ತದೆ. ಅಳು ಬರದಿದ್ದರೂ ಅತ್ತವನಂತೆ ಬೇರೆಯವರು ಭ್ರಮೆಗೊಳಗಾದವನಂತೆ ಆಳಬೇಕು. ಇಲ್ಲಿ ಕೃತ್ರಿಮವೇ ಕಲೆಯೆಂದು ಕರೆಸಲ್ಪಡುತ್ತದೆ. ವಾಸ್ತವಕ್ಕೆ ಹತ್ತಿರವಾಗಿ ಶ್ರೀಕೃಷ್ಣ ನೀನು ಇದಕ್ಕೆ ಸ್ಪಷ್ಟ ಮಾತುಗಳನ್ನು ಹೇಳಲೇಬೇಕು.
 ನನ್ನಿಂದಲೂ ಅಧಿಕ ವಿಶೇಷತೆ ಅರ್ಜುನನಲ್ಲಿ ಅದೇನು ಕಂಡೆ? ಅರ್ಜುನ ನಿನಗೆ ಹೇಗೆ ಕಿಂಕರನೋ ನಾನು ನಿನ್ನ ಕಿಂಕರ ಎಂಬ ಮನೋಭಾವದಲ್ಲೇ ಜೀವಿಸಿದವನು. ಅರ್ಜುನನ ಭಕ್ತಿಯನ್ನು ಅಂಗೀಕರಿಸಿ ನನ್ನ ಭಕ್ತಿಯನ್ನು ತಿರಸ್ಕರಿಸಿರುವೆಯಲ್ಲ ಕೃಷ್ಣ. 
ಭೇದವು ನಿಮ್ಮೊಳಗುಭಯರ ಪಾಲಿಪ | ನಾದಿಪಿತಾಮಹನು |
ಕಾದಿಹ ತೈಲವ ತೊಡೆದನೆ ಧರ್ಮಜ | ಹೋದೆಯೊ ಕುರುಬಲಕೆ ||

ಭೀಷ್ಮ ಸಹಜವಾಗಿ ಉದ್ವೇಗಭರಿತನಾದ. ತನ್ನಿಂದ ಬಹಳ ಕಿರಿಯನಾದ ಅರ್ಜುನನಿಂದ ತಾನು ಭಾಗವತ ಧರ್ಮವನ್ನು ಕಲಿಯುವಂತಾಯಿತೇ? ಹಾಗಾಗಿ ಬೇಡ ಬೇಡವೆಂದರೂ  ಮಾತಿನಲ್ಲಿ ಮಾತ್ಸರ್ಯ ಸಿಡಿಯಿತು. ತನ್ನ ಮೊಮ್ಮಗನ ರಥದ ಆಳಾಗಿ ಭಗವಂತ ಇಳಿಯುತ್ತಾನೆ ಎಂದಾದರೆ, ತನ್ನ ಜೀವನ ರಥದ ಸಾರಥ್ಯವನ್ನು ನಿರಾಕರಿಸಿದಂತೇ ಅಲ್ಲವೇ?
ಭೀಷ್ಮನ ಉದ್ವೇಗ ಶ್ರೀಕೃಷ್ಣ ಸರಿಯಾಗಿ ಅರ್ಥವಿಸಿಕೊಳ್ಳುತ್ತಾನೆ. ಯಾವ ಭೇದವನ್ನು ತನ್ನ ಮೇಲೇ ಆರೋಪಿಸುವಾಗ ಸ್ವತಃ ತಾನು ಅದೇ ಭೇದವನ್ನು ತೋರಿಸುತ್ತಾ ಅದಕ್ಕೆ ವಶವರ್ತಿಯಾಗಿ ವ್ಯವಹರಿಸುತ್ತಿದ್ದಾನಲ್ಲ. ಶರಣರ ಪೊರೆಯುವುದು ಇದು ತನ್ನ ಬಿರುದು ಆದರೂ ಶರಣ ಎಂಬುದಾಗಿ ಅರ್ಜುನನ್ನು ಒಬ್ಬನನ್ನೇ ಪರಿಗಣಿಸುತ್ತಾನಲ್ಲ. ಸ್ವತಃ ಹಿರಿಯನಾದ ಭೀಷ್ಮ ಸ್ಥಾನ ಗೌರವವನ್ನು ಅರ್ಥವಿಸಬೇಕಿತ್ತು. ಅದನ್ನು ಬಿಂಬಿಸಿಯೇ ತುಸು ಕಠಿಣವಾಗಿಯೇ ಮೊನಚಾದ ಮಾತುಗಳಿಂದ ಪ್ರತಿಕ್ರಿಯಿಸುತ್ತಾನೆ. ಒಂದು ತಾಯಿಗೆ ಮಕ್ಕಳು ಹಲವರಿರಬಹುದು. ಆ ಮಕ್ಕಳೆಲ್ಲರನ್ನು ಸಮಾನವಾಗಿ ಪಾಲಿಸುವ ಗುಣವನ್ನು ತಾಯಿಗೆ ತಿಳಿಸುವ ಅಗತ್ಯ ಇದೆಯೇ? ಆದರೂ ಪಾಲನೆಯಲ್ಲಿ ವೆತ್ಯಾಸ ವೈವಿಧ್ಯತೆಯನ್ನು ತೋರಬೇಕಾದ್ದು ಅನಿವಾರ್ಯ. ಹಿರಿಯ ಮಗನಾದವನು  ತನ್ನಿಂದಲೂ ಅತಿ ಕಿರಿಯನಾದ ಮಗುವಿಗೆ ತನ್ನಮ್ಮ ಎದೆಹಾಲನ್ನು ಉಣಿಸುತ್ತಿದ್ದರೆ, ನನಗೂ ಉಣ್ಣಿಸು ಎಂದು ಹಿರಿಯನಾದವನು ಹೇಳಬಹುದೇ.? ಭಾವವೆತ್ಯಾಸ ಪ್ರೀತಿಯ ಮೇಲೆ ಪ್ರಭಾವ ಬೀರುವುದಿಲ್ಲ. ಹಲವು ಮಕ್ಕಳ ಮೇಲೂ ತಾಯಿಯಾದವಳ ವಾತ್ಸಲ್ಯ ಒಂದೇ ಆಗಿರುತ್ತದೆ. ಬೆಳೆದ ಮಗನಿಗೂ ಎಳೆಯ ಶಿಶುವಿಗೂ ಪಾಲನೆಯಲ್ಲಿ ವೆತ್ಯಾಸವಿದ್ದರೆ ಅದನ್ನು ಭೇದ ಎಂದು ದೂಷಿಸುವುದಕ್ಕೆ ಸಾಧ್ಯವೇ?  ಸ್ವತಃ ಪಿತಾಮಹನ ಸ್ಥಾನದಲ್ಲಿದ್ದವನು ಭೀಷ್ಮ, ಆತ ಮಾಡಿದ್ದೇನು? ಹಾಗಾಗಿ ಇರಿದೇ ಮಾತನಾಡುತ್ತಾನೆ.
“ ಭೀಷ್ಮರೇ,  ಭೇದ ಅದು ನಿಮ್ಮಲ್ಲೇ ಇದೆ. ನೀವು ಪಿತಾಮಹರರಾಗಿರುವುದು ಕೇವಲ ಕೌರವರಿಷ್ಟೇ ಅಲ್ಲವಲ್ಲ.  ಇಂದು ಕೌರವ ಪಾಂಡವರನ್ನು ಸಮಾನವಾಗಿ ಕಾಣಬೇಕಾದ ನೀವು, ಕೌರವನ ಆಯುಧವಾಗಿ ಪಾಂಡವರನ್ನು ಅದೂ ನಿಮ್ಮ ಮೊಮ್ಮಕ್ಕಳನ್ನು ತರಿಯುವುದಕ್ಕೆ ಹೊರಟಿದ್ದೀರಲ್ಲ. ಸ್ವಗೋತ್ರ ನಾಶದ ಈ ಯುದ್ದದಲ್ಲಿ ನೀವು ತೊಡಗುವುದೇ? ಕೌರವನ ಪರವಾಗಿ ಆಯುಧ ಹಿಡಿಯುವ ನಿಮಗೆ ಧರ್ಮರಾಯ ಏನು ಮಾಡಿದ ಕಾದ ಎಣ್ಣೆಯನ್ನು ಎರಚಿದನೇ? ನೀವು ಭೇದವನ್ನು ಬಿಡುವ ಮನಸ್ಸಿದ್ದರೆ ಇಷ್ಟು ದಿನ ಕೌರವನ ಪಕ್ಷ ಹಿಡಿದಿದ್ದಿರಿ ಇನ್ನು ನಿಮ್ಮ ಸೇನಾಧಿಪತ್ಯ ಪಾಂಡವರ ಕಡೆಯಿಂದ ಸಾಗಲಿ. ಆದುದರಿಂದ ಭೇದ ನಿಮ್ಮಲ್ಲೇ ಇದೆ.”
ತನ್ನ ಬಂಧನವನ್ನು ಶ್ರೀಕೃಷ್ಣ ಭೇದ ಎಂದು ಗುರುತಿಸಿದ್ದು ಮಾತ್ರವಲ್ಲ ಒಂದು ರೀಲಿಯಲ್ಲಿ ಮೂದಲಿಕೆಯನ್ನೇ ಮಾಡುತ್ತಾನೆ. ಭೂಮಿಯ ಮೇಲೆ ಹುಟ್ಟಿದ ಮೇಲೆ ಸಂಭಂಧಗಳ ಒಳಗೆ ಬದುಕಬೇಕಾಗುತ್ತದೆ. ಸಂಬಂಧಗಳು ಬೇದಕ್ಕೆ ಕಾರಣವಾಗುತ್ತದೆ ಎಂದು ಆ ಸಂಬಂಧ ಬೇಡವೆಂದು ಬಗೆದರೆ ಜೀವನದ ಸಾರ್ಥಕತೆಯನ್ನು ಪಡೆಯುವುದಾದರೂ ಹೇಗೆ. ಪಿತಾಮಹನಾದರೂ ತಾನೂ ಅದಕ್ಕೂ ಮೊದಲು ಒಂದು ಸಂತಾನ ಪುತ್ರನೇ ತಾನೆ? ಸಂಬಂಧಗಳ ನಡುವೆ ಹಂಗು ಎಂಬುದು ಇದೇ ರೀತಿ ಬೆಳೆದು ಬಿಡುತ್ತದೆ. ಹಸ್ತಿನಾವತಿಯಲ್ಲಿ ಭೀಷ್ಮ ಎಂದು ಅರಸನಾಗಲಿಲ್ಲ. ಆದರೂ ಅರಸೊತ್ತಿಗೆಯ ಮುಳ್ಳು ದೇಹಕ್ಕೆ ಚುಚ್ಚಿದ್ದು ಕಿತ್ತು ಹಾಕುವುದಕ್ಕೆ ಸಾಧ್ಯವಾಗುವುದಿಲ್ಲ. ಹಸ್ತಿನೆಯಲ್ಲಿ ಭೀಷ್ಮ ಅರಸನಲ್ಲ ಎಂದಾದರೆ  ಹಸ್ತಿನಾವತಿಯ ಸಿಂಹಾಸನದ ಹಂಗು ತಾನಾಗಿ ಮುತ್ತಿಕೊಳ್ಳುತ್ತದೆ. ಶ್ರೀ ಕೃಷ್ಣನಿಗೆ ಇದು ಅರಿವಿಲ್ಲದೇ ಏನೂ ಅಲ್ಲ. ಶುದ್ಧ ಧಾರ್ಮಿಕ ಮನೋಭಾವದಿಂದಲೇ ಕೃಷ್ಣ ಪ್ರತಿಕ್ರಿಯಿಸುತ್ತಾನೆ. ಶ್ರೀಕೃಷ್ಣನ ಮಾತೇ ಹಾಗೆ. ಅದನ್ನು ಅವರವರ ದೃಷ್ಣಿಕೋನಕ್ಕೆ ಸರಿಯಾಗಿ ಅವರವರ ಬೌದ್ಧಿಕ ಮಟ್ಟಕ್ಕೆ ಸರಿಯಾಗಿ ಯೋಚಿಸುವುದಕ್ಕೆ ಸಾಧ್ಯವಾಗುತ್ತದೆ. ಪರೋಕ್ಷವಾಗಿ ಆತ ಹೇಳುವುದಾದರೂ ಏನು? ತಾನು ಕೇವಲ ಕೌರವನ ಸೇನಾಧಿಪತ್ಯದ ಪದವಿಯಿಂದ ವಿರಮಿಸುವುದಲ್ಲ.. ಈ ದೀರ್ಘ ಬದುಕಿನಿಂದಲೇ ವಿರಮಿಸಬೇಕಿದೆ. ಹಾಗಾಗಿ ಆ ಹಾದಿಯನ್ನೇ ತೋರುತ್ತಿದ್ದಾನೆಯೇ? ಹೌದು ಇದು ಭೀಷ್ಮನ ಅಂತಿಮ ದಿನದ ಯುದ್ದವಾಗಲಿ ಎಂಬ ಅಶಯವೇ? ಹಾಗಾಗಿ ತನ್ನ ಸ್ಥಾನಕ್ಕೆ ಇನ್ನು ಅರ್ಜುನನ ಉಮೇದ್ವಾರಿಕೆ ಎಂದು ಸಾರುತ್ತಿದ್ದಾನಲ್ಲ.?  ಹಾಗಾದರೆ ಈ ಉಮೇದ್ವಾರಿಕೆಯನ್ನೂ ಪರೀಕ್ಷಿಸುವಂತೆ ಪ್ರೇರೇಪಣೆ ಯಾಕೆ ಇದಾಗಿರಬಾರದು?
ತನಗೆ ಕೌರವನ ಅನ್ನದ ಋಣ. ಹಸ್ತಿನಾವತಿಯ ಸಿಂಹಾಸನದ ಹಂಗು. ಆದರೆ ಶ್ರೀಕೃಷ್ಣನಿಗೆ ಜಗದ ಹಂಗು ಇದೆ. ಆ ಹಂಗಿನಂದಲೇ ಧರ್ಮ ಸಂಸ್ಥಾಪನಾರ್ಥಾಯ ಎಂದು ಹೊರಟದ್ದು. ಒಂದು ವೇಳೆ ಇಂದು ಭೀಷ್ಮ ಜಯಿಸಿದರೆ...,   ಆ ಜಯ ಸಲ್ಲುವುದು ಭೀಷ್ಮನಿಗಲ್ಲ. ಇಲ್ಲಿ ಭೀಷ್ಮನ  ಧರ್ಮಪ್ರವೃತ್ತಿ  ಗೆಲ್ಲುವುದಲ್ಲ.  ಅಧರ್ಮಿಯಾದ ಕೌರವನಿಗೆ ಆ ಗೆಲುವು ಸಲ್ಲುತ್ತದೆ. ಆಗ ಕೌರವ ನಡೆದುಕೊಂಡದ್ದೇ ಸರಿ ಎಂದಾಗಬಹುದಲ್ಲವೇ? ಧರ್ಮ ಇದ್ದಲ್ಲಿ ಜಯ ಸಿಗುವುದಿಲ್ಲ ಎಂದಾದರೆ ಭಗವಂತನ ಇರಾದೆ ಹಾಗಿರಲಾರದು. ಮತ್ತೇನು ಇರಬಹುದು? ಯಥೋ ಧರ್ಮಃ ತಥೋ ಜಯ: ಈ ವೇದವಾಕ್ಯ ಸತ್ಯವಾಗದೇ ಇದ್ದೀತೆ? ಹಾಗಾಗಿ ಭಗವಂತನ ಇರಾದೆ ನನ್ನ ಪ್ರವೃತ್ತಿಗೆ ನಿವೃತ್ತಿಯನ್ನು ತರುವುದಿರಬಹುದಲ್ಲವೇ? ಹಾಗಿರುವಾಗ ತನಗೇಕೆ ಈ ಛಲ? ಅದು ಭಗವಂತನಿಗೆ ವೇದ್ಯವಾಗಲಿ ಎಂಬುದೇ ನನ್ನ ಪ್ರಯತ್ನ. ಆದನ್ನು ಭಗವಂತನ ಮುಂದೆ ಪರೋಕ್ಷವಾಗಿ ಇರಿಸಿಯಾಗಿದೆ. ಅದಕ್ಕಾಗಿಯೇ ಅಲ್ಲವೇ ಆತ ತಾಯಿ ಪ್ರೇಮದ ರೀತಿಯನ್ನು ಒರೆದದ್ದು. ಸಮಾನತೆ ಅದು ಶಬ್ದ ಒಂದೇ, ಆದರೆ ಆಂತರಿಕ ಸಮಾನತೆ ಬಾಹ್ಯ ಭಿನ್ನತೆ ಎಂದಿದೆ. ಆಂತರಿಕ ಸಮಾನತೆಯಲ್ಲಿ ತಾಯಿಗೆ ಎಲ್ಲ ಮಕ್ಕಳಲ್ಲೂ ಒಂದೇ ರೀತಿಯ ಪ್ರೀತಿ ಮಮಕಾರ ಇರುತ್ತದೆ. ಆದರೆ ಬಾಹ್ಯದ ವ್ಯವಹಾರದಲ್ಲಿ ಭಿನ್ನತೆಯುಂಟು. ಹಾಗಾಗಿ ಆಂತರಿಕ ಸಮಾನತೆಯಲ್ಲಿ ಭೀಷ್ಮನಿಗೂ ಭಗವಂತನ ಹೃದಯದಲ್ಲಿ ಸ್ಥಾನ ಉಂಟು ಅಂತ ಪರೋಕ್ಷವಾಗಿ ಸಾರಿದ ಹಾಗಾಯಿತು. ಹಾಗಾಗಿ ಅದನ್ನು ಕಾಣಬೇಕಲ್ಲ. ಧರ್ಮದ ಜಿಜ್ಞಾಸೆಗಾಗಿ ಗುರುವಿನಲ್ಲೇ ಕ್ಷತ್ರಿಯತ್ವ ಮೆರೆದ ಭೀಷ್ಮನಿಗೆ ಇಂದು ಭಗವಂತನ ಎದುರು ಅದೇ ದಾರಿ. ತನ್ನವ್ವೆಗೆ ಹಾದಿಯನ್ನು ತೋರಿಸಿದ ಹರಿಪಾದ ನಖ, ನನಗೊಂದು ಹಾದಿಯನ್ನು ತೋರದೇ ಇರಲರಾದು.

 ಧರ್ಮ ರಕ್ಷಣೆಗಲ್ಲವೇ ಅರ್ಜುನನ ರಕ್ಷಣೆ. ನೋಡೋಣ ರಕ್ಷೆ ಹೇಗಾಗುತ್ತದೆ. ಹಾಗಾದಲ್ಲಿ ನಾನು ವಿರಾಮವನ್ನು ಕಂಡುಕೊಳ್ಳಬಹುದು ಅದುವರೆಗೆ ಈ ಭೀಷ್ಮ ವಿರಮಿಸುವ ಪ್ರಶ್ನೇಯೇ ಇಲ್ಲವೆಂದು ದೃಢನಿಲುವು ತಾಳಿ ದೃಢವಾಗಿ  ನೆಲಕ್ಕೆ ಊರಿದ ಧನುಸ್ಸನ್ನು ಭೀಷ್ಮ ಕೈಯಲ್ಲಿ ಎತ್ತಿ ಹಿಡಿಯುತ್ತಾನೆ . 

Tuesday, November 11, 2014

ಯಕ್ಷ ಸನ್ಮಾನ


ಯಕ್ಷಗಾನ ಲೋಕದ ಪ್ರತಿಷ್ಠಿತ ಸಂಸ್ಥೆಯೊಂದರ ಕಾರ್ಯಕ್ರಮ ಆದಿತ್ಯವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಹಾಗಾಗಿ ಅದನ್ನು ಕಾಣುವ ಒಂದು ಅವಕಾಶವೂ ಒದಗಿಬಂತು. ಯಕ್ಷಗಾನ ಕಲಾರಂಗ ಉಡುಪಿ,  ಯಕ್ಷಗಾನದ ಒಂದು ಪ್ರತಿಷ್ಠಿತ ಸಂಸ್ಥೆ.  ಹಾಗಾಗಿ ಅದರ ಕಾರ್ಯಕ್ರಮಗಳು ಸಹಜವಾಗಿ ಬಹಳ ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ನಲ್ವತ್ತರ ಪ್ರಬುದ್ಧ ವಯಸ್ಸಿನ ಒಂದು ಸಂಸ್ಥೆಯ ಸಂಭ್ರಮದ ಕಾರ್ಯಕ್ರಮ. ಸಂಭ್ರಮದ ಸ್ಮರಣೆಯಲ್ಲಿ ಯಕ್ಷಗಾನ ರಂಗದ ಬಹುಮಾನ್ಯ ಹಿರಿಯ ಕಲಾವಿದರಿಗೆ ಸನ್ಮಾನ. ಪ್ರತಿಯೊಬ್ಬ ಯಕ್ಷಗಾನ ಅಭಿಮಾನಿಯೂ ಅಭಿಮಾನ ಪಟ್ಟುಕೊಳ್ಳಬೇಕಾದ ಒಂದು ಕಾರ್ಯಕ್ರಮ. ಇದು ಯಕ್ಷಗಾನ ಕಲಾರಂಗದ ಶಿಸ್ತುಬದ್ಧ ಚಟುವಟಿಕೆಗೆ ಸಾಕ್ಷಿ ಎಂಬಂತೆ ಕಾರ್ಯಕ್ರಮ ಸಂಘಟಿಸಲ್ಪಟ್ಟಿತ್ತು. ಕೇವಲ ನಲ್ವತ್ತರ ಸಂಭ್ರಮ ಮಾತ್ರವಲ್ಲ ಉಡುಪಿಯ ಒಂದು ಸಂಘಟನೆ ತನ್ನ ಕಾರ್ಯಕ್ರಮವನ್ನು ಬೆಂಗಳೂರಿಗೆ ವಿಸ್ತರಿಸಿ ಒಂದು ಯಶಸ್ವೀ ಕಾರ್ಯಕ್ರಮವನ್ನು ಸಂಘಟಿಸುವುದು ಸಹ ಒಂದು ಸಂಭ್ರಮವಾಗಿತ್ತು.
ಛಾಯ ಚಿತ್ರ ಕೃಪೆ : ಶಮಂತ್ ಭಟ್ ಕೋಳ್ಯೂರು
ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಿತ್ತು. ಆರಂಭದಲ್ಲಿ ಪಂಚಶರ ಪಂಚಶಿರವೆಂಬ ಪ್ರಸಂಗ ತೆಂಕುತಿಟ್ಟಿನ ಕ್ರಮದಲ್ಲಿ ಜರಗಿ ನಂತರ ಸಾಕ್ಷ್ಯಚಿತ್ರ ಮತ್ತು ಸಭಾ ಕಾರ್ಯಕ್ರಮದೊಂದಿಗೆ ಸನ್ಮಾನ ಕಾರ್ಯಕ್ರಮ. ಆನಂತರ ಶ್ರೀಕೃಷ್ಣ ಸಂಧಾನ ಎಂಬ ಯಕ್ಷಗಾನ ಬಡಗುತಿಟ್ಟಿನ ಕ್ರಮದಲ್ಲಿ ಜರಗಿತ್ತು. ಬಹಳಷ್ಟು ಸಮಯಕ್ಕೆ ಆರಂಭವಾಗಿ ಹಾಗೇ ಮುಕ್ತಾಯವನ್ನು ಕಂಡರೂ ಸನ್ಮಾನ ಕಾರ್ಯಕ್ರಮ ಒಂದಷ್ಟು ಹೊತ್ತು ಲಂಬಿಸಿತು.
ವೇದಿಕೆಯ ಮುಕ್ಕಾಲು ಭಾಗ ಸನ್ಮಾನಿತರು, ಅಭ್ಯಾಗತರು, ಅತಿಥಿವರೇಣ್ಯರಿಂದ ತುಂಬಿಕೊಂಡು ಅತ್ಯಂತ ವಿಶಿಷ್ಟ ಕಾರ್ಯಕ್ರಮ ಎನಿಸಿತು. ಹದಿನೇಳು ಮಂದಿ ಯಕ್ಷಗಾನದ ವಿಶಿಷ್ಟರಿಗೆ ಸನ್ಮಾನ. ಇದುವೇ ಕಲ್ಪನೆಗೆ ಮೀರಿದ ಕಾರ್ಯಕ್ರಮ. ಸರಕಾರದ ರಾಜ್ಯೋತ್ಸವ ಪ್ರಶಸ್ತಿಗೆ ಇದೇ ರೀತಿ ಸನ್ಮಾನಿತರಿಂದ ವೇದಿಕೆ ತುಂಬಿರುವುದು ಬಿಟ್ಟರೆ ಮತ್ತೆ ಆ ಬಗೆಯಲ್ಲಿ ಕಾಣುವುದು ಸಾಧ್ಯವಿಲ್ಲ ಎಂದೇ ಹೇಳಬೇಕು. ಯಕ್ಷಗಾನದ ಕಾರ್ಯಕ್ರಮ ಈ ಸರಕಾರೀ ಕಾರ್ಯಕ್ರಮವನ್ನು ಮೀರಿಸುವ ರೀತಿಯಲ್ಲಿ ವ್ಯವಸ್ಥಿತವಾಗಿ ನಡೆದುದು ಒಂದು ಹೆಗ್ಗಳಿಕೆಯೇ ಸರಿ. ಇಷ್ಟು ದೊಡ್ಡಮಟ್ಟಿಗೆ ಅಷ್ಟೇ ವ್ಯವಸ್ಥಿತವಾಗಿ ಒಂದು ಸನ್ಮಾನ ಕಾರ್ಯಕ್ರಮ ಕಾಣುವುದು ಸಾಧ್ಯವೇ ಇಲ್ಲ ಎನ್ನಬಹುದು. ಸನ್ಮಾನಿತರೆಲ್ಲರೂ ಇಂತಹ ಮನ್ನಣೆಗೆ ಅತ್ಯಂತ ಅರ್ಹರೆನ್ನುವುದು ಒಂದು ಮಾತಾದರೆ ಅವರನ್ನು ಆಯ್ಕೆ ಮಾಡಿ ಒಂದು ಸೂರಿನಡಿಯಲ್ಲಿ ಅವರನ್ನು ಗೌರವಿಸಿದ್ದು ಕೂಡ ಅಷ್ಟೇ ಮಹತ್ವವನ್ನು ಕಾಣುತ್ತದೆ.

ಈ ಕಾರ್ಯಕ್ರಮವನ್ನು ಒಂದು ಸನ್ಮಾನ ಕಾರ್ಯಕ್ರಮವಾಗಿಯೇ ಕಾಣಬೇಕು. ಯಾಕೆಂದರೆ ಒಂದು ದೊಡ್ದ ಯಕ್ಷಗಾನವನ್ನು ನೋಡಬೇಕು ಎಂದು ಬಂದವರಿಗೆ ಕಾರ್ಯಕ್ರಮ ಆ ಒಂದು ನಿರೀಕ್ಷೆಯನ್ನು ಪೂರೈಸಲಿಲ್ಲ ಎಂದೇ ಹೇಳಬೇಕು. ಯಕ್ಷಗಾನವನ್ನು ಕಂಡ ತೃಪ್ತಿಯಂತು ಸಿಕ್ಕಿರಲಾರದು ಎಂದೇ ನನ್ನ ಅನಿಸಿಕೆ. ತೆಂಕು ತಿಟ್ಟಿನ ’ಪಂಚಶರ ಪಂಚ ಶಿರ’ ಕೆಲವೊಮ್ಮೆ ಯಕ್ಷಗಾನದಂತೆ ಕೆಲವೊಮ್ಮೆ ಗೀತನಾಟಕದಂತೆ ಇನ್ನು ಕೆಲವೊಮ್ಮೆ ನಾಟಕದಂತೆ ಭಾಸವಾಗಿತ್ತು. ಈ ಕಾರ್ಯಕ್ರಮ ರೂಪಿಸುವವಲ್ಲಿ ಬಹಳಷ್ಟು ಶ್ರಮ ವಿನಿಯೋಗವಾಗಿದೆ ಎಂದು ಕಾರ್ಯಕ್ರಮ ಕಂಡಾಗ ಅನಿಸಿತು. ಹಿಮ್ಮೇಳ ಅತ್ಯಂತ ಉತ್ತಮವಾಗಿದ್ದರೂ ಸ್ವತಂತ್ರ ಮನೋಭಾವದ ಕೊರತೆ ಕಾಣುತ್ತಿತ್ತು. ತೆಂಕುತಿಟ್ಟಿನ ಅತ್ಯಂತ ವೈಶಿಷ್ಟ್ಯತೆಯ ಕಿರೀಟವೇಷ ಬಣ್ಣದವೇಷವನ್ನು ತೋರಿಸುವುದಕ್ಕಷ್ಟೇ ಈ ಪ್ರಸಂಗ ಸೀಮಿತವಾದ ಹಾಗಿತ್ತು. ಅವುಗಳ ಯಾವ ಪರಿಣಾಮವೂ ಪ್ರೇಕ್ಷಕನಲ್ಲಿ ಆಗಲೇ ಇಲ್ಲ. ಹೆಚ್ಚೆಂದರೆ ಒಂದು ಪೌರಾಣಿಕ ನಾಟಕವನ್ನು ನೋಡಿದ ಅನುಭವಾಗಿತ್ತು. ಯಕ್ಷಗಾನ ಎಂದರೆ ಕೇವಲ ವೇಷ ನಾಟ್ಯ ಇಷ್ಟಕ್ಕೆ ಸೀಮಿತವಲ್ಲ. ಎಲ್ಲದರಲ್ಲೂ ಹೊಸತನ್ನು ನವ್ಯರೀತಿಯಲ್ಲಿ ಕೊಡಬೇಕು ಎನ್ನುವ ಕಳಕಳಿಯಲ್ಲಿ ಯಕ್ಷಗಾನ ಕೇವಲ ವೇಷಕ್ಕಷ್ಟೇ ಸೀಮಿತವಾಗಿತ್ತು.  ದೇವೇಂದ್ರನ ಒಡ್ದೋಲಗ ಉತ್ತಮ ಎನ್ನಬಹುದಾದರೂ ಬಣ್ಣದ ಅಸುರ ವೇಷಗಳ  ರಂಗ ಪ್ರವೇಶ ಅಷ್ಟು ಪರಿಣಾಮಕಾರಿಯಾಗಿರಲಿಲ್ಲ. ಬಹಳ ಹಿಂದೆ ರಂಗ ತುಂಬಿದ ದೇವೇಂದ್ರನ ಒಡ್ದೋಲಗ ಕಂಡ ನೆನಪು ಪುನಃ ಮರುಕಳಿಸಿತು. ಈಗೀಗ ದೇವೇಂದ್ರನ ಒಡ್ದೊಲಗ ಎಂದರೆ ದೇವೇಂದ್ರನ ಎಡಬಲಕ್ಕಷ್ಟೇ ಸೀಮಿತವಾಗಿರುತ್ತದೆ. ಇಲ್ಲಿ ಕಡಿಮೆಯ ಸಮಯಾವಕಾಶದಲ್ಲೂ ಮಿತಿಯೊಳಗೆ ಸಾಂಪ್ರದಾಯಿಕ ಒಡ್ಡೋಲಗವನ್ನು ತೋರಿಸುವ ಪ್ರಯತ್ನ ಶ್ಲಾಘನೀಯ. ಆದರೂ ಎಲ್ಲವೂ ಕಿರೀಟ ವೇಷ(ರಾಜವೇಷ) ವನ್ನೇ ತೋರಿಸಿದ್ದು ದೇವೇಂದ್ರನನ್ನು ಅವುಗಳ ಮಧ್ಯೆ ಹುಡುಕುವಂತೆ ಮಾಡಿತ್ತು. ಇನ್ನು ದೇವ ದಾನವರ ಯುದ್ದದ ಸನ್ನಿವೇಶ ಯಕ್ಷಗಾನ ಎಂದು ಒಪ್ಪಿಕೊಳ್ಳುವಲ್ಲಿ ಮನಸ್ಸಿಗೆ ಬಹಳ ಕಷ್ಟವಾಗುತ್ತದೆ. ಆ ಬಗೆಯ ಯುದ್ದ ಸನ್ನಿವೇಶ ಸಿನಿಮಾದಲ್ಲಷ್ಟೇ ಕಾಣಬಹುದು. ಇದು ಅಷ್ಟು ಪರಿಣಾಮಕಾರಿಯಾಗಿ ಮೂಡಿಬರಲಿಲ್ಲ ಮಾತ್ರವಲ್ಲ ಇದನ್ನು ಇನ್ನು ಯಾರೂ  ಅನುಸರಿಸದಿರಲಿ ಎಂದೇ ಆಶಯ.  ದೊಡ್ಡ ದೊಡ್ದ ಕಲಾವಿದರ ಆಟ ಉಂಟು ಅಂತ ಬಂದವರಿಗೆ ಆ ಕಲಾವಿದರನ್ನು ಈಬಗೆಯಲ್ಲಿ ಕಂಡು ಬಹಳ ನಿರಾಶೆಯೇ ಆಯಿತು ಎನ್ನಬೇಕು. ಯಕ್ಷಗಾನದ ದೃಷ್ಟಿಕೋನವನ್ನು ಕೆಲವೊಮ್ಮೆ ಬದಿಗಿಟ್ಟು ನೋಡಿದಲ್ಲಿ ಕಾರ್ಯಕ್ರಮ  ಅತ್ಯುತ್ತಮ ಎನ್ನಬಹುದು. ಒಂದೇ ತೆರನಾದ ಏಕತಾನತೆ ಅನುಭವಿಸಿದ್ದ ಪ್ರೇಕ್ಷಕನಿಗೆ ಇದು ಭಿನ್ನವಾದ ಅನುಭವವಾಗಿರಬಹುದು.
ಛಾಯ ಚಿತ್ರ ಕೃಪೆ: ಮಿಥುನ್ ಪ್ರಕಾಶ್ ಸುಣ್ಣಂಗುಳಿ
ಎಲ್ಲಾ ಕಾರ್ಯಕ್ರಮದಲ್ಲೂ ಎದ್ದು ಕಂಡ ಅಂಶವೆಂದರೆ ಸಂಸ್ಥೆಯ ಒಂದು ಸಾಮಾಜಿಕ ಕಳಕಳಿ. ಅದನ್ನು ಪ್ರಾಮಾಣಿಕವಾಗಿ ಗುರುತಿಸಿ ಪ್ರತ್ಯೇಕವಾಗಿ ಶ್ಲಾಘಿಸಬೇಕು. ಯಕ್ಷಗಾನಕ್ಕೆ ಒಂದು ಪ್ರತ್ಯೇಕ ಅಕಾಡೆಮಿಯ  ಸ್ಥಾಪನೆ, ಇದು ಬಹಳ ಹಿಂದಿನ ಬೇಡಿಕೆ. ಆ ಬೇಡಿಕೆಯನ್ನು   ಮಾನ್ಯ ಸಂಸ್ಕೃತಿ ಸಚಿವರಿಗೆ ಈ ಸಂದರ್ಭದಲ್ಲಿ ಮನವಿ ಪೂರ್ವಕವಾಗಿ ಸಲ್ಲಿಸಿ   ಸರಕಾರದ ಬಹಳ ಹತ್ತಿರದ ಬಾಗಿಲನ್ನು ಯಕ್ಷಗಾನ ಕಲಾರಂಗ ಬಡಿದಿದೆ ಎನ್ನಬಹುದು. ಇದಕ್ಕಿಂತ ಪರೀಣಾಮಕಾರಿಯಾಗಿ ಮನವಿಯನ್ನು ಸಲ್ಲಿಸುವುದು ಹೇಗೆ ಎಂದು ಯೋಚಿಸಲು ಸಾಧ್ಯವಿಲ್ಲ. ಆದರೂ ಮಾನ್ಯ ಸಚಿವರು, ಯಕ್ಷಗಾನದಂತೆಯೇ ಹಾಡಿನಿಂದ ಸಂಗೀತದಿಂದ ನಾಟ್ಯದಿಂದ   ವೈಶಿಷ್ಟ್ಯ ಬೀರುವ ಕಲೆ ಇನ್ನು ಬೇರೆಯೂ ಇದೆ ಎಂದು ಹೇಳುವಲ್ಲಿ ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದಾರೆ ಎಂದೇ ಹೇಳಬಹುದು. ಆದರೂ ಕೊನೆಯಲ್ಲಿ ಪೇಜಾವರ ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಇದಕ್ಕೆ ಸೂಕ್ತ ಉತ್ತರವನ್ನು ಪರೋಕ್ಷವಾಗಿ ನೀಡಿದ್ದಾರೆ. ಇಂದು ಕರಾವಳಿಯ ಭಾಗದಲ್ಲಿ ಯಕ್ಷಗಾನದ ಪ್ರಭಾವದಿಂದ ಪೌರಾಣಿಕ ಪಾತ್ರಗಳಾದ ಕೃಷ್ನ ರಾಮ ಕರ್ಣ ಅರ್ಜುನರನ್ನು ಅವರ ವ್ಯಕ್ತಿತ್ವ ವಿಶೇಷವನ್ನು ಪರಿಚಯಿಸುವ ಅಗತ್ಯವಿಲ್ಲ. ಇದು ಸಚಿವೆಗೆ ನೀಡಿದ ಪರೋಕ್ಷ ಉತ್ತರ ಎಂದೇ ಪರಿಗಣಿಸಬೇಕು.
ಇಷ್ಟು ಮಾತ್ರವಲ್ಲ ಬ್ರಹತ್ ಸಂಖ್ಯೆಯ ಕಲಾವಿದರನ್ನು ಕೇವಲ ಸನ್ಮಾನಕ್ಕಾಗಿ ದೂರದ ಊರಿನಿಂದ ಶ್ರಮವಹಿಸಿ ಈ ರಾಜಧಾನಿಯ ಮಡಿಲಿಗೆ ಕರೆತಂದು, ಅದೇ ರೀತಿ ಆದರ ಉಪಚಾರಕ್ಕೆ ಕೊರತೆಯಿಲ್ಲದಂತೆ ಅವರನ್ನು ನೋಡಿಕೊಂಡು ಒಂದು ಕಾರ್ಯಕ್ರಮ ನೆರವೇರಿಸುವುದು ಸಂಸ್ಥೆಯ ಇಚ್ಚಾಶಕ್ತಿಗೆ ಹಿಡಿದ ಕನ್ನಡಿ ಅಂತಲೇ ಹೇಳಬೇಕು. ಯಕ್ಷಗಾನಕ್ಕೆ ಸಂಬಂಧಿಸಿ ಇದು ಬಹಳ ಶ್ಲಾಘನೀಯ ಎಂದೇ ನನ್ನ ಅನಿಸಿಕೆ. ಇದನ್ನು ಯಕ್ಷಗಾನ ಕಾರ್ಯಕ್ರಮ ಎಂದು ಕಾಣದೇ ಒಂದು ಯಕ್ಷಗಾನದ ಬೃಹತ್ ಸನ್ಮಾನ ಕಾರ್ಯಕ್ರಮ ಎಂದೇ ಕಾಣಬೇಕು. ಮಾತ್ರವಲ್ಲ ಒಂದು ಯಕ್ಷಗಾನದ ಒಂದು ಸಂಸ್ಥೆ ಯಾವರೀತಿ ಕಾರ್ಯ ನಿರ್ವಹಿಸಬೇಕು, ಯಾವುದೆಲ್ಲ ಶಿಸ್ತು ಕ್ರಮಗಳನ್ನು ಅನುಸರಿಸಬೇಕು, ಒಂದು ಕಾರ್ಯಕ್ರಮದ ಮತ್ತು ಕಲೆಯ ಗೌರವವನ್ನು ಸಂಸ್ಕೃತಿಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ತೋರಿಸಿಕೊಡಲು ಈ ಕಾರ್ಯಕ್ರಮ ಒಂದು ಮಾದರೀ ಕಾರ್ಯಕ್ರಮ ಎಂದು ಹೇಳಬಹುದು. ವರ್ಷವಿಡೀ ಹಲವಾರು ಯಕ್ಷಗಾನ ಕಾರ್ಯಕ್ರಮಗಳನ್ನು ನೋಡುವ ಅವಕಾಶವಿರುತ್ತದೆ. ಹಾಗಾಗಿ ಯಕ್ಷಗಾನದ ಹೆಸರಲ್ಲಿ ಅದಕ್ಕೆ ಸೀಮಿತವಾಗಿ ಇಂತಹ ಕಾರ್ಯಕ್ರಮ ಸೂಕ್ತವಾಗಿದೆ ಎಂದು ಹೇಳಬಹುದು.

 ಒಂದು ಸಂಸ್ಥೆ ತನ್ನ ಕಾರ್ಯ ಚಟುವಟಿಕೆಗಳನ್ನು ಪರಿಚಯಿಸಲು ಇಂತಹ ವೇದಿಕೆಯನ್ನು ರೂಪಿಸುವುದು ಬಹಳ ಸೂಕ್ತವೇ ಆಗಿದೆ. ಯಾಕೆಂದರೆ, ಒಂದು ದಿನದ ಯಕ್ಷಗಾನ ಕಾರ್ಯಕ್ರಮಕ್ಕಿಂತ ಅದು ನೆರವೇರಿಸುವ ಕಾರ್ಯ ಚಟುವಟಿಕೆಗಳು ಬಹಳ ಪ್ರಾಮುಖ್ಯತೆಯನ್ನುಗಳಿಸುತ್ತದೆ. ವಿಶೇಷವಾಗಿ ಉಡುಪಿಯ ಯಕ್ಷಗಾನ ಕಲಾರಂಗ ಆರೀತಿಯಲ್ಲಿ ಕಾರ್ಯ ಪ್ರವೃತ್ತವಾಗಿದೆ ಎಂಬುದು ಶ್ಲಾಘನೀಯ. ಹಾಗಾಗಿ ಯಕ್ಷಗಾನ ಕಾರ್ಯಕ್ರಮವಾಗಿ  ನೋಡದೇ ಇದನ್ನು ಅತ್ಯಂತ ವಿಶಿಷ್ಟ ಕಾರ್ಯಕ್ರಮ ಎಂದು ಪರಿಗಣಿಸಿ ಆ ದೃಷ್ಟಿಕೋನದಿಂದಲೇ ಅನುಭವಿಸಬೇಕು. ಇದೊಂದು ಅತ್ಯುತ್ತಮ ಅರ್ಥ ಪೂರ್ಣ ಸನ್ಮಾನ ಕಾರ್ಯಕ್ರಮ ಎಂದು ಹೇಳಬಹುದು.
 ಯಕ್ಷಗಾನಂ ಗೆಲ್ಗೆ



Thursday, November 6, 2014

ತಿರುಗಿತೈ ರಂಗಸ್ಥಳ...


ಮೊನ್ನೆ ಭಾನುವಾರ  ಮೊದಲದಿನ ಕಲ್ಲುಗುಂಡಿಯ ಆಟ, ಮರುದಿನ ಮುಂಜಾನೆ ಮೊದಲ ದಿನ ಶುರುವಾದ ಆಟ ಇನ್ನೂ ಮುಗಿದಿರಲಿಲ್ಲ. ಮಿತ್ರನಿಗೆ ಕರೆ ಮಾಡಿದೆ. ಫೋನ್ ತೆಗೆದಾಗ ಸ್ವಲ್ಪ ಹೊತ್ತು ಮಿತ್ರನ ಉಸಿರೇ ಇಲ್ಲ. ಬರೀ ಚೆಂಡೆಯ ಅಬ್ಬರದ ಶಬ್ಬ ಮೊಬೈಲ್ ಚಿಂದಿಯಾಗುವ ಹಾಗೆ ಕೇಳಿತು. ನಂತರ ಮಿತ್ರ ಹೇಳಿದ    ಹೆಚ್ಚಾಗಿ ತುಳುವಿನಲ್ಲೇ ನಮ್ಮ ಮಾತುಕತೆ......”ಭಯಂಕರ ಆಟ ಮಾರಾಯ್ರೆ ಈರೆಗ್ ಮಿಸ್ ಆಂಡ್” ಎನ್ನುತ್ತಾ ಭಯಂಕರ ಆಟ ಮಿಸ್ ಆದುದನ್ನು ವರದಿಮಾಡಿದ.

ಕಲ್ಲುಗುಂಡಿಯ ಆಟಕ್ಕೆ ಹೋಗದೆ ಇದ್ದರೆ ’ಮಿಸ್’ ಆಗುವುದು ಸಾಮಾನ್ಯ ಮಾತು. ಯಕ್ಷಗಾನ ಅಭಿಮಾನಿಗಳಲ್ಲಿ ಏನೋ ಕಳೆದುಕೊಂಡ ಅನುಭವ. ಹಾಗಾಗಿ ಅದು ಅತಿಶಯದ ಮಾತು ಎಂದೆನಿಸುವುದಿಲ್ಲ. ಆದರೆ ಮಿತ್ರನ ಮೊನ್ನೆಯ ಉದ್ಗಾರದಲ್ಲಿ ಏನೋ ವಿಶೇಷವೇ ಇತ್ತು. ಕುತೂಹಲದಿಂದ ಕೇಳಿದೆ.  ಆಗ ಹೇಳಿದ ಕಲ್ಲುಗುಂಡಿಯ ದಾಖಲೆಯ ಕುಣಿತ. ಸುತ್ತು ಸುತ್ತು  ಅರ್ಧ ಘಂಟೆ ಸುತ್ತಿದ ದಾಖಲೆಯ ಸುತ್ತುಗಾರಿಕೆಯನ್ನು. ಅವನ ಮಾತಿನಿಂದ ಇಡೀ ಕಲ್ಲುಗುಂಡಿಯೇ ತಿರುಗಿ ಬಿತ್ತೋ ಅನ್ನುವಂತಿತ್ತು. ಮಾತಿನ ಮಧ್ಯೆ ನಾನು ಮಿಸ್ ಮಾಡಿಕೊಂಡದ್ದು ಹಲವು ಸಲ ಸುಳಿದು ಹೋಯಿತು. ....ಆಮೇಲೆ ಕುತೂಹಲ ಮುಳ್ಳು ಬಲಿಯುತ್ತಾ ಹೋಗಿ ಚುಚ್ಚಲಾರಂಭಿಸಿತು. ಸುಮಾರು ಅರ್ಧ ಘಂಟೆ, ಸಾವಿರಕ್ಕೆ ಹತ್ತಿರದ ಗಿರಕಿ....ಛೇ ಹೇಗಿರಬಹುದು? ಹಲವು ಅದ್ಭುತಗಳಿಗೆ ಸಂಪಾಜೆ ಯಕ್ಷೋತ್ಸವ ಸಾಕ್ಷಿಯಾಗುವುದು ಹೊಸತೇನಲ್ಲ. ಆದರೂ ಇದು ವಿಚಿತ್ರ ಎನಿಸಿತು.  ಮೂರು ಬಾರಿ ಚೆಂಡೆ ಮದ್ದಲೆಯವರ ಬದಲಾವಣೆ.....ಭೋರ್ಗರೆದ ಕರತಾಡನ....ಮಿತ್ರ ಹೇಳುತ್ತಾ ಹೋದ ಮತ್ತೂ ’ಮಿಸ್’ ಹಲವು ಸಲ ಸುಳಿಯಿತು. ನನಗೆ ಇರಿಯುವುದಕ್ಕಾದರೂ ಹಲವು ಸಲ ಅದು ಸುಳಿಯುತ್ತಿರುತ್ತದೆ.
ಯಕ್ಷಗಾನದಲ್ಲಿ ಅದರಲ್ಲೂ ತೆಂಕು ತಿಟ್ಟು ಯಕ್ಷಗಾನದಲ್ಲಿ ಗಿರಕಿ ವೀರರು ಅಂತ ಹಲವು ಪುಂಡುವೇಷಧಾರಿಗಳು ತಮ್ಮದೇ ವೈಶಿಷ್ಟ್ಯವನ್ನು ಬೆಳಸಿಕೊಂಡಿದ್ದಾರೆ. ತೆಂಕು ತಿಟ್ಟಿನ ಅಬ್ಭರದ ಕುಣಿತದಲ್ಲಿ ಈ ಗಿರಕಿ ಕುಣಿತಕ್ಕೆ ಅದರದ್ದೇ ಆದ ಮಹತ್ವವಿರುತ್ತದೆ. ಚೆಂಡೆಯ ಪೆಟ್ಟಿಗೆ ಒಂದಷ್ಟು ಹೊತ್ತು ಪ್ರೇಕ್ಷಕನ ಎದೆಬಡಿತವನ್ನು ಹೆಚ್ಚಿಸುವ ರೀತಿಯಲ್ಲಿ ಕುಣಿದು ಬೆವರು ಸುರಿಸುವ ಕಲಾವಿದರು ಅದರಲ್ಲೇ ಧನ್ಯತೆಯನ್ನು ಕಾಣುತ್ತಾರೆ. ಅವರ ಕುಣಿತದಿಂದ ಅವರು ಬೆವರುವದ್ದು ವಿಶೇಷವಲ್ಲ  ಬಿಡಿ ಪ್ರೇಕ್ಷಕರೂ ಬೆವರಿಬಿಡುತ್ತಾರೆ.!!!  ಸುತ್ತಿ ಸುತ್ತಿ ಇದೀಗ ಇದು ಅರ್ಧ ಘಂಟೆ, ಹೇಗಿರಬಹುದು?
ಕುತೂಹಲ ತಣಿಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ, ತಂತ್ರಜ್ಞಾನದ ಸಾಕ್ಷಿ ಎಂಬಂತೆ ಸ್ವಲ್ಪ ಹೊತ್ತಿನಲ್ಲೇ ವಾಟ್ಸಪ್ ನಲ್ಲಿ ವೀಡಿಯೋ ಬಂದೇ ಬಿಟ್ಟಿತು. ಕುತೂಹಲ ತಣಿದದ್ದು ಮಾತ್ರವಲ್ಲ ಅದರ ಜತೆಗೆ ಮತ್ತೂ ಕೆಲವು ಯೋಚನೆಗಳು ಹುಟ್ಟಿಕೊಂಡುಬಿಟ್ಟಿತು. ಇಲ್ಲಿ ’ಮಿಸ್’ ಆದದ್ದು ಏನು ಎಂಬುದು ವಿವೇಚನೆಯಿಂದ ಕಾಣಬೇಕಾದವಿಚಾರ,  ನೋಡುತ್ತಿದ್ದಂತೆ ಪ್ರಾಮಾಣಿಕವಾಗಿ ಅನ್ನಿಸಿದ್ದು ಮಿಸ್ ಆದದ್ದೇ ಅದೃಷ್ಟ ಎನ್ನಬೇಕು.  
ಯಕ್ಷಗಾನದಲ್ಲಿ ಒಂದು ಸಂಪ್ರದಾಯ ಇದೆ. ಯಾವುದೇ ವೇಷಧಾರಿಗಳು ರಂಗ ಪ್ರವೇಶೀಸುವಾಗ ಜಾಗಟೆ,  ಚೆಂಡೆ ಮದ್ದಲೆ ಮುಟ್ಟಿ ನಮಸ್ಕರಿಸುತ್ತಾರೆ, ಇನ್ನು ಕೆಲವರು ಭಾಗವತರ ಕಾಲು ಹಿಡಿದು ಪ್ರವೇಶಿಸಿದ್ದೂ ಕಂಡಿದ್ದೇನೆ. ಇದು ಆರಂಭದಲ್ಲಿ ಕಲೆಗೆ ಸಲ್ಲಿಸುವ ಪ್ರಣಾಮ ಮಾತ್ರವಲ್ಲ ರಂಗ ಪ್ರವೇಶಕ್ಕೆ ಭಾಗವತರಾದಿ ಹಿಮ್ಮೇಳದವರ ಅಪ್ಪಣೆ ಪಡೆದುಕೊಳ್ಳುವ ಒಂದು ಸತ್ಸಂಪ್ರದಾಯ. ಆ ನಮಸ್ಕಾರ ಹಾಕಿದನಂತರ ಆತ ಗೆಜ್ಜೆ ಕಳಚುವ ತನಕ ರಂಗಸ್ಥಳದ ಒಂದು ಭಾಗವಾಗಿರುತ್ತಾನೆ. ಇದೆಲ್ಲ ಭಾವನಾತ್ಮಕವಾಗಿ ಅದರಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸಹಕಾರಿಯಾಗಿ ಪರಿಣಮಿಸುತ್ತದೆ. ಆದರೆ ಶಿಸ್ತು ನಿಯಮಗಳೆಲ್ಲ ಸಹಜವಾಗಿ ಹಲವು ಸಲ ಅತಿಕ್ರಮಿಸಲ್ಪಡುತ್ತದೆ. ನಿಯಮಗಳು ಅದರಲ್ಲೂ ರೂಢಿಯಲ್ಲಿ ಬಂದವುಗಳಾದರೆ ಅವುಗಳು ಅತಿಕ್ರಮಿಸುವುದಕ್ಕೆ ಇರುವುದೇನೋ ಎಂಬ ಭಾವನೆ ಹಲವು ಸಲ ಕಂಡುಬರುತ್ತದೆ.
ಮೊನ್ನೆ ಆರಂಭದಲ್ಲಿ ಸಹಜವಾಗಿ  ಪದಕ್ಕೆ ತಕ್ಕ ಸುಂದರವಾದ ಕುಣಿತದ ಪ್ರಸ್ತುತಿಯಾಯಿತು. ಯಾವಾಗ ಸ್ಪರ್ಧೆಯ ಕಿಚ್ಚು ಹೊತ್ತಿಕೊಂಡಿತೂ ಮತ್ತೆ ಎಲ್ಲವೂ ಬದಿಗೆ ಸರಿಸಲ್ಪಟ್ಟಿತು. ಇಲ್ಲಿ ಒಂದು ಕ್ಷಣವಾದರೂ ಶಿಸ್ತು ಅತಿಕ್ರಮಿಸಲ್ಪಟ್ಟಿತು ಎಂಬುದನ್ನು ಯಾರೂ ಒಪ್ಪಲೇಬೇಕಾಗುತ್ತದೆ.  ಯಾರ ಸೋಲು ಯಾರ ಗೆಲುವು ಇದುವೇ ಪರಮ ನಿರ್ಣಯಾತ್ಮಕವಾಗಿ ಸ್ಪರ್ಧೆಯ ಕಿಚ್ಚಿಗೆ  ಇಂಧನವನ್ನು ಒದಗಿಸುತ್ತಾ ಹೋಯಿತು. ಹಿಮ್ಮೇಳದವರೂ ಇದನ್ನು ಗಂಭೀರವಾಗಿ ಸವಾಲಾಗಿ ಸ್ವೀಕರಿಸಿದ್ದು ಒಬ್ಬರ ಬದಲಿಗೆ ಇನ್ನೊಬ್ಬರು ಜವಾಬ್ದಾರಿಯನ್ನು ಹೆಗಲಿಗೇರಿಸಿದಾಗಲೇ ಅರಿವಾದದ್ದು !! ಒಂದು ಸರ್ವ ಕಾಲಿಕ ದಾಖಲೆಯ ಅಕ್ಷರಗಳು ಮುದ್ರಿಸಲ್ಪಟ್ಟರೆ ಇದರ ಲಾಭನಷ್ಟಗಳು ವಿವೇಚನೆಗೆ ಮೀಸಲಾಗಿರಿಸುವಂತೆ ಏರ್ಪಟ್ಟಿತು.   ಮನಸ್ಸಿನ ಮೂಲೆಯಲ್ಲಿ ಹುಟ್ಟಿಕೊಂಡ ಒಂದು ರೀತಿಯ ಕಳವಳ ಆಶ್ಚರ್ಯ ಮತ್ತು  ದಿಗಿಲಿನ ಗಾಳಿಗೆ ತೃಣದ ಚಿಗುರು ಮರೆಯಾಗಿ ನಿಂತಂತೆ ಭಾಸವಾಯಿತು. ಗಾಳಿಯ ರಭಸ ಕಡಿಮೆಯಾದ ಮೇಲೆ ಈ ಚಿಗುರು ಬೆಳಕಿಗೆ ಮೈ ಒಡ್ಡಿ ಅನುಮಾನದ ಪ್ರಶ್ನೆಗಳನ್ನು ಎಸೆಯಬಹುದೇ?  ಅದೂ ಇಲ್ಲಿ ಅನುಮಾನ. ಹಲವು ಸಲ ನಾವು ಏನನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದೇ ಅರಿವಿಗೆ ಬರುವುದಿಲ್ಲ.!!!  

ಯಕ್ಷಗಾನದಲ್ಲಿ ಹಿಮ್ಮೇಳಕ್ಕೆ ಅದರಲ್ಲೂ ಭಾಗವತನಿಗೆ ಪ್ರಶ್ನಾತೀತ ನಿಯಂತ್ರಕ ಸ್ಥಾನವಿರುತ್ತದೆ. ಹಿಮ್ಮೇಳವನ್ನು ಹಿಂದಿಕ್ಕಿ ಮುಮ್ಮೇಳ ವಿಜ್ರಂಭಿಸಿದರೆ ಅದು ಯಕ್ಷಗಾನವಾಗಿ ಉಳಿಯುವುದಕ್ಕೆ ಮತ್ತು ಅಸ್ವಾದಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಒಂದುವೇಳೆ ಅದು ಅಸ್ವಾದಿಸಲ್ಪಟ್ಟರೆ ಅಥವಾ ಅಸ್ವಾದಿತವಾದರೆ ನಿಟ್ಟುಸಿರು ಮಾತ್ರ ಉತ್ತರವಾಗುತ್ತದೆ. ಹಾಗಿರುವಾಗ ಪಾತ್ರಧಾರಿ ರಂಗ ಪ್ರವೇಶಿಸುವ ಮೊದಲು ಹಿಮ್ಮೇಳಕ್ಕೆ ಗೌರವ ಸೂಚಿಸುವುದಕ್ಕೆ ಅರ್ಥವಾದರೂ ಏನಿದೆ? ಇದು ಕೇವಲ ಔಪಚಾರಿಕ ಕ್ರಿಯೆ ಎಂದೇ ಭಾಸವಾಗುತ್ತದೆ.  ಅಲ್ಲವಾದರೆ ಇನ್ನು ಮುಂದೆ ಇದೆಲ್ಲ ನನ್ನ ನಿಯಂತ್ರಣದಲ್ಲಿ ಎಂದು ಪರೋಕ್ಷವಾಗಿ ಸಾರುವುದೇ? ಹಿಮ್ಮೇಳದ ಮೇಲೆ ಮುಮ್ಮೇಳ ಅತಿಕ್ರಮಣ ಗೈಯುವುದು ವಿಶೇಷವೇನೂ ಅಲ್ಲ, ಹಲವು ಸಲ ಇದು ಮನುಷ್ಯ ಸಹಜ ರಾಗ ದ್ವೇಷಗಳಿಂದ ಘಟಿಸಿ ಹೋಗಿಬಿಡುತ್ತದೆ. ಆವಾಗೆಲ್ಲ ಹಿಮ್ಮೇಳ ತನ್ನದೇ ರೀತಿಯಲ್ಲಿ ತನ್ನ ಪ್ರಾಮುಖ್ಯತೆಯನ್ನು ತೋರಿಸಿ ತನ್ನ ನಿಯಂತ್ರಣಕ್ಕೆ ತಂದುಕೊಂಡು ಯಕ್ಷಗಾನದ ಭವ್ಯತೆಯನ್ನು ಸಾರಿದ್ದೂ ಉಂಟು.
ಯಾರನ್ನೂ ನಿಮಿತ್ತವಾಗಿ ಇಲ್ಲಿ ಮಾಡುವ ಹಾಗಿಲ್ಲ.  ತಪ್ಪು ಒಪ್ಪುಗಳನ್ನು ಅವರವರ ಅಭಿರುಚಿಯೇ ನಿರ್ಣಯಿಸುತ್ತದೆ.  ಇದೆಲ್ಲ ಸಹಜವೆಂಬಂತೆ ಇದು ನಡೆದೂ ಬಿಡುತ್ತದೆ. ಅರ್ಥಹೀನತೆಗೂ ಅರ್ಥವನ್ನು ಕಂಡುಕೊಳ್ಳುವ ಯತ್ನವನ್ನು ಮಾಡುವ ಅನಿವಾರ್ಯತೆ ಬರುತ್ತದೆ.
ಆದರೂ...
ಇದರ ನಡುವೆ ಕೆಲವೊಂದು ವಿಷಯಗಳಿಗೆ ವಿಸ್ಮಯಗಳಿಗೆ ತಲೆದೂಗದೇ ಇರುವುದು ಸಾಧ್ಯವಿಲ್ಲ. ಯಕ್ಷಗಾನದಂತಹ ಒಂದು ಕಲೆಯಲ್ಲಿ ಹಲವು ವಿಸ್ಮಯವನ್ನುಂಟುಮಾಡುವ ವಿಚಾರಗಳಿವೆ. ನಿರಂತರವಾಗಿ ಏರು ಶೃತಿಯಲ್ಲಿ ಉಚ್ಚ ಸ್ಥಾಯಿಯಲ್ಲಿ ಹಾಡುವುದು,  ಯಾರೂ ವಿಸ್ಮಯ ಪಡಬಹುದಾದಂತಹ ಚೆಂಡೆ ಮದ್ದಲೆಗಳ ನುಡಿತ ಬಡಿತಗಳು,  ದಣಿವರಿಯದೆ ಬೆಳಗಿನ ತನಕ ರಂಗದ ಮೇಲೆ ಕುಣಿಯುವುದು ಛೇ ಒಂದೇ ಎರಡೇ ಹಲವಿದೆ. ಹೆಚ್ಚಿನ ಪ್ರತಿಭೆಗಳು ಪ್ರಪಂಚ ತಿಳಿಯದೇ ಹಾಗೇ ಉಳಿದುಕೊಂಡಿದೆ. ಆ ಪಟ್ಟಿಗೆ ಇದೂ ಸೇರಿಬಿಟ್ಟಿದೆ ಎನ್ನಬಹುದು. ಈ  ಅತಿಮಾನುಷ ಪ್ರತಿಭೆಗೆ ಬೆರಗಾಗದೇ ಇರುವ ಹಾಗಿಲ್ಲ. ಹೀಗಿದ್ದ ಪ್ರತಿಭೆಗಳೂ ಯಕ್ಷಗಾನದಲ್ಲಿ ಪೋಷಿಸಲ್ಪಟ್ಟಿದೆ ಎಂದರೆ ಯಕ್ಷಗಾನ ಎಂಬುದು ಕೇವಲ ಗ್ರಾಮ್ಯ ಅನಾಗರಿಕ ಕಲೆಯಲ್ಲ ಎಂದು ಸಾರಿಹೇಳಬಹುದು. ಆದರೆ  ಈ ಹಲವು ವಿಸ್ಮಯಗಳು ಯಕ್ಷಗಾನಕ್ಕೆ ಪೂರಕವಾಗಿ ಬೆಳವಣಿಗೆಯನ್ನು ಪ್ರಕಾಶವನ್ನೂ ಕಾಣುವಂತಾಗಬೇಕು. ಯಕ್ಷಗಾನವನ್ನು ಹಿಂದಿಕ್ಕಿ ಇದು ಓಡುವಂತಾಗಬಾರದು. ಹಾಗಾದರೆ, ಓರ್ವ ನಿಪುಣ ಕ್ರೀಡಾಳು ಓಟಗಾರ ಓಡುವಾಗ ತನ್ನ ಸೀಮಾರೇಖೆಗಳನ್ನು ಮೀರಿ ಓಡಿದರೆ ಏನಾಗಬಹುದು? ಅವನ ಓಟ ಎಷ್ಟೇ ವೇಗವನ್ನು ಪಡೆದಿರಲಿ ಅದಕ್ಕೆ ಮೌಲ್ಯವಿಲ್ಲದೇ ಮನ್ನಣೆಯಿಲ್ಲದೇ ಹೋಗುತ್ತದೆ.  ಕಲೆಯನ್ನು ಮೀರಿ ಕಲಾವಿದ ಬೆಳೆಯಬಾರದು. ಅದು ಎಲ್ಲ ಕಲೆಗೂ ಅನ್ವಯವಾಗುತ್ತದೆ. ಕಲಾವಿದನಲ್ಲಿ ಆ ಪ್ರವೃತ್ತಿ ಲವಲೇಶವೂ ಇದ್ದಲ್ಲಿ ಅಲ್ಲಿ ಕಲೆ ಗೌರವವನ್ನು ಕಂಡುಕೊಳ್ಳುವುದಿಲ್ಲ. ಮೀನು ನೀರಲ್ಲಿದ್ದಾಗ ಮಾತ್ರ ಅದಕ್ಕೆ ಜೀವಬಲವಿರುತ್ತದೆ. ನೀರಿನಿಂದ ಹೊರಬಂದಾಗ ಅದು ಬೃಹತ್ ತಿಮಿಂಗಿಲವಾದರೂ ಸರಿ, ಅದರ ಗಾತ್ರ ಅಥವಾ ಸಾಮಾರ್ಥ್ಯ ಜೀವವನ್ನು ಉಳಿಸಿಕೊಳ್ಳುವುದರಲ್ಲಿ ಸಹಕಾರಿಯಾಗುವುದಿಲ್ಲ.

ಇಂತಹ ಸಾಮಾನ್ಯ ಚಿಂತನೆಗಳು ಅರಿವಿಲ್ಲದೇ ಇರುವ  ಅಥವಾ ಅದನ್ನು ಪುರಸ್ಕರಿಸದೇ ಇರುವ ಸಂಸ್ಕೃತಿ ನಮ್ಮದ್ದಲ್ಲ.  ಯಕ್ಷಗಾನದಲ್ಲಿ ಸ್ಪರ್ಧಾತ್ಮಕ ಪ್ರವೃತ್ತಿ ಇರಬೇಕು. ಅದು ಕಲೆಗೆ ಪೂರಕವಾಗಿರಬೇಕು. ಸ್ಪರ್ಧೆಯ ತುಡಿತವಿದ್ದಲ್ಲಿ ಇನ್ನೂ ಉತ್ತಮವಾದದ್ದು ಚಿಮ್ಮಿಕೊಂಡು ಅರಳುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಸ್ಪರ್ಧಾತ್ಮಕ ಮನೋಭಾವದಲ್ಲಿ ಹಿಂದಿಕ್ಕುವ ಹುಮ್ಮಸ್ಸು ಇರಬಾರದು. ಸೋಲು ಗೆಲುವಿನ ಸ್ಪರ್ಧೆಯಾದಾಗ ಅಲ್ಲಿ ವೈಷಮ್ಯ ಹುಟ್ಟಿಕೊಳ್ಳುತ್ತದೆ. ಆಗ ಸ್ಪರ್ಧೆ ಕೇವಲ ರಂಗಕ್ಕೆ ಮತ್ತು ಕಲಾವಿದನಿಗೆ ಸೀಮಿತವಾಗಿ ಉಳಿಯುವುದಿಲ್ಲ. ಸ್ಪರ್ಧೆ ಇರಲಿ ಆದರೆ ಅದು ಸೋಲಿಸುವ ಸ್ಪರ್ಧೆಯಾಗದೇ ಸಮಷ್ಟಿಯಲ್ಲಿ ಕಲೆಗೆಲುವಿನತ್ತ ಮುಖ ಮಾಡುವಂತಾಗಬೇಕು. ಹಾಗಾಗಿಯೇ ನಾವು ಅಂತ್ಯದಲ್ಲಿ ಹೇಳುವ ಮಾತೊಂದಿದೆ ’ಯಕ್ಷಗಾನಂ ಗೆಲ್ಗೆ’ ಇದು ಜೀವಂತವಾಗಿಯೂ ಕ್ಷೇಮವಾಗಿಯು ಬಾಳಲಿ ಎಂಬುದೇ ಇಲ್ಲಿನ ಆಶಯ.  

Friday, October 31, 2014

ಪಿತಾಮಹನ ದುಃಸ್ವಪ್ನ


          ಯಕ್ಷಗಾನದಲ್ಲಿ ಭೀಷ್ಮ ಪರ್ವ ಮತ್ತು ಭೀಷ್ಮಾರ್ಜುನ ಹೀಗೆ  ಮೇಲ್ನೋಟಕ್ಕೆ ಒಂದೇ ತೆರನಾಗಿ ಕಾಣುವ ಪ್ರಸಂಗಗಳಿವೆ.  ಈ ಎರಡು ಪ್ರಸಂಗಗಳೂ ತಾಳಮದ್ದಲೆ ಕ್ಷೇತ್ರದಲ್ಲಿ ಜನಪ್ರಿಯ ಪ್ರಸಂಗಗಳು. ಯಕ್ಷಗಾನ ಅರ್ಥ ಸಾಹಿತ್ಯಕ್ಕೆ ಸಂಪನ್ಮೂಲವನ್ನು ಒದಗಿಸಿದಂತಹ ಪ್ರಸಂಗಗಳು. ಭೀಷ್ಮಾರ್ಜುನದಲ್ಲಿ ಕೌರವನ ಒಡ್ಡೋಲಗ, ಭೀಷ್ಮ ಸೇನಾಧಿಪತ್ಯ,  ಕರ್ಮಬಂಧ, ಭೀಷ್ಮಾರ್ಜುನ ಹೀಗೆ ನಡೆದರೆ, ಭೀಷ್ಮ ಪರ್ವದಲ್ಲಿ ಕೌರವನ ಒಡ್ದೋಲಗ, ಭೀಷ್ಮ ಸೇನಾಧಿಪತ್ಯ ಭೀಷ್ಮಾರ್ಜುನ ಕಾಳಗ, ಭೀಷ್ಮ ಶರಶಯ್ಯೆ. ಈ ಪ್ರಸಂಗಗಳಿಂದ ಕ್ರೋಢೀಕರಿಸಿ ಅದನ್ನು ಸಮನ್ವಯಗೊಳಿಸಿ ಮತ್ತು ವಿಶ್ಲೇಷಣೆಗಳೊಂದಿಗೆ ಯಕ್ಷಗಾನ ಅರ್ಥ ಸಾಹಿತ್ಯದ ಶ್ರೀಮಂತಿಕೆಯನ್ನು ಬಿಂಬಿಸಿ ಅದನ್ನು ಸಾಂಕೇತಿಕವಾಗಿ ತೋರಿಸುವ ಪ್ರಯತ್ನವಿದು.

 ಯಕ್ಷಗಾನ ತಾಳಮದ್ದಲೆಯ ಅರ್ಥಗಾರಿಕೆಯ ಯಥಾವತ್ ಹಾಗೇ ತೆರೆದಿಡುವುದು ಸಾಧ್ಯವಾಗದ ಮಾತು. ಹಾಗೆಂದು ಕೇವಲ ವೈಶಿಷ್ಟ್ಯವನ್ನಷ್ಟೇ ತೋರಿಸಿದರೆ ಅದು ಒಂದು ರೀತಿಯ ಅಪೂರ್ಣ ದರ್ಶನವೇ ಆಗಿಬಿಡುತ್ತದೆ.  ಆದರೂ ಈ ಪ್ರಪಂದೊಳಗೆ ಸಂಚರಿಸುವಾಗ ಆಗುವ ವಿಚಿತ್ರ ಆಹ್ಲಾದತೆಯ ಅನುಭವವನ್ನು  ವಿಶ್ಲೇಷಣೆಯ ರೂಪದಲ್ಲಿ ತೋರಿಸುತ್ತಾ ಆ ಮೂಲಕ ಅರ್ಥಗಾರಿಕೆಯ ವೈಶಿಷ್ಟ್ಯವನ್ನು ಕಂಡಂತೆ ತೋರಿಸುವುದು ಸಾಧ್ಯವಾಗುತ್ತದೆ. ಇದು ಸಮಗ್ರವಾದ ತಾಳ ಮದ್ದಲೆಯಾಗಲೀ ಅರ್ಥಗಾರಿಕೆಯಾಗಲಿ ಆಗುವುದಿಲ್ಲ. ವಿವಿಧ ತಾಳಮದ್ದಲೆಯಲ್ಲಿ ಕಂಡುಕೊಂಡ ವೈಶಿಷ್ಟ್ಯತೆಯಷ್ಟೇ ಇಲ್ಲಿ ಆಹಾರ್ಯ ವಸ್ತುಗಳಾಗಿವೆ. ಅರ್ಥ ಪ್ರಪಂಚದಲ್ಲಿ ವಿಹರಿಸುತ್ತ,  ಅನುಭವಿಸುತ್ತ ಮತ್ತು ದೃಷ್ಟಿಗೆ ಗೋಚರಿಸಿದ್ದನ್ನು ಪರಾಂಬರಿಸುತ್ತ ಅದನ್ನು ವಿವರಿಸುತ್ತಾ ಹೋಗುವುದು ಒಂದು ವಿಶಿಷ್ಟ ಅನುಭವವಾಗಿ ಪರಿಣಾಮವನ್ನು ಬೀರುತ್ತದೆ. ಆರಂಭಿಸುವಾಗ ಇದು ಹೇಗೆ ರೂಪೀಕರಿಸಬಹುದು ಎಂಬ ಬಗ್ಗೆ ಸ್ಪಷ್ಟ ಕಲ್ಪನೆಯೇ ಇರಲಿಲ್ಲ. ಯಾಕೆಂದರೆ ಹಲವನ್ನು ಸಮನ್ವಯಗೊಳಿಸಿ ಅದಕ್ಕೊಂದು ಸ್ಪಷ್ಟ ಆಕಾರವನ್ನು ರೂಪಿಸಿ ಮತ್ತು ಅದನ್ನು ಬರಹ ರೂಪದ ಪುಟಗಳಿಗೆ ಸೀಮಿತಗೊಳಿಸುವುದು ಬಹಳ ಸಾಹಸದ ಕೆಲಸ ಅಂತ ಈಗ ಅನ್ನಿಸತೊಡಗಿದೆ. ಆದರೂ ಯಥಾಶಕ್ತಿಯ ಪ್ರಯತ್ನ ಮಾತ್ರ ಇಲ್ಲಿ. ಅದೆಷ್ಟು ಬಗೆಯಲ್ಲಿ ಪರಿಣಾಮಕಾರಿಯಾಗಿದೆಯೋ ತಿಳಿಯದು.  ಇದು ಯಕ್ಷಗಾನ ತಾಲಮದ್ದಲೆಗಳಲ್ಲಿ ಪಾತ್ರವೊಂದು ಹೇಗೆ ತೆರೆದುಕೊಳ್ಳುತ್ತದೆ ಅದರ ವೈಶಿಷ್ಟ್ಯತೆಯ ಸಂಕ್ಷೇಪ ವಿವರಣೆಯನ್ನಷ್ಟೇ ಇಲ್ಲಿ ಬರೆಯಲಾಗಿದೆ. ಬರವಣಿಗೆಗೆ ಅನುಕೂಲವಾಗುವಂತೆ ಆ ಬಗೆಯಲ್ಲಿ ಸ್ವಲ್ಪ ಸ್ವಾತಂತ್ರ್ಯವನ್ನು ಉಪಯೋಗಿಸಿಕೊಳ್ಳಲಾಗಿದೆ.   ಹಾಗಾಗಿ ಭೀಷ್ಮನ ಪಾತ್ರದ ದೃಷ್ಟಿಕೋನವನ್ನು ಆಧರಿಸಿ ವಿಶ್ಲೇಷಣೆಯನ್ನು ಚಿತ್ರಿಸುವ ಪ್ರಯತ್ನವಿದು.  ಅರ್ಥಗಾರಿಕೆಯ ಸವಿಯನ್ನು ಸವಿಯುವುದಷ್ಟೇ ಇಲ್ಲಿಯ ಮೂಲ ಉದ್ದೇಶ.

ಭಾಮಿನಿ
ಅರಸ ಕೇಳಾ ಕ್ಷಣದಿ ಭೀಷ್ಮನು |
ಕುರುಪತಿಯೊಳಿಂತೆಂದ ವೇಗದಿ |
ಕರಿ ತುರಗ ರಥ ಪತ್ತಿ ಮಹರಥರೆಲ್ಲ ಪೊರಮಡಲಿ ||
ಸುರನರೋರಗರೆಲ್ಲ ಮೆಚ್ಚುವ |
ತೆರದಿ ರಿಪುಸೇನೆಯಲಿ ಹಳಚುವೆ |
ಕರಿಗೆ ಬೆದರುವುದುಂಟೆ ಕಂಠೀರವನು ಸಂಗರದಿ||

ಎಂದು ಭೀಷ್ಮನು ಹರಿನಾದಗೆಯ್ಯುತ್ತ |
ಚಂದದಿಂದಲೆ ಧರಿಸಿ ಚಾಪವ | ಸ್ಯಂದನವ ತಾನೇರಿದ ||
ಮಕ್ಕಳ ಜಗಳವನ್ನು ನೋಡಲಾರೆ, ಇದು ಚಂದ್ರವಂಶದ ಅಪಜಯವೆಂದು ಭೀಷ್ಮ ತಳಮಳಿಸುತ್ತಾ ರಥವನ್ನು ಏರಿದ.ಆದರೆ ಇತ್ತ ಧೃತ ರಾಷ್ಟ್ರ ಮಕ್ಕಳ ಜಗಳವನ್ನು ನಿಲ್ಲಿಸುವುದಕ್ಕೆ ಪ್ರಯತ್ನಿಸಬೇಕಾದವನು,  ಯಾವುದನ್ನೂ ಯಾವ ಪಿತಾಮಹನಾದವನು  ನೋಡಲು ಬಯಸಬಾರದೋ ಅಥವಾ ಬಯಸುವುದಿಲ್ಲವೋ, ಆ ದುರಂತವನ್ನು ಕಣ್ಣಾರೆ ಕಾಣಲಾರೆನಲ್ಲಾ ಎಂದು ಪರಿತಪಿಸುತ್ತಾನೆ!!. ಕಾಣಬಾರದದ್ದನ್ನು ಬಲವಂತವಾಗಿ ಕಾಣುವ ತುಡಿತ ಅವನಿಗೆ, ಅದಕ್ಕಾಗಿ ಸಂಜಯ ಕಣ್ಣಾಗಿ ದೊರೆತ. ಜನ್ಮಾಂಧತೆಯನ್ನು ಆ ಒಂದು ಕ್ಷಣವಾದರೂ ವರವೆಂದು ತಿಳಿಯಲಾರದೇ ಹೋದ. ಆಮೂಲಕ ತಾನು ಕೇವಲ ಕಣ್ಣಿನಿಂದ ಮಾತ್ರ ಅಂಧನಲ್ಲ ಎಂದು ತೋರಿಸಿಕೊಡುತ್ತಾನೆ.  ತನ್ನ ಮಕ್ಕಳು ವಾಯು ಪುತ್ರನ ತೋಳ ಹಸಿವಿಗೆ ಬಲಿಯಾಗುವುದನ್ನು ಕಾಣುವ ದುರ್ದೈವವನ್ನು ಆತ ಕೇಳಿ ಪಡೆದುಕೊಳ್ಳುತ್ತಾನೆ.
ಒಂದು ಸೇನೆ ಭೀಷ್ಮಾಭಿರಕ್ಷಿತಂ ಎಂದು ಕರೆಸಿಕೊಂಡರೆ ಇನ್ನೊಂದು ಭೀಮಾಭಿರಕ್ಷಿತಂ. ಆದರೂ ಇದು ಅಪರ್ಯಾಪ್ತವೆಂದು ಎಲ್ಲರಿಗೂ ತಿಳಿದ ವಿಚಾರ. ಹಾಗಿದ್ದರೂ ರಕ್ಷಕ ಎಂಬ ವೇಷಮಾತ್ರವೇ?
          ಕುರು ಕುಲ ವೃದ್ಧ ಸೇನಾನಿ ರಥವನ್ನು ಏರುವುದರೊಂದಿಗೆ ಅದಕ್ಕಾಗಿ ಕಾಯುತ್ತಿದ್ದ ಪಟುಭಟರೆಲ್ಲ ಯುದ್ಧೋತ್ಸಾಹವನ್ನು ತೋರುತ್ತಿದ್ದರು. ಶರಧಿತುಲ್ಯವಾಗಿ ಸೇರಿದ ಸೇನೆಯನ್ನು  ಭೀಷ್ಮ ಅವಲೋಕಿಸುತ್ತಾನೆ. ಒಬ್ಬೊಬ್ಬರ ಹಿನ್ನೆಲೆಯೂ ಒಂದೊಂದು ಬಗೆಯದು. ಉತ್ಸಾಹ ಸಮುದ್ರಘೋಷದಂತೆ ಮೊಳಗುತ್ತಿದೆ. ಯೋಚಿಸುತ್ತಾನೆ ಭೀಷ್ಮ.  ಯುದ್ದದ ಮೊದಲ ಪ್ರಹಾರ ಎಲ್ಲಿಂದ ತೊಡಗುತ್ತದೋ ಎಂಬ ಕುತೂಹಲದಲ್ಲಿತ್ತು ಸೇನೆ. ಬಹುಶಃ ಶ್ರೀಕೃಷ್ಣನ ಸಂಧಾನ ಯಶಸ್ವಿಯಾಗಿ ಕೌರವ ಪಾಂಡವರ ದಾಯಾದಿ ಕಲಹ ಸಾಮರಸ್ಯದಲ್ಲಿ ಅಂತ್ಯವಾಗಿ ಈ ಯುದ್ದ ಘಟಿಸದೇ ಇರುತ್ತಿದ್ದರೆ ಕಾಣುತ್ತಿರುವ ಈ ಉತ್ಸಾಹ ಎಲ್ಲಿ ಅಡಗಿರುತ್ತಿತ್ತು? ಈ ಅಣ್ಣತಮ್ಮಂದಿರ ದ್ವೇಷ, ಚಂದ್ರವಂಶದ ಕೌಟುಂಬಿಕ ಕಲಹ ಕೇವಲ ನಿಮಿತ್ತವಾಗಿ ಪರಿಣಮಿಸಿತೇ? ಇಲ್ಲವಾದರೆ ಯಾಕೀ ಉತ್ಸಾಹ?  ಇಲ್ಲಿ ಕೇವಲ ಪಾಂಡವ ಕೌರವ ದ್ವೇಷ ಮಾತ್ರವೇ? ತಮ್ಮ ದ್ವೇಷ ಸಾಧನೆಗೆ ಈ ದಾಯಾದಿ ವೈಷಮ್ಯ ಇವರಿಗೆಲ್ಲ ಮಾಧ್ಯಮವಾಗಿ ಪರಿಣಮಿಸಿತಲ್ಲ? ದ್ರೋಣ, ದ್ರುಪದ ದ್ರುಷ್ಟದ್ಯುಮ್ನ  ಆ ಅಶ್ವಸೇನ ಈ ಎಲ್ಲ ವ್ಯಕ್ತಿತ್ವಗಳ ಸಂಘರ್ಷದ ಮುಂದುವರಿಕೆ ಇಲ್ಲಿಯೂ ಆಗದೇ ಇರಲು ಸಾಧ್ಯವೇ?  ಲೋಕ ಪ್ರಸಿದ್ಧವಾದ ಕರ್ಣಾರ್ಜುನರ ಸ್ಪರ್ಧೆ ವೈಷಮ್ಯದತ್ತ ತಿರುಗಿ ಅದರ ಪ್ರಭಾವ ಇಲ್ಲಿಯೂ ಮುಂದುವರಿಯದೇ ಇರಲು ಸಾಧ್ಯವೇ? ಕಣ್ಣಿಗೆ ಕಾಣದ ಅದೆಷ್ಟು ವೈಷ್ಮಮ್ಯಗಳು ತಮ್ಮ ಸಾಧನೆಗೆ ಈ ಯುದ್ದವನ್ನೇ ಎದುರು ನೋಡುತ್ತಿದೆ?   ಒಂದು ವೇಳೆ ಈ ಯುದ್ದ ಘಟಿಸದೇ ಇರುತ್ತಿದ್ದರೆ ಈ ದ್ವೇಷದ ಅಂತರಂಗದ ಉರಿ ಶಮನವಾಗುತ್ತಿತ್ತೇ? ಸಾಧ್ಯವಿಲ್ಲ. ಈ ಯುದ್ದ ನಿಂತರು ಇಂಥ ಹಲವು ವೈಷಮ್ಯಗಳು ಹಾಗೇ ಉಳಿದು,  ಸಾಧನೆಗೆ ಬೇರೆ ಮಾರ್ಗವನ್ನು ಕಂಡುಕೊಂಡು ಹೊಸ ಆಯಾಮವನ್ನು ಸೃಷ್ಟಿಸುತ್ತಿದ್ದವು. ಯುದ್ದ ನಿಂತರು ಇವರ ದ್ವೇಷ ನಿಲ್ಲಿತ್ತಿರಲಿಲ್ಲ. ಹಾಗಾದರೆ ಈ ಅಣ್ಣತಮ್ಮಂದಿರ ಕಲಹ ಇವರಿಗೆ ತಮ್ಮ ದ್ವೇಷ ಸಾಧನೆಗೆ ಒಂದು ರಂಗವನ್ನು ನಿರ್ಮಿಸಿಬಿಟ್ಟಿತಲ್ಲ. ಚಂದ್ರವಂಶದ ರಾಜಾಶ್ರಯ ಬಗೆ ಹರಿಯದ ಈ ಶತ್ರುತ್ವಕ್ಕೂ ಒದಗಿ ಬಂತಲ್ಲ? ಏನು ವಿಪರ್ಯಾಸ. ಆ ಕರ್ಣ ಏನು ಹೇಳಿದ?  ಒಂದು ವೇಳೆ ಈ ಯುದ್ದ ನಡೆಯದೇ ಇದ್ದರೂ ಕರ್ಣಾರ್ಜುನರ ಕಾಳಗ ಅದು ನಡೆದೇ ನಡೆಯುತ್ತದೆ. ಕಚ್ಚಾಡುವುದಕ್ಕೂ ಈ ಮನುಷ್ಯನಿಗೆ ಅದೇನು ಉತ್ಶಾಹ?  ಈಗ ತಾನು ತನ್ನ ಉತ್ಸಾಹವನ್ನು ಪ್ರಕಟ ಪಡಿಸಿ ಈ ಉತ್ಸಾಹಗಳಿಗೆ ಮುನ್ನುಡಿ ಬರೆಯಲೇಬೇಕಿದೆ. ಅದೂ ಒಂದು ಅನಿವಾರ್ಯತೆ. ಈಗ ಸ್ವತಃ ಯುದ್ದೋತ್ಸಾಹ ಮೂಡಿಸುವುದಕ್ಕೆ ಭೀಷ್ಮ ತನ್ನ ಶಂಖವನ್ನು ಮೊಳಗಿಸುತ್ತಾನೆ.  ಆವರೆಗೆ ಯುದ್ದ ಬೇಡ ಎಂದು ಹೇಳುತ್ತಿದ್ದ ಭೀಷ್ಮ,  ಈಗ ತಾನೇ ಸ್ವತಃ ಯುದ್ದದ ಕಿಡಿಯನ್ನು ಹಚ್ಚಿ ಬಿಡುತ್ತಾರೆ.  ಕೈಯಲ್ಲಿ ಧನು ಶರಗಳನ್ನು ಹಿಡಿದ ಮೇಲೆ ಭೀಷ್ಮರ ಕಣ್ಣಿಗೆ ಬರೀ ಯುದ್ದವಷ್ಟೇ ಕಾಣುತ್ತದೆ. ತಮ್ಮ ಧನುಶರಗಳಿಗೆ ವೈರಿ ಎದೆಯ ಗುರಿಯನ್ನಷ್ಟೇ ತೋರಬಲ್ಲರು. ಭೀಷ್ಮರ ಶಂಖಧ್ವನಿಗೆ ಪ್ರತಿಧ್ವನಿ ಎಂಬಂತೆ ಶ್ರೀ ಕೃಷ್ಣ ಪಾಂಚ ಜನ್ಯವನ್ನು ಮೊಳಗಿಸಿದರೆ ಅರ್ಜುನ ದೇವದತ್ತವನ್ನು ಮೊಳಗಿಸುತ್ತಾನೆ. ಆನಂತರ ಅನಂತ ವಿಜಯ,  ಮಣಿಘ್ಹೋಷ, ಸುಘೋಷ, ಮಣಿ ಪುಷ್ಪಕ ಶಂಖಗಳು ಒಂದರನಂತರ ಒಂದೊಂದಾಗಿ ಧ್ವನಿ ಎಬ್ಬಿಸುತ್ತವೆ.
ಭಾಮಿನಿ
ಪರಿಯ ನೋಡುತಲಿತ್ತ ಫಲುಗುಣ |
ಮರುತಸುತ ಸಾತ್ಯಕಿಯರೆಲ್ಲರು
ಧುರಪರಾಕ್ರಮರಾಗಿ ನಾವಿರೆ ವೈರಿಮೋಹರದಿ ||
ಅರಿಗಳೆಡೆ ಧರ್ಮಜನು ಸಾರುತ |
ಶರಣುವೊಕ್ಕನಿದೇನೆನುತ್ತಿರೆ |
ಪರಮರೋಷದಿ ಭೀಮ ಪಲ್ಗಡಿಯುತ್ತಲಿಂತೆಂದ ||
 ಇನ್ನೇನು ಯುದ್ದ ಆರಂಭವಾಗಬೇಕು ಎನ್ನುವಾಗ ಯಮಜನ ರಥ ಮಧ್ಯೆಯೇ ಬಂದು ನಿಂತು ಬಿಡುತ್ತದೆ. ಅದರಿಂದ ಆತ ನಿಧಾನವಾಗಿ ಇಳಿದು ಭೀಷ್ಮರ ರಥದತ್ತ ನಡೆದು ಬರಲಾರಂಭಿಸಿದ. ಎರಡೂ ಸೇನೆಯ ನಡುವೆ ಅವ್ಯಕ್ತವಾದ ಗೊಂದಲ ಕೋಲಾಹಲ ಆರಂಭವಾಗಿಬಿಟ್ಟಿತು. ಧರ್ಮಜನ ಈ ಹೆಜ್ಜೆಯ ಉದ್ದೇಶವಾದರೂ ಏನು? ಧರ್ಮಜನ ಹೆಜ್ಜೆ ಎಂದರೆ ಅದು ವ್ಯರ್ಥ ಅಡಿಗಳಲ್ಲ. ಸ್ವತಃ ಭೀಷ್ಮರೂ ಸಂದೇಹಕ್ಕೆ ಒಳಗಾಗುತ್ತಾರೆ. ನೋಡುತ್ತಾರೆ, ಯುಧಿಷ್ಠಿರ ರಥವಿಳಿದು ನಿಧಾನವಾಗಿ ಭೀಷ್ಮರತ್ತವೇ ಬರುತ್ತಿದ್ದಾನಲ್ಲ. ಅಣ್ಣನ ನಡೆಯನ್ನು ನೋಡಿ ಭೀಮನೂ ಸಂದೇಹಕ್ಕೆ ಒಳಗಾಗುತ್ತಾನೆ. ಅಣ್ಣ ವೈರಿ ಪಾಳಯದತ್ತ ಶರಣಾಗತಿಗೆ ತೆರಳಿದನೆ? ಸಿಟ್ಟಿನಿಂದ ಗದೆಯನ್ನು ಎತ್ತಿ ವೈರಿಪಡೆಯನ್ನು ಚೆಂಡಾಡುವೆನೆಂದು ಮುಂಬರಿಯುತ್ತಾನೆ. ಹನುಮಂತ ಅವನನ್ನು ಸಾಂತ್ವಾನ ಪಡಿಸುತ್ತಾನೆ.

ಭೀಷ್ಮರು ಧನುಶರಗಳನ್ನು ಹೆಗಲಿಗೇರಿಸಿ ಬರುತ್ತಿರುವ ಯುದ್ದಿಷ್ಠಿರನನ್ನು ನೋಡುತ್ತಿದ್ದಂತೆ ಆತ ಹತ್ತಿರ ಬಂದು ಭೀಷ್ಮರ ಪದತಲಕ್ಕೆ ಎರಗುತ್ತಾನೆ. ಎರಗಿದವನು ಗುರುಹಿರಿಯರ ಮುಖ ನೋಡಿ ಯುದ್ದಾರಂಭಕ್ಕೆ  ಅನುಮತಿಯನ್ನು ಬೇಡುತ್ತಾನೆ. ಈಗ ಭೀಷ್ಮರು ತಬ್ಬಿಬ್ಬಾಗುತ್ತಾರೆ. ಎಂತಹಾ ಕ್ಷತ್ರಿಯ ಪುತ್ರನೀತ. ನಿಜಕ್ಕೂ ಈತ ಧರ್ಮಾತ್ಮ. ಅಭಿಮಾನದಿಂದ ಧರ್ಮರಾಯನನ್ನು ಹತ್ತಿರಕ್ಕೆಳೆದು ತಬ್ಪಿಕೊಳ್ಳುತ್ತಾರೆ. ಹರಸುತ್ತಾರೆ ಎಲ್ಲಿ ಧರ್ಮವಿದೆಯೋ ಅಲ್ಲಿ ಕೃಷ್ಣನಿದ್ದಾನೆ. ಎಲ್ಲಿ ಕೃಷ್ಣನಿದ್ದಾನೋ ಅಲ್ಲಿ ಜಯವಿದೆ. ಧರ್ಮ ಬೀರು ಧರ್ಮಾತ್ಮನಾಗಿ ವ್ಯವಹರಿಸಿದ. ಧರ್ಮರಾಯನ ಧರ್ಮ ಪ್ರಕಟವನ್ನು ಕಂಡು ಭೀಷ್ಮ ತೃಪ್ತನಾದರೂ ಆಗ ಭೀಷ್ಮ ಅನುಭವಿಸುವ ಧರ್ಮ ಸಂಕಟ ಕೌರವ ಅರಿಯದೇ ಹೋದ.  ಯಾವುದನ್ನು ಕನಸಿನಲ್ಲೂ ಕಾಣಬಾರದೆಂದು ಭೀಷ್ಮ ಪಿತಾಮಹನಾಗಿ ಭಾವಿಸಿದ್ದರೋ ಅದು ಘಟಿಸಿಯೇ ಹೋಯಿತು. ಹಲವಾರು ದುಃಸ್ವಪ್ನಗಳು..... ಸ್ವಪ್ನಗಳು ಇಂಥವೇ ಬೇಕೆಂಬ ಆಯ್ಕೆ ಇರುವುದಿಲ್ಲ. ಬೇಕೆಂದರೆ ಅದು ಬರುವುದೂ ಇಲ್ಲ, ಬೇಡವೆಂದರೆ ನಿಲ್ಲುವುದೂ ಇಲ್ಲ. ಈ ದುಃಸ್ವಪ್ನಗಳೇ ಭೀಷ್ಮನ ಪಾಲಿಗೆ ನನಸಾಗಿಹೋಯಿತೇ? ವಂಶ ವಿನಾಶದ ಘೋರ ವೈಫಲ್ಯದ ಕನಸು ವಾಸ್ತವದ ಸತ್ಯವಾಗಿ ಈಗ ಕುರುಕ್ಷೇತ್ರದಲ್ಲಿ ಎದುರು ನಿಂತಿದೆ. ನೋಡುತ್ತಾರೆ, ತಮ್ಮ ಕೈ ಕಂಪಿಸುತ್ತದೆ, ಹಲವರು ವ್ಯಾಖ್ಯಾನಿಸಬಹುದು ಅದು ವೃದ್ಧಾಪ್ಯದಿಂದ ಎಂದು. ವಂಶದ ಕುಡಿಗಳೂ ವಂಶ ವಿನಾಶದ ಕಲಹಕ್ಕೆ ತೊಡಗುವ ಈ ದುಃಸ್ವಪ್ನ ವಾಸ್ತವದ ಸತ್ಯವಾದರೆ ಕೈ ಕಂಪಿಸದೇ ಇದ್ದರೆ ಭೀಷ್ಮ ಚಂದ್ರವಂಶದ ಪಿತಾಮಹ ಎನಿಸಿಕೊಳ್ಳುವುದರಲ್ಲಿ ಅರ್ಥವಿದೆಯೇ?    
ದಿನವೊಂದಕ್ಕೆ ಹತ್ತು ಸಾವಿರ ಮುಕುಟಮರ್ದನರ ಶಿರವನ್ನು ಕತ್ತರಿಸುತ್ತಾನೆ ಭೀಷ್ಮ. ಪರೋಕ್ಷವಾಗಿ ಅಪಾರವಾದ ಸೈನ್ಯದಲ್ಲಿ ಮುಕುಟ ಮರ್ದನರನ್ನು ಅರಸಿ ಅರಸಿ ತರಿಯುತ್ತಾನೆ ಭೀಷ್ಮ. ಶರಧಿಯಲ್ಲಿ ಜಲಚರಗಳನ್ನು ಸರಿಸಿ ಮೀನನ್ನು ಹುಡುಕುತ್ತಾ....ಹುಡುಕುತ್ತಾ ಇನ್ನು ಏನೋ ಅರಸುತ್ತಾ ಅನ್ವೇಷಕನಂತೆ ಸಂಹರಿಸುತ್ತ ಮುಂದೊತ್ತುತ್ತಾನೆ.  ಆ ಅನ್ವೇಷಕನ ಎದುರಿಗೆ ಬಂದು ಬೀಳುವ ರತ್ನಗಳಲ್ಲಿ ಒಂದು ರತ್ನವೇ ಅಭಿಮನ್ಯು. ಭಾರತ ವರ್ಷದಲ್ಲೇ ಅಂತಹ ರತ್ನವನ್ನು ಅದುವರೆಗೆ ಭೀಷ್ಮ ಕಂಡವನಲ್ಲ. ಅದಕ್ಕೇ ಅಲ್ಲವೇ ಆತನನ್ನು ’ಭಾರತ ರತ್ನ’ ಎಂದು ಉಪಮೆಯಾಗಿಸಿದ್ದು.

ಬಂಧು ಮೋಹವನ್ನು ಬಿಡು. ಇವರು ಅಜ್ಜ, ಇವರು ಗುರು, ಇವರು ಮಿತ್ರರು ಇವರು ರಕ್ತಬಂಧುಗಳು ಎಲ್ಲ ಬಾಂಧವ್ಯವನ್ನು ಬದಿಗೊತ್ತಿ ಕ್ಷತ್ರಿಯನಾಗಿ ಆ ಧರ್ಮವನ್ನು ತಿಳಿ. ಇದು ಪಾರ್ಥನಿಗೆ ಪಾರ್ಥಸಾರಥಿಯ ಪ್ರತಿಜ್ಞೆ. ಹೀಗೆ ಹೇಳುವಾಗ ಭೀಷ್ಮ ಗಮನಿಸುತ್ತಾನೆ, ಕೃಷ್ಣನ ಕೈಗಳು ಬಹಳಷ್ಟು ಹೊತ್ತು ತನ್ನತ್ತಲೇ ಗುರಿ ಮಾಡುತ್ತದೆ. ಅಜ್ಜನಾಗಿ ಕಾಣಬೇಡ. ಶತ್ರುಪಕ್ಷದ ಸೇನಾನಿಯಾಗಿ ನೋಡು ವಿಜ್ರಂಭಿಸುತ್ತಾನೆ. ಅಜ್ಜನನ್ನು ಸೇನಾನಿಯಾಗಿ ವೈರಿಯಾಗಿ ಕಾಣು. ಇದು ಹರಿಯ ಪ್ರಚೋದನೆ. ಆ ಹರಿಗೆ ತನ್ನನ್ನು ಹರಿಯುವ ಬಯಕೆ!!

ಸೆರೆಯು ಸಿಕ್ಕಿದನರರೆಯಭಿಮನ್ಯುವೆಂದೆನುತ |
ಹರುಷದೊಳು ಗುರುಜಕೃಪ ದುಶ್ಯಾಸ ಮುಖ್ಯರ |
ಯ್ತರುತಿರಲು ಗಾಂಗೇಯನರಿತು ತನ್ನೊಳಗಾಗ ತರಳ ಮಹರಥನೀತನು ||
ಕುರುಕುಲದ ಬಾಲಕರೊಳಿವನ ಪೋಲುವರಿಲ್ಲ |
ಪರಮಸತ್ಕೀರ್ತಿಯುತನೆಂದು ಬಿಡಲಾ ಕ್ಷಣವೆ |
ಹರಿನಾದದಿಂ ಖಡ್ಗ ಝಳಪಿಸುತಲಭಿಮನ್ಯು ಸುರನದೀಸುತಗೆಂದನು ||
 ಆಗಲೇ ಯಾವ ಪ್ರಚೋದನೆಯೂ ಇಲ್ಲದೇ ಮರಿ ಸಿಂಹದಂತೆ, ಎದುರಿಗೆ ಬಂದು ಎದೆಯುಬ್ಬಿಸಿದನಲ್ಲಾ ಅದೇ ಪಾರ್ಥ ನಂದನ ಅಭಿಮನ್ಯು. ಕೇಳಿದನಲ್ಲಾ? ಅಜ್ಜಾ,, ಕೈ ನಡುಗುತ್ತಿದೆ, ಕಣ್ಣು ಮಂದವಾಗುತ್ತಿದ್ದೆ. ಕಾಲಿನ ಹೆಜ್ಜೆಯಲ್ಲಿ ಸ್ಥಿರತೆ ಇಲ್ಲ...ಆದರೂ ನಿಮಗೇಕೆ ಅಜ್ಜ ಈ ಯುದ್ಧ? ಯಾರೂ ಇವರೆಗೆ ಕೇಳದಿದ್ದ ಪ್ರಶ್ನೆ, ಕುರುಕುಲ ವೃದ್ಧ ಪಿತಾಮಹನಿಗೆ ಮೊಮ್ಮನ ಮೊಮ್ಮ ಕೇಳುವ ಪ್ರಶ್ನೆ ನಿಮಗೇಕೆ ಈ ಯುದ್ದ?  ಸುಯೋಧನ ಕೇಳಬೇಕಿತ್ತು ಕೇಳಲಿಲ್ಲ. ಬದಲಾಗಿ ಅಜ್ಜಾ ಹಿಡಿಯಿರಿ ಧನುಸ್ಸು.  ಯುದ್ದ ಮಾಡಿ, ಎಂದು ಹೇಳಿದ. ಹೇಳಿದ ಎಂದರೆ ಸಾಕೆ ಸಾಧ್ಯವಾದಷ್ಟು ಪ್ರಚೋದಿಸಿದ. ಹಸುವು ತನ್ನ ಕರುವನ್ನು ಹಾಯುತ್ತ ಅದನ್ನು ಮಲಗಿಸಿ ಮತ್ತೆ ನೆಕ್ಕುವ ಹಾಗೆ,, ಭೀಷ್ಮರು ಅಭಿಮನ್ಯುವನ್ನು ಸೋಲಿಸಿ ಕೈ ಕಟ್ಟಿ ಬಾಚಿತಬ್ಬಿಕೊಂಡು ಎದೆಗಾನಿಸುತ್ತಾರೆ.  ಎಂತಹಾ ಪುತ್ರರತ್ನ ಚಂದ್ರವಂಶದಲ್ಲಿ ಹುಟ್ಟಿಬಿಟ್ಟ? ಈ ಮಗುವಿನ ಹೃದಯದ ಬಡಿತ ಈವರೆಗೆ ಕೇಳಲಿಲ್ಲ. ಎಂತಹಾ ರತ್ನವಿದು. ಕೇಳಲೇಬೇಕಾದ ಹೃದಯದ ಬಡಿತ ಕೇಳಲಿಲ್ಲ. ಹೇಗೆ ಕೇಳಬಹುದು. ಈ ಮಗು ಹಸ್ತಿನಾವತಿಯನ್ನು ಕಂಡರೆ ತಾನೆ? ಹಸ್ತಿನಾವತಿಯಲ್ಲಿ ಬೆಳೆದರೆ ತಾನೆ? ಎಂತಹಾ ಶೌರ್ಯ? ಎಂತಹಾ ಧೈರ್ಯ? ಹೌದು ಇದು ಚಂದ್ರವಂಶದ ರಕ್ತ, ಪಾರ್ಥನ ರಕ್ತ. ಅದಕ್ಕಾಗಿಯೇ ಕರೆದು ಬಿಡುತ್ತಾರೆ ಇದು ಭಾರತ ರತ್ನ.
ಬಂದು ಪಾರ್ಥನು ರಥವೇರೆ ಮುರಾಂತಕ | ನಂದು ಚಮ್ಮಟಿಕೆಯನ್ನು ||
ಚಂದದಿ ಪಿಡಿದು ಚಪ್ಪರಿಸಲು ತುರಗವ | ಮುಂದರಿಯುತ ಭೀಷ್ಮನು||
ಎಂಟು ದಿನಗಳ ಯುದ್ದ ಮುಗಿದು ಒಂಭತ್ತನೆಯ ದಿನ ಶ್ರೀಹರಿ ಅರ್ಜುನನ್ನು ಯುದ್ದಕ್ಕಾಗೆ ಪ್ರೇರೇಪಿಸುತ್ತಾನೆ. ದಿನವೊಂದರ ಹತ್ತು ಸಾವಿರ ಭೂಪಾಲರ ಶಿರ ಕತ್ತರಿಸುವ ಭೀಷ್ಮರೆದುರು ಪಾಂಡವ ಸೇನೆ ತತ್ತರಿಸಿ ಹೋಗಿದೆ. ಆದರೂ ಅರ್ಜುನನ ಮುಖಾಮುಖಿ ಭೀಷ್ಮರಿಗಾಗಲಿಲ್ಲ. ಶ್ರೀಕೃಷ್ಣ ಒಂದು ರೀತಿಯಲ್ಲಿ ಛೇಡಿಸುತ್ತಾನೆ. ಅಜ್ಜ ಎಂಬ ಭಾವದಿಂದ ಯುದ್ದ ಮಾಡಬೇಡ. ಕ್ಷತ್ರಿಯತ್ವವನ್ನು ನೆನೆದು ಯುದ್ದ ಮಾಡು. ಭೀಷ್ಮರು ಅದನ್ನೇ ಅಲ್ಲಿ ತೋರುತ್ತಿದ್ದಾರೆ. ಯಥೋ ಧರ್ಮ ತಥೋ ಕೃಷ್ಣಃ ಯಥೋ ಕೃಷ್ಣ ತಥೋ ಜಯಃ ಇಷ್ಟು ತಿಳಿದಿದ್ದರೂ ಭೀಷ್ಮರೂ ಧರ್ಮಕ್ಕೇ  ಪ್ರಹಾರ ಮಾಡುತ್ತಿದ್ದಾರಲ್ಲ?  ಇವರೆಲ್ಲ ಅಜ್ಜನೋ ಗುರುಗಳೋ ಇನ್ನಾರೋ ಅಗಿರಬಹುದು ಆದರೆ ಅವರು ಹಿಡಿದ ಪಕ್ಷ ಅಧರ್ಮದ್ದು. ಯಾರು ಯಾವ ಪಕ್ಷ ಸೇರಿದರೂ ಈ ಭೀಷ್ಮ ದ್ರೋಣರು ಏನು ಮಾಡಿಯಾರು ಎಂಬ ಕುತೂಹಲವಿತ್ತು. ಅಧರ್ಮಿಯಾದ ಕೌರವನ ಕರೆಗೆ ಓಗೊಟ್ಟರಲ್ಲ? ದಾಯಾದಿಗಳಿಗೆ ವಿಷವನ್ನುಣ್ಣಿಸಿದವನು, ಮನೆಯನ್ನು ಉರಿಸಿ ಕೊಲ್ಲಲೆತ್ನಿಸಿದವ, ಇದೆಲ್ಲ ಹೋಗಲಿ...ಒಬ್ಬ ಹೆಣ್ಣು ಮಗಳ ಮಾನಾಪಹಾರ ಅದೂ ತುಂಬಿದ ಸಭೆಯಲ್ಲಿ ಆಗುವಾಗಲೂ ತಟಸ್ಥರಾದವರು ಇಂದು ಕೌರವನ ಪಕ್ಷ ಸೇರಿಕೊಂಡರಲ್ಲ? ಇವರ ಉದ್ದೇಶವಾದರೂ ಏನು ಕೌರವನ ಗೆಲುವುತಾನೆ?  ಇಂಥವರು ಬದುಕುಳಿಯಬಾರದು. ಈತ ಇಚ್ಛಾ ಮರಣಿ. ಹಾಗಾಗಿ ಈತನಿಗೆ ಬದುಕು ಸಾಕು ಎಂಬ ಪ್ರೇರೆಪಣೆಯಾಗುವಂತೆ ಯುದ್ದ ಮಾಡಬೇಕು. ಪಾರ್ಥಾ,  ಹಿಡಿ ಧನುಸ್ಸು ಹೊಡಿ ಬಾಣ. ಇಗೋ ರಥವೇರಿದ್ದೇನೆ ಕುದುರೆಗಳ ವಾಘೆಗಳನ್ನು ಹಿಡಿದಿದ್ದೇನೆ.ಕುದುರೆಗಳ ಬೆನ್ನು ಚಪ್ಪರಿಸಿದ್ದೇನೆ.
ಮುರಹರನನು ನೋಡಿ ನಗುತ ಗಾಂಗೇಯನು | ಶರಣರ ಪೊರೆಯುವರೆ ||
ನಿರತ ವ್ಯಾಮೋಹಗಳೆಷ್ಟಿರಬಹುದೀತ | ಗೆನುತಾಗ ಪೇಳಿದನು||
          ಪಾರ್ಥನ ರಥದಲ್ಲಿ ಸಾರಥಿಯಾಗಿರುವ ಕೃಷ್ಣನನ್ನು ನೋಡಿ ಭೀಷ್ಮರು ನಗುತ್ತಾರೆ. ನಗುವುದಲ್ಲ, ಆಯಾಚಿತವಾಗಿ ನಗು ಬರುತ್ತದೆ. ಪಾರ್ಥನ ರಕ್ಷಣೆಗಾಗಿ ಶ್ರೀಕೃಷ್ಣ ಧರಿಸಿದ ಪಾತ್ರ ನೋಡಿ ಒಂದು ಜಿಜ್ಞಾಸೆ ಮೂಡುತ್ತದೆ. ಏನದು? ?  ಈ ವಿಚಿತ್ರವನ್ನು ಕಂಡು ಭೀಷ್ಮ ಒಂದು ಕ್ಷಣ ಯುದ್ದ ಸ್ಥಬ್ಧಗೊಳಿಸುವಂತೆ ಆಜ್ಞೆ ಮಾಡುತ್ತಾನೆ.
ಹುಟ್ಟಿ ಎಂಟುನೂರು ವರ್ಷದ ಭೀಷ್ಮನ ಬದುಕಲ್ಲಿ ನಲಿವು ಎಂದರೆ ಕೇವಲ ಬೆರಳೆಣಿಕೆಯ ಘಳಿಗೆಗಳು. ಹೆಜ್ಜೆಗೆ ಹೆಜ್ಜೆಗೂ ಕಣ್ಣೀರು. ಯಾರಿಗಾಗಿ? ಭೀಷ್ಮನಿಗೆ ಹೆಂಡತಿ ಇದ್ದಾಳೆಯೇ? ಮಕ್ಕಳಿದ್ದಾಳೆಯೇ? ಯಾವುದನ್ನೆಲ್ಲ ಈ ಭೀಷ್ಮ ಬೇಡವೆಂದು ದೂರವಿರಿಸಿದನೋ ಅದೆಲ್ಲವೂ ತಾವಾಗಿಯೇ ಮೈ ಹತ್ತಿ ಕುಳಿತಿವೆಯಲ್ಲ? ಬೇಡ ಬೇಡವೆಂದರೂ ಅಪ್ಪಿಕೊಳ್ಳುವ ಸ್ಥಿತಿ. ಚಂದ್ರ ವಂಶದ ಕೈ ಹಿಡಿದು ಗಂಗಾಮಾತೆ, ತನ್ನ ಶಾಪವಿಮೋಚನೆಯನ್ನು ಕಂಡಳು. ಅದೇ ಚಂದ್ರವಂಶ ಭೀಷ್ಮನಿಗೆ ಈ ರೀತಿಯ ನರಕಸದೃಶ ಬದಕನ್ನು ನೀಡಿದೆಯಲ್ಲ? ಇವುಗಳಿಗೆಲ್ಲ ಉತ್ತರವನ್ನು ಹುಡುಕಿ ಹುಡುಕಿ ಬರೀ ಹುಡುಕುವುದಷ್ಟೆ ಆಗಿ ಹೋಗಿದೆ. ಈಗ ಉತ್ತರ ಸಿಗುವುದಿದ್ದರೆ ಸಿಗಬೇಕು
ವ್ಯಾಮೋಹ, ಒಂದು ಹಸುವಿಗೆ ಹುಲಿಯ ಸ್ವಭಾವವಿಲ್ಲ. ಆದರೆ ತನ್ನ ಕರುವನ್ನು ಯಾವನಾದರೂ ಎಳೆಯುದಕ್ಕೆ ಬಂದಾಗ ಅದು  ಹುಲಿಯಾಗಿ ಎದುರಿಸುತ್ತದೆ.  ತನ್ನ ಕರುವೆಂಬ ಮೋಹವೇ ಅದಕ್ಕೆ ಕಾರಣ. ಹಾಗಾಗಿ ಅದು ಕರುವನ್ನು ರಕ್ಷಿಸುತ್ತದೆ. ಪಾರ್ಥ ಸಾರಥಿ, ಪಾರ್ಥನನ್ನು ರಕ್ಷಿಸುವನಾದ್ದರಿಂದ ಅವನು ಪಾರ್ಥ ಸಾರಥಿ. ಅರ್ಜುನನ ವಿರೋಧಿಗಳಿಂದ ರಕ್ಷಿಸುವುದೇ ಪಾರ್ಥ ಸಾರಥಿಯ ಕರ್ತವ್ಯ. ಹಾಗಾದರೆ ಶ್ರೀ ಹರಿಗೆ ಪಾರ್ಥನೆಂಬ ವ್ಯಾಮೋಹ ಎಂದರೂ ಸರಿಯೆ. ಭಕ್ತರನ್ನು ರಕ್ಷಿಸುವುದು ಇದು ಭಗವಂತನ ಕಾರ್ಯ. ಅರ್ಜುನ ರಕ್ಷೆಗಧೀನ ಎಂದರೆ ಅವನು ಭಕ್ತ ಎಂಬ ಕಾರಣವೇ ಮೊದಲಾಗುತ್ತದೆ. ಹಾಗಾದರೆ ಇಲ್ಲಿ ಪಕ್ಷಪಾತ ಧೋರಣೆಯಲ್ಲವೇ? ಭೀಷ್ಮನಿಗೆ ನಗು ಬರುವುದು ಅದಕ್ಕೆ. ಆ ರಕ್ಷಣೆಯ ಕಾರ್ಯದಲ್ಲಿ ನಿರತನಾಗಿದ್ದಾನೆ ಎಂದಾದರೆ ಆ ಕಾರ್ಯ ಅರ್ಜುನನಿಗಷ್ಟೇ ಸೀಮಿತವೇ? 
.
ಮುರಹರ ಎಂದರೆ, ಯಮನ ಪಾಶಕ್ಕೆ ಮುರ ಎಂದು ಹೆಸರು. ಹಾಗಾಗಿ ಯಮನ ಪಾಶವನ್ನು ನಿವಾರಿಸುವವನು ಎಂಬ ಅರ್ಥವಿದೆ. ಮುರಬಿದ್ ಅಂದರೆ ಮುರವನ್ನು ಭೇದಿಸುವವನು. ಈತ ಮುರಬಿದ್ ಆಗುವುದು ತನ್ನ ಭಕ್ತರಿಗೆ. ಭಕ್ತರೆಂಬುದು ಯಾವುದೆ ಜಾತಿಯಾಗಲೀ ಯಾವುದೆ ವರ್ಗವಾಗಲೀ ಅಲ್ಲ. ಇಲ್ಲಿ ಯಾವುದೇ ಬಂಧುತ್ವವಿಲ್ಲ. ಮಾನಸಿಕವಾಗಿ ಭಗವಂತನಲ್ಲಿ ಪ್ರೀತಿಯನ್ನು ಇಟ್ಟವರೆಲ್ಲ ಭಕ್ತರು. ಹಾಗಾದರೆ ಇಲ್ಲಿ ಅರ್ಜುನನೊಬ್ಬನೇ ಭಕ್ತ ಎಂದು ಪರಿಗಣಿತವಾಗುವುದೇಕೆ? ಹಾಗಾಗಿ ಈತನ ಮುರ ಬಿದ್ ಕೇವಲ ಅರ್ಜುನನಿಗೆ ಮಾತ್ರವೇ? ಈ ಸೇವೆ ಅರ್ಜುನನಿಗೆ ಸಲ್ಲಿಸುವಲ್ಲಿ ಈತ ಯಾವ ಮಟ್ಟಕ್ಕೆ ಇಳಿದು ಬಿಟ್ಟ. ನರನ ಸಾರಥಿಯಾಗಿಯೂ ವಾಘೆಯನ್ನು ಹಿಡಿದನೆಂದರೆ? ಹರಿಯಲ್ಲಿ ಬಂದ ಸಂದೇಹಕ್ಕೆ ಅವನಲ್ಲೇ ಪರಿಹಾರವನ್ನು ಭೀಷ್ಮ ಬಯಸುತ್ತಾನೆ
ಚಿನ್ಮಯನೆ ಲಾಲಿಪುದು ಪುಣ್ಯವಂತಗೆ ಘೋರಾ | ರಣ್ಯಗಳು ಪಟ್ಟಣಗಳ್ ಮಣ್ಣೆ ಹೊನ್ನಹುದು||
ಪುಣ್ಯಹೀನಗೆ ರಾಜ್ಯ ಕಾನನವೆ ಕೇಳ್ ಮತ್ತೆ | ಚಿನ್ನಗಳು ಮೃತ್ತಿಕೆಗಳಂತೆ ತೋರುವುವು||.  

          ಯಾವಾತನನ್ನು ಧ್ಯಾನಿಸುವಾಗ ಅವನ ರೂಪ ಚಿತ್ತದಲ್ಲಿ ತುಂಬಿ ಬರುತ್ತದೋ, ಯಾವನ ಧ್ಯಾನದಿಂದ ಚಿತ್ತ ಸ್ವತಃ ತನ್ಮಯತೆಯನ್ನು ಕಾಣುತ್ತದೋ ಅವನನ್ನು ಚಿನ್ಮಯ ಅಂತ ಕರೆಯುವುದು. ಚಿತ್ ಜ್ಞಾನೆ ಇದು ಕೂಡ ಚಿನ್ಮಯವಾಗುತ್ತದೆ. ಅಂದರೆ ಜ್ಞಾನಸ್ವರೂಪಿ. ಭೀಷ್ಮ ಚಿನ್ಮಯ ಅಂತ ಕೂಗುವುದಕ್ಕೆ ಹಲವಾರು ಕಾರಣಗಳಿರುತ್ತದೆ. ತನ್ನ ಜ್ಞಾನದ ಕೊಡ ಅದು ಪೂರ್ಣವಾಗಿ ತುಂಬಿರುವುದಿಲ್ಲ ಅದನ್ನು ತುಂಬಿಸುವುದಕ್ಕಾಗಿ ಚಿನ್ಮಯನೇ ಎಂದು ಕೊಂಡಾಡುತ್ತಾನೆ ಎಂದರೂ ಸರಿಯೆ...ಮುಂದಿನ ಅವನ ಸಂದೇಹದಲ್ಲಿ ಚಿನ್ಮಯ ಎಂಬ ಭೀಷ್ಮನ  ಕೂಗು  ಸ್ವಲ್ಪ ವ್ಯಂಗ್ಯವನ್ನೂ ತೋರಿಸುತ್ತದೆ.
          ಭೀಷ್ಮನಾಗಿ ಶ್ರೀ ರಾಮದಾಸ ಸಾಮಗರು ಒಂದು ತಾಳ ಮದ್ದಲೆಯಲ್ಲಿ ಈ ಸಂದೇಹವನ್ನು ಬಹಳ ಸ್ಪಷ್ಟವಾಗಿ ವಿವರಿಸುತ್ತಾರೆ. ಅರ್ಜುನ ಸಾರಥಿಯಾಗಿ ಶ್ರೀಹರಿಯನ್ನು ಕಂಡಾಗ ಭೀಷ್ಮನಿಗೆ ಬರುವ ಒಂದು ಜಿಜ್ಞಾಸೆ, ಅದು ಕರ್ಮ ಬಂಧನದ ಕುರಿತಾದ ಜಿಜ್ಞಾಸೆ.  ಜಿಜ್ಞಾಸೆ ಎಂದರೆ ತನಗೆ ಅರಿವಿಲ್ಲದೇ ಇರುವಂತಹುದರ ನಿವಾರಣೆ ಎಂದೇ ವಿವರಿಸುತ್ತಾರೆ. ಒಂದು ರೀತಿಯಲ್ಲಿ ಶ್ರಿಹರಿಯ ಜತೆಗಿನ ಸರಸ ಅಂತಲೂ ಹೇಳಬಹುದು, ಯುದ್ದ ನಡುವೆ ಶ್ರೀಹರಿಯೊಂದಿಗೆ ಭೀಷ್ಮನ ವಾಗ್ಯುದ್ಧ ಅಂತಲೂ ಹೇಳಬಹುದು. ಹಲವು ಕಡೆ ಕರ್ಮದ ಬಗ್ಗೆ ಪೂರ್ಣವಾದ ಅರಿವಿದ್ದು ಕೃಷ್ಣನಿಗೆ ಒಂದು ಸವಾಲಾಗಿ ಭೀಷ್ಮ ಇದನ್ನು ಮಂಡಿಸುತ್ತಾನೆ. 
ಕರ್ಮ ಎಂಬುದು ಸ್ವತಂತ್ರ ಶಬ್ದವಲ್ಲ. ಅದು ಸತ್ಕರ್ಮ ಮತ್ತು ದುಷ್ಕರ್ಮ ಎಂಬುದರಿಂದ ಕೂಡಿರುತ್ತದೆ. ಸತ್ ಎಂದರೆ ಯಾವುದರಿಂದ ಶುಭ ಫಲವನ್ನು ಕಾಣಬಹುದೋ, ಅಂದರಿದ ಒಳ್ಳೆಯ ಪರಿಣಾಮ ಉಂಟಾಗಬಹುದೋ ಅದು ಸತ್ಕರ್ಮ ಎಂತಲೂ ಯಾವುದರಿಂದ ದುಷ್ಪರಿಣಾಮವನ್ನು ಉಂಟುಮಾಡುವಂತಹುದು ದುಷ್ಕರ್ಮ ಎನ್ನಬಹುದು. ಯಾವುದು ಉನ್ನತಿಗೆ ಕಾರಣವೋ ಅದು ಸತ್ಕರ್ಮ. ಸಾಮಾನ್ಯವಾಗಿ ಇದನ್ನು ಪುಣ್ಯ ಎಂದು  ಹೆಸರಿಸಲ್ಪಡುತ್ತದೆ. ಯಾವುದು ಅಧಃಪತನಕ್ಕೆ ಕಾರಣವೋ ಅದು ಪಾಪ ಎಂದು ಹೆಸರಿಸಲ್ಪಡುತ್ತದೆ.  ಹಲವು ಸಲ ಪರಿಣಾಮದಿಂದ ಪಾಪ ಪುಣ್ಯ ಎಂದು ನಿರ್ಧರಿಸುವುದು ಕಷ್ಟವಾಗುತ್ತದೆ. ಹಸುವು ಬಿದ್ದು ಸಾಯುತ್ತದೆ. ಅಥವಾ ಕೊಲ್ಲಲ್ಪಡುತ್ತದೆ.  ಹಸುವಿಗೆ ಅದು ಅಘಾತ. ಪರೋಕ್ಷವಾಗಿ ಹುಲಿಗೆ ಅದು ಅಹಾರವಾಗುತ್ತದೆ. ಕೊಲ್ಲಲ್ಪಡುವುದು ದುಷ್ಕರ್ಮವಾದರೂ ಆಹಾರವಾಗುವುದು ದುಷ್ಕರ್ಮ ಎಂದು ವರ್ಗೀಕರಿಸುವುದು ಕಷ್ಟವಾಗುತ್ತದೆ. ಜೀವನು ಒಬ್ಬ ಹುಟ್ಟಿ ಬಂದ ಮೇಲೆ ಕರ್ಮಪ್ರವೃತ್ತನಾಗಲೇ ಬೇಕು. ಹುಟ್ಟಿಗೆ ಮೂಲಕಾರಣವೂ ಅದುವೇ ಆಗಿರುತ್ತದೆ. ಒಬ್ಬ ಕರ್ಮ ನಿರತನಾದ ಎಂದರೆ, ಅದಕ್ಕೆ ಅವನ ಪೂರ್ವ ಪ್ರವೃತ್ತಿ ಕಾರಣವಾಗುತ್ತದೆ. ಕಣ್ಣುಗಳಿದ್ದಾಗ ನೋಡಲೇ ಬೇಕು. ಕಾಲುಗಳಿದ್ದಾಗ ನಡೆಯಲೇಬೇಕು. ಅದು ಅನಿವಾರ್ಯವಾದಂತೆ ಹುಟ್ಟಿದನಂತರ ಬದುಕಲೇಬೇಕು. ಹಾಗೆ ಕರ್ಮ ಅಂಟಿಕೊಳ್ಳುತ್ತದೆ. ಆನಂತರ ಸತ್ಕರ್ಮ ದುಷ್ಕರ್ಮ.  ಎಂತಹ ವೇದಜ್ಞ ರಾವಣ ದುಷ್ಕರ್ಮದಲ್ಲೇ ತೊಡಗುತ್ತಾನೆ, ಅದಕ್ಕೆ ಕಾರಣ ಅವನ ಪೂರ್ವಕರ್ಮ. ಮೊದಲು ಮಾಡಿದ ಕರ್ಮದ ಶೇಷವೇ ಉಳಿದದ್ದು ಈಗಿನ ಕರ್ಮಕ್ಕೆ ಕಾರಣವಾಗುತ್ತದೆ. ಚುಚ್ಚಿದ ಮುಳ್ಳನ್ನು ತೆಗೆದ ಮೇಲೆ ಅಲ್ಲಿ ಮುಳ್ಳಿನ ಗಾಯ ಹಾಗೆಯೇ ಉಳಿದಂತೆ ಕರ್ಮ ಶೇಷ. ಹಾಗಾದರೆ ಆ ಕರ್ಮ ಶೇಷದ ಮೂಲ ಯಾವುದು. ಒಂದು ಕರ್ಮಕ್ಕೆ ಮೂಲ ಕರ್ಮ ಇನ್ನೊಂದು ಆದಹಾಗೆ ಪ್ರತಿಯೊಂದಕ್ಕು ನಿಮಿತ್ತ ಇನ್ನೊಂದು ಇರುತ್ತದೆ. ಇದು ಕರ್ಮ ವಾಸನ ಎನಿಸಲ್ಪಡುತ್ತದೆ. ಇಲ್ಲಿ ಸರ್ವಥಾ ಮೂಲ ಕರ್ಮ ಯಾವುದು? ಉತ್ತರ ಸಿಗದ ಪ್ರಶ್ನೆಗಳು. ಕಿಚ್ಚಿನಿಂದ ಕಿಡಿ ಉಂಟಾಯಿತೇ? ಕಿಡಿಯಿಂದ ಕಿಚ್ಚು ಹುಟ್ಟಿಕೊಂಡಿತೆ? ಪ್ರತಿಯೊಂದು ಜೀವವೂ ಕರ್ಮವಾಸನೆಯನ್ನು ಅಂಟಿಸಿಕೊಳ್ಳುತ್ತದೆ. ಇದಕ್ಕೆ ಕಾರಣವೂ ಇರುತ್ತದೆ.
ಕೌರವ ನಿನ್ನ ಬಳಿಗೆ ಬರುತ್ತಾನೆ. ಅರ್ಜುನನೂ ಬರುತ್ತಾನೆ. ಕೌರವನಿಗೆ ಸಮಸ್ತ ನಾರಾಯಣಿ ಸೇನೆ ಪ್ರಾಪ್ತವಾಗುತ್ತದೆ. ಆದರೆ ಅದು ಈವರೆಗೆ ಸಿಗುವಿದಿಲ್ಲ. ಕೇವಲ ನಿನ್ನ ಕರುಣೆಯನ್ನು ಆಗ್ರಹಿಸಿ ಬರುತ್ತಾನೆ ಅರ್ಜುನ. ಅವನಿಗೆ ಸಾರಥಿಯಾಗಿ ನೀನೇ ಸಿಗುವಾಗ  ಇಲ್ಲಿ ಕೌರವ ಪುಣ್ಯ ವಿಹೀನ. ಅರ್ಜುನ ಪುಣ್ಯವಂತ. ಇಲ್ಲೆಲ್ಲ ಕರ್ಮ ವಾಸನೆ ಅಂಟಿಕೊಂಡಂತೆ ಕೃಷ್ಣ ನಿನಗೂ ಕರ್ಮವಾಸನೆಯೇ? ಭೀಷ್ಮನ ಜಿಜ್ಞಾಸೆ ಇದು. ಕರ್ಮ ಜಿಜ್ಞಾಸೆ.
“ಚಿನ್ಮಯ” ಎಂದು ನಿನ್ನನ್ನು ಮೊದಲೇ ಉಚ್ಚರಿಸಿದುದರ ಅಂತರಾರ್ಥ ಒಂದಿರುತ್ತದೆ. ಜೀವ ವರ್ಗದಲ್ಲಿ ಹೇಗೋ ಹಾಗಲ್ಲ  ನೀನು ಸರ್ವ ಸ್ವಾತಂತ್ರ್ಯ ಮೊದಲಾದ ದಿವ್ಯಗುಣಗಳನ್ನು ಹೊಂದಿದ ವಿಭೂತಿ ಎಂಬರ್ಥದಲ್ಲಿ . ಚಿನ್ಮಯ ಎಂಬಲ್ಲಿ ಕರ್ಮದ ಬಾಧೆ ನಿನಗೂ ಅಂಟಿಕೊಳ್ಳುವುದೇ? ರಾವಣನಿಗೆ ಕೌರವನಿಗೆ ಅಥವಾ ಇನ್ನಾರಿಗೋ ಆಗಲಿ ಪ್ರಾರಬ್ಧದಿಂದ ಕರ್ಮವು ಅಂಟಿಕೊಂಡಿದ್ದರೆ, ನಿನಗೂ ಈ ಪ್ರಾರಬ್ಧ ಕರ್ಮ ಅಂಟಿಕೊಂಡಿದೆಯೆ?
ಧರಿಸಿದೆಯ ಮತ್ಸ್ಯಾದಿ ರೂಪುಗಳ ನೋಡೀಗ | ನರನ ಸಾರಥಿಯಾದ ವಿಧಿಯನೇನೆಂಬೆ ||
ಕುರುಪತಿಯ ದುಷ್ಕರ್ಮವೇಕೆ ನಿಂದಿಪುದೀಗ | ಧರೆ ಚತುರ್ದಶ ಪೊರೆವ ಮಹಿಮಗಿಂತಾಗೆ ||
ಜೇವವರ್ಗದ ಜೀವರಾಶಿಗಳಂತೆ ನೀನಲ್ಲ. ಸರ್ವತಂತ್ರ ಸ್ವತಂತ್ರನೂ ಆದ ನೀನು ಚಿನ್ಮಯ, ಕರ್ಮದ ಭಾಧೆಗೆ ನೀನು ಒಳಗಾದೆಯೋ? ಕೌರವನ ಪ್ರಾರಭ್ದ ಎಂದು ಹೇಳುವಲ್ಲಿ ಅವನನ್ನು ನಿಂದಿಸುವಹಾಗಿಲ್ಲ. ವಿಧಿ ಅದು ನಿನಗೂ ಅನ್ವಯವಾಗುತ್ತದೆ. ಆ ವಿಧಿಗೆ ನೀನು ಒಳಗಾಗಿದ್ದಿ. ವಿಧಿ ಎಂಬುದು ಒಂದು ಹೆಸರಾಗಿ ಅಲ್ಲ. ಮಿಕ್ಕವರನೆಲ್ಲ ವಿಧಿಗೆ ಅನುವರ್ತಿಗಳನ್ನಾಗಿ ಮಾಡುವ ಶಕ್ತಿ. ಯಾವುದನ್ನು ಅವಶ್ಯವಾಗಿ ಅನುಸರಿಸಲ್ಪಡಬೇಕೋ ಅಥವ ಪಡುವಂತಹದ್ದೋ ಅದು ವಿಧಿ, ಯಾವುದನ್ನು ನಾವು ಅನುಸರಿಸಲ್ಪಡಬೇಕೋ ಅದು ವಿಧಿಸಲ್ಪಡುತ್ತದೆ. ಆ ನಿಯಮವೇ ವಿಧೇಯತ,   ವಿಧಾಯಕ ಎಂಬುದು ವಿಧಿಯ ಸಂಕೇತ. ಆ ವಿಧಿಯನ್ನು ಅನುಸರಿಸುವ ಮಾತ್ರವಲ್ಲ ವಶವರ್ತಿಯಾಗುವ  ಅನಿವಾರ್ಯತೆ ನಿನಗೂ ಇದೆ. ಮತ್ಸಾವತಾರ, ಕೂರ್ಮಾವತಾರ, ವರಾಹ, ನರಸಿಂಹಾವತಾರ ಯಾಕೆ ಎತ್ತಿದೆ? ನಿಜ ರೂಪದಲ್ಲೇ ಅದು ಸಾಧ್ಯವಾಗಿಸುವುದಕ್ಕೆ ಸಾಧ್ಯವಿಲ್ಲದಾಯಿತೇ?  ಈಗ ಆ ಆನಿವಾರ್ಯತೆ ಇಲ್ಲಿಯೂ ಮುಂದುವರಿದು ಪಾರ್ಥನ ಸಾರಥ್ಯ ಮಾಡುವಲ್ಲಿ ನೀನು ವಿಧಿಯ ವಶವರ್ತಿ ಅಂತ ತೋರಿಸಿಕೊಟ್ಟ ಹಾಗಾಯಿತು. ಹಾಗಾದರೆ ಕರ್ಮ ನಿನ್ನನ್ನೂ ಬಿಡಲಿಲ್ಲ. ಹಾಗಾದರೆ ಕೌರವನನ್ನು ದೂಷಿಸುವ ಹಾಗಿಲ್ಲ. ಅವನು ಅವನ ವಿಧಿಯನ್ನು ಅವನು ಅನುಸರಿಸುತ್ತಾನೆ, ಅವನ ಕರ್ಮದ ಬಾಧೆ ಅವನಿಗೆ ಹಾಗೆ ಇಲ್ಲಿ ನೀನು ಈ ಕರ್ಮದ ಬಂಧನಕ್ಕೆ ಸಿಲುಕಿದೆಯಲ್ಲ? ಕರ್ಮವನ್ನು ಅನುಸರಿಸುವ ಅನಿವಾರ್ಯತೆ ನಿನಗೂ ಒದಗಿತಲ್ಲ?
ಒಂದು ರೀತಿಯ ಮತ್ಸರವೇ ಈ ಮಾತುಗಳನ್ನು ನುಡಿಸಿತು. ಧನು ಶರಗಳಿಂದ ಪಾರ್ಥನನ್ನು ಎದುರಿಸಬಹುದಾದರೆ, ಈ ಕೃಷ್ಣನನ್ನು ಎದುರಿಸುವುದು ಹೇಗೆ? ಲೌಕಿಕವಾದ ಯಾವ ವಸ್ತುಗಳಿಂದ ಕೃಷ್ಣನನ್ನು ಎದುರಿಸುವ ಹಾಗಿಲ್ಲ. ಹಾಗಾದರೆ ಆತನನ್ನು ಎದುರಿಸುವ ಪರಿಯೇ ಹೀಗೆ. ಪಾರಮಾರ್ಥಿಕವಾಗಿ ಕೃಷ್ಣನನ್ನು ಗೆಲ್ಲಬೇಕು. ಹಾಗಾಗಿ ಸಾರಥಿಯಾದ ಕೃಷ್ಣನನ್ನು ಕಂಡಾಗ ಕೆಲವೊಂದು ಸಂಶಯವೂ ಮತ್ಸರವೂ ಒಟ್ಟಾಗಿ ಮೂಡಿ ಬಂತು.   ಭಗವಂತ ಎಂದು ಪೂಜಿಸಲ್ಪಡುವವನು  ಅದೂ ನನ್ನ ಮೊಮ್ಮಗನ ಸಾರಥಿಯಾಗಿ ಬರುತ್ತಾನೆ ಎಂದಾದರೆ, ಮೊಮ್ಮಗನ ಕೈಗೆ ಕೋಲು ಕೊಟ್ಟು ಅಜ್ಜನಿಗೆ ಹೊಡಿ ಎನ್ನುತ್ತಾನಾದರೆ, ಭೀಷ್ಮನ ನಿಲುವು ಪ್ರಶ್ನಿಸಿದ ಹಾಗಲ್ಲವೇ?  ತನ್ನ ಮೊಮ್ಮಗನನ್ನು ಹುರಿದುಂಬಿಸಿ ತನ್ನ ಎದುರು ರಥವನ್ನು ಚಾಚಿ ತನ್ನೆದುರು ಹೋರಾಟಕ್ಕೆ ಸಿದ್ಧನಾಗುತ್ತಿದ್ದಾನಲ್ಲ? ಹಾಗಾದರೆ ಇದರ ಮರ್ಮವೇನು. ಅಜ್ಜ ಮೊಮ್ಮಗನಿಗೆ ಸೋಲಬೇಕೆ?  ಮಗುವಿನ ಕೈಗೆ ಕೋಲು ಸಿಕ್ಕಿದಾಗ ದೊಡ್ಡವರು ಕೆಲವೊಂದು ಸಲ ಬಳಿ ಹೋಗಲು ಹಿಂಜರಿಯುವುದುಂಟು. ಯಾಕೆ,  ದೊಡ್ಡವರಿಗೆ  ಹೊಡೆಯಬಾರದು ಎಂದು ಆ ಮಗುವಿಗೆ ತಿಳಿದಿರುವುದಿಲ್ಲ. ಮಗು ಸುಮ್ಮನೇ ಬೀಸಿದರೂ ಏಟು ತಾಗುವ ಆತಂಕವಿದ್ದೇ ಇರುತ್ತದೆ. ಆದರೆ ಇಲ್ಲಿ ಮಗುವಾದ ಅರ್ಜುನ ತಾನು ಹೊಡೆಯಲಾರೆ ಎಂದು ಸ್ವಯಂ ಪ್ರಜ್ಞೆಯಿಂದ ಹೇಳಿದರೂ ಶ್ರೀಕೃಷ್ಣ ಹುರಿದುಂಬಿಸಿ ಹೇಳುತ್ತಿದ್ದಾನಲ್ಲ . ಅಜ್ಜನೆಂಬ ಮೋಹ ಬಿಡು ಹೊಡೆ..

ಭೀಷ್ಮರಿಗೆ ಅನ್ನಿಸಿತು ಭಗವಂತನ ಅವಗಾಹನೆಗೆ ತಳ್ಳಿಬಿಡುವ ಹಲವಾರು ವಿಚಾರಗಳಿವೆ. ಇಲ್ಲಿ ತಳ್ಳಿಬಿಡುವ ಎನ್ನುವುದೇ ಸರಿ, ಯಾಕೆಂದರೆ ಈವರೆಗೆ ಭಗವಂತನ ಗಮನ ಅತ್ತಕಡೆ ಹರಿದಿದೆ ಎಂದು ಈ ಸುದೀರ್ಘ ಬದುಕಿನಲ್ಲಿ ಅನ್ನಿಸಲೇ ಇಲ್ಲ. ಈ ಜಿಜ್ಞಾಸೆಯ ಫಲವಾಗಿ,  ಕರ್ಮ ಬಂಧನದ ರಹಸ್ಯ ಸ್ವಾರಸ್ಯವಾಗಿ ಸರಸವಾಗಿ ಶ್ರೀ ಕೃಷ್ಣ ಮತ್ತು ಭೀಷ್ಮರ ಸಂವಾದದಲ್ಲಿ ತೆರೆದುಕೊಳ್ಳುತ್ತದೆ.