ನಾನು ಬಾಲ್ಯದಿಂದಲೂ ಚೆಂಡೆ ಮದ್ದಲೆಯೊಂದಿಗೆ ಕಂಡ ಚಿಪ್ಪಾರಿನ ವಯೋ ವೃದ್ದ ವಿಷಮ ಪೆಟ್ಟುಗಳ ಹರಿಕಾರ, ಚೆಂಡೆ ಮದ್ದಲೆಯಲ್ಲಿ ಕಾವ್ಯವನ್ನೇ ಬರೆಯಬಲ್ಲ ಸಮರ್ಥ, ಹಾಗು ನಿಜ ಜೀವನದಲ್ಲಿ ಅತ್ಯಂತ ಸರಳ ಹಾಗು ಸಜ್ಜನ ಚಿಪ್ಪಾರು ಇನ್ನಿಲ್ಲ ಎನ್ನುವಾಗ ನಂಬಲೇ ಬಿಡಲೇ ಅನ್ನುವ ಮಟ್ಟಿಗೆ
ಆಘಾತವನ್ನು ಅನುಭವಿಸಿದ್ದೆ.
ನಿನ್ನೆ ಅಂದರೆ ದಿನಾಂಕ ೨೭-೦೪-೨೦೦೯ ರಂದು ಎಡನೀರು ಮೇಳದ ಆಟ ಬೆಂಗಳೂರು ಕೋರಮಂಗಲದ ಎಡನೀರು ಮಠದಲ್ಲಿ ಯಕ್ಷಗಾನ ನೋಡುವುದಕ್ಕೆಂದು ನನ್ನ ಮಿತ್ರರ ಜತೆ ಹೋಗಿದ್ದೆ. ಈ ಮೊನ್ನೆ ಅಂದರೆ ಶನಿವಾರದ ದಿನ ಎಡನೀರು ಮೇಳ ಪುನಃ ತನ್ನ ಸೇವಾ ಪ್ರದರ್ಶನವನ್ನು ಬೆಂಗಳೂರಲ್ಲಿ ಆರಂಭಿಸಿತ್ತು ಖಾಯಮ್ ಮಿತ್ರ ಸದಸ್ಯರೊಂದಿಗೆ ಅಲ್ಲಿ ಮೊದಲೇ ಹಾಜರಿದ್ದೆ. ಚೌಕಿ ಪೂಜೆ ಆಗ್ತಾ ಇತ್ತು. ಚಿಪ್ಪಾರು ಬರಿ ಮೈ ಕೇವಲ ಬಿಳಿ ಪಂಚೆ ಉಟ್ಟು ಹೆಗಲಿಗೆ ಚೆಂಡೆ ನೇತಾಡಿಸಿ ಬಾರಿಸುತ್ತ ಇದ್ದರು.. ನಾನು ದೇಲಂತ ಮಜಲು ಉಪಧ್ಯಯರನ್ನು ಕಣ್ಣಲ್ಲೇ ಅರಸಿದೆ. ಮತ್ತೆ ತಿಳಿದು ಬಂತು ಅವರೆಲ್ಲ ರಜೆಯಲ್ಲಿದ್ದರೆ.. ಚಿಪ್ಪಾರು ಹೊಸ ಅತಿಥಿಯಾಗಿ ಬಂದಿದ್ದಾರೆ..
ನಮ್ಮ ನೆಚ್ಚಿನ ಕಲಾವಿದರು ಕೆಲವರು ಗೈರು ಹಾಜರಿ ಹೀಗಾಗಿ ತುಸು ಉದಾಸಿನ ಮನಸ್ಸಿಂದಲೇ ಆಟ ನೋಡುವುದಕ್ಕೆ ಆರಂಭ.. ಚಿಪ್ಪಾರು ಚೆಂಡೆಯೊಂದಿಗೆ ವೇದಿಕೆ ಏರಿದರು.ಯಾರು ಬಲ್ಲರು ನಾನು ಚಿಪ್ಪಾರು ವೇದಿಕೆಯನ್ನು ಏರುವುದನ್ನು ಕೊನೆಯದಾಗಿ ನೋಡುತ್ತಾ ಇದ್ದೇನೆಂದು. ನಾನು ಆದಿನ ನೋಡುವ ಆ ಆರಂಭದ ಪೀಠಿಕೆಯೇ ಕೊನೆಯದಾಗಿ ನಾನು ನೋಡುತ್ತಾ ಇದ್ದೇನೆಂದು ನಾನು ಗ್ರಹಿಸಲು ಸಾಧ್ಯವೇ.? ಚೆಂಡೆ ಮದ್ದಳೆಯ ಮಾಂತ್ರಿಕ , ವಿಷಮ ಪೆಟ್ಟುಗಳ ಹರಿಕಾರ ಹಿಮ್ಮೇಳ ವಾದನದಲ್ಲಿ ಹಲವು ಕ್ರಾಂತಿಯನ್ನು ಮಾಡಿದ ಮಹಾನ್ ಚೆಂಡೆವಾದಕ.. ಇಗಲೂ ಕಣ್ಣಿಗೆ ಕಟ್ಟಿದಂತೆ ಇದೆ.. ನಾನು ನೋಡಿದ ಅವರ ಕೊನೆಯ ಮದ್ದಲೆ ವಾದನ ಮರೆಯಲು ಸಾಧ್ಯವೇ? ಎಂಥ ಮದ್ದಲೆ ವಾದನ ಅದು... ಅತ್ಯದ್ಬುತ ಸ್ವಾಮೀಜಿಗಳೊಂದಿಗೆ ಮೈದುಂಬಿ ಬರಿಸಿದ ಅಂದಿನ ಚಿಪ್ಪಾರು..ನನ್ನ ಬಾಲ್ಯವನ್ನು ನೆನಪಿಗೆ ತಂದರು.. ನಾನು ನನ್ನ ಬಾಲ್ಯದಿಂದಲೇ ನಮ್ಮೂರಲ್ಲಿ ಒಂದು ಮನೆಯಲ್ಲಿ ಅದ ತಾಳ ಮದ್ದಲೆಯೊಂದರಲ್ಲಿ ನೋಡಿದ್ದೇ.. ಅಂದಿನಿಂದ ಅವರ ಹಾಲು ಪ್ರದರ್ಶನ ಕಂಡು ಚೆಂಡೆ ಮದ್ದಲೆಗೆ ಅನ್ವರ್ಥವಾಗಿ ಅವರನ್ನೇ ಹಲವುಸಲ ಕಂಡು ಬೆಳೆದೆ. ನಮ್ಮೂರಿನ ಈ ದೈತ್ಯ ಪ್ರತಿಭೆ ದೈಹಿಕವಾಗಿ ನಾನು ಮೊದಲು ಕಾಣುವಾಗ ಹೇಗಿತ್ತೋ ಮೊನ್ನೆ ನಾನು ಕೊನೆಯದಾಗಿ ನೋಡುವಾಗಲೂ ಹಾಗೆ ಇತ್ತು.. ವೃದ್ದಾಪ್ಯ ವೇದಿಕೆಯ ಮೇಲೆ ನನ್ನ ಗಮನಕ್ಕೆ ಬರದಂತೆ ಇತ್ತು. ನೀಳ ಕಾಯದ ಸ್ಥಿತ ಪ್ರಜ್ಞ ಭಾವದ ಅವರ ಭಂಗಿ ಮರೆಯುವುದು ಸಾಧ್ಯವೇ..?
ಮದ್ದಲೆ ವಾದನ ಕಾವ್ಯ ಶೈಲಿಯನ್ನು ಮಂಗಳ ಹಾಡಿ ಮುಕ್ತಾಯಗೊಳಿಸಿದರೆ? ಅವರ ಅಂದಿನ ವಾದನ ಹಾಗು ಮೇಳದ ಅಂದಿನ ಪ್ರದರ್ಶನ ವನ್ನು ಆಸ್ವಾದಿಸಿ ಅದರಬಗ್ಗೆ Or Kut community ಯಲ್ಲಿ ಬರೆದಿದ್ದೆ.. ನಿನ್ನೆಯ ದಿನ ಯುವ ಕಲಾವಿದ ದೀಪಕ್ ಪೇಜಾವರ ಅವರಿಗೆ ಅದನ್ನು ತೋರಿಸಿದ್ದರಂತೆ.. ನನ್ನ ಪರಿಚಯ ಇದ್ದ ಅವರಿಗೆ ಬಹುಶಃ ಸಂತಸವಾಗಿರಬೇಕು.ನಿನ್ನೆ ಸಾಯಂಕಾಲ ದ ಸೂರ್ಯಾಸ್ತ ಅವರಿಗೆ ಕೊನೆಯ ಸೂರ್ಯಸ್ತವಾಗಿ ಪರಿಣಮಿಸಿತು.. ಸೂರ್ಯ ತನ್ನೊಂದಿಗೆ ಇನ್ನೊದು ಪ್ರಭೆಯನ್ನು ನಮ್ಮ ನಡುವಿಂದ ಕಿತ್ತುಕೊಂಡು ಹೋದನೆ? ಇವರ ಮದ್ದಲೆ ವಾದನ ಕೇಳಲು ಕರೆದುಕೊಂಡು ಹೋದನೆ.? ಇಂದು ಸೂರ್ಯ ಉದಯವಗುವಾಗ ಪುನಃ ಕರೆತಂದು ಬಿಡುವನೆ.? ಇದು ಅಸಂಭವ.. ಅಂತು ಒಂದು ದೈತ್ಯ ಪ್ರತಿಭೆ ಇನ್ನಿಲ್ಲದೆ ಕಣ್ಮರೆಯಾಯಿತು. ಮೊನ್ನೆ ನನ್ನ ಮೊಬೈಲಿನಲ್ಲಿ ಅವರ ಮದ್ದಲೆ ವಾದನವನ್ನು ವಿಡಿಯೋ ಮಾಡಿದ್ದೆ.. ಅದರ ತುಣುಕು ಹಲವು ಸಲ ನೋಡಿ ಕಣ್ಣು ತುಂಬಿಕೊಂಡೆ. ಸಾಕೆಂದು ಅನ್ನಿಸಲೇ ಇಲ್ಲ.. ಅವರ ಹಲವು ಮದ್ದಲೆ ವಾದನದ ಯಕ್ಷಗಾನ ಸಂಗ್ರಹಗಳು ನನ್ನಲ್ಲಿವೆ. ಈಗಿನ್ನು ಅವರ ನೆನಪಿಗೆ ಅದುವೇ ಉಳಿದಿದೆ ನನ್ನ ಬಳಿ.
ನನಗೆ ತಿಳಿದಂತೆ ದಿವಂಗತ ಸಂಗೀತ ವಿದ್ವಾನ್ ಭಾಗವತ ಶ್ರೀ ದಾಮೋದರ ಮಂಡೆಚ್ಚರು ಮತ್ತು ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ತುಂಬಾ ಗಳಸ್ಯ ಕಂಠಸ್ಯ ಸ್ನೇಹಿತರಾಗಿದ್ದರು. ಅವರು ಜತೆಯಾಗಿ ಭಾಗವಹಿಸಿದ ಹಲವು ಯಕ್ಷಗಾನವನ್ನು ನಾನು ನೋಡಿದ್ದೇ. ಮಂಡೆಚ್ಚರೊಂದಿಗೆ ಮದ್ದಲೆ ವಾದನವನ್ನು ಅವರು ಅಹ್ಲಾದಿಸುತ್ತಿದ್ದರು. ಮೊದಲು ನಮ್ಮೂರಲ್ಲಿ ಕರ್ನಾಟಕ ಮೇಳದ ಆಟಆಗುವಾಗ ಮೇಳದ ಸದಸ್ಯರಲ್ಲದೆ ಇದ್ದರೂ ಇವರು ಮಂಡೆಚ್ಚರೊಂದಿಗೆ ಮದ್ದಲೆ ವಾದನ ಮಾಡಿದುದನ್ನು ಕಂಡಿದ್ದೇನೆ. ನಿಜವಾಗಿಯೂ ಅವರ ಸಂಗೀತಕ್ಕೆ ಇವರ ಮದ್ದಲೆ ತುಂಬಾ ಹೊಂದಿಕೆಯಾಗುತ್ತಿತ್ತು. ಅಥಹ ಮಿತ್ರ ವೇದಿಕೆಯಲ್ಲೇ ಪ್ರಾಣ ಬಿಟ್ಟರು ಎಂದು ಕೇಳಿದ್ದೆ.ಮಿತ್ರನಂತೆ ಇವರು ಸಹ ವೇದಿಕೆಯ ಬಳಿಯಲ್ಲೇ ಇಹಲೋಕ ಯಾತ್ರೆಗೆ ಹೆಜ್ಜೆ ಇಟ್ಟದ್ದು ದೈವ ಪ್ರೇರಣೆಯೇ ಇರಬೇಕು.
ಚಿಪ್ಪಾರು ಮದ್ದಲೆ ನೆನಪು ಮಾಡಿಕೊಂಡರೆ ಹಲವು ವರ್ಷಗಳ ಮೊದಲು ನಡೆದ ಒಂದು ತಾಳಮದ್ದಲೆ ನನಗೆ ಇನ್ನೂ ನೆನಪಿದೆ. ಅದು ಮಂಗಳೂರಿನ ಬಲ್ಲಾಳ್ ಭಾಗ್ ನಲ್ಲಿರುವ ಪಾಲ್ಕೆ ಕೃಷ್ಣಾಚಾರ್ ಹಾಲ್, ಅಲ್ಲಿ ಒಂದು ತಾಳ ಮದ್ದಲೆ ಸುಧನ್ವ ಮೋಕ್ಷ ಮತ್ತು ಮಾಗಧವಧೆ ಭಾಗವತರಾಗಿ ಬಲಿಪ್ಪ ನಾರಾಯಣ ಭಾಗವತ ಚೆಂಡೆ ಕಡಬ ನಾರಾಯಣ ಆಚರಿ ಹಾಗು ಮುಮ್ಮೆಳದಲ್ಲಿ ಶೇಣಿ ಗೋಪಾಲ ಕೃಷ್ಣ ಭಟ್, ವಿಟ್ಲ ಗೋಪಾಲ ಕೃಷ್ಣ ಜೋಷಿ, ಪೆರ್ಲ ಕೃಷ್ಣ ಭಟ್, ಪ್ರಭಾಕರ ಜೋಷಿ, ಮರೂರು ಮಂಜುನಾಥ ಭಂಡಾರಿ, ಸೂರಿಕುಮೆರಿ ಗೋವಿಂದ ಭಟ್. ಅಲ್ಲಿ ವಿಶೇಷ ಆಕರ್ಷಣೆಯಾಗಿ ಇವರ ಕೆಮ್ಮಣ್ಣು ನಾರಣಪ್ಪ ಶೈಲಿ ಮದ್ದಲೆ .. ಬಲಿಪ್ಪರ ಭಾಗವತಿಕೆಯೊಂದಿಗೆ ಇವರ ಕೆಮ್ಮಣ್ಣು ಮದ್ದಲೆ ಅಹ.. ನಂಗೆ ಇನ್ನೂ ನೆನಪಿದೆ.. ಬಹುಷಃ ಇನ್ನು ಅಂತ ಒಂದು ಕೂಟ ಕನಸೇ ಸರಿ. ಗಜ ಮುಖದವಗೆ ಅಲ್ಲಿಂದ ತೊಡಗಿ ಕೊನೆಗೆ ಮಂಗಳದ ವರೆಗೆ ಬಲಿಪ್ಪರೊಂದಿಗೆ ಕುಳಿತಲ್ಲಿಂದ ಏಳದೆ ನಿರಂತರವಾಗಿ ಮದ್ದಲೆ ವಾದನ ಮಾಡಿದ ಆ ಚಿಪ್ಪಾರು ಬಲ್ಲಾಳರು ಈಗಲೂ ನೆನಪಿಗೆ ಬರುತ್ತಾರೆ. ಚಿಪ್ಪಾರು ಎಂಬ ಊರಿನ ಹೆಸರಿಗೆ ಯಕ್ಷಗಾನ ಸಾರಸ್ವತ ಲೋಕದಲ್ಲಿ ಶಾಶ್ವತ ಹೆಸರನ್ನು ಸ್ಥಾನವನ್ನು ಕೊಟ್ಟ ಇವರ ಸಾಧನೆ ಅನನ್ಯ , ಹಲವು ಭಾಗವತರಿಕೆ ಸಾಥ್ ನೀಡಿದ ಹೆಸರಾಂತ ಕಲಾವಿದರಿಂದ ತೊಡಗಿ ಇತ್ತೀಚಿನ ಯುವ ಕಲಾವಿದರನ್ನು ಕುಣಿಸಿದ ಇವರ ಕೈ ಕಸುವು ವರ್ಣನೆಗೆ ನಿಲುಕದ್ದು. ಸ್ಥಿತ ಪ್ರಜ್ಞ ರಾಗಿ ಚೆಂಡೆ ಬಾರಿಸುವ ಇವರ ಭಂಗಿ ಅಹ್ಲಾದಮಯ.
http://www.youtube.com/user/rajkm65
ಅಪಾರ ಅಭಿಮಾನಿಗಳನ್ನು ಬಂಧು ಬಾಂಧವರನ್ನು ಅಗಲಿದ ಇವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಮತ್ತೊಂದು ಬಲ್ಲಾಳರನ್ನು ಯಕ್ಷಗಾನ ರಂಗಕ್ಕೆ ಭಗವಂತನು ಅನುಗ್ರಹಿಸಲಿ ಎಂದು ಹಾರೈಸೋಣ.. ಅಲ್ಲವೇ..