"ಇದು ವಿಮರ್ಶೆಯಲ್ಲದ ಚಿಂತನ"

Sunday, September 11, 2022

ಕಾಯಬೇಕೀ ತರಳರೈವರ

 

      ಯಕ್ಷಗಾನದ ಭೀಷ್ಮ ಪರ್ವದಲ್ಲಿ ಭಾವ ಉತ್ಕಟತೆಯನ್ನು ಹೆಚ್ಚಿಸುವ ಹಲವಾರು ಸನ್ನಿವೇಶಗಳಿವೆ. ಅಸಾಮಾನ್ಯ ಪರಾಕ್ರಮಿ ವೃದ್ಧನಾಗಿ ವಿಜ್ರಂಭಿಸುವ ಸನ್ನಿವೇಶಗಳು. ದೀಪ ಎಣ್ಣೆ ಮುಗಿದ ನಂತರ ಜ್ವಾಜ್ವಲ್ಯ ಮಾನವಾಗಿ ತನ್ನಲ್ಲಿ ಎಲ್ಲಾ ಪ್ರಕಾಶವನ್ನು ಹೊರ ಹಾಗಿ ಉರಿದು ನಂದಿ ಹೋಗುವಂತೆ ಕೊನೆಯ ಹತ್ತು ದಿನಗಳು ಭೀಷ್ಮ ಮಹಾ ವಿಕ್ರಮಿಯಾಗಿ ಮೆರೆಯುತ್ತಾನೆ. ಎಲ್ಲವೂ ರಕ್ತದ ಬಿಸಿಯನ್ನು ಹೆಚ್ಚಿಸುವ ಪ್ರಸಂಗಗಳು. ಪ್ರಸಂಗದ ಕೊನೆಯ ಹಂತದಲ್ಲಿನ ಒಂದು ಸಂಭಾಷಣೆಯತ್ತ ನನಗೆ ಗಮನ ಹೋಗುತ್ತದೆ. ನಿಜಕ್ಕಾದರೆ ಭೀಷ್ಮ ಪರ್ವದಲ್ಲಿ ಅತ್ಯಂತ ಭಾವನಾತ್ಮಕ ಸನ್ನಿವೇಶ ಯಾವುದು ಕೇಳಿದರೆ, ಶ್ರೀ ಮನೋಹರ ಸ್ವಾಮಿ ಪರಾಕು....ಎಂದು ಭೀಷ್ಮ ಭಗವಂತನ ಕೈ ಹಿಡಿವ ಸನ್ನಿವೇಶ. ಆದರೂ ಒಂದು ತಾಳ ಮದ್ದಲೆಯಲ್ಲಿ ಇನ್ನೊಂದು ಸನ್ನಿವೇಶ ಮನಸ್ಸಿಗೆ ಬಹಳ ಹತ್ತಿರವಾಗುತ್ತದೆ. ಪ್ರಸಂಗದಲ್ಲಿನ ಅದುವರೆಗಿನ ಭಾವ ಉತ್ಕಟತೆ ಕಡಿಮೆಯಾಗಿ ಶಾಂತವಾಗುವಾಗ ಇನ್ನೇನು ಪ್ರಸಂಗ ಮುಗಿವ ಹಂತಕ್ಕೆ ಬರುತ್ತದೆ. ಈ ಸನ್ನಿವೇಶ ಸಮರ್ಥ ಅರ್ಥಧಾರಿಗಳು ಇದರಲ್ಲೂ ರಸಸೃಷ್ಟಿಯನ್ನು ಮಾಡಬಲ್ಲರು.


        ಒಂಭತ್ತು ದಿನದ ಯುದ್ದ ಮುಗಿದು ಹೋಗುತ್ತದೆ. ಯುದ್ದಕ್ಕೂ ಮೊದಲೆ ಪ್ರತಿಜ್ಞೆ ಮಾಡಿದ ಭೀಷ್ಮ ದಿನವೊಂದಕ್ಕೆ ಹತ್ತು ಸಾವಿರ ಮುಕುಟ ಮರ್ದನರ ತಲೆ ಕಡಿಯುತ್ತಾನೆ. ಭೀಷ್ಮ ಯಾರಿಗೂ ಸೋಲುವುದಿಲ್ಲ ಎನ್ನುವಾಗ ಧರ್ಮರಾಯ ಹತಾಶನಾಗುತ್ತಾನೆ. ಚಿಂತಾಕ್ರಾಂತನಾಗಿ ಮುಂದೇನು ಎಂದು ಭಗವಂತನಲ್ಲಿ ಮೊರೆ ಇಡುವಾಗ ರಾತ್ರಿ ಶ್ರೀಕೃಷ್ಣ ಪಾಂಡವರೈವರನ್ನು ಕರೆದುಕೊಂಡು ಭೀಷ್ಮನ ಬಿಡದಿಯತ್ತ ಸಾಗಿ ಬರುತ್ತಾನೆ. ಆತನಿಗೆ ತಿಳಿದಿದೆ ಉಳಿದಿರುವ ದಾರಿ ಅದೊಂದೇ. ಪಾಂಡವರೊಡನೆ ಬಂದ ಶ್ರೀಕೃಷ್ಣನನ್ನು ನೋಡುತ್ತಲೇ ಭೀಷ್ಮ ಬಂದನೇ ಮುರಹರನು, ಕೊಂದನೇ ಎನ್ನನು ಎಂದು ಭೀಷ್ಮ ಹಲುಬುತ್ತಾನೆ. ಶ್ರೀಕೃಷ್ಣ ಯಾಕೆ ಬಂದಿದ್ದಾನೆ ಎಂದು ಊಹಿಸಿಯೇ ಈ ಮಾತನ್ನು ಆಡುತ್ತಾನೆ. ಒಂದೋ ಆತ ಮಾತ್ರ ಬರಬಹುದಿತ್ತು, ಇಲ್ಲ ಪಾಂಡವರು ಮಾತ್ರ ಬರಬಹುದಿತ್ತು, ಆದರೆ ಹಾಗಲ್ಲ ಮಮ ಪ್ರಾಣಾಹಿ ಪಾಂಡವಾಹ ಎಂದ ಭಗವಂತ ಪ್ರಾಣವನ್ನೇ ಹೊತ್ತುಕೊಂಡು ತನ್ನಲ್ಲಿ ಸುಮ್ಮನೇ ಆಗಮಿಸುವುದಿಲ್ಲ ಎಂದು ಆತನಿಗೆ ತಿಳಿದು ಬಿಡುತ್ತದೆ. ಆ ಪ್ರಾಣಗಳನ್ನು ತನ್ನ ಪಾದ ತಲದಲ್ಲಿ ಇಡುವುದಕ್ಕೇ ತಂದಿದ್ದಾನೆ.

        ಬಂದ ಶ್ರೀಕೃಷ್ಣ ಪದೇ ಪದೇ ಪಾಂಡವರಿಗೆ ಆಜ್ಞಾಪಿಸುತ್ತಾನೆ, ಅಜ್ಜನ ಕಾಲು ಹಿಡಿಯಿರಿ. ನರಸಿಂಹಾವತಾರದ ಸಂದೇಶವದು. ಉಗ್ರರೂಪಿ ನರಸಿಂಹ ಪ್ರತ್ಯಕ್ಷವಾಗಿ ಹಿರಣ್ಯಕಶಿಪುವಿನ ಕೊರಳು ಬಗೆವ ಭೀಭತ್ಸವನ್ನು ತೋರಿದಾಗ ದೇವತೆಗಳೂ ನಡುಗಿಬಿಡುತ್ತಾರೆ, ಎಂತ ರೌದ್ರ ನರ್ತನ? ಶಾಂತ ಸ್ವರೂಪಿ ಶ್ರೀಮನ್ನಾರಾಯಣನ ಅವತಾರವೇ ಇದು ಎಂದು ಭಯ ವಿಹ್ವಲರಾಗುವಾಗ ದೇವತೆಗಳು ಪ್ರಹ್ಲಾದನ ಮೊರೆ ಹೋಗುತ್ತಾರೆ. ಆಗ ಪ್ರಹ್ಲಾದ ಹೇಳುವ ಮಾತಿದೆ, ನೀವು ಮುಖವನ್ನೇಕೆ ನೋಡಬೇಕು? ಭಗವಂತನ ಪಾದವನ್ನು ನೋಡಬೇಕು. ಶರಣಾಗಬೇಕು. ಈ ದಿವ್ಯ ಸಂದೇಶವನ್ನೇ ಶ್ರೀಕೃಷ್ಣ ಇಲ್ಲಿ ಸಾರುತ್ತಾನೆ. ಭೀಷ್ಮನ ಮುಖ ನೋಡಿದ್ದು ಸಾಕು ಇನ್ನು ಇದೇ ದಾರಿ.

        ಭೀಷ್ಮನಿಗೆ ಅರ್ಥವಾಗುತ್ತದೆ. ಕಾಯಬೇಕೀ ತರಳರೈವರ ಎಂದು ಶ್ರೀಕೃಷ್ಣ ಹೇಳುವಾಗ ಭೀಷ್ಮ ಹೇಳುತ್ತಾನೆ ಕಾಯ ಬೇಕು, ಅದು ನೀನು ಹೇಳುತ್ತಾ ಇರುವುದು. ಯಾವ ಕಾಯ ಬೇಕು? ನನ್ನ ಕಾಯ ಬೇಕಾದ್ದೋ? ಇಲ್ಲ ನಾನು ಕಾಯಬೇಕಾದ್ದೋ?
ನಾನು ಕಾಯಬೇಕಾದ್ದೋ? ಎಂಬುದು ಒತ್ತಿ ಕೇಳುತ್ತಾನೆ. ಇನ್ನೂ ಕಾಯಬೇಕೆ? ಶತಮಾನಗಳು ಕಳೆದವು ಈ ಕಾಯುವಿಕೆಗೆ. ನಿನ್ನೆಯ ದಿನ ಅದನ್ನೇ ಹೇಳಿದ್ದು. ಇಂದಿರೇಶ ನೋಡಲಾರೆ ಈ ಕಾಳಗವನ್ನು, ಎಂದಾದರೀ ಕಾಯ ಎರವಿನೊಡನೆ ಜೀಯ. ನಾನು ಇನ್ನೂ ಕಾಯಬೇಕೆ? ಇನ್ನೆಲ್ಲಿ ಮಾತಿನ ದಿಕ್ಕು ತಪ್ಪುವುದೋ ಎಂಬ ಆತಂಕದಲ್ಲಿ ಕೊನೆಯಲ್ಲಿ ಹೇಳಿಬಿಡುತ್ತಾನೆ, ಹೆಣ್ಣು ಅಲ್ಲದ ಗಂಡು ಅಲ್ಲದ ಒಂದು ಅದು ಉಂಟು. ಹೆಣ್ಣಿಗೆ ಭೀಷ್ಮ ಇದುವರೆಗೆ ಸೋಲಲಿಲ್ಲ. ಇನ್ನು ತನ್ನನ್ನು ಸೋಲಿಸುವ ಗಂಡು ಹುಟ್ಟಿ ಬರುವುದಕ್ಕೆ ಸಾಧ್ಯವಿಲ್ಲ. ಅತ್ತ ಗಂಡೂ ಅಲ್ಲದ ಇತ್ತ ಹೆಣ್ಣು ಅಲ್ಲದ ಅದು ಭೀಷ್ಮನ ಎದುರು ನಿಲ್ಲುವ ಕಾಲ ಬಂತು ಎಂದಾದರೆ ಈ ಭೀಷ್ಮನ ಕೈಯಲ್ಲಿ ಆಯುಧ ನಿಲ್ಲುವುದಿಲ್ಲ. ಗೊತ್ತಿದ್ದ ಬಹಿರಂಗ ರಹಸ್ಯ. ಆದರೂ ಭೀಷ್ಮನ ಬಾಯಿಯಿಂದಲೇ ಒಂದು ಟಿಪ್ಪಣಿ, ಮುದ್ರೆ ಅದಕ್ಕೆ ಸಿಕ್ಕಿದರೆ....? ಆಗ ಭೀಷ್ಮ ಹೇಳುವ ಮಾತಿದೆ, ಬೇರೆ ಯಾರು ಬಂದು ಕೇಳಿದರೂ ಇದನ್ನು ಹೇಳುತ್ತಿದ್ದೆನೋ ಇಲ್ಲವೋ ಆದರೆ ಶ್ರೀಕೃಷ್ಣ ನೀನು ಕೇಳುವ ರೀತಿ ಇದೆಯಲ್ಲ ಅದು ಎಲ್ಲವನ್ನು ನಿಯಂತ್ರಿಸಿಬಿಡುತ್ತದೆ. ಧರ್ಮ ಸಂಸ್ಥಾಪನಾರ್ಥಾಯ ...ಎಂಬ ನಿನ್ನ ಸಂಕಲ್ಪಕ್ಕೆ ಈ ಭೀಷ್ಮನೇ ಅಡ್ಡಗಾಲಾಗುತ್ತಿದ್ದಾನೆ. ಹಾಗಾಗಿ ಆ ಕಾಲನ್ನೇ ಇಂದು ಹಿಡಿಯುವುದಕ್ಕೆ ಪಾಂಡವರಿಗೆ ಆಜ್ಞೆ ಮಾಡುತ್ತಿದ್ದಿಯಾ? ಬೇರೆ ಯಾರು ಯಾವ ವಿಧದಲ್ಲಿ ಕೇಳಿದರೂ ನಾನು ಹೇಳುತ್ತಿರಲಿಲ್ಲ. ನಿನ್ನ ಕಾಳಜಿ ನಿನ್ನ ಮನದ ಇಂಗಿತ ಪಾಂಡವರನ್ನು ಎರಗುವಂತೆ ಮಾಡುತ್ತಿದೆ. ದೇವನಾದ ನೀನು ಕೈ ಹಿಡಿದಿರುವೆ. ಪಾಂಡವರನ್ನು ಕಾಲು ಹಿಡಿವಂತೆ ಹೇಳುತ್ತಿರುವೆ. ನಿನ್ನ ಉದ್ದೇಶ ಸ್ಪಷ್ಟವಾಗಿದೆ. ಇನ್ನು ನಾನು ಕಾಯ ಬೇಕಿಲ್ಲ. ನನ್ನ ಕಾಯ ಮಾತ್ರ ಬೇಕಿದೆ. ಕೊನೆಯಲ್ಲಿ ನಾನು ಹೇಳುತ್ತಿದ್ದೇನೆ ಕೃಷ್ಣ ಕಾಯಬೇಕೀ ತರಳರ.

        ಯಕ್ಷಗಾನ ಅರ್ಥಗಾರಿಕೆ ಅದು ಕೇವಲ ಗದ್ಯವಾಗುವುದಿಲ್ಲ. ಪಾತ್ರೋಚಿತ ಸ್ಪಂದನೆಗಳು ಜತೆಗೂಡಿದಾಗ ಅದು ಗದ್ಯವಾಗದೆ, ಕಾವ್ಯವಾಗುತ್ತದೆ.