ಮಾನ ಎಂದರೆ ಒಂದು ಅಳತೆ ಎಂದಷ್ಟೆ ಅರ್ಥ. ಆದರೆ ಆಳತೆ ಅಳಿಯುವುದಕ್ಕೆ ಸಾಧ್ಯವಿಲ್ಲದೇ ಆಗುವುದು ಅದು ಗೌರವದೊಂದಿಗೆ ಬೆಸೆದುಕೊಂಡಾಗ. ಮಾನ ಅವಮಾನಗಳು ಜಡ ವಸ್ತುವಿನಲ್ಲಿ ಇರುವುದಿಲ್ಲ. ಅದು ಕ್ರಿಯೆಯಲ್ಲಿ ಅಡಕವಾಗಿರುತ್ತದೆ. ಅಕ್ಕಿ ತೆಂಗಿನ ಕಾಯಿ ಇಟ್ಟು ಭಕ್ತಿ ಗೌರವದಿಂದ ಪೂಜಿಸಿ ನಮಸ್ಕರಿಸಿದಾಗ ಅದು ಗಣಪತಿಯೋ ನಾರಾಯಣನೋ ಆಗುತ್ತದೆ. ಇಲ್ಲವಾದರೆ ಅದು ಕೇವಲ ಅಕ್ಕಿ ತೆಂಗಿನಕಾಯಿ ಅಷ್ಟೇ. ಬದುಕಿನ ಪ್ರತಿ ಹಂತದಲ್ಲೂ ಮನುಷ್ಯ ಬದುಕುವುದು ತನ್ನ ಭಾವನೆಗಳ ಜತೆಗೆ. ಅಪ್ಪ ಅಮ್ಮನಲ್ಲಿ ಪ್ರೀತಿ ಗೌರವ ಕಂಡಾಗ ಮಾತ್ರ ಅದು ಅಪ್ಪ ಅಮ್ಮ. ಇಲ್ಲವಾದರೆ ಕೇವಲ ಮನುಷ್ಯರು. ಮತ್ತೂ ಮುಂದಕ್ಕೆ ಹೊದರೆ ಮಾಂಸ ಖಂಡಗಳು ತುಂಬಿದ ಕೈ ಕಾಲುಗಳ ದೇಹ.
ಮೊನ್ನೆ ಯಕ್ಷಗಾನದ ಒಂದು ವಿಡಿಯೋ ಚಿತ್ರದ ತುಣುಕು ಕಂಡು ಹೊರಬಂದ ಹತಾಶೆಯ ಭಾವನೆ ಇದು. ಆಶೆಗಳೆಲ್ಲ ಸತ್ತು ಸತ್ವ ಹೀನವಾದಾಗ ಹತಾಶೆ ಹುಟ್ಟಿಕೊಳ್ಳುತ್ತದೆ. ಆ ಚಿತ್ರ ಈ ಪುಟಗಳಲ್ಲಿ ಹಾಕುವುದಕ್ಕೇ ಈ ಹತಾಶೆಯೂ ಸಹಿಸುವುದಿಲ್ಲ. ಯಾಕೆ ಈ ಪುಟಗಳನ್ನು ಅಪವಿತ್ರ ಗೊಳಿಸಬೇಕು? ಲೌಕಿಕ ಜಗತ್ತಿನ ಪ್ರತಿನಿಧಿಯಂತೆ ಯಕ್ಷಗಾನದ ವೇಷಗಳು ಹೋಟೇಲೊಂದರಲ್ಲಿ ......ಛೇ ಅದನ್ನು ಹೇಳಿಕೊಳ್ಳುವುದರಲ್ಲಿ ಯಾವ ಸಾರ್ಥಕತೆಯೂ ಇರುವುದಿಲ್ಲ.
ನಮ್ಮ ಪ್ರಿಯ ಪಾತ್ರರು ನಮ್ಮನ್ನಗಲಿ ದೂರವಾದ ಮೇಲೆ ಅವರ ಸ್ಮರಣಿಕೆಗಾಗಿ ಅವರು ಉಪಯೋಗಿಸುತ್ತಿದ್ದ ವಸ್ತ್ರವೋ ಮತ್ತೊಂದೋ ಎಷ್ಟು ಹಳೆಯದಾದರೂ ಉಳಿಸಿಕೊಳ್ಳುತ್ತೇವೆ. ನಮ್ಮ ಭಾವುಕ ಮನಸ್ಸಿನ ಗೌರವ ಅದು. ಇಲ್ಲವಾದರೆ ಆ ವಸ್ತುಗಳು ಕಸದ ತೊಟ್ಟಿಗೆ ಸೇರಬೇಕಾದವುಗಳು. ಒಂದು ವೇಳೆ ಅದನ್ನು ಕಸದ ತೊಟ್ಟಿಯಲ್ಲಿ ಕಂಡಾಗ ಎಷ್ಟು ನೋವಾಗುತ್ತದೆ. ಮೂರು ವರ್ಣಗಳ ನಮ್ಮ ರಾಷ್ಟ್ರ ಧ್ವಜವಿದೆ. ನಮ್ಮ ರಾಷ್ಟ್ರ ಪ್ರೇಮದ ಸಂಕೇತವದು. ಅದು ರಸ್ತೆಯ ಬದಿಯಲ್ಲಿ ಚರಂಡಿಯಲ್ಲಿ ಬಿದ್ದಿದ್ದರೆ ಎತ್ತಿ ಇಡುವ ಪ್ರೇರಣೆಯಾಗುತ್ತದೆ. ಯಾಕೆ? ಅದರ ಹಿಂದಿರುವ ಉದಾತ್ತವಾದ ಪ್ರೇಮ. ಹುಟ್ಟಿಸಿದ ತಂದೆ ಮದ್ಯಪಾನ ಮಾಡಿ ರಸ್ತೆಯ ಬದಿಯಲ್ಲಿ ಬಿದ್ದಿದ್ದರೆ ಮಗನಾದಾವನು ಅಪ್ಪ ಮಾಡಿದ ಕರ್ಮ ಎಂದು ಬಿಟ್ಟು ಬಂದರೆ, ಕರ್ಮ ಭೃಷ್ಠನಾಗುತ್ತಾನೆ. ನಮ್ಮ ಕ್ರಿಯೆಯನ್ನು ಮರೆತ ಪರಿಣಾಮವದು.
ಯಕ್ಷಗಾನ ಎಂಬುದು ಯಾರಿಗೋ ಪೂಜನಿಯವಾದರೆ ಇನ್ನು ಅದಕ್ಕೆ ಹಿಂದಿರುವ ಭಾವನೆಗಳು ಗೌರವಿಸಲ್ಪಡುವುದೇ ಕಾರಣ. ಸದರೀ ಕಲಾವಿದರು ಮತ್ತೆ ಕ್ಷಮಾಪಣೆ ಕೇಳಿದರು. ಅದು ಹೇಗಿತ್ತೆಂದರೆ ಮೊದಲೇ ಬರೆದಿಟ್ಟ ಸಂಭಾಷಣೆ ಒಪ್ಪಿಸಿದಂತೆ ಇತ್ತು. ಒಂದು ವೇಳೆ ಆಕ್ಷೇಪ ಬಂದರೆ ಹೀಗೆ ಹೇಳಿಬಿಡುವ ಎಂದು ಪರಿಹಾರ ಕಂಡುಕೊಂಡು ತಪ್ಪು ಎಸಗಿದಂತೆ. ಯಾಕೆಂದರೆ ಆ ಹೇಳಿಕೆಗಳಲ್ಲಿಯೂ ಒಂದು ಆಕ್ಷೇಪಗಳಿದ್ದುವು. ಆ ಚಿತ್ರ ನೋಡಿ ಎದ್ದ ವಿವಾದದಲಿ ಬಂದ ಪ್ರತಿಕ್ರಿಯೆಯ ಬಗ್ಗೆಯೇ ಅಸಮಾಧಾನ ಹೊರಹಾಕಿದಂತೆ ಅನಿಸುತ್ತಿತ್ತು. ಒಂದು ವೇಳೆ ಯಾರೊಬ್ಬರೂ ಆ ಚಿತ್ರವನ್ನು ಮಾಧ್ಯಮಗಳಲ್ಲಿ ಹರಿಯ ಬಿಡುತ್ತಿದ್ದರೆ, ಅದರ ಯಾವುದೇ ಪ್ರತಿಕ್ರಿಯೆ ಬರದಿರುತ್ತಿದ್ದರೆ ....ಇವರ ಯಾವ ಹೇಳಿಕೆಗಳೂ ಇರುತ್ತಿರಲಿಲ್ಲ. ಆದ ಘಟನೆ ಸದ್ದಿಲ್ಲದೇ ಮೂಲೆಗೆ ಸೇರಿಬಿಡುತ್ತಿತ್ತು. ಇಂತಹ ಅದೇಷ್ಟೋ ತಪ್ಪುಗಳು ಅಪ ಸವ್ಯಗಳು ಮೂಲೆ ಸೇರಿರುತ್ತವೆ. ಇದೂ ಆ ಸಾಲಿಗೆ. ಹಾಗಾದರೆ ಅದಕ್ಕೆ ಹೊರಬಂದ ಪ್ರತಿಕ್ರಿಯೆಗಳೂ ಒಂದು ಅಸಮಾಧಾನಕ್ಕೆ ಕಾರಣವಾದರೆ ಅದಕ್ಕೆ ಕಾರಣ ವೈಯಕ್ತಿಕ ಪ್ರತಿಷ್ಠೆ. ವೈಯಕ್ತಿಕವಾಗಿ ಘಾಸಿಯಾದಾಗ ಪರಿಸರ ಪ್ರಜ್ಞೆ ಮೂಡುತ್ತದೆ. ಯೋಚಿಸಿ ಕೆರೆಯ ನೀರು ಮಲಿನವಾದರೆ ಜಲಚರಗಳೂ ಕೆಟ್ಟು ಹೋಗುತ್ತವೆ. ಯಕ್ಷಗಾನದ ಸ್ಥಿತಿಯೂ ಕೆರೆಯ ನೀರಂತೆ ಎಂಬ ಪ್ರಜ್ಞೆ ಮೂಡದಿರುವುದು ಭಾವನೆಗಳ ಕೊರತೆ ಎನ್ನಬೇಕಾಗುತ್ತದೆ.
ಇತ್ತೀಚೆಗೆ ಯಕ್ಷಗಾನದ ಸ್ಥಿತಿ ಹೇಗಾಗಿದೆ ಎಂದರೆ, ಹಾಸ್ಯಗಾರರೊಬ್ಬರು ಹೇಳಿದ ಮಾತು ನೆನಪಾಗುತ್ತದೆ "ಪರ್ಕಟ್ ಅಂಗಿಗ್ ಕೈ ಪಾಡ್ನವುಲೇ ಕಿಸೆ" ಚಿಂದಿಯಾದ ಬಟ್ಟೆಯಲ್ಲಿ ಮತ್ತೊಂದು ಹರುಕು ಉಂಟಾದಂತೆ. ಹೆಚ್ಚೇನೂ ಪರಿಣಾಮವಿಲ್ಲ. ಇಲ್ಲವಾದರೆ ಒಂದೇರಡು ರಾಗ ಅನುಕರಿಸುವವನು ಪ್ರಧಾನ ಭಾಗವತನಾಗುತ್ತಾನೆ. ಕುಣಿತ ತಿಳಿಯದವನು ಪ್ರಧಾನ ಕಲಾವಿದನಾಗುತ್ತಾನೆ. ತನಗೆ ತಿಳಿಯದೇ ಇರುವದ್ದು ಹೇಳಿಕೊಡುವವನು ಗುರುವಾಗುತ್ತಾನೆ. ಅಧ್ಯಯನದ ದಿಕ್ಕು ದೆಸೆಗಳೇ ಬದಲಾಗಿದೆ. ಹಾಗೆ ಈ ಹರಕುಗಳೊಂದಿಗೆ ಇದು ಇನ್ನೊಂದು ಅಷ್ಟೆ. ಕೈ ಹಾಕಿದಲ್ಲೆಲ್ಲ ಕಿಸೆ ಅಂತ ತೃಪ್ತರಾಗಬೇಕು. ಇವುಗಳನ್ನೆಲ್ಲ ನಿಯಂತ್ರಿಸುವುದಕ್ಕೆ ಒಂದು ನಿಯಂತ್ರಣದ ನಿಯಮವೋ ಸಮಿತಿಯೋ ಇನ್ನೇನೋ ಇರಬೇಕಂತೆ. ಹೇಗಿದೆ. ನಾವು ತಪ್ಪುತ್ತಿದ್ದೇವೆ. ನಮ್ಮನ್ನು ನಿಯಂತ್ರಿಸಿ ಅಂತ ಹೇಳಿದಂತೆ. ಹುಚ್ಚು ನಾಯಿ ಕಚ್ಚಿದವನು ಸಂಕಲೆ ತಂದು ಕೊಟ್ಟಂತೆ ಅನ್ನಿಸುವುದಿಲ್ಲವೇ? ನಿಯಂತ್ರಣ ನಿಯಮ ಸಮಿತಿ ಅಧುನಿಕ ಭಾಷೆಯಲ್ಲಿ ಸೆನ್ಸಾರ್ ಇವುಗಳೆಲ್ಲ ಇದ್ದರಷ್ಟೇ ನಾವು ನಿಯಂತ್ರಣಕ್ಕೆ ಒಳಗಾಗಬೇಕೆ? ರಸ್ತೆಯ ಮಧ್ಯೆ ಶಿಸ್ತಿನ ಸಂಚಾರಕ್ಕೆ ರಸ್ತೆ ವಿಭಾಜಕವನ್ನು ನಿರ್ಮಿಸುತ್ತಾರೆ. ಯಾಕೆ? ನಾವು ಸಂಚರಿಸುವಾಗ ಸುಮ್ಮನೇ ಇಲ್ಲಿ ರಸ್ತೆ ವಿಭಾಜಕ ಇದೆ ಅಂತ ಕಲ್ಪಿಸಿಕೊಂಡು ಸಂಚರಿಸಬಹುದಲ್ಲ? ಯಕ್ಷಗಾನಕ್ಕೆ ಸಂಭಂಧಿಸಿ ಈ ಗೌರವ ಮನಸ್ಸಿನಲ್ಲಿ ಇದ್ದರೆ ಯಾವ ಸೆನ್ಸಾರ್ ಕೂಡ ಬೇಡ. ಯಾವ ನಿಯಮವೂ ಬೇಡ. ತರಗತಿಯೊಳಗೆ ಗುರುಗಳು ಇಲ್ಲದೇ ಇದ್ದರೂ ಮಕ್ಕಳು ಮೌನವಾಗಿ ಗುರುಗಳು ಇದ್ದಾರೆ ಎಂಬ ಭಾವನೆಯಲ್ಲಿರಬೇಕು. ಅದನ್ನೇ ಶಿಸ್ತು ಎನ್ನುವುದು. ಹಾಗಾದರೆ ನಮಗೆ ಶಿಸ್ತು ಬೇಕು ಎನ್ನುವ ಅರಿವು ಇದೆ. ಹಾಗಿದ್ದರೆ ಈ ಅಪಸವ್ಯಗಳು ಬೇಕೆಂದೇ ತಿಳಿದೇ ಮಾಡುವ ಅಪರಾಧಗಳಾಗುತ್ತವೆ. ಇದಕ್ಕೆ ಕ್ಷಮೆ ಕೇಳುವ ನೈತಿಕತೆಯಾದರೂ ಉಳಿದಿರುವುದಕ್ಕೆ ಸಾಧ್ಯವೇ?
ಕಳ್ಳತನ ಮಾಡುವುದು ತಪ್ಪು ಎಂದು ಕಳ್ಳನಿಗೆ ಅರಿವಿದೆ. ಹಾಗಾಗಿ ಆತ ಯಾರಿಗೂ ಕಾಣದಂತೆ ಕದಿಯುತ್ತಾನೆ. ನಿಯಮ ಎಂದು ಕೇವಲ ಭಾವನೆಯಷ್ಟೇ. ನಾವದಕ್ಕೆ ಪ್ರಾಮಾಣಿಕವಾಗಿದ್ದರೆ ಅದು ಶಿಸ್ತು ಎಂದಾಗುತ್ತದೆ. ಮದ್ಯದಂಗಡಿಯಲ್ಲಿ ಮದ್ಯದ ಸೀಸೇ ಎದುರಿಗೇ ಕಾಣುವಂತೆ ಇಟ್ಟರೂ ಕುಡಿಯುವವನು ಮರೆಯಲ್ಲಿ ಹೋಗಿ ಕುಡಿಯುತ್ತಾನೆ. ಮದ್ಯಕ್ಕೆ ಯಾವ ಮಾನ ಅಪಮಾನವೂ ಇಲ್ಲ. ಕ್ರಿಯೆಗೆ ಮಾತ್ರ. ನಮ್ಮ ಕ್ರಿಯೆ ಪರಿಶುದ್ಧವಾಗಬೇಕು. ಹಾಗಾದರೆ ಮಾತ್ರ ಯಕ್ಷಗಾನವೂ ಪರಿಶುದ್ಧವಾಗುತ್ತದೆ. ಗೌರವಿಸಲ್ಪಡುತ್ತದೆ. ಈ ಘಟನೆಯ ಬಗ್ಗೆ ಈ ವಿವಾದದ ಬಗ್ಗೆ ಇನ್ನು ಹೆಚ್ಚಿನದ್ದು ಹೇಳುವ ಆವಶ್ಯಕತೆಯೂ ಇಲ್ಲ. ಆ ಗೌರವವೂ ಇಲ್ಲ. ಕೊನೆಯಲ್ಲಿ ಹೇಳುವುದೊಂದೇ ಸದಾಶಯಗಳು ಜೀವಂತವಾಗಿರಲಿ. ಯಕ್ಷಗಾನಂ ಗೆಲ್ಗೆ.


